ಮೀನುಗಾರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೀನುಗಾರಿಕೆಯು ಮೀನು ಹಿಡಿಯಲು ಪ್ರಯತ್ನಿಸುವ ಚಟುವಟಿಕೆಯಾಗಿದೆ. ಮೀನುಗಳನ್ನು ಸಾಮಾನ್ಯವಾಗಿ ಪರಿಸರದ ವನ್ಯಜೀವಿಯಾಗಿ ಹಿಡಿಯಲಾಗುತ್ತದೆ. ಕೊಳಗಳು, ಕಾಲುವೆಗಳು, ಉದ್ಯಾನವನದ ಜೌಗು ಪ್ರದೇಶಗಳು ಮತ್ತು ಜಲಾಶಯಗಳಂತಹ ನೀರಿನ ಸಂಗ್ರಹಗಳಿಂದಲೂ ಮೀನುಗಳನ್ನು ಹಿಡಿಯಬಹುದು. ಮೀನುಗಾರಿಕೆಯ ತಂತ್ರಗಳು ಕೈ-ಸಂಗ್ರಹ, ಈಟಿ, ಬಲೆ, ಗಾಳಹಾಕುವುದು, ಬಾಣ ಹೊಡೆಯುವುದು ಮತ್ತು ಬಲೆಗೆ ಬೀಳಿಸುವುದು, ಹಾಗೆಯೇ ವಿದ್ಯುದ್ವಧೆ, ಸಿಡಿಮದ್ದಿನಿಂದ ಸ್ಫೋಟ ಮತ್ತು ವಿಷ ಹಾಕುವಂತಹ ಹೆಚ್ಚು ವಿನಾಶಕಾರಿ ಮತ್ತು ಸಾಮಾನ್ಯವಾಗಿ ಕಾನೂನುಬಾಹಿರ ತಂತ್ರಗಳನ್ನು ಒಳಗೊಂಡಿರುತ್ತವೆ.

ಮೀನುಗಾರಿಕೆ

ಮೀನುಗಾರಿಕೆ ಎಂಬ ಪದವು ಮೀನುಗಳ ಜೊತೆಗೆ ಇತರ ಜಲಚರ ಪ್ರಾಣಿಗಳನ್ನು ಹಿಡಿಯುವುದನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಕಠಿಣಚರ್ಮಿಗಳು (ಸೀಗಡಿ/ನಳ್ಳಿ/ಏಡಿಗಳು), ಸಿಂಪಿಗಳು (ಆಯಿಸ್ಟರ್ಸ್), ಮರುವಾಯಿಗಳು (ಕ್ಲ್ಯಾಮ್ಸ್), ಸಮುದ್ರನಳ್ಳಿಗಳು (ಲಾಬ್‌ಸ್ಟರ್ಸ್), ಚಿಪ್ಪುಮೀನು, ಶಿರಪಾದಿಗಳು (ಆಕ್ಟೋಪಸ್/ಸ್ಕ್ವಿಡ್) ಮತ್ತು ಕಂಟಕಚರ್ಮಿಗಳು (ನಕ್ಷತ್ರ ಮೀನು/ಸಮುದ್ರ ಅರ್ಚಿನ್‌ಗಳು). ನಿಯಂತ್ರಿತ ಕೃಷಿಗಳಲ್ಲಿ (ಮೀನು ಸಾಕಣೆ) ಬೆಳೆದ ಮೀನುಗಳನ್ನು ಕೊಯ್ಲು ಮಾಡಲು ಈ ಪದವನ್ನು ಸಾಮಾನ್ಯವಾಗಿ ಅನ್ವಯಿಸುವುದಿಲ್ಲ. ಇದನ್ನು ಸಾಮಾನ್ಯವಾಗಿ ಜಲವಾಸಿ ಸಸ್ತನಿಗಳನ್ನು ಬೇಟೆಯಾಡುವುದಕ್ಕೆ ಅನ್ವಯಿಸುವುದಿಲ್ಲ, ಬದಲಿಗೆ ತಿಮಿಬೇಟೆ ಮತ್ತು ಸೀಲ್ ಬೇಟೆಯಂತಹ ಪದಗಳನ್ನು ಬಳಸಲಾಗುತ್ತದೆ.

ಇತರ ಜಲಚರ ಪ್ರಾಣಿಗಳು ಕೂಡ ಈಗ ವಾಣಿಜ್ಯದ ಮೀನುಗಾರಿಕೆಯ ಮುಖ್ಯ ಅಂಗವೇ ಆಗಿದ್ದು ಭಾರತವನ್ನು ಒಳಗೊಂಡAತೆ ಅನೇಕ ರಾಷ್ಟ್ರಗಳಲ್ಲಿ ಸೀಗಡಿ ಮೀನುಗಾರಿಕೆ ಇತ್ತೀಚೆಗೆ ವಿದೇಶಿ ವಿನಿಮಯಗಳಿಸುವಂಥ ಉದ್ಯಮವಾಗಿ ರೂಪುಗೊಂಡಿದೆ.

ಮೀನುಗಾರಿಕೆಯು ಬೇಟೆಗಾರ - ಸಂಗ್ರಹಕಾರರ ಕಾಲದಿಂದಲೂ ಮಾನವ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ ಮತ್ತು ಇದು ನವಶಿಲಾಯುಗ ಕ್ರಾಂತಿ ಮತ್ತು ಅನುಕ್ರಮ ಕೈಗಾರಿಕಾ ಕ್ರಾಂತಿಗಳೆರಡನ್ನೂ ಪಾರಾಗಿ ಉಳಿದುಕೊಂಡಿರುವ, ಪ್ರಾಗಿತಿಹಾಸದಿಂದ ಆಧುನಿಕ ಯುಗದವರೆಗೆ ಬಹುಕಾಲ ನಿಂತಿರುವ ಕೆಲವೇ ಆಹಾರ ಉತ್ಪಾದನಾ ಚಟುವಟಿಕೆಗಳಲ್ಲಿ ಒಂದಾಗಿದೆ. ಆಹಾರಕ್ಕಾಗಿ ತಿನ್ನಲು ಹಿಡಿಯುವುದರ ಜೊತೆಗೆ, ಮೀನುಗಳನ್ನು ಮನರಂಜನಾ ಕಾಲಕ್ಷೇಪವಾಗಿ ಹಿಡಿಯಲಾಗುತ್ತದೆ. ಮೀನುಗಾರಿಕೆ ಪಂದ್ಯಾವಳಿಗಳನ್ನು ನಡೆಸಲಾಗುತ್ತದೆ ಮತ್ತು ಹಿಡಿದ ಮೀನುಗಳನ್ನು ಕೆಲವೊಮ್ಮೆ ಸಂರಕ್ಷಿಸಲ್ಪಟ್ಟ ಅಥವಾ ಜೀವಂತ ಟ್ರೋಫಿಗಳಾಗಿ ದೀರ್ಘಕಾಲ ಇಡಲಾಗುತ್ತದೆ. ಜೀವಸಮೀಕ್ಷೆಗಳನ್ನು ನಡೆಸಿದಾಗ, ಮೀನುಗಳನ್ನು ಸಾಮಾನ್ಯವಾಗಿ ಹಿಡಿಯಲಾಗುತ್ತದೆ, ಗುರುತಿಸಲಾಗುತ್ತದೆ ಮತ್ತು ನಂತರ ಬಿಡಲಾಗುತ್ತದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಅಂಕಿಅಂಶಗಳ ಪ್ರಕಾರ, ಒಟ್ಟು ವಾಣಿಜ್ಯ ಮೀನುಗಾರರು ಮತ್ತು ಮೀನು ಕೃಷಿಕರ ಸಂಖ್ಯೆ ೩೮ ಮಿಲಿಯನ್ ಎಂದು ಅಂದಾಜಿಸಲಾಗಿದೆ. ಮೀನುಗಾರಿಕೆ ಕೈಗಾರಿಕೆಗಳು ಮತ್ತು ಜಲಜೀವಿ ಕೃಷಿಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ೫೦೦ ದಶಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ.[೧] ೨೦೦೫ ರಲ್ಲಿ, ವನ್ಯ ಮೀನುಗಾರಿಕೆ ಕೇಂದ್ರಗಳಿಂದ ಸೆರೆಹಿಡಿಯಲಾದ ಪ್ರಪಂಚದಾದ್ಯಂತ ತಲಾವಾರು ಮೀನಿನ ಬಳಕೆಯು ೧೪.೪ ಕಿಲೋಗ್ರಾಂಗಳು (೩೨ ಪೌಂಡ್) ಆಗಿತ್ತು, ಮತ್ತು ಹೆಚ್ಚುವರಿ ೭.೪ ಕಿಲೋಗ್ರಾಂಗಳು (೧೬ ಪೌಂಡ್) ಮೀನು ಸಾಕಣೆ ಕೇಂದ್ರಗಳಿಂದ ಕೊಯ್ಲು ಮಾಡಲಾಗಿತ್ತು.[೨]

ಮೀನು ಬಂದರು

ಇತಿಹಾಸ[ಬದಲಾಯಿಸಿ]

ಮೀನು ಹಿಡಿಯುವುದು ಪ್ರಪಂಚದಲ್ಲಿ ಬೇಟೆಯ ಅತ್ಯಂತ ಆದಿರೂಪಗಳಲ್ಲೊಂದು ಎಂದು ಭಾವಿಸಲಾಗಿದೆ. ಮಾನವರು ಕೃಷಿಕರಾಗುವುದಕ್ಕಿಂತ ಮೊದಲೇ ಬಹಳ ಮಟ್ಟಿಗೆ ಬೇಟೆಗಾರರೇ ಆಗಿದ್ದರು. ಈ ಕಾರಣದಿಂದ ಮೀನು ಹಿಡಿಯುವುದು ಪ್ರಪಂಚದ ಅತಿ ಪುರಾತನವಾದ ಉದ್ಯಮವೆಂದೇ ಹೇಳಬಹುದು. ಹೀಗೆ ಪ್ರಾಚೀನ ಕಾಲದಿಂದಲೂ ಸಮುದ್ರ ವ್ಯಾಪಾರದ ಬೆಳೆವಣಿಗೆಯಲ್ಲಿ ಮೀನುಗಾರಿಕೆ ಹೆಚ್ಚು ಪ್ರಮುಖ ಪಾತ್ರವನ್ನು ಪಡೆದು ಹಡಗುಗಳ ನಿರ್ಮಾಣಕ್ಕೂ ಮೀನುಗಳನ್ನು ಹುಡುಕುತ್ತ ಅಜ್ಞಾತ ದೇಶಗಳನ್ನು ಆವಿಷ್ಕರಿಸಲು ಪ್ರೇರಣೆಯನ್ನೂ ಒದಗಿಸಿದೆ. ಯಾವುದಾದರೊಂದು ಪಟ್ಟಣ ಅಥವಾ ಬಂದರಿನ ನೆಲೆಯನ್ನು ಗುರುತಿಸುವುದಕ್ಕೆ ಮೀನುಗಾರಿಕೆಯ ಉದ್ಯಮದೊಂದಿಗೆ ಅದು ಪಡೆದಿರುವ ಸಂಬಂಧವನ್ನು ಉಲ್ಲೇಖಿಸದೆ ಇರಲು ಸಾಧ್ಯವಿಲ್ಲ.

ಸುಮಾರು ೪೦,೦೦೦ ವರ್ಷಗಳ ಹಿಂದೆ, ನಂತರದ ಪ್ರಾಚೀನ ಶಿಲಾಯುಗ ಅವಧಿಯ ಪ್ರಾರಂಭದಲ್ಲಿ ಮೀನುಗಾರಿಕೆಯು ಪ್ರಾಚೀನ ಅಭ್ಯಾಸವಾಗಿತ್ತು.[೩] ಪೂರ್ವ ಏಷ್ಯಾದ ೪೦೦೦೦-ವರ್ಷ-ಹಳೆಯ ಆಧುನಿಕ ಮಾನವನಾದ ಟಿಯಾನ್‍ಯುವಾನ್ ಮಾನವನ ಅವಶೇಷಗಳ ಸಮಸ್ಥಾನೀಯ ವಿಶ್ಲೇಷಣೆಯ ಪ್ರಕಾರ ಅವನು ನಿಯಮಿತವಾಗಿ ಸಿಹಿನೀರಿನ ಮೀನುಗಳನ್ನು ಸೇವಿಸುತ್ತಿದ್ದನು ಎಂದು ತೋರಿಸಿದೆ.[೪][೫] ಪುರಾತತ್ತ್ವ ಶಾಸ್ತ್ರೀಯ ವೈಶಿಷ್ಟ್ಯಗಳಾದ ಚಿಪ್ಪಿನ ರಾಶಿಗಳು,[೬] ಮೀನಿನ ಮೂಳೆಗಳು ಮತ್ತು ಗುಹಾ ವರ್ಣಚಿತ್ರಗಳು ಸಮುದ್ರ ಆಹಾರಗಳು ಉಳಿವಿಗಾಗಿ ಮತ್ತು ಸಂಗ್ರಹಣೆಗಾಗಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದವು ಎಂದು ತೋರಿಸುತ್ತವೆ. ಆಫ್ರಿಕಾದಲ್ಲಿ ಮೀನುಗಾರಿಕೆ ಮಾನವ ಇತಿಹಾಸದಲ್ಲಿ ಬಹಳ ಮುಂಚೆಯೇ ಸ್ಪಷ್ಟವಾಗಿ ಕಂಡುಬರುತ್ತದೆ. ನಿಯಾಂಡರ್ಟಾಲ್‌ರು ಸುಮಾರು ಕ್ರಿಸ್ತಪೂರ್ವ ೨೦೦,೦೦೦ ರ ಹೊತ್ತಿಗೆ ಮೀನುಗಾರಿಕೆ ನಡೆಸುತ್ತಿದ್ದರು.[೭] ಹೆಚ್ಚಿನ ಪ್ರಮಾಣದಲ್ಲಿ ಮೀನುಗಳನ್ನು ಹಿಡಿಯಲು ಮೀನುಗಾರಿಕೆ ಬಲೆಗಳನ್ನು ತಯಾರಿಸಲು ಜನರು[೮] ಮೀನಿನ ಬಲೆಗಳಿಗಾಗಿ ಬುಟ್ಟಿಗಳನ್ನು ಮತ್ತು ನೂಲುವ ಮತ್ತು ಹೆಣಿಗೆಯ ಆರಂಭಿಕ ರೂಪಗಳನ್ನು ಅಭಿವೃದ್ಧಿಪಡಿಸಿದ್ದರಿಬಹುದು.

ಈ ಅವಧಿಯಲ್ಲಿ, ಹೆಚ್ಚಿನ ಜನರು ಬೇಟೆಗಾರ - ಸಂಗ್ರಹಕಾರ ಜೀವನಶೈಲಿಯಲ್ಲಿ ವಾಸಿಸುತ್ತಿದ್ದರು ಮತ್ತು ನಿರಂತರವಾಗಿ ವಲಸೆಹೋಗುತ್ತಿದ್ದರು. ಆದಾಗಿಯೂ, ಲೆಪೆನ್ಸ್ಕಿ ವಿರ್‌ನಲ್ಲಿರುವಂತಹ ಶಾಶ್ವತ ವಸಾಹತುಗಳ ಆರಂಭಿಕ ಉದಾಹರಣೆಗಳಿದ್ದರೆ (ಶಾಶ್ವತವಾಗಿ ನೆಲಸಲ್ಪಟ್ಟಿರಲಿಲ್ಲವಾದರೂ), ಅವು ಯಾವಾಗಲೂ ಆಹಾರದ ಪ್ರಮುಖ ಮೂಲವಾಗಿ ಮೀನುಗಾರಿಕೆಯೊಂದಿಗೆ ಸಂಬಂಧ ಹೊಂದಿವೆ.

ಮೀನು ಹಿಡಿಯುವ ವಿಧಾನಗಳ ವಿಕಾಸ ಪುರಾತನ ಕಾಲದಲ್ಲಿ ಪೌರುಸ್ತ್ಯ ದೇಶಗಳಲ್ಲಿ ಪಳಗಿಸಿದ ನೀರು ನಾಯಿ, ರೆಮೋರ ಅಥವಾ ಹೀರುಮೀನು ಹಾಗೂ ಕಾರ್ಮೊರೆಂಟ್ ಪಕ್ಷಿ ಮುಂತಾದವುಗಳ ಸಹಾಯದಿಂದ ಮೀನು ಹಿಡಿಯುವ ಪದ್ಧತಿಯಿಂದ ಮೊದಲುಗೊಂಡು ಇತ್ತೀಚಿನ ಆಧುನಿಕ ರೀತಿಯ ವೈವಿಧ್ಯಮಯ ಸಲಕರಣೆಗಳ ಬಳಕೆಯ ಕ್ರಮದ ತನಕ ಸಾಗಿದೆ. ಮೀನುಗಳನ್ನು ಮುಖ್ಯವಾಗಿ ನಾಲ್ಕು ರೀತಿಯಲ್ಲಿ ಹಿಡಿಯಬಹುದು. ಅವೆಂದರೆ ಈಟಿ, ಬೋನು, ಬಲೆ ಮತ್ತು ಗಾಳಗಳು. ಅತ್ಯಂತ ಪ್ರಾಚೀನ ಮೀನು ಹಿಡಿಯುವ ಸಲಕರಣೆಗಳು ನಿಶ್ಚಯವಾಗಿಯೂ ಈಟಿ ಮತ್ತು ಬೋನುಗಳೇ ಆಗಿದ್ದುವು. ಈಗಲೂ ಇವನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ಉಪಯೋಗಿಸುವುದುಂಟು. ಇಂಥ ಪುರಾತನ ಬೋನುಗಳಿಂದ ಇತ್ತೀಚಿನ ಹೆಚ್ಚು ಸಮರ್ಥವಾದ ಮೀನು ಅಣೆಕಟ್ಟು ಅಥವಾ ಒಡ್ಡುಗಳವರೆಗೆ (ಫಿಶ್ ವಿಯರ್) ಇಂಥ ಮೀನುಗಾರಿಕೆ ವಿಕಸಿಸಿದೆ. ಈ ಮೀನುಅಣೆಕಟ್ಟಿನಲ್ಲಿ ಅನುಸಿರಿಸುವ ಸಾಮನ್ಯ ನಿಯಮವೆಂದರೆ ಮೀನುಗಳನ್ನು ಪ್ರವಾಹ ಭರತಕ್ಕೆ ಪ್ರವೇಶಿಸುವಂತೆ ಮಾಡಿ ಉಬ್ಬರದ ನೀರಿನ ಇಳಿತದ ಮೇಲೆ ಉಳಿಸಿಕೊಂಡು ಅನಂತರ ಅವುಗಳನ್ನು ಹಿಡಿಯುವುದು. ಈಗಲೂ ಈ ಪದ್ಧತಿ ಅನೇಕ ಕಡೆಗಳಲ್ಲಿ ರೂಢಿಯಲ್ಲಿದೆ. ಸರಳ ಮೀನು ಅಣೆಕಟ್ಟುಗಳಿಂದ ಮುಂದಕ್ಕೆ ವಿಶದವಾದ ಸರಳು ಹಾಗೂ ಕೊಂಬೆಗಳಿಂದ ಒಂದಕ್ಕೊಂದು ಹೆಣೆದು ಮಾಡಿದ ಬೇಲಿಯ ರಚನೆಯವರೆಗೆ ಅಭಿವೃದ್ಧಿಗೊಂಡಿತು. ಇವುಗಳಿಂದ ಕ್ರಮೇಣ ಸ್ಥಿರವಾಗಿ ನೆಲೆಗೊಳಿಸುವ ಬಲೆಗಳು ವಿಕಾಸಗೊಂಡವು. ಬಹುಶಃ ಗಾಳಗಳು ಸಹ ಮಾನವನ ಇತಿಹಾಸದ ಆದಿಯ ಮಜಲಲ್ಲಿಯೇ ಉಪಯೋಗದಲ್ಲಿದ್ದುವು. ಅಂತಿಮವಾಗಿ ಅಣೆಕಟ್ಟನ್ನು ಮೀನು ಪ್ರವೇಶಿಸುವುದನ್ನೇ ಕಾಯುತ್ತಾ ಇರುವುದಕ್ಕೆ ಬದಲು ಮೀನಿಗೇ ಬಲೆಯನ್ನು ತರುವ ಪ್ರಯತ್ನಗಳನ್ನು ಮಾಡಲಾಯಿತು. ಈ ಪ್ರಯತ್ನಗಳೇ ಪ್ರಥಮ ಎಳೆಬಲೆ ದೋಣಿಗಳು ಅಥವಾ ದೋಣಿಗಳಿಂದಾಗಲೀ ತೀರದಿಂದಾಗಲೀ ಬಳಕೆಯಾಗುವ ಸೀನ್ ಬಲೆಗಳ ಶೋಧನೆಗೆ ನಾಂದಿಯಾದವು.

ಎಳೆಬಲೆಯಿಂದ ಹಿಡಿಯುವುದು[ಬದಲಾಯಿಸಿ]

ಬ್ರಿಟಿಷ್ ಡಾಗರ್ ೧೭ನೇ ಶತಮಾನದಿಂದ ಬಹಳ ಮೊದಲಿನ ರೀತಿಯ ನೌಕಾಯಾನ ಎಳೆಬಲೆ ದೋಣಿ ಆಗಿತ್ತು, ಆದರೆ ಆಧುನಿಕ ಮೀನುಗಾರಿಕಾ ಎಳೆಬಲೆ ದೋಣಿಯನ್ನು ೧೯ನೇ ಶತಮಾನದಲ್ಲಿ ಬ್ರಿಕ್ಸ್‌ಹ್ಯಾಮ್‌ನ ಇಂಗ್ಲಿಷ್ ಮೀನುಗಾರಿಕೆ ಬಂದರಿನಲ್ಲಿ ಅಭಿವೃದ್ಧಿಪಡಿಸಲಾಯಿತು. ೧೯ ನೇ ಶತಮಾನದ ಆರಂಭದ ವೇಳೆಗೆ, ಬ್ರಿಕ್ಸ್‌ಹ್ಯಾಮ್‌ನಲ್ಲಿನ ಮೀನುಗಾರರು ತಮ್ಮ ಮೀನುಗಾರಿಕೆ ಪ್ರದೇಶವನ್ನು ಹಿಂದೆಂದಿಗಿಂತಲೂ ಹೆಚ್ಚು ವಿಸ್ತರಿಸುವ ಅಗತ್ಯವಿತ್ತು, ಏಕೆಂದರೆ ದಕ್ಷಿಣ ಡೆವೊನ್‌ನ ಅತಿಯಾದ ಮೀನುಗಾರಿಕೆಯು ನೀರಿನಲ್ಲಿ ಸಂಭವಿಸುತ್ತಿದ್ದ ಮೀನುಗಳ ನಿರಂತರ ಕ್ಷೀಣತೆಯಿಂದಾಗಿ ಅಲ್ಲಿ ವಿಕಸನಗೊಂಡ ಬ್ರಿಕ್ಸ್‌ಹ್ಯಾಮ್ ಎಳೆಬಲೆ ದೋಣಿಯು ನಯವಾದ ರಚನೆಯನ್ನು ಹೊಂದಿತ್ತು ಮತ್ತು ಎತ್ತರದ ಗ್ಯಾಫ್ ಸಜ್ಜುವಿನ್ಯಾಸವನ್ನು ಹೊಂದಿತ್ತು. ಇದು ಸಮುದ್ರದಲ್ಲಿನ ಮೀನುಗಾರಿಕಾ ಪ್ರದೇಶಗಳಿಗೆ ದೂರದ ಪ್ರಯಾಣವನ್ನು ಮಾಡಲು ಹಡಗಿಗೆ ಸಾಕಷ್ಟು ವೇಗವನ್ನು ನೀಡಿತು. ಆಳವಾದ ನೀರಿನಲ್ಲಿ ದೊಡ್ಡ ಎಲೆಬಲೆಗಳನ್ನು ಎಳೆಯಲು ಸಾಧ್ಯವಾಗುವಂತೆ ಅವುಗಳು ಸಾಕಷ್ಟು ದೃಢವಾಗಿದ್ದವು. ಬ್ರಿಕ್ಸ್‌ಹ್ಯಾಮ್‌ನಲ್ಲಿ ನಿರ್ಮಿಸಲಾದ ದೊಡ್ಡ ಎಳೆಬಲೆ ಹಡಗು ಪಡೆಯು ಆ ಗ್ರಾಮಕ್ಕೆ ಆಳ-ಸಮುದ್ರದ ಮೀನುಗಾರಿಕೆಯ ತಾಯಿ ಎಂಬ ಬಿರುದನ್ನು ತಂದುಕೊಟ್ಟಿತು.[೯]

ಈ ಕ್ರಾಂತಿಕಾರಿ ವಿನ್ಯಾಸವು ಮೊದಲ ಬಾರಿಗೆ ಸಾಗರದಲ್ಲಿ ಎಳೆಬಲೆಯಿಂದ ದೊಡ್ಡ ಪ್ರಮಾಣದಲ್ಲಿ ಮೀನು ಹಿಡಿಯುವುದನ್ನು ಸಾಧ್ಯವಾಗಿಸಿತು. ಇದರ ಪರಿಣಾಮವಾಗಿ ದಕ್ಷಿಣ ಇಂಗ್ಲೆಂಡ್‌ನ ಬಂದರುಗಳಿಂದ ಸ್ಕಾರ್‌ಬರೋ, ಹಲ್, ಗ್ರಿಮ್ಸ್‌ಬಿ, ಹಾರ್ವಿಚ್ ಮತ್ತು ಯಾರ್ಮೌತ್‌ನಂತಹ ಉತ್ತರದ ಹಳ್ಳಿಗಳಿಗೆ ಮೀನುಗಾರರು ಬೃಹತ್ ಪ್ರಮಾಣದಲ್ಲಿ ವಲಸೆ ಹೋಗಲು ಕಾರಣವಾಯಿತು. ಇವು ಅಟ್ಲಾಂಟಿಕ್ ಸಾಗರದಲ್ಲಿನ ದೊಡ್ಡ ಮೀನುಗಾರಿಕಾ ಪ್ರದೇಶಗಳಿಗೆ ಪ್ರವೇಶದ ಬಿಂದುಗಳಾಗಿದ್ದವು.

ಗ್ರಿಮ್ಸ್‌ಬಿ ಎಂಬ ಸಣ್ಣ ಗ್ರಾಮವು ೧೯ನೇ ಶತಮಾನದ ಮಧ್ಯಭಾಗದಲ್ಲಿ ಪ್ರಪಂಚದ ಅತಿ ದೊಡ್ಡ ಮೀನುಗಾರಿಕಾ ಬಂದರು ಆಗಿ ಬೆಳೆಯಿತು.[೧೦] ಸಂಸತ್ತಿನ ಕಾಯಿದೆಯನ್ನು ಮೊದಲು ೧೭೯೬ ರಲ್ಲಿ ಪಡೆಯಲಾಯಿತು. ೧೮೪೬ ನಲ್ಲಿ ಆಗಷ್ಟೇ, ಮೀನುಗಾರಿಕೆ ಉದ್ಯಮದಲ್ಲಿನ ಪ್ರಚಂಡ ವಿಸ್ತರಣೆಯೊಂದಿಗೆ, ಗ್ರಿಮ್ಸ್‌ಬಿ ಡಾಕ್ ಕಂಪನಿಯನ್ನು ರಚಿಸಲಾಯಿತು. ರಾಯಲ್ ಡಾಕ್‌ಗೆ ಅಡಿಪಾಯವನ್ನು ೧೮೪೯ ರಲ್ಲಿ ಮಹಾರಾಣಿಯ ಪತಿಯಾದ ಆಲ್ಬರ್ಟ್ ಹಾಕಿದರು. ಡಾಕ್ ೨೫ ಎಕರೆ (೧೦ ಹೆಕ್ಟೇರ್) ಅನ್ನು ಆವರಿಸಿತು ಮತ್ತು ೧೮೫೪ ರಲ್ಲಿ ಇದನ್ನು ರಾಣಿ ವಿಕ್ಟೋರಿಯಾ ಮೊದಲ ಆಧುನಿಕ ಮೀನುಗಾರಿಕೆ ಬಂದರು ಎಂದು ಔಪಚಾರಿಕವಾಗಿ ತೆರೆದರು.

ಸೊಗಸಾದ ಬ್ರಿಕ್ಸ್‌ಹ್ಯಾಮ್ ಎಳೆಬಲೆ ದೋಣಿಯು ಪ್ರಪಂಚದಾದ್ಯಂತ ಹರಡಿತು, ಮತ್ತು ಎಲ್ಲೆಡೆ ಮೀನುಗಾರಿಕೆ ಹಡಗುಪಡೆಗಳ ಮೇಲೆ ಪ್ರಭಾವ ಬೀರಿತು.[೧೧] ೧೯ ನೇ ಶತಮಾನದ ಅಂತ್ಯದ ವೇಳೆಗೆ, ಬ್ರಿಟನ್‌ನಲ್ಲಿ ೩,೦೦೦ ಕ್ಕೂ ಹೆಚ್ಚು ಮೀನುಗಾರಿಕೆ ಎಳೆಬಲೆ ದೋಣಿಗಳು ಕಾರ್ಯನಿರತವಾಗಿದ್ದವು, ಸುಮಾರು ೧,೦೦೦ ಗ್ರಿಮ್ಸ್‌ಬಿಯಲ್ಲಿದ್ದವು. ಈ ಎಳೆಬಲೆ ದೋಣಿಗಳನ್ನು ನೆದರ್‌ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯಾ ಸೇರಿದಂತೆ ಯುರೋಪ್‌ನಾದ್ಯಂತ ಮೀನುಗಾರರಿಗೆ ಮಾರಾಟ ಮಾಡಲಾಯಿತು. ಹನ್ನೆರಡು ಎಳೆಬಲೆ ದೋಣಿಗಳು ಜರ್ಮನ್ ಮೀನುಗಾರಿಕಾ ಹಡಗುಪಡೆಯ ಕೇಂದ್ರಭಾಗವನ್ನು ರಚಿಸಿದವು.[೧೨]

ಮೊಟ್ಟಮೊದಲ ಉಗಿ-ಚಾಲಿತ ಮೀನುಗಾರಿಕೆ ದೋಣಿಗಳು ೧೮೭೦ ರ ದಶಕದಲ್ಲಿ ಕಾಣಿಸಿಕೊಂಡವು ಮತ್ತು ಮೀನುಗಾರಿಕೆಯ ಎಳೆಬಲೆ ವ್ಯವಸ್ಥೆ, ಜೊತೆಗೆ ದೋಣಿ ಗುಂಪುಗಳು ಮತ್ತು ತೇಲುಬಲೆಗಳನ್ನು ಬಳಸಿದವು. ಇವುಗಳು ದೊಡ್ಡ ದೋಣಿಗಳಾಗಿದ್ದವು, ಸಾಮಾನ್ಯವಾಗಿ ೮೦-೯೦ ಅಡಿ (೨೪-೨೭ ಮೀಟರ್) ಉದ್ದವಿದ್ದು ಸುಮಾರು ೨೦ ಅಡಿಯ (೬.೧ ಮೀಟರ್) ದೂಲವನ್ನು ಹೊಂದಿರುತ್ತಿದ್ದವು. ಅವು ೪೦-೫೦ ಟನ್‌ಗಳಷ್ಟು ಭಾರವಿದ್ದವು ಮತ್ತು ೯-೧೧ ನಾಟ್ ವೇಗದಲ್ಲಿ ಪ್ರಯಾಣಿಸುತ್ತಿದ್ದವು. ೧೮೭೫ ರ ಮಾರ್ಚ್‌ನಲ್ಲಿ ಸ್ಕಾಟ್ಲೆಂಡ್‌ನ ಲೀತ್‌ನಲ್ಲಿ ಡೇವಿಡ್ ಅಲನ್ ಅವರು ಕೊಚ್ಚುಬಲೆ ದೋಣಿಯನ್ನು ಉಗಿ ಶಕ್ತಿಗೆ ಪರಿವರ್ತಿಸಿ ಮೊದಲ ಉದ್ದೇಶ ನಿರ್ಮಿತ ಮೀನುಗಾರಿಕೆ ನೌಕೆಗಳನ್ನು ವಿನ್ಯಾಸಗೊಳಿಸಿದರು ಮತ್ತು ತಯಾರಿಸಿದರು. ೧೮೭೭ ರಲ್ಲಿ, ಅವರು ವಿಶ್ವದ ಮೊದಲ ತಿರುಪು ಚಾಲಿತ ಆವಿ ಎಳೆಬಲೆ ದೋಣಿಯನ್ನು ನಿರ್ಮಿಸಿದರು.[೧೩]

೧೮೮೦ ರ ದಶಕದಲ್ಲಿ ಗ್ರಿಮ್ಸ್‌ಬಿ ಮತ್ತು ಹಲ್‍ನಲ್ಲಿ ಆವಿ ಎಳೆಬಲೆ ದೋಣಿಗಳನ್ನು ಪರಿಚಯಿಸಲಾಯಿತು. ೧೮೯೦ ರಲ್ಲಿ ಉತ್ತರ ಸಮುದ್ರದಲ್ಲಿ ೨೦,೦೦೦ ಕೆಲಸಗಾರರು ಇದ್ದರು ಎಂದು ಅಂದಾಜಿಸಲಾಗಿದೆ. ಆವಿ ಕೊಚ್ಚುಬಲೆ ದೋಣಿಯನ್ನು ೧೮೯೭ ರವರೆಗೆ ಹೆರಿಂಗ್ ಮೀನುಗಾರಿಕೆಯಲ್ಲಿ ಬಳಸಲಾಗಲಿಲ್ಲ. ಕೊನೆಯ ನೌಕಾಯಾನ ಮೀನುಗಾರಿಕೆ ಎಳೆಬಲೆ ದೋಣಿಯನ್ನು ೧೯೨೫ ರಲ್ಲಿ ಗ್ರಿಮ್ಸ್‌ಬಿಯಲ್ಲಿ ನಿರ್ಮಿಸಲಾಯಿತು. ಒಂದನೆಯ ಮಹಾಯುದ್ಧದ ವೇಳೆಗೆ ತೇಲುವ ದೋಣಿಯಿಂದ ಕಲ್ಲಿದ್ದಲಿನಿಂದ ಶಕ್ತಿಪಡೆದ ಉಗಿಗೆ ಬದಲಾದವು. ಈ ರೀತಿಯಲ್ಲಿ ಎಳೆಬಲೆ ದೋಣಿಗಳ ವಿನ್ಯಾಸಗಳು ಎರಡನೇ ಮಹಾಯುದ್ಧದ ಅಂತ್ಯದ ವೇಳೆಗೆ ಡೀಸೆಲ್ ಮತ್ತು ಟರ್ಬೈನ್‌ಗಳಿಗೆ ಬದಲಾದವು.

೧೯೩೧ ರಲ್ಲಿ, ಮೊದಲ ಚಾಲಿತ ಡ್ರಮ್ ಅನ್ನು ಲಾರಿ ಜರೆಲೈನೆನ್ ರಚಿಸಿದರು. ಡ್ರಮ್ ಒಂದು ವೃತ್ತಾಕಾರದ ಸಾಧನವಾಗಿದ್ದು ಅದನ್ನು ದೋಣಿಯ ಬದಿಯಲ್ಲಿ ಹೊಂದಿಸಲಾಗಿರುತ್ತಿತ್ತು ಮತ್ತು ಬಲೆಗಳನ್ನು ಒಳಗೆ ಸೆಳೆಯುತ್ತಿತ್ತು. ವಿಶ್ವ ಸಮರ ೨ ರಿಂದ, ರೇಡಿಯೋ ಸಂಚರಣೆ ಸಾಧನಗಳು ಮತ್ತು ಮೀನು ಶೋಧಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮೊದಲ ಎಳೆಬಲೆ ದೋಣಿಗಳು ಹಿಂಗೋಟಿಗಿಂತ ಹೆಚ್ಚಾಗಿ ಬದಿಯ ಮೇಲೆ ಮೀನು ಹಿಡಿಯುತ್ತಿದ್ದವು. ಸ್ಕಾಟ್ಲೆಂಡ್‌ನ ಅಬರ್ಡೀನ್‌ನಲ್ಲಿ ೧೯೫೩ ರಲ್ಲಿ ನಿರ್ಮಿಸಲಾದ ಫೇರಿಟ್ರಿ ಮೊದಲ ಉದ್ದೇಶ ನಿರ್ಮಿತ ಹಿಂಗೋಟು ಎಳೆಬಲೆ ದೋಣಿಯಾಗಿತ್ತು. ಈ ನೌಕೆಯು ಆಗ ಕಾರ್ಯಾಚರಣೆಯಲ್ಲಿದ್ದ ಇತರ ಎಳೆಬಲೆ ದೋಣಿಗಳಿಗಿಂತ ದೊಡ್ಡದಾಗಿತ್ತು ಮತ್ತು 'ಸೂಪರ್ ಟ್ರಾಲರ್' ಯುಗವನ್ನು ಉದ್ಘಾಟಿಸಿತ್ತು. ನೌಕೆಯು ತನ್ನ ಬಲೆಗಳನ್ನು ಸ್ಟರ್ನ್‌ನ ಮೇಲೆ ಎಳೆದಂತೆ, ಅದು ೬೦ ಟನ್‌ಗಳಷ್ಟು ಹೆಚ್ಚಿನ ಭಾರವನ್ನು ಎತ್ತಬಲ್ಲದ್ದಾಗಿತ್ತು.[೧೪] ಮುಂದಿನ ದಶಕಗಳಲ್ಲಿ ವಿಶ್ವದಾದ್ಯಂತ ಸೂಪರ್ ಟ್ರಾಲರ್ಗಳ ವಿಸ್ತರಣೆಗೆ ಈ ಹಡಗು ಆಧಾರವಾಗಿ ಕಾರ್ಯನಿರ್ವಹಿಸಿತು.

ಮನರಂಜನಾ ಮೀನುಗಾರಿಕೆ[ಬದಲಾಯಿಸಿ]

ಮನರಂಜನೆಯಾಗಿ ಮೀನುಗಾರಿಕೆಯ ಆರಂಭಿಕ ವಿಕಸನವು ಸ್ಪಷ್ಟವಾಗಿಲ್ಲ. ಉದಾಹರಣೆಗೆ, ಜಪಾನ್‌ನಲ್ಲಿ ಫ್ಲೈ ಮೀನುಗಾರಿಕೆಗೆ ಉಪಾಖ್ಯಾನ ರೂಪದ ಪುರಾವೆಗಳಿವೆ. ಆದರೆ, ಫ್ಲೈ ಮೀನುಗಾರಿಕೆಯು ಮನರಂಜನೆಗಿಂತ ಹೆಚ್ಚಾಗಿ ಬದುಕುಳಿಯುವ ಸಾಧನವಾಗಿದ್ದಿರಬಹುದು. ಮನರಂಜನಾ ಮೀನುಗಾರಿಕೆಯ ಕುರಿತಾದ ಆರಂಭಿಕ ಇಂಗ್ಲಿಷ್ ಪ್ರಬಂಧವನ್ನು ೧೪೯೬ ರಲ್ಲಿ ಬೆನೆಡಿಕ್ಟೈನ್ ಸೋಪ್ವೆಲ್ ಸಂನ್ಯಾಸಿನಿಯರ ಮಠದ ಪ್ರಿಯೊರೆಸ್ ಡೇಮ್ ಜೂಲಿಯಾನಾ ಬರ್ನರ್ಸ್ ಪ್ರಕಟಿಸಿದರು. ಈ ಪ್ರಬಂಧವು ಟ್ರೀಟೈಸ್ ಆಫ್ ಫೈಸ್ಶಿಂಜ್ ವೈತ್ ಆನ್ ಆಂಗಲ್ ಎಂಬ ಶೀರ್ಷಿಕೆಯನ್ನು ಹೊಂದಿತ್ತು,[೧೫] ಮತ್ತು ಮೀನುಗಾರಿಕೆ ನೀರು, ಮೀನುಗೋಲುಗಳು ಹಾಗೂ ಹಗ್ಗಗಳ ನಿರ್ಮಾಣ ಮತ್ತು ನೈಸರ್ಗಿಕ ಎರೆಗಳು ಹಾಗೂ ಕೃತಕ ನೊಣಗಳ ಬಳಕೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒಳಗೊಂಡಿತ್ತು.[೧೬]

ಆಂಗ್ಲ ಅಂತರ್ಯುದ್ಧದ ನಂತರ ಮನರಂಜನಾ ಮೀನುಗಾರಿಕೆಯು ಮಹತ್ತರವಾದ ಮುನ್ನಡೆಯನ್ನು ಪಡೆದುಕೊಂಡಿತು. ಆ ಚಟುವಟಿಕೆಯಲ್ಲಿ ಹೊಸದಾಗಿ ಕಂಡುಬಂದ ಆಸಕ್ತಿಯು ಈ ವಿಷಯದ ಮೇಲೆ ಬರೆಯಲಾದ ಅನೇಕ ಪುಸ್ತಕಗಳು ಮತ್ತು ಗ್ರಂಥಗಳ ಮೇಲೆ ತನ್ನ ಗುರುತನ್ನು ಬಿಟ್ಟಿತು. ೧೫೮೯ ರಲ್ಲಿ ಲಿಯೊನಾರ್ಡ್ ಮಸ್ಕಾಲ್ ಅವರು ಆ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಶಿಕಾರಿ ಮತ್ತು ವನ್ಯಜೀವಿಗಳ ಮೇಲೆ ತಮ್ಮ ಜೀವನದಲ್ಲಿ ಸೃಷ್ಟಿಸಿದ ಅನೇಕ ಇತರ ಗ್ರಂಥಗಳೊಂದಿಗೆ A booke of Fishing with Hooke and Line ಎಂಬ ಪುಸ್ತಕವನ್ನು ಬರೆದರು. ದ ಕಂಪ್ಲೀಟ್ ಆಂಗ್ಲರ್ ಅನ್ನು ೧೬೫೩ ರಲ್ಲಿ ಇಜಾಕ್ ವಾಲ್ಟನ್ ಬರೆದರು ಮತ್ತು ಡರ್ಬಿಶೈರ್ ವೈನಲ್ಲಿನ ಮೀನುಗಾರಿಕೆಯನ್ನು ವಿವರಿಸಿತ್ತು. ಇದು ಗದ್ಯ ಮತ್ತು ಪದ್ಯದಲ್ಲಿ ಮೀನುಗಾರಿಕೆಯ ಕಲೆ ಮತ್ತು ಚೈತನ್ಯದ ಆಚರಣೆಯಾಗಿತ್ತು. ಪುಸ್ತಕಕ್ಕೆ ಎರಡನೇ ಭಾಗವನ್ನು ವಾಲ್ಟನ್‌ನ ಸ್ನೇಹಿತ ಚಾರ್ಲ್ಸ್ ಕಾಟನ್ ಸೇರಿಸಿದರು.[೧೭]

ಚಾರ್ಲ್ಸ್ ಕಿರ್ಬಿ ೧೬೫೫ ರಲ್ಲಿ ಸುಧಾರಿತ ಮೀನುಗಾರಿಕೆ ಗಾಳದ ಕೊಕ್ಕೆಯನ್ನು ವಿನ್ಯಾಸಗೊಳಿಸಿದರು. ಅದು ಇಂದಿಗೂ ಬದಲಾಗದೆ ಉಳಿದಿದೆ. ಅವರು ಕಿರ್ಬಿ ಡೊಂಕನ್ನು ಕಂಡುಹಿಡಿದರು, ಇದು ಸರಿದೂಗಿಸುವ ಬಿಂದುವಿರುವ ವಿಶಿಷ್ಟವಾದ ಕೊಕ್ಕೆಯಾಗಿದ್ದು, ಇಂದಿಗೂ ಸಾಮಾನ್ಯವಾಗಿ ಬಳಸಲ್ಪಡುತ್ತದೆ.[೧೮]

೧೮ ನೇ ಶತಮಾನವು ಮುಖ್ಯವಾಗಿ ಹಿಂದಿನ ಶತಮಾನದಲ್ಲಿ ಅಭಿವೃದ್ಧಿಪಡಿಸಿದ ತಂತ್ರಗಳ ಬಲವರ್ಧನೆಯ ಯುಗವಾಗಿತ್ತು. ಮೀನುಗಾರಿಕೆ ಕೋಲುಗಳ ಉದ್ದಕ್ಕೂ ನಿರಂತರವಾಗಿ ಇದ್ದ ಉಂಗುರಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು, ಇದು ಎಸೆದ ಹಗ್ಗದ ಮೇಲೆ ಗಾಳಹಾಕಿ ಮೀನು ಹಿಡಿಯುವವರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತಿತ್ತು. ಕೋಲುಗಳು ಸ್ವತಃ ಹೆಚ್ಚು ಅತ್ಯಾಧುನಿಕ ಮತ್ತು ವಿಭಿನ್ನ ಪಾತ್ರಗಳಿಗೆ ಪರಿಣತಿ ಹೊಂದುತ್ತಿದ್ದವು. ಶತಮಾನದ ಮಧ್ಯಭಾಗದಿಂದ ಸಂಯೋಜಿತ ಕೋಲುಗಳು ಸಾಮಾನ್ಯವಾದವು ಮತ್ತು ಕೋಲಿನ ಮೇಲ್ಭಾಗದ ಭಾಗಕ್ಕೆ ಬಿದಿರನ್ನು ಬಳಸಲಾಯಿತು. ಇದು ಹೆಚ್ಚಿನ ಶಕ್ತಿ ಮತ್ತು ನಮ್ಯತೆಯನ್ನು ನೀಡುತ್ತಿತ್ತು.

ಉದ್ಯಮವು ವಾಣಿಜ್ಯೀಕರಣಗೊಂಡಿತು - ಕೋಲುಗಳು ಮತ್ತು ಟ್ಯಾಕಲ್‌ಗಳನ್ನು ಹ್ಯಾಬರ್‌ಡಾಶರ್ಸ್ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ೧೬೬೬ ರಲ್ಲಿ ಲಂಡನ್‌ನ ಮಹಾ ಬೆಂಕಿಯ ನಂತರ, ಕುಶಲಕರ್ಮಿಗಳು ರೆಡ್ಡಿಚ್‌ಗೆ ಸ್ಥಳಾಂತರಗೊಂಡರು, ಇದು ೧೭೩೦ ರ ದಶಕದಿಂದ ಮೀನುಗಾರಿಕೆ ಸಂಬಂಧಿತ ಉತ್ಪನ್ನಗಳ ಉತ್ಪಾದನೆಯ ಕೇಂದ್ರವಾಯಿತು. ಒನೆಸಿಮಸ್ ಉಸ್ಟನ್ಸನ್ ೧೭೬೧ ರಲ್ಲಿ ತನ್ನ ಅಂಗಡಿಯನ್ನು ಸ್ಥಾಪಿಸಿದನು ಮತ್ತು ಅವನ ಸಂಸ್ಥೆಯು ಮುಂದಿನ ಶತಮಾನದವರೆಗೆ ಮಾರುಕಟ್ಟೆಯ ನಾಯಕನಾಗಿ ಉಳಿಯಿತು. ರಾಜ ಜಾರ್ಜ್ ೪ ರಿಂದ ಆರಂಭಗೊಂಡು ಸತತ ಮೂರು ದೊರೆಗಳಿಂದ ಅವನು ರಾಯಲ್ ವಾರಂಟ್ ಪಡೆದನು.[೧೯] ಅವನು ಗುಣಿಸುವ ಕಂಡಿಕೆಯನ್ನು ಸಹ ಕಂಡುಹಿಡಿದನು. ಶ್ರೀಮಂತ ವರ್ಗದ ಸದಸ್ಯರಿಗೆ ಮನರಂಜನಾ ಹವ್ಯಾಸವಾಗಿ ಮೀನುಗಾರಿಕೆಯಲ್ಲಿ ವಿಸ್ತರಿತ ಆಸಕ್ತಿಯ ಸಮಯದಲ್ಲಿ ಉದ್ಯಮದ ವಾಣಿಜ್ಯೀಕರಣ ಬಂದಿತು.[೨೦]

ಕೈಗಾರಿಕಾ ಕ್ರಾಂತಿಯ ಪ್ರಭಾವವು ಗಾಳದ ಹಗ್ಗಗಳ ತಯಾರಿಕೆಯಲ್ಲಿ ಮೊದಲು ಕಂಡುಬಂದಿತು. ಗಾಳಹಾಕಿ ಮೀನು ಹಿಡಿಯುವವರು ತಮ್ಮ ಹಗ್ಗಗಳನ್ನು ತಿರುಚುವ ಬದಲು - ಪ್ರಯಾಸಕರ ಮತ್ತು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ - ಹೊಸ ಜವಳಿ ನೂಲುವ ಯಂತ್ರಗಳು ವಿವಿಧ ಮೊನಚಾದ ಹಗ್ಗಗಳನ್ನು ಸುಲಭವಾಗಿ ತಯಾರಿಸಲು ಮತ್ತು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟವು.

೧೯ ನೇ ಶತಮಾನದಲ್ಲಿ ಫ್ಲೈ ಮೀನುಗಾರಿಕಾ ಕ್ಲಬ್‌ಗಳ ಹೊರಹೊಮ್ಮುವಿಕೆಯೊಂದಿಗೆ ಬ್ರಿಟಿಷ್ ಫ್ಲೈ ಮೀನುಗಾರಿಕೆಯು ಅಭಿವೃದ್ಧಿಪಡುವುದು ಮುಂದುವರೆಯಿತು, ಜೊತೆಗೆ ಫ್ಲೈ ಕಟ್ಟುವಿಕೆ ಮತ್ತು ಫ್ಲೈ ಮೀನುಗಾರಿಕೆ ತಂತ್ರಗಳ ವಿಷಯದ ಕುರಿತು ಹಲವಾರು ಪುಸ್ತಕಗಳು ಕಾಣಿಸಿಕೊಂಡವು.

೧೯ ನೇ ಶತಮಾನದ ಮಧ್ಯಭಾಗದಿಂದ ಅಂತ್ಯಭಾಗದ ವೇಳೆಗೆ, ಮಧ್ಯಮ ಮತ್ತು ಕೆಳವರ್ಗದವರಿಗೆ ವಿರಾಮದ ಅವಕಾಶಗಳು ವಿಸ್ತರಿಸಿದ್ದು ಫ್ಲೈ ಮೀನುಗಾರಿಕೆ ಮೇಲೆ ತನ್ನ ಪರಿಣಾಮವನ್ನು ಬೀರಲು ಪ್ರಾರಂಭಿಸಿತು. ಇದು ಸಾಮೂಹಿಕ ಆಕರ್ಷಣೆಯಾಗಿ ಸ್ಥಿರವಾಗಿ ಬೆಳೆಯಿತು. ಬ್ರಿಟನ್‌ನಲ್ಲಿನ ರೈಲ್ವೆ ಜಾಲದ ವಿಸ್ತರಣೆಯು ಕಡಿಮೆ ಶ್ರೀಮಂತರು ಮೀನುಗಾರಿಕೆಗಾಗಿ ಸಮುದ್ರತೀರ ಅಥವಾ ನದಿಗಳಿಗೆ ವಾರಾಂತ್ಯದ ಪ್ರವಾಸಗಳನ್ನು ಕೈಗೊಳ್ಳಲು ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿತು. ಉತ್ಕೃಷ್ಟ ಹವ್ಯಾಸಿಗಳು ವಿದೇಶದಲ್ಲಿ ಮತ್ತಷ್ಟು ಸಾಹಸ ಮೆರೆದರು.[೨೧] ಸಾಲ್ಮನ್‌ಗಳ ದೊಡ್ಡ ದಾಸ್ತಾನುಗಳಿಂದ ತುಂಬಿದ್ದ ನಾರ್ವೆಯ ದೊಡ್ಡ ನದಿಗಳು ಶತಮಾನದ ಮಧ್ಯದಲ್ಲಿ ಇಂಗ್ಲೆಂಡ್‌ನಿಂದ ಮೀನುಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಪ್ರಾರಂಭಿಸಿದವು - ೧೮೪೮ ರಲ್ಲಿ ಪ್ರಕಟವಾದ Jones's guide to Norway, and salmon-fisher's pocket companion ಪುಸ್ತಕವನ್ನು ಫ್ರೆಡೆರಿಕ್ ಟೋಲ್ಫ್ರೇ ಬರೆದಿದ್ದರು ಮತ್ತು ದೇಶಕ್ಕೆ ಜನಪ್ರಿಯ ಮಾರ್ಗದರ್ಶಿಯಾಗಿತ್ತು.

ಆಧುನಿಕ ಗಾಳದುರುಳೆ ವಿನ್ಯಾಸವು ೧೮ ನೇ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಗಿತ್ತು ಮತ್ತು ಬಳಕೆಯಲ್ಲಿದ್ದ ಪ್ರಧಾನ ಮಾದರಿಯನ್ನು ನಾಟಿಂಗ್‌ಹ್ಯಾಮ್ ರೀಲ್ ಎಂದು ಕರೆಯಲಾಗುತ್ತಿತ್ತು. ಗಾಳದುರುಳೆಯು ಒಂದು ವಿಶಾಲವಾದ ಡ್ರಮ್ ಆಗಿದ್ದು, ಅದು ಮುಕ್ತವಾಗಿ ಸುತ್ತುತ್ತಿತ್ತು, ಮತ್ತು ಎರೆಯನ್ನು ಪ್ರವಾಹದೊಂದಿಗೆ ದೂರ ಸರಿಯಲು ಅನುವು ಮಾಡಿಕೊಡಲು ಸೂಕ್ತವಾಗಿತ್ತು. ಬ್ರಿಟನ್‌ನಲ್ಲಿ ಗೇರುಳ್ಳ ಗುಣಿಸುವ ಗಾಳದುರುಳೆಗಳು ಎಂದಿಗೂ ಯಶಸ್ವಿಯಾಗಿ ಜನಪ್ರಿಯವಾಗಲಿಲ್ಲ, ಆದರೆ ಅಮೇರಿಕದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಿತು, ಅಲ್ಲಿ ಇದೇ ಮಾದರಿಗಳನ್ನು ಕೆಂಟುಕಿಯ ಜಾರ್ಜ್ ಸ್ನೈಡರ್ ತನ್ನ ಎರೆ-ಎಸೆಯುವ ಗಾಳದುರುಳೆಗೆ ಮಾರ್ಪಡಿಸಿದನು, ಇದು ೧೮೧೦ ರಲ್ಲಿ ಮೊದಲ ಅಮೇರಿಕನ್ ನಿರ್ಮಿತ ವಿನ್ಯಾಸವಾಗಿತ್ತು.[೨೨]

ಮೀನುಗೋಲಿಗೆ ಬಳಸಲಾದ ವಸ್ತುವು ಇಂಗ್ಲೆಂಡ್‌ಗೆ ಸ್ಥಳೀಯವಾದ ಭಾರದ ಕಟ್ಟಿಗೆಗಳಿಂದ ವಿದೇಶದಿಂದ, ವಿಶೇಷವಾಗಿ ದಕ್ಷಿಣ ಅಮೇರಿಕಾ ಮತ್ತು ವೆಸ್ಟ್ ಇಂಡೀಸ್‌ನಿಂದ ಆಮದು ಮಾಡಿಕೊಂಡ ಹಗುರವಾದ ಮತ್ತು ಹೆಚ್ಚು ಸ್ಥಿತಿಸ್ಥಾಪಕ ಪ್ರಭೇದಗಳಿಗೆ ಬದಲಾಯಿತು. ೧೯ ನೇ ಶತಮಾನದ ಮಧ್ಯಭಾಗದಿಂದ ಬಿದಿರಿನ ಕೋಲುಗಳು ಸಾಮಾನ್ಯವಾಗಿ ವಿಶ್ವಾಸಪಡೆದ ಆಯ್ಕೆಯಾಗಿ ಮಾರ್ಪಟ್ಟವು. ವಸ್ತುಗಳ ಹಲವಾರು ಪಟ್ಟಿಗಳನ್ನು ಬೆತ್ತದಿಂದ ಕತ್ತರಿಸಿ, ಆಕಾರವಾಗಿ ಕತ್ತರಿಸಿ ನಂತರ ಒಟ್ಟಿಗೆ ಅಂಟಿಸಲಾಗುತ್ತಿತ್ತು, ಮತ್ತು ಹಗುರವಾದ, ಬಲವಾದ, ಷಡ್ಭುಜೀಯ ಕೋಲುಗಳನ್ನು ಘನ ಕೇಂದ್ರಭಾಗದೊಂದಿಗೆ ರೂಪಿಸಲಾಗುತ್ತಿತ್ತು. ಅವು ಹಿಂದೆ ಇದ್ದ ಸಲಕರಣೆಗಳಿಗಿಂತ ಉತ್ತಮವಾಗಿದ್ದವು. ಜಾರ್ಜ್ ಕಾಟನ್ ಮತ್ತು ಅವನ ಹಿಂದಿನವರು ತಮ್ಮ ಫ್ಲೈಗಳನ್ನು ಉದ್ದವಾದ ಕೋಲುಗಳು ಮತ್ತು ಹಗುರವಾದ ಹಗ್ಗಗಳನ್ನು ಬಳಸಿ ಬಿಡುತ್ತಿದ್ದರು ಮತ್ತು ಮೀನುಗಳಿಗೆ ನೊಣವನ್ನು ತಲುಪಿಸುವ ಹೆಚ್ಚಿನ ಕೆಲಸವನ್ನು ಗಾಳಿಗೆ ಬಿಡುತ್ತಿದ್ದರು.[೨೩]

ಟ್ಯಾಕಲ್‍ನ ವಿನ್ಯಾಸವು ೧೮೮೦ ರಿಂದ ಸುಧಾರಿಸಲು ಪ್ರಾರಂಭಿಸಿತು. ಫ್ಲೈ ಕೋಲುಗಳ ತಯಾರಿಕೆಗೆ ಹೊಸ ಕಟ್ಟಿಗೆಗಳ ಪರಿಚಯವು ಕುದುರೆಯ ಕೂದಲಿನ ಬದಲಾಗಿ ರೇಷ್ಮೆ ಹಗ್ಗಗಳ ಮೇಲೆ ನೊಣಗಳನ್ನು ಗಾಳಿಗೆ ಎಸೆಯುವುದನ್ನು ಸಾಧ್ಯವಾಗಿಸಿತು. ಈ ಹಗ್ಗಗಳು ಹೆಚ್ಚಿನ ದೂರಕ್ಕೆ ಎಸೆಯಲು ಅನುಮತಿಸುತ್ತಿದ್ದವು. ಆದಾಗ್ಗಿಯೂ, ಈ ಆರಂಭಿಕ ಫ್ಲೈ ಹಗ್ಗಗಳು ತ್ರಾಸದಾಯಕವೆಂದು ಸಾಬೀತಾಯಿತು ಏಕೆಂದರೆ ಅವುಗಳನ್ನು ತೇಲುವಂತೆ ಮಾಡಲು ವಿವಿಧ ವಸ್ತುಗಳಿಂದ ಲೇಪಿಸಬೇಕಾಗಿತ್ತು ಮತ್ತು ಗಾಳದುರುಳೆಯಿಂದ ತೆಗೆದು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಒಣಗಿಸಬೇಕಾಗುತ್ತಿತ್ತು. ಮತ್ತೊಂದು ಋಣಾತ್ಮಕ ಪರಿಣಾಮವೆಂದರೆ, ಹೆಚ್ಚು ಉದ್ದವಾದ ಹಗ್ಗವು ಸಿಕ್ಕಾಗಿ ಗಂಟಾಗುವುದು ಸುಲಭವಾಯಿತು. ಈ ಸಮಸ್ಯೆಯು ಹಗ್ಗವನ್ನು ಸಮವಾಗಿ ಸುತ್ತಲು ಮತ್ತು ಗಂಟಾಗುವುದನ್ನು ತಡೆಯಲು ನಿಯಂತ್ರಕದ ಆವಿಷ್ಕಾರವನ್ನು ಉತ್ತೇಜಿಸಿತು.

ಅಮೇರಿಕದ ಚಾರ್ಲ್ಸ್ ಎಫ್. ಓರ್ವಿಸ್, ೧೮೭೪ ರಲ್ಲಿ ಹೊಸದಾದ ಗಾಳದುರುಳೆ ಮತ್ತು ಫ್ಲೈ ಮಾದರಿಯನ್ನು ವಿನ್ಯಾಸಗೊಳಿಸಿ ವಿತರಿಸಿದರು. ಇದನ್ನು ಗಾಳದುರುಳೆಯ ಇತಿಹಾಸಕಾರ ಜಿಮ್ ಬ್ರೌನ್ "ಅಮೇರಿಕನ್ ಗಾಳದುರುಳೆ ವಿನ್ಯಾಸದ ಮಾನದಂಡ" ಮತ್ತು ಮೊದಲ ಸಂಪೂರ್ಣವಾಗಿ ಆಧುನಿಕ ಫ್ಲೈ ಗಾಳದುರುಳೆ ಎಂದು ವಿವರಿಸಿದರು.[೨೪][೨೫]

ಭಾರಿ ಜವಳಿ ಉದ್ಯಮಿಯಾಗಿದ್ದ ಇಲ್ಲಿಂಗ್‌ವರ್ತ್‌ನ ೧ನೇ ಬ್ಯಾರನ್ ಆಲ್ಬರ್ಟ್ ಇಲ್ಲಿಂಗ್‌ವರ್ತ್ ೧೯೦೫ ರಲ್ಲಿ ಸ್ಥಿರ-ನೂಲನ್ನು ನೂಲುವ ಗಾಳದುರುಳೆಯ ಆಧುನಿಕ ರೂಪಕ್ಕೆ ಪೇಟೆಂಟ್ ಪಡೆದರು. ಇಲ್ಲಿಂಗ್‌ವರ್ತ್‌ನ ಗಾಳದುರುಳೆ ವಿನ್ಯಾಸವನ್ನು ಎಸೆಯುವಾಗ, ಹಗ್ಗವನ್ನು ಉರುಳೆಯ ಮುಂಭಾಗದ ಅಂಚಿನಿಂದ ಎಳೆಯಲಾಗುತ್ತಿತ್ತು, ಆದರೆ ಹಗ್ಗ ನಿಯಂತ್ರಕದಿಂದ ಅಂಕೆಯಲ್ಲಿಟ್ಟು ಪುನಃ ಸುರುಳಿ ಸುತ್ತಲಾಗುತ್ತಿತ್ತು. ಈ ಸಾಧನವು ಸ್ಥಿರ ಉರುಳೆಯ ಸುತ್ತಲೂ ಪರಿಭ್ರಮಿಸುತ್ತಿತ್ತು. ಹಗ್ಗವನ್ನು ತಿರುಗುವ ಉರುಳೆಯ ವಿರುದ್ಧ ದಿಕ್ಕಿನಲ್ಲಿ ಎಳೆಯಬೇಕಾಗಿಲ್ಲದ ಕಾರಣ, ಸಾಂಪ್ರದಾಯಿಕ ಹಗ್ಗಗಳಿಗಿಂತ ಹೆಚ್ಚು ಹಗುರವಾದ ಎರೆಗಳನ್ನು ಎಸೆಯಬಹುದಾಗಿತ್ತು.

೧೯೫೦ರ ದಶಕದ ಆರಂಭದಲ್ಲಿ ಅಗ್ಗದ ನಾರುಗಾಜಿನ ಕೋಲುಗಳು, ಕೃತಕ ಫ್ಲೈ ಹಗ್ಗಗಳು ಮತ್ತು ಏಕತಂತು ತುದಿಕಟ್ಟುಗಳ ಅಭಿವೃದ್ಧಿಯು ಫ್ಲೈ ಮೀನುಗಾರಿಕೆಯ ಜನಪ್ರಿಯತೆಯನ್ನು ಪುನರುಜ್ಜೀವನಗೊಳಿಸಿತು.

ತಂತ್ರಗಳು[ಬದಲಾಯಿಸಿ]

ಮೀನುಗಳನ್ನು ಹಿಡಿಯಲು ಹಲವು ಮೀನುಗಾರಿಕೆ ತಂತ್ರಗಳು ಮತ್ತು ಉಪಾಯಗಳಿವೆ. ಮೃದ್ವಂಗಿಗಳು (ಚಿಪ್ಪುಮೀನು, ಸ್ಕ್ವಿಡ್, ಆಕ್ಟೋಪಸ್) ಮತ್ತು ಖಾದ್ಯ ಕಡಲು ಅಕಶೇರುಕಗಳಂತಹ ಇತರ ಜಲಚರಗಳನ್ನು ಹಿಡಿಯುವ ವಿಧಾನಗಳಿಗೂ ಈ ಪದವನ್ನು ಅನ್ವಯಿಸಬಹುದು.

ಮೀನುಗಾರಿಕೆ ತಂತ್ರಗಳಲ್ಲಿ ಕೈಯಿಂದ ಹಿಡಿಯುವುದು, ಈಟಿಯಿಂದ ಹಿಡಿಯುವುದು, ಬಲೆ ಬೀಸುವುದು, ಗಾಳ ಹಾಕುವುದು ಮತ್ತು ಬಲೆಗೆ ಬೀಳಿಸುವುದು ಸೇರಿವೆ: ಮನರಂಜನಾ, ವಾಣಿಜ್ಯ ಮತ್ತು ಕುಶಲಕರ್ಮಿ ಮೀನುಗಾರರು ವಿಭಿನ್ನ ತಂತ್ರಗಳನ್ನು ಬಳಸುತ್ತಾರೆ ಮತ್ತು ಕೆಲವೊಮ್ಮೆ ಅದೇ ತಂತ್ರಗಳನ್ನು ಬಳಸುತ್ತಾರೆ. ಮನರಂಜನಾ ಮೀನುಗಾರರು ಸಂತೋಷಕ್ಕಾಗಿ, ಕ್ರೀಡೆಗಾಗಿ ಅಥವಾ ತಮಗಾಗಿ ಆಹಾರವನ್ನು ಒದಗಿಸಿಕೊಳ್ಳಲು ಮೀನು ಹಿಡಿಯುತ್ತಾರೆ, ಆದರೆ ವಾಣಿಜ್ಯ ಮೀನುಗಾರರು ಲಾಭಕ್ಕಾಗಿ ಮೀನು ಹಿಡಿಯುತ್ತಾರೆ. ಕುಶಲಕರ್ಮಿ ಮೀನುಗಾರರು ಸಾಂಪ್ರದಾಯಿಕ, ಕಡಿಮೆ-ತಂತ್ರಜ್ಞಾನದ ವಿಧಾನಗಳನ್ನು, ತೃತೀಯ ಜಗತ್ತಿನ ದೇಶಗಳಲ್ಲಿ ಉಳಿವಿಗಾಗಿ ಮತ್ತು ಇತರ ದೇಶಗಳಲ್ಲಿ ಸಾಂಸ್ಕೃತಿಕ ಪರಂಪರೆಯಾಗಿ ಬಳಸುತ್ತಾರೆ. ಸಾಮಾನ್ಯವಾಗಿ, ಮನರಂಜನಾ ಮೀನುಗಾರರು ಗಾಳ ಹಾಕುವ ವಿಧಾನಗಳನ್ನು ಬಳಸುತ್ತಾರೆ ಮತ್ತು ವಾಣಿಜ್ಯ ಮೀನುಗಾರರು ಬಲೆ ವಿಧಾನಗಳನ್ನು ಬಳಸುತ್ತಾರೆ. ಡ್ರೋನ್ ಸಹಾಯದಿಂದ ಮೀನು ಹಿಡಿಯುವುದು ಆಧುನಿಕ ಬೆಳವಣಿಗೆಯಾಗಿದೆ.[೨೬]

ಇತ್ತೀಚಿನ ವಾಣಿಜ್ಯದ ಮೀನುಗಾರಿಕೆಯಲ್ಲಿ ಬಹುತೇಕವಾಗಿ ಉಪಯೋಗಿಸುವ ನಾಲ್ಕು ಪ್ರಧಾನ ವಿಧಾನಗಳೆಂದರೆ ಎಳೆಬಲೆಯಿಂದ ಮೀನು ಹಿಡಿಯುವುದು (ಟ್ರಾಲ್ ಬಲೆಗಳು), ಮೇಲು ಅಂಚಿನಲ್ಲಿ ತೇಲು ಬೆಂಡುಗಳನ್ನು ಕೆಳಂಚಿನಲ್ಲಿ ಭಾರಗಳನ್ನು ಕಟ್ಟಿ ಮೀನುಗಳನ್ನು ಸುತ್ತುವರಿದು ದಡಕ್ಕೆ ಎಳೆಯಬಹುದಾದ ಬಲೆಗಳಿಂದ ಹಿಡಿಯುವುದು (ಪರ್ಸ್ ಸೀನ್ ಬಲೆಗಳು), ಗಾಳಿಯ ಹರವಿನಲ್ಲಿ ಹೊಡೆದುಕೊಂಡು ಹೋಗುತ್ತಿರುವಾಗ ಕೊಚ್ಚು ಬಲೆ ಹಾಕಿ ಮೀನುಹಿಡಿಯುವುದು (ಗಿಲ್ ನೆಟ್) ಹಾಗೂ ಗಾಳದ ಹುರಿಯಿಂದ ಮೀನು ಹಿಡಿಯುವುದು (ಲಾಂಗ್ ಲೈನ್) . ಪ್ರತಿಯೊಂದು ವಿಧಾನ ಒಂದು ವಿಶಿಷ್ಟ ಬಗೆಯ ಸಾಧನದ ಉಪಯೋಗದಿಂದೊಡಗೂಡಿ ನಿರ್ದಿಷ್ಟ ಜಾತಿಯ ಮೀನುಗಳನ್ನು ಹಿಡಿಯುವುದಕ್ಕೆ ಯೋಜಿತವಾಗಿದೆ. ಎಳೆಬಲೆ ದೋಣಿಗಳು, ಸೀನ್ ಬಲೆ ದೋಣಿಗಳು ಹಾಗೂ ಗಾಳದ ಹುರಿಯ ದೋಣಿಗಳು ವಿಶೇಷವಾಗಿ ಕಾಡ್, ಹ್ಯಾಡಕ್, ಹೇಕ್, ಹ್ಯಾಲಿಬಟ್, ಪ್ಲೇಸ್ ಮತ್ತು ಚಪ್ಪಟೆ ಮೀನುಗಳಂಥ ನೀರಿನ ತಳದಲ್ಲಿ ವಾಸಿಸುವ ಮೀನುಗಳನ್ನು ಹಿಡಿಯಲು ಉಪಯುಕ್ತವಾದರೆ ಹೆರ‍್ರಿಂಗ್, ಪಿಲ್‌ಚಾರ್ಡ್ ಮತ್ತು ಬಂಗುಡೆ ಮುಂತಾದ ವಿಸ್ತಾರ ಸಮುದ್ರದ ಮೇಲಿನ ಮೀನುಗಳನ್ನು ಹಿಡಿಯಲು ಕೊಚ್ಚುಬಲೆ ದೋಣಿ ಸಹಾಯಕ.

ಎಳೆಬಲೆ: ಸಮತಲವಾಗಿದ್ದು ಶಂಕ್ವಾಕೃತಿಯುಳ್ಳ ಬಲೆಯೇ ಎಳೆಬಲೆ. ಇದರ ಒಂದು ತುದಿಯಲ್ಲಿ ಅಗಲವಾದ ಬಾಯಿಯಿದೆ. ಇನ್ನೊಂದು ತುದಿ ಚೂಪಾಗಿ ಹೋಗುತ್ತ ಕಟ್ಟಕಡೆಯಲ್ಲಿ ಚೀಲ ಅಥವಾ ಸಂದಿಯಲ್ಲಿ (ಕಾಡ್ ಎಂಡ್) ಅಂತ್ಯಗೊಳ್ಳುತ್ತದೆ. ಈ ಬಲೆಯ ಉದ್ದ ಸುಮಾರು 30 ಮೀ. ವಿಸ್ತಾರವಾದ ಈ ಚೀಲ ಹಡಗಿನ ಮೇಲಿರುವ ಒಂದು ಬಲಿಷ್ಠ ಎತ್ತುಗೆ ಯಂತ್ರಕ್ಕೆ ಜೋಡಣೆಗೊಂಡಿದ್ದು ಹಡಗಿನ ಹಗ್ಗಗಳ ಸಹಾಯದಿಂದ ಸಮುದ್ರ ತಳದ ಉದ್ದಕ್ಕೂ ನಿಧಾನವಾಗಿ ಎಳೆಯಲ್ಪಡುತ್ತದೆ. ಮೀನುಗಳು ಒಂದು ಸಲ ಬಲೆಯೊಳಕ್ಕೆ ಬಂದರೆ ಬಲೆಯಿಂದ ಹೊರಕ್ಕೆ ಈಜಿಕೊಂಡು ಹೋಗದಂತೆ ಕವಾಟದಂತಿರುವ ವಿಶೇಷ ಸಾಧನಗಳು ತಡೆಯುತ್ತವೆ. ಬಲೆಯ ಕೆಳಗಿನ ಅಂಚಾಗಿ ರೂಪುಗೊಂಡಿರುವ ಪಾದಹಗ್ಗ ಮುಖ್ಯವಾಗಿ ಮರಳಿನಲ್ಲಿ ಹುಗಿದು ನೆಲಸಿರುವ ಚಪ್ಪಟೆಮೀನುಗಳಂಥ ಮೀನುಗಳನ್ನು ಎಬ್ಬಿಸಲು ನೆರವಾಗುತ್ತದೆ. ಸುಮಾರು 12-15 ಮೀ ಉದ್ದದ ದಪ್ಪ ಮರದ ತೊಲೆಯನ್ನು ಬಾಯಿಯ ಮೇಲಿನ ಅಂಚಿನಲ್ಲಿ ಜೋಡಿಸಲಾಗಿರುವ ತೊಲೆ ಎಳೆಬಲೆಯನ್ನು (ಬೀಮ್ ಟ್ರಾಲ್) ಸಂಶೋಧನೆಯ ಉದ್ದೇಶಗಳಿಗಾಗಿ ಉಪಯೋಗಿಸುವುದುಂಟು. ಆದರೆ ವಿಶೇಷವಾಗಿ ಅತ್ಯಂತ ವ್ಯಾಪಕವಾಗಿ ಉಪಯೋಗಿಸುವ ಬಲೆ ಎಂದರೆ ಅಟ್ಟರ್ ಎಳೆಬಲೆ. ಇದರಲ್ಲಿ ಬಾಯಿಯ ಸುತ್ತ ಮರದ ತೊಲೆಯ ರಚನೆಯಿಲ್ಲ. ಬಲೆಯ ಬಾಯಿ 2-8 ಮೀ ಉದ್ದದ ಹಾಗೂ 1-2 ಮೀ ಎತ್ತರದ ಭಾರವುಳ್ಳ ಕಬ್ಬಿಣದಿಂದ ಕೂಡಿದ ಮರದಿಂದ ರಚಿತವಾದ ಎರಡು ದೊಡ್ಡ ಬಾಗಿಲುಗಳು ಅಥವಾ ಅಟ್ಟರ್ ಹಲಗೆಗಳ ಸಹಾಯದಿಂದ ತೆರೆದಿರುತ್ತದೆ. ಸಮುದ್ರತಳದ ಉದ್ದಕ್ಕೂ ಈ ಬಲೆಯನ್ನು ನಿಧಾನವಾಗಿ ಎಳೆದಾಗ ನೀರಿನ ಪ್ರತಿರೋಧ ಶಕ್ತಿ ಎರಡು ಬಾಗಿಲುಗಳನ್ನು ದೂರಕ್ಕೆ ತಳ್ಳುವುದರಿಂದ ಬಲೆಯ ಬಾಯಿ ಹೆಚ್ಚು ತೆರೆಯುತ್ತದೆ.

ಸೀನ್ ಬಲೆ: ಅನೇಕ ರಾಷ್ಟ್ರಗಳಲ್ಲಿ ವಿವಿಧ ರೀತಿಯ ಸೀನ್ ಬಲೆಗಳ ಉಪಯೋಗ ಉಂಟು. ಸೀನ್ ಬಲೆ ಉದ್ದವಾಗಿದ್ದು ಇದರ ಮೇಲಿನ ಅಂಚಿನಲ್ಲಿ ತೇಲುಬೆಂಡುಗಳನ್ನು ಕೆಳಗಿನ ಅಂಚಿನಲ್ಲಿ ಭಾರಗಳನ್ನು ಕಟ್ಟಲಾಗಿರುತ್ತದೆ. ಈ ಬಲೆಯನ್ನು ಮೀನಿನ ಒಂದು ಹಿಂಡು ಕಂಡುಬಂದಾಗ ಅದನ್ನು ಸುತ್ತುವರಿಯುವಂತೆ ಮಾಡಿ ಮೀನುಗಳನ್ನು ಬಲೆಯಲ್ಲಿ ಬಂಧಿಸಲಾಗುತ್ತದೆ. ಅನಂತರ ಸುಲಭವಾಗಿ ಹಿಡಿದು ತೆಗೆದುಕೊಳ್ಳಲು ಸಾಧ್ಯವಾಗುವಂತೆ ಕ್ರಮಕ್ರಮವಾಗಿ ದೋಣಿಯ ಹತ್ತಿರಕ್ಕೆ ಬಲೆಯನ್ನು ಎಳೆಯುತ್ತಾರೆ. ಈ ಬಲೆ ಸಾಮಾನ್ಯವಾಗಿ ಚಲಿಸುತ್ತಿರುವ ಒಂದು ದೋಣಿಯಿಂದ ಬಿಡಲ್ಪಡುವುದು ಅಥವಾ ಮೀನುಹಿಂಡನ್ನು ಒಂದು ವೃತ್ತ ಅಥವಾ ಅರ್ಧ ವೃತ್ತದಲ್ಲಿ ಸುತ್ತುವರಿಯುವಂತೆ ದೋಣಿಯಿಂದ ಹಾಯಿಸಲ್ಪಡುವುದು. ಕೊನೆಯಲ್ಲಿ ವಿಶೇಷ ಎತ್ತುಗೆ ಯಂತ್ರದ ಸಹಾಯದಿಂದ ದೋಣಿಯೊಳಕ್ಕೆ ಇಲ್ಲವೆ ಹಗ್ಗದ ಸಹಾಯದಿಂದ ದಡದ ಮೇಲಕ್ಕೆ ಎಳೆಯಲಾಗುತ್ತದೆ.

ಪರ್ಸ್ ಸೀನ್: ಪರ್ಸ್ ಸೀನ್ ಎಂಬುದು ಚೀಲ ಬಲೆಗಳ ಪೈಕಿ ವಿಶೇಷ ತೆರನಾದ್ದು. ಇದರಿಂದ ಬಂಗುಡೆ, ಟ್ಯೂನ, ಹೆರ‍್ರಿಂಗ್ ಹಾಗು ಮೆನ್‌ಹ್ಯಾಡೆನ್‌ನಂಥ ಗುಂಪುಗುಂಪಾಗಿ ಈಜುವ ಮೇಲಿನ ಸ್ತರದಲ್ಲಿರುವ ಮೀನುಗಳನ್ನು ಹಿಡಿಯಲು ಸಾಧ್ಯವಾಗುತ್ತದೆ. ಈ ಬಲೆಯನ್ನು ಕೊಂಡೊಯ್ಯುವ ದೋಣಿಗಳಿಗೆ ಪರ್ಸ್ ಸೀನ್ ದೋಣಿಗಳೆಂದು ಕರೆಯುತ್ತಾರೆ. ಇದರೊಂದಿಗೆ ಒಂದು ಚಿಕ್ಕ ದೋಣಿಯಿದ್ದು ಇದನ್ನು ಡಿಂಗಿ ಎಂದು ಕರೆಯುತ್ತಾರೆ. ಮೀನಿನ ಹಿಂಡು ಕಾಣಿಸಿಕೊಂಡಾಗ ಅದನ್ನು ಸುತ್ತುವರಿದು ಬಂಧಿಸುವಂತೆ ಈ ಬಲೆಯನ್ನು ಹೂಡುತ್ತಾರೆ. ತರುವಾಯ ಬಲೆಯನ್ನು ಒಂದು ರೀತಿಯ ಚೀಲ ಅಥವಾ ಕೋಶದೊಳಕ್ಕೆ ಒಟ್ಟಿಗೆ ತಳದಲ್ಲಿ ಉಂಗುರಗಳ ಮೇಲೆ ಚಲಿಸುವ ಹಗ್ಗದ ಸಹಾಯದಿಂದ ಎಳೆಯುತ್ತಾರೆ. ಬಿರಟೆಯಿಂದ ರಚಿತವಾದ ತೇಲುವ ಚೆಂಡುಗಳಿಂದ ಬಲೆಯ ಶಿಖರ ನೆಟ್ಟಗೆ ನಿಲ್ಲುವಂತೆ ಮಾಡಲಾಗುವುದು.

ಡೇನಿಷ್ ಸೀನ್: ಇತ್ತೀಚೆಗೆ ಬ್ರಿಟಿಷ್ ಮೀನುಗಾರಿಕೆಯಲ್ಲಿ ಡೇನಿಷ್ ಸೀನ್ ಅಥವಾ ಸ್ನರ್‌ವಾಡ್ ಎಂಬ ಬಲೆಯನ್ನು ಬಳಸಲಾಗುತ್ತದೆ. ಈ ಬಲೆ ಅನೇಕ ಅಂಶಗಳಲ್ಲಿ ಟ್ರಾಲ್ ಹಾಗೂ ಸೀನ್‌ಗಳ ಮಧ್ಯಮ ರೀತಿಯದು. 50 ಮೀಟರಿಗಿಂತಲೂ ಉದ್ದವಿರುವ ಈ ಬಲೆಯ ಪ್ರತಿಯೊಂದು ಪಾರ್ಶ್ವಕ್ಕೂ ಸುಮಾರು ಒಂದು ಕಿಮೀಗೂ ಮೀರಿದ ಹಡಗಿನ ಎಳೆಯುವ ಹಗ್ಗವನ್ನೂ ಕಟ್ಟಲಾಗಿರುತ್ತದೆ. ಬಲೆಗೆ ಹೊಂದಿಕೊಂಡಂತೆ 15-20 ಮೀ ಉದ್ದದ ಒಂದು ದೊಡ್ಡ ಚೀಲ ಇರುತ್ತದೆ. ದಡದ ಮೇಲೆ ಎಳೆದು ತರಲಾಗದ ಈ ಬಲೆಯನ್ನು ತೀರದಾಚೆಯ ನೀರಿನಲ್ಲಿರುವ ಒಂದು ದೋಣಿಯಿಂದ ಕಾರ್ಯಾಚರಣೆಗೊಳಿಸುತ್ತಾರೆ.

ಕೊಚ್ಚುಬಲೆ: ಕೊಚ್ಚುಬಲೆಗಳ (ಗಿಲ್ ನೆಟ್) ಕಾರ್ಯವಿಧಾನದ ಮೂಲತತ್ತ್ವ ಎಳೆಬಲೆ ಹಾಗೂ ಸೀನ್ ಬಲೆಗಳಿದ್ದಕ್ಕಿಂತ ಭಿನ್ನ ರೀತಿಯದು. ಕಾರ್ಯನಿರ್ವಹಣೆಯಲ್ಲಿ ಇದು ನಿಜವಾಗಿಯೂ ಮೀನುಗಳನ್ನು ಸಮೀಪಿಸುವುದಿಲ್ಲ. ಆದರೆ ಈ ಬಲೆಯನ್ನು ಸ್ಥಿರವಾಗಿ ನೆಲೆಗೊಂಡಿರುವ ಬಲೆ ಮತ್ತು ಬೋನುಗಳಂತಲ್ಲದೆ ನಿಧಾನವಾಗಿ ಚಲಿಸುತ್ತಿರುವ ಹಡಗಿಗೊ ಇಲ್ಲವೆ ತೇಲುತ್ತಿರುವ ಈಜುಬುರುಡೆಗೂ ಕಟ್ಟಲಾಗಿರುತ್ತದೆ. ಈ ಬಲೆ ಭಾರ ಹಾಗೂ ಗಾಳಿಯ ಪ್ರಭಾವದಿಂದಾಗಿ ಹಡಗಿನ ಅಥವಾ ತೇಲುಬುರುಡೆಯ ಜೊತೆಗೇ ಚಲಿಸುತ್ತದೆ. ಕೊಚ್ಚುಬಲೆಯಲ್ಲಿ ಹಿಡಿಯುವಂಥ ಮೀನುಗಳೆಂದರೆ ಸಮುದ್ರತಳದ ಮೇಲೆ ನೀರಿನ ಸ್ತರಗಳಲ್ಲಿ ಈಜುತ್ತ ತಮ್ಮ ಕಾಲವನ್ನು ಕಳೆಯುವ, ಆದರೆ ಹಗಲಿನಲ್ಲಿ ಸಂಪೂರ್ಣವಾಗಿ ಬಹಳ ಆಳಕ್ಕೆ ಇಳಿದು ರಾತ್ರಿಯಲ್ಲಿ ನೀರಿನ ಮೇಲ್ಮೈಯನ್ನು ಸಮೀಪಿಸುವ ಸ್ವಭಾವದ ಮೀನುಗಳು. ರಚನೆಯಲ್ಲಿ ಪ್ರತಿಯೊಂದು ಬಲೆಯೂ ಸುಮಾರು 12 ಮೀ ಆಳವುಳ್ಳ ಬಲಯುತವಾದ ಜಾಲದ ಒಂದು ಸರಳ ಹರವು. ಅದರ ಮೇಲಿನ ಅಂಚು ಬಿರಟೆಗಳಿಂದ ತೇಲುವಂತಿದ್ದರೆ ಕೆಳಗಿನ ಅಂಚು ಸೀಸದ ಗುಂಡುಗಳಿಂದ ಕೆಳಕ್ಕೆ ಜಗ್ಗುವಂತಿರುತ್ತದೆ. ರಾತ್ರಿ ಸಮೀಪಿಸಿದಂತೆ ಭರತದೊಂದಿಗೆ ಈ ಬಲೆಗಳನ್ನು ಬೀಸುತ್ತಾರೆ. ಒಂದೇ ಹಡಗಿನಿಂದ ಸುಮಾರು ಎಂಬತ್ತೈದು ಬಲೆಗಳನ್ನು ಒಂದೇ ಕಾಲದಲ್ಲಿ ಉಪಯೋಗಿಸುತ್ತಾರೆ. ಆಗ ನೀರಿನ ಮೇಲ್ಮೈಯಲ್ಲಿ ಅಥವಾ ಕೆಲವು ಮೀಟರು ಆಳದಲ್ಲಿ ಸುಮಾರು 5 ಕಿಮೀ ಉದ್ದದವರೆಗೆ ನೆಟ್ಟಗೆ ನಿಂತು ನೇತಾಡುತ್ತಿರುವ ಜಾಲದ ಒಂದು ಸಂಪೂರ್ಣ ಭಿತ್ತಿಯಂತೆಯೇ ಇವು ತೋರಿ ಬರುತ್ತವೆ. ಜಾಲದ ಭಿತ್ತಿಯ ಒಂದು ಕೊನೆಯಿಂದ ಕಟ್ಟಿರುವ ಹಡಗು ಭರತದೊಂದಿಗೆ ಅನೇಕ ಗಂಟೆಗಳ ತನಕ ಚಲಿಸುತ್ತಿರುತ್ತದೆ. ಈ ಬಲೆಯ ಜಾಲರಂಧ್ರಗಳು ಮೀನುಗಳ ತಲೆಯನ್ನು ನೂಕಲು ಮಾತ್ರ. ಆದರೆ ದೇಹವನ್ನು ಹೊರಕ್ಕೆ ತಳ್ಳಲು ಸಾಧ್ಯವಾಗದಷ್ಟು ಚಿಕ್ಕವಾಗಿರುತ್ತವೆ. ಈ ಜಾಲರಂಧ್ರದೊಳಗೆ ಒಂದು ಸಲ ಮೀನಿನ ಕಿವಿರು ಮುಚ್ಚಳಗಳು ಹೊಕ್ಕರೆ ಮೀನಿಗೆ ತನ್ನ ತಲೆಯನ್ನು ಅದರಿಂದ ಬಿಡಿಸಿಕೊಳ್ಳಲು ಅಸಾಧ್ಯವಾಗುತ್ತದೆ. ಹೀಗೆ ಕತ್ತಲೆಯಲ್ಲಿ ಅಸಂಖ್ಯಾತ ಮೀನುಗಳು ಬಲೆಯೊಳಕ್ಕೆ ಈಜಿಕೊಂಡು ಬಂದು ಅದಕ್ಕೆ ಸಿಕ್ಕಿಕೊಳ್ಳುತ್ತವೆ. ಬೆಳಗಾದಾಗ ಹಡಗಿಗೆ ಈ ಬಲೆಗಳೆಲ್ಲವನ್ನೂ ಎಳೆದುಕೊಂಡು ಬಂದು ಬಲೆಯಿಂದ ಮೀನುಗಳನ್ನು ಬಿಡಿಸಿ ಸಂಗ್ರಹಿಸುತ್ತಾರೆ.

ಗಾಳ ಹಾಕುವುದು: ಕಾಡ್ ಹಾಗು ಹ್ಯಾಲಿಬಟ್‌ಗಳಂಥ ನೀರಿನ ತಳವಾಸಿ ಮೀನುಗಳನ್ನು ಹಿಡಿಯುವ ಪದ್ಧತಿಯೇ ಗಾಳದ ಹುರಿಯಿಂದ ಮೀನು ಹಿಡಿಯುವ ಪದ್ಧತಿಯೆನಿಸುತ್ತದೆ (ಲಾಂಗ್ ಲೈನಿಂಗ್). ನ್ಯೂ ಫೌಂಡ್‌ಲೆಂಡ್ ತೀರಗಳಲ್ಲಿ ಈ ವಿಧಾನದಿಂದ ಕಾರ್ಯಾಚರಣೆಯಲ್ಲಿದ್ದ ಕಾಡ್ ಮೀನುಗಾರಿಕೆ ಪ್ರಪಂಚದಲ್ಲಿಯೇ ಪ್ರಖ್ಯಾತವಾಗಿತ್ತು. ಹಳೆಯ ಕೈಗಾಳದ ಹುರಿಯ ಬಳಕೆ ಈಗ ಬಹು ವಿರಳ. ಬದಲಿಗೆ ಉದ್ದಗಾಳದ ಹುರಿಯ ಉಪಯೋಗ ರೂಢಿಗೆ ಬಂದಿದೆ. ಇದು ಸುಮಾರು 4000 ಮೀ ಗಿಂತ ಹೆಚ್ಚು ಉದ್ದವಿದ್ದು 0.75-2 ಮೀ ಉದ್ದದ ಗಿಡ್ಡ ಕೊಕ್ಕೆ ಹುರಿಗಳಿಗೆ (ಸ್ನೂಡ್ಸ್) ನಿಯಮಿತವಾದ ಅಂತರಗಳಲ್ಲಿ ಕಟ್ಟಿರುವ ಕೊಕ್ಕೆಗಳನ್ನು ಹೊಂದಿರುತ್ತದೆ. ಬಲೆಯಿರುವ ಸ್ಥಳವನ್ನು ಪತ್ತೆಮಾಡಲು ಅನುಕೂಲವಾಗುವಂತೆ ಒಂದು ತೇಲು ಬುರುಡೆ ಅಥವಾ ತೇಲುಚೆಂಡನ್ನು ಪ್ರತಿಯೊಂದು ದಾರಕ್ಕೂ ಕಟ್ಟಲಾಗಿರುತ್ತದೆ.

ಒಂದು ದೊಡ್ಡ ಮೋಟಾರ್ ಲೈನರಿನ ಒಂದು ಏಕೈಕ ಗಾಳದ ಹುರಿಯ ಮೇಲೆ ಕೊಕ್ಕೆಗಳ ಸಂಖ್ಯೆ 1000-5000 ರಷ್ಟಿರಬಹುದು. ಈ ಕೊಕ್ಕೆಗಳಿಗೆ ಸಿಕ್ಕಿಸುವ ಪ್ರಾಣಿಗಳೆಂದರೆ ಎರೆಗಳು, ಶಂಖ ಮೀನು, ಜೋಡು ಚಿಪ್ಪಿನ ಪ್ರಾಣಿಗಳು, ಕಟಲ್ ಮೀನುಗಳು ಹಾಗೂ ಹೆರ‍್ರಿಂಗ್‌ಗಳನ್ನೊಳಗೊಂಡಂತೆ ವಿವಿಧ ಬಗೆಯ ಮೀನುಗಳು. ಗಾಳದ ಹುರಿಗಳನ್ನು ಬೆಳಿಗ್ಗೆ ಇಲ್ಲವೆ ಮಧ್ಯಾಹ್ನ ಕಾಲಗಳಲ್ಲಿ ಹೂಡುತ್ತಾರೆ. ಈಚೆಗೆ ಸಾಮಾನ್ಯವಾಗಿ ಗಾಳದ ಹುರಿಯಿಂದ ಸ್ಯಾಲ್ಮನ್, ಕೆಂಪು ಸ್ನಾಪರ್, ಟ್ಯೂನ, ಹಾಲು ಹೆಂಚು, ಶಾರ್ಕ್ ಮೀನುಗಳನ್ನು ಹಿಡಿಯುವುದುಂಟು.

ಮೀನು ಏಕೆ ಎರೆಯುಳ್ಳ ಕೊಕ್ಕೆ ಅಥವಾ ವಸ್ತುವನ್ನು ಕಚ್ಚುತ್ತದೆ ಎಂಬುದು ಸಂವೇದನಾ ಶರೀರಶಾಸ್ತ್ರ, ನಡವಳಿಕೆ, ಸೇವನೆಯ ಪರಿಸರ ವಿಜ್ಞಾನ ಮತ್ತು ಮೀನಿನ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಎರೆ/ಕೊಕ್ಕೆ/ಎರೆವಸ್ತುವಿನ ಗುಣಲಕ್ಷಣಗಳು ಮತ್ತು ಪರಿಸರವನ್ನು ಕೂಡ.[೨೭] ವಿವಿಧ ಮೀನುಗಾರಿಕೆ ತಂತ್ರಗಳು ಮತ್ತು ಮೀನುಗಳ ಬಗ್ಗೆ ಜ್ಞಾನ ಹಾಗೂ ವಲಸೆ, ಮೇವು ಅರಸುವಿಕೆ ಮತ್ತು ಆವಾಸಸ್ಥಾನ ಸೇರಿದಂತೆ ಅವುಗಳ ವರ್ತನೆಯ ನಡುವೆ ಸಂಕೀರ್ಣವಾದ ಸಂಪರ್ಕವಿದೆ. ಮೀನುಗಾರಿಕೆ ತಂತ್ರಗಳ ಪರಿಣಾಮಕಾರಿ ಬಳಕೆಯು ಹಲವುವೇಳೆ ಈ ಹೆಚ್ಚುವರಿ ಜ್ಞಾನವನ್ನು ಅವಲಂಬಿಸಿರುತ್ತದೆ.[೨೮] ಕೆಲವು ಮೀನುಗಾರರು ಮೀನುಗಾರಿಕಾ ಜಾನಪದ ಕಥೆಗಳನ್ನು ಅನುಸರಿಸುತ್ತಾರೆ. ಇವುಗಳ ಪ್ರಕಾರ ಮೀನಿನ ಸೇವನೆಯ ಮಾದರಿಗಳು ಸೂರ್ಯ ಮತ್ತು ಚಂದ್ರನ ಸ್ಥಾನದಿಂದ ಪ್ರಭಾವಿತವಾಗಿರುತ್ತವೆ.

ಟ್ಯಾಕಲ್[ಬದಲಾಯಿಸಿ]

ಮೀನುಗಾರಿಕಾ ಟ್ಯಾಕಲ್ ಎನ್ನುವುದು ಮೀನುಗಾರರು ಮೀನುಗಾರಿಕೆ ಮಾಡುವಾಗ ಬಳಸುವ ಸಾಧನವಾಗಿದೆ. ಮೀನುಗಾರಿಕೆಗೆ ಬಳಸಲಾಗುವ ಯಾವುದೇ ಉಪಕರಣಗಳು ಅಥವಾ ಸಾಧನವನ್ನು ಮೀನುಗಾರಿಕಾ ಟ್ಯಾಕಲ್ ಎಂದು ಕರೆಯಬಹುದು. ಕೆಲವು ಉದಾಹರಣೆಗಳೆಂದರೆ ಕೊಕ್ಕೆಗಳು, ಹಗ್ಗಗಳು, ಮುಳುಗು ಗುಂಡುಗಳು, ಪ್ಲಾವಕಗಳು, ಕೋಲುಗಳು, ಗಾಳದುರುಳೆಗಳು, ಎರೆಗಳು, ಎರೆವಸ್ತುಗಳು, ಈಟಿಗಳು, ಬಲೆಗಳು, ಕೊಕ್ಕೆ ಈಟಿಗಳು, ಬೋನುಗಳು, ವೇಡರ್‌ಗಳು ಮತ್ತು ಟ್ಯಾಕಲ್ ಪೆಟ್ಟಿಗೆಗಳು.

ಮೀನುಗಾರಿಕಾ ಹಗ್ಗದ ಕೊನೆಯಲ್ಲಿ ಜೋಡಿಸಲಾದ ಟ್ಯಾಕಲ್ ಅನ್ನು ಅಂತ್ಯದಲ್ಲಿರುವ ಟ್ಯಾಕಲ್ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಕೊಕ್ಕೆಗಳು, ಮುಳುಗು ಗುಂಡುಗಳು, ಪ್ಲಾವಕಗಳು, ತುದಿಕಟ್ಟುಗಳು, ತಿರುಗಣೆಗಳು, ವಿಭಜಿತ ಬಳೆಗಳು, ತಂತಿಗಳು, ಸ್ನ್ಯಾಪ್‌ಗಳು, ಮಣಿಗಳು, ಚಮಚಗಾಳಗಳು, ಅಲಗುಗಳು, ಸ್ಪಿನರ್‌ಗಳು ಮತ್ತು ಮೀನುಗಾರಿಕಾ ಎರೆವಸ್ತುಗಳಿಗೆ ಸ್ಪಿನರ್ ಅಲಗುಗಳನ್ನು ಜೋಡಿಸಲು ಬಳಸುವ ಕಪ್ಪಿಗಳು ಸೇರಿವೆ. ಜನರು ಸತ್ತ ಅಥವಾ ಜೀವಂತ ಮೀನುಗಳನ್ನು ಕೂಡ ಮತ್ತೊಂದು ರೀತಿಯ ಎರೆಯಾಗಿ ಬಳಸುತ್ತಾರೆ.

ಮೀನುಗಾರಿಕೆ ಟ್ಯಾಕಲ್ ಮೀನುಗಾರಿಕೆಯಲ್ಲಿ ಬಳಸುವ ಭೌತಿಕ ಸಲಕರಣೆಗಳನ್ನು ಸೂಚಿಸುತ್ತದೆ. ಆದರೆ ಮೀನುಗಾರಿಕೆ ತಂತ್ರಗಳು ಮೀನುಗಾರಿಕೆ ಮಾಡುವಾಗ ಟ್ಯಾಕಲ್ ಅನ್ನು ಬಳಸುವ ವಿಧಾನಗಳನ್ನು ಸೂಚಿಸುತ್ತದೆ.

ಮೀನುಗಾರಿಕೆ ನೌಕೆಗಳು[ಬದಲಾಯಿಸಿ]

ಮೀನುಗಾರಿಕೆ ನೌಕೆ ಎಂದರೆ ಸಮುದ್ರದಲ್ಲಿ ಅಥವಾ ಸರೋವರ ಅಥವಾ ನದಿಯಲ್ಲಿ ಮೀನು ಹಿಡಿಯಲು ಬಳಸುವ ದೋಣಿ ಅಥವಾ ಹಡಗು. ವಾಣಿಜ್ಯ, ಕುಶಲಕರ್ಮಿ ಮತ್ತು ಮನರಂಜನಾ ಮೀನುಗಾರಿಕೆಯಲ್ಲಿ ವಿವಿಧ ರೀತಿಯ ನೌಕೆಗಳನ್ನು ಬಳಸಲಾಗುತ್ತದೆ.

ಎಫ್‌‌‌‌‌‌‌‌‌‌‌‌ಎಓನ ಪ್ರಕಾರ, ೨೦೦೪ ರಲ್ಲಿ ನಾಲ್ಕು ಮಿಲಿಯನ್ ವಾಣಿಜ್ಯ ಮೀನುಗಾರಿಕೆ ನೌಕೆಗಳು ಇದ್ದವು.[೨೯] ಇವುಗಳಲ್ಲಿ ಸುಮಾರು ೧.೩ ಮಿಲಿಯನ್ ಆವೃತ ಪ್ರದೇಶಗಳುಳ್ಳ ಅಟ್ಟವಿರುವ ನೌಕೆಗಳಾಗಿವೆ. ಈ ಎಲ್ಲ ಅಟ್ಟವುಳ್ಳ ಹಡಗುಗಳು ಯಾಂತ್ರೀಕೃತವಾಗಿವೆ ಮತ್ತು ಅವುಗಳಲ್ಲಿ ೪೦,೦೦೦ ೧೦೦ ಟನ್‌ಗಳಿಗಿಂತ ಹೆಚ್ಚು ಭಾರವಿರುವವು. ಮತ್ತೊಂದೆಡೆ, ಮೂರನೇ ಎರಡರಷ್ಟು (೧.೮ ಮಿಲಿಯನ್) ಅಟ್ಟವಿರದ ದೋಣಿಗಳು ವಿವಿಧ ರೀತಿಯ ಸಾಂಪ್ರದಾಯಿಕ ದೋಣಿಗಳಾಗಿದ್ದು, ಹಾಯಿ ಮತ್ತು ಹುಟ್ಟುಗಳಿಂದ ಮಾತ್ರ ಚಾಲಿತವಾಗಿವೆ. ಈ ದೋಣಿಗಳನ್ನು ಕುಶಲಕರ್ಮಿ ಮೀನುಗಾರರು ಬಳಸುತ್ತಾರೆ.

ಸಂಖ್ಯೆ ಹೆಚ್ಚಿದ್ದರೂ ಮನರಂಜನಾ ಮೀನುಗಾರಿಕೆ ದೋಣಿಗಳು ಎಷ್ಟು ಇವೆ ಎಂದು ಅಂದಾಜು ಮಾಡುವುದು ಕಷ್ಟ. ಕಾಲಕಾಲಕ್ಕೆ ಕೆಲವು ಮನರಂಜನಾ ದೋಣಿಗಳನ್ನು ಮೀನುಗಾರಿಕೆಗೆ ಬಳಸುವುದರಿಂದ ಈ ಪದವು ಅಸ್ಥಿರವಾಗಿದೆ. ಹೆಚ್ಚಿನ ವಾಣಿಜ್ಯ ಮೀನುಗಾರಿಕೆ ನೌಕೆಗಳಂತಿರದೆ, ಮನರಂಜನಾ ಮೀನುಗಾರಿಕೆ ದೋಣಿಗಳು ಸಾಮಾನ್ಯವಾಗಿ ಮೀನುಗಾರಿಕೆಗೆ ಮಾತ್ರ ಮೀಸಲಾಗಿರುವುದಿಲ್ಲ. ತೇಲುತ್ತಿರುವ ಯಾವುದನ್ನಾದರೂ ಮನರಂಜನಾ ಮೀನುಗಾರಿಕೆ ದೋಣಿ ಎಂದು ಕರೆಯಬಹುದು, ಅಂದರೆ ಮೀನುಗಾರನು ನಿಯತಕಾಲಿಕವಾಗಿ ಮೀನು ಹಿಡಿಯುವ ಉದ್ದೇಶದಿಂದ ಏರುವ ನೌಕೆ. ಮೀನುಗಳನ್ನು ಮನರಂಜನಾ ಉದ್ದೇಶಗಳಿಗಾಗಿ ದೋಣಿಗಳಿಂದ ಹಿಡಿಯಲಾಗುತ್ತದೆ, ಇವುಗಳಲ್ಲಿ ಕ್ಯಾನೋಗಳು, ಪ್ಲಾವಕ ಟ್ಯೂಬ್‌ಗಳು, ತೊಗಲ ದೋಣಿಗಳು, ರಾಫ್ಟ್‌ಗಳು, ಸ್ಟ್ಯಾಂಡ್‌ಅಪ್ ಪ್ಯಾಡಲ್‌ಬೋರ್ಡ್‌ಗಳು, ಪಾಂಟೂನ್ ಬೋಟ್‌ಗಳು ಮತ್ತು ಸಣ್ಣ ಡಿಂಗಿಗಳು, ರನ್‌ಅಬೌಟ್‌ಗಳು, ಕ್ಯಾಬಿನ್ ಕ್ರೂಸರ್‌ಗಳು, ಕ್ರೂಸಿಂಗ್ ವಿಹಾರ ನೌಕೆಗಳಿಂದ ಹಿಡಿದು ದೊಡ್ಡ, ಹೈಟೆಕ್ ಮತ್ತು ಐಷಾರಾಮಿ ದೊಡ್ಡ ಬೇಟೆಯ ರಿಗ್‍ಗಳು ಸೇರಿವೆ.[೩೦] ಹೆಚ್ಚು ದೊಡ್ಡ ದೋಣಿಗಳು ಮನರಂಜನಾ ಮೀನುಗಾರಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಉದ್ದೇಶ-ನಿರ್ಮಿತವಾಗಿರುತ್ತವೆ, ಮತ್ತು ಸಾಮಾನ್ಯವಾಗಿ ದೊಡ್ಡದಾದ, ತೆರೆದ ಕಾಕ್‌ಪಿಟ್‌ಗಳನ್ನು ಹಿಂಗೋಟಿನಲ್ಲಿ ಹೊಂದಿದ್ದು, ಅನುಕೂಲಕರ ಮೀನುಗಾರಿಕೆಗಾಗಿ ವಿನ್ಯಾಸಗೊಂಡಿರುತ್ತವೆ.

ಸಾಂಪ್ರದಾಯಿಕ ಮೀನುಗಾರಿಕೆ[ಬದಲಾಯಿಸಿ]

ಸಾಂಪ್ರದಾಯಿಕ ಮೀನುಗಾರಿಕೆ ಎಂದರೆ ಕೋಲು ಮತ್ತು ಟ್ಯಾಕಲ್, ಬಾಣಗಳು ಮತ್ತು ಈಟಿಗಾಳಗಳು, ಎಸೆಯುವ ಬಲೆಗಳು ಮತ್ತು ಎಳೆಯುವ ಬಲೆಗಳು ಮುಂತಾದ ಸಾಂಪ್ರದಾಯಿಕ ತಂತ್ರಗಳನ್ನು ಬಳಸಿಕೊಂಡು ಯಾವುದೇ ರೀತಿಯ ಸಣ್ಣ ಪ್ರಮಾಣದ, ವಾಣಿಜ್ಯ ಅಥವಾ ಜೀವನಾಧಾರ ಮೀನುಗಾರಿಕೆ ಅಭ್ಯಾಸಗಳು.

ಮನರಂಜನಾ ಮೀನುಗಾರಿಕೆ[ಬದಲಾಯಿಸಿ]

ಮನರಂಜನಾ ಮತ್ತು ಕ್ರೀಡಾ ಮೀನುಗಾರಿಕೆಯು ಮುಖ್ಯವಾಗಿ ಸಂತೋಷ ಅಥವಾ ಸ್ಪರ್ಧೆಗಾಗಿ ಮಾಡುವ ಮೀನುಗಾರಿಕೆ. ಮನರಂಜನಾ ಮೀನುಗಾರಿಕೆಯು ಸಂಪ್ರದಾಯಗಳು, ನಿಯಮಗಳು, ಪರವಾನಗಿಯ ನಿರ್ಬಂಧಗಳು ಮತ್ತು ಮೀನುಗಳನ್ನು ಹೇಗೆ ಹಿಡಿಯಬಹುದು ಎಂಬುದನ್ನು ಮಿತಿಗೊಳಿಸುವ ಕಾನೂನುಗಳನ್ನು ಹೊಂದಿದೆ; ವಿಶಿಷ್ಟವಾಗಿ, ಇವು ಬಲೆಗಳ ಬಳಕೆಯನ್ನು ಮತ್ತು ಬಾಯಿಯಲ್ಲಿ ಕೊಕ್ಕೆ ಇಲ್ಲದೇ ಮೀನುಗಳನ್ನು ಹಿಡಿಯುವುದನ್ನು ನಿಷೇಧಿಸುತ್ತವೆ. ಮನರಂಜನಾ ಮೀನುಗಾರಿಕೆಯ ಅತ್ಯಂತ ಸಾಮಾನ್ಯ ರೂಪವನ್ನು ಕೋಲು, ಗಾಳದುರುಳೆ, ಹಗ್ಗ, ಕೊಕ್ಕೆಗಳು ಮತ್ತು ಕೃತಕ ನೊಣಗಳಂತಹ ವ್ಯಾಪಕ ಶ್ರೇಣಿಯ ಎರೆಗಳು ಅಥವಾ ಎರೆವಸ್ತುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಮಾಡಲಾಗುತ್ತದೆ. ಕೊಕ್ಕೆಯಿಂದ ಮೀನು ಹಿಡಿಯುವ ಅಥವಾ ಹಿಡಿಯಲು ಪ್ರಯತ್ನಿಸುವ ಅಭ್ಯಾಸವನ್ನು ಸಾಮಾನ್ಯವಾಗಿ ಗಾಳ ಹಾಕುವುದು ಎಂದು ಕರೆಯಲಾಗುತ್ತದೆ. ಈ ತಂತ್ರದಲ್ಲಿ ಮೀನುಗಳನ್ನು ಕೆಲವೊಮ್ಮೆ ನೀರಿಗೆ ಹಿಂತಿರುಗಿಸುವುದು ನಿರೀಕ್ಷಿಸಲಾಗಿರುತ್ತದೆ ಅಥವಾ ಅಗತ್ಯವಾಗಿರುತ್ತದೆ. ಮನರಂಜನಾ ಅಥವಾ ಕ್ರೀಡಾ ಮೀನುಗಾರರು ತಾವು ಹಿಡಿದ ಮೀನುಗಳನ್ನು ದಾಖಲಿಸಬಹುದು ಅಥವಾ ಮೀನುಗಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

ಮನರಂಜನಾ ಮೀನುಗಾರರ ಅಂದಾಜು ಜಾಗತಿಕ ಸಂಖ್ಯೆಯು ಜಾಗತಿಕವಾಗಿ ೨೨೦ ಮಿಲಿಯನ್‌ನಿಂದ ಗರಿಷ್ಠ ೭೦೦ ಮಿಲಿಯನ್ ಮೀನುಗಾರರವರೆಗೆ ಬದಲಾಗುತ್ತದೆ,[೩೧] ಇದು ವಾಣಿಜ್ಯ ಮೀನುಗಾರರಾಗಿ ಕೆಲಸ ಮಾಡುವ ವ್ಯಕ್ತಿಗಳಿಗಿಂತ ದ್ವಿಗುಣವಾಗಿದೆ ಎಂದು ಭಾವಿಸಲಾಗಿದೆ. ಕೇವಲ ಅಮೇರಿಕದಲ್ಲಿ ೫೦.೧ ಮಿಲಿಯನ್ ಜನರು ಉಪ್ಪುನೀರು ಮತ್ತು ಸಿಹಿನೀರು ಎರಡೂ ಪರಿಸರದಲ್ಲಿ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅಂದಾಜಿಸಲಾಗಿದೆ.[೩೨]

ದೊಡ್ಡ ಬೇಟೆಯ ಮೀನುಗಾರಿಕೆ ಎಂದರೆ ಕತ್ತಿಮೀನು, ಟ್ಯೂನ, ಶಾರ್ಕ್ ಮತ್ತು ಮಾರ್ಲಿನ್‌ನಂತಹ ದೊಡ್ಡ, ತೆರೆದ ನೀರಿನ ಜಾತಿಗಳನ್ನು ದೋಣಿಗಳಿಂದ ಹಿಡಿಯುವ ಮೀನುಗಾರಿಕೆ. ಕ್ರೀಡಾ ಮೀನುಗಾರಿಕೆ ಎಂಬುದು ಮನರಂಜನಾ ಮೀನುಗಾರಿಕೆಯಾಗಿದ್ದು, ಇದರಲ್ಲಿ ಮೀನಿನ ಮಾಂಸದ ಪಾಕಶಾಲಾ ಅಥವಾ ಆರ್ಥಿಕ ಮೌಲ್ಯದ ಬದಲಾಗಿ ಮೀನುಗಳನ್ನು ಹುಡುಕಿ ಹಿಡಿಯುವ ಸವಾಲು ಪ್ರಾಥಮಿಕ ಪ್ರತಿಫಲವಾಗಿರುತ್ತದೆ. ಬಯಸಿದ ಮೀನುಗಳಲ್ಲಿ ಟಾರ್ಪನ್, ಹಾಯಿಮೀನು, ಮ್ಯಾಕೆರೆಲ್ ಮತ್ತು ಇತರವು ಸೇರಿವೆ.

ಮೀನುಗಾರಿಕೆ ಹೆಚ್ಚಾಗಿ ನಡೆಯುವ ಪ್ರದೇಶಗಳು[ಬದಲಾಯಿಸಿ]

ಹೆಚ್ಚು ಕಡಿಮೆ ಸಮುದ್ರದ ಎಲ್ಲ ಭಾಗಗಳಲ್ಲಿಯೂ ಮೀನುಗಳು ವಾಸಿಸುತ್ತವೆ. ಆದರೆ ಕೆಲವು ನಿರ್ದಿಷ್ಟ ನೆಲೆಗಳನ್ನು ಬಿಟ್ಟರೆ ಉಳಿದೆಡೆಗಳಲ್ಲಿ ಅವು ಚದುರಿ ಹೋಗುವುವಲ್ಲದೆ ಸಂಖ್ಯೆಯಲ್ಲಿ ಸಹ ಕಡಿಮೆ ಇರುತ್ತವೆ. ಹೆಚ್ಚಿನ ಮೊತ್ತದಲ್ಲಿ ಮೀನುಗಳಿರುವ ಇಂಥ ನಿರ್ದಿಷ್ಟ ನೆಲೆಗಳನ್ನೇ ಮೀನುಗಾರಿಕೆ ನೆಲೆಗಳೆಂದು (ಫಿಶಿಂಗ್ ಗ್ರೌಂಡ್) ಕರೆಯಲಾಗುತ್ತದೆ. ಮೀನುಗಾರಿಕೆ ನೆಲೆಗಳು ಸಾಮಾನ್ಯವಾಗಿ ತೀರ ಪ್ರದೇಶದಿಂದಾಚೆಗೆ ಸ್ವಲ್ಪ ದೂರದವರೆಗೆ ಸುಮಾರು 200 ಮೀಟರ್ ಆಳದವರೆಗಿನ ನೀರಿನಲ್ಲಿ ಇರುತ್ತವೆ. ಭೂಖಂಡದ ಸಮತಟ್ಟಿನ (ಕಾಂಟಿನೆಂಟಲ್ ಶೆಲ್ಫ್) ಈ ಭಾಗಗಳಲ್ಲಿ ಮೀನುಗಳು ಆಹಾರವನ್ನು ಪಡೆಯುವುವಲ್ಲದೇ ಮೊಟ್ಟೆಗಳನ್ನಿಟ್ಟು ಮರಿಗಳನ್ನೂ ಮಾಡುತ್ತವೆ. ಇಂಥ ಸ್ಥಳಗಳಲ್ಲಿಯೇ ಮೀನುಗಳನ್ನು ಸಮೃದ್ಧವಾಗಿ ಹಿಡಿಯಲಾಗುತ್ತದೆ. ಮೀನು ಹಿಡಿಯುವ ಪ್ರದೇಶಗಳ ಪೈಕಿ ಅತ್ಯುತ್ತಮವಾದ್ದು ನ್ಯೂಫೌಂಡ್‌ಲ್ಯಾಂಡ್ ತೀರಪ್ರದೇಶ. ಈ ಪ್ರದೇಶದಲ್ಲಿ ಅಪರಿಮಿತ ಮೊತ್ತದಲ್ಲಿ ಕಾಡ್, ಹ್ಯಾಲಿಬಟ್, ಹೆರಿಂಗ್ ಹಾಗೂ ಉತ್ತರ ಸಮುದ್ರಗಳಲ್ಲಿ ಸಿಕ್ಕುವ ಪ್ರಾಯಶಃ ಎಲ್ಲ ತೆರನ ಮೀನುಗಳನ್ನು ಪ್ರತಿವರ್ಷವೂ ಹಿಡಿಯಲಾಗುತ್ತಿದೆ. ಈ ಕಾರಣದಿಂದಲೇ ಅಮೆರಿಕ, ಕೆನಡ, ರಷ್ಯ, ಫ್ರಾನ್ಸ್, ಇಂಗ್ಲೆಂಡ್ ಮುಂತಾದ ದೇಶಗಳಿಂದ ಮೀನು ಹಿಡಿಯುವ ಹಡಗುಗಳು ಈ ಪ್ರದೇಶಕ್ಕೆ ಯಾವಾಗಲೂ ಬರುತ್ತಿರುತ್ತವೆ. ನಾರ್ವೆಯ ತೀರ ಪ್ರದೇಶದಲ್ಲಿ ಕೂಡ ಮುಖ್ಯವಾದ ಮೀನುಗಾರಿಕೆ ಕಂಡುಬರುತ್ತದೆ. ಪೆಸಿಫಿಕ್ ಸಾಗರದಲ್ಲಿ ಜಪಾನ್ ವಿಪುಲವಾದ ಮೀನುಗಾರಿಕೆಯ ಕಾರ್ಯ ನಡೆಸುತ್ತದೆ. ಪೋರ್ಚುಗಲ್ ಹಾಗೂ ಸ್ಪೇನ್‌ಗಳಲ್ಲಿ ಬೂತಾಯಿ ಮೀನಿನ ಮೀನುಗಾರಿಕೆ ಅಧಿಕವಾಗಿದೆ. ಉತ್ತರ ಅಮೆರಿಕದ ಉತ್ತರ ಪೆಸಿಫಿಕ್ ತೀರದಲ್ಲಿ ಸ್ಯಾಲ್ಮನ್ ಮತ್ತು ಕ್ಯಾಲಿಪೋರ್ನಿಯಾದಲ್ಲಿ ಟ್ಯೂನ ಮೀನುಗಾರಿಕೆಗಳು ಅತ್ಯಂತ ಹೆಸರುವಾಸಿಯಾದವು. ಖಾರಿ (ಆಖಾತ) ತೀರಗಳ ಉದ್ದಕ್ಕೂ ಪ್ರಖ್ಯಾತ ಸೀಗಡಿ ಮೀನುಗಾರಿಕೆ ಕಂಡುಬರುತ್ತದೆ.

ಬಹುಪಾಲು ದೇಶಗಳಲ್ಲಿ ವಿಶೇಷವಾಗಿ ಉಷ್ಣವಲಯಗಳಲ್ಲಿ ವಾಸಿಸುವ ಸಿಹಿ ನೀರಿನ ಮೀನುಗಳು ಆಹಾರ ಸಂಗ್ರಹದ ಅಮೂಲ್ಯವಾದ ಮೂಲವನ್ನು ಒದಗಿಸಿದರೂ ಮಾನವ ಜನಾಂಗದ ಆಹಾರದ ಮುಖ್ಯಪಾಲು ಸಮುದ್ರದ ಮೀನುಗಳು. ಪ್ರಪಂಚದ ಒಟ್ಟು ಮೀನುಗಾರಿಕೆ ಉತ್ಪಾದನೆಯಲ್ಲಿ ಕಡಲ ಮೀನು ಉತ್ಪಾದನೆ ಶೇಕಡ 74 ರಷ್ಟಿದೆ. 2003 ನೇ ವರ್ಷದಲ್ಲಿ ಒಟ್ಟು 132.2 ದಶ ಲಕ್ಷ ಟನ್ ಮೀನು ಉತ್ಪಾದಿಸಲಾಗಿದ್ದು ಅದರಲ್ಲಿ 98.00 ದಶ ಲಕ್ಷ ಟನ್ ಕಡಲಿನಿಂದ ಹಾಗೂ 34.20 ಲಕ್ಷ ಟನ್ ಒಳನಾಡಿನಿಂದ ಉತ್ಪಾದಿಸಲಾಗಿದೆ.

ಕಡಲ ಮೀನುಗಾರಿಕೆ[ಬದಲಾಯಿಸಿ]

ಹಿಡುವಳಿಯನ್ನಾಧರಿಸಿದ ಕಡಲ ಮೀನುಗಾರಿಕೆ ಪ್ರಮುಖವಾದುದು. ಕಡಲ ಮೀನುಗಾರಿಕೆಯನ್ನು ಸ್ಥೂಲವಾಗಿ ಆಳ ಸಮುದ್ರದ ಮೀನುಗಾರಿಕೆ ಮತ್ತು ಕರಾವಳಿ ಮೀನುಗಾರಿಕೆಯೆಂದು ವರ್ಗೀಕರಿಸಬಹುದು. ಭೂಖಂಡದ ನೀರಿನೊಳಗಿನ ಮರಳು ದಂಡೆಗಳ ಹಾಗೂ ಮಹಾಸಮುದ್ರಗಳ ದಂಡೆಗಳ ಆಳ ಸಮುದ್ರದ ಮೀನುಗಾರೆಕೆಗಳು ಹೆಚ್ಚು ಕಡಿಮೆ ಸಂಪೂರ್ಣವಗಿ ಇನ್ನೂರು ಮಾರು ಆಳದ ಮಿತಿಯೊಳಗೇ ನೆಲಸಿರುವುದು ಕಂಡುಬರುತ್ತದೆ. ಆದರೆ ಬಹಳಷ್ಟು ಮೀನುಗಾರಿಕೆಗಳು 100 ಮಾರಿನ ಆಳಕ್ಕೆ ಮಾತ್ರ ಸೀಮಿತವಾಗಿವೆ. ಪ್ರಪಂಚದ ಪ್ರಮುಖ ಮೀನುಗಾರಿಕೆ ನೆಲೆಗಳು ಉತ್ತರ ಸಮಶೀತೋಷ್ಣ ವಲಯದಲ್ಲಿ ಇವೆ. ಅದರಲ್ಲಿಯೂ ಹೆಚ್ಚಾಗಿ ಉತ್ತರ ಅಕ್ಷಾಂಶ 40º ಯಿಂದ 70º ವರೆಗಿನ ನಡುವಣ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ. ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಇನ್ನೂರು ಮಾರಿಗಿಂತ ಕಡಿಮೆ ಆಳವಿರುವ ಅನೇಕ ವಿಸ್ತಾರ ಕ್ಷೇತ್ರಗಳಿದ್ದು ಅಮೂಲ್ಯವಾದ ನೀರಿನ ತಳದ ವಾಸಿಗಳಾದ ಅಥವಾ ನೀರಿನ ಕೆಳಸ್ತರಗಳಲ್ಲಿ ಜೀವಿಸುವ ಮೀನುಗಳಿಗೆ ಆಶ್ರಯವಿತ್ತಿರುವ ನೆಲೆಗಳಾಗಿವೆ. ಇಂಥ ಮೀನುಗಳನ್ನೇ ಅವಲಂಬಿಸಿರುವ ಅಸಂಖ್ಯಾತ ಎಳೆಬಲೆಯಿಂದ (ಟ್ರಾಲ್) ಮೀನು ಹಿಡಿಯುವ ಕೈಗಾರಿಕೆಗಳಿವೆ. ಉತ್ತರದ ಸಮುದ್ರಗಳಲ್ಲಿ ಮೀನುಗಾರಿಕೆಗಳ ಕೇಂದ್ರೀಕರಣ ಯಾವ ರೀತಿ ಇದೆ ಎನ್ನುವುದು ಪ್ರಪಂಚದ ಒಟ್ಟು ಉತ್ಪನ್ನದ ಶೇಕಡಾ 70 ರಷ್ಟಕ್ಕೆ ಕಡಿಮೆ ಇಲ್ಲದಷ್ಟನ್ನು ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡ, ಜಪಾನ್, ಗ್ರೇಟ್ ಬ್ರಿಟನ್, ಫ್ರಾನ್ಸ್, ಸ್ಪೇನ್, ನಾರ್ವೆ, ಚೀನಾ ಹಾಗೂ ರಷ್ಯದಂಥ ರಾಷ್ಟ್ರಗಳು ಒಟ್ಟುಗೂಡಿ ಪ್ರತಿನಿಧಿಸುವುದರಿಂದಲೇ ಅದು ಗೊತ್ತಾಗುತ್ತದೆ. ಇತ್ತೀಚೆಗೆ ಭಾರತದಲ್ಲಿ ಸಮುದ್ರ ಮೀನುಗಾರಿಕೆಯನ್ನು ಚುರುಕಾಗಿ ಅಭಿವೃದ್ಧಿಗೊಳಿಸಲಾಗಿದೆ. ಇದೇ ರೀತಿ ಶ್ರೀಲಂಕಾ, ತೈಲಾಂಡ್, ಇಂಡೋನೆಶಿಯಾ, ಕಾಂಬೋಡಿಯಾ, ಬಾಂಗ್ಲಾದೇಶ ಹಾಗೂ ಮಲಯಗಳಲ್ಲಿ ಸಮುದ್ರ ಮೀನುಗಾರಿಕೆಯ ಅಭಿವೃದ್ಧಿಯಾಗಿದ್ದರೂ ಒಳನಾಡಿನ ಮೀನುಗಾರಿಕೆಯೇ ಅತ್ಯಂತ ವಾಣಿಜ್ಯ ಪ್ರಾಮುಖ್ಯವನ್ನು ಪಡೆದಿದೆ.

ಸಮುದ್ರತೀರದಲ್ಲಿ ಕಂಡುಬರುವ ಮೀನು ಹಿಡಿಯುವಿಕೆಗೆ ಕರಾವಳಿ ಮೀನುಗಾರಿಕೆ ಎಂದು ಹೆಸರು. ಇದರಲ್ಲಿ ಮೊದಲನೆಯ ಪದ್ಧತಿಯೆಂದರೆ ವಿವಿಧ ರೀತಿಯ ಬಲೆಗಳಿಂದ ಪರಂಪರಾನುಗತವಾಗಿ ನಡೆದುಬಂದ ಮಾನವಶಕ್ತಿಯಿಂದ ನಡೆಸಲಾಗುವ ಸಾಂಪ್ರದಾಯಿಕ ಮೀನುಗಾರಿಕೆ. ಯಾಂತ್ರೀಕೃತ ದೋಣಿಗಳಿಂದ ವೈವಿಧ್ಯಮಯ ಬಲೆಗಳನ್ನು ಬಳಸಿ ಮೀನು ಹಿಡಿಯುವ ಮೀನುಗಾರಿಕೆ ಮತ್ತೊಂದು. ಹೀಗೆ ಹಿಡಿದ ಮೀನುಗಳನ್ನು ರಫ್ತಿಗಾಗಿ ಸಂಸ್ಕರಣ ಮಾಡುವುದು ಮೀನುಗಾರಿಕೆಯ ಮೂರನೆಯ ಹಂತ. ರಂಪಣಿ, ಕಿವಿರುಬಲೆ, ಎಸೆಬಲೆ ಮತ್ತು ಇತರ ಬಲೆಗಳಿಂದ ತೀರದುದ್ದಕ್ಕೂ ಸಮುದ್ರ ಮೀನುಗಳಾದ ಬಂಗುಡೆ, ಬೂತಾಯಿ ಮುಂತಾದವುಗಳನ್ನು ಹಿಡಿಯುತ್ತಾರೆ. ಯಾಂತ್ರೀಕೃತ ದೋಣಿಗಳಿಂದ ಅಟ್ಟರ್ ಟ್ರಾಲ್ ಎಳೆಬಲೆ, ಸಂಚಿಬಲೆ (ಪರ್ಸ್ ಸೀನ್) ಇತ್ಯಾದಿ ಸಾಧನಗಳನ್ನು ಬಳಸಿ ಹೇರಳ ಮೊತ್ತದಲ್ಲಿ ಮೀನುಗಳನ್ನು ಹಿಡಿಯುವುದುಂಟು. ಇದಕ್ಕೋಸ್ಕರವಾಗಿಯೇ ಸುಧಾರಿತ ಯಾಂತ್ರಿಕ ದೋಣಿಗಳನ್ನು ರಚಿಸುವುದಕ್ಕೆ ದೋಣಿ ನಿರ್ಮಾಣ ಕೇಂದ್ರಗಳು ಸ್ಥಾಪಿತವಾಗಿವೆ. ಅಂತೆಯೇ ಮೀನುಗಾರರ ತರಬೇತಿ ಕೇಂದ್ರಗಳ ಸ್ಥಾಪನೆಯೂ ಆಗಿದೆಯಲ್ಲದೆ ಮೀನುಗಾರಿಕೆ ಬಂದರುಗಳ ಹಾಗೂ ಇಳಿದಾಣಗಳ ನಿರ್ಮಾಣವೂ ನಡೆಯುತ್ತಿದೆ.

ಒಳನಾಡು ಮೀನುಗಾರಿಕೆ[ಬದಲಾಯಿಸಿ]

ಸಾಮಾನ್ಯವಾಗಿ ಕೆರೆ, ಕೊಳ, ನದಿ, ಸರೋವರ ಮುಂತಾದ ಸಿಹಿನೀರು ಪ್ರದೇಶಗಳಲ್ಲಿ ಮತ್ತು ಅಳಿವೆಗಳಲ್ಲಿ ಮೀನುಗಳನ್ನು ಹಿಡಿಯುವ ಮತ್ತು ಸಾಕಾಣಿಕೆ ಪದ್ಧತಿಗೆ ಒಳನಾಡು ಮೀನುಗಾರಿಕೆ ಎಂದು ಹೆಸರು. ಸಿಹಿನೀರು ಪ್ರದೇಶಗಳು ವೈವಿಧ್ಯಮಯವಾಗಿರುವಂತೆಯೇ ಇವುಗಳಲ್ಲಿ ಮೀನು ಹಿಡಿಯಲು ವಿವಿಧ ರೀತಿಯ ಯಥೋಚಿತ ಸಾಧನ ಸಲಕರಣೆಗಳೂ ಉಪಯೋಗಿಸಲ್ಪಡುತ್ತವೆ.

ಒಳನಾಡು ಮೀನುಗಾರಿಕೆಯಲ್ಲಿ ಉಪಯುಕ್ತವೆನಿಸುವ ಪ್ರಮುಖ ಸಾಧನಗಳೆಂದರೆ- ತೆಪ್ಪ, ತೋಡು ದೋಣಿ, ಮತ್ತು ಹರಿಗೋಲುಗಳು. ದೋಣಿಗಳಲ್ಲಿ  ಹಲಗೆಗಳಿಂದ ನಿರ್ಮಿಸಿದ ದೋಣಿಗಳು ಮತ್ತು ದೊಡ್ಡ ಮೀನು ಹಿಡಿಯುವ ದೋಣಿಗಳು ಬಳಕೆಯಲ್ಲಿವೆ. ಬಾಳೆಯದಿಂಡು ಮತ್ತು ಶೋಲ ಕಡ್ಡಿಗಳಿಂದ ಕಂತೆಗಳನ್ನು ಒಟ್ಟಿಗೆ ಕಟ್ಟಿ ಅದರಮೇಲೆ ಊದಿ ಉಬ್ಬಿಸಿದ ಚರ್ಮವನ್ನು ಬಿಗಿದು ಒಂದು ಒರಟು ತೆಪ್ಪವನ್ನು ರಚಿಸಿ ತೆಪ್ಪದ ಮೇಲೆ ಕುಳಿತು ಬಲೆಹಾಕಿ ಮೀನು ಹಿಡಿಯುತ್ತಾರೆ. ಮಗುಚಿ ಹಾಕಿದ ಮಡಕೆಗಳನ್ನು ಬೊಂಬುಗಳ ಪಟ್ಟಿಯೊಡನೆ ಕೂಡಿಸಿ ಕಟ್ಟಿಹಾಕಿದರೆ ಇನ್ನೊಂದು ರೀತಿಯ ತೆಪ್ಪವಾಗುತ್ತದೆ. ದನ ಹಾಗೂ ಎಮ್ಮೆ ಚರ್ಮವನ್ನು ಉಪಯೋಗಿಸಿ, ಬಿದುರಿನಿಂದ ರಚಿಸಿದ ದುಂಡಗಿನ ಹರಿಗೋಲನ್ನು ರಚಿಸುವುದುಂಟು. ಇತ್ತೀಚೆಗೆ ಫೈಬರ್ ಗ್ಲಾಸ್‍ನಿಂದ ತಯಾರಿಸಿದ ಸಿಂಥಟಿಕ್ ಹರಿಗೋಲುಗಳೂ ಬಳಕೆಯಲ್ಲಿವೆ. ತೋಡು ದೋಣಿಗಳಲ್ಲಿ ಮುಖ್ಯವಾದವು ಡೊಂಗ ಮತ್ತು ಏಕ್ಹತಾ. ಡೋಂಗ ಹಲಗೆಗಳಿಂದ ರಚಿತವಾಗಿದೆಯಾದರೆ ಏಕ್ಹತಾ ತಾಳಿಯ ಮರದ ಕೆಳಗಿನ ತುದಿಗಳಿಂದ ರಚಿತವಾಗಿದೆ. ಡಿಂಗ್ಹಿನ್ ಮತ್ತು ಚಿಪ್ ಎಂಬವನ್ನು ಹಲಗೆಗಳಿಂದ ನಿರ್ಮಿಸಲಾಗುತ್ತದೆ. ನದಿಗಳಲ್ಲಿ ಮೀನು ಹಿಡಿಯುವುದಕ್ಕೂ ಅವುಗಳನ್ನು ಸಾಗಿಸುವುದಕ್ಕೂ ಇವು ಉಪಯುಕ್ತ. ದೊಡ್ಡ ಮೀನು ಹಿಡಿಯುವ ದೋಣಿಗಳು ಒಳ್ಳೆಯ ಮರದಿಂದ ರಚಿತವಾಗಿದ್ದು ಗಟ್ಟಿಮುಟ್ಟಾಗಿಯೂ ಬಲಯುತವಾಗಿಯೂ ಇರುವುವು. ಇವನ್ನು ಹುಟ್ಟುಗಳಿಂದಲೊ ಎಣ್ಣೆಯಂತ್ರಗಳಿಂದಲೊ ನಡೆಸಬಹುದು.

ಸಿಹಿನೀರಿನ ಮೀನುಗಳನ್ನು ಹಿಡಿಯುವ ಸಲಕರಣೆಗಳಲ್ಲಿ ವೈವಿಧ್ಯವಿದೆ. ಅವೆಂದರೆ ಗಾಳದ ಹುರಿ, ಕಿವಿರು ಬಲೆ, ಎಳೆಯುವ ಬಲೆ, ಸಂಚಿ ಬಲೆ, ಎಸೆಯುವ ಬಲೆ, ಬೋನು ಮುಂತಾದವು.

ಗಾಳದ ಹುರಿಗಳಿಂದ ಮೀನುಹಿಡಿಯುವ ಕ್ರಮದಲ್ಲಿ ಮೂರು ವಿಧ: ಗಾಳದ ಕೋಲು ಮತ್ತು ಹುರಿ, ಉದ್ದವಾದ ಗಾಳದ ಹುರಿ ಮತ್ತು ಎಸೆಯುವ ಗಾಳದ ಹುರಿ. ಈ ಎಲ್ಲ ಗಾಳದ ಹುರಿಗಳಿಂದ ಹುಳುಗಳನ್ನೊ ಸೀಗಡಿಗಳನ್ನೊ, ಕಳೆಮೀನುಗಳನ್ನೊ ಎರೆಗಳಂತೆ ಉಪಯೋಗಿಸಿ ಮೀಸೆಮೀನು, ಗೆಂಡೆ, ಬಿಳಿಮೀನು (ಮಹಸೀರ್), ಹಾವುಮೀನು, ಕುಚ್ಚುಮೀನು ಮುಂತಾದವನ್ನು ಹಿಡಿಯುತ್ತಾರೆ. ಕಿವಿರು ಬಲೆಗಳು ಹಾಗೂ ಪಾತಾಳಗರಡಿ ಬಲೆಗಳು ಏಕಭಿತ್ತಿಯ ಬಲೆಗಳು. ಮೀನುಗಳು ಇವುಗಳ ಬಲೆಗಳ ಕಣ್ಣುಗಳಲ್ಲಿ ತಮ್ಮ ಕಿವಿರು ಮುಚ್ಚಳದ ಹಿಂದಿನ ಭಾಗದಿಂದ ಸಿಕ್ಕುತ್ತವೆ. ವಿವಿಧ ರೀತಿಯ ಕಿವಿರು ಬಲೆಗಳಿಂದ ವರ್ಷಪೂರ್ತಿ ಗೆಂಡೆಗಳಂಥ ಮೀನುಗಳನ್ನು ಹಿಡಿಯುವುದುಂಟು. ಕೆರೆಗಳಲ್ಲಿ, ಸಿಹಿನೀರಿನ ಸರೋವರಗಳಲ್ಲಿ ಸಾಮಾನ್ಯವಾಗಿ ಎಳೆಯುವ ಬಲೆ ಮತ್ತು ತೀರದ ಸೀನ್‌ಬಲೆಗಳಿಂದ ಪರಿಣಾಮಕಾರಿಯಾಗಿ ಮಾಲಾಗಳು, ಗಾರ್‌ಮೀನುಗಳು, ಅರೆಕೊಕ್ಕುಗಳು. ಸಣ್ಣ ಮೀನುಗಳು, ಸೀಗಡಿಗಳು ಮತ್ತು ಏಡಿಗಳನ್ನು ಹಿಡಿಯಲಾಗುತ್ತದೆ. ಸ್ಥಿರವಾದ ನೆಲೆಗೊಳಿಸುವ ಶಂಕ್ವಾಕಾರದ ಸಂಚಿಬಲೆ ಮತ್ತು ಬೆದರು ಗಾಳದ ಹುರಿಗಳಿಂದ ಹೆಚ್ಚಾಗಿ ಮಾಲಾಗಳು, ನೆಮಟೆಲೋಸ್ ನಾಸಸ್, ಕಾಣೆ, ಮಟ್ಟತಲೆಯ ಮೀನು, ಸೀಗಡಿ, ತುರಗಿಮೀನು, ಬಿಳಿಸುರಗಿಮೀನು ಹಾಗೂ ಕೋಬಿಡ್ ಮೀನುಗಳನ್ನು ಹಿಡಿಯುವುದುಂಟು. ಸ್ಥಿರವಾಗಿ ನಿಂತ ಬೋನುಬಲೆಗಳಾದ ಸ್ಟೇಕ್‌ಬಲೆ ಮತ್ತು ಮುಳುಗು ಬಲೆಗಳಿಂದ ಸರೋವರ ಮೀನುಗಳನ್ನೂ ವಿಶೇಷವಾಗಿ ಸೀಗಡಿಗಳನ್ನೂ ಹಿಡಿಯುತ್ತಾರೆ. ಅತ್ಯಂತ ಸಾಮಾನ್ಯವಾಗಿ ಉಪಯೋಗಿಸುವ ಎಸೆ ಬಲೆಯಿಂದ ಅಳಿವೆ ಹಾಗೂ ನದಿಗಳಲ್ಲಿ ವಿವಿಧ ಮೀನುಗಳನ್ನೂ ಸೀಗಡಿಗಳನ್ನೂ ಹಿಡಿಯುವುದುಂಟು. ಮೀನುಗಳು ಸಿಕ್ಕಿ ಹಾಕಿಕೊಳ್ಳಲು ಮೀನು ಬೋನುಗಳೂ ಸಹಾಯಕಾರಿ. ಬೆತ್ತದಿಂದ ಹೆಣೆದು ಮಾಡಿದ ಬೋನುಗಳು ರೂಢಿಯಲ್ಲಿ ಕೊಡಮೆ, ದಂಡಿ, ಆಯಾಕಾರ, ವೃತ್ತಾಕಾರ, ಪಂಜರದ ಬೋನುಗಳೆಂದು ಹೆಸರುವಾಸಿಯಾಗಿದೆ. ಮೀನು ಹಿಡಿಯುವ ಇನ್ನೊಂದು ವಿಶಿಷ್ಟ ವಿಧಾನವೆಂದರೆ ಮೀನುಗಳನ್ನು ನಿಶ್ಚೇತನಗೊಳಿಸಿ ಹಿಡಿಯುವುದು. ಇದರಲ್ಲಿ ಮೂರು ವಿಧಗಳುಂಟು:

  1. ಯಾಂತ್ರಿಕ ಜಡಗೊಳಿಸುವಿಕೆ: ಡೈನಾಮೈಟನ್ನು ನೀರಿನಲ್ಲಿ ಆಸ್ಛೋಟಿಸಿ ಮೀನುಗಳನ್ನು ಜಡಗೊಳಿಸಿ ಹಿಡಿಯುವುದಿದೆ.
  2. ರಾಸಾಯನಿಕ ಜಡಗೊಳಿಸುವಿಕೆ : ವಿವಿಧ ರೀತಿಯ ವಿಷಗಳಿಂದ ಮೀನುಗಳನ್ನು ಮಂಕುಗೊಳಿಸಿ ಹಿಡಿಯುವುದುಂಟು.
  3. ವಿದ್ಯುತ್ತಿನಿಂದ ಜಡಗೊಳಿಸುವಿಕೆ: ವಿದ್ಯುತ್ ಕ್ಷೇತ್ರವನ್ನು ನಿರ್ಮಿಸಿ ಮೀನುಗಳನ್ನು ಮರವಡಿಸಿ ಹಿಡಿಯುವುದು.

ಆದರೆ ಈ ವಿಧಾನಗಳು ಅಪಾಯಕಾರಿಯಾದ್ದರಿಂದ ನಿಷೇಧಕ್ಕೊಳಗಾಗಿವೆ.

ಮೀನುಗಾರಿಕೆ ಉದ್ಯಮ[ಬದಲಾಯಿಸಿ]

ಮೀನುಗಾರಿಕೆ ಉದ್ಯಮವು ಮೀನು ಅಥವಾ ಮೀನು ಉತ್ಪನ್ನಗಳನ್ನು ತೆಗೆದುಕೊಳ್ಳುವುದು, ಬೆಳೆಸುವುದು, ಸಂಸ್ಕರಿಸುವುದು, ಸಂರಕ್ಷಿಸುವುದು, ಸಂಗ್ರಹಿಸುವುದು, ಸಾಗಿಸುವುದು, ಮಾರಾಟಗಾರಿಕೆ ಅಥವಾ ಮಾರಾಟ ಮಾಡುವ ಯಾವುದೇ ಉದ್ಯಮ ಅಥವಾ ಚಟುವಟಿಕೆಯನ್ನು ಒಳಗೊಂಡಿರುತ್ತದೆ. ಇದು ಮನರಂಜನೆ, ಜೀವನಾಧಾರ ಹಾಗೂ ವಾಣಿಜ್ಯ ಮೀನುಗಾರಿಕೆ, ಮತ್ತು ಹಿಡಿಯುವುದು, ಸಂಸ್ಕರಣೆ ಹಾಗೂ ಮಾರಾಟಗಾರಿಕೆ ವಲಯಗಳನ್ನು ಒಳಗೊಂಡಿದೆ ಎಂದು ಎಫ್‌‌‌‌‌‌ಎಓ ವ್ಯಾಖ್ಯಾನಿಸುತ್ತದೆ.[೩೩] ವಾಣಿಜ್ಯ ಚಟುವಟಿಕೆಯು ಮೀನು ಮತ್ತು ಇತರ ಸಮುದ್ರಾಹಾರ ಉತ್ಪನ್ನಗಳನ್ನು ಮಾನವ ಸೇವನೆಗಾಗಿ ಅಥವಾ ಇತರ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಕಚ್ಚಾ ವಸ್ತುವಾಗಿ ಬಳಕೆಗಾಗಿ ಹಂಚಿಕೆಯ ಗುರಿಯನ್ನು ಹೊಂದಿದೆ.

ಮೂರು ಪ್ರಧಾನ ಉದ್ಯಮ ವಲಯಗಳಿವೆ:

  • ವಾಣಿಜ್ಯ ವಲಯವು ಕಾಡು-ಹಿಡಿತ ಅಥವಾ ಜಲಜೀವಿ ಕೃಷಿ ಸಂಪನ್ಮೂಲಗಳಿಗೆ ಸಂಬಂಧಿಸಿದ ಉದ್ಯಮಗಳು ಹಾಗೂ ವ್ಯಕ್ತಿಗಳು ಮತ್ತು ಆ ಸಂಪನ್ಮೂಲಗಳನ್ನು ಮಾರಾಟಕ್ಕೆ ಉತ್ಪನ್ನಗಳಿಗಾಗಿ ಪರಿವರ್ತಿಸುವ ವಿವಿಧ ರೂಪಾಂತರಗಳನ್ನು ಒಳಗೊಂಡಿರುತ್ತದೆ.
  • ಸಾಂಪ್ರದಾಯಿಕ ವಲಯವು ಮೀನುಗಾರಿಕೆ ಸಂಪನ್ಮೂಲಗಳಿಗೆ ಸಂಬಂಧಿಸಿದ ಉದ್ಯಮಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಇದರಿಂದ ಮೂಲನಿವಾಸಿಗಳು ತಮ್ಮ ಸಂಪ್ರದಾಯಗಳನ್ನು ಅನುಸರಿಸಿ ಉತ್ಪನ್ನಗಳನ್ನು ಪಡೆಯುತ್ತಾರೆ.
  • ಮನರಂಜನಾ ವಲಯವು ಮೀನುಗಾರಿಕಾ ಸಂಪನ್ಮೂಲಗಳಿಂದ ಮನರಂಜನೆ, ಕ್ರೀಡೆ ಅಥವಾ ಜೀವನಾಧಾರದ ಉದ್ದೇಶದೊಂದಿಗೆ ಸಂಬಂಧಿಸಿದ ಉದ್ಯಮಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಇವುಗಳಿಂದ ಪಡೆದ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದಿಲ್ಲ.

ವಾಣಿಜ್ಯ ಮೀನುಗಾರಿಕೆ[ಬದಲಾಯಿಸಿ]

ವಾಣಿಜ್ಯ ಮೀನುಗಾರಿಕೆ ಎಂದರೆ ವಾಣಿಜ್ಯ ಉದ್ದೇಶಗಳಿಗಾಗಿ ಮೀನುಗಳನ್ನು ಹಿಡಿಯುವುದು. ಇದನ್ನು ಅಭ್ಯಾಸ ಮಾಡುವವರು ಸಾಮಾನ್ಯವಾಗಿ ಪ್ರತಿಕೂಲ ಪರಿಸ್ಥಿತಿಗಳಲ್ಲಿ ನೆಲದಿಂದ ದೂರ ಮೀನುಗಳನ್ನು ಹಿಂಬಾಲಿಸಬೇಕಾಗುತ್ತದೆ. ವಾಣಿಜ್ಯ ಮೀನುಗಾರರು ಈ ಜಾತಿಗಳಿಗೆ ವಿವಿಧ ಮೀನು ಸಾಕಣೆ ಕೇಂದ್ರಗಳಲ್ಲಿ ಟ್ಯೂನ, ಕಾಡ್ ಮತ್ತು ಸಾಲ್ಮನ್‌ಗಳಿಂದ ಹಿಡಿದು ಸೀಗಡಿ, ಕ್ರಿಲ್, ಕಡಲನಳ್ಳಿ, ಕ್ಲಮ್‌ಗಳು, ಸ್ಕ್ವಿಡ್ ಮತ್ತು ಏಡಿಗಳವರೆಗೆ ಬಹುತೇಕ ಎಲ್ಲ ಜಲಚರ ಜಾತಿಗಳನ್ನು ಹಿಡಿಯುತ್ತಾರೆ. ವಾಣಿಜ್ಯ ಮೀನುಗಾರಿಕೆ ವಿಧಾನಗಳು ದೊಡ್ಡ ಬಲೆಗಳು ಮತ್ತು ಸಮುದ್ರಕ್ಕೆ ಹೋಗುವ ಸಂಸ್ಕರಣಾ ಕಾರ್ಖಾನೆಗಳನ್ನು ಬಳಸಿಕೊಂಡು ಅತ್ಯಂತ ಪರಿಣಾಮಕಾರಿಯಾಗಿವೆ. ಪ್ರತ್ಯೇಕ ಮೀನುಗಾರಿಕೆ ಹಸುಗೆಗಳು ಮತ್ತು ಅಂತರರಾಷ್ಟ್ರೀಯ ಒಪ್ಪಂದಗಳು ಹಿಡಿದ ಜಾತಿಗಳು ಮತ್ತು ಪ್ರಮಾಣವನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ.

ವಾಣಿಜ್ಯ ಮೀನುಗಾರಿಕೆ ಉದ್ಯಮವು ಕೈಯಿಂದ ಎಸೆಯುವ ಬಲೆಗಳು ಅಥವಾ ಕೆಲವು ಮಡಕೆ ಬೋನುಗಳನ್ನು ಹೊಂದಿರುವ ಸಣ್ಣ ದೋಣಿಯುಳ್ಳ ಒಬ್ಬ ವ್ಯಕ್ತಿಯಿಂದ ಹಿಡಿದು, ಪ್ರತಿದಿನ ಟನ್‌ಗಟ್ಟಲೆ ಮೀನುಗಳನ್ನು ಸಂಸ್ಕರಿಸುವ ಎಳೆಬಲೆ ದೋಣಿಗಳ ದೊಡ್ಡ ಸಮೂಹದವರೆಗೆ ಬದಲಾಗಬಹುದು.

ವಾಣಿಜ್ಯ ಮೀನುಗಾರಿಕೆ ಸಾಧನಗಳಲ್ಲಿ ತೂಕದ ಕಲ್ಲುಗಳು, ಬಲೆಗಳು (ಉದಾ. ಪರ್ಸ್ ಸೇನ್ ಬಲೆ), ಸೇನ್ ಬಲೆಗಳು (ಉದಾ. ಬೀಚ್ ಸೇನ್), ಎಳೆಬಲೆಗಳು (ಉದಾ. ಕೆಳ ಎಳಬಲೆ), ಹೂಳೆತ್ತುಗಗಳು, ಕೊಕ್ಕೆಗಳು ಮತ್ತು ಹಗ್ಗ (ಉದಾ. ಉದ್ದ ಹಗ್ಗ ಮತ್ತು ಕೈಹಗ್ಗ), ಎತ್ತುವ ಬಲೆಗಳು, ಕಿವಿರುಬಲೆಗಳು, ಸಿಕ್ಕಿಸುವ ಬಲೆಗಳು ಮತ್ತು ಬೋನುಗಳು ಸೇರಿವೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ೨೦೦೦ ರಲ್ಲಿ ಪ್ರಪಂಚದ ಒಟ್ಟು ಮೀನುಗಾರಿಕೆ ಉತ್ಪಾದನೆಯು 86 ಮಿಲಿಯನ್ ಟನ್‌ಗಳಷ್ಟಿತ್ತು (ಎಫ್ಎಓ ೨೦೦೨). ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ (ಹಾಂಗ್ ಕಾಂಗ್ ಮತ್ತು ತೈವಾನ್ ಹೊರತುಪಡಿಸಿ), ಪೆರು, ಜಪಾನ್, ಅಮೇರಿಕ, ಚಿಲಿ, ಇಂಡೋನೇಷಿಯಾ, ರಷ್ಯಾ, ಭಾರತ, ಥೈಲ್ಯಾಂಡ್, ನಾರ್ವೆ ಮತ್ತು ಐಸ್‌ಲ್ಯಾಂಡ್‌ಗಳು ಕ್ರಮವಾಗಿ ಅಗ್ರ ಉತ್ಪಾದಕ ರಾಷ್ಟ್ರಗಳಾಗಿವೆ. ಈ ದೇಶಗಳು ಪ್ರಪಂಚದ ಅರ್ಧಕ್ಕಿಂತ ಹೆಚ್ಚಿನ ಉತ್ಪಾದನೆಯನ್ನು ಹೊಂದಿವೆ; ಪ್ರಪಂಚದ ಉತ್ಪಾದನೆಯ ಮೂರನೇ ಒಂದು ಭಾಗವನ್ನು ಚೀನಾ ಒಂದೇ ಹೊಂದಿದೆ. ಆ ಉತ್ಪಾದನೆಯಲ್ಲಿ, ೯೦% ಕ್ಕಿಂತ ಹೆಚ್ಚು ಸಮುದ್ರ ಮತ್ತು ೧೦% ಕ್ಕಿಂತ ಕಡಿಮೆ ಒಳನಾಡಿನ ಮೀನುಗಳು ಆಗಿದ್ದವು.

ಕಡಿಮೆ ಸಂಖ್ಯೆಯ ಜಾತಿಗಳು ಪ್ರಪಂಚದ ಹೆಚ್ಚಿನ ಮೀನು ಸಾಕಣೆ ಕೇಂದ್ರಗಳನ್ನು ಬೆಂಬಲಿಸುತ್ತವೆ. ಈ ಕೆಲವು ಜಾತಿಗಳೆಂದರೆ ಹೆರಿಂಗ್, ಕಾಡ್, ಆಂಚೊವಿ, ಟ್ಯೂನ, ಫ್ಲೌಂಡರ್, ಮಲೆಟ್, ಸ್ಕ್ವಿಡ್, ಸೀಗಡಿ, ಸಾಲ್ಮನ್, ಏಡಿ, ನಳ್ಳಿ, ಸಿಂಪಿ ಮತ್ತು ಸ್ಕ್ಯಾಲಪ್‍ಗಳು. ಈ ಕೊನೆಯ ನಾಲ್ಕನ್ನು ಹೊರತುಪಡಿಸಿ ಉಳಿದ ಎಲ್ಲವು ೧೯೯೯ ರಲ್ಲಿ ಒಂದು ದಶಲಕ್ಷ ಟನ್‍ಗಳಷ್ಟು ವಿಶ್ವಾದ್ಯಂತದ ಬೇಟೆಯನ್ನು ಒದಗಿಸಿದವು. ಹೆರಿಂಗ್ ಮತ್ತು ಸಾರ್ಡೀನ್‍ಗಳು ಒಟ್ಟಾಗಿ ೧೯೯೯ ರಲ್ಲಿ ೨೨ ಮಿಲಿಯನ್ ಮೆಟ್ರಿಕ್ ಟನ್‌‌‌‍ಗಳಷ್ಟು ಬೇಟೆಯನ್ನು ಒದಗಿಸಿದವು.

ಪ್ರಪಂಚದ ಮೀನು ಉತ್ಪಾದನೆ ಮತ್ತು ಬಳಕೆಯ ಪ್ರಮಾಣ
1998 1999 2000 2001 2002 2003
ಉತ್ಪಾದನೆ (ದಶಲಕ್ಷ ಟನ್)
ಒಳನಾಡು
ಹಿಡುವಳಿ 8.1 8.5 8.7 8.7 8.7 9.0
ಮೀನುಕೃಷಿ 18.5 20.2 21.3 22.5 23.9 25.2
ಒಟ್ಟು ಒಳನಾಡು 26.6 28.7 30.0 31.2 32.6 34.2
ಕಡಲು
ಹಿಡುವಳಿ 79.6 85.2 86.8 84.2 84.5 81.3
ಮೀನುಕೃಷಿ 12.0 13.3 14.2 15.2 15.9 16.7
ಒಟ್ಟು ಕಡಲು 91.6 98.5 101.0 99.4 100.4 98.0
ಹಿಡುವಳಿಯಿಂದ ಒಟ್ಟು 87.7 93.8 95.5 92.9 93.2 90.3
ಮೀನುಕೃಷಿಯಿಂದ ಒಟ್ಟು 30.6 33.4 35.5 37.8 39.8 41.9
ಒಟ್ಟು ಉತ್ಪಾದನೆ 118.2 127.2 131.0 130.7 133.0 132.2
ಬಳಕೆ
ಆಹಾರದ ಬಳಕೆಗೆ 93.6 95.4 96.8 99.5 100.7 103.0
ಆಹಾರೇತರ ಬಳಕೆಗೆ 24.6 31.8 34.2 31.1 32.2 29.2
ಜನಸಂಖ್ಯೆ (100 ಕೋಟಿ) 5.9 6.0 6.1 6.1 6.2 6.3
ಪ್ರತಿ ವ್ಯಕ್ತಿಗೆ ಮೀನು ಸರಬರಾಜು (ಕೆಜಿ/ವರ್ಷಕ್ಕೆ) 15.8 15.9 15.9 16.2 16.2 16.3

(ಆಧಾರ: ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ)

2002-03 ರ ಅಂಕಿ-ಅಂಶಗಳ ಪ್ರಕಾರ ಚೀನಾ ಮೀನು ಉತ್ಪಾದನೆಯಲ್ಲಿ ಅತ್ಯಂತ ಮುಂದುವರೆದ ದೇಶವಾಗಿದೆ. ಚೀನಾದಲ್ಲಿ 2002 ವರ್ಷವೊಂದರಲ್ಲಿ 44.3 ದಶ ಲಕ್ಷ ಟನ್‍ಗಳ ಮೀನು ಉತ್ಪಾದನೆಯಾಗಿದೆ. ಕಡಲ ಹಾಗೂ ಒಳನಾಡು ಒಟ್ಟು ಮೀನು ಹಿಡುವಳಿಯಲ್ಲಿ ಭಾರತ ಪ್ರಪಂಚದಲ್ಲಿ ಏಳನೇ ಅತಿ ಹೆಚ್ಚು ಮೀನು ಉತ್ಪಾದಿಸುವ ರಾಷ್ಟ್ರವಾಗಿದೆ. ಒಳನಾಡು ಮೀನು ಉತ್ಪಾದನೆಯಲ್ಲಿ ಚೀನಾ ದೇಶ ಪ್ರಥಮ ಸ್ಥಾನದಲ್ಲಿದ್ದರೆ ಭಾರತ ಎರಡನೆಯದು. ಒಳನಾಡು ಹಿಡುವಳಿಯಲ್ಲಿ ಶೇ.68 ರಷ್ಟು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಆಗುತ್ತಿದೆ. ಮೀನುಗಾರಿಕೆ ಅನೇಕ ದೇಶಗಳ ಆರ್ಥಿಕ ವ್ಯವಸ್ಥೆಯ ಜೀವಾಳವಾಗಿದೆ.

ಅಳಿವೆಗಳಲ್ಲಿ, ತೀರಪ್ರದೇಶಗಳಲ್ಲಿ ಹಾಗೂ ಆಳ ಸಮುದ್ರಗಳಲ್ಲಿ ವಾಸಮಾಡುವ ಸೀಗಡಿಗಳನ್ನು ಸಾಮಾನ್ಯವಾಗಿ ಯಾಂತ್ರೀಕೃತ ದೋಣಿಗಳ ಎಳೆ ಬಲೆಗಳಿಂದ ಹಿಡಿಯುತ್ತಾರೆ. ಜಪಾನ್ ಹಾಗೂ ಇತರ ಕೆಲವು ರಾಷ್ಟ್ರಗಳು ಈಚೆಗೆ ಚೌಳು ನೀರಿನಲ್ಲಿ ಸೀಗಡಿಕೃಷಿಯನ್ನು ಕೈಗೊಂಡಿವೆ. ಸಿಂಪಿಗಳು ಹಾಗೂ ಮರುವಾಯಿಗಳು ನೀರಿನ ಅಲ್ಪ ಸೆಳೆತವಿರುವ ಆಳವಿಲ್ಲದ ನೀರಿನಲ್ಲಿ ವಾಸಿಸುತ್ತಿದ್ದು, ಇಂಥವು ಕೂಡ ನದಿ, ಸಮುದ್ರಗಳ ಮೀನುಗಾರಿಕೆಯಲ್ಲಿ ಮುಖ್ಯವೆನಿಸಿವೆ. ಈಗ ನದಿಗಳಲ್ಲಿ ಸಿಂಪಿ ಮತ್ತು ಮರುವಾಯಿಗಳನ್ನು ಕೃಷಿಮಾಡುವ ಮೂಲಕ ವಿಸ್ತಾರವಾದ ಒಂದು ಉದ್ಯೋಗವೇ ಸ್ಥಾಪಿತವಾಗಿದೆ. ಇಂಥಲ್ಲಿ ಸಿಂಪಿಗಳು ಹಾಗೂ ಮರುವಾಯಿಗಳಿಗೆ ರಕ್ಷಣೆಯನ್ನು ಕೊಡಲು ಬೇಲಿಯನ್ನು ಕಟ್ಟಿ ಅವನ್ನು ನಾಟಿ ಮಾಡಿ ಬೆಳೆಸಲಾಗುತ್ತದೆ. ಯುಕ್ತಕಾಲದಲ್ಲಿ ಅವನ್ನು ಇತರ ಬೆಳೆಗಳಂತೆಯೇ ಸಿಂಪಿಗಳನ್ನು ಕಬ್ಬಿಣದಿಂದ ಮಾಡಿದ ಉದ್ದವಾದ ಹಿಡಿಗಳುಳ್ಳ ಸಿಂಪಿ ಇಕ್ಕಳಗಳಿಂದ ಮರುವಾಯಿಗಳನ್ನು ವಿಶಿಷ್ಟ ಬಗೆಯ ಹಲುಬೆಗಳಿಂದ ಸಂಗ್ರಹಿಸಲಾಗುತ್ತದೆ. ಸಮುದ್ರ ನಳ್ಳಿಗಳನ್ನು ಹಾಗೂ ಏಡಿಗಳನ್ನು ಮರದ ಅಥವಾ ತಂತಿಯ ಬೋನುಗಳಿಂದ ಹಿಡಿಯಲಾಗುತ್ತದೆ. ಸರ್ವೋತ್ಕೃಷ್ಟವಾದ ಸಮುದ್ರ ನಳ್ಳಿಗಳು ಮತ್ತು ಮರುವಾಯಿಗಳು ಕೆನಡದಿಂದ; ಸಿಂಪಿಗಳು ಅಮೆರಿಕ ಸಂಯುಕ್ತ ಸಂಸ್ಥಾನ, ರೋಡ್ ದ್ವೀಪಗಳು, ಕನ್ನೆಕ್ಟಿಕಟ್, ಲಾಂಗ್ ಐಲೆಂಡ್‌ಗಳು, ಚೆಸಾಪೀಕ್ ಕೊಲ್ಲಿ, ಭಾರತ ಮತ್ತು ಇತರ ರಾಷ್ಟ್ರಗಳಿಂದ ದೊರಕುತ್ತವೆ. ನ್ಯೂ ಇಂಗ್ಲೆಂಡ್‌ನ ತೀರ ಇಚ್ಚಿಪ್ಪು ಮೀನುಗಾರಿಕೆಗೆ ಹೆಸರಾಂತಿದೆ.

ಮೀನು ಸಾಕಣೆ ಕೇಂದ್ರಗಳು[ಬದಲಾಯಿಸಿ]

ಮೀನು ಸಾಕಣೆಯು ಜಲಚರ ಕೃಷಿಯ ಪ್ರಧಾನ ರೂಪವಾಗಿದೆ. ಇತರ ವಿಧಾನಗಳು ಸಾಗರಜಲಕೃಷಿ ಅಡಿಯಲ್ಲಿ ಬರಬಹುದು. ಇದು ಸಾಮಾನ್ಯವಾಗಿ ಆಹಾರಕ್ಕಾಗಿ ಟ್ಯಾಂಕ್‌ಗಳು ಅಥವಾ ಆವರಣಗಳಲ್ಲಿ ವಾಣಿಜ್ಯಿಕವಾಗಿ ಮೀನುಗಳನ್ನು ಸಾಕುವುದನ್ನು ಒಳಗೊಂಡಿರುತ್ತದೆ. ಮನರಂಜನಾ ಮೀನುಗಾರಿಕೆಗಾಗಿ ಅಥವಾ ಜಾತಿಯ ನೈಸರ್ಗಿಕ ಜನಸಂಖ್ಯೆಗೆ ಪೂರಕವಾಗಿ ಮರಿ ಮೀನುಗಳನ್ನು ಕಾಡಿಗೆ ಬಿಡುವ ಸೌಕರ್ಯವನ್ನು ಸಾಮಾನ್ಯವಾಗಿ ಮೀನು ಮೊಟ್ಟೆ ಕೇಂದ್ರ ಎಂದು ಕರೆಯಲಾಗುತ್ತದೆ. ಸಾಲ್ಮನ್, ಕಾರ್ಪ್, ಟಿಲಾಪಿಯಾ, ಕ್ಯಾಟ್‌ಫಿಶ್ ಮತ್ತು ಟ್ರೌಟ್ ಇತ್ಯಾದಿ ಮೀನು ಸಾಕಣೆ ಕೇಂದ್ರಗಳಲ್ಲಿ ಬೆಳೆಸಲ್ಪಡುವ ಮೀನು ಜಾತಿಗಳಾಗಿವೆ.

ವಾಣಿಜ್ಯ ಮೀನುಗಾರಿಕೆಯಿಂದ ನೈಸರ್ಗಿಕ ಮೀನುಗಾರಿಕೆ ಸ್ಥಳಗಳಿಗೆ ಹೆಚ್ಚಿದ ಬೇಡಿಕೆಗಳು ವ್ಯಾಪಕವಾದ ಮಿತಿಮೀರಿದ ಮೀನುಗಾರಿಕೆಗೆ ಕಾರಣವಾಗಿದೆ. ಮೀನಿಗೆ ಹೆಚ್ಚುತ್ತಿರುವ ಮಾರುಕಟ್ಟೆ ಬೇಡಿಕೆಗೆ ಮೀನು ಸಾಕಣೆಯು ಪರ್ಯಾಯ ಪರಿಹಾರವನ್ನು ನೀಡುತ್ತದೆ.

ಮೀನು ಉತ್ಪನ್ನಗಳು[ಬದಲಾಯಿಸಿ]

ಪ್ರಪಂಚದಾದ್ಯಂತ ಮೀನು ಮತ್ತು ಮೀನು ಉತ್ಪನ್ನಗಳನ್ನು ಆಹಾರವಾಗಿ ಸೇವಿಸಲಾಗುತ್ತದೆ. ಇತರ ಸಮುದ್ರಾಹಾರಗಳೊಂದಿಗೆ, ಇದು ಉತ್ತಮ ಗುಣಮಟ್ಟದ ಪ್ರೋಟೀನ್‌ನ ವಿಶ್ವದ ಪ್ರಧಾನ ಮೂಲವನ್ನು ಒದಗಿಸುತ್ತದೆ: ಪ್ರಪಂಚದಾದ್ಯಂತ ೧೪-೧೬ ಪ್ರತಿಶತ ಪ್ರಾಣಿಗಳು ಪ್ರೋಟೀನ್‌ನ್ನು ಸೇವಿಸುತ್ತವೆ. ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರು ತಮ್ಮ ಪ್ರೋಟೀನ್‌ನ ಪ್ರಾಥಮಿಕ ಮೂಲಕ್ಕಾಗಿ ಮೀನನ್ನು ಅವಲಂಬಿಸಿದ್ದಾರೆ.[೩೪] ಶೇಕಡಾ 60 ರಿಂದ 82 ರವರೆಗೆ ತೇವಾಂಶ, ಶೇಕಡಾ 13ರಿಂದ 20ರ ವರೆಗೆ ಪ್ರೋಟೀನ್ ಹಾಗೂ ಕೊಂಚ ಪರಿಮಾಣದಲ್ಲಿ ಕೊಬ್ಬನ್ನುಳ್ಳ ಮೀನಿನ ಮಾಂಸ ಒಂದು ಉತ್ಕೃಷ್ಟ ಆಹಾರ. ಜೊತೆಗೆ ಮೀನಿನ ಮಾಂಸದಲ್ಲಿ ಗಣನೀಯ ಪರಿಮಾಣದಲ್ಲಿ ಯಥೋಚಿತ ಮತ್ತು ಯೋಗ್ಯ ರೂಪದಲ್ಲಿ ಆಹಾರದ ಅತ್ಯವಶ್ಯ ವಸ್ತುಗಳಾದ ವಿಟಮಿನ್‌ಗಳು ಅಡಕಗೊಂಡಿವೆ.

ಮೀನು ಮತ್ತು ಇತರ ಜಲಚರಗಳನ್ನು ವಿವಿಧ ಆಹಾರ ಮತ್ತು ಆಹಾರೇತರ ಉತ್ಪನ್ನಗಳಾಗಿ ಸಂಸ್ಕರಿಸಲಾಗುತ್ತದೆ, ಉದಾಹರಣೆಗೆ ಶಾರ್ಕ್ ಚರ್ಮದ ತೊಗಲು, ಕಟಲ್‍ಫಿಶ್‌ನ ಮಸಿಯಂಥ ಸ್ರಾವಗಳಿಂದ ತಯಾರಿಸಿದ ವರ್ಣದ್ರವ್ಯಗಳು, ವೈನ್ ಮತ್ತು ಬಿಯರ್‌ನ ಶೋಧನೆಗಾಗಿ ಬಳಸುವ ಐಸಿಂಗ್ಲಾಸ್, ರಸಗೊಬ್ಬರವಾಗಿ ಬಳಸುವ ಮೀನು ಎಮಲ್ಷನ್, ಮೀನಿನ ಅಂಟು, ಮೀನಿನ ಎಣ್ಣೆ ಮತ್ತು ಮೀನು ಹಿಂಡಿ.

ಮೀನುಗಳನ್ನು ಸಂಶೋಧನೆ ಮತ್ತು ಅಕ್ವೇರಿಯಂ ವ್ಯಾಪಾರಕ್ಕಾಗಿ ಜೀವಂತವಾಗಿ ಸಂಗ್ರಹಿಸಲಾಗುತ್ತದೆ.

ಮೀನುಗಳ ಮಾಂಸದ ಕಣಕದಿಂದ ತಯಾರಿಸಲಾಗುವ ಮೀನು ಸಾಸೆಜ್, ಮೀನಿನ ದೋಸೆ ಉಂಡೆ (ರಿಸೋಲ್ಸ್). ಆ್ಯಂಚೊವಿ ಪಿಷ್ಟದ ವ್ಯಂಜನ, ಮೀನುದೋಸೆ, ಕ್ಯಾವೀಯಾರ್ ವ್ಯಂಜನ ಮುಂತಾದವು ಕೂಡ ಮೀನುಗಾರಿಕೆಯ ಉಪೋತ್ಪನ್ನಗಳೇ ಆಗಿವೆ. ಅಲ್ಲದೆ ಇತರ ಉತ್ಪನ್ನಗಳಾದ ಶಾರ್ಕ್ ಮಾಂಸದ ಕಣಕ, ಶಾರ್ಕ್ ಮೀನಿನ ಯಕೃತ್ತಿನ ಎಣ್ಣೆ, ಮೀನಿನ ಮರವಜ್ರ, ಮೀನಂಟುವಜ್ರ ಮುಂತಾದವು ಪ್ರಸಿದ್ಧವಾಗಿವೆ. ಕಡಿಮೆ ಬೆಲೆಯ ಮೀನುಗಳಿಂದ ಗೊಬ್ಬರ ಮತ್ತು ಪಶು ಆಹಾರ ತಯಾರಿಕೆಯಲ್ಲಿಯೂ ಬಳಸಲಾಗುವುದು. ಸ್ತನಿಗಳಾದ ತಿಮಿಂಗಲ, ಸೀಲ್ ಪ್ರಾಣಿ, ಕಡಲಸಿಂಹ, ಕಡಲಹಸು ಹಾಗೂ ಉರಗ ವರ್ಗದ ಆಮೆಗಳ ಮೀನುಗಾರಿಕೆ ಸಹ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.

ಮೀನು ಹಿಡಿದ ಮೇಲೆ ಅವನ್ನು ಉಪಯೋಗಿಸುವ ತನಕ ಜೋಪಾನಮಾಡಿ ರಕ್ಷಿಸುವುದು ಅತ್ಯಂತ ಆವಶ್ಯಕ. ಮೀನು, ಸಿಗಡಿ, ಸಿಂಪಿಗಳ ಮಾಂಸ ಶೀಘ್ರವಾಗಿ ಕೊಳೆತು ಹೋಗುವಂಥ ಸರಕು. ಮೀನು ಸತ್ತ ತತ್‌ಕ್ಷಣವೇ ಬ್ಯಾಕ್ಟಿರಿಯಾದಂಥ ಸೂಕ್ಷ್ಮ ಜೀವಿಗಳ ಆಕ್ರಮಣದಿಂದಾಗಿ, ಹಾಗೂ ಅದರ ದೇಹದಲ್ಲಿರುವ ಕಿಣ್ವಗಳ ಕ್ರಿಯೆಯಿಂದಾಗಿ ಕೆಲವು ಅನಪೇಕ್ಷಣೀಯ ಬದಲಾವಣೆಗಳಿಗೆ ಒಳಗಾಗುವುದರಿಂದ ಅದನ್ನು ಹಾಗೆಯೇ ಬಿಟ್ಟರೆ ಕೊನೆಯಲ್ಲಿ ಅದು ಮಾನವನ ಉಪಯೋಗಕ್ಕೆ ಬಾರದಂತೆ ಅನುಪಯುಕ್ತವಾಗುತ್ತದೆ. ಹಿಡಿದ ಮೀನುಗಳನ್ನು ದೀರ್ಘಕಾಲ ಕೆಡದಂತೆ ಸಂರಕ್ಷಿಸಲು ಆಧುನಿಕ ಸಾಧನಗಳನ್ನು ವಿಧಾನಗಳನ್ನು ರೂಪಿಸಲಾಗಿದೆ. ಆಗತಾನೆ ಹಿಡಿದ ಮೀನುಗಳನ್ನು ದೂರದ ಸ್ಥಳಗಳಿಗೆ ಒಯ್ಯಲು ಮಂಜುಗಡ್ಡೆಯ ಬಳಕೆ ವ್ಯಾಪಕವಾಗಿದೆ. ಅಲ್ಲದೆ ಬಹುಕಾಲ ಕೆಡದಂತೆ ಸಂಗ್ರಹಿಸಲು ಹಲವಾರು ವಿಧಾನಗಳು ಬಳಕೆಯಲ್ಲಿವೆ. ಉದಾ. ಶೀತ ಘನೀಕರಣ, ಡಬ್ಬೀಕರಣ, ಒಣಗಿಸುವಿಕೆ ಇತ್ಯಾದಿ.

ಮೀನು ಸಂಸ್ಕರಣೆ[ಬದಲಾಯಿಸಿ]

ಉಪಯೋಗದಲ್ಲಿರುವ ಮೀನು ಸಂಸ್ಕರಣದ ಮುಖ್ಯ ವಿಧಾನಗಳೆಂದರೆ:

  1. ಉಪ್ಪು ಹಾಕುವಿಕೆ ಅಥವಾ ಉಪ್ಪುನೀರಿನಲ್ಲಿ ಉನಿ ಹಾಕುವಿಕೆ: ಉಪ್ಪು ಹಾಕುವಿಕೆ ಪ್ರಪಂಚಾದ್ಯಂತ ಬಳಕೆಯಲ್ಲಿರುವ ಒಂದು ಸಾಮಾನ್ಯ ವಿಧಾನ. ಯೂರೋಪ್ ಹಾಗೂ ಅಮೆರಿಕಗಳಲ್ಲಿ ಕಾಡ್‌ಮೀನುಗಳನ್ನು ಹೀಗೆ ಉಪ್ಪು ಹಾಕಿ ಒಣಗಿಸುವುದು ಒಂದು ಪ್ರಮುಖ ಉದ್ಯಮವಾಗಿದೆ. ಈ ವಿಧಾನ ಉಳಿದ ದೇಶಗಳಲ್ಲಿಯೂ ಇತ್ತೀಚೆಗೆ ವ್ಯಾಪಕವಾಗುತ್ತಿದೆ. ಕೆಲವು ವೇಳೆ ಇಡೀ ಕಾರ್ಯವಿಧಾನವನ್ನು ದಡದ ಮೇಲೆಯೇ ನಡೆಸಲಾಗುವುದು. ಮೀನುಗಳನ್ನು ಹಿಡಿದ ತತ್‌ಕ್ಷಣವೇ ಅವುಗಳ ತಲೆ ತೆಗೆದು ದೇಹವನ್ನು ಸೀಳಿ ಶುಚಿಮಾಡಿ ಉಪ್ಪುಹಾಕಿ ಉಪ್ಪಿನ ಸ್ತರಗಳ ಮಧ್ಯೆ ಇರುವಂತೆ ಮಾಡಿ ಮೀನುಕುಳಿಗಳಲ್ಲಿ ರಾಶಿ ಮಾಡಲಾಗುತ್ತದೆ. ಅನಂತರ ಸಂಸ್ಕರಣ ಸ್ಥಳಕ್ಕೆ ಉಪ್ಪೂರಿಸಿದ ಮೀನುಗಳನ್ನು ಸಾಗಿಸುತ್ತಾರೆ. ಇಲ್ಲಿಯೇ ಅವುಗಳನ್ನು ಒಣಗಿಸಿ ರಫ್ತುಮಾಡಲು ಪೀಪಾಯಿಗಳಲ್ಲಿ ಕೊನೆಗೆ ಗಂಟುಕಟ್ಟಿ ಇಡುತ್ತಾರೆ. ಅನೇಕ ಶತಮಾನಗಳ ತನಕ ಉಪ್ಪು ಹಾಕಿದ ಮೀನುಗಳು (ಕಾಡ್) ಯೂರೊಪಿನ ವಿವಿಧ ದೇಶಗಳ ಅರ್ಥವ್ಯವಸ್ಥೆಯಲ್ಲಿ ಒಂದು ಪ್ರಮುಖ ಪಾತ್ರವಹಿಸಿದ್ದವೆಂಬುದು ಉಲ್ಲೇಖಾರ್ಹ.
  2. ಹೊಗೆ ಹಾಕುವಿಕೆ: ಮೀನಿಗೆ ಹೊಗೆ ಊಡುವುದು ಉಪ್ಪು ಹಾಕುವುದರ ಮತ್ತು ಒಣಗಿಸುವುದರ ವಿಧಾನದಂತೆಯೇ ಇದೆ. ಹೊಗೆ ಹಾಕುವುದು ಸಾಮಾನ್ಯವಾಗಿ ಹೆರಿಂಗ್, ವೈಟಿಂಗ್, ಕಾಡ್, ಲಿಂಗ್, ಸೈಥ್, ಹ್ಯಾಡಕ್, ಮೀಸೆಮೀನು, ಬಂಗುಡೆ ಮುಂತಾದ ಮೀನುಗಳಿಗೆ ಅನ್ವಯವಾಗುತ್ತದೆ. ಆದಿಮಾನವ ತಾನು ಹಿಡಿದ ಮೀನನ್ನು ಶಿಬಿರದ ಹೊರಗೆ ಬೆಂಕಿಯ ಮೇಲೆ ತೂಗಾಡಿಸುತ್ತ ಹೊಗೆ ಊಡುತ್ತಿದ್ದ. ಈಗಲೂ ಅನೇಕ ಹಳೆಯ ಜನಾಂಗಗಳಲ್ಲಿ ಈ ಪದ್ಥತಿ ಉಂಟು. ಆದರೆ ವಾಣಿಜ್ಯ ಮೀನುಗಾರಿಕೆ ಬೆಳೆದಂತೆ ಹೆಚ್ಚಿನ ಸಾಮರ್ಥ್ಯದ ವಿಧಾನಗಳು ಅಗತ್ಯವಾದವು. ಆಧುನಿಕ ಹೊಗೆಮನೆಯಲ್ಲಿ ಒಂದೇ ಸಮಯದಲ್ಲಿ ಸಾವಿರಾರು ಮೀನುಗಳನ್ನು ಸಂಸ್ಕರಿಸಬಹುದಾಗಿದೆ. ಬೆಂಕಿಮಾಡಲು ಉಪಯೋಗಿಸುವ ಮರಗಳು ವಿಶೇಷವಾದ ಪ್ರಾಮುಖ್ಯ ಪಡೆದಿವೆ. ಗಡಸು ಮರಗಳಾದ ಓಕ್, ಹಿಕರಿ, ಮಹಾಗನಿ ಮುಂತಾದ ಮರಗಳನ್ನು ಸಾಮಾನ್ಯವಾಗಿ ಈ ಕಾರ್ಯಕ್ಕೆ ಬಳಸಲಾಗುತ್ತದೆ. ಏಕೆಂದರೆ ಈ ಮರಗಳಲ್ಲಿ ಕಡಿಮೆ ಮೊತ್ತದ ಎಣ್ಣೆ ಹಾಗೂ ರಾಳಗಳಿರುವವಲ್ಲದೆ ಇವು ಮೀನಿಗೆ ಒಂದು ಬಗೆಯ ರುಚಿಯನ್ನು ಸಹ ಕೊಡಬಲ್ಲವು. ನೇರ ಮರವನ್ನೇ ಉರಿಸಿ ಹೊಗೆ ಉಂಟುಮಾಡುವುದಿಲ್ಲ. ಆದರೆ ಮರದ ಪುಡಿಯನ್ನು ಉರಿಸುತ್ತ ದಟ್ಟವಾದ ಹೊಗೆಯ ಮೋಡಗಳನ್ನು ಉತ್ಪತ್ತಿಮಾಡಿ ಮೀನುಗಳನ್ನು ಸುಡುತ್ತಾರೆ. ಹೊಗೆ ಊಡುವುದರ ಮೊದಲು ಮೀನಿನ ತಲೆ ಕತ್ತರಿಸಿ ಕೆಳಗಿನ ಭಾಗದವರೆಗೆ ಸೀಳಿ, ಒಳಗಿನ ಭಾಗಗಳನ್ನು ತೆಗೆದು ಹಾಕಲಾಗುತ್ತದೆ. ಅನಂತರ ಅದನ್ನು ತೊಳೆದು ಅಲ್ಪಕಾಲದ ತನಕ ಉಪ್ಪುನೀರಿನ ಸಾರದ್ರಾವಣದಲ್ಲಿ ಮುಳಿಗಿಸಿ ಒಣಗಿಸಿ 5 ರಿಂದ 6 ಗಂಟೆಯ ತನಕ ಹೊಗೆಗೆ ಹಿಡಿಯಲಾಗುತ್ತದೆ.
  3. ಒಣಗಿಸುವಿಕೆ: ಮೀನಿನ ಸಂಸ್ಕರಣದ ಇನ್ನೊಂದು ವಿಧಾನ ಒಣಗಿಸುವಿಕೆ. ಬಿಸಿಲು ಹೆಚ್ಚಾಗಿರುವಂಥ ಉಷ್ಣವಲಯ ದೇಶಗಳಲ್ಲಿ ಈ ಕ್ರಮ ಹೆಚ್ಚು ಪ್ರಚಲಿತವಿದೆ. ಒಣಗಿದ ಮೀನುಗಳೇ ಪ್ರಧಾನ ಆಹಾರವಾಗಿರುವ ದೇಶಗಳಾದ ಆಫ್ರಿಕ, ಭಾರತ, ಮಲಯ, ಫಿಲಿಪೀನ್ಸ್, ಚೀನ ಹಾಗೂ ಜಪಾನ್‌ಗಳಲ್ಲಿ ಈ ವಿಧಾನ ಜನಪ್ರಿಯ ಆಗಿದೆ. ಸಾಮಾನ್ಯವಾಗಿ ಮೀನುಗಳನ್ನು ಸರಳವಾಗಿ ಕತ್ತರಿಸಿ, ಒಳಗಿನ ಭಾಗಗಳನ್ನು ತೆಗೆದುಹಾಕಿ ಬಿಸಿಲಿನಲ್ಲಿ ಒಣಗಲು ಬಿಡುತ್ತಾರೆ. ಆದರೆ ಕೆಲವು ವೇಳೆ ಒಣಗಿಸುವ ಮೊದಲು ಸ್ವಲ್ಪಮಟ್ಟಿಗೆ ಉಪ್ಪಿನಲ್ಲಿ ಹಾಕುವುದುಂಟು.
  4. ಶೀತ ಘನೀಕರಣ: ಶೀತ ಘನೀಕರಣ ಒಂದು ಆಧುನಿಕ ಆಹಾರ ಸಂರಕ್ಷಣಾ ವಿಧಾನ. ಇದರಲ್ಲಿ ಮೀನುಗಳನ್ನು ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಕೆಡದಂತೆ ರಕ್ಷಿಸಬಹುದಾಗಿದೆ. ವಿದೇಶಗಳಿಗೆ ರಫ್ತು ಮಾಡಲಾಗುವ ಮೀನುಗಳು, ಸೀಗಡಿಗಳನ್ನು ಸೂಕ್ತ ರೀತಿಯಲ್ಲಿ ಪೊಟ್ಟಣೀಕರಿಸಿ ಅವುಗಳನ್ನು ಶೀತಘನೀಕರಣ ಯಂತ್ರದಲ್ಲಿ ಸುಮಾರು 1 ರಿಂದ 1.50 ಗಂಟೆ ಅವಧಿಯಲ್ಲಿ –250 ಸೆ ನಿಂದ 400 ಸೆ. ಗೆ ತರಲಾಗುತ್ತದೆ. ತದನಂತರ ಇವುಗಳನ್ನು -180 ಸೆ ಉಷ್ಣತೆಯಲ್ಲಿ ಶೇಖರಿಸಿಡಲಾಗುವುದು. ಈ ವಿಧಾನದಿಂದ ಆಹಾರವನ್ನು 6 ತಿಂಗಳ ವರೆಗೆ ಉತ್ತಮ ಸ್ಥಿತಿಯಲ್ಲಿಡಬಹುದು.
  5. ಡಬ್ಬಿಜೋಪಾಸನೆ: ಮೀನು ಸಂಸ್ಕರಣದ ಇನ್ನೊಂದು ವಿಧಾನವೆಂದರೆ ಡಬ್ಬಿಜೋಪಾಸನೆ. ಇದು ಸಂರಕ್ಷಣೆಯ ಆಧುನಿಕ ವಿಧಾನವಾಗಿದ್ದು ಅನೇಕ ಅನುಕೂಲಗಳನ್ನು ಪಡೆದಿದೆ. ಅಮೆರಿಕದಲ್ಲಂತೂ ಇದು ಅತ್ಯಂತ ಮುಖ್ಯವಾದ ಉದ್ಯಮವೇ ಆಗಿಹೋಗಿದೆ. ಅಮೆರಿಕದಲ್ಲಿ ಪೆಸಿಫಿಕ್ ಸ್ಯಾಲ್ಮನ್, ಯೂರೋಪಿನಲ್ಲಿ ಹೆರಿಂಗ್, ಸ್ಪ್ರಾಟ್, ಬೂತಾಯಿ, ಆ್ಯಂಚೊವಿ, ಬಂಗುಡೆ ಹಾಗು ಟನ್ನಿಗಳು, ಫ್ರಾನ್ಸ್ ಹಾಗೂ ಪೋರ್ಚುಗಲ್‌ಗಳಲ್ಲಿ ಬೂತಾಯಿ ಉದ್ಯಮ ಅತ್ಯಂತ ಮುಖ್ಯವೆನಿಸಿವೆ. ಡಬ್ಬಿಜೋಪಾಸನೆ ಈ ರೀತಿ ಇದೆ: ಮೊದಲು ಮೀನಿನ ತಲೆ ಹಾಗೂ ಒಳಭಾಗಗಳನ್ನು ತೆಗೆದುಹಾಕಿ ದೇಹಕ್ಕೆ ಸ್ವಲ್ಪವಾಗಿ ಉಪ್ಪನ್ನು ಚಿಮುಕಿಸಲಾಗುತ್ತದೆ. ಅನಂತರ ಸ್ವಲ್ಪ ಕಾಲದ ತನಕ ಉಪ್ಪು ನೀರಿನೊಳಗೆ ಮುಳುಗಿಸಿ ಹೊರತೆಗೆದು ತೊಳೆದು ಒಣಗಿಸಲಾಗುತ್ತದೆ. ಕೊನೆಯಲ್ಲಿ ಅದನ್ನು ಆಲಿವ್ ಮುಂತಾದ ಎಣ್ಣೆಯಲ್ಲಿ ಎರಡು ನಿಮಿಷಗಳ ತನಕ ಕರಿಯಲಾಗುತ್ತದೆ. ಜೊತೆಗೆ ಇತರ ಸಂಬಾರ ಘಟಕಗಳಾದ ಲಿಂಬೆ ಎಣ್ಣೆ, ಲವಂಗ, ಬೇ ಎಲೆಗಳ ಬಟ್ಟಿಯಿಂದ ಪಡೆದ ಸುಗಂಧದ್ರವ್ಯ, ಮಸಾಲೆ ಅಣಬೆ ಮುಂತಾದ ಪದಾರ್ಥಗಳೊಂದಿಗೆ ಮಿಶ್ರ ಮಾಡಲಾಗುತ್ತದೆ. ಕೊನೆಗೆ ಡಬ್ಬಿಯೊಳಗೆ ಆಲಿವ್ ಎಣ್ಣೆ ಹಾಕಿ ಮೀನನ್ನು ತುಂಬಿ ಗಾಳಿ ಸೇರದಂತೆ ಮೊಹರು ಮಾಡಲಾಗುತ್ತದೆ. ನಾರ್ವೆಯಲ್ಲಿ ಸಹ ಸ್ಪ್ರಾಟ್ (ಕ್ಲೂಪಿಯ ಸ್ಪ್ರಾಟಸ್) ಮತ್ತು ಹೆರಿಂಗ್ ಎಳೆಯ ಮೀನುಗಳನ್ನು (ಕ್ಲೂಪಿಯ ಹ್ಯಾರಂಗಸ್) ಇದೇ ರೀತಿ ಸಂಸ್ಕರಿಸಲಾಗುತ್ತದೆ.

ಮೀನುಗಾರಿಕೆ ನಿರ್ವಹಣೆ[ಬದಲಾಯಿಸಿ]

ಮೀನುಗಾರಿಕೆ ನಿರ್ವಹಣೆಯು ಮೀನುಗಾರಿಕೆ ವಿಜ್ಞಾನವನ್ನು ಬಳಸಿಕೊಂಡು ಮೀನುಗಾರಿಕೆ ಸಂಪನ್ಮೂಲಗಳನ್ನು ರಕ್ಷಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತದೆ. ಆಧುನಿಕ ಮೀನುಗಾರಿಕೆಯ ನಿರ್ವಹಣೆಯನ್ನು ಹಲವುವೇಳೆ ನಿರ್ವಹಣಾ ನಿಯಮಗಳ ಸರ್ಕಾರಿ ವ್ಯವಸ್ಥೆ ಎಂದು ಕರೆಯಲಾಗುತ್ತದೆ ಮತ್ತು ನಿಯಮಗಳ ಅನುಷ್ಠಾನಕ್ಕೆ ನಿರ್ವಹಣಾ ವಿಧಾನಗಳ ಮಿಶ್ರಣವಾಗಿರುತ್ತದೆ, ಇವುಗಳನ್ನು ಮೇಲ್ವಿಚಾರಣಾ ನಿಯಂತ್ರಣ ಮತ್ತು ಕಣ್ಗಾವಲು ವ್ಯವಸ್ಥೆಯಿಂದ ಜಾರಿಗೆ ತರಲಾಗುತ್ತದೆ.

ಮೀನುಗಾರಿಕೆ ವಿಜ್ಞಾನವು ಮೀನುಗಾರಿಕೆಯನ್ನು ನಿರ್ವಹಿಸುವ ಮತ್ತು ಅರ್ಥಮಾಡಿಕೊಳ್ಳುವ ಶೈಕ್ಷಣಿಕ ವಿಭಾಗವಾಗಿದೆ. ಇದು ಬಹು ಶಿಕ್ಷಣ ವಿಭಾಗೀಯ ವಿಜ್ಞಾನವಾಗಿದ್ದು, ಮೀನುಗಾರಿಕೆಯ ಸಮಗ್ರ ಚಿತ್ರಣವನ್ನು ಒದಗಿಸುವ ಪ್ರಯತ್ನದಲ್ಲಿ ಸಮುದ್ರಶಾಸ್ತ್ರ, ಸಮುದ್ರ ಜೀವಶಾಸ್ತ್ರ, ಸಮುದ್ರ ಸಂರಕ್ಷಣೆ, ಪರಿಸರ ವಿಜ್ಞಾನ, ಜನಸಂಖ್ಯಾ ಚಲನಶಾಸ್ತ್ರ, ಅರ್ಥಶಾಸ್ತ್ರ ಮತ್ತು ನಿರ್ವಹಣೆಯ ವಿಭಾಗಗಳನ್ನು ಬಳಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಜೈವಿಕ ಅರ್ಥಶಾಸ್ತ್ರದಂತಹ ಹೊಸ ವಿಭಾಗಗಳು ಹೊರಹೊಮ್ಮಿವೆ.

ಸಮರ್ಥನೀಯತೆ[ಬದಲಾಯಿಸಿ]

ಮೀನುಗಾರಿಕೆಯ ದೀರ್ಘಾವಧಿಯ ಸುಸ್ಥಿರತೆಯಲ್ಲಿ ಒಳಗೊಂಡಿರುವ ಸಮಸ್ಯೆಗಳೆಂದರೆ ಮಿತಿಮೀರಿದ ಮೀನುಗಾರಿಕೆ, ಅನುದ್ದೇಶಿತ ಬೇಟೆ, ಸಮುದ್ರ ಮಾಲಿನ್ಯ, ಮೀನುಗಾರಿಕೆಯ ಪಾರಿಸರಿಕ ಪರಿಣಾಮಗಳು, ಹವಾಮಾನ ಬದಲಾವಣೆ ಮತ್ತು ಮೀನು ಸಾಕಣೆ.

ಸಂರಕ್ಷಣಾ ಸಮಸ್ಯೆಗಳು ಸಮುದ್ರ ಸಂರಕ್ಷಣೆಯ ಭಾಗವಾಗಿವೆ. ಇವನ್ನು ಮೀನುಗಾರಿಕೆ ವಿಜ್ಞಾನ ಕಾರ್ಯಕ್ರಮಗಳಲ್ಲಿ ನಿಭಾಯಿಸಲಾಗುತ್ತದೆ. ಹಿಡಿಯಲು ಎಷ್ಟು ಮೀನುಗಳು ಲಭ್ಯವಿವೆ ಮತ್ತು ಅವುಗಳನ್ನು ಹಿಡಿಯಬೇಕೆಂಬ ಮಾನವರ ಬಯಕೆಯ ನಡುವೆ ಹೆಚ್ಚುತ್ತಿರುವ ಅಂತರವಿದೆ, ಪ್ರಪಂಚದ ಜನಸಂಖ್ಯೆಯು ಹೆಚ್ಚಾದಂತೆ ಈ ಸಮಸ್ಯೆಯು ಉಲ್ಬಣಗೊಳ್ಳುತ್ತದೆ.

ಇತರ ಪಾರಿಸರಿಕ ಸಮಸ್ಯೆಗಳಂತೆಯೇ, ತಮ್ಮ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ಮೀನುಗಾರರು ಮತ್ತು ಭವಿಷ್ಯದ ಮೀನಿನ ಜನಸಂಖ್ಯೆಯು ಸಮರ್ಥನೀಯವಾಗಬೇಕಾದರೆ ಕೆಲವು ಮೀನುಗಾರಿಕೆ ಕೇಂದ್ರಗಳು ಮೀನುಗಾರಿಕೆಯನ್ನು ಮಿತಿಗೊಳಿಸಬೇಕು ಅಥವಾ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಅರಿತುಕೊಂಡಿರುವ ಮೀನುಗಾರಿಕೆ ವಿಜ್ಞಾನಿಗಳ ನಡುವೆ ಸಂಘರ್ಷವೂ ಉಂಟಾಗಬಹುದು.

ಪ್ರಾಣಿ ಕಲ್ಯಾಣ ಕಾಳಜಿಗಳು[ಬದಲಾಯಿಸಿ]

ಐತಿಹಾಸಿಕವಾಗಿ, ಮೀನುಗಳು ನೋವನ್ನು ಅನುಭವಿಸಬಹುದೆಂದು ಕೆಲವರು ಅನುಮಾನಿಸಿದ್ದರು. ಸಸ್ತನಿಗಳಂತೆಯೇ ನೋವಿನ ಪ್ರಚೋದಕಗಳಿಗೆ (ಉದಾಹರಣೆಗೆ, ಜೇನುನೊಣದ ವಿಷದ ಚುಚ್ಚುಮದ್ದು) ಮೀನುಗಳು ಪ್ರತಿಕ್ರಿಯಿಸುತ್ತವೆ ಎಂದು ಪ್ರಯೋಗಾಲಯದ ಪ್ರಯೋಗಗಳು ತೋರಿಸಿವೆ.[೩೫][೩೬] ಇದು ವಿವಾದಾಸ್ಪದವಾಗಿದ್ದು ಚರ್ಚಾಸ್ಪದವಾಗಿದೆ.[೩೭] ಮೀನು ಸಾಕಣೆಯ ವಿಸ್ತರಣೆ, ಜೊತೆಗೆ ಸಮಾಜದಲ್ಲಿ ಪ್ರಾಣಿ ಕಲ್ಯಾಣ ಕಾಳಜಿಗಳು ಮೀನುಗಳನ್ನು ಕೊಲ್ಲುವ ಹೆಚ್ಚು ಮಾನವೀಯ ಮತ್ತು ವೇಗವಾದ ವಿಧಾನಗಳ ಸಂಶೋಧನೆಗೆ ಕಾರಣವಾಯಿತು.[೩೮]

ಮೀನು ಸಾಕಣೆ ಕೇಂದ್ರಗಳಂತಹ ದೊಡ್ಡ-ಪ್ರಮಾಣದ ಕಾರ್ಯಾಚರಣೆಗಳಲ್ಲಿ, ವಿದ್ಯುಚ್ಛಕ್ತಿಯಿಂದ ಮೀನುಗಳನ್ನು ಜಡಗೊಳಿಸುವುದು ಅಥವಾ ಅವುಗಳು ಉಸಿರಾಡಲು ಸಾಧ್ಯವಾಗದಂತೆ ಸಾರಜನಕದಿಂದ ಪೂರಿತ ನೀರಿನಲ್ಲಿ ಹಾಕಿದರೆ, ಇದು ಅವುಗಳನ್ನು ನೀರಿನಿಂದ ಹೊರತೆಗೆಯುವುದಕ್ಕಿಂತ ಹೆಚ್ಚು ವೇಗವಾಗಿ ಅವುಗಳ ಸಾವಿಗೆ ಕಾರಣವಾಗುತ್ತದೆ. ಕ್ರೀಡಾ ಮೀನುಗಾರಿಕೆಗಾಗಿ, ಮೀನುಗಳನ್ನು ಹಿಡಿದ ನಂತರ ತಲೆಯ ಮೇಲೆ ಹೊಡೆದು ನಂತರ ರಕ್ತಸ್ರಾವವಾಗಿಸುವುದರ ಮೂಲಕ ಅಥವಾ ಮೆದುಳಿಗೆ ತೀಕ್ಷ್ಣವಾದ ವಸ್ತುವಿನಿಂದ (ಜಪಾನೀಸ್‌ನಲ್ಲಿ ಪಿಥಿಂಗ್ ಅಥವಾ ಇಕೆ ಜಿಮೆ ಎಂದು ಕರೆಯಲಾಗುತ್ತದೆ) ಇರಿಯುವ ಮೂಲಕ[೩೯] ಕೊಲ್ಲಬೇಕೆಂದು ಶಿಫಾರಸು ಮಾಡಲಾಗಿದೆ. ಮೀನುಗಳನ್ನು ಹಿಡಿದ ಸ್ಥಳಕ್ಕೆ ಹಿಂತಿರುಗಿಸಿದರೆ ಅದು ಕ್ರೂರವಲ್ಲ ಎಂದು ಕೆಲವರು ನಂಬುತ್ತಾರೆ. ಆದರೆ ೨೦೧೮ ರಲ್ಲಿ ನಡೆಸಿದ ಅಧ್ಯಯನವು ಕೊಕ್ಕೆಯು ಮೀನು ಆಹಾರವನ್ನು ಹೀರಿಕೊಳ್ಳುವ ಸೇವನಾ ವಿಧಾನದ ಪ್ರಮುಖ ಭಾಗವನ್ನು ಹಾನಿಗೊಳಿಸುತ್ತದೆ, ಮತ್ತು ನೋವಿನ ಸಮಸ್ಯೆಯನ್ನು ನಿರ್ಲಕ್ಷಿಸುತ್ತದೆ ಎಂದು ಹೇಳುತ್ತದೆ.[೪೦]

ಮೀನು ಹಿಡಿಯುವಾಗ ಮೀನಿನ ಬಲೆಯಲ್ಲಿ ಇತರ ಸಮುದ್ರ ವನ್ಯಜೀವಿಗಳನ್ನು ಹಿಡಿಯುವ ಹೆಚ್ಚಿನ ಸಾಧ್ಯತೆಗಳಿವೆ. ಈ ಅನುದ್ದೇಶಿತ ಬೇಟೆಯನ್ನು ಕಡಿಮೆ ಮಾಡಲು ಸಿದ್ಧಾಂತದಲ್ಲಿ ೧೦೦ ಕ್ಕಿಂತ ಹೆಚ್ಚು ವಿಭಿನ್ನ ಮೀನುಗಾರಿಕೆ ನಿಯಮಗಳಿವೆ.[೪೧]

ಪ್ಲಾಸ್ಟಿಕ್ ಮಾಲಿನ್ಯ[ಬದಲಾಯಿಸಿ]

ತ್ಯಜಿಸಿದ, ಕಳೆದುಹೋದ ಅಥವಾ ತಿರಸ್ಕರಿಸಿದ ಮೀನುಗಾರಿಕೆ ಸಾಧನಗಳಲ್ಲಿ ಬಲೆ, ಏಕ/ಬಹುತಂತು ಹಗ್ಗಗಳು, ಕೊಕ್ಕೆಗಳು, ಹುರಿಗಳು, ಪ್ಲಾವಕಗಳು, ತೇಲುವೆಗಳು, ಮುಳುಗು ಗುಂಡುಗಳು, ಲಂಗರುಗಳು, ಲೋಹೀಯ ವಸ್ತುಗಳು ಮತ್ತು ಕಾಂಕ್ರೀಟ್, ಲೋಹ ಹಾಗೂ ಪಾಲಿಮರ್‌ಗಳಂತಹ ಜೈವಿಕವಾಗಿ ವಿಘಟನೀಯವಲ್ಲದ ವಸ್ತುಗಳಿಂದ ತಯಾರಿಸಿದ ಮೀನನ್ನು ಒಟ್ಟುಗೂಡಿಸುವ ಸಾಧನಗಳು (ಎಫ್‌ಎಡಿ) ಸೇರಿವೆ. ಪ್ರತಿ ವರ್ಷ ಜಾಗತಿಕ ಮೀನುಗಾರಿಕೆ ಸಾಧನಗಳ ನಷ್ಟಗಳು ಎಲ್ಲ ಮೀನುಗಾರಿಕೆ ಬಲೆಗಳಲ್ಲಿ ೫.೭% ರಷ್ಟು, ಎಲ್ಲ ಬಲೆಗಳಲ್ಲಿ ೮.೬% ರಷ್ಟು ಮತ್ತು ಎಲ್ಲ ಹಗ್ಗಗಳಲ್ಲಿ ೨೯% ನಷ್ಟನ್ನು ಒಳಗೊಂಡಿವೆ ಎಂದು ಅಂದಾಜಿಸಲಾಗಿದೆ. ತ್ಯಜಿಸಲ್ಪಟ್ಟ, ಕಳೆದುಹೋದ ಅಥವಾ ತಿರಸ್ಕರಿಸಿಲ್ಪಟ್ಟ ಮೀನುಗಾರಿಕೆ ಸಾಧನಗಳು (ಎಎಲ್‌‌‌‌ಡಿಎಫ್‌‌‌‌ಜಿ) ಸಿಕ್ಕಿಹಾಕಿಕೊಳ್ಳುವಿಕೆ ಮತ್ತು ಸೇವನೆಯ ಮೂಲಕ ಸಮುದ್ರ ಜೀವಿಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು.[೪೨] ಮೀನುಗಾರಿಕೆ ಸಾಧನಗಳು ಎಎಲ್‌‌‌‌ಡಿಎಫ್‌‌‌‌ಜಿ ಆಗುವ ಸಾಧ್ಯತೆಯು ಈ ಕೆಳಗಿನವುಗಳು ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ:

  • ಪಾರಿಸರಿಕ ಅಂಶಗಳು ಬಹುತೇಕವಾಗಿ ಸಮುದ್ರತಳದ ಸ್ಥಳಾಕೃತಿ ಮತ್ತು ಅಡೆತಡೆಗಳಿಗೆ ಸಂಬಂಧಿಸಿವೆ, ಆದಾಗ್ಯೂ ಉಬ್ಬರವಿಳಿತಗಳು, ಪ್ರವಾಹಗಳು, ಅಲೆಗಳು, ಗಾಳಿಗಳು ಮತ್ತು ವನ್ಯಜೀವಿಗಳೊಂದಿಗಿನ ಪರಸ್ಪರ ಕ್ರಿಯೆಯು ಸಹ ಮುಖ್ಯವಾಗಿದೆ.
  • ಕಾರ್ಯಾಚರಣೆಯ ನಷ್ಟಗಳು ಮತ್ತು ನಿರ್ವಾಹಕ ದೋಷಗಳು ಸಾಮಾನ್ಯ ಮೀನುಗಾರಿಕೆ ಕಾರ್ಯಾಚರಣೆಗಳಲ್ಲಿಯೂ ಸಂಭವಿಸಬಹುದು.
  • ಅಸಮರ್ಪಕ ಮೀನುಗಾರಿಕೆ ನಿರ್ವಹಣೆ ಮತ್ತು ಸಮರ್ಪಕ ನಿಯಂತ್ರಣಗಳನ್ನು ಒಳಗೊಂಡಿರದ ನಿಯಮಗಳಂತಹ ಸಮಸ್ಯೆಗಳು ಎಎಲ್‌‌‌‌ಡಿಎಫ್‌‌‌‌ಜಿಯ ಸಂಗ್ರಹಣೆಗೆ ಅಡ್ಡಿಯಾಗಬಹುದು (ಉದಾಹರಣೆಗೆ ಸಂಗ್ರಹಣಾ ಸೌಲಭ್ಯಗಳಿಗೆ ಕಳಪೆ ಅವಕಾಶವಿರಬಹುದು).
  • ಸಂಘರ್ಷಗಳಿಂದ ಉಂಟಾಗುವ ಸಾಧನಗಳ ನಷ್ಟವು ಮುಖ್ಯವಾಗಿ (ಉದ್ದೇಶಪೂರ್ವಕವಾಗಿ ಅಥವಾ ಅನುದ್ದೇಶಿತವಾಗಿ) ಮೀನುಗಾರಿಕೆ ಚಟುವಟಿಕೆಗಳ ಹೆಚ್ಚಿನ ಸಾಂದ್ರತೆಯಿರುವ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಇದು ಸಾಧನಗಳನ್ನು ಎಳೆದುಕೊಂಡು ಹೋಗುವುದು, ಮಲಿನಗೊಳಿಸುವುದು, ಹಾಳುಮಾಡುವುದು ಅಥವಾ ಧ್ವಂಸಗೊಳಿಸುವುದಕ್ಕೆ ಕಾರಣವಾಗುತ್ತದೆ. ಪಾಟ್‌ಗಳು, ಸೆಟ್ ಗಿಲ್‌ನೆಟ್‌ಗಳು ಮತ್ತು ಬಲೆಗಳಂತಹ ನಿಷ್ಕ್ರಿಯ ಮತ್ತು ಉಪೇಕ್ಷಿತ ಸಾಧನಗಳು ವಿಶೇಷವಾಗಿ ಸಂಘರ್ಷದ ಹಾನಿಗೆ ಗುರಿಯಾಗುತ್ತವೆ. ಆರ್ಕ್ಟಿಕ್‌ನಲ್ಲಿ, ಸಂಘರ್ಷಗಳು ಕಳೆದುಹೋದ ಸಾಧನಗಳಿಗೆ ಅತ್ಯಂತ ಸಾಮಾನ್ಯ ಕಾರಣಗಳಾಗಿವೆ.

ಸಾಂಸ್ಕೃತಿಕ ಪ್ರಭಾವ[ಬದಲಾಯಿಸಿ]

  • ಸಮುದಾಯ

ಮೀನುಗಾರಿಕಾ ಹಳ್ಳಿಗಳಂತಹ ಸಮುದಾಯಗಳಿಗೆ, ಮೀನುಗಾರಿಕೆಯು ಆಹಾರ ಮತ್ತು ಕೆಲಸದ ಮೂಲವನ್ನು ಮಾತ್ರವಲ್ಲದೆ ಸಮುದಾಯ ಮತ್ತು ಸಾಂಸ್ಕೃತಿಕ ಗುರುತನ್ನು ಸಹ ಒದಗಿಸುತ್ತದೆ.[೪೩]

  • ಆರ್ಥಿಕ

ಕೆಲವು ಸ್ಥಳಗಳನ್ನು ಮೀನುಗಾರಿಕೆಯ ತಾಣಗಳೆಂದು ಪರಿಗಣಿಸಬಹುದು. ಇಲ್ಲಿ ಗಾಳಹಾಕಿ ಮೀನು ಹಿಡಿಯುವವರು ರಜೆಯಲ್ಲಿ ಅಥವಾ ಸ್ಪರ್ಧೆಗಳಲ್ಲಿ ಭೇಟಿ ನೀಡುತ್ತಾರೆ. ಸಂದರ್ಶಕರಿಂದ ಮೀನುಗಾರಿಕೆಯ ಆರ್ಥಿಕ ಪರಿಣಾಮವು ಕೆಲವು ಸ್ಥಳಗಳಿಗೆ ಪ್ರವಾಸೋದ್ಯಮ ಆದಾಯದ ಗಮನಾರ್ಹ ಅಥವಾ ಪ್ರಾಥಮಿಕ ಚಾಲಕವಾಗಿರಬಹುದು.

  • ಸೂಚ್ಯಾರ್ಥ ಸಂಬಂಧಿ

"ಮೀನುಗಾರಿಕೆ ದಂಡಯಾತ್ರೆ" ಎಂದರೆ ಸಂದರ್ಶಕರು ಅವರು ಬಹಿರಂಗಪಡಿಸಲು ಬಯಸುವುದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ತಮ್ಮ ಗುರಿಗೆ ಮೋಸಮಾಡಲು ಅವರು ಮಾಡುವುದಕ್ಕಿಂತ ಹೆಚ್ಚಿನದನ್ನು ಅವರು ತಿಳಿದಿದ್ದಾರೆಂದು ಸೂಚಿಸುವ ಸನ್ನಿವೇಶವಾಗಿದೆ. ನಕಾರಾತ್ಮಕ ಅರ್ಥವನ್ನು ಹೊಂದಿರುವ ಮೀನುಗಾರಿಕೆ ಪದಗಳ ಇತರ ಉದಾಹರಣೆಗಳೆಂದರೆ: "ಅಭಿನಂದನೆಗಳಿಗಾಗಿ ಮೀನುಗಾರಿಕೆ", "ಕೊಕ್ಕೆ, ಹಗ್ಗ ಮತ್ತು ಮುಳುಗು ಗುಂಡುಗಳಷ್ಟು ಮೂರ್ಖರಾಗುವುದು" (ಕೇವಲ "ಏನನ್ನಾದರೂ ಮಾಡಲು ಆಕರ್ಷಿತನಾಗುವುದನ್ನು" ಮೀರಿ ಮೂರ್ಖರಾಗುವುದು), ಮತ್ತು ಫಿಶಿಂಗ್‌ನ ಅಂತರಜಾಲ ಹಗರಣ, ಇದರಲ್ಲಿ ಬಳಕೆದಾರರು ಸೂಕ್ಷ್ಮ ಮಾಹಿತಿಯನ್ನು ಹಾಕುವ (ಬ್ಯಾಂಕ್ ಕೋಡ್‌ಗಳಂತಹ) ಜಾಲತಾಣವನ್ನು ಮೂರನೇ ವ್ಯಕ್ತಿಯು ನಕಲು ಮಾಡುತ್ತಾನೆ.

  • ಧಾರ್ಮಿಕ

ಮೀನುಗಾರಿಕೆಯು ಕ್ರೈಸ್ತ ಧರ್ಮ,[೪೪][೪೫] ಹಿಂದೂ ಧರ್ಮ, ಮತ್ತು ವಿವಿಧ ಹೊಸ ಯುಗದ[೪೬] ಧರ್ಮಗಳು ಸೇರಿದಂತೆ ಪ್ರಮುಖ ಧರ್ಮಗಳ ಮೇಲೆ ಪ್ರಭಾವ ಬೀರಿದೆ.[೪೭] ಜೀಸಸ್ ಮೀನುಗಾರಿಕೆ ವಿಹಾರಗಳಲ್ಲಿ ಭಾಗವಹಿಸುತ್ತಿದ್ದನು ಎಂದು ಹೇಳಲಾಗಿದೆ, ಮತ್ತು ಬೈಬಲ್‌ನಲ್ಲಿ ವರದಿ ಮಾಡಲಾದ ಹಲವಾರು ಅದ್ಭುತಗಳು ಮತ್ತು ಅನೇಕ ದೃಷ್ಟಾಂತಗಳು ಹಾಗೂ ಕಥೆಗಳು ಮೀನು ಅಥವಾ ಮೀನುಗಾರಿಕೆಯನ್ನು ಒಳಗೊಂಡಿವೆ. ಧರ್ಮಪ್ರಚಾರಕ ಪೀಟರ್[೪೮] ಒಬ್ಬ ಮೀನುಗಾರನಾಗಿದ್ದರಿಂದ, ಮೀನುಗಾರರ ಉಂಗುರವನ್ನು ಪೋಪ್‌ನ ಸಾಂಪ್ರದಾಯಿಕ ವಸ್ತ್ರಗಳಲ್ಲಿ ಬಳಸುವುದನ್ನು ಕ್ಯಾಥೋಲಿಕ್ ಚರ್ಚ್ ಅಳವಡಿಸಿಕೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. Fisheries and Aquaculture in our Changing Climate Policy brief of the FAO for the UNFCCC COP-15 in Copenhagen, December 2009.
  2. "Fisheries and Aquaculture". FAO. Retrieved 1 July 2012.
  3. African Bone Tools Dispute Key Idea About Human Evolution National Geographic News article. (archived 17 January 2006)
  4. Yaowu Hu, Y; Hong Shang, H; Haowen Tong, H; Olaf Nehlich, O; Wu Liu, W; Zhao, C; Yu, J; Wang, C; Trinkaus, E; Richards, M (2009). "Stable isotope dietary analysis of the Tianyuan 1 early modern human". Proceedings of the National Academy of Sciences. 106 (27): 10971–74. Bibcode:2009PNAS..10610971H. doi:10.1073/pnas.0904826106. PMC 2706269. PMID 19581579.
  5. First direct evidence of substantial fish consumption by early modern humans in China PhysOrg.com, 6 July 2009.
  6. Coastal Shell Middens and Agricultural Origins in Atlantic Europe.
  7. "History of fishing – fishing nets, shellfish, boats". quatr.us Study Guides (in ಅಮೆರಿಕನ್ ಇಂಗ್ಲಿಷ್). 12 June 2017. Retrieved 2 May 2018.
  8. "History of fishing – fishing nets, shellfish, boats". quatr.us Study Guides (in ಅಮೆರಿಕನ್ ಇಂಗ್ಲಿಷ್). 12 June 2017. Retrieved 2 May 2018.
  9. "History of a Brixham trawler". JKappeal.org. 2 March 2009. Archived from the original on 2 December 2010. Retrieved 13 September 2010.
  10. Days out: "Gone fishing in Grimsby"[ಶಾಶ್ವತವಾಗಿ ಮಡಿದ ಕೊಂಡಿ] The Independent, 8 September 2002[ಮಡಿದ ಕೊಂಡಿ]
  11. "Pilgrim's restoration under full sail". BBC. Archived from the original on 17 November 2002. Retrieved 2 March 2009.
  12. Sailing trawlers. issuu. 10 January 2014.
  13. "The Steam Trawler".
  14. "HISTORY". Archived from the original on 21 August 2013. Retrieved 16 July 2014.
  15. Berners, Dame Juliana (1496) A treatyse of fysshynge wyth an Angle (transcription by Risa S. Bear).
  16. Berners, Dame Juliana. (2008). In Encyclopædia Britannica. Retrieved 20 June 2008, from Encyclopædia Britannica Online
  17. Andrew N. Herd. "Fly fishing techniques in the fifteenth century". Archived from the original on 22 October 2021. Retrieved 22 October 2021.
  18. Stan L. Ulanski (2003). The Science of Fly-fishing. University of Virginia Press. p. 4. ISBN 978-0-8139-2210-2.
  19. "Welcome To Great Fly Fishing Tips". December 2011. Archived from the original on 27 June 2017. Retrieved 16 July 2014.
  20. "Fishing Tackle Chapter 3" (PDF). CLAM PRODUCTIONS. Archived from the original (PDF) on 18 September 2013. Retrieved 16 July 2014.
  21. Andrew N. Herd. "Fly Fishing in the Years 1800–1850". Archived from the original on 3 July 2014. Retrieved 16 July 2014.
  22. Andrew N. Herd. "Fly Fishing in the Eighteenth Century". Archived from the original on 19 July 2014. Retrieved 16 July 2014.
  23. "fishing". Encyclopedia Britannica. July 2023.
  24. Brown, Jim. A Treasury of Reels: The Fishing Reel Collection of The American Museum of Fly Fishing. Manchester, Vermont: The American Museum of Fly Fishing, 1990.
  25. Schullery, Paul. The Orvis Story: 150 Years of an American Sporting Tradition. Manchester, Vermont, The Orvis Company, Inc., 2006
  26. Fishing with a drone Stuff, 15 December 2015.
  27. Lennox, Robert J; Alós, Josep; Arlinghaus, Robert; Horodysky, Andrij; Klefoth, Thomas; Monk, Christopher T; Cooke, Steven J (2017). "What makes fish vulnerable to capture by hooks? A conceptual framework and a review of key determinants". Fish and Fisheries (in ಇಂಗ್ಲಿಷ್). 18 (5): 986–1010. doi:10.1111/faf.12219. ISSN 1467-2979.
  28. Keegan, William F (1986) New Series, Volume. 88, No. 1., pp. 92–107.
  29. FAO 2007
  30. NOAA: Sport fishing boat
  31. FAO. "The role of Recreational Fisheries in the sustainable management of marine resources | GLOBEFISH | Food and Agriculture Organization of the United Nations". www.fao.org. Food and Agriculture Organization of the United Nations. Retrieved 2 February 2021.
  32. Lange, David. "Topic: Recreational Fishing in the U.S." Statista (in ಇಂಗ್ಲಿಷ್).
  33. FAO Fisheries Section: Glossary: Fishing industry. Retrieved 28 May 2008.
  34. Tidwell, James H. and Allan, Geoff L.
  35. Sneddon, LU (2009). "Pain perception in fish: indicators and endpoints". ILAR Journal. 50 (4): 38–42. doi:10.1093/ilar.50.4.338. PMID 19949250.
  36. Oidtmann, B; Hoffman, RW (Jul–Aug 2001). "Pain and suffering in fish". Berliner und Münchener Tierärztliche Wochenschrift. 114 (7–8): 277–282. PMID 11505801.
  37. "Do fish feel pain? Not as humans do, study suggests". ScienceDaily. 8 August 2013. Retrieved 2 August 2017.
  38. Lund, V; Mejdell, CM; Röcklinsberg, H; Anthony, R; Håstein, T (4 May 2007). "Expanding the moral circle: farmed fish as objects of moral concern". Diseases of Aquatic Organisms. 75 (2): 109–118. doi:10.3354/dao075109. PMID 17578250.
  39. Davie, PS; Kopf, RK (August 2006). "Physiology, behaviour and welfare of fish during recreational fishing and after release". New Zealand Veterinary Journal. 54 (4): 161–172. doi:10.1080/00480169.2006.36690. PMID 16915337. S2CID 1636511.
  40. "Anglers' catch-and-release method stops fish feeding properly, study finds". The Independent (in ಬ್ರಿಟಿಷ್ ಇಂಗ್ಲಿಷ್). 9 October 2018. Retrieved 10 October 2018.
  41. "Facts | Seaspiracy Website". SEASPIRACY (in ಇಂಗ್ಲಿಷ್). Retrieved 2022-03-12.
  42. Environment, U. N. (2021-10-21). "Drowning in Plastics – Marine Litter and Plastic Waste Vital Graphics". UNEP - UN Environment Programme (in ಇಂಗ್ಲಿಷ್). Retrieved 2022-03-23.
  43. "International Collective in Support of Fishworkers". ICSF. 2 March 2012. Retrieved 1 July 2012.
  44. A Misunderstood Analogy for Evangelism Bible Analysis Article
  45. American Bible Society Article Archived 5 September 2008 ವೇಬ್ಯಾಕ್ ಮೆಷಿನ್ ನಲ್ಲಿ. American Bible Society
  46. About Pisces the Fish The Astrology Cafe Monitor
  47. Regensteinn J.M. and Regensteinn C.E. (2000) "Religious food laws and the seafood industry" In: R.E. Martin, E.P. Carter, G.J. Flick Jr and L.M. Davis (Eds) (2000) Marine and freshwater products handbook, CRC Press. ISBN 978-1-56676-889-4.
  48. Peter: From Fisherman to Fisher of Men Profiles of Faith Archived 6 March 2016 ವೇಬ್ಯಾಕ್ ಮೆಷಿನ್ ನಲ್ಲಿ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: