ವಿಷಯಕ್ಕೆ ಹೋಗು

ಪೈಶಾಚೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೈಶಾಚೀ ಭಾಷೆ (ಪೈಶಾಚೀ ಪ್ರಾಕೃತ)
ಬಳಕೆಯಲ್ಲಿರುವ 
ಪ್ರದೇಶಗಳು:
ಉತ್ತರ ಭಾರತ
ಒಟ್ಟು 
ಮಾತನಾಡುವವರು:
ಭಾಷಾ ಕುಟುಂಬ:
 Indo-Iranian
  Indo-Aryan
   ಪೈಶಾಚೀ ಭಾಷೆ (ಪೈಶಾಚೀ ಪ್ರಾಕೃತ)
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: ಯಾವುದೂ ಇಲ್ಲ

ಪೈಶಾಚೀ ಭಾಷೆಯು ಪಿಶಾಚ ( ಪಂಜಾಬದ ಉತ್ತರ ಭಾಗ ಮತ್ತು ವಾಯುವ್ಯ ಗಡಿನಾಡು ಪ್ರಾಂತ) ಅಂದರೆ ಕಾಶ್ಮೀರ ಸುತಮುತ್ತಲಿನ ಪ್ರಾಕೃತಭಾಷೆಯಾಗಿದೆ. ಪಂಚತಂತ್ರ, ಹಿತೋಪದೇಶ , ಬೇತಾಳ ಪಂಚವಿಂಶತಿ ಯಂತಹ ಅನೇಕ ಶ್ರೇಷ್ಠ ಭಾರತೀಯ ನೀತಿಕಥೆಗಳ ಮೂಲ 'ಬೃಹತ್ಕಥೆ'ಯು ಈ ಭಾಷೆಯಲ್ಲಿ ಇದ್ದು ಇದನ್ನು ಗುಣಾಢ್ಯನು ಬರೆದಿದ್ದಾನೆ. ಪೈಶಾಚಿ - ಪ್ರಾಕೃತದ ಒಂದು ಉಪಭಾಷೆ. ಲಕ್ಷಣಗಳನ್ನು ನೋಡಿದರೆ ಇದು ಪಾಲೀ ಭಾಷೆಗೆ ಸಮೀಪದ್ದೆನಿಸುತ್ತದೆ.

ಉಪಭೇದಗಳು[ಬದಲಾಯಿಸಿ]

ವ್ಯಾಕರಣದಲ್ಲಿ ಪೈಶಾಚಿಯ ಹಲವು ಉಪಭೇದಗಳನ್ನು ಹೇಳಿದ್ದಾರೆ. ಅವುಗಳಲ್ಲಿ ಮುಖ್ಯವಾದುದು ಚೂಲಿಕಾ ಪೈಶಾಚಿ. ಪೈಶಾಚಿಯ ಹೆಸರು ಮತ್ತು ಅದರ ಪ್ರಾದೇಶಿಕ ಸಂಬಂಧಗಳ ಬಗ್ಗೆ ವಿದ್ವಾಂಸರಲ್ಲಿ ಮತಭೇದಗಳುಂಟು. ಕೆಲವರು ಇದು ಪಿಶಾಚವೆಂಬ ಜನಾಂಗದ ಭಾಷೆಯೆಂದೂ ಮತ್ತೆ ಕೆಲವರು ಇದು ಪೈಶಾಚೀ ದೇಶದ ಭಾಷೆಯೆಂದೂ ಹೇಳುತ್ತಾರೆ. ಈ ಭಾಷೆಗೆ ಭೂತಭಾಷೆಯೆಂದೂ ಹೆಸರು ಇದೆ.

ವೈಶಿಷ್ಟ್ಯಗಳು[ಬದಲಾಯಿಸಿ]

ಇದರ ಭಾಷಿಕ ವೈಶಿಷ್ಟ್ಯವೆಂದರೆ ವರ್ಗದ 2ನೆಯ ಮತ್ತು 4ನೆಯ ಅಕ್ಷರಗಳು ಅದೇ ವರ್ಗದ ಮೊದಲನೆಯ ಮತ್ತು 3 ನೆಯ ಅಕ್ಷರಗಳಾಗಿ ರೂಪಾಂತರ ಹೊಂದುತ್ತವೆ. ಚೂಲಿಕಾ ಪೈಶಾಚಿಯಲ್ಲಂತೂ ಈ ನಿಯಮ ಶಬ್ದದ ಆರಂಭದ ಅಕ್ಷರಕ್ಕೂ ಅನ್ವಯಿಸುತ್ತದೆ. ಉದಾಹರಣೆ ಮದನ-ಮತನ, ನಗರ-ನಕರ, ಮೇಘ-ಮೇಖ, ಚೂಲಿಕಾ ಪೈಶಾಚಿಯಲ್ಲಿ ದಾಮೋದರ ತಾಮೋತರ, ಗಿರಿ-ಕಿರಿ, ಪೈಶಾಚಿಯಲ್ಲಿ ದಂತ್ಯ ನಕಾವರವೇ ದೊರೆಯುತ್ತದೆ. ಮತ್ತು ಲಕಾರಕ್ಕೆ ಬದಲಾಗಿ ಳಕಾರ ದೊರೆಯುತ್ತದೆ. ಈ ಬದಲಾವಣೆಗಳಿಂದ ಓದಲಿಕ್ಕೆ ಈ ಭಾಷೆ ತುಸು ವಿಚಿತ್ರವೆನಿಸುತ್ತದೆ.

ಬಳಕೆ[ಬದಲಾಯಿಸಿ]

ಗುಣಾಢ್ಯನ ಮಹಾಕಥಾ ಪ್ರಬಂಧವಾದ ಬೃಹತ್ಕಥೆ ಫೈಶಾಚಿ ಭಾಷೆಯಲ್ಲಿತ್ತು. ಆದರೆ, ಆ ಮೂಲ ಗ್ರಂಥ ಈಗ ಉಪಲಬ್ಧವಿಲ್ಲ. ಪೈಶಾಚಿಯಲ್ಲಿ ದೊರೆಯುವ ವಾಙ್ಮಯ ಬಹಳ ಕಡಿಮೆ. ಉದ್ಯೋತನನ ಕುವಲಯಮಾಲಾ ಗ್ರಂಥದಲ್ಲಿ ಕೆಲವು ಪೈಶಾಚೀ ಪರಿಚ್ಛೇದಗಳು ದೊರೆಯುತ್ತವೆ. ಅನಂತರ ಬಂದ ನಾಟಕಗಳಲ್ಲಿ ಅಲ್ಲಲ್ಲಿ ಸ್ವಲ್ಪ ಪೈಶಾಚೀ ಅಂಶಗಳು ದೊರೆಯುತ್ತವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪೈಶಾಚೀ&oldid=758465" ಇಂದ ಪಡೆಯಲ್ಪಟ್ಟಿದೆ