ವಿಷಯಕ್ಕೆ ಹೋಗು

ಗೋವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋವ
Map of India with the location of ಗೋವ highlighted.
Map of India with the location of ಗೋವ highlighted.
ರಾಜಧಾನಿ
 - ಸ್ಥಾನ
ಪಣಜಿ
 - 15.49° N 73.81° E
ಅತಿ ದೊಡ್ಡ ನಗರ ವಾಸ್ಕೊ ಡ ಗಾಮ
ಜನಸಂಖ್ಯೆ (2020)
 - ಸಾಂದ್ರತೆ
1,586,250 (26ನೇ)
 - 394/km²
ವಿಸ್ತೀರ್ಣ
 - ಜಿಲ್ಲೆಗಳು
3,702 km² (28ನೇ)
 - 2
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಮೇ ೩೦,೧೯೮೭
 - ಶ್ರೀ ಪಿ.ಎಸ್. ಶ್ರೀಧರನ್ ಪಿಳ್ಳೈ
 - ಪ್ರಮೋದ್ ಸಾವಂತ್
 - Unicameral (40)
ಅಧಿಕೃತ ಭಾಷೆ(ಗಳು) ಕೊಂಕಣಿ
Abbreviation (ISO) IN-GA
ಅಂತರ್ಜಾಲ ತಾಣ: http://www.goagovt.nic.in/
ಚಿತ್ರ:File:Seal of Goa.png

ಗೋವ ರಾಜ್ಯದ ಮುದ್ರೆ
Goa coastline at Dona Paula
Dudhsagar Falls on the Goa-Karnataka border.
Rice paddies are common in rural Goa.
Train carrying iron ore to Marmagao Port, Vasco
Most of Goa is well connected by roads.
Government-run Kadamba buses at a bus station in Goa
Margao railway station

ಗೋವ - ಭಾರತದ ರಾಜ್ಯಗಳಲ್ಲೊಂದು. ವಿಸ್ತೀರ್ಣದಲ್ಲಿ ಇದು ಭಾರತದ ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. ವಿಸ್ತೀರ್ಣದಲ್ಲಿ ಗೋವಾ ಭಾರತದ ಅತಿ ಚಿಕ್ಕ ರಾಜ್ಯ ಹಾಗೂ ಜನಸಂಖ್ಯೆಯಲ್ಲಿ ನಾಲ್ಕನೇ ಅತಿ ಸಣ್ಣ ರಾಜ್ಯ. ಇದರ ವಿಸ್ತೀರ್ಣ 3,702. ಚ.ಕಿಮೀ. ಜನಸಂಖ್ಯೆ 15,86,250 (2020). ಗೋವಾದ ರಾಜಧಾನಿ ಪಣಜಿ ಹಾಗೂ ವಾಸ್ಕೋ ಡ ಗಾಮಾ ಅತಿ ದೊಡ್ಡ ನಗರವಾಗಿದೆ.

ಪ್ರಸಿದ್ಧ ಹಿಂದು ಮಂದಿರಗಳು

[ಬದಲಾಯಿಸಿ]
  • ಭಗವಾನ್ ಸರಹುನಾಥ್ ಮಂದಿರ (Lord Sarahunaath Temple, Goa - Margao), (ಅಯ್ಯಪ್ಪಸ್ವಾಮಿ ಮಂದಿರ, ಡೇವ್ರೋಲಿಮ್ನಲ್ಲಿ)

ಮೇಲ್ಮೈ ಲಕ್ಷಣ

[ಬದಲಾಯಿಸಿ]
  • ಗೋವ ಉತ್ತರದಲ್ಲಿ ತೇರೇಖೋಲ್ ನದಿಯಿಂದಾಗಿ ಮಹಾರಾಷ್ಟ್ರದಿಂದ ಪ್ರತ್ಯೇಕಿಸಲ್ಪಟ್ಟಿದೆ. ಸಹ್ಯಾದ್ರಿಯ ಸೆರಗಿನಲ್ಲಿರುವ ಗೋವದ ಪೂರ್ವಭಾಗ ಮಲೆನಾಡು. ಪೂರ್ವದಿಂದ ಪಶ್ಚಿಮಕ್ಕೆ ಹಲವಾರು ನದಿ ತೊರೆಗಳು ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತವೆ. ಇವುಗಳಲ್ಲಿ ಮುಖ್ಯವಾದವು ಮಾಂಡವೀ, ಜ಼ುವಾರೀ (ಅಘನಾಶಿನೀ), ತೇರೇಖೋಲ್, ಚಪೋರ್ ಮತ್ತು ಬೆತುಲ್. ಇವುಗಳಿಂದ ಒಟ್ಟು ಸು. ೨೭೦ ಕಿಮೀಗಳಷ್ಟು ಜಲಮಾರ್ಗಗಳು ಏರ್ಪಟ್ಟಿವೆ.
  • ಮಾಂಡವೀ ಗೋವದ ಈಶಾನ್ಯ ಭಾಗದಲ್ಲಿರುವ ಪರ್ವತ ಭೀಮಗಡದಲ್ಲಿ ಹುಟ್ಟಿ ಅಗ್ವಾದ ಕಿಲ್ಲೆಯ ಹತ್ತಿರ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಜವಾರೀ ನದಿ ಹೇಮಾಡ್ ಬಾರ್ಸೆ ಮತ್ತು ಅಷ್ಟಾಗ್ರಹಾರ ಎಂಬ ಭಾಗದಲ್ಲಿ ಹುಟ್ಟಿ ಮುರ್ಗಾಂವ್ ಕೊಲ್ಲಿಯಲ್ಲಿ ಸಮುದ್ರವನ್ನು ಸೇರುತ್ತದೆ. ತೇರೇಖೋಲ್ ಮೂರನೆಯ ದೊಡ್ಡ ನದಿ. ಮಣೇರಿಯ ಹತ್ತಿರ ಹುಟ್ಟಿ ತೇರೇಖೋಲ್ ಕಿಲ್ಲೆಯ ಹತ್ತಿರ ಸಮುದ್ರವನ್ನು ಸೇರುತ್ತದೆ. ಈ ನದಿಯ ದಡಗಳಲ್ಲಿ ತೆಂಗು ಅಡಿಕೆಗಳ ತೋಟಗಳನ್ನು ವಿಶೇಷವಾಗಿ ಕಾಣಬಹುದು.
  • ಸಹ್ಯಾದ್ರಿಯ ಕವಲುಗಳು ಗೋವದಲ್ಲಿವೆ. ಇವುಗಳಲ್ಲಿ ಪುರ್ವಕ್ಕಿರುವ ಸೊಂಸೋಗಡ ಬೆಟ್ಟ ಪ್ರಸಿದ್ಧವಾಗಿದೆ. ಅದರ ಉತ್ತರಕ್ಕೆ ಸತ್ತರೀ ಮಹಾಲದಲ್ಲಿ ವಾಘೇರಿ ಬೆಟ್ಟವಿದೆ. ಇನ್ನೊಂದು ಬೆಟ್ಟ ಮೋರ್ಲೆಗಡ. ಸಮಪಾತಳಿಯ ಮೇಲೆ ಇರುವ ಚಂದ್ರನಾಥ ಬೆಟ್ಟ ಸೃಷ್ಟಿಸೌಂದರ್ಯ ವೀಕ್ಷಣೆಗೆ ಪ್ರಸಿದ್ಧವೆನಿಸಿದೆ. ಗೋವದ ಶೇ.೨೯ ಪ್ರದೇಶ ಅರಣ್ಯಾವೃತ.
  • ವೈಜ್ಞಾನಿಕವಾಗಿ ಅರಣ್ಯವನ್ನು ರಕ್ಷಿಸುವ ಕಾರ್ಯ ಇತ್ತೀಚಿನವರೆಗೂ ನಡೆದಿರಲಿಲ್ಲ. 1963 ರಿಂದೀಚೆಗೆ ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ನೀಲಗಿರಿ, ತೇಗ, ಗೋಡಂಬಿ, ರಬ್ಬರ್, ಬಿದಿರು, ಗಾಳಿಮರ, ಸವಾರ್, ಮಾವು-ಈ ಮರಗಳನ್ನು ಈಗ ಬೆಳೆಸಲಾಗುತ್ತಿದೆ.

ಹವಾಮಾನ

[ಬದಲಾಯಿಸಿ]

ಗೋವದ ವಾಯುಗುಣ ತೇವೋಷ್ಣಮಯ. ಉಷ್ಣತೆಯಲ್ಲಿ ಹೆಚ್ಚು ವಾರ್ಷಿಕ ಅಂತರಗಳಿಲ್ಲ. ೧೦೦ ಮೀಗಿಂತ ಹೆಚ್ಚು ಎತ್ತರವಿಲ್ಲದ ಪೂರ್ವಾರ್ಧ ಭಾಗದಲ್ಲಿ 90”-120” (2,800-3,500ಮಿಮೀ) ಮಳೆಯಾಗುತ್ತದೆ. ಉಷ್ಣತೆ 70° ಫ್ಯಾ. - 90° ಫ್ಯಾ. (22° ಸೆಂ-32° ಸೆಂ). ಹೆಚ್ಚು ಎತ್ತರದ ಪ್ರದೇಶವಾದ (ಗರಿಷ್ಠ ಎತ್ತರ 1,200 ಮೀ) ಪೂರ್ವಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ (ಗರಿಷ್ಠ 300”). ಇಲ್ಲಿ ಉಷ್ಣತೆಯ ಅಂತರವೂ ಅಧಿಕ.

  • ಗೋವದಲ್ಲಿ 1.4 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಭತ್ತ ಇಲ್ಲಿಯ ಮುಖ್ಯ ಬೆಳೆ. ಇತರ ಮುಖ್ಯ ಬೆಳೆಗಳು ಬೇಳೆ ಮತ್ತು ಇತರ ಧಾನ್ಯಗಳು, ಕಬ್ಬು, ತರಕಾರಿ, ತೆಂಗು, ಅಡಿಕೆ, ಗೋಡಂಬಿ ಮತ್ತು ಹಣ್ಣುಗಳು.

ಗೋವದ ಮುಖ್ಯ ನೀರಾವರಿ ಯೋಜನೆಗಳು ಇವು : 1 ಸಾಂಗೆ ತಾಲ್ಲೂಕಿನ ಸಾತಾಲಿ ಮತ್ತು ದೂದ್ ಸಾಗರ್. 2 ಬಾರ್ದೇಜ್ ತಾಲ್ಲೂಕಿನಲ್ಲಿ ಅಂಜುನಾ, ಮಹಾರಾಷ್ಟ್ರದೊಂದಿಗೆ ಕೂಡಿ ತಿಲಾರಿ ಯೋಜನೆಯನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ತಿಲಾರಿ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ. ೨೦೧೩ರ ಹೊತ್ತಿಗೆ ಈ ಯೋಜನೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ.

  • ವ್ಯವಸಾಯದ ಜೊತೆಗೆ ಮೀನುಗಾರಿಕೆಯೂ ಇಲ್ಲಿಯ ಜನರ ಒಂದು ಮುಖ್ಯ ಕಸಬು. ಇಲ್ಲಿ 250 ಕಿಮೀ ಉದ್ದದ ಕರಾವಳಿಯೂ ಸು 100 ಹೆಕ್ಟೇರುಗಳಷ್ಟು ವಿಸ್ತಾರವಾದ ಸಿಹಿನೀರಿನ ಸರೋವರಗಳೂ ಇವೆ. ಕಡಲತೀರದ ಮತ್ತು ಒಳನಾಡಿನ ಜಲದಲ್ಲಿ ಮತ್ಸ್ಯಸಂಪತ್ತು ಸಮೃದ್ಧವಾಗಿದೆ. ಬಂಗಡೆ, ಬೈಗೆ, ಕೊರ್ಸುಲ, ಅರ್ಕುಲೈ ಮುಖ್ಯವಾದವು. ಕರಾವಳಿಯಲ್ಲಿ ಮೀನು ಹಿಡಿಯುವ ದೋಣಿಗಳಿಗೆ ರಕ್ಷಣೆಯಾಗಿ ಹಲವಾರು ಕಡಲಚಾಚುಗಳೂ ಅಳಿವೆಗಳೂ ಇವೆ. ಮತ್ಸ್ಯೋದ್ಯಮ ರಾಜ್ಯದ ಆರ್ಥಿಕ ಸಂಪನ್ಮೂಲಗಳಲ್ಲೊಂದು.

ಕೈಗಾರಿಕೆ

[ಬದಲಾಯಿಸಿ]
  • ಪೋರ್ಚುಗೀಸ್ ಆಡಳಿತದಿಂದ ಗೋವದ ವಿಮೋಚನೆಯಾಗುವವರೆಗೂ ಅದರ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಗಮನ ಸಂದಿರಲಿಲ್ಲ. ಅಕ್ಕಿ, ಹಿಟ್ಟು ಮತ್ತು ಎಣ್ಣೆ ಗಿರಣಿಗಳು, ಮರ ಕೊಯ್ಯುವ ಕಾರ್ಖಾನೆಗಳು, ಗೋಡಂಬಿ ಕಾರ್ಖಾನೆಗಳು ಮತ್ತು ಇಟ್ಟಿಗೆ ತಯಾರಿಕೆ-ಇವು ಅಲ್ಲಿದ್ದ ಕೆಲವು ಸಣ್ಣ ಉದ್ಯಮಗಳು. ದೋಣಿಯ ನಿರ್ಮಾಣ ಮತ್ತು ದುರಸ್ತಿ, ಮಾಂಸ, ಹಣ್ಣು ಮತ್ತು ಮೀನಿನ ರಕ್ಷಣೆ, ಕೈಮಗ್ಗ, ತೆಂಗಿನ ಎಣ್ಣೆ ತಯಾರಿಕೆ-ಇವು ಹಲವರಿಗೆ ಉದ್ಯೋಗ ದೊರಕಿಸಿಕೊಟ್ಟಿವೆ.
  • ಮರಗೆಲಸ, ತೆಂಗಿನ ನಾರಿನ ವಸ್ತುಗಳ ತಯಾರಿಕೆ, ಬಿದಿರಿನ ಕೆಲಸ, ಪಾದರಕ್ಷೆ ತಯಾರಿಕೆ, ಕುಂಬಾರಿಕೆ, ಕುಶಲ ವಸ್ತುಗಳ ತಯಾರಿಕೆ-ಇವು ಹಿಂದಿನಿಂದ ಬಂದಿರುವ ಕೆಲವು ಮುಖ್ಯ ಉದ್ಯೋಗಗಳು. ಗೋವದಲ್ಲಿ ಒಟ್ಟು 60 ಮೆವಾ. ಸ್ಥಾಪಿತ ಸಾಮಥರ್ಯ್‌ದ ಜಲವಿದ್ಯುತ್ ಮತ್ತು ಉಷ್ಣವಿದ್ಯುತ್ ಕೇಂದ್ರಗಳಿವೆ. ನೆರೆಯ ಕರ್ನಾಟಕ, ಮಹಾರಾಷ್ಟ್ರಗಳಿಂದ ಗೋವಕ್ಕೆ ವಿದ್ಯುತ್ ಸರಬರಾಜು ಆಗುತ್ತದೆ.

ಖನಿಜ ಸಂಪತ್ತು

[ಬದಲಾಯಿಸಿ]
  • ಗೋವದಲ್ಲಿ ಖನಿಜಸಂಪತ್ತು ಧಾರಾಳವಾಗಿದೆ. ಕಬ್ಬಿಣದ ಅದಿರು, ಕೆಳಶ್ರೇಣಿಯ ಮ್ಯಾಂಗನೀಸ್ ಅದಿರು, ಬಾಕ್ಸೈಟ್ ಇವು ವಿಶೇಷವಾಗಿ ನಿರ್ಯಾತವಾಗುತ್ತವೆ. ಭಾರತದಿಂದ ರಫ್ತಾಗುವ ಕಬ್ಬಿಣ ಅದಿರಿನಲ್ಲಿ ಸುಮಾರು ಅರ್ಧಭಾಗ ಗೋವದಿಂದ ನಿರ್ಯಾತವಾಗುತ್ತದೆ. ಬಿಚೋಲಿ, ಕುದ್ನೇಮ್, ಪಾಲಿ, ಪೈಲ್ಗಾಂವ್ ಮತ್ತು ಸಿರಿಗಾಂವ್‍ಗಳಲ್ಲಿ ಕಬ್ಬಿಣ ಅದಿರನ್ನೂ ಸಾಂಗೆ ತಾಲ್ಲೂಕಿನಲ್ಲಿ ಮ್ಯಾಂಗನೀಸನ್ನೂ ಕೆಪೆ ತಾಲ್ಲೂಕಿನಲ್ಲಿ ಬಾಕ್ಸೈಟನ್ನೂ ತೆಗೆಯಲಾಗುತ್ತಿದೆ.
  • ಕಬ್ಬಿಣ ಅದಿರಿನ ಕಬ್ಬಿಣ ಅಂಶ ಶೇ.57-ಶೇ.62. ಗೋವದಲ್ಲಿ ದೊರಕುವ ಮ್ಯಾಂಗನೀಸ್ ಅದಿರು ಪೈರೊಲುಸೈಟ್ ಮತ್ತು ಪ್ಸಿಲೊಮಿಲೇನ್. ಭಾರತದ ಇತರೆಡೆಗಳಲ್ಲಿ ದೊರಕುವ ಬಾಕ್ಸೈಟ್ ಅದಿರುಗಳಿಗಿಂತ ಗೋವದ್ದು ಭಿನ್ನವಾದ್ದು. ಇದೊಂದು ಟ್ರೈ ಹೈಡ್ರೇಟ್. ಇದರಲ್ಲಿ ನಾನಾ ದರ್ಜೆಗಳುಂಟು. ಮಧ್ಯಮ ದರ್ಜೆಯ ಅದಿರಿಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ.

ಸಂಚಾರ

[ಬದಲಾಯಿಸಿ]

ಗೋವದಲ್ಲಿ ರಸ್ತೆ ಮಾರ್ಗವಿದೆ. ರಾಷ್ಟ್ರೀಯ ಹೆದ್ದಾರಿ 224 ಕಿಮೀ, ರಾಜ್ಯ ಹೆದ್ದಾರಿ 232 ಕಿಮೀ, ಜಿಲ್ಲಾ ರಸ್ತೆಗಳು ೮೧೫ ಕಿಮೀ ಇವೆ. ಇಂದು ಗೋವ ರೈಲು ಮಾರ್ಗ ಬಹಳಷ್ಟು ಸುಧಾರಿಸಿದ್ದು ಮುಂಬಯಿ, ಮಂಗಳೂರು, ತಿರುವನಂತಪುರಗಳಿಗೆ ಕೊಂಕಣ ರೈಲು ಮಾರ್ಗ ಸಂಪರ್ಕ ಕಲ್ಪಿಸಿದೆ. ಮುಂಬಯಿ, ದೆಹಲಿ, ಕೊಚ್ಚಿ, ಚೆನ್ನೈ, ಬೆಂಗಳೂರು ನಗರಗಳಿಗೆ ವಿಮಾನ ಸಂಪರ್ಕವಿದೆ.

  • ಗೋವದ ನದಿಗಳು ದೋಣಿಗಳ ಸಂಚಾರಕ್ಕೆ ಅನುಕೂಲವಾಗಿವೆ. ಮಾಂಡವೀ ಮತ್ತು ಜವಾರೀ ನದಿಗಳು ಈ ದೃಷ್ಟಿಯಿಂದ ಉಪಯುಕ್ತ. ಕಬ್ಬಿಣ ಅದಿರನ್ನು ರಫ್ತು ಮಾಡುವ ಸಲುವಾಗಿ ಮಾರ್ಮಗೋವ ಬಂದರಿಗೆ ಸಾಗಿಸಲು ಇವು ಬಹು ಅನುಕೂಲವಾಗಿವೆ. 100 ಕಿಮೀ ಉದ್ದದ ಕರಾವಳಿಯಿರುವ ಗೋವದ ಮುಖ್ಯ ಬಂದರು ಮಾರ್ಮಗೋವ. ಮುಂಬಯಿ, ಕೊಚ್ಚಿಗಳ ನಡುವಣ ದೊಡ್ಡ ರೇವು ಇದು.
  • ಗೋವದ ಆಯಾತ-ನಿರ್ಯಾತಗಳಲ್ಲಿ ಶೇ. 90ಕ್ಕಿಂತಲೂ ಹೆಚ್ಚು ಭಾಗ ಈ ಬಂದರಿನ ಮೂಲಕ ಸಾಗುತ್ತದೆ. ಸೆಪ್ಟೆಂಬರಿನಿಂದ ಮೇ ವರೆಗೆ ಮುಂಬಯಿಯಿಂದ ಮಾರ್ಮಗೋವಕ್ಕೆ ಪ್ರಯಾಣಿಕ ನೌಕೆಗಳು ಸಂಚರಿಸುತ್ತವೆ. ಚಪೋರ, ಪಣಜಿ, ಬೇತುಲ್, ತಲ್ಪೋರ ಇವು ಇತರ ಬಂದರುಗಳು.

ನಗರಗಳು

[ಬದಲಾಯಿಸಿ]
ಹಸಿರು ಬಣ್ಣಗಳಲ್ಲಿರುವುದು ಉತ್ತರ ಗೋವಾ ಜಿಲ್ಲೆ ಹಾಗೂ ಕಿತ್ತಳೆ ಬಣ್ಣಗಳಲ್ಲಿರುವುದು ದಕ್ಷಿಣ ಗೋವಾ ಜಿಲ್ಲೆ.
ಗೋವೆಯ ಆಡಳಿತ ವಿಭಾಗಗಳು.
Commercial area in Panaji.
  • ಗೋವದ ರಾಜಧಾನಿ ಪಣಜಿ. ಮಾಂಡವೀ ನದಿಯ ಎಡದಂಡೆಯ ಮೇಲೆ ಇರುವ ಪಣಜಿಯ ವಿಸ್ತೀರ್ಣ 36 ಚ.ಕಿಮೀ. ಜನಸಂಖ್ಯೆ 1,14,405 (2011). ಹಿಂದೆ ಇದು ಮೀನು ಹಿಡಿಯುವವರ ಹಳ್ಳಿಯಾಗಿತ್ತು. ಈಗ ಇದೊಂದು ಸುಂದರ ನಗರ. ಎಲ್ಲೆಲ್ಲೂ ಹಸುರು ತುಂಬಿದೆ. ಹಳೆಯ ಗೋವ ಬಹುಮಟ್ಟಿಗೆ ಪಾಳುಬಿದ್ದ ನಗರ. ಗತಕಾಲದ ಸ್ಮಾರಕಗಳಾಗಿ ಕೆಲವು ಕಟ್ಟಡಗಳು ಅಲ್ಲಿ ಉಳಿದಿವೆ.
  • ೧೫೧೧ರಲ್ಲಿ ಕಟ್ಟಿ ೧೬೨೩ರಲ್ಲಿ ಜೀರ್ಣೋದ್ಧಾರವಾದ ಕ್ರೈಸ್ತ ಆರಾಧನ ಮಂದಿರ, ಸೇಂಟ್ ಫ್ರಾನ್ಸಿಸ್ ಕ್ರೈಸ್ತ ಸನ್ಯಾಸಿನಿಯರ ಮಠ, ಪ್ರಸಿದ್ಧವೂ ಸುಂದರವೂ ಆದ ಸೇಂಟ್ ಫ್ರಾನ್ಸಿಸನ ಬಾಮ್ ಜೀಸಸ್ ಎಂಬ ಸಮಾಧಿ ಭವನ, 17ನೆಯ ಶತಮಾನದ ಸೇಂಟ್ ಲೋನಿಕಾ ಕ್ರೈಸ್ತ ಸನ್ಯಾಸಿನಿಯರ ಮಠ, ಶಿಥಿಲಾವಸ್ಥೆಯಲ್ಲಿರುವ ಸೇಂಟ್ ಪಾಲ್ ಕಾಲೇಜು-ಇವು ಮುಖ್ಯವಾದವು. ಮಾರ್ಗೋವ ಎರಡನೆಯ ಮುಖ್ಯ ನಗರ. ಇದರ ಜನಸಂಖ್ಯೆ 1,06,528 (2011). ಇದು ದಕ್ಷಿಣ ಗೋವದ ಮುಖ್ಯ ವಾಣಿಜ್ಯ ಕೇಂದ್ರ.
  • ಮಪುಸ 40,487 (2011) ಉತ್ತರ ಗೋವದಲ್ಲಿದೆ. ಗೋವ ರಾಜ್ಯವನ್ನು ಉತ್ತರ ಗೋವ (ವಿಸ್ತೀರ್ಣ 1736 ಚಕಿಮೀ. ದಕ್ಷಿಣ ಗೋವ (ವಿಸ್ತೀರ್ಣ 1,966 ಚ.ಕಿಮೀ) ಎಂದು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಪಣಜಿ ಉತ್ತರ ಗೋವದ ಆಡಳಿತ ಕೇಂದ್ರ. ಮಡಗಾಂವ್ ದಕ್ಷಿಣ ಗೋವದ ಆಡಳಿತ ಕೇಂದ್ರ. ಗೋವಾ ಭೂದಾಖಲೆಯನ್ನು ಗಣಕೀಕೃತಗೊಳಿಸಿದ ಭಾರತದ ಪ್ರಥಮ ರಾಜ್ಯವಾಗಿದೆ.

ಪ್ರವಾಸೋದ್ಯಮ

[ಬದಲಾಯಿಸಿ]
Palolem Beach.

ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಕೆಲವು ಬೀಚುಗಳು ಗೋವದಲ್ಲಿವೆ. ಕಲಾಂಗೂಟೆ, ಕೋಲ್ವ, ದೋನಾ ಪಾಲಾ, ಸಿರಿದಾವೊ, ವಾಗತೋರ, ಮಾಂದ್ರೇ ಮತ್ತು ಮೋರ್ಜಿ ಬೀಚುಗಳಿಗೆ ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.

ಜನಜೀವನ

[ಬದಲಾಯಿಸಿ]

ಗೋವ ಭಾರತದಲ್ಲೇ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಇಲ್ಲಿಯ ಜಿಡಿಪಿಯು ಭಾರತದ ಸರಾಸರಿ ಜಿಡಿಪಿಗಿಂತ ಎರಡೂವರೆ ಪಟ್ಟು ಹೆಚ್ಚಿದೆ.

Gross State Domestic Product (in millions of Rupees)[]
Year GSDP
1980 3,980
1985 6,550
1990 12,570
1995 33,190
2000 76,980
2010 150,000

ಗೋವದ ಐತಿಹಾಸಿಕ ಜನಸಂಖ್ಯೆಯ ಏರಿಕೆಯನ್ನು ಈ ಕೆಳಗಿನ ತಖ್ತೆಯಲ್ಲಿ ಕೊಡಲಾಗಿದೆ.

ಮತಗಳು

[ಬದಲಾಯಿಸಿ]
  • ಹಳೆಯ ಗೋವದಲ್ಲಿ ಕ್ರೈಸ್ತರು ಹೆಚ್ಚು; ಹೊಸ ಗೋವದಲ್ಲಿ (ನೊವ ಗೋವ) ಹಿಂದುಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಪೋರ್ಚುಗೀಸರ ಅಂತರ ವಿವಾಹಗಳಿಂದ ಸ್ವಲ್ಪಮಟ್ಟಿಗೆ ಸಂಮಿಶ್ರ ಜನಾಂಗದವರಿದ್ದಾರೆ. ಇಲ್ಲಿಯ ಜನರ ಮಾತೃಭಾಷೆ ಕೊಂಕಣಿ. ಸಾಮಾನ್ಯವಾಗಿ ಕ್ರಿಶ್ಚಿಯನರು ಪೋರ್ಚುಗೀಸ್ ಭಾಷೆಯನ್ನೂ ಹಿಂದುಗಳು ಕೊಂಕಣಿ ಭಾಷೆಯನ್ನೂ ಆಡುತ್ತಾರೆ.
  • ಜನಸಾಂದ್ರತೆ ಹಾಗೂ ಪೋರ್ಚುಗೀಸರ ಮಿತಿಮೀರಿದ ತೆರಿಗೆಯಿಂದಾಗಿ ಜನರು ಅನೇಕ ಕಡೆಗಳಿಗೆ ವಲಸೆ ಹೋದರು. ಅನೇಕರು ಆಫ್ರಿಕದತ್ತ ಸಾಗಿ ಮೊಜ಼ಾಂಬಿಕ್ ಹಾಗೂ ನೇಟಾಲ್ಗಳಲ್ಲಿ ನೆಲೆಸಿದರು. ಮುಂಬಯಿಗೆ ತೆರಳಿದ ಗೋವನರೇ ಹೆಚ್ಚು.
ಗೋವಾದ ಮತಗಳು []
ಹಿಂದೂಮತ
  
65.7%
ಕ್ರೈಸ್ತಮತ
  
26.6%
Islam।ಇಸ್ಲಾಮ್
  
6.8%
ಇತರೆ
  
0.9%
  • ಗೋವದಲ್ಲಿ ಹಿಂದೂ ಹಾಗೂ ಕ್ರೈಸ್ತ ಮತಗಳು ಪ್ರಚಾರದಲ್ಲಿವೆ. ಕದಂಬರ ಕಾಲದ ಸಪ್ತಕೋಟೀಶ್ವರ ದೇವಾಲಯ, ಸೇಂಟ್ ಫ್ರಾನ್ಸಿಸ್ ಜೇ಼ವಿಯರನ ಸಮಾಧಿಭವನ ಪ್ರಸಿದ್ಧವಾದವು. ಸಂತ ಜೇ಼ವಿಯರನ ಪಾರ್ಥಿವ ಶರೀರವನ್ನು ಭಕ್ತರಿಗೆ ಹತ್ತು ವರ್ಷಗಳಿಗೊಮ್ಮೆ ಪ್ರದರ್ಶಿಸುತ್ತಾರೆ. ಹಳೆಯ ಗೋವದಲ್ಲಿ ಲೆಂಟ್ ಉಪವಾಸ ದಿನಗಳಲ್ಲಿ ಸಂತರ ವಿಗ್ರಹಗಳನ್ನು ಮೆರೆವಣಿಗೆ ಮಾಡುತ್ತಾರೆ. ಪೋರ್ಚುಗೀಸರು ಬಂದಮೇಲೆ ಗೋವದಲ್ಲಿ ಕ್ರೈಸ್ತಮತ ಪ್ರಚಾರವಾಯಿತು. ಡಾಮಿನಿಕ್ ಪಂಥದ ಕ್ರೈಸ್ತ ಸನ್ಯಾಸಿಗಳು ಗೋವಕ್ಕೆ ಬಂದದ್ದು 1510ರಲ್ಲಿ.
  • 1517ರಲ್ಲಿ ಬಂದ ಫ್ರಾನ್ಸಿಸ್ಕನ್ ಪಾದ್ರಿಗಳು ಕ್ರೈಸ್ತಮತ ಪ್ರಚಾರವನ್ನು ಆರಂಭಿಸಿದರು. ಫ್ರಾನ್ಸಿಸ್ಕನ್ ಪಂಥದ ಸನ್ಯಾಸಿ ಜೊವಾನ್ ದ ಆಲ್ಬುಕರ್ಕ್ 1538ರಲ್ಲಿ ಗೋವದ ಪ್ರಥಮ ಬಿಷಪ್ ಆಗಿ ನೇಮಕವಾದ. 1542ರಲ್ಲಿ ಫ್ರಾನ್ಸಿಸ್ಕ್‌ ಜೇವಿಯರ್ ಸ್ಥಳೀಯ ಮತಪ್ರಚಾರಕರಿಗೆ ತರಬೇತು ನೀಡುವ ಸಾಂತಾಫಿ ಕಾಲೇಜಿನ ಮೇಲ್ವಿಚಾರಕನಾದ. ತರುವಾಯ ಈ ಕಾಲೇಜಿಗೆ ಸೇಂಟ್ ಪಾಲ್ ಕಾಲೇಜು ಎಂದು ಹೆಸರಾಯಿತು.
  • 1557ರ ಫೆಬ್ರವರಿ 4 ಪೋಪ್ ಹೊರಡಿಸಿದ ಆಜ್ಞೆಯ ಪ್ರಕಾರ ಗೋವವೂ ಆರ್ಚ್ಬಿಷಪನ ಅಧಿಕಾರವ್ಯಾಪ್ತಿಯ ಕೇಂದ್ರವೂ ಪ್ರಾಚ್ಯಪ್ರಾಂತಗಳ ರೋಮನ್ ಕೆಥೊಲಿಕ್ ಪಾದ್ರಿಗಳ ಕೇಂದ್ರವೂ ಆಯಿತು. 20ನೆಯ ಶತಮಾನದಲ್ಲಿ ಪೋಪ್ ಹೊರಡಿಸಿದ ಅಧಿಕೃತ ನಿಯಮಗಳ ಪ್ರಕಾರ ಗೋವದ ಆರ್ಚ್ಬಿಷಪ್ ಅಧಿಕಾರ ಇಡೀ ಪೋರ್ಚುಗೀಸ್ ಭಾರತಕ್ಕೆ ಅನ್ವಯಿಸಿತು. ಇಲ್ಲಿಯ ಜನರ ಭಾಷೆ ಮುಖ್ಯವಾಗಿ ಕೊಂಕಣಿ. ಕನ್ನಡ,ಮರಾಠಿ, ಹಿಂದಿ ಭಾಷೆಗಳೂ ಬಳಕೆಯಲ್ಲಿವೆ.
Languages in Goa
Konkani
  
61%
Kannada
  
19%
Marathi
  
7%
Hindi
  
5%
Urdu
  
4%
Others
  
4%

ಇತಿಹಾಸ

[ಬದಲಾಯಿಸಿ]
Goan-Portuguese villa
ಕವಳೆಯಲ್ಲಿರುವ ಶಾಂತಾದುರ್ಗಾ ದೇವಸ್ಥಾನ
Rock cut engraving at Usgalimal
Gold coins issued by the Kadamba king of Goa, Shivachitta Paramadideva. Circa 1147–1187 AD.
  • ಗೋವದ ಇತಿಹಾಸ ಪ್ರಾಚೀನವಾದ್ದು. ಹಲವು ಪುರಾಣಗಳಲ್ಲೂ ಶಾಸನಗಳಲ್ಲೂ ಗೋವದ ಉಲ್ಲೇಖಗಳಿವೆ. ಪರಶುರಾಮ ಮಿಥಿಲೆಯಿಂದ ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ಇಲ್ಲಿ ನೆಲೆಗೊಳಿಸಿದನೆಂದು ಪ್ರತೀತಿಯಿದೆ. ಇತಿಹಾಸಕಾಲದಲ್ಲಿ ಗೋವ ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು. ದಖನಿನಲ್ಲಿ ಸಾಮ್ರಾಜ್ಯ ಸ್ಥಾಪಿಸಿ ದೀರ್ಘಕಾಲ ರಾಜ್ಯವಾಳಿದ ಶಾತವಾಹನರು ತಮ್ಮ ಸಾರ್ವಭೌಮತ್ವವನ್ನು ಗೋವದ ಮೇಲೂ ಸ್ಥಾಪಿಸಿದ್ದರು. ರೋಮನ್ ಸಾಮ್ರಾಜ್ಯಕ್ಕೂ ದಖನ್ ಪ್ರದೇಶಕ್ಕೂ ವ್ಯಾಪಾರ ಸಂಪರ್ಕವಿತ್ತು.
  • ಗೋವ ಪಟ್ಟಣ ಮುಖ್ಯ ವ್ಯಾಪಾರ ಕೇಂದ್ರ ಹಾಗೂ ಪ್ರಮುಖ ಬಂದರು ಆಗಿತ್ತೆಂದು ತಿಳಿದುಬರುತ್ತದೆ.ಶಾತವಾಹನರ ಸಾಮ್ರಾಜ್ಯ ಅವನತಿ ಹೊಂದಿದ ಅನಂತರ ತಲೆಯೆತ್ತಿದ ಬನವಾಸಿ ಕದಂಬ ಮನೆತನ ಗೋವದ ಬಹುಭಾಗದಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿತ್ತು. ಆರನೆಯ ಶತಮಾನದ ಕೊನೆಯಲ್ಲಿ ಬಾದಾಮಿ ಚಾಳುಕ್ಯ ಮನೆತನ ಪ್ರಬಲವಾಗಿ ಕದಂಬರನ್ನು ಸೋಲಿಸಿತು. ಒಂದನೆಯ ಕೀರ್ತಿವರ್ಮ ಕೊಂಕಣದ ಹಲವು ಪ್ರದೇಶಗಳ ಮೇಲೆ ಚಾಳುಕ್ಯರ ಅಧಿಕಾರವನ್ನು ಸ್ಥಾಪಿಸಿದ.
  • ಇಮ್ಮಡಿ ಪುಲಕೇಶಿ ತನ್ನ ದಿಗ್ವಿಜಯ ಕಾಲದಲ್ಲಿ ಕೊಂಕಣ ಪ್ರದೇಶವನ್ನು ಪುರ್ಣವಾಗಿ ಜಯಿಸಿ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಇವನು ಗೋವದ ಉತ್ತರ ಪ್ರದೇಶದಲ್ಲಿ ಆಳುತ್ತಿದ್ದ ಮೌರ್ಯ ಶಾಖೆಯ ರಾಜನನ್ನು ಸೋಲಿಸಿದ ಸಂಗತಿ ಐಹೊಳೆಯ ಶಾಸನದಿಂದ ತಿಳಿದುಬರುತ್ತದೆ. ಬಾದಾಮಿ ಚಾಳುಕ್ಯ ಸಾಮ್ರಾಜ್ಯ 757ರಲ್ಲಿ ಕೊನೆಗೊಂಡ ಅನಂತರ ಗೋವ ಪ್ರದೇಶ ರಾಷ್ಟ್ರಕೂಟ ಸಾಮ್ರಾಜ್ಯದ ಭಾಗವಾಯಿತು.
  • ಚಾಳುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಟರ ಕಾಲದಲ್ಲಿ ಅರೇಬಿಯ, ಪರ್ಷಿಯ ಮತ್ತು ದಖನ್‍ಗಳ ನಡುವೆ ವ್ಯಾಪಾರ ಸಂಪರ್ಕ ವಿಶೇಷವಾಗಿ ಅಭಿವೃದ್ಧಿ ಹೊಂದಿತ್ತು. ವಿದೇಶೀ ಹಡಗುಗಳು ಗೋವ ಬಂದರಿಗೆ ಬರುತ್ತಿದ್ದುವು. ಗೋವ ಪಟ್ಟಣ ಪಶ್ಚಿಮ ತೀರದ ಮುಖ್ಯ ವ್ಯಾಪಾರ ಕೇಂದ್ರಗಳಲ್ಲೊಂದಾಗಿತ್ತು. ರಾಷ್ಟ್ರಕೂಟರ ಕೊನೆಗಾಲದಲ್ಲಿ ಗೋವ ಪ್ರದೇಶದಲ್ಲಿ ಕದಂಬರು ರಾಜ್ಯ ಸ್ಥಾಪಿಸಿದರು. ಇವರಿಗೆ ಗೋವೆಯ ಕದಂಬರೆಂದೇ ಹೆಸರಾಗಿದೆ. ಗೋವದ ಕದಂಬ ಮನೆತನ ಕದಂಬ ಮನೆತನದ ಉಪಶಾಖೆಗಳಲ್ಲೊಂದಾಗಿತ್ತು.
  • ಗೋವದ ಸಮೀಪದ ಚಂದ್ರಪುರ (ಇಂದಿನ ಚಂದೂರು) ಇವರ ರಾಜಧಾನಿಯಾಗಿತ್ತು. ಈ ಶಾಖೆಯ ಆರಂಭ ಕಾಲದ ಕಂಟಕಾಚಾರ್ಯ, ನಾಗವರ್ಮ, 1ನೆಯ ಗುಹಲದೇವ ಮೊದಲಾದವರು ಅಷ್ಟು ಪ್ರಬಲರಾಗಿರಲಿಲ್ಲ. ಒಂದನೆಯ ಷಷ್ಟದೇವ ಅಥವಾ ಚತುರ್ಭುಜನೆಂಬ ರಾಜ 970ರ ಸುಮಾರಿನಲ್ಲಿ ಪ್ರಬಲನಾಗಿದ್ದುದಲ್ಲದೆ ರಾಷ್ಟ್ರಕೂಟ ಸಾಮ್ರಾಜ್ಯವನ್ನು ಕೊನೆಗಾಣಿಸುವಲ್ಲಿ ಕಲ್ಯಾಣಿ ಚಾಳುಕ್ಯ ತೈಲಪನಿಗೆ ಸಹಾಯ ಮಾಡಿದನೆಂದು ತಿಳಿದುಬಂದಿದೆ.
  • 11ನೆಯ ಶತಮಾನದ ಪ್ರಾರಂಭದಲ್ಲಿ ಆಳುತ್ತಿದ್ದ 2ನೆಯ ಗುಹಿಲದೇವನ ಕಾಲದಲ್ಲಿ ಗೋವ ಪ್ರಸಿದ್ಧವಾದ ವಾಣಿಜ್ಯ ಕೇಂದ್ರವೂ ರೇವು ಪಟ್ಟಣವೂ ಆಗಿತ್ತೆಂದೂ ಆ ವೇಳೆಗೆ ಅರಬ್ ವರ್ತಕರು ಗೋವೆಯಲ್ಲಿ ನೆಲಸಿದ್ದರೆಂದೂ ತಿಳಿದುಬರುತ್ತದೆ. ಅನಂತರ ಆಳಿದ 2ನೆಯ ಷಷ್ಟದೇವ ಇಡೀ ಕೊಂಕಣ ಪ್ರದೇಶದ ಮೇಲೆ ತನ್ನ ಆಳಿಕೆ ಸ್ಥಾಪಿಸಿದ. ಇವನಿಗೆ ಚಟ್ಟಲ ಮತ್ತು ಚಟ್ಟಯ್ಯ ಎಂಬ ಹೆಸರುಗಳಿದ್ದುವು. ಚಾಳುಕ್ಯ ಜಯಸಿಂಹನ ಆಶ್ರಿತನಾಗಿದ್ದ ಇವನ ಆಳಿಕೆಯಲ್ಲಿ ಗೋವ ಪಟ್ಟಣ ವಾಣಿಜ್ಯ ಕೇಂದ್ರವಾಗಿ ವಿಶೇಷ ಪ್ರಸಿದ್ಧಿ ಪಡೆದಿತ್ತು.
  • ಗೋವ ರೇವು ಪಟ್ಟಣ ಭವ್ಯ ಭವನಗಳಿಂದಲೂ ಇಬ್ಬದಿಯ ದೊಡ್ಡ ದೊಡ್ಡ ಮಳಿಗೆಗಳಿಂದ ಕೂಡಿದ ವಿಶಾಲ ಬೀದಿಗಳಿಂದಲೂ ಉದ್ಯಾನಗಳಿಂದಲೂ ಕಂಗೊಳಿಸುತ್ತಿತ್ತೆಂದು ಆ ಕಾಲದ ಶಾಸನಗಳಲ್ಲಿ ವರ್ಣಿಸಲಾಗಿದೆ. ಷಷ್ಟದೇವನ ಅನಂತರ ಅವನ ಮಗನಾದ 1ನೆಯ ಜಯಕೇಶಿ ಗೋವದ ರಾಜನಾದ. ಗೋವ ರಾಜ್ಯ ಇವನ ಆಳಿಕೆಯ ಕಾಲದಲ್ಲಿ ಕಪಾರ್ಡಿಕ ದ್ವೀಪ, ಕೊಂಕಣ, ಹೈವೆ, ಹಲಸೀಗೆ ಮೊದಲಾದ ಪ್ರದೇಶಗಳನ್ನೊಳಗೊಂಡಿತ್ತು.
  • ಪರಾಕ್ರಮಿಯೂ ದೂರದರ್ಶಿಯೂ ಆದ ಈತ ಕಲ್ಯಾಣಿ ಚಾಳುಕ್ಯ ವಿಕ್ರಮಾದಿತ್ಯನಿಗೆ ತನ್ನ ಒಬ್ಬ ಮಗಳನ್ನೂ ಅನಿಲ್ವಾಡದ ಚಾಳುಕ್ಯ ಕರ್ಣನಿಗೆ ತನ್ನ ಮತ್ತೊಬ್ಬ ಮಗಳನ್ನೂ ಕೊಟ್ಟು ವಿವಾಹ ಮಾಡಿ ಗೋವ ಕದಂಬ ಸಂತತಿಯ ಪ್ರಭಾವವನ್ನು ವಿಸ್ತರಿಸಿದ. ಈತ ಗೋವ ಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಅನೇಕ ಸಮಕಾಲೀನ ಶಾಸನಗಳಲ್ಲಿ ಅಂದಿನ ಗೋವ ನಗರದ ಸೌಂದರ್ಯವೂ ಐಶ್ವರ್ಯವೂ ವರ್ಣಿಸಲ್ಪಟ್ಟಿವೆ.
  • ರಾಜಮಾರ್ಗಗಳಲ್ಲಿ ಪಂಡಿತರೂ ಶ್ರೀಮಂತರೂ ಧನಕನಕ ಐಶ್ವರ್ಯಾದಿಗಳೂ ಕಣ್ಮನಗಳಿಗೆ ಹಬ್ಬವನ್ನುಂಟು ಮಾಡುತ್ತ ನಗರ ಅಮರಪುರಿಯಂತೆ ಕಂಗೊಳಿಸುತ್ತದೆ ಎಂಬುದಾಗಿ ಹಲವು ಶಾಸನಗಳಲ್ಲಿ ವರ್ಣಿಸಲಾಗಿದೆ. ಒಂದನೆಯ ಜಯಕೇಶಿಯ ಪ್ರಧಾನಮಂತ್ರಿಯಾಗಿದ್ದ, ಅರಬ್ ಮೂಲದ ಸದನೋ ಎಂಬವನು ಗೋವ ನಗರದ ಮತ್ತು ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ವಿಶೇಷವಾಗಿ ಶ್ರಮಿಸಿದ. ಗೋವ ಬಂದರನ್ನು ಅಭಿವೃದ್ಧಿಪಡಿಸಿ ಸಾಗರೋತ್ತರ ವ್ಯಾಪಾರವನ್ನು ಪ್ರೋತ್ಸಾಹಿಸಿದ. ಗೋವದ ಜನರು ಐಶ್ವರ್ಯ ಮತ್ತು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. *1053ರಲ್ಲಿ ಈ ಮಂತ್ರಿ ಬಡಬಗ್ಗರ ಸಹಾಯಕ್ಕಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಿದ. ನಿರ್ಗತಿಕರಿಗೂ ಅಂಗವಿಕಲರಿಗೂ ಉಚಿತ ಊಟ ವಸತಿಯನ್ನು ಒದಗಿಸಿದ. ಈ ಸಂಸ್ಥೆಯ ವೆಚ್ಚಕ್ಕಾಗಿ ಹೊರಗಿನಿಂದ ಗೋವ ಬಂದರಿಗೆ ಬರುತ್ತಿದ್ದ ವ್ಯಾಪಾರಿ ಹಡಗುಗಳ ಮೇಲೆ ನಿಗದಿಯಾದ ಸುಂಕ ವಿಧಿಸಿದ. ಅಲ್ಲದೆ ಗೋವ ರಾಜ್ಯದಲ್ಲಿ ಸಂತಾನವಿಲ್ಲದೆ ಮರಣ ಹೊಂದಿದ ಶ್ರೀಮಂತರ ಆಸ್ತಿ ಈ ಸಂಸ್ಥೆಗೆ ಸೇರತಕ್ಕದ್ದೆಂದು ಕಾನೂನು ಜಾರಿಗೆ ಬಂತು. ಈ ಸಂಸ್ಥೆಯ ಆದಾಯ ಹೇರಳವಾಗಿತ್ತು.
  • ಒಂದನೆಯ ಜಯಕೇಶಿಯ ಆಳಿಕೆಯಲ್ಲಿ ಗೋವ ರಾಜ್ಯ ಸರ್ವತೋಮುಖ ಅಭಿವೃದ್ಧಿ ಹೊಂದಿ ನೆಮ್ಮದಿಯ ಬೀಡಾಗಿತ್ತು. ಇವನ ಅನಂತರ 3ನೆಯ ಗುಹಿಲದೇವ ಮತ್ತು ವಿಜಯಾದಿತ್ಯ ಎಂಬುವರು ಅನುಕ್ರಮವಾಗಿ ಗೋವ ರಾಜ್ಯವನ್ನಾಳಿದರು. ವಿಜಯಾದಿತ್ಯನ ಮರಣಾನಂತರ ಅವನ ಮಗನಾದ 2ನೆಯ ಜಯಕೇಶಿ ರಾಜನಾಗಿ 1104ರಿಂದ 1148ರ ವರೆಗೆ ಆಳಿದ. ಎರಡನೆಯ ಜಯಕೇಶಿಯ ಆಳಿಕೆಯಲ್ಲಿ ಗೋವ ರಾಜ್ಯ ಉನ್ನತಿಯ ಶಿಖರ ಮುಟ್ಟಿತು.
  • ವಿವೇಕಿಯೂ ಪರಾಕ್ರಮಿಯೂ ಆದ ಜಯಕೇಶಿ ಕಲ್ಯಾಣಿ ಚಾಳುಕ್ಯರ ಅಧೀನತೆಯಿಂದ ಸ್ವತಂತ್ರನಾಗಲು ಹವಣಿಸಿ ಕೊಂಕಣ ಚಕ್ರವರ್ತಿ ಎಂಬ ಬಿರುದನ್ನು ಧರಿಸಿದ. ದೂರದರ್ಶಿಯಾದ ಚಾಳುಕ್ಯ ಸಾರ್ವಭೌಮ 6ನೆಯ ವಿಕ್ರಮಾದಿತ್ಯ ತನ್ನ ಮಗಳನ್ನು ಜಯಕೇಶಿಗೆ ಕೊಟ್ಟು ವಿವಾಹ ಮಾಡಿ ಗೋವ ಮತ್ತು ಕಲ್ಯಾಣಿ ಮನೆತನಗಳ ಮಧ್ಯೆ ಮಧುರ ಬಾಂಧವ್ಯವನ್ನು ಏರ್ಪಡಿಸಿದ. ವಿಕ್ರಮಾದಿತ್ಯನ ಮರಣಾನಂತರ ದೋರಸಮುದ್ರಹೊಯ್ಸಳ ವಿಷ್ಣುವರ್ಧನ ಚಾಳುಕ್ಯ ಮಾಂಡಲಿಕರನ್ನು ಸೋಲಿಸಿ ಕೃಷ್ಣಾ ನದಿಯವರೆಗೂ ದಂಡೆತ್ತಿ ಹೋದ.
  • ಅವನು ಜಯಕೇಶಿಯನ್ನು ಸೋಲಿಸಿ ಹಾನಗಲ್, ಹಲಸೀಗೆ ಮೊದಲಾದ ಪ್ರದೇಶಗಳನ್ನು ವಹಿಸಿಕೊಂಡ. ಆದರೆ 1142ರಲ್ಲಿ ವಿಷ್ಣುವರ್ಧನ ಮರಣ ಹೊಂದಿದ ಅನಂತರ ಜಯಕೇಶಿ ತಾನು ಕಳೆದುಕೊಂಡಿದ್ದ ಪ್ರದೇಶವನ್ನು ಪುನಃ ವಶಪಡಿಸಿಕೊಂಡ. ಜಯಕೇಶಿಯ ಆಳಿಕೆಯಲ್ಲಿ ಗೋವ ರಾಜ್ಯದಲ್ಲಿ ವ್ಯವಸ್ಥಿತ ಆಡಳಿತವಿದ್ದು ಜನರು ನೆಮ್ಮದಿಯಿಂದಿದ್ದರು. ಇವನ ಅನೇಕ ಶಾಸನಗಳಲ್ಲಿ ಆಡಳಿತ, ಸಾಮಾಜಿಕ ಜೀವನ ಮತ್ತು ಆರ್ಥಿಕ ಪುರೋಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಳು ದೊರೆಯುತ್ತವೆ.
  • ಎರಡನೆಯ ಜಯಕೇಶಿಯ ಮರಣಾನಂತರ ಅವನ ಮಗ ಪೆರ್ಮಾಡಿದೇವ ರಾಜನಾದ. ಇವನಿಗೆ ಶಿವಚಿತ್ತ, ವಿಷ್ಣುಚಿತ್ತ ಎಂಬ ಹೆಸರುಗಳೂ ಇದ್ದುವು. ಇವನ ರಾಣಿಯಾದ ಕಮಲಾದೇವಿ ಗೋವದಲ್ಲಿ ಅನೇಕ ಅಗ್ರಹಾರಗಳನ್ನು ಸ್ಥಾಪಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದಳಲ್ಲದೆ ದೇಗಾಂವೆ ಎಂಬಲ್ಲಿ ಶ್ರೀ ಕಮಲನಾರಾಯಣ ಮತ್ತು ಶ್ರೀ ಮಹಾಲಕ್ಷ್ಮಿ ದೇವಾಲಯಗಳನ್ನು ಕಟ್ಟಿಸಿದಳು.
  • ಗೋವದ ಕದಂಬ ರಾಜರು 1156ರ ವರೆಗೂ ಕಲ್ಯಾಣಿ ಚಾಳುಕ್ಯರ ಸಾಮಂತರಾಗಿದ್ದರು. ಕಲ್ಯಾಣಿಯಲ್ಲಿ ರಾಜ್ಯ ವಿಪ್ಲವ ನಡೆದು ಕಳಚುರಿ ಬಿಜ್ಜಳ ಚಕ್ರವರ್ತಿಯಾದ ಅನಂತರ ಗೋವದ ರಾಜ ಸ್ವತಂತ್ರನಾದ. ಕಳಚುರಿಗಳ ಮತ್ತು ಹೊಯ್ಸಳರ ನಡುವೆ ಅನೇಕ ಯುದ್ಧಗಳು ನಡೆದು ಕಳಚುರಿಗಳ ಪ್ರಭಾವ ಕುಂದಿತು. ಹೊಯ್ಸಳ ವೀರಬಲ್ಲಾಳ 1182ರಲ್ಲಿ ಗೋವದ ರಾಜನನ್ನು ಸೋಲಿಸಿ ಕಪ್ಪಕಾಣಿಕೆ ಸ್ವೀಕರಿಸಿ ಆಶ್ರಿತ ರಾಜನನ್ನಾಗಿ ಮಾಡಿಕೊಂಡ. ಅನಂತರ ಸೇವುಣರಿಗೂ ಹೊಯ್ಸಳರಿಗೂ ದಖನಿನ ಸಾರ್ವಭೌಮತ್ವಕ್ಕಾಗಿ ಹೋರಾಟ ನಡೆಯಿತು.
  • 1214ರ ಅನಂತರ ಗೋವದ ರಾಜನಾದ 3ನೆಯ ಜಯಕೇಶಿ ದೇವಗಿರಿಯ ಸಿಂಗಣನ ಆಶ್ರಿತ ರಾಜನಾದ. 1310ರಲ್ಲಿ ಮಲಿಕ್ ಕಾಫೂರನ ದಂಡಯಾತ್ರೆಯಿಂದ ದೇವಗಿರಿ ಸೇವುಣರ ಆಡಳಿತ ಕೊನೆಗೊಂಡಿತು. ಗೋವದ ರಾಜ ಸ್ವತಂತ್ರವಾಗಿ ಆಳಲು ಪ್ರಾರಂಭಿಸಿದ. ಆದರೆ ಮಲಿಕ್ ಕಾಫೂರನು ಗೋವ ರಾಜ್ಯವನ್ನು ಸೂರೆಮಾಡಿ ರಾಜಧಾನಿಯನ್ನು ಆಕ್ರಮಿಸಿದ. ಅವನು ಹಿಂದಿರುಗಿದ ಅನಂತರ ಗೋವದ ರಾಜ ಚಂದ್ರಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಲುಪಕ್ರಮಿಸಿದ.
  • 1350ರ ವೇಳೆಗೆ ಮಹಮದ್ ಬಿನ್ ತುಗಲಕನ ದಳಪತಿಯೊಬ್ಬ ಚಂದ್ರಪುರವನ್ನು ಮುತ್ತಿ ನಾಶಮಾಡಿದ. ಸಹಸ್ರಾರು ಮಂದಿ ಹಿಂದೂ ಸೈನಿಕರೂ ಗೋವದ ರಾಜಪರಿವಾರದವರೂ ಮರಣ ಹೊಂದಿದ್ದಾಗಿ ಇಬ್ನ್‌ ಬತೂತನ ಬರೆವಣಿಗೆಯಿಂದ ತಿಳಿದುಬರುತ್ತದೆ. ಸುಮಾರು 350 ವರ್ಷಗಳ ಗೋವ ಕದಂಬ ಮನೆತನ ಕೊನೆಗೊಂಡಿತು. ಗೋವ ರಾಜ್ಯ ಬಹುಕಾಲ ಮಹಮ್ಮದೀಯರ ಆಳಿಕೆಯಲ್ಲಿ ಉಳಿಯಲಿಲ್ಲ.
  • ವಿಜಯನಗರಹರಿಹರ ಮತ್ತು ಬುಕ್ಕರು ಗೋವ ಪ್ರಾಂತವನ್ನು ಮಹಮ್ಮದೀಯರ ಆಳಿಕೆಯಿಂದ ವಿಮೋಚನೆಗೊಳಿಸಿ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. 1470ರ ವರೆಗೂ ಗೋವ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು. ಅನಂತರ ಬಿಜಾಪುರದ 2ನೆಯ ಮಹಮ್ಮದನ ಮಂತ್ರಿಯಾದ ಮಹಮದ್ ಗವಾನ ಗೋವವನ್ನು ಗೆದ್ದು ಬಿಜಾಪುರ ರಾಜ್ಯಕ್ಕೆ ಸೇರಿಸಿಕೊಂಡ. ಸ್ವಲ್ಪ ಕಾಲ ಆದಿಲ್ಷಾಹಿ ಆಡಳಿತ ಮುಂದುವರಿಯಿತು. ಅನಂತರ ಅದು ಪೋರ್ಚುಗೀಸರ ವಶವಾಯಿತು.
  • ಆಲ್ಬಕರ್ಕ್ 1510ರಲ್ಲಿ ಗೋವವನ್ನು ಪೋರ್ಚುಗೀಸರ ವಸಾಹತಾಗಿ ಮಾರ್ಪಡಿಸಿದ. ಆದರೆ ಅದೇ ವರ್ಷ ಆಗಸ್ಟ್‌ 15ರ ಸಮಯಕ್ಕೆ ಬಿಜಾಪುರದ ಯೂಸುಫ್ ಆದಿಲ್ಷಹ ಅವನನ್ನು ಸೋಲಿಸಿದ. ಪುನಃ ಆಲ್ಬಕರ್ಕ್ ಸ್ವಲ್ಪ ಕಾಲದಲ್ಲೇ ಗೋವವನ್ನು ವಶಪಡಿಸಿಕೊಂಡು ಪೋರ್ಚುಗೀಸರ ಆಡಳಿತವನ್ನು ಸ್ಥಾಪಿಸಿದ. ಅಂದಿನಿಂದ ಗೋವ ಪೋರ್ಚುಗೀಸರ ವಸಾಹತಾಯಿತು. ಕ್ರಮೇಣ ದೀವ್ ಮತ್ತು ದಮನ್‍ಗಳ ಮೇಲೂ ಪೋರ್ಚುಗೀಸರು ಅಧಿಕಾರ ಸ್ಥಾಪಿಸಿದರು.
  • ಮರಾಠರು ಹಲವು ಸಾರಿ ಗೋವವನ್ನು ಮುತ್ತಿದರು. ಆದರೂ ಗೋವದ ಮೇಲೆ ಪೋರ್ಚುಗೀಸರ ಆಡಳಿತ 450 ವರ್ಷಗಳ ಕಾಲ ಮುಂದುವರಿಯಿತು. ಗೋವದಲ್ಲಿ ಕ್ರೈಸ್ತಮತ ವಿಶೇಷವಾಗಿ ಪ್ರಚಾರವಾಯಿತು. 17ನೆಯ ಶತಮಾನದಲ್ಲಿ ಗೋವವನ್ನು ಸಂದರ್ಶಿಸಿದ್ದ ಪಾಶ್ಚಾತ್ಯ ಪ್ರವಾಸಿಯೊಬ್ಬ ಗೋವ ಪಟ್ಟಣ ಕ್ರೈಸ್ತ ದೇವಾಲಯಗಳಿಂದಲೂ ಮಠಗಳಿಂದಲೂ ಸುಂದರವಾದ ಭವನಗಳಿಂದಲೂ ಐಶ್ವರ್ಯದಿಂದಲೂ ತುಂಬಿತುಳುಕುವ ನಗರಗಳಲ್ಲೊಂದಾಗಿದೆಯೆಂದು ಪ್ರಶಂಸಿಸಿದ್ದ.
  • ಪೋರ್ಚುಗೀಸರ ದಬ್ಬಾಳಿಕೆಯ ವಿರುದ್ಧವಾಗಿ ಅಲ್ಲಿಯ ಜನ ಸುಮಾರು 20 ಸಂದರ್ಭಗಳಲ್ಲಿ ದಂಗೆಯೆದ್ದಿದ್ದರು. ಆದರೆ ಪೋರ್ಚುಗೀಸ್ ಸರ್ಕಾರ ದಂಗೆಯನ್ನು ಉಗ್ರವಾಗಿ ಹತ್ತಿಕ್ಕಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಾರಂಭವಾದ ರಾಷ್ಟ್ರೀಯ ಚಳವಳಿ ಗೋವವನ್ನೂ ಕ್ರಮೇಣ ಪ್ರವೇಶಿಸಿತು. ಮಹಾತ್ಮ ಗಾಂಧಿ ಭಾರತ ರಾಷ್ಟ್ರೀಯ ಚಳವಳಿಯ ನಾಯಕತ್ವವನ್ನು ವಹಿಸಿದ ಕೂಡಲೇ ಗೋವದಲ್ಲೂ ಚಳವಳಿಗೆ ಕರೆಕೊಟ್ಟರು. 1928ರಲ್ಲಿ ಗೋವದಲ್ಲಿ ಸ್ವಾತಂತ್ರ್ಯ ಚಳವಳಿಗಾಗಿ ಸಮಿತಿಯೊಂದು ಸ್ಥಾಪಿತವಾಯಿತು.
  • 1930ರಲ್ಲಿ ಗೋವ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಲಾಯಿತು. ಪೋರ್ಚುಗೀಸ್ ಸರ್ಕಾರ ಗೋವದಲ್ಲಿ ಚಳವಳಿಗಳನ್ನು ಉಗ್ರವಾಗಿ ಹತ್ತಿಕ್ಕಿತು. 1947ರಲ್ಲಿ ಭಾರತ ಸ್ವತಂತ್ರವಾದ ಅನಂತರ ಭಾರತ ಸರ್ಕಾರ ಗೋವ ಪ್ರದೇಶದಿಂದ ಪೋರ್ಚುಗಲ್ ತನ್ನ ಆಡಳಿತವನ್ನು ತೆರವು ಮಾಡಬೇಕೆಂದು ಸೂಚಿಸಿತು. ಆದರೂ ಪೋರ್ಚುಗೀಸ್ ಸರ್ಕಾರ ಬಿಗಿಮುಷ್ಟಿಯ ವಸಾಹತು ನೀತಿಯನ್ನು ಮುಂದುವರಿಸಿತು. ದೆಹಲಿ ಮತ್ತು ಲಿಸ್ಬನ್‍ಗಳ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆದರೂ ಪ್ರಯೋಜನವಾಗಲಿಲ್ಲ.
  • 1947ರಿಂದ 1954ರ ವರೆಗೆ ನಡೆದ ವಿಮೋಚನಾ ಹೋರಾಟದ ಮುಖಂಡರನ್ನು ಪೋರ್ಚುಗೀಸ್ ಸರ್ಕಾರ ವರ್ಣನಾತೀತ ಶಿಕ್ಷೆಗಳಿಗೆ ಗುರಿ ಮಾಡಿತು. ಪೋರ್ಚುಗಲ್ ಮತ್ತು ಭಾರತದ ಮಧ್ಯೆ ರಾಜತಾಂತ್ರಿಕ ಸಂಬಂಧ 1955ರಲ್ಲಿ ಕಡಿದುಬಿತ್ತು. ಅದೇ ವರ್ಷ ಗೋವ ವಿಮೋಚನೆಗಾಗಿ ಶಾಂತಿಯುತ ಚಳವಳಿ ಪ್ರಾರಂಭವಾಯಿತು. ಚಳವಳಿ 1961ರ ವರೆಗೂ ಸತತವಾಗಿ ಮುಂದುವರಿಯಿತು. ಪೋರ್ಚುಗಲ್ ಸರ್ಕಾರ ಅನೇಕ ಸತ್ಯಾಗ್ರಹಿಗಳನ್ನು ಗುಂಡಿಟ್ಟು ಕೊಂದಿತು. ಮುಖಂಡರನ್ನು ನಾನಾಬಗೆಯ ಚಿತ್ರಹಿಂಸೆಗಳಿಗೆ ಗುರಿಪಡಿಸಿತು.
  • ಸರ್ಕಾರದ ಉಗ್ರನೀತಿ ಮತ್ತು ದಂಡನೆಗಳು ಮುಂದುವರಿದುವು. ಭಾರತ ಸರ್ಕಾರದ ಸಂಯಮವನ್ನು ಪೋರ್ಚುಗಲ್ಲಿನ ವಸಾಹತು ನೀತಿ ಅಲುಗಿಸಿತು. ಪೋರ್ಚುಗೀಸ್ ಸೈನಿಕರು ಗೋವದ ಗಡಿಯಲ್ಲಿ ಭಾರತದ ಹಳ್ಳಿಗಳನ್ನು ಲೂಟಿ ಮಾಡಲುಪಕ್ರಮಿಸಿದರು. ಕೊನೆಗೆ 1961ರ ಡಿಸೆಂಬರ್ 17-18ರ ಮಧ್ಯರಾತ್ರಿಯ ವೇಳೆಗೆ ಪೋರ್ಚುಗೀಸರ ಆಡಳಿತಕೇಂದ್ರವಾದ ಪಣಜಿಯನ್ನು ಭಾರತ ಸೈನ್ಯ ಸುತ್ತುಗಟ್ಟಿತು.
  • ಅಲ್ಲಿದ್ದ ಪೋರ್ಚುಗೀಸ್ ದಳಗಳು ಭಾರತೀಯ ಸೈನ್ಯಕ್ಕೆ ಶರಣಾಗತವಾದುವು. ಕೇವಲ 36 ಗಂಟೆಗಳಲ್ಲಿ ಹೋರಾಟ ಕೊನೆಗೊಂಡಿತು. ಪೋರ್ಚುಗೀಸ್ ಆಳಿಕೆಯಿಂದ ಗೋವ ವಿಮೋಚನೆಗೊಂಡಿತು. ಡಿಸೆಂಬರ್ 20ರಂದು ಗೋವ ಭಾರತದಲ್ಲಿ ವಿಲೀನವಾಯಿತು.

ವಾಸ್ತುಶಿಲ್ಪ

[ಬದಲಾಯಿಸಿ]
The Se Cathedral at Old Goa, an example of Portuguese architecture and one of the largest churches in Asia.
Coat of Arms of Goa as a Portuguese enclave 1935–1961.
ಮಂಗೇಶ ದೇವಾಲಯ
The Se Cathedral at Old Goa, an example of Portuguese architecture and one of the largest churches in Asia.
Coat of Arms of Goa as a Portuguese enclave 1935–1961.
  • ಪಶ್ಚಿಮ ಕರಾವಳಿಯಲ್ಲಿದ್ದು ಭೌಗೋಳಿಕವಾಗಿಯೂ ಚಾರಿತ್ರಿಕವಾಗಿಯೂ ವಿಶಿಷ್ಟ ಸ್ಥಾನವನ್ನು ಪಡೆದಿರುವ ಗೋವದ ವಾಸ್ತುಶಿಲ್ಪ ದೇಶೀಯ ಮತ್ತು ವಿದೇಶೀಯ ಪ್ರಭಾವಗಳಿಗೆ ಒಳಗಾಗಿರುವುದು ಸ್ವಾಭಾವಿಕ. ಇಲ್ಲಿಯ ವಾಸ್ತುಶಿಲ್ಪ ಬೆಳೆವಣಿಗೆಯ ಕುರುಹುಗಳು ಅತಿ ಪ್ರಾಚೀನಕಾಲದಿಂದಲೂ ಕಂಡುಬರುತ್ತವೆ. ಆದರೆ 16ನೆಯ ಶತಮಾನದಲ್ಲಿ ಈ ಪ್ರಾಂತವನ್ನಾಕ್ರಮಿಸಿಕೊಂಡ ಪೋರ್ಚುಗೀಸರ ಕಾಲದಲ್ಲಿ ನಡೆದ ಕ್ರೈಸ್ತಮತ ಪ್ರಚಾರದ ಫಲವಾಗಿ ನೂರಾರು ದೇವಾಲಯಗಳು ನೆಲಸಮವಾದವು. ಈ ಸ್ಥಳಗಳಲ್ಲಿ ಚರ್ಚುಗಳು ನಿರ್ಮಿತವಾದವು.
  • ಆದ್ದರಿಂದ ಗೋವದಲ್ಲಿ ಪುರಾತನ ವಾಸ್ತುಶಿಲ್ಪ ಮಾದರಿಗಳು ಕೆಲವೇ ಉಳಿದಿವೆ. ಅಲ್ಲಲ್ಲಿ ಮುರಿದುಬಿದ್ದಿರುವ ಮೂರ್ತಿಗಳು ಮತ್ತು ಇತರ ಶಿಲ್ಪಗಳಿಂದ ಮಾತ್ರ ಅವನ್ನು ತಿಳಿದುಕೊಳ್ಳಲು ಸಾಧ್ಯ. ಪೋರ್ಚುಗೀಸರಿಂದ ನಾಶಗೊಂಡ ಕೆಲವು ದೇವಾಲಯಗಳ ಮೂಲಮೂರ್ತಿಗಳನ್ನು ಬೇರೆಡೆಗೆ ಕೊಂಡೊಯ್ದು ಅವುಗಳಿಗಾಗಿ ಕಟ್ಟಿಸಿದ ದೇವಾಲಯಗಳು ಕೆಲವು ಗೋವದಲ್ಲಿ ಈಚೆಗೆ ಬೆಳೆದುಬಂದ ವಾಸ್ತು ಮಾದರಿಯನ್ನು ಸೂಚಿಸುತ್ತವೆ.
  • ಮುಸ್ಲಿಂ ಶೈಲಿಯ ಕೆಲವು ಕಟ್ಟಡಗಳನ್ನು ಗೋವವನ್ನು ಗೆದ್ದ ಆದಿಲ್ಷಾಹಿ ಮನೆತನದವರು ಕಟ್ಟಿಸಿದರೂ ಪೋರ್ಚುಗೀಸರು ಹಲವು ಕಟ್ಟಡಗಳನ್ನು ನಾಶಮಾಡಿ ಮತ್ತೆ ಕೆಲವನ್ನು ಮಾರ್ಪಡಿಸಿ ಸಚಿವಾಲಯಗಳನ್ನಾಗಿ, ಕಚೇರಿಗಳನ್ನಾಗಿ ಮಾಡಿಕೊಂಡರು. ಪೋರ್ಚುಗೀಸರು ಕಟ್ಟಿಸಿದ ಕೆಲವು ಚರ್ಚುಗಳು ಮತ್ತು ಇತರ ಕಟ್ಟಡಗಳು ಸುಂದರವಾಗಿವೆ; ಗೋವದಲ್ಲಿ ಪ್ರೇಕ್ಷಣೀಯ ಸ್ಮಾರಕಗಳಾಗಿ ನಿಂತಿವೆ.
  • ಪ್ರಸಕ್ತಶಕದ ಆದಿಕಾಲದಲ್ಲೇ ಗೋವದಲ್ಲಿ ವಾಸ್ತುಶಿಲ್ಪ ಆರಂಭವಾದ್ದನ್ನು ಕಾಣಬಹುದು. ಹರವಳೆ ಎಂಬಲ್ಲಿ ಗುಡ್ಡವನ್ನು ಕೊರೆದು ನಿರ್ಮಿಸಿರುವ ಗುಹೆಗಳಿವೆ. ಇವುಗಳಲ್ಲಿ ದೊರೆತ ಬ್ರಾಹ್ಮಿಲಿಪಿಯ ಶಾಸನ 1ನೆಯ ಶತಮಾನಕ್ಕೆ ಸೇರಿದ್ದು. ಇದೇ ಗೋವದ ಅತ್ಯಂತ ಪ್ರಾಚೀನ ಶಾಸನ. ಕೋಲ್ವಲೆಯ ಬಳಿ ಬೌದ್ಧಮೂರ್ತಿಯೊಂದು ದೊರೆತಿದೆ. ಈ ಪ್ರಾಂತದಲ್ಲಿ ಬೌದ್ಧಶಿಲ್ಪ ಇದ್ದದ್ದಕ್ಕೆ ಕುರುಹಾಗಿ ಉಳಿದಿದೆ. ಚಂದ್ರವರ್ಮನೆಂಬ ರಾಜ ಶಿವಪುರದಲ್ಲಿಯ ಬೌದ್ಧ ಮಹಾವಿಹಾರವೊಂದಕ್ಕೆ ದತ್ತಿ ಬಿಟ್ಟುದಾಗಿ 5ನೆಯ ಶತಮಾನದ ಶಾಸನವೊಂದು ತಿಳಿಸುತ್ತದೆ. *ರಾಷ್ಟ್ರಕೂಟರ ಸಾಮಂತರಾಗಿ ವಲಿಪುರದಿಂದ ಆಳುತ್ತಿದ್ದ ಶಿಲಹಾರರು ನೆತರ್ಲೆ ಎಂಬಲ್ಲಿ ಮಹಾಲಕ್ಷ್ಮಿಯ ದೇವಾಲಯವೊಂದನ್ನು ನಿರ್ಮಿಸಿದ್ದರು. ಕಲ್ಯಾಣಿ ಚಾಳುಕ್ಯರ ಸಾಮಂತರಾಗಿ ಮೊದಲು ಚಂದ್ರಪುರದಿಂದಲೂ ಅನಂತರ ಗೋವ ಪಟ್ಟಣ ಅಥವಾ ಗೋವಪುರಿಯಿಂದಲೂ ಆಳುತ್ತಿದ್ದ ಗೋವೆ ಕದಂಬರು ಅನೇಕ ದೇವಾಲಯಗಳನ್ನು ಕಟ್ಟಿಸಿದ್ದರು. ಸವಾಯ್ವೆರೆ ಎಂಬಲ್ಲಿ ಮೂರ್ತಿನಾರಾಯಣನ ದೇವಾಲಯ, ಗೋವಪುರಿಯಲ್ಲಿ ಸರಸ್ವತಿ ದೇವಾಲಯ, ದೇಗಾಂವೆಯಲ್ಲಿ ಕಮಲನಾರಾಯಣ ಮತ್ತು ಮಹಾಲಕ್ಷ್ಮಿ ದೇವಾಲಯಗಳು-ಇವೇ ಮೊದಲಾದವು ಇವರ ಕಾಲದಲ್ಲಿ ನಿರ್ಮಿತವಾದುವು.
  • ಆದರೆ ಬೆಳಗಾಂವಿ ಜಿಲ್ಲೆಯ ದೇಗಾಂವೆಯಲ್ಲಿರುವ ಸುಂದರವಾದ ಕಮಲನಾರಾಯಣ ದೇವಾಲಯವನ್ನು ಬಿಟ್ಟರೆ ಬೇರೆ ದೇವಾಲಯಗಳು ಉಳಿದುಬಂದಿಲ್ಲ. ಸಪ್ತಕೋಟೀಶ್ವರ ಈ ರಾಜರ ಆರಾಧ್ಯದೇವತೆ. ಶ್ರೀಸಪ್ತಕೋಟೀಶಲಬ್ಧವರವೀರ ಎಂಬುದು ಇವರ ಬಿರುದುಗಳಲ್ಲೊಂದು. ದೀವರ್ ದ್ವೀಪದ ಬಳಿ ನಾರ್ವೆಯಲ್ಲಿ ಇವರು ಸಪ್ತಕೋಟೀಶ್ವರ ದೇವಾಲಯವನ್ನು ಕಟ್ಟಿಸಿದ್ದರು. ವಿಜಯನಗರದ ಮಾಧವ ಮಂತ್ರಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದ.
  • ಪೋರ್ಚುಗೀಸರಿಂದ ಇದು ನಾಶವಾದ ಮೇಲೆ ಸಪ್ತಕೋಟೀಶ್ವರಲಿಂಗವನ್ನು ಬಿಳಿಚೊಂನಲ್ಲಿಯ ನಾರ್ವೆಯಲ್ಲಿ ಪ್ರತಿಷ್ಠಾಪಿಸಿದ್ದರು. ಮುಂದೆ ಶಿವಾಜಿ ಈಗ ಇರುವ ದೇವಾಲಯವನ್ನು ನಿರ್ಮಿಸಲು ಕಾರಣನಾದ. ಕದಂಬ ಜಯಕೇಶಿಯ ಆಳಿಕೆಯಲ್ಲಿ ಮಂತ್ರಿಯಾಗಿದ್ದ ಛದಮ ಎಂಬ ಅರಬ್ ವ್ಯಾಪಾರಿ ಗೋವಪುರಿಯಲ್ಲಿ ಒಂದು ಮಸೀದಿಯನ್ನು ಕಟ್ಟಿಸಿದ್ದ. ಯಾದವರ ಕಾಲದಲ್ಲಿ ಹೇಮಾಡ್ಪಂಥ್ ಶೈಲಿಯ ಹಲವು ದೇವಾಲಯಗಳನ್ನು ಗೋವದಲ್ಲಿಯೂ ಕಟ್ಟಿದ್ದಿರಬೇಕು.
  • ಬಹುಶಃ ಈ ಕಾಲದಲ್ಲಿ ನಿರ್ಮಿತವಾಗಿದ್ದು ಇನ್ನೂ ಉಳಿದುಬಂದಿರುವ ಪ್ರಾಚೀನ ದೇವಾಲಯವೆಂದರೆ ತಾಂಬಡಿ-ಸುರ್ಲ ಎಂಬಲ್ಲಿ ದಟ್ಟ ಕಾಡಿನ ನಡುವೆ ನಿಂತಿರುವ ಮಹದೇವ ದೇವಾಲಯ ಒಂದೇ. ಚಾಳುಕ್ಯಶೈಲಿಯಲ್ಲಿ ಸರಳವಾಗಿ ಕಟ್ಟಿರುವ ಈ ದೇವಾಲಯಕ್ಕೆ ಗರ್ಭಗೃಹ, ಅರ್ಧಮಂಟಪ ಮತ್ತು ಭೋಗಮಂಟಪಗಳೂ ಎರಡು ಅಂತಸ್ತುಗಳ ಕಲ್ಲುಗೋಪುರವೂ ಇವೆ. ಇದನ್ನು ಬಿಟ್ಟರೆ ಕೇರಿ ಎಂಬಲ್ಲಿ ಬೇತಾಳ ದೇವಾಲಯದಲ್ಲಿರುವ ಗಜಲಕ್ಷ್ಮೀ, ಪರ್ಸೆಯಲ್ಲಿರುವ ಬ್ರಹ್ಮನ ಮೂರ್ತಿ, ಕೇರಿವೆರೆ ಕಾಡಿನಲ್ಲಿ ಬಿದ್ದಿರುವ ನಾರಾಯಣನ ವಿಗ್ರಹ, ಕುಡ್ನೆಯಲ್ಲಿರುವ ಸೂರ್ಯಬಿಂಬ, ಉಮಾಸಹಿತ ಶಿವ, ಸೇಂಟ್ ಫ್ರಾನ್ಸಿಸ್ ಕತೀಡ್ರಲಿನÀ ವಸ್ತುಸಂಗ್ರಹಾಲಯ ದಲ್ಲಿರುವ ಕೆಲವು ಮೂರ್ತಿಗಳು ಮುಂತಾದವು ಆ ಕಾಲದ ಶಿಲ್ಪದ ಮಾದರಿಗಳಾಗಿ ಉಳಿದುಬಂದಿವೆ.
  • ಪೋರ್ಚುಗೀಸರು ನಾಶಮಾಡಿದ ದೇವಾಲಯಗಳಿಂದ ಮೂರ್ತಿಗಳನ್ನು ಬೇರೆ ಕಡೆಗೆ ಸಾಗಿಸಿ ಕಟ್ಟಿರುವ 16 ನೆಯ ಶತಮಾನದಿಂದೀಚಿನ ಕಟ್ಟಡಗಳಲ್ಲಿ ಕುಶಸ್ಥಲಿಯಲ್ಲಿದ್ದು ಪ್ರಿಯೋಲಿಗೆ ವರ್ಗಾಯಿಸಿದ ಮಂಗೇಶದೇವಾಲಯ, ಕದಲಿವನದಿಂದ ಕವಲೆಗೆ ಬದಲಾಯಿಸಿದ ಶಾಂತದುರ್ಗ ದೇವಾಲಯ, ನಾರ್ವೆಯಲ್ಲಿರುವ ಸಪ್ತಕೋಟೀಶ್ವರ, ಮರ್ದೊಲಿನ ಮಹಾಲಸ ದೇವಿಯ ಆಲಯ, ಕೊಲ್ವದಲ್ಲಿದ್ದು ಬಾಂದೋರಕ್ಕೆ ಬದಲಾಯಿಸಿದ ಮಹಾಲಕ್ಷ್ಮೀ ದೇವಾಲಯ, ಚಂದ್ರನಾಥ ಬೆಟ್ಟದ ಮೇಲಿರುವ ಚಂದ್ರನಾಥ ದೇವಾಲಯ- ಇವನ್ನು ಹೆಸರಿಸಬಹುದು.
  • ಹಲವು ಶೈಲಿಗಳ ಸಂಮಿಶ್ರಣವನ್ನು ಈ ಕಟ್ಟಡಗಳಲ್ಲಿ ಕಾಣಬಹುದು. ಒಳಭಾಗದಲ್ಲಿ ಹಲವು ಕಂಬಗಳಿರುವ ಭೋಗಮಂಟಪ, ಜಗತಿಗಳು, ದೇವಾಲಯದ ಒಳಗೂ ಸುತ್ತಲೂ ಹಾಸುಗಲ್ಲುಗಳನ್ನು ಹಾಕಿಸುವುದು ಮುಂತಾದವುಗಳಲ್ಲಿ ವಿಜಯನಗರದ ಶೈಲಿಯ ಪ್ರಭಾವ ಕಂಡುಬಂದರೆ, ಹಲವು ದೇವಾಲಯಗಳ ಹೊರನೋಟದಲ್ಲಿ ಮುಸ್ಲಿಂ ಶೈಲಿಯ ಪ್ರಭಾವ ಎದ್ದುಕಾಣುತ್ತದೆ. ಈ ಕೆಲವು ದೇವಾಲಯಗಳನ್ನು ಅವುಗಳ ಮೇಲಿನ ಕಲಶಗಳಿಂದ ಮಾತ್ರ ದೇವಾಲಯಗಳೆಂದು ಗುರುತಿಸಬೇಕಾಗುತ್ತದೆ.
  • ಇವೆಲ್ಲಕ್ಕಿಂತ ಹೆಚ್ಚಾಗಿ ಗೋವದ ದೇವಾಲಯಗಳಲ್ಲಿ ಲ್ಯಾಟಿನ್ ಶೈಲಿಯ ಪ್ರಭಾವವನ್ನೂ ವಿಶೇಷವಾಗಿ ಕಾಣಬಹುದು. ದೇವಸ್ಥಾನಗಳ ಮುಂದೆ ಹಲವು ಅಂತಸ್ತುಗಳಲ್ಲಿ ನೇರವಾಗಿ ಮೇಲೆದ್ದಿರುವ ಭವ್ಯವಾದ ಗೋಪುರಗಳಿರುವುದು ಇಲ್ಲಿಯ ದೇವಾಲಯಗಳ ಒಂದು ವಿಶೇಷ. ಮರಾಠಾ ರಾಜನಾದ, ಸಾತಾರೆಯ ಸಾಹು ರಾಜ ಕಟ್ಟಿಸಿದ ಶಾಂತದುರ್ಗ ದೇವಾಲಯದ ಕಂಬಗಳು ಮತ್ತು ಒಳಭಾಗದ ಅಲಂಕರಣಗಳು ಸುಂದರವಾಗಿವೆ.
  • 17 ನೆಯ ಶತಮಾನದ ಆದಿಭಾಗದಲ್ಲಿ ಮರ್ದೊಲಿನಲ್ಲಿ ಕಟ್ಟಿರುವ ಮಹಾಲಸದೇವಿಯ ಆಲಯದಲ್ಲಿರುವ, ಮರದಲ್ಲಿ ಕೆತ್ತಿರುವ ಶಿಲ್ಪ ಅತ್ಯಂತ ಸುಂದರವಾಗಿದೆ. ಮುಸ್ಲಿಂ ಶೈಲಿಯ ಕಟ್ಟಡಗಳಲ್ಲಿ ಅತ್ಯಂತ ಭವ್ಯವಾಗಿದ್ದದ್ದು ಗೋವೆಯ ಆದಿಲ್ಷಹ ಕಟ್ಟಿಸಿದ ರಾಜವಾಡೆ. ಕೆಲವು ಮಾರ್ಪಾಟು ಗಳನ್ನು ಹೊಂದಿ ಡಿ-ಪೆಲೇಶಿಯೊ-ಇದಾಲ್ಶಿಯೊ ಎಂಬ ಹೆಸರಿಂದ ಇಂದಿಗೂ ಅದು ಉಪಯೋಗದಲ್ಲಿದೆ. ಮಸೀದಿಗಳು ಕೆಲವು ಚರ್ಚುಗಳಾಗಿ ಮಾರ್ಪಟ್ಟಿವೆ. ಉಳಿದ ಕಟ್ಟಡಗಳು ನಾಶವಾಗಿವೆ.
  • ಸೆ ಪ್ರಿಮೇಶಿಯಲ್ ಡಿ ಗೋವಾ ಅಥವಾ ಸೆ ಕತೀಡ್ರಲ್ ಎಂಬುದು ಗೋವದ ಚರ್ಚುಗಳಲ್ಲಿ ಪುರಾತನವೂ ಭವ್ಯವೂ ಆದದ್ದು. ಆಲ್ಬಕರ್ಕ್ ಹಳೆಯ ಗೋವೆಯನ್ನು ಗೆದ್ದಾಗ ಸೇಂಟ್ ಕ್ಯಾದರಿನ್ ನೆನಪಿಗಾಗಿ ಕಟ್ಟಲು ಆಲೋಚಿಸಿದ್ದ ಚರ್ಚು ಇದು. ಇದನ್ನು ಕಟ್ಟಿ ಪೂರೈಸಲು 75 ವರ್ಷಗಳಿಗೂ ಹೆಚ್ಚು ಕಾಲವಾಯಿತು. ಭವ್ಯತೆಯಲ್ಲಿ ಇದನ್ನು ಮೀರಿಸಿದ ಕಟ್ಟಡ ಗ್ರೇಟ್ ಬ್ರಿಟನಿನಲ್ಲಿ ಕೂಡ ಇಲ್ಲವೆನ್ನಲಾಗಿದೆ. ಹೊರಭಾಗ ಟಸ್ಕನ್ ಮತ್ತು ಡೋರಿಕ್ ಶೈಲಿಗಳಲ್ಲೂ ಒಳಭಾಗ ಕಾರಿಂತಿಯನ್ ಶೈಲಿಯಲ್ಲೂ ನಿರ್ಮಿತವಾಗಿರುವ ಈ ಕಟ್ಟಡ ಅದರ ಗಾತ್ರ ಮತ್ತು ಅಳತೆಗೆ ಹೆಸರಾದ್ದು. ಇದರ ಒಂದು ಭಾಗದ ಗೋಪುರ ಈಗ ಬಿದ್ದುಹೋಗಿದೆ. ಈ ಚರ್ಚಿನ ಒಳಭಾಗ ಅತ್ಯಂತ ರಮಣೀಯವಾಗಿದೆ.
  • ಇಷ್ಟೇ ರಮಣೀಯವೂ ಭವ್ಯವೂ ಆಗಿರುವ ಸೇಂಟ್ ಕೆಸರನ್ ಚರ್ಚು ರೋಮಿನಲ್ಲಿರುವ ಸೇಂಟ್ ಪೀಟರನ ಬೆಸಿಲಿಕದಂತಿದೆ ; ಇದು ಕಾರಿಂತಿಯನ್ ಶೈಲಿಯಲ್ಲಿದೆ. ಹಳೆಯ ಗೋವದಲ್ಲಿರುವ ಬಾಮ್ ಜೀಸಸ್ ಚರ್ಚು ಅತ್ಯಂತ ಪ್ರಸಿದ್ಧವಾದ್ದು. ಇಲ್ಲೇ ಸೇಂಟ್ ಜೇವಿಯರನ ಸಮಾಧಿಯಿದೆ. ಇಲ್ಲಿಯ ಕಂಚಿನ ಕೆತ್ತನೆ ಆಕರ್ಷಕವಾದ್ದು. ಇದರ ಭಿತ್ತಿಯ ಮೇಲೆ ಜೇ಼ವಿಯರನ ಜೀವನಕ್ಕೆ ಸಂಬಂಧಿಸಿದ ಹಲವು ಚಿತ್ರಗಳಿವೆ. ಗೋವದಲ್ಲಿ ಗಾತಿಕ್ ಶೈಲಿಯಲ್ಲಿ ಕಟ್ಟಿರುವ ಅದ್ಭುತವಾದ ವಾಸ್ತು ಇದು.
  • 1517 ರಲ್ಲಿ ಫ್ರಾನ್ಸಿಸ್ಕನರು ಕಟ್ಟಿಸಿದ ಸೇಂಟ್ ಫ್ರಾನ್ಸಿಸ್ ಕತೀಡ್ರಲ್ ಮೆನುಲಿನ್ ಶೈಲಿಯ ಉತ್ಕೃಷ್ಟ ಶಿಲ್ಪವನ್ನೊಳಗೊಂಡಿದೆ. ಹಿಂದೆ ಪೋರ್ಚುಗೀಸರು ಭಗ್ನಗೊಳಿಸಿದ್ದ ದೇವಾಲಯಗಳಿಂದ ತಂದಿಟ್ಟಿರುವ ಮೂರ್ತಿಗಳು ಇರುವುದು ಈ ಕಟ್ಟಡದಲ್ಲೇ. ಇದು ಒಂದು ವಸ್ತುಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಗೋವದಲ್ಲಿ ಅತ್ಯಂತ ಎತ್ತರವಾದ ಕಟ್ಟಡ ಸೇಂಟ್ ಮೋನಿಕ ಕಾನ್ವೆಂಟ್. ಮೂರು ಅಂತಸ್ತುಗಳಿರುವ ಇದರ ಗೋಡೆಗಳ ಮೇಲೆ ಬೈಬಲಿನ ಅನೇಕ ಪ್ರಸಂಗಗಳನ್ನು ಭಿನ್ನಭಿನ್ನ ವರ್ಣಗಳಲ್ಲಿ ಚಿತ್ರಿಸಲಾಗಿದೆ.

ಗೋವ ವೆಲ್ಹಾದ ಗುಡ್ಡವೊಂದರ ಮೇಲೆ ಪಿಲಾಡ್ ಮೊನಾಸ್ಟರಿ ಇದೆ. ಇದರ ವಿಶಾಲವಾದ ಒಳ ಅಂಗಳದಲ್ಲಿ ಅತಿ ಸುಂದರವಾಗಿ ಕಂಡರಿಸಿರುವ ಕಂಬವೊಂದು ನಿಂತಿದೆ. 1541 ರಲ್ಲಿ ನಿರ್ಮಿಸಿದ ಉನ್ನತವಾದ ಸೇಂಟ್ ಪಾಲ್ಸ್‌ ಕಾಲೇಜಿನ ಒಂದು ಭಾಗ ಮಾತ್ರ ಬೀಳದೆ ನಿಂತಿದೆ. ಗೋವದ ಮನೆಗಳಲ್ಲೂ ಲ್ಯಾಟಿನ್ ಶೈಲಿಯ ಪ್ರಭಾವವನ್ನು ಗುರುತಿಸಬಹುದು. ಆ ಪಟ್ಟಣವನ್ನು ನೋಡಿದರೆ ಲ್ಯಾಟಿನ್ ನಗರದಂತೆಯೇ ಕಾಣುತ್ತದೆ.

ಗೋವಾದ ಹವಾಮಾನ ದತ್ತಾಂಶ

[ಬದಲಾಯಿಸಿ]
ಗೋವಾದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 31.6
(88.9)
31.5
(88.7)
32
(90)
33
(91)
33
(91)
30.3
(86.5)
28.9
(84)
28.8
(83.8)
29.5
(85.1)
31.6
(88.9)
32.8
(91)
32.4
(90.3)
31.28
(88.27)
Daily mean °C (°F) 26
(79)
26.3
(79.3)
27.7
(81.9)
29.3
(84.7)
30
(86)
27.6
(81.7)
26.7
(80.1)
26.4
(79.5)
26.9
(80.4)
27.9
(82.2)
27.6
(81.7)
26.6
(79.9)
27.42
(81.37)
ಕಡಮೆ ಸರಾಸರಿ °C (°F) 19.6
(67.3)
20.5
(68.9)
23.2
(73.8)
25.6
(78.1)
26.3
(79.3)
24.7
(76.5)
24.1
(75.4)
24
(75)
23.8
(74.8)
23.8
(74.8)
22.3
(72.1)
20.6
(69.1)
23.21
(73.76)
Average precipitation mm (inches) 0.2
(0.008)
0.1
(0.004)
1.2
(0.047)
11.8
(0.465)
112.7
(4.437)
868.2
(34.181)
994.8
(39.165)
512.7
(20.185)
251.9
(9.917)
124.8
(4.913)
30.9
(1.217)
16.7
(0.657)
೨,೯೨೬
(೧೧೫.೨)
Average precipitation days 0 0 0.1 0.8 4.2 21.9 27.2 13.3 13.5 6.2 2.5 0.4 90.1
Mean sunshine hours 313.1 301.6 291.4 288 297.6 126 105.4 120.9 177 248 273 300.7 ೨,೮೪೨.೭
Source #1: World Meteorological Organization[]
Source #2: Hong Kong Observatory[] for sunshine and mean temperatures

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Ministry of Statistics and Programme Implementation". Retrieved 7 September 2006.
  2. "Census Population" (PDF). Census of India. Ministry of Finance India. Archived from the original (PDF, 40 KB) on 19 ಡಿಸೆಂಬರ್ 2008. Retrieved 18 December 2008.
  3. "Area and population". Government of Goa. Archived from the original on 31 ಜನವರಿ 2009. Retrieved 5 January 2009.
  4. ಉಲ್ಲೇಖ ದೋಷ: Invalid <ref> tag; no text was provided for refs named stats
  5. "Weather Information for Goa". Retrieved 24 July 2012.
  6. "Climatological Information for Goa, India". Hong Kong Observatory. 15 August 2011. Archived from the original on 20 ಜನವರಿ 2012. Retrieved 16 December 2011.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೋವ&oldid=1250429" ಇಂದ ಪಡೆಯಲ್ಪಟ್ಟಿದೆ