ಕನ್ನಡ ಚಿತ್ರರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕನ್ನಡ ಚಿತ್ರರಂಗವು ಕರ್ನಾಟಕದಲ್ಲಿ ರಚಿಸಲಾಗುವ ಚಲನಚಿತ್ರಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಕನ್ನಡ ಚಿತ್ರಗಳು ಮತ್ತು ಕೆಲವು ತುಳು ಹಾಗೂ ಕೊಂಕಣಿ ಭಾಷೆಗಳ ಚಿತ್ರಗಳು ಈ ಚಿತ್ರರಂಗಕ್ಕೆ ಸೇರುತ್ತವೆ.

ಮೈಲಿಗಲ್ಲುಗಳು[ಬದಲಾಯಿಸಿ]

೧೯೩೪ರಲ್ಲಿ ತೆರೆ ಕಂಡ "ಸತಿ ಸಲೋಚನ" ಮೊದಲ ಕನ್ನಡ ಚಿತ್ರ.ಕನ್ನಡ ಮೊದಲ ವರ್ಣಮಯ ಚಿತ್ರ ‘ಅಮರಶಿಲ್ಪಿ ಜಕ್ಕಣಾಚಾರಿ’. "ಮೂರು ದಾರಿಗಳು"- ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ.೧೯೫೪ರಲ್ಲಿ ಬಿಡುಗಡೆ ಹೊಂದಿದ "ಬೇಡರ ಕಣ್ಣಪ್ಪ" ಈ ಚಿತ್ರರಂಗದ ಪ್ರಮುಖ ನಟರಾದ ರಾಜಕುಮಾರ್ ಅವರ ಮೊದಲ ಚಿತ್ರ.

ಇತಿಹಾಸ[ಬದಲಾಯಿಸಿ]

ಮೂಕಿ ಚಿತ್ರಗಳ ಯುುಗ[ಬದಲಾಯಿಸಿ]

ಕನ್ನಡ ಚಿತ್ರರಂಗವು ಮೂಲತಃ ರಂಗಭೂಮಿ ಯನ್ನು ಅವಲಂಬಿಸಿ ಆರಂಭವಾಯಿತು. ಕರ್ನಾಟಕದಲ್ಲಿ ‘ವಸಂತಸೇನಾ' ಚಿತ್ರಕ್ಕೆ ಮೊದಲು ಮೂಕಿ ಚಿತ್ರಗಳು ತಯಾರಾಗಿದ್ದವು. ಆದರೆ ಅವು ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ಕಥಾ ಚಿತ್ರಗಳಲ್ಲ. ರಂಗಭೂಮಿಯಲ್ಲಿ ಅಭಿನಯಿಸುವ ನಾಟಕಗಳನ್ನು ಚಿತ್ರಿಸಿ ಸಿನಿಮಾ ಮಾಡಿ ತೋರಿಸುತ್ತಿದ್ದರು. ‘ವಸಂತ ಸೇನಾ' ಚಿತ್ರವು ಲೊಕೇಷನ್ ಮತ್ತು ಸ್ಟುಡಿಯೋಗಳಲ್ಲಿ ಚಿತ್ರಿಸಿ ಸಂಕಲನಗೊಂಡ ಚಿತ್ರ. ಬಳಿಕ ತಯಾರಾದ ಮೂಕಿ ಚಿತ್ರಗಳು ಇದರ ಪರಂಪರೆಗೆ ಸೇರಿದಂಥವು.


ಕನ್ನಡ ನೆಲದಲ್ಲಿ ಮೂಕಿ ಚಿತ್ರಗಳು ಯುಗವು ೧೯೨೧ರಿಂದ ಆರಂಭವಾಗಿರುವುದನ್ನು ಚಲನಚಿತ್ರ ಇತಿಹಾಸಕಾರ ಗಂಗಾಧರ ಮೊದಲಿಯಾರ್ ಗುರುತಿಸಿದ್ದಾರೆ. ೧೯೨೧ರಿಂದ ೧೯೩೩ರವರೆಗೆ ಸುಮಾರು ೧೭೫ ಚಿತ್ರಗಳು ತಯಾರಾಗಿರಬಹುದೆಂದು ತರ್ಕಿಸಿ ಲಭ್ಯವಿರುವ ೫೪ ಚಿತ್ರಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.


ಮೈಸೂರಿನ ಅಂದಿನ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರು ಅರಮನೆಯಲ್ಲಿ ಪ್ರದರ್ಶನವಾದ ಎ.ವಿ. ವರದಾಚಾರ್ಯರು ಅಭಿನಯಿಸಿದ್ದ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯ ನಾಟಕ ನಿರುಪಮಾ (೧೯೨೧)ವನ್ನು ಕೈಯಲ್ಲಿ ಸುತ್ತುವ ಕ್ಯಾಮೆರಾದಿಂದ (ಕ್ರಾಂಕಿಂಗ್ ಮಿಷಿನ್) ಚಿತ್ರೀಕರಿಸಿದ್ದರಂತೆ. ಹಾಗಾಗಿ ಎ.ವಿ. ವರದಾಚಾರ್ಯರು ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ ಮೂಕಿ ಚಿತ್ರದ ಮೊದಲ ನಾಯಕ. ಕಂಠೀರವ ನರಸಿಂಹರಾಜ ಒಡೆಯರ್ ಮೊದಲ ನಿರ್ಮಾಪಕ.


೧೯೨೫ರಲ್ಲಿ ಗುಬ್ಬಿ ಚನ್ನಬಸವೇಶ್ವರ ಕಂಪನಿಯು ತರೀಕೆರೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಮಹಾತ್ಮಾ ಕಬೀರ್ ಚಿತ್ರವನ್ನು ಚಿತ್ರೀಕರಿಸಿ ಸಿನಿಮಾ ಮಾಡಿತು. ನಾಯಕ ಕಬೀರನ ಪಾತ್ರವನ್ನು ಅಭಿನವ ಶಿರೋಮಣಿ ಸಿ.ಬಿ. ಮಲ್ಲಪ್ಪನವರು ವಹಿಸಿದ್ದರು.


ಮೂಕಿ ಚಿತ್ರಗಳ ತಯಾರಿಕೆಗೆ ಆಗ ಮುಂಬಯಿ ಕೇಂದ್ರವಾಗಿತ್ತು. ಅಲ್ಲಿನ ಶಾರದಾ ಫಿಲಂ ಕಂಪನಿಯ ಪಾಲುದಾರರಲ್ಲೊಬ್ಬರಾದ ಹರಿಭಾಯ್ ಆರ್. ದೇಸಾಯಿ ಅವರು ೧೯೨೮ರಲ್ಲಿ ಬೆಂಗಳೂರಿನ ದಂಡು ಪ್ರದೇಶದಲ್ಲಿ ಸೂರ್ಯ ಫಿಲಂ ಕಂಪನಿ ಸ್ಟುಡಿಯೋಸ್ ಸ್ಥಾಪಿಸಿ ೧೯೩೩ರವರೆಗೆ ಅಂದಾಜು ೪೦ ಚಿತ್ರಗಳನ್ನು ನಿರ್ಮಿಸಿದರೆಂದು ದಾಖಲಾಗಿದೆ.


ಕನ್ನಡ ವಾಕ್ಚಿತ್ರದ ಮೊದಲ ನಾಯಕಿ ಲಕ್ಷ್ಮೀಬಾಯಿ ಅವರ ವೃತ್ತಿ ಬದುಕು ಆರಂಭವಾದದ್ದೇ ಸೂರ್ಯ ಫಿಲಂ ಕಂಪನಿಯ ಮೂಕಿ ಚಿತ್ರಗಳ ಮೂಲಕ.ಸಂಸ್ಥೆ ನಿರ್ಮಿಸಿದ ೪೦ ಚಿತ್ರಗಳ ಪೈಕಿ ಲಕ್ಷ್ಮೀಬಾಯಿಯವರು ಹದಿನೈದು ಚಿತ್ರಗಳಲ್ಲಿ ನಾಯಕಿಯಾಗಿ ‘ಸೂರ್ಯಸ್ಟಾರ್ ಎಂದೇ ಪ್ರಸಿದ್ಧರಾಗಿದ್ದರು. ಅವರು ಅಭಿನಯಿಸಿದ ಮೊದಲ ಮೂಕಿ ಚಿತ್ರ ರಾಜ ಹೃದಯ ಅವರಿಗೆ ಹಣ-ಕೀರ್ತಿ ತಂದು ಕೊಟ್ಟಿತು. ಅದರ ಯಶಸ್ಸು ಮುಂದಿನ ಚಿತ್ರಗಳಲ್ಲಿ ನಾಯಕಿಯ ಪಾತ್ರ ವಹಿಸುವಂತೆ ಮಾಡಿತು. ಜೊತೆಗೆ ಅವರ ಸೋದರಿ ಕಮಲಾಬಾಯಿಯವರೂ ಮೂಕಿ ಚಿತ್ರಗಳ ತಾರೆಯಾದರು. ಬಗೆಬಗೆಯ ಪ್ರಚಾರ ತಂತ್ರಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಸೂರ್ಯ ಕಂಪನಿಯ ನಿರ್ಮಾಣದ ಚಿತ್ರಗಳಿಗೆ ಮಾತಿಲ್ಲದ ಕಾರಣಕ್ಕಾಗಿಯೇ ಭಾರತದಾದ್ಯಂತ ಬೇಡಿಕೆಯಿತ್ತು.

ಸೂರ್ಯ ಫಿಲಂ ಕಂಪನಿಯ ಯಶಸ್ಸು ಮತ್ತು ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಅವರ ಒತ್ತಾಸೆಯಿಂದ ಗುಬ್ಬಿ ವೀರಣ್ಣನವರು ಕರ್ನಾಟಕ ಪಿಕ್ಚರ್ಸ್ ಕಾರ್ಪೊರೇಷನ್ ಸಂಸ್ಥೆಯನ್ನು ಹುಟ್ಟು ಹಾಕಿ ಹಿಸ್ ಲವ್ ಅಫೇರ್ (೧೯೩೬), ಸಾಂಗ್ ಆಫ್ ಲೈಫ್ (೧೯೩೧) ಮತ್ತು ಹರಿಮಾಯ (೧೯೮೦) ಎಂಬ ಮೂರು ಚಿತ್ರಗಳನ್ನು ನಿರ್ಮಿಸಿದರು. ಆದರೆ ವೀರಣ್ಣನವರ ಪಾಲಿಗೆ ಮೂಕಿ ಚಿತ್ರ ನಿರ್ಮಾಣ ಒಂದು ದುಸ್ಸಾಹಸವಾಗಿತ್ತು.

ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮಕಾರಂತ ಅವರೂ ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು ಮತ್ತೊಂದು ಸಾಹಸ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (೧೯೩೦) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (೧೯೩೧) ಎಂಬ ಚಿತ್ರವನ್ನು ಸಹ ನಿರ್ಮಿಸಿದರು.


ಮಾತನಾಡುವ ಚಿತ್ರಗಳ ಯುಗ[ಬದಲಾಯಿಸಿ]

ಕನ್ನಡದ ಮೊದಲ ಮಾತನಾಡುವ ಚಿತ್ರ ಸತಿ ಸುಲೋಚನ ಬಿಡುಗಡೆಯ ವೇಳೆಗೆ ಮೂಕಿ ಯುಗ ಅಂತ್ಯ ಕಂಡಿತು.

ಬೆಂಗಳೂರಿನಲ್ಲಿ ಸಿನಿಮಾ ಚಟುವಟಿಕೆ ಆರಂಭವಾದಾಗ ಗುಬ್ಬಿವೀರಣ್ಣನವರೂ ಉತ್ಸಾಹಿತರಾದರು. ದೇವುಡು ನರಸಿಂಹಶಾಸ್ತ್ರಿ, ಓರಿಯಂಟಲ್ ಬ್ಯಾಂಕ್ನ ಶ್ರೀನಿವಾಸಮೂರ್ತಿ ಅವರ ಜೊತೆಗೂಡಿ ಕರ್ನಾಟಕ ಫಿಲ್ಮ್‌್ಸ ಕಾರ್ಪೊರೇಷನ್ ಎಂಬ ಕೂಡುಬಂಡವಾಳ ಸಂಸ್ಥೆ ಆರಂಭಿಸಿ, ತಾವೇ ಮೊದಲಿಗೆ ರೂ.2500 ಹಣ ಹೂಡಿದರು. ತಮ್ಮ ಪ್ರಭಾವ ಬೀರಿ ಕಾಫಿಪ್ಲ್ಯಾಂಟರುಗಳು ಮತ್ತಿತರರಿಂದ ರೂ. 40,000 ಷೇರು ಧನ ಸಂಗ್ರಹಿಸಿದರು. ಮುಂಬಯಿ ಮೊದಲಾದ ಕಡೆಗಳಿಂದ ಅಗತ್ಯವಾದ ಹಳೆಯ ಯಂತ್ರಗಳನ್ನು ಕೊಂಡು ತಂದು, ಮಲ್ಲೇಶ್ವರದಲ್ಲಿ ಸ್ಟುಡಿಯೋ ಆರಂಭಿಸಿದರು. 1930-32ರ ಅವಧಿಯಲ್ಲಿ ದೇವುಡು ಅವರ ಪ್ರಕಟಿತ ‘ಕಳ್ಳರ ಕೂಟ’ ಕಥೆ ಆಧಾರಿತ ಹಿಸ್ ಲವ್ ಅಫೇರ್ಸ್‌, ಸಾಂಗ್ ಆಫ್ ಲೈಫ್, ಹರಿಮಾಯ ಎಂಬ ಮೂರು ಮೂಕ ಚಿತ್ರ ನಿರ್ಮಿಸಿದರು. ವೀರಣ್ಣನವರು ನಾಟಕ ಕಂಪನಿಯ ಜೊತೆ ಪ್ರವಾಸದಲ್ಲಿರುತ್ತಿದ್ದರಿಂದ, ಸ್ಟುಡಿಯೋ ಆಡಳಿತದ ಮೇಲ್ವಿಚಾರಣೆ ತಮ್ಮ ಮಿತ್ರರ ವಶಕ್ಕೆ ಕೊಟ್ಟಿದ್ದರು. ದಕ್ಷ ಆಡಳಿತದ ಕೊರತೆಯಿಂದ ಸ್ಟುಡಿಯೋ ನಷ್ಟಕ್ಕೆ ಒಳಗಾಯಿತು. ಸಾಲಕೊಟ್ಟವರ ವರಾತ. ವೀರಣ್ಣನವರ ಕಂಪನಿ ನಗೆಪಾಟಲಾಯಿತು. ತಮ್ಮ ಜವಾಬ್ದಾರಿ ಪ್ರತಿಷ್ಠೆ ಉಳಿಸಿಕೊಳ್ಳಲು ವೀರಣ್ಣನವರು, ತಮ್ಮ ಮೆಡಲುಗಳನ್ನು ಅಡವಿಟ್ಟರು. ಮನೆಮಂದಿಯ ಒಡವೆಗಳನ್ನು ಮಾರಿ ಹೊಣೆಗಾರಿಕೆ ತೀರಿಸಿದ ಮೇಲೂ, ಒಂದು ಲಕ್ಷ ರೂಪಾಯಿ ನಷ್ಟು ಸಾಲದ ಹೊರೆ ತಮ್ಮ ಮೇಲೆ ಬಿದ್ದಿತೆಂದು ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ. ಚಿತ್ರ ತಯಾರಿಕೆ ವೀರಣ್ಣನವರ ಪಾಲಿಗೆ ಕೆಟ್ಟ ಕನಸಾಯಿತು. ಅಷ್ಟರಲ್ಲಿ ವಾಕ್ಚಲನ ಚಿತ್ರಗಳು ಯುಗಾರಂಭವಾಯಿತು. ಮುಂದೆ ತಡವಾಗಿಯಾದರೂ ನಾಟಕದ ಜೊತೆಯಲ್ಲೇ ಚಿತ್ರಂಗದಲ್ಲೂ ಕೃಷಿ ಮಾಡಿ ಆರ್ಥಿಕ ಯಶಸ್ಸು, ಕೀರ್ತಿಗಳಿಸಿದರು.

ಬುದ್ಧಿ ಜೀವಿಗಳು ಚಲನ ಚಿತ್ರ ಮಾಧ್ಯಮದಲ್ಲಿ ಆರಂಭ ಕಾಲದಿಂದಲೇ ಆಸಕ್ತಿ ತೋರಿದ್ದಾರೆ. ಕೆ. ಶಿವರಾಮಕಾರಂತರಿಗೆ ಮನರಂಜನೆ ಮೂಲಕ ಅರಿವು ಮೂಡಿಸುವ ಮಾಧ್ಯಮವಾಗಿ ಚಿತ್ರರಂಗದಲ್ಲಿ ಆಸಕ್ತಿ. ರಷ್ಯಾದಿಂದ ಚಲನ ಚಿತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತರಿಸಿ ಅಧ್ಯಯನ ಮಾಡಿದರು. ಫಿಲ್ಮ್‌ ಸಂಸ್ಕರಣಾಲಯಕ್ಕೆ ಹೋಗಿ ಫಿಲ್ಮ್‌ ಸಂಸ್ಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಮನನ ಮಾಡಿಕೊಂಡರು. ಕ್ಯಾಮರಾ ಕೊಂಡು ತಾವೇ ಚಿತ್ರೀಕರಣ ನಡೆಸಿದರು. ‘ಭೂತ ರಾಜ್ಯ’ (1932) ಸಿದ್ಧವಾಯಿತು. ಆ ವೇಳೆಗೆ ಮೊದಲ ವಾಕ್ಚಿತ್ರ ‘ಆಲಂ ಆರಾ’ ತೆರೆ ಕಂಡಿತ್ತು. ಮೂಕ ಚಿತ್ರಗಳಿಗೆ ಬೇಡಿಕೆ ಕಡಿಮೆಯಾಯಿತು. ಪೌರಾಣಿಕ ಚಿತ್ರಗಳಿಗೆ ಒಗ್ಗಿದ್ದ ಜನ, ಈ ಸಾಮಾಜಿಕ ಚಿತ್ರದಲ್ಲಿ ಆಸಕ್ತಿ ತೋರಲಿಲ್ಲ. ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಮುಂದೆ ಬಂದ ಮಿತ್ರರಿಂದಲೂ ಕಾರಂತರ ಶೋಷಣೆ ನಡೆಯಿತು.

ಕನ್ನಡ ನಾಡಿನ ಮೂಕ ಚಿತ್ರಗಳ ಇತಿಹಾಸದಲ್ಲಿ ಗಣನೀಯವಾದ ಪ್ರಯತ್ನ ‘ವಸಂತ ಸೇನಾ’. ಮುಂಬಯಿನ ಮೋಹನ್ ಭವನಾನಿ ಸದಭಿರುಚಿಯ ನಿರ್ಮಾಪಕ. ಜರ್ಮನಿಯಲ್ಲಿ ತರಬೇತಿ ಕೂಡ ಪಡೆದಿದ್ದರು. ಮೈಸೂರು ದಸರಾ ಉತ್ಸವ ಹಾಗೂ ಆನೆಗಳನ್ನು ಹಿಡಿವ ಖೆಡ್ಡಾ ಕಾರ್ಯಕ್ರಮದ ಸಾಕ್ಷ್ಯ ಚಿತ್ರಗಳನ್ನು ಚಿತ್ರಿಸಿದ್ದರು. ಕೈಲಾಸಂರ ಪರಿಚಯ ‘ಮೃಚ್ಛಕಟಿಕಾ’ ಚಿತ್ರಣಕ್ಕೆ ಪ್ರೇರಣೆ. ಕೈಲಾಸಂ ಕೈ ಜೋಡಿಸಿದ್ದರು. ಬುದ್ಧಿ ಜೀವಿಗಳನ್ನು ಕಲೆ ಹಾಕಿದರು. ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಅಜಂತಾ ಮೊದಲಾದ ಕಡೆ ಚಿತ್ರಣವಾಯಿತು. ಏಣಾಕ್ಷಿ ರಾಮರಾವ್ (ವಸಂತಸೇನೆ) ಜಿ.ಕೆ. ನಂದಾ (ಚಾರುದತ್ತಾ) ಕೈಲಾಸಂ (ಶಕಾರ) ಮನಶಾಸ್ತ್ರ ಪ್ರಾಧ್ಯಾಪಕ. ಡಾ. ಎನ್.ಎಸ್.ನಾರಾಯಣ ಶಾಸ್ತ್ರೀ (ಪಾಲಕ) ಕಮಲಾದೇವಿ ಚಟ್ಟೋಪಾಧ್ಯಾಯ ಡಿ.ಕೆ.ಭಾರದ್ವಾಜ್, ಬಿ. ಕೃಷ್ಣ, ಮೊದಲಾದವರೆಲ್ಲ ಮುಖ್ಯ ಪಾತ್ರಗಳಲ್ಲಿದ್ದರು. ಜಟ್ಟಿ ತಾಯಮ್ಮ ನೃತ್ಯ ನಿರ್ದೇಶಕರಾಗಿದ್ದರು. ಪ್ರೊ.ವಿ. ಸೀತಾರಾಮಯ್ಯ, ಕವಿ ಜೇಮ್ಸ್‌ ಕಸಿನ್ಸ್‌, ಜಿ. ವೆಂಕಟಾಚಲಂ ಸಲಹೆಗಾರರಾಗಿದ್ದರು. ಸು. ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾದ ಚಿತ್ರ ಐದುಲಕ್ಷ ರೂಪಾಯಿಗಳಿಸಿತೆಂದು ಹೇಳಲಾಗಿದೆ. ವಿದೇಶದಲ್ಲೂ ಈ ಚಿತ್ರ ಪ್ರದರ್ಶಿತವಾಯಿತು. ಭಾರತೀಯ ಮೂಕಿ ಚಿತ್ರರಂಗದ ಇತಿಹಾಸದಲ್ಲಿ ಈ ಚಿತ್ರ ಒಂದು ಸುವರ್ಣ ಅಧ್ಯಾಯವೆನಿಸಿತು.

ಭಾರತದ ಮೊದಲ ವಾಕ್ಚಲನ ಚಿತ್ರ ‘ಆಲಂ ಆರಾ’ (ಮಾರ್ಚ್ 14, 1931) ತೆರೆ ಕಂಡ ಮೇಲೆ ಮೂಕ ಚಿತ್ರಗಳ ನಿರ್ಮಾಣ ಇಳಿಮುಖವಾಯಿತು. ಸೂರ್ಯ ಫಿಲಂ ಕಂಪನಿಯೂ ಅದೇ ಜಾಡು ಹಿಡಿಯಿತು. ಹರಿಭಾಯಿ ದೇಸಾಯಿ ಮುಂಬಯಿಗೆ ಮರಳಿದರು. ಬೆಂಗಳೂರಿನಲ್ಲಿ ಚಿತ್ರ ಹಂಚಿಕೆದಾರರು, ಚಿತ್ರ ಹಂಚಿಕೆ ಕೆಲಸವನ್ನು ಇಲ್ಲೇ ಮುಂದುವರಿಸಿದರು. ತಮ್ಮ ಮಾತೃಭಾಷೆಗಳಲ್ಲಿನ ಚಿತ್ರ ತಯಾರಿಕೆಯನ್ನು ಮುಂಬಯಿನಲ್ಲಿ ಮುಂದುವರೆಸಿದರು. ‘ಆಲಂ ಆರಾ’ ತೆರೆ ಕಂಡ ವರ್ಷವೇ ತೆಲಗು (ಭಕ್ತ ಪ್ರಹ್ಲಾದ) ತಮಿಳು (ಕಾಳಿದಾಸ) ತೆರೆ ಕಂಡವು. ಪ್ರಥಮ ತೆಲಗು ಚಿತ್ರದ ನಿರ್ದೇಶಕರು ಬೆಂಗಳೂರಿನ ಎಚ್.ಎಂ.ರೆಡ್ಡಿ, ಕನ್ನಡಿಗರು.

ಹರಿಭಾಯ್ ನಿರ್ಗಮಿಸುವ ವೇಳೆಗೆ ಸ್ಥಳೀಯ ಉದ್ಯಮಗಳಿಗೆ ಸಿನಿಮಾ ಆಕರ್ಷಣೀಯವೆನಿಸಲಿಲ್ಲ. ಆಸಕ್ತಿ ಇದ್ದ ವೀರಣ್ಣನವರೂ ಅದೇ ತಾನೆ ಕೈ ಸುಟ್ಟು ಕೊಂಡಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ಹಿಂದಿ ಗುಜರಾತಿ ಹಂಚಿಕೆದಾರರು, ತಮ್ಮ ಮಾತೃಭಾಷೆಯ ಚಿತ್ರಗಳನ್ನು ತಯಾರಿಸಲು ಆದ್ಯತೆ ನೀಡಿದರು. ಆ ಕಾರ್ಯಕ್ಕೆ ಮುಂಬಯಿಯನ್ನೇ ಆರಿಸಿಕೊಂಡರು. ಕನ್ನಡಿಗರೇ ಆಗಿದ್ದ ಎಚ್.ಎಂ.ರೆಡ್ಡಿ. ಕೂಡ ಮದರಾಸು ಇಲ್ಲವೆ ಕೊಲ್ಕತ್ತಾ ನಿರ್ಮಾಣ ಕೇಂದ್ರಗಳ ನೆರವನ್ನು ಪಡೆದರು. ತೆಲಗು, ತಮಿಳು ಚಿತ್ರಗಳ ತಯಾರಿಕೆಯಲ್ಲಿ ಆಸಕ್ತರಾದರು.

ಆದರೆ ಕನ್ನಡ ಭಾಷೆಯ ವಾಕ್ಚಲನ ಚಿತ್ರ ನೋಡಲು ಮೂರುವರ್ಷ ಕಾಯಬೇಕಾಯಿತು. ‘ಪಾರಿಜಾತಹರಣಂ’, ‘ಕೋವಲನ್’ ಮೊದಲಾದ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದ ನಾಗೇಂದ್ರರಾಯರು, ಕನ್ನಡ ಭಾಷೆಯ ಚಿತ್ರ ತಯಾರಿಸಲು ‘ಆಲಂ ಆರಾ’ ನಿರ್ಮಿಸಿದ ಆದ್ಙೇಶಿರ್ ಇರಾನಿಯವರ ಮನವೊಲಿಸುವ ಪ್ರಯತ್ನ ವಿಫಲವಾಯಿತು. ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಜೊತೆಯಲ್ಲಿ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ರೂಪಿಸುವ ವೇಳೆಗೆ ಅವರಿಗೆ ಅನೀರಿಕ್ಷಿತವಾಗಿ ಒಂದು ಅವಕಾಶ ಒದಗಿ ಬಂತು. ಬೆಂಗಳೂರಿನ ಚಿಕ್ಕ ಪೇಟೆಯಲ್ಲಿ ಪಾತ್ರೆ ವ್ಯಾಪಾರಿಗಳಾಗಿದ್ದ ಷಾ ಚಮನ್ಲಾಲ್ ಡುಂಗಾಜಿ ಮತ್ತು ಷಾ ಭೂರ್ ಮಲ್ ಚಮನ್ಲಾಲ್ಜಿ, ರಾಜಸ್ಥಾನದ ಮೂಲದವರು. ಕನ್ನಡ ಭಾಷಾ ಚಲನಚಿತ್ರ ನಿರ್ಮಾಣದಲ್ಲಿ ಆಸಕ್ತರಾದರು. ನಾಗೇಂದ್ರರಾಯರನ್ನು ಸಂಪರ್ಕಿಸಿದರು. ಕೊಲ್ಹಾಪುರದ ಛತ್ರಪತಿ ಸಿನಿಟೋನ್ನಲ್ಲಿನ ಚಿತ್ರಿಸಲಾದ ‘ಸತಿ ಸುಲೋಚನಾ’ 1934ರ ಮಾರ್ಚ್ 3ರಂದು ಬೆಂಗಳೂರಿನಲ್ಲಿ ತೆರೆಕಂಡ 173 ನಿಮಿಷಗಳ ವಾಕ್ಚಿತ್ರ. 40,000ರೂ. ವೆಚ್ಚದ ಈ ನಿರ್ಮಾಣದಲ್ಲಿ ಎಂ.ವಿ.ಸುಬ್ಬಯ್ಯನಾಯುಡು, ನಾಗೇಂದ್ರರಾವ್, ತ್ರಿಪುರಾಂಬ, ಲಕ್ಷ್ಮೀಬಾಯಿ ಮೊದಲಾದವರು ಅಭಿನಯಿಸಿದ್ದರು. ವೈ.ವಿ.ರಾವ್ ಪಾತ್ರವಹಿಸುವುದರ ಜೊತೆಗೆ ನಿರ್ದೇಶಕರೂ ಆಗಿದ್ದರು. ಹಳ್ಳಿಗಳಿಂದ ಜನ ಗಾಡಿ ಕಟ್ಟಿಕೊಂಡು ಬಂದು ಕನ್ನಡ ಚಿತ್ರವನ್ನು ನೋಡಿ ಸಂತೋಷಪಟ್ಟರು. ಸತಿ ಸುಲೋಚನ ಬಿಡುಗಡೆಯಾದ ಕೆಲವೇ ದಿನಗಳ ನಂತರ ತೆರೆಕಂಡ ಚಿತ್ರ. ‘ಭಕ್ತಧ್ರುವ’ ಅಥವ ‘ಧ್ರುವಕುಮಾರ’. ವರದಾಚಾರ್ಯರ ಸೊಸೆ ಟಿ.ಕನಕಲಕ್ಷಮ್ಮ ಅವರಿಗೆ ಆಚಾರ್ಯರಿಗಾಗಿ ಸ್ಮಾರಕ ನಿರ್ಮಿಸುವ ಹಂಬಲ. ನಿಧಿ ಕೂಡಿಸಲು ಚಲನಚಿತ್ರ ನಿರ್ಮಾಣದ ಕಲ್ಪನೆ. ಮದರಾಸಿನಲ್ಲಿ ಆಚಾರ್ಯರ ಅಭಿಮಾನಿಗಳಾದ ನಾರಾಯಣರಾಯರು, ಶ್ರೀನಿವಾಸರಾಯರ ಪ್ರೋತ್ಸಾಹ. ಆಚಾರ್ಯರ ಸೊಸೆ ಕನಕಲಕ್ಷಮ್ಮ (ಸುನೀತಿ) ಆಚಾರ್ಯರ ಮೊಮ್ಮಗ ಮಾಸ್ಟರ್ ಮುತ್ತು (ಧ್ರುವ) ಸೌಂಡ್ ಇಂಜಿನಿಯರ್ ಟಿ. ದ್ವಾರಕನಾಥ್ (ನಾರದ) ಆಚಾರ್ಯರ ಶಿಷ್ಯರಾದ ಜಿ. ನಾಗೇಶರಾವ್ (ಉತ್ಥಾನಪಾದ) ಎಂ.ಜಿ.ಮರಿರಾವ್, ದೇವುಡು ನರಸಿಂಹಶಾಸ್ತ್ರೀ ಸೀತಾರಾಮ್, ಎಚ್.ಎಸ್.ಕೃಷ್ಣಸ್ವಾಮಿ ಇವರೆಲ್ಲಾ ಈ ಉದ್ಯಮದಲ್ಲಿ ಕೈ ಜೋಡಿಸಿದರು. ವೃತ್ತಿಪರ ಹಾಗೂ ಹವ್ಯಾಸಿ ರಂಗಭೂಮಿಯ ಸಂಗಮ. ನಿರ್ದೇಶಕ, ಪಾಶರ್ವ್‌ನಾಥ ಅಲ್ತೇಕರ್ ಅವರಿಗೂ ರಂಗಭೂಮಿ ಹಿನ್ನಲೆ. ಮೋಹನ್ ಭವನಾನಿ ಅವರ ಅಜಂತಾ ಸ್ಟುಡಿಯೋದಲ್ಲಿ ಚಿತ್ರಣ. ಮೂರು ತಿಂಗಳಲ್ಲಿ ಸಿದ್ಧ; ಚಿತ್ರ ಯಶಸ್ವಿ. ಭಕ್ರಧ್ರುವದ ಚಿತ್ರಪ್ರತಿ ಅಲಭ್ಯ. ಚಿತ್ರಣದಲ್ಲಿ ಭಾಗವಹಿಸಿದ ಇಡೀ ತಂಡ ಮದರಾಸಿಗೆ ಹೋಗಿ ಕೋಲಂಬಿಯಾ ಗ್ರಾಮಾಫೋನ್ ಕಂಪನಿಯಲ್ಲಿ ಚಿತ್ರದ ಮಾತು, ಹಾಡುಗಳ ಧ್ವನಿಮುದ್ರಿಕೆ ಮಾಡಿಸಿತು. ಆ ಗ್ರಾಮಾಫೋನ್ ಮುದ್ರಿಕೆಗಳು ಮಾತ್ರ ಈಗ ಲಭ್ಯ. ಮೂಕಿ ಚಿತ್ರಗಳ ಕಾಲದಲ್ಲೇ ಚಿತ್ರರಂಗಕ್ಕೆ ಇಳಿದಿದ್ದ ಗುಬ್ಬಿ ವೀರಣ್ಣನವರಿಗೆ ವಾಕ್ಚಿತ್ರಗಳ ಆಕರ್ಷಣೆಯಿಂದ ದೂರ ಉಳಿಯಲಾಗಲಿಲ್ಲ. ಆ ದಿನಗಳಲ್ಲಿ ಗುಬ್ಬಿ ಕಂಪನಿಯ ಪ್ರಸಿದ್ಧವಾದ ನಾಟಕ ಸದಾರಮೆ. ಆ ನಾಟಕವನ್ನೇ ಚಿತ್ರಿಸಲು ಮುಂದಾದರು. ಕೋಯಿಮತ್ತೂರಿನ ಷಣ್ಮುಗಂ ಚೆಟ್ಟಿಯಾರ್ ನೆರವಿನಿಂದ ತಯಾರಾದ ಚಿತ್ರ ಸದಾರಮೆ. ಗುಬ್ಬಿ ವೀರಣ್ಣ ತಾವು ನಾಟಕದಲ್ಲಿ ಅಭಿನಯಿಸುತ್ತಿದ್ದ ಆದಿಮೂರ್ತಿ ಹಾಗೂ ಕಳ್ಳನ ಪಾತ್ರಗಳನ್ನೇ ಅಭಿನಯಿಸಿದರು. ದಕ್ಷಿಣದ ಪ್ರಸಿದ್ಧ ಗಾಯಕಿ ಅಶ್ವತ್ಥಮ್ಮ ಸದಾರಮೆ ಪಾತ್ರ ವಹಿಸಿದರು. 1935ರಲ್ಲಿ ತೆರೆ ಕಂಡ ಸದಾರಮೆ ನಾಟಕದ ಪಡಿಅಚ್ಚು. ನಾಟಕದಂತೆ ಚಿತ್ರವೂ ಜನಪ್ರಿಯವಾಯಿತು. ಎಲ್ಲ ಬಗೆಯ ಪ್ರೇಕ್ಷಕರನ್ನು ರಂಜಿಸುವ ಈ ನಾಟಕವನ್ನು ವೀರಣ್ಣನವರು 1956ರಲ್ಲಿ ಮತ್ತೆ ನಿರ್ಮಿಸಿದರು. ಆಗಲೂ ಅದು ಅತ್ಯಂತ ಯಶಸ್ವಿ ಚಿತ್ರವಾಯಿತು.

1936ರಲ್ಲಿ ತೆರೆಕಂಡ ಎಚ್.ಎಲ್.ಎನ್. ಸಿಂಹ ನಿರ್ದೇಶನದ ‘ಸಂಸಾರ ನೌಕ’ ದಕ್ಷಿಣದ ಪ್ರಥಮ ಸಾಮಾಜಿಕ. ಈ ಚಿತ್ರವೂ ಅದೇ ಹೆಸರಿನ ಜನಪ್ರಿಯ ನಾಟಕದ ರೂಪಾಂತರ. ನಾಟಕದಲ್ಲಿ ಜನಪ್ರಿಯತೆಗಳಿಸಿದ್ದ ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ಡಿಕ್ಕಿ ಮಾಧವರಾವ್ ಮೊದಲಾದವರಿಂದ ಕೂಡಿದ ಈ ಚಲನಚಿತ್ರ ದಕ್ಷಿಣದ ಪ್ರಥಮ ಸಾಮಾಜಿಕವೆನಿಸಿತು.

ಇದುವರೆಗೆ ವರ್ಷಕ್ಕೆ ಒಂದೇ ಕನ್ನಡ ಚಿತ್ರ ತೆರೆ ಕಾಣುತ್ತಿತ್ತು. ಆದರೆ 1937ರಲ್ಲಿ ಮೂರು ಚಿತ್ರಗಳು ತೆರೆ ಕಂಡವು. ಸಂಸಾರನೌಕ ನಿರ್ಮಿಸಿದ ದೇವಿ ಫಿಲಿಂಸ್ನವರು ಕನ್ನಡಾಭಿಮಾನದಿಂದ ತಯಾರಿಸಿದ ‘ಪುರಂದರ ದಾಸ’ ಯಶಸ್ವಿಯಾಗಲಿಲ್ಲ. ಈ ಸೋಲಿನಿಂದ ಸಹೃದಯಿ ಕನ್ನಡ ನಿರ್ಮಾಪಕನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತು.

ಉದ್ಯಮಿ ವಿ. ತಿಮ್ಮಯ್ಯ 1936 ಜೂನ್ನಲ್ಲಿ ಬೆಂಗಳೂರಿನಲ್ಲಿ ಮೈಸೂರು ಸೌಂಡ್ ಸ್ಟುಡಿಯೋ ಆರಂಭಿಸಿದರು. ಟಿ.ದ್ವಾರಕನಾಥ್, ಎಂ.ವಿ.ರಾಮನ್ ಬೊಮನ್ ಇರಾನಿ ಮೊದಲಾದ ತಂತ್ರಜ್ಞರ ನೆರವನ್ನು ಪಡೆದು ತಮ್ಮ ಸ್ವಂತ ಸ್ಟುಡಿಯೋದಲ್ಲಿ ತಯಾರಿಸಿದ ಚಿತ್ರ ರಾಜಸೂಯಯಾಗ ಹಣಗಳಿಸಿತು.

ಆರಂಭದ ಕಾಲದ ಚಿತ್ರಗಳಿಗೆಲ್ಲಾ ರಂಗಭೂಮಿ ಹಿನ್ನೆಲೆ. ಅವೆಲ್ಲ ರಂಗಭೂಮಿಯ ತದ್ರೂಪು. ಈ ಮಾತು ಕನ್ನಡಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಅನ್ಯಭಾಷಾ ಚಿತ್ರಗಳಿಗೂ ರಂಗಭೂಮಿಯ ನಂಟು, ಬಿಡಲಾಗದ ಪರಿಸ್ಥಿತಿ. ಕನ್ನಡದ ಐದನೆ ಚಿತ್ರ ಚಿರಂಜೀವಿ (1937) ಉತ್ತರ ಕರ್ನಾಟಕದವರ ಮೊದಲ ಪ್ರಯತ್ನ. ಚಿತ್ರ ಪ್ರದರ್ಶಕರಾದ ವಿ.ಎ.ಮುಧೋಳ್ಕರ್ರ ಕ್ಯಾನರೀಸ್ ಟಾಕೀಸ್ ನಿರ್ಮಾಣದ ಈ ಚಿತ್ರಕ್ಕೆ ಚಿತ್ರಕಥೆ, ಸಾಹಿತ್ಯ ನೀಡಿದ ದೇವುಡು ನರಸಿಂಹ ಶಾಸ್ತ್ರಿಗಳೇ ಮೃಕಂಡು ಮುನಿ ಪಾತ್ರವಹಿಸಿದ್ದರು. ಮಳವಳ್ಳಿ ಸುಂದರಮ್ಮ (ಮರುದ್ವತಿ), ಬಸವರಾಜಮನ್ಸೂರ್ (ನಾರದ) ಅಮೀರ್ ಬಾಯಿ ಕರ್ನಾಟಕಿ, ಶಾರದಾ, ನಾರಾಯಣ (ಮಾರ್ಕಂಡೇಯ) ಸಂಗೀತ ನೀಡಿದ ಹಾರ್ಮೋನಿಯಂ ಶೇಷಗಿರಿ ರಾಯರು ಇವರಿಗೆಲ್ಲಾ ನಾಟಕದ ಹಿನ್ನಲೆ. ಪುಣೆಯ ಸರಸ್ವತಿ ಸಿನಿಟೋನ್ನಲ್ಲಿ ಸಿದ್ಧವಾದ ಈ ಚಿತ್ರಕ್ಕೆ ಕೆ.ಪಿ.ಭಾವೆ ನಿರ್ದೇಶಕರು. ನಿಮಾಪಕ ಚಿತ್ರಪ್ರದರ್ಶಕರಾದ ವಿ.ಎ.ಮುಧೋಳ್ಕರರ ವೈಯಕ್ತಿಯ ಆಸಕ್ತಿಯ ಫಲವಾಗಿ ಆರಂಭಕಾಲದ ಈ ಚಿತ್ರದ ಪ್ರತಿಯೊಂದು ಮಾತ್ರ ಈಗ ಲಭ್ಯ. ಚಿತ್ರಕಥೆಯ ನಿರೂಪಣಾ ಶೈಲಿ (ನೋಡಿ) ಪಾತ್ರಾಧಾರಿಗಳ ಗಾನ ಲಹರಿ, ಇಂದ್ರ ಸಭೆಯ ನೃತ್ಯ, ಮಾರ್ಕಂಡೇಯನ ತಪ್ಪಸ್ಸಿನಿಂದ ತಲ್ಲಣಗೊಳ್ಳುವ ಇಂದ್ರನ ಸಿಂಹಾಸನ, ಸಂತಾನಾಪೇಕ್ಷೆಗಳಾದ ಋಷಿದಂಪತಿಗಳ ಮೊರೆ ಕೈಲಾಸ ಮುಟ್ಟುವ ತಂತ್ರ ವೈಭವ, ಇವೆಲ್ಲ ಕನ್ನಡ ಚಿತ್ರರಂಗದ ಮೊದಲ ನುಡಿ, ನಡೆ. (ನೋಡಿ)

ಈ ಅವಧಿಯಲ್ಲಿ ಜಾಗತಿಕ ಸಿನಿಮಾ ವಲಯದಲ್ಲಿ ಅಷ್ಟೇಕೆ, ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ಚಲನ ಚಿತ್ರಗಳು ತೆರೆ ಕಂಡಿದ್ದವು. ಪುಣೆಯ ಪ್ರಭಾತ್ ಸಂಸ್ಥೆಯವರ ‘ಅಮರ ಜ್ಯೋತಿ’ ಬಾಂಬೆ ಟಾಕೀಸನವರ ಅಛೂತ್ ಕನ್ಯಾ, ಇಂಗ್ಲಿಷಿನಲ್ಲಿ ಬಂದ ಮಿಡ್ ಸಮ್ಮರ್ಸ್‌ ನೈಟ್ಸ್‌ ಡ್ರೀಂ, ಚಾರ್ಲಿ ಚಾಪ್ಲಿನ್ನನ ಮಾಡರ್ನ್ ಟೈಮ್ಸ್‌ ಮೊದಲಾದವು ತಂತ್ರಜ್ಞಾನ ದೃಷ್ಟಿಯಿಂದ, ನಿರೂಪಣಾ ಶೈಲಿ, ಕಥಾವಸ್ತುವಿನಿಂದ ಈ ಚಿತ್ರಗಳು ಇಂದಿಗೂ ಸರ್ವಶ್ರೇಷ್ಠ ಚಿತ್ರಗಳ ಸಾಲಿಗೆ ಸೇರಿವೆ. ಕನ್ನಡ ನಿರ್ಮಾಪಕರ ದೃಷ್ಟಿಗೆ ಇವು ಯಾವುದೂ ಬೀಳಲಿಲ್ಲ ಎನ್ನುವುದು ವಿಷಾದದ ಸಂಗತಿ.ಜಾಗತಿಕ ಯುದ್ಧ ಆರಂಭವಾಯಿತು. ಕನ್ನಡ ಚಿತ್ರಗಳ ನಿರ್ಮಾಣ ಹೆಚ್ಚಬಹುದೆಂಬ ನಿರೀಕ್ಷೆಗೆ ಕಲ್ಲು ಬಿತ್ತು. ಕಚ್ಚಾಫಿಲಂ ಆಮದಿನ ಮೇಲಿನ ನಿಯಂತ್ರಣದ ಬಿಸಿ ತಾಗಿದ್ದು ಕನ್ನಡ ಚಿತ್ರರಂಗದ ಮೇಲೆ. 1938ರಿಂದ 1940ರವರೆಗೆ ಯಾವುದೇ ಚಿತ್ರ ತೆರೆ ಕಾಣಲಿಲ್ಲ. ನಿರ್ಮಾಪಕರೆಂದು ಗುರುತಿಸಲಾಗಿದ್ದವರಿಗೆ ಆದ್ಯತೆ ಮೇಲೆ ಕಚ್ಚಾಫಿಲಂ ಹಂಚಿಕೆ ಮಾಡುವ ನೀತಿ. ಈ ಮೊದಲೇ ಚಿತ್ರ ನಿರ್ಮಾಪಕರಾಗಿದ್ದ ಗುಬ್ಬಿವೀರಣ್ಣನವರಿಗೆ ಕಚ್ಚಾಫಿಲಂ ದೊರೆತು ತಯಾರಿಸಿದ ಚಿತ್ರ ಸುಭದ್ರ (1941). ಹೊನ್ನಪ್ಪ ಭಾಗವತರ್, ಬಿ. ಜಯಮ್ಮ, ವೀರಣ್ಣ ಮುಖ್ಯ ಪಾತ್ರಗಳಲ್ಲಿದ್ದ ಚಿತ್ರ, ವ್ಯಾಪಾರಿ ದೃಷ್ಟಿಯಿಂದ ಯಶಸ್ವಿ. ಈ ಚಿತ್ರದಿಂದಾಗಿ ಬಿ. ಜಯಮ್ಮ ಅವರಿಗೆ ತಮಿಳು, ತೆಲಗು, ಚಿತ್ರಗಳಲ್ಲಿ ಅವಕಾಶ ಲಭ್ಯವಾಯಿತು. 1940-50ರ ದಶಕದಲ್ಲಿ ಜೀವನ ನಾಟಕ, ಹೇಮರೆಡ್ಡಿ ಮಲ್ಲಮ್ಮ, ಗುಬ್ಬಿವೀರಣ್ಣನವರ ಗಮನಾರ್ಹ ನಿರ್ಮಾಣಗಳು ಜೀವನ ನಾಟಕ ಚಿತ್ರಕ್ಕೆ ಅ.ನ. ಕೃಷ್ಣರಾಯರ ಸಾಹಿತ್ಯ ರಚಿಸಿದ್ದರು.

‘ಹರಿಶ್ಚಂದ್ರ’ (1943) ಚಿತ್ರದ ಮೂಲಕ ನಾಗೇಂದ್ರರಾಯರು ಸ್ವತಂತ್ರ ನಿರ್ದೇಶಕರೂ ಚಿತ್ರ ಸಾಹಿತಿಯೂ ಆದರೂ, ಹರಿಶ್ಚಂದ್ರ ಯಶಸ್ವಿಯಾಗಿ ಅದು ತಮಿಳು ಭಾಷೆಗೂ ಡಬ್ ಆಯಿತು. ಇದಕ್ಕೆ ಮುನ್ನ ನಾಗೇಂದ್ರರಾಯರು ನೇತೃತ್ವದಲ್ಲಿ ರೂಪಗೊಂಡ ಚಿತ್ರ `ವಸಂತ ಸೇನಾ’ ಅದೇ ವರ್ಷ ತೆರೆಕಂಡ ಹಿಂದಿ `ವಸಂತ ಸೇನೆ’ಗಿಂತ ಉತ್ತಮವಾಗಿ ಮೂಡಿ ಬಂದಿತು. ಈ ಎರಡೂ ಚಿತ್ರಗಳಲ್ಲಿ ಸಾಹಿತ್ಯ ಸಾಮ್ರಾಜ್ಯ ನಾಟಕ ಸಂಸ್ಥೆಯ, ಎಂ.ವಿ.ಸುಬ್ಬಯ್ಯ ನಾಯ್ಡು, ಲಕ್ಷ್ಮೀಬಾಯಿ ಮೊದಲಾದ ಕಲಾವಿದರೇ ಅಭಿನಯಿಸಿದ್ದಾರೆ.

ರಾಧಾ ರಮಣ’ (1944) ಚಿತ್ರದ ಮೂಲಕ ಎಮ್.ವಿ.ರಾಜಮ್ಮ ಕನ್ನಡದ ಮೊದಲ ನಿರ್ಮಾಪಕಿ ಆದರು. ಸಾಂಸ್ಕೃತಿಕ ದೃಷ್ಟಿಯಿಂದ ಮಹತ್ವ ಪಡೆದ ಚಿತ್ರ `ವಾಣಿ’. ಕೆ ಹಿರಣ್ಣಯ್ಯ, ಟಿ ಚೌಡಯ್ಯ, ಜಿ ಆರ್ರಾಮಯ್ಯ ಮಿತ್ರರು ಸೇರಿ ನಿರ್ಮಿಸಿದ ಚಿತ್ರ. ಪಿಟೀಲು ವಿದ್ವಾಂಸ ಟಿ. ಚೌಡಯ್ಯ, ಚೆಂಬೈ ವೈದ್ಯನಾಥ ಭಾಗವತರ್ ಮೊದಲಾದ ಸಂಗೀತ ದಿಗ್ಗಜರ ಕಛೇರಿ ಇದ್ದ ಈ ಚಿತ್ರ ವೈಶಿಷ್ಟ್ಯಪುರ್ಣ. ಇದು ಪಂಢರಿಬಾಯಿಯವರ ಮೊದಲ ಚಿತ್ರ. ಸಾರಿಗೆ ಉದ್ಯಮಿ ಜಿ.ಆರ್ ರಾಮಯ್ಯ 1944ರಲ್ಲಿ ಸ್ಥಾಪಿಸಿದ ನವಜ್ಯೋತಿ ಸ್ಟುಡಿಯೋ ಕನ್ನಡದಲ್ಲಿ ಕನ್ನಡ ಚಿತ್ರ ನಿರ್ಮಾಣ ಚಟುವಟಿಕೆಗೆ ಚಾಲನೆ ನೀಡಿತು. ಕಚ್ಚಾಫಿಲಂ ಅಭಾವ, ಪಡಿತರದ ಮೇಲೆ ಫಿಲಂ ಹಂಚಿಕೆ. ಸ್ಟುಡಿಯೋ ನಿರ್ಮಾಣಗಳಿಗೆ ಆದ್ಯತೆ. ಹೊಸ ನಿರ್ಮಾತೃಗಳು ಸರದಿ ಮೇಲೆ ಫಿಲಂ ಪಡೆವ ಪರಿಸ್ಥಿತಿ. ಸ್ಟುಡಿಯೋ ಪ್ರಗತಿಗೆ ಪುರಕವಾಗಿರಲಿಲ್ಲ.

ಅರಸೀಕೆರೆಯಲ್ಲಿ ಟೂರಿಂಗ್ ಟಾಕೀಸ್ ನಡೆಸುತ್ತಿದ್ದ ಡಿ.ಶಂಕರ್ಸಿಂಗ್ ಮತ್ತು ವಿಠಲಾಚಾರ್ಯರು ಮೈಸೂರಿಗೆ ಬಂದು ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡರು. ನವಜ್ಯೋತಿ ಸ್ಟುಡಿಯೋದಲ್ಲಿ ಈಗಾಗಲೇ ನಿರ್ಮಾಣ ಪ್ರಾರಂಭವಾಗಿದ್ದ ‘ಕೃಷ್ಣಲೀಲಾ’ ಚಿತ್ರವನ್ನು ಮಹಾತ್ಮ ಸಂಸ್ಥೆ ಆಶ್ರಯದಲ್ಲಿ ನಿರ್ಮಾಣ ಮುಂದುವರೆಸಿ ತೆರೆ ಕಾಣಿಸಿದರು. ಮುಂದೆ ಮಹಾತ್ಮ ಸಂಸ್ಥೆ ನಿರ್ಮಿಸಿದ ‘ನಾಗಕನ್ನಿಕಾ’ ‘ಜಗನ್ಮೋಹಿನಿ’ ಅಪುರ್ವ ವ್ಯಾಪಾರಿ ಯಶಸ್ಸು ಗಳಿಸಿದವು. ವಿಠಲಾಚಾರ್ಯ ಮತ್ತು ಡಿ.ಶಂಕರ್ ಸಿಂಗ್ ಜೋಡಿ ಮುಂದೆ ಪ್ರತ್ಯೇಕವಾಗಿ ಚಿತ್ರ ನಿರ್ಮಾಣಕ್ಕೆ ಇಳಿದರು. ಹಳೆಯ ಜಾಡಿನಲ್ಲೇ ಮುನ್ನಡೆದರು. ಶಂಕರ್ ಸಿಂಗ್ ಅವರ ಮಹಾತ್ಮಪಿಕ್ಚರ್ಸ್‌ ಮತ್ತು ಸಹ ಸಂಸ್ಥೆಗಳು ವಜ್ರಮಹೋತ್ಸವ ಆಚರಿಸಲಿವೆ. ಇದುವರೆಗೆ ಆ ಸಂಸ್ಥೆಗಳು 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿವೆ.

ಉದ್ಯಮದ ವಿಕಾಸ: ಕನ್ನಡ ಚಲನಚಿತ್ರೋದ್ಯಮಕ್ಕೆ ಆಧಾರ ಶಿಲೆ ಇಟ್ಟವರು ಗುಬ್ಬಿ ವೀರಣ್ಣನವರು. ಸ್ಟುಡಿಯೋ ಸ್ಥಾಪಿಸಿ ಮೂಕ ಚಿತ್ರಗಳನ್ನು ನಿರ್ಮಿಸಿದರು. ರಂಗಭೂಮಿಯಲ್ಲಿ ಗಳಿಸಿದ್ದನ್ನು ಚಿತ್ರರಂಗದಲ್ಲಿ ಕಳೆದರು. ಆದರೂ ಧೃತಿಗೆಡದೆ ಆರಂಭದ ದಿನಗಳಲ್ಲಿ ಉತ್ತಮ ಕನ್ನಡ ವಾಕ್ಚಿತ್ರಗಳನ್ನು ನಿರ್ಮಿಸಿದರು. ಬೆಂಗಳೂರು, ತುಮಕೂರು, ತಿಪಟೂರುಗಳಲ್ಲಿ ಚಿತ್ರಮಂದಿರಗಳನ್ನು ನಿರ್ಮಿಸಿದರು. ಹಲವಾರು ನಟರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅವರು ಆರಂಭಿಸಿದ ಚಲನಚಿತ್ರ ನಿರ್ಮಾಣ ವಿತರಣೆಗಾಗಿ ಸ್ಥಾಪಿಸಿದ ಕರ್ನಾಟಕ ಫಿಲ್ಮ್‌್ಸ ಲಿಮಿಟೆಡ್ ಕಂಪನಿ ಇಂದಿಗೂ ಚಿರಂಜೀವಿ.

ಕನ್ನಡ ಚಿತ್ರಗಳ ತಯಾರಿಕೆಯೇ ಇಲ್ಲದಂತಹ ಪರಿಸ್ಥಿತಿ. ಮಾರುಕಟ್ಟೆಯಲ್ಲಿ ಸಮೃದ್ಧವಾಗಿ ಲಭ್ಯವಿದ್ದ ಹಿಂದಿ, ತಮಿಳು, ತೆಲುಗು, ಚಿತ್ರಗಳನ್ನೇ ಕನ್ನಡ ಪ್ರೇಕ್ಷಕ ನೋಡಬೇಕಾದ ಅನಿವಾರ್ಯ ಸನ್ನಿವೇಶ. ಸತತವಾಗಿ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಕನ್ನಡ ಪ್ರೇಕ್ಷಕರನ್ನು ಹಿಡಿದಿಟ್ಟವರು. ಕನ್ನಡ ಚಿತ್ರಗಳ ನೋಡಬೇಕೆನ್ನುವ ಅಭಿರುಚಿ ಬೆಳೆಸಿದವರು ಮಹಾತ್ಮಾ ಪಿಕ್ಚರ್ಸ್ನ ಶಂಕರ್ಸಿಂಗ್. ಕನ್ನಡ ಚಿತ್ರೋದ್ಯಮಕ್ಕೆ ಸ್ಥಿರತೆಯನ್ನು ತಂದುಕೊಟ್ಟರು.

ಕನ್ನಡದ ಸಂಸ್ಕೃತಿಯ ಕೇಂದ್ರವಾಗಿ ಬೆಳೆದವರು ರಾಜಕುಮಾರ್. ತಮ್ಮ ಈ ವರ್ಚಸ್ಸಿಗೆ ಚ್ಯುತಿ ಬಾರದಂಥ ಪಾತ್ರಗಳನ್ನೇ ನಿರ್ವಹಿಸಿದರು. ಮುಂದೆ ಅವರ ಕುಟುಂಬದ ಸಂಸ್ಥೆಗಳು ನಿರ್ಮಿಸಿದ ಚಿತ್ರಗಳು ಉತ್ತಮ ನಿರ್ಮಾಣ ಅಂಶಗಳಿಂದ ಕೂಡಿದ್ದು, ಸುಕುಟುಂಬ ಪರಿವಾರ ಸಮೇತ ಮುಜುಗರವಿಲ್ಲದೆ ನೋಡಬಹುದಾದ ಚಿತ್ರಗಳು. ರಾಜಕುಮಾರ್ ಕನ್ನಡ ಚಿತ್ರಗಳಿಗೆ ಘನತೆ ಸ್ಥಿರತೆಯನ್ನು ತಂದಿತ್ತರು.

"ಷಾ ಚಮನ್‍ಮಲ್ ಡುಂಗಾಜಿ""[ಬದಲಾಯಿಸಿ]

ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ "ಷಾ ಚಮನ್‍ಮಲ್ ಡುಂಗಾಜಿ" ಪಾತ್ರ ಅತ್ಯಂತ ಮಹತ್ವದ್ದು ."ಷಾ ಚಮನ್‍ಮಲ್ ಡುಂಗಾಜಿ" ಮೂಲತಃ ರಾಜಸ್ತಾಸನದವರು, ವ್ಯಾಪರಕ್ಕೆಂದು ೧೯೦೩ ರಲ್ಲಿ ಬೆಂಗಳೂರಿಗೆ ಆಗಮಿಸಿದರು ಇಲ್ಲಿನ ಅಂದರೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪಾತ್ರೆಗಳ ವ್ಯಾಪಾರ ಆರಂಭಿಸಿದರು. ಇಂದಿಗೂ ಬೆಂಗಳೂರಿನಲ್ಲಿರುವ ಆದಿನಾಥ ಜೈನಶ್ವೇತಾಂಬರ ದೇವಾಸ್ಥಾನವನ್ನು೧೯೧೮ ರಲ್ಲಿ ನಿರ್ಮಿಸಿದಾತ ಹಾಗೂ ಅಂದಿನಿಂದ ತನ್ನ ಜೀವನ ಪರ್ಯಂತ ಜೈನಶ್ವೇತಾಂಬರ ಸಂಘಕ್ಕೆ ಅಧ್ಯಕ್ಷರಾಗಿ ಕೆಲಸ ಕಾರ್ಯಗಳನ್ನು ಖುದ್ದಾಗಿ ನಿಂತು ಮಾಡಿರುವ ಹೆಸರು ಇವರದ್ದು,ಇವರ ಹಿರಿಮೆ ಇಷ್ಟೇ ಅಲ್ಲ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿಯೂ ಸಹಾಯ ಮಾಡಲು ಸಧಾ ಮುಂದೆ ಬರುತ್ತಿದ್ದರು. ಇವರು ಬೆಂಗಳೂರಿನ "ಪ್ರಾಣಿದಯಾ ಪ್ರಚಾರಕ ಸಂಘ"ದ ಅಧ್ಯಕ್ಷರು ಸಹ ಆಗಿದ್ದರು. ಷಾ ಚಮನ್‍ಮಲ್ ಡುಂಗಾಜಿ ಅವರು ಪ್ರಾಣಿಗಳ ಮೇಲಿನ ಅತೀ ಪ್ರೀತಿಯನ್ನು ಮೆರೆದ ಸಂಗತಿಯೊಂದಿದೆ - ಪ್ರಾಣಿಗಳನ್ನು ಉತ್ಸವಗಳಲ್ಲಿ ಬಲಿಯನ್ನು ನೀಡುತ್ತಿದ್ದ ಕಾಲವದು, ಅದನ್ನು ತಡೆಯಲೆಂದು ಇದರ ವಿರುದ್ಧವಾಗಿ "ಪ್ರಾಣಿಬಲಿ" ನಾಶ ಪ್ರಚಾರವನ್ನು ಮಾಡಲು ಪ್ರಾರಂಭಿಸಿದರು, ಇವರ ಪ್ರಚಾರ ವ್ಯರ್ಥವಾಗಲಿಲ್ಲ ಈ ಕಾರ್ಯವನ್ನು ಜನರು ಸಂಪೂರ್ಣವಾಗಿ ನಿಲ್ಲಿಸಿದರು. ಹಾಗೂ ನೂರಾರು ಪ್ರಾಣಿಗಳ ಜೀವ ಉಳಿಸಿದ ಕೀರ್ತಿ ಷಾ ಚಮನ್‍ಮಲ್ ಡುಂಗಾಜಿ ಅವರದ್ದಾಗಿತ್ತು.

ಷಾ ಚಮನ್‍ಮಲ್ ಡುಂಗಾಜಿ ಘನತೆ ಗೌರವವನ್ನು ಕಂಡ ಮೈಸೂರು ವಿಶ್ವವಿದ್ಯಾನಿಲಯ ೧೯೨೫ ರಿಂದ ಇಂದಿನವರೆಗೂ ಕಾಮರ್ಸ್ ವಿಷಯದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಷಾ ಚಮನ್‍ಮಲ್ ಡುಂಗಾಜಿ ಹೆಸರಿನಲ್ಲಿ ಚಿನ್ನದ ಪದಕವನ್ನು ನೀಡುತ್ತಾ ಬಂದಿದ್ದಾರೆ.ಧಾರ್ಮಿಕ, ಸಾಮಾಜಿಕ ವಿಷಯಗಳಲ್ಲಿ ೧೯೨೯ ರಲ್ಲಿ ಶ್ರೀ ಸೌತ್ ಇಂಡಿಯಾ ಫಿಲ್ಮ್ ಕಂಪೆನಿ ಎಂಬ ಹೆಸರಿನಲ್ಲಿ ವಿತರಕ ಆಫಿಸ್ (ಡಿಸ್ಟಿಬ್ಯೂಷನ್ ಆಫಿಸ್)ವೊಂದನ್ನು ಪ್ರಾರಂಭಿಸಿದರು ಸುಮಾರು ೫೦-೬೦ ಚಿತ್ರಗಳನ್ನು ವಿತರಣೆ ಮಾಡುತ್ತಿದ್ದರು."ಷಾ ಚಮನ್‍ಮಲ್ ಡುಂಗಾಜಿ" ಅವರು ನಾವು ಮೈಸೂರು ದೇಶದಲ್ಲಿ ಇದ್ದೇವೆ, ಇಲ್ಲಿನ ಮಾತೃಭಾಷೆಯಾದ ಕನ್ನಡದಲ್ಲಿ ಚಿತ್ರವನ್ನೇಕೆ ಮಾಡಬಾರದೆಂಬ ಪ್ರಶ್ನೆ ತಮ್ಮ ಮನಸಿನಲ್ಲಿ ಮೂಡಿಬಂದಾಗ ಪೂರ್ವಾಪರ ಎಲ್ಲವನ್ನೂ ಯೋಚಿಸಿ ಮನಸ್ಸು ನುಡಿದಂತೆ ೧೯೩೨ ರಲ್ಲಿ "ಸೌತ್ ಇಂಡಿಯನ್ ಮೋವಿ ಟೋನ್" ಎಂಬ ಸಂಸ್ಥೆಯನ್ನು ಸ್ಥಾಪಿಸಿ ನಂತರ ಕನ್ನಡದ ಮೊದಲ ವಾಕ್ಚಿತ್ರವಾದ "ಸತಿ ಸುಲೋಚನಾ" ಚಿತ್ರವನ್ನು ನಿರ್ಮಿಸಲು ಮುಂದಾದರಂತೆ."ನಮನ"

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]