ವಿಷಯಕ್ಕೆ ಹೋಗು

ಕೈಗಾರಿಕೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೈಗಾರಿಕೆಗಳು

ಆರ್ಥಿಕತೆಯ ಎಲ್ಲ ವಲಯಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಿದಾಗ ಕೈಗಾರಿಕೆಗಳು 'ದ್ವಿತೀಯ' ವಲಯ (Secondary Sector) ಎನ್ನಿಸಿಕೊಂಡಿದೆ. ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಹಾಗೆಯೇ ಆರ್ಥಿಕತೆಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಢಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅತ್ಯಂತ ಆವಶ್ಯಕ.[] ಕೈಗಾರಿಕಾಭಿವೃದ್ಧಿ ಸಾಧಿಸಿದ ರಾಷ್ಟ್ರಗಳನ್ನು ಅಭಿವೃದ್ಢ ರಾಷ್ಟ್ರಗಳೆಂದೂ ಕೈಗಾರಿಕೆಯಲ್ಲಿ ಹಿಂದುಳಿದ, ಕೃಷಿಯನ್ನೇ ಪ್ರಧಾನ ಕಸುಬಾಗಿ ಹೊಂದಿರುವ ರಾಷ್ಟ್ರಗಳನ್ನು ಅನಾಭಿವೃದ್ಢ ರಾಷ್ಟ್ರಳೆಂದೂ ಕರೆಯುವುದು ಆರ್ಥಿಕ ಸಾಹಿತ್ಯದಲ್ಲಿ ರೂಢಿಯಾಗಿ ಬೆಳೆದುಬಂದಿದೆ. ಈ ತರ್ಕಕ್ಕೆ ಸುಲಭವಾದ ನೆಲೆಯೂ ಇದೆ. ಭೂಮಿಯ ಫಲವತ್ತತೆ ಮತ್ತು ಕೃಷಿಯ ಉತ್ಪಾದಕತೆಗೆ ಮಿತಿ ಇರುವಿಕೆ ಮತ್ತು ಪ್ರಾಥಮಿಕ ಉತ್ಪನ್ನಗಳ ಬೆಲೆ ಕಡಿಮೆ ಇರುವಿಕೆಯೇ ಇದಕ್ಕೆ ಕಾರಣ. ಆರ್ಥಿಕಾಭಿವೃದ್ಢಿಗೆ ಕೈಗಾರಿಕೆ ಬೆಳವಣಿಗೆ ಅತ್ಯವಶ್ಯಕ.

ಕೈಗಾರಿಕೀಕರಣದ ಪ್ರಾಮುಖ್ಯತೆ

[ಬದಲಾಯಿಸಿ]

ಈ ಕೆಳಗಿನ ಅಂಶಗಳನ್ನು ಗಮನಿಸಿದಾಗ ಆರ್ಥಿಕಾಭಿವೃದ್ಢಿಯಲ್ಲಿ ಕೈಗಾರಿಕೀಕರಣದ ಮಹತ್ವ ತಿಳಿಯುತ್ತದೆ.[]

  1. ಕೃಷಿಯ ಪ್ರಗತಿಗೆ ಕೊಡುಗೆ: ಆರ್ಥಿಕತೆಯ ಇತರ ವಲಯಗಳ ಪ್ರಗತಿಗೆ ಕೈಗಾರಿಕಾ ಬೆಳವಣಿಗೆ ಅತ್ಯಂತ ಅವಶ್ಯಕ. ಕೈಗಾರಿಕೆಗಳು ಕೃಷಿಗೆ ಅಗತ್ಯವಿರುವ ಹೂಡುವಳಿಗಳನ್ನು(Inputs) ಒದಗಿಸುತ್ತವೆ. ಆಧುನಿಕ ಬೇಸಾಯ ಪದ್ಧತಿಗೆ ಬೇಕಿರುವ ಯಂತ್ರಗಳು, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮೊದಲಾದವು ಕೈಗಾರಿಕೋತ್ಪನ್ನಗಳೇ. ಅಂತೆಯೇ ಕೃಷಿಯ ಉತ್ಪನ್ನಗಳನ್ನು ಬಳಸಿಕೊಳ್ಳಲು ಕೈಗಾರಿಕೆಗಳು ಅನಿವಾರ್ಯ. ಆದುದರಿಂದ ಕೃಷಿ ವಲಯದ ಬೆಳವಣಿಗೆಗೆ ಕೈಗಾರಿಕೆಗಳ ಪಾತ್ರ ಬಹಳ ಮಹತ್ವವಾದ್ದದ್ದು.
ಕೃಷಿಯಲ್ಲಿ ಕೈಗಾರಿಕೋತ್ಪನ್ನಗಳು
  1. ಆಧುನೀಕರಣಕ್ಕೆ ನೆರವು: ಸಾರಿಗೆ ಮತ್ತು ಸಂಪರ್ಕಗಳ ಬೆಳವಣಿಗೆಗೂ ಕೈಗಾರಿಕೆಗಳು ಅಗತ್ಯ. ರೈಲುಗಳು, ಹಡಗುಗಳು, ಮೋಟಾರು ವಾಹನಗಳು, ಅವುಗಳ ಬಿಡಿ ಭಾಗಗಳು ಹಾಗೂ ಟೆಲಿಫೋನ್ ಮತ್ತು ರೇಡಿಯೋಗಳು ಸೇರಿದಂತೆ ಎಲ್ಲ ವಿಧದ ಸಾರಿಗೆ ಮತ್ತು ಸಂಪರ್ಕ ಸಾಮಗ್ರಿಗಳು ಕೈಗಾರಿಕೋತ್ಪನ್ನಗಳು. ವಸತಿ ನಿರ್ಮಾಣಕ್ಕೆ ಅವಶ್ಯಕವಿರುವ ಕಬ್ಬಿಣ, ಉಕ್ಕು ಹಾಗೂ ಸಿಮೆಂಟ್ ಮೊದಲಾದವು ಕೂಡ ಕೈಗಾರಿಕೋತ್ಪನ್ನ ಸರಕುಗಳು.
  2. ಉದ್ಯೋಗಾವಕಾಶಗಳ ಸೃಷ್ಟಿ: ಕೈಗಾರಿಕೆಗಳ ಬೆಳವಣಿಗೆಯು ನಿರುದ್ಯೋಗ ನಿರ್ಮೂಲನಕ್ಕೆ ಬಹಳಷ್ಟು ಸಹಾಯ ಮಾಡುತ್ತದೆ. ಭಾರತದಂತಹ ದೇಶದಲ್ಲಿ ಇದು ಬಹು ಮುಖ್ಯ ಸಂಗತಿ. ಹೊಸದೊಂದು ಕೈಗಾರಿಕೆ ಸ್ಥಾಪನೆಯಾದರೆ, ಅದು ಅದರ ಉತ್ಪಾದನ ಸಾಮರ್ಥ್ಯಕ್ಕೆ ತಕ್ಕಂತೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಶಕ್ತಿ ಹೊಂದಿರುತ್ತದೆ. ಈ ನಿರುದ್ಯೋಗಿಗಳನ್ನು ಹೀರಿಕೊಳ್ಳಲು ಕೈಗಾರಿಕೆಗಳು ಬೆಳೆಯುತ್ತಿರಬೇಕು. ಇಲ್ಲದಿದ್ದರೆ ಅವರು ಮತ್ತೆ ಕೃಷಿಯನ್ನೇ ಅವಲಂಬಿಸುವುದರಿಂದ ಅವರ ನಿರುದ್ಯೋಗದ ದಾರುಣತೆ ಹೆಚ್ಚುವುದಷ್ಟೇ ಅಲ್ಲದೇ ಕೃಷಿಯ ಪ್ರಗತಿಯೂ ಹಿಂಜರಿಯುತ್ತದೆ.
  3. ಜೀವನಮಟ್ಟ ಸುಧಾರಣೆ: ಕೈಗಾರಿಕಾ ವಲಯವು ಉದ್ಯೋಗಿಗಳಿಗೆ ಸಾಪೇಕ್ಷವಾಗಿ ಹೆಚ್ಚು ಆದಾಯವನ್ನು ತಂದುಕೊಡುತ್ತದೆ. ಉದಾಹರಣೆಗೆ ಕೈಗಾರಿಕಾ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟ ಕೃಷಿ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟಕ್ಕಿಂತಲೂ ಹೆಚ್ಚಿರುತ್ತವದೆ. ಕೈಗಾರಿಕಾ ಕೇಂದ್ರಗಳು ಪಟ್ಟಣಗಳಾಗಿ ಬೆಳೆಯುವುದರಿಂದ ಅವನ್ನು ಅವಲಂಬಿಸಿರುವ ಜನರಿಗೆ ಬಾಹ್ಯ ಪ್ರಪಂಚದೊಡಣೆ ವ್ಯಾಪಕ ಸಂಪರ್ಕ ಹೊಂದಲು ಮತ್ತು ನಾಗರೀಕತೆಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.
  4. ಆಂತರಿಕ ಮತ್ತು ಬಾಹ್ಯ ಆರ್ಥಿಕತೆಗಳ ಪ್ರಯೋಜನ: ಕೈಗಾರಿಕೆಗಳು ಆಂತರಿಕ ಆರ್ಥಿಕತೆಗಳ ಹಾಗೂ ಬಾಹ್ಯ ಆರ್ಥಿಕತೆಗಳ ಅವಕಾಶವನ್ನು ಒದಗಿಸಿ ಕೊಡುತ್ತವೆ. ಉದಾಹರಣೆ: ಒಂದು ಪ್ರದೇಶದಲ್ಲಿ ಹೊಸದಾಗಿ ಒಂದು ಉಕ್ಕಿನ ಕಾರ್ಖಾನೆ ಸ್ಥಾಪನೆಯಾದರೆ ಅದರ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ, ಸಾರಿಗೆ ವ್ಯವಸ್ತೆ, ಮುಂತಾದವು ಬೆಳೆದು ಸಹಸ್ರಾರು ಜನರಿಗೆ ಉದ್ಯೋಗ ಅವಕಾಶಗಳು ಲಭಿಸುತ್ತದೆ. ಇದನ್ನು ಆಂತರಿಕ ಆರ್ಥಿಕತೆಗಳೆನ್ನುತ್ತರೆ. ಅಂತೆಯೇ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಉಕ್ಕು ಇತರ ಅನೇಕ ದೂರದ ಪ್ರದೇಶದಲ್ಲಿ ಅನೇಕ ಕಟ್ಟಡ, ಕಾರ್ಖಾನೆ ಮುಂತಾದ ಕಾರ್ಯಗಳಿಗೆ ಬಳಸಲ್ಪಡುವುದರಿಂದ ಆರ್ಥಿಕ ಮುನ್ನಡೆ ಆಗುತ್ತದೆ.
  5. ರಾಷ್ಟ್ರೀಯ ರಕ್ಷಣೆ: ಕೈಗಾರಿಕೆಗಳು ರಾಷ್ಟ್ರಕ್ಕೆ ಸುರಕ್ಷತೆಯನ್ನು ಒದಗಿಸುತ್ತವೆ. ಯಾವುದೇ ರಾಷ್ಟ್ರವು ರಕ್ಷಣಾ ಸಾಮಗ್ರಿಗಳನ್ನು ಹೊಂದಿರಬೇಕು. ಸುತ್ತ ಮುತ್ತಲು ಶತ್ರುಗಳನ್ನೇ ಹೊಂದಿರುವ ಭಾರತವು ರಕ್ಷಣಾ ಸಂಬಂಧವಾಗಿ ನೆಮ್ಮದಿಯಿಂದಿರಲು ಮತ್ತು ದೇಶದ ಸುರಕ್ಷತೆಯ ಬಗೆಗೆ ಜಾಗರೂಕರಾಗಿರಲು ಕೈಗಾರಿಕೀಕರಣ ಅನಿವಾರ್ಯ.
  6. ವಿದೇಶಿ ವಿನಿಮಯ ಗಳಿಕೆ: ಕೈಗಾರಿಕಾಭಿವೃದ್ಧಿಯು ವಿದೇಶೀ ವ್ಯಾಪಾರದ ಪ್ರಗತಿಗೆ ನೆರವಾಗುತ್ತದೆ. ಕೈಗಾರಿಕೋತ್ಪನ್ನಗಳಿಗೆ ಕೃಷಿ ಉತ್ಪನ್ನಗಳಿಗಿಂತ ಅಧಿಕ ಬೆಲೆ ಇರುವುದರಿಂದ ಕೈಗಾರೀಕೃತ ದೇಶವು ಹೆಚ್ಚು ಮೌಲ್ಯದ ಸರಕುಗಳನ್ನು ರಫ್ತು ಮಾಡಿ ವಿದೇಶೀ ವಿನಿಮಯ ಗಳಿಕೆಯಲ್ಲಿ ಹೆಚ್ಚುವರಿ ಸಾಧಿಸಿ ಅಭಿವೃದ್ದಿಯ ಸ್ತರವನ್ನು ಇನ್ನಷ್ಟು ಉತ್ತಮ ಪಡಿಸಲು ಸಾಧ್ಯವಾಗತ್ತದೆ.

ಕೃಷಿ ಪ್ರಧಾನವಾಗಿದ್ದ ದೇಶಗಳು ಕೈಗಾರಿಕೀಕೃತ ದೇಶಗಳಾಗಿ ರೂಪಾಂತರಗೊಳ್ಳುವುದು ಆರ್ಥಿಕ ವಿಕಾಸದ ಒಂದು ಚಾರಿತ್ರಿಕ ಬೆಳವಣಿಗೆ. ಅಭಿವೃದ್ದಿ ಹೊಂದಿದ ಎಲ್ಲ ದೇಶಗಳು ಇಂದು ಕೈಗಾರಿಕೀಕರಣ ಸಾಧಿಸಿದ ದೇಶಗಳಾಗಿವೆ. ಭಾರತವೂ ಸಹ ಮೂಲಾಧಾರವಾದ ಮತ್ತು ಬೃಹತ್ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಿ ಬೆಳೆಸಲು ನಿರಂತರವಾಗಿ ಕಾರ್ಯ ಮಗ್ನವಾಗಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ, ಅದರಲ್ಲೂ ಎರಡನೇ ಯೋಜನೆ ಮತ್ತು ನಂತರದ ಯೋಜನೆಗಳ ಅವಧಿಯಲ್ಲಿ ಕೈಗಾರಿಕೀಕರಣಕ್ಕೆ ಭಧ್ರ ಬುನಾದಿ ಹಾಕಲು ಎಲ್ಲ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕ ವಲಯವು ರಭಸವಾಗಿ ವಿಸ್ತಾರಗೊಂಡಿರುವುದು ಸ್ವಾತಂತ್ರೋತ್ತರ ಅವಧಿಯ ಕೈಗಾರಿಗಾ ಬೆಳವಣಿಗೆಯ ಪ್ರಮುಖ ಲಕ್ಷಣವಾಗಿದೆ. ೧೯೫೧ ರಲ್ಲಿ ಕೇವಲ ೫ ವಿಭಾಗೇತರ ಸಾರ್ವಜನಿಕ ಉದ್ಯಮಗಳಿದ್ದವು. ಅವುಗಳಲ್ಲಿ ತೊಡಗಿಸಿದ ಬಂಡವಾಳಹೂಡಿಕೆ ರೂ.೨೯ ಕೋಟಿಯಾಗಿತ್ತು. ೧೯೯೪ ರ ಮಾರ್ಚ್ ೩೧ ರಲ್ಲಿ ಅವುಗಳ ಸಂಖ್ಯೆ ೨೪೬ಗೆ ಬೆಳೆಯಿತು ಮತ್ತು ಅವುಗಳಲ್ಲಿ ತೊಡಗಿಸಿದ ಬಂಡವಾಳದ ಹೂಡಿಕೆ ರೂ.೧೬೪೩೩೨ ಕೋಟಿಗೆ ಏರಿತ್ತು. ಈ ಉದ್ಯಮಗಳು ಉಕ್ಕು, ಕಲ್ಲಿದ್ದಲು, ರಾಸಾಯನಿಕಗಳು, ರೈಲಿನ ಎಂಜಿನ್, ರೈಲು ಬೋಗಿ, ಹಡಗುಗಳು, ವೈಮಾನಿಕ ಸಾಮಗ್ರಿಗಳು, ತಾಂತ್ರಿಕ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸರಕುಗಳನ್ನು ಉತ್ಪಾದನೆ ಮಾಡುತ್ತಿವೆ.

ಪ್ರಮುಖ ಕೈಗಾರಿಕೆಗಳು

[ಬದಲಾಯಿಸಿ]

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

[ಬದಲಾಯಿಸಿ]
ಟಾಟಾ ಉಕ್ಕಿನ ಕಾರ್ಖಾನೆ

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ.[] ಇದೊಂದು ಮೂಲ ಹಾಗೂ ಬೃಹತ್ ಕೈಗಾರಿಕೆಯಾಗಿದೆ. ಇಂದು ಈ ಕೈಗಾರಿಕೆಯು ನಮ್ಮ ಕೈಗಾರಿಕ ರೂಪಿಸುವುದಕ್ಕೆ ಮತ್ತು ಇಡೀ ಆರ್ಥಿಕ ವ್ಯವಸ್ಥೆಗೆ ಪೋಷಕ ಕಾರ್ಯವನ್ನು ನಿರ್ವಹಿಸುತ್ತಿದೆ. ಈಗ ದೇಶದಲ್ಲಿ ೭ ದೊಡ್ಡ ಉಕ್ಕಿನ ಕಾರ್ಖಾನೆಗಳಿದ್ದು ೨೦೦ ಲಕ್ಷ ಟನ್ನುಗಳ ಉತ್ಪಾದನ ಸಾಮರ್ಥ್ಯ ಹೊಂದಿವೆ. ಈಗ ೧೫ ವರ್ಷಗಳಲ್ಲಿ ಉಕ್ಕಿನ ಕೈಗಾರಿಕೆ ವ್ಯಾಪಕವಾಗಿ ಬೆಳೆದಿದೆ. ಇತ್ತೀಚಿನವರೆಗು ಭಾರತದ ಆರ್ಥಿಕತೆಯಲ್ಲಿ ಹತ್ತಿ ಕೈಗಾರಿಕೆಯು ಪಡೆದಿದ್ದ ಹೆಮ್ಮೆಯು ಸ್ಥಾನವನ್ನು ಈಗ ಈ ಕೈಗಾರಿಕೆ ಪಡೆದು ಕೊಂಡಿದೆ. ಆಧುನಿಕ ಪದ್ಧತಿಯಲ್ಲಿ ಉಕ್ಕಿನ ಉತ್ಪಾದನೆಗೆ ಈಗ ಸುಮಾರು ಒಂದೂವರೆ ಶತಮಾನಗಳ ಹಿಂದೆಯೇ ಪ್ರಯತ್ನ ನಡೆದಿತ್ತು. ೧೮೩೦ ರಲ್ಲಿ ತಮಿಳುನಾಡಿನ ದಕ್ಷಿಣ ಆರ್ಕಾಟ್‍ನಲ್ಲಿ ಮತ್ತು ೧೮೭೪ ರಲ್ಲಿ ಬಿಹಾರದ ಝಾರಿಯಾದಲ್ಲಿ ಈ ಪ್ರಯತ್ನಗಳು ನಡೆದ್ದಿದವು. ಆದರೆ ಅವು ಅಷ್ಟೊಂದು ಯಶಸ್ವಿಯಾಗಲಿಲ್ಲ.

ಹತ್ತಿ ಬಟ್ಟೆಯ ಕೈಗಾರಿಕೆ

[ಬದಲಾಯಿಸಿ]
ಮುಂಬಯಿ ಹತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು

ಹತ್ತಿ ಬಟ್ಟೆಯ ಕೈಗಾರಿಕೆಯು ಭಾರತದಲ್ಲಿ ಅತಿ ದೊಡ್ಡದಾದ ಮತ್ತು ಪ್ರಾಚೀನವಾದ ಕೈಗಾರಿಕೆ. ಈ ಕೈಗಾರಿಕೆಗೆ ೧೫೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ.[] ೧೮೧೮ ರಲ್ಲಿ ಕಲ್ಕತ್ತಾದಲ್ಲಿ ಹತ್ತಿ ಜವಳಿ ಕಾರ್ಖಾನೆಯೊಂದು ಸ್ಥಾಪನೆಯಾಗಿ ಅಂದಿನಿಂದ ಈ ಕೈಗರಿಕೆ ಪ್ರಾರಂಭಗೊಂಡಿತು. ಹತ್ತಿ ಜವಳಿ ಕೈಗಾರಿಕೆಯೂ ೧೯೨೦ ರ ವರೆಗೂ ಮುಂಬಯಿಯಲ್ಲಿಯೇ ಕೇಂದ್ರಿಕೃತವಾಗಿತ್ತು. ನಂತರ ಉತ್ತರಪ್ರದೇಶ, ಗುಜರಾತ್, ಬಂಗಾಲ, ಮಹರಾಷ್ಟ್ರ, ತಮಿಳುನಾಡು, ಹರ್ಯಾಣಾ, ಕರ್ನಾಟಕ ರಾಜ್ಯಗಳ ಅನೇಕ ಭಾಗಗಳಲ್ಲಿ ಹತ್ತಿ ಜವಳಿ ಕಾರ್ಖಾನೆಗಳು ವ್ಯಾಪಕವಾಗಿ ಸ್ಥಾಪಿಸಲ್ಪಟ್ಟವು. ಆದರೆ ಮುಂಬಯಿಯು ಹತ್ತಿ ಜವಳಿ ಕೈಗಾರಿಕೆಯ ಒಂದು ದೊಡ್ಡ ಕೇಂದ್ರವಾಗಿ ಉಳಿಯಿತು. ದೇಶದ ರಾಜಧಾನಿಯಾದ ದೆಹಲಿಯಲ್ಲಿ ಸಹ ಹತ್ತಿ ಜವಳಿ ಕೈಗಾರಿಕೆ ಕೇಂದ್ರವಾಗಿದೆ.

ಸಕ್ಕರೆ ಕೈಗಾರಿಕೆಗಳು

[ಬದಲಾಯಿಸಿ]
ಸಕ್ಕರೆ ಕಾರ್ಖಾನೆ

ಸಕ್ಕರೆ ಕೈಗಾರಿಕೆಯು ಒಂದು ವ್ಯವಸ್ತಿತ ಮತ್ತು ಅತ್ಯುತ್ತಮ ಕೃಷಿ ಆಧಾರಿತ ಕೈಗಾರಿಕೆಯಾಗಿದೆ.[] ಭಾರತದ ಆರ್ಥಿಕ ವ್ಯವಸ್ತೆ ಮತ್ತು ಕೈಗಾರಿಕ ಸ್ವರೂಪದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಈ ಕೈಗಾರಿಕೆಯು ಸುಮಾರು ೧೩೫೦ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಪಡೆದಿದೆ. ಇದು ಸುಮಾರು ೩.೨೫ ಲಕ್ಷ ಕೆಲಸಗಾರರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿದೆ, ಅಲ್ಲದೆ ಸುಮಾರು ೨.೫ ಕೋಟಿ ಕಬ್ಬು ಬೆಳೆಗಾರರು ಇದರಿಂದ ಪರೋಕ್ಷ ಉದ್ಯೋಗ ಕಂಡುಕೊಂಡಿದ್ದಾರೆ.

ಕೈಗಾರಿಕಾ ನೀತಿ

[ಬದಲಾಯಿಸಿ]

ಕೈಗಾರಿಕೋದ್ಯಮದ ಬಗೆಗೆ ಸರ್ಕಾರವು ತಳೆದಿರುವ ಸಮಗ್ರ ಧೋರಣೆ, ಉದ್ಯಮಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ ಮತ್ತು ಆಡಳಿತ ನಿರ್ವಹಣೆಯ ವಿಷಯಗಳಲ್ಲಿ ಅನುಸರಿಸುವ ಸರ್ಕಾರದ ಅಧಿಕೃತ ನೀತಿಯನ್ನು 'ಕೈಗಾರಿಕಾ ನೀತಿ'(Industrial policy) ಎಂದು ಕರೆಯಲಾಗುತ್ತದೆ.[] ಕೈಗಾರಿಕಾ ಪ್ರಗತಿಯ ಬಗೆಗೆ ಸರ್ಕಾರದ ತಾತ್ವಿಕ ಧೋರಣೆ ಮತ್ತು ಆ ಕುರಿತ ತತ್ವ ಮತ್ತು ನೀತಿಯ ಅನುಷ್ಹಾನ ಇತ್ಯದಿ ಕೈಗಾರಿಕಾ ನೀತಿಯ ಭಾಗಗಳಾಗಿರುತ್ತದೆ. ಸರ್ಕಾರವು ಎಂತಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು, ಅವುಗಳ ಕಾರ್ಯಾಚರಣೆ ಮತ್ತು ಆಡಳಿತದಲ್ಲಿ ಹಸ್ತಕ್ಷೇಪವಿರಬೇಕೇ ಅಥವಾ ಬೇಡವೇ, ಹಾಗೂ ಯಾವ ಸಂಗತಿಗಳ ಆಧಾರದ ಮೇಲೆ ದೊಡ್ಡ ಪ್ರಮಾಣದ, ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳನ್ನು ವಿಭಗಿಸಬೇಕು, ಯಾವ ವಿಧದ ಕೈಗಾರಿಕೆಗಳು ಸಾರ್ವಜನಿಕ, ಖಾಸಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿಸಲ್ಪಡಬೇಕು ಮೊದಲಾದ ಅಂಶಗಳು ಕೈಗಾರಿಕ ನೀತಿಯಲ್ಲಿ ಉಲ್ಲೇಖವಾಗಿರುತ್ತವೆ. ಒಟ್ಟಿನಲ್ಲಿ ಸರ್ಕಾರದ ಕೈಗಾರಿಕಾ ನೀತಿಯು ಉದ್ಯಮ ನಿಯಂತ್ರಣ ಮತ್ತು ಕೈಗಾರಿಕಾ ರೂಪಿಕೆಯಲ್ಲಿ ಸರ್ಕಾರ ಅನುಸರಿಸುವ ನೀತಿ ನಿಯಮ ಹಾಗೂ ವಿಧಾನಗಳು. ಹಣ ಸಂಬಂಧಿ ನೀತಿ, ಕೋಶೀಯ ನೀತಿ, ಕಾರ್ಮಿಕ ನೀತಿ, ವಿದೇಶೀ ನೆರವಿನ ಬಗೆಗೆ ಸರ್ಕಾರದ ನಿಲುವು ಮುಂತಾದ ವಿಷಯಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.

ಕೈಗಾರಿಕಾ ನೀತಿಯ ಅವಶ್ಯಕತೆ

[ಬದಲಾಯಿಸಿ]

ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಕೈಗಾರಿಕಾ ನೀತಿಯ ಆವಶ್ಯಕತೆ ತುಂಬ ಮುಖ್ಯವಾದದ್ದು.[]

  • ಯೋಜನಾ ಬುದ್ದವಾದ ಭಾರತದ ಆರ್ಥಿಕತೆಯು ಸಮಗ್ರ ಯೋಜನೆಗೆ ತಕ್ಕಂತೆ ಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸಬೇಕಾಗುತ್ತದೆ. ರಾಷ್ಟ್ರಕ್ಕೆ ಅಗತ್ಯವಿರುವ ವಿವಿಧ ರೀತಿಯ ಉದ್ಯಮಗಳ ಸ್ಥಾಪನೆ, ಬಂಡವಾಳ ಹೂಡಿಕೆ, ಉತ್ಪಾದನ ವಿಧಾನ ಮೊದಲಾದ ಸಂಗತಿಗಳಿಗೆ ಸಂಬಂದಿಸಿದಂತೆ ಒಂದು ನೀತಿ ಅತ್ಯಗತ್ಯ. ಈ ದಿಸೆಯಲ್ಲಿ ಕೈಗಾರಿಕಾ ನೀತಿಯ ಅವಶ್ಯಕತೆ ಇದೆ.
  • ಹಿಂದುಳಿದ ದೇಶವಾದ ಭಾರತದಲ್ಲಿ ಹಲವು ಸಂಪನ್ಮೂಲಗಳ ಕೊರತೆ ಇದೆ. ತತ್ಪರಿಣಾಮವಾಗಿ ಎಲ್ಲ ಉದ್ಯಮಗಳನ್ನು ಸರ್ಕಾರವೇ ಸ್ಥಾಪಿಸಿ ಬೆಳೆಸಲು ಸಾಧ್ಯವಾಗುವುದಿಲ್ಲ. ಸಂಪನ್ಮೂಲಗಳ ಕ್ರೋಢೀಕರಣವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲವು ಮೂಲ ಹಾಗೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ, ಇತರ ಕೈಗಾರಿಕೆಗಳ ಸಂಪೂರ್ಣ ಹೊಣೆಯನ್ನು ಖಾಸಗಿ ವಲಯಕ್ಕೆ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ವಿಷದಪಡಿಸುವುದು ಕೈಗಾರಿಕೆ ನೀತಿಯ ಉದ್ದೇಶವಾಗಿದೆ.
  • ಸುಖೀರಾಜ್ಯ ಸ್ಥಾಪನೆಯನ್ನು ಆದರ್ಶವಾಗಿ ಹೊಂದಿರುವ ನಮ್ಮ ರಾಷ್ಟ್ರವು, ಜನತೆಯ ಹಿತದೃಷ್ಟಿಯಿಂದ ಖಾಸಗಿ ಕ್ಷೇತ್ರವನ್ನು ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ಖಾಸಗಿ ವಲಯವು ಲಾಭಗಳಿಕೆಯನ್ನೇ ಪ್ರಮುಖ ಧ್ಯೇಯವಾಗಿಟ್ಟುಕೊಂಡು ಬೆಳೆದು ಆರ್ಥಿಕ ಅಸಮತೆಯನ್ನು ಉಗ್ರವಾಗಿಸುತ್ತದೆ. ಆದ್ದರಿಂದ ಖಾಸಗಿ ವಲಯವನ್ನು ನಿಯಂತ್ರಿಸಲು ಮತ್ತು ಅದರ ಚಟುವಟಿಕೆಗಳನ್ನು ಉಲ್ಲೇಖರಿಸಲು ಅಧಿಕೃತ ಕೈಗಾರಿಕ ನೀತಿಯ ಅಗತ್ಯವಿದೆ.
  • ಅನಭಿವೃದ್ಧಿ ದೇಶಗಳು ಕೈಗಾರಿಕೀಕರಣಕ್ಕೆ ಅದರ ಸ್ವಂತ ಸಂಪನ್ಮೂಲಗಳು ಸಾಲದೇ ಇರುವುದರಿಂದ, ಕೊರತೆಯಲ್ಲಿರುವ ಸಂಪನ್ಮೂಲಗಳಿಗಾಗಿ ವಿದೇಶೀ ನೆರವನ್ನು ಪಡೆಯುವುದು ಅನಿವಾರ್ಯವಾಗಿರುತ್ತದೆ. ಅಭಿವೃದ್ಧಿ ಸಾಧನೆಯ ಮೊದಲ ಹಂತಗಳಲ್ಲಿ ವಿದೇಶೀ ಬಂಡವಾಳವು ಸ್ವದೇಶಿ ಬಂಡವಾಳಕ್ಕೆ ಪೂರಕವಾಗಿರಬೇಕಾಗುತ್ತದೆ. ವಿದೇಶೀ ಮತ್ತು ಸ್ವದೇಶೀ ಕ್ಷೇತ್ರಗಳ ನಡುವೆ ಸಾಮರಸ್ಯವನ್ನು ಬೆಳೆಸುವುದು ಉದ್ಯಮ ನೀತಿಯ ಧ್ಯೇಯವಾಗಿರುತ್ತದೆ.
  • ವಿಕಾಸಶೀಲ ಆರ್ಥಿಕತೆಯಲ್ಲಿ ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಅವುಗಳಿಗೆ ಪ್ರೋತ್ಸಾಹ ನೀಡಲು, ಬೃಹತ್ ಉದ್ಯಮಗಳು ಹತ್ತಿಕ್ಕದಂತೆ ಕಾಪಾಡಲು ಮತ್ತು ಈ ಉದ್ಯಮಗಳಿಗೆ ನೆರವು ನೀಡಲು ಸರ್ಕಾರವು ಕೈಗಾರಿಕಾ ನೀತಿಯ ಮೂಲಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಇಟ್ಟಿಗೆಯನ್ನು ತಯಾರು ಮಾಡುವ ಸಣ್ಣ ಕೈಗಾರಿಕೆ

ಕೈಗಾರಿಕಾ ಹಣಕಾಸು

[ಬದಲಾಯಿಸಿ]

ಇತರೆ ಉತ್ಪಾದನ ವ್ಯವಸ್ತೆಗಳಿಗೆ ಆವಶ್ಯಕವಿರುವಂತೆ ಕೈಗಾರಿಕೆಗಳಿಗೂ ಹಣಕಾಸಿನ ಅಗತ್ಯವಿದೆ. ಸಣ್ಣ ಪ್ರಮಾಣದ, ಮಧ್ಯಮ ಪ್ರಮಾಣದ ಮತ್ತು ಬೃಹತ್ ಪ್ರಮಾಣದ ಉದ್ಯಮಗಳೆಲ್ಲವೂ ತಮ್ಮ ಉತ್ಪಾದನ ಕಾರ್ಯವನ್ನು ಸಾಗಿಸಿಕೊಂಡು ಹೋಗಲು, ಹಣಕಾಸನ್ನು ಕೋರುತ್ತವೆ. ಅಂತೆಯೇ ಯಂತ್ರಗಳ ರಿಪೇರಿ, ಸಣ್ಣ ಯಂತ್ರಗಳ ಮತ್ತು ಬಿಡಿ ಭಾಗಗಳ ಕೊಳ್ಳುವಿಕೆಗೆ ಮಧ್ಯಮಾವಧಿಯ ಹಣಕಾಸು ಬೇಕಿರುತ್ತದೆ.

ಬಾಹ್ಯ ಸಂಪರ್ಕ

[ಬದಲಾಯಿಸಿ]

ಇವುಗಳನ್ನು ನೋಡಿ

[ಬದಲಾಯಿಸಿ]
  1. ಕೈಗಾರಿಕಾ ಕ್ರಾಂತಿ

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2015-04-24. Retrieved 2015-04-20.
  2. http://www.yourarticlelibrary.com/economics/role-of-industrialization-in-the-economic-development-of-india/4664/
  3. http://pib.nic.in/feature/feyr2000/fmar2000/f060320002.html
  4. "ಆರ್ಕೈವ್ ನಕಲು". Archived from the original on 2015-05-06. Retrieved 2015-04-20.
  5. http://www.sugarindustry.com/
  6. Graham, Otis L. (1994). Losing Time: The Industrial Policy Debate. Cambridge, MA: Harvard University Press. ISBN 978-0-674-53935-8.
  7. http://www.livemint.com/Opinion/DQe9KahMvaUXejuR5tekOO/India8217s-new-industrial-policy.html