ಕನ್ನಡದಲ್ಲಿ ಕಾದಂಬರಿ ಸಾಹಿತ್ಯ
ಕನ್ನಡದಲ್ಲಿ ಕಾದಂಬರಿಸಾಹಿತ್ಯ: - ಇಂದಿನ ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿ ಅತ್ಯಂತ ಪ್ರಭಾವಶಾಲಿಯೂ ಜನಪ್ರಿಯವ ಆಗಿದೆ. 19ನೆಯ ಶತಮಾನದಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರೇರಣೆಯಿಂದ ಹೊಸಗನ್ನಡದಲ್ಲಿ ಸಣ್ಣಕಥೆ, ಪ್ರಬಂಧ, ಭಾವಗೀತೆ, ಜೀವನಚರಿತ್ರೆ ಮೊದಲಾದ ಹೊಸ ಪ್ರಕಾರಗಳು ಹುಟ್ಟಿದಂತೆ ನಾವೆಲ್ ಎಂಬ ಪ್ರಕಾರ ಕಾದಂಬರಿ ಎಂಬ ಹೆಸರಿನಿಂದ ಪ್ರಚುರವಾಯಿತು.
ಕಾದಂಬರಿ ಎಂಬ ಹೆಸರು ಬಂದದ್ದು ಹೇಗೆ?
[ಬದಲಾಯಿಸಿ]ಕಾದಂಬರಿ ಎಂಬ ಹೆಸರು ಹೇಗೆ ಬಂದಿತೆಂಬ ವಿಷಯ ಕುತೂಹಲ ಹುಟ್ಟಿಸುವಂಥದ್ದು. ಸಂಸ್ಕೃತದಲ್ಲಿ ಬಾಣಭಟ್ಟ ರಚಿಸಿದ ಗದ್ಯಕಾವ್ಯ ಕಾದಂಬರಿ ಹೆಸರಿನಿಂದ ಪ್ರಸಿದ್ಧವಾಗಿದೆ. ಇದೇ ಉತ್ತರ ಕರ್ನಾಟಕದಲ್ಲಿ ತುರಮರಿಯವರಿಂದ ಕಾದಂಬರೀ ಕಾವ್ಯದ ಹೊಸಗನ್ನಡ ಗದ್ಯರೂಪ ಎಂಬ ಹೆಸರಿನಿಂದ ಪ್ರಕಟವಾಗಿ (1875) ಜನರ ಮನಸ್ಸನ್ನು ಸೂರೆಗೊಂಡಿತು. ಜೆ.ವೈ.ಕೃಷ್ಣಾಚಾರ್ಯರ ಕಾದಂಬರಿ ಕನ್ನಡ ಗದ್ಯಕಥೆಯ ಸವಿ ದಕ್ಷಿಣ ಕರ್ನಾಟಕದ ಮೈಸೂರು ಸಂಸ್ಥಾನದ ಜನರಿಗೆ ಉಂಟಾಗಿತ್ತು. ಕಾದಂಬರೀ ಕಾವ್ಯದ ಸೊಗಸು ನಾಗವರ್ಮನ ಕೃತಿಯ ಮೂಲಕ ಕನ್ನಡಿಗರಿಗೆ ಹಿಂದಿನಿಂದಲೂ ಪರಿಚಯವಾಗಿತ್ತು. ಕಥೆ, ಶೈಲಿ, ನಿರೂಪಣೆ, ವರ್ಣನೆಯ ಚಮತ್ಕೃತಿ, ರಸ ಮೊದಲಾದ ದೃಷ್ಟಿಗಳಿಂದ ಕಾದಂಬರೀ ಕಾವ್ಯ ಜನಮನವನ್ನು ಸೂರೆಗೊಂಡಿತು. ಆದುದರಿಂದ ಸಂಸ್ಕೃತದ ಕಾದಂಬರೀ ಕಾವ್ಯದಂತೆ ರಮ್ಯವಾದ ಎಲ್ಲ ಕೃತಿಗಳನ್ನೂ ಕಾದಂಬರಿ ಎಂಬ ಹೆಸರಿನಿಂದಲೇ ಕರೆಯುವ ವಾಡಿಕೆ ಏರ್ಪಟ್ಟಿತು. ಹೀಗಾಗಿ ನಾವೆಲ್ ಜಾತಿಗೆ ಕಾದಂಬರಿ ಎಂದು ಕನ್ನಡಿಗರು ಕೊಟ್ಟ ಹೆಸರು ಸಾರ್ಥಕವಾಗಿ ಸ್ಥಿರವಾಗಿ ಉಳಿಯಿತು.
ಇತಿಹಾಸ
[ಬದಲಾಯಿಸಿ]ಹಿಂದಿನ ಕಾಲದಲ್ಲಿ
[ಬದಲಾಯಿಸಿ]ಕನ್ನಡ ಸಾಹಿತ್ಯದಲ್ಲಿ ನಾಗವರ್ಮನ ಕಾದಂಬರಿ, ದುರ್ಗಸಿಂಹನ ಪಂಚತಂತ್ರ, ನೇಮಿಚಂದ್ರನ ಲೀಲಾವತಿ ಪ್ರಬಂಧ, ಚೌಂಡರಸನ ಅಬಿನವದಶಕುಮಾರಚರಿತ್ರೆ, ದೇವಕವಿಯ ಕುಸುಮಾವಳಿ ಮೊದಲಾದುವು ಕುತೂಹಲಕರವಾದ ಕಥೆಗಳನ್ನುಳ್ಳ ಪದ್ಯಕಾವ್ಯಗಳು. ಗದ್ಯಕಥೆಗಳೂ ಕನ್ನಡ ಸಾಹಿತ್ಯದಲ್ಲಿ ಇಲ್ಲದಿಲ್ಲ. ಪ್ರಾಚೀನ ಗದ್ಯಗ್ರಂಥವಾದ ವಡ್ಡರಾದನೆ ಹಲವು ಉತ್ತಮ ಕಥೆಗಳ ಸಂಗ್ರಹ. ಮುದ್ದಣನ ರಾಮಾಶ್ವಮೇಧ ಈಚಿನ ಗದ್ಯ ಕಥೆ. ಆದರೆ ಇವು ಯಾವುವೂ ಕಾದಂಬರಿ ಎಂಬ ಸಾಹಿತ್ಯ ಪ್ರಕಾರಕ್ಕೆ ಸೇರುವುದಿಲ್ಲ. ಏಕೆಂದರೆ ಇವುಗಳಲ್ಲಿ ಮೊದಲನೆಯದು ಕೇವಲ ಕಥೆಗಳ ಗುಂಪು. ಎರಡನೆಯದು ಕಾವ್ಯ.
ಕನ್ನಡ ಕಾದಂಬರಿಗಳ ಆರಂಭ
[ಬದಲಾಯಿಸಿ]ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಿತನಾಗಿದ್ದ ಕೆಂಪುನಾರಾಯಣನ (ಸು.1823) ಮುದ್ರಾ ಮಂಜೂಷವೆಂಬ ಗದ್ಯಕೃತಿಯಲ್ಲಿ ಕನ್ನಡ ಕಾದಂಬರಿಯ ರೂಪರೇಷೆಗಳನ್ನು ಗುರುತಿಸಬಹುದಾಗಿದೆ. ಮುದ್ದಣ ‘ಗೋದಾವರಿ’ ಎಂಬ ಒಂದು ಕಾದಂಬರಿಯನ್ನು ಬರೆದು ಮುಗಿಸುವಷ್ಟರಲ್ಲಿಯೇ ತೀರಿಕೊಂಡನೆಂದು ಹೇಳುತ್ತಾರೆ. ಕನ್ನಡಿಗರಿಗೆ ಕಾದಂಬರಿಗಳ ಮೊದಲ ಪರಿಚಯ ಕನ್ನಡದ ಮೂಲಕ ಆದುದು ಬಿ.ವೆಂಕಟಾಚಾರ್ಯರು ಮಾಡಿದ ಬಂಗಾಳಿ ಕಾದಂಬರಿಗಳ ಭಾಷಾಂತರದಿಂದ. ಬಂಕಿಮಚಂದ್ರರ ಕಾದಂಬರಿ ದುರ್ಗೇಶನಂದಿನಿಯನ್ನು ಬಂಗಾಳಿ ಭಾಷೆಯಿಂದ ಕನ್ನಡಕ್ಕೆ 1865ರಲ್ಲಿ ಭಾಷಾಂತರಿಸ ಲಾಯಿತು. ಆಚಾರ್ಯರು ಮೊದಲು ಭಾಷಾಂತರ ಮಾಡಿದ ಕೃತಿ ಭ್ರಾಂತಿವಿಲಾಸ. ಇದೇ ಕನ್ನಡದಲ್ಲಿ ಕಾದಂಬರಿಗಳ ಆರಂಭಕ್ಕೆ ನಾಂದಿ ಎಂದು ಹೇಳಬಹುದು.
ಅಂದಿನಿಂದ ಇಂದಿನವರೆಗಿನ ಕಾದಂಬರಿಗಳ ಬೆಳೆವಣಿಗೆ ಮತ್ತು ವಿಲಾಸಗಳನ್ನು ಕಾಲಮಾನ ರೀತಿಯಿಂದ ಮೂರು ಭಾಗಗಳಾಗಿ ವಿಂಗಡಿಸಬಹುದು.
- ಮೊದಲನೆಯದು ಆರಂಭ ಕಾಲ. 19ನೆಯ ಶತಮಾನದ ಉತ್ತರಾರ್ಧದಿಂದ 20ನೆಯ ಶತಮಾನದ ಕಾಲು ಶತಕದವರೆಗೆ.
- ಎರಡನೆಯದು ನಿರ್ಮಾಣಶೀಲ ಯುಗ 1925 ಅಥವಾ 30ರಿಂದ ಸ್ವಾತಂತ್ರ್ಯೋದಯದವರೆಗೆ.
- ಮೂರನೆಯದು ಸ್ವಾತಂತ್ರ್ಯೋದಯದ ಯುಗ: ಸ್ವಾತಂತ್ರ್ಯೋದಯದ ಕಾಲದಿಂದ ಇಲ್ಲಿಯವರೆಗೆ.
ಆರಂಭ ಕಾಲ
[ಬದಲಾಯಿಸಿ]ಮೈಲಾಪುರದಲ್ಲಿ ಹೈಕೋರ್ಟಿನ ವಕೀಲರಾಗಿದ್ದ ರೆಂಟ್ಲ ವೆಂಕಟಸುಬ್ಬರಾವ್ ಅವರಿಂದ ರಚಿತವಾಗಿ ಮದರಾಸಿನಲ್ಲಿ ಪ್ರಕಟವಾದ ಕೇಸರಿವಿಲಾಸ (1895) ಕಾದಂಬರಿಯ ವಿಶಿಷ್ಟ ಲಕ್ಷಣಗಳನ್ನುಳ್ಳ ಕನ್ನಡದ ಪ್ರಥಮ ಸ್ವತಂತ್ರ ಕಾದಂಬರಿ ಎಂಬುದು ಗೋವಿಂದ ಪೈ ಅವರ ಅಬಿಪ್ರಾಯ. ದಕ್ಷಿಣ ಕನ್ನಡ ಜಿಲ್ಲೆಯ ಗುಲ್ವಾಡಿ ವೆಂಕಟರಾಯರು ಬರೆದ ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ (1899) ಎರಡನೆಯ ಸ್ವತಂತ್ರ ಸಾಮಾಜಿಕ ಕಾದಂಬರಿ. 250 ಪುಟಗಳ ಈ ಕಾದಂಬರಿಯಲ್ಲಿ ಅಂದಿನ ಸಾರಸ್ವತ ಸಮಾಜದ ವಾಸ್ತವಿಕ ಚಿತ್ರವಿದೆ. ಭಾಗೀರಥಿ, ಸೀಮಂತಿನಿ ಇವು ಇವರ ಇನ್ನೆರಡು ಕಾದಂಬರಿಗಳು.
ಗಳಗನಾಥರ ಹೆಸರು ಕಾದಂಬರಿ ಸಾಹಿತ್ಯದ ಬೆಳೆವಣಿಗೆಯಲ್ಲಿ ಗುರುತಿಸುವಂಥದು. ಪದ್ಮನಯನೆ ಇವರ ಪ್ರಥಮ ಕಾಲ್ಪನಿಕ ಕಾದಂಬರಿ (1898). ಮಂಗಳೂರಿನ ಬೋಳಾರ ಬಾಬುರಾಯರ ಸ್ವತಂತ್ರ ಕಾದಂಬರಿ ವಾಗ್ದೇವಿ (1905). ಇದು ಸುಮಾರು 308 ಪುಟಗಳಿದ್ದು ಈ ಕಾದಂಬರಿಯ ವಸ್ತುವಿಗೆ ಆಗಿನ ಕಾಲದಲ್ಲಿ ನಡೆದ ಕೆಲವೊಂದು ಘಟನೆಗಳೇ ಆಧಾರ ಎಂಬುದಾಗಿ ತಿಳಿದವರು ಹೇಳುತ್ತಾರೆ. ಅಂದಿನ ಸಾಮಾಜಿಕ ಜೀವನದಲ್ಲಿ ಮಠಗಳ ಪಾತ್ರ, ನ್ಯಾಯ ವಿತರಣೆಯ ರೀತಿನೀತಿ, ಅದಿಕಾರಿಗಳು ಸಾಮಾಜಿಕ ಜೀವನದಲ್ಲಿ ನಡೆಸುತ್ತಿದ್ದ ಕೃತ್ರಿಮ ಕೈವಾಡ ಇವೇ ಮೊದಲಾದ ವಾಸ್ತವ ಚಿತ್ರಗಳು ಈ ಕಾದಂಬರಿಯಲ್ಲಿ ಮೂಡಿಬಂದಿವೆ. ವಾಸ್ತವಿಕ ಘಟನೆಗಳ ಆಧಾರದ ಮೇಲೆ ಅಂದಿನ ಸಮಾಜದ ಕೆಲವೊಂದು ಲೋಪದೋಷಗಳನ್ನು ಎತ್ತಿ ತೋರಿಸುವ ಇಂಥ ಒಂದು ಕಾದಂಬರಿಯನ್ನು ರಚಿಸಿದುದು ಅಂದಿನ ಕಾಲಕ್ಕೆ ಒಂದು ದಿಟ್ಟತನವೆಂದೇ ಹೇಳಬಹುದು.
1906ರಲ್ಲಿ ಅಣ್ಣಾಜಿರಾವ್ ಗುಲ್ವಾಡಿ ಎಂಬುವರು ರಚಿಸಿದ ‘ರೋಹಿಣಿ ಇಲ್ಲವೇ ಸಾರಸ್ವತ ಮಂಡಳ ‘232 ಪುಟಗಳನ್ನೊಳಗೊಂಡ ಒಂದು ಸಾಮಾಜಿಕ ಕಾದಂಬರಿ.
ಉತ್ತರ ಕರ್ನಾಟಕದ ಕೆರೂರ ವಾಸುದೇವಚಾರ್ಯರು ರಚಿಸಿದ (1908) ಇಂದಿರೆ ಎಂಬ ಕಾದಂಬರಿ ಸ್ವತಂತ್ರ ಕಾದಂಬರಿಗಳ ಮಾಲೆಯಲ್ಲಿ ಒಂದು ಗಮನಾರ್ಹ ಕೃತಿ. ಉತ್ತರ ಕರ್ನಾಟಕ ಭಾಷೆಯನ್ನು ಕಾದಂಬರಿಯ ಗದ್ಯಕ್ಕೆ ಅಳವಡಿಕೊಳ್ಳಲು ಕಾದಂಬರಿಕಾರ ಮಾಡಿರುವ ಪ್ರಯತ್ನ ಇಲ್ಲಿ ಸ್ಮರಿಸುವಂಥದ್ದು. ಅಂದು ವಿಶೇಷವಾಗಿ ಚರ್ಚೆಗೆ ಒಳಗಾಗಿದ್ದ ವಿಧವಾವಿವಾಹ, ಸ್ತ್ರೀ ಶಿಕ್ಷಣ ಮತ್ತು ಸ್ತ್ರೀ ಸ್ವಾತಂತ್ರ್ಯದಂಥ ವಿಷಯಗಳು ಈ ಕಾದಂಬರಿಯಲ್ಲಿ ಬರುತ್ತವೆ. ಇಂದಿರೆಯನ್ನು ಆದರ್ಶ ಮಹಿಳೆಯನ್ನಾಗಿ ಚಿತ್ರಿಸಿ ಉತ್ತಮ ಸ್ತ್ರೀ ಶಿಕ್ಷಣದ ಬಗೆಗೆ ಒಳ್ಳೆಯ ನಿದರ್ಶನವನ್ನು ಒದಗಿಸಲಾಗಿದೆ. ಇಲ್ಲಿ ಗಮನಾರ್ಹವಾದ ಮತ್ತೊಂದು ಸಂಗತಿ ಕಾದಂಬರಿಯ ಸೌಂದರ್ಯವನ್ನು ಹೆಚ್ಚಿಸಲು ಉಪಯೋಗಿಸಿರುವ ಮೋಹಕ ವರ್ಣನೆಗಳು. ಔರಂಗಜೇಬ ಎಂಬುದು ಇತಿಹಾಸವನ್ನು ವಸ್ತುವಾಗುಳ್ಳ ಇವರ ಇನ್ನೊಂದು ಕಾದಂಬರಿ.
ಕಾದಂಬರಿಗಳ ಆರಂಭಕಾಲದ ಮೊದಲಿನಲ್ಲಿ ಕೃತಿಗಳನ್ನು ರಚಿಸಿದ ಕೆಲವರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ವೃದ್ಧ ಪಿತಾಮಹ ವೆಂಕಟಕೃಷ್ಣಯ್ಯನವರು ರಚಿಸಿದ ಚೋರಗ್ರಹಣತಂತ್ರ ಕನ್ನಡದ ಪ್ರಥಮ ಪತ್ತೇದಾರಿ ಕಾದಂಬರಿ. ಎಂ.ಎಲ್.ಶ್ರೀಕಂಠೇಶಗೌಡ ಅವರ ಕನ್ಯಾವಿತಂತು 1895ರಲ್ಲಿ ಪ್ರಕಟವಾಯಿತು. ತೆಲುಗಿನಲ್ಲಿ ವಿರೇಶಲಿಂಗ ಪಂತುಲು ಅವರು ರಚಿಸಿದ ನೂತನ ರೀತಿಯ ಕಲ್ಪನಾ ಕಥೆಗಳಾದ ರಾಜಶೇಖರ ಚರಿತ್ರೆ, ಸತ್ಯವತೀ ಚರಿತ್ರೆ ಮತ್ತು ಸತ್ಯರಾಜಾ, ಪುರ್ವದೇಶದ ಯಾತ್ರೆಗಳು ಎಂಬ ಮೂರು ಕೃತಿಗಳನ್ನು ಬೆನಗಲ್ ರಾಮರಾಯರು 1899ರ ಹೊತ್ತಿಗೆ ಕನ್ನಡಕ್ಕೆ ಭಾಷಾಂತರಿಸಿದ್ದರು. ಗೋಡೆ ಜೀವಣರಾಯರು ಜಾನ್ಸನ್ನನ ಕಾದಂಬರಿ ರಾಸೆಲಾಸನ್ನು ಕನ್ನಡಿಸಿದರು.
ವೆಂಕಟಾಚಾರ್ಯ, ಗಳಗನಾಥರ ಕೊಡುಗೆ
[ಬದಲಾಯಿಸಿ]ಅಂದಿಗೆ ಕಾದಂಬರಿಗಳನ್ನು ಓದಬೇಕೆಂದು ಹಾತೊರೆಯುವ ಪ್ರವೃತ್ತಿಯುಂಟುಮಾಡಿ ಕನ್ನಡ ಜನತೆಯ ಹಂಬಲವನ್ನು ತುಂಬಿಕೊಟ್ಟವರು ಬಿ.ವೆಂಕಟಾಚಾರ್ಯರು. ಅಂದು ಬಂಗಾಳಿ ಭಾಷೆಯಲ್ಲಿ ಕೃತಿರಚನೆ ಮಾಡಿ ನವಚೇತನವನ್ನು ನಾಡಿನ ಜೀವನದಲ್ಲಿ ತುಂಬಿದ್ದ ಈಶ್ವರಚಂದ್ರ ವಿದ್ಯಾಸಾಗರ, ಬಂಕಿಮಚಂದ್ರ, ರಮೇಶಚಂದ್ರದತ್ತ- ಇವರ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿಕೊಟ್ಟ ಕೀರ್ತಿ ಆಚಾರ್ಯರದು. ಇವರ ಕೃತಿರಚನೆ ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಅವ್ಯಾಹತವಾಗಿ ನಡೆಯಿತು. ದೇಶಾಭಿಮಾನ, ಸಾಹಸ, ಭಕ್ತಿ ಮೊದಲಾದ ಗುಣಗಳಿಂದ ಮೆರೆಯುವ ಸ್ವತಂತ್ರ, ಐತಿಹಾಸಿಕ ಹಾಗೂ ಸಾಮಾಜಿಕ ಕಾದಂಬರಿಗಳನ್ನು ಬಂಗಾಳಿಯಲ್ಲಿ ರಚಿಸಿದ ಕೀರ್ತಿ ಬಂಕಿಮಚಂದ್ರರದು. ಆನಂದಮಠ, ದೇವಿಚೌಧುರಾಣಿ, ವಿಷವೃಕ್ಷ ಮೊದಲಾದ ಕಾದಂಬರಿಗಳನ್ನು ಇಂದಿಗೂ ಜನ ಓದಿ ಆನಂದಿಸಬಲ್ಲವರಾಗಿದ್ದಾರೆ. ಆ ಕಾಲಕ್ಕೆ ಇಂಗ್ಲಿಷಿನಲ್ಲಿ ಸರ್ ವಾಲ್ಟರ್ ಸ್ಕಾಟ್ ರಚಿಸಿದ ಐತಿಹಾಸಿಕ ಕಾದಂಬರಿಗಳು ಅತ್ಯಂತ ಜನಪ್ರಿಯವಾಗಿದ್ದುವು. ಬಂಕಿಮಚಂದ್ರರು ಸರ್ ವಾಲ್ಟರ್ ಸ್ಕಾಟ್ ಮತ್ತು ಸರ್ ವಿಲ್ಕಿ ಕಾಲಿನ್ಸರ ಕಾದಂಬರಿಗಳಿಂದ ಸ್ಫೂರ್ತಿ ಪಡೆದು ಭಾರತ ದೇಶದ ಚಾರಿತ್ರಿಕ ಘಟನೆಗಳ ಆಧಾರದ ಮೇಲೆ ಕಾದಂಬರಿಗಳನ್ನು ಬರೆದರು. ಅವರ ಸಾಮಾಜಿಕ ಕಾದಂಬರಿಗಳಲ್ಲಿ ವಿಧವಾ ವಿವಾಹ, ಸ್ತ್ರೀ ಶಿಕ್ಷಣ ಮೊದಲಾದ ಅಂದಿನ ಪ್ರಮುಖ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣವಿದೆ. ಸಜೀವ ಕಲ್ಪನೆ, ನಾಟಕೀಯ ಶಕ್ತಿ, ಪರಿಶುದ್ಧ ಧ್ಯೇಯ- ಇವು ಬಂಕಿಮಚಂದ್ರರ ಕಾದಂಬರಿಗಳ ವೈಶಿಷ್ಟ್ಯ. ಸಂಸ್ಕೃತ ಭೂಯಿಷವಿವಾದ ಶುದ್ಧಗ್ರಾಂಥಿಕ ಶೈಲಿ ಬಂಗಾಳಿ ಕಾದಂಬರಿಗಳದು. ಇದೇ ಶೈಲಿ ವೆಂಕಟಾಚಾರ್ಯರ ಅನುವಾದ ಕೃತಿಗಳಲ್ಲಿಯೂ ಹಾಸು ಹೊಕ್ಕಾಯಿತು.
ಗಳಗನಾಥರು ವೆಂಕಟಾಚಾರ್ಯರಂತೆಯೇ ಪ್ರಮುಖ ಕಾದಂಬರಿಕಾರರು. ಇವರು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿರುವಂತೆ ಸ್ವಂತ ಕೃತಿಗಳನ್ನೂ ರಚಿಸಿದ್ದಾರೆ. ಅಂದಿಗೆ ಮರಾಠಿ ಕಾದಂಬರಿಕಾರರಲ್ಲಿ ಸತ್ತ್ವಶಾಲಿ ಕೃತಿಕಾರರಾಗಿದ್ದ ಹರಿನಾರಾಯಣ ಅಪ್ಪೆಯವರ ಗಢ ಆಲಾಪಣ ಸಿಂಹಗೇಲಾ ಎಂಬ ಕಾದಂಬರಿಯನ್ನು ಇವರು ಕಮಲಕುಮಾರಿ ಎಂಬ ಹೆಸರಿನಿಂದ ಕನ್ನಡಿಸಿದ್ದಾರೆ. ಉಳಿದ ಹಲವು ಕಾದಂಬರಿಗಳಿಗೆ ಮರಾಠಿಯಿಂದ ವಸ್ತುವನ್ನು ಒದಗಿಸಿಕೊಂಡು ತಮಗೆ ಸರಿಕಂಡ ಹಾಗೆ ತಿದ್ದಿ, ವಿಸ್ತರಿಸಿ, ಮೊಟಕುಮಾಡಿ ತಮ್ಮದೇ ಆದ ಒಂದು ರೀತಿಯಲ್ಲಿ ಕನ್ನಡಕ್ಕೆ ನೀಡಿದ್ದಾರೆ. ಸದ್ಬೋಧ ಚಂದ್ರಿಕೆ ಮತ್ತು ಸದ್ಗುರು ಎಂಬ ಪತ್ರಿಕೆಗಳಲ್ಲಿ ಭಾಗಭಾಗವಾಗಿ ಇವರ ಕಾದಂಬರಿಗಳು ಸಹೃದಯರಿಗೆ ದೊರಕಿದವು. ಮಾಧವಕರುಣಾವಿಲಾಸ (1923) ವಿಜಯನಗರದ ಇತಿಹಾಸವನ್ನು ವಸ್ತುವಾಗುಳ್ಳ ಗಳಗನಾಥರ ಸ್ವತಂತ್ರ ಮೇರುಕೃತಿ. ವಿಜಯನಗರದ ಇತಿಹಾಸಕ್ಕೆ ಸಂಬಂದಿsಸಿದ ವಿಷಯ ಕುಮುದಿನಿಯಲ್ಲಿಯೂ ಬರುತ್ತದೆ. ‘ಕನ್ನಡಿಗರ ಕರ್ಮಕಥೆ’ ತಾಳೀ ಕೋಟೆಯ ಕಾಳಗದ ವಿಷಯವನ್ನೊಳಗೊಂಡ ಐತಿಹಾಸಿಕ ಕಾದಂಬರಿ. ಇವರ ಉಳಿದ ಬಹುತೇಕ ಕಾದಂಬರಿಗಳು ಮರಾಠರ ಮತ್ತು ರಜಪುತರ ಚರಿತ್ರೆಗಳಿಗೆ ಸಂಬಂಧಪಟ್ಟುವು. ಈಶ್ವರೀಸೂತ್ರ, ಧಾರ್ಮಿಕ ತೇಜ, ಕ್ಷಾತ್ರತೇಜ, ಶಿವಪ್ರಭುವಿನ ಪುಣ್ಯ- ಇವೇ ಮೊದಲಾದ 22 ಕೃತಿಗಳನ್ನು ಇವರು ರಚಿಸಿದ್ದಾರೆ. ಇವರ ರಚನೆಯಲ್ಲಿ ಹೆಚ್ಚಿನವು ಐತಿಹಾಸಿಕ ಕಾದಂಬರಿಗಳು. ಇವರ ಕಾದಂಬರಿಗಳು ಕ್ಷಾತ್ರತೇಜಸ್ಸು, ಧಾರ್ಮಿಕ ಪ್ರಭಾವ ಮತ್ತು ದೇಶಪ್ರೇಮದಿಂದ ತುಂಬಿ ತುಳುಕುತ್ತಿವೆ. ಉತ್ತರ ಕರ್ನಾಟಕದ ಆಡುಭಾಷೆಯನ್ನು ಯಶಸ್ವಿಯಾಗಿ ಬಳಸಿರುವುದು ಇವರ ಕೃತಿಗಳಲ್ಲಿ ಕಾಣಬರುತ್ತದೆ. ಆದರೂ ಗಳಗನಾಥರ ಭಾಷೆಯ ಬಳಕೆ ಒಮ್ಮುಖವಾದುದೇ ಹೊರತು ವೈವಿಧ್ಯಮಯವಲ್ಲ.
ವೆಂಕಟಾಚಾರ್ಯರ ಮತ್ತು ಗಳಗನಾಥರ ಕಾದಂಬರಿಗಳು ಕೇವಲ ಓದುಗರ ಮೇಲೆಯೇ ಅಲ್ಲದೆ ಬರೆಯುವವರ ಮೇಲೆಯೂ ಸಾಕಷ್ಟು ಪ್ರಭಾವವನ್ನು ಬೀರಿದುವು. ವೀರಶೌರ್ಯೋದಾರ್ಯಾದಿ ಗುಣ ಗಳುಳ್ಳ ನಾಯಕ ನಾಯಕಿಯರಿಂದ ಕೂಡಿದ ಅದ್ಭುತ, ರಮ್ಯ, ಐತಿಹಾಸಿಕ ಸಾಮಾಜಿಕ ಕಾದಂಬರಿಗಳ ಪ್ರವಾಹ ಇಪ್ಪತ್ತನೆಯ ಶತಮಾನದ ಮೊದಲ ಮೂರು ದಶಕಗಳವರೆಗೆ ವ್ಯಾಪಕ ವಾಗಿಯೂ ಅನಂತರ ಕಿಂಚಿತ್ತಾ ಗಿಯೂ ಹರಿಯಿತು. ಹಲವಾರು ಕಾದಂಬರಿಗಳನ್ನು ರಚಿಸಿದ ಬಿ.ಪ.ಕಾಳೆ ಮತ್ತು ನಾಗೇಶ ಇವರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಾಗೇಶರ ಈಶಸಂಕಲ್ಪ ಮತ್ತು ಎಚ್ಚಮನಾಯಕ ಕಾದಂಬರಿಗಳು ಕನ್ನಡನಾಡಿನ ಚರಿತ್ರೆಯ ಮೇಲೆ ಆಧಾರಿತವಾದವು. ಕನ್ನಡ ಗರಡಿಯಾಳು ಎಂಬುವರ ಕರ್ಮಫಲ ಅಥವಾ ಪ್ರೇಮಫಲ, ಬಿ. ಕೃಷ್ಣಪ್ಪನವರ ರಾಯಚೂರು ವಿಜಯ, ಡಿ.ಶ್ರೀನಿವಾಸ ಶರ್ಮರ ನೀಲವಸನಾ ಸುಂದರಿ ಇವು ಈ ಕಾಲದಲ್ಲಿ ರಚಿತವಾದ ಕೆಲವು ಕಾದಂಬರಿಗಳು.
ಪತ್ತೇದಾರಿ ಕಾದಂಬರಿಗಳು
[ಬದಲಾಯಿಸಿ]ಈ ಕಾಲದಲ್ಲೇ ಪತ್ತೇದಾರಿ ಕಾದಂಬರಿಗಳೂ ಹುಟ್ಟಿದುವು. ಬಾಲ ಸರಸ್ವತಿ, ಬಿ.ಪ.ಕಾಳೆ, ನಾಗೇಶ ಮೊದಲಾದವರು ಪತ್ತೇದಾರಿ ಕಾದಂಬರಿಗಳನ್ನು ಕೊಟ್ಟವರಲ್ಲಿ ಮುಖ್ಯರು. ಬಾಲಸರಸ್ವತಿಯವರು ಕೆಲವು ಬಂಗಾಳಿ ಕಾದಂಬರಿಗಳನ್ನು ಕನ್ನಡಿಸಿದರು. ಪಾಂಚಕೊಡಿ ಡೇ ಅವರ ಹತ್ಯಾಕಾರಿ ಎಂಬ ಬಂಗಾಳಿ ಕಾದಂಬರಿಯ ಕಥೆಯನ್ನು ಅವಲಂಬಿಸಿ ಕುಮುದಿನಿ ರಚಿತವಾಯಿತು. (1911) ಚಿತ್ರಗುಪ್ತನ ದಫ್ತರಗಳು, ಗುರುತು ಕಂಡ ಕಳ್ಳ, ನರಬಲಿ- ಇವು ಬಾಲಸರಸ್ವತಿಯವರ ಪತ್ತೇದಾರಿ ಕಾದಂಬರಿಗಳು, ಕಂಠಾಭರಣ, ರಾಣೀ ಚೌಧುರಾಣಿ, ಕುಮಾರಕಂಠೀರವ ಮೊದಲಾದ ಸಾಮಾಜಿಕ ಹಾಗೂ ಸಾಂಸಾರಿಕ ಕಾದಂಬರಿಗಳನ್ನೂ ಇವರು ಬರೆದಿದ್ದಾರೆ.
ಸ್ತ್ರೀಯರು
[ಬದಲಾಯಿಸಿ]ಕನ್ನಡ ಕಾದಂಬರಿಗಳ ಆರಂಭಕಾಲದಲ್ಲಿ ಸ್ತ್ರೀಯರೂ ಕೃತಿರಚನೆ ಮಾಡಿದ್ದಾರೆ. ಎಂಬುದಕ್ಕೆ ಸತೀಹಿತೈಷಿಣೀ ಗ್ರಂಥಮಾಲೆಯ ತಿರುಮಲಾಂಬಾ ನಿದರ್ಶನವಾಗಿದ್ದಾರೆ. ವಿರಾಗಿಣಿ, ವಿದ್ಯುಲ್ಲತಾ, ನಭ, ಪುರ್ಣಕಲಾ- ಇವೇ ಮೊದಲಾದುವು ಇವರ ಕೃತಿಗಳು. ವಿಶೇಷವಾಗಿ ಸ್ತ್ರೀಯರಿಗೂ ಅವರ ಸಾಮಾಜಿಕ ಸ್ಥಾನಮಾನಗಳಿಗೂ ಸಂಬಂಧಿಸಿದ ವಿಷಯ ಇವರ ಕೃತಿಗಳ ವೈಶಿಷ್ಟ್ಯ. ಸಾಹಿತ್ಯಗುಣ ಅಷ್ಟೊಂದಾಗಿ ಇಂಥ ಕಾದಂಬರಿಗಳಲ್ಲಿ ಕಂಡುಬರುವುದಿಲ್ಲ. ಮಾಸ್ತಿಯವರು ಇವರ ಕೃತಿಗಳನ್ನು ನಾಟಕರೂಪದ ನಾವೆಲುಗಳೆಂದು ಕರೆದಿದ್ದಾರೆ.
ಇತರರು
[ಬದಲಾಯಿಸಿ]ಇದೇ ಕಾಲದಲ್ಲಿ ಎ.ಎ.ಶ್ರೀನಿವಾಸಾಚಾರ್ಯ, ಉಲ್ಲಾಳ ಮಂಗೇಶರಾಯರು ಮುಂತಾದವರು ಇಂಗ್ಲಿಷಿನಿಂದ ಹಲವಾರು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು.
ಕಾದಂಬರಿಗಳ ಬೆಳವಣಿಗೆಯಲ್ಲಿ ಕ್ರಮೇಣ ನವೀನತೆ ಮತ್ತು ಆಧುನಿಕತೆಗಳು ತಲೆಹಾಕಲಾರಂಬಿಸಿದುವು. ಅಲ್ಲಲ್ಲಿ ಒಂದೊಂದು ಕೃತಿ ವಾಸ್ತವಿಕತೆಯ ಕಡೆಗೆ ತಿರುಗುತ್ತಿದ್ದುದು ಕಂಡುಬರುತ್ತಿತ್ತು. ಎಂ.ಎಸ್. ಪುಟ್ಟಣ್ಣನವರ ಮಾಡಿದ್ದುಣ್ಣೋ ಮಹಾರಾಯ (1914) ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನಡೆದುದೆಂದು ಹೇಳಲಾದ ಹಲಕೆಲವು ಸಂಗತಿಗಳ ಆಧಾರದಿಂದ ರಚಿತವಾದೊಂದು ಗಮನಾರ್ಹ ಕೃತಿ. ಇವರು ಕಥೆ ಕಟ್ಟುವ ವೈಖರಿ, ಸನ್ನಿವೇಶಗಳನ್ನು ಸೃಷ್ಟಿಸುವ ಚಮತ್ಕಾರ, ಸ್ಥಳೀಯ ವಾತಾವರಣವನ್ನು ತರುವಲ್ಲಿ ಬಳಸಿರುವ ಭಾಷೆಯ ಪ್ರಾದೇಶಿಕತೆ, ಅಂದಿನ ಸಾಮಾಜಿಕ ಹಾಗೂ ರಾಜಕೀಯ ವಾಸನೆಯನ್ನು ಸಹಜವಾಗಿಸುವಂತೆ ಬಳಸುವ ಶಬ್ದಭಂಡಾರ - ಇವು ಎಂಥವರನ್ನೂ ಬೆರಗುಗೊಳಿಸುತ್ತವೆ. ಅಂದಿನ ಕಾಲದ ಜನಜೀವನಕ್ಕೆ ಇವರ ಕಾದಂಬರಿಗಳು ನಿಕಟವಾದವು. ಮುಸುಕು ತೆಗೆಯೆ ಮಾಯಾಂಗನೆ ಇವರ ಇನ್ನೊಂದು ಕೃತಿ. ಕಾದಂಬರಿಯ ಕ್ಷೇತ್ರದಲ್ಲಿ ಪುಟ್ಟಣ್ಣನವರದು ಮರೆಯಲಾಗದ ಹೆಸರು.
ನಿರ್ಮಾಣಶೀಲ ಯುಗ
[ಬದಲಾಯಿಸಿ]20ನೆಯ ಶತಮಾನದ ಮೂರನೆಯ ದಶಕದಿಂದ ಮುಂದಕ್ಕೆ ಆಧುನಿಕ ಪ್ರವೃತ್ತಿಯ ಕಾದಂಬರಿಗಳ ನಿರ್ಮಾಣವನ್ನು ನಾವು ಸ್ಪಷ್ಟವಾಗಿ ಕಾಣುತ್ತೇವೆ. ವಸ್ತು, ನಿರೂಪಣೆ, ಶೈಲಿ, ತಂತ್ರಗಳಲ್ಲಿ ಆಧುನಿಕತೆ ಈ ಕಾದಂಬರಿಗಳ ನಿರ್ಮಾಣದ ಮುಖ್ಯತತ್ತ್ವಗಳು. ಆದುದರಿಂದ ಈ ಕಾಲಕ್ಕೆ ನಿರ್ಮಾಣಶೀಲಯುಗವೆಂದು ಹೆಸರಿಡಲಾಗಿದೆ. ಆನಂದಕಂದರ (ಬೆಟಗೇರಿ ಕೃಷ್ಣಶರ್ಮ) ಸುದರ್ಶನ (1933) ಹಾಗೂ ಮಗಳ ಮದುವೆ; ರಂ.ಶ್ರೀ. ಮುಗಳಿಯವರ ಬಾಳುರಿ, ಅನ್ನ, ಕಾರಣ ಪುರುಷ; ಜಡಭರತರ ಧರ್ಮಸೆರೆ ಮುಂತಾದ ಕಾದಂಬರಿಗಳು ಆದರ್ಶವಾದವನ್ನು ದೃಷ್ಟಿಯಲ್ಲಿಟ್ಟುಕೊಂಡು ಸೃಷ್ಟಿಯಾದವು. ಕಾರಂತರ ಚೋಮನ ದುಡಿ 1933ರಲ್ಲಿ ಪ್ರಕಟವಾಯಿತು. ಅ.ನ.ಕೃ. ಅವರ ಉದಯರಾಗ ಮತ್ತು ಜೀವನಯಾತ್ರೆ. ಶ್ರೀರಂಗರ ವಿಶ್ವಾಮಿತ್ರ ಸೃಷ್ಟಿ 1934ರಲ್ಲಿ ಬೆಳಕುಕಂಡವು. 1935ನೆಯ ಸಂವತ್ಸರದಲ್ಲಿ ಆನಂದಕಂದರ ರಾಜಯೋಗಿ ಮತ್ತು ಅಶಾಂತಿಪರ್ವಗಳೆಂಬ ಎರಡು ಐತಿಹಾಸಿಕ ಕಾದಂಬರಿಗಳೂ ವಿನಾಯಕರ ಇಜ್ಜೋಡು, ಅ.ನ.ಕೃ. ಅವರ ಸಂಧ್ಯಾರಾಗ ಮತ್ತು ಜಡಭರತರ ಧರ್ಮಸೆರೆ ಕನ್ನಡಿಗರ ಕೈಸೇರಿದುವು. 1936ರಲ್ಲಿ ಕುವೆಂಪು ಅವರ ಬೃಹತ್ ಕಾದಂಬರಿ ಕಾನೂರು ಸುಬ್ಬಮ್ಮ ಹೆಗ್ಗಡತಿ ಹೊರಬಂತು.
ನಿರ್ಮಾಣಶೀಲಯುಗದ ಪ್ರಮುಖ ಕಾದಂಬರಿಕಾರರೆಂದರೆ ಕುವೆಂಪು, ಶಿವರಾಮ ಕಾರಂತ, ಅ.ನ.ಕೃ. ಆನಂದಕಂದ, ರಂ.ಶ್ರೀ.ಮುಗಳಿ, ಕಡೆಂಗೋಡ್ಲು ಶಂಕರ ಭಟ್ಟ, ಶ್ರೀರಂಗ, ಮಿರ್ಜಿ ಅಣ್ಣಾರಾಯ, ದೇವುಡು ಮೊದಲಾದವರು. ಇವರೆಲ್ಲ ಆಧುನಿಕ ವಿದ್ಯಾಭ್ಯಾಸವನ್ನು ಪಡೆದವರೂ ವಿಚಾರಶೀಲರೂ ಆಗಿದ್ದಾರೆ.
ಶ್ರೀನಿವಾಸರ ಸುಬ್ಬಣ್ಣವನ್ನು ಕಾದಂಬರಿಯೆಂದು ಹೇಳಲಾಗದು. ಆದರೆ ಇದು ಕಾದಂಬರಿಯ ಘನತೆಯುಳ್ಳ ನೀಳ್ಗತೆಯಾಗಿ ವಸ್ತು, ಶೈಲಿಗಳ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಕೃತಿಯೆಂಬುದರಲ್ಲಿ ಸಂಶಯವಿಲ್ಲ. ಇದರಲ್ಲಿ ಸಂಗೀತಗಾರ ನೊಬ್ಬನ ಜೀವನಚಿತ್ರಣ, ಮಾಸ್ತಿಯವರ ಮನೋಧರ್ಮ, ಬದುಕಿನ ಬಗ್ಗೆ ಇವರಿಗಿರುವ ನೈಜ ತಿಳುವಳಿಕೆ ಇವುಗಳಿಂದ ಮೈತುಂಬಿಕೊಂಡಿದೆ.
ಶಿವರಾಮ ಕಾರಂತರು ಮೂವತ್ತನಾಲ್ಕು ಕಾದಂಬರಿ ಗಳನ್ನು (1974) ರಚಿಸಿದ್ದಾರೆ. ಇವು ಗಳಲ್ಲಿ ಸ್ವಾತಂತ್ರ್ಯಾನಂತರ ಬರೆದ ಕಾದಂಬರಿಗಳೂ ಸೇರಿವೆ. ಕಾರಂತರ ಮೊದಲ ಕಾದಂಬರಿ ಚೋಮನ ದುಡಿ ವಸ್ತು ಶೈಲಿ ಒಟ್ಟಿನ ಪರಿಣಾಮಗಳ ದೃಷ್ಟಿಯಿಂದ ನಿಜವಾಗಿಯೂ ಮೊದಲ ಬಾರಿಗೆ ವೈಶಿಷ್ಟ್ಯ ಸ್ಥಾಪಿಸಿತು. ಶೂದ್ರ ನೊಬ್ಬನ ಬದುಕು ಹೇಗೆ ತುಳಿತಕ್ಕೆ ಒಳಗಾಗಿ ನಾಶವಾಯಿತು ಎಂಬುದನ್ನು ಈ ಕಾದಂಬರಿಯು ಜೀವಂತವಾಗಿ ಚಿತ್ರಿಸುತ್ತದೆ. ಇವರ ಮರಳಿಮಣ್ಣಿಗೆ ಕನ್ನಡದ ಮಹಾಕಾದಂಬರಿಗಳಲ್ಲೊಂದು. ಈ ಕೃತಿಯಲ್ಲಿ ಕರಾವಳಿ ಪ್ರದೇಶದ ಮೂರು ತಲೆಮಾರುಗಳ ಜೀವನ ದರ್ಶನ ಅರಳಿದೆ. ಬೆಟ್ಟದ ಜೀವ, ಔದಾರ್ಯದ ಉರುಳಲ್ಲಿ, ಮುಗಿದ ಯುದ್ಧ, ಕುಡಿಯರ ಕೂಸು ಕಾರಂತರ ಕಾದಂಬರಿಗಳಲ್ಲಿ ವೈಶಿಷ್ಟ್ಯಪುರ್ಣವಾದುವು. ಇವರ ಇನ್ನೊಂದು ಕಾದಂಬರಿ ಅಳಿದ ಮೇಲೆ ತಂತ್ರ, ವಸ್ತು, ಆಲೋಚನೆಗಳಲ್ಲಿ ಒಂದು ಮಹತ್ತ್ವಪುರ್ಣ ಕೃತಿಯಾಗಿದೆ. ಕಾರಂತರ ವಿಚಾರಶೀಲ ವ್ಯಕ್ತಿತ್ವ ಇದರಲ್ಲಿ ವಿಕಾಸಗೊಂಡಿದೆ. ಮೈಮನಗಳಸುಳಿಯಲ್ಲಿ, ಮೂಕಜ್ಜಿಯ ಕನಸು ಹೊಸ ದೃಷ್ಟಿಯಿಂದ ಅಷ್ಟೇ ಮಹತ್ತ್ವಪುರ್ಣ ಕೃತಿಗಳಾಗಿವೆ. ಇವರ ಇನ್ನೊಂದು ಮಹತ್ತ್ವದ ಕಾದಂಬರಿ ಧರ್ಮರಾಯನ ಸಂಸಾರ (1972). ಒಟ್ಟಿನಲ್ಲಿ ಇವರ ಕಾದಂಬರಿಗಳಲ್ಲಿ ಆಳವಾದ ಜೀವನಾನುಭವ, ಬದುಕನ್ನು ಸಮಗ್ರವಾಗಿ ಅದರ ಒಳಿತು ಕೆಡುಕುಗಳೊಂದಿಗೆ ನೋಡುವ ಸೂಕ್ಷ್ಮದೃಷ್ಟಿ. ಜೀವಂತ ಪಾತ್ರಗಳು, ಸಹಜ ಶೈಲಿ, ವೈಜ್ಞಾನಿಕನಿಗೊಪ್ಪುವ ಪ್ರಾಮಾಣಿಕತನ, ಯಾವ ಸಂಪ್ರದಾಯಕ್ಕೂ ಸೇರದ ಸ್ವತಂತ್ರ ಮನೋವೃತ್ತಿ ಇವು ಮುಖ್ಯವಾಗಿ ಕಂಡುಬರುತ್ತವೆ.
ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು ಕನ್ನಡದ ಎರಡು ಮಹಾ ಕಾದಂಬರಿಗಳು ಎಂಬ ಪ್ರಖ್ಯಾತಿ ಪಡೆದಿವೆ. ಶ್ರೀ ರಾಮಾಯಣದರ್ಶನಂ ಇವರ ಪದ್ಯಕಾವ್ಯವಾದರೆ, ಕಾದಂಬರಿಗಳೆರಡೂ ಇವರ ಗದ್ಯಕಾವ್ಯಗಳು. ಇಲ್ಲಿ ಬಳಕೆಯಾಗಿರುವ ಭಾಷೆ ಕನ್ನಡ ಗದ್ಯಶೈಲಿಯ ಶ್ರೀಮಂತ ಪ್ರತಿನಿದಿಯಾಗಿದೆ. ಮಲೆನಾಡಿನ ಜೀವನಚಿತ್ರವನ್ನು ಅದರ ಹಿನ್ನೆಲೆ, ವಿಸ್ತಾರ, ಆಳ, ವರ್ಣವಿನ್ಯಾಸಗ ಳೊಂದಿಗೆ ಚಿತ್ರಿಸಿರುವ ರೀತಿ ಅನ್ಯಾದೃಶವಾದುದು. ಕುವೆಂಪು ರವರ ತಂತ್ರ, ರೀತಿ, ಶೈಲಿಗಳ ಮಾರ್ಗದಲ್ಲಿ ನಡೆದು ಚಿತ್ರವತ್ತಾಗಿ ಸನ್ನಿವೇಶಗಳನ್ನು ಜೋಡಿಸಿ, ಬೃಹತ್ತಾಗಿ ಪಾತ್ರಗಳನ್ನು ಸೃಷ್ಟಿಸುವ ಇನ್ನೊಂದು ಉದಾಹರಣೆ ಕಾಣ ಬರುತ್ತಿಲ್ಲ. ಒಂದು ಜನಾಂಗದ ಜೀವನ ಸಮಗ್ರವಾಗಿ ಅದರ ಆಳ ಅಗಲಗಳಲ್ಲಿ ನಿರೂಪಿತವಾಗಿರು ವುದು ಇದೇ ಮೊದಲು. ಕಾದಂಬರಿ ಕರತಲ ರಂಗಭೂಮಿ ಎಂಬ ಅವರ ವಿಮರ್ಶಕ ನುಡಿಗೆ ಅವರ ಕಾದಂಬರಿಗಳೇ ಉದಾಹರಣೆಗಳಾಗಿವೆ. ಗೋಕಾಕರ ಇಜ್ಜೋಡು ಮೊದಲು ಎರಡು ಭಾಗಗಳಿಂದ ಪುರ್ಣಗೊಂಡು ಸಮರಸವೇ ಜೀವನ ಎಂಬ ಹೆಸರಿನಲ್ಲಿ 1300 ಪುಟಗಳ ಬೃಹತ್ ಕಾದಂಬರಿಯಾಗಿ ಹೊರಬಂದಿದೆ. ಇಪ್ಪತ್ತೈದು ವರ್ಷಗಳಲ್ಲಿನ ಜೀವನದ ಸಾಮಾಜಿಕ ಸಮಸ್ಯೆಗಳು, ಸೋಲುಗೆಲವು, ಹೊಯ್ದಾಟ ಹೋರಾಟಗಳ ಚಿತ್ರ ಈ ಕಾದಂಬರಿಯಲ್ಲಿ ಮೂಡಿಬಂದಿದೆ. ಸಮರಸವೇ ಜೀವನ ಹಲವು ದೃಷ್ಟಿಗಳಿಂದ ಮಹತ್ತ್ವದ ಸ್ಥಾನ ಪಡೆದುಕೊಂಡಿದೆ.
ಅ.ನ.ಕೃ. ಕನ್ನಡದಲ್ಲೆಲ್ಲ ಹೆಚ್ಚು ಕಾದಂಬರಿಗಳನ್ನು ರಚಿಸಿದವರೆಂದು ಖ್ಯಾತರಾಗಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿ ಸಮಾಜದ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇವರು ಸಂಧ್ಯಾರಾಗದಿಂದ ಕಾದಂಬರಿಕಾರರೆಂದು ಪ್ರಸಿದ್ಧಿಪಡೆದರು. ನಟಸಾರ್ವಭೌಮ ಎಂಬ ದೊಡ್ಡ ಕಾದಂಬರಿಯಲ್ಲಿ ಕಲಾವಿದನ ಬಾಳಿನ ಏಳು ಬೀಳುಗಳ ಹೊಯ್ದಾಟ ತುಯ್ದಾಟಗಳ ಚಿತ್ರವಿದೆ. ಮಂಗಳಸೂತ್ರ, ಕಣ್ಣೀರು ಉತ್ತಮ ಕಾದಂಬರಿಗಳು. ಇವರ ಸರಳವಾದ ಚಿತ್ತಾಕರ್ಷಕ ಶೈಲಿ, ನಿರೂಪಣಾವಿಧಾನ, ಕನ್ನಡದ ಬಗ್ಗೆ ಇವರಿಗಿರುವ ಅಬಿsಮಾನ, ಸಮಾಜದ ಲೋಪದೋಷಗಳನ್ನು ಎತ್ತಿ ಆಡುವಲ್ಲಿ ಕಾಣುವ ಉತ್ಸಾಹ, ಕಲಾವಿದರ ಬಗ್ಗೆ ಇವರಿಗಿರುವ ಸಹಾನುಭೂತಿ, ಸಹಜ ಸಂಭಾಷಣೆಗಳನ್ನು ಹೆಣೆವಲ್ಲಿ ಕಾಣಬರುವ ಜಾಣ್ಮೆ ಈ ಗುಣಗಳಿಂದ ಅ.ನ.ಕೃ. ಜನಪ್ರಿಯ ಲೇಖಕರಾದರು. ಇವರ ಕಾದಂಬರಿಗಳಲ್ಲಿ ಆಳವಾದ ಅನುಭವವಿಲ್ಲ. ಪಾತ್ರಗಳಿಗೆ ಗುರಿಯಿಲ್ಲ. ಕಲೆ ಗಂಭೀರವಾಗಿ ನಿರೂಪಿತ ವಾಗುವುದೂ ಇಲ್ಲ. ವಿಚಾರಗಳು ಬಂದರೂ ಅವು ಕಡೆಗೆ ಭಾವನಾವಶತೆಯಲ್ಲಿ ತೇಲಿಬಿಡುತ್ತವೆ. ಸಂಖ್ಯೆ ದೊಡ್ಡದಾಗಿ ಬೆಳೆದರೂ ಗುಣದ ದೃಷ್ಟಿಯಿಂದ ಇವರ ಕಾದಂಬರಿಗಳು ದೊಡ್ಡವಾಗಲಿಲ್ಲ.
ಶ್ರೀರಂಗರ ವಿಶ್ವಾಮಿತ್ರ ಸೃಷ್ಟಿ. ಪುರುಷಾರ್ಥ, ಓದುಗರ ಗಮನ ಸೆಳೆದ ಎರಡು ಕಾದಂಬರಿಗಳು. ವಿಶ್ವಾಮಿತ್ರ ಸೃಷ್ಟಿಯಲ್ಲಿ ಪ್ರಜ್ಞಾ ಪ್ರವಾಹ ತಂತ್ರವನ್ನು ಬಳಕೆಮಾಡಿದ್ದಾರೆ. ಬುದ್ಧಿಯ ವಿಲಾಸ ಇಂಥ ಕಾದಂಬರಿಗಳಲ್ಲಿ ಕಂಡುಬರುವ ಪ್ರಮುಖ ಅಂಶ. ಸ್ವಾತಂತ್ರ್ಯಾನಂತರವು ಇವರು ಕೆಲವು ಕಾದಂಬರಿಗಳನ್ನು ಕೊಟ್ಟಿದ್ದಾರೆ.
ದೇವುಡು ಅವರ ಮಯೂರ ಮೊದಲ ಐತಿಹಾಸಿಕ ಕಾದಂಬರಿ. ಇವರ ಅಂತರಂಗ ಒಂದು ವಿಶಿಷ ಕೃತಿ. ಇದು ಮನಸ್ಸಿನ ಹೊಯ್ದಾಟ ತುಯ್ದಾಟಗಳನ್ನು ಮಾರ್ಮಿಕವಾಗಿ ಬಣ್ಣಿಸಲೆಳಸಿದ ಪ್ರಥಮ ಕಾದಂಬರಿ. ಇವರು ರಚಿಸಿರುವ ಹಲವು ಕಾದಂಬರಿಗಳಲ್ಲಿ ಮಹಾಬ್ರಾಹ್ಮಣ ಒಂದು ಶ್ರೇಷ್ಠ ಕೃತಿ. ವೇದಕಾಲದ ವಿಶ್ವಾಮಿತ್ರನ ಕಥೆ ಇದರಲ್ಲಿ ಸತ್ತ್ವಯುಕ್ತವಾಗಿ ಅರಳಿದೆ. ಮಿರ್ಜಿ ಅಣ್ಣಾರಾಯರ ನಿಸರ್ಗ ಕನ್ನಡ ಕಾದಂಬರಿಗಳ ಸಾಲಿನಲ್ಲಿ ಉತ್ತಮ ಸ್ಥಾನವನ್ನು ಗಳಿಸಿಕೊಂಡಿದೆ. ಒಲಿದ ಹೆಣ್ಣುಗಂಡುಗಳ ವಿಫಲ ಪ್ರಣಯದಿಂದಾದ ದುರಂತ ಆಡುನುಡಿಯ ಜೀವಂತ ಭಾಷೆಯಲ್ಲಿ ಸುಂದರ ಕಲಾಕೃತಿಯಾಗಿ ಮೂಡಿಬಂದಿದೆ. ರಾಷ್ಟ್ರಪುರುಷ, ಪ್ರತಿಸರಕಾರ, ಭಸ್ಮಾಸುರ, ಅಶೋಕಚಕ್ರ ಮೊದಲಾದುವು ಇವರ ಸಾಮಾನ್ಯ ದರ್ಜೆಯ ಕಾದಂಬರಿಗಳು.
ಕಡೆಂಗೋಡ್ಲು ಶಂಕರಭಟ್ಟರ ಧೂಮಕೇತು, ದೇವತಾಮನುಷ್ಯ ಮತ್ತು ಲೋಕದ ಕಣ್ಣು ಸಾಮಾಜಿಕ ಕಾದಂಬರಿಗಳು, ಬಾ.ಕೃ.ಲಕ್ಷ್ಮೇಶ್ವರರ ಗ್ರಾಮ ಪಂಚಾನನ ಕಾದಂಬರಿಯಲ್ಲಿ ಮೊದಲ ಬಾರಿಗೆ ಹಳ್ಳಿಯ ಜನರ ಜೀವನಚಿತ್ರ ಬಂದಿರುವುದನ್ನು ಕಾಣಬಹುದು. ನಾ.ಕಸ್ತೂರಿಯವರ ಗಾಳಿಗೋಪುರ, ಚಕ್ರದೃಷ್ಟಿ, ಶಂಖವಾದ್ಯ, ಚಂಗೂಲಿ ಚಲುವ ಇವುಗಳನ್ನು ಕಾದಂಬರಿ ಎಂದು ಕರೆಯಲು ಆಕ್ಷೇಪಿಸಬಹುದಾದರೂ ಈ ಕಾದಂಬರಿಗಳಲ್ಲಿನ ತಂತ್ರ ಮತ್ತು ವಿಡಂಬನೆಗಳು ಗಮನಾರ್ಹ. ಭಗ್ನಮಂದಿರ ಈ ಕಾಲದ ಒಂದು ಮುಖ್ಯ ಸಾಮಾಜಿಕ ಕಾದಂಬರಿ.
ಸ್ವಾತಂತ್ರ್ಯ ಬಂದ ಅನಂತರದ ಇಪ್ಪತ್ತೈದು ವರ್ಷಗಳಲ್ಲಿ ಕಾದಂಬರಿಗಳ ರಚನೆ ವಿಪುಲವಾಗಿ ಮುಂದೆ ಸಾಗಿದೆ. ಸ್ವಾತಂತ್ರ್ಯ ಪುರ್ವಕಾಲದ ಹಲವು ಜನ ಪ್ರಮುಖ ಕಾದಂಬರಿಕಾರರು ಸ್ವಾತಂತ್ರ್ಯ ನಂತರವು ಸತ್ತ್ವಶಾಲಿ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಹಲವು ಜನ ಹೊಸ ಕಾದಂಬರಿಕಾರರೂ ಮುಂದೆ ಬಂದಿದ್ದಾರೆ. ಅವರಲ್ಲಿ ಕೆಲವರು ಬಹುಸಂಖ್ಯೆಯಲ್ಲಿ ಕಾದಂಬರಿಗಳನ್ನು ರಚಿಸಿದವರಿದ್ದಾರೆ. ಕಾದಂಬರಿಗಳ ಹರಹು ಕೂಡ ವಿಸ್ತಾರವಾಗಿದೆ. 1953ನೆಯ ಇಸವಿಯಲ್ಲಿ ಸುಲಭ ಬೆಲೆಯ ಕೈ ಹೊತ್ತಗೆಗಳು ಆರಂಭವಾದಮೇಲೆ ಕಾದಂಬರಿಗಳನ್ನು ಕೊಳ್ಳುವ ಓದುವ ಕನ್ನಡಿಗರ ಸಂಖ್ಯೆ ಬೆಳೆಯಿತು. ಹಿರಿಯ ಹಾಗೂ ತರುಣ ಕಾದಂಬರಿಕಾರರಿಗೆ ಉತ್ತೇಜನ ದೊರಕಿತು. ಹಳೆಯ ಜಾಡಿನಲ್ಲಿಯೇ ಕಾದಂಬರಿಯ ರಚನೆಯಾಗಿರುವಂತೆ, ಹೊಸ ಜಾಡನ್ನು ಹಿಡಿದ ಹೊಸರೀತಿಯ ಕಾದಂಬರಿಗಳೂ ಪ್ರಕಟಗೊಂಡಿವೆ. ವಸ್ತು, ಶೈಲಿ, ನಿರೂಪಣೆ, ತಂತ್ರ ಮೊದಲಾದುವುಗಳಲ್ಲಿ ವೈವಿಧ್ಯ ಮೂಡಿದೆ. ಸಾಮಾಜಿಕ ಕಾದಂಬರಿಗಳೇ ವಿಪುಲವಾಗಿದ್ದರೂ ಕೆಲವು ಐತಿಹಾಸಿಕ, ಪೌರಾಣಿಕ ಮತ್ತು ಪತ್ತೇದಾರಿ ಕಾದಂಬರಿಗಳೂ ಬಂದಿವೆ.
ಭಾರತ ದೇಶದಲ್ಲಿ ನಡೆದ ರಾಜಕೀಯ ಹೋರಾಟ ಮತ್ತು ಸ್ವಾತಂತ್ರ್ಯ ಚಳವಳಿಗಳನ್ನು ವಸ್ತುವಾಗಿ ಉಳ್ಳ ಕೆಲವು ಕಾದಂಬರಿಗಳು ಕನ್ನಡದಲ್ಲಿ ಬಂದಿವೆ. ಶಿವರಾಮ ಕಾರಂತರ ಔದಾರ್ಯದ ಉರುಳಲ್ಲಿ ಭಾರತದ ರಾಜಕೀಯ ಹಾಗೂ ಶೈಕ್ಷಣಿಕ ರಂಗದಲ್ಲಿ ನಡೆದ ಪ್ರಯೋಗಗಳ, ಸೋಲುಗೆಲುವುಗಳ ಮಾರ್ಮಿಕ ಚಿತ್ರವಿದೆ. ಮಿರ್ಜಿ ಅಣ್ಣಾರಾಯರ ಪ್ರತಿಸರಕಾರ, ರಾಷ್ಟ್ರಪುರುಷ; ಬಸವರಾಜ ಕಟ್ಟೀಮನಿಯವರ ಸ್ವಾತಂತ್ರ್ಯದೆಡೆಗೆ ಮತ್ತು ಮಾಡಿಮಡಿದವರು, ತ.ರಾ.ಸು.ರವರ ರಕ್ತತರ್ಪಣ, ಕೋ. ಚೆನ್ನಬಸಪ್ಪನವರ ರಕ್ತತರ್ಪಣ, ಪ.ಸು.ಭಟ್ಟರ ಆತ್ಮಾರ್ಪಣೆ, ನಿರಂಜನರ ಚಿರಸ್ಮರಣೆ ಮೊದಲಾದವು ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿಯನ್ನು ನೇರವಾಗಿ ನಿರೂಪಿಸುತ್ತವೆ. 1942ರ ಆಗಸ್ಟ್ ತಿಂಗಳು ಮುಂಬಯಿಯಲ್ಲಿ ನಡೆದ ಚಳವಳಿಯ ಹಿನ್ನೆಲೆಯಲ್ಲಿ ರಚಿತವಾದ ವಸ್ತು ವಿ.ಎಂ. ಇನಾಮದಾರರ ಮೂರಾಬಟ್ಟೆಯಲ್ಲಿ ಬರುತ್ತದೆ. ಅ.ನ.ಕೃ. ರವರ ಅಮರ ಆಗಸ್ಟ್, ಶ್ರೀರಂಗರ ಪುರುಷಾರ್ಥ ಮತ್ತು ಕುಮಾರಸಂಭವ ಇವೇ ಮೊದಲಾದ ಕಾದಂಬರಿಗಳಲ್ಲಿ ವಿಶಿಷ್ಟ ತಂತ್ರಗಳನ್ನು ಅಳವಡಿಸಿಕೊಂಡು ರಾಜಕೀಯ ಹೋರಾಟದ ಮತ್ತು ಜೀವನದ ಚಿತ್ರಗಳನ್ನು ಕೊಡಲಾಗಿದೆ. ಕಡಿದಾಳು ಮಂಜಪ್ಪನವರ ಪಂಜರವಳ್ಳಿಯ ಪಂಜು ಇತ್ತೀಚಿನ ರಾಜಕೀಯಕ್ಕೆ ಸಂಬಂದಿಸಿದ ಒಂದು ಕಾದಂಬರಿ.
ಬಿ.ವೆಂಕಟಾಚಾರ್ಯರು ಹಾಗೂ ಗಳಗನಾಥರು ಆಗಿಹೋದ ಮೇಲೆ ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳ ರಚನೆ ಅಷ್ಟೊಂದು ವಿಪುಲವಾಗಿ ನಡೆಯಲಿಲ್ಲ ಎನ್ನಬಹುದು. ಆದರೂ ಹಲವಾರು ಕಾದಂಬರಿಕಾರರು ಇತಿಹಾಸಕ್ಕೆ ವಾಸ್ತವಿಕತೆಯ ರಕ್ತದಾನ ಮಾಡಿ ಕೃತಿಗಳನ್ನು ರಚನೆ ಮಾಡಿದರು. ಇಂಥ ಕಾದಂಬರಿಗಳಲ್ಲಿ ಶ್ರೀನಿವಾಸರ ಚನ್ನಬಸವನಾಯಕ ಒಂದು ಮೈಲುಗಲ್ಲು. ಕೆಳದಿಯ ರಾಜ್ಯದ ಕೊನೆಯ ನಾಯಕರ ಸ್ಥಿತಿಯನ್ನು ಚಿತ್ರಿಸಿ ಹೈದರನ ಕುತಂತ್ರದ ಫಲವಾಗಿ ಆ ರಾಜ್ಯ ಮತ್ತು ರಾಜಧಾನಿ ಹೇಗೆ ಅವನ ವಶವಾಯಿತು ಎಂಬುದನ್ನು ನಿರೂಪಿಸಲಾಗಿದೆ. ಇಷ್ಟೇ ಗಮನಾರ್ಹವಾದ ಇವರ ಇನ್ನೊಂದು ಐತಿಹಾಸಿಕ ಕಾದಂಬರಿ ಚಿಕ್ಕವೀರರಾಜೆಂದ್ರ. ತ.ರಾ.ಸು. ಅವರ ಹಂಸಗೀತೆ. ಚಿತ್ರದುರ್ಗದ ಇತಿಹಾಸದ ಹಿನ್ನೆಲೆಯಲ್ಲಿ ರಚಿತವಾದ ಒಂದು ಉತ್ತಮ ಕೃತಿ. ಚಿತ್ರದುರ್ಗದ ಇತಿಹಾಸವನ್ನೇ ಆಧರಿಸಿ ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ಹೊಸ ಹಗಲು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಈ ಕಾದಂಬರಿಗಳ ಪಾತ್ರರಚನೆ ವರ್ಣನೆ ಇವುಗಳಲ್ಲಿ ವೀರರಸ ಮಡುಗಟ್ಟಿದೆ. ಇವರ ಶಿಲ್ಪಶ್ರೀ, ಚಾವುಂಡರಾಯನ ಜೀವನದ ಆಧಾರದ ಮೇಲೆ ರಚಿತವಾದ ಇತ್ತೀಚಿನ ಕೃತಿ. ಅ.ನ.ಕೃ. ಕೂಡ ವಿಜಯನಗರದ ಇತಿಹಾಸದ ಮೇಲೆ ಕಾದಂಬರಿಗಳನ್ನು ರಚಿಸಿದ್ದಾರೆ. ಐತಿಹಾಸಿಕ ಕಾದಂಬರಿಗಳಲ್ಲಿ ನಮ್ಮ ಮನಸ್ಸನ್ನು ಮುತ್ತುವ ಇನ್ನೊಂದು ಕಾದಂಬರಿ ಕೆ.ವಿ.ಅಯ್ಯರ್ ಅವರ ಶಾಂತಲಾ. ಹೊಯ್ಸಳ ವಿಷ್ಣುವರ್ಧನನ ಶಾಂತಲಾ ದೇವಿಯ ಜೀವನ ಚಿತ್ರಣ ಕಾದಂಬರಿಯ ವಸ್ತು. ಬರೆವಣಿಗೆ ಸುಂದರವಾಗಿದೆ. ವೀರಕೇಸರಿ ಸೀತಾರಾಮಶಾಸ್ತ್ರಿಗಳು ಟಿಪ್ಪುಸುಲ್ತಾನನ ಕಾಲದ ಚರಿತ್ರೆಯನ್ನು ವಸ್ತುವಾಗಿ ಉಳ್ಳ ದೌಲತ್ ಎಂಬ ವೀರ ಶೃಂಗಾರಗಳಿಂದ ಕೂಡಿದ ಮೂರು ಭಾಗಗಳ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ. ಶ್ರೀನಿವಾಸರಾವ್ ಕೊರಟಿ ಕನ್ನಡದಲ್ಲಿ ಬಹುಸಂಖ್ಯೆಯಲ್ಲಿ ಕಾದಂಬರಿಗಳನ್ನು ರಚಿಸಿದ್ದು ಇವರ ಪರಮೇಶ್ವರ ಪುಲಿಕೇಶಿ ಖ್ಯಾತಿಪಡೆದ ಕಾದಂಬರಿಯಾಗಿದೆ. ಬಿ.ಪುಟ್ಟಸ್ವಾಮಯ್ಯ ನೂರ್ಮಡಿ ತೈಲಪನನ್ನೂ ವಿಜಯನಗರದ ಇತಿಹಾಸವನ್ನು ಕುರಿತಂತೆ ಹಲವಾರು ಕಾದಂಬರಿಗಳನ್ನೂ ಬರೆದಿದ್ದಾರೆ. ಇವರ ಕ್ರಾಂತಿಕಲ್ಯಾಣ 12ನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕ್ರಾಂತಿಯನ್ನು ಚಿತ್ರಿಸುತ್ತದೆ. ಸಮೇತನಹಳ್ಳಿ ರಾಮರಾಯರ ಸವತಿ ಗಂಧವಾರಣೆ ವಿಷ್ಣುವರ್ಧನನ ರಾಣಿ ಶಾಂತಲಾದೇವಿಗೆ ಸಂಬಂದಿsಸಿದ ಒಂದು ಉತ್ತಮ ಕೃತಿ.
ಪೌರಾಣಿಕ ಕಾದಂಬರಿಗಳಲ್ಲಿ ಹೊಸ ಜಾಡನ್ನು ತುಳಿದು ಉತ್ತಮ ಕೃತಿಗಳನ್ನು ಕನ್ನಡಕ್ಕೆ ಕೊಟ್ಟವರಲ್ಲಿ ದೇವುಡು ಪ್ರಮುಖರು. ಇವರ ಮಹಾಬ್ರಾಹ್ಮಣ ಹಾಗೂ ಮಹಾಕ್ಷತ್ರಿಯ ಎರಡು ಉತ್ತಮ ಕಾದಂಬರಿಗಳು. ಪುರಾಣವಸ್ತು ದೇವುಡು ಅವರ ಕೈಯಲ್ಲಿ ಹೊಸತನದೊಂದಿಗೆ ನಿರೂಪಿತವಾಗುತ್ತದೆ. ಅಲ್ಲಿಯ ಪಾತ್ರಗಳು ಪುರಾಣಕ್ಕೆ ಸಂಬಂದಿsಸಿದವಾದರೂ ನಮಗೆ ಹೆಚ್ಚು ಹತ್ತಿರವಾಗುತ್ತವೆ. ಇತ್ತೀಚೆಗೆ ಹೊರಬಂದ ಜನಾರ್ಧನ ಗುರ್ಕಾರರ ಚೂಡಾಲ ಒಂದು ಉತ್ತಮ ಕೃತಿ. ತ.ರಾ.ಸು. ಅವರ ಬೆಳಕು ತಂದ ಬಾಲಕ ಪುರಾಣ ವಸ್ತುವನ್ನು ಬಳಸಿಯೂ ಹೇಗೆ ಉತ್ತಮವಾಗಿ ಕಾದಂಬರಿ ಬರೆಯಬಹುದೆಂಬುದಕ್ಕೆ ಒಂದು ನಿದರ್ಶನವಾಗಿದೆ. ಇತಿಹಾಸವನ್ನೊಳಗೊಂಡಿದ್ದೂ ಆಧ್ಯಾತ್ಮಿಕ ಸ್ತರದಲ್ಲಿ ನಡೆಯುವ ಕಾದಂಬರಿಗಳಲ್ಲಿ ಎಚ್.ತಿಪ್ಪೇರುದ್ರಸ್ವಾಮಿಯವರ ಕದಳಿಯ ಕರ್ಪುರ, ಜ್ಯೋತಿ ಬೆಳಗುತ್ತಿದೆ, ಪರಿಪುರ್ಣದೆಡೆಗೆ, ತ.ರಾ.ಸು. ಅವರ ಅಗ್ನಿರಥ ಮುಕ್ತಪಥ ಇವುಗಳನ್ನು ಹೆಸರಿಸಬಹುದು.
ಕಾದಂಬರಿಕಾರರ ದೃಷ್ಟಿ ಹಳ್ಳಿಗಳ ಕಡೆ ಹರಿದು, ಹಳ್ಳಿಗಳ ಜೀವನದ ಬಗ್ಗೆ ಕೆಲವು ಒಳ್ಳೆಯ ಕಾದಂಬರಿಗಳು ಬಂದಿರುವುದು ಗಮನಾರ್ಹ. ಎಚ್.ದೇವೀರಪ್ಪನವರ ಬೆಳವಲದ ಮಡಿಲಲ್ಲಿ, ಕೃಷ್ಣಮೂರ್ತಿ ಪುರಾಣಿಕರ ಹಬ್ಬಿದ ಬಳ್ಳಿ, ಬಸವರಾಜ ಕಟ್ಟೀ ಮನಿಯವರ ಮಣ್ಣು ಮತ್ತು ಹೆಣ್ಣು, ಚದುರಂಗರ ಸರ್ವಮಂಗಳಾ, ತ.ರಾ.ಸು. ಅವರ ಚಂದವಳ್ಳಿಯ ತೋಟ ಇವೇ ಮೊದಲಾದ ಕಾದಂಬರಿಗಳಲ್ಲಿ ಹಳ್ಳಿಗಳ ಸರಳ ಸುಂದರ ಜೀವನದ ಹಾಗೂ ಬದಲಾಗುತ್ತಿರುವ ಹಳ್ಳಿಗಳ ಜೀವನದ ವಾಸ್ತವಿಕ ಚಿತ್ರಣಗಳನ್ನು ಕಾಣ ಬಹುದು. ಹಳ್ಳಿಯ ಜೀವನವನ್ನು ಕುರಿತ ರಾವಬಹದ್ದೂರ ಅವರ ಗ್ರಾಮಾಯಣ ಈ ಕಾಲದ ವೈಶಿಷ್ಟ್ಯ ಪುರ್ಣವಾದ ಉತ್ಕೃಷ್ಟ ಕಾದಂಬರಿ. ಹಳ್ಳಿಯ ಸರಳವಾದ ಚೊಕ್ಕ ಜೀವನ ವನ್ನು ಚಿತ್ರಿಸುತ್ತಿರುವಂತೆಯೆ ಬದ ಲಾಗುತ್ತಿರುವ ಹಳ್ಳಿಯ ಜೀವನದ ಲೋಪದೋಷಗಳನ್ನು ಇಷ್ಟೊಂದು ಮಾರ್ಮಿಕವಾಗಿ ಚಿತ್ರಿಸಿದವರು ವಿರಳ, ವೃಂದಾವನ, ಬಿತ್ತಿ ಬೆಳೆದವರು ಧೂಮಕೇತು ಇವರ ಈಚಿನ ಕಾದಂಬರಿಗಳು.
ಹರಿಜನರ ಸಮಸ್ಯೆಯ ಬಗ್ಗೆ ಬಂದ ಕಾದಂಬರಿಗಳು ಕಡಿಮೆ. ಕೆ.ಎ.ಎನ್.ರಾವ್ ಅವರ ಮುನಿಯನ ಮಾದರಿ, ಎಂ.ವಿ.ಸೀತಾರಾಮಯ್ಯ ನವರ ಮಾದನ ಮಗಳು, ಕಟ್ಟೀಮನಿಯವರ ನೀ ನನ್ನ ಮುಟ್ಟಬೇಡ ಇವುಗಳನ್ನು ಉದಾಹರಣೆಗಾಗಿ ಉಲ್ಲೇಖಿಸಬಹುದಾಗಿದೆ.
ಸ್ವಾತಂತ್ರ್ಯೋದಯದ ಯುಗ
[ಬದಲಾಯಿಸಿ]- ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕಾದಂಬರಿಗಳನ್ನು ರಚಿಸಿದ ಕೆಲವು ಕಾದಂಬರಿಕಾರರನ್ನು ಹೆಸರಿಸಬಹುದು. ಶಿವರಾಮ ಕಾರಂತ, ಕುವೆಂಪು, ರಾವಬಹಾದ್ದೂರ, ದೇವುಡು (ಅಂತರಂಗ, ಮಲ್ಲಿ, ಎರಡನೆಯ ಜನ್ಮ), ಬಿ.ಪುಟ್ಟಸ್ವಾಮಯ್ಯ, ಶ್ರೀನಿವಾಸ, ಎಂ.ಆರ್.ಶ್ರೀನಿವಾಸಮೂರ್ತಿ, ಅ.ನ.ಕೃ.,ಶ್ರೀರಂಗ, ಗೋಕಾಕ್, ಕೆ.ವಿ.ಅಯ್ಯರ್ ಮಿರ್ಜಿ ಅಣ್ಣಾರಾಯ, ತ.ರಾ.ಸು. (ಚಂದನದ ಬೊಂಬೆ, ಮಸಣದ ಹೂವು, ನಾಗರಹಾವು), ಬಸವರಾಜ ಕಟ್ಟೀಮನಿ (ಮೋಹದ ಬಲೆಯಲ್ಲಿ, ಜರತಾರಿ ಜಗದ್ಗುರು, ಖಾನಾವಳಿಯ ನೀಲಾ), ವಿ.ಎಂ.ಇನಾಂದಾರ್ (ಶಾಪ, ಈ ಪರಿಯ ಸೊಬಗು, ಮುಗಿಯದ ಕತೆ), ನಿರಂಜನ (ಅಭಯಾಶ್ರಮ, ಚಿರಸ್ಮರಣೆ), ಚದುರಂಗ (ಉಯ್ಯಾಲೆ), ಆನಂದಕಂದ (ಸುದರ್ಶನ, ಮಗಳ ಮದುವೆ), ಎಸ್.ಅನಂತನಾರಾಯಣ, (ಅತ್ತಿಗೆ), ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಹೇಮಾವತಿ, ಊರ್ವಶಿ), ವ್ಯಾಸರಾಯ ಬಲ್ಲಾಳ (ಹೇಮಂತಗಾನ, ವಾತ್ಸಲ್ಯಪಥ, ಚಿರವಿರಹಿ), ಬೀಚಿ (ದಾಸಕೂಟ), ಕೃಷ್ಣಮೂರ್ತಿ ಪುರಾಣಿಕ (ಮುಗಿಲ ಮಲ್ಲಿಗೆ, ಮನೆ ತುಂಬಿದ ಹೆಣ್ಣು, ಮಣ್ಣಿನ ಮಗಳು, ತಂಪುನೆಳಲು), ರಾಮಚಂದ್ರ, ಕೊಟ್ಟಲಗಿ (ದೀಪ ಹತ್ತಿತು), ಭಾರತೀಸುತ (ಎಡಕಲ್ಲು ಗುಡ್ಡದ ಮೇಲೆ), ಎಸ್.ಎಲ್.ಭೈರಪ್ಪ (ವಂಶವೃಕ್ಷ, ಗೃಹಭಂಗ, ಗ್ರಹಣ, ದಾಟು). ವಿಶುಕುಮಾರ್ (ಕರಾವಳಿ, ಮದರ್), ಎನ್ಕೆ ಸಾವಿನ ಉಡಿಯಲ್ಲಿ, ಎರಡನೆ ಸಂಬಂಧ, ಯಶವಂತ ಚಿತ್ತಾಲ (ಮೂರು ದಾರಿಗಳು ಶಿಕಾರಿ) ಶಾಂತಿನಾಥ ದೇಸಾಯಿ (ಮುಕ್ತಿ, ವಿಕ್ಷೇಪ), ಯು.ಆರ್.ಅನಂತಮೂರ್ತಿ (ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ) ಪಿ.ಲಂಕೇಶ್ (ಬಿರುಕು), ಎ.ಕೆ.ರಾಮಾನುಜನ್ (ಹಳದಿ ಮೀನು), ಶಂಕರ ಮೊಕಾಶಿ ಪ್ರಣೇಕರರ (ಗಂಗವ್ವ ಗಂಗಾಮಾಯಿ), ಪೂರ್ಣಚಂದ್ರತೇಜಸ್ವಿ (ಸ್ವರೂಪ), ಗಿರಿ (ಗತಿಸ್ಥಿತಿ), ಕಾಮರೂಪಿ (ಕುದುರೆಮೊಟ್ಟೆ), ಆರ್ಯ (ಗುರು), ಶ್ರೀಕೃಷ್ಣ ಅಲನಹಳ್ಳಿ, (ಕಾಡು, ಪರಸಂಗದ ಗೆಂಡೆತಿಮ್ಮ, ಭುಜಂಗಯ್ಯನ ದಶಾವತಾರ) ಮೊದಲಾದವರು.
- ಸಂಸ್ಕಾರ, ವಂಶವೃಕ್ಷ, ದಾಟು, ಕರಾವಳಿ, ಮುಕ್ತಿ, ವಿಕ್ಷೇಪ, ಕಾಡು, ಗಂಗವ್ವ ಗಂಗಾಮಾಯಿ, ಗತಿಸ್ಥಿತಿ, ಬಿರುಕು, ಮಲೆಗಳಲ್ಲಿ ಮದುಮಗಳು, ಗ್ರಾಮಾಯಣ, ಮರಳಿಮಣ್ಣಿಗೆ, ಅಳಿದಮೇಲೆ, ಕುಸುಮಬಾಲೆ ಇವು ಇತ್ತೀಚೆಗೆ ಹೆಚ್ಚು ಚರ್ಚೆಗೆ ಒಳಗಾದ ಕಾದಂಬರಿಗಳಾಗಿವೆ.
- ಸ್ತ್ರೀಯರೂ ಮುಂದೆ ಬಂದು ಕಾದಂಬರಿಗಳನ್ನು ರಚಿಸಿರುವುದು ಸ್ವಾತಂತ್ರ್ಯೋತ್ತರ ಕಾಲದ ಒಂದು ವೈಶಿಷ್ಟ್ಯ. ಶರಪಂಜರ, ಹಣ್ಣೆಲೆ ಚಿಗುರಿದಾಗ, ಬೆಕ್ಕಿನ ಕಣ್ಣು, ಬೆಳ್ಳಿಮೋಡ- ಮೊದಲಾದ ಕಾದಂಬರಿಗಳನ್ನು ಬರೆದಿರುವ ತ್ರಿವೇಣಿ ಅವರು ಓದುಗರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಮಾನವ ಜೀವನದ ಹಲವು ಜಟಿಲ ಹಾಗೂ ಮನೋವೈಜ್ಞಾನಿಕ ಸಮಸ್ಯೆಗಳ ಮೇಲೆ ಇವರು ಕಾದಂಬರಿಗಳನ್ನು ರಚಿಸಿದ್ದಾರೆ. ಅನುಪಮಾ ನಿರಂಜನ, ಎಂ.ಕೆ.ಇಂದಿರಾ, ವಾಣಿ, ಜಯಲಕ್ಷ್ಮಿ, ಆರ್ಯಾಂಬ ಪಟ್ಟಾಬಿ, ಗೀತಾಕುಲಕರ್ಣಿ, ಕೆ.ಸರೋಜರಾವ್, ಎ.ಪಿ.ಮಾಲತಿ, ವೀಣಾ ಬಿ.ಟಿ.ಲಲಿತಾನಾಯಕ, ಲತಾರಾಜಶೇಖರ, ಸುಧಾಮೂರ್ತಿ - ಮೊದಲಾದ ಕಾದಂಬರಿಕಾರ್ತಿಯರು ಕನ್ನಡದಲ್ಲಿ ಕಾದಂಬರಿ ರಚನೆಯಲ್ಲಿ ತೊಡಗಿದ್ದಾರೆ.
- ಒಂದು ಕಡೆ ಸೃಜನಶೀಲ ಸಾಹಿತ್ಯ ಕಾದಂಬರಿ ಪ್ರಕಾರವನ್ನು ಶ್ರೀಮಂತಗೊಳಿಸಿದರೆ ಇನ್ನೊಂದೆಡೆ ಶ್ರೇಷವಿ ಭಾಷಾಂತರಗಳು ಈ ಸಾಹಿತ್ಯವನ್ನು ಹೆಚ್ಚು ಸಂಪದ್ಭರಿತಗೊಳಿಸಿವೆ. ಫ್ರೆಂಚ್, ಇಂಗ್ಲಿಷ್, ರಷಿಯನ್, ಮರಾಠಿ, ಬಂಗಾಳಿ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಹಾಗೂ ಇತರ ಹಲವು ಭಾಷೆಗಳಿಂದ ಭಾಷಾಂತರಕಾರ್ಯ ಸಾಗಿದೆ. ಹಮ್ಮು ಬಿಮ್ಮು, ಪುನರುತ್ಥಾನ, ಮದಾಂ ಬಾವರಿ, ಅನ್ಯ, ಸೋತು ಗೆದ್ದವನು, ಕೆಂಪುಮೀನು ಮುಂತಾದ ಶ್ರೇಷ್ಠ ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಿವೆ. (ನೋಡಿ: ಕನ್ನಡದಲ್ಲಿ ಭಾಷಾಂತರಗಳು).
- ಅಗ್ಗದ ಕಿರುಹೊತ್ತಗೆಗಳಿಂದ ಒಂದು ಕಾಲದಲ್ಲಿ ಕಾದಂಬರಿ ಜನಪ್ರಿಯವಾಗಿತ್ತು. ಈಗ ಆ ಕೆಲಸವನ್ನು ದಿನಪತ್ರಿಕೆಗಳು ವಾರಪತ್ರಿಕೆಗಳು ಮಾಸಪತ್ರಿಕೆಗಳು ನೆರವೇರಿಸುತ್ತಿವೆ. ದೈನಿಕ ಧಾರಾವಾಹಿಯಾಗಿ ಕಾದಂಬರಿಯನ್ನು ಪ್ರಕಟಿಸುವ ಉದ್ಯಮವನ್ನು ಕನ್ನಡಪ್ರಭ ಮೊದಲಿಗೆ ಪ್ರಾರಂಬಿಸಿತು. ಮಯೂರ, ಮಲ್ಲಿಗೆ, ತುಷಾರ, ಸುಧಾ, ಪ್ರಜಾಮತ, ಜನಪ್ರಗತಿ, ಕರ್ಮವೀರ ಮುಂತಾದ ವಾರಪತ್ರಿಕೆಗಳಲ್ಲೂ ಕಾದಂಬರಿಗಳು ಪ್ರಕಟವಾಗುತ್ತಿವೆ.
- ಎಪ್ಪತ್ತರ ದಶಕದ ಉತ್ತರಾರ್ಧದ ಹೊತ್ತಿಗೆ ಕನ್ನಡ ಕಾದಂಬರಿ ಪರಂಪರೆಯಲ್ಲಿ ಮಹತ್ವದ ಬದಲಾವಣೆಯುಂಟಾಯಿತು. ಕುವೆಂಪು, ಕಾರಂತ, ನಿರಂಜನ, ತ.ರಾ.ಸು., ಬಸವರಾಜಕಟ್ಟೀಮನಿ, ವಿ.ಎಂ.ಇನಾಂದಾರ, ಎಸ್.ಎಲ್.ಭೈರಪ್ಪ, ಯು.ಆರ್.ಅನಂತ ಮೂರ್ತಿ, ಶಾಂತಿನಾಥ ದೇಸಾಯಿ, ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಅನುಪಮಾ ನಿರಂಜನ, ಎಂ.ಕೆ.ಇಂದಿರಾ ಮೊದಲಾದ ಕಾದಂಬರಿಕಾರರು ತಮ್ಮದೇ ಸಂಪ್ರದಾಯವನ್ನು ಈಗಾಗಲೇ ನಿರ್ಮಿಸಿಕೊಂಡಿದ್ದರು. ವಸ್ತು, ಶೈಲಿ, ಧೋರಣೆ, ಸಂವಿಧಾನ ಮೊದಲಾದ ವಿಷಯಗಳಲ್ಲಿ ಎದ್ದುಕಾಣುವ ತಮ್ಮತನದ ಮುದ್ರೆಯನ್ನು ತಮ್ಮ ಕಾದಂಬರಿಗಳಲ್ಲಿ ಇವರೆಲ್ಲಾ ಒತ್ತಿದ್ದರು. ತಮ್ಮ ಕೃತಿಗಳ ಬಗೆಗೆ ಪೂರ್ವ ನಿರೀಕ್ಷೆಯುಳ್ಳ ಓದುಗ ವರ್ಗವನ್ನು ಈ ಕಾದಂಬರಿಕಾರರು ಹುಟ್ಟು ಹಾಕಿದ್ದರು. ಇದಕ್ಕೆ ನಿದರ್ಶನವೆಂದರೆ, 1977ರಲ್ಲಿ ಬಂದ ಕಾರಂತರ ‘ಅದೇ ಊರು ಅದೇ ಮರ’ ಕಾದಂಬರಿಯು ಸುಧಾರಣಾವಾದಿ ಪಾತ್ರತೆಯೊಳಗಿನ ಬದಲಾವಣೆಯ ಬಗೆಗಿನ ಅಸಹನೆಯನ್ನೇ ಮುಂದುವರೆಸಿದೆ. ‘ಗ್ರಾಮಾಯಣ’ದ ದರ್ಶನ ನೀಡಿದ ರಾವಬಹಾದ್ದೂರರು ಚಲೇಜಾವ್ ಚಳುವಳಿಯ ಸಂದರ್ಭದ ವಿವಿಧ ಬಗೆಯ ಜೀವನಾಸಕ್ತಿಯುಳ್ಳ ವ್ಯಕ್ತಿಗಳ ಅನುಭವ ವನ್ನು ಸೂಕ್ಷ್ಮ ಕಲೆಗಾರಿಕೆಯಲ್ಲಿ ದಾಖಲಿಸುತ್ತಾರೆ. 1978ರಲ್ಲಿ ಬಂದ ಯು.ಆರ್.ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯಲ್ಲಿ ‘ಸಂಸ್ಕಾರ’ ‘ಭಾರತೀಪುರ’ ಕಾದಂಬರಿಗಳ ಆಶಯವೇ ಮುಂದುವರಿಯಿತು. ಅಂತರಂಗ ಬಹಿರಂಗಗಳ ನಡುವಿನ ಗೆರೆಯನ್ನೇ ಇಲ್ಲವಾಗಿಸುವಷ್ಟು ಸಂಕೀರ್ಣ ಸಂಬಂಧವನ್ನು ಹೊಂದಿದ ವ್ಯಕ್ತಿತ್ವದ ಶೋಧವನ್ನು ‘ಅವಸ್ಥೆ’ ಕೈಗೊಳ್ಳುತ್ತದೆ. ಸಾಮಾಜಿಕ ಪ್ರಕ್ರಿಯೆಯ ಪಾತಳಿಯಲ್ಲಿ ರಾಜಕೀಯ ವ್ಯಕ್ತಿತ್ವವನ್ನು ಕೃಷ್ಣಪ್ಪನ ಪಾತ್ರ ಹೊಂದಿದರೆ, ವೈಯಕ್ತಿಕ ಪಾತಳಿಯಲ್ಲಿ ಪ್ರೇಮಿ, ಆಧ್ಯಾತ್ಮಿಯ ಪಾತ್ರವಿದೆ. ಇವೆರಡರ ನಡುವಿನ ದ್ವಂದ್ವದಲ್ಲಿ ವ್ಯಕ್ತಿ-ಸಮಾಜ -ಚರಿತ್ರೆಯ ವಾಸ್ತವಗಳು ನಿರ್ಮಾಣವಾಗುತ್ತವೆಂಬ ದರ್ಶನ ಈ ಕಾದಂಬರಿಯದು. ಭ್ರಷ್ಟ ರಾಜಕೀಯದ ಹಿನ್ನೆಲೆಯಲ್ಲಿ ಮನುಷ್ಯ ಪ್ರಜ್ಞೆಯ ವಿವಿಧ ಅವಸ್ಥಾಂತರಗಳನ್ನು ಕೃಷ್ಣಪ್ಪ ಪಾತ್ರದ ಬದುಕಿನ ವಿವಿಧ ಹಂತಗಳಲ್ಲಿ ಈ ಕಾದಂಬರಿ ಅನಾವರಣಗೊಳಿಸುತ್ತದೆ.
- ಗ್ರಾಮ್ಯಜೀವನದ ಸಂಕ್ರಮಣಾವಸ್ಥೆಯನ್ನು ಶೋದಿsಸಲೆತ್ನಿಸುವ ಕಾದಂಬರಿಗಳಾದ ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ ಹಾಗೂ ಚಂದ್ರಶೇಖರ ಕಂಬಾರರ ‘ಕರಿಮಾಯಿ’ 70ರ ದಶಕದವೇ. ಬರೆಯುವ ಪ್ರೇರಣೆಯನ್ನು ವಿಮರ್ಶಕರಿಂದ ಪಡೆಯುವಂತಿದ್ದ ನವ್ಯ ಸಂದರ್ಭವು 70ರ ದಶಕದ ಕೊನೆಯ ಹೊತ್ತಿಗಾಗಲೇ ಹೆಚ್ಚು ವಾಚಕಾಬಿಮುಖಿಯಾಗ ತೊಡಗಿತು. ಹೀಗಾಗಿ ಕಥನದ ತಾಂತ್ರಿಕತೆಯಕಡೆ ಒಲಿಯದ ನಿರಾಳ ಶೈಲಿಯನ್ನು ಲಂಕೇಶ ಮತ್ತು ಕಂಬಾರರು ಅನುಸರಿಸಿದರು. ಅಂತರಾಳದ ಸಂಘರ್ಷಗಳ ಶೋಧ ಉಸಿರುಗಟ್ಟಿಸುವಷ್ಟು ಅಸಹನೀಯವೆನಿಸಿದಾಗ, ಗ್ರಾಮ್ಯಸಹಜ ವ್ಯಕ್ತಿತ್ವಗಳ ಜೀವನೋತ್ಸಾಹ ಗಳನ್ನು ಕಾಣಿಸುವ ಉದ್ದೇಶ ಇವರಿಬ್ಬರಲ್ಲಿ ಕಂಡುಬರುತ್ತದೆ. ಆಧುನೀಕರಣ ಪ್ರಕ್ರಿಯೆಯನ್ನು ಸಿನಿಕತನದಿಂದ ನಿರಾಕರಿಸದೆ ಅದನ್ನು ಉತ್ಸಾಹ, ಬೆರಗಿನಿಂದ ಅರ್ಥೈಸಿಕೊಳ್ಳಲು ಎರಡೂ ಕಾದಂಬರಿಗಳು ಯತ್ನಿಸುತ್ತವೆ.
- ನವ್ಯ ಸಾಹಿತ್ಯಕ್ಕೆ ದಕ್ಕಿದ ಈ ಆಯಾಮ ಸೃಜನಶೀಲತೆಯ ಸಾಧ್ಯತೆಗಳ ವಿಸ್ತಾರದ ಅರಿವನ್ನುಂಟುಮಾಡಿತು. ಈ ದಶಕದಲ್ಲಿ ಬಂದ ಶಾಂತಿನಾಥ ದೇಸಾಯಿಯವರ ‘ಸೃಷ್ಟಿ’ (1979) ಬದುಕಿನ ಅನಂತ ಸಾಧ್ಯತೆಗಳನ್ನೆಲ್ಲ ಸಾಹಿತ್ಯ ಒಳಗೊಳ್ಳುತ್ತದೆಂಬುದನ್ನು ಕಲಾತ್ಮಕವಾಗಿ ಬಿಂಬಿಸುವ ಕೃತಿ. ಸಾಮಾಜಿಕ ಬದ್ಧತೆ ಸೃಷ್ಟಿ ಕ್ರಿಯೆಯ ಪ್ರಮುಖ ಗುರಿಯಾದಾಗ ಲೆಕ್ಕಣಿಕೆಯ ಮಸಿಯನ್ನೆಷ್ಟು ಹರಿಸಿದರೂ ವ್ಯರ್ಥ; ರಕ್ತಕ್ರಾಂತಿ ಎಂಬ ಗಂಗಾವತರಣದಲ್ಲಿ ಮಿಂದು ಕಲಾವಿದರ ಪುನರ್ಜನ್ಮವಾಗಬೇಕೆಂಬ ಆಶಯ ಈ ಕಾದಂಬರಿಯದು. ಕನ್ನಡ ಕಥಾಸಾಹಿತ್ಯ ತನ್ನನ್ನು ಪರಂಪರೆಯ ಸಾಹಿತ್ಯರೂಪದಲ್ಲಿ ಸ್ಥಾಪಿಸಿಕೊಳ್ಳುವುದಕ್ಕೆ ಬದಲಾಗಿ ಹೊಸದಾಗಿ ಪುನಃ ರೂಪಿಸಿಕೊಂಡದ್ದನ್ನು ಸೂಚಿಸುವ ಕೃತಿಯಾಗಿ ‘ಸೃಷ್ಟಿ’ ಮುಖ್ಯವೆನಿಸುತ್ತದೆ.
- ‘ಸೃಷ್ಟಿ’ ಕ್ರಿಯೆಯಲ್ಲಿ ಅನುಭವದ ತಾತ್ವಿಕತೆಗಿಂತ ಅಬಿವ್ಯಕ್ತಿಯ ತಾಂತ್ರಿಕತೆಗಿಂತ ‘ಅನುಭವವೇ’ ಮುಖ್ಯವಾದ ಸಂದರ್ಭ ದಲಿತ ಬಂಡಾಯ ಚಳವಳಿಯದು. ಕಾದಂಬರಿ ರಚನೆಯ ಹಿಂದೆ ಕೆಲಸ ಮಾಡಿದ ಕಾಳಜಿಯನ್ನೇ ಪ್ರಧಾನನೆಲೆಗೆ ತರುವ ಹವಣಿಕೆ ಈ ಸಂದರ್ಭದ ಕಾದಂಬರಿಗಳದು. ವಸ್ತು, ತಂತ್ರ, ಶೈಲಿ, ವರ್ಣನೆಗಳು ತಮಗೆ ತಾವೇ ಮುಖ್ಯವಾಗದೆ ಅನುಭವದ ಒಡಲಾಳದಿಂದ ಮೂಡಿಬರುವ ಬದ್ಧತೆಗೆ ಪ್ರಾಧಾನ್ಯ ಬಂತು. ದೇವನೂರ ಮಹದೇವರ ಕಿರುಕಾದಂಬರಿ ‘ಒಡಲಾಳ’ದ ಕೇಂದ್ರ ಪ್ರತಿಮೆ ಹಿಂಗಿಸಲು ಅಸಾಧ್ಯವಾಗುಳಿದ ಹಸಿವೆಯ ಬೆಂಕಿ. ಈ ಹಸಿವಿನ ಬೆಂಕಿ ನಮೋದಯದ ಸುಧಾರಣಾವಾದಿ ಸುರಕ್ಷಿತ ನೆಲೆಯನ್ನು ದುಃಸ್ವಪ್ನದಂತೆ ಕಾಡಬಲ್ಲ ಕ್ರಾಂತಿಯ ಬೆಂಕಿ. ದುಃಸ್ವಪ್ನವಾದದ್ದು ಪ್ರಗತಿಶೀಲರಲ್ಲಿ ಅತಿಸರಳೀಕರಣಗೊಂಡು ರಂಜನೆಯ ವಿಷಯವಾಯಿತು. ಆದರೆ ದಲಿತ ಬಂಡಾಯದ ಸಂದರ್ಭ ಸ್ಪಷ್ಟವಾಗಿ ಸಾಮಾಜಿಕ ಸಂಚಲನಗಳನ್ನು ಸಂಘಟಿತ ರೂಪದಲ್ಲಿ ಸಾಧ್ಯವಾಗಿಸಿತು. ದಲಿತ ಸಂಘರ್ಷ ಸಮಿತಿ, ಬಂಡಾಯ ಸಂಘಟನೆಗಳು ಕನ್ನಡದ ಮಹತ್ವದ ಕಾದಂಬರಿಕಾರರ ಸಾಮಾಜಿಕ ಬದ್ಧತೆಯ ನೆಲೆಗಳಾದವು.
- ವರ್ಣವ್ಯವಸ್ಥೆಯ ಸಂಕೀರ್ಣ ಗ್ರಾಮಸಮಾಜದ ಶೋಷಣೆಯ ಸ್ವರೂಪವನ್ನು ವಾಸ್ತವತಾವಾದೀ ನೆಲೆಯಲ್ಲಿ ಕಂಡರಿಸುವ ಯತ್ನ ಹಲವಾರು ಕಾದಂಬರಿಗಳದು. ಜಾತಿ, ಅಸ್ಪೃಶ್ಯತೆ, ವರ್ಗಸಂಬಂಧಗಳು, ಲಿಂಗ ವ್ಯವಸ್ಥೆಗಳ ನಡುವಿನ ಸಂಬಂಧಗಳ ಜಟಿಲತೆಯನ್ನು ಬರಗೂರು ರಾಮಚಂದ್ರಪ್ಪನವರ ‘ಒಂದು ಊರಿನ ಕತೆ’ ಸ್ಪಷ್ಟಪಡಿಸುತ್ತದೆ. ‘ಸೂರ್ಯ’, ‘ಉಕ್ಕಿನ ಕೋಟೆ’, ‘ಹುತ್ತ’ ಕಾದಂಬರಿಗಳಲ್ಲಿ ವ್ಯವಸ್ಥೆಯ ಕ್ರೌರ್ಯದ ಬಹುಮುಖಗಳನ್ನು ಹಾಗೂ ಶೋಷಿತರ ಪ್ರತಿರೋಧವನ್ನು ಬರಗೂರರು ಮುಖಾಮುಖಿಯಾಗಿಸುತ್ತಾರೆ. ಸಾಮಾಜಿಕ ಚಳವಳಿಯ ತಾತ್ವಿಕತೆಯ ವ್ಯಾಖ್ಯಾನರೂಪವಾಗಿ ಈ ಕಾದಂಬರಿಗಳು ನಿಲ್ಲುತ್ತವೆ.
- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಬಡ ಗೇಣಿದಾರನ ಅತಂತ್ರ ಸ್ಥಿತಿಯನ್ನು ವಿಶುಕುಮಾರರ ‘ಭೂಮಿ’ ಹಿಡಿದಿಡುತ್ತದೆ. ನಾ.ಡಿಸೋಜರ ‘ತಿರುಗೋಡಿನ ರೈತ ಮಕ್ಕಳು’ (1979), ರಮೇಶ ಹುಲ್ಲುಕೆರೆಯವರ ‘ತೆಂಡೆ’, ನಾ.ಮೊಗಸಾಲೆ ಅವರ ‘ಪಲ್ಲಟ’ ಗ್ರಾಮ್ಯವೈಷಮ್ಯವನ್ನು ವಸ್ತುವಾಗಿಟ್ಟುಕೊಂಡ ಕಥನಗಳು. ಇದೇ ಅವದಿಯಲ್ಲಿ ಬಂದ ಬಸವರಾಜ ಕಟ್ಟೀಮನಿಯವರ ‘ಹರಿಜನಾಯಣ’ ವರ್ಗ ಸಂಘರ್ಷದ ಸಮಸ್ಯೆಗಳನ್ನು ಸರಳೀಕೃತ ಗೊಳಿಸಿದ ಕಾದಂಬರಿ. ಕಾರಂತರಂಥ ಕಾದಂಬರಿಕಾರರು ‘ನಾವು ಕಟ್ಟಿದ ಸ್ವರ್ಗ’ದಲ್ಲಿ ಸ್ವಾತಂತ್ರ್ಯೋತ್ತರ ಭಾರತವನ್ನು ಕುರಿತಂತೆ ಭ್ರಮನಿರಸನ ಭಾವವನ್ನು ಚಿತ್ರಿಸಿದರು.
- 70ರ ದಶಕದ ಉತ್ತರಾರ್ಧ ಕನ್ನಡದ ಹಿರಿಯ ಸಾಹಿತಿಗಳಿಗೆ ಭ್ರಮನಿರಸನ ವನ್ನುಂಟುಮಾಡಿದ ಕಾಲ. ಗ್ರಾಮ-ನಗರಗಳಲ್ಲಿನ ಏಕರೂಪ ಭ್ರಷ್ಟರೂಪದೊಂದಿಗೆ, ಇನ್ನಿಲ್ಲದ ಸಾಂಸ್ಕೃತಿಕ ಬಿಕ್ಕಟ್ಟುಗಳು ಮೂಡಿಬಂದ ಕಾಲವಿದು. ‘ನಾವು ಕಟ್ಟಿದ ಸ್ವರ್ಗ’ ಎಂಬ ವ್ಯಂಗ್ಯದ ನೆಲೆಯ ಕಾದಂಬರಿಯನ್ನು ಕಾರಂತರು ಬರೆದರೆ ಎಸ್.ಎಲ್.ಭೈರಪ್ಪನವರು ‘ಪರ್ವ’ದ ಮೂಲಕ ಬಿಕ್ಕಟ್ಟುಗಳಿಗೆ ಪರ್ಯಾಯವನ್ನು ಹುಡುಕುವ ಹವಣಿಕೆಯಲ್ಲಿ ತೊಡಗಿದರು. ಮಹಾಭಾರತವನ್ನು ಸಮೂಹ ಜೀವನ ಸಂಹಿತೆಯ ನೆಲೆಯಿಂದ ವ್ಯಕ್ತಿಗತ ನೆಲೆಯಲ್ಲಿ ಸ್ಥಾಪಿಸುವ ನಾಟಕೀಯ ಹಾಗೂ ಭಾವಗೀತಾತ್ಮಕ ನಿರೂಪಣಾ ಶೈಲಿಯುಳ್ಳ ಕೃತಿಯಿದು. ಪ್ರಭುತ್ವ ಹಾಗೂ ಕುಟುಂಬ ವ್ಯವಸ್ಥೆಯೊಳಗಿನ ಸ್ತ್ರೀಪುರುಷ ಸಂಬಂಧಗಳ ಪಲ್ಲಟಗಳನ್ನು ‘ಪರ್ವ’ ವಿಬಿನ್ನ ನೆಲೆಯಲ್ಲಿ ಹಿಡಿದಿಡಲೆತ್ನಿಸುತ್ತದೆ. ಕತೆಯ ಮೂಲ ಪುರಾಣದ್ದಾದರೂ ಪುರಾಣಭಂಜನೆ ಮಾಡದೇ ಪುರಾಣವನ್ನು ಸಮಕಾಲೀನ ಸಂದರ್ಭದ ವ್ಯಾಖ್ಯಾನವಾಗಿ ರೂಪಾಂತರಿಸ ಲಾಗಿದೆ. ಸಿದ್ಧಪಾತ್ರಗಳ ಚೌಕಟ್ಟಿನಾಚೆ ಸ್ತ್ರೀಪಾತ್ರಗಳಿಗೆ ಈ ಕಾದಂಬರಿ ಕಲ್ಪಿಸಿರುವ ಆಯಾಮ 80ರ ದಶಕದಲ್ಲಿ ಪ್ರಚುರಗೊಂಡ ಮಹಿಳಾ ಆಂದೋಲನದ ಪೂರ್ವ ಸೂಚನೆ ಯಾಗಿದೆ. ಇದೇ ಅವದಿಯಲ್ಲಿ (1980) ಬಂದ ಎಚ್.ವಿ.ಸಾವಿತ್ರಮ್ಮ ಅವರ ‘ಸೀತೆ-ರಾಮ-ರಾವಣ’ ಕಾದಂಬರಿಯು ರಾಮಾಯಣವನ್ನು ಸ್ತ್ರೀವಾದಿ ನೆಲೆಯಲ್ಲಿ ಕಟ್ಟಿಕೊಡಲೆತ್ನಿಸುತ್ತದೆ. ವ್ಯವಸ್ಥೆಯ ವೈರುಧ್ಯವಾದ ರಕ್ಷಣೆ-ಆಕ್ರಮಣಗಳ ಸುಳಿಗೆ ಸಿಕ್ಕ ಸ್ತ್ರೀ ಪಾತ್ರಗಳು ಈ ಕೃತಿಯಲ್ಲಿ ತಮ್ಮ ‘ಅನುಭವ’ವನ್ನು ತಾತ್ವೀಕರಿಸಿಕೊಳ್ಳಲೆತ್ತಿಸುತ್ತವೆ. ಅನುಪಮಾ ನಿರಂಜನರ ‘ಆಳ’, ಗೀತಾನಾಗಭೂಷಣರ ‘ಹಸಿಮಾಂಸ ಮತ್ತು ಹದ್ದು’, ವೀಣಾ ಶಾಂತೇಶ್ವರ ಅವರ ‘ಗಂಡಸರು’ ಕಾದಂಬರಿಗಳು ಮಹಿಳಾ ಸಮಸ್ಯೆಯನ್ನು ಪ್ರಜ್ಞೆ- ಪರಿಸರಗಳ ನಡುವಿನ ಗತಿತಾರ್ಕಿಕತೆಯಲ್ಲಿ ಅತ್ಯಂತ ನೈಜವಾಗಿ ಸ್ಥಾಪಿಸಲೆತ್ನಿಸುತ್ತವೆ. ತನ್ನೆಲ್ಲ ಮಾನಸಿಕ ಭಾವದ್ರವ್ಯವನ್ನು ಮಹಿಳೆ ಪುರುಷ ಕೇಂದ್ರಕ್ಕೆ ಸಮರ್ಪಿಸುವ, ‘ತ್ಯಾಗಸುಖ’ದ ಜನಪ್ರಿಯ ಕಥನಗಳಿಂದ ಬಿsನ್ನವಾದ ಮಾರ್ಗವನ್ನು ಮಹಿಳಾ ಬರೆವಣಿಗೆ ಹಿಡಿಯತೊಡಗಿತು. ಮಹಿಳಾ ಶೋಷಣೆಯ ಪ್ರತೀಕವಾಗಿ ‘ಹಸಿಮಾಂಸ ಮತ್ತು ಹದ್ದು’ವನ್ನು ಪರಿಭಾವಿಸುವ ಗೀತಾನಾಗಭೂಷಣರು ತಾಯ್ತನಕ್ಕಂಟಿಕೊಂಡಿರುವ ವೈಭವೀಕರಣವನ್ನು ಲಚ್ಚಿ ಪಾತ್ರದ ಮೂಲಕ ಸ್ಫೋಟಿಸಿದರು. ವಿದ್ಯಾವಂತ ಉದ್ಯೋಗಸ್ಥ ಹೆಣ್ಣಿನ ಪ್ರಜ್ಞಾ ಜಾಗೃತಿ ಒಳಗೊಳ್ಳಬಹುದಾದ ತಲ್ಲಣಗಳನ್ನು ನಿರೂಪಿಸುತ್ತಲೇ ಪುರುಷ ರಾಜಕಾರಣದ ಸ್ವರೂಪವನ್ನು ನಾಗರಿಕ ಸಂದರ್ಭದಲ್ಲಿ ತೆರೆದಿಡುವ ಯತ್ನ ‘ಆಳ’ ಹಾಗೂ ‘ಗಂಡಸರು’ ಕಾದಂಬರಿಗಳದು.
- ಪಶ್ಚಿಮದ ಅಬಿವೃದ್ಧಿ ಸಿದ್ಧಾಂತಗಳನ್ನು ಅನುಮಾನದಿಂದ ನೋಡಬಲ್ಲ, ಪ್ರಶ್ನಿಸಬಲ್ಲ ಪರ್ಯಾಯ ಸೃಷ್ಟಿಯನ್ನು ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗಳು ಹೊಂದಿವೆ. ವ್ಯಕ್ತಿ, ಸಮೂಹ, ನಿಸರ್ಗದ ನಿತ್ಯದೈನಿಕದ ಸೂಕ್ಷ್ಮತಿ ಸೂಕ್ಷ್ಮ ಆಗುಹೋಗುಗಳ ದರ್ಶನ ಸುಲಭಗ್ರಾಹ್ಯವಲ್ಲ. ಎಲ್ಲವನ್ನೂ ಅರ್ಥೈಸಬಲ್ಲೆ ಎಂಬ ಬೌದ್ಧಿಕ ಅಹಂಕಾರಕ್ಕೆ ಸಿಗದೆ ನುಣಚಿಕೊಳ್ಳುವ ವಾಸ್ತವಸತ್ಯವನ್ನು ಗ್ರಹಿಸುವ ಬಗೆ ಯಾವುದೆಂಬ ಹುಡುಕಾಟ ‘ಕರ್ವಾಲೋ’ ಕೃತಿಯದು. ಜೀವವಿಕಾಸ ಸಿದ್ಧಾಂತವನ್ನಾಧರಿಸಿದ ಅಬಿವೃದ್ಧಿ ಸಿದ್ಧಾಂತಗಳು, ಅವುಗಳನ್ನಾಧರಿಸಿದ ರಾಜಕಾರಣದಲ್ಲಿ ‘ಮಂದಣ್ಣ’ನಂಥ ದೇಸಿ ಪ್ರತಿಭೆಗಳು ‘ಸ್ಥಗಿತ ಪ್ರಜ್ಞೆ, ಯುಳ್ಳ ಜೀವಿಗಳಾಗಿ ತಪ್ಪು ವ್ಯಾಖ್ಯಾನಕ್ಕೊಳಗಾಗುತ್ತಿದ್ದಾರೆ. ಬೌದ್ಧಿಕತೆಗೆ ಮಾನವೀಯ ಸ್ಪರ್ಶವಿದ್ದಾಗ ಮಾತ್ರ ಸಾಮಥರ್ಯ್‌ದ ಅನಂತ ಸಾಧ್ಯತೆಗಳ ನೆಲೆಯಾಗಿ ಜೀವಿಯನ್ನು ಕಾಣಲು ಸಾಧ್ಯವೆಂಬ ತಾತ್ವಿಕ ಸತ್ವವನ್ನು ‘ಕರ್ವಾಲೋ’ ಒದಗಿಸುತ್ತದೆ. ವೇಗದ ಓಟದಲ್ಲಿ ಹಿಂದುಳಿದವರ ಅದಮ್ಯ ಶಕ್ತಿಯ ಅಪಾರ ಸಾಧ್ಯತೆಗಳ ಬಗೆಗೆ ಹೆಚ್ಚು ಆಶಾವಾದಿಯಾದ ಸಂದರ್ಭ 70ರ ದಶಕದ್ದು. ಸಾಮಾಜಿಕ ಸಂಘಟನೆಗಳ ನಾಯಕತ್ವವನ್ನು ಸುಧಾರಣಾವಾದಿ ನೆಲೆಗಿಂತ ಬಿsನ್ನವಾಗಿ ವಿವರಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಸಂದರ್ಭದಲ್ಲುಂಟಾಯಿತು. ಹೊಸ ಬದುಕಿನ ನಿರ್ಮಾಣಕ್ಕೆ ತೊಡಗುವವರು ಯಾವ ವರ್ಗದವರೇ ಇದ್ದರೂ ಮುಂಚೂಣಿಯ ನಾಯಕತ್ವ ದಲಿತರದೇ ಇರಬೇಕೆಂಬ ಆಶಯ ಬರಗೂರರ ‘ಸೀಳುನೆಲ’ದ್ದು (1980). ಅಂತರ್ಮುಖವಾಗಿದ್ದು, ಕ್ರಾಂತಿಯ ಬಗೆಗಿನ ವೈಚಾರಿಕ ಪ್ರೇರಣೆಗಳನ್ನು ಹೊರಗಿನಿಂದ ಪಡೆದ ನಾಯಕನ ವ್ಯಕ್ತಿತ್ವದ ಮಿತಿಗಳನ್ನು ‘ನಾಯಕತ್ವ’ದ ಸಮಸ್ಯೆಯಾಗಿ ಇಲ್ಲಿ ಕಾಣಿಸಲಾಗಿದೆ. ಈ ಹೊತ್ತಿನಲ್ಲೇ ಬಂದ ಎಚ್.ತಿಪ್ಪೇರುದ್ರಸ್ವಾಮಿಯವರ ‘ನೆರಳಾಚೆಯ ಬೆಳಗು’ ಕಾಯಕವನ್ನು ಯೋಗವಾಗಿಸಿಕೊಂಡು ಸಿದ್ಧರಾಮನನ್ನು ಸಿದ್ಧಕಥಾಚೌಕಟ್ಟಿನಲ್ಲಿಯೇ ಚಿತ್ರಿಸುತ್ತದೆ.
- ನಗರ ಹಾಗೂ ಗ್ರಾಮವೆಂಬ ಬಿನ್ನತೆಯನ್ನು ಕಾಯ್ದು ಕೊಳ್ಳಲಾರದಷ್ಟು ಸಂಕೀರ್ಣಗೊಂಡ ಸಾಮಾಜಿಕ ಸಂದರ್ಭವನ್ನು 80ರ ದಶಕದ ಕಾದಂಬರಿಗಳು ವಿಶ್ಲೇಷಣೆಗೊಳಪಡಿಸುತ್ತವೆ. ಚದುರಂಗರ ‘ವೈಶಾಖ’, ತೇಜಸ್ವಿಯವರ ‘ಚಿದಂಬರ ರಹಸ್ಯ’, ದೇವನೂರು ಮಹಾದೇವ ಅವರ ‘ಕುಸುಮಬಾಲೆ’, ಮನಜ ಅವರ ‘ಮಾಗಿ’, ಕುಂ. ವೀರಭದ್ರಪ್ಪನವರ ‘ಕಪ್ಪು, ಪಕ್ಷಿ’, ಅರವಿಂದ ಮಾಲಗತ್ತಿಯವರ ‘ಕಾರ್ಯ’, ಶ್ರೀಕೃಷ್ಣ ಆಲನಹಳ್ಳಿಯವರ ‘ಭುಜಂಗಯ್ಯನ ದಶಾವತಾರಗಳು’ ಇವು ಸಾಮಾಜಿಕ ಸ್ಥಿತ್ಯಂತರಗೊಳ್ಳುತ್ತಿರುವ ಭಾರತದ ದರ್ಶನವನ್ನು ಮಾಡಿಕೊಡುತ್ತವೆ. ಈ ಕೃತಿಗಳು ದಲಿತ ಮತ್ತು ಮಹಿಳೆ ಹಾಗೂ ಅಂತಾರಾಷ್ಟ್ರೀಯ ರಾಜಕಾರಣದ ನೆಲೆಗಳಿಂದ ಸ್ಥಿತ್ಯಂತರದ ಸೂಕ್ಷ್ಮಗಳನ್ನು ಅರ್ಥೈಸಲೆತ್ನಿಸುತ್ತವೆ.
- ಮಾನವನ ಅಂತರಂಗದ ‘ನಿಗೂಢತೆ’ಯ ಶೋಧದಷ್ಟೇ ಮಾನವ ಸಮಾಜದ ಅಂತರಂಗವೂ ಅನೂಹ್ಯವೆಂಬುದನ್ನು ತೇಜಸ್ವಿಯವರ ‘ಚಿದಂಬರ ರಹಸ್ಯ’ ಸಾದಿಸುತ್ತದೆ. ಸಮಾಜದ ಅಂತರಂಗವನ್ನು ಕಲಾತ್ಮಕ ರೂಪದಲ್ಲಿ ಹಿಡಿದಿಡಲೆತ್ನಿಸಿದಾಗ ತೆಳುಪತ್ತೇದಾರಿ ಕಥನದಷ್ಟೇ ವ್ಯರ್ಥವೆಂಬುದನ್ನು ಕೃತಿ ತಿಳಿಸುತ್ತದೆ. ಮೌಢ್ಯ, ಜಾತೀಯ ದಂಗೆ, ಅಸಂಗತ ದಾಂಪತ್ಯ, ಕಚ್ಚೆ ಹರುಕತನ, ಪರಿಸರ ನಾಶ, ಅಂತಾರಾಷ್ಟ್ರೀಯ ಮಾಪಿsಯಾ ಚಟುವಟಿಕೆ, ಕೊಲೆ, ಸುಲಿಗೆಗಳೇ ತಾಣವಾದ ‘ಕೆಸರೂರು’ ಭಾರತೀಯ ಸಮಾಜದ ಅಡ್ಡಕೊಯ್ತದ ಮಾದರಿಯಾಗಿ ಕಾಣುತ್ತದೆ. ಇಷ್ಟೆಲ್ಲಾ ವೈಷಮ್ಯದ ಮಧ್ಯೆಯೂ ಪ್ರಕೃತಿ ಸಹಜ ಮುಗ್ಧ ಪ್ರಾಮಾಣಿಕ ಪ್ರಣಯಿಗಳು ವಿನಾಶದ ಬೆಂಕಿಯಿಂದ ಪಾರಾಗುವ ಆಶಯ ಆಶಾವಾದಿ ನೆಲೆಯದಾಗಿದೆ.
- ವೈಶಾಖ ಮತ್ತು ಕುಸುಮಬಾಲೆ ಕಾದಂಬರಿಗಳು ಸ್ತ್ರೀ ಶೋಷಣೆಯೊಂದಿಗೆ ಹಾಸುಹೊಕ್ಕಾಗಿರುವ ವರ್ಣ-ವರ್ಗ ಸಮಾಜದ ಬೇರುಗಳನ್ನು ಶೋದಿsಸಲೆತ್ನಿಸುತ್ತವೆ. ಎರಡೂ ಕಾದಂಬರಿಗಳಲ್ಲಿ ಲೈಂಗಿಕತೆ ಪ್ರಮುಖ ವಿಷಯವಾಗಿದೆ. ಜಾತಿ ಮತ್ತು ಹೆಣ್ಣಿನ ಪಾವಿತ್ರ್ಯ ಪರಿಕಲ್ಪನೆಗಳು ಒಗ್ಗೂಡಿ ಬ್ರಾಹ್ಮಣ ಜಾತಿಯ ರುಕ್ಮಿಣಿಯನ್ನೂ ದಲಿತ ಲಕ್ಕನನ್ನೂ ಬಲಿತೆಗೆದುಕೊಳ್ಳುವ ಮಾರ್ಮಿಕ ಕಥನ ವೈಶಾಖ ಕಾದಂಬರಿಯಲ್ಲಿದೆ. ಮಾನವ ಅಸ್ತಿತ್ವವೇ ನಿರಾಕೃತಗೊಂಡ ದಲಿತ ಸಮುದಾಯದ ಬದುಕನ್ನು ಹೋರಾಟದ ಬೃಹತ್ ರೂಪಕವಾಗಿ ದೇವನೂರರ ‘ಕುಸುಮಬಾಲೆ’ ಹಿಡಿದಿಟ್ಟಿದೆ. ಕರುಳು ಬಳ್ಳಿ ತೊಡಕುಗಳನ್ನು ಆವರಿಸಿರುವ ಶ್ರದ್ಧೆ-ನಂಬಿಕೆಗಳ ದಟ್ಟ ಲೋಕದೊಳಗೆ ಭೂತ-ವರ್ತಮಾನ-ಭವಿಷ್ಯವೆಂಬ ಕಾಲ ಪರಿಗಣನೆಯಿಲ್ಲ. ವರ್ಣವ್ಯವಸ್ಥೆಯ ಭದ್ರ ಬೇರುಗಳುಳ್ಳ ಮರ ಗಿಡದ ಟೊಂಗೆಯಲ್ಲರಳುವ ಕುಸುಮವು ವರ್ಣಸಂಕರದ ಸಹಜ ಧರ್ಮಕ್ಕೆ ಅದೀನ. ಈ ಸಹಜತೆಯನ್ನು ಹೊಸಕಿಹಾಕಬಲ್ಲ ವ್ಯವಸ್ಥೆಯ ಹಿಂಸಾಗುಣಕ್ಕೆ ಮಾಂತ್ರಿಕ ಶಕ್ತಿಯಿದೆ. ಸಾವಿನೆದುರು ಬದುಕಲೆಳಸುವ ಹೋರಾಟದಲ್ಲಿ ಮೈದುಂಬಿಕೊಳ್ಳದಿದ್ದರೆ ಗತ್ಯಂತರವಿಲ್ಲ. ಕ್ರಾಂತಿಯ ಸೂಚಕವಾದ ರಕ್ತದೊಂದಿಗಿನ ನೆನಪುಗಳೊಂದಿಗೆ ಜೀವಂತ ಸಂಬಂಧವನ್ನು ಸ್ಥಾಪಿಸುತ್ತ ಕಾಯುತ್ತ ಕೂತ ದಲಿತ ಪ್ರಜ್ಞೆಯ ಜಾಗರಣವನ್ನು ‘ಕುಸುಮ ಬಾಲೆ’ ಪ್ರತಿಮಿಸುತ್ತದೆ. ಸಾಂಸ್ಕೃತಿಕ ನೆನಪುಗಳ ಮೂಲದ್ರವ್ಯವನ್ನು ಸಮಕಾಲೀನ ದಲಿತ-ಬಂಡಾಯ ಹೋರಾಟದ ತಾತ್ವಿಕ ಅಂಶವಾಗಿ ಹೇಗೆ ವಿನ್ಯಾಸಗೊಳಿಸಿಕೊಳ್ಳಬಹುದೆಂಬ ಮಹತ್ವದ ಸೂಚನೆ ಈ ಕಾದಂಬರಿಯಲ್ಲಿದೆ.
- ಸಾಮಾಜಿಕ ಶೋಷಣೆಯನ್ನು ಸ್ತ್ರೀ ಕೇಂದ್ರದಿಂದ ನೋಡುತ್ತಾ ವಿಶಿಷ್ಟವಾಗಿ ವ್ಯಾಖ್ಯಾನಿಸುವ ಕೃತಿ - ಮ.ನ.ಜ. ಅವರ ‘ಮಾಗಿ’, ಪುರುಷ ಪ್ರಧಾನ ಕೌಟುಂಬಿಕ ಸಂರಚನೆಯೊಳಗೆ ಸೇರಿಯೂ ಸೇರದ ಮಹಿಳೆಯ ಅತಂತ್ರ ಸ್ಥಿತಿಯನ್ನು ಹಿಡಿದಿಡುತ್ತದೆ. ದಲಿತ ಮಹಿಳೆಯೊಬ್ಬಳ ಶ್ರಮ ಜೀವನದ ಮೌಲ್ಯವನ್ನು ಹೊಸ ಆರ್ಥಿಕ ಪರಿಭಾಷೆಯಲ್ಲಿ ಈ ಕೃತಿ ಕಟ್ಟುತ್ತದೆ.
- ಉತ್ಪಾದನಾ ಸಾಧನವಾದ ಭೂಮಿ ಇಲ್ಲದಿದ್ದರೂ ಕೌಟುಂಬಿಕ ಸಂಬಂಧಗಳ ಆಪ್ತನೆಲೆಯನ್ನೂ ದಲಿತ ಪಾತ್ರಗಳು ಕಳೆದುಕೊಳ್ಳುವ ಪರಿ ಗೀತಾನಾಗಭೂಷಣರ ‘ನೀಲಗಂಗಾ’ದಲ್ಲಿದೆ. ಜಮೀನ್ದಾರೀ ಪದ್ಧತಿಯ ಅಮಾನುಷ ಮುಖವನ್ನು ಬಸವಿ ಸಮಸ್ಯೆಯ ಮೂಲಕ ಕುಂ.ವೀ. ಅವರ ‘ಕಪ್ಪು’ ಪರಿಚಯಿಸುತ್ತದೆ. ಪಿತೃಪ್ರಾಧಾನ್ಯದ ಸಂಕೋಲೆಗಳ ಅರಮನೆಯಲ್ಲಿ ಹೆಣ್ಣೊಬ್ಬಳ ಜೀವಚೈತನ್ಯ ಮುರುಟಿಹೋಗುವುದನ್ನು ಚಂದ್ರಶೇಖರ ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆ’ ಹೃದಯಂಗಮವಾಗಿ ಚಿತ್ರಿಸುತ್ತದೆ.
- ಸಿಂಗಾರೆವ್ವನಂತೆಯೇ ಬರಗೂರರ ‘ಬೆಂಕಿ’ಯ ನಾಯಿಕೆ ಲಕ್ಷ್ಮಿ ಈಡೇರಿಸಿಕೊಳ್ಳ ಲಾಗದ ದೈಹಿಕ ಕಾಮನೆಗಳಿಂದ ತಪ್ತಳಾದವಳು. ದಾಂಪತ್ಯದ ಎಲ್ಲೆಕಟ್ಟನ್ನು ಮೀರುವಲ್ಲಿ ದ್ವಂದ್ವಕ್ಕೊಳಗಾದರೂ ಹೊಸಬಾಳಿನ ಸಂಕಲ್ಪವನ್ನು ಹೊತ್ತ ಪಾತ್ರವಾಗಿ ಲಕ್ಷ್ಮಿ ಮೂಡಿ ಬಂದಿದ್ದಾಳೆ. ಸ್ತ್ರೀವಾದಿ ತಾತ್ವಿಕತೆಯ ಹಿನ್ನೆಲೆಯಲ್ಲಿ ಸ್ತ್ರೀ ಪುರುಷ ಸಂಬಂಧಗಳನ್ನು ವಿಬಿsನ್ನವಾಗಿ ನಿರ್ವಚಿಸಿಕೊಳ್ಳುವ ಯತ್ನ ವೀಣಾ ಶಾಂತೇಶ್ವರರ ‘ಮಹಿಳೆ’ ಶೋಷಣೆ ಬಂಡಾಯ ಇತ್ಯಾದಿಯಲ್ಲಿದೆ. ತನ್ನ ಪರಿಚಯದ ಮಹಿಳೆಯರ ಮೇಲಿನ ಶೋಷಣೆಯನ್ನು ಅರ್ಥಮಾಡಿಕೊಳ್ಳುತ್ತಲೇ ತಾನೂ ಅವರ ಸಾಲಿನ ಪಾತ್ರವಾಗಿಬಿಡುವ ವಿಶಿಷ್ಟತೆ ಶಶಿಯದು. ಬೌದ್ಧಿಕ ನೆಲೆಯ ಸ್ತ್ರೀವಾದಿ ತಾತ್ವಿಕತೆಗೆ ಕ್ರಿಯಾಶೀಲ ಆಯಾಮವಿಲ್ಲದಿದ್ದರೆ ಏನಾಗುತ್ತದೆಂಬುದನ್ನು ಈ ಕೃತಿ ಪ್ರಕಟಿಸುತ್ತದೆ. ಬಳೆಪ್ರಿಯ ಮಹಿಳೆಯರು ಹಾಗೂ ಬಳೆಮುರುಕ ಅತ್ಯಾಚಾರಿ ಗಂಡಸರನ್ನೊಳಗೊಂಡ ಈ ಸಮಾಜದಲ್ಲಿ ಮಹಿಳೆಯ ನೆಲೆ-ಬೆಲೆಗಳೇನೆಂಬುದರ ವಿವೇಚನೆ ಬಿ.ಟಿ.ಲಲಿತಾನಾಯಕರ ‘ನೆಲೆ-ಬೆಲೆ’ ಕಾದಂಬರಿಯಲ್ಲಿದೆ. ಆದರೆ ಈ ದಶಕದಲ್ಲಿಯೇ ಬಂದ ಎಂ.ಕೆ.ಇಂದಿರಾ ಅವರ ‘ತಾಳಿದವರು’ ತಾಳಿಕೆಯ ನೀತಿಯನ್ನೇ ಬೋದಿಸಲೆತ್ನಿಸುವ ಕೃತಿಯಾಗಿದೆ.
- ನಗರೀಕರಣದ ಸಮಸ್ಯೆಯನ್ನು ಯಶವಂತ ಚಿತ್ತಾಲರ ಶಿಕಾರಿ ಸಮರ್ಥವಾಗಿ ಮನಗಾಣಿಸುತ್ತದೆ (ಪರಿಸರದ ಕ್ರೌರ್ಯಕ್ಕೆ ಉಪಾಯವೆಂಬಂತೆ ‘ಮಣ್ಣಿಗೆ ಮರಳುವ’ ಆಶಯ ಕಾರಂತರ ‘ಗೆದ್ದ ದೊಡ್ಡಸ್ತಿಕೆ’ಯಲ್ಲಿದೆ). ಇಂಥ ರಮ್ಯ ಕಲ್ಪನೆಯಾಚೆ, ಗತಬದುಕಿನ ಮಣ್ಣಿನ ಸೆಳೆತವನ್ನು ನಿಷುವಿರ ಪರೀಕ್ಷೆಗೆ ಚಿತ್ತಾಲರು ಒಡ್ಡುತ್ತಾರೆ. ಗತದ ಬೇರುಗಳ ಮೂಲಕ ಅಸ್ತಿತ್ವವನ್ನು ಕಟ್ಟಿಕೊಳ್ಳುವ ಯತ್ನವನ್ನು ಹೊಸಕಿಹಾಕಬಲ್ಲ ವ್ಯಾವಹಾರಿಕ ಸ್ಪರ್ಧಾ ಜಗತ್ತಿನ ಕ್ರೌರ್ಯವನ್ನು ‘ಶಿಕಾರಿ’ ನಿಚ್ಚಳವಾಗಿ ತೋರಿಸಲೆತ್ನಿಸುತ್ತದೆ.
- ಯಶವಂತ ಚಿತ್ತಾಲರ ಶಿಕಾರಿ ಒಂದು ಮಹತ್ವದ ಕಾದಂಬರಿ. ಬೇಟೆಗೆ ಗುರಿಯಾಗುವವನಲ್ಲಿ ಇನ್ನಿಲ್ಲದ ಜೀವನ ಅನುಭವ ಉದ್ದೀಪಿಸುವ ಕಲಾತ್ಮಕತೆ ಶಿಕಾರಿಗಿದೆ. ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳುವುದಕ್ಕೆ ಅವಕಾಶವನ್ನೇ ನೀಡದಂಥ ಕತ್ತಲಮರೆಯ ತರ್ಕಾತೀತ ಕ್ರೌರ್ಯವನ್ನು ಚಿತ್ತಾಲರ ‘ಛೇದ’ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಕೊಲೆ ಸುಲಿಗೆಗಳ ಕ್ರೂರಜಗತ್ತಿನಲ್ಲಿ ಕೋಯಿ ಬಚಾವ್ ಎಂಬ ಕೂಗು ಪ್ರತಿಧ್ವನಿಸುತ್ತ ಮಾನವತ್ವದ ಛೇದವನ್ನು ಅಬಿನಯಿಸುತ್ತದೆ. ‘ಪುರುಷೋತ್ತಮ’ದಲ್ಲಿಯೂ (1990) ಕ್ರೌರ್ಯವನ್ನೇ ಕೇಂದ್ರ ವಸ್ತುವಾಗಿ ಚಿತ್ತಾಲರು ನಿರೂಪಿಸಿದ್ದಾರೆ. ಅಸ್ತಿತ್ವದ ಭದ್ರನೆಲೆ, ವಿಸ್ತಾರವಾಗಬಹುದಾದ ‘ಮನೆ’ಯು ಅತಿಕ್ರಮಣಕ್ಕೆ ಗುರಿಯಾಗುವ ಅಪಾಯಕಾರಿ ಸ್ಥಿತಿಯಲ್ಲಿಯೇ ಪುರುಷೋತ್ತಮತ್ವದ ಪುರ್ಣ ಪ್ರಕಟನೆ ಸಾಧ್ಯವೆಂಬ ಧ್ವನಿ ಇಲ್ಲಿದೆ. 1990ರಲ್ಲಿ ಬಂದ ಭೈರಪ್ಪನವರ ‘ಅಂಚು’ ಕೂಡ ಹತಾಶಬದುಕಿನ ಪರಿಣಾಮವಾದ ಮಾನಸಿಕ ದೌರ್ಬಲ್ಯ ವಿಕೃತಿಯಿಂದ ಜೀವಪರತೆಯಲ್ಲಿ ನೆಲೆಗೊಳ್ಳುವ ಹೆಣ್ಣಿನ ಕಥನ. ಕುಟುಂಬ ಸಂಬಂಧಗಳ ಗಟ್ಟಿನೆಲೆಗಳು ಕರಗಿ ವ್ಯಕ್ತಿಗಳು ಅತಂತ್ರಗೊಳ್ಳುವ ಪರಿಯನ್ನು 1983ರಲ್ಲಿ ಬಂದ ಭೈರಪ್ಪನವರ ‘ನೆಲೆ’ ವಿವರಿಸಲೆತ್ನಿಸುತ್ತದೆ. ಕಾಮ ಮತ್ತು ಸಾವಿನ ತೀವ್ರಾನುಭವಗಳು ವ್ಯಕ್ತಿ ನೆಲೆಯನ್ನು ಪ್ರಭಾವಗೊಳಿಸುವ ಬಗೆಯನ್ನು ಇಲ್ಲಿ ಕಾಣಿಸಲಾಗಿದೆ.
- ವ್ಯಾಸರಾಯ ಬಲ್ಲಾಳರ ‘ಬಂಡಾಯ’ (1984) ಹಾಗೂ ಶಂಕರ ಮೊಕಾಶಿ ಪುಣೇಕರರ ‘ಅವಧೇಶ್ವರಿ’ (1987) ಕಾದಂಬರಿಗಳು ಸಮೂಹ ವ್ಯಕ್ತಿ ಪ್ರತಿಭಟನೆಯ ತಾತ್ವಿಕತೆಯನ್ನು ಚಾರಿತ್ರಿಕ ನೆಲೆಯಲ್ಲಿ ವ್ಯಾಖ್ಯಾನಿಸಲೆತ್ನಿಸುತ್ತವೆ. ‘ಬಂಡಾಯ’ದ ವಸ್ತು ಸಮಕಾಲೀನ ಚಾರಿತ್ರಿಕತೆಯಾದರೆ, ‘ಅವಧೇಶ್ವರಿ’ಯ ವಸ್ತು ವೇದಕಾಲ ಸ್ಥಿತ್ಯಂತರ ಗೊಳ್ಳುತ್ತಿರುವ ಚಾರಿತ್ರಿಕತೆ. ವರ್ಗ ಪ್ರಜ್ಞೆಯ ವಿಕಾಸದ ಹಂತದಲ್ಲಿ ಪಲ್ಲಟಗೊಳ್ಳುವ ಸಾಮಾಜಿಕ ಸಂಬಂಧಗಳನ್ನು ‘ಬಂಡಾಯ’ ಅನ್ವೇಷಿಸುತ್ತದೆ. ವರ್ಣ ಪ್ರಜ್ಞೆಯ ಸಂಹಿತೆಯೊಳಗಿನ ಸಡಿಲಿಕೆಯುಂಟುಮಾಡುವ ರಾಜಕೀಯ ಸಂಘರ್ಷವನ್ನು ‘ಅವಧೇಶ್ವರಿ’ ಪುನಾರಚಿಸುತ್ತದೆ. ಕುಟುಂಬದೊಳಗಿನ ಸಿದ್ಧಪಾತ್ರದಿಂದಾಚೆ ತುಡಿವ ಸ್ತ್ರೀಪಾತ್ರಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಎರಡೂ ಕಾದಂಬರಿಗಳು ಸಾಮಾಜಿಕ ಬದಲಾವಣೆಯ ಸ್ವರೂಪ-ಸಾಧ್ಯತೆಗಳ ದರ್ಶನವನ್ನು ಕಟ್ಟಿಕೊಡುತ್ತವೆ. ಮಹಿಳೆಗೆ ವಿದಿಸಿರುವ ಲೈಂಗಿಕ ಸಂಹಿತೆಯನ್ನು ಅನುಸರಿಸುವಾಗ ಎದುರಾಗಬಹುದಾದ ರಾಜಕೀಯ ತಾತ್ವಿಕತೆಯನ್ನು ಈ ಕಾದಂಬರಿಗಳು ಹಿಡಿದಿಡುತ್ತವೆ.
- ಸಾಮಾಜಿಕ ಕ್ರಾಂತಿಯಲ್ಲಿನ ಮಹಿಳಾ ಸಹಭಾಗಿತ್ವವನ್ನು ಅನುಪಮಾ ನಿರಂಜನರ ‘ಘೋಷ’ (1985) ಹಾಗೂ ‘ಮುಕ್ತಿಚಿತ್ರ’ (1988) ಕಾದಂಬರಿಗಳು ಪ್ರಮುಖ ವಸ್ತುವನ್ನಾಗಿಸಿಕೊಂಡಿವೆ. ಅಬಲೆ, ಅಸಹಾಯಕಳೆಂದು ಕರೆಸಿಕೊಳ್ಳುತ್ತಿದ್ದ ಮಹಿಳೆ ಹೊಸ ಪ್ರಜ್ಞೆಯಿಂದ ಜಾಗೃತಳಾಗಿ ಶೋಷಣೆಯ ವಿರುದ್ಧ ಬಂಡೇಳುವ ಕಥನ ಈ ಕಾದಂಬರಿಗಳದು.
- ಕಾ.ತ.ಚಿಕ್ಕಣ್ಣನವರ ‘ಮುಂಜಾವು’ (1989) ಹಾಗೂ ಅರವಿಂದ ಮಾಲಗತ್ತಿಯವರ ‘ಕಾರ್ಯ’ (1989) ಕಾದಂಬರಿಗಳು ಶೋಷಿತರ ಬದುಕಿನ ಮೂಲರೂಪೀ ದುರಂತವನ್ನು ಚಿತ್ರಿಸುತ್ತವೆ. ದಲಿತರ, ಶೋಷಿತರ ಜೀವನ ಪ್ರೀತಿ, ಮುಗ್ಧತೆ, ಜಾಣತನ, ಸಹನೆ, ತಾಳ್ಮೆಗಳ ನಿರೂಪಣೆಗೆ ಹೊಸ ಆಯಾಮವನ್ನು ದಲಿತ ಬಂಡಾಯ ಸಂಘಟನೆ ಒದಗಿಸಿತು. ಮುಂಜಾವಿನ ತಿಮ್ಮಾಜಿಯ ದಂಗೆ ಹಾಗೂ ‘ಕಾರ್ಯ’ದ ದಲಿತ ಸಮೂಹ ಕೈಗೊಳ್ಳಲೆತ್ನಿಸುವ ನ್ಯಾಯ ತೀರ್ಮಾನಗಳು ಸ್ಥಾಪಿತ ಸಂಸ್ಕೃತಿಯ ಸಂರಚನೆಯನ್ನೇ ಬುಡಮೇಲಾಗಿಸಬಲ್ಲಷ್ಟು ಸಶಕ್ತವಾಗಿವೆ. ಆದರೆ ತಮ್ಮಲ್ಲೇಳುವ ಪ್ರತಿರೋಧಕ ಅನುಭವವನ್ನು ಬೌದ್ಧಿಕ ನೆಲೆಯಲ್ಲಿ ಜ್ಞಾನರೂಪದ ತತ್ವವನ್ನಾಗಿಸಿಕೊಳ್ಳಲಾರದ ದುರಂತವನ್ನು ‘ಕಾರ್ಯ’ ಸೆರೆ ಹಿಡಿಯುತ್ತದೆ. ಹುಟ್ಟು ಸಾವುಗಳ ವರ್ತುಲಕ್ಕೆ ಸಂಬಂದಿsಸಿದ ಶ್ರದ್ಧೆ ನಂಬಿಕೆಗಳ ಮೂಲವಾದ ಭಾವದ್ರವ್ಯವನ್ನು ಪುರೋಹಿತಶಾಹಿ, ಊಳಿಗಮಾನ್ಯ ಪ್ರಬಲರು ಬಳಸಿಕೊಳ್ಳುವಲ್ಲಿ ಶೋಷಣೆಯ ಬೇರುಗಳಿರುವುದನ್ನು ಕಾರ್ಯ ಕಾದಂಬರಿ ಗುರುತಿಸುತ್ತದೆ.
- ಮುಸ್ಲಿಂ ಸಮುದಾಯದ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ, ಮೌಲ್ಯಗಳ ವಸ್ತುನಿಷ್ಠ ವಿಶ್ಲೇಷಣೆಯನ್ನು ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ, ಸಹನಾ, ವಜ್ರಗಳು ಕಾದಂಬರಿಗಳು ಮಾಡಿವೆ. ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯಡಿಯಲ್ಲಿ ನಲುಗಿಹೋದ ಮುಸ್ಲಿಂ ಮಹಿಳೆಯರ ಬವಣೆಯ ಕಥನ ಬಂಡಾಯದ ಆಶಯಕ್ಕೆ ಪೂರಕವಾಗಿದೆ.
- ಒಟ್ಟಿನಲ್ಲಿ 1980ರ ದಶಕದ ಕಾದಂಬರಿಗಳು ವ್ಯಕ್ತಿ-ಸಮೂಹ ಸಾಧ್ಯತೆಗಳ ವಿಸ್ತಾರದ ಅರಿವನ್ನು ಹೆಚ್ಚಿಸಿದವು. ಈ ದಶಕದ ಪ್ರಾರಂಭದಲ್ಲಿ ಬಂದ ಶಾಂತಿನಾಥ ದೇಸಾಯಿ ಅವರ ‘ಬೀಜ’ ಕಾದಂಬರಿಯ ತಾತ್ವಿಕತೆಯಲ್ಲಿ ಇದು ಸ್ಪಷ್ಟವಾಗುತ್ತದೆ. ಬೀಜ, ಏಕಕಾಲಕ್ಕೆ ಬಂಧಿತ ಸ್ಥಿತಿಯನ್ನೂ ಬಿಡುಗಡೆಯ ಸಾಧ್ಯತೆಯನ್ನೂ ತನ್ನೊಳಗೆ ಅದ್ಭುತವಾಗಿ ಅಡಗಿಸಿಕೊಂಡ ರಹಸ್ಯ ಬಂಧನ ಒಡೆದು ಬೆಳೆದು ನಿಲ್ಲುವುದು ಮುಕ್ತಿ. ಬೀಜದ ಮುಕ್ತಿ ಸಂಗತಿ ಜಾಗೃತಿಗೆ ಆತ್ಮರತಿಯ ನವ್ಯನಾಯಕತ್ವದಿಂದ ಹೆಚ್ಚು ಸಮಾಜಮುಖಿಯಾಗಿ ಹೊರಳಿಕೊಳ್ಳುವ ‘ಬೀಜ’ದ ನಾಯಕ ಶ್ರೇಯಾಂಸ-ಸ್ಥಿತ್ಯಂತರದ ಸೂಕ್ತ ಪ್ರತಿಮೆಯಾಗಿದ್ದಾನೆ.
- ದಲಿತರ ವಿಚಾರ-ಭಾವದ್ರವ್ಯದ ಹರಣವನ್ನು ಕುರಿತ ‘ಕಾರ್ಯ’ದ ಕಥನದ ಮುಂದುವರಿಕೆಯಾಗಿ 1992ರಲ್ಲಿ ಬಂದ ಮುಳ್ಳೂರು ನಾಗರಾಜ್ ಅವರ ‘ಮರಣ ಮಂಡಲ ಮಧ್ಯದೊಳಗೆ’ ಕಂಡುಬರುತ್ತದೆ. ಶೋಷಣೆಯ ಮೂಲವೇ ಮಿದುಳ ಹರಣವೆಂಬುದನ್ನು ಜಾನಪದೀಯ ಶೈಲಿಯಲ್ಲಿ ಈ ಕೃತಿ ನಿರೂಪಿಸುತ್ತದೆ. ಈ ಕೃತಿಯಲ್ಲಿ ಶುದ್ಧತೆ-ಅಶುದ್ಧತೆಯ ಪರಿಕಲ್ಪನೆಯನ್ನಾಧರಿಸಿದ ವರ್ಣಾಶ್ರಮ ವ್ಯವಸ್ಥೆಯ ಐತಿಹಾಸಿಕ ಪ್ರಕ್ರಿಯೆಯನ್ನು ಆಧುನಿಕ ಪೌರಾಣಿಕ ನೆಲೆಯಲ್ಲಿ ಹಿಡಿದಿಡಲಾಗಿದೆ. ವರ್ಣಸಂಕರದಿಂದ ಮೊಳೆಯುವ ಸ್ತ್ರೀ-ಪುರುಷ ಸಂಬಂಧಗಳು ಪ್ರೇಮ-ದ್ವೇಷ-ಅಸೂಯೆ-ಪ್ರತೀಕಾರ-ಪರಿವರ್ತನೆಗಳ ಸುಳಿಯಲ್ಲಿ ಸಿಲುಕಿಕೊಳ್ಳುವುದನ್ನು ಕಾದಂಬರಿ ಚಿತ್ರಿಸುತ್ತದೆ. ಕತ್ತಲ ರಾಜ್ಯದ ಸಾಂಕೇತಿಕತೆಯನ್ನು ಪ್ರಮುಖ ತಾತ್ವಿಕ ಪ್ರಶ್ನೆಯಾಗಿ ಬೆಳೆಸುವ ಪಾತ್ರವಾಗಿ ಬಸರಾಜು ಇದ್ದಾನೆ. ಆದರೆ ಸಂಘಟನೆಯು ಈ ತಾತ್ವಿಕತೆಯ ಅರಿವಿಲ್ಲದ ವ್ಯಕ್ತಿಗಳಲ್ಲಿರುವುದು ನೋವಿನ ಸಂಗತಿ. ಸಮಕಾಲೀನ ದಲಿತ ಬಂಡಾಯ ಸಂಘಟನೆಗಳ ಕುರಿತಾದ ಲೇಖಕರ ನಿಲುವು ಇದಾಗಿರಬಹುದೆನಿಸುತ್ತದೆ.
- ಕಾರಂತ, ಕುವೆಂಪುರವರ ಕಾಲದ ಸಹ್ಯಾದ್ರಿಯ ಕಾಡುಗಳಿಗೂ ಈ ಹೊತ್ತಿನ ಪರಿಸ್ಥಿತಿಗೂ ಇರುವ ಅಂತರವನ್ನು ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’ ತೋರ್ಪಡಿಸುತ್ತದೆ. ಈ ಹೊತ್ತು ಕಾಳದಂಧೆಗಳ ತವರುಮನೆಯಾಗಿರುವ ಕಾಡು ರಮ್ಯ ಕಲ್ಪನೆಯ ತಾಣವಾಗಿಲ್ಲವೆಂಬ ವಾಸ್ತವವನ್ನು ಈ ಕಾದಂಬರಿ ಚಿತ್ರಿಸುತ್ತದೆ. ಅತ್ಯಂತ ಅಭದ್ರ ಸ್ಥಿತಿಯ ಅಂಚಿಗೆ ಸಾಮಾನ್ಯ ನಾಗರೀಕರನ್ನು ತಂದಿಟ್ಟ ಭ್ರಷ್ಟ ವ್ಯವಸ್ಥೆಯ ವಿಷವರ್ತುಲವನ್ನು ಈ ಕಾದಂಬರಿ ಪರಿಚಯಿಸುತ್ತದೆ. ಕೇಶವ ಮಳಗಿಯವರ ಕುಂಕುಮ ಭೂಮಿ-ಭೂಮಿಯೊಂದಿಗಿನ ಮಾನವ ಸಂಬಂಧಗಳ ಭಾವನಾತ್ಮಕ ಹಾಗೂ ಉಪಭೋಗಾತ್ಮಕ ನೆಲೆಗಳನ್ನು ಚರ್ಚಿಸುವ ಕೃತಿ. ಅಬಿವೃದ್ಧಿ ಸಿದ್ಧಾಂತಗಳ ರಾಜಕಾರಣವು ಪರಿಸರ ನಾಶದೊಂದಿಗೆ ಆ ಪರಿಸರವನ್ನಾಶ್ರಯಿಸಿದ್ದ ಶ್ರಮಜೀವಿಗಳನ್ನು ಹೊಸಕಿ ಹಾಕುವುದನ್ನು ನಾ.ಡಿಸೋಜರ ‘ಒಡ್ಡು’ ಸರಳವಾಗಿ ನಿರೂಪಿಸುತ್ತದೆ. ಪರಿಸರ ಅಧ್ಯಯನ ಆಯಾಮದ ಮೂಲಕ ಸ್ಥಳೀಯ ನೆಲೆಯ ಶೋಷಿತರ ಕಥನಗಳು ಜಾಗತಿಕ ನೆಲೆಗೆ ವಿಸ್ತಾರಗೊಳ್ಳುವುದನ್ನು 80ರ ದಶಕದ ಉತ್ತರಾರ್ಧದ ಕಾದಂಬರಿಗಳು ಸೂಚಿಸುತ್ತವೆ.
- 1990ರಲ್ಲಿ ಬಂದ ರೇಖಾ ಕಾಖಂಡಕಿಯವರ ‘ಹೊಸ ಹೆಜ್ಜೆ’ ಲಂಬಾಣಿ ಸಮುದಾಯದ ಸಾಂಸ್ಕೃತಿಕ ಬದುಕಿನ ವಿವರಗಳ ಒಡಲಿನಿಂದಲೇ ಬಂಡಾಯದ ಆಶಯವನ್ನು ಸ್ತ್ರೀಕೇಂದ್ರಿತ ನೆಲೆಯಲ್ಲಿ ಪ್ರಕಟಿಸುವ ಕೃತಿ. ಪುರುಷಕೇಂದ್ರದ ಸುತ್ತ ಕಟ್ಟಿಕೊಂಡ ತನ್ನ ಮಾನಸಿಕ ಭೌತಿಕ ಜೀವನದಿಂದ ಆಚೆ ಬರುವ ಕ್ರಿಯಾಶೀಲ ತಾತ್ವಿಕತೆ ಎಚ್.ವಿ.ಸಾವಿತ್ರಮ್ಮ ಅವರ ‘ವಿಮುಕ್ತಿ’ಯಲ್ಲಿದೆ. ಸಾರ್ವತ್ರಿಕ ಜೀವನ ಸಂಹಿತೆಯಡಿ ಇಲ್ಲವಾಗುವ ರಾಮನ ಬದುಕೂ ಅದನ್ನವಲಂಬಿಸಿದ ಸೀತೆಯ ಸಂಕಷ್ಟಗಳನ್ನು ಲೇಖಕಿ ದಾಖಲಿಸುತ್ತಾರೆ. ಆ ಮೂಲಕ ಪುರುಷ ಪ್ರಧಾನವ್ಯವಸ್ಥೆಯೊಂದಿಗಿನ ಭಾವನಾತ್ಮಕ ಸಂಬಂಧಗಳನ್ನು ಮೀರಲೆಳಸುವ ಸೀತೆಯ ಮೂಲಕ ಸ್ತ್ರೀಸ್ವಾತಂತ್ರ್ಯದ ದರ್ಶನವನ್ನು ‘ವಿಮುಕ್ತಿ’ ನೀಡಿದೆ. ಜ್ಞಾನವನ್ನೇ ಅದಿಕಾರವಾಗಿಸಿಕೊಂಡ ಯಜಮಾನ ಸಂಸ್ಕೃತಿಯ ದಬ್ಬಾಳಿಕೆಗೆ ಗುರಿಯಾದವರ ಬದುಕಿನ ಸತ್ವವನ್ನು (1989) ಸುನಂದಾ ಬೆಳಗಾಂವಕರರ ‘ನಾಸು’ ಕಳಕಳಿಯಿಂದ ಸ್ಥಾಪಿಸುತ್ತದೆ. ಸ್ತ್ರೀ ಗುಣಗಳೆಂದು ಪರಿಭಾವಿತವಾಗುವ ಅಂತಃಕರಣ, ಮೃದುತ್ವ, ಸಹನೆ, ಭಾವನಾ ತೀವ್ರತೆಗಳನ್ನು ಪುರುಷ ಚೇತನ ಅಂತರ್ಗತಮಾಡಿಕೊಳ್ಳಬೇಕಾದ ಜರೂರನ್ನು ‘ನಾಸು’ ಪಾತ್ರದ ಮೂಲಕ ಈ ಕೃತಿ ಮನಗಾಣಿಸುತ್ತದೆ. ಸಾಂಸ್ಕೃತಿಕ ಸ್ತ್ರೀವಾದೀ ಚಿಂತನೆಯನ್ನು ಪುರುಷಪಾತ್ರ ಕೇಂದ್ರದಿಂದ ಅಬಿವ್ಯಕ್ತಿಸುವ ಕಾದಂಬರಿ ಇದಾಗಿದೆ.
- ಶೋಷಣೆಯ ಕಥನವನ್ನು ಮಾನವಶಾಸ್ತ್ರೀಯ ಸಂಶೋಧನ ಕುತೂಹಲದಿಂದ ಹಿಡಿದಿಡಲಾಗದೆಂಬುದು 1990ರ ದಶಕಗಳ ಕಾದಂಬರಿಗಳ ಮೂಲಕ ಇನ್ನಷ್ಟು ಸ್ಫುಟವಾಗುತ್ತದೆ. ಶಿವರಾಮ ಕಾರಂತರ ಅಥೆಂಟಿಸಿಟಿಗೂ 1990ರಿಂದೀಚಿಗಿನ ಸೃಜನಶೀಲತೆಯ ಅಥೆಂಟಿಸಿಟಿಗೂ ಗುಣಾತ್ಮಕ ವ್ಯತ್ಯಾಸ ಕಂಡುಬರುತ್ತದೆ. ಸಾಹಿತ್ಯಕ ಸೃಜನಶೀಲತೆ ಇನ್ನಿಲ್ಲದಂತೆ ಸಾಮಾಜಿಕ ಬದ್ಧತೆಯ ಪ್ರಶ್ನೆಯನ್ನು ಮುಖಾಮುಖಿ ಯಾಗಿಸಿಕೊಂಡ ಸಂದರ್ಭ ಇದಾಗಿದೆ.
- ಸ್ವಂತ ಬದುಕಿನ ರಕ್ತ ಸಂಬಂಧಗಳ ಶೋಧದ ಮೂಲಕ ವರ್ಣಸಂಕರದ ಸಾಮಾಜಿಕ ಸೂಕ್ಷ್ಮಗಳನ್ನು ಅಧ್ಯಯನ ಮಾಡುವ ಕೇಂದ್ರ ಪಾತ್ರ - ‘ಮೂಲಮುಖಿ’ಯ ಚಾರುಮತಿ. 1991ರಲ್ಲಿ ಹೊರಬಂದ ಈ ಕಾದಂಬರಿಯಲ್ಲಿ ಅನುಪಮಾ ನಿರಂಜನರು ಮಹಿಳಾ ಹೋರಾಟಗಳ ಮೂಲದ್ರವ್ಯವಾಗಿ ತಾತ್ವಿಕತೆಯೊಂದಿಗೆ ಕ್ರಿಯಾಶಾಲಿ ಜೀವನಾನುಭವವು ಅತ್ಯಗತ್ಯವೆಂದು ಸ್ಥಾಪಿಸುತ್ತಾರೆ. ಗ್ರಾಮ್ಯ ಬದುಕಿನ ಮುಗ್ಧತೆ, ಒಳಸಂಚುಗಳ ಸುಳಿಗಳು, ಔದಾರ್ಯ, ಕ್ಷುದ್ರತನಗಳ ಪ್ರತ್ಯಕ್ಷ ನುಭವದಲ್ಲಿಯೇ ಸಂಶೋಧನೆಗೆ ಮಾನವೀಯ ಆಯಾಮ, ಅದಿಕೃತತೆ ಪ್ರಾಪ್ತವಾಗಬಲ್ಲುದೆಂಬುದನ್ನು ಈ ಕೃತಿ ಸೂಚಿಸುತ್ತದೆ. ಡಿ.ಎಸ್.ನಂದಾರಿಂದ ಪುರ್ಣಗೊಂಡ ಅನುಪಮಾರ ‘ದಿಟ್ಟೆ’, ಸ್ವಂತ ನಿರ್ಧಾರಗಳ ಮೂಲಕವೇ ವೈಯಕ್ತಿಕವು ಹಾಗೂ ರಾಜಕೀಯ ವ್ಯಕ್ತಿತ್ವ ಉಳಿಸಿಕೊಂಡ ಅಬ್ಬಕ್ಕ ರಾಣಿಯ ದಿಟ್ಟತನವನ್ನು ಕೀರ್ತಿಸುತ್ತದೆ.
- ಸೃಷ್ಟಿಯನ್ನು ಸ್ತ್ರೀತತ್ವವಾಗಿ ಅರ್ಥೈಸುವ ಪುರುಷ ಸೌಂದರ್ಯ ಮೀಮಾಂಸೆಯನ್ನು ಪುನರ್ವ್ಯಾಖ್ಯಾನಿಸುವ ನೆಲೆ ಸುನಂದಾ ಬೆಳಗಾಂವಕರ ಅವರ ‘ಝವಾದಿ’. ಸ್ವಾಹಿಲಿ ಭಾಷೆಯಲ್ಲಿ ‘ಕಾಣಿಕೆ’ ಎಂಬ ಅರ್ಥವುಳ್ಳ ಪದ ‘ಝವಾದಿ’. ಪ್ರಕೃತಿ ಹಾಗೂ ಸ್ತ್ರೀಯಲ್ಲಿನ ಸಂಗೋಪನಾ ಸತ್ವವನ್ನು ಕಾಣಿಕೆಯ ಭಾವದಲ್ಲಿ ಸ್ವೀಕರಿಸಿದಾಗ ಮಾತ್ರವೇ ಪುರುಷ ಅಹಂಕಾರ ಕರಗಿ ನಿಜಮಾನವತ್ವ ಸಾಧ್ಯವಾಗುತ್ತದೆ. ಅಂತರ್ದೃಷ್ಟಿ ಮೊಳೆಯುವ ತನಕ ಹೆಣ್ಣಿನ ಶೋಷಣೆ ಇರತಕ್ಕದ್ದೇ ಎಂಬ ನಿಲುವು ಈ ಕೃತಿಯದು.
- ಕಥನದ ಸಾಂಪ್ರದಾಯಿಕ ಕ್ರಮಗಳಿಂದ ಬಿಡಿಸಿಕೊಂಡ ಸವಿತಾ ನಾಗಭೂಷಣರ ‘ಸ್ತ್ರೀಲೋಕ’ ಮಹಿಳಾ ಸಂಸ್ಕೃತಿಯ ವಿನೂತನ ಅಬಿವ್ಯಕ್ತಿಯಾಗಿದೆ. ಮಹಿಳೆಯರಿಬ್ಬರ ಸಂಭಾಷಣೆಯ ಘಟಕಗಳ ಮೂಲಕ ನಿತ್ಯ ದೈನಿಕವನ್ನು ವೈವಿಧ್ಯಮಯ ಗ್ರಹಿಕೆಗಳ ನೆಲೆಯಲ್ಲಿ ಈ ಕಾದಂಬರಿ ಸೃಷ್ಟಿಸುತ್ತದೆ. ಎಲ್ಲವನ್ನೂ ತಾತ್ವೀಕರಿಸುವ ಬೌದ್ಧಿಕತೆಯ ಅಹಂಕಾರಕ್ಕೆ ಉತ್ತರವೆಂಬಂತೆ ಸ್ತ್ರೀಲೋಕವನ್ನು ಈ ಕೃತಿ ಪುನರ್ವ್ಯಾಖ್ಯಾನಿಸುತ್ತದೆ.
- 80 ಹಾಗೂ 90ರ ದಶಕಗಳ ದಲಿತ ಬಂಡಾಯ ಕಥಾಸಾಹಿತ್ಯ ಈಗಾಗಲೇ ಸಿದ್ಧಗೊಂಡಿದ್ದ ತಾತ್ವಿಕತೆಯ ಒಳಶೋಧವನ್ನು ಸೂಕ್ಷ್ಮನೆಲೆಗೆ ವಿಸ್ತರಿಸಲೆತ್ನಿಸಿತು. ಹಾಗಾಗಿ, ಶೋಷಣೆಯ ಕಥನವನ್ನು ಸಮಕಾಲೀನ ಹಾಗೂ ಪುರಾತನ ನೆಲೆಗಳೆರಡರಲ್ಲೂ ಏಕಕಾಲಕ್ಕೆ ನಿರೂಪಿಸುವಂಥ ವಿನೂತನ ತಂತ್ರವನ್ನು ಬಳಸಿಕೊಳ್ಳಲಾಯ್ತು. ಆ ಮೂಲಕ ಆಚರಣಾತ್ಮಕ ಭಾವದ್ರವ್ಯಕ್ಕೆ ವೈಚಾರಿಕ, ಚಾರಿತ್ರಿಕ ವೇದಿಕೆಯನ್ನು ಕಲ್ಪಿಸಲಾಯಿತು. ಹಾಗೆಯೇ ಸಮಕಾಲೀನ ಸಮಾಜದ ವಾಸ್ತವದಲ್ಲಿನ ಹೋರಾಟಕ್ಕೆ ಭದ್ರವಾದ ಸಾಂಸ್ಕೃತಿಕ ಭಾವಕೋಶ ನಿರ್ಮಾಣಗೊಂಡಿತು.
- ಸ್ವಾತಂತ್ರ್ಯೋತ್ತರ ಭಾರತೀಯ ಸಾಮಾಜಿಕ ಸಂದರ್ಭದ ಸಂಚಲನಗಳನ್ನು ಶೋಷಿತರ ನೆಲೆಯಿಂದ ಹಿಡಿದಿಡುವ ಕಾದಂಬರಿಗಳು ಸಾಕಷ್ಟು ಬಂದಿವೆ. ಭೂಮಿ ಮೇಲಿನ ಹಕ್ಕು, ವಿದ್ಯೆ ಹಾಗೂ ಉದ್ಯೋಗಾವಕಾಶಗಳ ಬೇಡಿಕೆ, ಸ್ವಾಬಿಮಾನ ಗಳಿಕೆ, ಸಾಂಸ್ಕೃತಿಕ ಗುರುತುಗಳ ಬಗೆಗಿನ ಹೆಮ್ಮೆ ಇತ್ಯಾದಿಗಳು ಕಾದಂಬರಿಗಳ ಪ್ರಮುಖ ಆಶಯಗಳಾಗಿವೆ. 1993ರ ಕುಂ.ವೀರಭದ್ರಪ್ಪನವರ ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ಜೀತದಾಳೊಬ್ಬನ ಮಗ ವಿದ್ಯೆ ಪಡೆಯಲು ಹೊರಟ ಸಂಘರ್ಷದ ಕತೆಯನ್ನು ಹೇಳುತ್ತದೆ. ಬಿಡುಗಡೆಯ ಸಾಧ್ಯತೆಗಳ ಅರಿವು ಮಾತ್ರ ದಲಿತರನ್ನು ಮಾನಸಿಕ ದಾಸ್ಯದಿಂದ ಮುಕ್ತರಾಗಿಸಬಲ್ಲ ದೆಂಬುದನ್ನು ಇವರ ಇನ್ನೊಂದು ಕಾದಂಬರಿ ಕೆಂಡದ ಮಳೆ (1989) ನಿರೂಪಿಸುತ್ತದೆ. ಭೂಹೀನ ದಲಿತರ ಬದುಕುವ ಹಕ್ಕುಗಳಿಗಾಗಿ ಅದಿಕಾರಶಾಹಿ ವ್ಯವಸ್ಥೆಯೊಳಗಿದ್ದೇ ಹೋರಾಡುವ ದಲಿತ ಸರ್ಕಾರಿ ಅದಿಕಾರಯೊಬ್ಬನ ಸೋಲು ಗೆಲವುಗಳ ಕಥನ ಆರ್.ವಿ.ಭಂಡಾರಿಯವರ ‘ಬೆಂಕಿಯ ಮಧ್ಯೆ’ (1984) ಕಾದಂಬರಿಯದು.
- ಬಿ.ಟಿ.ಲಲಿತಾನಾಯಕರ ಗತಿ (1983) ಹಾಗೂ ಎಂ.ವೀರಪ್ಪ ಮೊಯಿಲಿವರ ಕೊಟ್ಟ (1993) - ಈ ಕೃತಿಗಳು ಲಂಬಾಣಿ ಮತ್ತು ಕೊರಗ ಜನಾಂಗದ ನಂಬಿಕೆ, ಆಚರಣೆಗಳ ಹಿನ್ನೆಲೆಯುಳ್ಳವು. ಪುರೋಹಿತಶಾಹಿ ಹಾಗೂ ಅದಿಕಾರಶಾಹಿ ವ್ಯವಸ್ಥೆ ಈ ಸಮುದಾಯಗಳನ್ನು ಶೋಷಿಸುವ ಬಗೆ ಇಲ್ಲಿ ನಿರೂಪಿತವಾಗಿವೆ. ಜೈವಿಕ ಮಾದರಿಯ ಬಂಡಾಯವನ್ನು ಸಂಘಟಿತ ಶೋಷಿತರು ಕೈಗೊಳ್ಳಬೇಕಾದ ಅನಿವಾರ್ಯತೆಯನ್ನು 80ರಿಂದೀಚಿನ ಕಾದಂಬರಿಗಳು ಮನಗಾಣಿಸುತ್ತವೆ. ಜೀವಪ್ರೇಮಕ್ಕೆ ಇಂಬಾಗಬಲ್ಲ ವರ್ಣಸಂಕರದ ಪುರಾತನ ಘಟನೆಗೆ ಮರಣ ಮಂಡಲ ಮಧ್ಯದೊಳಗೆ ಕೃತಿಯ ನಾಯಕ ಬಸರಾಜುವಿನ ಕನಸಿನ ಕಣ್ಣು ಸಾಕ್ಷಿಯಾಗುತ್ತದೆ. ಈ ಕಣ್ಣು ಹೋರಾಟದ ತಾತ್ವಿಕತೆಗೆ ಜೀವಂತಿಕೆ ತರಬಲ್ಲುದೆಂಬ ಆಶಾವಾದ ಕೃತಿಯಲ್ಲಿದೆ.
- ಇರುವಿಕೆ ಮತ್ತು ಆಗುವಿಕೆಗಳ ನಡುವಿನ ಗತಿ ತಾರ್ಕಿಕತೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಮೂರು ತಲೆಮಾರಿನ ಪುರುಷ ಪಾತ್ರಗಳ ಕಥೆ ಅನಂತ ಮೂರ್ತಿಯವರ ‘ಭವ’ ಕಾದಂಬರಿಯದು. ಆಗುವಿಕೆಯ ಹಂಬಲದಲ್ಲಿ ಮಾನವ ಸಂಬಂಧಗಳನ್ನು ಪುರುಷ ಪಾತ್ರಗಳು ಬೇಜವಾಬ್ಧಾರಿಯಿಂದ ವ್ಯಾವಹಾರಿಕವಾಗಿ ಕಾಣುತ್ತವೆ. ಅದೇ, ನಿತ್ಯದೈನಿಕದ ಮಾನವಸಂಬಂಧಗಳನ್ನು ಜೀವಪ್ರೇಮದಿಂದ ಭವದ ಸ್ತ್ರೀಪಾತ್ರಗಳು ಕಾಣುತ್ತವೆ.
- ಇವರ ದಿವ್ಯ ಕಾದಂಬರಿಯು ಸ್ತ್ರೀಸಾಮರ್ಥ್ಯದ ಬಗೆಗಿನ ತುಂಬು ವಿಸ್ಮಯದ ಕಥನವಾಗಿದೆ. ನೆಹರೂ ಪ್ರಣೀತ ಆಧುನಿಕ ಅಬಿsವೃದ್ಧಿ ಸಿದ್ಧಾಂತದ ಪ್ರಾತಿನಿದಿಕ ಪಾತ್ರ-ಘನಶ್ಯಾಮ. ಕೌಟುಂಬಿಕ ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ಗಾಢವಾಗಿ ತೊಡಗಿಸಿಕೊಳ್ಳುತ್ತಲೇ ಪ್ರಕೃತಿಯೊಂದಿಗಿನ ತಾದಾತ್ಮ್ಯವನ್ನೂ ಬೆಳೆಸಿಕೊಂಡಾಕೆ ಗೌರಿ. ಈ ಎರಡು ಮೂಲಗಳಿಂದ ಒದಗಿಬರುವ ಜೀವನಾನುಭವಗಳನ್ನು ಬೌದ್ಧಿಕ ಜ್ಞಾನವಾಗಿಸಿ ಕೊಳ್ಳದೆ ಸಹಜ ಜ್ಞಾನಿಯಾಗುತ್ತ ಸಾಗಿದವಳೀಕೆ. ಒಳ ಹೊರಗುಗಳ ದ್ವಂದ್ವವುಳ್ಳ ಪುರುಷನಿಗೆ ಗೌರಿಯಂಥ ರಹಸ್ಯ ಚೇತನದ ಸಂಗಮ ಅತ್ಯಗತ್ಯ. ಚಿರವಾಸ್ತವದ ಪ್ರತೀಕವಾದ ಗೌರಿ ಪ್ರತಿನಿದಿಸುವ ಜೀವನತತ್ವ ಚರವಾಸ್ತವದ ಮಿತ ತಿಳುವಳಿಕೆಯ ಸಾಲಿಗೆ ದಿವ್ಯವೇ ಆಗುತ್ತದೆ. ಕೃಷ್ಣಮೂರ್ತಿ ಹನೂರರು ನಿಕ್ಷೇಪದಲ್ಲಿ (1998) ನಾಗರಿಕ ವ್ಯಾವಹಾರಿಕತೆ ಹಾಗೂ ಪ್ರಾಕೃತಿಕ ಜೀವನ ಸೌಂದರ್ಯ, ಮುಗ್ಧತೆಗಳನ್ನು ಮುಖಾಮುಖಿಯಾಗಿಸುತ್ತಾರೆ. ಉಪಭೋಗ ಸಂಸ್ಕೃತಿಯ ಕ್ರೌರ್ಯದಡಿಯಲ್ಲಿ ಆದಿವಾಸಿ ಹೆಣ್ಣುಗಂಡುಗಳ ಸುಂದರ ಬದುಕು ನಿರ್ನಾಮ ವಾಗುವುದನ್ನು ಕಾದಂಬರಿ ನಿರೂಪಿಸುತ್ತದೆ.
- ಚದುರಂಗರ ಹೆಜ್ಜಾಲ (1998) ಪ್ರಕೃತಿಯ ಜೀವ ಸಂಗೋಪನೆಯನ್ನು ಕೇಂದ್ರವಾಗಿಟ್ಟುಕೊಂಡ, ಕಾಲೂರನೆಂಬ ದಲಿತನ ಕಥಾನಕ. ಶ್ರೇಣೀಕೃತ ಸಮಾಜದ ಕ್ರೌರ್ಯ, ಶೋಷಣೆಗಳನ್ನು ಬಯಲಿಗೆಳೆಯುತ್ತಲೇ ಬಿಡುಗಡೆಯ ಸಾಧ್ಯತೆಗಳನ್ನು ನಮ್ಮ ಮುಂದಿಡುವ ಕೃತಿ. ವೀರಪ್ಪಮೊಯ್ಲಿಯವರ ತೆಂಬರೆ (1999) ಕಾದಂಬರಿ ಭೂತಾರಾಧನೆ ಸಂದರ್ಭದಲ್ಲಿ ಪಂಜುರ್ಲಿ ಭೂತವನ್ನು ಕಟ್ಟುವ ಪಂಬದ ಜನಾಂಗದ ಬದುಕನ್ನು ಹಿನ್ನೆಲೆಯಾಗಿಟ್ಟುಕೊಂಡಿದೆ. ತೆಂಬರೆ ವಾದ್ಯ ಸಾಮಾಜಿಕ ಕ್ರಾಂತಿಗೆ ಅತ್ಯಗತ್ಯವಾದ ಶೋಷಿತರ ಅಂತರಾಳದ ಜೀವಚೈತನ್ಯದ ಬೃಹತ್ ಪ್ರತೀಕವಾಗಿ ಬೆಳೆದು ನಿಲ್ಲುತ್ತದೆ.
- 90ರ ದಶಕದಲ್ಲಿ ಬಂದ ಕಾದಂಬರಿಗಳು ಶೋಷಿತ ಸಮುದಾಯಗಳ ಆತ್ಮಕಥನಗಳಂತೆ ನಿರೂಪಿತವಾಗಿವೆ. ಶೋಷಣೆಯ ಸುಳಿಯಲ್ಲೇ ಉಳಿಯುವ ಬಹುಸಂಖ್ಯಾತರ ನಡುವಿನಿಂದ ಬಂದ ಶಿಕ್ಷಿತ ಪಾತ್ರವಾಗಿ ಈ ಕಾದಂಬರಿಗಳ ಕರ್ತೃಗಳೂ ಸೇರಿಹೋಗಿದ್ದಾರೆ. ಸಮುದಾಯದಿಂದ ಪ್ರತ್ಯೇಕವಾಗಿ ತನ್ನನ್ನು ಪ್ರಜ್ಞೆಯ ನೆಲೆಯಲ್ಲಿ ಗುರುತಿಸಲೆತ್ನಿಸಿಕೊಳ್ಳುವ ನವ್ಯ ಕಾದಂಬರಿಗಳಿಗಿಂತ ಬಿsನ್ನಹಾದಿಯನ್ನು ಈ ದಶಕದ ಅನಂತರದ ಕೃತಿಗಳು ಹಿಡಿಯಲಾರಂಬಿಸಿದವು. ವ್ಯಕ್ತಿಪ್ರಜ್ಞೆಯನ್ನು ಸಮುದಾಯದೊಂದಿಗಿನ ತಮ್ಮ ಸಂಬಂಧವನ್ನು ಮತ್ತೂ ಗಾಢ ಹಾಗೂ ಆಳಗೊಳಿಸಿಕೊಳ್ಳಲು ಈ ಕಾದಂಬರಿಕಾರರು ಬಳಸಿಕೊಳ್ಳುತ್ತಾರೆ. ಹೀಗಾಗಿ ಏಕತಾನತೆ, ಘೂೕಷಣೆಗಳಿಲ್ಲದ, ಬಹುಮುಖಿ ಆಯಾಮಗಳುಳ್ಳ ಸಮುದಾಯ ಕಥನಗಳು ಸೃಷ್ಟಿಗೊಳ್ಳತೊಡಗಿದವು.
- ತೆಂಬರೆ ಕಾದಂಬರಿಯ ತೋಮುವಿನಂತೆಯೇ ನೇರ ಹೋರಾಟಕ್ಕಿಳಿದ ದಲಿತ ಕೃಷಿಕಾರ್ಮಿಕಪಾತ್ರ ಲಕ್ಷ್ಮಣರ ‘ಬದುಕು’ ಕಾದಂಬರಿಯ ಮಾಳಕ್ಕಜ್ಜಿ. ಅಸಹಾಯಕತೆಯ ಚಿಪ್ಪೊಡೆದು, ಅನ್ಯಾಯದ ಬಗೆಗಿನ ಅರಿವನ್ನು ಹೊಂದುವ ಮಾಳಕ್ಕಜ್ಜಿ ದಲಿತ ಹೋರಾಟದ ಆತ್ಮವಿಶ್ವಾಸದ ಸಂಕೇತವಾಗುತ್ತಾಳೆ. ಬುಡಕಟ್ಟಿನ ಜೀವನಕ್ರಮದಲ್ಲಿ ಉಂಟಾಗುವ ಪಲ್ಲಟಗಳನ್ನೂ ಅದರ ತಲ್ಲಣಗಳನ್ನೂ ಸಮರ್ಥವಾಗಿ ಜಂಬಣ್ಣ ಅಮರಚಿಂತರ ಕುರುವಯ್ಯ ಮತ್ತು ಅಂಕುಶದೊಡ್ಡಿ (1993) ಹಿಡಿದಿಟ್ಟಿದೆ.
- ಶೋಷಕ ಶೋಷಿತ ಸಂಬಂಧವನ್ನು ದ್ವೈತದ ನೆಲೆಯಲ್ಲಿ ಪರಿಭಾವಿಸದೆ, ವ್ಯಕ್ತಿಗತ ನೆಲೆಯಲ್ಲಿ ಏಕತ್ರಗೊಳಿಸಿ ಕಾಣಿಸುವ ಯತ್ನ ಶಿವರುದ್ರ ಕಲ್ಲೋಳಿಕರರ "ಹೊಲಗೇರಿಯ ರಾಜಕುಮಾರ" (1994) ಕಾದಂಬರಿಯದು. ದಲಿತರು ಹಾಗೂ ಅಂಬೇಡ್ಕರ್ ಚಿಂತನೆಗಳ ನಡುವಿನ ಚಾರಿತ್ರಿಕ ಸಂಬಂಧವನ್ನು ಈ ಕೃತಿ ಸೂಕ್ಷ್ಮವಾಗಿ ವಿವೇಚಿಸುತ್ತದೆ. ಇಳಿತ, ಭರತ, ಪ್ರವಾಹ, ಸುಳಿ - ಎಂಬ ನಾಲ್ಕು ಭಾಗಗಳ ಯೋಜನೆಯುಳ್ಳ ಕೃತಿ - ಸಾರಾ ಅಬೂಬಕರ್ರವರ ಸುಳಿಯಲ್ಲಿ ಸಿಕ್ಕವರು (1994). ಬಡತನದಂತೆಯೇ ಶ್ರೀಮಂತಿಕೆಯೂ ಸುಳಿಯಾಗಬಲ್ಲದೆಂಬುದನ್ನು ಮುಮ್ಮಟಿ ಪಾತ್ರದ ಮೂಲಕ ಇಲ್ಲಿ ತೋರಿಸಿಕೊಡಲಾಗಿದೆ. ಈ ಸುಳಿಯಲ್ಲಿ ವಿಶೇಷವಾಗಿ ಸೇರ್ಪಡೆಯಾಗುವ ಕುಟುಂಬದ ಹೆಣ್ಣುಗಳ ನೋವು ಸಂಕಷ್ಟಗಳ ಸರಣಿಯ ನಿರೂಪಣೆಯಿದೆ. ಎಚ್.ಎಸ್.ಚಂಪಾವತಿಯವರ ಶಿವಗಂಗಾ (1997) ಎಂಬ ಕಾದಂಬರಿ ಮಹಿಳಾ ಹೋರಾಟದ ಅನುಭವಗಳು ವ್ಯಕ್ತಿಯ ಅಂತಃಕರಣದ ವಿಕಾಸಕ್ಕೆಡೆ ಮಾಡಿಕೊಡುವ ಸಾಧ್ಯತೆಗಳನ್ನು ಗಂಗಾ ಪಾತ್ರದ ಮೂಲಕ ವಿವೇಚಿಸುತ್ತದೆ. ತಮ್ಮ ಅಸ್ತಿತ್ವದ ಶೋಧಕ್ಕೆ ಹೆಣ್ಣನ್ನು ಜೈವಿಕವಸ್ತುವಾಗಿ ಪರಿಭಾವಿಸುವ ನವ್ಯಕಾದಂಬರಿಗಳ ನಾಯಕ ಪಾತ್ರಗಳನ್ನು ಶಿವಗಂಗಾ ಲಿಂಗವ್ಯವಸ್ಥೆಯ ನೆಲೆಯಲ್ಲಿ ವಿಮರ್ಶಿಸುತ್ತದೆ.
- ಲಿಂಗವ್ಯವಸ್ಥೆಯೊಳಗಿನ ಹೆಣ್ಣಿನ ವಿವಿಧ ಮನಃಸ್ತರಗಳ ಸಂಕೀರ್ಣಲೋಕವನ್ನು ತಾರಾಭಟ್ರವರ ಅವ್ಯಕ್ತ ಪರಿಚಯಿಸುತ್ತದೆ. ಭಾವನೆ ಹಾಗೂ ವ್ಯಾವಹಾರಿಕ ಜಗತ್ತುಗಳ ನಡುವಿನ ದ್ವಂದ್ವವನ್ನು, ಸ್ತ್ರೀಯ ಪ್ರಜ್ಞೆ ವಿಕಾಸದ ಸಾಧ್ಯತೆಗಳು ಹೊಸಕಿಹೋಗುವ ಬಗೆಯನ್ನು ಈ ಕಾದಂಬರಿ ಕಾಣಿಸುತ್ತದೆ. ಲಿಂಗದರ್ಪವಿರದ ಅಮೆರಿಕನ್ ಜೋಫ್ರೆ ಕ್ಲಾರ್ಕನ ಕಣ್ಣಿನಿಂದ ದೊರಕುವ ನೋಟವನ್ನು ವಿಮರ್ಶಾತ್ಮಕವಾಗಿ ಲೇಖಕಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೊಳೆಗೇರಿ ಬಾಲಕ ಕ್ಯಾತನ ಜೀವನಾನುಭವಗಳ ಹಿನ್ನೆಲೆಯಲ್ಲಿ ಪಿ.ಲಂಕೇಶರ ‘ಅಕ್ಕ’ (1991) ರಚಿತವಾಗಿದೆ. ಅಕ್ಕನೊಂದಿಗಿನ ಭಾವಸಂಬಂಧ ಗಳು ಮಾನಸಿಕ ಪೋಷಣೆಯ ನೆಲೆಯನ್ನೂ ದಾಟಿ ಸಾಮಾಜಿಕ ವಾಸ್ತವದ ಕ್ರೌರ್ಯವನ್ನು ಒಳಗೊಳ್ಳುವುದನ್ನು ಕಾದಂಬರಿ ದರ್ಶಿಸುತ್ತದೆ. ಬಾಲಕನೊಬ್ಬನ ಪ್ರಜ್ಞೆಯ ಬೆಳೆವಣಿಗೆಯ ಗತಿಯೊಂದಿಗೇ ಆತನ ನಿರೂಪಣೆಯ ಮೂಲಕ ಸಾಮಾಜಿಕ ವಾಸ್ತವವನ್ನು ಈ ಕೃತಿ ಅದಿsಕೃತವಾಗಿ ಹಿಡಿದಿಡುತ್ತದೆ. ಸಾಕ್ಷಿ ಪ್ರಜ್ಞೆಯ ಮೂಲಕ ಗತ ಅನುಭವಗಳನ್ನು ವರ್ತಮಾನದ ಅರಿವಿನೊಂದಿಗೆ ಮುಖಾಮುಖಿಯಾಗಿಸುವ ಯತ್ನವನ್ನು ಶಾಂತಿನಾಥ ದೇಸಾಯಿಯವರು ತಮ್ಮ ಅಂತರಾಳ (1993) ಕಾದಂಬರಿಯಲ್ಲಿ ಮಾಡಿದ್ದಾರೆ. ಓಂಣಮೋ (1998) ಕಾದಂಬರಿಯಲ್ಲಿ ವ್ಯಕ್ತಿಸ್ವಾತಂತ್ರ್ಯದ ತಾತ್ತ್ವಿಕತೆಯನ್ನು ಜೈನದರ್ಶನವು ಹಾಗೂ ಆಚರಣೆಗಳಲ್ಲಿ ಶೋದಿಸುವ ಪ್ರಯತ್ನವನ್ನು ಶಾಂತನಾಥ ದೇಸಾಯಿ ಮಾಡಿದ್ದಾರೆ. ವ್ಯಕ್ತಿನಿಷ್ಠ ನೆಲೆಯಲ್ಲಿಯೇ ಧರ್ಮದ ಸಾಮಾಜಿಕ ಆಯಾಮ ಸದಾ ಚಿಕಿತ್ಸೆಗೊಳಗಾಬೇಕಾದುದು ಅನಿವಾರ್ಯವೆಂಬ ಮಹತ್ವದ ನಿರ್ಧಾರ ಈ ಕೃತಿಯದು. ಕುಂ.ವೀರಭದ್ರಪ್ಪ ನವರ ಶಾಮಣ್ಣ (1998), ಸಾಂಪ್ರದಾಯಿಕ ವೈದಿಕ ಕುಟುಂಬದ ಮೂರು ತಲೆಮಾರುಗಳ ಏಳುಬೀಳುಗಳನ್ನು ಕಥಿಸುತ್ತಲೇ ಪಾಶ್ಚಾತ್ಯ ಹಾಗೂ ಪಾರ್ವಾತ್ಯ ಜೀವನ ಶೈಲಿಗಳ ಮುಖಾಮುಖಿಯಲ್ಲಿ ಪ್ರಕಟಗೊಳ್ಳಬಹುದಾದ ಅಸಂಗತತೆಯನ್ನು ವೈನೋದಿಕ ಶೈಲಿಯಲ್ಲಿ ಈ ಕಾದಂಬರಿ ಹಿಡಿದಿಡುತ್ತದೆ. ದಕ್ಷಿಣ ಕನ್ನಡದ ಗ್ರಾಮೀಣ ವರ್ಗದ ಬಡ ಮುಸ್ಲಿಂರ ಬದುಕನ್ನು ನಿಯಂತ್ರಿಸುವ ಧಾರ್ಮಿಕ ಮೂಲಭೂತವಾದವನ್ನು ರಪೀಕ್ ಉಪ್ಪಿನಂಗಡಿ ಯವರ ಅಜ್ಜಿಮಾದ (1998) ಪರಿಚಯಿಸುತ್ತದೆ. ಜೊತೆಗೆ ಮೂಲಭೂತವಾದವನ್ನು ಸ್ವಂತ ಸಂಕಲ್ಪಬಲದ ಮೂಲಕ ಪ್ರತಿಭಟಿಸುವ ಅಜ್ಜಿಮಾದಳ ಜೀವಪರತೆಯನ್ನು ಕೃತಿ ದಾಖಲಿಸುತ್ತದೆ.
- ತುಳುನಾಡಿನ ಸಾಂಸ್ಕೃತಿಕ ಕಥನದ ಒಡಲಿನಿಂದಲೇ ಸಾಮಾಜಿಕ ಸಂಚಲನಗಳನ್ನು ದಲಿತ ಹಾಗೂ ಸ್ತ್ರೀಕೇಂದ್ರದಿಂದ ದಾಖಲಿಸುವ ಕೃತಿ ಎಚ್.ಎಸ್.ನಾಗವೇಣಿಯವರ ‘ಗಾಂದಿ ಬಂದ’ (1999). ಜನರ ಬದುಕಿನ ಸೂಕ್ಷ್ಮವಿವರಗಳೊಂದಿಗೆ ಗಾಂದಿ ತತ್ತ್ವ ಹಾಸುಹೊಕ್ಕಾಗಿ ಪ್ರಾಯೋಗಿಕ ರೂಪದಲ್ಲಿ ಪ್ರಕಟವಾಗುವ ಪರಿ ಇಲ್ಲಿದೆ. ಗುಲ್ಬರ್ಗ ಜಿಲ್ಲೆಯ ಗಡಸು ಗ್ರಾಮೀಣ ಭಾಷೆಯಲ್ಲಿ ಹಳ್ಳಿಯ ದಲಿತ ಹೆಣ್ಣುಮಕ್ಕಳ ಮೇಲಾಗುವ ಧಾರ್ಮಿಕ, ಆರ್ಥಿಕ, ಸಾಮಾಜಿಕ ಶೋಷಣೆಯನ್ನು ಗೀತಾ ನಾಗಭೂಷಣರ ಬದುಕು (2001) ಕಾದಂಬರಿ ವಿವರಿಸುತ್ತದೆ. ಊಳಿಗಮಾನ್ಯ ಹಾಗೂ ಬಂಡವಾಳಶಾಹೀ ವ್ಯವಸ್ಥೆಯಡಿ ನಲುಗಿ ಹೋಗುವ ಕುಟುಂಬದ ದುರಂತವನ್ನು ಈ ಕಾದಂಬರಿ ವಿಸ್ತೃತವಾಗಿ ಹಿಡಿದಿಟ್ಟಿದೆ. ಉಮಾರಾವ್ ಅವರ ನೂರುಸ್ವರ (1999) ಆಧುನಿಕ ಸಂವೇದನೆಯುಳ್ಳ ಮಹಿಳೆಯೊಬ್ಬಳ ತಲ್ಲಣಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಕಾದಂಬರಿ. ಲತಾರಾಜಶೇಖರರ ಈ ಸ್ನೇಹ ಈ ಜೀವನ (1999) ಸಾಂಪ್ರದಾಯಿಕ ಕೌಟುಂಬಿಕ ಸಂಬಂಧಗಳನ್ನು ಶೋದಿಸಲೆತ್ನಿಸುತ್ತದೆ. ಎಚ್.ಎಸ್.ಶ್ರೀಮತಿಯವರ ಉದ್ಗಮ (2000) ಎಂಬ ಕಾದಂಬರಿ ತನ್ನೊಳಗಿನ ರಹಸ್ಯಗಳಿಗೆ ಬಾಯಿಕೊಡಲೆತ್ನಿಸುವ ಮಹಿಳೆಯೊಬ್ಬಳ ಸ್ವಗತ ಕತೆ ಎನ್ನಬಹುದು. ಪುರಷನಿಗಿಂತಲೂ ಹೆಚ್ಚು ಆತಂಕ ಒತ್ತಡಗಳನ್ನು ಪ್ರೇಮವಿವಾಹವಾಗುವ ಮಹಿಳೆ ಹೊರಬೇಕಾದ ಸ್ಥಿತಿಯನ್ನು ಈ ಕೃತಿ ಚಿತ್ರಿಸುತ್ತದೆ. ಗ್ರಾಮ ರಾಜಕಾರಣದೆದುರು ಕೃಷಿಯ ಬಗೆಗಿನ ರಮ್ಯಕಲ್ಪನೆಗಳು ಧೂಳೀಪಟವಾಗುವುದನ್ನು ಎಂ.ಎಸ್.ವೇದಾರ ಜಮೀನು (2000) ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಪಟ್ಟಣವಾಸಿ ನೌಕರನಾಗಿಯೂ ಭೂಮಿಯೊಂದಿಗಿನ ಸಂಬಂಧವನ್ನು ಜೀವಂತವಾಗಿಟ್ಟು ಕೊಳ್ಳಲೆತ್ನಿಸಿ ಸೋಲುವ ಶಿವಪ್ಪ ಹಾಗೂ ಆತನ ಪತ್ನಿ ದೇವಮ್ಮರ ಪ್ರಯತ್ನದ ಸೂಕ್ಷ್ಮಚಿತ್ರ ಇಲ್ಲಿದೆ. ಗ್ರಾಮೀಣ ಸಂವೇದನೆಗಳೊಳಗಿನಿಂದಲೇ ತನ್ನ ಸುತ್ತಲಿನ ಸಾಮಾಜಿಕ ವ್ಯವಸ್ಥೆಯನ್ನು ಅದರೆಲ್ಲ ಕ್ರೌರ್ಯದೊಂದಿಗೆ ಕಾಣಿಸುವ ಕೃತಿಯಿದು. ಸರಸ್ವತಿಯವರ ಈಗೇನ್ ಮಾಡೀರಿ? (2001) ಎಂಬ ಕೃತಿಯಲ್ಲಿ ಬಂಡವಾಳಶಾಹಿ ಕ್ರೌರ್ಯಕ್ಕೆ ಸವಾಲೆಂಬಂತೆ ತಾಯಿಯ ನೆನಪುಗಳುಳ್ಳ ರಮ್ಯಭಾವಕೇಂದ್ರವನ್ನು ಜೀವಂತವಾಗಿಡಲು ಇಲ್ಲಿಯ ನಾಯಕಿ ಯತ್ನಿಸುತ್ತಾಳೆ.
- ಕಲಾವಿದ ಚೇತನದ ಒಳತುಮುಲಗಳ ನಿರೂಪಣೆಯ ಮೂಲಕವೇ ಮಾನವ ಬದುಕಿನ ಸಾರ್ಥಕತೆಯ ಮಹತ್ವದ ಪ್ರಶ್ನೆಗಳನ್ನೆತ್ತುವ ಕೃತಿ ಎಸ್.ಎಲ್.ಭೈರಪ್ಪನವರ ‘ಮಂದ್ರ’. ಕಲಾಜೀವನದಲ್ಲಾಗಲೀ ಬದುಕಿನಲ್ಲಾಗಲೀ ಮಾನವ ಸಂಬಂಧಗಳು ಹೊಂದಬಹುದಾದ ವ್ಯಾವಹಾರಿಕ ಹಾಗೂ ಆಧ್ಯಾತ್ಮಿಕ ನೆಲೆಯ ಸ್ವರೂಪವನ್ನು ಕುರಿತಂತೆ ಈ ಕೃತಿ ಚರ್ಚಿಸುತ್ತದೆ. ಸೋಸಲೆ ಗಂಗಾಧರ ಅವರ ಯಾಮಿನಿ (2001) ಶ್ರಮಜೀವನದಲ್ಲಿಯೇ ತಮ್ಮ ಸ್ವಾಬಿsಮಾನದ ನೆಲೆಗಳನ್ನು ಅರ್ಥಪುರ್ಣವಾಗಿ ದಕ್ಕಿಸಿಕೊಳ್ಳಲೆತ್ನಿಸುವ ದಲಿತ ಲೋಕದ ಕಥನವಾಗಿದೆ. ಕುಂ.ವೀರಭದ್ರಪ್ಪನವರ ಯಾಪಿಲ್ಲು (2001) ಆಧುನೀಕರಣ ಪ್ರಕ್ರಿಯೆಗೆ ಒಳಗಾಗುತ್ತಲೇ ದುರಂತದೆಡೆ ಹೆಜ್ಜೆ ಇಡುತ್ತಿರುವ ದಲಿತರ ಸ್ಥಿತಿಯನ್ನು ಅಸಹಾಯಕ ಚಲನೆಯ ಬಾಲಿಕೆಯ ರೂಪಕದಲ್ಲಿ ಹಿಡಿದಿಡುತ್ತದೆ. ಶಿಕ್ಷಣ ಹಾಗೂ ಆ ಮೂಲಕ ದಕ್ಕಬಹುದಾದ ಜೀವನಾವಶ್ಯಕಗಳು ಶೋಷಿತರ ಪಾಲಿಗೆ ಕಡೆಗೂ ಮರೀಚಿಕೆಯಾಗುವ ದುರಂತವನ್ನು ಕಾದಂಬರಿ ಹಿಡಿದಿಡಲು ಪ್ರಯತ್ನಿಸುತ್ತದೆ. ಜಾಗತೀಕರಣದ ನೆಲೆಯಲ್ಲಿನ ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರಗಳ ತಲ್ಲಣಗಳಿಗೂ ಈ ಕಾದಂಬರಿ ಪ್ರತೀಕವಾಗುತ್ತದೆ.
- ಬಿಳುಮನೆ ರಾಮದಾಸ್ ಅವರ ನಂಬಿಕೆಟ್ಟವರಿಲ್ಲಮೊ, ಎಸ್.ವಿ.ಪ್ರಭಾವತಿ ಅವರ ಶಕುಂತಲಾ, ಅಗ್ರಹಾರಕೃಷ್ಣಮೂರ್ತಿಯವರ ನೀರು ಮತ್ತು ಪ್ರೀತಿ, ದೇವುಹನೇಹಳ್ಳಿಯವರ ಶಿಲೆಯೊಳಡಗಿದ ಕಪ್ಪೆ, ಮಲ್ಲಿಕಾರ್ಜುನ ಹಿರೇ ಮಠರ ಹವನ, ವಿವೇಕ್ ಶಾನುಭಾಗರ ಇನ್ನೂ ಒಂದು ಇವು 2001ರಲ್ಲಿ ಬಂದಿರುವ ಕೆಲವು ಕಾದಂಬರಿಗಳು. ಪ್ರೀತಿಯ ಕಣ್ಣು (ಶಾಂತಾರಾಮ ಸೋಮಯಾಜಿ); ಅರ್ಥ (ನಾ.ಮೊಗಸಾಲೆ); ಚಿತ್ರಮಾಲ (ಆರ್.ವಿಜಯರಾಘವನ್); ಮಳೆನಿಂತ ಮೇಲಿನ ಮರ (ಶಿವಾನಂದ ಬೇಕಲ್); ಗೌರಿ (ಜಾನಕಿ ಸುಂದರೇಶ್); ಕಲ್ಲಖಣಿಯಾಗು ಕರಿಕೆಬೇರಾಗು (ದಮಯಂತಿ ನರೇಗಲ್ಲ) - ಇವು 2002ರಲ್ಲಿ ಬಂದ ಕೆಲವು ಕಾದಂಬರಿಗಳು
- ಮನಜರ ಸೂರಪ್ಪ (2004) ಕಾದಂಬರಿ ಗತದ ಯಶೋಗಾಥೆ ಹಾಗೂ ದುರಂತದ ನೆನಪುಗಳೆರಡರ ಮೂಲಕ ದಲಿತತ್ವದ ಆತ್ಮತೇಜವನ್ನು ಸಶಕ್ತವಾಗಿ ಸೃಷ್ಟಿಸಿಕೊಳ್ಳುವ ಕಥನವಾಗಿದೆ. ಸಿಪಾಯಿ ಸೂರಪ್ಪನ ಧೈರ್ಯ ಸಾಹಸಗಳ ಕಥನದೊಂದಿಗೆ ಟಿಪ್ಪುಸುಲ್ತಾನನ ಬಗೆಗಿನ ಚರಿತ್ರೆ ಹೊಸ ಆಯಾಮವನ್ನು ಪಡೆದುಕೊಳ್ಳುವುದು ಈ ಕಾದಂಬರಿಯ ವಿಶೇಷತೆ. ಅಂತೆಯೇ ಯಜಮಾನ್ ಸೂರಪ್ಪನ ಜೀವನ ಕೌಶಲ್ಯದ ಕಥನವು ಹಳೇ ಮೈಸೂರು ಇತಿಹಾಸವನ್ನು ಹೊಸ ಬೆಳಕಿನಲ್ಲಿ ಅರ್ಥೈಸುತ್ತದೆ. ಅಂಚಿಗೆ ಒತ್ತರಿಸಲ್ಪಟ್ಟ ಚೇತನಗಳನ್ನು ಪ್ರಧಾನನೆಲೆಗೆ ತರುವುದರ ಮೂಲಕ ಈ ಕೃತಿ ಇತಿಹಾಸದ ಪುನರ್ ಮೌಲ್ಯಮಾಪನವನ್ನು ಕೈಗೊಳ್ಳುತ್ತದೆ. ಗ್ರಾಮೀಣ ಕೃಷಿಕ ಜೈನ ಸಮಾಜದ ಚಿತ್ರಣವುಳ್ಳ ಕೃತಿ ಬಾಳಾ ಸಾಹೇಬ ಲೋಕಾಪುರರ ಹುತ್ತ (2002), ಅಹಿಂಸೆ ಹಾಗೂ ಹಿಂಸೆಗಳ ನಡುವಿನ ವೈರುಧ್ಯದಲ್ಲಿ ಪ್ರಕಟಗೊಳ್ಳುವ ಗ್ರಾಮರಾಜಕಾರಣವನ್ನೂ ಮಾನವಸಂಬಂಧಗಳ ಸೂಕ್ಷ್ಮಕಂಪನಗಳನ್ನೂ ಇದು ದಾಖಲಿಸುತ್ತದೆ.
- ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಚಲನಗಳನ್ನು ಕಲಾತ್ಮಕವಾಗಿ ಅಬಿವ್ಯಕ್ತಿಸುವ ಅನೇಕ ಮಹತ್ತ್ವದ ಕಾದಂಬರಿಗಳು ಹೊರಬಂದಿವೆ. ಪ್ರಯೋಗದ ನಾವೀನ್ಯತೆ ಹಾಗೂ ಪ್ರಬುದ್ಧತಾತ್ತ್ವಿಕತೆಯುಳ್ಳ ಕನ್ನಡ ಕಾದಂಬರಿಗಳು ಜಾಗತಿಕ ಕಥನ ಸಾಹಿತ್ಯಕ್ಕೆ ವಿಶಿಷ್ಟ ಆಯಾಮವನ್ನು ನೀಡುತ್ತ ಬಂದಿವೆ.[೧]
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]