ಜಾಬಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಬಾಲಿ - ಜಾಬಾಲಿ, ಜಾವಾಲಿ ಮತ್ತು ಜಾಜಾಲಿ-ಈ ಮೂರು ಹೆಸರುಗಳು ಒಂದರೊಡನೊಂದು ಬೆರೆತು ರಾಮಾಯಣ ಹಾಗೂ ಮಹಾಭಾರತಗಳಲ್ಲಿ ಕಾಣಸಿಗುತ್ತವೆ.

ರಾಮಾಯಣದಲ್ಲಿ[ಬದಲಾಯಿಸಿ]

ರಾಮಾಯಣದ ಪ್ರಕಾರ ಜಾಬಾಲಿ ಅಥವಾ ಜಾವಾಲಿ ಒಬ್ಬ ಮಹರ್ಷಿ; ದಶರಥನ ಆಸ್ಥಾನದಲ್ಲಿದ್ದ ಅಷ್ಟಪ್ರಧಾನ ಋತ್ವಿಜರಲ್ಲಿ ಒಬ್ಬ. ಇವನ ವಿಚಾರಧಾರೆ ನಾಸ್ತಕವಾದವನ್ನು ಎತ್ತಿಹಿಡಿಯುವಂತೆ ಕಾಣುತ್ತದಾದರೂ ಅಲ್ಲಿನ ತರ್ಕಬದ್ಧ ವಾಕ್ಸರಣಿಯನ್ನು ಗಮನಿಸಿದರೆ ಅದು ನ್ಯಾಯದರ್ಶನದಂತೆ ಕಾಣುತ್ತದೆ. ಶ್ರೀರಾಮ ಪಿತೃವಾಕ್ಯಪರಿಪಾಲನೆಗಾಗಿ ಸೀತಾಲಕ್ಷ್ಮಣರೊಡನೆ ಚಿತ್ರಕೂಟದಲ್ಲಿ ವಾಸ ಮಾಡುತ್ತಿರುವಾಗ ಅವನ ಮನವೊಲಿಸಿ ಅಯೋಧ್ಯೆಗೆ ಮರಳಿಸುವ ಪ್ರಯತ್ನವನ್ನು ಈ ಋಷಿ ಕೈಗೊಳ್ಳುತ್ತಾನೆ. ಭರತನೊಡನೆ ಬಂದು ಶ್ರೀರಾಮನನ್ನು ಕಂಡು, ಅಯೋಧ್ಯೆಗೆ ಹಿಂದಿರುಗಲೊಪ್ಪದೆ ಕಾಡಿಗೆ ಹೊರಟಿರುವ ರಾಮನಿಗೆ ಉಪದೇಶ ಮಾಡತೊಡಗುತ್ತಾನೆ. ಹೇಗಾದರೂ ಮಾಡಿ ರಾಮನನ್ನು ಹಿಂದಕ್ಕೆ ಕರೆದುಕೊಂಡೇ ಹೋಗಬೇಕೆಂಬ ಛಲದಿಂದ `ಸತ್ತವನೂ ಕಾಮುಕನೂ ವೃದ್ಧನೂ ಎನಿಸಿದ ದಶರಥನ ಮಾತಿಗೆ ಬೆಲೆ ಕೊಡುವುದು ತರವಲ್ಲ; ಪಾಪ ಎಂಬುದುಂಟೆ? ಪುಣ್ಯ ಎಂದರೇನು? ಪರಲೋಕವೆಂದರೇನು? ಪಿತೃವಾಕ್ಯಪರಿಪಾಲನೆಯೆಂಬ ಗೊಡ್ಡು ತತ್ತ್ವದಿಂದ ವೃಥಾ ಬಳಲುವುದಾದರೂ ಏಕೆ?` - ಇತ್ಯಾದಿಯಾಗಿ ವಾದಿಸುತ್ತಾನೆ. ಜಾಬಾಲಿಯ ವಾದವನ್ನು ರಾಮ ಧಿಕ್ಕರಿಸಿದಾಗ ವಸಿಷ್ಠಮುನಿ ಮಧ್ಯೆ ಪ್ರವೇಶಿಸಿ-ಋಷಿಯ ಉದ್ದೇಶ ಆಸ್ತಿಕ ಧರ್ಮವನ್ನು ವಿರೋಧಿಸುವುದಲ್ಲ; ನೀನು ಅಯೋಧ್ಯೆಗೆ ಹಿಂದಿರುಗಬೇಕೆಂಬ ಹಂಬಲದಿಂದ ಆತ ಹೀಗೆಲ್ಲ ನುಡಿದ; ಆದ್ದರಿಂದ ಆತನನ್ನು ಧಿಕ್ಕರಿಸುವುದು ತರವಲ್ಲ; ನಿನ್ನ ಅಭಿಪ್ರಾಯವೇ ನ್ಯಾಯವೂ ಧರ್ಮಸಮ್ಮತವೂ ಶ್ಲಾಘ್ಯವೂ ಆದುದು ಎಂದು ಹೇಳುತ್ತಾನೆ.

ಮಹಾಭಾರತದಲ್ಲಿ[ಬದಲಾಯಿಸಿ]

ಮಹಾಭಾರತದ ಪ್ರಕಾರ ಜಾಬಾಲಿ ಅಥವಾ ಜಾಜಾಲಿ ವಿಶ್ವಾಮಿತ್ರನ ಮಕ್ಕಳಲ್ಲಿ ಒಬ್ಬ. ಅತ್ಯಂತ ನಿಷ್ಠೆಯಿಂದ ಉಗ್ರ ತಪಸ್ಸನ್ನು ಕೈಗೊಂಡು ಅತಿಮಾನುಷ ಚಾಲನಶಕ್ತಿಯ ಸಿದ್ಧಿಯನ್ನು ಪಡೆಯುತ್ತಾನೆ. ಮಾನವ ಕೋಟಿಯಲ್ಲೇ ತನ್ನಂಥ ಶ್ರೇಷ್ಠ ಜ್ಞಾನಿ ಮತ್ತೊಬ್ಬನಿಲ್ಲವೆಂಬ ಅಹಂಕಾರದಿಂದ ಮೆರೆಯುತ್ತಿರುವಾಗ ಅಶರೀರವಾಣಿಯೊಂದು ಕಾಶೀಕ್ಷೇತ್ರವಾಸಿಯಾದ ತುಲಾಧಾರನೆಂಬ ವರ್ತಕನಿಗಿಂತ ಆತ ಯಾವ ರೀತಿಯಲ್ಲೂ ಶ್ರೇಷ್ಠನಲ್ಲ ಎಂದು ಎಚ್ಚರಿಸುತ್ತದೆ. ಜಾಗೃತನಾದ ಜಾಬಾಲಿ ಕಾಶೀಕ್ಷೇತ್ರಕ್ಕೆ ಹೋಗಿ ತುಲಾಧಾರನಿಂದ ಜ್ಞಾನೋಪದೇಶವನ್ನು ಪಡೆದು ಅಹಂಕಾರದಿಂದ ವಿಮುಕ್ತನಾಗುತ್ತಾನೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಾಬಾಲಿ&oldid=1060676" ಇಂದ ಪಡೆಯಲ್ಪಟ್ಟಿದೆ