ಎಲ್.ವಿ.ಶಾರದಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲ್.ವಿ.ಶಾರದಾ
ಜನನ
ಬೆಂಗಳೂರು, ಮೈಸೂರು ರಾಜ್ಯ, ಭಾರತ
ಉದ್ಯೋಗನಟಿ, ಸಾಕ್ಷ್ಯಚಿತ್ರ ನಿರ್ದೇಶಕಿ
ಸಕ್ರಿಯ ವರ್ಷಗಳು೧೯೭೧-೧೯೯೦

ಎಲ್.ವಿ.ಶಾರದಾ ಭಾರತೀಯ ಚಿತ್ರರಂಗ ಕಂಡ ಮೇರು ಕಲಾವಿದೆ. ಸಾರ್ವಕಾಲಿಕ ಶ್ರೇಷ್ಠ ಕನ್ನಡ ಚಿತ್ರಗಳಾದ ವಂಶವೃಕ್ಷ(೧೯೭೧) ಮತ್ತು ಫಣಿಯಮ್ಮ(೧೯೮೩)ಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಮನ್ನಣೆ ಗಳಿಸಿದ ಮೇರು ಕಲಾವಿದೆ. ಕಣ್ಣುಗಳಲ್ಲೆ ಭಾವನೆಗಳನ್ನು ಅಭಿವ್ಯಕ್ತಿಸುವ ಅಪರೂಪದ ಅಭಿನೇತ್ರಿ ಎಲ್.ವಿ.ಶಾರದಾ. ವ್ಯಾಪಾರಿ ಚಿತ್ರಗಳ ಸೆಳಕಿಗೆ ಒಳಗಾಗದೇ ನಟನೆಗೇ ಪ್ರಾಮುಖ್ಯತೆ ಕೊಡುವ, ಪ್ರತಿಭಾ ಪ್ರದರ್ಶನ ಮತ್ತು ಅಭಿವ್ಯಕ್ತಿಗೆ ವಿಪುಲ ಅವಕಾಶವಿರುವ ಕಲಾತ್ಮಕ ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಂಡ ವಿರಳ ನಟಿ[೧][೨].

ಆರಂಭಿಕ ಜೀವನ[ಬದಲಾಯಿಸಿ]

ಎಲ್.ಎಸ್.ವೆಂಕೋಜಿ ರಾವ್ ಮತ್ತು ಸರಸ್ವತಿ ಬಾಯಿ ದಂಪತಿಯ ನಾಲ್ವರು ಮಕ್ಕಳಲ್ಲಿ ಶಾರದಾ ಮೂರನೆಯವರು. ತಂದೆ ಎಲ್.ಎಸ್.ವೆಂಕೋಜಿ ರಾವ್ ಅವರು ಕರ್ನಾಟಕದ ರಾಜಕಾರಣ ಕಂಡ ಅಪರೂಪದ ರಾಜಕಾರಣಿ. ಕರ್ನಾಟಕಕ್ಕೆ ಷೇರು ಮಾರುಕಟ್ಟೆಯನ್ನು ಪರಿಚಯಿಸಿದ ಇವರು ಬೆಂಗಳೂರಿನ ಸ್ಟಾಕ್ ಎಕ್ಸ್ಚೇಂಜ್ ಸಂಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ವೆಂಕೋಜಿ ರಾಯರಿಗೆ ಸಾಹಿತ್ಯ, ಸಂಗೀತ, ನೃತ್ಯ, ಕಲೆ, ಸಿನೆಮಾದಲ್ಲಿ ಬಹಳ ಆಸಕ್ತಿ ಮತ್ತು ಸ್ವತಃ ಕಲಾವಿದರೂ ಆಗಿದ್ದರು. ತಂದೆಯ ಪ್ರೇರಣೆಯಿಂದ ಬಾಲ್ಯದಿಂದಲೂ ಸಾಹಿತ್ಯ ಮತ್ತು ಸಂಗೀತದೆಡೆಗೆ ಒಲವು ಹೊಂದಿದ್ದ ಶಾರದಾ ರಂಗಭೂಮಿಯತ್ತ ಆಸಕ್ತಿ ಹೊಂದಿದ್ದರು. ಬಿ.ವಿ.ಕಾರಂತರ ನಾಟಕಗಳಲ್ಲಿ ಅಭಿನಯಿಸಬೇಕೆಂಬ ತೀವ್ರ ಹಂಬಲವಿದ್ದ ಶಾರದಾ ಕಾರಂತರಲ್ಲಿ ಒಂದು ಪಾತ್ರ ಕೊಡುವಂತೆ ಕೇಳಿಕೊಂಡಿದ್ದರು. ಕಾರಂತರಿಗೆ, ಶಾರದಾ ವಂಶವೃಕ್ಷದ ಕಾತ್ಯಾಯಿನಿ ಪಾತ್ರಕ್ಕೆ ಸೂಕ್ತರೆನಿಸಿದರು. ಶಾರದಾರನ್ನು ಕೇಳಿದಾಗ ತಂದೆಯ ಒಪ್ಪಿಗೆ ಕೇಳಬೇಕು ಎಂದಿದ್ದರಿಂದ ಬಿ.ವಿ. ಕಾರಂತರು ಮತ್ತು ಗಿರೀಶ್ ಕಾರ್ನಾಡ್ ಒಟ್ಟಾಗಿ ವೆಂಕೋಜಿ ರಾವ್ ಅವರ ಮನೆ ಕದ ತಟ್ಟಿದರು. ವಂಶವೃಕ್ಷ ಕಾದಂಬರಿಯನ್ನು ಮೊದಲೇ ಓದಿಕೊಂಡಿದ್ದ ರಾಯರು ಕಾತ್ಯಾಯಿನಿಯಂತಹ ಸಂಕೀರ್ಣ ಪಾತ್ರವನ್ನು ತಮ್ಮ ಮಗಳು ನಿರ್ವಹಿಸುವುದಕ್ಕೆ ಒಪ್ಪಿಗೆ ನೀಡಲಿಲ್ಲ. ಆದರೆ ಗಿರೀಶ್ ಕಾರ್ನಾಡ್ರು ತಮ್ಮ ಮಾತಿನ ಚಮತ್ಕಾರದಿಂದ ವೆಂಕೋಜಿ ರಾಯರನ್ನು ಒಪ್ಪಿಸಿದರು. ಶಾರದಾ ಮೊದಲ ಬಾರಿಗೆ ವಂಶವೃಕ್ಷ ಚಿತ್ರಕ್ಕಾಗಿ ಬಣ್ಣ ಹಚ್ಚಿದರು[೧][೨].

ವೃತ್ತಿ ಜೀವನ[ಬದಲಾಯಿಸಿ]

ನಟಿಯಾಗಿ[ಬದಲಾಯಿಸಿ]

ಶಾರದಾ ವೃತ್ತಿ ಜೀವನದ ಮಹೋನ್ನತ ಚಿತ್ರಗಳೆಂದರೆ ವಂಶವೃಕ್ಷ(೧೯೭೧) ಮತ್ತು ಫಣಿಯಮ್ಮ(೧೯೮೩). ವಿಧವೆಯ ಜೀವನದ ಕುರಿತಾಗಿದ್ದರೂ ವಿಭಿನ್ನ ಕಥಾ ಹಂದರವನ್ನು ಹೊಂದಿದ್ದ ಈ ಎರಡು ಚಿತ್ರಗಳಲ್ಲಿ ಪ್ರಭಾವಶಾಲಿ ಅಭಿನಯ ನೀಡಿ ಪಾತ್ರಗಳನ್ನು ಜೀವಂತವಾಗಿಸಿದ್ದಾರೆ. ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರದಲ್ಲಿ ವೈಧವ್ಯವನ್ನು ಒಪ್ಪಿಕೊಂಡು ಹೊಸ ಸಾಧ್ಯತೆಗಳತ್ತ ಚಿಂತನೆ ನಡೆಸುವ ಕಾತ್ಯಾಯಿನಿಯಾಗಿ ಅಭಿನಯಿಸಿದ ಕ್ರಮ ಅವಿಸ್ಮರಣೀಯ. ವಿಧವೆಯಾಗಿದ್ದಾರೆಂದರೆ ಮಡಿ ಮಾಡಿ, ಜಪಸರ ಹಿಡಿದು ಕೂರುವಂತಹ ಕಾಲಘಟ್ಟದಲ್ಲಿ, ಸಂಪ್ರದಾಯವಾದಿ ಮನೆಯಲ್ಲಿದ್ದೂ ಕಾಲೇಜಿಗೆ ಹೋಗುವುದಷ್ಟೇ ಅಲ್ಲದೇ ಹೊಸ ಜೀವನ ಕಟ್ಟಿಗೊಳ್ಳುವ ಸಲುವಾಗಿ ವಿಧವಾ ವಿವಾಹವಾಗುವ ಕ್ರಾಂತಿಕಾರಿ ಪಾತ್ರವನ್ನು ಸಶಕ್ತವಾಗಿ ನಿರ್ವಹಿಸಿದ್ದರು. ಈ ಪಾತ್ರ ಅಪಾರ ಮೆಚ್ಚುಗೆ ಗಳಿಸಿದ್ದಲ್ಲದೇ ಕರ್ನಾಟಕ ಸರ್ಕಾರ ಕೊಡಮಾಡುವ ಶ್ರೇಷ್ಠ ನಟಿ ರಾಜ್ಯಪ್ರಶಸ್ತಿಯನ್ನೂ ತಂದುಕೊಟ್ಟಿತು.

ಎಂ.ಕೆ.ಇಂದಿರಾ ಅವರ ಕಾದಂಬರಿ ಆಧರಿಸಿದ, ಪ್ರೇಮಾ ಕಾರಂತ್ ನಿರ್ದೇಶನದ ಫಣಿಯಮ್ಮ ಚಿತ್ರದಲ್ಲಿ ವಿಧವೆಯಾಗಿ ತಲೆ ಬೋಳಿಸಿಕೊಂಡು, ಕೈಯಲ್ಲಿ ಜಪಸರ ಹಿಡಿದು ಕಣ್ಣೀರಿನಲ್ಲೇ ಜೀವನ ಸಾಗಿಸಿದ ೭೦ ವರ್ಷದ ಫಣಿಯಮ್ಮನ ಅಂತರಂಗವನ್ನು ಶಾರದಾ ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ. ತಾನು ಸಮಾಜದ ಕಟ್ಟುಪಾಡುಗಳಿಗೆ ಒಳಗಾಗಿ ಬದುಕಿದರೂ, ವಿಧವೆಯಾಗಿದ್ದರೂ ಮೈದುನನಿಂದಲೇ ಗರ್ಭಿಣಿಯಾಗುವ ಇನ್ನೋರ್ವ ವಿಧವೆಯ ಪರವಾಗಿ ನಿಲ್ಲುವ ಮೂಲಕ ನವಿರಾಗಿ ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಪಾತ್ರವನ್ನು ಹೃದಯಸ್ಪರ್ಶಿಯಾಗಿ ನಿರ್ವಹಿಸಿದ್ದಾರೆ. ತುಂಬಾ ಕಡಿಮೆ ಸಂಭಾಷಣೆಗಳಿದ್ದ ಈ ಚಿತ್ರದಲ್ಲಿ ವಿಧವೆಯ ನೋವು-ನಲಿವುಗಳನ್ನು ತಮ್ಮ ಕಣ್ಣುಗಳಿಂದಲೇ ಅದ್ಭುತವಾಗಿ ಅಭಿವ್ಯಕ್ತಿಸಿದ್ದರು. ಈ ಪಾತ್ರಕ್ಕಾಗಿ ಶಾರದಾ ತಲೆಕೂದಲನ್ನು ತೆಗೆಸಿಕೊಂಡಿದ್ದು ದೊಡ್ದ ಸುದ್ದಿಯಾಗಿತ್ತು[೩].

ಮೊದಲ ಚಿತ್ರಕ್ಕೆ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ ಬಂದದ್ದರಿಂದ ಗುಣಮಟ್ಟದ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳಬೇಕೆಂದು ಶಾರದಾ ನಿರ್ಧರಿಸಿದ್ದರು. ಇದೇ ವೇಳೆಯಲ್ಲಿ ಎರಡು ಕನಸು(೧೯೭೪) ಚಿತ್ರದಲ್ಲಿ ಕಲ್ಪನಾ ಅಭಿನಯಿಸಿದ ಪಾತ್ರಕ್ಕೆ ಅವಕಾಶ ಬಂದಿತ್ತು. ಎರಡು ದಿನ ಯೋಚಿಸಿ ವ್ಯಾಪಾರಿ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲವೆಂದು ನಿರ್ಧರಿಸಿದ ಶಾರದಾ ಆ ಪಾತ್ರವನ್ನು ತಿರಸ್ಕರಿಸಿದ್ದರು. ವ್ಯಾಪಾರಿ ಚಿತ್ರಗಳ ಹಿನ್ನೆಲೆಯಿಂದ ಬಂದಿದ್ದರೂ ಸಿದ್ದಲಿಂಗಯ್ಯ ಪಾತ್ರಗಳ ತುಮುಲವನ್ನು ಸೂಕ್ಷ್ಮವಾಗಿ ಹಿಡಿಯಬಲ್ಲವರಾಗಿದ್ದರಿಂದ ಬೂತಯ್ಯನ ಮಗ ಅಯ್ಯು(೧೯೭೪) ಚಿತ್ರದಲ್ಲಿ ಅಭಿನಯಿಸಿದ ಶಾರದಾ ಅಯ್ಯುವಿನ ಹೆಂಡತಿಯ ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಸಿದ್ದಲಿಂಗಯ್ಯನವರ ಹೇಮಾವತಿ(೧೯೭೭) ಚಿತ್ರದಲ್ಲೂ ಚಿಕ್ಕ ಪಾತ್ರವನ್ನು ಪರಿಣಾಮಕಾರಿಯಾಗಿ ಶಾರದಾ ನಿರ್ವಹಿಸಿದ್ದರು. ಪ್ರೇಮಾ ಕಾರಂತಒಂದು ಪ್ರೇಮದ ಕಥೆ(೧೯೭೭) ಚಿತ್ರವನ್ನು ಇಷ್ಟ ಪಟ್ಟು ರಜನೀಕಾಂತ್ ಅವರೊಂದಿಗೆ ಅಭಿನಯಿಸಿದ್ದರು[೧].

ಶಾರದಾ ಅವರ ವೃತ್ತಿಜೀವನದ ಸವಾಲಿನ ಪಾತ್ರವೆಂದರೆ ಜಿ.ವಿ.ಅಯ್ಯರ್ ನಿರ್ದೇಶನದ ಕುದುರೆ ಮೊಟ್ಟೆ(೧೯೭೭). ಕಾಮರೂಪಿಯವರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಬಾಲ್ಯದಲ್ಲೇ ಗಂಡನನ್ನು ಕಳೆದುಕೊಂಡ ಲಕ್ಷ್ಮಿದೇವಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಶಾರದಾ ಅವರ ಇನ್ನಿತರ ಪ್ರಮುಖ ಚಿತ್ರಗಳೆಂದರೆ ಮೈತ್ರಿ(೧೯೭೮), ವಾತ್ಸಲ್ಯ ಪಥ(೧೯೮೦) ಮತ್ತು ನಕ್ಕಳಾ ರಾಜಕುಮಾರಿ(೧೯೯೦). ಸದಾ ಸಮಾಜದ ಕಟ್ಟುಪಾಡುಗಳನ್ನು ಸಡಿಲಿಸುವ ಕಥಾಪಾತ್ರಗಳಲ್ಲಿ ಅಭಿನಯಿಸಿದ ಶಾರದಾ ೧೯೮೦ರ ದಶಕದ ನಂತರದಲ್ಲಿ ಹೊಸ ಅಲೆಯ ಚಿತ್ರಗಳು ಕಡಿಮೆಯಾದ್ದರಿಂದ ಅಭಿನಯದಿಂದ ದೂರ ಉಳಿದಿದ್ದಾರೆ.[೩]

ಶಾರದಾ ಕಿರುತೆರೆಯ ಶ್ರುತಿ ಎನ್ನುವ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ[೨].

ಸಾಕ್ಷ್ಯಚಿತ್ರಗಳ ನಿರ್ದೇಶನ[ಬದಲಾಯಿಸಿ]

ಸಿನೆಮಾ, ಧಾರಾವಾಹಿಗಳಲ್ಲಿ ಅಭಿನಯಿಸುವುದನ್ನು ಬಿಟ್ಟ ನಂತರ ತಮ್ಮ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಲು ಆರಂಭಿಸಿದ ಶಾರದಾ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜರಾದ ನಿಟ್ಟೂರು ಶ್ರೀನಿವಾಸ ರಾವ್, ಮಾ. ಹಿರಣ್ಣಯ್ಯ, ಶಿವಮೊಗ್ಗ ಸುಬ್ಬಣ್ಣ ಮುಂತಾದವರ ಬಗ್ಗೆ ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರಗಳು ಒಳನೋಟಗಳಿಂದ ಗಮನ ಸೆಳೆಯುವಂತಿವೆ. ಬೆಂಗಳೂರಿನ ಕೆರೆಗಳ ನಾಶದ ದುಷ್ಪರಿಣಾಮದ ಮೆಲೆ ಬೆಳಕು ಚೆಲ್ಲುವ ‘ಕೆರೆ ಹಾಡು’ ಸಾಕ್ಷ್ಯಚಿತ್ರ ಇಂದಿಗೆ ಇನ್ನಷ್ಟು ಪ್ರಸ್ತುತವಾಗಿದೆ[೧][೨].

ವೈಯಕ್ತಿಕ ಜೀವನ[ಬದಲಾಯಿಸಿ]

ಬೆಂಗಳೂರಿನ ಜಯನಗರದ ನಾಲ್ಕನೇ ಬಡಾವಣೆಯಲ್ಲಿ ವಾಸವಾಗಿರುವ ಅವಿವಾಹಿತ ಶಾರದಾ ಕ್ಯಾನ್ಸರ್ನಂತಹ ಕಾಯಿಲೆಯಿದ್ದರೂ ಧೈರ್ಯದಿಂದ ಎದುರಿಸಿ ಸದಾ ತಮ್ಮನ್ನು ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡು ಉತ್ಸಾಹದಿಂದ ಜೀವಿಸುತ್ತಿದ್ದಾರೆ[೨].

ಪ್ರಶಸ್ತಿ/ಪುರಸ್ಕಾರ[ಬದಲಾಯಿಸಿ]

  • ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿ - ವಂಶವೃಕ್ಷ(೧೯೭೨)
  • ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ - ವಾತ್ಸಲ್ಯ ಪಥ(೧೯೮೧)

ಎಲ್.ವಿ.ಶಾರದಾ ಅಭಿನಯದ ಚಿತ್ರಗಳು[ಬದಲಾಯಿಸಿ]

  • ವಂಶವೃಕ್ಷ (೧೯೭೨)
  • ಬೂತಯ್ಯನ ಮಗ ಅಯ್ಯು (೧೯೭೪)
  • ಒಂದು ಪ್ರೇಮದ ಕಥೆ (೧೯೭೭)
  • ಹೇಮಾವತಿ (೧೯೭೭)
  • ಕುದುರೆ ಮೊಟ್ಟೆ (೧೯೭೭)
  • ಮೈತ್ರಿ (೧೯೭೮)
  • ವಾತ್ಸಲ್ಯ ಪಥ (೧೯೮೦)
  • ಫಣಿಯಮ್ಮ (೧೯೮೩)
  • ಆದಿ ಶಂಕರಾಚಾರ್ಯ (೧೯೮೩)
  • ಮಧ್ವಾಚಾರ್ಯ (೧೯೮೬)
  • ರಾಮಾನುಜಾಚಾರ್ಯ (೧೯೮೯)
  • ನಕ್ಕಳಾ ರಾಜಕುಮಾರಿ (೧೯೯೦).

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ "ಕನ್ನಡ ಚಿತ್ರರಂಗಕ್ಕೊಬ್ಬರೇ ಶಾರದಾ". ಪ್ರಜಾವಾಣಿ.[ಶಾಶ್ವತವಾಗಿ ಮಡಿದ ಕೊಂಡಿ]
  2. ೨.೦ ೨.೧ ೨.೨ ೨.೩ ೨.೪ "ಫಣಿಯಮ್ಮ ಏನಾದರು ?". ಸಾಂಗತ್ಯ.
  3. ೩.೦ ೩.೧ "ಶಾರದೆಯ ಶಕ್ತಿ ಕಣ್ಣುಗಳಲ್ಲಿ ಅಭಿವ್ಯಕ್ತಿ". ವಿಜಯವಾಣಿ.