ವಿಷಯಕ್ಕೆ ಹೋಗು

ಗುಬ್ಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಬ್ಬಿ
ಪಟ್ಟಣ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆತುಮಕೂರು
Talukasಗುಬ್ಬಿ
Population
 (೨೦೧೧)
 • Total೧೮೪೪೬
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (ಐಎಸ್‌ಟಿ)
PIN
572216
Telephone code91-(0)8131
ಹತ್ತಿರದ ನಗರತುಮಕೂರು
ಲೋಕ ಸಭೆ ಕ್ಷೇತ್ರತುಮಕೂರು
ವಿಧಾನ ಸಭೆ ಕ್ಷೇತ್ರಗುಬ್ಬಿ
ಜಾಲತಾಣwww.gubbitown.gov.in

ಗುಬ್ಬಿ ಸ್ಥಳವು, ತುಮಕೂರು ಜಿಲ್ಲೆಯ ಒಂದು ಪ್ರತಿಷ್ಠಿತ ತಾಲೂಕು ಕೇಂದ್ರ. ತುಮಕೂರು ನಗರದಿಂದ ಬೆಂಗಳೂರು-ಹೊನ್ನಾವರ (ಶಿವಮೊಗ್ಗ) ಹೋಗುವ ಬಿ.ಹೆಚ್.ರಸ್ತೆ ಯಲ್ಲಿ ಸುಮಾರು ಇಪ್ಪತ್ತು (೨೦) ಕಿಲೋಮೀಟರುಗಳ ದೂರದಲ್ಲಿದೆ. ಕುಂಚಿಟಿಗ ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಈ ಪಟ್ಟಣವು ಕಲೆ, ಸಾಹಿತ್ಯ, ಸಾಂಸ್ಕೃತಿಕ, ನಾಟಕ ರಂಗಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ಕೊಟ್ಟಿದೆ.

ತಾಲೂಕು

[ಬದಲಾಯಿಸಿ]

ಭೌಗೋಳಿಕ ಸ್ಥಾನ

[ಬದಲಾಯಿಸಿ]

ತುಮಕೂರು ಉಪವಿಭಾಗದಲ್ಲಿರುವ ಗುಬ್ಬಿ ತಾಲ್ಲೂಕಿನ ಉತ್ತರದಲ್ಲಿ ಶಿರಾ ತಾಲ್ಲೂಕು. ಪೂರ್ವದಲ್ಲಿ ತುಮಕೂರು ತಾಲ್ಲೂಕು, ದಕ್ಷಿಣದಲ್ಲಿ ಕುಣಿಗಲ್ ತಾಲ್ಲೂಕು ಮತ್ತು ಪಶ್ಚಿಮದಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು ಮತ್ತು ತುರುವೇಕೆರೆ ತಾಲ್ಲೂಕುಗಳು ಇವೆ.

ವಿಸ್ತೀರ್ಣ ಮತ್ತು ಜನಸಂಖ್ಯೆ

[ಬದಲಾಯಿಸಿ]

ತಾಲ್ಲೂಕಿನ ವಿಸ್ತೀರ್ಣ 475.1 ಚ.ಮೈ ಜನಸಂಖ್ಯೆ ೨,೬೨,೫೧೮ (೨೦೧೧).[] ಈ ಪಟ್ಟಣದ ಜನಸಂಖ್ಯೆ ೧೮,೪೪೬ (೨೦೧೧)[] ಗುಬ್ಬಿ ತಾಲ್ಲೂಕಿನಲ್ಲಿ ಗುಬ್ಬಿ, ಚಂದ್ರಶೇಖರಪುರ, ಚೇಳೂರು, ಹಾಗಲವಾಡಿ, ನಿಟ್ಟೂರು ಮತ್ತು ಕಡಬ ಹೋಬಳಿಗಳೂ 300 ಗ್ರಾಮಗಳೂ ಇವೆ. ಗುಬ್ಬಿಯೊಂದೇ ಈ ತಾಲ್ಲೂಕಿನಲ್ಲಿರುವ ಪಟ್ಟಣ.

ಮೇಲ್ಮೈ ಲಕ್ಷಣ

[ಬದಲಾಯಿಸಿ]

ಜಿಲ್ಲೆಯಲ್ಲಿ ಸಮುದ್ರಮಟ್ಟದಿಂದ ಸು.3,000' ಎತ್ತರದ ಕೆಲವು ಬೆಟ್ಟಗಳುಂಟು. ಮಳೆ ಕಡಿಮೆ. ವರ್ಷಕ್ಕೆ ಸರಾಸರಿ 771.6 ಮಿಮೀ. ದೇವರಾಯನದುರ್ಗದ ದಕ್ಷಿಣದಲ್ಲಿ ಹುಟ್ಟುವ ಶಿಂಷಾ ನದಿ ಈ ತಾಲ್ಲೂಕಿನ ಮೂಲಕ ಹರಿದು ಹೋಗುತ್ತದೆ. ತಾಲ್ಲೂಕಿನಲ್ಲಿ ಈ ನದಿಯ ಉದ್ದ 34 ಕಿ.ಮೀ. ತುಮಕೂರು ಪಟ್ಟಣಕ್ಕೆ ಪಶ್ಚಿಮಕ್ಕೆ 21 ಕಿ.ಮೀ. ದೂರದಲ್ಲಿರುವ ಗುಬ್ಬಿ ಪಟ್ಟಣದ ಶಿವಮೊಗ್ಗ ರಸ್ತೆಯೂ ಗುಬ್ಬಿಯ ಮೂಲಕ ಹಾದುಹೋಗುತ್ತವೆ. ಇದು ಸಮುದ್ರಮಟ್ಟದಿಂದ 2,544' ಎತ್ತರದಲ್ಲಿದೆ.

ಇತಿಹಾಸ

[ಬದಲಾಯಿಸಿ]

ಗುಬ್ಬಿ ಹಿಂದೆ ಅಮರಗೊಂಡ ಕ್ಷೇತ್ರವೆಂಬ ಹೆಸರಿನ ಪವಿತ್ರ ಸ್ಥಳವಾಗಿತ್ತೆಂದೂ ಇಲ್ಲಿ ಗೋಸಲ ಚನ್ನಬಸವೇಶ್ವರ, ಅಮರಗೊಂಡ ಮಲ್ಲಿಕಾರ್ಜುನ, ಮಲ್ಲಣಾರ್ಯ ಮುಂತಾದ ವೀರಶೈವಾಚಾರ್ಯರು ಇದ್ದರೆಂದೂ ಹೇಳಲಾಗಿದೆ. ಇಲ್ಲಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಮಲ್ಲಣಾರ್ಯನ ಪ್ರವಚನವನ್ನು ನಿತ್ಯವೂ ಕೇಳುತ್ತಿದ್ದ ಎರಡು ಗುಬ್ಬಚ್ಚಿಗಳು ಆ ಪ್ರವಚನ ಪರಿಸಮಾಪ್ತಿಗೊಂಡಾಗ ದೇಹತ್ಯಾಗ ಮಾಡಿ ಸದ್ಗತಿ ಪಡೆದವೆಂದೂ, ಆದ್ದರಿಂದಲೇ ಈ ಸ್ಥಳಕ್ಕೆ ಗುಬ್ಬಿ ಎಂಬ ಹೆಸರು ಬಂತೆಂದೂ ಹೇಳುತ್ತಾರೆ. ಮಲ್ಲಿಕಾರ್ಜುನ ದೇವಾಲಯದಲ್ಲಿ ಆ ಗುಬ್ಬಚ್ಚಿಗಳದೆನ್ನಲಾದ ಸಮಾಧಿಯೊಂದು ಇದೆ. ಗುಬ್ಬಿ ಒಂದು ವ್ಯಾಪಾರಸ್ಥಳ. ಇಲ್ಲಿ ವಾರಕ್ಕೊಮ್ಮೆ ಸೇರುವ ಸಂತೆಗೂ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೂ ಸುತ್ತಮುತ್ತಣ ಸ್ಥಳಗಳಿಂದ ವರ್ತಕರೂ, ಗ್ರಾಹಕರೂ ಬರುತ್ತಾರೆ. ಬಟ್ಟೆ, ಕಂಬಳಿ, ಅಡಕೆ, ತೆಂಗಿನಕಾಯಿ, ಬೆಲ್ಲ, ಹುಣಸೆಹಣ್ಣು, ಗೋಧಿ, ಬತ್ತ, ರಾಗಿ, ಅರಗು ಮುಂತಾದವು ಇದರ ಸುತ್ತಮುತ್ತ ಉತ್ಪಾದನೆಯಾಗುವ ಪದಾರ್ಥಗಳು. ಸುತ್ತಮುತ್ತಣ ಸ್ಥಳಗಳಿಗೆಲ್ಲ ಇದೊಂದು ವ್ಯಾಪಾರಸ್ಥಳ. ಇಲ್ಲೊಂದು ನಿಯಂತ್ರಿತ ಮಾರುಕಟ್ಟೆಯಿದೆ. ಗುಬ್ಬಿಯಲ್ಲಿ ಎತ್ತಿನಗಾಡಿಗಳು ತಯಾರಾಗುತ್ತವೆ.

ಗುಬ್ಬಿಗೆ 3 ಕಿ.ಮೀ. ದೂರದಲ್ಲಿರುವ ಹೊಸಹಳ್ಳಿಯ ಗೌಡ ಈ ಪಟ್ಟಣವನ್ನು 400 ವರ್ಷಗಳ ಹಿಂದೆ ಸ್ಥಾಪಿಸಿದನೆಂದೂ ಈತ 700 ವರ್ಷಗಳ ಹಿಂದೆ ಇದ್ದ ಹೊನ್ನಪ್ಪಗೌಡನೆಂಬ ನೊಣಬ ಮುಖಂಡನ ವಂಶಸ್ಥನೆಂದೂ ಹೇಳಲಾಗಿದೆ. ಮೈಸೂರಿನ ದೊರೆಗಳಿಗೆ ಈ ಮನೆತನದವರು ಕಪ್ಪ ಒಪ್ಪಿಸುತ್ತಿದ್ದರು. ಹೈದರನ ಕಾಲದಲ್ಲಿ ಇದನ್ನು 500 ಪಗೋಡಗಳಿಂದ 2,500 ಪಗೋಡಗಳಿಗೆ ಹೆಚ್ಚಿಸಲಾಯಿತು. ಟಿಪ್ಪು ಇವರ ಅಧಿಕಾರವನ್ನು ಕಿತ್ತುಕೊಂಡ.

ದೇವಾಲಯಗಳು

[ಬದಲಾಯಿಸಿ]

ಗುಬ್ಬಿಯಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಾಚೀನವಾದ್ದು ಗದ್ದೆ ಮಲ್ಲೇಶ್ವರನ ದೇವಸ್ಥಾನ. ಇದು ಮೊದಲು ಊರ ಹೊರಗಿನ ಗದ್ದೆಯಲ್ಲಿತ್ತೆಂದೂ ಕ್ರಮೇಣ ಇದರ ಸುತ್ತಲೂ ಊರು ಬೆಳೆಯಿತೆಂದೂ ಹೇಳುತ್ತಾರೆ. ದೇವಾಲಯದ ನವರಂಗದಲ್ಲಿ ದಕ್ಷಿಣಾಮೂರ್ತಿ, ಪಾರ್ವತಿ ಮತ್ತು ವೀರಭದ್ರ ಮೂರ್ತಿಗಳಿವೆ. ವೈಲಪ್ಪ ಅಥವಾ ಓಹಿಲಪ್ಪ ದೇವಸ್ಥಾನವೂ ಪ್ರಸಿದ್ಧವಾದ್ದು. ಇಲ್ಲಿ ಶೈವ ಭಕ್ತ ಓಹಿಲನ ವಿಗ್ರಹವಿದೆ. ಗುಬ್ಬಿಯಪ್ಪ ಅಥವಾ ಗುಬ್ಬಿ ಚನ್ನಬಸವೇಶ್ವರ ದೇವಾಲಯ ಬಹಳ ದೊಡ್ಡದು. ಹೊಸಹಳ್ಳಿಯ ಪಾಳೆಯಗಾರ ಮುಮ್ಮಡಿ ಹೊನ್ನಪ್ಪಗೌಡನ ಕಾಲದಲ್ಲಿದ್ದ ಗುಬ್ಬಿಯಪ್ಪ ಅಥವಾ ಚನ್ನಬಸವಯ್ಯ ಎಂಬ ವೀರಶೈವ ಗುರುವಿನ ಗದ್ದಿಗೆ ಇಲ್ಲಿದೆ. ಇದಕ್ಕೆ ಈಚೆಗೆ ಸುಂದರವಾದ ಗೋಪುರವೊಂದನ್ನು ಕಟ್ಟಲಾಗಿದೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಜನಾರ್ದನ ಮತ್ತು ಬ್ಯಾಟರಾಯಸ್ವಾಮಿ ದೇವಾಲಯಗಳೂ ಗುಬ್ಬಿಯಲ್ಲಿವೆ. ಗುಬ್ಬಿಗೆ ಒಂದು ಮೈಲು ದೂರದಲ್ಲಿ ಬಯಲ ಆಂಜನೇಯಸ್ವಾಮಿ ದೇವಾಲಯವಿದೆ. ಗುಬ್ಬಿ ರೈಲ್ವೆ ನಿಲ್ದಾಣದ ಬಳಿ ಇರುವ ಚಿದಂಬರಾಶ್ರಮದಲ್ಲಿ ದತ್ತಾತ್ರೇಯ ಮಂದಿರವೂ ಗುರುಕುಲವೂ ಇವೆ.

ಸಾರ್ವಜನಿಕ ಸೌಲಭ್ಯ

[ಬದಲಾಯಿಸಿ]

ಗುಬ್ಬಿಯಲ್ಲಿ ಶಾಲೆ, ಆಸ್ಪತ್ರೆಗಳುಂಟು. 1909ರಲ್ಲಿ ಗುಬ್ಬಿ ಪೌರಸಭೆ ಸ್ಥಾಪಿತವಾಯಿತು. ಪೌರಸಭೆಯ ವ್ಯಾಪ್ತಿಗೆ ಒಳಪಟ್ಟ 2.10 ಚ.ಮೈ. ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲ. ನೀರಿನ ಕೊಳಾಯಿಗಳುಂಟು. 1934ರಲ್ಲಿ ವಿದ್ಯುದ್ದೀಪಗಳ ಸೌಲಭ್ಯ ಒದಗಿಸಲಾಯಿತು.

ಸಾಹಿತ್ಯ

[ಬದಲಾಯಿಸಿ]

15 ಮತ್ತು 16ನೆಯ ಶತಮಾನಗಳಲ್ಲಿ ಗುಬ್ಬಿ ಪಟ್ಟಣವು ಸಾಹಿತ್ಯಿಕ ಚಟುವಟಿಕೆಯ ಕೇಂದ್ರವಾಗಿತ್ತು. ವೀರಶೈವ ಧರ್ಮವನ್ನು ಕುರಿತ ಅನೇಕ ಗ್ರಂಥಗಳ ರಚನೆಯಾಯಿತು. 'ಗಣಭಾಷ್ಯರತ್ನಮಾಲೆ'ಯೇ ಮುಂತಾದ ಅನೇಕ ಕೃತಿಗಳನ್ನು ರಚಿಸಿದ ಮಲ್ಲಣ್ಣ ಗುಬ್ಬಿಯವನು.ಈತ 15ನೆಯ ಶತಮಾನದ ಕೊನೆಯಲ್ಲಿದ್ದ. ಇವನ ಮೊಮ್ಮಗನಾದ ಗುಬ್ಬಿ ಮಲ್ಲಣಾರ್ಯ 1513 ಮತ್ತು 1530ರಲ್ಲಿ 'ಭಾವಚಿಂತಾರತ್ನ' ಮತ್ತು 'ವೀರಶೈವಾಮೃತ ಪುರಾಣ' ಎಂಬ ಎರಡು ಕಾವ್ಯಗಳನ್ನು ರಚಿಸಿದ. ಪ್ರಭುಗ, ಚೇರಮ ಇವರು ಮಲ್ಲಣಾರ್ಯನ ಶಿಷ್ಯರು. ಇವರೂ ಗ್ರಂಥಗಳನ್ನು ರಚಿಸಿದ್ದಾರೆ. 'ತೋಂಟದ ಸಿದ್ಧೇಶ್ವರ ಪುರಾಣ'ವೆಂಬ ಗ್ರಂಥವನ್ನು ಮಲ್ಲಣಾರ್ಯನ ಮಗ ಶಾಂತೇಶ ರಚಿಸಿದ್ದು 1561ರಲ್ಲಿ. ಕನ್ನಡ ರಂಗಭೂಮಿಗೆ ಗುಬ್ಬಿಯ ಕೊಡುಗೆ ವಿಶಿಷ್ಟವಾದ್ದು. ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕಮಂಡಲಿಯ ಒಡೆಯರೂ ಸುಪ್ರಸಿದ್ಧ ನಟರೂ ಆಗಿದ್ದ ಜಿ.ಎಚ್.ವೀರಣ್ಣನವರು ಗುಬ್ಬಿಯವರು. ಗುಬ್ಬಿಯ ಇನ್ನೊಬ್ಬ ನಿವಾಸಿಯಾಗಿದ್ದ ಚಂದಣ್ಣ ಮತ್ತು ಅವರ ಮಿತ್ರರ ಪ್ರಯತ್ನದಿಂದ ಆರಂಭವಾದ ಈ ನಾಟಕ ಮಂಡಲಿಯನ್ನು ವೀರಣ್ಣನವರು ಅನಂತರ ವಹಿಸಿಕೊಂಡು, ನಾಟಕ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ಪ್ರಸಿದ್ಧಿ ಪಡೆದರು. ಈ ಊರು ಗುಬ್ಬಿ-ಕರ್ನಾಟಕ ಚಿತ್ರನಿರ್ಮಾಣ ಸಂಸ್ಥೆಯ ಮತ್ತು ಗುಬ್ಬಿ ನಾಟಕ ಕಂಪನಿ Archived 2015-06-04 ವೇಬ್ಯಾಕ್ ಮೆಷಿನ್ ನಲ್ಲಿ. ಯ ಸಂಸ್ಥಾಪಕರಾದ ಗುಬ್ಬಿ ವೀರಣ್ಣನವರ ಹುಟ್ಟಿದೂರು. ಅವರು ಮೊಟ್ಟಮೊದಲ 'ಕನ್ನಡ ಟಾಕಿ,' ಚಿತ್ರವನ್ನು ಕನ್ನಡ ಜನಸ್ತೋಮಕ್ಕೆ ಬಿಡುಗಡೆ ಮಾಡಿದ್ದರು ಮತ್ತು ಆ ಚಿತ್ರದಲ್ಲಿ 'ಡಾ.ರಾಜ್‍ಕುಮಾರ್,' ಬಾಲನಟರಾಗಿ ಕೆಲಸ ಮಾಡಿದ್ದರು. ಗುಬ್ಬಿ ಥಿಯೇಟರ್ ನಲ್ಲಿ ರಾಜಕುಮಾರ್ ತಮ್ಮ ಯುವಾವಸ್ಥೆಯಲ್ಲಿ ನಾಟಕಗಳಲ್ಲಿ ನಟಿಸಿ, ಅಪಾರ ಅನುಭವ ಮತ್ತು ನೈಪುಣ್ಯವನ್ನು ಗಳಿಸಿದರು. ಮುಂದೆ ರಾಜಕುಮಾರ್ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದು, ಕನ್ನಡ ಚಿತ್ರರಂಗದ ಬಹು ದೊಡ್ಡ ತಾರೆಯಾಗಿ ಮಿಂಚಿದರು. ಕನ್ನಡ ಚಲನ ಚಿತ್ರರಂಗದಲ್ಲಿ ಮಾಡಿದ ಅಪಾರ ಸೇವೆಯನ್ನು ಗುರುತಿಸಿ, ಅವರಿಗೆ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ,' ಯನ್ನು ದಯಪಾಲಿಸಿ ಗೌರವಿಸಲಾಯಿತು.ಅಂದು ಗುಬ್ಬಿ ವೀರಣ್ಣ ಹುಟ್ಟಿಬೆಳೆದ ನಾಡಿನಲ್ಲಿ ಇಂದು ಅವರ ಮೊಮ್ಮಗಳಾದ ಬಿ. ಜಯಶ್ರೀಯವರು ಗುಬ್ಬಿ ಪಟ್ಟಣವನ್ನ ಪ್ರಪಂಚಕ್ಕೆ ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ. ಕೆಲವು ದಿನಗಳಲ್ಲಿ ಗುಬ್ಬಿಯಲ್ಲಿ ಗೆಜ್ಜೆಗಳ ನಿನಾದ, ಹಾಡು, ಸಂಗೀತದ ಕಲರವ ಮೂಡಿಬರಲಿದೆ. ಕಾರಣ, ಪಟ್ಟಣದಲ್ಲಿ ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಒಂದು ನಾಟಕ ಕಲಾಭವನ ಬರುತ್ತಲಿದ್ದು, ನಾಟಕ ರಂಗಕ್ಕೆ ಹೊಸಮೆರುಗು ಬರಲಿದೆ.

"ಗುಬ್ಬಿಯಪ್ಪನ-ದೇಗುಲ"

[ಬದಲಾಯಿಸಿ]

ಇಲ್ಲಿನ ದೇವಾಲಯಗಳಲ್ಲಿ ಹೆಸರುವಾಸಿಯಾದದ್ದು 'ಶ್ರೀ. ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನ' . ಸ್ಥಳೀಯ ಜನ ಆ ದೇವರನ್ನು 'ಗುಬ್ಬಿಯಪ್ಪ ದೇವರೆಂದು' ಸಂಬೋಧಿಸುತ್ತಾರೆ.

ಶ್ರೀ ಚಿದಂಬರಸ್ವಾಮಿಗಳ ಮಠ

[ಬದಲಾಯಿಸಿ]

ಗುಬ್ಬಿಯಲ್ಲಿ ಪೂಜ್ಯ 'ಶ್ರೀ. ಚಿದಂಬರ ಸ್ವಾಮಿಗಳು,' ಒಂದು ಮಠವನ್ನು ಸ್ಥಾಪಿಸಿದ್ದಾರೆ. ಅಲ್ಲಿ, ಭಕ್ತಾದಿಗಳ ಕಲ್ಯಾಣಕ್ಕಾಗಿ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಆಶ್ರಮದಿಂದ 'ಸೇವಾಸದನ,' ವೆಂಬ ಮಾಸಿಕ ಪತ್ರಿಕೆ ಬಹಳ ವರ್ಷಗಳ ಕಾಲ ಪ್ರಕಟವಾಗುತ್ತಿತ್ತು.ಗುಬ್ಬಿ ತಾಲ್ಲೂಕಿನಲ್ಲಿ ಉಂಗ್ರ ಗ್ರಾಮ ಇದೆ. ಗ್ರಾಮದ ಮುಂದೆ ವಿಶಾಲವಾದ ಕೆರೆ ಇದೆ. ನೋಡಲು ಸುಂದರವಾದ ಗ್ರಾಮ

ಕೊಂಡಿಗಳು

[ಬದಲಾಯಿಸಿ]

^ 'Falling Rain Genomics', Inc - Gubbi ^ "Census of India 2001: Data from the 2001 Census, including cities, villages and towns (Provisional)". ^ "Census Commission of India". ^ 'Archived from the original' on 2004-06-16. Retrieved 2008-11-01.

ಪಿನ್ ಕೋಡ್ : ೫೭೨೨೧೬

ಉಲ್ಲೇಖಗಳು

[ಬದಲಾಯಿಸಿ]
  1. "Gubbi (05538) Gubbi SUB-DISTRICT". {{cite web}}: horizontal tab character in |title= at position 14 (help)
  2. "Gubbi town". Retrieved 28 ಜನವರಿ 2017.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗುಬ್ಬಿ&oldid=1245672" ಇಂದ ಪಡೆಯಲ್ಪಟ್ಟಿದೆ