ವಿಷಯಕ್ಕೆ ಹೋಗು

ಗಣೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಏಕದಂತ ಇಂದ ಪುನರ್ನಿರ್ದೇಶಿತ)
ಗಣೇಶ
ಬುದ್ಧಿವಂತಿಕೆ, ಜ್ಞಾನ, ಹೊಸ ಆರಂಭಗಳ ದೇವತೆ, ವಿಘ್ನ ವಿನಾಶಕ
Attired in an orange dhoti, an elephant-headed man sits on a large lotus. His body is red in colour and he wears various golden necklaces and bracelets and a snake around his neck. On the three points of his crown, budding lotuses have been fixed. He holds in his two right hands the rosary (lower hand) and a cup filled with three modakas (round yellow sweets), a fourth modaka held by the curving trunk is just about to be tasted. In his two left hands, he holds a lotus above and an axe below, with its handle leaning against his shoulder.
ದೇವನಾಗರಿगणेश
ಸಂಸ್ಕೃತ ಲಿಪ್ಯಂತರಣGaṇeśa
ಸಂಲಗ್ನತೆದೇವ
ನೆಲೆಗಣೇಶಲೋಕ
ಮಂತ್ರಓಂ ಗಣೇಶಾಯ ನಮಃ, ಓಂ ಗಂಗಣಪತಯೇ ನಮಃ
ಆಯುಧಪರಶು, ಪಾಶ , ಅಂಕುಶ,
ಸಂಗಾತಿಬುದ್ಧಿ (ಬುದ್ಧಿವಂತಿಕೆ)
ರಿದ್ಧಿ (ಸಮೃದ್ಧಿ)
ಸಿದ್ಧಿ (ಹೊಂದುವಿಕೆ)
ವಾಹನಇಲಿ

ಗಣೇಶ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬ. ಭಾರತದಲ್ಲಿ ಬಹಳ ಜನರು ಪೂಜಿಸುವ ದೇವರು. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.

ಇತಿವೃತ್ತ

[ಬದಲಾಯಿಸಿ]

ಹಿಂದೂ ಪುರಾಣದ ಪ್ರಕಾರ, ಗಣೇಶ ಶಿವ ಮತ್ತು ಪಾರ್ವತಿಯ ಮಗ. ಗಣೇಶನನ್ನು ಕನ್ನಡದಲ್ಲಿ, ಮಲೆಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ವಿನಾಯಕ ಎಂದೂ, ತಮಿಳು ಭಾಷೆಯಲ್ಲಿ ವಿನಾಯಗರ್, ಪಿಳ್ಳೈಯ್ಯಾರ್ ಎಂದೂ , ತೆಲುಗಿನಲ್ಲಿ ವಿನಾಯಕುಡು ಎಂದು ಕರೆಯಲಾಗುತ್ತದೆ. ಗಣೇಶನನ್ನು ವಿದ್ಯಾಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಗಣೇಶನ ಹೆಸರಿನೊಡನೆ "ಶ್ರೀ" ಎಂಬ ಅಕ್ಷರದೊಂದಿಗೆ ಸಂಬೋಧಿಸಲಾಗುತ್ತದೆ. ಗಣೇಶನ ಭಕ್ತರನ್ನು ಗಾಣಪತ್ಯರು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ. ಭಾರತದ ಅನೇಕ ನಗರಗಳಲ್ಲಿ, ವಿಶೇಷವಾಗಿ ಮುಂಬಯಿಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.


ಗಣೇಶ ತನ್ನ ಸಾಂಪ್ರದಾಯಿಕ ರೂಪದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾದ ದೇವತೆಯಾಗಿ ಕ್ರಿ.ಶ.  4 ರಿಂದ 5 ನೇ ಶತಮಾನದ ಆರಂಭದಲ್ಲಿ ಉತ್ತಮವಾಗಿ ವ್ಯಾಖ್ಯಾನಿಸಲಾದ ಪ್ರತಿಮಾಶಾಸ್ತ್ರೀಯ ಗುಣಲಕ್ಷಣಗಳೊಂದಿಗೆ ಕಾಣಿಸಿಕೊಂಡನು[]. ಎಲ್ಲಕ್ಕಿಂತ ಪ್ರಾಚೀನವಾದ ಕೆಲವು  ಚಿತ್ರಗಳು ಪೂರ್ವ ಅಫ್ಘಾನಿಸ್ತಾನದಲ್ಲಿ ಕಂಡುಬರುವ ಎರಡು ಚಿತ್ರಗಳನ್ನು ಒಳಗೊಂಡಿವೆ. ಮೊದಲ ಚಿತ್ರವು ಸೂರ್ಯ ಮತ್ತು ಶಿವನ ಚಿತ್ರಗಳೊಂದಿಗೆ ಕಾಬೂಲ್‌ನ ಉತ್ತರದ ಅವಶೇಷಗಳಲ್ಲಿ ಪತ್ತೆಯಾಗಿದೆ. ಇದು 4 ನೇ ಶತಮಾನಕ್ಕೆ ಸೇರಿದೆ[]. ಗಾರ್ಡೆಜ್ನಲ್ಲಿ ಕಂಡುಬರುವ ಎರಡನೇ ಚಿತ್ರವು ಗಣೇಶ ಪೀಠದ ಮೇಲೆ ಒಂದು ಶಾಸನವನ್ನು ಹೊಂದಿದೆ, ಅದು 5 ನೇ ಶತಮಾನದವರೆಗೆ ಎಂದು ಗುರುತಿಸಲು ಸಹಾಯ ಮಾಡಿದೆ. ಮತ್ತೊಂದು ಗಣೇಶ ಶಿಲ್ಪವನ್ನು ಮಧ್ಯಪ್ರದೇಶದ ಉದಯಗಿರಿ ಗುಹೆಗಳ 6 ನೇ ಗುಹೆಯ ಗೋಡೆಗಳಲ್ಲಿ ಹುದುಗಿಸಲಾಗಿದೆ. ಇದು 5 ನೇ ಶತಮಾನಕ್ಕೆ ಸೇರಿದೆ[]. ಮಧ್ಯಪ್ರದೇಶದ ಭೂಮಾರ ದೇವಾಲಯದ ಅವಶೇಷಗಳಲ್ಲಿ ಆನೆಯ ತಲೆ, ಸಿಹಿತಿಂಡಿಗಳ ಬಟ್ಟಲು ಮತ್ತು ದೇವಿಯೊಬ್ಬಳು ತನ್ನ ಮಡಿಲಲ್ಲಿ ಕುಳಿತಿರುವ ಗಣೇಶನ ಆರಂಭಿಕ ಪ್ರತಿಮೆಯ ಚಿತ್ರಣ ಕಂಡುಬಂದಿದೆ, ಮತ್ತು ಇದು 5 ನೇ ಶತಮಾನದ ಗುಪ್ತರ ಕಾಲಕ್ಕೆ ಸೇರಿದೆ[][][].ರಾಮಘಡದ ಬೆಟ್ಟದಂತಹ ಇತರ ಇತ್ತೀಚಿನ ಆವಿಷ್ಕಾರಗಳು 4 ಅಥವಾ 5 ನೇ ಶತಮಾನಗಳದ್ದಾಗಿದೆ[]. ಗಣೇಶನೊಂದಿಗೆ ಪ್ರಾಥಮಿಕ ದೇವತೆಯಾಗಿ ಸ್ವತಂತ್ರ ಆರಾಧನೆಯು ಸುಮಾರು 10 ನೇ ಶತಮಾನದ ಹೊತ್ತಿಗೆ ಉತ್ತಮವಾಗಿ ಸ್ಥಾಪಿತವಾಯಿತು[]. ನಾರಾಯಣನ್ ಅವರು 5 ನೇ ಶತಮಾನದ ಮೊದಲು ಗಣೇಶನ ಇತಿಹಾಸದ ಬಗ್ಗೆ ಪುರಾವೆಗಳ ಕೊರತೆಯನ್ನು ಈ ಕೆಳಗಿನಂತೆ ಸಂಕ್ಷೇಪಿಸುತ್ತಾರೆ:[]

What is Rudraksha Benefits of wearing it Archived 2021-02-10 ವೇಬ್ಯಾಕ್ ಮೆಷಿನ್ ನಲ್ಲಿ.

ಪ್ರಶ್ನೆ ಏನೆಂದರೆ ಇತಿಹಾಸದಲ್ಲಿ ಗಣೇಶ ಸ್ವಲ್ಪಮಟ್ಟಿಗೆ ಅನಿರೀಕ್ಷಿತವಾಗಿ ಕಾಣಿಸಿಕೊಂಡಿರುವುದು . ಅವನ ಪೂರ್ವವರ್ತಿಗಳು ಸ್ಪಷ್ಟವಾಗಿಲ್ಲ. ಪಂಥೀಯ ಮತ್ತು ಪ್ರಾದೇಶಿಕ ಮಿತಿಗಳನ್ನು ಮೀರಿದ ಅವರ ವ್ಯಾಪಕ ಸ್ವೀಕಾರ ಮತ್ತು ಜನಪ್ರಿಯತೆ ನಿಜಕ್ಕೂ ಅದ್ಭುತವಾಗಿದೆ. ಒಂದೆಡೆ, ಗಣೇಶನ ವೈದಿಕ ಮೂಲಗಳಲ್ಲಿ ಮತ್ತು ಗೊಂದಲಮಯವಾದ, ಆದರೆ ಆಸಕ್ತಿದಾಯಕ, ಪುರಾಣಗಳಲ್ಲಿರುವ ವಿವರಣೆಗಳಲ್ಲಿ ಸಾಂಪ್ರದಾಯಿಕ ಭಕ್ತರ ಧಾರ್ಮಿಕ ನಂಬಿಕೆ ಇದೆ. ಮತ್ತೊಂದೆಡೆ, ಕಲ್ಪನೆಯ ಅಸ್ತಿತ್ವ ಮತ್ತು ಈ ದೇವತೆಯ ಚಿತ್ರಾತ್ಮಕ ಸಂಕೇತದ ಬಗ್ಗೆ "ಕ್ರಿ.ಶ. ನಾಲ್ಕರಿಂದ ಐದನೇ ಶತಮಾನದ ಮೊದಲು ಇತ್ತೇ ಎಂಬ ಸಂದೆಹವಿದೆ. [ನನ್ನ] ಅಭಿಪ್ರಾಯ, ನಿಜಕ್ಕೂ ಐದನೇ ಶತಮಾನದ ಮೊದಲು ಈ ದೈವತ್ವದ ಅಸ್ತಿತ್ವದ, [ಪ್ರಾಚೀನ ಬ್ರಾಹ್ಮಣ ಸಾಹಿತ್ಯದಲ್ಲಿ]  ಯಾವುದೇ ಮನವರಿಕೆಯಾಗುವ ಪುರಾವೆಗಳಿಲ್ಲ.

ಹೆಚ್ಚು ಪ್ರಾಚೀನ ಗಣೇಶನ ಪುರಾವೆಗಳು, ನಾರಾಯಣನ್ ಅವರ ಪ್ರಕಾರ, ಬ್ರಾಹ್ಮಣ ಅಥವಾ ಸಂಸ್ಕೃತ ಸಂಪ್ರದಾಯಗಳ ಹೊರಗೆ ಅಥವಾ ಭಾರತದ ಭೂ-ಸಾಂಸ್ಕೃತಿಕ ಗಡಿಗಳ ಹೊರಗೆ ವಾಸಿಸಬಹುದು ಎಂದು ಸೂಚಿಸುತ್ತದೆ[]. ಗಣೇಶ 6 ನೇ ಶತಮಾನದ ಹೊತ್ತಿಗೆ ಚೀನಾದಲ್ಲಿ ಕಾಣಿಸಿಕೊಳ್ಳುತ್ತಾನೆ. (ಕರ್ನಾಟಕ gazetteer ಪ್ರಕಾರ ಇಡಗುಂಜಿಯದ್ದು ೨-೩ ನೇ ಶತಮಾನ). ಬ್ರೌನ್  []ಅವರ ಪ್ರಕಾರ, ಮತ್ತು ದೇವಾಲಯದ ವ್ಯವಸ್ಥೆಯಲ್ಲಿನ ಅವನ ಕಲಾತ್ಮಕ ಚಿತ್ರಗಳು ದಕ್ಷಿಣ ಏಷ್ಯಾದಲ್ಲಿ "ಅಡೆತಡೆಗಳನ್ನು ಹೋಗಲಾಡಿಸುವವನು" ಎಂದು ಸುಮಾರು 400 CE ಯ ಹೊತ್ತಿಗೆ ಕಾಣಿಸಿಕೊಳ್ಳುತ್ತವೆ[]. ಅವನು, ಬೈಲೆ ಹೇಳುವಂತೆ, ಸಾಮಾನ್ಯ ಯುಗದ ಆರಂಭಿಕ ಶತಮಾನಗಳಿಂದ, ದೇವತೆ ಪಾರ್ವತಿಯ ಮಗನೆಂದು ಗುರುತಿಸಲ್ಪಟ್ಟಿದ್ದಾನೆ ಮತ್ತು  ಶೈವ ಧರ್ಮಶಾಸ್ತ್ರಕ್ಕೆ ಸಂಯೋಜನೆಗೊಂಡಿದ್ದಾನೆ[].

ಚಿತ್ರ:Ganapathy.JPG
'ಹೊಳಲ್ಕೆರೆಯ ಈ ಪ್ರಸನ್ನ ಗಣಪತಿಯ ಕೇಶಾಲಂಕಾರದ ವೈಶಿಷ್ಟ್ಯತೆ ನೋಡಿ'
Heramba-Ganesha with consort, 18th century Nepal
Dancing Ganesha sculpture from North Bengal, 11th century CE, Asian Art Museum of Berlin (Dahlem).
A 13th-century statue of Ganesha, Mysore District, ಕರ್ನಾಟಕ
Ganesha (Devanagari) Aum jewel

ವಿಘ್ನನಾಶಕ ಗಣಪತಿ

[ಬದಲಾಯಿಸಿ]
  • ಶಿವ, ವಿಷ್ಣು ಮುಂತಾದ ದೇವತೆಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪುಜೆಯಲ್ಲಿ ಅಗ್ರಸ್ಥಾನ ಪಡೆದ ದೇವತೆ. ಜನಜೀವನದ ಎಲ್ಲ ಶುಭಕಾರ್ಯಗಳಲ್ಲೂ-ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಇತ್ಯಾದಿ-ಮೊದಲ ಪೂಜೆಯನ್ನು ಇಂದಿಗೂ ಭಾವುಕರು ಗಣಪತಿಗೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ; ಮಿಕ್ಕ ದೇವತಾ ಕಾರ್ಯಗಳನ್ನು ಮಾಡುವಾಗಲೂ ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ಗಣಪತಿಗೇ ಮೀಸಲು.
  • ಗಣಪತಿಗೆ ಸಿದ್ಧಿವಿನಾಯಕ, ಗಣೇಶ, ಗಜಮುಖ, ಏಕದಂತ, ವಕ್ರತುಂಡ, ಲಂಬೋದರ, ಹೇರಂಬ, ಮೂಷಕವಾಹನ ಮುಂತಾದ ಹೆಸರುಗಳೂ ಇವೆ. ಈ ಒಂದೊಂದು ಹೆಸರೂ ಗಣಪತಿಯ ಒಂದೊಂದು ಗುಣಲಕ್ಷಣವನ್ನು ಸೂಚಿಸುತ್ತದೆ. ಕರ್ನಾಟಕವಷ್ಟೇ ಅಲ್ಲ, ಭಾರತದಲ್ಲೆಲ್ಲ ಊರ ಕೋಟೆಗಳಲ್ಲಿ, ಗಣಪತಿಯ ಮೂರ್ತಿಯನ್ನು ಇಂದೂ ನೋಡಬಹುದು. wearing rudraksha eating meat Archived 2021-02-10 ವೇಬ್ಯಾಕ್ ಮೆಷಿನ್ ನಲ್ಲಿ.
  • ಎಲ್ಲ ದೇವಾಲಯಗಳಲ್ಲೂ ಶಿವನ ಪರಿವಾರವರ್ಗದಲ್ಲಿ ಗಣಪತಿಯ ಮೂರ್ತಿಯಿದ್ದೇ ಇರುತ್ತದೆ. ಗಣಪತಿ ವಿಶಿಷ್ಟ ಜಾತಿಗಳ ದೇವತೆಯೆನಿಸದೆ ಹಿಂದೂ ಧರ್ಮವನ್ನು ನಂಬುವ ಎಲ್ಲ ಜಾತಿಪಂಥಗಳೂ ಸಮಾನವಾಗಿ ಪೂಜಿಸುವ ದೇವತೆಯಾಗಿ ಈಗಲೂ ಮಹಿಮೆ ಪಡೆದಿದ್ದಾನೆ.

ಶಾರೀರಿಕ ವೈಶಿಷ್ಟ್ಯಗಳು

[ಬದಲಾಯಿಸಿ]

ಗಣೇಶನ ಶರೀರದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ:ಮ

  • ಆನೆಯ ತಲೆ ನಂಬಿಕೆ, ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯನ್ನು ಸೂಚಿಸುತ್ತದೆ;
  • ಗಣೇಶನಿಗೆ ಒಂದು ದಂತ ಇರುವುದೆಂಬ ಸಂಗತಿ(ಇನ್ನೊಂದು ದಂತ ಭಗ್ನವಾಗಿದೆ),ಎಲ್ಲ ದ್ವಂದ್ವಗಳನ್ನೂ ಮೀರಿ ನಿಲ್ಲುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ ;
  • ಅಗಲವಾದ ಕಿವಿಗಳು ವಿವೇಕ,ನೆರವು ಕೋರುವ ಜನಗಳ ಮೊರೆಯನ್ನು ಆಲಿಸುವ ಸಾಮರ್ಥ್ಯವನ್ನು ಸೂಚಿಸುವುದಲ್ಲದೆ, ಆಧ್ಯಾತ್ಮಿಕ ಸತ್ಯಗಳ ಬಗ್ಗೆ ಚಿಂತನೆ ಮಾಡುವುದನ್ನು ಪ್ರಕಟಿಸುತ್ತದೆ.ಚಿಂತನೆಗಳನ್ನು ಅರ್ಥೈಸಿಕೊಳ್ಳಲು ಕೇಳಿಸಿ ಕೊಳ್ಳಬೇಕಾದುದರ ಪ್ರಾಮುಖ್ಯತೆಯನ್ನು ಅವು ಸೂಚಿಸುತ್ತವೆ.ಜ್ಞಾನವನ್ನು ಸಂಪಾದಿಸಲು ಕಿವಿಗಳು ಉಪಯೋಗಿಯಾಗಿವೆ.ಅಗಲವಾದ ಕಿವಿಗಳು "ಯಾವಾಗ ದೇವರು ಅರಿವಿಗೆ ಬರುವನೋ, ಆಗಲೇ ಎಲ್ಲಾ ಜ್ಞಾನವೂ ಅರಿವಾದಂತೆಯೇ" ಎಂಬುದನ್ನು ಸೂಚಿಸುತ್ತವೆ;
  • ವಕ್ರವಾದ ಸೊಂಡಿಲು ಸತ್ಯ ಮತ್ತು ಮಿಥ್ಯೆಗಳ ನಡುವಣ ವ್ಯತ್ಯಾಸವನ್ನು ಗುರುತಿಸುವಲ್ಲಿ ತಾನಾಗಿಯೇ ವಿವೇಚನಾಶಕ್ತಿಯ ರೂಪದಲ್ಲಿ ಪ್ರಕಟವಾಗುವ ಬುದ್ಧಿಶಕ್ತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ;
  • ಹಣೆಯ ಮೇಲೆ ಚಿತ್ರಿತವಾದ ತ್ರಿಶೂಲವು (ಶಿವನ ಆಯುಧ ತ್ರಿಶೂಲಕ್ಕೆ ಸಮಾನವಾದ) ಕಾಲವನ್ನು ಸಂಕೇತಿಸುವುದಲ್ಲದೆ(ಭೂತ, ವರ್ತಮಾನ ಮತ್ತು ಭವಿಷ್ಯತ್) ಅದರ ಮೇಲೆ ಗಣೇಶನ ಪ್ರಭುತ್ವವನ್ನು ಸೂಚಿಸುತ್ತದೆ.
  • ಗಣೇಶನ ದೊಡ್ಡ ಹೊಟ್ಟೆ ಯಲ್ಲಿ ಅಸಂಖ್ಯಾತವಾದ ಲೋಕಗಳು ಅಡಗಿವೆ.ಅದು ಪ್ರಕೃತಿಯ ಔದಾರ್ಯ ಹಾಗೂ ಸ್ಥೈರ್ಯವನ್ನು ಸಂಕೇತಿಸುವುದಲ್ಲದೆ,ಪ್ರಪಂಚದ ದುಃಖ,ಕ್ಲೇಶಗಳೆಲ್ಲವನ್ನೂ ನುಂಗಿ ಜಗತ್ತನ್ನು ರಕ್ಷಿಸುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ;
  • ಗಣೇಶನು ಕಾಲುಗಳನ್ನು ಇಟ್ಟಿರುವ ರೀತಿ, (ಒಂದು ನೆಲದ ಮೇಲೆ, ಇನ್ನೊಂದು ಎತ್ತಿರುವ ರೀತಿ) ಇಹ ಮತ್ತು ಪರಲೋಕಗಳಲ್ಲಿ ಬಾಳುವುದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಲೋಕದಲ್ಲಿಲ್ಲದೆಯೇ ಲೋಕದಲ್ಲಿ ಬಾಳುವ ಸಾಮರ್ಥ್ಯವನ್ನು ಎತ್ತಿ ಹಿಡಿದಿದೆ.
  • ಹೆಚ್ಚಿನ ತಾತ್ವಿಕ ಅರ್ಥಕ್ಕೆ ಶ್ರೀ ಸಿದ್ಧಿ ವಿನಾಯಕ ನೋಡಿ

ಓಂಕಾರದ ಆಕಾರವುಳ್ಳ ದೈವ

[ಬದಲಾಯಿಸಿ]

ಗಣೇಶನನ್ನು "ಓಂಕಾರ" ಎಂದು ಕರೆಯಲಾಗುತ್ತದೆ. ಗಣೇಶನ ದೇಹಸ್ವರೂಪವು ದೇವನಾಗರಿ ಲಿಪಿಯ ಅಕ್ಷರದಂತಿದೆ. ಈ ಕಾರಣದಿಂದ ಗಣೇಶನನ್ನು ಇಡೀ ವಿಶ್ವದ ಪ್ರತಿರೂಪ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಮೂಲದಲ್ಲಿರುವ ಕಾರಣ ವಿಶ್ವಾಧಾರ,ಜಗದೋದ್ಧಾರ ಎಂದೂ ಕರೆಯಲಾಗುತ್ತದೆ.

ಮೂಷಿಕ ವಾಹನ ಗಣೇಶ

[ಬದಲಾಯಿಸಿ]
ತಲಕಾಡಿನ ವೈದ್ಯೇಶ್ವರ ದೇವಸ್ಥಾನದಲ್ಲಿನ ಒಂದು ಶಿಲ್ಪ

ಗಣೇಶನ ವಾಹನವಾದ ಇಲಿಯನ್ನು ಪ್ರತಿಭೆಯ ಸಂಕೇತವೆಂದು ತಿಳಿಯಲಾಗಿದೆ. ಒಂದು ವಿವರಣೆಯ ಪ್ರಕಾರ,ಗಣೇಶನ ದೈವಿಕ ವಾಹನ,ಇಲಿ ಅಥವಾ ಮೂಷಿಕ ವಿವೇಕ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ.

ವೇದಗಳಲ್ಲಿ ಗಣಪತಿ

[ಬದಲಾಯಿಸಿ]
  • ಋಗ್ವೇದದಲ್ಲಿ ಗಣಾನಾಂ ತ್ವಾ ಗಣಪತಿಂ ಹವಾಮಹೇ ಎಂಬ ಋಕ್ಕು ಇದ್ದು ಇದು ಗಣಪತಿಯ ಪೂಜೆಯ ಮುಖ್ಯಮಂತ್ರವಾಗಿ ಇಂದಿಗೂ ಪುರಸ್ಕೃತವಾಗಿದೆ ಯಾದರೂ ವಿದ್ವಾಂಸರು ಇಲ್ಲಿನ ಗಣಪತಿ ಶಬ್ದಕ್ಕೆ ಬೃಹಸ್ಪತಿ ಅಥವಾ ಬ್ರಹ್ಮಣಸ್ಪತಿಯೆಂದೇ ಅರ್ಥಮಾಡುತ್ತಾರೆ. ನಮಗೆ ಇಂದು ಪ್ರಸಿದ್ಧವಿರುವ ಗಣಪತಿಯ ಮೂರ್ತಿಕಲ್ಪನೆ ಪುರಾಣಕಾಲದ್ದು. ಪುರಾಣಗಳಿಗೂ ಪೂರ್ವದ ಋಗ್ವೇದದಲ್ಲಿ ಆನೆಯ ಮುಖ, ಇಲಿಯ ವಾಹನ, ದೊಡ್ಡ ಹೊಟ್ಟೆ ಮುಂತಾದ ಯಾವ ಪೌರಾಣಿಕ ಕಲ್ಪನೆಗಳೂ ಇಲ್ಲ.
  • ಆತ ಕೇವಲ ವಾಗಭಿಮಾನಿಯಾದ ಮತ್ತೊಬ್ಬ ದೇವನಂತೆ ತೋರುತ್ತಾನೆ. ಅಷ್ಟೇ ಅಲ್ಲದೆ ಇಡೀ ರಾಮಾಯಣದಲ್ಲಿ ಹಾಗೂ ಮಹಾಭಾರತದ ಮೂಲರೂಪದಲ್ಲಿ ಗಣಪತಿಯ ನಾಮಸ್ಮರಣೆ ಕೂಡ ಬಾರದು. ಕಾಳಿದಾಸನಿಗೆ ಸಹ ಗಣಪತಿಯ ಅರಿವಿದ್ದಂತೆ ಕಾಣಿಸುವುದಿಲ್ಲ. ಮಹಾಭಾರತವನ್ನು ಬರೆಯಲು ವ್ಯಾಸರು ಗಣೇಶನನ್ನು ಲಿಪಿಕಾರನನ್ನಾಗಿ ಮಾಡಿಕೊಂಡ ಕಥೆ ಈಚೆಗೆ ಮಹಾಭಾರತಕ್ಕೆ ಯಾರೋ ಸೇರಿಸಿದ್ದೆಂದು ವಿದ್ವಾಂಸರು ಭಾವಿಸುತ್ತಾರೆ.
  • ಈ ಕೆಲವು ಕಾರಣಗಳಿಂದ ಗಣಪತಿ ಆರ್ಯರ ದೇವತೆ ಯಾಗಿರದೆ ಮೊಟ್ಟಮೊದಲಿಗೆ ದ್ರಾವಿಡ ಜನಾಂಗಗಳ ಗ್ರಾಮಾಭಿಮಾನಿ ದೇವತೆಯಾಗಿದ್ದಿರಬಹುದೆಂದು ಕೆಲವರು, ಸಂಶೋಧಕರು ಊಹಿಸುತ್ತಾರೆ. ಕಾಲಾಂತರದಲ್ಲಿ ಈ ಕ್ಷುದ್ರ ದೇವತೆಯನ್ನು ಸಂಸ್ಕರಿಸಿಕೊಂಡು ಆರ್ಯರು ತಮ್ಮ ದೇವತಾವರ್ಗದಲ್ಲಿ ಸೇರಿಸಿ ಕೊಂಡಿರಬಹುದೆಂದು ಅವರ ಅಭಿಪ್ರಾಯ.
  • ಆದರೆ ಈ ವಾದವನ್ನು ಒಪ್ಪದ ಸಂಶೋಧಕರೂ ಉಂಟು. ಅವರು ಹೇಳುವ ಕಾರಣಗಳಿವು: ಯಜುರ್ವೇದದ ತೈತ್ತೀರಿಯ ಸಂಹಿತೆಯಲ್ಲಿ ನಮೋ ಗಣೇಭ್ಯೋ ಗಣಪತಿಭ್ಯಶ್ಚವೋ ನಮಃ (5-4-1) ಎಂಬ ಮಂತ್ರದಲ್ಲಿ ಅನೇಕ ಗಣಪತಿಗಳ ಉಲ್ಲೇಖವಿದೆ. ಅತ್ಯಂತ ಪ್ರಾಚೀನವಾದ (ಪ್ರ.ಶ.ಪು.ಸು. 4ನೆಯ ಶತಮಾನದ) ಮಾನವಗೃಹ್ಯಸೂತ್ರದಲ್ಲಿ ವಿನಾಯಕರ ಸಂಖ್ಯೆ ನಾಲ್ಕೆಂದಿರುವುದಲ್ಲದೆ ಇವರ ಹೆಸರು ಕ್ರಮವಾಗಿ ಸಾಲಕಟಂಕ.
  • ಕೂಶ್ಮಾಂಡ, ರಾಜಪುತ್ರ ಉಸ್ಮಿತ, ಮತ್ತು ದೇವಂಜನ ಎಂಬುದನ್ನು ತಿಳಿಸಿ ಇವರ ಪೀಡಾಪರಿಹರಕ್ಕಾಗಿ ಶಾಂತಿ ಕರ್ಮಗಳನ್ನು ವಿಧಿಸಿದೆ. ಮುಂದೆ ಯಾಜ್ಞವಲ್ಕ್ಯ ಸ್ಮೃತಿಯಲ್ಲಿ ಈ ವಿನಾಯಕರ ತಾಯಿ ಅಂಬಿಕೆಯೆಂದೂ ಇವರನ್ನು ತೃಪ್ತಿ ಪಡಿಸದೆ ಪೀಡೆ ಪರಿಹಾರವಾಗ ದೆಂದೂ ಹೇಳಿದೆ.
  • ಪ್ರಸಕ್ತ ಶಕಾರಂಭದಲ್ಲಿ ರಚಿತವಾದ ಬೋಧಾಯನ ಗೃಹ್ಯಸೂತ್ರ, ಗೋಭಿಲಸ್ಕೃತಿಗಳಲ್ಲಿಯೂ ಹಾಲನ (ಸಾತವಾಹನ) ಗಾಥಾ ಸಪ್ತಶತಿಯಲ್ಲಿಯೂ ಗಜಮುಖನ ಉಲ್ಲೇಖದಂತೆ ಅವನ ಅಗ್ರಪುಜಾರ್ಹತೆಯೂ ನಿರ್ದಿಷ್ಟವಾಗಿವೆ. ಬಾಣಭಟ್ಟ , ಭವಭೂತಿಗಳು ಗಣಪತಿಯ ಸ್ತೋತ್ರ ಮಾಡಿದ್ದಾರೆ.
  • ಹೀಗೆ ಗಣಪತಿಯ ಅತ್ಯಂತ ಪ್ರಾಚೀನ ಸ್ವರೂಪ ಸಂಶಯಾಸ್ಪದವಾಗಿದ್ದರೂ ಅದು ಪ್ರ.ಶ. ಆರನೆಯ ಶತಮಾನದ ವೇಳೆಗೆ ಇಂದು ಪ್ರಸಿದ್ಧವಾಗಿರುವ ಸ್ವರೂಪಕ್ಕೆ ಬಂದು ಮುಟ್ಟಿಯಾಗಿತ್ತೆಂದು ಊಹಿಸಬಹುದು. ಏಕೆಂದರೆ ಇದೇ ಕಾಲದ ಪ್ರಾಚೀನ ಶಿಲಾಮೂರ್ತಿಗಳು ಕೂಡ ಜೋಧಪುರದ ಬಳಿ ಘಾಟಿಯಾಲ, ಐಹೊಳೆ ಹಾಗು ಬಾದಾಮಿ ದೇವಾಲಯಗಳಲ್ಲಿ ಈಗಲೂ ಕಾಣಸಿಗುತ್ತವೆ. ಗಣಪತಿಯ ಮಹಿಮೆಯನ್ನು ವಿಸ್ತಾರವಾಗಿ ಪ್ರತಿಪಾದಿಸುವ ಪುರಾಣಗಳೂ ಇಲ್ಲಿಂದ ಮುಂದೆ ರಚಿತವಾದುವೆಂದು ಊಹಿಸಬಹುದು.

ಪುರಾಣಗಳಲ್ಲಿ ಗಣಪತಿ

[ಬದಲಾಯಿಸಿ]
  • ಪುರಾಣಗಳ ಪ್ರಕಾರ ಗಣಪತಿ ಶಿವ ಪಾರ್ವತಿಯರ ಮಗ. ಕೇವಲ ಪಾರ್ವತಿಯ ಮುದ್ದುಮಗನೆನ್ನುವುದೇ ಹೆಚ್ಚು ಸಮರ್ಪಕವೆನಿಸುತ್ತದೆ. ಏಕೆಂದರೆ ಅವಳ ಸ್ನಾನ ಚೂರ್ಣದಿಂದ ಈತ ಮೈದಾಳಿ, ಅವಳ ಸ್ನಾನಜಲದೊಂದಿಗೆ ಗಂಗಾಮುಖವನ್ನು ಸೇರಿ. ಅಲ್ಲಿ ಗಜಮುಖಳಾದ ಮಾಲಿನಿಯೆಂಬ ದೇವತೆಯ ಗರ್ಭವನ್ನು ಸೇರಿ ಚತುರ್ಭುಜ ಮತ್ತು ಪಂಚಗಜಮುಖಗಳಿಂದ ಜನಿಸಿದನಂತೆ.
  • ಗಂಗೆ ಅವನನ್ನು ತನ್ನ ಸುತನೆಂದರೂ ಶಿವ ಅವನನ್ನು ಪಾರ್ವತೀಸುತನೆಂದೂ ತೀರ್ಮಾನಿಸಿ ಅವನನ್ನು ಏಕಮುಖನನ್ನಾಗಿ ಮಾಡಿದನಂತೆ. ಅಂಜನಗಿರಿಯಲ್ಲಿ ಅವನನ್ನು ವಿಘ್ನವಿನಾಶಕ ದೇವನೆಂದು ಈಶ್ವರ ಪಟ್ಟಗಟ್ಟಿದನಂತೆ. ಈ ವಿವರಗಳು ಕಾಶ್ಮೀರಕವಿಯಾದ ಜಯರಥನ ಹರಚರಿತ ಚಿಂತಾಮಣಿಯಲ್ಲಿ (13ನೆಯ ಶತಮಾನ) ದೊರೆಯುತ್ತದೆ. ಬ್ರಹ್ಮವೈವರ್ತ ಪುರಾಣದಲ್ಲಿ ಗಣೇಶನ ಜನ್ಮವೃತ್ತಾಂತ ವಿಸ್ತಾರವಾಗಿ ಬಂದಿದೆ.
  • ಅಲ್ಲಿಯ ಕಥೆ ಬೇರೆ ರೀತಿಯಾಗಿದೆ. ಪಾರ್ವತಿ ತನ್ನ ಕಂದನನ್ನು ತೋರಿಸಲು ಎಲ್ಲರೊಂದಿಗೆ ಶನಿಯನ್ನೂ ಕರೆಸಿದ್ದಳಂತೆ. ಶನಿಯ ವಕ್ರದೃಷ್ಟಿ ಬಿದ್ದೊಡನೆ ಗಣಪತಿಯ ತಲೆ ಬಿದ್ದು ಹೋಯಿತಂತೆ. ಆಮೇಲೆ ವಿಷ್ಣು ಅವನಿಗೆ ಆನೆಯ ತಲೆಯನ್ನು ತಂದು ಆಂಟಿಸಿದನಂತೆ. ಗಣೇಶನಿಗೆ ಇರುವುದು ಒಂದೇ ದಂತ. ಇನ್ನೊಂದು ದಂತ ಕಳೆದುದು ಹೇಗೆನ್ನಲು ಬೇರೆ ಬೇರೆ ಕಥೆಗಳಿವೆ.
  • ಅದನ್ನು ರಾವಣ ಮುರಿದನೆಂದು ಮಾಘಕವಿ (ಶಿಶುಪಾಲವಧ) ಹೇಳಿದರೆ, ಪರಶುರಾಮನೊಡನೆ ಯುದ್ಧದಲ್ಲಿ ಅದು ಮುರಿಯಿತೆಂದು ಬ್ರಹ್ಮವೈವರ್ತಪುರಾಣ ತಿಳಿಸುತ್ತದೆ. ಯಾರು ಜಗವನ್ನೆಲ್ಲ ಬೇಗ ಪ್ರದಕ್ಷಿಣೆ ಮಾಡುವರೆಂದು ಗಣೇಶನಿಗೂ ಕುಮಾರಸ್ವಾಮಿಗೂ ಸ್ಪರ್ಧೆ ಬಂದ ಕಾಲದಲ್ಲಿ ದಂತ ಮುರಿಯಿತೆಂದು ಹರಚರಿತಚಿಂತಾಮಣಿಯಲ್ಲಿ ಹೇಳಲಾಗಿದೆ.
  • ಶಿವ ಪುರಾಣದ ಪ್ರಕಾರ ಶಿವನೇ ಪಾರ್ವತಿಯ ಸ್ನಾನಗೃಹದ ಬಾಗಿಲಲ್ಲಿ ಕಾವಲಿದ್ದ ಗಣೇಶನ ತಲೆಯನ್ನು ಕಡಿದು ಅದಕ್ಕೆ ಬದಲಾಗಿ ಆನೆಯ ತಲೆಯನ್ನು ಜೋಡಿಸಿದನೆನ್ನಲಾಗಿದೆ. ಗಣಪತಿಗೆ ಮದುವೆಯೇ ಇಲ್ಲವೆನ್ನುವ ಕೆಲವು ಪುರಾಣಗಳಿದ್ದರೆ, ಅವನಿಗೆ ಸಿದ್ಧಿ, ಬುದ್ಧಿ ಎಂಬ ಇಬ್ಬರು ಹೆಂಡಿರನ್ನು ಹೇಳುವ ಪುರಾಣಗಳುಂಟು; ಸಿದ್ಧಿಯಲ್ಲಿ ಹುಟ್ಟಿದ ಕ್ಷೇಮ ಮತ್ತು ಬುದ್ಧಿಯಲ್ಲಿ ಹುಟ್ಟಿದ ಲಾಭ ಎಂಬ ಮಕ್ಕಳನ್ನು ಹೇಳುವ ಪುರಾಣಗಳೂ ಉಂಟು.
  • ಗಣಪತಿಯ ವಿಗ್ರಹಗಳಲ್ಲಿ ಕೆಲವು ಇಂದಿನ ಸುಂದರಾಕೃತಿಯ ಬದಲು ಒರಟು ವಿಕಾರರೂಪದಲ್ಲಿಯೂ ಇರುವುದನ್ನು ಕಾಣುತ್ತೇವೆ (ಉದಾ: ನಾಸಿಕದ ಮೋದಕೇಶ್ವರ ಗಣಪತಿ, ವಾರ್ಡದ ಸ್ವಯಂಭೂ ಗಣಪತಿ). ಕೆಲವು ಕೇವಲ ಸ್ಥೂಲ ಆನೆಯ ತಲೆಯಂತಿರುವ ಕಲ್ಲುಗಳೇ ಇರುತ್ತವೆ. (ಉದಾ: ಜುನ್ನಾರದ ಸಾರ್ವಜನಿಕ ಗಣಪತಿ).
  • ಕೆಲವೆಡೆ ದ್ವಿಭುಜ ಗಣಪತಿಗಳಿವೆ (ಉದಾ: ಗೋಕರ್ಣ ಮತ್ತು ಇಡಗುಂಜಿಯ ಮೂರ್ತಿಗಳು). ಪಲ್ಲವರ ಕಾಲಕ್ಕೆ ಮುಂಚೆ ದಕ್ಷಿಣದಲ್ಲಿ ಗಣಪತಿ ವಿಗ್ರಹಗಳು ಸಿಕ್ಕಿಲ್ಲ. ಮುಂದೆ ಅನೇಕ ತಂತ್ರ ಆಗಮಗಳ ನಿರ್ದೇಶನದಂತೆ ಗಣಪತಿಯ ಮೂರ್ತಿ ಕಲ್ಪನೆಯಲ್ಲೂ ನಾನಾಭುಜಗಳು, ಮುಖಗಳು, ಅಲಂಕಾರಗಳು ಬೆಳೆದು ಬಂದುದನ್ನು ನೋಡಬಹುದು. ಹೊಯ್ಸಳರ ಕಾಲದಿಂದೀಚೆಗೆ ಈ ಪರಿಷ್ಕೃತ ರೂಪಗಳು ಕನ್ನಡ ನಾಡಿನಲ್ಲೆಲ್ಲ ಕಾಣಬರುತ್ತದೆ.

ಪುರಾಣ ಕಥೆಗಳು

[ಬದಲಾಯಿಸಿ]
  • ತನ್ನ ಮನದಿಂದ ಗಣೇಶ ಉದಿಸಿದ ಈತ ಪ್ರಥಮ ಪೂಜಿತನೆಂದು ಶಿವ ನಿರ್ಧರಿಸಿದ. ಯಾರೇ ಆಗಲಿ, ಯಶಸ್ಸನ್ನು ಪಡೆಯಲು ಬಯಸುವವರು ಗಣೇಶನನ್ನು ಪೂಜಿಸಬೇಕು ಮತ್ತು ಗಣೇಶನಿಗೆ ಪ್ರಾಮುಖ್ಯತೆ ಕೊಡದೆ ಇತರ ದೇವರನ್ನು ಪೂಜಿಸುವುದ ರಿಂದ ಫಲದೊರಕದು ಎಂದೂ ಆತ ಸಂಕಲ್ಪಿಸಿದ. ಇದಾದ ನಂತರ, ಒಮ್ಮೆ ಶಿವನು ತ್ರಿಪುರ ಪಟ್ಟಣಕ್ಕೆ ರಾಕ್ಷಸರೊಂದಿಗೆ ಯುದ್ಧ ಮಾಡಲು ಹೊರಟ. ಆದರೆ ಯುದ್ಧ ಸನ್ನದ್ಧ ಶಿವ ತಾನೇ ರೂಪಿಸಿದ ನಿಯಮವನ್ನು ಮರೆತುಬಿಟ್ಟ.
  • ಯುದ್ದದಲ್ಲಿ ಸೋತು ಭಾರೀ ಮುಖಭಂಗವಾಗುವ ಹಂತಕ್ಕೆ ಶಿವ ತಲುಪಿದ. ಶಿವನ ರಥದ ಚಕ್ರದ ಗೂಟ ಮುರಿದು ರಥ ನಿಂತಿತು. ಅಷ್ಟರಲ್ಲಿ ಶಿವನಿಗೆ ತಾನು ಹೊರಡುವ ಮೊದಲು ಗಣೇಶನಿಗೆ ಪೂಜೆಸಲ್ಲಿಸಲು ಮರೆತಿರುವುದು ನೆನಪಾಯಿತು. ಈ ಕಷ್ಟಕ್ಕೆ ಅದೇ ಕಾರಣ ಎಂದು ತಿಳಿದನು. ನಂತರ, ಮಗನನ್ನು ಪೂಜಿಸಿದ ಮತ್ತು ಯಶಸ್ವಿಯಾಗಿ ತ್ರಿಪುರಾಂತಕ ಯುದ್ಧವನ್ನು ಯಶಸ್ವಿಯಾಗಿ ಜಯಿಸಿದನು.
  • ಒಂದು ದಿನ ಕೈಲಾಸ ವಾಸನಾದ ಶಿವ ಮತ್ತು ಮಡದಿ ಪಾರ್ವತಿ ತಮ್ಮಿಬ್ಬರು ಪುತ್ರರಾದ ಗಣೇಶ ಮತ್ತು ಸುಬ್ರಹ್ಮಮಣ್ಯರೊಂದಿಗೆ ಸಂತಸದಿಂದ ಕಾಲಕಳೆಯುತ್ತಿದ್ದರು. ಶಿವ-ಪಾರ್ವತಿಯರು ತಮ್ಮಿಬ್ಬರು ಪುತ್ರರಿಗೆ ಎರಡು ಸುಂದರ ಹಣ್ಣನ್ನು ನೀಡಿದ್ದರು. ಇಬ್ಬರಿಗೂ ಅವೆರಡೂ ತಮಗೇ ಸೇರಬೇಕೆಂಬ ಆಸೆಯಿತ್ತು. ಆ ಹಣ್ಣಿನಲ್ಲಿ ವಿಶೇಷವಾದ ಜ್ಞಾನ ಮತ್ತು ಎಂದಿಗೂ ಅಳಿಯದ ವಿಶೇಷತೆಯೊಂದು ಅಡಕವಾಗಿರುವುದೆಂದು ಜನುಮದಾತರು ತಿಳಿಸಿದ್ದರು.
  • ಆ ಹಣ್ಣನ್ನು ಪಡೆಯಲು ಇಬ್ಬರೂ ಸ್ಫರ್ಧಿಸಬೇಕಾಗಿತ್ತು ಮತ್ತು ಯಾರು ಅದರಲ್ಲಿ ಗೆಲ್ಲುತ್ತಾರೋ ಅವರು ಮೂರು ಬಾರಿ ಪ್ರಪಂಚ ಪ್ರದಕ್ಷಿಣೆ ಮಾಡಿ ಮೊದಲಿಗರಾಗಿ ಬರಬೇಕಾಗಿತ್ತು. ಕೊನೆಗೂ ಸ್ಫರ್ಧೆಯಲ್ಲಿ ಕಾರ್ತಿಕೇಯನೇ ಮೊದಲಿಗನಾಗಿ ಲೋಕ ಸುತ್ತಲು ತನ್ನ ವಾಹನವಾದ ನವಿಲನ್ನೇರಿ ಹೊರಟ. ಆಕಾಶದಲ್ಲಿ ಹಾರಾಡುತ್ತಾ ಪವಿತ್ರವೂ ಪಾವನಪೂಜ್ಯವೂ ಆದ ಸ್ಥಳಗಳಲ್ಲಿ ನಿಂದು ದೇವದೇವೋತ್ತಮರನ್ನೆಲ್ಲಾ ಪೂಜಿಸುತ್ತಾ ಮುಂದೆ ಸಾಗುತ್ತಿದ್ದ.
  • ಆದರೆ ಗಣೇಶನಿಗೆ ತನ್ನ ದೇಹದ್ದೇ ಚಿಂತೆಯಾಗಿತ್ತು. ತನ್ನ ಡೊಳ್ಳು ಹೊಟ್ಟೆಯನ್ನೆತ್ತಿಕೊಂಡು ನಿಧಾನವಾಗಿ ಸಾಗಿದರೆ ಯಾವುದೇ ರೀತಿಯಲ್ಲೂ ತಾನು ಕಾರ್ತಿಕೇಯನನ್ನು ಹಿಂದಿಕ್ಕಲಾರೆನೆಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಅವನ ಬುದ್ಧಿಯು ಅವನ ಸಮಸ್ಯೆಗೆ ತಕ್ಕ ಪರಿಹಾರ ಸೂಚಿಸಿತ್ತು. ಅವನು ಮರುಯೋಚಿಸದೆ ತನ್ನ ಜನುಮದಾತರಾದ ಸಾಕ್ಷಾತ್ ಪಾರ್ವತಿ ಪರಮೇಶ್ವರರಿಗೆ ಪ್ರದಕ್ಷಿಣೆ ಹಾಕಿ ನಿಂತನು.
  • ನನ್ನ ಮಾತಾ-ಪಿತರಾದ ಶಿವ ಪಾರ್ವತಿಯರಲ್ಲಿ ಇಡೀ ಜಗತ್ತೇ ಮೈದುಂಬಿರಲು, ಅವರೇ ಸರ್ವಸ್ವವಾಗಿರುವಾಗ ನಾನು ಬೇರೆಲ್ಲೂ ಹೋಗಬೇಕಾದ ಅವಶ್ಯಕತೆಯಿಲ್ಲ ಎಂದು ಗಣೇಶ ತನ್ನ ನಿಲುವನ್ನು ಸಮರ್ಥಿಸಿಕೊಂಡನು. ಕೊನೆಗೆ ಗಣೇಶನೇ ಪಂದ್ಯ ಗೆದ್ದ. ಜತೆಗೆ ಆ ಸುಂದರ ಹಣ್ಣಗಳನ್ನೂ ತನ್ನದಾಗಿಸಿಕೊಂಡ ಪ್ರಥಮ ಪೂಜ್ಯ ಗಣೇಶ.

ಶನಿ ದೃಷ್ಟಿ(ಶನಿ ಕಾಟ)

[ಬದಲಾಯಿಸಿ]
  • ಬ್ರಹ್ಮವೈವರ್ತ ಪುರಾಣದಲ್ಲಿನ, ಅಷ್ಟೇನೂ ಪ್ರಸಿದ್ಧವಲ್ಲದ ಕಥೆಯೊಂದು ಗಣೇಶನ ಹುಟ್ಟಿನ ಬಗ್ಗೆ ಬೇರೆಯೇ ಚಿತ್ರಣವನ್ನು ಕೊಡುತ್ತದೆ. ವಿಷ್ಣುವನ್ನು ಒಲಿಸಿಕೊಂಡರೆ ಒಬ್ಬ ಮಗನನ್ನು ಕರುಣಿಸುವನೆಂದು, ಪಾರ್ವತಿಯು, ಶಿವನ ಆಜ್ಞಾನುಸಾರವಾಗಿ ಒಂದು ವರ್ಷ ಉಪವಾಸ (ಪುಣ್ಯಕ ವ್ರತ)ಮಾಡುತ್ತಾಳೆ.
  • ಭಗವಾನ್ ಕೃಷ್ಣನು ಅವತಾರ ಸಮಾಪ್ತಿಯಾದ ನಂತರ, ಪ್ರತಿಯೊಂದು ಕಲ್ಪದಲ್ಲೂ(eon)ತಾನು ಅವಳ ಮಗನಾಗಿ ಅವತರಿಸುವೆನೆಂದು ಘೋಷಿಸುತ್ತಾನೆ. ಅದರಂತೆಯೇ,ಕೃಷ್ಣನು ಮನೋಹರ ರೂಪದ ಶಿಶುವಾಗಿ ಪಾರ್ವತಿಗೆ ಜನ್ಮ ತಳೆಯುತ್ತಾನೆ.ಈ ಘಟನೆಯನ್ನು ಅತ್ಯಧಿಕ ಸಂಭ್ರಮದಿಂದ ಆಚರಿಸಿ, ಎಲ್ಲಾ ದೇವಾನುದೇವತೆಗಳನ್ನು ಮಗುವನ್ನು ನೋಡಲು ಆಹ್ವಾನಿಸಲಾಗುತ್ತದೆ.
  • ಆದರೆ ಸೂರ್ಯನ ಮಗನಾದ ಶನಿಯು (Saturn),ಶನಿದೃಷ್ಟಿ ಶಿಶುವಿಗೆ ಹಾನಿಕಾರಕವಾದುದರಿಂದ ಮಗುವನ್ನು ದೃಷ್ಟಿಸಲು ಹಿಂಜರಿಯುತ್ತಾನೆ. ಆದರೂ ಪಾರ್ವತಿಯು ಶನಿಯನ್ನು ಶಿಶುವನ್ನು ನೋಡೆಂದು ಆಗ್ರಹಿಸಲು, ಶನಿಯು ಮಗುವನ್ನು ನೋಡಿದ್ದೇ ತಡ,ತಕ್ಷಣವೇ ಶಿಶುವಿನ ತಲೆ ಉರುಳಿ ಬಿದ್ದು ಗೋಲೋಕ(Goloka)ಕ್ಕೆ ಹಾರಿ ಹೋಗುತ್ತದೆ.
  • ದುಃಖದಲ್ಲಿ ಮುಳುಗಿದ ಶಿವ ಮತ್ತು ಪಾರ್ವತಿಯರನ್ನು ಕಂಡು,ವಿಷ್ಣು ತನ್ನ ವಾಹನವಾದ ಗರುಡನನ್ನು(divine eagle) ಏರಿ,ಪುಷ್ಪ-ಭದ್ರವೆಂಬ ನದೀತೀರದಿಂದ ಮರಿಯಾನೆಯೊಂದರ ತಲೆಯನ್ನು ತರುತ್ತಾನೆ. ಆನೆಯ ತಲೆಯನ್ನು ಪಾರ್ವತಿಯ ಮಗನ ರುಂಡವಿಲ್ಲದ ದೇಹಕ್ಕೆ ಜೋಡಿಸಿ,ಅವನನ್ನು ಪುನರುಜ್ಜೀವಿತಗೊಳಿಸುತ್ತಾರೆ.ಆ ಶಿಶುವನ್ನು ಗಣೇಶನೆಂದು ಹೆಸರಿಸಿ,ದೇವತೆಗಳೆಲ್ಲರೂ ಅವನನ್ನು ಆಶೀರ್ವದಿಸುತ್ತಾರೆ ಮತ್ತು ಅವನಿಗೆ ಶಕ್ತಿ ಸಾಮರ್ಥ್ಯ ಹಾಗೂ ಅಭಿವೃದ್ಧಿಯನ್ನು ಹಾರೈಸುತ್ತಾರೆ.

ಗಣೇಶನ ಮಾತೃಭಕ್ತಿ

[ಬದಲಾಯಿಸಿ]
  • ಒಮ್ಮೆ ಆಟವಾಡುತ್ತಿದ್ದಾಗ ಗಣೇಶ ಒಂದು ಬೆಕ್ಕನ್ನು ಗಾಯಗೊಳಿಸಿದ.ಅವನು ಮನೆಗೆ ಹಿಂದಿರುಗಿದಾಗ,ಅವನ ತಾಯಿಯ ಶರೀರದ ಮೇಲೆ ಒಂದು ಗಾಯವನ್ನು ಕಂಡ.ಅವಳು ಹೇಗೆ ಗಾಯಗೊಂಡಳೆಂದು ಕೇಳಿದ.ತಾಯಿ ಪಾರ್ವತಿ ಇದಕ್ಕೆ ಕಾರಣ ಬೇರಾರೂ ಅಲ್ಲ,ಸ್ವಯಂ ಗಣೇಶನೇ! ಎಂದು ತಿಳಿಸಿದಳು.ಆಶ್ಚರ್ಯಗೊಂಡ ಗಣೇಶ ತಾನು ಯಾವಾಗ ಆಕೆಯನ್ನು ಗಾಯಗೊಳಿಸಿದೆನೆಂದು ತಿಳಿಯಲಿಚ್ಛಿಸಿದ.
  • ಆಗ ಪಾರ್ವತಿ ತಾನೇ ದೇವಿ,ದೈವಿಕಶಕ್ತಿ,ಎಲ್ಲ ಜೀವರಾಶಿಗಳಲ್ಲಿ ಅಂತರ್ಗತವಾಗಿ ಇರುವವಳು ಎಂದು ವಿವರಿಸಿದಳು.ಅವನು ಬೆಕ್ಕನ್ನು ಗಾಯಗೊಳಿಸಿದಾಗ ಅವಳಿಗೇ ಘಾಸಿಯಾಯಿತು.ಆಗ ಗಣೇಶನಿಗೆ ಸ್ತ್ರೀಯರೆಲ್ಲಾ ಅವನ ತಾಯಿಯ ಯಥಾರ್ಥವಾದ ಪ್ರಕಟರೂಪ(ಪ್ರತಿರೂಪ)ವೆಂದು ಜ್ಞಾನೋದಯವಾಯಿತು.ಅವನು ಮದುವೆಯಾಗುವುದಿಲ್ಲವೆಂದು ನಿಶ್ಚಯಿಸಿದ.
  • ಹೀಗೆ ಗಣಪತಿಯು ಆಜನ್ಮ ನೈಷ್ಠಿಕ ಬ್ರಹ್ಮಚಾರಿಯಾಗಿ,ಬ್ರಹ್ಮಚರ್ಯದ ಕಟ್ಟುನಿಟ್ಟಿನ ನಿಯಮಗಳ ಪಾಲಕನಾಗಿ ಉಳಿದ.ಆದರೂ,ಕೆಲವು ಸನಾತನ ಗ್ರಂಥ ಹಾಗೂ ಪ್ರತಿಮೆಗಳಲ್ಲಿ ಕೆಲವು ಕಡೆ ಗಣೇಶನು ಬ್ರಹ್ಮನ ಇಬ್ಬರು ಪುತ್ರಿಯರನ್ನು ವಿವಾಹವಾಗಿರುವಂತೆ ಚಿತ್ರಿಸಲಾಗಿದೆ: ಬುದ್ಧಿ (ಬುದ್ಧಿಶಕ್ತಿ) ಮತ್ತು ಸಿದ್ಧಿ (ಆಧ್ಯಾತ್ಮಿಕ ಶಕ್ತಿ).

ಗಣೇಶನಿಗಿರುವ ವಿವಿಧ ಹೆಸರುಗಳು

[ಬದಲಾಯಿಸಿ]

ಗಣೇಶನಿಗೆ ಇತರ ಹಿಂದೂ ದೇವತೆಗಳಂತೆಯೇ ಅನೇಕ ಹೆಸರುಗಳಿವೆ. ಸಹಸ್ರನಾಮದ ಮೂಲಕ ಗಣೇಶನನ್ನು ಸಾವಿರಾರು ಹೆಸರುಗಳಿಂದ ಪೂಜಿಸಲಾಗುತ್ತದೆ. ಪ್ರತಿ ಹೆಸರು ಬೇರೆ ಬೇರೆ ಅರ್ಥವನ್ನು ಹೊಂದಿದೆ. ಗಣೇಶ, ಗಣಪತಿ, ವಿನಾಯಕ ಎಂಬುದರ ಜೊತೆಗೆ ಗಣೇಶನಿಗಿರುವ ಇತರ ಹೆಸರುಗಳಲ್ಲಿ ಕೆಲವು ಇಲ್ಲಿದೆ -

  • ಅಮೇಯ (ಸಂಸ್ಕೃತ: अमेय), - ಅಂತ್ಯವಿಲ್ಲದವನು
  • ಅನಂಗಪೂಜಿತ (ಸಂಸ್ಕೃತ: आनंगपूजीता), ಆಕಾರವಿಲ್ಲದವನು
  • ಓಂಕಾರ (ಸಂಸ್ಕೃತ: ॐ कार), the ಓಂ- ಆಕಾರದಲ್ಲಿರುವ ಶರೀರವುಳ್ಳವನು
  • ಬಾಲಚಂದ್ರ (ಸಂಸ್ಕೃತ: बालचंदृ), ಚಂದ್ರನನ್ನು ತಲೆಯಲ್ಲಿ ಧರಿಸಿದವನು
  • ಚಿಂತಾಮಣಿ (ಸಂಸ್ಕೃತचिंतामणि/चिन्तामणि), ಚಿಂತೆಗಳನ್ನು ನಾಶಮಾಡುವವನು
  • ಗಜಕರ್ಣ (ಸಂಸ್ಕೃತ: गजकर्ण), ಆನೆಯ ಕಿವಿಯಂತೆ ಕಿವಿಯನ್ನು ಹೊಂದಿದವನು
  • ಗಜಾನನ (ಸಂಸ್ಕೃತ: गजानन्), ಆನೆಯ ತಲೆಹೊಂದಿದವನು
  • ಗಜವದನ,(ಸಂಸ್ಕೃತ :गजवदन्) ಆನೆಯಂತೆ ಮುಖವುಳ್ಳವನು
  • ಗಜಾಧ್ಯಕ್ಷ (ಸಂಸ್ಕೃತ: गणध्यक्शमा), ಗಣಗಳ ಗುಂಪಿಗೆ ನಾಯಕನಾದವನು
  • ಗಣಪತಿ (ಸಂಸ್ಕೃತ: गणपती), ಗಣಗಳ ಒಡೆಯನಾದವನು
  • ಗಣನಾಯಕ, (ಸಂಸ್ಕೃತ: गणनायक्), ಗಣಗಳ ನಾಯಕ
  • ಏಕದಂತ (ಸಂಸ್ಕೃತ: एकदंत), ಒಂದೇ ದಂತವನ್ನು ಹೊಂದಿದವನು
  • ಲಂಬೋದರ (ಸಂಸ್ಕೃತ: लंबोदर), ದೊಡ್ಡ ಹೊಟ್ಟೆಯನ್ನು ಹೊಂದಿದವನು
  • ಮೂಷಿಕ ವಾಹನ,(ಸಂಸ್ಕೃತ:मूषिक वाहन), ಇಲಿಯನ್ನು ವಾಹನವಾಗಿಸಿಕೊಂಡವನು
  • ಶೂರ್ಪಕರ್ಣ,(ಸಂಸ್ಕೃತ: शूर्पकर्ण), ಅಗಲವಾದ ಕಿವಿಯುಳ್ಳವನು
  • ಸುಮುಖ (ಸಂಸ್ಕೃತ: सुमुख), ಸುಂದರವಾದ ಮುಖವುಳ್ಳವನು
  • ವಕ್ರತುಂಡ (ಸಂಸ್ಕೃತ: वक्रतुंड), ಮುರಿದ ದಂತವುಳ್ಳವನು (ಡೊಂಕಾದ ಸೊಂಡಿಲು ಉಳ್ಳವನು)
  • ವಿಘ್ನಹರ್ತ (ಸಂಸ್ಕೃತ: विघ्नहर्त), ತೊಂದರೆಗಳನ್ನು ನಿವಾರಿಸುವವನು
  • ವಿಘ್ನ ವಿನಾಶಕ,(ಸಂಸ್ಕೃತ: विघ्न विनाशक), ವಿಘ್ನಗಳನ್ನು ನಾಶಮಾಡುವವನು
  • ವಿಘ್ನೇಶ ಅಥವಾ ವಿಘ್ನೇಶ್ವರ (ಸಂಸ್ಕೃತ: विग्णेशवर), ವಿಘ್ನಗಳನ್ನು ನಿವಾರಿಸುವವನು
  • ವಿಕಟ (ಸಂಸ್ಕೃತ: विकट), ವಿಲಕ್ಷಣ ರೂಪವನ್ನು ಹೊಂದಿದವನು
  • ವಿನಾಯಕ, (ಸಂಸ್ಕೃತ विनायक), ವಿಘ್ನಗಳನ್ನು ನಿವಾರಿಸುವವನು
  • ವಿಶ್ವಧರ (ಸಂಸ್ಕೃತ:विश्वधर), ಅಥವಾ ಜಗದೋದ್ಧಾರ(ಸಂಸ್ಕೃತ: जगदॊद्धार), ಜಗತ್ತನ್ನು ಪಾಲಿಸುವವನು
  • ವಿಶ್ವವಂತ(ಸಂಸ್ಕೃತ: विश्ववंत) ಅಥವಾ ಜಗನ್ನಾಥ(ಸಂಸ್ಕೃತ: जगन्नाथ), ಜಗತ್ತಿಗೆ ಒಡೆಯ

ಬೆನಕ

  • ಆಕೃತಿಯಲ್ಲಿ ಚಿಕ್ಕದಾಗಿರುವ ಗಣಪತಿಯ ವಿಗ್ರಹವನ್ನು ಬಾಲ ಗಣಪತಿ, ಬಾಲ ಗಣೇಶ ಎಂದೂ ಕರೆಯಲಾಗುತ್ತದೆ.

ವಿದೇಶಗಳಲ್ಲಿ ಗಣಪತಿ

[ಬದಲಾಯಿಸಿ]
7th- to 8th-century Ganesha sculpture from Cham dynasty, Vietnam.[]

ಭಾರತದಲ್ಲಿ ಮಾತ್ರವೇ ಅಲ್ಲ, ಪ್ರಾಚೀನ ಭಾರತೀಯರು ತಮ್ಮ ಸಂಸ್ಕೃತಿಯನ್ನು ಹರಡಿದ ಸಾಗರೋತ್ತರ ದೇಶಗಳಲ್ಲಿ ಕೂಡ ಗಣಪತಿವಿಗ್ರಹಗಳು ಜನಪ್ರಿಯವಾಗಿದ್ದುವು. ಜಾವ, ಕಾಂಬೋಡಿಯ, ಬೋರ್ನಿಯೊ ಮೊದಲಾದ ಆಗ್ನೇಯ ಏಷ್ಯ ರಾಷ್ಟ್ರಗಳಲ್ಲಿ ಹಿಂದೂ ಸಂಪ್ರದಾಯದ ಗಣಪತಿಯಿದ್ದರೆ, ಚೀನ, ಜಪಾನ್, ಶ್ರೀಲಂಕಾಗಳಲ್ಲಿ ಬೌದ್ಧರ ಪ್ರಭಾವದಿಂದ ಮಾರ್ಪಟ್ಟ ರೂಪದಲ್ಲಿ ಗಣಪತಿ ವಿಗ್ರಹಗಳು ಇಂದಿಗೂ ಕಾಣಸಿಗುತ್ತವೆ.

  • ಈಗ ಕೇವಲ ಗಣಪತಿಯೊಬ್ಬನನ್ನೇ ಪರಮ ದೈವತವೆಂದು ಭಜಿಸುವ ಹಿಂದೂ ಸಂಪ್ರದಾಯ ಎಲ್ಲಿಯೂ ಹೆಚ್ಚಾಗಿ ಕಾಣದಿದ್ದರೂ ಪ್ರಾಚೀನ ಭಾರತದಲ್ಲಿ ಅಂಥ ಒಂದು ಸಂಪ್ರದಾಯ ಊರ್ಜಿತದಲ್ಲಿದ್ದುದು ಸ್ಪಷ್ಟವಾಗಿ ಕಾಣಬರುತ್ತದೆ. ಅದಕ್ಕೆ ಗಾಣಾಪತ್ಯ ಸಂಪ್ರದಾಯವೆಂದು ಹೆಸರಿದ್ದಿತು. ಆನಂದಗಿರಿಯ ಶಂಕರವಿಜಯವೆಂಬ ಗ್ರಂಥದಲ್ಲಿ (ಪ್ರಾಯಃ 10ನೆಯ ಶತಮಾನಕ್ಕಿಂತ ಇನ್ನೂ ಎಷ್ಟೋ ಈಚಿನ ಗ್ರಂಥ) ಗಾಣಾಪತ್ಯರ ಆರು ಪಂಥಗಳನ್ನು ಉಲ್ಲೇಖಿಸಲಾಗಿದೆ:
  1. ಮಹಾಗಣಪತಿ;
  2. ಹರಿದ್ರಾ ಗಣಪತಿ;
  3. ಉಚ್ಛಿಷ್ಟ ಗಣಪತಿ;
  4. ನವನೀತ ಗಣಪತಿ;
  5. ಸ್ವರ್ಣಗಣಪತಿ ಮತ್ತು
  6. ಸಂತಾನ ಗಣಪತಿ. ಈ ದೇವತೆಗಳ ಅವಾಹನಾಮಂತ್ರ ಹಾಗೂ ಪುಜಾ ವಿಧಿಗಳಲ್ಲಿ ವ್ಯತ್ಯಾಸಗಳಿರುತ್ತಿದ್ದುವು. ಇವು ಬೇರೆ ಬೇರೆ ತಂತ್ರ ಆಗಮ ಗ್ರಂಥಗಳನ್ನು ಅವಲಂಭಿಸುತ್ತಿದ್ದುವು. ಆದರೂ ಆರೂ ಪಂಥದವರು ಪ್ರಪಂಚದ ಸೃಷ್ಟಿ, ಸ್ಥಿತಿ. ಸಂಹಾರ ಕ್ಕೆಲ್ಲ ಮೂಲಕಾರಣ ಗಣಪತಿಯೇ ಹೊರತು ಶಿವನಲ್ಲವೆಂದು ನಂಬುತ್ತಿದ್ದರು. ಬ್ರಹ್ಮಾದಿಗಳೆಲ್ಲ ಗಣಪತಿಯ ಮಾಯೆಯ ಮೂಲಕ ಜನಿಸಿದವರೆಂದೇ ಅವರ ಹೇಳಿಕೆ.
  • ಹೀಗೆ ಇವರು ವೇದಾಂತದ ಪರಮತತ್ತ್ವಕ್ಕೆ ಅಥವಾ ಪರಬ್ರಹ್ಮವಸ್ತುವಿಗೆ ಪ್ರತೀಕವಾಗಿಯೇ ಗಣಪತಿಯನ್ನು ಆರಾಧಿಸುತ್ತಿದ್ದರೆನ್ನಬಹುದು. ಶಂಕರಾಚಾರ್ಯರು ಇವರೆಲ್ಲರೊಡನೆ ವಾದ ಮಾಡಿ, ಜಯಿಸಿ ತಾವು ಪಂಚಾಯತನ-ದೇವತಾ ಪುಜಾ ವಿಧಿಯ ನೂತನ ಉಪಕ್ರಮವನ್ನು ಆರಂಭಿಸಿ ಷಣ್ಮತಸ್ಥಾಪನಾ ಚಾರ್ಯರೆನಿಸಿದರೆಂದು ಶಂಕರವಿಜಯದಲ್ಲಿ ವರ್ಣಿಸಲಾಗಿದೆ.
  • ಮೇಲೆ ಹೇಳಲಾದ ಪಂಥಗಳಲ್ಲಿ ಉಚ್ಛಿಷ್ಟ ಗಣಪತಿ ಪುಜಾವಿಧಿ ಮಾತ್ರ ಅವೈದಿಕವಿದ್ದು ನಿಷಿದ್ಧ ವಾಮಾಚಾರಕ್ಕೆ ಎಡಮಾಡಿಕೊಟ್ಟಿದ್ದಂತೆ ಕಾಣುತ್ತದೆ. ಉಚ್ಛಿಷ್ಟವೆಂದರೆ ಎಂಜಲು. ಎಂಜಲು, ಮಾಂಸ, ಮದ್ಯ, ಮೈಥುನ ಇತ್ಯಾದಿ ವಾಮಾಚಾರಗಳ ಅತಿರೇಕವನ್ನು ಈ ರಹಸ್ಯತಾಂತ್ರಿಕಪಂಥ ಸಾಧನೆಗಳಲ್ಲಿ ಕಾಣಬಹುದು. ಇವರು ಜಾತಿವ್ಯವಸ್ಥೆ, ವಿವಾಹನಿಯಮ ಮುಂತಾದುವನ್ನೆಲ್ಲ ಭಂಗಿಸಿ ಸಮಾಜಘಾತಕ ಪ್ರವೃತ್ತಿಯವರಾಗಿದ್ದಂತೆ ಸಾಹಿತ್ಯದಲ್ಲಿ ಇವರ ವರ್ಣನೆಗಳು ಬರುತ್ತವೆ.

ಆಧುನಿಕ ಜಗತ್ತಿನಲ್ಲಿ

[ಬದಲಾಯಿಸಿ]

ಪುಣೆಯ ಬಳಿಯಲ್ಲಿರುವ ಚಿಂಚವಾಡದಲ್ಲಿ ಏಳು ತಲೆಗಳವರೆಗೆ ಒಂದು ಮನೆಯವರ ಮೇಲೆ ಗಣೇಶನ ಆವೇಶವಾಗಿ ಮನುಷ್ಯರೇ ಪೂಜೆಗೊಳ್ಳುತ್ತಿದ್ದ ಐತಿಹಾಸಿಕ ಉಲ್ಲೇಖ ಇಲ್ಲಿ ಸ್ಮರಣೀಯವಾಗಿವೆ. 1810ರಲ್ಲಿ ಏಳನೆಯ ತಲೆಯವ ಮಕ್ಕಳಿಲ್ಲದೆ ಸತ್ತಮೇಲೂ ಅವನ ದಾಯಾದಿಗಳು ಈಗಲೂ ಅಲ್ಲಿ ಪುಜ್ಯರಾಗಿದ್ದಾರೆ. ಮೊದಲನೆಯ ಗಣೇಶಭಕ್ತನ ಹೆಸರು ಮೋರೋಭಾ. ಔರಂಗಜೇಬ್ ಕೂಡ ಈ ಮನೆತನಕ್ಕೆ ಎಂಟು ಹಳ್ಳಿಗಳ ದತ್ತಿಯನ್ನಿತ್ತಿದ್ದನೆನ್ನಲಾಗಿದೆ.ಗಣಪತಿಯನ್ನು ಆಧುನಿಕ ಜಗತ್ತಿನ ಹಿಂದೂಧರ್ಮದಲ್ಲಿ ಅತ್ಯಂತ ಹೆಚ್ಚು ಪೂಜಿಸಲ್ಪಡುವ ದೇವತೆ ಎಂದು ಪರಿಗಣಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Ganesha getting ready to throw his lotus. Basohli miniature, circa 1730. National Museum, New Delhi. In the Mudgalapurāṇa (VII, 70), in order to kill the demon of egotism (Mamāsura) who had attacked him, Gaṇeśa Vighnarāja throws his lotus at him. Unable to bear the fragrance of the divine flower, the demon surrenders to Gaṇeśha. " For quotation of description of the work, see: Martin-Dubost (1997), p. 73.
  2. ೨.೦ ೨.೧ ೨.೨ ೨.೩
  3. ೩.೦ ೩.೧ ೩.೨ ೩.೩
  4. ೪.೦ ೪.೧
  5. ೫.೦ ೫.೧
  6. John Guy (editors: Andrew Hardy et al) (2009). [http:// books.google. com/books?id=fj8l8v_yP5oC Champa and the Archaeology of Mỹ Sơn (Vietnam)]. National University of Singapore Press. pp. 144–150. ISBN 978-9971694517. {{cite book}}: |author1= has generic name (help); Check |url= value (help)

ಉಲ್ಲೇಖ ದೋಷ: <ref> tag with name "FOOTNOTEBrown199119–21, chapter by AK Narain" defined in <references> is not used in prior text.
ಉಲ್ಲೇಖ ದೋಷ: <ref> tag with name "FOOTNOTEBrown199150–55, 120" defined in <references> is not used in prior text.
ಉಲ್ಲೇಖ ದೋಷ: <ref> tag with name "FOOTNOTEBrown19918" defined in <references> is not used in prior text.

ಉಲ್ಲೇಖ ದೋಷ: <ref> tag with name "FOOTNOTEBailey1995ix" defined in <references> is not used in prior text.

The majority of documentation on Ganesha is in Sanskrit. A collection of useful documents can be found here Archived 2006-07-17 ವೇಬ್ಯಾಕ್ ಮೆಷಿನ್ ನಲ್ಲಿ.. At the same site can be found some documents and translations in English here Archived 2005-09-17 ವೇಬ್ಯಾಕ್ ಮೆಷಿನ್ ನಲ್ಲಿ..

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ
"https://kn.wikipedia.org/w/index.php?title=ಗಣೇಶ&oldid=1144182" ಇಂದ ಪಡೆಯಲ್ಪಟ್ಟಿದೆ