ವಿಷಯಕ್ಕೆ ಹೋಗು

ಬನವಾಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬನವಾಸಿ
ಬನವಾಸಿ
village

ಬನವಾಸಿ ಪಟ್ಟಣವು ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಸಿರ್ಸಿ ತಾಲೂಕಿನಲ್ಲಿದೆ. ಬನವಾಸಿಯು ಸಿರ್ಸಿ ಮತ್ತು ಸೊರಬ ದಾರಿಯಲ್ಲಿ ಎರಡೂ ಪೇಟೆಗಳಿಂದ ಸುಮಾರು ೨೪ ಕಿ.ಮಿ.ಅಂತರದಲ್ಲಿದೆ. ಪ್ರಾಚೀನ ಕದಂಬರ ಕಾಲದಲ್ಲಿ ವೈಜಯಂತೀಪುರ ಎಂಬ ಹೆಸರಿನಿಂದ ವೈಭವಯುತವಾದ ರಾಜಧಾನಿಯಾಗಿತ್ತು.

ಸ್ಥಳನಾಮ

[ಬದಲಾಯಿಸಿ]

ಕ್ರಿ.ಶ. ೧ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು “ಬನೌಸಿ” ಎಂದು ಕರೆದಿದ್ದಾನೆ. ಕ್ರಿ.ಶ. ೪ನೆಯ ಶತಮಾನದಲ್ಲಿ 'ಜಯಂತಿಪುರ' ಅಥವಾ 'ವೈಜಯಂತಿ' ಎಂದು ಕರೆಯಲಾಗುತ್ತಿತ್ತು. []

ಮಹಾಭಾರತದಲ್ಲಿ ಬನವಾಸಿಯನ್ನು 'ವನವಾಸಕ' ಎಂಬ ಉಲ್ಲೇಖವಿದೆ.

ಮಧುಕೇಶ್ವರ ದೇವಾಲಯದ ಕಾಂಪೌಂಡ್ ನ ದಕ್ಷಿಣ ಭಾಗದಲ್ಲಿರುವ ಸಣ್ಣ ಕೋಣೆಯಲ್ಲಿ ಇರುವ ಕಲ್ಲಿನ ಹಾಸಿಗೆ.

ಐತಿಹಾಸಿಕ

[ಬದಲಾಯಿಸಿ]
ನಾಣ್ಯದ ಮೇಲೆ ತನ್ನನ್ನು "ಶ್ರೀ ದೋಷರಾಶಿ" ಕದಂಬ ರಾಜ ಕೃಷ್ಣವರ್ಮ II (516-540 ರ ಆಳ್ವಿಕೆ) ಉಲ್ಲೇಖಿಸಿಕೊಂಡಿದ್ದಾನೆಂದು ಭಾವಿಸಲಾಗಿದೆ. ನಾಣ್ಯದ ಹಿಮ್ಮುಖದಲ್ಲಿ "ಶಶಾಂಕಃ" ಅಥವಾ ಚಂದ್ರ ಎಂದಿದೆ.

ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ವರ್ಣಿಸಲಾಗುತ್ತಿದೆ. ಈ ರಾಜ್ಯದ ಸ್ಥಾಪಕ ಮಯೂರವರ್ಮ ( ಕ್ರಿ.ಶ. ೩೨೫-೩೪೫). ಈತನ ರಾಜಧಾನಿ ಬನವಾಸಿ.

ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನು ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತಿದೆ.

ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ.

ಕನ್ನಡ ಸಾಹಿತ್ಯದಲ್ಲಿ

[ಬದಲಾಯಿಸಿ]

ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಎಂದು ಹೇಳಿದ್ದಾನೆ.

ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಕಾವ್ಯದ ರಂಗಸ್ಥಳವೇ ಬನವಾಸಿ.

ಪ್ರೇಕ್ಷಣೀಯ

[ಬದಲಾಯಿಸಿ]
ಮಧುಕೇಶ್ವರ ದೇವಾಲಯ

ಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ.

ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ಯ ವರ್ಷದ ಸುಮಾರಿಗೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ.

ಪಂಪ ವರ್ಣಿಸಿದ ಬನವಾಸಿಯ ನಿಸರ್ಗಸಿರಿ ತಕ್ಕಮಟ್ಟಿಗೆ ಉಳಿದುಕೊಂಡಿದೆ.

ಕದಂಬೋತ್ಸವ

[ಬದಲಾಯಿಸಿ]

ಪ್ರತಿ ವರ್ಷವೂ ಕರ್ನಾಟಕ ಸರಕಾರ ಬನವಾಸಿಯಲ್ಲಿ ಕದಂಬೋತ್ಸವವನ್ನು ಆಚರಿಸುತ್ತದೆ. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.[][]

ಬನವಾಸಿಯಲ್ಲಿ ಒಂದು ಚಿಕ್ಕ ಸರಕಾರಿ ಪ್ರವಾಸಿ ಬಂಗಲೆ ಇದ್ದು, ಕಾರ್ಯನಿರ್ವಾಹಕ ಇಂಜನಿಯರರು, ಸಿರ್ಸಿ ವಿಭಾಗ, ಲೋಕೋಪಯೋಗಿ ಇಲಾಖೆ, ಸಿರ್ಸಿ ಇವರ ಮುಖಾಂತರ ವಸತಿಗೆ ರಿಜರ್ವೇಶನ್ ಪಡೆಯಬಹುದು.ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಸಾಹಿತ್ಯ ಸಾಧಕರಿಗೆ ಪಂಪ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ.

ಚಿತ್ರಸಂಪುಟ

[ಬದಲಾಯಿಸಿ]

ಹೆಚ್ಚಿಗೆ ಓದಲು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಬನವಾಸಿ: ಸಮಗ್ರ ಪರಿಚಯ", ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ - ಅಕ್ಟೋಬರ್ ೧೯೯೪
  2. "ಕಣ್ಮರೆಯಾಗುತ್ತಿದೆಯೇ ಕದಂಬೋತ್ಸವ?". Archived from the original on 2016-03-25. Retrieved 2014-02-03.
  3. "ಜ.18ರಿಂದ ಕದಂಬೋತ್ಸವ".

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಬನವಾಸಿ&oldid=1212658" ಇಂದ ಪಡೆಯಲ್ಪಟ್ಟಿದೆ