ಕಾದಂಬರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾದಂಬರಿಯು ಕಥನ ಸಾಹಿತ್ಯದ ಒಂದು ಪ್ರಕಾರ.

ಒಂದು ದೃಷ್ಟಿಯಿಂದ ನೋಡಿದರೆ ಕಾದಂಬರಿ ಎನ್ನುವ ಸಾಹಿತ್ಯರೂಪದ ಚರಿತ್ರೆ ದೀರ್ಘವಾದುದೇ. ಆದರೆ ಇಂದು ಸಾಮಾನ್ಯವಾಗಿ ಈ ಪದದಿಂದ ನಿರ್ದೇಶಿಸುವ ಸಾಹಿತ್ಯರೂಪದ ಚರಿತ್ರೆ ಕಳೆದ ಇನ್ನೂರು ವರ್ಷಗಳದ್ದು. ಮಹಾಕಾವ್ಯ, ನಾಟಕ ಇಂಥ ರೂಪಗಳಿಗೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಇರುವ ದೀರ್ಘ ಚರಿತ್ರೆ ಇದಕ್ಕಿಲ್ಲ. ಹೀಗಾಗಿ, ಸ್ಫುಟವಾಗಿ ರೂಪುಗೊಂಡು ಸ್ಪಷ್ಟವಾಗಿ ಹೆಸರಿಸಬಹುದಾದ ಆದಿಕೃತಿ ಈ ರೂಪಕ್ಕಿಲ್ಲ. ಇಂಗ್ಲಿಷಿನ ನಾವೆಲ್ ಪದವೇ ಲ್ಯಾಟಿನಿನ ನೋವಸ್, ಎಂದರೆ ಹೊಸದು, ಎನ್ನುವ ಪದದಿಂದ ಬಂದದ್ದು.

ಭಾರತದಲ್ಲಿ[ಬದಲಾಯಿಸಿ]

ಕನ್ನಡದಲ್ಲಿ ಕಾದಂಬರಿ ಎಂಬ ಹೆಸರು ಪ್ರಚುರವಾದುದು ಬಹುಶಃ ಬಾಣನ ಕಾದಂಬರಿಯಿಂದ. ಬಾಣನ ಕಾದಂಬರಿ ಗದ್ಯದಲ್ಲಿ ರೂಪುಗೊಂಡಿರುವ ಸಂಕೀರ್ಣ ಕಥೆ. ಅದರಲ್ಲಿ ಕಾದಂಬರಿ, ಮಹಾಶ್ವೇತೆ, ಚಂದ್ರಾಪೀಡ, ಪುಂಡರೀಕ, ಕಪಿಂಜಲ, ಶೂದ್ರಕ - ಮೊದಲಾದ ವ್ಯಕ್ತಿಗಳ ಜೀವನವೃತ್ತಾಂತ ನಿರೂಪಿತವಾಗಿದೆ. ಕೆಲವೇಳೆ ಕಥೆ ಭೂಲೋಕದಿಂದ ಗಂಧರ್ವಲೋಕಕ್ಕೂ ಇಂದಿನ ಜೀವನದಿಂದ ಮುಂದೆ ಮೂರು ಜನ್ಮಗಳಿಗೂ ಹರಿದಾಡುತ್ತವೆ. ಇಂಥದ್ದೇ ಕಥೆಗಳನ್ನು ಕಾದಂಬರಿ ಎಂಬ ಸಾಮಾನ್ಯ ನಾಮದಿಂದ ಕರೆದಿರುವುದು ಉಚಿತವಾಗಿಯೇ ಇದೆ. ತೆಲುಗು ಮೊದಲಾದ ಭಾಷೆಗಳಲ್ಲಿ ನಾವೆಲ್, ನಾವೆಲು ಎಂಬ ಪದಗಳೂ ಬಳಕೆಯಲ್ಲಿವೆ. ಬಂಗಾಳಿ ಭಾಷೆಯಲ್ಲಿ ಕಾದಂಬರಿಯನ್ನು ಉಪನ್ಯಾಸ ಎನ್ನಲಾಗುತ್ತದೆ.

ಕನ್ನಡದಲ್ಲಿ[ಬದಲಾಯಿಸಿ]

ಕನ್ನಡದಲ್ಲಿ ಈ ಎಪ್ಪತ್ತು ವರ್ಷಗಳಲ್ಲಿ ಕಾದಂಬರಿ ಕ್ಷೇತ್ರ ವಿಫಲವಾಗಿ ಬೆಳೆದಿದೆ. ಮರಾಠಿ, ಬಂಗಾಳೀ, ತಮಿಳು, ತೆಲುಗು, ಇಂಗ್ಲಿಷ್ ಮೊದಲಾದ ಭಾಷೆಗಳಿಂದ ಉತ್ತಮ ಕಾದಂಬರಿಗಳನ್ನು ಅನುವಾದ ಮಾಡಿಕೊಳ್ಳಲಾಗಿದೆ. ಅಲ್ಲದೆ ಪ್ರಸಿದ್ಧ ಲೇಖಕರಾದ ಶಿವರಾಮ ಕಾರಂತ, ಕುವೆಂಪು, ರಾವಬಹದ್ದೂರ, ಅನಕೃ, ತರಾಸು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ.ವಿ. ಅಯ್ಯರ್, ಬಿ. ಪುಟ್ಟಸ್ವಾಮಯ್ಯ-ಮೊದಲಾದವರು ಈ ಕ್ಷೇತ್ರದಲ್ಲಿ ವಿಫಲವಾಗಿ ಕೆಲಸಮಾಡಿದ್ದಾರೆ.

ಆ ವಿವರಗಳಿಗೆ ನೋಡಿ ಕನ್ನಡದಲ್ಲಿ ಕಾದಂಬರಿ ಸಾಹಿತ್ಯ

ಗುಣಲಕ್ಷಣಗಳು[ಬದಲಾಯಿಸಿ]

ಪಾಶ್ಚಾತ್ಯ ಕಾದಂಬರಿ ರೂಪದ ಪ್ರಭಾವ ಇಡೀ ಜಗತ್ತಿನ ಸಾಹಿತ್ಯದ ಮೇಲೆ ಹಬ್ಬಿದೆ ಎನ್ನಬಹುದು. ಕಳೆದ ಇನ್ನೂರೇ ವರ್ಷಗಳಲ್ಲಿ ಇದು ಸಾಧಿಸಿರುವ ವೈವಿಧ್ಯದಿಂದ ಇದರ ವಿವರಣೆಯೇ ಕಷ್ಟಸಾಧ್ಯವಾಗಿದೆ. ಜೇನ್ ಆಸ್ಟೆನಳ ಹಮ್ಮು-ಬಿಮ್ಮು (ಪ್ರೈಡ್ ಅಂಡ್ ಪ್ರೆಜುಡಿಸ್), ಟಾಲ್‍ಸ್ಟಾಯಿಯ ಸಮರ ಮತ್ತು ಶಾಂತಿ (ವಾರ್ ಅಂಡ್ ಪೀಸ್), ಜೇಮ್ಸ್ ಜಾಯ್ಸನ ಯೂಲಿಸಿಸ್, ಬೋರಿಸ್ ಪ್ಯಾಸ್ಟರ್‍ನಾಕ್‍ನ ಡಾಕ್ಟರ್ ಜಿವಾಗೊ, ಕಾರಂತರ ಮರಳಿ ಮಣ್ಣಿಗೆ, ಕುವೆಂಪು ಅವರ ಕಾನೂರು ಹೆಗ್ಗಡಿತಿ, ಗಸ್‍ಟಾವ್ ರಾಬ್‍ನ ಸಬೇರಿಯ-ಇಂಥ ಎಲ್ಲ ಕಾದಂಬರಿಗಳಿಗೂ ಅನ್ವಯಿಸುವಂಥ ಪರಿಪೂರ್ಣವಾದ ವಿವರಣೆಯನ್ನು ರೂಪಿಸುವುದು ತುಂಬ ಜಟಿಲವಾದ ಪ್ರಯತ್ನ. ಒಂದು ಮಹತ್ತ್ವದ ಅರ್ಥದ ಐಕ್ಯ ಸಾಧಿತವಾಗುವಂತೆ ಒಂದಕ್ಕೊಂದನ್ನು ಹೊಂದಿಸಿದ ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯ ವೃತ್ತಾಂತವೇ ಕಾದಂಬರಿ; ಕಥಾವಸ್ತು ಅರ್ಥದಲ್ಲಿ ಪ್ರತೀಕಾತ್ಮಕವೂ ಆಗುವಂತೆ ವೃತ್ತಾಂತದ ಪ್ರಗತಿಯ ಪ್ರತಿಬಿಂದುವಿನಲ್ಲಿ ಕಥಾವಸ್ತುವಿನ ಉದ್ದೇಶಿತ ಅರ್ಥಸ್ತರಗಳಿಗೆ ಮತ್ತೆ ಮತ್ತೆ, ಹಾಗೂ ಒಟ್ಟಿನಲ್ಲಿ ಪುಷ್ಟಿ ಕೊಡುವಂತೆ ಹಿನ್ನೋಟ ಮತ್ತು ನಿರೀಕ್ಷಣೆಗಳ ನಡುವೆ ಸಂಬಂಧವನ್ನು ಏರ್ಪಡಿಸಬಲ್ಲ ಭಾಷೆಯಲ್ಲಿ ಸನ್ನಿವೇಶಗಳು ನಿರೂಪಿತವಾಗಿರಬೇಕು, ವೃತ್ತಾಂತ ಗಮನಾರ್ಹವಾದ ಗಾತ್ರವನ್ನು ಪಡೆದಿರಬೇಕು-ಎನ್ನುವುದು ಒಟ್ಟಿನಲ್ಲಿ ಕಾದಂಬರಿಯ ಅಧ್ಯಯನಕ್ಕೆ ಸಹಾಯಕವಾಗುವ ವಿವರಣೆ. ಕಥಾವಸ್ತು ಮತ್ತು ಸನ್ನಿವೇಶಗಳು ಅನಿವಾರ್ಯವಾಗಿ ಪಾತ್ರಗಳನ್ನು ಒಳಗೊಳ್ಳಬೇಕು ಎಂಬುದು ಸ್ವಯಂವೇದ್ಯ.

ಈ ವಿವರಣೆಯಿಂದ ಕಾದಂಬರಿ ಮೇಲ್ಮೈಯಲ್ಲಿ ನಾವು ಗ್ರಹಿಸಬಹುದಾದ ಸನ್ನಿವೇಶಗಳ ನಿರೊಪಣೆಯೊಂದಿಗೆ ಅಂತರ್ಗತವಾದ ಒಂದು ಅರ್ಥವಿನ್ಯಾಸವನ್ನು ಸಾಧಿಸಲು ಪ್ರಯತ್ನಿಸುತ್ತದೆ. ಎಂದಂತಾಯಿತು. ಮುಂದೇನಾಯಿತು ಎಂಬ ಸಹಜವಾದ ಕುತೂಹಲವನ್ನು ತಣಿಸುವ ಮಟ್ಟದಲ್ಲಿ ಮಾತ್ರ ನಿಲ್ಲದೆ ಕಥಾವಸ್ತುವಿನ ನಿರ್ವಹಣೆ ಇನ್ನೂ ಗಹನವಾದ ಜೀವನದ ಅನುಭವದ ಸ್ತರಕ್ಕೆ ಓದುಗನನ್ನು ಕೊಂಡೊಯ್ಯಲು ಸಮರ್ಥವಾದರೊಳ್ಳೆಯದು. ಕೃತಿಯ ಮೌಲ್ಯನಿರ್ಣಯ ಮಾಡುವಾಗ ಈ ಅನುಭವದ ಸ್ಪುಟತ್ವ ಮತ್ತು ಗಹನತೆ ಮತ್ತು ಅದರ ಸಂವಹನದ ಸಾಮಥ್ಯಗಳು ಗಮನಿಸಬೇಕಾದ ಅಂಶಗಳಾಗುತ್ತವೆ. ಕಾದಂಬರಿಯ ಕಥಾವಸ್ತು ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯನ್ನು ಒಳಗೊಂಡಿರುತ್ತದೆಯಾದರೂ ಅದು ನಿರೂಪಿಸುವ ಘಟನೆಗಳು ನಿಜವಾಗಿ ನಡೆದುವು. ಅದರ ವೃತ್ತಾಂತ ಅಕ್ಷರಶ: ನಿಜ ಎಂಬ ಭಾವನೆಯನ್ನೇ ಮೂಡಿಸಲು ಕಾದಂಬರಿ ಪ್ರಯತ್ನಿಸುತ್ತದೆ. ಚಾರಿತ್ರಿಕ ಕಾದಂಬರಿಯಲ್ಲಿ ಕೆಲವು ಘಟನೆಗಳು ಕೆಲವು ಪಾತ್ರಗಳು ಒಮ್ಮೊಮ್ಮೆ ಕಥಾವಸ್ತುವಿನ ರೂಪರೇಖೆಕೂಡ-ಚರಿತ್ರೆಯಿಂದ ತೆಗೆದುಕೊಂಡವಾಗಿದ್ದು. ಆ ಮಟ್ಟಿಗೆ ಅವುಗಳಲ್ಲಿ ಚಾರಿತ್ರಿಕ ಸತ್ಯವಿರಬಹುದು. ಆದರೆ ಅವು ಕಾದಂಬರಿಯ ಐಕ್ಯಕ್ಕೆ ಭಂಗ ಬರುತ್ತದೆ. ಸನ್ನಿವೇಶಗಳ ಶ್ರೇಣಿ ಕಥಾವಸ್ತುವನ್ನು ಓದುಗರ ಮುಂದಿಡುವ ಸಾಧನ. ಸನ್ನಿವೇಶಗಳ ಜೋಡಣೆಯಲ್ಲಿ ಒಂದು ಆಂತರಿಕ ಸಂಬಂಧವಿರಬೇಕು. ಸಾಮಾನ್ಯವಾಗಿ ನಾವು ಕಾಣುವುದು ಪಾತ್ರ, ಆವರಣಗಳ ಸಂಬಂಧ. ಪಾತ್ರ ತನ್ನ ಆವರಣಕ್ಕೆ ಒಂದು ರೀತಿಯಲ್ಲಿ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ. ಇದರಿಂದ ಸನ್ನಿವೇಶ ಮಾರ್ಪಾಡಾಗುತ್ತದೆ. ಇಲ್ಲವೆ ಇನ್ನೊಂದು ಸನ್ನಿವೇಶ ಏರ್ಪಡುತ್ತದೆ. ಆವರಣ ಪಾತ್ರದ ಮೇಲೆ ಒಂದು ರೀತಿಯ ಒತ್ತನ್ನು ಹಾಕುತ್ತದೆ. ಹೀಗೆ ಪಾತ್ರ ಮತ್ತು ಹೊರ ಜಗತ್ತುಗಳ ಪರಸ್ಪರ ಪ್ರತಿಕ್ರಿಯೆಯಿಂದ ಸನ್ನಿವೇಶಗಳ ಸರಪಳಿ ಬೆಳೆಯುತ್ತ ಹೋಗುತ್ತದೆ. ಪಾತ್ರದ ಸ್ವಭಾವ ಬಹುಮಟ್ಟಿಗೆ ನಾವು ಕಾದಂಬರಿಗಳಲ್ಲಿ ಕಾಣುವಂತೆ ಕ್ರಿಯೆಯಲ್ಲಿ ವ್ಯಕ್ತವಾಗುತ್ತದೆ; ಕ್ರಿಯೆ ಪಾತ್ರದ ಮೇಲೆ ಪ್ರಭಾವವನ್ನು ಬೀರುತ್ತದೆ. ಪಾತ್ರ-ಕ್ರಿಯೆಗಳ ನಿಕಟ ಸಂಬಂಧದ ಕಲ್ಪನೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಅರಿಸ್ಟಾಟಲನ ಪ್ರಭಾವದಿಂದ ರೂಪಿತವಾದದ್ದು. ಜಪಾನಿನಲ್ಲಿ ಹನ್ನೊಂದನೆಯ ಶತಮಾನದಲ್ಲಿ ರಚಿತವಾದ ದಿ ಟೇಲ್ ಆಫ್ ಗೆಂಜಿಯಂಥ ಕಾದಂಬರಿಯಲ್ಲಿ ಪಾತ್ರಗಳ ಮನೋವ್ಯಾಪರದ ಚಿತ್ರಣ ಸೂಕ್ಷ್ಮವಾಗಿದೆ. ಆದರೆ ಕೃತಿಯಲ್ಲಿ ಕ್ರಿಯೆ ಪಾತ್ರಗಳ ನಡುವೆ ಕಾರ್ಯ-ಕಾರಣ ಸಂಬಂಧ ಕಾಣುವುದಿಲ್ಲ. ಥಾಮಸ್ ಹಾರ್ಡಿಯ ಕಾದಂಬರಿಗಳಲ್ಲೂ ಕ್ರಿಯೆಯನ್ನು ಪಾತ್ರಗಳಲ್ಲದೆ ಪಾತ್ರಗಳಿಗಿಂತ ಹೆಚ್ಚಾಗಿ ಕಾಣದ ಶಕ್ತಿಯೊಂದು ನಡೆಸುತ್ತದೆ. ವಿಶ್ವದಲ್ಲಿ ಮಾನವನ ಸ್ಥಿತಿ ಅಸಂಬದ್ಧವೆಂಬ ತತ್ತ್ವವನ್ನು ರೂಪಿಸುವ ಕೃತಿಯಲ್ಲಿಯೂ ಇಂಥ ಕಾರ್ಯ-ಕಾರಣ ಸಂಬಂಧ ಕಾಣುವುದು ಸಾಧ್ಯವಿಲ್ಲ. ಪಾತ್ರ-ಕ್ರಿಯೆಗಳಿಗಿರುವ ನಿಕಟ ಸಂಬಂಧವನ್ನು ಕಾದಂಬರಿಕಾರನ ದೃಷ್ಟಿ ಹೀಗೆ ಗುರುತಿಸಬಹುದು. ಕಾದಂಬರಿಯ ಮೂಲಕ ಅರ್ಥ ವಿನ್ಯಾಸವನ್ನು ಸಂವಹನಗೊಳಿಸಲು ಕಾದಂಬರಿಕಾರನಿಗಿರುವ ಒಂದು ಸಾಧನವೆಂದರೆ ಭಾಷೆ. ಕಾದಂಬರಿಯ ವೃತ್ತಾಂತವನ್ನು ಮುಂದುವರಿಸುವುದು ಮಾತ್ರವೇ ಭಾಷೆಯ ಕೆಲಸವಲ್ಲ. ಒಂದು ಚಿತ್ರದ ರಸಾನುಭವವಾಗಬೇಕಾದರೆ ಇಡೀ ಕೃತಿ ಒಂದು ಏಕವಾಗಿ ಅನುಭವವಾಗಬೇಕು. ವಿಸ್ತಾರವಾದ ಕೃತಿಯನ್ನು ಒಂದು ಏಕವಾಗಿ ನಮ್ಮ ಅನುಭವಕ್ಕೆ ತಂದುಕೊಡುವುದರಲ್ಲಿ ಬಹುಮುಖ್ಯ ಸಾಧನ ಭಾಷೆ. ನಮ್ಮ ಗಮನ ಹಿಂದೆ ನಡೆದುದರತ್ತ ಹೋಗುವಂತೆ ಮತ್ತು ಮುಂದೆ ನಡೆಯಬಹುದಾದುದರತ್ತ ಮತ್ತೆ ಮತ್ತೆ ಸಾಗುವಂತೆ ಮಾಡಿ ಕೃತಿಯ ಭಾಷೆ ಇಡೀ ಕೃತಿಯ ಏಕವನ್ನು ಅನುಭವಕ್ಕೆ ತಂದುಕೊಡುತ್ತದೆ. ಕಾದಂಬರಿ ಘಟನೆಗಳ ಸ್ತರದಲ್ಲಿ ಮಾತ್ರ ಮುಂದುವರಿಯದೆ ಅರ್ಥವನ್ನು ವಿಸ್ತರಿಸುತ್ತ ಹೋಗುವುದು ಸಾಧ್ಯವಾಗುವುದೂ ಭಾಷೆಯನ್ನು ಎಚ್ಚರಿಕೆಯಿಂದ, ಕಲಾತ್ಮಕವಾಗಿ ಬಳಸುವುದರಿಂದ.

ಕಾದಂಬರಿಯ ಕನಿಷ್ಠ ಗಾತ್ರ ಇಷ್ಟೆ ಇರಬೇಕು ಎಂದು ನಿಯಮ ಮಾಡುವುದು ಅಸಾಧ್ಯ. ಕಿರುಕಾದಂಬರಿಗೂ (ನಾವೆಲೆಟ್) ಕಾದಂಬರಿಗೂ ನಡುವೆ ರೇಖೆಯನ್ನು ಎಲ್ಲಿ ಎಳೆಯ ಬೇಕು ಎಂಬುದನ್ನು ಅಂತಿಮವಾಗಿ ನಿರ್ಣಯಿಸುವುದು ಸಾಧ್ಯವಿಲ್ಲ. ಇ.ಎಂ.ಡಬ್ಲ್ಯು. ಟಲ್‍ಯಾರ್ಡ್ ಎಂಬ ವಿಮರ್ಶಕ ಕಾದಂಬರಿಯಲ್ಲಿ ಕಡೆಯ ಪಕ್ಷ 20,000 ಪದಗಳಿರಬೇಕು ಎಂದಿದ್ದಾನೆ. ಸ್ವತಃ ಕಾದಂಬರಿಕಾರನಾದ ಇ.ಎಂ. ಫಾರ್‍ಸ್ಟರ್ ಕಾದಂಬರಿ ಎಂದರೆ ಒಂದು ನಿರ್ದಿಷ್ಟ ಉದ್ದದ ಕಾಲ್ಪನಿಕ ಗದ್ಯ ಕೃತಿ ಎಂದು ಹೇಳಿ. ನಿರ್ದಿಷ್ಟ ಉದ್ದ ಎಂದರೆ ಕನಿಷ್ಟ 50,000 ಪದಗಳು ಎನ್ನುತ್ತಾನೆ. ಹೆನ್ರಿ ಜೇಮ್ಸ್‍ನದಿ ಟರ್ನ್ ಅಫ್ ದಿ ಸ್ಕ್ರೂ. ಶ್ರೀನಿವಾಸರ ಸುಬ್ಬಣ್ಣ-ಇಂಥ ಕೃತಿಗಳು ಕಿರುಕಾದಂಬರಿಗಳೇ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರುವುದು ಸಾಧ್ಯ.

ಅಧ್ಯಯನದ ಅನುಕೂಲಕ್ಕಾಗಿ ಕಥಾವಸ್ತು ಪಾತ್ರ, ಸನ್ನಿವೇಶ, ಭಾಷೆ, ಎಂದು ಬೇರೆ ಬೇರೆ ಅಂಶಗಳನ್ನು ಕುರಿತು ನಾವು ಮಾತನಾಡಬಹುದಾದರೂ ಇವೆಲ್ಲವೂ ಹೊಂದಿಕೊಂಡಾಗಲೇ ಮಹತ್ತ್ವದ ಅರ್ಥದ ಸಾಕ್ಷಾತ್ಕಾರವಾಗುವುದು. ಇದಾಗದಿದ್ದರೆ ಕೃತಿ ವಿಫಲವಾದಂತೆ. ಈ ಹೊಂದಾಣಿಕೆಯನ್ನು ಸಾಧಿಸುವುದು ಕಾದಂಬರಿಯ ತಂತ್ರ. ಕಾದಂಬರಿಕಾರನ ತಂತ್ರ ಕಾದಂಬರಿಯನ್ನು ಸ್ವಾರಸ್ಯಗೊಳಿಸುವುದು ಮಾತ್ರವಲ್ಲ, ಕಾದಂಬರಿಯ ಎಲ್ಲ ಅಂಶಗಳ ಮೇಲೆ ನಿಯಂತ್ರಣವನ್ನು ಸ್ಥಾಪಿಸಿ, ಕೃತಿಯಲ್ಲಿ ರೂಪಗೊಳ್ಳಬೇಕಾದ ಅರ್ಥದ, ಅನುಭವದ ದೃಷ್ಟಿಯಿಂದ ಉಚಿತವಾದ ಪ್ರಾಧಾನ್ಯವನ್ನು ನಿರ್ಧರಿಸಿ ಇಡೀ ಕೃತಿಯ ನಿರ್ವಹಣೆಯನ್ನು ಮಾಡಬೇಕಾಗುತ್ತದೆ. ಗಾಢವಾದ ಅರ್ಥವೇನೂ ಸ್ಪುರಿಸುವಂತೆ ಪ್ರಯತ್ನಿಸದೆ ಜೀವನಕ್ಕೆ ಉತ್ಸಾಹ ಮತ್ತು ವಿಶ್ವಾಸಗಳ ಪ್ರತಿಕ್ರಿಯೆಯನ್ನು ಮಾತ್ರ ಮೂಡಿಸುವ ಸಾಹಸ ಕಾದಂಬರಿಗಳಲ್ಲಿ ಅಂದರೆ ಆರ್.ಎಲ್.ಸ್ಟೀವನ್ ಸನ್ನನ ದಿ ಟ್ರಷರ್ ಐಲೆಂಡ್, ಡೇನಿಯಲ್ ಡಪೋನ; ರಾಬಿನ್ಸನ್ ಕ್ರೂಸೋ ಇಂಥ ಕೃತಿಗಳಲ್ಲಿ, ಪಾತ್ರಕ್ಕಿಂತ ಸನ್ನಿವೇಶಗಳು ಪ್ರಧಾನ; ಪಾತ್ರಗಳು ಸರಳ. ಭಾಷೆ ಧ್ವನಿಯನ್ನು ಹೆಚ್ಚಾಗಿ ಬಳಸಬೇಕಾಗಿಲ್ಲ. ಸ್ಪಷ್ಟವಾದ ತರ್ಕದ ಸಂಬದ್ಧತೆಯಿಲ್ಲದೆ ಮನಸ್ಸಿನಲ್ಲಿ ಹರಿಯುವ ಭಾವನೆಗಳ ಅನುಭವವನ್ನು ತಂದುಕೊಡುವ ಪ್ರಜ್ಞಾಪ್ರವಾಹಕಾದಂಬರಿಯಲ್ಲಿ ಸನ್ನಿವೇಶ ಗೌಣ; ಭಾಷೆಯ ಮಹತ್ತ್ವ ಬಹು ಹೆಚ್ಚಿನದು. ಜೇಮ್ಸ್ ಜಾಯ್ಸನ ಯೂಲಿಸಿಸ್‍ನಲ್ಲಿ ಇದನ್ನು ಕಾಣಬಹುದು. ಹೊರಜಗತ್ತು ಮತ್ತು ಒಳಜಗತ್ತುಗಳ ಬಹುಮುಖ ವ್ಯಾಪಾರಗಳ ನಿಕಟ ಸಂಬಂಧವನ್ನು ಅನುಭವಕ್ಕೆ ತಂದುಕೊಡುವ ಕಾದಂಬರಿಯಲ್ಲಿ ಸನ್ನಿವೇಶ, ಪಾತ್ರಗಳೆರಡಕ್ಕೂ ಸಮನಾದ ಪ್ರಾಧ್ಯಾನ್ಯ-ಜೇನ್ ಆಸ್ಟೆನಳ ಕಾದಂಬರಿಗಳಲ್ಲಿ ಕಾಣುವಂತೆ. ಇಂಥ ಕಾದಂಬರಿಗಳ ಮುಖ್ಯ ಪಾತ್ರಗಳು ಹಲವು ಗುಣಗಳನ್ನು ತಳೆದಿರುತ್ತವೆ. ಅವುಗಳ ಸ್ವಭಾವಿಕ ಅನೇಕ ಮುಖಗಳಿರುತ್ತವೆ. ಒಂದೇ ವಾಕ್ಯದಲ್ಲಿ ಅವುಗಳ ಸ್ವಭಾವವನ್ನು ಸಂಗ್ರಹಿಸುವುದಾಗಲೀ ಯಾವುದಾದರೊಂದು ಮಾತು ಅಥವಾ ವಿಲಕ್ಷಣತೆ ಆಯಾ ಪಾತ್ರವನ್ನು ಸಂಪೂರ್ಣವಾಗಿ ತೋರಿಸಿಬಿಡಬಲ್ಲದು ಎಂದು ಆರಿಸುವುದಾಗಲೀ ಸಾಧ್ಯವಿಲ್ಲ. ಇಂಥ ಪಾತ್ರಗಳನ್ನು ದುಂಡು ಅಥವಾ ತುಂಬಿದ (ರೌಂಡ್) ಪಾತ್ರಗಳೆನ್ನುತ್ತಾರೆ. ಆದರೆ ಯಾವ ಕಾದಂಬರಿಯೂ ಈ ಬಗೆಯ ಪಾತ್ರಗಳನ್ನು ಮಾತ್ರವೇ ಒಳಗೊಂಡಿರಲು ಸಾಧ್ಯವಿಲ್ಲ. ಏಕೆಂದರೆ ಇಂಥ ಪಾತ್ರಗಳ ವಿಕಸನಕ್ಕೆ ತಕ್ಕಷ್ಟು ಅವಕಾಶ ಬೇಕು. ಡಬ್ಲ್ಯು. ಎಂ. ಥ್ಯಾಕರೆಯ ಜಂಬದ ಜಾತ್ರೆಯಲ್ಲಿನ (ವ್ಯಾನಿಟಿ ಫೇರ್) ಬೆಕಿಷಾರ್ಪ್ ಇಂಥ ಪಾತ್ರ. ಕಾದಂಬರಿಯಲ್ಲಿ ಇಂಥ ಎರಡು ಮೂರು ಪಾತ್ರಗಳನ್ನು ಸೃಷ್ಟಿಸಲು ಸಾಧ್ಯ. ಒಂದು ಗುಣ ಅಥವಾ ಭಾವನೆಯ ಮೂರ್ತಿಯಾದ ಪಾತ್ರವನ್ನು ಚಪ್ಪಟೆ (ಫ್ಲ್ಯಾಟ್) ಪಾತ್ರ ಎನ್ನುತ್ತಾರೆ. ವಾಲ್ಟರ್ ಸ್ಕಾಟ್‍ನ ಲ್ಯಾಮರ್‍ಮೋರ್‍ನ ವಧು (ದಿ ಬ್ರೈಡ್ ಆಫ್ ಲ್ಯಾಮರ್‍ಮೋರ್) ಎಂಬ ಕಾದಂಬರಿಯಲ್ಲಿ ಬಾಲ್ಡರ್‍ಸ್ಟನ್ ಇಂಥ ಪಾತ್ರ. ಯಜಮಾನನ ಬಡತನವನ್ನು ಬಚ್ಚಿಡುವುದೇ ಇವನ ಜೀವನದ ಸಾರ್ಥಕ್ಯ. ಇಂಥವು ಪಾತಿನಿಧಿಕ ಪಾತ್ರಗಳು. ಚಪ್ಪಟೆ ಪಾತ್ರ ಎಂದ ಮಾತ್ರಕ್ಕೆ ಅದು ಸಪ್ಪೆಯಾಗಬೇಕಾಗಿಲ್ಲ ಎನ್ನುವುದನ್ನು ಚಾಲ್ರ್ಸ್ ಡಿಕನ್ಸ್‍ನ ಮಿ. ಮಿಕಾಬರ್‍ನಂಥ ಹಲವು ಪಾತ್ರಗಳು ತೋರಿಸಿಕೊಟ್ಟಿವೆ. ಇಡೀ ಗುಂಪುಗಳನ್ನೇ ಚಿತ್ರಿಸುವ ಕಾದಂಬರಿಗಳಲ್ಲಿ ಪಾತ್ರಗಳು, ಸನ್ನಿವೇಶಗಳು, ಭಾಷೆ ಎಲ್ಲ ಕೆಲವು ನಿರೀಕ್ಷಿಸುತ್ತಾರೆ. ಈ ನಿರೀಕ್ಷಣೆಗಳನ್ನು ಸಫಲಗೊಳಿಸಿಯೂ ಹೊಸತನವನ್ನು ತಂತ್ರದ ಮೂಲಕ ಸಾಧಿಸಬೇಕು. ಹೀಗೆ ಎಲ್ಲ ಕಾದಂಬರಿಗಳಲ್ಲೂ ಎಲ್ಲ ಅಂಶಗಳಿಗೂ ಸಮಾನವಾದ ಇಲ್ಲವೆ ಒಂದೇ ಬಗೆಯ ಪ್ರಾಧಾನ್ಯ ದೊರೆಯುವುದಿಲ್ಲ. ಈ ಎಲ್ಲ ಅಂಶಗಳನ್ನೂ ಬಳಸಿ, ಬೆರೆಸಿ, ಹೊಸದೊಂದು ಜಗತ್ತನ್ನು ಕಾದಂಬರಿಕಾರ ಸೃಷ್ಟಿಸಬೇಕು. ಈ ಜಗತ್ತಿನ ಸೃಷ್ಟಿಕರ್ತನಾದ ಆತ ಕೃತಿ ಮೂಡಿಸಬೇಕಾದ ಅನುಭವಕ್ಕೆ ಭಂಗಬಾರದಂತೆ ಎಲ್ಲ ವಿವರಗಳನ್ನೂ ಆರಿಸಬೇಕು. ಸಮನ್ವಯಗೊಳಿಸಬೇಕು. ತಾನು ಆ ಜಗತ್ತಿನಲ್ಲಿದ್ದೂ ಹೊರಗೆ ನಿಲ್ಲಬೇಕು. ಆತನ ಮತ್ತು ಆತ ಸೃಷ್ಟಿಸುವ ಜಗತ್ತಿನ ಸಂಬಂಧವನ್ನು ಆತನ ಧಾಟಿ (ಟೋನ್) ಓದುಗರಿಗೆ ತಿಳಿಸಿಕೊಡುತ್ತದೆ. ನಾವು ವಾಸಿಸುವ ಜಗತ್ತಿನಂತೆಯೇ ಇದ್ದೂ ವಿವರಗಳ ಆಯ್ಕೆ ಮತ್ತು ಜೋಡಣೆಯಿಂದ ವಿಶಿಷ್ಟವಾಗುವ ಜಗತ್ತಿನ ಸೃಷ್ಟಿ ಸಾಧ್ಯವಾಗುವುದು ಕಾದಂಬರಿಕಾರನ ತಂತ್ರದಿಂದ.

ಚರಿತ್ರೆ : ಉಗಮ, ವಿಕಾಸ, ವೈವಿಧ್ಯ[ಬದಲಾಯಿಸಿ]

ಪ್ರಾರಂಭದಲ್ಲಿಯೇ ಸೂಚಿಸಿದಂತೆ ಒಂದು ರೀತಿಯಲ್ಲಿ ಈ ಸಾಹಿತ್ಯರೂಪ ಹಳೆಯದೇ; ಮತ್ತೊಂದು ರೀತಿಯಲ್ಲಿ ಈಚೆಗಿನದು. ಕಥೆ ಕೇಳುವ ಆಸಕ್ತಿ. ಕಥೆ ಹೆಣೆಯುವ ಬಯಕೆ ಮನುಷ್ಯನಲ್ಲಿ ಆಳವಾದುವು. ಈಗ ನಮಗೆ ತಿಳಿದಿರುವಂತೆ ಪ್ರಪಂಚದಲ್ಲಿ ಅತ್ಯಂತ ಪ್ರಾಚೀನ ಕಾದಂಬರಿಗಳು ಈಜಿಪ್ಟ್ ದೇಶದವು. ಪ್ರಾಯಶ: ಕ್ರಿ.ಪೂ. 20, 21ನೆಯ ಶತಮಾನಗಳಿಗೆ ಸೇರಿದ ಕೆಲವು ಕೃತಿಗಳು ದೊರತಿವೆ. ಇವನ್ನು ಕಾದಂಬರಿಗಳು ಎನ್ನಬಹುದು. ಇವುಗಳಲ್ಲಿ ಹಾಸ್ಯ ಮತ್ತು ವಿಡಂಬನೆ ಪ್ರಧಾನವಾಗಿವೆ. ಇವು ಅರಸನನ್ನೂ ಹಾಸ್ಯಮಾಡುತ್ತವೆ. ಬಾಕ್ ಸ್ಯಾದ ರಾಜಕುಮಾರಿ ಎಂಬುದು ಭಾವಪ್ರಧಾನವಾದ ಕಾದಂಬರಿ. ಸಿನುಹೆ ಎಂಬುದು ನೌಕಾಘಾತಕ್ಕೆ ಸಿಕ್ಕ ನಾಯಕನ ಕಥೆ. ರೋಮಿನ ಲೂಸಿಅಸ್ ಅಪೂಲಿಅಸ್‍ನ (ಕ್ರಿ.ಶ. 2ನೆಯ ಶತಮಾನ) ಬಂಗಾರದ ಕತ್ತೆ ಎಂಬ ಕಥೆಯಲ್ಲಿ ತರುಣ ತತ್ತ್ವಜ್ಞಾನಿಯೊಬ್ಬ ಕತ್ತೆಯಾಗಿ ಮಾರ್ಪಡುತ್ತಾನೆ. ಈ ಸ್ಥಿತಿಯಲ್ಲಿ ಆತ ಕಂಡ ನೋಟಗಳೂ ಕೇಳಿದ ಮಾತುಗಳೂ ಮನುಷ್ಯರ ಪ್ರಪಂಚವನ್ನು ಒಂದು ಹೊಸ ರೀತಿಯಲ್ಲಿ ಚಿತ್ರಿಸುತ್ತವೆ. ಈ ಪುಸ್ತಕ ಮುಂದಿನ ಕಾದಂಬರಿಕಾರರಿಗೆ ಸ್ಪೂರ್ತಿ ನೀಡಿತೆನ್ನಲಾಗಿದೆ. ಜಪಾನಿನಲ್ಲಿ ಸುಮಾರು ಹತ್ತನೆಯ ಶತಮಾನದಲ್ಲಿ ಮುರಾಸಾಕಿ ಎಂಬಾಕೆ ಬರೆದ ಗೆಂಜಿಯ ಕಥೆ ಬಹು ಆಶ್ಚರ್ಯಕರವಾದ ಕೃತಿ. ಹಲವು ಹೆಣ್ಣುಗಳೊಡನೆ ಸರಸವಾಡಿದ ತರುಣನ ಕಥೆ ಇದು. ಆದರೆ ಇದರಲ್ಲಿನ ಮಾನಸಿಕ ಅನುಭವಗಳ ವಿವರಗಳು ಇಂದಿಗೂ ಬೆರಗುಗೊಳಿಸುವಂಥವು. ಚೀನದಲ್ಲಿ ಹದಿಮೂರನೆಯ ಶತಮಾನದಲ್ಲಿಯೇ ಸಾಹಸದ ಕಥೆಗಳು ಜನಪ್ರಿಯವಾಗಿದ್ದುವೆಂದು ತೋರುತ್ತವೆ.

ಆದರೆ ಪ್ರಭಾವ ಮತ್ತು ವಿಕಸನದ ದೃಷ್ಟಿಯಿಂದ ಆಧುನಿಕ ಪಾಶ್ಚಾತ್ಯ ಕಾದಂಬರಿಯೇ ಮುಖ್ಯವಾಗಿದೆ. ಈ ಕಾದಂಬರಿಯ ಚರಿತ್ರೆ ಹ್ರಸ್ವವಾದುದೇ. ಸ್ಟೇನ್ ದೇಶದ ಸರ್‍ವ್ಯಾಂಟಿಸ್‍ನ (1605-1615) ಡಾನ್ ಕ್ವಿಕ್ಸಟ್ ಮತ್ತು ಇಂಗ್ಲೆಡಿನ ಜಾನ್ ಬನ್ಯನನ (1678-79) ಯಾತ್ರಿಕನ ಮುನ್ನಡೆ (ದಿ ಪಿಲ್‍ಗ್ರಿಮ್ಸ್ ಪ್ರೋಗ್ರೆಸ್) ಇವನ್ನು ಪ್ರಾರಂಭದ ಕಾದಂಬರಿಗಳೆಂದು ಭಾವಿಸಿದರೂ ಇದರ ಚರಿತ್ರೆ ಸುಮಾರು 400-550 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಮಧ್ಯಮ ವರ್ಗದ ಪ್ರಾಬಲ್ಯ. ಅದರ ಅಭಿರುಚಿ ಮತ್ತು ಬೇಡಿಕೆಗಳು ಕಾದಂಬರಿಯ ವಿಕಾಸಕ್ಕೆ ನೆರವಾದುವು.

ಈ ಕಾದಂಬರಿಯ ತಾಯಿ ಬೇರು ಮಹಾಕಾವ್ಯಗಳಲ್ಲಿದೆ. ವಿಶಾಲವಾದ ಹಂದರದ ಮೇಲೆ ಹಬ್ಬಿಸಿದ ಹಲವಾರು ಪಾತ್ರಗಳನ್ನೊಳಗೊಂಡು ಒಂದು ಕೇಂದ್ರದೃಷ್ಟಿಯ ನಿರ್ವಹಣೆಗೆ ಒಳಪಟ್ಟ ಕಥೆಯನ್ನು ಎರಡರಲ್ಲಿಯೂ ಕಾಣಬಹುದು. ಮುಖ್ಯ ವ್ಯತ್ಯಾಸ ಎಂದರೆ ಮಹಾಕಾವ್ಯದ ಮಾಧ್ಯಮ ಪದ್ಯ. ಕಾದಂಬರಿಯ ಮಾಧ್ಯಮ ಗದ್ಯ. ಆದರೆ ಕಾದಂಬರಿ ಮಹಾಕಾವ್ಯಕ್ಕೆ ನೇರವಾದ ಉತ್ತರಾಧಿಕಾರಿಯಾಗಲಿಲ್ಲ. ಮಧ್ಯಯುಗದ ಪ್ರಣಯದ ಮತ್ತು ವಿರೋಚಿತ ಸಾಹಸಗಳ ಕಥೆಗಳು (ರೊಮಾನ್ಸ್‍ಗಳು) ಬಹು ಜನಪ್ರಿಯವಾಗಿದ್ದುವು. ಪ್ರಾಚೀನ ಕಾವ್ಯಗಳು, ಷಾರ್ಲಮನ್ನನ ಕಥೆಗಳು ಮತ್ತು ಆರ್ಥರ್ ದೊರೆಯ ಕಥೆಗಳು ಈ ರೊಮಾನ್ಸ್‍ಗಳಿಗೆ ಆಗರ. ಇವುಗಳಲ್ಲಿ ಕೆಲವು ಪದ್ಯ ಮಾಧ್ಯಮವನ್ನೂ ಕೆಲವು ಗದ್ಯ ಮಾಧ್ಯಮವನ್ನೂ ಬಳಸಿಕೊಂಡುವು. ಕ್ರಮೇಣ ದೀರ್ಘ ಕಥನಗಳ ಜನಪ್ರಿಯತೆ ಹೆಚ್ಚಿತು. ಇಂಥ ಒಂದೊಂದು ಕಥೆಯೂ ಹಲವು ಘಟನೆಗಳ ಸರಪಳಿ, ಅಷ್ಟೆ. ಏಕನಾಯಕನೇ ಇವನ್ನು ಒಂದುಗೂಡಿಸುವ ಅಂಶ. ಅಭಿರುಚಿ ಬದಲಾದಂತೆ ಗದ್ಯಕಥೆ ಹೆಚ್ಚು ಜನಪ್ರಿಯವಾಗಿ, ಕಥನ ಕವನಗಳು ವಿರಳವಾದುವು. ಹಲವು ಪಾತ್ರಗಳಲ್ಲಿ ಒಂದರ ಪ್ರಾಧಾನ್ಯ, ಗದ್ಯ ಮಾಧ್ಯಮ ಮುಂತಾದುವನ್ನು ಕಾದಂಬರಿ ರೊಮಾನ್ಸ್‍ಗಳಿಂದ ಪಡೆಯಿತು. ಕಾಲ ಕಳೆದಂತೆ, ರೊಮಾನ್ಸು ಕಾದಂಬರಿಗೆ ಸ್ಥಾನವನ್ನು ತೆರವು ಮಾಡಿಕೊಟ್ಟತು. ರೊಮಾನ್ಸ್‍ಗಳಲ್ಲಿ ಹಲವು ಘಟನೆಗಳು ಒಂದನ್ನೊಂದು ಹಿಂಬಾಲಿಸುತ್ತಿದ್ದುವು. ಆಗಲೇ ಹೇಳಿದಂತೆ ಇವನ್ನು ಒಟ್ಟುಗೂಡಿಸುವ ಅಂಶ ಕೇಂದ್ರದಲ್ಲಿ ಒಬ್ಬ ನಾಯಕನ ಸ್ಥಾನ ಮಾತ್ರವೇ. ಘಟನೆಗಳಿಗೆ ಇನ್ನೂ ನಿಕಟವಾದ ಸಂಬಂಧವನ್ನು ಕಲ್ಪಿಸಿ, ಕ್ರಿಯೆ ಪಾತ್ರದ ಸ್ವಭಾವದಿಂದ ರೂಪಿತವಾಗುವಂತೆ ಮಾಡಿದಾಗ ಕಾದಂಬರಿ ಜನ್ಮತಾಳಿತು. (ಕ್ರಿಯೆಯಲ್ಲಿ ಸ್ವಭಾವ ಪ್ರಕಟವಾಗುವುದು ಕಾದಂಬರಿಗೆ ನಾಟಕದಿಂದ ಬಂದ ಅಂಶ ಎಂದು ಕೆಲವರು ವಿಮರ್ಶಕರ ಅಭಿಪ್ರಾಯ). ಈ ದೃಷ್ಟಿಯಿಂದಲೇ ಸರ್‍ವ್ಯಾಂಟಿಸನ ಡಾನ್ ಕ್ವಿಕ್ಸಟ್ ಯೂರೋಪಿನ ಕಾದಂಬರಿ ಎನ್ನುವುದು. ಆದರೂ ಕ್ರಿಯೆ, ಪಾತ್ರಗಳ ಈ ನಿಕಟ ಸಂಬಂಧವನ್ನು ಸ್ಥಾಪಿಸಿದ ಡಾನ್ ಕ್ವಿಕ್ಸಟ್ ಪರಂಪರೆ ಬೆಳೆದುದು ನಿಧಾನವಾಗಿಯೆ. 1678ರಲ್ಲಿ ಫ್ರಾನ್ಸಿನಲ್ಲಿ ಪ್ರಕಟವಾದ ಲ ಪ್ರಿನ್ಸೆಸ್ ದ ಕ್ಲೀವ್ಸ್ ಎಂಬುದು ರೊಮಾನ್ಸ್ ಮತ್ತು ಕಾದಂಬರಿಗಳ ಮಧ್ಯೆ ತೂಗಾಡುತ್ತಿದೆ. ಇಂಗ್ಲೆಂಡಿನಲ್ಲಿ ಆಫ್ ಬೆನ್ (1640-89) ಮತ್ತು ವಿಲಿಯಂ ಕಾನ್‍ಗ್ರೀವರ (1670-1729) ಕೃತಿಗಳು ರೊಮಾನ್ಸ್‍ಗೆ ಸಮೀಪವಾದುವು. ಬನ್ಯನನ ದಿ ಪಿಲ್‍ಗ್ರಿಮ್ಸ್ ಪ್ರೋಗ್ರೆಸಿನ ಅನಂತರ ಇಂಗ್ಲಿಷ್ ಭಾಷೆಯಲ್ಲಿ ಕಾದಂಬರಿ ಎಂದು ಗುರುತಿಸಬಹುದಾದ, ಸಂಪೂರ್ಣವಾಗಿ ಲೌಕಿಕದೃಷ್ಟಿಯಿಂದ ಪ್ರೇರಿತವಾದ ಮೊದಲ ಕೃತಿ ಎಂದರೆ ಡೇನಿಯಲ್ ಡಪೋನ ರಾಬಿನ್‍ಸನ್ ಕ್ರೂಸೊ (1719). ಆದರೆ ಡಫೋಗೆ ತಾನು ಹೊಸದೊಂದು ಸಾಹಿತ್ಯರೂಪದಲ್ಲಿ ಕೃತಿಗಳನ್ನು ರಚಿಸುತ್ತಿದ್ದೇನೆ ಎನ್ನುವ ಅರಿವೇ ಇದ್ದಂತೆ ಕಾಣುವುದಿಲ್ಲ. ಈ ಅರಿವನ್ನು ಇಂಗ್ಲೆಂಡಿನಲ್ಲಿ ನಾವು ನೋಡುವುದು ಹೆನ್ರಿ ಫೀಲ್ಡಿಂಗ್ (1707-1754) ಮತ್ತು ಸ್ಯಾಮ್ಯುಅಲ್ ರಿಚರ್ಡ್‍ಸನ್ (1689-1791)-ಇವರ ಕಾದಂಬರಿಗಳಲ್ಲಿ.

ಹದಿನೆಂಟನೆಯ ಶತಮಾನದಲ್ಲಿ ಯೂರೋಪಿನ ಹಲವು ದೇಶಗಳಲ್ಲಿ ಕಾದಂಬರಿ ಬೇರುಬಿಟ್ಟತು. ಅಲ್ಲಿಂದ ಇನ್ನೂರು ವರ್ಷಗಳಲ್ಲಿ ಅದು ಬೆರಗುಗೊಳಿಸುವ. ದಿಗ್‍ಭ್ರಾಂತಗೊಳಿಸುವ ಎಂದರೂ ತಡೆದೀತು. ವೈವಿಧ್ಯದಿಂದ ಬೆಳೆದಿದೆ. ಸಮಾಜದ ಸ್ಥಿತಿ, ಸಮಕಾಲೀನ ನಂಬಿಕೆಗಳು. ಹೆಚ್ಚಿನ ಸೌಲಭ್ಯ. ಪ್ರಯಾಣದ ಸೌಕರ್ಯ, ವಿಜ್ಞಾನದ ಬೆಳೆವಣಿಗೆ ತಂತ್ರಜ್ಞಾನದ ಕೊಡುಗೆಗಳು-ಎಲ್ಲ ಕಾದಂಬರಿಯ ಮೇಲೆ ಪ್ರಭಾವವನ್ನು ಬೀರಿವೆ. ಅಮೆರಿಕದ ನೀಗ್ರೊ ಗುಲಾಮರ ಜೀವನವನ್ನು ನಿರೂಪಿಸುವ, ಹ್ಯಾರಿಯೆಟ್ ಬೀಚರ್ ಸ್ಟೌಳ ಕೃತಿ-ಅಂಕಲ್ ಟಾಮ್ಸ್ ಕ್ಯಾಬಿನ್ ಸಮಾಜದ ಸ್ಥಿತಿಯಿಂದ ಪ್ರೇರಿತವಾಗಿದೆ. ಚಾರಲ್ಸ್ ಡಿಕನ್ಸ್ ಹತ್ತೊಂಬತ್ತನೆಯ ಶತಮಾನದಲ್ಲಿನ ಇಂಗ್ಲೆಂಡಿಗೆ ಅನಾಥಾಲಯಗಳು, ಕೆಲವು ಖಾಸಗಿ ಶಾಲೆಗಳು ಮತ್ತು ಸೆರೆಮನೆಗಳ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾನೆ. ಫ್ರಾನ್ಜ್ ಕಾಫ್ಕನ ಕಾದಂಬರಿಗಳು ಆಧುನಿಕ ಜಗತ್ತಿನಲ್ಲಿ ಮಾನವನ ಒಂಟಿತನದ ನೋವಿಗೆ ಹೃದಯಸ್ಪಶಿಯಾದ ಅಭಿವ್ಯಕ್ತಿ ನೀಡುತ್ತವೆ. ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲೆಂಡಿನ ನಿಯತ ಕಾಲಿಕಗಳು ಧಾರವಾಹಿಯಾಗಿ ಕಾದಂಬರಿಗಳನ್ನು ಪ್ರಕಟಿಸುವ ಹೊಸ ವಿಧಾನವನ್ನು ಪ್ರಾರಂಭಿಸಿದುವು. ಇದರಿಂದ ಕಾದಂಬರಿಕಾರನಿಗೂ ಓದುಗನಿಗೂ ಹೊಸ ಬಾಂಧವ್ಯ ಏರ್ಪಟ್ಟಿತು. ಪ್ರತಿಭಾಗದ ಮುಕ್ತಾಯವೂ ಓದುಗನಲ್ಲಿ ಮುಂದಿನ ಭಾಗವನ್ನು ಓದುವಂತೆ ಪ್ರಚೋದಿಸುವಂತಿರಬೇಕಾದ್ದು ಅನಿವಾರ್ಯವಾಯಿತು. ಇದು ಕ್ರಿಯೆಯ ನಿರ್ವಹಣೆಯ ಮೇಲೆ ಪ್ರಭಾವ ಬೀರಿತು. ಇಡೀ ಕೃತಿ ಪ್ರಕಟವಾಗಿರದಿದ್ದುದರಿಂದ ಓದುಗರ ಬೇಕು-ಬೇಡಗಳು ಕಾದಂಬರಿಯ ಮೇಲೆ ಪ್ರಭಾವ ಬೀರುವುದು ಸಾಧ್ಯವಾಯಿತು. ಥ್ಯಾಕರೆ ಮತ್ತು ಡಿಕನ್ಸ ಓದುಗರ ಬೇಡಿಕೆಗೆ ತಲೆಬಾಗಿ ತಮ್ಮ ಪಾತ್ರಗಳ ಸ್ವಭಾವವನ್ನೊ ಕೃತಿಯ ಮುಕ್ತಾಯವನ್ನೊ ಮಾರ್ಪಡಿಸಿದುದುಂಟು. ಪ್ರಯಾಣ ಸುಲಭವಾಗಿ ಜಗತ್ತಿನ ವಿವಿಧ ಭಾಗಗಳ, ಅಲ್ಲಿಯ ಕೃತಿಗಳ ಪರಿಚಯ, ಚಲನಚಿತ್ರಗಳ ಪ್ರದರ್ಶನ-ಇವು ಹೆಚ್ಚಿದಂತೆ ಒಂದು ದೇಶದ ಕಾದಂಬರಿಗಳು ಮತ್ತೊಂದು ದೇಶದ ಕಾದಂಬರಿಗಳ ಮೇಲೆ ಪ್ರಭಾವ ಬೀರುವುದು ಪ್ರಾರಂಭವಾಯಿತು. ವಿಧಾನ ಮತ್ತು ತಂತ್ರಜ್ಞಾನಗಳ ಬೆಳೆವಣಿಗೆ ವ್ಶೆಜ್ಞಾನಿಕ ಕಾದಂಬರಿಗಳನ್ನು ಬೆಳೆಸಿದೆ. ಫ್ರಾನ್ಸಿನ ಜೂಲ್ಸ್ ವರ್ನ್ (1828-1905), ಇಂಗ್ಲೆಂಡಿನ ಎಚ್. ಜಿ. ವೆಲ್ಸ್ (1866-1946) ಮೊದಲಾದವರು ವಿಜ್ಞಾನದ ಆಧಾರದ ಮೇಲೆ ಕಾಲ್ಪನಿಕ ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸಿದರು. ಅಲ್ಲಿಂದ ವೈಜ್ಞಾನಿಕ ಕಾದಂಬರಿ ಸಮೃದ್ಧವಾದ ಬೆಳೆಯನ್ನು ಕಂಡಿದೆ. ವಿಜ್ಞಾನ, ತಂತ್ರಜ್ಞಾನಗಳ ಮುನ್ನಡೆ ಮನುಷ್ಯನ ಜೀವನವನ್ನು ಹೇಗೆ ರೂಪಿಸಿಬಹುದು ಎಂಬ ವಿಚಾರ ಆಲ್ಡಸ್ ಹಕ್ಸ್ಲಿಯಂಥ (1894-1963) ಕಾದಂಬರಿಕಾರರ ಆಸಕ್ತಿಯನ್ನು ಸೆಳೆಯಿತು. ಕಾದಂಬರಿಕಾರರು ಜೀವನವನ್ನು ಕಾಣುವ ದೃಷ್ಟಿಯ ಮೇಲೆ ಹಲವು ಜ್ಞಾನ ವಿಭಾಗಗಳ ಪ್ರಗತಿ ಪ್ರಭಾವ ಬೀರಿದೆ. ಡಾರ್ವಿನನ ಜೀವವಿಕಾಸಸಿದ್ಧಾಂತದಿಂದ ಪ್ರಾರಂಭವಾಗಿ ಹತ್ತೊಂಬತ್ತನೆಯ ಶತಮಾನದಲ್ಲಿ ಜೀವವಿಜ್ಞಾನ ಮತ್ತು ಖಗೋಳ ವಿಜ್ಞಾನಗಳಲ್ಲಿ ಬೆಳೆದು ಜ್ಞಾನ ಥಾಮಸ್ ಹಾರ್ಡಿಯ (1840-1928) ಕಾದಂಬರಿಗಳ ಜಗತ್ತನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಮನೋವಿಜ್ಞಾನದ ಪ್ರಗತಿ ಮನುಷ್ಯ ಸ್ವಭಾವದ ಜಟಿಲತೆ ಮತ್ತು ವೈಚಿತ್ರ್ಯಗಳನ್ನು ಅನಾವರಣ ಮಾಡಿದಂದು ಕಾದಂಬರಿಯಲ್ಲಿ ಪ್ರಜ್ಞಾಪ್ರವಾಹ ಪಂಥಕ್ಕೆ ದಾರಿಯಾಯಿತು. ವಾಸ್ತವಿಕತೆ ಎಂದರೇನು, ಸಹಜತೆ ಎಂದರೇನು ಎಂಬಂಥ ಪ್ರಶ್ನೆಗಳಿಗೆ ಕೃತಿಕಾರರು ಕಂಡುಕೊಂಡ ಉತ್ತರಗಳನ್ನು ಪ್ಲೊಬೇರ್, ಎಮಿಲಿಜೋಲಾ, ದಾಸ್ತಯೆವ್‍ಸ್ಕಿ, ತುಜ್ರ್ಯನೆಫ್, ಚಿಕೊಫ್-ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಹೀಗೆ ಬೆರಗುಗೊಳಿಸುವ ವೈವಿಧ್ಯದಿಂದ ಕಾದಂಬರಿ ಬೆಳೆದಿದೆ. ಈ ವೈವಿಧ್ಯ ಕಾದಂಬರಿಗಳ ವರ್ಗೀಕರಣದಲ್ಲಿ ಪ್ರತಿಬಿಂಬಿತವಾಗಿದೆ.

ವರ್ಗೀಕರಣ[ಬದಲಾಯಿಸಿ]

ವಿಮರ್ಶಕರು ಕಾದಂಬರಿಯನ್ನು ಬೇರೆ ಬೇರೆ ದೃಷ್ಟಿಗಳಿಂದ ವರ್ಗೀಕರಣಮಾಡಿದ್ದಾರೆ. ಒಂದು ಸ್ಥೂಲವಾದ ವಿಂಗಡಣೆ ವಿಚಿತ್ರ ಕಾದಂಬರಿ ಸಾಹಸ ಕಾದಂಬರಿ, ನೈಜ ಕಾದಂಬರಿ ಎಂದು. ವಿಚಿತ್ರ ಕಾದಂಬರಿಯನ್ನು ರೊಮಾನ್ಸ್ ರೂಪಕ್ಕೆ ಹೋಲಿಸಬಹುದು. ರ್ಯಾಬಿಲೆಸ್‍ನ (1490-1554) ಗರ್‍ಗಾಂಟುಅ. ಜೋನಾಥನ್ ಸ್ಟಿಫ್ಟ್‍ನ (1667-1745) ಗಲಿವರ್ಸ್ ಟ್ರಾವಲ್ಸ್ ಇಂಥ ಕೃತಿಗಳು. ಪೌರಾಣಿಕ ಕಥೆಗಳನ್ನು ಹೋಲುವ ಅದ್ಭುತ ಕಥೆಗಳನ್ನು ಕಾದಂಬರಿಕಾರ ಇಲ್ಲಿ ಸೃಷ್ಟಿಸುತ್ತಾನೆ. ವಾಸ್ತವಿಕತೆ, ಸಾಧ್ಯತೆಗಳ ಪ್ರಶ್ನೆಯೇ ಇಲ್ಲಿಲ್ಲ. ಕಾದಂಬರಿಕಾರ ಇಲ್ಲಿ ವಾಸ್ತವಿಕತೆಯನ್ನು ಅಲಕ್ಷಿಸುತ್ತಾನಲ್ಲದೆ ಸಂಕುಚಿತವಾದ ಅರ್ಥದಲ್ಲಿ ಸತ್ಯವಾಗಿರಲು ಸಾಧ್ಯವೇ ಇಲ್ಲದ ಕಥೆಯಿಂದ ಜೀವನದ ಗಹನವಾದ ಸತ್ಯವೊಂದನ್ನು ಮನಗಾಣಿಸಲು ಪ್ರಯತ್ನಿಸುತ್ತಾನೆ. ಗಲಿವರ್ಸ್ ಟ್ರಾವಲ್ಸ್ ವಿವಿಧ ದೃಷ್ಟಿಗಳಿಂದ-ಉದಾತ್ತ, ಪ್ರಾಮಾಣಿಕ ಕುದುರೆಗಳ ದೃಷ್ಟಿಯಿಂದ ಸಹ-ಮನುಷ್ಯನ ಜೀವನವನ್ನು ಕಟುವಾಗಿ ವಿಮರ್ಶಿಸುತ್ತದೆ. ವಾಲ್ಟೇರನ ಕ್ಯಾಂಡೈಡ್, ಸ್ಯಾಮ್ಯುಅಲ್ ಬಟ್ಲರನಎರವ್ಹನ್, ಕಾಫ್ಕನ ದಿ ಕ್ಯಾಸಲ್ (ಮಹಾಸೌಧ) ಇವು ಈ ವಿಭಾಗದ ಕೆಲವು ಕೃತಿಗಳು. ವಿಚಿತ್ರ ಕಾದಂಬರಿಯ ಅಂಶವನ್ನು ಬಾಲ್ಜಾಕ್, ಪ್ರೊಸ್ತ್. ಡಿಕನ್ಸ್ ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಈ ವಿಭಾಗಕ್ಕೆ ನಂಟುತನ ಸಾಹಸದ ಕಾದಂಬರಿಗಳಿಗೆ ಉಂಟಾದರೂ ಇವುಗಳಲ್ಲಿಯೂ ಅದ್ಭುತ ಘಟನೆಗಳೊನ್ನಳಗೊಂಡ ಕಥೆಯುಂಟು. ಆದರೆ ವಿಚಿತ್ರ ಕಾದಂಬರಿಯಲ್ಲಿ ಗಹನ ಸತ್ಯವೊಂದಿದ್ದರೆ,

ಸಾಹಸ ಕಾದಂಬರಿಯಲ್ಲಿ ಕಥೆಯೇ ಮುಖ್ಯ. ಡಫೋನ ರಾಬಿನ್‍ಸನ್ ಕ್ರೂಸೊ, ಸ್ಟೀವನ್‍ಸನ್ನನ ಕಿಡ್‍ನ್ಯಾಪ್ಡ್ ಇಂಥ ಕಾದಂಬರಿಗಳು. ವೆಲ್ಸ್‍ನ ವೈಜ್ಞಾನಿಕ ರಮ್ಯ ಕಾದಂಬರಿಗಳಲ್ಲಿ ಸಾಹಸ ಕಥೆಗೆ ವಿಜ್ಞಾನದ ಸಂಶೋಧನೆಗಳ ಆಧಾರ ದೊರೆಕಿದೆ.

ಸಾಮಾನ್ಯಜನದ ನಿತ್ಯಜೀವನವನ್ನೇ ವಸ್ತುವಾಗಿಟ್ಟುಕೊಂಡು ರಚಿತವಾದ ನೈಜ ಕಾದಂಬರಿಯ ತಿರುಳೆಂದರೆ ಅವರ ಕಷ್ಟ ಸುಖ, ಆಸೆ ನಿರಾಸೆ, ಸಮಸ್ಯೆ ನೆಲೆಗಳು, ಬಹುಮಟ್ಟಿಗೆ ಇವು ಸ್ತ್ರೀಪುರುಷರ ಆಕರ್ಷಣೀಯ ಕಥೆಗಳು. ಬಹುಮಂದಿಗೆ ಆಸಕ್ತಿಯನ್ನುಂಟುಮಾಡುತ್ತವಾಗಿ ಇವುಗಳ ಸಂಖ್ಯೆಯೂ ಹೆಚ್ಚು. ಗಯಟೆಯ ವರ್ದರ್‍ನ ದುಃಖಗಳು, ಜೇನ್ ಆಸ್ಟೆನಳ ಪ್ರೈಡ್ ಅಂಡ್ ಪ್ರೆಜುಡಿಸ್, ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಫ್ಲೋಬೇರ್‍ನ ಮದಾಂ ಬಾವರಿ, ಟಾಲ್ಸಟಾಯ್‍ಯ ವಾರ್ ಅಂಡ್ ಪೀಸ್, ದಾಸ್ತಯೆವ್‍ಸ್ಕಿಯ ದಿ ಈಡಿಯೆಟ್, ಜಾರ್ಜ್ ಮೆರಿಡಿತ್‍ನ ದಿ ಇಗೋಯಿಸ್ಟ್, ಡಿ.ಎಚ್. ಲರೆನ್ಸ್‍ನ ಸನ್ಸ್ ಅಂಡ್ ಲವಸ್-ಇಂಥ ಕೆಲವು ಮಹಾಕಾದಂಬರಿಗಳು.

ಕೃತಿಯ ಕ್ರಿಯೆಯ ಕಾಲ ಮತ್ತು ಆವರಣದ ದೃಷ್ಠಿಯಿಂದ ಕಾದಂಬರಿಯನ್ನು ಚಾರಿತ್ರಿಕ ಮತ್ತು ಕಾಲ್ಪನಿಕ (ಚಾರಿತ್ರಿಕವಲ್ಲದ್ದು) ಎಂದು ವಿಭಾಗ ಮಾಡಬಹುದು.

ಚಾರಿತ್ರಿಕ ಕಾದಂಬರಿಯಲ್ಲಿ ಕ್ರಿಯೆ ಚಾರಿತ್ರಿಕವಾದ ಕಾಲದೇಶಗಳಿಗೆ ಸೀಮಿತವಾಗಿರುತ್ತದೆ. ಆ ಆವರಣ ಕಾದಂಬರಿಯ ಪರಿಣಾಮಕ್ಕೆ ಅಗತ್ಯವಾದ ಒಂದು ಅಂಶ. ವಾಲ್ಟರ್ ಸ್ಕಾಟ್‍ನ ಕೆನಿಲ್‍ವರ್ತ್‍ನ ಕ್ರಿಯೆ ರಾಣಿ ಎಲಿಜಬೆತಳ ಕಾಲದ ಇಂಗ್ಲೆಂಡಿನಲ್ಲಿ ನಡೆಯುತ್ತದೆ. ರಾಣಿ ಎಲಿಜಬೆತ್ ಅರ್ಲ್ ಆಫ್ ಲೀಸ್ಟರ್ ಮೊದಲಾದ ಐತಿಕಾಲದ ವ್ಯಕ್ತಿಗಳು ಇಲ್ಲಿ ಬರುತ್ತಾರೆ. ಇಂಥ ಕೃತಿಯಲ್ಲಿ ಕಾದಂಬರಿಕಾರ ತಾನು ಆರಿಸಿಕೊಂಡು ಕಾಲದ ರೀತಿಗಳು, ಸಂಸ್ಥೆಗಳು, ಪದ್ಧತಿಗಳು-ಇವನ್ನಲ್ಲದೆ ಜೀವನಮೌಲ್ಯಗಳನ್ನೂ ಎಚ್ಚರಿಕೆಯಿಂದ ಅಳವಡಿಸಬೇಕಾಗುತ್ತದೆ.

ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಕ್ರಿಯೆ ಸಾಮಾನ್ಯವಾಗಿ ಕಾದಂಬರಿಕಾರನ ಕಾಲಕ್ಕೆ ಸೇರಿದುದು. (ಇದಕ್ಕೆ ಅಪವಾದಗಳೂ ಉಂಟು). ಈ ಕಾದಂಬರಿಗಳಲ್ಲಿ ಕ್ರಿಯೆಯ ಕಾಲ ಅಷ್ಟು ಮುಖ್ಯವಲ್ಲ. ಪಾತ್ರಗಳೆಲ್ಲ ಕಾಲ್ಪನಿಕವೇ. ಪ್ರತಿ ಕಾದಂಬರಿಯ ಮೇಲೆಯೂ ಒಂದು ಯುಗದ ಛಾಯೆ ಬೀಳುತ್ತದೆ ಎನ್ನುವುದು ನಿಜ. ಇಂಗ್ಲೆಂಡಿನ ಜೇನ್ ಆಸ್ಟೆನ್ ಚಾರಿತ್ರಿಕವಾಗಿ ಮಹತ್ವ್ತಪೂರ್ಣ ಕಾಲದಲ್ಲಿದ್ದರೂ ಸಮಕಾಲೀನ ಘಟನೆಗಳ ಪ್ರಸ್ತಾಪವೇ ಆಕೆಯ ಕೃತಿಗಳಲ್ಲಿ ಇಲ್ಲ. ಆದರೂ ರೈಲು ಮುಂತಾದ ಸ್ವಯಂಚಾಲಿತ ವಾಹನಗಳು ಇಲ್ಲದೇ, ಐವತ್ತು ಮೈಲಿಗಳ ಪ್ರಯಾಣ ಎಂದರೆ ಒಂದು ಮುಖ್ಯ ಸಂಗತಿ ಎಂದು ಭಾವಿಸುತ್ತಿದ್ದ ಕಾಲ ವದು ಎಂದು ಆ ಕಾದಂಬರಿಗಳ ಓದುಗ ನೆನಪಿಡುವುದು ಅಗತ್ಯ. ಒಟ್ಟಿನಲ್ಲಿ ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಪಾತ್ರಗಳು, ಘಟನೆಗಳು ಕಾಲ್ಪನಿಕ ಆದರೆ ನಡೆದದ್ದೇ ಅಲ್ಲ; ನಡೆಯಬಹುದಾದದ್ದು.

ಕಾದಂಬರಿಯ ಕ್ರಿಯೆ ಯಾವ ಪ್ರದೇಶದಲ್ಲಿ ನಡೆಯುತ್ತದೆ ಎಂಬ ದೃಷ್ಠಿಯಿಂದ ಕಾದಂಬರಿಗಳನ್ನು ಮತ್ತೊಂದು ರೀತಿಯಲ್ಲಿ ವರ್ಗೀಕರಿಸಬಹುದು. ಕ್ರಿಯೆ ನಡೆಯುವ ಸ್ಥಳ ನಿರ್ದಿಷ್ಟವಾಗಿದ್ದರೂ ಅದು ಮುಖ್ಯವಲ್ಲದ ಕಾದಂಬರಿಗಳು ಹಲವು. ಇನ್ನು ಕೆಲವು ಪ್ರಾದೇಶಿಕ ಕಾದಂಬರಿಗಳಲ್ಲಿ ಕ್ರಿಯೆ ನಡೆಯುವ ವಿಶಿಷ್ಟ ಪ್ರದೇಶದ ರೂಪು ರೇಖೆಗಳ ರೀತಿನೀತಿಗಳ ಪ್ರಭಾವ ಅನಿವಾರ್ಯವಾಗಿ ಪ್ರಮುಖವೆನಿಸಿತ್ತವೆ. ಆ ಪ್ರದೇಶದ ನಿಸರ್ಗದ ಶಕ್ತಿಗಳು ಅಥವಾ ಸಂಪ್ರದಾಯಗಳು ಅಥವಾ ಜೀವನ ವಿಧಾನ ಕ್ರಿಯೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಿರುತ್ತವೆ. ಸಿಂಕ್ಲೇರ್ ಲೂಯಿಯ ಮೇನ್ ಸ್ಟ್ರೀಟ್ ಇಂಥ ಒಂದು ಕೃತಿ.

ಕಾದಂಬರಿಯ ತಂತ್ರವನ್ನೇ ವರ್ಗೀಕರಣದ ಅಂಶವನ್ನಾಗಿಯೂ ಪರಿಗಣಿಸಬಹುದು (ತಂತ್ರ ಕಾದಂಬರಿಕಾರನ ದೃಷ್ಟಿಯನ್ನು ಹೊಂದಿಕೊಂಡಿರುತ್ತದೆ). ಬಿಗಿಯಾದ ಭಂದವಿಲ್ಲದೆ, ಒಬ್ಬ ನಾಯಕನ ಅನುಭವಗಳನ್ನು ಒಂದಾದ ಮೇಲೊಂದರಂತೆ ಬಿತ್ತರಿಸುವ ಕಾದಂಬರಿಗಳುಂಟು. ಇವು ಎರಡು ಬಗೆಯವು.

ಸಾಹಸವಂತ ಮತ್ತು ಗುಣವಂತ ನಾಯಕನಾದರೆ ಸಾಹಸದ ಕಾದಂಬರಿ ಸೃಷ್ಟಿಯಾಗುತ್ತದೆ. ಸ್ಟೀವನ್‍ಸನ್ನರ ಟ್ರಷರ್ ಐಲೆಂಡ್ ಇಂಥ ಕೃತಿ. ತುಂಟನಾಯಕನ ಕಥೆಯಲ್ಲಿ ನಾಯಕನೇ ಪಟಿಂಗನಾಗಿರುತ್ತಾನಾಗಿ ನೈತಿಕಮೌಲ್ಯಗಳ ವಿಚಾರ ಅಲ್ಲಿ ಗೌಣ. ಸ್ಪೇನಿನ ಅಲೆಮಾನ್‍ನ ಗಜ್‍ಮಾನ್ ದ ಆಲ್ಪಾರಾಚ್(1599-1604), ಫೀಲ್ಡಿಂಗ್‍ನ ಜೊನಾಥನ್ ವೈಲ್ಡ್ ಮೊದಲಾದ ಕಾದಂಬರಿಗಳು ಒಂದು ಉದ್ದೇಶಿತ ರಚನೆ ಇರುವ ಕಾದಂಬರಿಗಳು. ನಾಟಕೀಯ ಕಾದಂಬರಿಯಲ್ಲಿ ಕ್ರಿಯೆಯ ಬೆಳವಣಿಗೆ ಮುಖ್ಯವಾಗಿ ನಾಟಕೀಯ ದೃಶ್ಯಗಳಿಂದ. ನಾಟಕದಲ್ಲಿನಂತೆ ಪರಿಣಾಮಕಾರಿ ಸನ್ನಿವೇಶಗಳ ಪರಂಪರೆ ಮನಸ್ಸಿನಲ್ಲಿ ಮುಖ್ಯವಾಗಿ ನಿಲ್ಲುತ್ತದೆ, ನಡುವೆ ಅಗತ್ಯವಾದ ಕೊಂಡಿಗಳನ್ನು ಕೃತಿಕಾರ ಒದಗಿಸಿರುತ್ತಾನೆ. ಹೆನ್ರಿ ಜೇಮ್ಸ್‍ನ ದಿ ಅಂಬಾಸಡರ್ಸ್ ಈ ಬಗೆಯದು. ದೃಶ್ಯಾವಳಿ ಪ್ರಧಾನ ಕಾದಂಬರಿಯಲ್ಲಿ ಕಾದಂಬರಿಕಾರ ನಮ್ಮ ಜೊತೆಗೇ ಇರುವುದರ ಅನುಭವವಾಗುತ್ತದೆ; ನಾವು ಬೆಟ್ಟದ ಮೇಲೆ ನಿಂತು ಸುತ್ತಲಿನ ನಿಸರ್ಗದ ದೃಶ್ಯಗಳ್ನು ಕಂಡಂತೆ ಭಾಸವಾಗುತ್ತದೆ. ಥ್ಯಾಕರೆಯ ವ್ಯಾನಿಟ ಫೇರ್ ಇದಕ್ಕೆ ನಿದರ್ಶನ. ಕಾದಂಬರಿಯಲ್ಲಿ ಒಂದು ಅಥವಾ ಒಂದೆರಡು ಮುಖ್ಯ ಪಾತ್ರಗಳ ಜೀವನವನ್ನು ಅಥವಾ ಜೀವನದ ಒಂದು ಭಾಗವನ್ನು ಘಟನೆಗಳ ಮೂಲಕ ನಿರೂಪಿಸುವುದು ಜೀವನವೃತ್ತಾಂತದ ರೀತಿಯ ಕಾದಂಬರಿಯ ವಿಧಾನ. ಕಾದಂಬರಿಯಲ್ಲಿ ಬಹುಸಂಖ್ಯೆಯವು ಈ ವರ್ಗಕ್ಕೆ ಸೇರುತ್ತವೆ. ಜಗತ್ತಿನ ಮಹಾಕಾದಂಬರಿಗಳಲ್ಲಿ ಹಲವು ಈ ಬಗೆಯವು. ಕಾದಂಬರಿಯ ಪಾತ್ರಗಳಲ್ಲಿ ಒಂದು ತಾನು ಕಂಡಂತೆ ಕಥೆಯನ್ನು ಹೇಳುವುದು ಆತ್ಮವೃತ್ತದ ತಂತ್ರ. ಡಫೋನ ರಾಬಿನ್‍ಸನ್ ಕ್ರೊಸೊದಿಂದ ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಜೆ.ಡಿ. ಸ್ಯಾಲಿಂಗರನ ಕ್ಯಾಚರ್ ಇನ್ ದಿ ರೈ ಮತ್ತು ಕಾಮೂನ ದಿ ಸ್ಟ್ರೇಂಜರ್ ವರೆಗೆ ಈ ತಂತ್ರವನ್ನು ಹಲವು ಕೃತಿಗಳು ಬಳಸಿಕೊಂಡಿವೆ. ಡಿಕನ್ಸನ್ ಡೇವಿಡ್ ಕಾಪರ್‍ಫೀಲ್ಡ್‍ನಲ್ಲಿ ನಾಯಕನೇ ಕಥೆಯನ್ನು ಹೇಳುತ್ತಾನೆ. ಕೆಲವು ಕಾದಂಬರಿಗಳಲ್ಲಿ ಕಥೆಯನ್ನು ಹೇಳುವವನು ನಗೆಗೀಡಾಗಿ ಮತ್ತೊಂದು ಪಾತ್ರದ ಹಿರಿಮೆಯನ್ನು ತೋರಿಸಲು ಹಿನ್ನೆಲೆಯಾಗುತ್ತಾನೆ. ವೊಡ್ ಹೌಸನ ಹಲವು ಕಾದಂಬರಿಗಳಲ್ಲಿ ಕೇಂದ್ರವ್ಯಕ್ತಿ ಎನ್ನಿಸಿಕೊಳ್ಳಬಹುದಾದ ಬಟ್ರ್ರಮ್ ವೂಸ್ಟರ್, ಆರ್ಥರ್ ಕಾನನ್‍ಡಾಯ್ಲ್‍ನ ಷರ್ಲಾಕ್ ಹೋಮ್ಸ್ ಕಾದಂಬರಿಗಳಲ್ಲಿ ನಾಯಕನ ಗೆಳೆಯ ಡಾ.ವ್ಯಾಟ್ಸನ್ ಇಂಥವರು. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ನಂಥ ಕಾದಂಬರಿಯಲ್ಲಿ ಕಥೆ ಹೇಳುವವನಿಗೆ ತಾನು ಬರೆಹಗಾರ ಎಂಬ ಅರಿವು ಇದ್ದೆ ಇರುತ್ತದೆ. ದಿನಚರಿಗಳು ಮತ್ತು ಕಾಗದಗಳ ಮೂಲಕ ಕಥಾವಸ್ತುವನ್ನು ನಿರೂಪಿಸುವ ಕಾದಂಬರಿಗಳೂ ಉಂಟು.

ಉದ್ದೇಶದ ದೃಷ್ಟಿಯಿಂದಲೂ ಕಾದಂಬರಿಗಳನ್ನು ವರ್ಗೀಕರಿಸಬಹುದು. (ಉದ್ದೇಶತಂತ್ರಗಳಿಗೆ ನಿಕಟವಾದ ಸಂಬಂಧವುಂಟು ಎಂಬುದನ್ನು ಇಲ್ಲಿ ಗಮನಿಸಬೇಕು). ಕಾದಂಬರಿ ಅನ್ಯಾರ್ಥಪ್ರಧಾನವಾಗಬಹುದು ಅಂದರೆ ಒಂದು ವಿಸ್ತಾರವಾದ ನೀತಿ ದೃಷ್ಟಿಯನ್ನು ಪ್ರತೀಕಗಳಾದ ಪಾತ್ರಗಳ ಮೂಲಕ ನಿರೂಪಿಸಬಹುದು. ಬನ್ಯನನ ಪಿಲ್‍ಗ್ರಿಮ್ಸ್ ಪ್ರೋಗ್ರೆಸ್‍ನಲ್ಲಿ ಕ್ರಿಶ್ಚಿಯನ್ ಎಂಬಾತ ವಿನಾಶದ ನಗರದಿಂದ (ಸಿಟಿ ಆಫ್ ಡಿಸ್ಟ್ರಕ್ಷನ್) ಅಮರ ನಗರಕ್ಕೆ (ದಿ ಎವರ್‍ಲಾಸ್ಟಿಂಗ್ ಸಿಟಿ) ಪ್ರಯಾಣಮಾಡುತ್ತಾನೆ. ಓದುಗರಲ್ಲಿ ಭಯಮಿಶ್ರಿತ ರೋಮಾಂಚನವನ್ನುಂಟುಮಾಡುವುದೇ ಗಾಥಿಕ್ ಕಾದಂಬರಿಯ ಮುಖ್ಯ ಉದ್ದೇಶ. ಹಾರೆಸ್ ವಾಲ್‍ಪೋಲನ ಕ್ಯಾಸಲ್ ಆಫ್ ಅಟ್ರಾಂಟೊ (1764) ಈ ಸಂಪ್ರದಾಯನ್ನು ಇಂಗ್ಲೆಂಡಿನಲ್ಲಿ ಪ್ರಾರಂಭಿಸಿತು. ಈ ಪರಂಪರೆಯಲ್ಲಿ ಮೇರಿ ಷೆಲಿಯ ಫ್ರಾಂಕಿನ್‍ಸ್ಟಿನ್ (1817) ಪ್ರಸಿದ್ಧವಾಗಿದೆ. ಮುಖ್ಯಪಾತ್ರದ ಸುತ್ತಲಿನ ಜೀವನಕ್ಕಿಂತ ಅದರ ಮಾನಸಿಕ ಜೀವನಕ್ಕೆ ಪ್ರಾಧಾನ್ಯ ಕಂಡುಬರುವುದು ಪರಿಣಾಮ ವಿಧಾನದ (ಇಂಪ್ರೆಷನಿಷ್ಟಿಕ್) ಕಾದಂಬರಿಯಲ್ಲಿ. ಜೇಮ್ಸ್ ಜಾಯ್ಸ್‍ನ ಪೋರ್‍ಟ್ರೇಟ್ ಆಫ್ ದಿ ಆರ್ಟಿಸ್ಟ್ ಆಸ್ ಎ ಯಂಗ್ ಮ್ಯಾನ್‍ನಲ್ಲಿ (1916) ನಾಯಕನ ಮನಸ್ಸಿನಲ್ಲಿ ಸ್ಫುರಿಸುವ ಭಾವಗಳ ನಿರೂಪಣೆ ಮುಖ್ಯ, ಅವನ ಸುತ್ತಣ ಪರಿಸರವಲ್ಲ. ಈ ಬಗೆಯ ಕಾದಂಬರಿಯ ಮುಂದಿನ ಬೆಳವಣಿಗೆ ಪ್ರಜ್ಞಾಪ್ರವಾಹ (ಸ್ಟ್ರೀಮ್ ಆಫ್ ಕಾನ್ಷಸ್‍ನೆಸ್) ಕಾದಂಬರಿ. ಇದರಲ್ಲಿ ಕಾದಂಬರಿಕಾರನ ಪ್ರಯತ್ನ ಸ್ಪಷ್ಟವಾದ ತಾರ್ಕಿಕ ಹೊಂದಾಣಿಕೆ ಇಲ್ಲದ ಮನಸ್ಸಿನಲ್ಲಿ ಹರಿಯುವ ಭಾವಗಳನ್ನು ಮತ್ತು ವಿಚಾರಗಳ ವಾಹಿನಿಯನ್ನು ಯಥಾವತ್ತಾಗಿ ನಿರೂಪಿಸುವುದು. ಈ ಪಂಥದ ಸುಪ್ರಸಿದ್ಧ ಕೃತಿ ಜೇಮ್ಸ್ ಜಾಯ್ಸ್‍ನ ಯೂಲಿಸಿಸ್ (1922). ಸಾಮಾಜಿಕ ರೀತಿಗಳ ಕಾದಂಬರಿಯಲ್ಲಿ (ನಾವೆಲ್ ಆಫ್ ಮ್ಯಾನರ್ಸ್) ಸಮಕಾಲೀನ ಸಮಾಜದ ರೀತಿಗಳನ್ನು - ಸಾಮಾನ್ಯವಾಗಿ ವಿಡಂಬನಾತ್ಮಕವಾಗಿ - ನಿರೂಪಿಸುವುದೇ ಉದ್ದೇಶ. ಫ್ಯಾನಿ ಬರ್ನಿಯ ಈವ್‍ಲೀನ್ (1778) ಮತ್ತು ಜೇನ್ ಆಸ್ಟೆನಳ ಕಾದಂಬರಿಗಳು ಈ ಬಗೆಯವು. ಮನುಷ್ಯ ನಿಸರ್ಗದೊಡನೆ ನಡೆಸಬೇಕಾದ ಹೋರಾಟದ ಚಿತ್ರಣ ನೆಲದ ಕಾದಂಬರಿಯ (ನಾವೆಲ್ ಆಫ್ ದಿ ಸಾಯ್ಲ್) ಗುರಿ. ಎಲೆನ್ ಗ್ಲಾಸ್‍ಗೋನ ಬ್ಯಾರನ್ ಗ್ರೌಂಡ್ (1925) ಇಂಥ ಕೃತಿ. ಎಲ್ಲ ಕಷ್ಟನಷ್ಟಗಳ ನಡುವೆ ಸ್ಥಿರವಾಗಿ ಬಂಡೆಯಂತೆ ನಿಂತ ಧರ್ಮನಿಷ್ಠೆಯನ್ನು ಚಿತ್ರಿಸುವುದೇ ಭಾವಾತಿರೇಕದ ಕಾದಂಬರಿಯ (ಸೆಂಟಿಮೆಂಟಲ್) ಉದ್ದೇಶ. ಆಲಿವರ್ ಗೋಲ್ಡ್‍ಸ್ಮಿತ್‍ನ ದಿ ವಿಕಾರ್ ಆಫ್ ವೇಕ್‍ಫೀಲ್ಡ್ ಕಾದಂಬರಿಯ (1766) ನಾಯಕ ಡಾಕ್ಟರ್ ಪ್ರಿಮ್‍ರೋಸ್ ಆಸ್ತಿಯನ್ನು ಕಳೆದುಕೊಂಡು, ಸೆರೆಮನೆ ಸೇರಿ ತನ್ನ ಹೆಣ್ಣುಮಕ್ಕಳಿಗೆ ತೀರ ಅನ್ಯಾಯ, ಅಪಮಾನಗಳಾದಾಗಲೂ ದೇವರಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳುತ್ತಾನೆ; ಕಡೆಗೆ ಧರ್ಮಕ್ಕೆ ಜಯವಾಗುತ್ತದೆ. ಒಂದು ವಿಚಾರದೃಷ್ಟಿಯ ಪ್ರತಿಪಾದನೆಗಾಗಿ ರಚಿತವಾದದ್ದು ಥೀಸಿಸ್ ನಾವಲ್. ಆರಿಖ್ ಮರೈಯ ಫಾನ್ ರಮಾರ್ಕ್‍ನ ಆಲ್ ಕ್ವಯಟ್ ಆನ್ ದಿ ವೆಸ್ಟರ್ನ್ ಫ್ರಂಟ್‍ನ ಉದ್ದೇಶ ಯದ್ಧದ ಭೀಕರ ಕ್ರೌರ್ಯ ಮತ್ತು ಮೂರ್ಖತನವನ್ನು ಚಿತ್ರಿಸುವುದು. ಒಂದು ಅಪರಾಧದ ಸಮಸ್ಯೆಯನ್ನು ಬಿಡಿಸುವುದರ ವೃತ್ತಾಂತದಿಂದ ಕತೂಹಲವನ್ನು ಬೆಳೆಸುವುದು ಪತ್ತೇದಾರಿ ಕಾದಂಬರಿಯ ಉದ್ದೇಶ. ಆಗಾಥ ಕ್ರಿಸ್ಟಿ, ನಿಕೊಲಸ್ ಬ್ಲಾಕ್ (ಸಿ. ಢೇ. ಲೂಯಿಸ್), ಡರಥಿ ಎಲ್ ಸೇಯರ್ಸ್, ಅರ್ಲ್ ಸ್ಟ್ಯಾನ್ಲೆ ಗಾಡ್ರ್ನರ್ ಈ ಮೊದಲಾದವರು ಈ ವಿಭಾಗದಲ್ಲಿ ಬಹು ಜನಪ್ರಿಯತೆಯನ್ನು ಗಳಿಸಿದವರು.

ಹೀಗೆ ಕಾದಂಬರಿಗಳನ್ನು ಹಲವು ರೀತಿಗಳಲ್ಲಿ ವರ್ಗೀಕರಣ ಮಾಡಬಹುದು.

ಹದಿನೆಂಟನೆಯ ಶತಮಾನದ ನಂತರ ಪಾಶ್ಚಾತ್ಯ ಕಾದಂಬರಿಗಳು[ಬದಲಾಯಿಸಿ]

ಹದಿನೆಂಟನೆಯ ಶತಮಾನದಲ್ಲಿ ಪಾಶ್ಚಾತ್ಯ ಜಗತ್ತಿನಲ್ಲಿ ಸ್ಪಷ್ಟವಾಗಿ ಸಾಹಿತ್ಯ ರೂಪವನ್ನು ತಳೆದ ಕಾದಂಬರಿ ಕಳೆದ ಒಂದು ಶತಮಾನದಲ್ಲೂ ಬಹು ವೇಗವಾಗಿ ಹಲ ಮುಖನಾಗಿ ಬೆಳೆದಿದೆ. ಲೆಕ್ಕವಿಲ್ಲದಷ್ಟು ಪ್ರಯೋಗಗಳು ಈ ರೂಪದಲ್ಲಿ ನಡೆದಿವೆ. ಮಾರ್ಷಲ್ ಪ್ರೊಸ್ತ್‍ನ (1871-1922) ಕಳೆದುಹೋದ ಸಂಗತಿಗಳ ಸ್ಮರಣೆ ಎಂಬ ಕಾದಂಬರಿಯಲ್ಲಿ (ಅ ಲ ರಿಷರ್ಷ್ ದ್ಯೂ ತಾ ಪದ್ರ್ಯು) ಕಥಾವಸ್ತು ಅಷ್ಟು ಮುಖ್ಯವೇ ಅಲ್ಲ. ಇಲ್ಲಿ ನಡೆದುಹೋದ ಘಟನೆಗಳ ನಿರೂಪಣೆ ಇದೆ. ಆದರೆ ನಿರೂಪಣೆಯ ರೀತಿಯಿಂದ ಅವು ಗತಕಾಲದ ಘಟನೆಗಳೆಂದೇ ಭಾಸವಾಗುವುದಿಲ್ಲ; ಇನ್ನೂ ಅಸ್ತಿತ್ವದಲ್ಲಿರುವ ಏರಿಳಿತಗಳ ಭಾಗವೆಂದೇ ಅನುಭವವಾಗುತ್ತದೆ; ಕಾಲ ದೇಶ. ವ್ವಕ್ತಿತ್ವಗಳು ಕರಗಿಹೋಗಿ ಉಳಿಯುವ ಅನಂತತೆಯ ಅನುಭವವಾಗುತ್ತದೆ. ಸಿ.ಪಿ. ಸ್ನೋನ (1905-) ಸ್ಟ್ರೇಂಜರ್ಸ್ ಅಂಡ್ ಬ್ರದರ್ಸ್ ಹನ್ನೊಂದು ಸಂಪುಟಗಳ ಮಾಲೆ; ಇದು ಲೂಯಿ ಎಲಿಯೆಟ್ ಎಂಬಾತನ ಆತ್ಮವೃತ್ತರೂಪದಲ್ಲಿದೆ. ಅಧಿಕಾರ ಸ್ಥಾನಗಳಲ್ಲಿರುವವರ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಜೀವನಗಳ ಒತ್ತಡಗಳ ನಿರೂಪಣೆ ಇಲ್ಲಿನ ಉದ್ದೇಶ. ಇಲ್ಲಿನ ಚಿತ್ರಣದಲ್ಲಿ ಉದ್ವೇಗ ಮತ್ತು ವಿಡಂಬನೆಗಳಿಲ್ಲದ ಪರಿಪಕ್ವ ಮಾನವೀಯತೆಯನ್ನು ಕಾಣಬಹುದು. ಅಮೆರಿಕದ ಜೆ.ಡಿ. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ಸಮಕಾಲೀನ ಜೀವನದ ರೀತಿ ಮತ್ತು ಮೌಲ್ಯಗಳ ವಿರುದ್ಧ ಪ್ರತಿಭಟಿಸುವ ಯುವಕ ಮನೋಭಾವದ ಪ್ರತೀಕ. ಇದರಲ್ಲಿ ನಿಜವಾದ ಕಥಾವಸ್ತುವಿಲ್ಲ. ಹದಿನೈದು ವಯಸ್ಸಿನ ಬಾಲಕನೊಬ್ಬ ನ್ಯೂಯಾರ್ಕ್‍ನಲ್ಲಿ ಎರಡು ದಿನಗಳನ್ನು ಕಳೆಯಲು ಬಂದು, ಟ್ಯಾಕ್ಸಿ ಚಾಲಕರು, ಒಬ್ಬ ಸೂಳೆ, ತನ್ನ ತಂಗಿ, ಒಬ್ಬ ಸಲಿಂಗ ರತಿಯ ಹಿರಿಯವಯಸ್ಕ ಇವರ ಮಧ್ಯೆ ಓಡಾಡುವುದು, ಆಷಾಢಭೂತಿತನ ಮತ್ತು ಅಪ್ರಮಾಣಿಕ ಮೌಲ್ಯಗಳ ಜಗತ್ತಿನ ಅನುಭವ ಇವುಗಳಿಂದ ಕಾದಂಬರಿ ಬೆಳೆದಿವೆ. ಮನೋವೈಜ್ಞಾನಿಕ ಚಿಕಿತ್ಸೆ ಪಡೆಯುತ್ತಿರುವ ನಾಯಕನ ಆತ್ಮವೃತ್ತ ಇದು. ಅವನ ಅನುಭವ ಗೊಂದಲ, ದಿಗ್ಭ್ರಮೆ, ಭಯಭೀತಿಗಳನ್ನೆಲ್ಲ ಭಾಷೆಯ ಮೂಲಕ ಸಂವಹನಗೊಳಿಸುವ ಪ್ರಯತ್ನ ಇಲ್ಲಿದೆ. ಆತ್ಮವೃತ್ತ ತಂತ್ರವನ್ನು ಬಳಸಿ ಒಂದು ವಿಲಕ್ಷಣ ಮನೋಧರ್ಮವನ್ನು ಚಿತ್ರಿಸುವ ಪ್ರಯತ್ನ ವ್ಲಾಡಿಮಿರ್ ನಬೊತೊವ್‍ನ (1899-) ಲೋಲಿಟದಲ್ಲಿಯೂ ಕಾಣುತ್ತದೆ. ಬಹು ಶೀಘ್ರವಾಗಿ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕಾದಂಬರಿ ಇದು. ಎದುರಿಲ್ಲದ ಆಕರ್ಷಣೆ ಬೀರುವ ಎಳೆವಯಸ್ಸಿನ ಹುಡುಗಿಯಲ್ಲಿ ಅತ್ಯನುರಾಗ, ಮನಸ್ಸಿನ ವಿಕಾರ, ಎನ್ನುವಷ್ಟರಮಟ್ಟಿನ ಗೀಳು - ನಾಯಕನಿಗೆ ಅವನ ಮನಸ್ಸಿನ ವಿಕಾರ, ವಿಚಾರಗಳು ಅವನ ಭಾಷೆಯಲ್ಲಿಯೆ ಕಥೆಯಲ್ಲಿ ಪ್ರತಿಬಿಂಬಿತವಾಗುತ್ತವೆ. ಜಟಿಲವಾದ, ಸುತ್ತುಸುತ್ತಿನ, ದಟ್ಟವಾದ ಸೂಚನೆಗಳ, ಆದರೂ ಲವಲವಿಕೆಯ ವಿಚಿತ್ರಶೈಲಿ ಅಲ್ಲಿನ ಮನಸ್ಸಿನ ಸ್ಥಿತಿಯಷ್ಟೇ ವಿಶಿಷ್ಟವಾದುದು. ನೈಜೀರಿಯದ ಚಿನುಅ ಅಚಿಬೆಯ ದೇವರ ಬಾಣದ (ಆರೊ ಆಫ್ ಗಾಡ್- (1964) ವಸ್ತು ಶ್ವೇತವರ್ಣಕ್ಕೆ ಸೇರದವರ ನಾಗರಿಕತೆಗಳಿಗೆ, ಅವುಗಳ ಸತ್ತ್ವ ಶ್ರೀಮಂತಿಕೆ ಮತ್ತು ಸುಖಗಳನ್ನು ಗುರುತಿಸಲಾರದವರಿಂದ ಒದಗುವ ಅಪಾಯವೇ ಆಗಿದೆ. ಕುಷ್ವಂತ್ ಸಿಂಗರ ಐ ಷಲ್ ನಾಟ್ ಹಿಯರ್ ದಿ ನೈಟಿಂಗೇಲ್ಸ್ ಎಗೆನ್ (1961) ಎಂಬ ಪುಸ್ತಕದಲ್ಲಿ ಭಾರತದಲ್ಲಿ 1942-43ರ ಪರ್ವಕಾಲದ ಸಿಖ್ ಸಮುದಾಯದ ಜೀವನವನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಹಂಗೆರಿಯ ಗಜ್‍ಟಾವ್ ರಾಬ್‍ನ, ಸಬೇರಿಯ ಪುಸ್ತಕದ ವಸ್ತು ಕ್ರೈಸ್ತಮತ ಮತ್ತು ಕಮ್ಯೂನಿಸಂಗಳ ಘರ್ಷಣೆ. ಆದರೆ, ಬಾಳಿನಲ್ಲಿ ಒಳ್ಳೆಯದು ಕೆಟ್ಟದು ಜೊತೆ ಜೊತೆಯಾಗಿ ಹೆಣೆದುಕೊಂಡಿರುತ್ತವೆ, ಒಂದರಿಂದ ಇನ್ನೊಂದನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವಂತಿಲ್ಲ-ಎಂಬ ಬಾಳಿನ ದುರಂತವನ್ನು ಕಾದಂಬರಿ ಚಿತ್ರಿಸುತ್ತದೆ. ಆಲ್ಬರ್ಟ್ ಕಾಮೂನ (1931-60) ದಿ ಮಿತ್ ಆಫ್ ಸಿಸಿಫಸ್ ಶೂನ್ಯವಿಶ್ವದಲ್ಲಿ ಮನುಷ್ಯನ ಪ್ರಯತ್ನಗಳ ಅಸಂಬದ್ಧತೆಯನ್ನು ನಿರೂಪಿಸುತ್ತದೆ. ಜಾಪಾಲ್ ಸಾತ್ರ್ರ್ ಕಾದಂಬರಿ ಮಾಧ್ಯಮವನ್ನು ಅಸ್ತಿತ್ವವಾದದ ನಿರೂಪಣೆಗೆ ಬಳಸಿಕೊಂಡಿದ್ದಾನೆ. ಕಾದಂಬರಿಗೆ ವಿರುದ್ಧ (ಆಂಟಿ ನಾವಲ್) ಎನಿಸಿಕೊಂಡ ಕಾದಂಬರಿಗಳು ಮನುಷ್ಯನಿಗೆ ಅತಿ ಸಮೀಪದ ಸುತ್ತಲಿನ ಆವರಣ ಸಹ ಅವನಲ್ಲಿ ತೋರಿಸುವ ನಿಲ್ರ್ಯಕ್ಷ್ಯವನ್ನು ಒತ್ತಿಹೇಳುತ್ತೇವೆ. ಇವುಗಳಲ್ಲಿ ಕ್ರಿಯೆಯ ಗಮನ ಬಹು ನಿಧಾನ. ಮೈಕೇಲ್ ಬ್ಯೂಟರ್‍ನ ಕಾದಂಬರಿಗಳಲ್ಲಿ ಪಾತ್ರಗಳ ಬದುಕಿನ ಕಾಲವನ್ನೇ ಹಿಮ್ಮುಖ ಮಾಡುವ ಪ್ರಯತ್ನವಿದೆ. ಹೀಗೆ ಆಧುನಿಕ ಕಾಲದಲ್ಲಿ ಕಾದಂಬರಿ ಕ್ಷೇತ್ರದಲ್ಲಿ ಪ್ರಯೋಗಗಳಿಗೆ ಕೊನೆಯೇ ಇಲ್ಲ.

ಪ್ರಪಂಚದ ಪ್ರಸಿದ್ಧ ಕಾದಂಬರಿಗಳು[ಬದಲಾಯಿಸಿ]

ಪ್ರಸಿದ್ಧವೆನಿಸಿದ ಕೇವಲ ಕೆಲವು ಕೃತಿಗಳನ್ನು (ಭಾರತ ಮತ್ತು ಗ್ರೇಟ್‍ಬಿಟನ್‍ಗಳಲ್ಲಿ ರಚಿತವಾದ ಕಾದಂಬರಿಗಳನ್ನುಳಿದು) ಇಲ್ಲಿ ಗಮನಿಸಬಹುದು.

ಸ್ಪೇನ್ ದೇಶದ ಸರ್‍ವ್ಯಾಂಟಿಸ್ ಡಾನ್ ಕ್ವಿಕ್ಸಟ್‍ನ ಸಾಹಸಗಳು (1605) ಬೈಬಲನ್ನು ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಬಾರಿ ಅನುವಾದವಾಗಿರುವ ಕೃತಿ ಎನ್ನುತ್ತಾರೆ. ಸಾಹಸವೀರರ ಅದ್ಭುತ ಸಾಧನೆಗಳ ಕಥೆಗಳನ್ನು ಓದಿ ತಾನೂ ಸಾಹಸಗಳನ್ನರಸಿ ಹೊರಟ ಮುದುಕನ ಕಥೆ ಇದು. ಕೃತಿ ಹಾಸ್ಯದ ಆಗರ. ನಾಯಕನನ್ನು ನೋಡಿ ನಗುವಂತೆಯೇ ಮತ್ತೆ ಮತ್ತೆ ಕಠಿಣ ವಾಸ್ತವಿಕತೆಗೆ ಎದುರಾಗಿ ಸೋಲುವ ಅವನನ್ನು ಕಂಡು ಮರುಕ ಪಡುತ್ತೇವೆ. ಅನುಭವಗಳ ಹೊರ ತೋರಿಕೆಯನ್ನು ಭೇದಿಸಿ ಅವುಗಳ ನಿಜವಾದ ಸ್ವರೂಪವನ್ನೂ ಅರ್ಥವನ್ನೂ ಕಾಣಿಸುವ ಪ್ರಯತ್ನ ಇಲ್ಲಿದೆ. ಕೆಲವು ರೀತಿಗಳಲ್ಲಿ ಹುಚ್ಚನಾದರೂ ಆದರ್ಶ ಪ್ರಿಯನೂ ಸೌಜನ್ಯಶೀಲನೂ ನಿಜವಾಗಿ ಒಳ್ಳೆಯವನೂ ಆದ, ನಮ್ಮ ಆದರನ್ನು ಮೆಚ್ಚಿಗೆಯನ್ನು ಗಳಿಸುವ, ಎಂದೆಂದೂ ಮರೆಯಲಾಗದ ಪಾತ್ರವನ್ನು ಸರ್‍ವ್ಯಾಂಟಿಸ್ ಚಿತ್ರಿಸಿದ್ದಾನೆ, ಜಗತ್ತಿಗೊಂದು ಹೊಸ ಪ್ರತೀಕವನ್ನು ನೀಡಿದ್ದಾನೆ.

ಫ್ರಾನ್ಸ್ ಜಗತ್ತಿಗೆ ಹಲವು ಶ್ರೇಷ್ಠ ಕಾದಂಬರಿಗಳನ್ನು ಕೊಟ್ಟಿದೆ. ಪ್ರಪಂಚದ ಸಾಹಿತ್ಯದಲ್ಲಿ ಅತಿ ಸಮರ್ಥ ವಿಡಂಬನೆಗಳಲ್ಲಿ ಒಂದೆನೆಸಿರುವುದು ವಾಲ್ಟೇರನ ಕಾಂಡೈಡ್, ಕಹಿಯಾದ, ಕತ್ತರಿಸುವ ಇಲ್ಲಿನ ವಿಡಂಬನೆಯಲ್ಲಿ ಮಾರ್ದವತೆ ಮತ್ತು ವಿವೇಕಗಳ ಗುಪ್ತವಾಹಿನಿಯೂ ಉಂಟು. ಸದ್ದುಗದ್ದವಿಲ್ಲದ ನಿರಾಡಂಬರ ಕರ್ತವ್ಯಶೀಲತ್ವ, ಸುಖವನ್ನರಸುವ ಯುವಕನಾಯಕನಿಗೆ ಸಮಾಧಾನದ ಹಾದಿಯಾಗುತ್ತದೆ. ಮದಾಂ ಬವಾರಿ ಸುಖಕ್ಕಾಗಿ ಹಂಬಲಿಸುವ ಒಬ್ಬ ಸಾಮಾನ್ಯ ಹೆಣ್ಣಿನ ಕಥೆ; ಕಾದಂಬರಿಯಿಂದ ಸಂಪೂರ್ಣವಾಗಿ ಹೊರಕ್ಕೆ ನಿಂತು ನಿಷ್ಠುರ ವಾಸ್ತವಿಕತೆಯನ್ನು ಪರಿಪಾಲಿಸಬೇಕೆನ್ನುವ ಪಂಥದ ಗುಸ್ತಾವ್ ಫ್ಲೋಬೇರನ ಕೃತಿ ಇದು. ಪಾತ್ರ, ಕ್ರಿಯೆಗಳ ಸಮತೋಲನ, ಒಂದೇ ವಸ್ತುವಿನಲ್ಲಿ ಕಟ್ಟಿನಿಟ್ಟಿನ ಗಮನ, ಪಾತ್ರಗಳ ವಿಷಯದಲ್ಲಿ ಅಷ್ಟೇ ಕಟ್ಟುನಿಟ್ಟಾದ ನಿಷ್ಪಕ್ಷಪಾತ, ಪ್ರತಿಭಟನೆಯ ಮತ್ತು ಪ್ರತಿ ಪಾತ್ರದ ಮನಸ್ಸಿನ ಸೂಕ್ಷ್ಮ ವಿಶ್ಲೇಷಣೆ ಇವು ಇಲ್ಲಿ ಅಚ್ಚರಿಗೊಳಿಸುವಂತಿವೆ, ಸುಖಕ್ಕಾಗಿ ಬೇರೆಲ್ಲವನ್ನೂ ಬಲಿಕೊಡುವ ಹೆಣ್ಣು ಸುಖಕ್ಕಾಗಿ ತೆರುವ ಬೆಲೆಯನ್ನು ಕಾದಂಬರಿಕಾರ ಉಪದೇಶದ ಗೋಜಿಗೇ ಹೋಗದೇ-ನಿರೂಪಿಸುವ ರೀತಿ ಸಾಮಾನ್ಯ ವ್ಯಭಿಚಾರದ ಕಥೆಯನ್ನು ವಿಶ್ವಸಾಹಿತ್ಯದ ಮಟ್ಟಕ್ಕೆ ಏರಿಸಿದೆ. ಇವನ ಶಿಷ್ಯ ಮೊಪಾಸಾನ ಪೀರ್ ಎತ್ ಜೀನ್ (1888) ತನ್ನ ತಾಯಿಯ ವ್ಯಭಿಚಾರದ ಫಲವಾದ ಸೋದರನ ಒಬ್ಬ ವ್ಯಕ್ತಿಯ ಅಸೂಯೆಯನ್ನು ಗ್ರೀಕ್ ದುರಂತ ನಾಟಕದ ಗಾಂಭೀರ್ಯದಿಂದ ನಿರೂಪಿಸುತ್ತದೆ. ತಾವು ಕಡೆಗಣಿಸಿದ ವಿಧಿಯೊಂದಿಗೂ ಪಾತ್ರಗಳು ಹೋರಾಡಬೇಕಾಗುತ್ತದೆ; ಅದರ ಕೈಯಲ್ಲಿಯೇ ಸೋಲನ್ನಪ್ಪಬೇಕಾತ್ತದೆ. ಸ್ಪಷ್ಟವಾದ ಶೈಲಿ, ನಿಷ್ಕøಷ್ಟವಾದ ಚಿತ್ರಗಳು, ಒಂದು ಕಾಲದ ಚಿತ್ರವಾದರೂ ಸರ್ವಕಾಲಿಕವಾದ ಅನುಭವ ಮತ್ತು ಕ್ರಿಯೆಗೆ ಕೃತಿಕಾರ ನೀಡುವ ಗಾಂಭೀರ್ಯ ಗಹನತೆಗಳು ಕೃತಿಗೆ ಅಪೂರ್ವ ಪರಿಣಾಮವನ್ನು ಒದಗಿಸುತ್ತವೆ. ಪ್ರೂಸ್ತನ ಅ ಲ ರಿಷರ್ಷ್ ದ್ಯೂ ತಾ ಪದ್ರ್ಯುನಲ್ಲಿ (1913-27) ಹಲವು ದೋಷಗಳುಂಟು. ಇದರದು ಬೀಕರ ಕತ್ತಲೆಯ ಜಗತ್ತು. ಆದರೂ ಇಲ್ಲಿ ವಿಶ್ಲೇಷಣೆಯ ಶಕ್ತಿ ಮತ್ತು ಕಾವ್ಯಶಕ್ತಿ ಕೈಕೈಹಿಡಿದು ಜೊತೆಯಾಗಿ ಸಾಗುತ್ತವೆ. ಅನುಭವವನ್ನು ಅರಗಿಸಿಕೊಂಡು ಅದರ ಮಹತ್ತ್ವವನ್ನು ಸೂಚಿಸುವ ಕಾದಂಬರಿಯ ಇಲ್ಲಿನ ರೀತಿ ವಿಶೇಷವಾದುದು. ಹಲವು ಬಗೆಗಳ, ಹಲವು ವ್ಯಕ್ತಿಗಳ ಅನುಭವದಲ್ಲಿ ಸರ್ವಕಾಲಿಕವಾದ ಮಾನವ ಅನುಭವವನ್ನು ಗುರುತಿಸುವ ಯಶಸ್ವೀ ಪ್ರಯತ್ನ ಇಲ್ಲಿದೆ.

ಅಮೆರಿಕ ಸಂಯುಕ್ತ ಸಂಸ್ಥಾನದ ನೆಥಾನಿಯಲ್ ಹಾತಾರ್ನನ ದಿ ಸ್ಕಾರ್ಲೆಟ್ ಲೆಟರ್ (1850) ಮೂವರು ಪಾಪಿಗಳ - ವ್ಯಭಿಚಾರ ಮಾಡಿದ ಹೆಣ್ಣು, ಅವಳ ಗುಪ್ತಪ್ರಣಯಿ, ಅವಳ ಗಂಡ ಇವರ ಕಥೆ. ಪಾಪದ ಅಸ್ವಾರ್ಥ ಬುದ್ಧಿಶಕ್ತಿಗೂ ಸಹಜಪ್ರವೃತ್ತಿಗೂ ಮನುಷ್ಯನ ಬಾಳಿನಲ್ಲಿ ನಡೆಯುವ ಘರ್ಷಣೆಯ ಶಕ್ತಿಯುತ ನಿರೂಪಣೆ ಇಲ್ಲಿದೆ. ಕೃತಿಯ ಬಂಧ ಬಹು ಬಿಗಿಯಾದದ್ದು, ಅಚ್ಚುಕಟ್ಟಾದ್ದು. ಇಲ್ಲಿ ಒಂದೇ ಒಂದು ವಾಕ್ಯಬೃಂದವನ್ನೂ ತಗೆದುಹಾಕುವಂತಿಲ್ಲ. ಪಾತ್ರಗಳ ಬಾಳಿನ ಎಳೆಗಳು ಹೆಣೆದುಕೊಳ್ಳುತ್ತ ಹೋಗುವ ರೀತಿ. ಕಾದಂಬರಿ ಸಾಧಿಸುವ ಕ್ರಿಯೆಯ ಐಕ್ಯ- ಎರಡೂ ಅಸಾಧಾರಣ. ಈ ದೇಶ ಹಲವು ಮಹಾಕಾದಂಬರಿಗಳನ್ನು ಜಗತ್ತಿನ ಸಾಹಿತ್ಯಕ್ಕೆ ನೀಡಿದೆ. ಮೆಲ್‍ವಿಲ್‍ನ ಮೋಬಿ ಡಿಕ್ (1851) ಒಂದು ಹಡಗಿನ ಕ್ಯಾಪ್ಟನ್ ಮತ್ತು ಒಂದು ಬಿಳಿಯ ತಿಮಿಂಗಿಲ - ಇವುಗಳ ನಡುವಿನ ಹೋರಾಟದ ಕಥೆ. ಕೃತಿಯ ಕ್ರಿಯೆಗೆ ಬೇರೆ ಬೇರೆ ವಿಮರ್ಶಕರು ಬೇರೆ ಬೇರೆ ವಿವರಣೆಗಳನ್ನು ನೀಡಿದ್ದಾರೆ. ಕೃತಿಯ ವಸ್ತು ದುಷ್ಟತನ. ನಾಗರಿಕತೆಯಿಂದ ದೂರವಾದ ವಿಚಿತ್ರ, ಭಯಾನಕ ಜಗತ್ತನ್ನು ಕಾದಂಬರಿ ಸೃಷ್ಟಿಸುತ್ತದೆ. ಆದರೆ ವಿವರಗಳಲ್ಲಿ ಮತ್ತು ಘಟನೆಗಳಲ್ಲಿ ವಾಸ್ತವಿಕತೆಯನ್ನು ಸಾಧಿಸುತ್ತದೆ. ಇವೆರಡರ ಮಿಶ್ರಣ ವಿಚಿತ್ರವೂ ಆಳವೂ ಆದ ಅನುಭವವನ್ನು ನಿರ್ಮಿಸುತ್ತದೆ. ಮಾರ್ಕ್‍ಟ್ವೇನನ ಹಕಲ್‍ಬರಿ ಫಿನ್‍ನ ಸಾಹಸಗಳು (1885) ಇಂದಿಗೂ ತನ್ನ ಹಾಸ್ಯದ ಸತ್ವ್ತವನ್ನು ಕಳೆದುಕೊಂಡಿಲ್ಲ. ಜೊತೆಗೆ ಇದು ಮನುಷ್ಯ ತನ್ನ ಸಹಮಾನವರಿಗೆ ಎಷ್ಟು ಕ್ರೂರವಾಗಿರಬಲ್ಲ ಎಂಬುದರ ಗಂಭೀರ ಚಿತ್ರವನ್ನೂ ನೀಡುತ್ತದೆ. ಹಳ್ಳಿಯ ಕುಡುಕನ ಮಗ, 14 ವರ್ಷದ ಹಕಲ್‍ಬರಿ. ವಿದ್ಯೆ ಇಲ್ಲದಿದ್ದರೂ ಸದಾ ಅರಳಿರುವ ಮನಸ್ಸು. ಇವನದು. ಮೂಢನಂಬಿಕೆಗಳ ತವರಾದಂತೆಯೆ ಈತ ಸಹನೆ ಮತ್ತು ಮರುಕಗಳ ತವರೂ ಆಗಿದ್ದಾನೆ. ಶಕ್ತಿಯುತರಾಗಿದ್ದು ಹೊಣೆ ಹೊತ್ತ ಅಮೆರಿಕದ ಜನ ತಮ್ಮನ್ನು ತಾವೇ ಅರ್ಥಮಾಡಿಕೊಳ್ಳುವ ಪ್ರಯತ್ನ ಇಲ್ಲಿ ಧ್ವನಿತವಾಗಿದೆ. ಸಮಾಜದ ನಿರ್ಬಂಧಗಳು ಮತ್ತು ನಾಗರಿಕತೆಗೂ ಹುಡುಗನ ನೈಜ ಪರಿಶುದ್ಧತೆಗೂ ನಡುವಣ ಘರ್ಷಣೆ ಇಲ್ಲಿ ಮಾನವೀಯವಾಗಿ ಚಿತ್ರಿತವಾಗಿದೆ. ಹೆನ್ರಿ ಜೇಮ್ಸ್‍ನ ದಿ ಅಂಬ್ಯಾಸಡರ್ಸ್‍ನಲ್ಲಿ(1903) ಒಂದು ಮನಸ್ಸನ್ನು ನಾಟಕೀಯವಾಗಿ ತೋರಿಸುವ ವಿಶಿಷ್ಟ ಕಲೆ ಇದೆ. ಸ್ಟ್ರೆದರ್ ಎಂಬ ಪಾತ್ರದ ಮನಸ್ಸಿನ ಕಥೆಯನ್ನು ಕಾದಂಬರಿಕಾರನೂ ಹೇಳುವುದಿಲ್ಲ, ಯಾವ ಪಾತ್ರವೂ ಹೇಳುವುದಿಲ್ಲ. ಆದರೂ ಮನಸ್ಸಿನ ಬಾಗಿಲುಗಳನ್ನೂ ಕಿಟಕಿಗಳನ್ನೂ ತೆರೆದಿಟ್ಟಂತೆ ಭಾಸವಾಗುತ್ತದೆ. ಬಹು ಜಟಿಲವಾದ ನಿರೂಪಣಾಕಲೆಯನ್ನು ಇಲ್ಲಿ ಕಾಣಬಹುದು. ವಿಲಿಯಂ ಫಾಕ್‍ನರ್‍ನ ದಿ ಸೌಂಡ್ ಅಂಡ್ ದಿ ಫ್ಯೂರಿ (1929) ಮೇಲ್ಮೈಯಲ್ಲಿ ವಾಸ್ತವಿಕತೆಯನ್ನು ವಿವರಗಳ ನಿಷ್ಕøಷ್ಟತೆಯನ್ನೂ ಉಳಿಸಿಕೊಂಡು ಘಟನೆಗಳನ್ನೂ ಪಾತ್ರಗಳನ್ನೂ ಪಾತ್ರಗಳನ್ನೂ ಸಂಭಾಷಣೆಯನ್ನೂ ಕೃತಿಯಲ್ಲಿ ಅಂತರ್ಗತವಾದ ವಿನ್ಯಾಸ ಒಂದಕ್ಕೆ ಹೊಂದಿಸಿ, ಪ್ರಾರಂಭದಲ್ಲಿ ಓದುಗರಿಗೆ ದಿಗ್ಭ್ರಮೆಯನ್ನು ಉಂಟುಮಾಡಿತು.ಇದರ ಮೊದಲ ಮೂರು ಭಾಗಗಳಲ್ಲಿ ಪ್ರಜ್ಞಾಪ್ರವಾಹದ ರೀತಿಯಲ್ಲಿ ಮೂರು ಪಾತ್ರಗಳ ಸ್ವಗತಭಾಷಣಗಳಿವೆ. ಘಟನೆಗಳನ್ನು ಮೂರು ದೃಷ್ಟಿಗಳಿಂದ ಕಾಣುವುದು ಓದುಗರಿಗೆ ಸಾಧ್ಯವಾಗುತ್ತದೆ. ಓಕ್ಲಹೋಮದಲ್ಲಿ ನಿರಾಶ್ರಿತರಾಗಿ, ಸುಖ ಕಾಣುವ ಹಂಬಲದಿಂದ ಕ್ಯಾಲಿಫೋರ್ನಿಯಕ್ಕೆ ಬರುವ ಕುಟುಂಬದ ದಾರುಣ ಕಥೆಯನ್ನು ಸ್ಟೀನ್ ಬೆಕ್‍ನ ಗ್ರೇಪ್ಸ್ ಆಫ್ ರಾತ್ (1936) ಹೇಳುತ್ತದೆ. ಕಠೋರ ಕೃಷಿವವಸ್ಥೆ ಕುಟುಂಬವನ್ನು ಶೋಷಿಸುವ ಬಗೆಗಳ ಇಲ್ಲಿನ ಚಿತ್ರ ಇಡೀ ದೇಶದಲ್ಲಿಯೇ ಉದ್ವೇಗದ ಅಲೆಗಳನ್ನೆಬ್ಬಿಸಿತು. ಅರ್ನೆಸ್ಟ್ ಹೆಮಿಂಗ್‍ವೆ ರಚಿಸಿರುವ ಫರ್ ಹೂಮ್ ದಿ ಬಿಲ್ ಟೋಲ್ಸ್ (1960) ಸ್ಪೇನಿನ ಅಂತರ್ಯುದ್ಧದಲ್ಲಿ ನಾಡಿನ ಹೊರಗಿನ ಫ್ಯಾಸಿಸ್ಟ್ ಮತ್ತಿತರ ಪಂಥಗಳಿಂದಲೂ ಒಳಗಿನ ಪ್ರತಿಗಾಮಿ ಗುಂಪುಗಳಿಂದಲೂ ಜನತೆಗಾದ ದ್ರೋಹವನ್ನು ಚಿತ್ರಿಸುತ್ತದೆ.

ರಷ್ಯದ ತುಜ್ರ್ಯನೆಫ್‍ನ ಫಾಸರ್ಸ್ ಅಂಡ್ ಸನ್ಸ್ (1862) ಕಾದಂಬರಿಯ ಶೂನ್ಯ (ನಿಹಿಲಿಸ್ಟ್) ದೃಷ್ಟಿಯ ಪ್ರತೀಕ ಬಜರಫ್. ಸಮಕಾಲೀನ ಜೀವನದ ಸಂಪೂರ್ಣ ಸತ್ಯ ಮತ್ತು ವಾಸ್ತವಿಕತೆಗಳನ್ನು ಕಾಲ್ಪನಿಕ ಕಥೆಯಲ್ಲಿ ಮೂರ್ತಗೊಳಿಸುವ ಅದ್ಭುತ ಪ್ರಯತ್ನ ಇದು. ಇಡೀ ಜಗತ್ತಿನ ಕಾದಂಬರಿಗಳಲ್ಲಿ ಅತ್ಯುನ್ನತ ಶಿಖರಗಳಲ್ಲಿ ಒಂದು ಎನಿಸಿರುವುದು ಟಾಲ್ಸ್ ಟಾಯ್ ಬರೆದ ವಾರ್ ಅಂಡ್ ಪೀಸ್ (1862-69). ಯೂರೋಪಿನ ಚರಿತ್ರೆಯಲ್ಲಿ ಬಹುಮುಖ್ಯವಾದ ಒಂದು ದಶಕದ (1805-14) ಅವಧಿಯಲ್ಲಿ ಇಲ್ಲಿನ ಕ್ರಿಯೆ ನಡೆಯುತ್ತದೆ. ಸಾರ್ವಭೌಮರಿಂದ ಹಿಡಿದು ಸೈನಿಕರು ಮತ್ತು ರೈತರವರೆಗೆ ಇಲ್ಲಿ ಹಲವು ವರ್ಗಗಳ ವೃತ್ತಿಗಳ ಅಂತಸ್ತುಗಳ ಮತ್ತು ಸ್ವಭಾವಗಳ ಪಾತ್ರಗಳ ವಿಶಿಷ್ಟ ಜಗತ್ತು ರೂಪುಗೊಂಡಿದೆ. ವಾಸ್ತವಿಕ ಜಗತ್ತಿನ ಜೀವನದ ವೈವಿಧ್ಯ ಶ್ರೀಮಂತಿಕೆ ಮತ್ತು ಸಹಜತೆಗಳನ್ನು ಹೀಗೆ ಪುನರ್ ಸೃಷ್ಟಿಸಿದ ಕಾದಂಬರಿ ಮತ್ತೊಂದಿಲ್ಲ. ಭವ್ಯ ಸಮರ ದೃಶ್ಯಗಳಿದ್ದರೂ ಸಮರದ ವಸ್ತುವಿಗಿಂತ ಐದು ಕುಟುಂಬಗಳ ಜೀವನ ಕಥೆ ಇಲ್ಲಿ ಮುಖ್ಯವಾಗುತ್ತದೆ. ತನಗಾಗಿ ಬದುಕಬೇಕೇ ಇತರರಿಗಾಗಿ ಬದುಕಬೇಕೇ-ಈ ಎರಡು ದೃಷ್ಠಿಗಳ ಘರ್ಷಣೆ ಕಾದಂಬರಿಯಲ್ಲಿ ಅಂತರ್ಗತವಾಗಿದೆ. ದಾಸ್ತಯೆವ್‍ಸ್ಕಿಯ ಬ್ರದರ್ಸ್ ಕರಮeóÁವ್ (1879-80) ಮೂವರು ಸೋದರರ ಕಥೆ. ರಷ್ಯದ ಜೀವನವನ್ನು ಕುರಿತು ತನ್ನ ಭಾವನೆಗಳನ್ನೆಲ್ಲ ಈ ಅಚ್ಚಿನಲ್ಲಿ ಕಾದಂಬರಿಕಾರ ಎರಕ ಹೊಯ್ದಿದ್ದಾನೆ. ಗೊಂದಲಗೊಂಡ ಪ್ರಬಲ ರಾಗಗಳು ಇಲ್ಲಿ ಅಗ್ನಿಪರ್ವತದ ಶಿಲಾರಸದಂತೆ ಸುರಿಯುತ್ತವೆ. ಓದುಗನ ಮನಸ್ಸನ್ನು ಆವರಿಸಿ ಸ್ವಾಧೀನ ಮಾಡಿಕೊಂಡುಬಿಡುವ ಪರಿಣಾಮಕತೆ ಈ ಕೃತಿಯದು. ಸೋವಿಯತ್ ಸಾಹಿತ್ಯದಲ್ಲಿ ಮೂಡಿರುವ ಒಂದೇ ಒಂದು ಭವ್ಯ ಪ್ರೇಮಕಥೆ ಎಂದರೆ ಮೈಕೇಲ್ ಷೊಲೊಕಾವ್‍ನ ಅಂಡ್ ಕ್ವಯಟ್‍ಫ್ಲೋಸ್ ದಿ ಡಾನ್ (1928-40). ಡಾನ್ ಪ್ರದೇಶದ ಕಾಸ್ಯಾಕರ ಜೀವನದಲ್ಲಿದುರಂತ ದಶಕವೊಂದನ್ನು (1912-22) ಚಿತ್ರಿಸುವ ಕೃತಿ ಇದು. ಮರೆಯಲಾಗದ ಪಾತ್ರ ಸೃಷ್ಟಿಯನ್ನು ಇಲ್ಲಿ ಕಾಣಬಹುದು. ಪ್ಯಾಸ್ಟರ್‍ನಾಕ್‍ನ ಡಾಕ್ಟರ್ ಜಿವಾಗೊ (ಇಂಗ್ಲಿಷ್ ಭಾಷಾಂತರ: 1958) ಒಬ್ಬ ಮನುಷ್ಯನ ಜೀವನ, ಆತ ಉಳಿಸಿಹೋದ ಸ್ಮರಣೆ-ಇವನ್ನು ನಲವತ್ತು ವರ್ಷಗಳ ಅವಧಿಯ ಕ್ರಿಯೆಯಲ್ಲಿ ಚಿತ್ರಿಸುತ್ತದೆ. ಆಧುನಿಕ ರಷ್ಯದ 40 ವರ್ಷಗಳ ಚರಿತ್ರೆಯ ಹೋರಾಟ, ಭರವಸೆ, ಕಷ್ಟ, ನಿರಾಸೆ-ಎಲ್ಲವನ್ನು ಕಾದಂಬರಿ ಅಡಕಮಾಡಿಕೊಂಡಿದೆ. ಭೀಕರವೂ ವಿಷಣ್ಣವೂ ಆದ ಘಟನೆಗಳ ಮಧ್ಯೆ ಜೀವನದ ಧೀರ ಸ್ವೀಕಾರವನ್ನು ಇಲ್ಲಿ ಕಾಣಬಹುದು. ಮಾನವನ ಸ್ವಾತಂತ್ರಪ್ರೇಮದ ನೆಲದಲ್ಲಿ ಬೇರುಬಿಟ್ಟ ನೋವು, ಪ್ರೀತಿಗಳನ್ನು ರೂಪಿಸಿದ ಕೃತಿ ಇದು. ಜರ್ಮನಿಯ ಥಾಮಸ್ ಮ್ಯಾನ್‍ನದಿ ಮ್ಯಾಜಿಕ್ ಮೌಂಟನ್ (1925) ಕಾದಂಬರಿಯ ನಾಯಕ ಕಾಲ, ದೇಶಗಳ ಅರಿವೆ ಮಾಸಿಹೋಗುವ; ಸಮಕಾಲೀನ ಜಗತ್ತಿನ ಘರ್ಷಣೆ, ಚಲನೆ, ಗೊಂದಲಗಳಿಂದ ದೂರವಾದ ಆವರಣದಲ್ಲಿ ಅಂದರೆ ಕ್ಷಯರೋಗದ ಆಸ್ಪತ್ರೆಯಲ್ಲಿ ಇರುವಂಥವ. ಈ ಕಾದಂಬರಿಯಲ್ಲಿ ಹಲವು ಅರ್ಥಗಳ ಪದರಗಳು ಒಂದಕ್ಕೊಂದು ಅಂಟಿಕೊಂಡಿವೆ. ಏಕಾಂತಜೀವನ ಮತ್ತು ಸಾವುಗಳ ಆಕರ್ಷಣೆಗಳನ್ನು ಗೆದ್ದು ತನ್ನ ಜನರ ಸೇವೆಗೆ ಮುಡಿಪಾಗಲು ನಿಶ್ಚಯಿಸುವ ನಾಯಕ ತನ್ನ ವ್ಯಕ್ತಿತ್ವದಿಂದ ರಾಷ್ಟ್ರೀಯತೆಯನ್ನು ಮೀರಿದ ಆಧುನಿಕ ಮಾನವನ ಪ್ರತಿನಿಧಿಯಾಗುತ್ತಾನೆ. ಇದೇ ದೇಶದ ಕಾಫ್ಕನದಿ ಕ್ಯಾಸಲ್‍ಗೆ (1926) ವಿಮರ್ಶಕರು ವಿವಿಧ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಹಳ್ಳಿಯಲ್ಲಿ ಕೆಲಸಮಾಡಲು ಬರುವ ತರುಣನೊಬ್ಬ ಪ್ರಾಸಾದದೊಳಗಿನ ಅದೃಶ್ಯ ಅಧಿಕಾರಿಗಳಿಂದ ನಿರ್ದೇಶನ ಪಡೆಯುತ್ತಾನೆ ; ತನ್ನ ಅಧಿಕಾರವನ್ನು ಸ್ಥಾಪಿಸಲು ಹಲವು ಘರ್ಷಣೆಗಳಲ್ಲಿ ಸಿಕ್ಕಿಕೊಳ್ಳುತ್ತಾನೆ ; ಜಗತ್ತಿನಲ್ಲಿ ಕಾಲದ ಚಲನೆ ನಿಂತುಹೋದಂತೆ ಭಾಸವಾಗುತ್ತದೆ ; ದೃಶ್ಯಗಳೆಲ್ಲ ಕತ್ತಲೆಯಲ್ಲಿ ಸಾಗುತ್ತವೆ. ಜಗತ್ತಿನಲ್ಲಿ ಮನುಷ್ಯನ ಏಕಾಕಿತನದ ಅನುಭವಕ್ಕೆ ಮರೆಯಲಾಗದ ಅಭಿವ್ಯಕ್ತಿ ಇಲ್ಲಿ ದೊರೆಯುತ್ತದೆ.

ಜಗತ್ತಿನ ಪ್ರಸಿದ್ಧ ಕಾದಂಬರಿಗಳಲ್ಲಿ ಮೇಲಿನವು ಕೆಲವು. ಒಬ್ಬನೇ ಓದುಗನಿಗೆ ಟಾಲ್ಸ್‍ಲಾಯ್‍ಯ ವಾರ್ ಅಂಡ್ ಪೀಸ್, ಆನ ಕರಿನೀನ, ದಾಸ್ತಯೆವ್‍ಸ್ಕಿಯ ಕ್ರೈಮ್ ಅಂಡ್ ಪನಿಷ್‍ಮೆಂಟ್, ಕರಮಜೋವ್ ಸಹೋದರರು-ಇಂಥ ಕೃತಿಗಳಲ್ಲಿ ಒಂದನ್ನು ಆರಿಸಿ ಇನ್ನೊಂದನ್ನು ಬಿಡುವುದು ಕಷ್ಟವಾದೀತು.

ಪ್ರಸ್ತುತ ಪರಿಸ್ಥಿತಿ[ಬದಲಾಯಿಸಿ]

ಕಾದಂಬರಿಯ ಜಗತ್ತು ದಿನದಿನವೂ ಗೊಂದಲಗೊಳ್ಳುತ್ತಿದೆ. ಹಾಗೆಯೇ ಹೊಸ ಧೀರ ಪ್ರಯೋಗಗಳಿಂದಲೂ ಬೆರಗುಪಡಿಸುವ ಸಾಧನೆಗಳಿಂದಲೂ ಶ್ರೀಮಂತಗೊಳ್ಳುತ್ತಿದೆ ; ವಿಸ್ತಾರವಾದ ಹರಹನ್ನು ಒದಗಿಸಿಕೊಡುವ ಈ ಮಾಧ್ಯಮ ಬಾಳಿಗೆ ಜಟಿಲವೂ ಸೂಕ್ಷ್ಮವೂ ಆದ ಪ್ರತಿಕ್ರಿಯೆಯ ಆಭಿವ್ಯಕ್ತಿಗೆ ಬಹು ಸಮರ್ಥವಾಗಿ ಹೊಂದಿಕೊಂಡಿದೆ ; ಜೀವನ ಜಟಿಲವಾದಂತೆ ಹೊಸ ಪ್ರಯೋಗಗಳಿಗೂ ಹೊಸ ಸಾಧನೆಗಳಿಗೂ ತೆರೆದು ನಿಂತಿದೆ.

ಪ್ರಾಯಶಃ ಕಾದಂಬರಿ ಕ್ಷೇತ್ರದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ, ಅದರ ಹಿಂದಿನ ಎರಡು ಶತಮಾನಗಳಲ್ಲಿ ನಡೆದುದಕ್ಕಿಂತ ಹೆಚ್ಚು ಪ್ರಯೋಗಗಳಾಗಿವೆ. ಬೇರೆ ಬೇರೆ ದೇಶಗಳ ಮತ್ತು ಭಾಷೆಗಳ ಕಾದಂಬರಿಗಳು ಅನುವಾದವಾಗುತ್ತಿದ್ದು. ಈ ಸಾಹಿತ್ಯ ಪ್ರಕಾರದ ಅಧ್ಯಯನವು ಹೊಸ ರೂಪಗಳನ್ನು ತಾಳುತ್ತಿದೆ. ಸೈಯ್ನ್‍ನಿನ ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಸ್‍ನ `ಒಂದು ನೂರು ವರ್ಷಗಳ ಏಕಾಂತ' (ಒನ್ ಹನ್‍ಡ್ರೆರ್ ಇಯರ್ಸ್ ಆಫ್ ಸಾಲಿಟ್ಯೂಡ್) ಆಫ್ರಿಕಾಖಂಡದ ನೈಜೀರಿಯದ ಚಿನುವ ಅಚೇಬಿಯ' ಎಲ್ಲ ಬೇರೆ ಬೇರೆಯಾಗಿ ಬೀಳುತ್ತವೆ' (ಥಿಂಗ್ಸ್ ಫಾಲ್ ಅಪಾರ್ಟ್') ಇಂಥ ಕಾದಂಬರಿಗಳು ಈಗ ಕನ್ನಡಿಗರಿಗೂ ಪರಿಚಿತ. ಕನ್ನಡದಲ್ಲಿಯೇ ತೇಜಸ್ವಿಯವರ 'ಕರ್ವಾಲೋ'ಯಿಂದ ಕಾ.ತ. ಚಿಕ್ಕಣ್ಣನವರ 'ದಂಡೆ'ಯವರೆಗೆ ಎಷ್ಟು ಪ್ರಯೋಗಗಳಾಗಿವೆ!

ಜಗತ್ತಿನ ಕಾದಂಬರೀ ಸಾಹಿತ್ಯ, ಅದ್ಭುತವಾಗಿ ಬೆಳೆಯುತ್ತಿದೆ. ಹಾಸನದ ರಾಜಾರಾಯರ `ದ ಸರ್ಪೆಂಟ್ ಅಂಡ್ ದಿ ರೋಪ್'ನಿಂದ ಆರುಂಧತಿ ರಾಯ್ ಅವರ `ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್'ವರೆಗೆ ಭಾರತೀಯರು ಇಂಗ್ಲಿಷಿನಲ್ಲಿ ಬರೆದ ಹಲವು ಕಾದಂಬರಿಗಳು ಪಾಶ್ಚಾತ್ಯ ದೇಶಗಳಲ್ಲಿ ಗಮನ ಸೆಳೆದಿವೆ. ಕ್ಲಾದ್ ಸಿಮೋನ್, ಐಸಾಕ್ ಭಾಷೆ ವಿಸ್ ಸಿಂಗರ್, ಗುಂಥರ್ ಗ್ರಾಸ್, ಮೊದಲಾದವರ ಕಾದಂಬರಿಗಳು ಅನುವಾದ ಗೊಂಡು ನಮಗೆ ಕಾದಂಬರಿಯ ಸ್ವರೂಪದ ಹೊಸ ಆಯಾಮಗಳನ್ನು ಪರಿಚಯ ಮಾಡಿಕೊಟ್ಟಿವೆ. ಹಿಂದೆ ಕಾದಂಬರಿಯ ಕಥಾವಸ್ತು, ಪಾತ್ರ ವರ್ಣನೆ ಮೊದಲಾದ ಅಂಶಗಳನ್ನು ಆಧರಿಸಿ ಕಾದಂಬರಿಯ ಅಧ್ಯಯನವನ್ನು ಮಾಡಲಾಗುತ್ತಿತ್ತು. ಈ ವಿಧಾನವು ಬೆಳೆಯುತ್ತಿರುವ ಕಾದಂಬರಿಯ ಅಧ್ಯಯನಕ್ಕೆ ಸಾಲದಾಗಿ, `ಪಾಯಿಂಟ್ ಆಫ್ ವ್ಯೂ', `ಪ್ಯಾರಡಾಕ್ಸ್', `ಸಿಂಬಲ್', `ಟೆನ್‍ಷನ್', `ಟೆಕ್‍ನೀಕ್ ಆ್ಯಸ್ ಡಿಸ್ಕವರಿ' ಮೊದಲಾದ ಪರಿಕಲ್ಪನೆಗಳು ಮಾಡಿಬಂದಿವೆ ಹೀಗೆ ಕಾದಂಬರಿಯ ತಾನು ವಿಸ್ತಾರಗೊಂಡು ವಿಮರ್ಶೆಯನ್ನೂ ಬೆಳೆಸುತ್ತಿದೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಕಾದಂಬರಿ&oldid=1122211" ಇಂದ ಪಡೆಯಲ್ಪಟ್ಟಿದೆ