ಭವಭೂತಿ
ಭವಭೂತಿ ಸುಮಾರು 7ನೆಯ ಶತಮಾನದ ಅಂತ್ಯ, 8ನೆಯ ಶತಮಾನದ ಆರಂಭದಲ್ಲಿದ್ದ ಪ್ರಸಿದ್ಧ ಸಂಸ್ಕೃತ ನಾಟಕಕಾರ. ಮಹಾವೀರಚರಿತೆ, ಮಾಲತೀ ಮಾಧವ, ಉತ್ತರರಾಮ ಚರಿತೆ ಎಂಬ ನಾಟಕಗಳನ್ನು ಬರೆದಿದ್ದಾನೆ.
ಬದುಕು
[ಬದಲಾಯಿಸಿ]ಮಹಾವೀರಚರಿತೆಯ ಪ್ರಸ್ತಾವನೆಯಲ್ಲಿರುವ ಪದ್ಮಪುರ ಇವನ ಊರು (ಇದು ವಿದರ್ಭ ರಾಜ್ಯದಲ್ಲಿ ನಾಗಪುರದ ಸಮೀಪದ ಒಂದು ಗ್ರಾಮವೆಂದು ವಿದ್ವಾಂಸರು ಊಹಿಸಿದ್ದಾರೆ). ಜತುಕರ್ಣಿ ಮತ್ತು ನೀಲಕಂಠ ಇವನ ತಾಯಿ ತಂದೆಯರು. ಜ್ಞಾನನಿಧಿ ಇವನ ಗುರು. ಭವಭೂತಿಗೆ ಶ್ರೀಕಂಠ ಎಂಬ ಅರಸರೂ ಇದ್ದುದಾಗಿ ತಿಳಿದುಬರುತ್ತದೆ. ಕವಿ ತಾನು ಪದವಾಕ್ಯ ಪ್ರಮಾಣಜ್ಞನೆಂದು ಹೇಳಿಕೊಂಡಿದ್ದಾನೆ. ವ್ಯಾಕರಣ, ನ್ಯಾಯ, ವೇದಾಂತ ಪ್ರಮಾಣಜ್ಞನೆಂದು ಹೇಳಿಕೊಡಿದ್ದಾನೆ. ವ್ಯಾಕರಣ, ನ್ಯಾಯ, ವೇದಾಂತ ಮೊದಲಾದ ಷಟಶಾಸ್ತ್ರಗಳಲ್ಲಿ ನಿಷ್ಣಾತನಾಗಿದ್ದ ಈತ ಸರಸ್ವತಿ ವಂಶಗತಳಾದ ರಮಣೀಯಂತೆ ತನ್ನನ್ನು ಹಿಂಬಾಲಿಸುವಳೆಂದು ತನ್ನ ಪಾಂಡಿತ್ಯ ಪ್ರಕಾಂಡತೆಯನ್ನು ಎತ್ತಿ ಹೇಳಿಕೊಂಡಿದ್ದಾನೆ. ಮಹಾಕವಿ ವಾಲ್ಮೀಕಿಯ ಬಗ್ಗೆ ಈತನಿಗೆ ಅಪಾರ ಗೌರವವಿದ್ದು ಆತನನ್ನು ಮನದುಂಬಿ ಹೊಗಳಿದ್ದಾನೆ. ಭೋಜರಾಜನ ಆಸ್ಥಾನದಲ್ಲಿದ್ದ ಕಾಳಿದಾಸ ಮೊದಲಾದ ಕವಿರತ್ನಗಳಲ್ಲಿ ಭವಭೂತಿಯೂ ಒಬ್ಬನೆಂದು ದಂತಕಥೆಯಿದೆ. ಸುಪ್ರಸಿದ್ಧ ಕುಮಾರಿಲಭಟ್ಟನ ಶಿಷ್ಯನಾದ ಭಟ್ಟ ಉಮ್ಮೇಕ ಇವನೇ ಎಂದು ಪ್ರತೀತಿ. ಆದರೆ ಇದಕ್ಕೆ ಸಾಕಷ್ಷು ಪ್ರಮಾಣಗಳು ದೊರೆತಿಲ್ಲ. ಈತನ ಮೂರು ನಾಟಕಗಳು ಕಾಲಪ್ರಿಯನಾಥನ ಯಾತ್ರೆಯಲ್ಲಿ ಅಭಿನಯಿಸಲ್ಪಟ್ಟಂತೆ ಹೇಳಿದೆ. ವಾಕ್ಪತಿರಾಜ ಭವಭೂತಿಯನ್ನು ಹೊಗಳಿದ್ದಾನೆ.
ನಾಟಕಗಳು
[ಬದಲಾಯಿಸಿ]ಮಹಾವೀರ ಚರಿತೆ
[ಬದಲಾಯಿಸಿ]ಮಹಾವೀರ ಚರಿತೆ ಏಳು ಅಂಕಗಳುಳ್ಳ ನಾಟಕ. ರಾಮಾಯಣದ ಕಥೆಯೇ ಇದಕ್ಕೆ ಆಕರ. ಕಥಾಸಾರಾಂಶ ಹೀಗಿದೆ: ವಿಶ್ವಾಮಿತ್ರ ರಾಮಲಕ್ಷ್ಮಣರನ್ನು ಆಶ್ರಮಕ್ಕೆ ಕರೆತರುತ್ತಾನೆ. ಯಜ್ಞ ನೋಡಲು ಸೀತೆ ಊರ್ಮಿಳೆ ಮಾಂಡವೀ ಶ್ರುತಕೀರ್ತಿ ಬರುತ್ತಾರೆ. ರಾವಣನ ಪುರೋಹಿತ ಸರ್ವಮಾಯ ರಾವಣನಿಗೆ ಸೀತೆಯನ್ನು ಕೇಳಲು ಬರುತ್ತಾನೆ. ತಾಟಕಾಸಂಹಾರ, ಜೃಂಭಕಾಸ್ತ್ರಲಾಭ ಶಿವಧನುರ್ಭಂಗ ನಡಿದುಹೋಗುತ್ತದೆ. ಸೀತೆ ಊರ್ಮಿಳೆ ಮೊದಲಾದವರ ಲಗ್ನವೂ ಮುಗಿದುಹೋಗುತ್ತದೆ. ಸರ್ವಮಾಯ ಅಪಮಾನಿತನಾಗಿ ರಾವಣನ ಮಂತ್ರಿ ಮಾಲ್ಯವಂತನಿಗೆ ತಿಳಿಸುತ್ತಾನೆ. ಮುಂದೆ ರಾಮ-ಪರಶುರಾಮರಿಗೆ ಯುದ್ಧ ಸಂಭವಿಸಿ ಪರಶುರಾಮನ ಪರಾಜಯವಾಗುತ್ತದೆ. ಶೂರ್ಪಣಖಿ ಮಂಥರೆಯಲ್ಲಿ ಪ್ರವೇಶಿಸಿ, ಕೈಕೇಯಿಗೆ ದುರ್ಬುದ್ಧಿ ಹುಟ್ಟಿಸಿ ರಾಮನಿಗೆ ವನವಾಸವಾಗುತ್ತದೆ. ಸೀತಾಪಹರಣ, ಜಟಾಯುಮರಣ, ಶೂರ್ಪಣಖಾ ಮಾನಭಂಗ, ವಿಭೀಷಣ ಸುಗ್ರೀವ ಹನುಮಂತರ ಸಖ್ಯ, ಲಂಕಾದಹನ, ರಾಮ ರಾವಣರ ಯುದ್ಧ, ಭರತಸಮಾಗಮ, ರಾಮಪಟ್ಟಾಭಿಷೇಕದೊಂದಿಗೆ ನಾಟಕ ಮುಕ್ತಾಯಗೊಂಡಿದೆ.
ಭವಭೂತಿ ಈ ನಾಟಕವನ್ನು 9ನೆಯ ಅಂಕದ 46ನೆಯ ಪದ್ಯದ ಮಟ್ಟಕ್ಕೆ ಬರೆದು ನಿಲ್ಲಿಸಿದನೆಂದೂ ಮುಂದಿನ ಭಾಗವನ್ನು ಸುಬ್ರಮಣ್ಯ ಕವಿಯೋ ವಿನಾಯಕಭಟ್ಟನೋ ಬರೆದು ಮುಗಿಸಿರಬೇಕೆಂದೂ ಕೆಲವು ವಿದ್ವಾಂಸರ ಅಭಿಪ್ರಾಯ. ಕೈಕೇಯಿ ಸೀತೆಯರು ಪಾತ್ರಗಳು ಉದಾತ್ತತೆಯಿಂದ ಕೂಡಿವೆ. ರಾಮನನ್ನು ವನಕ್ಕಟ್ಟಿದವರು ರಾವಣ, ಮಾಲ್ಯವಂತ, ಕೈಕೆ. ಮಂಥರೆ ಅಲ್ಲ. ಇಲ್ಲಿ ಶೂರ್ಪಣಖಿಯೇ ಮಂಥರೆಯ ವೇಷಧಾರಿಯೆಂಬುದು ಕವಿಯ ಅಭಿಪ್ರಾಯ. ರಂಗಸ್ಥಳದ ಮೇಲೆ ಯದ್ಧವನ್ನು ತರಕೂಡದೆಂಬ ನಿಯಮಕ್ಕೆ ಬದ್ಧನಾದ ಕವಿ ಮಹಾವೀರನಾದ ರಾಮನ ಶೌರ್ಯವನ್ನು ರಂಗಮೇಲೆ ತೋರಿಸಿಲ್ಲ. ಕೇವಲ ವರ್ಣನೆಗಳಲ್ಲಿ ಋಷಿಗಳೊಡನೆ ನಡೆದ ಸಂಭಾಷಣೆಗಳಲ್ಲಿ ರಾಮನ ಶೌರ್ಯವನ್ನು ಪ್ರಕಟಿಸಿದ್ದಾನೆ. ರಾಮಚಂದ್ರ ಸತ್ಯಶೀಲ, ಸೌಜನ್ಯಶೀಲ ರಾಮನ ಜೀವನದ ಘಟನೆಗಳನ್ನು ಇತಿಹಾಸಕಾರರಂತೆ ಪೂರ್ವಾಪರ ಸಂಬಂಧದೊಡನೆ ಜೋಡಿಸಿ ಜಾಣ್ಮೆಯಿಂದ ಹೆಣೆದು ನಾಟಕೀಯ ಸ್ವಾರಸ್ಯವನ್ನು ಸಾಧಿಸಿ ಘಟನೆಗಳಲ್ಲಿ ಕವಿ ಹೊಸ ಬೆಳಕನ್ನು ಚೆಲ್ಲಿದ್ದಾನೆ. ಆದರೆ ಈತ ತನ್ನ ಶೈಲಿಯ ಪ್ರೌಢಿಮೆಯನ್ನು ಭಾಷಾಪ್ರಭುತ್ವವನ್ನು ತೋರಿಸಲುಜ್ಜುಗಿಸಿ ನಾಟಕೀಯ ರಮ್ಯತೆಯನ್ನು ಮಂಕಾಗಿಸಿದ್ದಾನೆ. ವೀರರಸ ಪ್ರತಿಪಾದನೆ ಮುಖ್ಯ ಗುರಿಯಾಗಿ ಶೃಂಗಾರ ಹಾಸ್ಯರಸಗಳಿಗೆ ಎಡೆಯಿಲ್ಲದುದು ನಾಟಕದ ದೊಡ್ಡ ಕೊರತೆ.
ಮಾಲತೀ ಮಾಧವ
[ಬದಲಾಯಿಸಿ]ಮಾಲತೀ ಮಾಧವ ಹತ್ತು ಅಂಕಗಳುಳ್ಳ ನಾಟಕ. ಕಥಾ ವಿಷಯ ಹೀಗಿದೆ: ಪದ್ಮಾವತೀ ನಗರದ ಮಂತ್ರಿ ಭೂರಿವಸುವಿನ ಮಗಳು ಮಾಲತೀ. ಕುಂಡಿನಪುರದ ಮಂತ್ರಿ ದೇವರಾತನ ಮಗ ಮಾಧವ. ಸಹಪಾಠಿಗಳಾದ ಭೂರಿವಸು ಮತ್ತು ದೇವರಾತ ತಮ್ಮ ಮಕ್ಕಳಿಗೆ ಸಂಬಂಧ ಬೆಳೆಸೋಣವೆಂದು ಸಂಕಲ್ಪ ಮಾಡಿದ್ದರು. ಇವರೊಡನೆ ಅಭ್ಯಾಸ ಮಾಡಿದ ಕಾಮಂದಿಕೆ ಮಾಲತೀ ಮಾಧವರ ವಿವಾಹದ ಯಶಸ್ಸಿಗಾಗಿ ಪರಿಶ್ರಮ ಪಡುವಳು. ರಾಜನ ಸರ್ಮಸಚಿವ ಕುರೂಪಿ ನಂದನನಿಗೆ ಮಾಲತಿಯನ್ನು ರಾಜ ಕೇಳಿದ್ದ. ಭೂರಿವಸು ಉಭಯ ಸಂಕಟದಲ್ಲಿ ಬಿದ್ದಿದ್ದ. ಕಾಮಂದಿಕೆ ಮಾಲತಿ ನಂದನನಲ್ಲಿ ಜುಗುಪ್ಸೆ ಹುಟ್ಟಿಸಿ ಊರ್ವಶೀ ಶಕುಂತಲೆಯರ ದೃಷ್ಟಾಂತ ಹೇಳಿ ಮಾಧವನನ್ನು ಲಗ್ನವಾಗಲು ಪ್ರೇರಿಸುತ್ತಿದ್ದಳು. ಕುಸಮಾಕರೋದ್ಯಾನದಲ್ಲಿ ಪರಸ್ಪರರಲ್ಲಿ ರಹಸ್ಯ ಸಂದರ್ಶನ ಮಾಡಿಸಿದಳು. ಅಲ್ಲಿ ಹುಲಿಯ ಬಾಯಿಗೆ ಬಲಿಯಾಗಲಿದ್ದ ಮಾಲತಿಯ ಗೆಳತಿ ಮದಯಂತಿಕೆಯನ್ನು ಮಾಧವನ ಗೆಳೆಯ ಮಕರಂದ ಉಳಿಸಿ ಮದಯಂತಿಕೆಯ ಪ್ರೇಮಪಾತ್ರನಾದ. ರಾಜನ ಇಚ್ಛೆ ತಿಳಿದು ನಿರಾಶನಾದ ಮಾಧವ ಶ್ಮಶಾನಕ್ಕೆ ಬಂದು ನರಮಾಂಸದಿಂದ ಭೂತ ಪಿಶಾಚಿಗಳನ್ನು ಆರಾಧಿಸಿ ಅಭೀಷ್ಟಸಿದ್ಧಿಗಾಗಿ ಕಾರ್ಯನಿರತನಾದ. ಕಾಪಾಲಿಕ ಅಘೋರಘಂಟ, ಅವನ ಶಿಷ್ಯೆ ಕಪಾಲಿಕಂಡಲಿಯಿಂದ ಅಪಹರಿಸಿ ಕೊಲ್ಲಲ್ಪಡುತ್ತಿದ್ದ ಮಾಲತಿಯನ್ನು ರಕ್ಷಿಸಿದ. ಮಾಲತಿಯನ್ನು ಲಗ್ನವಾಗಲು ಬಂದ ನಂದನನನ್ನು ಸ್ತ್ರೀವೇಷ ಧರಿಸಿ ಮಕರಂದ ಅಪಮಾನಮಾಡಿ ಮದಯಂತಿಕೆಯ ಹೃದಯವನ್ನು ಆಕರ್ಷಿಸಿದ. ಅನೇಕ ಸಂಕಟಗಳಲ್ಲಿ ಮಾಲತೀಮಾಧವ, ಮಕರಂದಮದಯಂತಿಕೆಯರನ್ನು ಪಾರುಮಾಡಿ, ಬುದ್ಧಿರಕ್ಷಿತೆಯ ಸಹಾಯದಿಂದ, ಸೌದಾಮಿನಿಯ ಜಾಣತನದಿಂದ, ಕಾಮಂದಿಕೆ ಮಾಲತೀಮಾಧವರ, ಮದಯಂತಿಕೆ-ಮಕರಂದರ ಪ್ರೇಮವಿವಾಹದಲ್ಲಿ ವಿಜಯ ಪಡೆದಳು.
ಹೀಗೆ ಮಾಲತಿ ಮಾಧವ ಪ್ರಕರಣದ ಕಥೆ ಕವಿಕಲ್ಪಿತವಾಗಿದೆ. ಕಥಾಸರಿತ್ ಸಾಗರ, ಬೃಹತ್‍ಕಥೆಗಳ ಕೆಲವು ಘಟನೆಗಳು ಕವಿಗೆ ಸಾಮಗ್ರಿಗಳಾಗಿರಬಹುದು. ಮಾಲತೀಮಾಧವ ಮಕರಂದಮದಯಂತಿಕೆಯರ ಪ್ರಣಯ ಪ್ರಸಂಗಗಳಲ್ಲಿ ಶೃಂಗಾರವನ್ನು, ಮಕರಂದ ನಂದನರ ಮದುವೆಯ ಸಂದರ್ಭಗಳಲ್ಲಿ ವಿನೋದವನ್ನು ಮಾಧವಮಕರಂದ ಸಾಹಸದ ವ್ಯಾಘ್ರವೃತ್ತಾಂತದಲ್ಲಿ ವೀರ ಕರುಣಾದ್ಭುತ ಬೀಭತ್ಸ ರೌದ್ರಗಳನ್ನು ಕಾಣಬಹುದು. ಆಕಸ್ಮಿಕ ಅಸಹಜ ಘಟನೆಗಳು ಸಂವಿಧಾನ ಕುಶಲತೆಗೆ ಅಡ್ಡಬಂದಂತಿವೆ. ಕಥೆ ತೊಡಕಿನದಾಗಿದೆ. ಎಲ್ಲಿ ನೋಡಿದಲ್ಲಿ ಕಾಮಂದಿಕೆಯೇ ಕಂಡುಬರುವಳು. ಸಾಮಾಜಿಕ ನಾಟಕದಲ್ಲಿ ಅದ್ಭುತಾಂಶಗಳನ್ನು ಕವಿ ಮನಸ್ಸಿಗೆ ಬಂದಂತೆ ಸೇರಿಸಿದ್ದಾನೆ. ಅನೇಕ ಸಂಗತಿಗಳು ವಾಸ್ತವಿಕತೆಗೆ ದೂರವಾಗಿವೆ. ನಾಟಕದ ನಾಯಕ ನರಮಾಂಸ ಮಾರುವ ಸಂದರ್ಭ ಔಚಿತ್ಯಮೀರಿದ್ದಾಗಿದೆ. ಅವಾಸ್ತವತೆಯ ಮಿಶ್ರಣದಿಂದ ಭಾಷೆಯ ಪ್ರೌಢಮೆಯಿಂದ, ಆಂತರಿಕ ರಸೌಚಿತ್ಯ ಇಲ್ಲವಾಗಿದೆ. ಈ ನಾಟಕ ಮೃಚ್ಛಕಟಿಕ ನಾಟಕದಂತೆ ಸಾಮಾಜಿಕ ಜೀವನವನ್ನೇ ಚಿತ್ರಿಸುವುದಾದರೂ ಮೃಚ್ಛಕಟಕದ ಸ್ವಾರಸ್ಯ ಇದರಲ್ಲಿಲ್ಲ. ಕಾಮಂದಿಕೆಯ ಪಾತ್ರನಿರೂಪಣೆ ಮಾತ್ರ ಕೌಶಲ್ಯಮಯವಾಗಿದೆ. ಕನ್ಯೆಯ ಅಪೇಕ್ಷಯ ವಿರುದ್ಧ ಲಗ್ನ ಮಾಡಬಾರದೆಂಬ ಸಾಮಾಜಿಕ ಸಮಸ್ಯೆಯನ್ನು ಸಮಾಜಸುಧಾರಕನಂತೆ ಕವಿ ಬಿಡಿಸಿದ್ದಾನೆ. ಕಾಲಪರಿಸ್ಥಿತಿಗೆ ಅನುಗುಣವಾಗಿ ಸಮಾಜ ಪರಿವರ್ತನೆ ಹೊಂದಬೇಕೆಂದು ಸಾರುತ್ತಾನೆ. ಭವಭೂತಿ ಸನಾತನಿಯಾದರೂ ಈ ವಿಚಾರದಲ್ಲಿ ಪ್ರಗತಿಶೀಲ ಕ್ರಾಂತಿಕಾರಿಯಂತೆ ಕಂಡುಬರುತ್ತಾನೆ.
ಉತ್ತರರಾಮಚರಿತೆ
[ಬದಲಾಯಿಸಿ]( ಹೆಚ್ಚಿನ ವಿವರಗಳಿಗೆ ಉತ್ತರರಾಮಚರಿತೆ ನೋಡಿ. )
ಉತ್ತರರಾಮಚರಿತೆ ಏಳು ಅಂಕಗಳ ನಾಟಕ. ರಾಮಾಯಣದ ಉತ್ತರ ಕಾಂಡದ ಕಥೆ ಈ ನಾಟಕಕ್ಕೆ ಮೂಲ. ಉತ್ತರಕಾಂಡದಲ್ಲಿ ಬರುವ ಸಂಗತಿಗಳೆಲ್ಲ ಪ್ರಕ್ಷೇಪ ಭಾಗಗಳೆಂದು ವಿದ್ವಾಂಸರು ಗುರುತಿಸಿರುವರಾದರೂ ಅಂದಿನ ಕಾಲಕ್ಕೆ ಜನಜನಿತವಾಗಿದ್ದ ಈ ಕಥೆಯನ್ನು ಭವಭೂತಿ ಅತ್ಯಪೂರ್ವವಾಗಿ ನಾಟಕಕ್ಕೆ ಅಳವಡಿಸಿಕೊಂಡಿದ್ದಾನೆ. ಹೀಗೆ ಅಳವಡಿಸಿಕೊಳ್ಳುವಾಗ ಅನೇಕ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾನೆ.
ಉದಾಹರಣೆಗೆ ಚಿತ್ರದರ್ಶನ ವೃತ್ತಾಂತ, ಸೀತೆಗೆ ಗಂಗಾತೀರದ ವನರಾಜಿಗಳಲ್ಲಿ ವಿಹರಿಸುವ ಬಯಕೆ, ಋಷ್ಯಶೃಂಗನ ಯಜ್ಞ, ಮೂಲದಲ್ಲಿ ಎಲ್ಲಿಯೋ ಪ್ರಸಂಗಾಂತರದಲ್ಲಿ ಬರುವ ಶಂಬೂಕವಧೆ ನಾಟಕದಲ್ಲಿ ರಾಮನನ್ನು ಪಂಚವಟಿಗೆ ತರುವ ನಿಮಿತ್ತವಾಗಿ ಸೀತಾಸಮಾಗಮಕ್ಕೆ ನಾಂದಿಯಾಗುವುದು ಇತ್ಯಾದಿ. ಈ ಮಾರ್ಪಾಟುಗಳು ಅರ್ಥಪೂರ್ಣವಾಗಿದ್ದು, ನಾಟಕ ಕಳೆ ಕಟ್ಟಲು ನೆರವಾಗಿದೆ. ರಾಮನ ಪತ್ನೀ ಪರಿತ್ಯಾಗಕ್ಕೆ ಉಪಪತ್ತಿಯನ್ನು ಹೇಳಿ ಸೀತಾ ರಾಮರ ಪುನರ್ಮಿಲನಕ್ಕೆ ಸನ್ನಿವೇಶವನ್ನು ರಚಿಸುವುದು. ಕಥೆ ಸುಖಾಂತವಾಗುವಂತೆ ವ್ಯವಸ್ಥೆಗೊಳಿಸುವುದು ನಾಟಕದ ಮುಖ್ಯ ಲಕ್ಷ್ಯವಾಗಿದೆ. ಮೂಲ ಉತ್ತರರಾಮಚರಿತೆಯಲ್ಲಿ ಕಂಡುಬರುವ ಒರಟು ನಡವಳಿಕೆಗಳು ಇಲ್ಲಿ ಮೃದುಗೊಂಡು ಮಾನವೀಯವಾಗಿ ಮಾರ್ಪಾಟುಗೊಂಡಿವೆ. ಮಾನವಸಹಜ ನಡವಳಿಕೆಗಳ ಮಿತಿಯಲ್ಲಿ ಇಲ್ಲಿಯ ಪಾತ್ರಗಳು ಸಜೀವಗೊಂಡು ಸಹೃದಯರ ಮನಸ್ಸನ್ನು ತುಂಬಿಕೊಳ್ಳುತ್ತವೆ. ರಾಮಸೀತೆಯರ ಪಾತ್ರಚಿತ್ರದಲ್ಲಿ ನಾಟಕಕಾರ ಅಪೂರ್ವವಾದ ಕಲಾಕೌಶಲ ಮೆರೆದಿದ್ದಾನೆ. ಇಲ್ಲಿಯ ರಾಮ ದೈವಾಂಶ ಸಂಭೂತನಾಗಿ ಕಾಣಬರದೆ ಸುಖದುಃಖಗಳಿಗೆ ಪ್ರತಿಸ್ಪಂದಿಸುವ ಅಂತಃಕರಣವುಳ್ಳ ಮನುಷ್ಯನಾಗಿ ಕಂಡುಬರುತ್ತಾನೆ. ಸೀತೆ ಪ್ರೇಮದ ಸಾಕಾರಮೂರ್ತಿಯಾಗಿದ್ದಾಳೆ. ಆಕೆ ಏನೂ ಅರಿಯದ ಮತ್ತು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ನರಳಿದ ಸಾಧ್ವಿ: ಪ್ರೀತಿಯೊಂದನ್ನೇ ನಂಬಿ ಬದುಕಿದವಳು. ಸೀತೆಯ ಅಂತಃಕರಣ ತಂಬ ಮೃದು; ರಾಮನ ತಪ್ಪುಗಳನ್ನು ಆಕೆ ಎಂದೂ ಎತ್ತಿ ಆಡಿದವಳಲ್ಲ. ಒಳಗೇ ತನ್ನನ್ನು ತಾನು ಹಿಂಡಿಕೊಂಡರೂ ಎಂದೂ ಇನ್ನೊಬ್ಬರಿಗೆ ಕೇಡುಬಯಸದವಳು; ತನ್ನ ಹೃದಯ ಶ್ರೀಮಂತಿಕೆಯಲ್ಲಿ ರಾಮನನ್ನೂ ಮೀರಿಸಿಬಿಡುತ್ತಾಳೆ. ಆಕೆ ಕರುಣೆಯ ಕಣ್ಣು, ಇಡೀ ನಾಟಕದಲ್ಲಿ ಒತ್ತು ಬಿದ್ದಿರುವುದು ಈ ಕರುಣೆಯ ಮೇಲೆ; ಮಾನವೀಯ ಅಂತಃಕರಣದ ಮೇಲೆ. "ಏಕೋ ರಸಃ ಕರುಣ ಏವ" ಎಂಬುದು ಭವಭೂತಿಯದೇ ಒಂದು ಮಾತು. ಈ ನಾಟಕ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಒಂದು ಆದರ್ಶ ಸಂಸಾರ ಜೀವನದ ಸುಂದರ ಪ್ರತಿಬಿಂಬ ಈ ನಾಟಕದಲ್ಲಿ ಮೂಡಿದೆ. ಭವಭೂತಿಯ ಪರಿಪಕ್ವ ಜೀವನಾನುಭವದ ಮುನ್ನೆಲೆಯಲ್ಲಿ ಮೂಡಿಬಂದಿರುವ ಈ ನಾಟಕ ಸಂಸ್ಕøತದ ಶ್ರೇಷ್ಠ ನಾಟಕಗಳಲ್ಲಿ ಒಂದೆಂಬ ಗೌರವಕ್ಕೆ ಪಾತ್ರವಾಗಿದೆ. ಇದನ್ನು ಸಿ. ಪಿ. ಕೃಷ್ಣಕುಮಾರ್ ಹಾಗೂ ಕೆ. ಕೃಷ್ಣಮೂರ್ತಿಯವರು ಪ್ರತ್ಯೇಕವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.