ವಿಷಯಕ್ಕೆ ಹೋಗು

ಬೃಹತ್ಕಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೃಹತ್ಕಥೆ ಅಥವಾ ಬೃಹತ್ಕಥಾ ಅಂದರೆ ಅಕ್ಷರಶಃ ದೊಡ್ಡ ಕಥೆ. ಇದು ಪೈಶಾಚೀ ಎಂಬ ಪ್ರಾಕೃತ ಭಾಷೆಯಲ್ಲಿ ಗುಣಾಢ್ಯನು ಬರೆದ ಪ್ರಾಚೀನ ಭಾರತೀಯ ಮಹಾಕಾವ್ಯವಾಗಿದ್ದು ಮತ್ತು ಪಂಚತಂತ್ರ, ಹಿತೋಪದೇಶ , ಬೇತಾಳ ಪಂಚವಿಂಶತಿ ಯಂತಹ ಅನೇಕ ಶ್ರೇಷ್ಠ ಭಾರತೀಯ ನೀತಿಕಥೆಗಳ ಮೂಲ ಪ್ರಾಯಶಃ ಈ ಬೃಹತ್ಕಥೆಯಲ್ಲಿದೆ. ತೆಗೆದುಕೊಳ್ಳಲಾಗಿದೆ, ಮತ್ತು ಕಥೆಗಳು ಜಗತ್ತಿನ ದೂರ ದೂರ ಪ್ರಯಾಣ ಮಾಡಿವೆ. ಬೃಹತ್ಕಥೆಯ ಮೂಲ ಪ್ರಾಕೃತ ಆವೃತ್ತಿಯು ಕಳೆದುಹೋಗಿದ್ದು ಕಥಾಸರಿತ್ಸಾಗರ, ಬೃಹತ್ಕಥಾಮಂಜರಿ ಮತ್ತು ಬೃಹತ್ಕಥಾಶ್ಲೋಕಸಂಗ್ರಹ ದಂತಹ (ಹೆಚ್ಚಾಗಿ ಸಂಸ್ಕೃತದ) ರೂಪಾಂತರಗಳ ಮೂಲಕ ಮಾತ್ರ ಜೀವಂತವಾಗಿರುವ ದಂತಕಥೆಯಾಗಿ ಅದು ಮಾರ್ಪಟ್ಟಿದೆ. ಸಂಸ್ಕೃತ ಸಾಹಿತ್ಯದಲ್ಲಿ ಸ್ವತಂತ್ರ ಕೃತಿಗಳನ್ನು ರಚಿಸಿದ ಮಹಾಕವಿಗಳು ಎಲ್ಲರೂ ಬೃಹತ್ಕಥೆಗೆ ಋಣಿಯಾಗಿದ್ದಾರೆ. ಭಾಸ,ಕಾಳಿದಾಸ,ದಂಡಿ,ಹರ್ಷ, ಬಾಣ ಎಲ್ಲರೂ ಬೃಹತ್ಕಥೆಯಿಂದಲೇ ತಮ್ಮ ಕಥೆಗಳನ್ನು ತೆಗೆದುಕೊಂಡು , ಗುಣಾಢ್ಯನನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಈ ಕೃತಿಯು ಸಂಸ್ಕೃತದಲ್ಲಿರದೆ ಪೈಶಾಚಿ ಭಾಷೆಯಲ್ಲಿ ಇದ್ದ ಕಾರಣ ಅದಕ್ಕೆ ಸಿಗಬೇಕಾಗಿದ್ದ ಮನ್ನಣೆ ಅದಕ್ಕೆ ಸಿಗಲಿಲ್ಲ. ಗುಣಾಢ್ಯನು ಈ ಕಥೆಗಳನ್ನು ತನ್ನ ಪ್ರತಿಭೆಯಿಂದ ಕಲ್ಪಿಸಿದನೆನ್ನುವುದಕ್ಕಿಂತ ಮೊದಲಿನಿಂದಲೂ ಜನರಲ್ಲಿ ಬಳಕೆಯಲ್ಲಿದ್ದ ಕತೆಗಳನ್ನು ಸಂಗ್ರಹಿಸಿದ ಎನ್ನುವುದು ಹೆಚ್ಚು ಸರಿ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಕಾಲನಿರ್ಣಯ

[ಬದಲಾಯಿಸಿ]

ಮೂಲ ಪ್ರಾಕೃತ ಆವೃತ್ತಿ ಮತ್ತು ಅದರ ಸಂಸ್ಕೃತ ಆವೃತ್ತಿಗಳ ನಡುವೆ ಅನೇಕ ಶತಮಾನಗಳ ಅಂತರ ಇದ್ದಿರಬಹುದಾದ್ದರಿಂದ ಅದರ ನಿಜವಾದ ಕಾಲವನ್ನು ಗುರುತಿಸುವುದು ಕಷ್ಟ. ಬಾಣ , ದಂಡಿ, ಸುಬಂಧುವಿನಂತಹ ನಂತರದ ದಿನ ಸಂಸ್ಕೃತ ಕವಿಗಳ ಹೊಗಳಿಕೆಗಳ ಪ್ರಕಾರ ಬೃಹತ್ಕಥೆಯು ಆರನೇ ಶತಮಾನದ್ದು.

ಆದರೆ ಇತರ ಅಂದಾಜುಗಳ ಪ್ರಕಾರ ಅದು ಇನ್ನೂ ಅನೇಕ ಶತಮಾನಗಳ ಹಿಂದಿನದು. ಉದಾಹರಣೆಗೆ, ಭಾಸಕವಿಯ ಉದಯನ ರಾಜನ ಕಥೆ (ಮತ್ತು ನಂತರ ಕವಿ ಹರ್ಷನಿಂದ ರತ್ನಾವಳಿ ಕೂಡ) ಬೃಹತ್ಕಥೆಯಿಂದ ಸ್ಫೂರ್ತಿ ಪಡೆದಿದ್ದಾದರೆ ಅದು ಭಾಸನಿಗಿಂತ ಅಂತದರೆ ಕ್ರಿಸ್ತಶಕ ಮೂರನೇ ಶತಮಾನಕ್ಕಿಂತ ಹಳೆಯದಿರಬೇಕು.

ಆದರೆ ಬೃಹತ್ಕಥೆಯು ಬೇತಾಳವಿಂಶತಿಗೆ ಆಕರವಾಗಿದ್ದು ಅದರಲ್ಲಿನ ವಿಕ್ರಮ ರಾಜನು ನಿಜಕ್ಕೂ ಕ್ರಿ.ಪೂ. ೧ನೇ ಶತಮಾನದ ವಿಕ್ರಮಾದಿತ್ಯನಾಗಿದ್ದರೆ ಬೃಹತ್ಕಥೆಯ ಕಾಲವು ಆ ವಿಕ್ರಮಾದಿತ್ಯನ ತರುವಾಯ ಅಂದರೆ ಕ್ರಿ.ಪೂ. ೧ನೇ ಶತಮಾನದಿಂದ ಕ್ರಿ.ಶ. ೧ನೇ ಶತಮಾನದ ನಡುವಿನದಾಗುತ್ತದೆ. ಅಂದರೆ ಕ್ರಿ.ಶ. ಮೂರನೇ ಶತಮಾನದ ನಂತರದ್ದಂತೂ ಅಲ್ಲ.

ಪೌರಾಣಿಕ ಹಿನ್ನೆಲೆ

[ಬದಲಾಯಿಸಿ]

ಕಥಾಸರಿತ್ಸಾಗರದಲ್ಲಿ ವಿವರಿಸಿದಂತೆ ಬೃಹತ್ಕಥೆಯ ಹಿನ್ನೆಲೆ ಹೀಗಿದೆ:-

ಶಿವನು ಪಾರ್ವತಿಗೆ ವಿಧ್ಯಾಧರನ ಕಥೆಯನ್ನು ಹೇಳಿದನು. ಶಿವನ ಗಣವಾದ ಪುಷ್ಪದಂತನು ಕಥೆಯನ್ನು ಕೇಳಿಸಿಕೊಂಡನು. ಪಾರ್ವತಿಯು ಪುಷ್ಪದಂತನನ್ನು ಶಪಿಸಿದಾಗ ಅವನ ಸ್ನೇಹಿತನಾದ ಮಾಲ್ಯವನು ಅವನ ಪರ ವಹಿಸಿ ಮಾತನಾಡಿದಾಗ ಅವನೂ ಶಾಪದಲ್ಲಿ ಒಂದು ಪಾಲನ್ನು ಪಡೆದನು.

ಪುಷ್ಪದಂತನು ಕಾಡಿನಲ್ಲಿ ಪಿಶಾಚಕಣಭೂತಿಗೆ ಕಥೆಯನ್ನು ಹೇಳಿ ಶಾಪದಿಂದ ಬಿಡುಗಡೆ ಹೊಂದಿ ಕೌಶಾಂಬಿಯಲ್ಲಿ ವರರುಚಿಯಾಗಿ ಮರುಜನ್ಮ ಪಡೆಯಬೇಕಿತ್ತು . ಈ ನಡುವೆ ಮಾಲ್ಯವನು ಪಿಶಾಚದಿಂದ ಕಥೆಯನ್ನು ಸಂಗ್ರಹಿಸಿ ಪ್ರಪಂಚಕ್ಕೆ ಕಥೆಯನ್ನು ಬಿಡುಗಡೆ ಮಾಡಿದಾಗ ಮಾತ್ರ ಶಾಪ ಬಿಡುಗಡೆ ಪಡೆಯುವವನಿದ್ದನು.

ಮಾಲ್ಯವನು ಗುಣಾಢ್ಯ ಎಂಬ ಹೆಸರಿನಿಂದ ಸುಪ್ರತಿಷ್ಠಾ ಎಂಬವಳ ಮಗನಾಗಿ ಹುಟ್ಟಿದನು, ಮುಂದೆ ಶಾತವಾಹನ ರಾಜನ ಮಂತ್ರಿ , ಬಹುಶಃ ಆಸ್ಥಾನ ಕವಿ ಆದನು. ಅವನು ಪಿಶಾಚದಿಂದ ಕಥೆಯನ್ನು ಪಡೆಯಲು ಬಿಂಧ್ಯ (ವಿಂಧ್ಯ?) ಅರಣ್ಯಕ್ಕೆ ಹೋಗಿ ಪೈಶಾಚಿ ಭಾಷೆಯಲ್ಲಿ ತನ್ನ ರಕ್ತದಿಂದ ಕಥೆಯನ್ನು ಬರೆದನು. ಆದರೆ ಈ ಕಥೆಯನ್ನು ರಾಜನಲ್ಲಿ ತೆಗೆದುಕೊಂಡು ಹೋದಾಗ ರಾಜನು ಕಥೆಯನ್ನು ಮನ್ನಿಸಲು ನಿರಾಕರಿಸಿದನು. ಕಥೆಯು ಪೈಶಾಚಿ ಭಾಷೆಯಲ್ಲಿ ಇದ್ದುದೇ ಇದಕ್ಕೆ ಕಾರಣ. ಗುಣಾಢ್ಯನು ಮತ್ತೆ ಅರಣ್ಯಕ್ಕೆ ಮರಳಿದನು.

ಕಥಾಸರಿತ್ಸಾಗರದ ಒಂದು ಆವೃತ್ತಿಯಂತೆ ಗುಣಾಢ್ಯನು ಬೆಂಕಿಯನ್ನು ಹಚ್ಚಿಟ್ಟು ಅದಕ್ಕೆ ಬೃಹತ್ಕಥೆಯ ಒಂದೊಂದು ಪುಟವನ್ನು ಓದಿ ಬೆಂಕಿಗೆ ಆಹುತಿ ಕೊಡುತ್ತಾ ಹೋದನು. ಈ ಕಥೆಯನ್ನು ಮೆಚ್ಚಿ ಅಲ್ಲಿನ ಎಲ್ಲಾ ಪ್ರಾಣಿಗಳು ಸುತ್ತ ನೆರೆದು ಮೌನವಾಗಿ ಕೇಳುತ್ತಿದ್ದವು. ಅದೇ ಹೊತ್ತಿಗೆ ಬೇಟೆಯಾಡಲು ಅರಣ್ಯಕ್ಕೆ ಬಂದ ರಾಜನಿಗೆ ಯಾವ ಬೇಟೆಯೂ ಸಿಗದೆ ಅವನು ಇಲ್ಲಿಗೆ ಬಂದು ತನ್ನ ರಕ್ತದಲ್ಲೇ ಬರೆದ ಮಹಾಕೃತಿಯ ಪುಟಗಳನ್ನು ಒಂದೊಂದಾಗಿ ಬೆಂಕಿಗೆ ಹಾಕುತ್ತಿರುವ ಗುಣಾಢ್ಯನನ್ನು ಕಂಡನು. ಅವನು ಗುಣಾಢ್ಯನನ್ನು ಏಳನೇ ಅಧ್ಯಾಯವನ್ನು ಬೆಂಕಿಗೆ ಹಾಕದಂತೆ ತಡೆಯುವಲ್ಲಿ ಯಶಸ್ವಿಯಾದನು. ಆದರೆ ಹಿಂದಿನ ಎಲ್ಲ ಆರು ಅಧ್ಯಾಯಗಳು ಬೆಂಕಿಗೆ ಆಗಲೇ ಆಹುತಿ ಆಗಿದ್ದವು. ಬೃಹತ್ಕಥೆಯ ಈ ಏಳನೇ ಅಧ್ಯಾಯವೇ ಉಳಿದುಕೊಂಡು ಕಥಾಸರಿತ್ಸಾಗರದಂತಹ ನಂತರದ ರೂಪಾಂತರಗಳಿಗೆ ಕಾರಣವಾಯಿತು.