ಗುಬ್ಬಿ ವೀರಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಬ್ಬಿ ವೀರಣ್ಣ

ಗುಬ್ಬಿ ವೀರಣ್ಣ ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳೊಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿ ಹಾಗು ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಹಾಗು ಕನ್ನಡ ರಂಗಭೂಮಿಯನ್ನು ಸಲುಹಿದ ಕರ್ಮಜೀವಿ. ಒಂದು ಕಾಲದಲ್ಲಿ ಮೆನೆಮಾತಾಗಿದ್ದ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ರಂಗಭೂಮಿಯ ಎಳಿಗೆಗಾಗಿ ನಿರಂತರವಾಗಿ ದುಡಿದವರು.

ಜೀವನ[ಬದಲಾಯಿಸಿ]

೧೮೯೦ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದಲ್ಲಿ(ಈಗ ತಾಲೂಕು ಕೇಂದ್ರ) ವೀರಣ್ಣನವರು ರುದ್ರಾಂಬೆ ಹಾಗು ಹಂಪಣ್ಣ ದಂಪತಿಗಳ ಮೂರನೆ ಮಗುವಾಗಿ ಜನಿಸಿದರು. ತಮ್ಮ ೬ನೆ ವಯಸ್ಸಿನಲ್ಲಿಯೆ(೧೮೯೬) ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಬಾಲ ಕಲಾವಿದನಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ವೀರಣ್ಣ, ಕೆಲ ವರ್ಷಗಳ ನಂತರ ಸ್ತ್ರೀ ಪಾತ್ರಕ್ಕೆ ಬಡ್ತಿ ಪಡೆದರು. ಯೌವ್ವನಾವಸ್ಠೆ ತಲುಪುತಿದ್ದಂತೆ ಧ್ವನಿ ಬದಲಾದ ಕಾರಣ ವೀರಣ್ಣನವರು ಸ್ತ್ರೀ ಪಾತ್ರಗಳನ್ನು ತ್ಯಜಿಸಿ ಕೆವಲ ಗಂಡು ಪಾತ್ರಗಳನ್ನು ಮಾತ್ರ ಹಾಕತೊಡಗಿದರು. ಅಂದಿನ ರಂಗಭೂಮಿಯ ನಟರಿಗೆ ಅಗತ್ಯ ಕಲೆಗಳಾದ ಹಾಡುಗಾರಿಕೆ, ತಬಲಾ, ಪಿಟೀಲು, ಇತ್ಯಾದಿಗಳನ್ನು ಕೂಡ ವೀರಣ್ಣ ಕಲಿತರು. ಹಾಸ್ಯ ಪಾತ್ರಗಳಲ್ಲಿ ಮಿಂಚುತಿದ್ದ ವೀರಣ್ಣನವರನ್ನು ೧೯೧೨ರಲ್ಲಿ ಮೈಸೂರಿನ ಜನತೆ ಚಿನ್ನದ ಪದಕವನ್ನಿತ್ತು ಗೌರವಿಸಿತು. ದಕ್ಷಿಣ ಭಾರತದ ಹಲವಾರು ನಗರಗಳ ಪ್ರವಾಸ ಮಾಡಿ ಯಶಸ್ವಿ ಪ್ರದರ್ಶನಗಳನು ನೀಡುತ್ತ ಪ್ರಸಿದ್ದಿಗೆ ಬಂದರು ವೀರಣ್ಣ. ೧೯೨೧ರಲ್ಲಿ ಬೆಂಗಳೂರಿನಲ್ಲಿ ಕನ್ನಡ ನಾಟಕಗಳ ಪಿತಾಮಹ ಎಂದು ನಾಮಾಂಕಿತರಾಗಿದ್ದ ಟಿ.ಪಿ.ಕೈಲಾಸಂ ವೀರಣ್ಣನವರ ಪ್ರದರ್ಶನ ಮೆಚ್ಚಿ ಕೈಗಡಿಯಾರವನ್ನು ನೀಡಿ ಸನ್ಮಾನಿಸಿದರು. ೧೯೨೩ರಲ್ಲಿ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವೀರಣ್ಣನವರ ನಾಟಕಗಳನ್ನು ನೋಡಿ ಹಾಗು ಅವರ ಆಭಿನಯ ಮೆಚ್ಚಿ 'ವರ್ಸಟೈಲ್ ಕಮೇಡಿಯನ್' ಎಂಬ ಬಿರುದು ನೀಡಿ ಸನ್ಮಾನಿಸಿದರು. ಮುಂದಿನ ಪೀಳಿಗೆ ರಂಗಕಲೆಯನ್ನು ಇನ್ನು ಎತ್ತರಕ್ಕೆ ಕೊಂಡೋಯ್ಯಲಿ ಎಂಬ ಆಸೆ ಹೊತ್ತ ವೀರಣ್ಣನವರು ೧೯೨೫ರಲ್ಲಿ ೧೪ ವರ್ಷದೊಳಗಿನ ಹುಡುಗರಿಗೆ ನಾಟಕ ತರಬೇತಿ ನೀಡಿ 'ಬಾಲಕ ವಿವರ್ಧಿನಿ' ಎಂಬ ಸಂಘ ಸ್ಥಾಪಿಸಿದರು. ೧೯೨೬ರಲ್ಲಿ, ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಾಟಕದಲ್ಲಿ ವಿದ್ಯುತ್ ದೀಪ ಬಳಸಿದ ಕೀರ್ತಿ ವೀರಣ್ಣನವರಿಗೆ ಸಂದಾಯವಾಗುತ್ತದೆ. ೧೯೨೬ರಲ್ಲಿ ಖ್ಯಾತ ಲೇಖಕ ದೇವುಡು ನರಸಿಂಹ ಶಾಸ್ತ್ರಿಯವರ ಸಹಕಾರದೊಂದಿಗೆ 'ಹರಿಮಯ', 'ಹಿಸ್ ಲವ್ ಅಫೈರ್' ಮತ್ತು 'ಕಳ್ಳರ ಕೂಟ' ಎಂಬ ಮೂರು ಚಲನ ಚಿತ್ರಗಳನ್ನು ವೀರಣ್ಣ ನಿರ್ಮಿಸಿದರು. ವೀರಣ್ಣ ೧೯೩೪ರ ಡಿಸೆಂಬರ್ ೩೧ರೊಂದು ಬೆಂಗಳೂರಿನಲ್ಲಿ "ಕುರುಕ್ಷೇತ್ರ" ಎಂಬ ಅಭೂತಪೂರ್ವ ನಾಟಕ ಪ್ರದರ್ಶಿಸಿದರು. ವೈಭವಪೇರಿತ ಈ ನಾಟಕದಲ್ಲಿ ಜೀವಂತ ಆನೆ ಕುದುರೆಗಳನ್ನು ಬಳಸಲಾಗಿತ್ತು. ಆಗಿನಕಾಲದಲ್ಲಿ ಈ ನಾಟಕ ಬಹಳ ಜನಪ್ರಿಯವಾಗಿತ್ತು. ೧೯೩೫ರಲ್ಲಿ ವೀರಣ್ಣನವರು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ 'ಸಾಗರ್ ಟಾಕೀಸ್' ಎಂಬ ಚಿತ್ರಮಂದಿರ ಸ್ಥಾಪಿಸಿದರು. ಹೀಗೆ ರಂಗಭೂಮಿ ಹಾಗು ಚಿತ್ರರಂಗಕ್ಕೆ ಕಾಣಿಕೆ ನೀಡುತ್ತಾ ಬಂದಿದ್ದ ವೀರಣ್ಣನವರಿಗೆ ೧೯೪೨ರ ಮೈಸೂರು ದಸರಾ ಉತ್ಸವದಲ್ಲಿ ಮಹಾರಾಜರಾದ ಜಯಚಾಮರಾಜ ಒಡೆಯರ್ 'ನಾಟಕ ರತ್ನ' ಎಂಬ ಬಿರುದು ನೀಡಿ ಸನ್ಮಾನಿಸಿದರು. ೧೯೪೩ರಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿ ವೀರಣ್ಣನವರು 'ಗುಬ್ಬಿ ಥಿಯೆಟರ್' ಎಂಬ ರಂಗಮಂದಿರ ಪ್ರಾರಂಭಿಸಿದರು. ತಮ್ಮ ಸುಕೃತ್ಯಗಳಿಂದಾಗಿ ವೀರಣ್ಣನವರು ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಯನ್ನು(೧೯೫೫) ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು(೧೯೭೨) ಕೂಡಾ ಪಡೆದರು. ಕನ್ನಡ ರಂಗಭೂಮಿಗೆ ಅಪೂರ್ವ ಕಾಣಿಕೆಯಿತ್ತ ಗುಬ್ಬಿ ವೀರಣ್ಣನವರು ಅಕ್ಟೊಬರ್ ೧೮ ೧೯೭೨ರೊಂದು ತಮ್ಮ ಕೊನೆಯುಸಿರೆಳೆದರು.ಪ್ರಸಿದ್ದ ನಟಿ ಬಿ.ಜಯಮ್ಮನವರು ಗುಬ್ಬಿ ವೀರಣ್ಣನವರ ಪತ್ನಿಯಾಗಿದ್ದರು."ನಮನ"


ವೀರಣ್ಣನವರು ನಿರ್ಮಿಸಿದ/ಅಭಿನಯಿಸಿದ ಕೆಲವು ನಾಟಕಗಳು ಹಾಗು ಚಿತ್ರಗಳು[ಬದಲಾಯಿಸಿ]

ನಾಟಕಗಳು[ಬದಲಾಯಿಸಿ]

  • ಸದಾರಮೆ
  • ಕುರುಕ್ಷೇತ್ರ
  • ಜೀವನ ನಾಟಕ
  • ದಶಾವತಾರ
  • ಪ್ರಭಾಮಣಿ ವಿಜಯ
  • ಕಬೀರ್
  • ಗುಲೇಬಕಾವಲಿ
  • ಅಣ್ಣ ತಮ್ಮ
  • ಲವ ಕುಶ

ಚಿತ್ರಗಳು[ಬದಲಾಯಿಸಿ]

ಪ್ರಶಸ್ತಿಗಳು[ಬದಲಾಯಿಸಿ]