ಗಂಗ (ರಾಜಮನೆತನ)
ಗಂಗರು ಅಥವಾ ತಲಕಾಡಿನ ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರು ದಕ್ಷಿಣ ಭಾರತದ ಒಂದು ಪ್ರಸಿದ್ಧ ರಾಜಮನೆತನದ ಅರಸರು. ಪಶ್ಚಿಮ ಗಂಗರೆಂದೂ ಪ್ರಸಿದ್ಧರಾಗಿದ್ದಾರೆ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ (ನಂದಗಿರಿ) ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ, ಗಂಗರ ಕಾಲದ ಗಣ್ಯ ಕೇಂದ್ರ.
ಇವರು ಮೊದಲು ಗಂಗ ಱುಸಾಸಿರ ಅಂದರೆ ಗಂಗ 6000 ಪ್ರಾಂತ್ಯದ ಅಧಿಪತಿಗಳಾಗಿದ್ದರು. ಈ ಪ್ರಾಂತ್ಯ ಆಂಧ್ರಪ್ರದೇಶದ ಅನಂತಪುರ ಹಾಗೂ ಕಡಪ ಜಿಲ್ಲೆಗಳನ್ನೊಳಗೊಂಡಿತ್ತು. ಕ್ರಮೇಣ ಇವರ ರಾಜ್ಯ ವಿಸ್ತಾರವಾಯಿತು. ಅದಕ್ಕೆ ಗಂಗವಾಡಿ 96000 ಎಂಬ ಹೆಸರು ಬಂತು. ತಮಿಳುನಾಡಿನ ಸೇಲಂ, ಕೊಯಮತ್ತೂರು, ಉತ್ತರ ಅರ್ಕಾಟ್ ಜಿಲ್ಲೆಗಳ ಕೆಲವು ಭಾಗಗಳೂ ಇವರ ರಾಜ್ಯಕ್ಕೆ ಸೇರಿದ್ದವು. ಚನ್ನಪಟ್ಟಣದ ಸಮೀಪದ ಮಂಕುಂದ ಮತ್ತು ನೆಲಮಂಗಲ ತಾಲ್ಲೂಕಿನಲ್ಲಿರುವ ಮಣ್ಣೆ (ಮಾನ್ಯಪುರ) ಇವರ ನೆಲೆವೀಡುಗಳಾಗಿದ್ದವು.
ಸ್ಥೂಲ ಅವಲೋಕನ
ಗಂಗರು ಸ್ಥಳಿಯರಾಗಿದ್ದು ಕೋಲಾರ, ಬೆಂಗಳೂರು, ತುಮಕೂರು, ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಒಳಗೊಂಡಂತೆ ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದರು. ಚನ್ನಪಟ್ಟಣ ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಣ್ಣೆ ಇವರ ಉಪ ರಾಜಧಾನಿಗಳಾಗಿದ್ದವು. ಇವರು ಕ್ರಿ.ಶ.೩ನೇ ಶತಮಾನದಿಂದ ೧೦ ನೇ ಶತಮಾನದವರೆಗೆ ಸುಮಾರು ೮೦೦ ವರ್ಷಗಳ ಕಾಲ ಸುಧೀರ್ಘ ಆಳ್ವಿಕೆ ನಡೆಸಿದರು. ಇವರು ಜೈನಧರ್ಮಕ್ಕೆ ವಿಶೇಷ ಒತ್ತು ನೀಡಿದರು. ಗಂಗರಲ್ಲಿ ಪ್ರಸಿದ್ಧನಾದ ದೊರೆ ಶ್ರೀಪುರುಷನು ರಾಷ್ಟ್ರಕೂಟರ ವಿರುದ್ಧ ಸುದೀರ್ಘ ಕಾಲ ಹೋರಾಟ ನಡೆಸಿದನು. ಶ್ರೀಪುರುಷನು ಕುಣಿಗಲ್ಲಿನ ದೊಡ್ಡಕೆರೆಯನ್ನು ನಿರ್ಮಿಸಿದನು. ರಾಚಮಲ್ಲನ ಮಂತ್ರಿಯಾದ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಸು. ಕ್ರಿ.ಶ. ೯೮೦ರಲ್ಲಿ ಗೊಮ್ಮಟೇಶ್ವರನ ಏಕಶಿಲಾ ಮಹಾಮೂರ್ತಿಯನ್ನು ಕಡೆಸಿದನು. ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕರ್ನಾಟಕದಲ್ಲಿ ಕೊನೆಗೊಂಡಿತು ಹಾಗು ಇವರ ಮುಂದಿನ ಪೀಳಿಗೆಯು ಮುಂದೆ ಒಡಿಶಾದಲ್ಲಿ ನೆಲೆಯೂರಿ ಅಲ್ಲಿ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. ಅದನ್ನೇ ಪೂರ್ವ ಗಂಗರು ಎಂದು ಇತಿಹಾಸಕಾರರು ಕರೆದರು. ಇವರ ವಂಶಸ್ಥರಾದ ಪೂರ್ವದ ಗಂಗರು ವಿಶ್ವ ಪ್ರಸಿದ್ಧ ಕೊನಾರ್ಕ್ ಸೂರ್ಯ ಮಂದಿರ ಹಾಗು ಪುರಿ ಜಗನ್ನಾಥ ಮಂದಿರವನ್ನು ಒಡಿಶಾದಲ್ಲಿ ಕಟ್ಟಿದರು.
ಪ್ರಸಿದ್ಧ ರಾಜರುಗಳು
- ದಡಿಗ ಅಥವಾ ಕೊಂಗುಣೀವರ್ಮ (ಕ್ರಿ.ಶ. ೩೨೫-೩೫೦).[೧] ಇವನು ಗಂಗ ವಂಶದ ಸ್ಥಾಪಕ. ಇವನು 'ಧರ್ಮಮಹಾರಾಜ', 'ಪದ್ಮನಾಭವಸುತ' ಹಾಗೂ ಬೃಹತ್ ಬಾಣರನ್ನು ಸೋಲಿಸಿ 'ಬೃಹತ್ ಬಾಣವಂಶವನದವನಾಲ' ಎಂಬ ಬಿರುದುಗಳನ್ನು ಪಡೆದಿದ್ದನು.
- ಮಾಧವ (ಕ್ರಿ.ಶ. ೩೫೦-೩೭೫)
- ಆರ್ಯವರ್ಮ (ಕ್ರಿ.ಶ. ೩೭೫-೪೦೦)
- ಮಾಧವ-೩ (ಕ್ರಿ.ಶ. ೪೪೦-೪೬೯)
- ಅವಿನೀತ (ಕ್ರಿ.ಶ. ೪೬೯-೫೨೯)
- ದುರ್ವಿನೀತ (ಕ್ರಿ.ಶ. ೫೨೯-೫೭೯)
- ಶ್ರೀವಿಕ್ರಮ (ಕ್ರಿ.ಶ. ೬೨೯-೬೫೪)
- ಭೂವಿಕ್ರಮ (ಕ್ರಿ.ಶ. ೬೫೪-೬೭೯)
- ಶಿವಮಾರ-೧ (ಕ್ರಿ.ಶ. ೬೭೯-೭೨೫)
- ಶ್ರೀಪುರುಷ (ಕ್ರಿ.ಶ. ೭೨೫-೭೮೮). ಗಂಗರಲ್ಲಿ ಪ್ರಸಿದ್ಧನಾದ ದೊರೆ
- ಸೈಗೊಟ್ಟ ಶಿವಮಾರ (ಕ್ರಿ.ಶ. ೭೮೮-೮೧೬)
- ರಾಚಮಲ್ಲ (ಕ್ರಿ.ಶ. ೮೧೬-೮೪೩)
- ನೀತಿಮಾರ್ಗ ಎರೆಗಂಗ (ಕ್ರಿ.ಶ. ೮೪೩-೮೭೦)
- ರಾಚಮಲ್ಲ-೨ (ಕ್ರಿ.ಶ. ೮೭೦-೯೧೯)
- ಎರೆಗಂಗ
- ಬೂತುಗ-೨ ಕ್ರಿ.ಶ. (೯೩೬-೯೬೧)
- ಮಾರಸಿಂಹ-೨ (ಕ್ರಿ.ಶ. ೯೬೩-೯೭೪)
- ರಾಚಮಲ್ಲ-೩ (ಕ್ರಿ.ಶ. ೯೭೪-೯೯೯)
- ರಾಚಮಲ್ಲ-೪
ಗಂಗರು
- ಗಂಗರು ಸ್ವತಂತ್ರರಾಗಿ ಕ್ರಿ.ಶ. 350 – 600 ರವರೆಗೆ ಆಳ್ವಿಕೆ ಮಾಡಿದರು.
- ಗಂಗರು ನಂತರ ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಸಾಮಂತರಾಗಿದ್ದರು.
- ಗಂಗರು ಚಾಲುಕ್ಯರ ಸಾಮಂತರಾಗಿ ಕ್ರಿ.ಶ.600 - 758 ರವರೆಗೆ ಆಳ್ವಿಕೆ ಮಾಡಿದರು.
- ಗಂಗರು ರಾಷ್ಷ್ರಕೂಟರ ಸಾಮಾಂತರಾಗಿ ಕ್ರಿ.ಶ.757 – 973 ರವರೆಗೆ ಆಳ್ವಿಕೆ ಮಾಡಿದರು.
- ಗಂಗರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973 – 990 ರವರೆಗೆ ಆಳ್ವಿಕೆ ಮಾಡಿದರು.
- ಗಂಗನಾಡಿನ ತಿರುಳು ಭಾಗವನ್ನು, ಆಳಿತದ ಪ್ರದೇಶವನ್ನು “ಗಂಗವಾಡಿ ಅಥವಾ ಗಂಗನಾಡು” ಎಂದು ಕರೆಯಲಾಗುತ್ತಿತ್ತು.
- ಗಂಗರ ರಾಜ ಮುದ್ರೆ ಅಥವಾ ರಾಜ ಲಾಂಛನ “ ಮದಗಜ ”
ಗಂಗರ ಮೂಲ
ಈ ಗಂಗರು ಯಾರು ಎಂಬ ಪ್ರಶ್ನೆಗೆ ಸದ್ಯದಲ್ಲಿ ಲಭ್ಯವಿರುವ ಆಧಾರಗಳ ಮೇಲೆ ಖಚಿತವಾದ ಉತ್ತರ ಹೇಳಲಾಗದು. 11-12ನೆಯ ಶತಮಾನದ ಅನಂತರದ ಇವರ ಶಾಸನಗಳಲ್ಲಿ ಈ ಮನೆತನದ ಮೂಲಪುರುಷರನ್ನು ಕುರಿತು ಕೆಲವು ಕತೆಗಳಿವೆ. ಇವರು ಮೊದಲು ಉತ್ತರ ಭಾರತದಲ್ಲಿ ಅಯೋಧ್ಯಾಪುರದಲ್ಲೂ ಅನಂತರ ಅಹಿಚ್ಛತ್ರಪುರದಲ್ಲೂ ಆಳುತ್ತಿದ್ದರು. ಕಾರಣಾಂತರಗಳಿಂದ ಈ ವಂಶದ ದಡಿಗ ಮತ್ತು ಮಾಧವರೆಂಬ ಇಬ್ಬರು ರಾಜಕುಮಾರರು ದಕ್ಷಿಣ ಭಾರತದ ಗಂಗಪೇರೂರಿಗೆ ವಲಸೆಬಂದು ಅಲ್ಲಿ ಗಂಗವಾಡಿ 96000 ರಾಜ್ಯವನ್ನು ಸ್ಥಾಪಿಸಿದರು. ಗಂಗ ಪೇರೂರು ಎಂಬ ಹೆಸರಿನ ಗ್ರಾಮವೊಂದು ಆಂಧ್ರಪದೇಶದ ಕಡಪ ಜಿಲ್ಲೆಯಲ್ಲಿದೆ. ಇದೇ ಶಾಸನೋಕ್ತ ಗಂಗ ಪೇರೂರು ಗ್ರಾಮವೆಂದು ಊಹಿಸಲಾಗಿದೆ.
ದೈವಿ ಸಿದ್ಧಾಂತದ ಪ್ರಕಾರ ಇವರು ಇಕ್ಷ್ವಾಕು ವಂಶದವರೆಂದು ಹೇಳಲಾಗುತ್ತದೆ.[೨] ಸೂರ್ಯವಂಶದ ಧನಂಜಯ ಈ ವಂಶದ ಮೂಲಪುರುಷನೆಂದು 11ನೆಯ ಶತಮಾನದ ಒಂದು ಶಾಸನದಲ್ಲಿ ಹೇಳಿದೆ. ಈತನ ಮಗ ಹರಿಶ್ಚಂದ್ರನಿಗೆ ದಡಿಗ ಮಾಧವರೆಂಬಿಬ್ಬರು ಮಕ್ಕಳಿದ್ದರು. ಇನ್ನೊಂದು ಶಾಸನದಲ್ಲಿ ಹರಿಶ್ಚಂದ್ರನ ಮಗನ ಹೆಸರು ಭರತನೆಂದಿದೆ. ಇವನಿಗೆ ವಿಜಯ ಮಹಾದೇವಿ ಎಂಬ ಪತ್ನಿಯಿದ್ದು, ಆಕೆ ಗಂಗಾನದಿಯಲ್ಲಿ ಸ್ನಾನಮಾಡಿ ಪೂರ್ಣಮನೋರಥಳಾದ ಕಾರಣ ಅವಳ ಮಗನಿಗೆ ಗಂಗಾದತ್ತ ಎಂಬ ಹೆಸರಾಯಿತು. ಇವನ ವಂಶದಲ್ಲಿ ವಿಷ್ಣುಗುಪ್ತನೆಂಬಾತ ಇಂದ್ರನನ್ನು ಸಂಪ್ರೀತಿಗೊಳಿಸಿ ಒಂದು ಆನೆಯನ್ನು ಪಾರಿತೋಷಕವಾಗಿ ಪಡೆದ. ಇವನ ಮಕ್ಕಳು ಭಗದತ್ತ ಮತ್ತು ಶ್ರೀದತ್ತ. ಭಗದತ್ತ ಕಳಿಂಗದೇಶಾಧಿಪತಿಯಾದ. ಶ್ರೀದತ್ತ ವಂಶಾನುಗತವಾದ ರಾಜ್ಯವನ್ನು, ಆನೆಯನ್ನು ಪಡೆದ. ಇವನ ವಂಶಜ ಪದ್ಮನಾಭ. ಇವನಿಗೆ ಇಬ್ಬರು ಗಂಡುಮಕ್ಕಳು. ಉಜ್ಜಯಿನಿಯ ಮಹೀಪಾಲ ಇವನ ವಿರುದ್ಧ ದಂಡೆತ್ತಿ ಬಂದಾಗ ಇವನು ತನ್ನ ಮಕ್ಕಳನ್ನು ದಕ್ಷಿಣದೇಶಕ್ಕೆ ಕಳುಹಿಸಿದ. ಅದಕ್ಕೆ ಮೊದಲು ಆ ಇಬ್ಬರು ಗಂಡುಮಕ್ಕಳಿಗೆ ದಡಿಗ ಮತ್ತು ಮಾಧವ ಎಂದು ಹೆಸರುಗಳನ್ನು ಬದಲಿಸಿದ. ಇವರು ಪೇರೂರಿಗೆ ಬಂದಾಗ ಸಿಂಹನಂದಿ ಆಚಾರ್ಯರನ್ನು ಕಂಡರು. ಅವರಿಂದ ಶಿಕ್ಷಣ ಪಡೆದರು. ಪದ್ಮಾವತಿ ದೇವಿಯ ಪ್ರಸಾದದಿಂದ ಒಂದು ಖಡ್ಗವನ್ನು ಪಡೆದು, ಅದರ ಪ್ರಭಾವದಿಂದ ಒಂದು ರಾಜ್ಯಾಧಿಪತ್ಯವನ್ನು ಸ್ಥಾಪಿಸಿದರು-ಎಂಬುದು ಇವರ ಮೂಲಕ್ಕೆ ಸಂಬಂಧಿಸಿದಂತೆ ಶಾಸನಗಳಲ್ಲಿ ಹೇಳಲಾದ ಇನ್ನೊಂದು ಕಥೆ.[೩]
ಕಣ್ವ ಮೂಲದ ಪ್ರಕಾರ ಇವರು ಕಣ್ವ ವಂಶದವರು. ಇವರು ತಮಿಳು ಮೂಲದಿಂದ, ಮೂಲತಃ ಕೊಯಮತ್ತೂರು ಜಿಲ್ಲೆಯ “ಪೆರೂರು” ಸ್ಥಳದಿಂದ ಬಂದವರೆಂದು ಹೇಳಲಾಗಿದೆ. ಚೋಳರು ಮತ್ತು ಗಂಗರು ಒಂದೇ ಮೂಲದಿಂದ ಬಂದಂತಹ (ಸೂರ್ಯವಂಶ-ಇಕ್ಷ್ವಾಕು ಕುಲ) ದಾಯಾದಿಗಳಾಗಿದ್ದು, ಮೂಲತಃ ಮೈಸೂರು, ಚಾಮರಾಜನಗರ, ಕೊಯಮತ್ತೂರು ಭಾಗಗಳಲ್ಲಿ ಕಂಡುಬರುವ ಕರ್ನಾಟಕ ಕ್ಷಾತ್ರ ಪರಂಪರೆಯ ಕ್ಷತ್ರಿಯ ಸಮುದಾಯದ ಉಪ ಪಂಗಡವಾದ ಸೂರ್ಯವಂಶಿ ತೊರೆಯರ್ ಸಮುದಾಯದ ಸೂರ್ಯವಂಶ ಕುಲದವರು ಎಂಬ ಅಭಿಪ್ರಾಯವಿದೆ. ಕರ್ನಾಟಕದಲ್ಲಿ ಇವರನ್ನು ರೈತಾಪಿ ವರ್ಗದವರು ಎಂದು ಕರಯುತ್ತಾರೆ. ಗಂಗಾ ಎಂಬುದು ಇವರ ಬಿರುದಾಗಿದೆ. ಕೊಂಗನಾಡಿನಿಂದ ಬಂದ ಕಾರಣ ಕೊಂಗರು ಎಂಬುದು ಗಂಗರು ಎಂದಾಗಿದೆ ಎಂಬುದಾಗಿಯೂ ಹೇಳಲಾಗುತ್ತದೆ.[೪][೫]
ಆದರೆ ಇದಕ್ಕೂ ಹಿಂದಿನ ಕಾಲದ ಶಾಸನಗಳಲ್ಲಿ ಈ ಪ್ರಸ್ತಾಪ ಬರುವುದಿಲ್ಲ. ಅವುಗಳಲ್ಲಿ ಹೇಳಿದಂತೆ ಮನೆತನದ ಮೊದಲ ಅರಸ ಕೊಂಗುಣಿವರ್ಮ, ಈತ ಜಾಹ್ನವೇಯಕುಲಸಂಭೂತ, ಕಾಣ್ವಾಯನ ಗೋತ್ರಕ್ಕೆ ಸೇರಿದವ. ಸ್ವಬಲದಿಂದ ರಾಜ್ಯವನ್ನು ಸ್ಥಾಪಿಸಿದ. ಜೈನಗುರುವಾದ ಸಿಂಹನಂದಿ ಆಚಾರ್ಯ ಈತನಿಗೆ ಖಡ್ಗವೊಂದನ್ನಿತ್ತಾಗ ಅದರಿಂದ ಮಹಾಶಿಲಾಸ್ತಂಭವೊಂದನ್ನು ತುಂಡರಿಸಿದ. ಇದು ಅವನ ಶೌರ್ಯದ ಪ್ರತೀಕ. ಸಿಂಹನಂದಿಯ ಆಶೀರ್ವಾದಬಲದಿಂದ ಇವನು ಅನಂತರ ರಾಜ್ಯವೊಂದನ್ನು ಸ್ಥಾಪಿಸಿದ.
ಈ ಎರಡೂ ಹೇಳಿಕೆಗಳಲ್ಲಿಯ ವ್ಯತ್ಯಾಸವನ್ನು ಗಮನಿಸಬಹುದು. ಮೊದಲಿನ ಶಾಸನಗಳಲ್ಲಿ ಇವರು ಉತ್ತರದ ಅಯೋಧ್ಯೆಯಿಂದಾಗಲಿ, ಅಹಿಚ್ಛತ್ರದಿಂದಾಗಲಿ ಬಂದವರೆಂದು ಹೇಳಿಲ್ಲ. ಅಲ್ಲದೆ ಆ ಶಾಸನಗಳಲ್ಲಿ ದಡಿಗನ ಹೆಸರೂ ಇಲ್ಲ. ಇವರ ರಾಜಧಾನಿ ಮೊದಲು ಕುವಳಾಲವಾಗಿದ್ದು ಅನಂತರ ತಲಕಾಡಾಯಿತು. ಇವರ ರಾಜ್ಯ ಕರ್ನಾಟಕದ ದಕ್ಷಿಣ ಭಾಗಕ್ಕೆ ಸೀಮಿತವಾಗಿತ್ತು-ಎಂಬ ಅಂಶಗಳು ಎಲ್ಲ ಶಾಸನಗಳಲ್ಲೂ ಉಕ್ತವಾಗಿವೆ. 10-12ನೆಯ ಶತಮಾನಗಳಲ್ಲಿ ಎಲ್ಲ ಅರಸು ಮನೆತನಗಳ ಮೂಲಪುರುಷರನ್ನೂ ಕುರಿತು ಇಂಥವೇ ಕಥೆಗಳನ್ನು ಹೆಣೆದಿದೆ. ಅವುಗಳನ್ನು ನಂಬಲು ಆಧಾರಗಳಿಲ್ಲ. ಗಂಗರು ಮೂಲತಃ ಹಳೆಯ ಮೈಸೂರು ಸಂಸ್ಥಾನದ ಭಾಗಕ್ಕೆ ಸೇರಿದವರೆಂಬುದರಲ್ಲಿ ಸಂದೇಹವಿಲ್ಲ. ಇವರ ಶಿಲಾಶಾಸನಗಳು ಹಳಗನ್ನಡ ಮತ್ತು ನಡುಗನ್ನಡ ಭಾಷೆಯಲ್ಲಿವೆ. ಇವರು ಆಳಿದ ರಾಜ್ಯ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿತ್ತು. ಇವರು ಧರಿಸಿದ ಬಿರುದುಗಳೂ, ಮುತ್ತರಸ ಮುಂತಾದ ನಾಮಧೇಯಗಳೂ ಇವರು ಕನ್ನಡಿಗರೆಂಬುದನ್ನು ಸಾರಿಹೇಳುತ್ತವೆ. ದುರ್ವಿನೀತಾದಿ ಅರಸರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಚಿರಸ್ಮರಣೀಯವಾದ್ದು. ಈ ಎಲ್ಲ ಕಾರಣಗಳಿಂದ ಇವರು ಮೂಲತಃ ಕನ್ನಡಿಗರೆಂಬುದರಲ್ಲಿ ಸಂದೇಹವಿಲ್ಲ. ಈಗ ಈ ಭಾಗದಲ್ಲಿರುವ ಗಂಗಡಿಕಾರ ವಕ್ಕಲಿಗರು ಈ ಮನೆತನದವರೆಂದು ಹಲವರ ಊಹೆ. ಇದು ಸರಿಯೆಂದು ಹೇಳಲು ಖಚಿತ ಆಧಾರಗಳಿಲ್ಲದಿದ್ದರೂ ಈ ಊಹೆಯನ್ನು ಅಲ್ಲಗೆಳೆಯಲಾಗದು.
ಕನ್ನಡ ಸಿದ್ಧಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು. ಗಂಗರ ರಾಜಧಾನಿ ತಲಕಾಡು ದಕ್ಷಿಣ ಗಂಗೆ ಎನಿಸಿಕೊಂಡಿರುವ ಕಾವೇರಿ ನದಿಯ ದಡದಲ್ಲಿದ್ದುದರಿಂದ ಈ ವಂಶಕ್ಕೆ “ಗಂಗ” ಎಂದು ಹೆಸರು ಬಂದಿದೆ.
ಗಂಗಟಿಕರು: ಗಂಗ ಸಾಮ್ರಾಜ್ಯದ ತಿರುಳು ಭಾಗದಲ್ಲಿ ವಾಸಿಸುತ್ತಿದ್ದ, ಬಹುಸಂಖ್ಯಾತ ರೈತಾಪಿ ವರ್ಗ (ಒಕ್ಕಲಿಗರು). ಎಡ್ಗರ್ ಥರ್ಸ್ಟನ್‍ರವರು ತಮ್ಮ "ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು" ಕೃತಿಯಲ್ಲಿ 'ದಕ್ಷಿಣ ಗಂಗೆ' ಎಂದು ಹೆಸರಾದ ಕಾವೇರಿ ನದಿಯ ತಟದಲ್ಲಿ ವಾಸಿಸುತ್ತಿದ್ದರಿಂದ ಇವರಿಗೆ ಗಂಗಟಕಾರ ಎಂಬ ಹೆಸರು ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಒಕ್ಕಲಿಗರಿಗೂ ಗಂಗರಿಗೂ ಒಂದು ರೀತಿಯ ಸಂಬಂಧವಿರಬಹುದು.
ಗಂಗರ ರಾಜಕೀಯ ಇತಿಹಾಸ
ಈ ಮನೆತನದ ಮೊದಲ ಕೆಲವು ಅರಸರ ಇತಿಹಾಸಕ್ಕೆ ಸಂಬಂಧಿಸಿದಂತೆ ಕೆಲವು ತೊಡಕುಗಳಿವೆ. ಆ ಅರಸರವೆಂದು ಹೇಳಲಾದ ತಾಮ್ರ ಶಾಸನಗಳೆಲ್ಲ ಕೂಟ ಶಾಸನಗಳೆಂದು ಫ್ಲೀಟನ ಅಭಿಪ್ರಾಯವಾಗಿತ್ತು. ಹೀಗೆ ಆ ಅರಸರ ಅಸ್ತಿತ್ವವೇ ಮೊದಲು ಪ್ರಶ್ನೆಗೆ ಒಳಗಾಯಿತು. ದುರ್ವಿನೀತ ಹಾಗೂ ಅವನ ಅನಂತರದ ಅರಸರು ಮಾತ್ರ ಐತಿಹಾಸಿಕ ಪುರುಷರೆಂಬುದಾಗಿ ಅನಂತರ ಫ್ಲೀಟ್ ಒಪ್ಪಿಕೊಂಡಿದ್ದಾನೆ. ಅವರ ಎಲ್ಲ ಶಾಸನಗಳೂ ನೈಜವೆಂಬುದು ರೈಸ್ ಅಭಿಪ್ರಾಯ. ಇವೆರಡು ಅಭಿಪ್ರಾಯಗಳೂ ಸರಿಯಲ್ಲ. ಆ ಅರಸರ ಕೆಲವು ಶಾಸನಗಳು ಕೂಟವೆಂಬುದು ನಿಜ. ಆದರೆ ಲಿಪಿಯ ಆಧಾರದ ಮೇಲೆ ಹಾಗೂ ಆಂತರಿಕ ವಿಷಯಗಳನ್ನವಲಂಬಿಸಿ, ಇವರ ಅನೇಕ ಶಾಸನಗಳು ನೈಜವೆಂದು ಈಗ ಹೇಳಬಹುದು.
ಈ ರಾಜರ ಆಳ್ವಿಕೆಯ ಕಾಲವನ್ನು ಸಹ ಖಚಿತವಾಗಿ ಗೊತ್ತುಪಡಿಸಲು ಸಾಧ್ಯವಾಗಿಲ್ಲ. ಪಲ್ಲವರ ಸಿಂಹವರ್ಮ ಗಂಗ ಹರಿವರ್ಮನನ್ನು ಪಟ್ಟಕ್ಕೆ ತಂದನೆಂದು ಹೇಳಲಾಗಿದೆ. ಲೋಕವಿಭಾಗವೆಂಬ ಜೈನಗ್ರಂಥದಲ್ಲಿ ಶಕ 380ನೆಯ ವರ್ಷ, ಎಂದರೆ ಕ್ರಿ.ಶ. 458, ಸಿಂಹವರ್ಮನ ಆಳ್ವಿಕೆಯ 22ನೆಯ ವರ್ಷಕ್ಕೆ ಸಮನೆಂದು ಹೇಳಿದೆ. ಸಿಂಹವರ್ಮನ ಆಳ್ವಿಕೆ ಕ್ರಿ.ಶ 436ರಲ್ಲಿ ಆರಂಭವಾಯಿತೆಂದೂ, ಸುಮಾರು 440 ರಲ್ಲಿ ಹರಿವರ್ಮ ಪಟ್ಟಾಭಿಷಿಕ್ತನಾದನೆಂದು ಊಹಿಸಲಾಗಿದೆ. ಆದರೆ ಲೋಕವಿಭಾಗದಲ್ಲಿ ಹೇಳಿರುವ ಕಾಲವೇ ಸಂದೇಹಾಸ್ಪದವಾಗಿದೆಯೆಂಬ ಇನ್ನೊಂದು ವಾದವೂ ಉಂಟು. ಇದಲ್ಲದೆ ಗಂಗ ಮುಮ್ಮಡಿ ಮಾಧವನ ಪತ್ನಿ, ಕದಂಬ 1ನೆಯ ಕೃಷ್ಣವರ್ಮನ ಸೋದರಿಯೆಂದು ಹೇಳಿದೆಯಾದ ಕಾರಣ ಮುಮ್ಮಡಿ ಮಾಧವನ ಆಳ್ವಿಕೆಯ ಕಾಲವನ್ನು ಕೃಷ್ಣವರ್ಮನ ಆಳ್ವಿಕೆಯ ಕಾಲದ ಆಧಾರದ ಮೇಲೆ ನಿರ್ಧರಿಸಬೇಕಾದ್ದು ಅವಶ್ಯಕ. ಇತ್ತೀಚಿನ ಗ್ರಂಥವೊಂದರಲ್ಲಿ (ಎ ಹಿಸ್ಟೊರಿ ಆಫ್ ಕರ್ನಾಟಕ, ಸಂ.ಪಿ.ಬಿ.ದೇಸಾಯಿ) ಈ ವಿಷಯವನ್ನು ಚರ್ಚಿಸಿ, ಗಂಗರ ಹರಿವರ್ಮ ಅಥವಾ 1ನೆಯ ಕೃಷ್ಣವರ್ಮನ ಕಾಲವನ್ನು ಕ್ರಿ.ಶ. 375ರಿಂದ 400ರ ವರೆಗೆ ಎಂದು ಸೂಚಿಸಲಾಗಿದೆ. ಗಂಗವಂಶದ ಅರಸರ ಆಳ್ವಿಕೆಯ ಕಾಲಸೂಚಿಗಳನ್ನು ಕುರಿತು ಮಾಡಲಾದ ಹಲವಾರು ಊಹೆಗಳಲ್ಲಿ ಇದೂ ಒಂದು. ಇದಮಿತ್ಥಂ ಎಂದು ಹೇಳಲಾಗದಿದ್ದರೂ ಈ ಸೂಚನೆಯನ್ನು ಒಮ್ಮೆಲೇ ತಿರಸ್ಕರಿಸಲಾಗದು. ಇಲ್ಲಿ ಇದೇ ಸೂಚನೆಯನ್ನು ಆಧರಿಸಲಾಗಿದೆ.
ಇನ್ನು ಇವರ ವಂಶಾವಳಿಯಲ್ಲಿ ಮೊದಲ ಅರಸರನ್ನು ಕುರಿತು ಸಹ ಭಿನ್ನಾಭಿಪ್ರಾಯಗಳಿವೆ. ವಂಶದ ಮೂಲಪುರುಷನ ಹೆಸರು ಕೊಂಗುಣಿವರ್ಮ, ಈತನ ಮಗ 1ನೆಯ ಮಾಧವ ಎಂದು ಸಾಮಾನ್ಯವಾಗಿ ಇತಿಹಾಸಕಾರರು ಒಪ್ಪಿದ್ದಾರೆ. ಆದರೂ ಕೊಂಗುಣಿವರ್ಮ ಎಂಬುದು ಮಾಧವನ ಬಿರುದೆಂದೂ ಮಾಧವ-ಕೊಂಗಣಿವರ್ಮರು ಇಬ್ಬರು ಭಿನ್ನ ವ್ಯಕ್ತಿಗಳಲ್ಲವೆಂದೂ ಒಂದು ವಾದವಿದೆ. ಮಾಧವನಿಗೆ ಮೂವರು ಮಕ್ಕಳು-ಆರ್ಯವರ್ಮ, ಹರಿವರ್ಮ ಮತ್ತು ಕೃಷ್ಣವರ್ಮ. ಇವರು ಮೂವರು ಬೇರೆಬೇರೆ ಕಡೆ-ಪರುವಿ, ಕೈವಾರ ಮತ್ತು ತಲಕಾಡುಗಳಿಂದ-ಸ್ವತಂತ್ರವಾಗಿ ಆಳತೊಡಗಿದರೆಂದರೆ ಶ್ರೀಕಂಠಶಾಸ್ತ್ರಿ ಮುಂತಾದ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇವರ ಶಾಸನಗಳಲ್ಲಿ ಕೊಟ್ಟಿರುವ ವಂಶಾವಳಿಗಳ ತೌಲನಿಕ ಪರೀಕ್ಷೆಯಿಂದ ಮೂರು ಹೆಸರುಗಳೂ ಒಬ್ಬನವೇ ಆಗಿವೆ-ಎಂದು ಲಕ್ಷ್ಮೀನಾರಾಯಣರಾಯರು ತೋರಿಸಿದ್ದಾರೆ. ಇದನ್ನು ಇಲ್ಲಿ ಒಪ್ಪಲಾಗಿದೆ. ಕೃಷ್ಣವರ್ಮನಿಗೆ, ಸಿಂಹವರ್ಮಾಪರನಾಮಧೇಯನಾದ ಇಮ್ಮಡಿ ಮಾಧವ, ವಿಷ್ಣುಗೋಪ ಮತ್ತು ವೀರವರ್ಮನೆಂಬ ಮೂವರು ತನಯರು. ವಿಷ್ಣುಗೋಪನ ಮಗ ಮುಮ್ಮಡಿ ಮಾಧವ. ಈತ ತಡಂಗಾಲ ಮಾಧವನೆಂದೂ ಪರಿಚಿತನಾಗಿದ್ದಾನೆ. ಇವನ ಮಗ ಅವಿನೀತ. ಅವಿನೀತ ಅನಂತರದ ಗಂಗರ ವಂಶಾವಳಿಯಲ್ಲಿ ಹೆಚ್ಚಿನ ಬಿಕ್ಕಟ್ಟುಗಳಿಲ್ಲ.
ದಡಿಗ ಅಥವಾ ಕೊಂಗುಣಿ ವರ್ಮ
- ಇವನು ಗಂಗ ವಂಶದ ಸ್ಥಾಪಕ. ಸಿಂಹ ನಂದಿಯು ಗಂಗ ರಾಜ್ಯ ಸ್ಥಾಪನೆಗೆ ಕಾರಣನಾದ ಜೈನ ಮುನಿ.
- “ಕುವಲಾಲ ಅಥವಾ ಕೋಲಾರ” ಇವನ ರಾಜಧಾನಿ.
- ಬಾಣರನ್ನು ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ ಹಾಕಿದ
- ಧರ್ಮ ಮಹಾರಾಜ ಹಾಗೂ ಬಾಣ ವಂಶದವನ ದಾವಲನ ಎಂಬುದು ಇವನ ಬಿರುದುಗಳು.
- ಈತನ ಗುರುವಿನ ಹೆಸರು ಸಿಂಹನಂದಿ (ಜೈನಗುರು)
- ಸಿಂಹ ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ “ದುಂಡಲಿ” ಎಂಬಲ್ಲಿ ಒಂದು ಚೈತ್ಯಾಲಯವನ್ನು ನಿರ್ಮಿಸಿದನು.
ಆದರೆ ರಾಜ್ಯದ ಸ್ಥಾಪನೆ ಕುರಿತಾದ ವಿವರಗಳೂ ಲಭ್ಯವಿಲ್ಲ. ಅನಂತರ ಆಳಿದ ಕೆಲವು ಗಂಗ ಅರಸರು ಬಹುಶಃ ಈತನ ನೆನಪಿಗಾಗಿ ಕೊಂಗುಣಿವರ್ಮ ಎಂಬುದನ್ನು ಒಂದು ಬಿರುದಾಗಿ ತಮ್ಮ ಹೆಸರುಗಳಿಗೆ ಸೇರಿಸಿಕೊಳ್ಳುತ್ತಿದ್ದರು. ಇವನ ಮಗ ಮಾಧವ.
ಒಂದನೇ ಮಾಧವ
- ದಡಿಗನ ನಂತರ ಅಧಿಕಾರಕ್ಕೆ ಬಂದವನು
- ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ ನೀಡಿದ್ದನು
- ಈತ ರಚಿಸಿದ ಕೃತಿ - “ದತ್ತ ಸೂತ್ರ”
- ಇವನ ನಂತರ ಹರಿವರ್ಮ ಹಾಗೂ 2 ನೇ ಮಾಧವ ಆಳಿದರು
ಮಾಧವನ ಶಾಸನ ಕೋಟ ತಾಮ್ರ ಶಾಸನ ಈ ಮನೆತನದ ಪ್ರಾಚೀನ ಹಾಗೂ ನೈಜ ಶಾಸನವೆನ್ನಲಾಗಿದೆ. ಈತನಿಗೆ ಕೃಷ್ಣವರ್ಮನೆಂಬ ಮಗನಿದ್ದ. ಈತನನ್ನು ಪಟ್ಟಕ್ಕೆ ತರುವುದರಲ್ಲಿ ಪಲ್ಲವ ಸಿಂಹವರ್ಮ ಪ್ರಮುಖಪಾತ್ರ ವಹಿಸಿದನಂತೆ. ಇದೇ ಸುಮಾರಿಗೆ ಉತ್ತರ ಕರ್ನಾಟಕದ ಕಾರವಾರ, ಬೆಳಗಾವಿ, ಧಾರವಾಡ ಜಿಲ್ಲೆಗಳನ್ನೊಳಗೊಂಡ ಪ್ರದೇಶದಲ್ಲಿ ಕದಂಬ ರಾಜ್ಯದ ಸ್ಥಾಪನೆಯಾಗಿತ್ತು. ಕದಂಬರಿಗೂ ಪಲ್ಲವರಿಗೂ ನಡುವೆ ವೈರವಿದ್ದು, ಸಹಜವಾಗಿಯೇ ಪಲ್ಲವರು ಗಂಗರನ್ನು ಪ್ರೋತ್ಸಾಹಿಸಿ ಅವರಿಗೆ ಸಹಾಯಕರಾದರು.
ಇಮ್ಮಡಿ ಮಾಧವ
ಗಂಗ ಇಮ್ಮಡಿ ಮಾಧವ ಸಹ ಪಲ್ಲವ ಸ್ಕಂದವರ್ಮನ ಸಹಾಯದಿಂದ ರಾಜ್ಯಾಭಿಷಿಕ್ತನಾದನೆಂದಿದೆ. ಇವರು ಎದುರಿಸಿದ ತೊಡಕುಗಳಾವುವು. ಪಲ್ಲವರ ಸಹಾಯ ಇವರಿಗೆ ಬೇಕಾಗಲು ಆಗ ನಡೆದಿರಬಹುದಾದ ಘಟನೆಗಳೆಂಥವು ಎಂಬ ಯಾವ ಪ್ರಶ್ನೆಗಳಿಗೂ ಇದುವರೆಗೂ ಸೂಕ್ತವಾದ ಸಮಾಧಾನ ದೊರೆತಿಲ್ಲ. ವಿಷ್ಣುಗೋಪ ಈ ಮಾಧವನ ಅನುಜ. ವೀರವರ್ಮನೆಂಬ ಇನ್ನೊಬ್ಬ ಸೋದರ ಅಲ್ಪವಯಸ್ಕನಾಗಿದ್ದಾಗಲೇ ಮರಣಿಸಿರಬಹದು. ಮಾಧವನಿಗೆ ಸಂತತಿಯಿರಲಿಲ್ಲ. ಆದ್ದರಿಂದ ವಿಷ್ಣುಗೋಪನ ಮಗನಾದ ಮುಮ್ಮಡಿ ಮಾಧವ ಇವನ ಉತ್ತರಾಧಿಕಾರಿಯಾದ.
ಮೂರನೇ ಮಾಧವ
- ಇವನು ತಂಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ.
- ಈತ ಕದಂಬ ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ
- ವಿಜಯ ಕೀರ್ತಿ -ಇವನ ದೀಕ್ಷಾ ಗುರುಗಳಾಗಿದ್ದರು.
ಈ ವೇಳೆಗೆ ಕದಂಬರೊಡನೆ ಇವರಿಗೆ ಇದ್ದ ವೈಷಮ್ಯ ಹೆಚ್ಚಾಗಿ ಬಹುಶಃ ಅದನ್ನು ಕೊನೆಗಾಣಿಸಲೆಂದು ಕದಂಬ ಕಾಕುತ್ಸ್ಥವರ್ಮ ತನ್ನ ಮಗಳನ್ನು ಮಾಧವನಿಗೆ ಲಗ್ನಮಾಡಿ ಕೊಟ್ಟಂತೆ ತೋರುತ್ತದೆ. ಈ ಮಾಧವನ ಮಗ ಅವಿನೀತ.
ಅವಿನೀತ (500-528)
- ಈತ ಮೂರನೇ ಮಾಧವನ ಮಗ
- ಈತ ಶಿವನ ಆರಾಧಕನಾಗಿದ್ದನು.
- ಈತ ಸರ್ವಧರ್ಮ ಸಮನ್ವಯಿಯಾಗಿದ್ದನು
- ಇತನನ್ನು ಶಾಸನಗಳು “ಹರ ಚರಣಾರ ಎಂದ ಪ್ರಣಿಪಾತ” ಎಂದು ಉಲ್ಲೇಖಿಸಿವೆ.
ತಾಯಿಯ ತೊಡೆಯ ಮೇಲಿದ್ದಾಗಲೇ ಇವನಿಗೆ ರಾಜ್ಯಾಭಿಷೇಕವಾಯಿತೆಂದು ಒಂದು ಶಾಸನದಲ್ಲಿ ಹೇಳಿದೆ. ಆದರೆ ಈತ ಪ್ರಾಪ್ತವಯಸ್ಕನಾಗಿ ಅಧಿಕಾರಸೂತ್ರಗಳನ್ನು ಸ್ವತಃ ಪಡೆದಂದಿನಿಂದಲೇ ಇವನ ಆಳ್ವಿಕೆಯ ವರ್ಷಗಳನ್ನು ಗಣಿಸಲಾಗಿದೆ. ಇವನ ಹೊಸಕೋಟೆ ತಾಮ್ರಶಾಸನದಲ್ಲಿ ಪಲ್ಲವ ಅರಸನಾದ ಸಿಂಹವಿಷ್ಣುವಿನ ತಾಯಿ ಕಟ್ಟಿಸಿದ ಬಸದಿಗೆ ಈತ ದತ್ತಿಯನ್ನು ಬಿಟ್ಟ ವಿಷಯ ಹೇಳಿದೆ. ಗಂಗರ ರಾಜ್ಯದಲ್ಲಿ ಆಕೆ ಬಸದಿಯನ್ನು ಕಟ್ಟಿಸಿರುವುದನ್ನು ಗಮನಿಸಿದರೆ ಆಕೆ ಗಂಗ ಮನೆತನಕ್ಕೆ ಸೇರಿದವಳಾಗಿರಬಹುದೆಂದು ಹೇಳಿದೆ. ಇವನ ಆಳ್ವಿಕೆಯ ಆರಂಭದಲ್ಲಿ, ಕಲುಷಿತಗೊಂಡಿದ್ದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ದಂಗೆ ಎದ್ದ ಹಲವಾರು ಸಾಮಂತರನ್ನು ಈತ ಸದೆಬಡೆದ.
ದುರ್ವಿನೀತ
- ಈತ ಗಂಗರಲ್ಲಿ ಅತ್ಯಂತ ಪ್ರಸಿದ್ಧ ದೊರೆ
- ಈತನ ತಾಯಿ ಪುನ್ನಾಟ ದೇಶದ ರಾಜಪುತ್ರಿಯಾದ ಜ್ಯೇಷ್ಠಾದೇವಿ ಹಾಗೂ ತಂದೆ ಅವಿನೀತ.
- ಈತ ವೈಷ್ಣವ ಮತಾವಲಂಬಿಯಾಗಿದ್ದನು.
- ಭಾರವಿಯ ಕಿರಾತಾರ್ಜುನೀಯದ 15 ನೇ ಸರ್ಗಕ್ಕೆ ಭಾಷ್ಯವನ್ನು ಬರೆದನು.[೬]
- ಇತ ಗುಣಾಢ್ಯನ ಪೈಶಾಚಿ ಭಾಷೆಯಲ್ಲಿ ಬರೆದ “ವಡ್ಡ ಕಥಾ”ವನ್ನು ಸಂಸ್ಕೃತಕ್ಕೆ ತರ್ಜುಮೆ ಮಾಡಿದನು
- ಈತನ ಗುರು ಪೂಜ್ಯಪಾದ ಅಥವಾ ದೇವಾನಂದೀತನ.[೭] ಇವನ ಬಿರುದುಗಳು - ಅವನೀತ ಸ್ತರ ಪೂಜಾಲಾಯ, ಅಹೀತ, ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ, ನೀತಿಶಾಸ್ತ್ರ ವಕ್ತ, ಪ್ರಯೋಕ್ಷ ಕುಶಲ
- ಈತನ ಗುರುಗಳಾದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರವನ್ನು ಬರೆದಿದ್ದಾನೆ.[೮]
ಈತ ಹಿರಿಯ ಮಗನಾಗಿದ್ದರೂ ಇವನ ತಂದೆ ತನ್ನ ಉತ್ತಾರಾಧಿಕಾರವನ್ನು ಕಿರಿಯ ಮಗನೊಬ್ಬನಿಗೆ ವಹಿಸಿದ ಕಾರಣ ಈತ ತನ್ನ ಹಕ್ಕನ್ನು ಸ್ಥಾಪಿಸಲು ಹೆಣಗಬೇಕಾಯಿತು. ಅಂದರಿ, ಆಲತ್ತೂರು, ಪೊರುಳಯೆ ಮತ್ತು ಪೆರ್ನಗರಗಳಲ್ಲಿ ನಡೆದ ತೀವ್ರ ಕದನಗಳಲ್ಲಿ ಇವನು ಶತ್ರುಗಳನ್ನು ಸೋಲಿಸಿದ. ಪುನ್ನಾಟ ರಾಜ್ಯದ ಅರಸನಿಗೆ ಗಂಡುಮಕ್ಕಳಿಲ್ಲದ ಕಾರಣ ಆ ರಾಜ್ಯ ಸಹ ಇವನಿಗೆ ದಕ್ಕಿತು; ಪುನ್ನಾಟ ಎಂಬುದು ಮೈಸೂರು ಜಿಲ್ಲೆಯ ಕಾವೇರಿ ಮತ್ತು ಕಪಿಲಾ ನದಿಗಳ ನಡುವಣ ಪ್ರದೇಶವಾಗಿತ್ತು. ಇದರ ರಾಜಧಾನಿ ಕೀರ್ತಿಪುರ-ಈಗಿನ ಹೆಗ್ಗಡದೇವನಕೋಟೆ ತಾಲ್ಲೂಕಿನ ಕಿತ್ತೂರು. ಇವನ ವಿರುದ್ಧ ಯುದ್ಧಮಾಡಿದ ವೈರಿಗಳಾರೆಂಬುದು ತಿಳಿಯದು; ಚಾಳುಕ್ಯ ವಂಶದ ಒಂದನೆಯ ಕೀರ್ತಿವರ್ಮ ಅವರಲ್ಲಿ ಒಬ್ಬನೆಂದು ಹಲವಾರು ಹೇಳಿದ್ದಾರಾದರೂ ಇದು ಇನ್ನೂ ದೃಢಪಟ್ಟಿಲ್ಲ. ಇವನು ಪಾಣ್ಣಾದ ದೇಶವನ್ನು ಸಹ ಆಳುತ್ತಿದ್ದನೆಂದು ಶಾಸನಗಳಲ್ಲಿ ಹೇಳಿದೆ. ಆ ದೇಶವನ್ನು ಗುರುತಿಸಲಾಗಿಲ್ಲ. ಇದು ಬಾಣನಾಡಾಗಿರಬಹುದೆಂದು ಸೂಚಿಸಲಾಗಿದೆ. ಇವನ ಕಾಲದಲ್ಲಿ ರಾಜ್ಯ ಆರ್ಥಿಕವಾಗಿ ಧನಾಢ್ಯನಾಗಿದ್ದು ಪ್ರಜೆಗಳು ಸುಖ-ಸಮೃದ್ಧಿಗಳಿಂದ ತುಷ್ಟರಾಗಿದ್ದರು. ಸ್ವತಃ ಕವಿಯೂ ಪಂಡಿತನೂ ಆದ ಅರಸ, ಕಲೆ-ಸಾಹಿತ್ಯಗಳಿಗೆ ಆಶ್ರಯದಾತನಾಗಿದ್ದ. ಭಾರವಿ ಇವನ ಆಸ್ಥಾನದಲ್ಲಿ ಕೆಲಕಾಲ ಇದ್ದಂತೆ ತೋರುತ್ತದೆ. ಇವನ ಗುರುಗಳಾದ ಪೂಜ್ಯಪಾದರು ಶಬ್ದಾವತಾರವೆಂಬ ಪಾಣಿನೀಸೂತ್ರವೃತ್ತಿಯನ್ನು ಬರೆದಿದ್ದು, ಅದಕ್ಕೆ ಟೀಕೆಯಾಗಿ ದುರ್ವಿನೀತ ಅದೇ ಹೆಸರಿನ ಗ್ರಂಥವನ್ನು ಬಹುಶಃ ಕನ್ನಡದಲ್ಲಿ ರಚಿಸಿದನೆಂದು ಹೇಳಲಾಗಿದೆ. ಶಾಸನಗಳಲ್ಲಿ ಈತನನ್ನು ನೀತಿಶಾಸ್ತ್ರ, ಪ್ರವಚನ ಹಾಗೂ ಪ್ರಯೋಗಗಳಲ್ಲಿ ಸಾಕ್ಷಾತ್ ವಿಷ್ಣುಗುಪ್ತನೆಂದೂ, ಗಾಂಧರ್ವವಿಧ್ಯೆ, ನಾಟ್ಯಶಾಸ್ತ್ರ ಇತ್ಯಾದಿಗಳಲ್ಲಿ ತುಂಬುರು ನಾರದ, ಭರತ, ಕಂಬಲಾಚಾರ್ಯ ಇವರೆನ್ನಲ್ಲಾ ಮೀರಿಸಿದ್ದನೆಂದೂ ಪ್ರಶಂಸಿಸಲಾಗಿದೆ. ಗಂಗ ಮನೆತನದ ಪ್ರಖ್ಯಾತ ಅರಸರಲ್ಲಿ ಈತ ಮೊದಲಿಗ.
ದುರ್ವಿನೀತನ ಅನಂತರ ಅಕ್ರಮವಾಗಿ ಅವನ ಇಬ್ಬರು ಮಕ್ಕಳಾದ ಮುಷ್ಕರ ಮತ್ತು ಪೊಲವೀರರು ರಾಜ್ಯವಾಳಿದರು. ಇವರಿಗೂ ಕಿರಿಯನಾದ ಇನ್ನೊಬ್ಬ ಸೋದರನಿದ್ದಂತೆ ತೋರುತ್ತದೆ. ಆದರೆ ಅವನ ಹೆಸರು ಗೊತ್ತಿಲ್ಲ; ಅವನು ರಾಜ್ಯವಾಳಲೂ ಇಲ್ಲ. ಮುಷ್ಕರ ಸಿಂಧು ರಾಜನ ಮಗಳನ್ನು ಮದುವೆಯಾಗಿದ್ದ. ಪೊಲವೀರ ಕಾಡುವೆಟ್ಟಿ ಹಾಗು ವಲ್ಲವರಸರ ಸಹಾಯದಿಂದ ರಾಜ್ಯವನ್ನು ಪಡೆದನೆಂದು ಒಂದು ಶಾಸನ ಸೂಚಿಸಿದೆ. ಆದರೆ ಇವರಿಬ್ಬರು ಯಾರು ಎಂದು ಹೇಳಲು ಸಾಧ್ಯವಾಗಿಲ್ಲ. ಬಹುಶಃ ಪಲ್ಲವ ಹಾಗೂ ಚಾಳುಕ್ಯ ವಂಶದ ಅರಸರಾಗಿರಬಹುದು. ಪೊಲವೀರನ ಅನಂತರ ಮುಷ್ಕರನ ಮಗನಾದ ಶ್ರೀವಿಕ್ರಮ 629 ರಿಂದ 654ರವರೆಗೂ, ಅವನ ಮಗ ಭೂವಿಕ್ರಮ 654 ರಿಂದ 679 ರವರೆಗೂ ಆಳಿದರು. ಶ್ರೀವಲ್ಲಭ, ಮನೋವಿನೀತ ಎಂಬ ಬಿರುದುಗಳನ್ನು ಪಡೆದಿದ್ದ ಭೂವಿಕ್ರಮ ವಿಳಂದೆ ಎಂಬಲ್ಲಿ ನಡೆದ ಘೋರಕದನದಲ್ಲಿ ಪಲ್ಲವರನ್ನು ಸೋಲಿಸಿದನೆಂದು ಹೆಬ್ಬೂರು ಶಾಸನದಲ್ಲಿ ಹೇಳಿದೆ. ಈ ವೇಳೆಗೆ ಗಂಗರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು, ಆಗ ಪ್ರಬಲರಾಗಿದ್ದ ಚಾಳುಕ್ಯರ ಅಧೀನರಾಗಿದ್ದು, ಬಹುಶಃ ಚಾಳುಕ್ಯ 1ನೆಯ ವಿಕ್ರಮಾದಿತ್ಯ ಪಲ್ಲವರೊಡನೆ ನಡೆಸಿದ ಕದನಗಳಲ್ಲೊಂದರಲ್ಲಿ ಗಂಗರ ಈ ಅರಸ ಪ್ರಮುಖ ಪಾತ್ರವಹಿಸಿದ್ದಿರಬಹುದೆಂದು ಊಹಿಸಲಾಗಿದೆ.
೧ನೇ ಶಿವಮಾರ
ಭೂವಿಕ್ರಮನ ಬಳಿಕ ಅವನ ತಮ್ಮನಾದ 1ನೆಯ ಶಿವಮಾರ ಪಟ್ಟಕ್ಕೆ ಬಂದ. ಇವನ ಹಳ್ಳಿಗೇರಿ ತಾಮ್ರಶಾಸನದ ಕಾಲ ಶಕ 635. ಇದು ಇವನ ಆಳ್ವಿಕೆಯ 34 ನೆಯ ವರ್ಷವೆಂದು ಹೇಳಿರುವ ಕಾರಣ ಇವನು ಶಕ 601 ರಲ್ಲಿ, ಎಂದರೆ ಕ್ರಿ.ಶ. 679 ರಲ್ಲಿ ಪಟ್ಟಕ್ಕೆ ಬಂದ. ಲಕ್ಷ್ಮಿ ಈತನನ್ನು ಒಲಿದುಬಂದಳೆಂಬ ಹೇಳಿಕೆಯನ್ನು ಗಮನಿಸಿದರೆ ಬಹುಶಃ ಭೂವಿಕ್ರಮನಿಗೆ ಮಕ್ಕಳಿಲ್ಲದ್ದರಿಂದ ರಾಜ್ಯ ಇವನಿಗೆ ದಕ್ಕಿತೆಂದು ಊಹಿಸಬಹುದು. ಪಲ್ಲವ ಯುವರಾಜನ ಮಕ್ಕಳಾದ ಪಲ್ಲವಾಧಿರಾಜ ಜಯ ಮತ್ತು ವೃದ್ಧ ಎಂಬವನು, ಪಲ್ಲವೇಳಾರಸ ಮತ್ತು ತುಪ್ಪುರಾಳರಸರು ಈತನ ಮಾಂಡಲಿಕರಾಗಿದ್ದರು. ಕೊಂಗಲ್ನಾಡು 2000, ತೊಱೆನಾಡು 500 ಮತ್ತು ಮಲೆ 1000 ಪ್ರಾಂತ್ಯಗಳನ್ನು ಇನ್ನೊಬ್ಬ ಮಾಂಡಲಿಕನಾದ ಎಱೆಗಂಗ ಆಳುತ್ತಿದ್ದ. ಶಿವಮಾರನಿಗೆ ಶಿಷ್ಟಪ್ರಿಯ, ನವಕಾಮ, ಅವನಿಮಹೇಂದ್ರ, ಸ್ಥಿರವಿನೀತ, ದೇವರಾಜ ಮೊದಲಾದ ಬಿರುದುಗಳಿದ್ದವು.
ಶ್ರೀಪುರುಷ (725-788)
- ಒಂದನೇ ಶಿವಮಾರನ ನಂತರ ಅವನ ಮೊಮ್ಮಗನಾದ ಶ್ರೀಪುರುಷ ಅಧಿಕಾರಕ್ಕೆ ಬಂದನು
- ಈತ “ಗಜಶಾಸ್ತ್ರ” ಎಂಬ ಕೃತಿಯನ್ನು ರಚಿಸಿದನು
- ಈತ ರಾಜಧಾನಿಯನ್ನು ಮಾಕುಂದದಿಂದ ಮಾನ್ಯಪುರಕ್ಕೆ ಬದಲಾಯಿಸಿದನು
- ಒಂದನೇ ಶಿವಮಾರನಿಗೆ ಧ್ವನಿ ಮಹೇಂದ್ರ ಎಂಬ ಬಿರುದಿತ್ತು
- “ತುಂಡಕ ಕದನ” ದಲ್ಲಿ ಪಲ್ಲವರನ್ನು ಸೋಲಿಸಿದವನು
- ಇವನ ಕಾಲದಲ್ಲಿ ಗಂಗರಾಜ್ಯ “ಶ್ರೀರಾಜ್ಯ” ಎಂದು ಕರೆಸಿಕೊಂಡಿತು.
- ಈತನ ಬಿರುದುಗಳು - ರಾಜಕೇಸರಿ, ಪೆರ್ಮಾಡಿ, ಶ್ರೀವಲ್ಲಭ, ಭೀಮಕೋಪ
ಶಿವಮಾರನ ಮಗನೂ ಶ್ರೀಪುರುಷನ ತಂದೆಯೂ ಆಗಿದ್ದ ರಾಜಕುಮಾರ ತನ್ನ ತಂದೆ ಜೀವಿಸಿದ್ದಾಗಲೇ ಮೃತಪಟ್ಟಿರಬಹುದು. ಕ್ರಿ.ಶ.725 ರಿಂದ 788 ರ ವರೆಗೆ 60 ವರ್ಷಗಳ ಕಾಲ ಆಳಿದ ಶ್ರೀಪುರುಷನಿಗೆ ಮುತ್ತರಸ ಎಂಬ ಇನ್ನೊಂದು ಹೆಸರೂ, ರಾಜಕೇಸರಿ, ಭೀಮಕೋಪ, ರಣಭಾಜನ ಇತ್ಯಾದಿ ಬಿರುದುಗಳೂ ಇದ್ದುವು. ಶ್ರೀಪುರುಷನ ಆಳ್ವಿಕೆಯ ಪ್ರಾರಂಭದಲ್ಲಿ ಪಲ್ಲವರಿಗೂ ಗಂಗರಿಗೂ ಘೋರಕದನಗಳು ನಡೆದುವು. ಪಲ್ಲವ ಅರಸನಾದ ನಂದಿವರ್ಮ ಪಲ್ಲವಮಲ್ಲ ಇವನ ಸಮಕಾಲೀನನಾಗಿದ್ದು, ಇವನ ತಾಮ್ರಶಾಸನವೊಂದರಲ್ಲಿ ಉಗ್ರೋದಯವೆಂಬ ರತ್ನ ಖಚಿತ ಕಂಠಾಭರಣವನ್ನು ಇವನು ಗಂಗರಾಜನಿಂದ ಕಿತ್ತುಕೊಂಡನೆಂದು ಹೇಳಿದೆ. ಇವರು ಗಂಗರಾಜ್ಯದ ಕೂವಳಾಲದವರೆಗೂ ಮುನ್ನಡೆದಿದ್ದರೆಂದು ಆ ಪ್ರದೇಶದಲ್ಲಿ ದೊರೆತ ವೀರಗಲ್ಲುಗಳಿಂದ ಖಚಿತ ಪಡುತ್ತದೆ. ಆದರೆ ಶ್ರೀಪುರುಷನ ಆಳ್ವಿಕೆಯ ಕೊನೆಯವರೆಗೂ ಈ ಪ್ರದೇಶಗಳು ಅವನ ರಾಜ್ಯದ ಭಾಗಗಳಾಗಿದ್ದುವೆಂಬುದು ಅವನ ಶಾಸನಗಳಿಂದ ತಿಳಿದಿದೆಯಾದ ಕಾರಣ, ಹೀಗೆ ದಂಡೆತ್ತಿಬಂದ ಪಲ್ಲವರನ್ನು ಶ್ರೀಪುರುಷ ಧೈರ್ಯದಿಂದ ಎದುರಿಸಿ, ಉಗ್ರವಾದ ಕದನಗಳಲ್ಲಿ ಸೋಲಿಸಿದನೆಂಬುದು ಸ್ಪಷ್ಟವಾಗುತ್ತದೆ. ಇದೇ ಸಮಯದಲ್ಲಿ ಚಾಳುಕ್ಯ ಇಮ್ಮಡಿ ವಿಕ್ರಮಾದಿತ್ಯನೂ ಪಲ್ಲವ ನಂದಿವರ್ಮನನ್ನು ಸೋಲಿಸಿದ. ಆದರೆ ಇವರಿಬ್ಬರೂ ಕೂಡಿ ಪಲ್ಲವರನ್ನು ಸೋಲಿಸಿದರೋ ಅಥವಾ ಪ್ರತ್ಯೇಕವಾಗಿ ವಿಜಯವನ್ನು ಸಾಧಿಸಿದರೋ ಹೇಳಲಾಗುವುದಿಲ್ಲ.
ಕ್ರಿ.ಶ 753ರ ವೇಳೆಗೆ ಬಾದಾಮಿ ಚಾಳುಕ್ಯರ ರಾಜ್ಯ ರಾಷ್ಟ್ರಕೂಟದ ವಶವಾಯಿತು.[೯] ಗಂಗ ಶ್ರೀಪುರುಷ ತನ್ನ ಸಾರ್ವಭೌಮತ್ವವನ್ನು ಒಪ್ಪುವನೆಂದು ರಾಷ್ಟ್ರಕೂಟ ಕೃಷ್ಣ ಆಶಿಸಿದ್ದ. ಆದರೆ ಶ್ರೀಪುರುಷ ರಾಷ್ಟ್ರಕೂಟರ ಅಸ್ತಿತ್ವವನ್ನೇ ಗಮನಕ್ಕೆ ತಂದು ಕೊಳ್ಳಲಿಲ್ಲ. ಆದ್ದರಿಂದ ಇವರಿಬ್ಬರ ನಡುವೆ ಕದನಗಳಾದುವು. ಕೃಷ್ಣ ಮಣ್ಣೆಯಲ್ಲಿ ಸ್ಯೆನ್ಯಸಮೇತ ಬೀಡುಬಿಟ್ಟಿದ್ದ (768). ಆದರೆ ಪಿಂಚನೂರು, ಬಾಗೆಯವಾರು ಮುಂತಾದ ಕಡೆಗಳಲ್ಲಿ ನಡೆದ ಕದನಗಳಲ್ಲಿ ಶ್ರೀಪುರುಷ ಶತ್ರುಗಳನ್ನು ಸೋಲಿಸಿ ಹೊರದೂಡಿದನ್ನಲ್ಲದೆ ಅವರನ್ನು ಬಳ್ಳಾರಿ ಜಿಲ್ಲೆಯ ಕಂಪಲಿಯವರೆಗೂ ಅಟ್ಟಿಸಿಕೊಂಡು ಹೋದ. ಆದರೂ ಗಂಗರಾಜ್ಯದ ಉತ್ತರದ ಸ್ವಲ್ಪ ಭಾಗ ಕೆಲವು ಕಾಲ ಶ್ರೀಪುರುಷನ ಕೈತಪ್ಪಿತ್ತು.
ಶ್ರೀಪುರುಷನ ಆಳ್ವಿಕೆಯ ಕಾಲಕ್ಕೆ ಗಂಗರಾಜ್ಯ ಷಣ್ನವತಿ ಸಹಸ್ರ (96,000) ಎನಿಸಿಕೊಂಡಿತ್ತು. ಇಷ್ಟು ವಿಸ್ತಾರವಾದ ರಾಜ್ಯವನ್ನು ಶ್ರೀರಾಜ್ಯವೆಂದೂ ಕರೆಯಲಾಗಿದೆ. ನೊಳಂಬರು ಗಂಗರ ಸಾಮಂತರಾಗಿದ್ದರು. ಆದರೆ ಇವರು ಸ್ವಲ್ಪಕಾಲ ರಾಷ್ಟ್ರಕೂಟರ ಪ್ರಭುತ್ವವನ್ನು ಒಪ್ಪಿಕೊಳ್ಳಬೇಕಾಯಿತು. ಕೃಷ್ಣನ ಅನಂತರ ಅವನ ಮಕ್ಕಳಾದ ಇಮ್ಮಡಿ ಗೋವಿಂದ ಮತ್ತು ಧ್ರುವರ ನಡುವಣ ಕಲಹಗಳ ಸಮಯದಲ್ಲಿ[೧೦] ಇವರು ಪುನಃ ಗಂಗರ ಪಕ್ಷವನ್ನೇ ಸೇರಿದರು. ಈ ಮನೆತನದ ನೊಳಂಬ ಮಾರವೆಯನ್ನು ಶ್ರೀಪುರುಷ ವಿವಾಹವಾಗಿದ್ದ. ಈಕೆಯಲ್ಲದೆ ವಿಜಯಮಹಾದೇವಿ ಮತ್ತು ಇನ್ನೊಬ್ಬಳು ಇವನ ಪತ್ನಿಯರು. ದುಗ್ಗಮಾರ ಎರುಯಪ್ಪ, ಇಮ್ಮಡಿ ಶಿವಮಾರ ಹಾಗು ವಿಜಯಾದಿತ್ಯರೆಂಬ ಮೂವರು ಮಕ್ಕಳಿದ್ದರು. ಶ್ರೀಪುರುಷ ಗಜಶಾಸ್ತ್ರವೆಂಬ ಗ್ರಂಥದ ಕರ್ತೃವೆಂದು ಅನಂತರದ ಶಾಸನಗಳಲ್ಲಿ ಹೇಳಿದೆ. ಭೇದಭಾವನೆಯಿಲ್ಲದೆ ಬಸದಿಗಳಿಗೂ ದೇವಾಲಯಗಳಿಗೂ ಈ ಅರಸ ದತ್ತಿಗಳನ್ನು ನೀಡಿದ. ಬದುಕಿರುವವರೆಗೂ ರಾಷ್ಟ್ರಕೂಟರು ಗಂಗರಾಜ್ಯವನ್ನು ಆಕ್ರಮಿಸಲು ಅಶಕ್ತರಾದರು.
ಎರಡನೇ ಶಿವಮಾರ
- ಈತನ ಇನ್ನೊಂದು ಹೆಸರು - ಸೈಗೋತ
- ಈತನ ಕೃತಿಗಳು - ಗಜಾಷ್ಟಕ, ಸೇತುಬಂಧ ಹಾಗೂ ಶಿವಮಾರ ತರ್ಕ
- ಈತ ಶ್ರವಣಬೆಳಗೊಳದಲ್ಲಿ ಜೈನ ಬಸದಿಯನ್ನು ನಿರ್ಮಿಸಿದನು
- ಈತನ ತಂದೆಯ ಹೆಸರು - ಶ್ರೀಪುರುಷ
2ನೆಯ ಶಿವಮಾರ ಪಟ್ಟಕ್ಕೆ ಬಂದಕೂಡಲೇ ರಾಷ್ಟ್ರಕೂಟರು ಪುನಃ ಗಂಗರಾಜ್ಯವನ್ನು ಮುತ್ತಿದರು. ಮುದುಗುಂದೂರಿನ ಕದನದಲ್ಲಿ ಶಿವಮಾರ ಸೋತು ಶತ್ರುಗಳಿಗೆ ಸೆರೆಸಿಕ್ಕಿದ. ಗಂಗರಾಜ್ಯದಲ್ಲಿ ಧ್ರುವನ ಮಗನಾದ ಕಂಬಯ್ಯ ಸ್ಥಾಪಿತನಾದ. ಆದರೆ ಧ್ರುವನ ಮರಣಾಂತರ ಕಂಬಯ್ಯನಿಗೂ ಮುಮ್ಮಡಿ ಗೋವಿಂದನಿಗೂ ಸಿಂಹಾಸನಕ್ಕಾಗಿ ನಡೆದ ಅಂತಃಕಲಹಗಳ ಪರಿಣಾಮವಾಗಿ ಶಿವಮಾರ ಸೆರೆಯಿಂದ ಮುಕ್ತನಾಗಿ ಸ್ವದೇಶಕ್ಕೆ ಹಿಂದಿರುಗಿದನಾದರೂ 3ನೆಯ ಗೋವಿಂದ ಆಳತೊಡಗಿದಾಗ ಪುನಃ ಬಂಧಿತನಾದ. ಸ್ವಲ್ಪಕಾಲ ಅವನ ಮಗ ಮಾರಸಿಂಹ ಗಂಗಮಂಡಲದ ಅಧಿಪತಿಯಾದನಾದರೂ ಅನಂತರ ಅವನ ಗತಿ ಏನಾಯಿತೆಂಬುದು ತಿಳಿಯದು. ಗೋವಿಂದನ ಆಳ್ವಿಕೆಯ ವರ್ಷಗಳಲ್ಲಿ ಬಹಳ ಕಾಲವನ್ನು ಶಿವಮಾರ ಸೆರೆಮನೆಯಲ್ಲೇ ಕಳೆದ. ಆದರೆ ಗೋವಿಂದನ ಕೊನೆಯ ವರ್ಷಗಳಲ್ಲಿ ಸುಮಾರು 813 ರಲ್ಲಿ ಶಿವಮಾರ ಗಂಗಮಂಡಲದ ಅಧಿಪತಿಯಾಗಿ ಪಲ್ಲವ ನಂದಿವರ್ಮನಿಂದ ಅಭಿಷಕ್ತನಾದ. ಆದರೆ ರಾಷ್ಟ್ರಕೂಟರ ಸಾಮಂತನೆಂದೇ ಈ ಪದವಿಯನ್ನು ಅವನು ಪಡೆಯಬೇಕಾಯಿತು. ಗೋವಿಂದನ ಬಳಿಕ 1ನೆಯ ಅಮೋಘವರ್ಷನ ಕಾಲದಲ್ಲಿ, ರಾಜ್ಯದಲ್ಲಿ ತಲೆದೋರಿದ್ದ ಅಶಾಂತಿಯುತ ವಾತಾವರಣದ ಉಪಯೋಗ ಪಡೆದು ಸ್ವತಂತ್ರನಾಗಲು ಹವಣಿಸಿದಾಗ ರಾಷ್ಟ್ರಕೂಟನ ಸೈನ್ಯ ಅವನ ವಿರುದ್ಧ ಬಂದು, ಕಾಗಿಮೊಗೆಯೂರಿನಲ್ಲಿ (ತುಮಕೂರು ಜಿಲ್ಲೆ) ನಡೆದ ಕದನದಲ್ಲಿ ವೀರಮರಣವನ್ನಪ್ಪಿದ. ಜೀವಮಾನವಿಡೀ ಸಂಕಟಗಳನ್ನೆದುರಿಸಿದರೂ ಸ್ವಾತಂತ್ರ್ಯವನ್ನುಳಿಸಿಕೊಳ್ಳಲು ಇವನು ಮಾಡಿದ ಸಾಹಸಗಳೆಲ್ಲ ವಿಫಲವಾದವು.
ರಾಚಮಲ್ಲ
ಶಿವಮಾರನ ಬಳಿಕ ಗಂಗಮಂಡಲದ ಅಧಿಪತ್ಯವನ್ನು ಅವನ ಸೋದರನಾದ ವಿಜಯಾದಿತ್ಯನಿಗೆ ಕೊಡಲಾಯಿತಾದರೂ ಅವನು ಅದನ್ನು ತನ್ನ ಮಗನಾದ ರಾಚಮಲ್ಲನಿಗೆ ವಹಿಸಿಕೊಟ್ಟ. ಈ ವೇಳೆಗೆ ರಾಜ್ಯದ ಸ್ವಲ್ಪಭಾಗ ರಾಷ್ಟ್ರಕೂಟದ ಸೇನಾನಿಯಾದ ಬಂಕೇಶನ ಅಧೀನದಲ್ಲಿ ಉಳಿಯಿತು. ಇವನೂ ಇವನ ಬಳಿಕ ಆಳಿದ ಇವನ ಮಗ ನೀತಿಮಾರ್ಗ ಎರೆಗಂಗನೂ ಸ್ವಾತಂತ್ರ್ಯಕ್ಕಾಗಿ ಯತ್ನಿಸಿದರಾದರೂ ಯಶಸ್ವಿಗಳಾಗಲಿಲ್ಲ. ಈ ಪ್ರಯತ್ನಗಳ ಅಂಗವಾಗಿ ರಾಚಮಲ್ಲ ತನ್ನ ಮಗಳಾದ ಜಾಯಬ್ಬೆಯನ್ನು ನೊಳಂಬಕುಲದ ಪೊಳಲ್ಚೋರನಿಗಿತ್ತು ವಿವಾಹ ಮಾಡಿಕೊಟ್ಟ. ಇವರ ವಿಧೇಯತೆಯನ್ನು ಶಂಕಿಸಿದ ಅಮೋಘವರ್ಷ ಇವರ ವಿರುದ್ಧ ಬಂಕೇಶನನ್ನು ದೊಡ್ಡ ಸೈನ್ಯದೊಡನೆ ಕಳುಹಿಸಿದ. ರಾಜಾರಾಮಡು ಎಂಬಲ್ಲಿ ಭೀಕರ ಕದನವಾಯಿತಾದರೂ ಪರಿಣಾಮ ಇಬ್ಬರಿಗೂ ಹಿತಕರವಾಗಿರಲಿಲ್ಲ.[೧೧] ದಂಡಿಸಿ ಗೆಲ್ಲುವ ಬದಲು ಒಲವಿನಿಂದ ಇವನನ್ನು ತನ್ನ ಅಧೀನಕ್ಕೆ ತರಲು ರಾಷ್ಟ್ರಕೂಟ ಅರಸ ತನ್ನ ಮಗಳಾದ ಚಂದ್ರೊಬ್ಬಲಬ್ಬೆಯನ್ನು ಎರೆಗಂಗನ ಕಿರಿಯ ಮಗನಾದ ಒಂದನೆಯ ಬೂತುಗನಿಗೆ ಮದುವೆ ಮಾಡಿಕೊಟ್ಟ.
ಇಮ್ಮಡಿ ಶಿವಮಾರನಿಗೆ ಪೃಥ್ವೀಪತಿಯೆಂಬ ಮಗನಿದ್ದ. ಶಿವಮಾರನ ಬಳಿಕ ನ್ಯಾಯವಾಗಿ ಅವನು ಅಧಿಕಾರಕ್ಕೆ ಬರಬೇಕಿತ್ತು. ಆದರೆ ಅಲ್ಪವಯಸ್ಕನೆಂಬ ಕಾರಣದಿಂದ ಅದು ಅವನಿಗೆ ದಕ್ಕಲಿಲ್ಲ. ಅವನ ಮಗನಾದ ಗಂಗನೆಂಬುವನು ರಾಚಮಲ್ಲನ ವಿರುದ್ಧ ಬಂಡೆದ್ದ. ನನ್ನಿಯಗಂಗನ ಸೋದರಿಯಾದ ಕುಂದವ್ವೆ ಬಾಣ ವಿದ್ಯಾಧರನ ಪತ್ನಿಯಾಗಿದ್ದಳು. ಅವರಿಗೆ ಜನಿಸಿದವನೇ ಪ್ರಭುಮೇರುವಿಜಯಾದಿತ್ಯ. ಬಾಣಕುಲದ ಅರಸ ನನ್ನಿಯಗಂಗನಿಗೆ ಬೆಂಬಲವಾಗಿ ನಿಂತದ್ದು ಆಶ್ಚರ್ಯವೇನಿಲ್ಲ. ಈ ವೇಳೆಗೆ ಗಂಗರು ಹಾಗೂ ಮೈದುಂಬರ ಸಹಾಯಪಡೆದ ನನ್ನಿಯಗಂಗ ಪುಲಿನಾಡನ್ನು ನೊಳಂಬರಿಂದ ಕಸಿದು, ತಲಕಾಡಿನಲ್ಲಿ ಮಣ್ಣೆ 200 ಮತ್ತು ಗಂಗ 6000 ಪ್ರಾಂತ್ಯಗಳನ್ನು ಗೆದ್ದು, ತಲಕಾಡನ್ನು ಸಹ ಅಕ್ರಮಿಸಿದ. ಆದರೆ ಸೋದೆಮಡಿ ಎಂಬಲ್ಲಿ ನಡೆದ ಘೋರ ಕದನದಲ್ಲಿ ನೊಳಂಬ ಮಹೇಂದ್ರ ಈ ಮೂರು ಮನೆತನಗಳ ಸೈನ್ಯವನ್ನು ಸೋಲಿಸಿದ. ನನ್ನಿಯ ಗಂಗನೂ ಅವನ ಸಹಾಯಕರೂ ಓಡಿಹೋದರು. ಅನಂತರ ಆ ಗಂಗನ ಗತಿ ಏನಾಯಿತು ಎಂಬುದು ತಿಳಿಯದು. ಅವನ ಮಗನಾದ ಇಮ್ಮಡಿ ಪೃಥ್ವೀಪತಿ ಚೋಳ ಪರಾಂತಕನಿಂದ ಸೆಂಬಿಯ ಮಹಾಬಲಿ ಬಾಣರಸ ಎಂಬ ಬಿರುದನ್ನು ಪಡೆದನೆಂದು ತಿಳಿದಿದೆ.
ಹೀಗೆ ರಾಚಮಲ್ಲನಿಗೆ ಬೆಂಬಲವಾಗಿ ನಿಂತು ಅವನ ರಾಜ್ಯವನ್ನು ಉಳಿಸಿಕೊಟ್ಟ ಮಹೇಂದ್ರ ಕ್ರಮೇಣ ಪ್ರಬಲನಾಗಿ ಅವನ ವಿರುದ್ಧವಾಗಿ ಮಲೆತು ನಿಂತ. ರಾಚಮಲ್ಲನ ಸೋದರನಾದ ಬೂತುಗ ಅಣ್ಣನ ನೆರವಿಗೆ ಬಂದು ಹಿರಿಯೂರು, ಸೂಳೂರು, ಸಾಮಿಯೂರುಗಳಲ್ಲಿ ನಡೆದ ಕದನಗಳಲ್ಲಿ ಮಹೇಂದ್ರನನ್ನು ಸೋಲಿಸಿದ. ಆದರೂ ಗಂಗ 96000 ಪ್ರಾಂತ್ಯದ ಅಧಿಕಾರವನ್ನು ಮಹೇಂದ್ರ ಸುಲಭವಾಗಿ ಬಿಡಲಿಲ್ಲ. ಬೂತುಗನ ಅನಂತರ ಅವನ ಮಗ ಎಱೆಗಂಗ ಅಥವಾ ಎಱುಯಪ್ಪ ಮಹೇಂದ್ರನನ್ನು ಸೋಲಿಸಿ ಕೊಂದ. ಇದರ ಅನಂತರ ನೊಳಂಬರು ಪುನಃ ಗಂಗರಿಗೆ ನಿಷ್ಠೆಯನ್ನು ತೋರಿಸಿ ಅವರ ಸಾಮಂತರೆನಿಸಿಕೊಂಡರು. ಎಱೆಯಪ್ಪನಿಗೆ ಇದರ ಫಲವಾಗಿ ಮಹೇಂದ್ರಾಂತಕನೆಂಬ ಬಿರುದು ಸಂದಿತು. ಈತ ಮಕ್ಕಳಿಲ್ಲದ ದೊಡ್ಡಪ್ಪನೊಡನೆ 886ರಿಂದ 919ರವರೆಗೂ ಜೊತೆಯಾಗಿ ಆಳಿದ. ಇವನ ಕಾಲದಲ್ಲಿ ಪೂರ್ವ ಚಾಳುಕ್ಯ ಮನೆತನದ ಅಮ್ಮರಾಜ ನೊಳಂಬರ ವಿರುದ್ಧ ದಂಡೆತ್ತಿ ಬಂದಾಗ ಇವರು ನೊಳಂಬರಿಗೆ ಸಹಾಯ ಮಾಡಬೇಕಾಯಿತು.
ಇವನ ಬಳಿಕ ನರಸಿಂಹ ಮತ್ತು ಮುಮ್ಮಡಿ ರಾಚಮಲ್ಲರು ಆಳಿದರು. ಇವರು ನೊಳಂಬರ ಹಾಗೂ ರಾಷ್ಟ್ರಕೂಟರ ವಿರುದ್ಧ ಕೆಲವು ಬಾರಿ ಹೋರಾಡಿದರು.
ಎರಡನೇ ಬೂತುಗ
- ಈತ ತಕ್ಕೋಳಂ ಕದನದಲ್ಲಿ ಕೃಷ್ಣನಿಗೆ ಸಹಾಯಕನಾಗಿ ಚೋಳರ ರಾಜಾದಿತ್ಯನನ್ನು ಕೊಂದನು (847-48).
- ಈತನ ಬಿರುದು - ಮಹಾರಾಜಾಧಿರಾಜ
ರಾಚಮಲ್ಲನ ತಮ್ಮನಾದ ಇಮ್ಮಡಿ ಬೂತುಗ ಗಂಗ ಸಿಂಹಾಸನವನ್ನೇರಬಯಸಿ, ಅದಕ್ಕಾಗಿ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಮಿತ್ರನಾಗಿ ಅವನ ಕದನಗಳಲ್ಲಿ ನೆರವು ನೀಡಿದ. ಕೃಷ್ಣನ ಸೋದರಿಯಾದ ರೇವಕನಿಮ್ಮಡಿಯನ್ನು ಸುಮಾರು 936ರಲ್ಲಿ ಮದುವೆಯಾದ. ಆಗ ಇವನಿಗೆ ಬೆಳ್ವಲ ಪುರಿಗೆಱುನಾಡುಗಳು, ಬಾಗೆನಾಡು 70, ಕಿಸುಕಾಡು 70 ಪ್ರಾಂತ್ಯಗಳನ್ನು ಬಳುವಳಿಯಾಗಿ ಕೊಡಲಾಗಿತ್ತು. ಬನವಾಸಿ 12000 ಪ್ರಾಂತ್ಯದ ಅಧಿಪತ್ಯವನ್ನು ಸಹ ಬೂತುಗನಿಗೆ ಕೃಷ್ಣ ವಹಿಸಿದ. ಈ ವೇಳೆಗೆ ಬೂತುಗ ತನ್ನ ಸ್ವಾಮಿಯ ನೆರವಿನಿಂದ ಸೋದರರನ್ನು ಸೋಲಿಸಿ ಗಂಗರಾಜ್ಯವನ್ನು ಸಹ ತನ್ನದಾಗಿ ಮಾಡಿಕೊಂಡಿದ್ದ. ಇವನ ಕಾಲದಿಂದಾರಂಭಿಸಿ ಗಂಗರು ರಾಷ್ಟ್ರಕೂಟರ ಮೆಚ್ಚಿನ ಸಾಮಂತರಾಗಿ ಮುಂದುವರಿದರು. ಸತ್ಯವಾಕ್ಯ, ಗಂಗಗಾಂಗೇಯ, ಗಂಗನಾರಾಯಣ, ಜಯದುತ್ತರಂಗ-ಇವೆಲ್ಲ ಬೂತುಗನ ಬಿರುದುಗಳು. ಇವನ ಪತ್ನಿ ರೇವಕನಿಮ್ಮಡಿ ಜಾಗವೆಡಂಗಿ ಎಂದು ಪ್ರಸಿದ್ದಳಾಗಿದ್ದಳು. ಈಕೆಯ ಮಗ ಮರುಳ. ಬೂತುಗನ ಇನ್ನೊಬ್ಬ ಹೆಂಡತಿಯಾದ ಕಲ್ಲಬ್ಬರಸಿ ಇಮ್ಮಡಿ ಮಾರಸಿಂಹನ ತಾಯಿ.
ಬೂತುಗನ ನಂತರ
ಬೂತುಗನ ಬಳಿಕ 961ರಲ್ಲಿ ಮರುಳ ಅಧಿಕಾರಕ್ಕೆ ಬಂದ. ಇವನು ರಾಷ್ಟ್ರಕೂಟ ಕೃಷ್ಣನ ಮಗಳನ್ನು ಮದುವೆಯಾಗಿದ್ದ. ಇವನು ಪರಮ ಜಿನಭಕ್ತ. ಗಂಗಮಾರ್ತ್ತಂಡ, ಗಂಗಚಕ್ರಯುಧ, ಕೀರ್ತಿಮನೋಭವ ಇತ್ಯಾದಿ ಬಿರುದಾಂಕಿತನಾಗಿದ್ದ ಈತ ಕೇವಲ 2 ವರ್ಷಗಳ ಕಾಲ ಆಳಿದ.
ಇಮ್ಮಡಿ ಮಾರಸಿಂಹ
ಅನಂತರ ಇವನ ಸೋದರನಾದ ಇಮ್ಮಡಿ ಮಾರಸಿಂಹ ಅಧಿಕಾರರೂಢನಾದ. ಇವರೆಲ್ಲ ರಾಷ್ಟ್ರಕೂಟರಿಗೆ ನಿಷ್ಠಾವಂತರಾದ ಸಾಮಂತರಾಗಿದ್ದ ಕಾರಣ ಇವರ ಇತಿಹಾಸ ರಾಷ್ಟ್ರಕೂಟರ ಇತಿಹಾಸದ ಒಂದು ಭಾಗವಿದ್ದಂತಾಗುತ್ತದೆ. ಅಧಿಕಾರಕ್ಕೆ ಬಂದಾಗ ಕೃಷ್ಣ ದಕ್ಷಿಣ ಭಾರತದಲ್ಲಿ ಅತಿಪರಾಕ್ರಮಶಾಲಿಯಾದ ಅರಸ ಎನಿಸಿಕೊಂಡಿದ್ದ. ಉತ್ತರದಲ್ಲಿ ಇವನು ನಡೆಸಿದ ಕದನಗಳಲ್ಲಿ ಮಾರಸಿಂಹ ಪ್ರಮುಖ ಪಾತ್ರವಹಿಸಿ ಗೂರ್ಜರಾಧಿರಾಜನೆನಿಸಿಕೊಂಡ. ಅನೇಕ ಕಾಳಗಗಳಲ್ಲಿ ಹೋರಾಡಿ ಶತ್ರುಗಳನ್ನು ಸದೆಬಡೆದ.[೧೨] 967ರಲ್ಲಿ ಕೃಷ್ಣನ ನಿಧನದ ಬಳಿಕ ರಾಷ್ಟ್ರಕೂಟ ರಾಜ್ಯ ಅವನತಿಯ ಮಾರ್ಗವನ್ನು ಹಿಡಿದಾಗ, ಅದನ್ನು ಉಳಿಸಲು ಬಹಳ ಶ್ರಮಿಸಿದ. ಖೊಟ್ಟಿಗನನ್ನು ಸೋಲಿಸಿ ಮಾನ್ಯಖೇಟವನ್ನು ಆಕ್ರಮಿಸಿದ್ದ ಪರಮಾರ ಸೀಯಕನೊಡನೆ ಶ್ರಮದಿಂದ ಹೋರಾಡಿ ಅವನನ್ನು ಓಡಿಸಿದ. ಆದರೂ ರಾಷ್ಟ್ರಕೂಟ ರಾಜ್ಯ ಚಾಳುಕ್ಯ ಇಮ್ಮಡಿ ತೈಲಪನ ಆಕ್ರಮಣವನ್ನು ತಾಳಲಾರದೆ ಅಸ್ತಂಗತವಾದಾಗ ಕೃಷ್ಣನ ಮೊಮ್ಮಗನೂ ತನ್ನ ಸೋದರಳಿಯನೂ ಆದ ನಾಲ್ವಡಿ ಇಂದ್ರನಿಗೆ ಬೆಂಬಲವಾಗಿ ನಿಂತು ಅವನಿಗೆ ಬಂಕಾಪುರದಲ್ಲಿ ಪಟ್ಟಗಟ್ಟಿದ.[೧೩][೧೪][೧೫] ಗೋಣೂರು ಕದನದಲ್ಲಿ ನೊಳಂಬಾಂತಕನೆನಿಸಿಕೊಂಡ.[೧೬][೧೭][೧೮][೧೯] ಇಷ್ಟಾದರೂ ವಿಧಿ ಇವನಿಗೆ ವಿರೋಧವಾಗಿದ್ದು, ಇವನ ಶ್ರಮಗಳು ವ್ಯರ್ಥವಾಗಿ ಮತ್ತೊಮ್ಮೆ ಚಾಳುಕ್ಯ ರಾಜ್ಯ ತಲೆಯೆತ್ತಿತ್ತು. ಕೊನೆಗೆ ಹತಾಶನಾದ ಮಾರಸಿಂಹ ಸಲ್ಲೇಖನ ವಿಧಿಯಿಂದ ಶ್ರವಣಬೆಳಗೊಳದಲ್ಲಿ ನಿಧನಹೊಂದಿದ.
ಮಾರಸಿಂಹನ ನಂತರ
ಇವನ ಅನಂತರ ಗಂಗರಲ್ಲಿ ಅಂತಃಕಲಹಗಳುಂಟಾದುವು. ಮಾರಸಿಂಹನ ಮಂತ್ರಿಯಾದ ಚಾವುಂಡರಾಯ ತನ್ನ ಸ್ವಾಮಿಯ ಮಗನಾದ ರಾಚಮಲ್ಲನ ಪಕ್ಷವನ್ನು ಸೇರಿ ಮಾರಸಿಂಹನ ಸೋದರನಾದ ನೀತಿಮಾರ್ಗ ಗೋವಿಂದರಸನ ವಿರುದ್ಧ ಹೋರಾಡಿದ. ಆದರೆ ಚಾಳುಕ್ಯ ತೈಲಪ ಅಳಿದುಳಿದ ಗಂಗರನ್ನೆಲ್ಲ ನಿರ್ಮೂಲಮಾಡಲು ನಿಶ್ಚಯಿಸಿ ಇವರಿಬ್ಬರನ್ನು ಅಡಗಿಸಿದ. ಗಂಗವಾಡಿಯ ಉತ್ತರದ ಭಾಗ ತೈಲಪನ ವಶವಾಯಿತು. ರಾಚಮಲ್ಲ ದಕ್ಷಿಣಭಾಗವನ್ನು 999ರ ವರೆಗೆ ಆಳಿದ. ಆದರೆ ಆ ವೇಳೆಗ ದಕ್ಷಿಣದಲ್ಲಿ ಚೋಳರು ಪ್ರಬಲರಾಗಿ ಚಾಳುಕ್ಯರ ವಿರುದ್ಧ ದಂಡೆತ್ತಿ ಬರಲು ಸಿದ್ಧರಾಗುತ್ತಿದ್ದರು. ಅದಕ್ಕೆ ನಾಂದಿಯಾಗಿ ಅವರು ಗಂಗರ ಪ್ರಾಂತ್ಯವನ್ನು ತಮ್ಮ ವಶಕ್ಕೆ ತಂದುಕೊಂಡರು. ಗಂಗ ಮನೆತನಕ್ಕೆ ಸೇರಿದ ಕೆಲವರು-ಕಂಚರಸ, ಉದಯಾದಿತ್ಯ ಇತ್ಯಾದಿ-ಅನಂತರ ಚಾಲುಕ್ಯರ ಅಧೀನದಲ್ಲಿ ಅಲ್ಲಲ್ಲಿ ಪ್ರಾಂತ್ಯಾಧಿಕಾರಿಗಳಾದುದನ್ನು ಕಾಣುತ್ತೇವೆ.
ಮಂತ್ರಿ ಚಾವುಂಡರಾಯ
- ಈತ ರಾಚಮಲ್ಲ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು
- ಈತ ಅಜೀತಸೇನ ಭಟ್ಟಾರಕ ಹಾಗೂ ನೇಮಿಚಂದ್ರ ಮುನಿಯ ಅನುಯಾಯಿ
- ಈತನ ಬಿರುದು - ಸತ್ಯವಿದಿಷ್ಠಿರ
ಈತನ ಕೃತಿಗಳು
- ಸಂಸ್ಕೃತದಲ್ಲಿ “ಚರಿತ್ರಸಾರ”, ಕನ್ನಡದಲ್ಲಿ ಚಾವುಂಡರಾಯ ಪುರಾಣ ಅಥವಾ ಅಥವಾ “ತ್ರಿಷಷ್ಠಿ ಲಕ್ಷಣ ಪುರಾಣ” ಹಾಗೂ ಲೋಕೋಪಾಕರ (ವಿಶ್ವಕೋಶ)
- ಈತನ ಮೊದಲ ಹೆಸರು - ಚಾವುಂಡರಾಜ
- ರಾಚಮಲ್ಲನು ಚಾವುಂಡರಾಯನಿಗೆ ನೀಡಿದ ಬಿರುದು “ರಾಯ’
- ಚಾವುಂಡರಾಯನ ಮಹತ್ಸಾಧನೆ - ಶ್ರವಣಬೆಳಗೋಳದ ಬಾಹುಬಲಿಯ ವಿಗ್ರಹ ನಿರ್ಮಾಣ
- ಈತನ ಆಶ್ರಯ ಪಡೆದ ಕನ್ನಡದ ಹೆಸರಾಂತ ಕವಿ - ರನ್ನ[೨೦]
- ಈತ ಗಂಗರ ಅರಸ 2ನೇ ಮಾರಸಿಂಹನ ಆಳ್ವಿಕೆಯಲ್ಲಿ - ಪ್ರಧಾನ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿ ನಿಯುಕ್ತಿಗೊಂಡ
- 4 ನೇ ರಾಚಮಲ್ಲ ಈತನಿಗೆ ನೀಡಿದ ಬಿರುದು - ಸಮರ ಪರಶುರಾಮ
- ಗೋಣೂರು ಕದನದಲ್ಲಿ ಜಗದೇಕ ವೀರನನ್ನು ಸೋಲಿಸಿ “ವೀರ ಮಾರ್ತಂಡ” ಎಂಬ ಬಿರುದು ಪಡೆದ.[೨೧]
- ಪಾಂಡ್ಯ ಅರಸ ರಾಜಾದಿತ್ಯನನ್ನು ಸೋಲಿಸಿ “ರಣರಂಗ ಸಿಂಹ” ಎಂಬ ಬಿರುದನ್ನು ಪಡೆದ
- ಈತನ ಬಿರುದು - ಭುಜ ವಿಕ್ರಮ, ಸಮರ ಧುರಂಧರ
- ಈತನ ತಾಯಿ - ಕಾಳಲಾದೇವಿ
- ಗೊಮ್ಮಟೇಶ್ವರನ ಕೆತ್ತನೆಯ ಮೇಲ್ವಿಚಾರಕ ಶಿಲ್ಪಿ - ಅರಿಷ್ಟನೇಮಿ
- ಗೊಮ್ಮಟೇಶ್ವರ ವಿಗ್ರಹ ನಿರ್ಮಾಣವಾದದು - ಕ್ರಿ.ಶ.981 – 983
- ಈತನ ಇನ್ನೊಂದು ಮಹಾನ್ ಕಾರ್ಯ - ಚಾವುಂಡರಾಯ ಬಸದಿಯ ನಿರ್ಮಾಣ
ಗಂಗರ ಆಡಳಿತ
- ರಾಜನು ಆಡಳಿತದ ಮುಖ್ಯಸ್ಥನಾಗಿದ್ದನು. ಈತನನ್ನು “ಧ್ಮಮಾಹಾರಾಜ” -ರೆಂದು ಕರೆಯುತ್ತಿದ್ದರು .
- ಮಂತ್ರಿ ಮಂಡಲ - ರಾಜನಿಗೆ ಸಹಾಯಕರಾಗಿದ್ದರು
- ಪ್ರಧಾನ ಮಂತ್ರಿಯನ್ನು - ಸರ್ವಾಧಿಕಾರಿ ಎಂದು ಕರೆಯುತ್ತಿದ್ದರು
- ವಿದೇಶಾಂಗ ಮಂತ್ರಿಯನ್ನು - ಸಂಧಿವಿಗ್ರಹಿ ಎಂದು ಕರೆಯುತ್ತಿದ್ದರು
- ಸೈನ್ಯದ ಮುಖ್ಯಸ್ಥ - ದಂಡನಾಯಕನಾಗಿರುತ್ತಿದ್ದ
- ಖಜಾನೆ ಮುಖ್ಯಾಧಿಕಾರಿಯನ್ನು - ಶ್ರೀಭಂಡಾರಿ ಎಂದು ಕರೆಯುತ್ತಿದ್ದರು
- ರಾಜನ ಉಡುಪಗಳ ಉಸ್ತುವಾರಿಕ - ಮಹಾಪಸಾಯಿತ
- ಅರಮನೆಯ ಮೇಲ್ವಿಚಾರಕನನ್ನು - ಮನೆವರ್ಗಡೆ ಎಂದು ಕರೆಯುತ್ತಿದ್ದರು.[೨೨]
- ಲೆಕ್ಕ ಪತ್ರಗಳ ವಿಭಾಗಾಧಿಕಾರಿಯನ್ನು - ಶ್ರೀಕರಣಿಕ ಎಂದು ಕರೆಯುತ್ತಿದ್ದರು
- ರಾಜ್ಯವನ್ನು ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು
- ಪ್ರಾಂತ್ಯಗಳ ಮುಖ್ಯಸ್ಥ - ಪ್ರಾಂತ್ಯಾಧಿಕಾರಿ
- ಪ್ರಾಂತ್ಯಗಳ ವಿಭಾಗಗಳು - ವಿಭಾಗ ಹಾಗೂ ಕಂಪನ
- ವಿಷಯಗಳ ಮುಖ್ಯಸ್ಥ - ವಿಷಯಪತಿ
- ಕಂಪನಗಳ ಮುಖ್ಯಸ್ಥ - ಗಾಮುಂಡ
- ನಗರಾಡಳಿತ ಮುಖ್ಯಸ್ಥ - ನಾಗರೀಕ
- ಪಟ್ಟಣ್ಣದ ಮುಖ್ಯಸ್ಥ - ಪಟ್ಟಣ್ಣ ಸ್ವಾಮಿ
- ಗ್ರಾಮಾಡಳಿತವು ಗಾಮುಂಡ ಮತ್ತು ಕರಣಿಕನಿಗೆ ಸೇರಿತ್ತು .
- ಗಜದಳದ ಮುಖ್ಯಸ್ಥ - ಗಜಸಹನಿ
- ಅಶ್ವಪಡೆಯ ಮುಖ್ಯಸ್ಥ - ಅಶ್ವಾಧ್ಯಕ್ಷ
- ಗಂಗರ ಕಾಲದ ನಾಣ್ಯಗಳು - ಪೊನ್ನ, ಸುವರ್ಣ, ಗದ್ಯಾಣ, ನಿಷ್ಕ, ಹಾಗೂ ಬೆಳ್ಳಿಯ ಪಣ, ಹಾಗೂ ಹಗ, ಕಾಸು
- ಇವರ ಸಮಾಜದಲ್ಲಿ ರಾಜರ ಸ್ವಾಮಿನಿಷ್ಠೆಗೆ ಪ್ರಾಣತ್ಯಾಗ ಮಾಡುವ ಪದ್ಧತಿ - ಗರುಡ ಪದ್ಧತಿ ಅಸ್ತಿತ್ವದಲ್ಲಿತ್ತು
ನಿಯೋಗಿಯು ಅರಮನೆಯ ಮೇಲುಸ್ತುವಾರಿ, ಅರಸು ಮನೆತನದ ಬಟ್ಟೆ ಮತ್ತು ಒಡವೆಯನ್ನು ನೋಡಿಕೊಳ್ಳುತ್ತಿದ್ದನು. ಅರಸರ ಸಭೆಗಳನ್ನು ಮತ್ತು ಹೆಬ್ಬಾಗಿಲಿನ ಉಸ್ತುವಾರಿ ನೋಡಿಕೊಳ್ಳುವವರನ್ನು ಪಡಿಯಾರ ಎಂದು ಕರೆಯುತ್ತಿದ್ದರು.[೨೩] ಪೆರ‍್ಗಡೆಯು ಗಂಗರ ನಾಡಿನಲ್ಲಿ ತಮ್ಮ ಕಸುಬನ್ನು ಮಾಡುತ್ತಿದ್ದ ಅಕ್ಕಸಾಲಿಗರು, ಕಲೆಗಾರರು, ಕಮ್ಮಾರರು ಮತ್ತು ಕುಂಬಾರರ ಮೇಲ್ವಿಚಾರಣೆ ಮಾಡುತ್ತಿದ್ದನು. ಗಂಗರ ನಾಡಿನ ಸುಂಕ ಮತ್ತು ತೆರಿಗೆಯನ್ನು ನೋಡಿಕೊಳ್ಳುತ್ತಿದ್ದವನನ್ನು ಸುಂಕಪೆರ‍್ಗಡೆ ಎಂದು ಕರೆಯುತ್ತಿದ್ದರು.[೨೪] ಈ ಸುಂಕ ಪೆರ‍್ಗಡೆಯ ಕೆಳಗೆ ನಾಡಬೊವರು ಕೆಲಸ ಮಾಡುತ್ತಿದ್ದರು. ನೆಲದ ಮೇಲುಸ್ತುವಾರಿ ನೋಡಿಕೊಳ್ಳುವವನನ್ನು ಪ್ರಭು ಎಂಬ ಬಿರುದಿನಿಂದ ಕರೆಯುತ್ತಿದ್ದರು.[೨೫] ಹಳ್ಳಿಗಳ ಮೇಲುಗರನ್ನು ಗಾವುಂಡ ಎಂದು ಕರೆಯುತ್ತಿದ್ದರು.
ಗಂಗರ ಆಡಳಿತದ ಹರವು
- ಮೊದಲು ‘ಕುವಲಾಳ’ (ಕೋಲಾರ) ದಿಂದ ಆಳುತ್ತಿದ್ದ ದಡಿಗ ಮತ್ತು ಮಾಧವರು ಹಾಗು ಇನ್ನಿತರ ಗಂಗರಸರು, ಹರಿವರ್ಮನ ಹೊತ್ತಿನಲ್ಲಿ ( ಕ್ರಿ.ಶ 390- 410) ಕುವಲಾಳವನ್ನು ಬಿಟ್ಟು ತಲಕಾಡಿನಿಂದ ಆಳಲಾರಂಭಿಸಿದರು. ಹೀಗೆ ತಲಕಾಡು ಮೇಲ್ಪಟ್ಟಣವಾಯಿತು. ಚನ್ನಪಟ್ಟಣ ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಾನ್ಯಪುರ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ಇವರ ಕಿರುಪಟ್ಟಣಗಳಾಗಿದ್ದವು, ಹಾಗು ಮಾನ್ಯಪುರದಲ್ಲಿ ಇವರ ಅರಮನೆ ಕೂಡ ಇದ್ದಿತ್ತು. ಹೀಗಾಗಿ ಕೋಲಾರ, ಬೆಂಗಳೂರು, ತುಮಕೂರು ಇವರ ಆಡಳಿತದ ಭಾಗವಾಯಿತು. ಅವಿನೀತನು (ಕ್ರಿ.ಶ 469 – 529) ತನ್ನ ಆಡಳಿತದ ಹರವನ್ನು ಕೊಂಗುನಾಡಿನವರೆಗೆ ಹರಡಿದನು ಹಾಗು ಸೆಂದ್ರಕ (ಚಿಕ್ಕಮಗಳೂರು ಜಿಲ್ಲೆಯ ಭಾಗಗಳು), ಪುನ್ನಾಟ ಮತ್ತು ಪನ್ನಾಡ (ಚಾಮರಾಜನಗರ ಜಿಲ್ಲೆಯ ಭಾಗಗಳು) ದವರೆಗೂ ವಿಸ್ತರಿಸಿದನು.[೨೬][೨೭]
- ಗಂಗನಾಡಿನ ತಿರುಳುಬಾಗವನ್ನು ‘ಗಂಗವಾಡಿ’ ಎಂದು ಕರೆಯಲಾಗುತ್ತಿತ್ತು. ಗಂಗವಾಡಿ ಭಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿತ್ತು. ’ಪುನ್ನಾಟ’ಕ್ಕೆ ತಲಕಾಡಿನ ಗಂಗರು ತಮ್ಮ ಆಡಳಿತವನ್ನು ವಿಸ್ತರಿಸಿದ ಸಂಗತಿಯನ್ನು ಮಡಕೆರೆ (ಕ್ರಿ.ಶ 466), ಸಾಲಿಗ್ರಾಮ (ಕ್ರಿ.ಶ 600ರ ಸುಮಾರು), ತಿರುಮೊರೆಕೋಳಿ (ಕ್ರಿ.ಶ 700ರ ಸುಮಾರು), ಕುಲಗಾಣ, ದೇಬೂರು ಮತ್ತು ಹೆಬ್ಬೂರಿನ ಕಲ್ಬರಹಗಳು ಹೇಳುತ್ತವೆ. ಹಿಂದೆ ಪುನ್ನಾಟವು ಒಂದು ಚಿಕ್ಕ ನಾಡಾಗಿತ್ತು ಎಂದು ಅವನೀತನ ಕಲ್ಬರಹಗಳಿಂದ ತಿಳಿದು ಬರುತ್ತದೆ ಹಾಗು ಪುನ್ನಾಟರ ಪಟ್ಟದರಸಿಯನ್ನು ಅವನೀತನು ಮದುವೆಯಾಗುತ್ತಾನೆ ಮತ್ತು ಅವನ ಮಗನೇ ದುರ್ವಿನೀತ. ಗಂಗರಸರಲ್ಲೇ ಗಟ್ಟಿಗನಾದ ‘ದುರ್ವಿನೀತ’ನು (ಕ್ರಿ.ಶ 529 – 579 ) ತಮಿಳುನಾಡಿನ ತೊಂಡಯ್ಮಂಡಲದ ಕಾಳಗದಲ್ಲಿ ಪಲ್ಲವರನ್ನು ಸೋಲಿಸಿದನು. ನಲ್ಲಾಳ ಮತ್ತು ಕಡಗತ್ತೂರು ಕಲ್ಬರಹವು ಇದರ ಬಗ್ಗೆ ವಿವರಿಸುತ್ತದೆ. ಹೀಗಾಗಿ ತಮಿಳುನಾಡಿನ ಹಲವು ಭಾಗವನ್ನು ಕನ್ನಡಿಗರಾದ ಗಂಗರು ಆಳಿದರು.
- ದುರ್ವಿನೀತನ ಆಡಳಿತದ ಹರವು ತೆಂಕಣದಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ಬಡಗಣದ ಬಳ್ಳಾರಿಯವರೆಗೆ ಹರಡಿತ್ತು. ದುರ್ವಿನೀತನು ತನ್ನ ಮಗಳನ್ನೇ ಕನ್ನಡಿಗರ ಕೆಚ್ಚೆದೆಯ ಚಾಲುಕ್ಯರರಸು ಇಮ್ಮಡಿ ಪುಲಿಕೇಶಿಗೆ ಮದುವೆ ಮಾಡಿಕೊಟ್ಟಿದ್ದ. ಇದು ರಾಜ್ಯವನ್ನಾಳಲು ಇನ್ನೂ ಸಹಾಯ ಮಾಡಿತು. ದುರ್ವಿನೀತನು ಕಲೆ ಮತ್ತು ಸಾಹಿತ್ಯಕ್ಕೆ ಬೆಂಬಲ ನೀಡಿದ್ದನು, ಅವನೇ ‘ಶಬ್ದಾವತಾರ‘ ಎಂಬ ಹೊತ್ತಿಗೆಯನ್ನು ಬರೆದಿದ್ದನೆಂದು ‘ಗುಮ್ಮರೆಡ್ಡಿಪುರದ ಕಲ್ಬರಹ’ವು ತಿಳಿಸುತ್ತದೆ. ಗಂಗರರಸ ಇಮ್ಮಡಿ ಶಿವಮಾರನು (ಕ್ರಿ.ಶ) ರಾಷ್ಟ್ರಕೂಟರೊಂದಿಗೆ ಹಗೆ ಸಾಧಿಸಿದ್ದನು. ಆದರೆ ಹಲವು ವರುಷಗಳ ನಂತರ ರಾಷ್ಟ್ರಕೂಟರ ಒಂದನೇ ಅಮೋಘವರ್ಷನು ತನ್ನ ಮಗಳಾದ ಚಂದ್ರಬ್ಬಲಬ್ಬೆಯನ್ನು ಏರೆಗಂಗ ನೀತಿಮಾರ್ಗನ ಮಗ ಒಂದನೇ ಬೂತುಗನಿಗೆ ಮದುವೆ ಮಾಡಿಕೊಟ್ಟನು. ಅಲ್ಲಿಂದ ಈ ಎರಡು ಕನ್ನಡದ ಅರಸು ಮನೆತನಗಳು ಒಡನಾಡಿಗಳಾದವು.
- ರಾಷ್ಟ್ರಕೂಟರ ಮುಮ್ಮುಡಿ ಅಮೋಘವರ್ಷನು ಗಂಗರ ಇಮ್ಮಡಿ ಬೂತುಗನಿಗೆ (ಕ್ರಿ.ಶ 938 – 961) ಗದ್ದುಗೆಯೇರಲು ಸಹಾಯ ಮಾಡಿದನು.[೨೮] ಬಳಿಕ ಮುಮ್ಮುಡಿ ಅಮೋಘವರ್ಷನ ಮಗ ಮುಮ್ಮುಡಿ ಕೃಷ್ಣನು, ಇಮ್ಮಡಿ ಬೂತುಗನ ಜೊತೆ ಸೇರಿ ತಮಿಳುನಾಡಿನ ತಕ್ಕೊಳಂನಲ್ಲಿ ಚೋಳರನ್ನು ಸೋಲಿಸಿದರು. ಈ ಕಾಳಗದ ಮಾಹಿತಿಯನ್ನು ‘ಅತಕೂರಿನ ಕಲ್ಬರಹದಲ್ಲಿ’ ಕೆತ್ತಿಸಿಸಲಾಗಿದೆ.
- ಕ್ರಿ.ಶ 963 ರಲ್ಲಿ ಪಟ್ಟಕ್ಕೇರಿದ ಗಂಗರರಸ ಇಮ್ಮಡಿ ಮಾರಸಿಂಹನು ಬಡಗಣ ಭಾರತದ ಗುರ್ಜರ-ಪ್ರತಿಹಾರ ಮತ್ತು ಪರಮಾರರನ್ನು ಸೋಲಿಸಲು ರಾಷ್ಟ್ರಕೂಟರಿಗೆ ಸಹಾಯ ಮಾಡಿದನು.[೨೯][೩೦] ಇಮ್ಮಡಿ ಮಾರಸಿಂಹ ಮತ್ತು ನಾಲ್ವಡಿ ರಾಚಮಲ್ಲರ ಹೊತ್ತಿನಲ್ಲಿ ಹೆಸರಾಂತ ಮಂತ್ರಿಯಾಗಿ, ಪಡೆಯ ಮೇಲುಗನಾಗಿ ಮತ್ತು ಕವಿಯಾಗಿ ಚಾವುಂಡರಾಯನು ಸೇವೆಸಲ್ಲಿಸಿದನು.
ಗಂಗರ ಆಡಳಿತದ ಬಗೆ
- ಗಂಗರು ತಮ್ಮದೇಯಾದ ರೀತಿಯಲ್ಲಿ ನಾಡಿನ ಏಳಿಗೆಗೆ ಆಡಳಿತವನ್ನು ನೀಡಿದರು. ಕದಂಬರಂತೆ ಗಂಗರು ಕೂಡ ಆಡಳಿತದಲ್ಲಿ ಕನ್ನಡವನ್ನು ಬಳಸಿದರು. ಇವರ ಎಲ್ಲಾ ಕಲ್ಬರಹಗಳು ಕನ್ನಡದಲ್ಲಿವೆ. ಗಂಗರಿಗೆ ನಾಡಿನ ಹರವನ್ನು ಹೆಚ್ಚಿಸಿಕೊಳ್ಳುವುದು ಎಷ್ಟು ಮುಖ್ಯವಾಗಿತ್ತೋ ಹಾಗೆಯೇ ಮಂದಿಗೆ ಒಳ್ಳೆಯ ಆಡಳಿತವನ್ನು ನೀಡುವದು ಅಷ್ಟೇ ಮುಖ್ಯವಾಗಿತ್ತು ಎಂದು ಕಲ್ಬರಹಗಳಿಂದ ತಿಳಿದುಬರುತ್ತದೆ. ಗಂಗರ ಆಡಳಿತದ ನೆಲವನ್ನು ಹಲವು ಭಾಗಗಳಾಗಿ ವಿಂಗಡಿಸಲಾಗಿತ್ತು, ಅವುಗಳೆಂದರೆ ರಾಷ್ಟ್ರ(ಜಿಲ್ಲೆ) ಮತ್ತು ವಿಶಯ (ಸಾವಿರ ಹಳ್ಳಿಗಳು). ಸರಿಸುಮಾರು 800ರ ಹೊತ್ತಿನಲ್ಲಿ ‘ವಿಶಯ’ ಎಂಬ ಸಂಸ್ಕೃತ ಪದದ ಬದಲಾಗಿ ‘ನಾಡು‘ ಎಂದು ಬಳಸಿಕೊಂಡರು. ಎತ್ತುಗೆಗೆ: ಸಿಂದನಾಡು, ಪುನ್ನಾಡು(ಪುನ್ನಾಟ).[೩೧] ನಾಡು ಎಂದರೆ ಸಾವಿರ ಹಳ್ಳಿಗಳನ್ನೊಳಗೊಂಡ ಒಂದು ಭಾಗವಾಗಿತ್ತು. ಇವುಗಳಲ್ಲಿ ದೊಡ್ಡ ನಾಡೆಂದರೆ ‘ಗಂಗವಾಡಿ’. ಗಂಗನಾಡಿನ ತಿರುಳುಬಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು, ಇದು 96000 ಹಳ್ಳಿಗಳ ಒಕ್ಕೂಟ, ಹಾಗು ಗಂಗರ ಹಲವಾರು ಕಲ್ಬರಹಗಳಲ್ಲಿ ಗಂಗವಾಡಿಯನ್ನು ‘ತೊಂಬತ್ತಾರುಸಾಸಿರ’ (ತೊಂಬತ್ತಾರು ಸಾವಿರ ಹಳ್ಳಿಗಳು = ತೊಂಬತ್ತಾರು ನಾಡುಗಳು) ಎಂದೇ ಒಕ್ಕಣಿಸಲಾಗಿದೆ.[೩೨]
- ಗಂಗವಾಡಿಯ ಮಂದಿಯನ್ನು ‘ಗಂಗಡಿಕಾರ’ರು ಎಂದು ಕರೆಯುತ್ತಿದ್ದರು ಹಾಗು ಈ ಹೆಸರು ಇಂದಿಗೂ ಹಳೆಮೈಸೂರು ಭಾಗದಲ್ಲಿ ‘ಗಂಗಡಿಕಾರ’ ಎಂದಾಗಿ ಉಳಿದಿಕೊಂಡು ಬಂದಿದೆ. ಗಂಗರ ಹಲವಾರು ಕಲ್ಬರಹಗಳಿಂದ ಅವರ ಆಡಳಿತದಲ್ಲಿ ಬಳಸುತ್ತಿದ್ದ ಹೆಸರುಗಳನ್ನು ತಿಳಿಯಬಹುದಾಗಿದೆ. ಅರಿದಾಳುವನ್ನು ಸರ‍್ವಾಧಿಕಾರಿ, ಹಣಕಾಸು ನೋಡಿಕೊಳ್ಳುವವರನ್ನು ಶ್ರೀಭಂಡಾರಿ, ಹೊರನಾಡಿನ ಆಳ್ವಿಕವಲಾಳುವನ್ನು (minister) ಸಂಧಿವಿಗ್ರಹ, ನಾಡಾಳುವನ್ನು ಮಹಾಪ್ರಧಾನ, ಪಡೆಯ ಮೇಲಾಳನ್ನು ದಂಡನಾಯಕ, ಆರಯ್ಗನನ್ನು ಮನೆಪೆರ‍್ಗಡೆ, ಆನೆಪಡೆಯ ಮೇಲಾಳುವನ್ನು ಗಜಸಹಾನಿ, ಕುದುರೆಪಡೆಯ ವೀಳ್ಯದೆಲೆ ನೋಡಿಕೊಳ್ಳುವವರನ್ನು ಅಡೆಪ ಎಂದು, ಅರಸರ ನೆರವಿಗನನ್ನು ರಾಜಸೂತ್ರಧಾರಿ, ಗುಟ್ಟಿನ ನೆರವಿಗನನ್ನು ರಹಸ್ಯಾದಿಕ್ರುತ, ಹಳೆಯ ದಾಖಲೆಗಳನ್ನು ನೋಡಿಕೊಳ್ಳುವವರನ್ನು ಶಾಸನದೊರೆ, ನೆಲದಳೆವಿಗನನ್ನು ರಜ್ಜುಕ, ಹಣಕಾಸಿನ ಲೆಕ್ಕಾಚಾರವನ್ನು ನೋಡಿಕೊಳ್ಳುವವನನ್ನು ಲೆಕ್ಕಿಗನೆಂದು ಕರೆಯುತ್ತಿದ್ದರು.
ಸಾಹಿತ್ಯ, ಸಂಸ್ಕೃತಿ, ಜನಜೀವನ
ಶ್ರವಣಬೆಳಗೊಳ ಹಾಗೂ ತಲಕಾಡು ಇವರ ಪ್ರಸಿದ್ಧ ಶಿಕ್ಷಣ ಕೇಂದ್ರಗಳು.
ಧರ್ಮ
ಕಾಳಮುಖ, ಕಪಾಲಿಕಾ ಹಾಗೂ ಪಾಶುಪಥಿ - ಇವರ ಶೈವ ಪಂಥಗಳು. ಇವರ ಕಾಲದಲ್ಲಿ ಪ್ರಬಲವಾಗಿ ಬೆಳೆದ ಧರ್ಮ ಜೈನ ಧರ್ಮವಾಗಿತ್ತು. ಶ್ರವಣಬೆಳಗೊಳ ಜೈನರ ಕಾಶಿ ಎಂದು ಪ್ರಸಿದ್ಧವಾಗಿದೆ.
ಗಂಗರ ಆಶ್ರಯದಲ್ಲಿ ಬರೆಯಲ್ಪಟ್ಟ ಮಹಾ ಕೃತಿಗಳು
- ದತ್ತಕ ಸೂತ್ರ - ರಾಜ 2 ನೇ ಮಾಧವ
- ಗುಣವರ್ಮನು ಶೂದ್ರಕ ಹಾಗೂ ಹರಿವಂಶಗಳ ಕರ್ತೃವಾಗಿದ್ದನು.
- ಛಂದೋಂಬುಧಿಯ ಕರ್ತೃ 1ನೇ ನಾಗವರ್ಮ
- ಗಜಾಷ್ಟಕ, ಸೇತುಬಂಧ, ಶಿವಮಾರ ತರ್ಕಗಳ ಕರ್ತೃ 2 ನೇ ಶಿವಮಾರ[೩೩][೩೪]
- ಚಂದ್ರ ಪ್ರಭಾ ಪುರಾಣ - ವೀರನಂದಿ
- ಬೃಹತ್ ಕಥಾವನ್ನು ಸಂಸ್ಕೃತ ಭಾಷೆಗೆ ಅನುವಾದಿಸಿದವನು ಹಾಗೂ ಭಾರವಿಯ ಕಿರಾತಾರ್ಜುನಿಯ ಕೃತಿಗೆ ಭಾಷ್ಯ ಬರೆದವನು- ದುರ್ವೀನಿತ
- ಗಜಶಾಸ್ತ್ರ - ಶ್ರೀಪುರುಷ
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಂಗರ ಕೊಡುಗೆ
- ಇವರ ವಾಸ್ತುಶಿಲ್ಪ ಕದಂಬರು ಹಾಗೂ ಪಲ್ಲವರ ಕಲೆಯ ಮಿಶ್ರಣವಾಗಿದೆ
- ಮಣ್ಣೆಯ ಕಪಿಲೇಶ್ವರ ದೇವಾಲಯವು ವಾಸ್ತು ಶಿಲ್ಪ ದೃಷ್ಟಿಯಿಂದ ಪ್ರಸಿದ್ಧವಾಗಿದೆ
- ಗಂಗರ ಕಾಲದ ಪ್ರಮುಖ ಬಸದಿಗಳು - ಚಾವುಂಡರಾಯ ಬಸದಿ
- ಶ್ರವಣಬೆಳಗೊಳದಲ್ಲಿರುವ ಪ್ರಮುಖ ಸ್ಥಂಭಗಳು - ಮಾನಸ್ತಂಭ,[೩೫] ಬ್ರಹ್ಮದೇವರ ಸ್ತಂಭ ಹಾಗೂ ತ್ಯಾಗದ ಬ್ರಹ್ಮದೇವ ಸ್ತಂಭ
- ಗಂಗರ ಕಾಲದ ಅಭೂತ ಪೂರ್ವ ಶಿಲ್ಪ ಕಲಾ ಕೆತ್ತನೆ - ಶ್ರವಣಬೆಳಗೊಳದ ಗೊಮ್ಮಟ
- ಇವರ ಕಾಲದಲ್ಲಿ ಪ್ರಸಿದ್ಧ ನೃತ್ಯಗಾರ್ತಿ - ಬಾಚಲು ದೇವಿ
- ಬಾಚಲು ದೇವಿಗೆ ಇದ್ದ ಬಿರುದುಗಳು - ನೃತ್ಯವಿಶಾರದೆ ಹಾಗೂ ಪಾತ್ರ ಜಗದವಳೆ
- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಳತೂರು ಗ್ರಾಮದಲ್ಲಿ ಶ್ರೀ ಸೋಮೇಶ್ವರಸ್ವಾಮಿ ದೇವಾಲಯವಿದೆ.
ಉದ್ಯೋಗ- ಜನಜೀವನ
- ಮಾವಳ್ಳಿ, ಕುಂಸಿ, ದೊಡ್ಡಹೊಮ್ಮ ಹಾಗು ಇನ್ನಿತರ ಕಲ್ಬರಹಗಲ್ಲಿ ಹೇಳಿರುವಂತೆ ಮಂದಿಯ ಅನುಕೂಲಕ್ಕಾಗಿ ನದಿ, ಹೊಳೆ, ಕಾಲುವೆ, ಹಳ್ಳಿಗಳ ಎಲ್ಲೆ, ಬೆಟ್ಟ ಗುಡ್ಡಗಳು, ಕೋಟೆಗಳು, ಕಾಡುಗಳು, ದೇವಸ್ಥಾನಗಳು, ನೀರಿನ ತೊಟ್ಟಿಗಳ ಇರುವಿಕೆಯ ಗುರುತುಗಳನ್ನು ಮಾಡಿದ್ದರು. ಹಾಗೆಯೇ ಆಯಾ ನೆಲದ ಮಣ್ಣಿಗೆ ಸರಿಯಾಗಿ ಯಾವ ಯಾವ ಬೆಳೆಗಳನ್ನು ಬೆಳೆಯಬೇಕೆಂಬುದನ್ನು ತಿಳಿಸಿದ್ದರು. ಅದಕ್ಕಾಗಿ ನೀರಾವರಿ ಕಾಲುವೆ ಮತ್ತು ತೊಟ್ಟಿಗಳನ್ನು ಕಟ್ಟಿಸಿದ್ದರು.[೩೬][೩೭] ಕಲ್ಬರಹಗಳಲ್ಲಿ ಹೇಳಿರುವಂತೆ ಬೇಡರಿಗಾಗಿಯೇ ಹಳ್ಳಿಗಳು ಇರುತ್ತಿದ್ದವು ಹಾಗು ಅದನ್ನು ‘ಬೇಡಪಳ್ಳಿ’ ಎಂದು ಕರೆಯುತ್ತಿದ್ದರು.[೩೮] ಮಯ್ಗಾವಲುಗಾರರನ್ನು ವೆಲಾವಳಿ ಎಂದು ಕರೆಯುತ್ತಿದ್ದರು.
- ಗಂಗರು ತಮ್ಮ ಲಾಂಛನವಾಗಿ ಮದದಾನೆಯನ್ನು ಬಳಸಿಕೊಂಡರು. ಇದರ ಹಿನ್ನೆಲೆ ಹಳೆಮೈಸೂರು ಭಾಗದಲ್ಲಿ ಆನೆಗಳು ಹೆಚ್ಚು ಇದ್ದುದರಿಂದ ಇರಬಹುದು. ಮೇಲುಕೋಟೆಯ ತಾಮ್ರದ ಬರಹ, ಮಾಂಬಳ್ಳಿ ಕಲ್ಬರಹ ಮತ್ತು ಮೇಡುತಂಬಳ್ಳಿ ಕಲ್ಬರಹಗಳಿಂದ ಗಂಗವಾಡಿ ಭಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿದ್ದರಿಂದ ಆಯಾ ಭಾಗಗಳಲ್ಲಿ ಅಡಿಕೆ, ಕಾಳು ಮೆಣಸು, ತೆಂಗು, ಬತ್ತ, ರಾಗಿ, ಎಣ್ಣೆ ಬೀಜಗಳು ಹಾಗು ಜೋಳ ಈ ಬೆಳೆಗಳಿಗೆ ಕಾವೇರಿ, ತುಂಗಭದ್ರ, ವೇದಾವತಿ ನದಿಗಳಿಗೆ ಕಟ್ಟಿದ ಅಣೆಕಟ್ಟುಗಳಿಂದ ಕಾಲುವೆಗಳಲ್ಲಿ ನೀರುಣಿಸುತ್ತಿದ್ದರು.[೩೯][೪೦] ಗಂಗರಸು ನಾಲ್ವಡಿ ರಾಚಮಲ್ಲನ ದೊಡ್ಡಹೊಮ್ಮ ಕಲ್ಬರಹದಿಂದ ಹಲವಾರು ಮಣ್ಣು ಮತ್ತು ನೆಲದ ಬಗೆಯನ್ನು ತಿಳಿಸುವ ಕನ್ನಡದ ಪದಗಳು ಕಂಡುಬರುತ್ತದೆ. ಕರಿಮಣ್ಣಿಯ-ಕಪ್ಪುಮಣ್ಣು, ಕೆಬ್ಬಯಮಣ್ಣು- ಕೆಂಪುಮಣ್ಣು ಎಂದು, ಹಸಿನೆಲ-ಕಳನಿ, ಗಳ್ಡೆ, ಪಣ್ಯ ಎಂದು ಕರೆಯುತ್ತಿದ್ದರು. ರೈತರ ಬಗ್ಗೆ ಹೆಚ್ಚು ಒಲವಿದ್ದ ತಲಕಾಡಿನ ಗಂಗರು ಹಸುಸಾಕಣೆಗೆ ಒತ್ತು ನೀಡಿದರು. ಹಲವು ಹಸು ಸಾಕಣೆಯ ಹಟ್ಟಿಗಳನ್ನು ಅವರೇ ನಡೆಸುತ್ತಿದ್ದರು.
- ಹಲವಾರು ನ್ಯಾಯ ತೀರ್ಮಾನಗಳನ್ನು ಮತ್ತು ಮಂದಿಯ ಹಣಕಾಸಿನ ಪರಿಸ್ಥಿತಿ ನೋಡಿ ಸುಂಕ ರದ್ದತಿಯ ತೀರ್ಮಾನಗಳನ್ನು ಹಳ್ಳಿಯ ಮೇಲುಗರಾದ ಗಾವುಂಡರೆ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಆಡಳಿತವನ್ನು ಕೆಳಗಿನ ಅಧಿಕಾರಿಗಳಿಗೆ ಹಂಚಿದ್ದರು. ರದ್ದು ಮಾಡಿದ ಸುಂಕವನ್ನು ‘ಮಾನ್ಯ’ ಎಂದು ಕರೆಯಲಾಗುತ್ತಿತ್ತು. ಸುಂಕ ‘ಮಾನ್ಯ’ವಾದ ನೆಲವನ್ನು ಸೈನ್ಯದಲ್ಲಿ ಕಾದಾಡಿದವರಿಗೆ ಮತ್ತು ನಾಡವೀರರಿಗೆ ಕೊಡುತ್ತಿದ್ದರು, ಇದನ್ನು ಬಿಳವ್ರುತ್ತಿ (ಬಿೞವ್ರುತ್ತಿ) ಹಾಗು ಕಲ್ನಾಡ್ ಎಂದು ಕರೆಯುತ್ತಿದ್ದರು.[೪೧] ಈ ಸಂಗತಿಯನ್ನು ನರಸಿಂಹಪುರದ ಕಲ್ಬರಹದಲ್ಲಿ ತಿಳಿಸಲಾಗಿದೆ. ಒಳಸುಂಕವನ್ನು ಅಂತಕರ ಎಂದು ಕರೆಯುತ್ತಿದ್ದರು. ರಾಜನಿಂದ ಬಂದ ಬಹುಮಾನವನ್ನು ಉತ್ಕೊಟವೆಂದು ಕರೆಯುತ್ತಿದ್ದರು. ಆಮದು ವಸ್ತುಗಳ ಸುಂಕ ಮತ್ತು ತೆರಿಗೆಗೆ ಸುಲಿಕ ಎಂದು ಕರೆಯುತ್ತಿದ್ದರು. ಕೃಷಿಯ ಮೇಲಿನ ತೆರಿಗೆಯನ್ನು ‘ಸಿದ್ಧಾಯ’ ಎಂದು, ಮಾರಾಟದ ಮೇಲಿನ ತೆರಿಗೆಯನ್ನು ಪೊತ್ತೊಂದಿ ಎಂದು ಕರೆಯುತ್ತಿದ್ದರು. ಇವೆಲ್ಲವನ್ನೂ ನಾಡಿನ(ಸಾವಿರಹಳ್ಳಿಗಳು) ಮೇಲುಗರು ಮತ್ತು ಸುಂಕಪೆರ‍್ಗಡೆಯವರು ಲೆಕ್ಕಾಚಾರ ಮಾಡುತ್ತಿದ್ದರು. ಹಲವು ಕಡೆಗಳಲ್ಲಿ ‘ಪೊತ್ತೊಂದಿ’ ತೆರಿಗೆಯನ್ನು ಹತ್ತನೇ ಒಂದು ಭಾಗದ ತೆರಿಗೆ ಎಂದು, ‘ಐದಾಳ್ವಿ’ಯನ್ನು ಐದನೇ ಒಂದು ಭಾಗದ ತೆರಿಗೆ ಎಂದು, ‘ಏಳಾಳ್ವಿ’ಯನ್ನು ಏಳನೇ ಒಂದು ಭಾಗದ ತೆರಿಗೆ ಎಂದು ಕರೆಯುತ್ತಿದ್ದರು.[೪೨] ಮಣ್ಣದಾರೆ ಎಂಬ ಸುಂಕವನ್ನು ನೆಲಗಂದಾಯದ ಜೊತೆಗೆ ಕುರಿಂಬದೆರೆ ಎಂಬ ಕುರಿಸಾಕಣೆ ಮೇಲಿನ ಸುಂಕವನ್ನು ಕುರುಬರು ಅವರ ಮುಖಂಡನಿಗೆ ಕೊಡುತ್ತಿದ್ದರು.
- ಹಲವು ಕಿರುಸುಂಕವನ್ನು ಕಿರುದೆರೆ ಎಂದು ಕರೆಯುತ್ತಿದ್ದರು. ಕಾಳಗದ ಹೊತ್ತಿನಲ್ಲಿ ಪಡೆಯ ಕಾಳಗದ ತರಬೇತಿಗಾಗಿ ಹಾಗು ಕುದುರೆ ಪಡೆಯ ಕುದುರೆಗಳು, ಆನೆಪಡೆಯ ಆನೆಗಳನ್ನು ಮೇಯಿಸಲು ಹಲವು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದರು ಹಾಗು ಇದಕ್ಕಾಗಿ ಸುಂಕ ತೆರಿಗೆಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ಮಂದಿಯ ಅನುಕೂಲಕ್ಕಾಗಿ ನೀರಿನ ತೊಟ್ಟಿಗಳನ್ನು ಕಟ್ಟಿಸುತ್ತಿದ್ದರು ಇದರ ಹಣಕಾಸಿಗೆ ಬಿಟ್ಟುವತ್ತ ಎಂಬ ತೆರಿಗೆಯನ್ನು ಹಾಕುತ್ತಿದ್ದರು.[೪೩] ಹೀಗೆ ಆಳ್ವಿಕೆಯಲ್ಲಿ ಗಟ್ಟಿಗರಾದ ತಲಕಾಡಿನ ಗಂಗರು ಯಾವುದೇ ಅರಸುಮನೆತನಗಳಿಗಿಂತ ಕಮ್ಮಿಯಿಲ್ಲದೆ ಕನ್ನಡ ನಾಡಿನ ಏಳಿಗೆಗಾಗಿ ಒಳ್ಳೆಯ ಆಡಳಿತ ನೀಡಿದರು.[೪೪][೪೫]
ಇತರ ಮಾಹಿತಿ
ಗಂಗರ ಕಾಲದ ಗ್ರಾಮದ ಮುಖ್ಯಸ್ಥ - ಪ್ರಭು ಮತ್ತು ಗಾವುಂಡ; ಗಂಗರ ಕಾಲದಲ್ಲಿದ್ದ ಹಿರಿಯ ರೈತರ ಸಮಿತಿ - ಪ್ರಜೆಗಾವುಂಡ; ಗಂಗರ ಕಾಲದಲ್ಲಿದ ಕುಟುಂಬ ಪ್ರಮುಖರ ಕೂಟ - ಮಹಾಜನ; ಗಂಗರ ಕಾಲದಲ್ಲಿದ ದೊಡ್ಡ ನೆಯ್ಗೆಯ ಕೇಂದ್ರ - ವಿಜಯಪುರ; ಗಂಗರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು, ಅಗ್ರಹಾರ, ಹಾಗೂ ಬ್ರಹ್ಮಪುರಿ; ಬ್ರಹ್ಮಪುರಿ ಎಂದರೆ - ಒಂದು ಪೇಟೆಯಲ್ಲಿನ ಬ್ರಾಹ್ಮಣರ ಬೀದಿ; ಗಂಗರ ಕಾಲದ ಪ್ರಸಿದ್ಧ ವಿದ್ಯಾಕೇಂದ್ರ - ಶ್ರವಮಬೆಳಗೋಳ ಜೈನ ಮಠ; ಬಾಣನ ಕಾದಂಬರಿ” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು - ನಾಗವರ್ಮ; ಗಂಗರ ಕಾಲದಲ್ಲಿ ಭತ್ತ ಕುಟ್ಟುವಾಗ ಹೇಳುವ ಗೀತೆಗಳನ್ನು ಒಳಗೊಂಡ ಕೃತಿ - ಗಜಾಷ್ಟಕ; ಗಂಗರ ಕಾಲದ ಪಂಚಕೂಟ ಬಸದಿ ಇರುವ ಸ್ಥಳ - ಕದಂಬಹಳ್ಳಿ; ಬೆಂಗಳೂರಿನ ಮ್ಯೂಸಿಯಂನಲ್ಲಿರುವ ಗಂಗರ ಕಾಲದ ವೀರಗಲ್ಲಿನ ಹೆಸರು - ಬೇಗೂರು ವೀರಗಲ್ಲು
ಉಪಸಂಹಾರ
ಸುಮಾರು ಏಳು ಶತಮಾನಗಳ ಕಾಲ ಅಧಿಕಾರದಲ್ಲಿದ್ದ, ತಲಕಾಡಿನ ಗಂಗರೆಂದು ಪ್ರಸಿದ್ಧರಾಗಿರುವ ಈ ಮನೆತನದ ಮೊದಲ ಅರಸರು ಸ್ವತಂತ್ರವಾಗಿ ಮೊದಲ ಸುಮಾರು 300 ವರ್ಷಗಳನ್ನು, ಅನಂತರ ಬಾದಾಮಿಯ ಚಾಳುಕ್ಯರ ಹಾಗೂ ರಾಷ್ಟ್ರಕೂಟರ ಸಾಮಂತರಾಗಿ ಉಳಿದ 400 ವರ್ಷಗಳನ್ನು ಕಳೆದರು. ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮೊದಲು ಮತ್ತು ಹೊಸದಾಗಿ ಅಧಿಕಾರಕ್ಕೆ ಬಂದ ರಾಷ್ಟ್ರಕೂಟರ ಸಾಮಂತಿಕೆಯನ್ನು ಒಪ್ಪುವ ಮೊದಲು, ಇವರು ನಡೆಸಿದ ಹೋರಾಟಗಳು ಪ್ರಶಂಸನೀಯ. ಇದು ಇವರ ಸ್ವತಂತ್ರ್ಯಾಪೇಕ್ಷೆಗೆ ಸ್ವಾಮಿನಿಷ್ಠೆಗೂ ಅಪೂರ್ವನಿದರ್ಶನಗಳಾಗಿವೆ. ಇಮ್ಮಡಿ ಶಿವಮಾರನ ಹಾಗೂ ಇಮ್ಮಡಿ ಮಾರಸಿಂಹರು ಈ ದಿಶೆಯಲ್ಲಿ ನಡೆಸಿದ ಯತ್ನಗಳು ಇತಿಹಾಸ ಪ್ರಸಿದ್ಧವಾಗಿವೆ. ಒಮ್ಮೆ ಒಪ್ಪಿದ ಬಳಿಕ ಸ್ವಾಮಿಗೆ ಯಾವಜ್ಜೀವ ನಿಷ್ಠರಾಗಿದ್ದರು. ಆ ನಿಷ್ಠೆಗಾಗಿ ಪ್ರಾಣತ್ಯಾಗಮಾಡಲು ಸಹ ಇವರು ಹಿಂಜರಿಯಲಿಲ್ಲ. ಈ ಅರಸರು ಜಿನಭಕ್ತರು. ಇವರ ಕಾಲದಲ್ಲಿ ಕರ್ನಾಟಕದಲ್ಲಿ ಗಂಗರ ರಾಜ್ಯದಲ್ಲಿ ಅನೇಕ ಬಸದಿಗಳು ನಿರ್ಮಿತವಾದವು. ಪ್ರಪಂಚದಲ್ಲಿಯೇ ಪ್ರಖ್ಯಾತವಾದ, ಶ್ರವಣಬೆಳಗೊಳದ ಗೊಮ್ಮಟಮೂರ್ತಿಯನ್ನು ಸ್ಥಾಪಿಸಿದ ಕೀರ್ತಿ ಮಾರಸಿಂಹನ ಮಂತ್ರಿಯಾದ ಚಾಮುಂಡರಾಯನಿಗೆ ಸಂದಿದೆ. ಇವರು ಇತರ ಮತಗಳನ್ನು ಹೀಯಾಳಿಸಲಿಲ್ಲ. ಸಮದರ್ಶಿಗಳಂತೆ ಸರ್ವಧರ್ಮಗಳಿಗೂ ಆಶ್ರಯವನ್ನಿತ್ತಿದ್ದರು. ಇವರಲ್ಲಿ ಅನೇಕರು ಸ್ವತಃ ಪಂಡಿತರು. ಕವಿಗಳು. ಸಹಜವಾಗಿಯೇ ಈ ಕಾಲದಲ್ಲಿ ಸಾಹಿತ್ಯ-ಕಲೆಗಳಿಗೆ ಬಹಳ ಪ್ರೋತ್ಸಾಹ ದೊರೆಯಿತು. ಸದಾ ಯುದ್ಧನಿರತರಾದರೂ ಆಡಳಿತವನ್ನು ಕಡೆಗಣಿಸದೆ ಪ್ರಜೆಗಳ ಕ್ಷೇಮಾಭ್ಯುದಯಗಳಿಗಾಗಿ ಅನೇಕ ಕಾರ್ಯಗಳನ್ನು ಮಾಡಿದರು. ನೀರಾವರಿ ಸೌಲಭ್ಯಕ್ಕಾಗಿ ಕೆರೆಗಳನ್ನು ತೋಡಿಸಿದರು. ಬಾವಿಗಳನ್ನು ಅಗೆಸಿದರು. ಕಾಲುವೆಗಳನ್ನು ಕಟ್ಟಿಸಿದರು. ಎಂತಲೇ ಗಂಗರಾಜ್ಯ ಸಮೃದ್ಧವಾಗಿತ್ತು.
ಇವನ್ನೂ ನೋಡಿ
ಉಲ್ಲೇಖಗಳು
- ↑ Sarma (1992), p4
- ↑ Sailendra Nath Sen. Ancient Indian History and Civilization. New Age International, 1999 - India - 668 pages. p. 461.
- ↑ Adiga (2006), p88
- ↑ Baji and Arokiaswamy in Adiga (2006), p89
- ↑ Robert Sewell & Vishwanatha in Arthikaje, Mangalore. "Gangas of Talkad". 1998–2000 OurKarnataka.Com, Inc. Archived from the original on 15 December 2006. Retrieved 2007-01-18.
- ↑ Muddachari 1971, p. 128-129.
- ↑ Muddachari 1971, p. 126.
- ↑ Muddachari 1971, pp. 128–129.
- ↑ Ramesh (1984), pp. 173–174
- ↑ Reu (1933), p62
- ↑ From the Hiregundagal records (Kamath 2001, p78)
- ↑ Gazetteer of the Bombay Presidency ... (in ಇಂಗ್ಲಿಷ್). Printed at the Government Central Press. 1904.
- ↑ Karnataka State Gazetteer: Mysore (in ಇಂಗ್ಲಿಷ್). Director of Print, Stationery and Publications at the Government Press. 1988.
- ↑ Arthikraje, Dr. "History of Karnataka". Our Karnataka. Archived from the original on 2006-10-24.
- ↑ Murthy, M. S. Krishna (1980). The Noḷambas: A Political and Cultural Study, C750 to 1050 A.D. (in ಇಂಗ್ಲಿಷ್). Prasaranga, University of Mysore.
- ↑ Others, Muzaffar H. Syed & (20 February 2022). History of Indian Nation : Ancient India (in ಇಂಗ್ಲಿಷ್). K.K. Publications.
- ↑ Karnataka State Gazetteer: Hassan (in ಇಂಗ್ಲಿಷ್). Director of Print., Stationery and Publications at the Government Press. 1971.
- ↑ Settar, S. (1989). Inviting Death: Indian Attitude Towards the Ritual Death. Monographs and theoretical studies in sociology and anthropology. Vol. 28. BRILL. p. 21. ISBN 90-04-08790-7.
- ↑ State), Mysore (India; Sathyan, B. N. Sri (1972). Mysore State Gazetteer (in ಇಂಗ್ಲಿಷ್). Director of Print., Stationery and Publications at the Government Press.
- ↑ Kamath 2001, p. 45.
- ↑ Rao, Krishna M. V., The Gangas of Talakad: A Monograph on the History of Mysore from the Fourth to the Close of the Eleventh Century, (1936), pp109 – 113, Publishers:B.G. Paul and Company
- ↑ Kamath (2001), p47
- ↑ Adiga (2006), p238
- ↑ From the Kanatur inscription (Adiga 2006, p161)
- ↑ Doddakunce inscription, the Karagada and Maruru inscription (Adiga 2006, p167–68)
- ↑ Adiga 2006, p97, p100
- ↑ From the Cakra-Kedara grant, Kodunjeruvu grant (Adiga 2006, p99
- ↑ Kamath (2001), p44
- ↑ From the Kukkanur inscription (Adiga 2006, p122)
- ↑ These victories were recorded in a Kannada inscription of 964 near Jabalpur (Kamath 2001, p83)
- ↑ Adiga (2006), p10
- ↑ (Adiga 2006, p103)
- ↑ Chopra, Ravindran, Subrahmanian 2003, p160
- ↑ Kamath (2001), p50
- ↑ "CHANDRAGIRI (Chikkabetta)". Mysoretourism.org. Archived from the original on 7 March 2016. Retrieved 2012-04-21.
- ↑ From the Kumsi inscription of 931 and Doddahomma inscription of 977 (Adiga 2006, pp21–22, p27, p29)
- ↑ From the Mavali inscription and Indivalli inscription (Adiga 2006, p31)
- ↑ From inscriptions and literary writings such as Vaddaradhane (920) and Pampa Bharata (940) (Adiga 2006, p36–37)
- ↑ Adiga (2006), p6
- ↑ from the Melkote copper plates and Mamballi inscriptions, Medutambihalli inscription of the 9th century (Adiga 2006, p53)
- ↑ From the Narasimhapura inscription of the 9th century (Sircar and Ramesh in Adiga 2006, pp210–211)
- ↑ Kotutu inscription of the 9th century, Rampura inscription of 905 (Adiga 2006, p219)
- ↑ Adiga (2006), p230
- ↑ "A List of Kings of the Ganga Dynasty; By Suryaprakash Verma on Friday 25 April 2014, 13:33 - Culture - Permalink; ganga dynasty". Archived from the original on 26 ಜುಲೈ 2019. Retrieved 28 ಜುಲೈ 2019.
- ↑ https://www.prajavani.net/artculture/article-features/ganga-dynasty-653765.html ಗಂಗರು 800 ವರ್ಷ ಆಳಿದ ಗಂಗರು;ರೂಪಾ ಕೆ.ಎಂ. Prajavani ;d: 27 ಜುಲೈ 2019,
ಗ್ರಂಥಸೂಚಿ
- Sarma, I.K. (1992) [1992]. Temples of the Gangas of Karnataka. New Delhi: Archaeological Survey of India. ISBN 0-19-560686-8.
- Muddachari, B. (1971). "Durvinita - A Man of Letters". Proceedings of the Indian History Congress. 33: 126–130. JSTOR 44145322.
- Kamath, Suryanath U. (2001) [1980], A concise history of Karnataka : from pre-historic times to the present, Bangalore: Jupiter books, LCCN 80905179, OCLC 7796041
- Chopra, Ravindran, Subrahmanian, P.N., T.K., N. (2003) [2003]. History of South India (Ancient, Medieval and Modern) Part I. New Delhi: Chand publications. ISBN 81-219-0153-7.
{{cite book}}
: CS1 maint: multiple names: authors list (link) - Adiga, Malini (2006) [2006]. The Making of Southern Karnataka: Society, Polity and Culture in the early medieval period, AD 400–1030. Chennai: Orient Longman. ISBN 81-250-2912-5.
- Ramesh, K.V. (1984). Chalukyas of Vatapi. Delhi: Agam Kala Prakashan. OCLC 567370037. 3987-10333.
- Reu, Pandit Bisheshwar Nath (1997) [1933]. History of The Rashtrakutas (Rathodas). Jaipur: Publication scheme. ISBN 81-86782-12-5.
ಹೊರಗಿನ ಕೊಂಡಿಗಳು
- ಗಂಗರು Archived 2016-12-30 ವೇಬ್ಯಾಕ್ ಮೆಷಿನ್ ನಲ್ಲಿ.
- ಗಂಗ (ರಾಜಮನೆತನ)[https://howlingpixel.com/i-kn/%E0%B2%97%E0%B2%82%E0%B2%97_(%E0%B2%B0%E0%B2%BE%E0%B2%9C%E0%B2%AE%E0%B2%A8%E0%B3%86%E0%B2%A4%E0%B2%A8)]