ವಿಷಯಕ್ಕೆ ಹೋಗು

ಬಾಣಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಣಭಟ್ಟ ಅಥವಾ ಬಾಣ ಸಂಸ್ಕೃತದ ಗದ್ಯ ಕವಿ. ಹರ್ಷಚರಿತೆ ಹಾಗೂ ಕಾದಂಬರಿಗಳ ಕರ್ತೃ. ಕಾಲ- ಕ್ರಿ.ಶ. 7ನೆಯ ಶತಮಾನ. ಇವನ ತಂದೆ ಚಿತ್ರಭಾನು,ತಾಯಿ ರಾಜಾದೇವಿ.ಇವನು ಉತ್ತರ ಭಾರತದ ಪ್ರಿತಿಕೂಟ ಎಂಬ ಊರಿನಲ್ಲಿ ಜನಿಸಿದನು. ಕ್ರಿ.ಶ. ೬೦೬-೬೪೭ರ ಅವಧಿಯಲ್ಲಿ ರಾಜ್ಯವಾಳಿದ ಹರ್ಷವರ್ಧನನ ಆಸ್ಥಾನದಲ್ಲಿ ಆಸ್ಥಾನ ಕವಿಯಾಗಿದ್ದನು.

ಬದುಕು

[ಬದಲಾಯಿಸಿ]

ಸಂಸ್ಕøತದ ಉದ್ದಾಮ ಪಂಡಿತ. ಸಂಸ್ಕøತ ಗದ್ಯ ಸಾಹಿತ್ಯದಲ್ಲಿ ಈತನ ಕೀರ್ತಿ ಅಜರಾಮರವಾದುದು. ಹರ್ಷಚರಿತೆಯ ಆರಂಭದಲ್ಲಿ ಈತನ ಆತ್ಮವೃತ್ತ ವರ್ಣಿತವಾಗಿದೆ. ಆನನ ಶೋಣಾನದಿಯ ಸಮೀಪದಲ್ಲಿರುವ ಪ್ರೀತಿಕೂಟವೆಂಬ ಅಗ್ರಹಾರ (ಪ್ರಾಯಶಃ ಇದು ಬಿಹಾರ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿದ್ದಿರಬೇಕು). ತಾಯಿ ರಾಜದೇವಿ ವಾತ್ಸ್ಯಾಯನ ವಂಶಕ್ಕೆ ಸೇರಿದವಳು. ತಂದೆ ಚಿತ್ರಭಾನು. ಬಾಲ್ಯದಲ್ಲಿಯೇ ಮಾತೃವಿಯೋಗವಾಗಿ ಈತ ತಂದೆಯ ರಕ್ಷಣೆಯ ಕಕ್ಷೆಯಲ್ಲೇ ಬೆಳೆದ. ಆದರೆ 14ನೆಯ ವಯಸ್ಸಿನಲ್ಲಿ ಇವನ ತಂದೆಯೂ ತೀರಿಕೊಂಡ. ದುಃಖಿತನಾದ ಬಣ ಕೆಲಕಾಲ ದೇಶಾಟನೆ ಮಾಡಿಬಂದ. ಹೀಗೆ ಬಂದ ಬಾಣನ ಲೋಕಾನುಭವ ಹಾಗೂ ವಿದ್ಯಾಪಾಂಡಿತ್ಯ ಗುರುತಿಸಿದ ಶ್ರೀಹರ್ಷನ ಸಂಬಂಧಿ ಕೃಷ್ಣ ಎಂಬಾತ ಈತನ ಬಗೆಗೆ ಶ್ರೀಹರ್ಷನಿಗೆ ತಿಳಿಸಿದ. ಶ್ರೀಹರ್ಷ ಈತನನ್ನು ಕರೆಯಿಸಿಕೊಂಡು ಆಸ್ಥಾನ ಪಂಡಿತನಾಗಿ ಮಾಡಿಕೊಂಡ. ಬಾಣನೇ ತನ್ನ ವಂಶಾವಳಿಯನ್ನು ಹರ್ಷ ಚರಿತದಲ್ಲಿ ಗದ್ಯರೂಪದಲ್ಲಿಯೂ ಕಾದಂಬರಿಯಲ್ಲಿ ಪದ್ಯ ರೂಪದಲ್ಲಿಯೂ ಹೇಳಿಕೊಂಡಿದ್ದಾನೆ.

ಈತ ಆಸ್ಥಾನಪಂಡಿತನಾದ ಮೇಲೆ ತನ್ನ ಆಶ್ರಯದಾತನ ಜೀವನ ಚರಿತ್ರೆಯನ್ನು ಗದ್ಯರೂಪದಲ್ಲಿ ಬರೆದು ಅದನ್ನು ಹರ್ಷಚರಿತವೆಂದು ಕರೆದಿದ್ದಾನೆ. ಇದಲ್ಲದೆ ಕಾದಂಬರಿ ಮತ್ತು ಚಂಡೀಶತಕವೆಂಬ ಗ್ರಂಥಗಳನ್ನು ರಚಿಸಿದ್ದಾನೆ. ಪಾರ್ವತೀಪರಿಣಯವೆಂಬ ನಾಟಕವನ್ನು ಈತನೇ ಬರೆದಿರುವುದಾಗಿ ಕೆಲವರು ಹೇಳುತ್ತಾರೆ. ಈತ ಬರೆದನೆಂದು ಹೇಳುವ ಶ್ಲೋಕಬದ್ಧ ಕಾದಂಬರಿ ಮತ್ತು ಮುಕುಟತಾಡಿತಕವೆಂಬ ಗ್ರಂಥಗಳು ಇನ್ನೂ ಸಿಕ್ಕಿಲ್ಲ. ಹರ್ಷಚರಿತ ಐತಿಹಾಸಿಕ ಅಥವಾ ಚಾರಿತ್ರಿಕ ಕಾವ್ಯವೆನಿಸಿದರೆ, ಕಾದಂಬರಿ ಕಲ್ಪಿತ ಕಥೆಯ ಜಾತಿಗೆ ಸೇರಿದೆ. ಹರ್ಷಚರಿತವನ್ನು ಆಖ್ಯಾಯಿಕೆಯೆಂದೂ ಕಾದಂಬರಿಯನ್ನು ಕಥೆಯೆಂದೂ ಅಲಂಕಾರಿಕರು ಕರೆಯುತ್ತಾರೆ. ಕಾದಂಬರಿಯಲ್ಲಿ ಶೃಂಗಾರರಸವೂ ಹರ್ಷಚರಿತದಲ್ಲಿ ಕರುಣರಸವೂ ಚಂಡೀಶತಕದಲ್ಲಿ ವೀರರಸವೂ ಪ್ರಧಾನವೆನಿಸಿವೆ. ಕಾದಂಬರಿಯಲ್ಲಿ ಪೂರ್ವಭಾಗವೆಂದೂ ಉತ್ತರಭಾಗವೆಂದೂ ಎರಡು ಭಾಗಗಳಿರುವುವು. ಚಂದ್ರಾಪೀಡ ಹೇಮಕೂಟದಲ್ಲಿ ಕಾದಂಬರೀ ಮಹಾಶ್ವೇತೆಯರೊಡನೆ ಸ್ವಲ್ಪಹೊತ್ತು ಮಾತನಾಡುತ್ತಿದ್ದು ಕೊನೆಗೆ ಅವರ ಇಚ್ಛೆಯಂತೆ ಪತ್ರಲೇಖೆಯನ್ನು ಅಲ್ಲಿಯೇ ಬಿಟ್ಟು ತನ್ನ ವಾಸಸ್ಥಳಕ್ಕೆ ಹಿಂತಿರುಗುವನು. ಅವನು ಹೋದ ಕೊಂಚ ದಿವಸಗಳಲ್ಲಿಯೇ ಪತ್ರಲೇಖೆ ಹೇಮಕೂಟದಿಂದ ಹಿಂತಿರುವಳು. ಅವಳಿಂದ ಚಂದ್ರಾಪೀಡ ಕಾದಂಬರಿಯ ಅವಸ್ಥೆಯನ್ನು ತಿಳಿದನೆಂಬಲ್ಲಿಗೆ ಪೂರ್ವ ಕಾದಂಬರಿ ಮುಗಿದಿದೆ. ಬಾಣ ಇಷ್ಟನ್ನು ಮಾತ್ರವೇ ಬರೆದು ಇಹಲೋಕದಿಂದ ಮರೆಯಾದ. ಉತ್ತರಾರ್ಧವನ್ನು ಇವನ ಮಗ ಪುಲಿಂದಭಟ್ಟ ಬರೆದ.

ಕೃತಿಗಳು

[ಬದಲಾಯಿಸಿ]

ಚಂಡೀಶತಕ

[ಬದಲಾಯಿಸಿ]

ಚಂಡೀಶತಕದ ಕಥಾಭಾಗವನ್ನು ಕವಿ ದೇವಿಮಾಹಾತ್ಮ್ಯದಿಂದ ಆರಿಸಿಕೊಂಡಿದ್ದಾನೆ. ಮಹಿಷಾಸುರನನ್ನು ಚಂಡಿ ತನ್ನ ಕಾಲಿನಿಂದ ಕೆಡವಿ ಕೊಂದು ಲೋಕವನ್ನು ರಕ್ಷಿಸಿದಳೆಂಬುದು ಕಥೆಯ ತಿರುಳು. ಶ್ಲೋಕಗಳೆಲ್ಲವೂ ಚಂಡಿಗೂ ಮಹಿಷಾಸುರನಿಗೂ ನಡೆದ ಯುದ್ಧಕ್ಕೆ ಸಂಬಂಧಿಸಿದವು. ದೇವಿಗಿಂತಲೂ ದೇವಿಯ ಪಾದಾಘಾತ ವಿಧವಿಧವಾಗಿ ವರ್ಣಿತವಾಗಿರುವುದು. ಇದು ಗೌಡೀ ಶೈಲಿಯಲ್ಲಿ ರಚಿತವಾಗಿ ಅನುಪ್ರಾಸ ಯಮಕ ಉತ್ಪ್ರೇಕ್ಷೆಗಳಿಂದ ಕೂಡಿರುವುದು. ಇದರಲ್ಲಿ ಬೀಭತ್ಸ, ರೌದ್ರ, ಅದ್ಭುತ, ಭಯಾನಕ, ವೀರರಸ ವರ್ಣನೆಗಳು ಮೂರ್ತಿಮತ್ತಾಗಿ ಎದುರಿಗೆ ನಿಂತಂತೆ ತೋರುವುವು.

ಕಾದಂಬರೀ

[ಬದಲಾಯಿಸಿ]

ಇದರ ಕಥಾವಸ್ತು ಕೇವಲ ಒಂದು ಜನ್ಮಕ್ಕೆ ಸಂಬಂಧಿಸಿದುದಾಗಿರದೆ ಚಂದ್ರಾಪೀಡ ಮತ್ತು ಪುಂಡರೀಕ ಇವರ ಮೂರು ಜನ್ಮಗಳ ಕಥೆ. ವಿದಿಶಾದೇಶದ ರಾಜನಾದ ಶೂದ್ರಕನ ಆಸ್ಥಾನಕ್ಕೆ ಸುಂದರಿಯಾದ ಚಂಡಲ ಕನ್ಯೆಯೊಬ್ಬಳು ವೈಶಂಪಾಯನವೆಂಬ ಶುಕವನ್ನು ತರುತ್ತಾಳೆ. ಅದು ಮನುಷ್ಯರಂತೆ ಮಾತನಾಡುತ್ತದೆ. ಸ್ವಯಂ ಸಂಬಂಧವನ್ನು ಹೊಂದಿದ ಈ ಶುಕ ಕಾದಂಬರಿ ಕಥೆಯನ್ನು ಆರಂಭಿಸುತ್ತದೆ. ಈ ಮಧ್ಯದಲ್ಲಿ ಜಾಬಾಲಿ ಋಷಿ ಚಂದ್ರಾಪೀಡ ಮತ್ತು ವೈಶಂಪಾಯನ ಇವರ ಕಥೆಯನ್ನು ವರ್ಣಿಸುತ್ತಾನೆ. ರಾಜನಾದ ಚಂದ್ರಾಪೀಡ ದಿಗ್ವಿಜಯಾರ್ಥಿಯಾಗಿ ಹಿಮಾಲಯ ಪ್ರದೇಶಕ್ಕೆ ಹೋಗುತ್ತಾನೆ. ಅಲ್ಲಿ ಕಂಡ ಕಿನ್ನರ ದಂಪತಿಗಳನ್ನು ಆತ ಹಿಂಬಾಲಿಸುತ್ತಾನೆ. ಆದರೆ ಆ ದಂಪತಿಗಳು ಅದೃಶ್ಯರಾಗುತ್ತಾರೆ. ಆಗ ರಾಜ ಅಚ್ಛೋದವೆಂಬ ಸರೋವರದ ಸಮೀಪದಲ್ಲಿರುತ್ತಾನೆ. ಅಲ್ಲಿ ತನ್ನ ಕುದುರೆಯನ್ನು ಕಟ್ಟಿ ಹಾಕಿದ ಮೇಲೆ ಸಮೀಪದ ಶಿವಾಲಯದಲ್ಲಿ ವೀಣೆಯನ್ನು ನುಡಿಸುತ್ತಿದ್ದ ಮಹಾಶ್ವೇತೆಯ ಸಂಗೀತದಿಂದ ಆಕರ್ಷಿತನಾಗುತ್ತಾನೆ. ಅವಳ ಪರಿಚಯ ಮಾಡಿಕೊಂಡು ಅವಳ ಪ್ರಿಯಸಖಿ ಕಾದಂಬರಿಯನ್ನು ನೋಡುತ್ತಾನೆ. ಚಂದ್ರಾಪೀಡ ಮತ್ತು ಕಾದಂಬರಿ ಪರಸ್ಪರ ಆಕರ್ಷಿತರಾಗುತ್ತಾರೆ. ಆದರೆ ಈ ಪ್ರೀತಿ ವಿಕಸಿತಗೊಳ್ಳುವ ಮುನ್ನವೇ ರಾಜ ಉಜ್ಜೈನಿಗೆ ಹಿಂದಿರುಗುತ್ತಾನೆ. ತಾಂಬೂಲಕರಂಕವಾಹಿನಿಯಾದ ಪತ್ರಲೇಖೆ ಕಾದಂಬರಿಯ ಪ್ರೇಮ ಸಂದೇಶವನ್ನು ತರುತ್ತಾಳೆ. ಇಲ್ಲಿಗೆ ಕಾದಂಬರಿಯ ಪೂರ್ವಭಾಗ ಮುಗಿಯುತ್ತದೆ. ಉತ್ತರ ಭಾಗದಲ್ಲಿ ಚಂದ್ರಪೀಡ ಮಹಾಶ್ವೇತೆಯ ಸಮೀಪಕ್ಕೆ ಬರುತ್ತಾನೆ. ಅಲ್ಲಿ ಮಹಾಶ್ವೇತೆಯೊಡನೆ ತನ್ನ ಪ್ರೀತಿಯನ್ನು ಸ್ಥಾಪಿಸಲು ಪ್ರಯತ್ನಿಸಿ ಆಕೆಯ ಕೋಪಕ್ಕೆ ತುತ್ತಾಗಿ ಶುಕನಾಗಿ ಪರಿವರ್ತನಾಗಿದ್ದ ತನ್ನ ಮಿತ್ರನಾದ ವೈಶಂಪಾಯನನ ಸಮಾಚಾರ ತಿಳಿಯುತ್ತಾನೆ. ಚಂದ್ರಾಪೀಡ ತನ್ನ ಮಿತ್ರನ ಸ್ಥಿತಿಗೆ ದುಃಖಪಟ್ಟು ತನ್ನ ಶರೀರವನ್ನು ತ್ಯಜಿಸುತ್ತಾನೆ. ಈ ಸಮಾಚಾರ ತಿಳಿದು ಕಾದಂಬರಿ ದುಃಖಿತಳಾಗುತ್ತಾಳೆ. ಚಂದ್ರಾಪೀಡನ ಮಾತಾಪಿತರು ಈ ಘಟನೆಯಿಂದಾಗಿ ಉದ್ವಿಗ್ನರಾಗುತ್ತಾರೆ. (ಇಲ್ಲಿಗೆ ಜಾಬಲಿ ಆರಂಭಿಸಿದ ಕಥೆ ಮುಗಿಯುತ್ತದೆ). ಕಪಿಂಜಲ ತನ್ನ ಮಿತ್ರನಾದ ಶುಕವನ್ನು (ವಾಸ್ತವವಾಗಿ ಮಂತ್ರಿಯ ಮಗನಾದ ವೈಶಂಪಾಯನ) ಹುಡುಕುತ್ತಾ ಜಾಬಾಲಿಯ ಆಶ್ರಮಕ್ಕೆ ಬರುತ್ತಾನೆ. ಅಲ್ಲಿ ತನ್ನ ಮಿತ್ರನ ದುರವಸ್ಥೆಯನ್ನು ಕಂಡು ದುಃಖಿತನಾಗುತ್ತಾನೆ. ಆ ಶುಕ ಹಾರಿ ಚಂಡಾಲನ ಸಮೀಪಕ್ಕೆ ಹೋಗುತ್ತದೆ. ಅವನು ಅದನ್ನು ತನ್ನ ಮಗಳಿಗೆ ಕೊಡುತ್ತಾನೆ. ಆ ಚಂಡಾಲಕನ್ಯೆ ಅದನ್ನು ಶೂಕ್ರಕನ ಆಸ್ಥಾನಕ್ಕೇ ತರುತ್ತಾಳೆ. ಚಂಡಾಲಕನ್ಯೆ ವಾಸ್ತವವಾಗಿ ಪುಂಡರೀಕನ ತಾಯಿ ಲಕ್ಷ್ಮೀ. ಪುಂಡರೀಕನೆ ಆ ಜನ್ಮದಲ್ಲಿ ವೈಶಂಪಾಯನನಾಗಿ ಈ ಜನ್ಮದಲ್ಲಿ ಸ್ವಯಂ ಚಂದ್ರಾಪೀಡ, ಲಕ್ಷ್ಮೀ ಅದೃಶ್ಯಳಾಗುತ್ತಾಳೆ. ಶೂದ್ರಕ ಮತ್ತು ಶುಕ ಇವರುಗಳ ಶರೀರಪಾತವಾಗುತ್ತದೆ ಮತ್ತು ಪುಂಡರೀಕನೂ ಸಹ ಆಕಾಶದಿಂದ ಅವತರಿಸುತ್ತಾನೆ. ಪುಂಡರೀಕ ಮತ್ತು ಮಹಾಶ್ವೇತೆ ಹಾಗೂ ಕಾದಂಬರಿ ಮತ್ತು ಚಂದ್ರಾಪೀಡ ಇವರ ಸಮಾಗಮವಾಗುತ್ತದೆ. ಪ್ರಣಯೋತ್ಕಂಠಿತರಾದ ಈ ದಂಪತಿಗಳು ಸುಖವಾಗಿ ವಾಸಿಸುತ್ತಾರೆ.

ಇದು ಬಾಣನ ಸರ್ವೋತ್ಕøಷ್ಟ ರಚನೆ. ಭಾಷೆ ಭಾವ, ಶಬ್ದ ಮತ್ತು ಅರ್ಥಗಳ ಉಚಿತ ಸಮ್ಮಿಳನ ಇದರಲ್ಲಿದೆ. ವರ್ಣನೆಗಳು ಶ್ರೇಷ್ಠವಾಗಿವೆ. ಅಲಂಕಾರ ಮತ್ತು ರಸಗಳ ಮಧುರ ಮಿಲನದಲ್ಲಿ ಭಾಷೆ ಮತ್ತು ಭಾವಗಳ ಸಂಪರ್ಕದಲ್ಲಿ, ಕಲ್ಪನೆ ಮತ್ತು ವರ್ಣನೆಯ ಅನುರೂಪ ಸಂಘಟನೆಯಲ್ಲಿ ಈ ಕಾವ್ಯ ಸಂಸ್ಕøತ ಸಾಹಿತ್ಯದಲ್ಲಿ ಅನುಪಮವಾದುದು. ಪಾತ್ರಗಳ ಚಾರಿತ್ರ್ಯವನ್ನು ಚಿತ್ರಿಸುವಲ್ಲಿ ಬಾಣನಿಗೆ ಅದ್ಭುತ ಕಲೆಯಿದೆ. ಪಾತ್ರಗಳು ಸಜೀವವಾಗಿ ಚಿತ್ರಿತವಾಗಿವೆ. ಇನ್ನು ಬಾಣನ ಶೈಲಿಯಾದರೋ ಆದರ್ಶಪ್ರಾಯವಾದುದು. ಗದ್ಯರಚನೆಯಲ್ಲಿ ಈತ ಅತ್ಯಂತ ಪ್ರವೀಣ.

ಕಾದಂಬರೀ ಕಥಾಸಾರ

[ಬದಲಾಯಿಸಿ]

ಬಾಣಭಟ್ಟನ ಕಾದಂಬರಿಯನ್ನು ಆಧರಿಸಿ ಕಾದಂಬರೀ ಕಥಾಸಾರವೆಂಬ ಕೃತಿಯನ್ನು ಪದ್ಯಾತ್ಮಕವಾಗಿ ಅಭಿನಂದನ ಎಂಬಾತ ರಚಿಸಿದ್ದಾನೆ. ಈತ ಕಾಶ್ಮೀರದಲ್ಲಿ ಕ್ರಿ.ಶ. ಒಂಬತ್ತನೆಯ ಶತಮಾನದಲ್ಲಿ ವಿಖ್ಯಾತನಾಗಿದ್ದ ಭಟ್ಟ ಜಯಂತನ ಮಗ. ಆದರೆ ಇದರ ಕರ್ತೃ ಕ್ರಿ.ಶ. 8ನೆಯ ಶತಮಾನದ ಉತ್ತರಾರ್ಧದಲ್ಲಿದ್ದು ರಾಮಚರಿತವೆಂಬ ಕಾವ್ಯವನ್ನು ರಚಿಸಿದ ಅಭಿನಂದನನಲ್ಲ.

ಇದು ಬಾಣನ ಕಾದಂಬರಿಯ ಕಥೆಯನ್ನು ಸಂಕ್ಷೇಪವಾಗಿ ಎಂಟು ಸರ್ಗಗಳಲ್ಲಿ ವರ್ಣಿಸುತ್ತದೆ. ಬಾಣನ ದೀರ್ಘ ವರ್ಣನೆಗಳನ್ನು ಬಿಟ್ಟು ಮುಖ್ಯ ಕಥಾ ಭಾಗವನ್ನೂ ಇಲ್ಲಿ ಅಭಿನಂದನ ವರ್ಣಿಸಿದ್ದಾನೆ. ಬಾಣಕೃತವಾದ ಸಂಸ್ಕøತ ಕಾದಂಬರಿಗೆ ಚಂಪೂರೂಪವಾದ ಕರ್ಣಾಟಕ ಭಾಷಾಂತರವನ್ನೂ ನಾಗವರ್ಮ-1 (ಸು.900) ಮಾಡಿದ್ದಾನೆ. ಇದರಲ್ಲಿ ಸಂಸ್ಕøತ ಗ್ರಂಥ ಅನುಸರಿಸಲ್ಪಟ್ಟದರೂ ವರ್ಣನಾ ಭಾಗದಲ್ಲಿ ಅಲ್ಲಲ್ಲಿ ಕೆಲವು ಬಿಟ್ಟು ಹೋಗಿವೆ. (ನೋಡಿ- ನಾಗವರ್ಮ-1)

ಹರ್ಷಚರಿತ

[ಬದಲಾಯಿಸಿ]

ಇದು ಚಾರಿತ್ರಿಕ ಕಾವ್ಯ. ಎಂಟು ಉಚ್ಛ್ವಾಸಗಳಿಂದ ಕೂಡಿದ ಇದರಲ್ಲಿ ಬಾಣ ತನ್ನ ಆಶ್ರಯದಾತನಾದ ಹರ್ಷವರ್ಧನನ ಜೀವನ ಚರಿತ್ರೆ ತಿಳಿಸಿದ್ದಾನೆ. ಪ್ರಭಾಕರನವರ್ಧನ. ಯಶೋಮತಿ ಹರ್ಷನ ತಂದೆತಾಯಿಗಳು. ಈತನಿಗೆ ರಾಜ್ಯವರ್ಧನನೆಂಬ ಅಣ್ಣನೂ, ರಾಜ್ಯಶ್ರೀ ಎಂಬ ತಂಗಿಯೂ ಇದ್ದರು. ರಾಜ್ಯಶ್ರೀಯನ್ನು ಅವಂತಿವರ್ಮನ ಹಿರಿಯ ಮಗನಾದ ಗೃಹವರ್ಮನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಒಮ್ಮೆ ರಾಜ್ಯವರ್ಧನ ಹೂಣರನ್ನು ನಿಗ್ರಹಿಸಲು ಸೈನ್ಯದೊಡನೆ ಹೊರಟಾಗ ಅಣ್ಣನೊಡನೆ ಹರ್ಷವರ್ಧನನು ಕೂಡ ಸೈನ್ಯಸಮೇತನಾಗಿ ಹಿಮಾಲಯದವರೆಗೂ ಹೋದ. ರಾಜ್ಯವರ್ಧನ ಎಲ್ಲರನ್ನೂ ಅಲ್ಲಿಯೇ ಬಿಟ್ಟು ಹೂಣರನ್ನು ನಿಗ್ರಹಿಸಲು ಮಿತ್ರಪರಿವಾರದೊಡನೆ ಹೊರಟ. ಹರ್ಷ ಅಣ್ಣನ ಬರುವಿಕೆಯನ್ನು ಇದುರು ನೋಡುತ್ತಿರುವಾಗ ಇತ್ತ ಅರಮನೆಯಲ್ಲಿ ತಂದೆ ವಿಷಮಸ್ಥಿತಿಯಲ್ಲಿರುವ ಸಮಾಚಾರ ತಿಳಿಯುತ್ತದೆ. ಆದರೆ ಈತ ಅರಮನೆಗೆ ಹಿಂತಿರುಗಿ ಹೋಗುವ ವೇಳೆಗೆ ತಾಯಿ ಚಿತಾರೋಹಣಕ್ಕೆ ಸಿದ್ಧಳಾಗಿರುತ್ತಾಳೆ. ತಂದೆಯ ಸಾವು, ತಾಯಿಯ ಚಿತಾರೋಹಣ ಈತನನ್ನು ದಿಗ್ಭ್ರಾಂತನನ್ನಾಗಿಸುತ್ತದೆ. ಆ ವೇಳೆಗೆ ಅಣ್ಣ ರಾಜ್ಯವರ್ಧನನೂ ಅಲ್ಲಿಗೆ ಬರುತ್ತಾನೆ. ಆಗ ಮಾಳವರಾಜ ಗೃಹವರ್ಮನನ್ನು ಕೊಂದು ರಾಜ್ಯಶ್ರೀಯನ್ನು ಕಾರಾಗೃಹದಲ್ಲಿ ಬಂಧಿಸಿರುವ ವಾರ್ತೆ ಬರುತ್ತದೆ. ಇದನ್ನು ಕೇಳಿ ರಾಜ್ಯವರ್ಧನ ಮಾಳವರಾಜನ ಮೇಲೆ ದಂಡೆತ್ತಿ ಹೋಗುತ್ತಾನೆ. ಆದರೆ ಮಾಳವರಾಜ ರಾಜ್ಯವರ್ಧನನ್ನು ಔತಣದ ನೆಪದಿಂದ ತನ್ನ ಅರಮನೆಗೆ ಕರೆಯಿಸಿಕೊಂಡು ಉಪಾಯದಿಂದ ಕೊಲ್ಲಿಸುತ್ತಾನೆ. ಇದನ್ನು ತಿಳಿದ ಹರ್ಷ ಅಣ್ಣನ ವಧೆಗೆ ಕಾರಣನಾದ ಮಾಳವರಾಜನನ್ನು ಕೊಲ್ಲಲಿಕ್ಕಾಗಿ ಸೈನ್ಯಸಮೇತನಾಗಿ ತಾನೇ ಹೊರಡುತ್ತಾನೆ. ಅಷ್ಟರೊಳಗೆ ಹರ್ಷನ ಆಪ್ತನಾದ ಭಂಡಿ ಎಂಬಾತ ಮಾಳವರಾಜನನ್ನು ಕಂಡು ಹರ್ಷನ ಬಳಿಗೆ ಬಂದು ರಾಜ್ಯಶ್ರೀ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಸಮಾಚಾರವನ್ನು ತಿಳಿಸುತ್ತಾನೆ. ಆಗ ಹರ್ಷ ತಾನೇ ತಂಗಿಯನ್ನು ಹುಡುಕುವುದಾಗಿ ಹೊರಟು ವಿಂಧ್ಯಾರಣ್ಯದಲ್ಲಿ ದಿವಾಕರಮಿತ್ರನೆಂಬ ಬೌದ್ಧ ಸಂನ್ಯಾಸಿಯ ಆಶ್ರಮವನ್ನು ಹೊಕ್ಕು ಅವನಲ್ಲಿ ತನ್ನ ವಿಷಯವನ್ನು ತಿಳಿಸುತ್ತಾನೆ. ಆ ವೇಳೆಗೆ ಸರಿಯಾಗಿ ಯುವಕನೋರ್ವ ಓಡಿಬಂದು ಓರ್ವಯುವತಿ ಅಗ್ನಿಪ್ರವೇಶ ಮಾಡುತ್ತಿರುವುದಾಗಿ ಹೇಳುತ್ತಾನೆ. ಹರ್ಷ ಅದನ್ನು ಕೇಳಿ ಅವಳು ತನ್ನ ತಂಗಿಯೇ ಇರಬಹುದೇಂದು ಭಾವಿಸಿ ಅಲ್ಲಿಗೆ ಹೋಗಿ ಅವಳನ್ನು ಸಂತೈಸಿ ಕರೆತಂದು ದಿವಾಕರಮಿತ್ರನ ಆಶ್ರಮದಲ್ಲಿ ಅವಳನ್ನು ಬಿಟ್ಟು ಶತ್ರುರಾಜ್ಯದ ಮೇಲೆ ದಂಡೆತ್ತಿ ಹೋಗುತ್ತಾನೆ. ಶತ್ರುಗಳಿಂದ ಕಪ್ಪಕಾಣಿಕೆಗಳನ್ನು ಪಡೆದು, ರಾಜ್ಯವನ್ನು ವ್ಯವಸ್ಥೆಗೊಳಿಸಿ ತನ್ನ ಮಗನಿಗೆ ರಾಜಪಟ್ಟವನ್ನು ಕಟ್ಟಿ ಅನಂತರ ದಿವಾಕರ ಮಿತ್ರನ ಆಶ್ರಮಕ್ಕೆ ಹಿಂದಿರುಗಿ ತಂಗಿಯ ಜೊತೆಗೂಡಿ ಈಶ್ವರ ಧ್ಯಾನದಲ್ಲಿ ನಿರತನಾಗುತ್ತಾನೆ.

ಇದರಲ್ಲಿ ಮೊದಲಿಂದ ಕೊನೆಯವರೆಗೂ ಕರುಣರಸವೇ ತುಂಬಿದೆ. ದುಃಖಗಳು ಮೇಲಿಂದ ಮೇಲೆ ಒದಗುತ್ತವೆ. ಎಂಬುದಕ್ಕೆ ಹರ್ಷನ ಜೀವನ ಉತ್ತಮ ನಿದರ್ಶನವಾಗಿದೆ. ಎಷ್ಟೇ ಕಷ್ಟನಷ್ಟಗಳು ಸಂಭವಿಸಿದರೂ ಹರ್ಷ ತನ್ನ ಮನಃಸ್ಥೈರ್ಯ, ಸಮಾಧಾನಗಳನ್ನು ಕಳೆದುಕೊಳ್ಳಲಿಲ್ಲವೆಂಬ ದಿವ್ಯವಾದ ಆದರ್ಶವನ್ನು ಹರ್ಷಚರಿತ ಪರಿಣಾಮಕಾರಿಯಾಗುವಂತೆ ಬೋಧಿಸುತ್ತದೆ.

ಇತರ ಕೃತಿಗಳು

[ಬದಲಾಯಿಸಿ]

ಪಾರ್ವತಿಪರಿಣಯ ಮತ್ತು ಮುಕುಟ ತಾಡಿ ಎಂಬ ನಾಟಕಗಳನ್ನೂ ಬರೆದಿದ್ದಾನೆ.

ಗ್ರಂಥಸೂಚಿ

[ಬದಲಾಯಿಸಿ]
  • ಸಖಾರಾಮ ವಾಸುದೇವ ದೀಕ್ಷಿತ್(೧೯೬೩).ಬಾಣಭಟ್ಟ:ಅವನ ಜೀವನ ಮತ್ತು ಸಾಹಿತ್ಯ
  • ನೀಟಾ ಶರ್ಮ(೧೯೬೮). ಬಾಣಭಟ್ಟ:ಒಂದು ಸಾಹಿತ್ಯಿಕ ಅಧ್ಯಯನ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Works by Bāṇa at Project Gutenberg
  • Works by or about ಬಾಣಭಟ್ಟ at Internet Archive
  • Banabhatta (1897). The Harsa-carita of Bana (online text). E. B. Cowell, F. W. Thomas (trans.). London : Royal Asiatic Society.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಬಾಣಭಟ್ಟ&oldid=1060667" ಇಂದ ಪಡೆಯಲ್ಪಟ್ಟಿದೆ