ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮೧೯೫೦ | ಮರಣ :ಡಿಸೆಂಬರ್ ೩೦೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು.[೨] ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ
ಡಾ. ವಿಷ್ಣುವರ್ಧನ್ ಅವರು ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು. ೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದರು.
ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು.
ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ 'ಸಾಹಸಸಿಂಹ' ಎಂಬ ಬಿರುದು ಬಂದಿತ್ತು.
೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್ ನಾಗ್ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಕಥೆಯೊಂದರಲ್ಲಿ (ರುಪೀಸ್ ಫಾರ್ಟಿ-ಫೈವ್ ಎ ಮಂತ್) ವಿಷ್ಣುವರ್ಧನ್ ನಟಿಸಿದ್ದರು.[೩]
ಕನ್ನಡ ಚಿತ್ರರಂಗದಲ್ಲೆ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಸುಮಾರು ೧೪ ಚಿತ್ರಗಳು)
ವಿಷ್ಣುವರ್ಧನ್-ಸುಹಾಸಿನಿ, ವಿಷ್ಣುವರ್ಧನ್-ಮಾಧವಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯೆಂದು ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿ ಅವರಿಗೆ ಸಲ್ಲುತ್ತದೆ.
ಬನ್ನಂಜೆ ಗೋವಿಂದಾಚಾರ್ಯರು ಇವರ ಆದ್ಯಾತ್ಮಿಕ ಗುರುವಾಗಿದ್ದರು, ಸಂಖ್ಯಾಭವಿಷ್ಯಶಾಸ್ತ್ರವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು.