ವಿಷಯಕ್ಕೆ ಹೋಗು

ಗುಣಾಢ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಸಿದ್ಧ ಬೃಹತ್ಕಥೆಯ ಲೇಖಕ.

ಬೃಹತ್ಕಥೆ[ಬದಲಾಯಿಸಿ]

ಬೃಹತ್ಕಥೆಯನ್ನು ಸಂಸ್ಕೃತ ಸಾಹಿತ್ಯದ ಅಮೂಲ್ಯ ಗಣಿಯೆಂದು ಕರೆಯಲಾಗುತ್ತದೆ. ಗುಣಾಢ್ಯನು ಇದನ್ನು ಬರೆದದ್ದು ಪೈಶಾಚಿ ಭಾಷೆಯಲ್ಲಿ. ಸಾಮಾನ್ಯ ಜನರಿಗೆ ಈ ಭಾಷೆಯನ್ನು ಓದುವುದಕ್ಕಾಲೀ ಅರ್ಥ ಮಾಡಿಕೊಳ್ಳುವುದಕ್ಕಾಗಲೀ ಸಾಧ್ಯವಿಲ್ಲ. 'ಬೃಹತ್ಕಥಾಮಂಜರಿ"ಎನ್ನುವ ಹೆಸರಿನಲ್ಲಿ ಕ್ಷೇಮೇಂದ್ರ ಕವಿಯು ಇದನ್ನು ಸಂಸ್ಕೃತಕ್ಕೆ ಅನುವಾದಿಸಿದನು.ಬೃಹತ್ಕಥೆಯ ಮೊದಲ ಅನುವಾದವಾಗಿರುವ ಇದು ಸಂಕ್ಷಿಪ್ತ ರೂಪದಲ್ಲಿದೆ. ಸೋಮದೇವನು ಇನ್ನೂ ಸ್ವಲ್ಪ ವಿಸ್ತೃತವಾಗಿ ಅನುವಾದಿಸಿ ಅದಕ್ಕೆ ಕಥಾಸರಿತ್ಸಾಗರ ಎಂದು ಹೆಸರಿಸಿದನು.

ಗುಣಾಢ್ಯನ ಜನ್ಮ ರಹಸ್ಯ[ಬದಲಾಯಿಸಿ]

ಗುಣಾಢ್ಯನು ಶಿವಗಣಗಳಲ್ಲಿ ಒಬ್ಬನಾದ ಮಾಲ್ಯವಂತನ ಅವತಾರವೆನ್ನುವ ನಂಬಿಕೆಯಿದೆ. ಮಾಲ್ಯವಂತನು ಪಾರ್ವತಿಯ ಶಾಪಕ್ಕೊಳಗಾಗಿ ಭೂಮಿಯ ಮೇಲೆ ಸಾಮಾನ್ಯ ಮಾನವನಾಗಿ ಜನಿಸಿದ್ದರ ಹಿನ್ನಲೆಯಲ್ಲಿ ಕಥೆಯೊಂದಿದೆ: ಒಂದು ಬಾರಿ ಪಾರ್ವತಿಯು ಆವರೆಗೆ ಯಾರೂ ಕೇಳದಂಥ ಕುತೂಹಲಕಾರಿಯಾದ ಕಥೆಯೊಂದನ್ನು ಹೇಳಬೇಕೆಂದು ಕೇಳಿ ಶಿವನನ್ನು ಪೇಚಿಗೆ ಸಿಲುಕಿದಳು. ನಂದಿಕೇಶನನ್ನು ಬಾಗಿಲ ಬಳಿ ಕಾವಲಿಗಿರಿಸಿ, ಒಳಗಡೆಗೆ ಯಾರನ್ನೂ ಬಿಡಬಾದರದೆಂದು ಅವನಿಗೆ ಎಚ್ಚರಿಕೆ ನೀಡಿ ಶಿವನು ಪಾರ್ವತಿಗೆ ವಿದ್ಯಾಧರ ಕಥೆಯನ್ನು ಹೇಳತೊಡಗಿದನು. ಆ ವೇಳೆಯಲ್ಲಿ ಶಿವಗಣಗಳ ಮುಖ್ಯಸ್ಥನಾದ ಪುಷ್ಪದಂತನು ಅಲ್ಲಿಗೆ ಬಂದನು. ಶಿವನ ಬಳಿಗೆ ಯಾವುದೇ ವೇಳೆಯಲ್ಲಿ ಬೇಕಾದರೂ ಹೋಗಲು ಸ್ವಾತಂತ್ರ್ಯವಿದ್ದ ಪುಷ್ಪದಂತನು ನಂದಿಕೇಶನ ಪ್ರತಿಭಟನೆಯನ್ನು ಧಿಕ್ಕರಿಸಿ ಒಳಗೆ ಹೋದನು. ಒಳಗಡೆ ಶಿವನು ಪಾವತಿಗೆ ಕಥೆಯೊಂದನ್ನು ನಿರೂಪಿಸುತ್ತಿರುವುದನ್ನೂ ಪಾವತಿಯು ಆ ಕಥೆಯನ್ನು ತುಂಬಾ ಕುತೂಹಲದಿಂದ ಆಲಿಸುತ್ತಿರುವುದನ್ನೂ ಕಂಡನು. ಕುತೂಹಲಕಾರಿಯಾಗಿದ್ದ ಆ ಕಥೆಯನ್ನು ಕೇಳಿಸಿಕೊಳ್ಳುತ್ತಾ ಪುಪ್ಪದಂತನೂ ಅಲ್ಲಿಯೇ ನಿಂತುಬಿಟ್ಟನು.

ಕಥೆಯನ್ನೆಲ್ಲಾ ಪೂರ್ಣವಾಗಿ ಕೇಳಿಸಿಕೊಂಡ ಮೇಲೆ ಪುಷ್ಪದಂತನು ಶಿವಪಾರ್ವತಿಯರಾರ ಗಮನಕ್ಕೂ ಬಾರದಂತೆ ಹೊರಡಗೆ ಬಂದುಬಿಟ್ಟನು. ತಾನು ಅಲ್ಲಿ ಕೇಳಿಸಿಕೊಂಡಿದ್ದ ಕಥೆಯನ್ನು ತನ್ನ ಹೆಂಡತಿ ಜಯಾಳಿಗೆ ಹೇಳಿದನು.ಯಾವುದೋ ಸಮಯದಲ್ಲಿ ಜಯಾ ಆ ಕಥೆಯನ್ನು ಪಾರ್ವತಿಗೆ ಹೇಳಿದಳು. ಹೀಗಾಗಿ ಪಾರ್ವತಿಯು ಹೊಚ್ಚಹೊಸದೆಂದು ಭಾವಿಸಿದ್ದ ಕಥೆ ಮತ್ತೆ ಅವಳ ಬಳಿಗೇ ಹಿಂದಿರುಗಿತು. ಪಾರ್ವತಿಯು ಶಿವನ ಬಳಿಗೆ ತಕರಾರೆತ್ತಿದಳು."ನೀವು ಹೇಳಿದ್ದಿರಿ ಈ ಕಥೆ ಅಪೂರ್ವವಾದದ್ದು. ಹಿಂದೆ ಯಾರು ಕೇಳದಿರುವಂಥದ್ದು ಎಂದು. ಆದರೆ ಈ ಕಥೆ ಜಯಾಳಿಗೆ ಮೊದಲೇ ತಿಳಿದಿದೆ" ಎಂದು ಹೇಳಿ ನಿರಾಶೆಯಿಂದ ಅಳತೊಡಗಿದಳು. ಅನಂತರ ಶಿವನು ಸ್ವಲ್ಪ ಹೊತ್ತು ಧ್ಯಾನನಿರತನಾಗಿದ್ದು ಪುಷ್ಪದಂತನು ತಿಳಿಯದ ಹಾಗೆ ಒಳಗೆ ಬಂದದ್ದು ಹೇಗೆ? ಇಲ್ಲಿಂದ ಕಥೆಯನ್ನು ಕೇಳಿಸಿಕೊಂಡು ಅದನ್ನು ಜಯಾಳ ಬಳಿ ನಿರೂಪಿಸಿದ್ದು ಹೇಗೆ? ಎನ್ನುವ ವಿಚಾರವನ್ನು ತಿಳಿದುಕೊಂಡನು. ಪಾರ್ವತಿಗೆ ಈ ಸಮಾಚಾರವನ್ನು ವಿವರಿಸಿ ಹೇಳಿ ಪುಷ್ಪದಂತನನ್ನು ಬರಮಾಡಿಕೊಂಡನು. ಪುಷ್ಪದಂತನು ನಡುಗುತ್ತಾ ತನ್ನ ತಪ್ಪುಗಳನ್ನೆಲ್ಲಾ ಒಪ್ಪಿಕೊಂಡನು. ಕೂಡಲೇ ಪಾರ್ವತಿಯು ಪುಷ್ಪದಂತನನ್ನೂ ಅವನ ಪರವಾಗಿ ಮಾತನಾಡಲು ಬಂದ ಮಾಲ್ಯವಂತನನ್ನು ಭೂಮಿಯ ಮೇಲೆ ಮಾನವರಾಗಿ ಹುಟ್ಟಿರೆಂದು ಶಪಿಸಿದಳು. ತಾವು ಶಾಪದಿಂದ ಮುಕ್ತರಾಗುವ ಬಗೆ ಹೇಗೆಂದು ಅವರು ಕೇಳಲು ಬಹುಕಾಲದ ಹಿಂದೆ ವೈಶ್ರವಣನು ಸುಪ್ರತೀಕನೆನ್ನುವ ಯಕ್ಷನನ್ನು ಶಪಿಸಲಾಗಿ ಅವನು 'ಕಾಣಭೂತಿ' ಎನ್ನುವ ಪಿಶಾಚಿಯಾಗಿ ಪರಿವರ್ತಿತನಾದನು. ಈ ಪಿಶಾಚಿಯು ಈಗ ವಿಂಧ್ಯಪರ್ವತದ ದಟ್ಟ ಕಾಡಿನಲ್ಲಿ ವಾಸಿಸುತ್ತಿದೆ. ಅವನೊಡನೆ ಮಾತುಕತೆಯಾಡಿದ ಮೇಲೆ ನೀನು ನಿನ್ನ ಮೊದಲಿನ ಸ್ವರೂಪವನ್ನು ಪಡೆಯುವೆ. ಪುಷ್ಪದಂತನು ತಾನು ಶಿವನಿಂದ ಕೇಳಿಸಿಕೊಂಡ ಕಥೆಯನ್ನು ಆ ಪಿಶಾಚಿಗೆ ಮೊದಲು ಹೇಳಬೇಕು. ಆಗ ಅವನು ತನ್ನ ಶಾಪದಿಂದ ವಿಮೋಚನೆ ಪಡೆದುಕೊಳ್ಳುತ್ತಾನೆ. ಆ ಮೇಲೆ ಕಾಣಭೂತಿಯು ಮಾಲ್ಯವಂತನಿಗೆ ಆನೇಕ ಕಥೆಗಳನ್ನು ಹೇಳುತ್ತದೆ. ಆಗ ಕಾಣಭೂತಿಯೂ ತನ್ನ ಶಾಪದಿಂದ ಮುಕ್ತಿಪಡೆಯುತ್ತದೆ. ಮಾಲ್ಯವಂತನು ತಾನು ಕಾಣಭೂತಿಯಿಂದ ಕೇಳಿಸಿಕೊಂಡ ಕಥೆಗಳನ್ನೆಲ್ಲಾ ಬಹಿರಂಗಪಡಿಸಿದಾಗ ಅವನೂ ಶಾಪವಿಮುಕ್ತನಾಗುತ್ತಾನೆ" ಎಂದು ಹೇಳಿದಳು.

ಮುಂದೆ ಪುಷ್ಪದಂತನು ಕೌಶಾಂಬಿ ನಗರದಲ್ಲಿ ವರರುಚಿಯಾಗಿಯೂ ಮಾಲ್ಯವಂತನು ಸುಪ್ರತಿಷ್ಠ ನಗರದಲ್ಲಿ ಗುಣಾಢ್ಯನಾಗಿಯೂ ಹುಟ್ಟಿದರು.

ಸುಪ್ರತೀಕನೆನ್ನುವ ಯಕ್ಷನು ಕಾಣಭೂತಿಯಾಗಿ ಮಾರ್ಪಟ್ಟದ್ದು ಹೇಗೆನ್ನುವುದಕ್ಕೆ ಕಥೆಯೊಂದಿದೆ: ಸುಪ್ರತೀಕ ಯಕ್ಷನಿಗೆ ಶೂಲ ಶಿರಸ್ ಎನ್ನುವ ರಾಕ್ಷಸ ಗೆಳೆಯನೊಬ್ಬನಿದ್ದನು. ಅವರಿಬ್ಬರೂ ಸಂಗಾತಿಗಳಂತೆ ಅನ್ಯೋನ್ಯವಾಗಿ ಓಡಾಡುತ್ತಿದ್ದರು. ಇದನ್ನು ಇಷ್ಟಪಡದ ವೈಶ್ರವಣನು ಸುಪ್ರತೀಕನನ್ನು ಪಿಶಾಚಿಯಾಗೆಂದು ಶಪಿಸಿದನು. ಆ ಸಮಯದಲ್ಲಿ ಸುಪ್ರತೀಕನ ಅಣ್ಣನಾದ ದೀರ್ಘಜಂಘನು ಅಲ್ಲಿಗೆ ಬಂದು ಶಾಪವನ್ನು ಪರಿಹರಿಸಲು ಕೇಳಿಕೊಂಡನು. ಆಗ ವೈಶ್ರವಣ ಹೇಳಿದ: ಪುಷ್ಪದಂತನು ಶಾಪಕ್ಕೊಳಗಾಗಿ ಭೂಮಿಯ ಮೇಲೆ ಸಾಮಾನ್ಯವಾಗಿ ಹುಟ್ಟಿಬಂದನು. ಅವನು ಒಂದುದಿನ ಸುಪ್ರತೀಕನ ಬಳಿ ಬಂದು ಅನೇಕ ಮಹತ್ವದ ಕಥೆಗಳನ್ನು ನಿರೂಪಿಸಿದನು. ಆ ಕಥೆಗಳನ್ನು ಕೇಳಿಸಿಕೊಂಡ ಸುಪ್ರತೀಕನು ಪುಷ್ಪದಂತನಂತೆಯೇ ಶಾಪಗ್ರಸ್ಥನಾಗಿ ಭೂಮಿಯ ಮೇಲೆ ಮಾನವನಾಗಿ ಹುಟ್ಟಿಬರುವ ಮಾಲ್ಯವಂತನಿಗೆ ಅವುಗಳನ್ನು ಹೇಳಬೇಕು. ಆಗ ಸುಪ್ರತೀಕನು ಶಾಪದಿಂದ ಬಿಡುಗಡೆ ಹೊಂದಿ ತನ್ನ ಮೊದಲಿನ ರೂಪವನ್ನು ಪಡೆಯುತ್ತಾನೆ" ಹೀಗಾಗಿ ಸುಪ್ರತೀಕನು ಕಾಣಭೂತಿ ಎನ್ನುವ ಪಿಶಾಚಿಯಾಗಿ ವಿಂಧ್ಯಪರ್ವತ ಬಳಿಯ ಕಾಡಿನಲ್ಲಿ ಹುಟ್ಟಿದನು.ಇದು ಗುಣಾಢ್ಯನ ಹುಟ್ಟಿನ ಕಥೆ.

ಗುಣಾಢ್ಯನ ಕುಟುಂಬ[ಬದಲಾಯಿಸಿ]

ಪ್ರತಿಷ್ಠಾನ ದೇಶದ ಸುಪ್ರತಿಷ್ಠ ನಗರದಲ್ಲಿ ಸೋಮಶರ್ಮನೆಂಬ ಬ್ರಾಹ್ಮಣ ವಾಸಿಸುತಿದ್ದನು.ಅವನಿಗೆ ವತ್ಸ,ಗುಲ್ಮಕರೆಂಬ ಪುತ್ರರೂ ಶ್ರುತಾರ್ಥ ಎನ್ನುವ ಪುತ್ರಿಯೂ ಇದ್ದರು. ತಂದೆ ಸತ್ತ ಮೇಲೆ ಕೀರ್ತಿಸೇನ ಅವಳನ್ನು ಗಾಂಧರ್ವ ವಿಧಿಯಿಂದ ಮದುವೆಯಾದನು. ಗುಣಾಢ್ಯನು ಅವರ ಮಗನಾಗಿ ಜನ್ಮ ತಳೆದನು.

ಗುಣಾಢ್ಯನ ವಿದ್ಯಾಭ್ಯಾಸ ಮತ್ತು ಮಂತ್ರಿಯ ಕಾರ್ಯ[ಬದಲಾಯಿಸಿ]

ಅವನು ಹುಡುಗನಾಗಿದ್ದಾಗಲೇ ವಿದ್ಯಾಭ್ಯಾಸಕ್ಕೆಂದು ದಕ್ಷಿಣಕ್ಕೆ ಹೋದನು.ಅಲ್ಲಿ ಅವನು ಒಬ್ಬ ಬ್ರಾಹ್ಮಣನಿಂದ ಸಕಲ ಕಲೆಗಳನ್ನು ವಿಜ್ಞಾನವನ್ನು ಅಧ್ಯಯನ ಮಾಡಿದನು.ಆ ಮೇಲೆ ಪ್ರವಾಸ ಕೈಗೊಂಡನು. ಆ ಸಮಯ ಶಾತವಾಹನ ದೊರೆಯು ಮಂತ್ರಿಯಾಗಿ ನೇಮಕಮಾಡಿಕೊಂಡನು. ಅಲ್ಲಿಯೇ ಮದುವೆಯಾದನು. ಒಂದು ದಿನ ಶಾತವಾಹನ ರಾಜನ ಹೆಂಡತಿಯು ರಾಜನ ಕೆಲವೊಂದು ಭಾಷಾ ಶಾಸ್ತ್ರೀಯ ತಪ್ಪುಗಳನ್ನು ಹೊರಗೆಡಹಿ ಆಕ್ಷೇಪಿಸಿಳು. ಅಂದಿನಿಂದ ಶಾತವಾಹನ ರಾಜನು ಮಂಕುಕವಿದಂತಾಗಿ ಭಾವಜೀವಿಯಾದನು. ಆ ಮೇಲೆ ಆ ರಾಜನ ಆಸ್ಥಾನಕ್ಕೆ ಶರ್ವವರ್ಮನ್ ಎನ್ನುವ ಬ್ರಾಹ್ಮಣ ಆಗಮಿಸಿ ಇನ್ನು ಕೇವಲ ಆರು ತಿಂಗಳಲ್ಲಿ ಶಾತವಾಹನನನ್ನು ಭಾಷಾ ಪ್ರವೀಣನ್ನಾಗಿ ಮಾಡುವುದಾಗಿ ಭರವಸೆಯಿತ್ತನು. ಆದರೆ ಗುಣಾಢ್ಯನು ಆ ಕೆಲಸ ಆರು ತಿಂಗಳಲ್ಲಿ ಸಾಧ್ಯವಾಗದೆಂದು ತಿಳಿಸಿದನು. ಇಬ್ಬರು ಪಂಥ ಕಟ್ಟಿದರು. ಶರ್ವವರ್ಮನು ರಾಜನಿಗೆ ಆರು ತಿಂಗಳಲ್ಲಿ ಶಬ್ದಶಾಸ್ತ್ರವನ್ನೂ ಕಲಿಸಿಕೊಟ್ಟದ್ದೇ ಆದರೆ ತಾನು ಸಂಸ್ಕೃತ, ಪ್ರಾಕೃತ ಹಾಗೂ ಸ್ಥಳೀಯ ಭಾಷೆಗಳ ಜ್ಞಾನವನ್ನು ತ್ಯಜಿಸಿಬಿಡುವುದಾಗಿ ಗುಣಾಢ್ಯನು ಶಪಥ ಮಾಡಿದನು. ತಾನು ಆರು ತಿಂಗಳಲ್ಲಿ ರಾಜನಿಗೆ ಶಬ್ದಶಾಸ್ತ್ರ ಕಲಿಸುವುದರಲ್ಲಿ ವಿಫಲನಾದರೆ ಹನ್ನೆರಡು ವರ್ಷಗಳವರೆಗೆ ನಿರಂತವಾಗಿ ಗುಣಾಢ್ಯನ ಪಾದರಕ್ಷೆಗಳನ್ನು ತನ್ನ ತಲೆಯ ಮೇಲೆ ಹೊತ್ತು ತಿರುಗುವುದಾಗಿ ಶರ್ವವರ್ಮನು ಪ್ರತಿಜ್ಞೆ ಕೈಗೊಂಡನು. ಅನಂತರ ಶರ್ವವರ್ಮನು ಗೆದ್ದನು. ಸೋಲನ್ನಪ್ಪಿದ ಗುಣಾಢ್ಯನು ಅರಣ್ಯಕ್ಕೆ ತಲುಪಿದನು.

ಗುಣಾಢ್ಯನ ಅರಣ್ಯವಾಸ ಮತ್ತು ಸಾವು[ಬದಲಾಯಿಸಿ]

ಅಡವಿಗೆ ಹೋದಾಗ ಪಿಶಾಚಿಗಳ ರಾಜನಾದ ಕಾಣಭೂತಿಯ ಜಾಗ ಸಿಗಲಿಲ್ಲ. ಪಿಶಾಚಿಗಳು ತಮ್ಮದೇ ಆದ ಭಾಷೆಯನ್ನು ಬಳಸಿ ಬುದ್ಧಿವಂತಿಕೆಯಿಂದ ಮಾತನಾಡುತ್ತವೆ ಎಂದು ಗುಣಾಢ್ಯ ಕೇಳಿದ್ದನು. ಕಾಣಭೂತಿಯು ಅಲ್ಲಿಗೆ ಬಂದಾಗ ಅವನು ತನ್ನ ಸ್ವಂತ ಭಾಷೆಯನ್ನು ಉಪಯೋಗಿಸಿ ಮಾತನಾಡಿದನು. ಆಗ ಕಾಣಭೂತಿಯು ಆ ಏಳು ವಿದ್ಯಾಧರರ ಮಹಾಕಥೆಯನ್ನು ನಿರೂಪಿಸಿದನು. ಆ ಕಥೆಗಳನ್ನು ಗುಣಾಢ್ಯ ಪೈಶಾಚಿಕ ಭಾಷೆಯಲ್ಲಿ ಬರೆಯಲು ಏಳು ವರ್ಷ ತೆಗೆದುಕೊಂಡನು. ಅವುಗಳನ್ನು ಏಳು ಗ್ರಂಥಗಳಾಗಿ ಸಂಕಲಿಸಿ ಇಟ್ಟನು. ಬರೆಯಲು ಕಾಡಿನಲ್ಲಿ ಉಪಯೋಗವಾಗುವಂಥ ವಸ್ತುಗಳು ಸಿಗದಿದ್ದುದರಿಂದ ಅವನು ಬರವಣಿಗೆಗಾಗಿ ರಕ್ತ ಮತ್ತು ಎಲೆಗಳನ್ನು ಬಳಸಿ ಬರೆದನು.ಅವನು ತನ್ನ ರಚನೆಯನ್ನು ಓದಲಾಂಭಿಸಿದಾಗ ಆ ಕಥೆಯನ್ನು ಕೇಳಲು ದೇವತೆಗಳು ಆಕಾಶದಲ್ಲಿ ನೆರೆದರು.ಅದನ್ನು ಕೇಳಿ ಕಾಣಭೂತಿ ಶಾಪದಿಂದ ಮುಕ್ತಿ ಪಡೆದನು.ಆ ಕಥೆಗಳನ್ನು "ಬೃಹತ್ಕಥೆ" ಎಂದು ಕರೆಯಲಾಯಿತು.

ಅದನ್ನು ರಕ್ಷಿಸುವುದು ತಿಳಿಯದಾದಾಗ ಅವನ ಸಂಗಾತಿಗಳಾದ ಗುಣದೇವ ಮತ್ತು ನಂದಿದೇವ ಅದನ್ನು ಶಾತವಾಹನನಿಗೆ ತಲಪಿಸಿದರು. ಆದರೆ ರಾಜನಿಗೆ ವಿಸ್ತಾರವಾದ ಕಥೆಗಳು ಇಷ್ಟವಾಗಲಿಲ್ಲ. ಏಕೆಂದರೆ ಅದು ಪೈಶಾಚಿಕ ಭಾಷೆಯಲ್ಲಿ ಬರೆದಿತ್ತು. ಆಗ ಆ ಕಥೆಗಳನ್ನು ಗುಣಾಢ್ಯನ ಸಂಗಾತಿಗಳು ಅವನಿಗೆ ತಿರುಗಿಕೊಟ್ಟರು. ಇದರಿಂದ ನಿರುತ್ಸಾಹನಾದ ಗುಣಾಢ್ಯನು ಒಂದು ಅಗ್ನಿ ಕುಂಡವನ್ನು ಮಾಡಿ ಅದರಲ್ಲಿ ಬೃಹತ್ಕಥೆಯನ್ನು ಒಂದು ಬಾರಿ ಜೋರಾಗಿ ಓದಿ ಅಳುತ್ತಾ ಅದರಲ್ಲಿ ಹಾಕತೊಡಗಿದನು.ಆದರೆ ಒಂದು ಲಕ್ಷ ಗ್ರಂಥಗಳಿಂದ ಸಂಕಲಿತವಾದ ನರವಾಹನದತ್ತ ವಿದ್ಯಾಧರನ ಕಥೆಯನ್ನು ಮಾತ್ರ ಸಹಚರರಿಗೆ ಕೊಟ್ಟನು. ಆ ಕ್ರಿಯೆಯನ್ನು ಗಮನಿಸುತ್ತಾ ಆ ಕಾಡಿನ ಪ್ರಾಣಿಗಳೆಲ್ಲ ಗುಂಪು ಕಟ್ಟಿದವು. ಆವೇಳೆಗೆ ಶಾತವಾಹನನು ರೋಗಿಷ್ಠನಾಗಿದ್ದನು. ಇದಕ್ಕೆ ಕಾರಣ ರಾಜನು ತಿಂದ ಒಣಮಾಂಸದಿಂದ ಎಂದು ತಿಳಿದುಬಂತು. ಆಗ ಕಾಡಿನಲ್ಲಿ ನೋಡಿದಾಗ ಪ್ರಾಣಿಗಳೆಲ್ಲ ಕಣ್ಣೀರು ಇಡುತ್ತಿದ್ದವು. ಇದನ್ನು ನೋಡಲು ಬಂದ ಶಾತವಾಹನನು ಗುಣಾಢ್ಯನ ಪರಿಸ್ಥಿತಿಯನ್ನು ಕಂಡು ವಿಚಾರಿಸಿದಾಗ ಅವನ ಸಹಚರರು ಕಾರಣವನ್ನು ತಿಳಿಸಿದರು. ಅದಕ್ಕೆ ಗುಣಾಢ್ಯನು ಶಾತವಾಹನಿಗೆ ಪುಷ್ಪದಂತನು ಶಾಪಕ್ಕೆ ಒಳಗಾದುದರಿಂದ ಹಿಡಿದು ತನ್ನ ಕಾರ್ಯವನ್ನು ತಾನೇ ನಾಶಗೊಳಿಸಲು ಹೊರಟವರೆಗಿನ ಸಂಪೂರ್ಣ ಕಥೆಯನ್ನು ಪೈಶಾಚಿಕ ಭಾಷೆಯಲ್ಲಿ ನಿರೂಪಿಸಿದನು. ಗುಣಾಢ್ಯನ ಸಹಚರರು ಅವನ ಮಾತುಗಳನ್ನು ಅನುವಾದಿಸಿ ರಾಜನಿಗೆ ತಿಳಿಸುತ್ತಿದ್ದರು. ಸ್ತಂಭೀಭೂತನಾದ ರಾಜ ಗ್ರಂಥಗಳನ್ನು ಕೇಳಿದನು. ಆದರೆ ಗುಣಾಢ್ಯನು ಆರು ಲಕ್ಷ ಗ್ರಂಥಗಳನ್ನು ಆವೇಳೆಗೆ ಸುಟ್ಟು ಹಾಕಿದ್ದನು. ಒಂದು ಲಕ್ಷ ಗ್ರಂಥವನ್ನು ಮಾತ್ರ ರಾಜನಿಗೆ ಕೊಟ್ಟನು.ಅನಂತರ ಶಾತವಾಹನ ರಾಜನಿಗೆ ಅಂತಿಮಶುಭಾಶಯಗಳನ್ನರ್ಪಿಸಿ ಅಗ್ನಿ ಕುಂಡದೊಳಗೆ ನೆಗೆದನು. ಆ ಮೂಲಕ ತನ್ನ ಭೂಮಿಯ ಮೇಲಿನ ಬದುಕನ್ನು ಕೊನೆಗಾಣಿಸಿದ ಗುಣಾಢ್ಯನು ಶಿವಸಾನ್ನಿಧ್ಯವನ್ನು ಸೇರಿದನು.

ಬೃಹತ್ಕಥೆಯ ರಕ್ಷಣೆ[ಬದಲಾಯಿಸಿ]

ಶಾತವಾಹನ ರಾಜನು ಗುಣಾಢ್ಯನ ಸಹಚರರೊಡನೆ ನರವಾಹನದತ್ತನ ಕಥೆಯನ್ನೊಳಗೊಂಡಿದ್ದ "ಬೃಹತ್ಕಥೆ"ಯನ್ನು ಹೊತ್ತುಕೊಂಡು ಅರಮನೆಗೆ ಬಂದನು.ಆ ಪುಸ್ತಕದಲ್ಲಿದ್ದ ಕಥೆಯನ್ನು ಸಂಸ್ಕೃತದಲ್ಲಿ ವಿವರಿಸಿ ಹೇಳಿದ ಗುಣದೇವ ಮತ್ತು ನಂದಿದೇವನಿಗೆ ಕಾಣಿಕೆಗಳನ್ನು ನೀಡಿ ಗೌರವಿಸಿದನು. ಆ ಪುಸ್ತಕವನ್ನೋದುವ ಎಲ್ಲರಿಗೂ ಅದು ಪೈಶಾಚಿಕ ಭಾಷೆಯಲ್ಲಿ ಹೇಗೆ ಬರೆಯಲ್ಪಟ್ಟಿತೆಂದು ಅರ್ಥವಾಗಲೆನ್ನುವ ದೃಷ್ಟಿಯಿಂದ ರಾಜನು ವಿವರವಾದ ಮುನ್ನುಡಿಯೊಂದನ್ನು ಬರೆದು ಸೇರಿಸಿದನು. ಆ ಪುಸ್ತಕವು ಬಹು ಕ್ಷಿಪ್ರದಲ್ಲಿಯೇ ಜಗತ್ರ್ಪಸಿದ್ಧಿಯನ್ನು ಪಡೆಯಿತು.

ಬೃಹತ್ಕಥೆಯ ಬಳಕೆ[ಬದಲಾಯಿಸಿ]

ಬೃಹತ್ಕಥೆಯಲ್ಲಿರುವ ಉದಯನ ಚರಿತ್ರೆಯನ್ನು ಭಾಸ ಕಾಳಿದಾಸರೂ ತಮ್ಮ ಕೃತಿಗಳಲ್ಲಿ ಬಳಸಿಕೊಂಡಿದ್ದಾರೆ. ನರವಾಹನದತ್ತನ ಸಾಹಸಗಳ ವೃತಾಂತ ಬೃಹತ್ಕಥೆಯ ವಸ್ತು. ಇದರೊಡನೆ ಅನೇಕ ಉಪಕಥೆಗಳೂ ಅವುಗಳ ವ್ಯೂಹಗಳೂ ಸೇರಿಕೊಂಡು ಪ್ರಧಾನ ಕಥೆ ಜಟಿಲವಾಗಿದೆ. ಸೋಮದೇವ ಹೇಳುವಂತೆ ಆಂಧ್ರ ಭೃತ್ಯವಂಶದ ಗುಣಾಢ್ಯನ ಆಶ್ರಯದಾತನು. ಈ ಕಾರಣದಿಂದ ಗುಣಾಢ್ಯನು ಕ್ರಿ. ಶ. ಒಂದನೇ ಶತಮಾನದವನೆಂದು ಹೇಳಬೇಕಾಗುತ್ತದೆ. ಬಾಣ ಮತ್ತು ದಂಡಿ ಬೃಹತ್ಕಥೆಯನ್ನು ಉಲ್ಲೇಖಿಸುವುದರಿಂದ ಅದರ ಕರ್ತೃ ಕ್ರಿ. ಶ. ಐದನೇ ಶತಮಾನಕ್ಕಿಂತ ಹಿಂದಿನವನೆಂದು ತಿಳಿಯಬೇಕಾಗುತ್ತದೆ.

ಗುಣಾಢ್ಯನು ಬೃಹತ್ಕಥೆಯ ರಚನೆಗೆ ಬಳಸಿದ ಪೈಶಾಚಿಕ ಪ್ರಾಕೃತ ಭಾಷೆ ಗೋದಾವರೀ ತೀರದ ವಿಂಧ್ಯ ಪ್ರದೇಶದಲ್ಲಿ ಬಳಕೆಯಲ್ಲಿತ್ತು. ಆ ಪ್ರದೇಶದ ಪಕ್ಕದ ಪ್ರತಿಷ್ಠಾನದಲ್ಲೇ ಗುಣಾಢ್ಯನು ವಾಸವಾಗಿದ್ದುದು. ಅವನ ತಾಯಿ ಶ್ರುತಾರ್ಥ ಎಂಬ ಬ್ರಾಹ್ಮಣ ಕನ್ಯೆಯೆಂದು ತಂದೆ ನಾಗರಾಜ ವಾಸುಕಿಯ ಸಂಬಂಧಿಯಾದ ಕೀರ್ತಿಸೇನನೆಂದೂ "ಕಥಾ ಸರಿತ್ಸಾಗರ"ದಲ್ಲಿ ಹೇಳಿದೆ.

"https://kn.wikipedia.org/w/index.php?title=ಗುಣಾಢ್ಯ&oldid=1195648" ಇಂದ ಪಡೆಯಲ್ಪಟ್ಟಿದೆ