ಕಥಾಸರಿತ್ಸಾಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಥಾಸರಿತ್ಸಾಗರ : ಶಾತವಾಹನ ರಾಜನ ಆಸ್ಥಾನದಲ್ಲಿದ್ದ ಗುಣಾಢ್ಯ ಪೈಶಾಚೀ ಭಾಷೆಯಲ್ಲಿ ರಚಿಸಿದ ಬೃಹತ್ಕಥೆಯನ್ನು ಆದರಿಸಿ ಕಾಶ್ಮೀರ ದೇಶದ ಸೋಮದೇವನೆಂಬ ಪಂಡಿತ ಸು. ೧೧ನೆಯ ಶತಮಾನದಲ್ಲಿ ಸಂಸ್ಕೃತದಲ್ಲಿ ರಚಿಸಿದ ಒಂದು ಕಥಾಸಂಕಲನ. ಕಥೆಗಳೆಂಬ ನದಿಗಳು ಬಂದು ಸೇರುವ ಸಾಗರ ಎಂದು ಈ ಶೀರ್ಷಿಕೆಯ ಅರ್ಥ.

ಕಥಾಸರಿತ್ಸಾಗರ ಆವೃತ್ತಿಯಿಂದ ಚಿತ್ರಗಳು, ಸಿ .1590
ಕುತಂತ್ರ ಸಿದ್ಧಿಕಾರಿಯ ಕಥೆ
ಸೋಮಪ್ರಭ ಮತ್ತು ಸಂಗೀತವನ್ನು ಆಲಿಸುವ ದೇವಲೋಕದ ಅಪ್ಸರೆ

ಬೃಹತ್ಕಥೆ[ಬದಲಾಯಿಸಿ]

ಬೃಹತ್ಕಥೆಯ ಸಂಸ್ಕೃತ ರೂಪವನ್ನು ಮೂರು ಗ್ರಂಥಗಳಲ್ಲಿ ನೋಡಬಹುದು. ಅವುಗಳಲ್ಲಿ ಅತಿಪ್ರಾಚೀನವಾದುದು ಬುಧಸ್ವಾಮಿಯದು. ಇದರಲ್ಲಿ ೪,೫೩೯ ಶ್ಲೋಕಗಳಿವೆ. ಆದರೆ ಈತ ಯಾವಾಗ ಎಲ್ಲಿ ಇದ್ದನೆಂಬುದು ತಿಳಿದುಬಂದಿಲ್ಲ. ಮಿಕ್ಕೆರಡು ಗ್ರಂಥಗಳು ಕಾಶ್ಮೀರದಲ್ಲಿದ್ದ ಸಮಕಾಲೀನ ಪಂಡಿತರಿಬ್ಬರು ರಚಿಸಿದುವು. ಅವರಲ್ಲಿ ಕ್ಷೇಮೇಂದ್ರ (ಪ್ರ.ಶ. ೧೦೨೫-೧೦೭೫) ಒಬ್ಬ. ಈತ ಕವಿ ವಿಮರ್ಶಕ ಇವನ ಗ್ರಂಥ ಬೃಹತ್ಕಥಾಮಂಜರಿ. ಮತ್ತೊಬ್ಬ ಪ್ರಸ್ತುತ ಗ್ರಂಥದ ಕರ್ತೃ ಸೋಮದೇವ. ಇದರಲ್ಲಿ ೧೨೫ ಅಧ್ಯಾಯಗಳಿದ್ದು ೨೧,000 ಶ್ಲೋಕಗಳಿವೆ.

ಕಥಾಸರಿತ್ಸಾಗರದ ಕುರಿತು[ಬದಲಾಯಿಸಿ]

ಸ್ಪೇಯರ್ ಎಂಬ ಪಾಶ್ಚಾತ್ಯ ಪಂಡಿತ ಕಥಾಸರಿತ್ಸಾಗರದಲ್ಲಿ ಇಪ್ಪತ್ತೊಂದು ಸಾವಿರದ ಮೂನ್ನೂರೆಂಬತ್ತೆಂಟು (೨೧,೩೮೮) ಶ್ಲೋಕಗಳು ಇವೆಯೆಂದು ಅಭಿಪ್ರಾಯ ಪಟ್ಟಿದ್ದಾನೆ. ಬೂಲರ್ ಎಂಬ ಮತ್ತೊಬ್ಬ ಪಂಡಿತ ಸೋಮದೇವ ಕಥಾಸರಿತ್ಸಾಗರವನ್ನು ಅನಂತರಾಜನ ರಾಣಿಯೂ ಕಲಶನೆಂಬ ರಾಜನ ಮಾತೆಯೂ ಜಲಂಧರ ರಾಜಕುಮಾರಿಯೂ ಆದ ಸೂರ್ಯಮತಿಯ ಪ್ರೋತ್ಸಾಹದಿಂದ ವಿನೋದಕ್ಕಾಗಿ ರಚಿಸಿದನೆಂದು ಹೇಳಲಾಗಿದೆ. ಈ ಗ್ರಂಥವನ್ನು ೧೯೩೦ರಲ್ಲಿ ಮುಂಬಯಿ ನಗರದ ನಿರ್ಣಯಸಾಗರ ಮುದ್ರಣಾಲಯದ ಮಾಲೀಕರು ಮುದ್ರಿಸಿದ್ದಾರೆ.

ಇಲ್ಲಿಯ ಕಥೆಗಳು ಕ್ಷೇಮೇಂದ್ರನ ಗ್ರಂಥಕ್ಕಿಂತ ದೀರ್ಘವಾಗಿವೆ. ಕಥನಕಲೆ ಸೋಮದೇವನಿಗೆ ಚೆನ್ನಾಗಿ ಒಲಿದಿದೆ. ಅಲ್ಲಲ್ಲಿ ಕಾವ್ಯಪ್ರತಿಭೆ ಮಿಂಚಿದರೂ ಕಥನ ಕಲೆಗದು ಅಡ್ಡವಾಗಿಲ್ಲ. ಚಿತ್ತಗ್ರಾಹಿ ಉಪಮೆಗಳು, ವಿವೇಕದ್ಯೋತಕವಾದ ಅನುಭವಗಳು ಅಲ್ಲಲ್ಲಿ ನುಸುಳಿ ಕಥೆಗಳನ್ನು ಸ್ವಾರಸ್ಯಗೊಳಿಸಿವೆ. ಶೈಲಿ ಎಲ್ಲಿಯೂ ಅಲಂಕಾರಿಕವಾಗದೆ ಕಥೆಯ ಓಟ, ಓಘಗಳಲ್ಲಿ ಹಿಡಿತವಿದೆ.

ಈ ಗ್ರಂಥದಲ್ಲಿ ಉದಯನನ ಮಗನಾದ ನರವಾಹನದತ್ತನ ಪ್ರಣಯ ಸಾಹಸಗಳು, ಪರಿಣಯಗಳೇ ಹೇರಳವಾಗಿವೆ. ಮಾನಸವೇಗನೆಂಬ ವಿದ್ಯಾಧರ ನರವಾಹನದತ್ತನ ಕಾಂತೆ ಮದನಮಂಚುಕೆಯನ್ನು ಅಪಹರಿಸುವುದು; ಅವಳನ್ನು ಹುಡುಕಿಕೊಂಡು ಹೋಗುತ್ತ ನಾಯಕ ರೋಮಾಂಚಕಾರಿ ಸಾಹಸಗಳನ್ನು ಎಸಗಿ, ಅನೇಕ ಪ್ರಣಯ, ಪರಿಣಯಗಳನ್ನು ಮಾಡಿಕೊಂಡು, ಪ್ರಬಲ ಪ್ರಯತ್ನದಿಂದ ಕಾಂತೆಯನ್ನು ಪಡೆಯುವುದೇ ಆಗಿದೆ. ಇಂಥ ಕೆಲವು ಸ್ವತಂತ್ರವಾದ ಪ್ರಣಯಕಥೆಗಳಲ್ಲಿ ಅನೇಕ ಉಪಕಥೆಗಳೂ ಅವುಗಳೊಳಗೆ ಮತ್ತೆ ಉಪಕಥೆಗಳೂ ಬರುತ್ತವೆ. ಅವುಗಳಲ್ಲಿ ಕೆಲವು ಪ್ರಣಯ ಕಥೆಗಳು; ಕೆಲವು ಧೀರ ಗಂಭೀರ ಕಥೆಗಳು; ಮತ್ತೆ ಕೆಲವು ಬುದ್ಧಿವಂತಿಕೆಯ ಹಾಗೂ ವಿನೋದ ಕಥೆಗಳು. ಪಂಚತಂತ್ರದ ಮೃಗ ಕಥೆಗಳೂ ವಿಕ್ರಮರಾಜನ ಬೇತಾಳ ಕಥೆಗಳೂ ಇಲ್ಲಿವೆ. ಜೀವನ, ಮತಧರ್ಮ, ಸಂಗೀತ, ನಾಟ್ಯಕಲೆಗಳು, ವೈದ್ಯ ಎಲ್ಲವೂ ಇದ್ದು ಧೀರೋದಾತ್ತರಿಂದ ಹಿಡಿದು ಧೂರ್ತ ವಂಚಕರವರೆಗೂ ಕಾಣಸಿಗುವ ಮನುಷ್ಯ ಪ್ರಪಂಚವೆಲ್ಲ ಚಲನಚಿತ್ರದಂತೆ ಇಲ್ಲಿ ಚಿತ್ರಿತವಾಗಿದೆ. ಜಗತ್ತಿನ ಕಥಾಸಾಹಿತ್ಯದಲ್ಲಿ ಕಂಡುಬರುವ ಕಥಾವೃತ್ತಿಬೀಜಗಳೆಲ್ಲ ಒಂದಲ್ಲ ಒಂದು ರೂಪದಲ್ಲಿ ಇಲ್ಲಿ ಕಾಣುತ್ತವೆ. ಪ್ರಾಚೀನ ನಾಗರೀಕತೆಯ ಸೀಳು ನೋಟವನ್ನು ಈ ಕಥೆಗಳಲ್ಲಿ ಕಾಣಬಹುದು.[೧][೨]

ಅನುವಾದಗಳು[ಬದಲಾಯಿಸಿ]

ಟಾನಿ, ಪೆಂಜರ್ ಇವರುಗಳು ಮಾಡಿರುವ ಇಂಗ್ಲಿಷ್ ಭಾಷಾಂತರದಿಂದ ಈ ಕಥೆಗಳು ಜಗತ್ತಿನ ಜನಾದರಣೆಯನ್ನು ಪಡೆದಿವೆ.ಕನ್ನಡದಲ್ಲಿ ಕಥಾಸರಿತ್ಸಾಗರದ ನೇರ, ಸಂಗ್ರಹ, ಸುಲಭಗ್ರಾಹ್ಯ ಅನುವಾದವೆಂದರೆ ಎ.ಆರ್.ಕೃಷ್ಣಶಾಸ್ತ್ರಿಗಳ ಕಥಾಮೃತ. *

ಉಲ್ಲೇಖ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  1. ವಿಶ್ವವಿದ್ಯಾನಿಲಯ ವಿಶ್ವಕೋಶ/ಕಥಾಸರಿತ್ಸಾಗರ
  2. ಅನುವಾದ: ಎ.ಆರ್.ಕೃಷ್ಣಶಾಸ್ತ್ರಿಗಳ ಕಥಾಮೃತ.