ಜಿ.ಬಿ.ಜೋಶಿ(ಜಡಭರತ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು ೧೯೦೪ ಜುಲೈ ೨೯ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಇವರ ತಾಯಿ ಭಾರತೀಬಾಯಿ ; ತಂದೆ ಭೀಮಾಚಾರ್ಯರು.[೧] ಜಿ.ಬಿ.ಜೋಶಿಯವರು ೧೯೩೩ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗು ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನು ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು. ಖ್ಯಾತ ನಾಟಕಕಾರ ಗಿರೀಶ ಕಾರ್ನಾಡ ಅವರಲ್ಲೊಬ್ಬರು. ೧೯೫೯ರಲ್ಲಿ ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕ “ಮನ್ವಂತರ”ವನ್ನು ಪ್ರಾರಂಭಿಸಿದರೂ ಸಹ ಅದು ಬಹುಕಾಲ ಬಾಳಲಿಲ್ಲ.ಜಿ.ಬಿ.ಜೋಶಿಯವರು "ಜಡಭರತ" ಹಾಗು "ಅನಾಮಧೇಯ" ಕಾವ್ಯನಾಮದಲ್ಲಿ ಸಾಹಿತ್ಯ ರಚಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

ಅವರ ನಾಟಕಗಳು ಹಾಗು ಇತರ ಕೃತಿಗಳು ಇಂತಿವೆ:

ನಾಟಕ[ಬದಲಾಯಿಸಿ]

  • ಮೂಕಬಲಿ
  • ಸತ್ತವರ ನೆರಳು
  • ಕದಡಿದ ನೀರು
  • ಆ ಊರು ಈ ಊರು
  • ನಾನೇ ಬಿಜ್ಜಳ
  • ಪರಿಮಳದವರು
  • ಜರ್ಮನ್ ಬಂಗ್ಲೆ

ಕಾದಂಬರಿ[ಬದಲಾಯಿಸಿ]

  • ಧರ್ಮಸೆರೆ

ಕವನಸಂಕಲನ[ಬದಲಾಯಿಸಿ]

  • ಜೀವಫಲ

ರಂಗಭೂಮಿ[ಬದಲಾಯಿಸಿ]

ಜಿ.ಬಿ.ಜೋಶಿಯವರ ನಾಟಕಗಳು ದಿವಂಗತ ಬಿ.ವಿ.ಕಾರಂತರಿಂದ ಹಾಗು ನೀ.ನಾ.ಸಂ. ತಂಡದವರಿಂದ ರಂಗಭೂಮಿಯ ಮೇಲೆ ಪ್ರಯೋಗಗೊಂಡಿವೆ. ವಿಶೇಷತಃ ಬಿ.ವಿ.ಕಾರಂತರಿಂದ ಪ್ರದರ್ಶಿತವಾದ “ಸತ್ತವರ ನೆರಳು” ತುಂಬಾ ಜನಪ್ರಿಯ ನಾಟಕಪ್ರದರ್ಶನವಾಗಿತ್ತು.

ಚಿತ್ರೀಕರಣ[ಬದಲಾಯಿಸಿ]

ಜಿ.ಬಿ.ಜೋಶಿಯವರ “ಧರ್ಮಸೆರೆ” ಕಾದಂಬರಿಯನ್ನು ಚಲನಚಿತ್ರವಾಗಿ ರೂಪಾಂತರಿಸಲಾಗಿದೆ. ಈ ಚಲನಚಿತ್ರದಲ್ಲಿ ಶ್ರೀನಾಥ ನಾಯಕರಾಗಿ ಹಾಗು ಆರತಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಪುರಸ್ಕಾರಗಳು[ಬದಲಾಯಿಸಿ]

  • ೧೯೭೪ರಲ್ಲಿ “ಸತ್ತವರ ನೆರಳು” ಹಾಗು ೧೯೭೭ರಲ್ಲಿ “ನಾನೇ ಬಿಜ್ಜಳ” ಈ ನಾಟಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು.
  • ೧೯೮೬ರಲ್ಲಿ ಜಿ.ಬಿ.ಜೋಶಿಯವರಿಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
  • ೧೯೮೬ರಲ್ಲಿ ಕರ್ನಾಟಕಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
  • ೧೯೮೭ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ
  • ೧೯೯೩ರಲ್ಲಿ ಭಾರತೀಯ ಪ್ರಕಾಶಕರ ಒಕ್ಕೂಟದಿಂದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ ದೊರೆತಿದೆ.

ನಿಧನ[ಬದಲಾಯಿಸಿ]

ಜಿ.ಬಿ.ಜೋಶಿಯವರು ೧೯೯೩ ಡಿಸೆಂಬರ ೨೬ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]