ವಿಷಯಕ್ಕೆ ಹೋಗು

ವಂಶವೃಕ್ಷ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಂಶವೃಕ್ಷ (ಚಲನಚಿತ್ರ)
ವಂಶವೃಕ್ಷ
ನಿರ್ದೇಶನಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ್
ನಿರ್ಮಾಪಕಜಿ.ವಿ.ಅಯ್ಯರ್
ಚಿತ್ರಕಥೆಗಿರೀಶ್ ಕಾರ್ನಾಡ್
ಕಥೆಎಸ್.ಎಲ್.ಭೈರಪ್ಪ
ಸಂಭಾಷಣೆಬಿ. ವಿ. ಕಾರಂತ್
ಪಾತ್ರವರ್ಗಗಿರೀಶ್ ಕಾರ್ನಾಡ್ ಎಲ್.ವಿ.ಶಾರದ ವಿಷ್ಣುವರ್ಧನ್
ಬಿ. ವಿ. ಕಾರಂತ್
ಸಂಗೀತಭಾಸ್ಕರ್ ಚಂದಾವರ್ಕರ್
ಛಾಯಾಗ್ರಹಣವೈ.ಎಂ.ಎನ್.ಶರೀಫ್
ಬಿಡುಗಡೆಯಾಗಿದ್ದು೧೯೭೨
ಚಿತ್ರ ನಿರ್ಮಾಣ ಸಂಸ್ಥೆಅನಂತಲಕ್ಷ್ಮೀ ಫಿಲಂಸ್
ಇತರೆ ಮಾಹಿತಿಡಾ.ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತ ಚಿತ್ರ

ವಂಶವೃಕ್ಷ ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ೧೯೭೨ರ ಒಂದು ಕನ್ನಡ ಚಲನಚಿತ್ರ. ಇದರ ನಿರ್ದೇಶಕರು ಬಿ. ವಿ. ಕಾರಂತ್ ಹಾಗು ಗಿರೀಶ್ ಕಾರ್ನಾಡ್. ನಿರ್ಮಾಪಕರು ಜಿ ವಿ ಅಯ್ಯರ್. ಈ ಚಿತ್ರದಲ್ಲಿ ಬಿ.ವಿ.ಕಾರಂತ, ಗಿರೀಶ ಕಾರ್ನಾಡ್, ಎಲ್.ವಿ.ಶಾರದಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು.[೧] ಇದು 1972 ರಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸಹ ಗೆದ್ದಿದೆ.

ನಟ ವಿಷ್ಣುವರ್ಧನ್ ಮತ್ತು ನಟಿ ಉಮಾ ಶಿವಕುಮಾರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.[೨][೩]

ಈ ಚಿತ್ರವನ್ನು 1980 ರಲ್ಲಿ ತೆಲುಗಿಗೆ "ವಂಶ ವೃಕ್ಷಂ"ಆಗಿ ರೀಮೇಕ್ ಮಾಡಲಾಯಿತು ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕಥಾವಸ್ತು[ಬದಲಾಯಿಸಿ]

ಕಥೆಯು ೧೯೨೪ರಲ್ಲಿ ಶುರುವಾಗುತ್ತದೆ. ನಂಜುಂಡ ಶ್ರೋತ್ರಿಯ ವಿಧವೆ ಕಾತ್ಯಾಯನಿ ತನ್ನ ಮಾವ ಶ್ರೀನಿವಾಸ ಶ್ರೋತ್ರಿ ಮತ್ತು ಅತ್ತೆ ಭಾಗೀರಥಮ್ಮ ಹಾಗೂ ಅವರ ಆಳು ಲಕ್ಷ್ಮಿಯೊಂದಿಗೆ ನಂಜನಗೂಡಿನಲ್ಲಿ ಇರುತ್ತಿರುತ್ತಾಳೆ. ತನ್ನ ಗಂಡನನ್ನು ಕಳೆದುಕೊಂಡ ಮೇಲೆ ಕಾತ್ಯಾಯನಿಯು ಅತ್ತೆ ಬಯಸಿದಂತೆ ವಿಧವೆಯ ವೇಷ ಧರಿಸಲಿಲ್ಲ, ಏಕೆಂದರೆ ಅದು ಒಬ್ಬ ಯುವತಿಗೆ ಹೊರಲು ಬಹಳ ಕಷ್ಟವಾಗುತ್ತದೆಂದು ಅವಳ ಮಾವ ಅಭಿಪ್ರಾಯಪಟ್ಟರು. ಭಾರತೀಯ ತತ್ತ್ವಶಾಸ್ತ್ರ ಮತ್ತು ಶಾಸ್ತ್ರಗಳಲ್ಲಿ ವಿದ್ವಾಂಸರಾದ ಶ್ರೋತ್ರಿಯವರನ್ನು ಆಗಾಗ ಪೂಜಾರಿಗಳು ಮತ್ತು ಪ್ರಾಧ್ಯಾಪಕರು ಧರ್ಮಗ್ರಂಥಗಳಲ್ಲಿನ ಸಂಕೀರ್ಣವಾದ ಸಮಸ್ಯೆಗಳಿಗೆ ಅವರ ಅಭಿಫ್ರಾಯ ಕೇಳಲು ಭೇಟಿಕೊಡುತ್ತಿದ್ದರು. ಅಂತಹ ಒಂದು ಪ್ರಸಂಗದಲ್ಲಿ, ಮೈಸೂರಿನಲ್ಲಿರುವ ಒಬ್ಬ ಕಾಲೇಜ್ ಪ್ರಾಧ್ಯಾಪಕರಾದ ಸದಾಶಿವ ರಾವ್ ಭಾರತೀಯ ತತ್ತ್ವಶಾಸ್ತ್ರದ ಕೆಲವು ವಿಷಯಗಳನ್ನು ಚರ್ಚಿಸಲು ಶ್ರೋತ್ರಿಯವರನ್ನು ಭೇಟಿಮಾಡುತ್ತಾರೆ. ಆ ಇಬ್ಬರು ಮಾತನಾಡುವುದನ್ನು ಕೇಳಿ, ಕಾತ್ಯಾಯನಿಯ ಯೋಚನೆಗಳು ಕಾಲೇಜು ಕಡೆಗೆ ತಿರುಗುತ್ತವೆ. ಭಾಗೀರಥಮ್ಮ ಸ್ವಲ್ಪ ಪ್ರತಿಭಟಿಸಿದರೂ ಶ್ರೋತ್ರಿಯವರು ತಮ್ಮ ಸೊಸೆ ಅವಳ ಬಿ.ಎ. ಪದವಿಯನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ. ಹತ್ತಿರದ ಕಪಿಲಾ ನದಿಯಲ್ಲಿ ಮುಳುಗಿಹೋಗುವ ಮೊದಲು ನಂಜುಂಡನೂ ಬಿ.ಎ. ಪದವಿಗಾಗಿ ಓದುತ್ತಿದ್ದನು. ವಿಶ್ವವಿದ್ಯಾಲಯದಲ್ಲಿ, ಅವಳು ಸದಾಶಿವ ರಾವ್‍ರ ತಮ್ಮ ರಾಜಾರಾವ್‍ರನ್ನು ಭೇಟಿಯಾಗುತ್ತಾಳೆ. ಅವನು ಶೇಕ್‍ಸ್ಪಿಯರಿಯನ್ ನಾಟಕಗಳ ಪ್ರಾಧ್ಯಾಪಕ ಮತ್ತು ನಾಟಕ ಕ್ಲಬ್‍ನ ಆಯೋಜಕನಾಗಿರುತ್ತಾನೆ. ಅವಳು ಅವನನ್ನು ಪ್ರೀತಿಸತೊಡಗುತ್ತಾಳೆ.

ಈ ನಡುವೆ, ಸದಾಶಿವ ರಾವ್ ಸಿಂಧೂ ಕಣಿವೆಯ ನಾಗರಿಕತೆಯ ದಿನಗಳಿಂದ ಹಿಡಿದು ವರ್ತಮಾನದವರೆಗಿನ ಭಾರತದ ಸಾಂಸ್ಕೃತಿಕ ಇತಿಹಾಸವನ್ನು ವಿವರಿಸುವ ಬೃಹತ್ ಐದು ಸಂಪುಟಗಳ ಯೋಜನೆಯನ್ನು ಆರಂಭಿಸುತ್ತಾರೆ. ಶ್ರೋತ್ರಿಯವರು ನೀಡಿದ ರೂ. ೧,೦೦೦ರ ಆರಂಭಿಕ ಅನುದಾನದಿಂದ ಮತ್ತು ಮೈಸೂರು ಮಹಾರಜರ ಧನಸಹಾಯದಿಂದ, ಸದಾಶಿವ ರಾವ್ ತಮ್ಮ ಸಂಶೋಧನೆಯನ್ನು ನಡೆಸುವ ಸಲುವಾಗಿ ವಿವಿಧ ಗ್ರಂಥಾಲಯಗಳು, ಸ್ಮಾರಕಗಳು ಮತ್ತು ದಫ್ತರ ಖಾನೆಗಳಿಗೆ ಭೇಟಿನೀಡಲು ಭಾರತದ ಪ್ರವಾಸವನ್ನು ಆರಂಭಿಸುತ್ತಾರೆ. ಅಜಂತಾಗೆ ಭೇಟಿನೀಡಿದ ವೇಳೆ, ಅವರು ಶ್ರೀಲಂಕಾದ ಒಬ್ಬ ದಂಪತಿ ಮತ್ತು ಕೇಂಬ್ರಿಜ್‍ನ ಬೌದ್ಧಧರ್ಮದ ಇತಿಹಾಸಗಾರ್ತಿಯಾದ ಅವರ ಮಗಳು ಕಾರುಣರತ್ನೆಯನ್ನು ಭೇಟಿಯಾಗುತ್ತಾರೆ. ಆ ಮಹಿಳೆಯ ಚುರುಕು ಬುದ್ಧಿ ಮತ್ತು ಅವಳ ಸಂಶೋಧನೆಗೆ ಅವಳ ಸಮರ್ಪಣೆಯನ್ನು ಕಂಡು ರಾವ್ ಮೋಹಗೊಳ್ಳುತ್ತಾರೆ. ತನ್ನ ಅಧ್ಯಯನವನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲು ಅವಳನ್ನು ಆಹ್ವಾನಿಸುತ್ತಾರೆ. ಅವರ ಕೆಲಸದ ಬಗ್ಗೆ ಸ್ವಲ್ಪ ಮೆಚ್ಚುಗೆ ಹೊಂದಿದ್ದ ರತ್ನೆ ಅವರ ಪ್ರಸ್ತಾಪವನ್ನು ಸ್ವೀಕರಿಸುತ್ತಾಳೆ. ತನ್ನ ಡಾಕ್ಟರೇಟ್ ಪದವಿ ಮತ್ತು ಅವರೊಂದಿಗೆ ಅವರ ಸಂಶೋಧನಾ ಸಹಾಯಕಿಯಾಗಿ ತನ್ನ ಕೆಲಸದ ಅವಧಿಯಲ್ಲಿ ಅವರನ್ನು ಪ್ರೀತಿಸತೊಡಗುತ್ತಾಳೆ.

ಸದಾಶಿವ ರಾಯರಿಗೆ ನಾಗಲಕ್ಷ್ಮಿಯೊಂದಿಗೆ ಆಗಲೇ ಮದುವೆಯಾಗಿರುತ್ತದೆ. ಹಾಗಾಗಿ ಈಗ ಸಾಕಷ್ಟು ಅನೌಪಚಾರಿಕವಾಗಿರುವ ರತ್ನೆಯೊಂದಿಗಿನ ತಮ್ಮ ಸಲಿಗೆಯನ್ನು ಸಮಾಜವು ತಪ್ಪಾಗಿ ನೋಡುವುದೆಂದು ಅವರು ಕಳವಳಪಡುತ್ತಾರೆ. ಅವರಿಗೆ ಎಲ್ಲಕ್ಕಿಂತ ಮುಖ್ಯವಾಗಿರುವುದೆಂದರೆ ತಮ್ಮ ಬೌದ್ಧಿಕ ಜೀವನದಲ್ಲಿ ತಮ್ಮ ಹೆಂಡತಿ ಭಾಗವಹಿಸಲು ಆಗದಿರುವುದು. ಇದರಿಂದ ಅವರು ನಿರಾಶರಾಗಿರುತ್ತಾರೆ. ತಮ್ಮ ಮುಂಚಿನ ಮದುವೆಯ ಹೊರತಾಗಿಯೂ ರಾವ್ ರತ್ನೆಯನ್ನು ಮದುವೆಯಾಗುವ ಪ್ರಸ್ತಾಪವಿಡುತ್ತಾರೆ. ರತ್ನೆ ಮೊದಲು ಹಿಂಜರಿಯುತ್ತಾಳೆ ಆದರೆ ಸ್ವಲ್ಪ ಕಾಲ ಮಾತ್ರ. ಅವಳು ಒಪ್ಪಿದ ಮೇಲೆ ಇಬ್ಬರೂ ಮದುವೆಯಾಗುತ್ತಾರೆ. ಕರ್ತವ್ಯನಿಷ್ಠ ಮತ್ತು ಅತಿಯಾಗಿ ಪ್ರೀತಿಸುವ ಹೆಂಡತಿ ನಾಗಲಕ್ಷ್ಮಿ ಆಘಾತಗೊಳ್ಳುತ್ತಾಳೆ ಎಂದು ಹೇಳುವುದು ಬೇಕಾಗಿಲ್ಲ. ಸುಮಾರು ಇದೇ ಸಮಯದಲ್ಲಿ, ರಾವ್‍ರ ತಮ್ಮ ರಾಜಾ ರಾವ್ ಕಾತ್ಯಾಯನಿಯನ್ನು ಮದುವೆಯಾಗುತ್ತಾನೆ. ಕಾತ್ಯಾಯನಿಯು ಮರುಮದುವೆಯ ಕಲ್ಪನೆಯೊಂದಿಗೆ ಹೊಡೆದಾಡುತ್ತಾಳೆ, ಏಕೆಂದರೆ ಅದರಿಂದ ಶ್ರೋತ್ರಿ ಕುಟುಂಬಕ್ಕೆ ಆಗುವ ಅವಮಾನದ ಅರಿವು ಅವಳಿಗೆ ಆಗುತ್ತದೆ. ಆದರೆ ಅಂತಿಮವಾಗಿ ವೈವಾಹಿಕ ಜೀವನದ ಭೌತಿಕ ಆನಂದಕ್ಕೆ ಮಣಿಯುತ್ತಾಳೆ. ತನ್ನ ಧಾರ್ಮಿಕ ಮಾವನನ್ನು ಎದುರಿಸಲು ಸಾಧ್ಯವಾಗದೆ ಅವಳು ಅವರಿಗೆ ಒಂದು ಪತ್ರ ಬರೆದು ಕೇವಲ ಬಟ್ಟೆಗಳನ್ನು ತೆಗೆದುಕೊಂಡು ಮನೆಯಿಂದ ಹೊರಟುಬಿಡುತ್ತಾಳೆ. ಶ್ರೋತ್ರಿ ಕುಟುಂಬಕ್ಕೆ ಆಘಾತವಾಗುತ್ತದೆ. ಕಾತ್ಯಾಯನಿಯು ರಾಜಾ ರಾವ್‍ಗಾಗಿ ತನ್ನ ನಾಲ್ಕು ವರ್ಷದ ಮಗನನ್ನೂ ತೊರೆದು ಹೊರಟಿದ್ದು ಅದಕ್ಕಿಂತ ಹೆಚ್ಚಿನ ಆಘಾತವಾಗುತ್ತದೆ. ಆದರೆ ಈ ದುರಂತದ ನಂತರದ ಸ್ವಲ್ಪ ಮಟ್ಟಿನ ಸಮಚಿತ್ತತೆಯನ್ನು ಶ್ರೋತ್ರಿಯವರು ಕುಟುಂಬಕ್ಕೆ ತಂದುಕೊಡುತ್ತಾರೆ.

ವರ್ಷಗಳು ಉರುಳಿದಂತೆ, ಹತಾಶಳಾದ ನಾಗಲಕ್ಷ್ಮಿ ಧರ್ಮದಲ್ಲಿ ಶಾಂತಿಯನ್ನು ಕಂಡುಕೊಳ್ಳುತ್ತಾಳೆ. ಮೊದಲು ತಮ್ಮ ಮಗನ ಮರಣ ಮತ್ತು ನಂತರ ತಮ್ಮ ಸೊಸೆ ತಮ್ಮನ್ನು ತೊರೆದ ಕಾರಣ ನಿವೃತ್ತಿಯ ಆನಂದಗಳನ್ನು ಅನುಭವಿಸಲಾಗದ ವೃದ್ಧ ಶ್ರೋತ್ರಿಗಳು ಮನೆಜೀವನದ ಭಾರವನ್ನು ಮುಂದುವರಿಸುತ್ತಾರೆ. ವೈವಾಹಿಕ ಆನಂದದ ಆರಂಭಿಕ ಸಂತೋಷದ ನಂತರ ಕಾತ್ಯಾಯನಿಗೆ ಮೂರು ಬಾರಿ ಅಕಾಲ ಪ್ರಸವವಾಗುತ್ತದೆ. ತನ್ನ ಹಣೆಬರಹ ಯಾವುದೋ ರೀತಿಯಲ್ಲಿ ತನ್ನ ಕ್ರಿಯೆಗಳಿಗೆ ದೈವಿಕ ತೀರ್ಪೇ ಎಂದು ಅವಳು ಪ್ರಶ್ನಿಸಿಕೊಳ್ಳುತ್ತಾಳೆ. ಇದೇ ರೀತಿ, ತಮ್ಮ ಮೇರುಕೃತಿಯ ಸಂಪುಟಗಳನ್ನು ಒಂದರ ನಂತರ ಮತ್ತೊಂದು ತರುವ ನಡುವೆ ಕಾಯಿಲೆ ಬೀಳುತ್ತಾರೆ. ರಾವ್‍ರೊಂದಿಗೆ ತನ್ನ ಮದುವೆಯನ್ನು ಬೌದ್ಧಿಕ ಮಿತಿಯಲ್ಲಿ ರೂಪಿಸಿಕೊಂಡಿದ್ದ ರತ್ನೆಯ ಹೆತ್ತವರು ವೃದ್ಧಾಪ್ಯದಿಂದ ತೀರಿಕೊಳ್ಳುತ್ತಾರೆ. ಅವಳಿಗೆ ಮಾತೃತ್ವದ ಸಂಕಟ ಅನುಭವವಾಗಲು ಶುರುವಾಗುತ್ತದೆ. ಆದರೆ ದುರದೃಷ್ಟವಶಾತ್, ರಾವ್ ಬಹಳ ದುರ್ಬಲರಾಗಿರುತ್ತಾರೆ. ಬಸಿರು ಮತ್ತು ಹೆರಿಗೆ ರಜೆಯಲ್ಲಿ ಸಮಯ ಕಳೆಯುವುದೆಂದರೆ ಅವರ ಐದು ಸಂಪುಟಗಳ ಯೋಜನೆ ಅಪೂರ್ಣವಾಗಿ ಉಳಿಯಬಹುದು.

ಒಂದು ದಿನ, ತನ್ನ ಇಂಗ್ಲಿಷ್ ತರಗತಿಯಲ್ಲಿ ಕಾತ್ಯಾಯನಿ ತನ್ನ ಮಗನನ್ನು ನೋಡುತ್ತಾಳೆ. ಬಿ.ಎ. ನಂತರ ಅವಳು ಎಂ.ಎ. ಪದವಿ ಪಡೆದು ತನ್ನ ಹೊಸ ಗಂಡನೊಂಡಿಗೆ ಶಿಕ್ಷಕಿಯಾಗಿರುತ್ತಾಳೆ. ತನ್ನನ್ನು ನಿಗ್ರಹಿಸಿಕೊಳ್ಳಲು ಸಾಧ್ಯವಾಗದೆ ಅವಳು ಮಗನನ್ನು ಮನೆಗೆ ಆಹ್ವಾನಿಸಿ ಅವನ ಕುಟುಂಬದ ಬಗ್ಗೆ ವಿಚಾರಿಸುತ್ತಾಳೆ. ತನ್ನ ತಂದೆತಾಯಿಯರು ತೀರಿಹೋಗಿದ್ದಾರೆಂದು ಅವನು ಹೇಳಿದಾಗ, ಕಾತ್ಯಾಯನಿಗೆ ಅವನ ತಿರಸ್ಕಾರ ಹೆಚ್ಚು ಅನುಭವವಾಗುತ್ತದೆ, ಅವನು ಅವಳನ್ನು ಅವಮಾನಿಸಿದ್ದರೆ ಅಥವಾ ಅವಳಿಂದ ವಿವರಣೆಯ ಕೇಳಿದ್ದಕ್ಕಿಂತ ಹೆಚ್ಚು. ತನ್ನ ಮಾನಸಿಕ ಯಾತನೆಯಿಂದ ಅವಳ ಆರೋಗ್ಯ ಹದಗೆಡುತ್ತದೆ. ಅವಳನ್ನು ಬಹಳ ಪ್ರೀತಿಸುವ ಗಂಡನಿಗೆ ಇದರಿಂದ ಚಿಂತೆಯಾಗುತ್ತದೆ. ಅವರ ಕೆಲಸದ ದಣಿವು ಮತ್ತು ತಮ್ಮ ಮೊದಲ ಹೆಂಡತಿ ನಾಗಲಕ್ಷ್ಮಿಯನ್ನು ತೊರೆದ ಪಾಪಪ್ರಜ್ಞೆ ರಾವ್‍ರನ್ನು ಬಳಲಿಸಿ ಅವರೂ ಸಾವಿಗೆ ಹತ್ತಿರವಾಗುವಂತೆ ಮಾಡುತ್ತದೆ.

ಈ ಮಧ್ಯೆ, ಭಾಗೀರಥಮ್ಮ ತೀರಿಕೊಂಡಿದ್ದರಿಂದ ಶ್ರೋತ್ರಿಯವರ ಮನೆಯಲ್ಲಿ ಮತ್ತೆ ದುಃಖದ ವಾತಾವರಣ. ವಿಧಿಯ ಹೊಡೆತದಿಂದ ಜರ್ಜರಿತಾರದ ಶ್ರೋತ್ರಿ ಬಹಳ ಕಷ್ಟದಿಂದ ತಮ್ಮ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುತ್ತಾರೆ. ತಾವು ಸಂನ್ಯಾಸ ತೆಗೆದುಕೊಳ್ಳುವ ಸಮಯವಾಗಿದೆ ಎಂದು ಅವರು ನಿರ್ಧರಿಸಿ ತಮ್ಮ ವ್ಯವಹಾರಗಳನ್ನು ವ್ಯವಸ್ಥಿತವಾಗಿಸಲು ಆರಂಭಿಸುತ್ತಾರೆ. ತಮ್ಮ ಪಟ್ಟಣದಲ್ಲಿನ ಒಬ್ಬ ಗೌರವಾನ್ವಿತ ಸಂಸ್ಕೃತ ಶಿಕ್ಷಕನ ಮಗಳೊಂದಿಗೆ ತಮ್ಮ ಮೊಮ್ಮಗನ ಮದುವೆಯ ಏರ್ಪಾಟು ಮಾಡುತ್ತಾರೆ. ತನ್ನ ಅಪ್ಪನ ಕಾಲದಿಂದ ಶ್ರೋತ್ರಿ ಕುಟುಂಬದ ಸೇವೆಮಾಡಿದ್ದ ಲಕ್ಷ್ಮಿಗೆ ಎರಡು ಎಕರೆ ಜಮೀನನ್ನು ಬರೆದು ಕೊಡುತ್ತಾರೆ. ತಮ್ಮ ಕಾಗದಪತ್ರಗಳನ್ನು ಕ್ರಮವಾಗಿಸುವ ವೇಳೆ ಶ್ರೋತ್ರಿಯವರಿಗೆ ತಮ್ಮ ತಂದೆಗೆ ಬರೆದಿದ್ದ ಒಂದು ಹಳೆ ಪತ್ರ ಸಿಗುತ್ತದೆ. ಅದರಲಿ ತನ್ನ ಸೋದರನಿಗೆ ಪೂರ್ವಜರ ಆಸ್ತಿಯ ಅವನ ಪಾಲನ್ನು ಕೊಡದೆ ಮೋಸಮಾಡಿದ್ದರಿಂದ ಅವರಿಗೆ ಶಾಪ ಹಾಕಿರುತ್ತದೆ. ಆಘಾತವಾಗಿ, ಅವರು ಆ ಆರೋಪವನ್ನು ತನಿಖೆ ಮಾಡುತ್ತಾರೆ. ದುರಾಸೆ, ಅಸೂಯೆ ಮತ್ತು ಇತರ ಮಾನವ ದೌರ್ಬಲ್ಯಗಳ ಹಳೆ ಕಥೆಯೊಂದು ಅನಾವರಣಗೊಳ್ಳುತ್ತದೆ. ತಮ್ಮ ತಂದೆ ನಂಜುಂಡ ಶಾಸ್ತ್ರಿಯಲ್ಲ ಬದಲಾಗಿ ತಮ್ಮ ತಾಯಿಯನ್ನು ಬಸಿರುಮಾಡಿದ್ದರಿಂದ ಓಡಿಸಲ್ಪಟ್ಟ ಒಬ್ಬ ಪೂಜಾರಿಯೆಂದು ತಿಳಿದು ಶ್ರೋತ್ರಿಯವರಿಗೆ ಗಾಬರಿಯಾಗುತ್ತದೆ. ಹಿರಿಯ ನಂಜುಂಡ ಶಾಸ್ತ್ರಿಗೆ ಉತ್ತರಾಧಿಕಾರಿ ಇರಲು ಮತ್ತು ಪೂರ್ವಜರ ಆಸ್ತಿಯನ್ನು ತಮ್ಮ ಸೋದರನಿಗೆ ಕೊಡದೆ ಉತ್ತರಾಧಿಕಾರಿಗೆ ಕೊಡಲು ಇದರ ಏರ್ಪಾಟು ಆಗಿರುತ್ತದೆ. ಶ್ರೀನಿವಾಸ ಶ್ರೋತ್ರಿ ತಮ್ಮ ಚಿಕ್ಕಪ್ಪನ ವಂಶಸ್ಥರನ್ನು ಪತ್ತೆಹಚ್ಚಲು ನಿರ್ಧರಿಸುತ್ತಾರೆ. ಆದರೆ ಯಾರೂ ಸಿಗದ ಕಾರಣ ಅವರು ತಮ್ಮ ಎಲ್ಲ ಆಸ್ತಿ ಮತ್ತು ಸಂಪತ್ತನ್ನು ಗ್ರಾಮದಲ್ಲಿನ ನಿರ್ಗತಿಕರಿಗೆ ಕೊಟ್ಟುಬಿಡುತ್ತಾರೆ. ಅವರ ಮೊಮ್ಮಗ ಕಿರಿಯ ಶ್ರೀನಿವಾಸ ಶ್ರೋತ್ರಿ ನಿರ್ಧಾರವನ್ನು ಬೆಂಬಲಿಸುತ್ತಾನೆ, ಏಕೆಂದರೆ ಅವನಿಗೂ ಅನ್ಯಾಯಾರ್ಜಿತ ಸಂಪತ್ತಿನಿಂದ ಕಳಂಕಿತನಾಗಲು ಇಷ್ಟವಿರುವುದಿಲ್ಲ.

ಕೊನೆಯ ಅಂಕದಲ್ಲಿ, ಪಾಪಪ್ರಜ್ಞೆಯಿಂದ ಚಿತ್ರಹಿಂಸೆಗೊಳಗಾದ ಸದಾಶಿವ ರಾಯರು ಒಂದೇ ಸೂರಿನ ಕೆಳಗೆ ತಮ್ಮ ಇಬ್ಬರೂ ಹೆಂಡತಿಯರೊಂದಿಗೆ ಇರಲು ಮರಳುತ್ತಾರೆ. ಒಂದೇ ದಿನದಲ್ಲಿ ಅವರು ತೀರಿಕೊಳ್ಳುತ್ತಾರೆ. ಅವರು ಆಗತಾನೇ ತಮ್ಮ ಐದು ಸಂಪುಟಗಳ ಕೃತಿಯನ್ನು ಮುಗಿಸಿರುತ್ತಾರೆ. ಅವರ ಮೊದಲ ಹೆಂಡತಿಯ ಮಗ ಪೃಥ್ವಿಯೊಡನೆ ರತ್ನೆ ರಾವ್‍ರ ಸಂಶೋಧನೆಯ ವಿಷಯವನ್ನು ಎತ್ತುತ್ತಾಳೆ. ಅವನು ಇತಿಹಾಸ ಅಥವಾ ತತ್ತ್ವಶಾಸ್ತ್ರ ಇಷ್ಟಪಡುವುದಿಲ್ಲ ಮತ್ತು ತಾನು ವಿಜ್ಞಾನದ ವಿದ್ಯಾರ್ಥಿ ಎಂದು ಅವಳಿಗೆ ಅವನು ಹೇಳುತ್ತಾನೆ. ಶ್ರೋತ್ರಿ ತಮ್ಮ ಸಂನ್ಯಾಸಕ್ಕೆ ಹೊರಡುತ್ತಾರೆ. ಆದರೆ ತಮ್ಮ ಸೊಸೆಯನ್ನು ಒಂದು ಕಡೆ ಬಾರಿ ನೋಡುವುದಕ್ಕಾಗಿ ಅವಳನ್ನು ಭೇಟಿಯಾಗಲು ನಿರ್ಧರಿಸುತ್ತಾರೆ. ೨೦ ವರ್ಷದ ಹಿಂದೆ ಅವಳು ಹೋದ ನಂತರ ಅವರು ಆವಳನ್ನು ನೋಡಿರುವುದಿಲ್ಲ. ರಾವ್‍ರ ಮನೆಯನ್ನು ಪ್ರವೇಶಿಸಿದಾಗ, ಕಾಂತಿಯುತ, ಸುಂದರಳಾಗಿದ್ದ ಕಾತ್ಯಾಯನಿ ಈಗ ಬಡಕಲು ಸಣಕಲು ಚಿಪ್ಪಾಗಿರುವುದನ್ನು ಅವರು ಗಮನಿಸುತ್ತಾರೆ. ಅವಳ ಕೊನೆಯ ಕ್ಷಣ ಸನಿಹವಿರುತ್ತದೆ. ಶ್ರೋತ್ರಿ ತಮ್ಮ ಮೊಮ್ಮಗ, ಅವಳ ಮಗನನ್ನು ಕರೆಸುತ್ತಾರೆ. ಮೊಮ್ಮಗನಿಗೆ ತನ್ನ ಅಮ್ಮನ ಬಗ್ಗೆ ಗೊತ್ತಿರುತ್ತದೆ ಆದರೆ ಅವಳನ್ನು ತಿರಸ್ಕರಿಸಿರುತ್ತಾನೆ ಎಂದು ತಿಳಿದು ಅವರಿಗೆ ಆಘಾತವಾಗುತ್ತದೆ. ಕಿರಿಯ ಶ್ರೋತ್ರಿಯನ್ನು ಹೆಚ್ಚು ಉತ್ತಮವಾಗಿ ಬೆಳೆಸಬಹುದೆಂಬ ನಂಬಿಕೆ ಅವರಿಗಿರುತ್ತದೆ. ಮೊಮ್ಮಗನ ಆಗಮನಕ್ಕೆ ಕಾಯುತ್ತಿರುವಾಗ, ನಾಗಲಕ್ಷ್ಮಿಯ ಚಿಕ್ಕಮ್ಮನೇ ತಮ್ಮ ಚಿಕ್ಕಪ್ಪನ ಮಗಳೆಂದು ಗೊತ್ತಾಗಿ ಶ್ರೋತ್ರಿಯವರಿಗೆ ಆಶ್ಚರ್ಯವಾಗುತ್ತದೆ. ಕಿರಿಯ ಶ್ರೋತ್ರಿ ಅಥವಾ ಬಹಳ ವರ್ಷಗಳ ಹಿಂದೆ ತನ್ನ ಅಮ್ಮನಿಂದ ಚೀನಿ ಎಂದು ಕರೆಸಿಕೊಳ್ಳುತ್ತಿದ್ದ ಮೊಮ್ಮಗ ಬಂದು ತನ್ನ ತಾಯಿಯ ಗಂಟಲಲ್ಲಿ ಸ್ವಲ್ಪ ನೀರು ಬಿಡಲು ಪ್ರಯತ್ನಿಸುತ್ತಿದ್ದಂತೆ ಅವಳು ಕೂಡ ತೀರಿಕೊಳ್ಳುತ್ತಾಳೆ. ರತ್ನೆ ಶ್ರೀಲಂಕಾಕ್ಕೆ ಮರಳಲು ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾಳೆ. ಶ್ರೀನಿವಾಸ ಶ್ರೋತ್ರಿಗಳು ಅಂತಿಮವಾಗಿ ತಮ್ಮ ಸಂನ್ಯಾಸಕ್ಕೆ ಹೊರಡುತ್ತಾರೆ. ಅವನ ಮೊದಲ ಕರ್ತವ್ಯವೆಂದರೆ ತನ್ನ ತಾಯಿಯ ಶ್ರಾದ್ಧ ಕರ್ಮಗಳನ್ನು ಮಾಡುವುದು ಎಂದು ತಮ್ಮ ಮೊಮ್ಮಗನಿಗೆ ಹೇಳಿ ಹೊರಡುತ್ತಾರೆ.

ಪಾತ್ರವರ್ಗ[ಬದಲಾಯಿಸಿ]

ಶ್ರೀನಿವಾಸ ಶ್ರೋತ್ರಿ ಪಾತ್ರದಲ್ಲಿ ವೆಂಕಟರಾವ್ ತಲಗೇರಿ

ಕಾತ್ಯಾಯಿನಿ ಪಾತ್ರದಲ್ಲಿ ಎಲ್. ವಿ. ಶಾರದಾ

ಪ್ರೊ.ಸದಾಶಿವ ರಾವ್ ಆಗಿ ಬಿ.ವಿ.ಕಾರಂತ್

ರಾಜಾ ರಾವ್ ಪಾತ್ರದಲ್ಲಿ ಗಿರೀಶ್ ಕಾರ್ನಾಡ್

ವಿಶಾಲಂ

ಗೋದಾ ರಾಮ್‌ಕುಮಾರ್

ಲಕ್ಷ್ಮಿಯಾಗಿ ಉಮಾ ಶಿವಕುಮಾರ್

ಶಾಂತ

ಚೀನಿಯಾಗಿ ಚಂದ್ರಶೇಖರ್

ವಿಷ್ಣುವರ್ಧನ್ ("ಸಂಪತ್ ಕುಮಾರ್" ಎಂದು )

ಸಂಗೀತ[ಬದಲಾಯಿಸಿ]

ಚಿತ್ರದಲ್ಲಿ ಕೇವಲ ಒಂದು ಹಾಡಿದ್ದು, ಬಿ. ವಿ. ಕಾರಂತ್ ರಚಿಸಿರುವ "ಮುಗಿಲಾ ತುಂಬಾ ಬೇರಾ ಬೀಳಲಾ" ಹಾಡಿಗೆ ಭಾಸ್ಕರ್ ಚಂದಾವರ್ಕರ್ ಸಂಗೀತ ಸಂಯೋಜಿಸಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

19 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

- ಅತ್ಯುತ್ತಮ ಕನ್ನಡ ಚಿತ್ರ

- ಅತ್ಯುತ್ತಮ ನಿರ್ದೇಶನ - ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್

1971–72 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

ಅತ್ಯುತ್ತಮ ಚಿತ್ರ

ಅತ್ಯುತ್ತಮ ನಟ - ವೆಂಕಟರಾವ್ ತಲಿಗೇರಿ

ಅತ್ಯುತ್ತಮ ನಟಿ - ಎಲ್. ವಿ. ಶಾರದಾ

ಅತ್ಯುತ್ತಮ ಕಥೆಗಾರ - ಎಸ್. ಎಲ್. ಭೈರಪ್ಪ

ಅತ್ಯುತ್ತಮ ಸಂಭಾಷಣೆ ಬರಹಗಾರ - ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್

ಅತ್ಯುತ್ತಮ ಸಂಪಾದನೆ - ಅರುಣಾ ದೇಸಾಯಿ

20 ನೇ ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳು

ಅತ್ಯುತ್ತಮ ಚಿತ್ರ - ಕನ್ನಡ

ಅತ್ಯುತ್ತಮ ನಿರ್ದೇಶಕ - ಕನ್ನಡ - ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ್

ಅತ್ಯುತ್ತಮ ನಟ - ಕನ್ನಡ - ವೆಂಕಟರಾವ್ ತಲಗೇರಿ

ಟಿಪ್ಪಣಿಗಳು[ಬದಲಾಯಿಸಿ]

  1. Shampa Banerjee, Anil Srivastava (1988), p65
  2. "Born winner". Frontline. January 2010. Retrieved 27 October 2013.
  3. Yap, Desmond (2013-06-26). "Actor Uma Shivakumar passes away". The Hindu. Retrieved 2013-07-10.

ಉಲ್ಲೇಖಗಳು[ಬದಲಾಯಿಸಿ]

  • Shampa Banerjee, Anil Srivastava (1988) [1988]. One Hundred Indian Feature Films: An Annotated Filmography. Taylor & Francis. ISBN 0-8240-9483-2.

ಹೊರಗಿನ ಕೊಂಡಿಗಳು[ಬದಲಾಯಿಸಿ]