ವಿಷಯಕ್ಕೆ ಹೋಗು

ಶಾಂತಿನಾಥ ದೇಸಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಂತಿನಾಥ ದೇಸಾಯಿ
ಶಾಂತಿನಾಥ ದೇಸಾಯಿ
ಜನನಜುಲೈ ೨೨, ೧೯೨೯
ಮರಣಮಾರ್ಚ್ ೨೬, ೧೯೯೮
ವೃತ್ತಿ(ಗಳು)ಪ್ರಥಮ ಉಪಕುಲಪತಿ ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ ಮತ್ತು ಇಂಗ್ಲಿಷ್ ಪ್ರಾಧ್ಯಾಪಕ, ಶಿವಾಜಿ ವಿಶ್ವವಿದ್ಯಾಲಯ, ಕೊಲ್ಲಾಪುರ

ಶಾಂತಿನಾಥದೇಸಾಯಿ ಕನ್ನಡ ಕಾದಂಬರಿ ಲೋಕಕ್ಕೆ ನವ್ಯಮಾರ್ಗವನ್ನು ತಂದವರು ಎಂದು ಪ್ರಖ್ಯಾತರಾದವರು. ಅವರು ಪ್ರಯೋಗಶೀಲತೆಯನ್ನು ಕನ್ನಡದ ಸಣ್ಣಕತೆ, ಪ್ರಬಂಧಗಳು, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿಯೂ ತೋರಿಸಿ ಸುಮಾರು ನಾಲ್ಕು ದಶಕಗಳಷ್ಟು ಕಾಲ ಕನ್ನಡದ ಮೇಲ್ಪಂಕ್ತಿಯ ಬರಹಗಾರರೆಂದು ಮಾನ್ಯತೆಯನ್ನು ಪಡೆದವರು.[]

ಶಾಂತಿನಾಥ ಕುಬೇರಪ್ಪ ದೇಸಾಯಿ ಅವರ ಜನ್ಮ, ಹಳಿಯಾಳದಲ್ಲಿ ೨೨ ಜುಲೈ ೧೯೨೯ರಂದಾಯಿತು. ಹಳಿಯಾಳ ಉತ್ತರ ಕನ್ನಡ ಜಿಲ್ಲೆಯಲ್ಲಿಯ ಕಾಡು ಪ್ರದೇಶ, ಅವರ ಪ್ರಾಥಮಿಕ ಶಿಕ್ಷಣ ಅಲ್ಲಿಯೇ ಆದರೂ ಉತ್ತಮ ವಿದ್ಯಾರ್ಥಿಯಾಗಿ ಗಮನ ಸೆಳೆದ ಶಾಂತಿನಾಥರನ್ನು ಮೆಟ್ರಿಕ್ ಪರೀಕ್ಷೆಯಲ್ಲಿ ವಿಶೇಷ ಸ್ಥಾನಗಳಿಸುವ ಉದ್ದೇಶದಿಂದ ಒಳ್ಳೆಯ ಶಾಲೆಯೊಂದರಲ್ಲಿ ಸೇರಿಸುವುದಕ್ಕೆ ಧಾರವಾಡಕ್ಕೆ ತರಲಾಯಿತು. ಹಳಿಯಾಳದಿಂದ ಹೊರಬಂದ ಶಾಂತಿನಾಥರ ಮೇಲೆ ಆಗ ಅಪ್ರತಿಮ ವಿದ್ಯಾರ್ಥಿಯೆಂದು ಗಮನ ಸೆಳೆದ ಗಂಗಾಧರ ಚಿತ್ತಾಲರ ಪ್ರಭಾವದ ಕಾರಣ ಚಿತ್ತಾಲ ಮನೆತನದಲ್ಲಿಯ ಚಿಂತನಶೀಲತೆಯ ಜತೆ ವಿದ್ಯಾರ್ಜನೆಯ ತೀವ್ರ ಆಸ್ಥೆ ಹುಟ್ಟಿಕೊಂಡಿತು. ಆಗ ಧಾರವಾಡದಲ್ಲಿ ಬಂದಿಳಿದ ಚಿಂತನಕಾರ ಮಾನವೇಂದ್ರರಾಯ ಅವರ ಮಾನವತಾವಾದದ ಆಕರ್ಷಣೆಯೂ ತಪ್ಪಲಿಲ್ಲ. ಉತ್ತಮ ವಿದ್ಯಾರ್ಥಿಯಾದ್ದರಿಂದ ಇಂಗ್ಲಿಷ್ ಪ್ರಾಧ್ಯಾಪಕರ ಮನ ಸೆಳೆದುಕೊಂಡು ಇಂಗ್ಲಿಷ್ ಭಾಷೆಯಲ್ಲಿ ವಿಶೇಷ ಅಧ್ಯಯನಕ್ಕೆಂದು ಮುಂಬಯಿಯ ಖ್ಯಾತ ವಿಲ್ಸನ್ ಕಾಲೇಜಿಗೆ ಸೇರಿದರು. ಮುಂದೆ ಪಿ.ಎಚ್.ಡಿ ಗೌರವ ಕೂಡಾ ಬಂತು. ಬ್ರಿಟಿಶ್ ಕೌನ್ಸಿಲ್ ಪ್ರಣೀತ ಶಿಷ್ಯವೃತ್ತಿಯ ಮೇಲೆ ಇಂಗ್ಲೆಂಡಿಗೆ ತೆರಳುವ ಸುಯೋಗ ಲಭಿಸಿತು. ಹಡಗಿನಲ್ಲಿಯ ಪ್ರವಾಸ ಅನೇಕ ಲೇಖಕರನ್ನು ಸ್ಫುರಿಸಿದಂತೆ, ಶಾಂತಿನಾಥರಿಗೂ ಒಂದು ಉತ್ತಮ ಕತೆಯನ್ನು ಬರೆಯುವುದಕ್ಕೆ ಉಪಯುಕ್ತವಾಯಿತು. ಅವರನ್ನು ಸಣ್ಣಕತೆಯಲ್ಲಿ ಜನಪ್ರಿಯರನ್ನಾಗಿ ಮಾಡಿದ ‘ಕ್ಷಿತಿಜ’ ಹಡಗಿನಿಂದ ಇಂಗ್ಲೆಂಡಿಗೆ ಹೋಗುವ ಒಬ್ಬ ಮಹಿಳೆಯನ್ನು ಕೇಂದ್ರದಲ್ಲಿರಿಸಿದ ಕತೆ.

ವಿದೇಶದಲ್ಲಿ ಎರಡು ವರ್ಷಗಳಷ್ಟು ವಾಸ್ತವ್ಯಮಾಡಿ ಬಂದ ಶಾಂತಿನಾಥರಿಗೆ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿ ದೊರಕಿತು. ಕೆಲವು ವರ್ಷಗಳಿಗಾಗಿ ದೇಸಾಯಿಯವರಿಗೆ ಮರಾಠವಾಡಾದಲ್ಲಿಯ ಔರಂಗಾಬಾದದಲ್ಲಿ ಪ್ರಾಧ್ಯಾಪಕನಾಗಿ ಇರಬೇಕಾಯಿತು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಲವಾರು ವರ್ಷ ರೀಡರ್ ಮತ್ತು ಇನ್ನೊಮ್ಮೆ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಪ್ರಮುಖರೆಂದು ಸೇವೆ ಸಲ್ಲಿಸಿ, ೧೯೮೮ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪದವನ್ನೂ ಕರ್ತವ್ಯ ದಕ್ಷತೆಯಿಂದ ನಿರ್ವಹಿಸಿದರು.

ನವ್ಯ ಮಾರ್ಗ

[ಬದಲಾಯಿಸಿ]

ಶಾಂತಿನಾಥ ದೇಸಾಯಿಯವರ ತಾರುಣ್ಯದ ವರ್ಷಗಳು ನವ್ಯಮಾರ್ಗ ಬಲಿತುಕೊಳ್ಳುತ್ತಿದ್ದ ಕಾಲ. ಗೋಪಾಲಕೃಷ್ಣ ಅಡಿಗರ ‘ನಡೆದು ಬಂದ ದಾರಿ ಕಡೆಗೆ ತಿರುಗಿಸಬೇಡ ಕಣ್ಣ, ಹೊರಳಿಸಬೇಡ’ ಎಂದು ಆವೇಶದಿಂದ ಆಹ್ವಾನ ಮಾಡಿದ ಕಾಲ. ಅನಂತಮೂರ್ತಿ, ಲಂಕೇಶ, ಕೃಷ್ಣಮೂರ್ತಿ ಮತ್ತು ಇನ್ನೂ ಇತರರು ಅಡಿಗರ ವಿಚಾರಗಳಿಂದ ಪ್ರಭಾವಿತರಾಗಿ ಬರೆಯತೊಡಗಿದ್ದರು. ಗೋಕಾಕರು ನವ್ಯಕಾವ್ಯದ ಸಮನ್ವಯದ ಮಾರ್ಗವನ್ನು ಕ್ಷೀಣವಾಗಿ ಸೂಚಿಸುತ್ತಿದ್ದರು.

೧೯೫೯ರಲ್ಲಿ ದೇಸಾಯಿಯವರ ಮೊದಲಿನ ಸಾಹಿತ್ಯ ಕೃತಿ ಸಣ್ಣಕತೆಗಳ ಸಂಗ್ರಹ ಪ್ರಕಟವಾಯಿತು. ಮನುಷ್ಯನನ್ನು ನೋಡುವ ದೃಷ್ಟಿಕೋನದಲ್ಲಾದ ಪಾಶ್ಚಾತ್ಯರಲ್ಲಿಯ ಬದಲನ್ನು ಕನ್ನಡದಲ್ಲಿಯೂ ಇಳಿಸುವ ಪ್ರಯತ್ನವನ್ನು ಶಾಂತಿನಾಥರು ಗಂಭೀರವಾಗಿ ಎತ್ತಿಕೊಂಡರು.

ಕಾದಂಬರಿ ಶಾಂತಿನಾಥರಿಗೆ ಮೇಲ್ಪಂಕ್ತಿಯ ಬರಹಗಾರನೆನ್ನುವ ಮಾನ್ಯತೆಯನ್ನು ಒದಗಿಸಿತು. ೧೯೬೧ರಲ್ಲಿ ‘ಮುಕ್ತಿ' ಕೃತಿಯ ಮೂಲಕ ನವ್ಯಪ್ರಕಾರವನ್ನು ಕನ್ನಡ ಕಾದಂಬರಿಲೋಕಕ್ಕೆ ತಂದವರು ಶಾಂತಿನಾಥ ದೇಸಾಯಿ. ಸಣ್ಣಕತೆಯಲ್ಲಿನ ಅವರ ಸಾಧನೆ ಅಷ್ಟೇ ಗಮನಾರ್ಹ. ಮೊದಮೊದಲು ಮನೋವಿಶ್ಲೇಷಣಾ ತಂತ್ರದಿಂದ ಒಳಮನದ ಹಾವಳಿಯ ಬಗ್ಗೆ ಅವರ ಲಕ್ಷ್ಯ ಕೇಂದ್ರಿತತವಾದಂತೆ ತೋರಿದರೂ ಕ್ರಮೇಣ ಅವರ ವಿಷಯಗಳ ಅನನ್ಯತೆ ಮನಸ್ಸನ್ನು ಸೆಳೆದುಕೊಳ್ಳುತ್ತದೆ. ‘ಮಂಜುಗಡ್ಡೆ’, ‘ಕ್ಷಿತಿಜ’, ಅವರ ಬಹುಚರ್ಚಿತ ಕತೆಗಳು. ಆದರೆ ಅವರ ಲಕ್ಷ್ಯ ಒಂದು ಸಾಮಾನ್ಯ ಹಗುರಾದ ವಿಷಯದ ಮೇಲೆ. ಆ ಸಮಸ್ಯೆಯ ಸಮಾಪ್ತಿಗಿಂತ ವ್ಯಕ್ತಿಯಲ್ಲಾಗುವ ಹಲವು ಪ್ರಕ್ರಿಯೆಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ‘ಕೂರ್ಮಾವತಾರ’, ‘ವಾಸನೆ’, ‘ಭರಮ್ಯಾ ಹೋಗಿ ನಿಖಿಲನಾದದ್ದು’ ಈ ಕತೆಗಳಲ್ಲಿ ಬದಿಗೊಗೆಯಲ್ಪಟ್ಟವರು, ಅವರ ಮನೋವಿಕಾಸ ಪ್ರಕ್ರಿಯೆ ನಾವು ಸಾಮಾನ್ಯವಾಗಿ ದುರ್ಲಕ್ಷಿಸುವ ವಿಷಯಗಳು. ಆದರೆ ನಮ್ಮ ಸುತ್ತೆಲ್ಲ ಇಂತಹ ಹಲವು ವೈಯಕ್ತಿಕ, ಸಾಮಾಜಿಕ ದುರ್ಲಕ್ಷಿತ ಘಟನೆಗಳೇ ಹರಡಿಕೊಂಡಿರುವಾಗ ಅವು ಸಾಹಿತ್ಯಕ ವಿಷಯಗಳೇಕಾಗಬಾರದು ಎನ್ನುವುದು ದೇಸಾಯಿಯವರ ಆಗ್ರಹ.

‘ನಾನಾನ ತೀರ್ಥಯಾತ್ರೆ’ ಒಬ್ಬ ಕುಡುಕನ ಕತೆ. ಆದರೆ ವಿಲಕ್ಷಣ ಪರಿಣಾಮಕಾರಿ. ನಾನಾ ಕುಡುಕನೆಂದಲ್ಲ. ಅವನದೂ ವಿಶ್ವವಿದೆ. ಅಲ್ಲಿಯ ಅಂತರ್ಯುದ್ಧದಲ್ಲಿ ರಾಮನನ್ನು ಗೆಲ್ಲುವ ರಾವಣನೇ ಹೀರೋ. ಜೀವನದ ಬಗೆಗಿನ ಕಹಿ, ಹತಾಶೆಯ ಕಿಂಚಿತ್ ಬಣ್ಣ ಬಳಸಿ ನಾನಾನ ಚಿತ್ರ ಎದ್ದು ನಿಲ್ಲುತ್ತದೆ. ಅವನ ತೀರ್ಥಯಾತ್ರೆಯ ಉದಾರಕತೆ ಉಳಿದ ಮಹತ್ವದ ದುರಂತಗಳಷ್ಟೇ ಮಹತ್ವದ್ದು. ‘...ನಿಖಿಲನಾದದ್ದು’ ಕತೆಯಲ್ಲಿಯ ಮನೆಯಾಳು ತನ್ನ ಮಾಲಿಕರ ಸರ್ಟಿಫಿಕೇಟುಗಳನ್ನು ಕದ್ದು ಶಹರಿಗೆ ಹೋಗಿ ನಿಖಿಳವಾಗುವ ಪ್ರಕರಣ ವ್ಯಂಗ್ಯದಿಂದ ತುಂಬಿದರೂ, ಸಿಟ್ಟು, ಬೆಲೆಯಿಲ್ಲದ ಮೌಲ್ಯಗಳನ್ನು ತುಳಿದು ಹೊರದಾಟುವ ಹೊಂಚು ರಹಸ್ಯಮಯತೆಯನ್ನು ತರುತ್ತದೆ. ಸಾಮಾಜಿಕ – ಸ್ಥಿತ್ಯಂತರಗಳ ಬಗ್ಗೆ ಅತ್ಯಂತ ಸೂಚಕವಾಗಿ ಮೆಲುದನಿಯಲ್ಲಿಯೇ ಎಷ್ಟೆಲ್ಲಾ ಹೇಳಿಹೋಗುತ್ತದೆ. ಹೀಗೆ ಒಂದೊಂದು ಕತೆಗೂ ಒಳದನಿಯಿದೆ. ‘ನದಿಯ ನೀರು’ ಕತೆಯಲ್ಲಿಯ ವ್ಯಕ್ತಿ ಸುಳ್ಳನ್ನು ಸಮರ್ಥವಾಗಿ ಹೇಳಿದ್ದಾನೆ. ತನ್ನ ಗೆಳೆಯನನ್ನು ನದಿಯಲ್ಲಿ ಮುಳುಗಿ ಸಾಯುವುದಕ್ಕೆ ತಾನೇ ಕಾರಣನಾಗಿರುವಾಗಲೂ ಅದಕ್ಕೂ ತನಗೂ ಏನೇನೂ ಸಂಬಂಧವಿಲ್ಲವೆಂದು ಚಿಕ್ಕಂದಿನಿಂದ ಬದುಕುತ್ತಾನೆ. ಆದರೆ ಹೀಗೆ ಬಾಹ್ಯರೂಪದಲ್ಲಿ ಅರಗಿಸಿಕೊಂಡ ಒಂದು ಅನುಭವ ಅವನನ್ನು ಹಿಂಸೆ ಮಾಡದೆ ಉಳಿಯುವಷ್ಟು ನಿಷ್ಠುರನಾಗಿ ಬಾಳಲು ಬಿಟ್ಟಿದೆಯೇ ಎನ್ನುವುದನ್ನು ಸಹ್ಯವಾಗಿ ಇಟ್ಟಿದ್ದಾರೆ, ನಮ್ಮ ಸುತ್ತಲಿನ ಮುಠ್ಠಾಳರೆಲ್ಲಾ ಹೃದಯ ಹೀನರೆ ಎಂದು ಶಂಕೆ ಪಡುವಂತೆ.

ಒಟ್ಟು ೪೯ ಕತೆಗಳನ್ನು ಬರೆದ ದೇಸಾಯಿ ಕಥಾ ಪ್ರಕಾರಗಳಲ್ಲಿ ಪ್ರಯೋಗಶೀಲತೆಯನ್ನು ಬಿಟ್ಟುಬಿಡುವುದಿಲ್ಲ. ಕತೆಯ ವಿಷಯದಲ್ಲಿ ಅವರು ತಂದ ಮಹತ್ವ – ಅತ್ಯಂತ ಮಿತವಾದ ರೇಖೆಗಳನ್ನು ಉಪಯೋಗಿಸಿ ವ್ಯಕ್ತಿ, ಮನೋವ್ಯಾಪಾರ ಮತ್ತು ಒಂದು ಸಾಮಾಜಿಕ ಸಂಬಂಧವನ್ನು ನಿರ್ಮಿಸುವಲ್ಲಿ ಅವರು ಯಶಸ್ಸು ಗಳಿಸಿದರು. ಕಾರ್ಟೂನ್ ಚಿತ್ರಗಳಂತೆ ತುಂಬಾ ಅರ್ಥಗರ್ಭಿತವಾದ ಈ ಕತೆಗಳು ಮೋಹಕವಾಗಿವೆ.

'ಸೃಷ್ಟಿ’ ಕಾದಂಬರಿಯಿಂದ ಹಿಡಿದು ಶಾಂತಿನಾಥ ದೇಸಾಯಿ ಅವರ ಮುಂದಿನ ಎಲ್ಲ ಕಾದಂಬರಿಗಳಲ್ಲಿ ಸಾಮಾಜಿಕ ಧೋರಣೆಗಳ ಬಗ್ಗೆ ಚಿಂತನೆಯಿದೆ. ಸಮಾಜ, ರಾಜಕಾರಣ, ಸಂಸ್ಕೃತಿ ಇವೆಲ್ಲವುಗಳ ಸ್ಖಲನವನ್ನು ಎಚ್ಚರದಿಂದ ನೋಡುವ ‘ಸೃಷ್ಟಿ’ ನವ್ಯೋತ್ತರ ಕಾಲದ ಮಹತ್ವದ ಕೃತಿ. ‘ಬೀಜ’ ಕಾದಂಬರಿ ಕೂಡ ಗ್ರಾಮಾಂತರದಲ್ಲಿ ಭರಭರನೆ ನಡೆಯುತ್ತಿರುವ ಜಾರುಗುಂಡಿಯ ಕಡೆ ಉರುಳು ಚಿತ್ರಿಸುತ್ತದೆ. ‘ಅಂತರಾಳ’ ಇನ್ನೊಂದು ಮಹತ್ವಾಕಾಂಕ್ಷೆಯ ಕಾದಂಬರಿ. ಶಾಂತಿನಾಥರ ಜೀವನ ದೃಷ್ಟಿಯಲ್ಲಿ ಮಾನವೀ ವಿಕಾಸದ ಸಂಕಲ್ಪನೆಯನ್ನು ಕುರಿತು ಇಲ್ಲಿ ಚಿಂತನವಾಗಿದೆ.

ತಾನು ಹುಟ್ಟಿಬಂದ ಧರ್ಮದ ಬಗ್ಗೆ ನಿರ್ದುಷ್ಟವಾಗಿ ಬರೆಯಬೇಕೆನ್ನುವ ಅಥೆಂಟಿಸಿಟಿಯ ಹಂಬಲದಿಂದ ‘ಓಂಣಮೋ’ ಕಾದಂಬರಿಯನ್ನು ಬರೆದರು. ಹುಟ್ಟಿನಿಂದ ಬಂದ ಅರಿವು, ಇರುವಿನ ಕೊನೆಯ ಈ ಅಂತರಾಳದಲ್ಲಿ ಬರೆದ ಕೃತಿಯಿದು. ಆದರೂ ಧಿಟ್ಟತನದಿಂದ ತನ್ನ ಸ್ವಾತಂತ್ರ್ಯದ ಅಭೀಪ್ಸೆಯನ್ನು ಪೂರೈಸಲು ಹಾತೊರೆದರು. ‘ಓಂಣಮೋ’ದ ಪ್ರಪಂಚದ ಎರಡು ಧ್ರುವಗಳು ಭಾರತ ಮತ್ತು ಪಶ್ಚಿಮ, ಜೈನ ಮತ್ತು ಕ್ರಿಶ್ಚಿಯನ್ ಧರ್ಮಗಳು, ಧರ್ಮವಾದ ಮತ್ತು ಮಾರ್ಕ್ಸ್ ವಾದಗಳ ವಿಚಾರ ಪ್ರಣಾಲಿಗಳು. ತಂತ್ರದಲ್ಲಿ ಕೂಡ ‘ಸೃಷ್ಟಿ’ಯಂತೆ ಇಲ್ಲಿಯೂ ಓದುಗರೊಡನೆ ಸಂವಾದ ಸಾಧಿಸುವ, ಡಾಯೆಲಿಕ್ಟಿಕ್ ತಂತ್ರವನ್ನು ಹೂಡಿದ್ದಾರೆ. ಈ ತಂತ್ರದಲ್ಲಿ ಬರುವ ‘ಕಥನದ ಪ್ರತಿಫಲನ’ ರೀತಿ ಗಮನಾರ್ಹವಾಗಿದೆ.

ವಿಮರ್ಶೆ

[ಬದಲಾಯಿಸಿ]

ಸೃಜನಶೀಲ ಸಾಹಿತ್ಯಕ ಚಟುವಟಿಕೆಗಳಷ್ಟೇ ವಿಚಾರಶೀಲ ಲೇಖನದ ಕಡೆಗೂ ಗಮನಕೊಟ್ಟ ಶಾಂತಿನಾಥ ದೇಸಾಯಿ ಕನ್ನಡದ ಅತ್ಯುತ್ತಮ ವಿಮರ್ಶಕರು. ‘ಸಾಹಿತ್ಯ ಮತ್ತು ಭಾಷೆ’, ‘ಗಂಗಾಧರ ಚಿತ್ತಾಲರ ಕಾವ್ಯಸೃಷ್ಟಿ’, ‘ಕನ್ನಡ ಕಾದಂಬರಿ ನಡೆದು ಬಂದ ದಾರಿ’, ‘ನವ್ಯಸಾಹಿತ್ಯದರ್ಶನ’ – ಅವರು ವಿಚಾರ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ. ಅವರು ಬೇಂದ್ರೆ ಅವರ ಮೇಲೆ ತಯಾರಿಸಿದ ನಿರ್ಬಂಧ ಸಭಿಕರನ್ನು ಮುಗ್ಧಗೊಳಿಸಿತ್ತು. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಅದರ ಅಂತಃಸತ್ವವನ್ನು ದಾರ್ಶನಿಕ ಹಿನ್ನೋಟವನ್ನು, ಆಳದಲ್ಲಿ ಹುದುಗಿದ ಮಾನವೀ ಸಭ್ಯತೆಯನ್ನು ಜ್ಞಾನಪೀಠದ ಸಮಿತಿಗೆ ಮಾನ್ಯವಾಗುವಂತೆ ದಿಗ್ಭ್ರಮೆಯಾಗುವಂತಹ ಪ್ರಭಾವದಿಂದ ಮಂಡಿಸಿದ್ದರು. ಗೋಕಾಕರ ಒಂದು ‘ಜೀವನ ಚಿತ್ರಣ’ದ ಚಿತ್ರೀಕರಣಕ್ಕೆ ಅವರ ವಿವಿಧ ಅಂಗಗಳ ವಿಶಿಷ್ಟತೆ ಹೊರಬರುವಂತೆ ಸಂದರ್ಶನ ಮಾಡಿದ್ದರು.

‘ಕನ್ನಡದ ಕಾದಂಬರಿ ನಡೆದು ಬಂದ ರೀತಿ’ ಒಂದು ವ್ಯಾಸಂಗಪೂರ್ಣ ಗ್ರಂಥ. ಮಹತ್ವದ್ದೆಂದರೆ, ಕೃತಿಪರೀಕ್ಷೆಯ ಸಮಯ ಅವರ ಮೌಲ್ಯಮಾಪನ ವಸ್ತುನಿಷ್ಠವಾಗುವಂತೆ ಕಾಳಜಿ ವಹಿಸಿದ್ದರು. ಎಲ್ಲೂ ಕಹಿ ಮತನಿಷ್ಠೆ ಇಟ್ಟುಕೊಳ್ಳದೆ ಸಾಹಿತ್ಯಕ ಮಾನದಂಡಗಳನ್ನು ಯೋಜಿಸಿ ಸೋದಾಹರಣ ಚಿಕಿತ್ಸೆ ಮಾಡಿದ ರೀತಿ ವಿಮರ್ಶಾ ಪದ್ಧತಿಗೆ ಮಾರ್ಗದರ್ಶಕವಾಗಿದೆ. ತಮ್ಮ ‘ಮುಕ್ತಿ’ ಕಾದಂಬರಿಯ ಗುಣ ದೋಷಗಳನ್ನೂ ಬಿಡದೆ ನಮೂದಿಸಿದ್ದು ಅವರ ನಿರ್ದಾಕ್ಷಿಣ್ಯಕ್ಕೆ, ಆತ್ಮಪರಾಙ್ಮುಖತೆಗೆ ಕನ್ನಡಿ ಹಿಡಿಯುತ್ತದೆ. ‘ನವ್ಯ ಸಾಹಿತ್ಯ ದರ್ಶನ’ ಕೃತಿ ಒಂದು ಸಂದರ್ಭಗ್ರಂಥವೆನ್ನುವಷ್ಟು ಮಹತ್ವದ್ದು.

ಹೊರಭಾಷೆಯಲ್ಲಿ ಕನ್ನಡ

[ಬದಲಾಯಿಸಿ]

ಗಂಭೀರ ಲೇಖನಗಳಂತೆ ಅವರು ಕನ್ನಡದ ತಮ್ಮ ಪ್ರೇಮವನ್ನು ಗಂಭೀರವಾಗಿಯೇ ಕಂಡರು. ಕನ್ನಡದ ಉತ್ತಮ ಕೃತಿಗಳು ಸಾಧ್ಯವಾದಷ್ಟು ಹೊರಭಾಷೆಯ ಓದುಗರಿಗೂ ತಲುಪಬೇಕು ಎನ್ನುವ ಕಳಕಳಿಯನ್ನು ಅವರು ಬಿಟ್ಟುಕೊಡಲಿಲ್ಲ. ‘Here Comes Revolution’ ಪಿ. ಲಂಕೇಶರ ‘ಕ್ರಾಂತಿ ಬಂತು ಕ್ರಾಂತಿ’ ಎಂಬ ನಾಟಕದ ಇಂಗ್ಲಿಷ್ ಅನುವಾದ. ಹಾಗೆಯೇ ‘Awasthe’ ಯು. ಆರ್. ಅನಂತಮೂರ್ತಿ ಅವರ ಕನ್ನಡ ಕಾದಂಬರಿ ‘ಅವಸ್ಥೆ’ಯ ಇಂಗ್ಲಿಷ್ ಅನುವಾದ. ಮರಾಠಿಯ ಆದ್ಯ ಕಾದಂಬರಿಕಾರರಾದ ಹರಿನಾರಾಯಣ ಆಪ್ಟೆ ಕುರಿತಾದ ‘ಮಿ.ಹರಿನಾರಾಯಣ ಆಪ್ಟೆ’ ಎನ್ನುವ ಮರಾಠಿ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದರು.

ವಿವಿಧ ಸೇವೆಗಳು

[ಬದಲಾಯಿಸಿ]

ಭಾಷಾ ವಿಕಾಸದ ಸಾಂಸ್ಕೃತಿಕ ಪರಿಕರಗಳಾದ, ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಮುಂತಾದ ವ್ಯವಸ್ಥೆಗಳಲ್ಲಿ ಯೋಗ್ಯ ಸಲಹೆಗಳಿಂದ ಉತ್ತಮ ಸಂಸ್ಕೃತಿ ರಕ್ಷಕರಾಗಿ ವ್ಯವಹರಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಅಕಾಡೆಮಿಗಳ ಸಲಹೆಗಾರರೆಂದು ಹಲವು ವರ್ಷಗಳ ಕಾಲ ಕೆಲಸ ಮಾಡಿದರು.

ವಿದಾಯ

[ಬದಲಾಯಿಸಿ]

ಲೇಖಕ, ವಾಚಕ, ವಿಮರ್ಶಕರನ್ನು ಒಟ್ಟುಗೂಡಿಸಿ ಒಂದು ಹೊಸ ಕ್ಷಿತಿಜವನ್ನು ತೋರಿಸುತ್ತಾ, ಆ ದಿಶೆಯಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟ ಕೃತಿ ಅವರ ಅಂತಿಮ ಕೃತಿ. ಸ್ವಾತಂತ್ರ್ಯಕ್ಕಾಗಿ, ಮುಕ್ತಿಗಾಗಿ ಕೊನೆ ಉಸಿರಿನವರೆಗೊ ಚಡಪಡಿಸಿದರು. ‘ಓಂಣಮೋ’ ಬರೆದು ಮುಗಿಸುವ ಕಾಲದಲ್ಲಿ ಅವರಿಗೆ ಉಸಿರುಗಟ್ಟಿದ ವ್ಯಾಧಿ. ಆ ನಿರ್ಬಂಧದ ಸಮಯದಲ್ಲಿಯೂ ಅನಿರ್ಬಂಧತೆಯ ಅತ್ಯುಚ್ಚ ಧರ್ಮಕ್ಕೆ ಹಾತೊರೆದು ಕೊನೆಯುಸಿರೆಳೆದರು (ಮಾರ್ಚ್ ೨೬, ೧೯೯೮) – ಕಾದಂಬರಿ ಮುಗಿಸಿದ್ದು ವಾರವೊಂದರಷ್ಟೇ ಮುಂಚೆ ; ಸಾಹಿತ್ಯಕ್ಕೂ ಅವರ ಜೀವನಕ್ಕೂ ಅಂತಿದ ನಂಟಿನ ಅವರ ಕತೆ ಹೇಳುತ್ತ. ಶಾಂತಿನಾಥ ದೇಸಾಯಿ ಒಂದು ವಿಶಾಲ ಪರಿಪ್ರೇಕ್ಷ್ಯವನ್ನು ತೆರೆದಿಟ್ಟು ತೆರಳಿಬಿಟ್ಟಿದ್ದಾರೆ.

ಮಾಹಿತಿ ಆಧಾರ

[ಬದಲಾಯಿಸಿ]

ಮಾರುತಿ ಶಾನಭಾಗ್ ಅವರ ಶಾಂತಿನಾಥ ದೇಸಾಯಿ ಅವರ ಕುರಿತ ಬರಹ, 'ಸಾಲು ದೀಪಗಳು', ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ.

ಕೃತಿಗಳು

[ಬದಲಾಯಿಸಿ]

ಸಣ್ಣ ಕಥಾ ಸಂಕಲನ

[ಬದಲಾಯಿಸಿ]
  • ಮಂಜುಗಡ್ಡೆ
  • ಕ್ಷಿತಿಜ
  • ದಂಡೆ
  • ರಾಕ್ಷಸ
  • ಪರಿವರ್ತನೆ
  • ಕೂರ್ಮಾವತಾರ

ಕಾದಂಬರಿಗಳು

[ಬದಲಾಯಿಸಿ]
  • ಮುಕ್ತಿ
  • ವಿಕ್ಷೇಪ
  • ಸೃಷ್ಟಿ
  • ಸಂಬಂಧ
  • ಬೀಜ
  • ಅಂತರಾಳ
  • ಓಂ ಣಮೋ

ಅನುವಾದ

[ಬದಲಾಯಿಸಿ]

ಪ್ರಶಸ್ತಿಗಳು

[ಬದಲಾಯಿಸಿ]
  • ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ "ರಾಕ್ಷಸ ಕಥಾಸಂಕಲನ" (1977)
  • ವರ್ಧಮಾನ ಪ್ರಶಸ್ತಿ
  • ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1984)
  • "ಓಂ ಣಮೋ" ಎಂಬ ಕೃತಿಗೆ ೨೦೦೦ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ಸುಧಾ ವಾರಪತ್ರಿಕೆ ಕಾದಂಬರಿ ಪ್ರಶಸ್ತಿ "ಸಂಬಂಧ ಕಾದಂಬರಿ" (1982)

ಉಲ್ಲೇಖಗಳು

[ಬದಲಾಯಿಸಿ]
  1. "ಶಾಂತಿನಾಥ ದೇಸಾಯಿ". kanaja.in , 6 August 2017.[ಶಾಶ್ವತವಾಗಿ ಮಡಿದ ಕೊಂಡಿ]