ವಿಷಯಕ್ಕೆ ಹೋಗು

ರೇಡಿಯೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಕಾಶವಾಣಿ ಭಾರತದಲ್ಲಿ ಸರಕಾರದ ರೇಡಿಯೋ ವ್ಯವಸ್ಥೆಗೆ ಈ ಹೆಸರು ಇದೆ. ಸಂಸ್ಕೃತದ ಈ ಶಬ್ದಕ್ಕೆ “ಆಕಾಶದಿಂದ ಬರುವ ದನಿ” ಎಂದರ್ಥ. ಕೆಲವರು ರವೀಂದ್ರನಾಥ್ ಠಾಗೋರ್ ಅವರು ೧೯೩೦ ರಲ್ಲಿ ರೇಡಿಯೋ ಪದಕ್ಕೆ 'ಆಕಾಶವಾಣಿ' ಎಂಬ ಪದವನ್ನು ಚಲಾವಣೆಗೆ ತಂದರು ಎಂದು ಹೇಳುತ್ತಾರೆ. ಇನ್ನೂ ಕೆಲವರು ೧೯೨೦ ರಲ್ಲಿ ಕನ್ನಡದ ಬರಹಗಾರರಾದ ನಾ. ಕಸ್ತೂರಿಯವರು ಈ ಪದವನ್ನು ಸೂಚಿಸಿದರು ಎನ್ನುತ್ತಾರೆ.

ವಿಠಲ ವಿಹಾರ
ಡಾ.ಎಂ.ವಿ.ಗೋಪಾಲಸ್ವಾಮಿ

.

ಮೈಸೂರು ಆಕಾಶವಾಣಿಯ ಇತಿಹಾಸ

[ಬದಲಾಯಿಸಿ]
ನಿಕೊಲಾ ಟೆಸ್ಲಾ ೧೮೯೧ರಲ್ಲಿ ತಮ್ಮ ರೇಡಿಯೊ ತಂತ್ರಜ್ಞಾನ ಪ್ರದರ್ಶಿಸುತ್ತಿರುವುದು.
  • ರೇಡಿಯೋ ದೃಷ್ಟಿ ಮಟ್ಟದ ಬೆಳಕಿಗಿಂತ ಹೆಚ್ಚಿನ ತರಂಗಾಂತರವಿದ್ಯುತ್ ಕಾಂತೀಯ ತರಂಗಗಳಲ್ಲಿ ಸಂಜ್ಞೆಗಳನ್ನು ಪ್ರಸರಿಸುವ ತಂತ್ರಜ್ಞಾನ. ಈ ತರಂಗಗಳು ಬಹಳ ದೂರದವರೆಗೆ ಪ್ರಸಾರವಾಗುವುದರಿಂದ ದೂರಪ್ರಸರಣಗಳಿಗೆ ಈ ತಂತ್ರಜ್ಞಾನ ಅತ್ಯಂತ ಸಹಾಯಕಾರಿ. ಮಂಗಳೂರಿನ "ವಿದ್ವಾನ್ ಹೊಸಬೆಟ್ಟು ರಾಮರಾವ್‌"ರವರು ೧೯೩೨ ರಲ್ಲಿ ಬರೆದ ‘ಆಕಾಶವಾಣಿ ’ಎಂಬ ಹೆಸರಿನಿಂದ ಬರೆದ ಪುಸ್ತಕದಿಂದ ಪ್ರೆರಿತವಾದ ಹೆಸರು.
  • ಮುಂದೆ ಇದೇ ಪದವನ್ನು ಮೈಸೂರಿನ ಆಕಾಶವಾಣಿ ಸಹಾಯಕ ನಿರ್ದೇಶಕ ಸಾಹಿತಿ ನಾ.ಕಸ್ತೂರಿಯವರು ಸೂಚಿಸಿದರು. ಮೈಸೂರು ನಗರಪಾಲಿಕೆಯಿಂದ ಸಣ್ಣ ಪ್ರಮಾಣದಲ್ಲಿ ಅನುದಾನ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಆಕಾಶವಾಣಿ ಕೇಂದ್ರವನ್ನು ೧೯೪೨ ಜನವರಿ ಒಂದರಂದು ಅಂದಿನ ಮೈಸೂರು ಮಹಾರಾಜರು ತಮ್ಮ ವಶಕ್ಕೆ ತೆಗೆದುಕೊಂಡರು.
  • ನಂತರ 'ವಿಠಲವಿಹಾರ' ದಿಂದ ನಿಲಯವನ್ನು ಇಂದಿನ ಹಳೆಯ ವಸ್ತು ಪ್ರದರ್ಶನದ ಪ್ರಾಧಿಕಾರದ ಕಟ್ಟಡದ ಮೊದಲನೆಯ ಮಹಡಿಗೆ ಸ್ಥಳಾಂತರ ಮಾಡುತ್ತಾರೆ. ನಂತರ ವಾಣಿ ವಿಲಾಸಮೊಹಲ್ಲಾದ ಹೊಸ ಸುಸಜ್ಜಿತ ಕಟ್ಟಡಕ್ಕೆ ಆಕಾಶವಾಣಿಯನ್ನು ವರ್ಗಾಯಿಸಲಾಯಿತು. ಸ್ವಾತಂತ್ರ್ಯ ನಂತರ ೧೯೫೦ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ದೇಶದ ಎಲ್ಲ ಪ್ರಸಾರ ಸೇವೆಗಳನ್ನು ಕೇಂದ್ರ ಸರ್ಕಾರದ ಒಳಪಡಿಸಲಾಯಿತು.
  • ಆಲ್ ಇಂಡಿಯಾ ರೇಡಿಯೊ ದೇಶದ ಏಕೈಕ ಪ್ರಸಾರ ವ್ಯವಸ್ಥೆಯಾಗಿ ಹೊರಹೊಮ್ಮಿತು. ಆಕಾಶವಾಣಿ ಮೈಸೂರು ಹಾಗೂ ಇನ್ನಿತರ ಖಾಸಗಿ ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೊನೊಂದಿಗೆ ವಿಲೀನಗೊಳಿಸಲಾಯಿತು. ೧೯೫೦ರ ದಶಕದ ಪ್ರಾರಂಭದಲ್ಲಿ ಕರ್ನಾಟಕದಲ್ಲಿದ್ದ ಏಕೈಕ ಬಾನುಲಿ ಪ್ರಸಾರ ಕೇಂದ್ರವೆಂದರೆ ಆಕಾಶವಾಣಿ ಮೈಸೂರು ಮಾತ್ರ.


ದೇಶದ ಮೊದಲ ಬಾನುಲಿ ರೇಡಿಯೋ

[ಬದಲಾಯಿಸಿ]
  • ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ರೇಡಿಯೋ ಕೇ೦ದ್ರವೊಂದನ್ನು ಸ್ಥಾಪಿಸಿದರು. ಆಗ ೧೯೩೫ ರ ಸಮಯ. ಕಾಲೇಜಿನ ಕಾರ್ಯಗಳನ್ನು ಮುಗಿಸಿದ ನಂತರದ ಸಮಯವನ್ನು ಸದುಪಯೋಗ ಮಾಡಲು ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ ಮಾಡಬೇಕು ಎ೦ಬ ಆಸೆ ಹುಟ್ಟಿತು.
  • ಡಾ.ಎಂ.ವಿ.ಗೋಪಾಲ ಸ್ವಾಮಿಯವರು ಲಂಡನ್ ಗೆ ಹೋಗಿದ್ದ ಸಮಯದಲ್ಲಿ ಕಡಿಮೆ ವಿದ್ಯುತ್ ಬಳಕೆಯ ಟಾಲ್ ಎಂಬ ಟ್ರಾನ್ಸ್ ಮೀಟರ್ ತಂದು ಕೆಆರ್ಎಸ್ ರಸ್ತೆಯಲ್ಲಿರುವ ತಮ್ಮ ಮನೆ ವಿಠಲ ವಿಹಾರದಲ್ಲಿ ಸ್ಥಾಪಿಸುತ್ತಾರೆ. ಈ ಪ್ರೇಷಕದಿಂದ ೧೯೩೫ ಸೆಪ್ಟೆಂಬರ್ ೧೦ ರಂದು ರೇಡಿಯೋದ ಮೊದಲ ಅಲೆ ಪ್ರಸಾರವಾಗುತ್ತದೆ. ಇದನ್ನು ಕೇಳಲು ಸ್ವತ: ಮೈಸೂರಿನ ಮಹಾರಾಜರು ಕಾಲೇಜಿನ ಅಸೆಂಬ್ಲಿ ಹಾಲಿನಲ್ಲಿ ಹಾಜರಿದ್ದರು.
  • ರಾಷ್ಟ್ರ ಕವಿ ಕುವೆಂಪು ಅವರಿಂದ ಕವನ ವಾಚನದ ಮೂಲಕ ಕಾರ್ಯಕ್ರಮ ಆರಂಭಗೊಂಡಿತ್ತು. ಹೀಗೆ ಏಕ ವ್ಯಕ್ತಿಯೊಬ್ಬರಿಂದ ಆರಂಭವಾದ ದೇಶದ ಮೊದಲ ರೇಡಿಯೋ ಸ್ಟೇಶನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ೧೯೪೧ರವರೆಗೆ ಇವರ ಮನೆಯಿಂದಲೇ ಬಾನುಲಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಇಲ್ಲಿ ರೇಡಿಯೋ ೪೯.೪೬ ಮೀಟರ್ ಶಾರ್ಟ್ ವೇವ್ ನಲ್ಲಿ ಹಾಗೂ ೩೧೦ ಮೀಟರ್ ಮೀಡಿಯಂ ವೇವ್ ತರಂಗಾತರಗಳಲ್ಲಿ ಇಲ್ಲಿನ ಪ್ರಸಾರ ಕಾರ್ಯ ನಡೆಯುತ್ತಿತ್ತು.
  • ಮನೆಯಲ್ಲಿ ೩೦ ವ್ಯಾಟ್ ನಷ್ಟು ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ ಮೀಟರ್ )ವೊಂದನ್ನು ಸ್ಥಾಪಿಸಿ, ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ ೬ ರಿಂದ ೮.೩೦ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ ಇದನ್ನು ೨೫೦ ವ್ಯಾಟ್ ಸಾಮರ್ಥ್ಯದ ಪ್ರೇಷಕವಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಇದರಿಂದ ಮೈಸೂರಿನ ಸುತ್ತಮುತ್ತ ೨೫ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಗುತ್ತಿತ್ತು.
  • ಶಾರ್ಟ್ ವೇವ್ ನಲ್ಲಿನ ಪ್ರಸಾರವನ್ನು ವಾತಾವರಣ ಉತ್ತಮವಿರುವ ಸಮಯದಲ್ಲಿ ಶ್ರೀಲಂಕಾದಲ್ಲಿ, ಹಾಗೆಯೇ ಉತ್ತರ ಭಾರತದಲ್ಲಿಯೂ ಕೇಳಲಾಗುತ್ತಿತ್ತಂತೆ. ಈ ಬಾನುಲಿ ಕೇಂದ್ರವು ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸುವುದರ ಜೊತೆಗೆ ‘ಆಕಾಶವಾಣಿ’ ಎಂಬ ಪದವನ್ನು ಮೊಟ್ಟಮೊದಲಿಗೆ ಪ್ರಯೋಗಿಸಿತು. ಕರ್ನಾಟಕದ ಹೆಮ್ಮೆಯೆನಿಸಿರುವ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಸ್ಥಾಪಕ ನಿರ್ದೇಶಕರೂ ಗೋಪಾಲಸ್ವಾಮಿಯವರು ಇದನ್ನು ಜನಪ್ರಿಯಗೊಳಿಸಿದರು.
  • ಆಕಾಶವಾಣಿಯಲ್ಲಿ ತಮ್ಮದೇ ಕಾರ್ಯಕ್ರಮ ಕೇಳಿದ ಕುವೆಂಪು ಅವರು 'ಇದು ಆಕಾಶವಾಣಿಯಲ್ಲ, ಪಿಶಾಚವಾಣಿ' ಎಂದು ಹೇಳಿ ಎಲ್ಲರನ್ನೂ ನಗಿಸಿದ್ದರಂತೆ. ಹೀಗೆ ವಿದ್ವಾನ್ ಹೊಸಬೆಟ್ಟು ರಾಮರಾವ್‌ ಅವರ ೧೯೩೨ ರಲ್ಲಿ ಹೆಸರಿಲ್ಲದೆ ಪ್ರಕಟವಾದ ಪುಸ್ತಕದ ಹೆಸರಾದ " ಆಕಾಶವಾಣಿ" ಪದವನ್ನು ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಲೇಖಕರೂ ಆಗಿದ್ದ ನಾ,ಕಸ್ತೂರಿ ಅವರು ಸೂಚಿಸಿದರು.
  • ಇದನ್ನು ಡಾ.ಎಂ.ವಿ.ಗೋಪಾಲಸ್ವಾಮಿಯವರು ಅನುಮೋದಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿದರು. ಕೇಂದ್ರ ಸರಕಾರವು ಇದನ್ನು ೧೯೪೩ ರಲ್ಲಿ ಮಾನ್ಯ ಮಾಡಿ "ಮೈಸೂರು ಆಕಾಶವಾಣಿ "ಎಂದು ನಾಮಕರಣ ಮಾಡಿತು. ಮುಂದೆ "ಆಲ್ ಇಂಡಿಯಾ ರೇಡಿಯೋ"ಗೆ ಕೂಡ ೧೯೫೬ರಲ್ಲಿ ಅಧಿಕೃತವಾಗಿ ಆಕಾಶವಾಣಿ ಎಂದು ಹೆಸರಿಡಲಾಯಿತು.

ರೇಡಿಯೋ ಕಲಾವಿದರು:ಡಾ. ಕೆ. ವಾಗೀಶ್‌ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರು.:"1980ರಲ್ಲಿ ದೆಹಲಿ ಆಕಾಶವಾಣಿ ಸೇರಿದೆ. ಅಲ್ಲಿ 22 ವರ್ಷ ಕೆಲಸ ಮಾಡಿದೆ. ಬಳಿಕ 1980ರಿಂದ 2002ರವರೆಗೆ ತಿರುಚ್ಚಿ ಆಕಾಶವಾಣಿ ನಿಲಯ ನಿರ್ದೇಶಕನಾದೆ. ಅಲ್ಲಿಂದ ಮತ್ತೆ ದೆಹಲಿಗೆ ವರ್ಗವಾಗಿ ಆಕಾಶವಾಣಿಯ ಉಪ ಮಹಾನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್‌ ಜನರಲ್‌) ನಾದೆ. ಸುಮಾರು 34 ವರ್ಷ ಸೇವೆ ಸಲ್ಲಿಸಿದೆ. ಸದ್ಯ ಆಕಾಶವಾಣಿಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ" []

ಉಲ್ಲೇಖ

[ಬದಲಾಯಿಸಿ]
  1. ಡಾ. ಕೆ.ವಾಗೀಶ್, ಇಂದಿಗೂ ಜನಪ್ರಿಯ ಆಕಾಶವಾಣಿ ಸಂಗೀತ
"https://kn.wikipedia.org/w/index.php?title=ರೇಡಿಯೋ&oldid=1122645" ಇಂದ ಪಡೆಯಲ್ಪಟ್ಟಿದೆ