ವಿಷಯಕ್ಕೆ ಹೋಗು

ನಾಗವರ್ಮ-೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಗವರ್ಮ ೧ (ಕಾಲ ಸು ೯೯೦) ಶಾಸನಕವಿಗಳನ್ನು ಬಿಟ್ಟರೆ ಸದ್ಯಕ್ಕೆ ಈತನೇ ಕನ್ನಡ ಸಾಹಿತ್ಯದ ಮೊಟ್ಟಮೊದಲ ಬ್ರಾಹ್ಮಣಕವಿ. ಛಂದೋಬುಧಿ ಮತ್ತು ಕರ್ಣಾಟಕ ಕಾದಂಬರಿ ಈತನ ಎರಡು ಕೃತಿಗಳು. ಇವುಗಳಲ್ಲಿ ಮೊದಲನೆಯದು ಶಾಸ್ತ್ರಗ್ರಂಥ, ಎರಡನೆಯದು ಚಂಪೂಕಾವ್ಯ. ಈ ಕವಿಯ ಬಗ್ಗೆ ಛಂದೋಂಬುಧಿಯಿಂದ ತಿಳಿದುಬರುವ ಸಂಗತಿಗಳಿಗೂ ಕರ್ಣಾಟಕ ಕಾದಂಬರಿಯಿಂದ ತಿಳಿದುಬರುವ ಸಂಗತಿಗಳಿಗೂ ಸಂಪೂರ್ಣ ಹೊಂದಾಣಿಕೆಯಿಲ್ಲ. ಚಂದ್ರನೆಂಬ ರಾಜ ಕವಿಗೆ ಆಶ್ರಯದಾತನಾಗಿದ್ದನೆಂದೂ ಭೋಜರಾಜ ಕವಿಗೆ ಕೆಲವು ಜಾತ್ಯಶ್ವಗಳನ್ನು ಕೊಟ್ಟನೆಂದೂ ಕಾದಂಬರಿಯಿಂದ ತಿಳಿದುಬರುವ ಅಂಶಗಳಾದರೆ ಕವಿ ಸಯ್ಯಡಿಯವನೆಂದೂ ಈತನ ಪೂರ್ವಿಕರು ವೆಂಗಿಯ ವೈದಿಕ ಬ್ರಾಹ್ಮಣರೆಂದೂ ಈತ ಯುದ್ಧವೀರನಾಗಿದ್ದನೆಂದೂ ಛಂದೋಂಬುಧಿಯಿಂದ ತಿಳಿದುಬರುವ ಅಂಶಗಳಾಗಿವೆ.

ಛಂದೋಂಬುಧಿ

[ಬದಲಾಯಿಸಿ]

ಛಂದೋಂಬುಧಿ ಕನ್ನಡದಲ್ಲಿ ಉಪಲಬ್ಧವಿರುವ ಪ್ರಥಮ ಛಂದಶ್ಯಾಸ್ತ್ರ ಕೃತಿ. ಕಾಲದ ದೃಷ್ಟಿಯಿಂದ ಮಾತ್ರವಲ್ಲ, ಮಹತ್ವದ ದೃಷ್ಟಿಯಿಂದಲೂ ಇದು ಆದಿಗ್ರಂಥ. ಕನ್ನಡ ಛಂದಸ್ಸಿನ ಚರಿತ್ರೆಗೆ ಆಕರ, ಆರು ಅಧಿಕಾರಗಳುಳ್ಳ ಈ ಗ್ರಂಥದಲ್ಲಿ ಕವಿ ಸಂಸ್ಕøತ, ಪ್ರಾಕೃತ, ಕನ್ನಡ ಛಂದಸ್ಸುಗಳನ್ನು ನಿರೂಪಿಸಿದ್ದಾನೆ. ಈತ ಸಂಸ್ಕøತ ಛಂದಶ್ಯಾಸ್ತ್ರಕಾರರಾದ ಪಿಂಗಲ, ಜಯದೇವರನ್ನು ಮುಖ್ಯವಾಗಿ ಅನುಸರಿಸಿದ್ದಾನೆ. ಆದರೂ ಕೆಲವು ವಿಷಯಗಳ ವಿವೇಚನೆ ಈತನಲ್ಲಿ ಮೊದಲ ಬಾರಿಗೆ ಬಂದಿದೆ. ವೈದಿಕ ಛಂದಸ್ಸುಗಳನ್ನು ಈತ ಹೇಳಿಲ್ಲ. ಛಂದೋಂಬುಧಿಯ ಪಂಚಮಾಧಿಕಾರ ಅಚ್ಚಗನ್ನಡ ಛಂದಸ್ಸಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಅದರಲ್ಲಿ ಕರ್ನಾಟಕ ವಿಷಯ ಜಾತಿವೃತ್ತಗಳ ವಿವರಣೆಯಿದೆ. ಛಂದೋಂಬುಧಿ ಬಹಳ ಜನಪ್ರಿಯವಾದ ಛಂದೋಗ್ರಂಥವಾಗಿತ್ತೆಂಬುದು ಅದರ ವಿಪುಲ ಪಾಠಾಂತರಗಳಿಂದ ವ್ಯಕ್ತವಾಗುತ್ತದೆ.

ಕರ್ನಾಟಕ ಕಾದಂಬರಿ

[ಬದಲಾಯಿಸಿ]

ಕರ್ಣಾಟಕ ಕಾದಂಬರಿ ಸಂಸ್ಕೃತದಲ್ಲಿ ಬಾಣ ಮತ್ತು ಅವನ ಮಗ ಭೂಷಣನಿಂದ ರಚಿತವಾದ ಕಾದಂಬರಿ ಎಂಬ ಗದ್ಯಕಾವ್ಯದ ಪದ್ಯಾನುವಾದ. ಸಂಸ್ಕೃತ ಕಾದಂಬರಿಯದು ಲಯಾನ್ವಿತವಾದ ಗದ್ಯವಾದುದರಿಂದ ಅದನ್ನು ಪದ್ಯರೂಪಕ್ಕೆ ತಿರುಗಿಸುವುದು ಸುಲಭವೂ ಉಚಿತವೂ ಆಯಿತು. ಶೃಂಗಾರಾದ್ಭುತಪ್ರಧಾನವಾದ ಕಾದಂಬರಿಯ ಕತೆಯ ಸ್ವರೂಪಕ್ಕೆ ಶುದ್ಧ ಪದ್ಯವೇ ತಕ್ಕ ಮಾಧ್ಯಮವೆಂದು ನಾಗವರ್ಮ ಮನಗಂಡದ್ದು ಸ್ತುತ್ಯ. ಈತ ಕಾವ್ಯರಚನೆಗೆ ಚಂಪೂರೂಪವನ್ನು ಆರಿಸಿಕೊಂಡುದಕ್ಕೆ, 10ನೆಯ ಶತಮಾನ ಕನ್ನಡ ಸಾಹಿತ್ಯದಲ್ಲಿ ಚಂಪೂಯುಗವಾಗಿದ್ದುದೂ ಒಂದು ಕಾರಣವೆಂದು ತೋರುತ್ತದೆ. ಪದ್ಯ ಮಾಧ್ಯಮ ಮೂಲ ಕಾವ್ಯದ ಕೆಲವು ದೋಷಗಳನ್ನೂ ಅತಿರೇಕಗಳನ್ನೂ ನಿವಾರಿಸಿಕೊಳ್ಳಲು ಸಹಾಯಕವಾಗಿದೆ; ಬಾಣನ ವಾಗ್ವೈಪರೀತ್ಯ, ವರ್ಣನಾಬಾಹುಳ್ಯ, ಸಮಾಸ ಜಟಿಲತೆಗಳಿಗೆ ಕಡಿವಾಣ ಹಾಕಿದಂತಾಗಿದೆ.

ಮೂಲದ ಸೌಂದರ್ಯ ಸ್ವಾರಸ್ಯ ಜೀವಾಳಗಳಿಗೆ ಭಂಗ ಬರದಂತೆ ಕವಿ ಭಾಷಾಂತರಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಮೂಲತಃ ಈತನದು ಭಾಷಾಂತರವಾದರೂ ಮೂಲವನ್ನು ಮೀರದ ಸ್ವೋಪಜ್ಞತೆಯನ್ನು ಈತ ಉದ್ದಕ್ಕೂ ಪ್ರಕಟಿಸಿದ್ದಾನೆ. ಮೂಲಭಾಗಗಳ ವಿಸ್ತರಣ, ಸ್ವತಂತ್ರ ಪದ್ಯಗಳ ಸೇರ್ಪಡೆ, ಕೆಲವು ಗೌಣವಾದ ಮಾರ್ಪಾಟುಗಳು ಕನ್ನಡ ವರ್ಣನಾತ್ಮಕ ಕಾದಂಬರಿಯಲ್ಲಿ ಕಂಡುಬರುತ್ತವೆ.

ಇದು ಮುಖ್ಯವಾಗಿ ಒಂದು ಸಂಗ್ರಹಾನುವಾದ. ಮೂಲಕೃತಿಯ ಹೂರಣಕ್ಕೆ ಲೋಪವೊದಗದಂತೆ ಕವಿ ಇದನ್ನು ಕುಗ್ಗಿಸಿದ್ದಾನೆ. ಈತ ಸೇರಿಸಿರುವುದಕ್ಕಿಂತ ಬಿಟ್ಟಿರುವುದೇ ಹೆಚ್ಚು. ಮೂಲದ ಅನೌಚಿತ್ಯಗಳನ್ನು ಈತ ಹೋಗಲಾಡಿಸುವಾಗ ಒಮ್ಮೊಮ್ಮೆ ಮೂಲದ ಒಳ್ಳೆಯ ಭಾಗಗಳನ್ನು ಬಿಟ್ಟಿರುವುದೂ ಉಂಟು. ಅಂತೂ ಈತನ ಸಂಗ್ರಹಕಾರ್ಯದಲ್ಲಿ ವೈವಿಧ್ಯವಿದೆ. ಯಥಾವತ್ತಾದ ಅನುವಾದ, ಸಂಗ್ರಹಾನುವಾದ, ವಿಸ್ತಾರಾನುವಾದ, ಭಾವಾನುವಾದ ಮುಂತಾದ ಭಾಷಾಂತರ ಪ್ರಕಾರಗಳನ್ನೆಲ್ಲ ಒಳಗೊಂಡಿರುವ ಕರ್ಣಾಟಕ ಕಾದಂಬರಿ ಭಾಷಾಂತರ ಕಲೆಯ ವಿದ್ಯಾರ್ಥಿಗಳಿಗೆ ಅಧ್ಯಯನಯೋಗ್ಯವಾದ ಆಚಾರ್ಯ ಕೃತಿಯಾಗಿದೆ. ಇದರಲ್ಲಿ ಸೋಲಿನ ಅಂಶಗಳೂ ಇವೆ. ಆದರೆ ಇದು ಗೆಲುವನ್ನು ವಿಶೇಷವಾಗಿ ಸಾಧಿಸಿ ಅತ್ಯುತ್ತಮವಾದ ಅನುವಾದವೆನಿಸಿದೆ. ಕಾದಂಬರಿ ತುಂಬ ತೊಡಕಾದ ಒಂದು ಪ್ರಣಯಕಥೆಯನ್ನು ಹೇಳುತ್ತದೆ. ಅದು ಮಾನುಷ-ಅತಿಮಾನುಷಗಳ ಸಮ್ಮಿಲನವನ್ನೊಳಗೊಂಡ ಒಂದು ಇಂದ್ರಜಲ ಸದೃಶವಾದ ಸ್ವಪ್ನಸಮಾನವಾದ ಜಗತ್ತು. ಅದರಲ್ಲಿ ಪುನರ್ಜನ್ಮ ಶಾಪ ಮುಂತಾದ ಅಸಂಭಾವ್ಯವೆನಿಸುವ ಸಂಗತಿಗಳ ಸರಮಾಲೆಯನ್ನೇ ನೋಡುತ್ತೇವೆ. ಶೃಂಗಾರ ಅದರ ಪ್ರಮುಖ ರಸವಾದರೂ ಅದು ಉದಾತ್ತವಾದ ಶೃಂಗಾರ; ತಪಸ್ಸಿನಿಂದ ಪವಿತ್ರವೂ ಪಕ್ವವೂ ಆಗಿ ಪರಿಣಮಿಸುವಂಥದು. ಈ ಕಾರಣದಿಂದ ಕಾ ದಂಬರಿ ವಿಶಿಷ್ಟದರ್ಶನ ಸಂಪನ್ನವಾಗಿ ಇತರ ಶೃಂಗಾರಕಾವ್ಯಗಳಿಂದ ವಿಭಿನ್ನವಾಗಿ ನಿಲ್ಲುತ್ತದೆ. ಮಹಾಶ್ವೇತೆ, ಕಾದಂಬರಿ, ಪುಂಡರೀಕ, ಚಂದ್ರಾಪೀಡ ಈ ಕಾವ್ಯದ ಪ್ರಧಾನ ಪಾತ್ರಗಳು. ಕಾದಂಬರಿಯ ಹೆಸರನ್ನು ಕವಿ ಕಾವ್ಯಕ್ಕೆ ಕೊಟ್ಟಿದ್ದರೂ ಮಹಾಶ್ವೇತೆಯೇ ಕಾವ್ಯದ ನಾಯಕಿ. ಅವಳು ಪ್ರೇಮವನ್ನು ತಪಸ್ಸಿನ ಸ್ತರಕ್ಕೇರಿಸಿದ ಮಹಾಮಹಿಳೆ.

ಕರ್ಣಾಟಕ ಕಾದಂಬರಿ ಉಪಲಬ್ಧ ಕನ್ನಡ ಕಾವ್ಯಗಳಲ್ಲಿ ಮೊದಲನೆಯ ಭಾಷಾಂತರ ಹಾಗೂ ಪ್ರಪ್ರಥಮ ಶೃಂಗಾರಕಾವ್ಯವಾಗಿದೆ. ಮುಂದೆ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸುವ ಕವಿಗಳಿಗೆ, ಪ್ರಣಯ ಕಾವ್ಯಗಳನ್ನು ರಚಿಸುವವರಿಗೆ ಅದು ಮಾರ್ಗದರ್ಶಕವಾದುದರಲ್ಲಿ ಸಂದೇಹವಿಲ್ಲ. ಅದರ ಪ್ರಭಾವ ಮುಂದಿನ ಅನೇಕ ಕನ್ನಡ ಕವಿಗಳ ಮೇಲಾಗಿದೆ. "ಕಾದಂಬರಿ ಮಹಾಕಾವ್ಯವಲ್ಲ; ಆದರೆ ಮಹಾಕಾವ್ಯಕ್ಕೆ ಸಮೀಪವಾಗುವ ಒಂದು ಶ್ರೇಷ್ಠ ರಮ್ಯ ಕಾವ್ಯ".

ಬಾಹ್ಯಕೊಂಡಿ

[ಬದಲಾಯಿಸಿ]
  1. ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗವರ್ಮ 1[ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖ

[ಬದಲಾಯಿಸಿ]