ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬನ್ನೇರುಘಟ್ಟ ಮೃಗಾಲಯದಲ್ಲಿ ಚಿರತೆ

'ಬನ್ನೇರುಘಟ್ಟದ ಅರಣ್ಯ ಪ್ರದೇಶದ ಮುಖ್ಯ ಆಕರ್ಷಣೆಯೇ ಅಲ್ಲಿರುವ ಹುಲಿ ಮತ್ತು ಸಿಂಹಗಳು. ಪ್ರಕೃತಿಯ ಮಡಿಲಲ್ಲಿ ಸಿಂಹಗಳನ್ನು ನೋಡಬಹುದಾದ ಭಾರತದ ಕೆಲವೇ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಅರಣ್ಯ ಇಲಾಖೆಯು ಸಿಂಹ ಮತ್ತು ಹುಲಿಗಳ ವೀಕ್ಷಣೆಗಾಗಿ ಸಫಾರಿ ವ್ಯವಸ್ಥೆ ಕಲ್ಪಿಸಿದೆ. ಸಿಂಹಗಳ ಘರ್ಜನೆ ಕೇಳುವುದರೊಂದಿಗೆ ಇತರ ಪ್ರಾಣಿಗಳನ್ನೂ ನೋಡುವ ಸೌಭಾಗ್ಯ ಸಫಾರಿ ಮಾಡುವ ಪ್ರವಾಸಿಗರಿಗೆ ಇಲ್ಲಿ ಸಿಗುವುದು.

25 ಸಾವಿರ ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಈ ಮೀಸಲು ಪ್ರದೇಶ ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ, ಕರಡಿಗಳು, ಪಕ್ಷಿಗಳು ಮತ್ತು ವಿವಿಧ ಜಾತಿಯ ಚಿಟ್ಟೆಗಳ ನೆಲೆಯಾಗಿದೆ. ಪ್ರವಾಸಿಗರು ಸಫಾರಿ ಮಾಡುವಾಗ ಚಿರತೆಗಳು, ಅಪರೂಪದ ಬಿಳಿ ಹುಲಿಗಳು, ಸುಂದರ ಬಂಗಾಳದ ಹುಲಿ, ಮತ್ತು ಕಾಡಿನ ರಾಜ ಸಿಂಹ ಅರಣ್ಯದಲ್ಲಿ ರಾಜಾರೋಷವಾಗಿ ಸುತ್ತಾಡುವುದನ್ನು ನೋಡಬಹುದು.

ಇಲ್ಲಿರುವ ಪ್ರಾಣಿಗಳು ಸರ್ಕಸ್ ಗಳಿಂದ ರಕ್ಷಿಸಲ್ಪಟ್ಟಿರುವ ಕೆಲವಾದರೆ ದೇಶದ ಇತರೆಡೆಗಳಿಂದಲೂ ಕೂಡ ತರಿಸಿಕೊಳ್ಳಲಾಗಿದೆ. ಸಂಪೂರ್ಣ ರಕ್ಷಣೆಯಲ್ಲಿರುವ ಈ ಪ್ರಾಣಿಗಳು ನಾಡಿಗೆ ಬರದಂತೆ ಅರಣ್ಯದ ಸೂಕ್ಷ್ಮ ಸ್ಥಳಗಳಲ್ಲಿ ಬೇಲಿಯನ್ನು ಹಾಕಲಾಗಿದೆ.

ಈ ಉದ್ಯಾನವನದ ಮುಖ್ಯ ಆಕರ್ಷಣೆ ಎಂದರೆ ದೇಶದಲ್ಲೇ ಮೊಟ್ಟ ಮೊದಲನೇಯದಾದ ಚಿಟ್ಟೆಗೆಂದೇ ಇರುವ ಉದ್ಯಾನವನ. 7.5 ಎಕರೆ ವಿಸ್ತೀರ್ಣದಲ್ಲಿ ವಿಶೇಷವೆನ್ನಿಸುವ ಈ ಚಿಟ್ಟೆ ಉದ್ಯಾನವನವನ್ನು ಕೇಂದ್ರ ಸಚಿವ ಕಪಿಲ ಸಿಬಲ್ 2006 ರಲ್ಲಿ ಉದ್ಘಾಟಿಸಿದ್ದಾರೆ. ಚಿಟ್ಟೆಗಳ ಆಕರ್ಷಣೆಗೆಂದೇ ಈ ಪ್ರದೇಶದಲ್ಲಿ ವಿಶಿಷ್ಟ ಉಷ್ಣವಲಯದ ಪರಿಸರ ರೂಪುಗೊಳ್ಳಲೆಂದು ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗಿದೆ. ಸುಮಾರು 20 ರೀತಿಯ ವಿವಿಧ ಜಾತಿಯ ಚಿಟ್ಟೆಗಳನ್ನು ಇಲ್ಲಿ ನಾವು ಕಾಣಬಹುದು.ಪ್ರತಿ ಮಂಗಳವಾರ ವಾರದ ರಜೆ ಇರುತ್ತದೆ.

ಹುಲಿ ಮತ್ತು ಸಿಂಹಧಾಮ[ಬದಲಾಯಿಸಿ]

ಬನ್ನೇರುಘಟ್ಟದಲ್ಲಿ ಮಲಗಿರುವ ಹುಲಿ

ಬನ್ನೇರುಘಟ್ಟ ಹುಲಿ ಮತ್ತು ಸಿಂಹಧಾಮ ಹುಲಿ, ಸಿಂಹ ಮತ್ತು ಇತರ ವನ್ಯಜೀವಿಗಳ ಅಭಯಾರಣ್ಯ. ಇಲ್ಲಿನ ಮಿನಿ-ಸಫಾರಿ ಅಭಯಾರಣ್ಯದ ವ್ಯವಸ್ಥೆಗೆ ಹಣವನ್ನೊದಗಿಸುತ್ತದೆ. ಭಾರತೀಯ ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಬನ್ನೇರ್ಘಟ್ಟದ ಹುಲಿ ಮತ್ತು ಸಿಂಹಧಾಮ ಉತ್ತಮವಾದ ವ್ಯವಸ್ಥೆಯುಳ್ಳದ್ದೆಂದು ಹೆಸರಾಗಿದೆ. ನಿರ್ಲಕ್ಷ್ಯತೆಯ ಕೆಲ ಆಪಾದನೆಗಳಿದ್ದು ಕೆಲವು ದಾರುಣ ಘಟನೆಗಳು ನಡೆದಿವೆಯಾದರೂ ಒಟ್ಟಾರೆ ಒಳ್ಳೆಯ ಹೆಸರನ್ನು ಪಡೆದಿರುವ ವನ್ಯಧಾಮವಾಗಿದೆ.

ಮೃಗಾಲಯ[ಬದಲಾಯಿಸಿ]

ಬನ್ನೇರ್ಘಟ್ಟ ಮೃಗಾಲಯದಲ್ಲಿ ಮೊಸಳೆಗಳು

ಬನ್ನೇರುಘಟ್ಟ ಮೃಗಾಲಯ ಇಲ್ಲಿನ ಮುಖ್ಯ ಪ್ರವಾಸಿ ಆಕರ್ಷಣೆ. ಸರೀಸೃಪ ಉದ್ಯಾನ ಮತ್ತು ಒಂದು ಸಣ್ಣ ರ೦ಗಮ೦ದಿರವನ್ನೂ ಇದು ಹೊಂದಿದೆ. ಮೃಗಾಲಯಕ್ಕೆ ಹೊ೦ದಿಕೊ೦ಡ೦ತೆಯೇ ಪ್ರಾಣಿಶಾಸ್ತ್ರಕ್ಕೆ ಸ೦ಬ೦ಧಪಟ್ಟ ಒಂದು ವಸ್ತುಸ೦ಗ್ರಹಾಲಯವೂ ಇಲ್ಲಿದೆ.

ವಿವಾದ[ಬದಲಾಯಿಸಿ]

೧೯೯೨ ರಲ್ಲಿ ವನ್ಯಧಾಮದ ಒಂದು ಹುಲಿ ಮಗುವನ್ನು ಅಪಹರಿಸಿದಾಗ ಅರಣ್ಯ ಇಲಾಖೆಯ ನಿರ್ಲಕ್ಷ್ಯತೆ ಆಪಾದನೆಗೆ ಒಳಗಾಗಿತ್ತು. ಈ ದಾರುಣ ಘಟನೆಯಿಂದ ಮಿನಿ-ಸಫಾರಿಯ ಸುರಕ್ಷತೆ ಮತ್ತು ವ್ಯವಸ್ಥೆಯ ಬಗ್ಗೆ ವಿವಾದ ಸೃಷ್ಟಿಯಾದದ್ದುಂಟು.

ಜಂಗಲ್ ಸಫಾರಿ[ಬದಲಾಯಿಸಿ]

ಪ್ರವಾಸಿಗರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡುತ್ತ ಕಾಡಾನೆಗಳು, ಕಾಡುಹಂದಿ, ಮಚ್ಚೆಯುಳ್ಳ ಜಿಂಕೆ ಸೇರಿದಂತೆ ವಿವಿಧ ಜಾತಿ ಜಿಂಕೆ, ಸಾಂಬಾರ್, ಗುಳ್ಳೆನರಿ, ಕರಡಿ, ಕಾಡು ಹಂದಿ, ಲಂಗೂರ್ ಗಳು ಮತ್ತು ಕೋತಿಗಳನ್ನು ನೋಡಬಹುದು. ಜಂಗಲ್ ಸಫಾರಿಯೊಂದಿಗೆ ಆನೆ ಸವಾರಿ ಕೂಡ ಇಲ್ಲಿ ಪ್ರವಾಸಿಗರು ಮಾಡಿ ಆನಂದಿಸಬಹುದು.

ಬನ್ನೇರಘಟ್ಟ ಅರಣ್ಯ ಪ್ರದೇಶದಲ್ಲಿಯೇ ಹುಟ್ಟಿದ ಸ್ವರ್ಣಮುಖಿ ಹೊಳೆಯು ಅರಣ್ಯದುದ್ದಕ್ಕೂ ಪ್ರಶಾಂತವಾಗಿ ಹರಿಯುತ್ತದೆ. ಅರಣ್ಯದಲ್ಲಿನ ಹಲವಾರು ದೊಡ್ಡ ದೊಡ್ಡ ಮರಗಳಿಂದ ಉದುರುವ ಎಲೆಗಳ ಸುಂದರ ಶಬ್ದದ ನಿನಾದ ಹೊಳೆಯುದ್ದಕ್ಕೂ ಪ್ರವಾಸಿಗರು ಕೇಳಿ ಆನಂದಿಸಬಹುದು. ಇಲ್ಲಿ ಚಂಪಕ ಧಾಮ ಸ್ವಾಮಿಯ ಸುಂದರ ದೇವಸ್ಥಾನ ಇದ್ದು, ಭಗವಾನ್ ವಿಷ್ಣು ಮತ್ತು ಅವನ ಪತ್ನಿಯರಾದ, ಶ್ರೀ ದೇವಿ ಮತ್ತು ಭೂದೇವಿಯರಮೂರ್ತಿಗಳಿವೆ.

ಬೆಂಗಳೂರು ವಾಸಿಗಳಿಗಂತೂ ಪಿಕ್ನಿಕ್ ಸ್ಪಾಟ್ ಆಗಿರುವ ಬನ್ನೇರಘಟ್ಟ ಝೂ (ಪ್ರಾಣಿ ಸಂಗ್ರಹಾಲಯ) ನೋಡುವ ಮಜದೊಂದಿಗೆ ಮಕ್ಕಳೊಂದಿಗೆ ಸಫಾರಿ ಕೂಡ ಮಾಡಬಹುದು. ಬೇರೆಡೆ ಇರುವವರು ಬೆಂಗಳೂರಿಗೆ ಬಂದರೆ ನೆನಪಿಟ್ಟುಕೊಂಡು ಬನ್ನೇರಘಟ್ಟಕ್ಕೆ ಹೋಗಲೇಬೇಕು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]