ಮುಸುವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಸುವ

ಮುಸುವ ಪ್ರೈಮೇಟ್ ಗಣದ ಸರ್ಕೊಪಿತಿಸಿಡೀ ಕುಟುಂಬದ ಕೊಲೊಬಿನೀ ಉಪಕುಟುಂಬಕ್ಕೆ ಸೇರಿದ ಪ್ರೆಸ್‍ಬೈಟಿಸ್ ಜಾತಿಯ ಎಂಟಿಲಸ್, ಪೈಲಿಯೇಟಸ್, ಜೀಯೈ ಮತ್ತು ಜಾನೈ ಎಂಬ ನಾಲ್ಕು ಪ್ರಭೇದಗಳ ಕೋತಿಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಲಾಂಗೂರ್). ಮುಸಿಯ ಪರ್ಯಾಯ ನಾಮ.[೧]

ಇವುಗಳ ಪೈಕಿ ಎಂಟೆಲಸ್ ಪ್ರಭೇದ ಪಶ್ಚಿಮ ಭಾರತ ಮರುಪ್ರದೇಶವನ್ನು ಹೊರತುಪಡಿಸಿ, ಹಿಮಾಲಯದಿಂದ ಮೊದಲುಗೊಂಡು ಕನ್ಯಾಕುಮಾರಿಯವರೆಗೆ ಭಾರತಾದ್ಯಂತ ಕಾಣದೊರೆಯುತ್ತದಾಗಿ ಇದನ್ನು ಮುಸುವಗಳ ಮಾದರಿಯಾಗಿ ವಿವರಿಸಲಾಗಿದೆ. ಇದಕ್ಕೆ ಹನುಮಾನ್ ಕೋತಿ ಎಂಬ ಹೆಸರೂ ಉಂಟು. ಇದರ ದೇಹದ ಉದ್ದ ಸುಮಾರು 70ಸೆಂಮೀ. ತೂಕ 10-20ಕೆಜಿ. ಉತ್ತರ ಭಾರತದ ಮುಸುವ ದಕ್ಷಿಣದ್ದಕ್ಕಿಂತ ಹೆಚ್ಚು ಬಲಯುತ ಹಾಗೂ ಭಾರವುಳ್ಳದ್ದು. ದೇಹದ ಉದ್ದಕ್ಕಿಂತ ಹೆಚ್ಚು ಉದ್ದವಾದ ಬಾಲ (ಅಂದರೆ ಸುಮಾರು 100ಸೆಂಮೀ ಉದ್ದ) ಉಂಟು. ಮೈಬಣ್ಣ ಬೂದುಗಪ್ಪು, ಮುಖ ಪಾದಗೂ ಹಾಗೂ ಕಿವಿ ಅಚ್ಚಗಪ್ಪು. ಮೈಮೇಲೆ ನಯವಾದ ಕೂದಲುಂಟು.

ಭಾರತದ ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ಲಂಗೂರ್; ಭಾರತದ ಮುಸಿಯ

ಇವುಗಳ ವಾಸ ಸಾಮಾನ್ಯವಾಗಿ ಮರಗಳಿಂದ ತುಂಬಿರುವ ಕಾಡುಗಳಲ್ಲಿ ಕೆಲವೆಡೆ ಕಲ್ಲುಬಂಡೆಗಳಿಂದ ಕೂಡಿದ ನೆಲೆಗಳಲ್ಲೂ ವಾಸಿಸುವುದುಂಟು. ಅಂತೆಯೇ ಹಳ್ಳಿ ಪಟ್ಟಣಗಳ ಆಸುಪಾಸಿನಲ್ಲೂ ದೇವಾಲಯಗಳ ಬಳಿಯಲ್ಲೂ ನೆಲೆನಾಡಿಕೊಂಡಿರುವುದುಂಟು. ಇವುಗಳ ಬಗ್ಗೆ ಹಿಂದುಗಳಲ್ಲಿ ಪೂಜ್ಯಭಾವನೆ ಇರುವುದರಿಂದ ಹಳ್ಳಿ ಪಟ್ಟಣಗಳಲ್ಲಿ ಯಾರೂ ಇವನ್ನು ಹಿಂಸಿಸುವುದಿಲ್ಲ. ಆದ್ದರಿಂದ ಇಂಥದಲ್ಲಿ ವಾಸಿಸುವ ಮುಸುವಗಳಿಗೆ ಮನುಷ್ಯನನ್ನು ಕಂಡರೆ ಭಯವಿಲ್ಲ. ಆದರೆ ಕಾಡುಗಳಲ್ಲಿ ಜೀವಿಸುವ ಮುಸುವಗಳನ್ನು ಅಲ್ಲಿಯ ಆದಿವಾಸಿ ಬುಡ್ಡಕಟ್ಟುಗಳವರು ಬೇಟೆಯಾಡುವುದರಿಂದ ಮನುಷ್ಯನ ಹೆದರಿಕೆ ಇವುಗಳಲ್ಲಿ ಕಂಡುಬರುತ್ತದೆ.

ಮುಸುವಗಳು ಶುದ್ಧ ಸಸ್ಯಾಹಾರಿಗಳಾಗಿದ್ದು ಎಲೆಚಿಗುರು, ಹೂ, ಹಣ್ಣುಗಳನ್ನು ತಿಂದು ಬದುಕುವುವು. ಸಾಮಾನ್ಯವಾಗಿ ಸೂರ್ಯೋದಯದ ವೇಳೆಗೆ ಆಹಾರಸೇವನೆಗೆ ತೊಡಗಿ, ಮಧ್ಯಾಹ್ನ ಕೊಂಚ ಹೊತ್ತು ಮರಗಳ ತಂಪು ನೆರಳಿನಲ್ಲಿ ವಿಶ್ರಮಿಸುತ್ತಿದ್ದು, ಮತ್ತೆ ಸಂಜೆ ಕತ್ತಲಾಗುವ ತನಕ ತಿನ್ನುವುದು ಇವುಗಳ ಸ್ವಭಾವ. ರಾತ್ರಿ ಯಾವುದಾದರೂ ಮರವನ್ನು ಆಯ್ದು ಅದರ ತುದಿರೆಂಬೆಗಳ ಮೇಲೆ ನಿದ್ದೆ ಮಾಡುತ್ತವೆ. ಹುಲಿ ಚಿರತೆಗಳೇ ಮುಸುವಗಳ ಪ್ರಧಾನ ಶತ್ರುಗಳು.

ಮುಸುವಗಳು 15-25 ಸಂಖ್ಯೆಯ ಗುಂಪುಗಳಲ್ಲಿ ವಾಸಿಸುವುವು. ಸಾಮಾನ್ಯವಾಗಿ ಒಂದೊಂದು ಗುಂಪೂ ತನ್ನದೇ ಆದ, ಸುಮಾರು 1.3ರಿಂದ 13ಚ.ಕಿಮೀ. ವಿಸ್ತಾರದ ಕ್ಷೇತ್ರದಲ್ಲಿ ಜೀವಿಸುತ್ತದೆ. ಗುಂಪಿಗೆ ಅತ್ಯಂತ ಬಲಶಾಲಿಯಾದ ಗಂಡು ಮುಸುವ ನಾಯಕ. ಸಾಧಾರಣವಾಗಿ ಗುಂಪಿನಲ್ಲಿ ಎಲ್ಲವೂ ಪರಸ್ಪರ ಶಾಂತಿ ಮತ್ತು ಸಹಕಾರದಿಂದ ಬದಕುತ್ತವೆ. ಗುಂಪಿನ ಸದಸ್ಯರ ನಡುವಣ ಸಂಬಂಧ ಬಲುಸೂಕ್ಷ್ಮ ರೀತಿಯದು.

ಇದರ ಸಂತಾನವೃದ್ಧಿಯ ಕಾಲ ಜನವರಿ-ಫೆಬ್ರುವರಿ. ಒಂದು ಸೂಲಿಗೆ ಸಾಮಾನ್ಯವಾಗಿ ಒಂದು ಮರಿ ಹುಟ್ಟುತ್ತದೆ. ಹುಟ್ಟಿದಾಗ ಮರಿ ಸಂಪೂರ್ಣವಾಗಿ ಕಪ್ಪಾಗಿರುತ್ತದೆ. ಬರುಬರುತ್ತ ಮೈ ಬೂದುಗಪ್ಪು ಬಣ್ಣವನ್ನು ತಳೆಯುತ್ತದೆ ಗರ್ಭಾವಧಿ ಸುಮಾರು 6 ತಿಂಗಳು.

ಪೈಲಿಯೇಟಸ್ ಪ್ರಭೇದ (ಟೋಪಿ ಮುಸುವ ಅಥವಾ ಎಲೆತಿನ್ನುವ ಕೋತಿ ಕ್ಯಾಪ್‍ಡ್ ಲಾಂಗುರ್, ಲೀಫ್ ಮಂಕಿ)[ಬದಲಾಯಿಸಿ]

ಅಸ್ಸಾಮ್ ರಾಜ್ಯದಲ್ಲಿ ಕಾಣದೊರೆಯುತ್ತದೆ. ಇದರ ದೇಹದ ಗಾತ್ರ 60-70ಸೆಮೀ. ತೂಕ 12ಕೆಜಿ. ಬಾಲ 75-100 ಸೆಂಮೀ ಉದ್ದ ಇದೆ. ಮೈಬಣ್ಣ ಗಾಢಬೂದು. ಕೆನ್ನೆ ಮತ್ತು ಉದರಭಾಗಗಳು ಕಿತ್ತಳೆ ಕಂದು ಇಲ್ಲವೆ ಬಂಗಾರಬಣ್ಣದವಾಗಿವೆ.

ಜೀಯೈ ಪ್ರಭೇದ[ಬದಲಾಯಿಸಿ]

ಚಿನ್ನದ ಬಣ್ಣದ ಮುಸುವ (ಗೋಲ್ಟನ್ ಲಾಂಗುರ್) ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಇದು ಭೂತಾನ ಭಾರತ ಗಡಿಪ್ರದೇಶದಲ್ಲಿಯ ಕಾಡುಗಳಲ್ಲಿ ಕಾಣದೊರೆಯುತ್ತದೆ. ಇದರ ಮೈ ಕೆನೆ ಇಲ್ಲವೆ ಬಂಗಾರ ಬಣ್ಣದ್ದು. ಮುಸುಡು ಮಾತ್ರ ಕಪ್ಪು. ಬಾಲದ ತುದಿ ಕೊಂಚ ಗೊಂಡೆಯಂತಿದೆ.

ಜಾನೈಪ್ರಬೇಧ[ಬದಲಾಯಿಸಿ]

ಕರ್ನಾಟಕದ ಕೊಡಗಿನಿಂದಹಿಡಿದು ಕನ್ಯಾಕುಮಾರಿಯವರೆಗಿನ ಪಶ್ಚಿಮ ಘಟ್ಟಗಳ ಕಾಡುಗಳ ಕಾಣದೊರೆಯುವ ಮುಸುವ ಇದು. ಎಂದೇ ಇದಕ್ಕೆ ನೀಲಗಿರಿ ಮುಸುವ (ನೀಲಗಿರಿ ಲಾಂಗುರ್) ಎಂಬ ಹೆಸರು ಬಂದಿದೆ. 900-2000ಮೀ ಎತ್ತರದ ಷೋಲಾ ಕಾಡುಗಳಲ್ಲಿ ಇದು ವಾಸಿಸುತ್ತದೆ. 80ಸೆಂಮೀ ಉದ್ದದ 11-14ಕೆಜಿ ಭಾರದ ದೇಹ, 75-90ಸೆಂಮೀ ಉದ್ದದ ಬಾಲ ಇದಕ್ಕುಂಟು. ಮೈಬಣ್ಣ ಹೊಳೆಯುವ ಕಪ್ಪು ಅಥವಾ ಕಪ್ಪು ಮಿಶ್ರ ಕಂದು. ತಲೆ ಮಾತ್ರ ಹಳದಿ ಕಂದು.

ಇದರ ಚೆಲುವಾದ ಚರ್ಮ ಮತ್ತು ಔಷಧಿ ಗುಣಗಳಿವೆಯೆಂದು ಹೇಳಲಾದ ಇದರ ಮಾಂಸ, ರಕ್ತ ಹಾಗೂ ಒಳಗಿನ ಅಂಗಾಂಗಗಳಿಗಾಗಿ ಇದನ್ನು ಬೇಟೆಯಾಡುತ್ತ ಬಂದಿರುವುದರಿಂದ ಇದರ ಸಂಖ್ಯೆ ಗಣನೀಯವಾಗಿ ಇಳಿದಿದ್ದು ವಿನಾಶದ ಅಂಚಿನಲ್ಲಿ ನಿಂತಿರುವ ಪ್ರಾಣಿಗಳ ಪೈಕಿ ಇದು ಕೂಡ ಸೇರಿದೆ.[೨]

ಉಲ್ಲೇಖಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮುಸುವ&oldid=1168345" ಇಂದ ಪಡೆಯಲ್ಪಟ್ಟಿದೆ