ವಿಷಯಕ್ಕೆ ಹೋಗು

ಶ್ರೀಕೃಷ್ಣ ಆಲನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀಕೃಷ್ಣ ಆಲನಹಳ್ಳಿ
ಜನನಏಪ್ರಿಲ್ ೩. ೧೯೪೭
ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮ
ಮರಣಜನವರಿ ೪, ೧೯೮೯
ವೃತ್ತಿಅಧ್ಯಾಪಕರು, ಸಾಹಿತಿಗಳು
ವಿಷಯಕನ್ನಡ ಸಾಹಿತ್ಯ

ಸುಪ್ರಸಿದ್ಧ ಬರಹಗಾರರಾದ ಶ್ರೀಕೃಷ್ಣ ಆಲನಹಳ್ಳಿ ( ಏಪ್ರಿಲ್ ೩, ೧೯೪೭ - ಜನವರಿ ೪, ೧೯೮೯) ಅವರು ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆ ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದರು[].

ಸಾಧನೆ

[ಬದಲಾಯಿಸಿ]

ಶ್ರೀಕೃಷ್ಣ ಆಲನಹಳ್ಳಿ ಅವರು ೧೯೪೭ರ ವರ್ಷದಲ್ಲಿ ಏಪ್ರಿಲ್ ೩ನೇ ದಿನಾಂಕದಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದವರು. ಅವರು ಬದುಕಿದ್ದು ನಲವತ್ತೆರಡು ವರ್ಷಕ್ಕೂ ಕಡಿಮೆ ಅವಧಿ. ಅವರು ನಿಧನರಾದದ್ದು ಜನವರಿ ೪, ೧೯೮೯ರಲ್ಲಿ. ಈ ಅತಿ ಚಿಕ್ಕ ವಯಸ್ಸಿನಲ್ಲೇ ಅವರು ಕನ್ನಡ ಸಾಹಿತ್ಯದಲ್ಲಿ ಮೂಡಿಸಿ ಹೋದ ಛಾಪು ಅತ್ಯಂತ ಸ್ಮರಣೀಯವಾದದ್ದು.

ವಿದ್ಯಾರ್ಥಿ ಜೀವನದಲ್ಲೇ ಬರಹಗಾರ

[ಬದಲಾಯಿಸಿ]

ಆಲನಹಳ್ಳಿಯವರು ವಿದ್ಯಾರ್ಥಿ ಜೀವನದಲ್ಲೇ ಸಮೀಕ್ಷಕ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಸಾಹಿತ್ಯ ವಲಯದಲ್ಲಿ ಅದು ಎಲ್ಲೆಡೆ ಮೆಚ್ಚುಗೆ ಪಡೆದಿತ್ತು. ಅಂದಿನ ಬಹುತೇಕ ಪ್ರಸಿದ್ಧ ಬರಹಗಾರರು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅಂದಿನ ದಿನ ಆ ಪತ್ರಿಕೆಯಲ್ಲಿ ಬರೆಯಿರಿ ಎಂದು ಅವರು ತಮ್ಮ ಗೆಳೆಯರನ್ನು ಎಷ್ಟು ಒತ್ತಾಯಿಸುತ್ತೆಂದರೆ, ಪಿ. ಲಂಕೇಶ್ ಅವರು ಅವರ ಒತ್ತಾಯದ ಕಾಟವನ್ನೇ ಒಂದು ಕವನದ ಸಾಲಾಗಿ “ನನ್ನ ಸುತ್ತಾ” ಎಂಬ ಅವರ ಪ್ರಸಿದ್ಧ ಕವನದಲ್ಲಿ ಬರೆದಿದ್ದರು.

ಅಡಿಗರಿಂದ ಪ್ರಶಂಸೆ

[ಬದಲಾಯಿಸಿ]

ಶ್ರೀಕೃಷ್ಣ ಆಲನಹಳ್ಳಿ ಅವರ ಕವನ ಸಂಗ್ರಹ “ಮಣ್ಣಿನ ಹಾಡು” ಕೃತಿಗೆ ಮುನ್ನುಡಿಯಲ್ಲಿ ಅಡಿಗರು ಅದನ್ನು ಕನ್ನಡ ಕಾವ್ಯದಲ್ಲಿ ನಡೆದ ‘ಘಾತಪಲ್ಲಟ’ ಎಂದು ಬಣ್ಣಿಸಿದ್ದರು. ಅದು ಶ್ರೀಕೃಷ್ಣರಿಗೆ ದೊಡ್ಡ ಹೆಸರು ತಂದಿತು. ಎಷ್ಟು ಹೆಸರು ಎಂದರೆ ಅಂದು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಎಸ್. ನಾರಾಯಣ ಶೆಟ್ಟರು, “ಲೈಬ್ರೆರಿಯಿಂದ ಕೃಷ್ಣನ ಪುಸ್ತಕ ಎಲ್ಲರೂ ತೆಗೆದುಕೊಂಡು ಹೋಗಿ ಓದುತ್ತಾರೆ, ನನ್ನದು ಯಾರೂ ತೆಗೆದುಕೊಂಡು ಹೋಗುವುದಿಲ್ಲ, ನನ್ನದನ್ನೂ ತೆಗೆದುಕೊಂಡು ಹೋಗಲಿ ಎಂದು ಲೈಬ್ರೆರಿಯಲ್ಲಿ ನನ್ನ ಪುಸ್ತಕವನ್ನು ಅವನ ಪುಸ್ತಕದ ಹತ್ತಿರವೇ ಇಟ್ಟೆ, ಆದರೂ ಯಾರೂ ತೆಗೆದುಕೊಂಡು ಹೋಗಲಿಲ್ಲ” ಎಂದು ತಮಾಷೆಯಾಗಿ ಹೇಳುತ್ತಿದ್ದರಂತೆ. ಆ ಮಾತು ನಿಜವೂ ಆಗಿತ್ತು. ಕೃಷ್ಣ ಒಳ್ಳೆಯ ಲೇಖಕರು ಮಾತ್ರ ಅಲ್ಲ, ಜನಪ್ರಿಯರೂ ಆಗಿದ್ದರು.

ಪ್ರಸಿದ್ಧ ಕಾದಂಬರಿಗಳು

[ಬದಲಾಯಿಸಿ]

ಮುಂದೆ ಆಲನಹಳ್ಳಿ ಅವರು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ‘ಕಾಡು’, ‘ಪರಸಂಗದ ಗೆಂಡೆತಿಮ್ಮ’, ‘ಗೀಜಗನ ಗೂಡು’, ‘ಫೀನಿಕ್ಸ್’ ಅಂದಿನ ದಿನದಲ್ಲೇ ಸಿನೆಮಾಗಳಾದವು. ಅವರಿಗೆ ಅಪಾರ ಪ್ರಖ್ಯಾತಿ ಬಂತು. ಶ್ರೀಕೃಷ್ಣ ಆಲನಹಳ್ಳಿ ಅವರ ನಿಧನರಾದ ನಂತರ ಅವರ “ಭುಜಂಗಯ್ಯನ ದಶಾವತಾರಗಳು” ಕೂಡಾ ಚಲನಚಿತ್ರವಾಯಿತು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿಗಳು ಸಿನಿಮಾಗಳಾದಾಗ ಪ್ರಶಸ್ತಿಗಳಲ್ಲಿ ಕೂಡಾ ಹೆಸರು ಮಾಡಿದವು. ‘ಗೀಜಗನ ಗೂಡು’ ಟಿ. ಎಸ್. ರಂಗ ಅವರಿಂದ, ‘ಕಾಡು’ ಗಿರೀಶ್ ಕಾರ್ನಾಡ್ ಅವರಿಂದ, ‘ಪರಸಂಗದ ಗೆಂಡೆ ತಿಮ್ಮ ಮಾರುತಿ ಶಿವರಾಂ ಅವರಿಂದ, ‘ಭುಜಂಗಯ್ಯನ ದಶಾವತಾರಗಳು’ ಲೋಕೇಶ್ ಅವರಿಂದ ನಿರ್ದೇಶಿಸಲ್ಪಟ್ಟವು. ಕಾಡು ಚಿತ್ರದಲ್ಲಿ ಅಮರೀಶ್ ಪುರಿ ನಟಿಸಿದ್ದರು. ಅವರ ‘ಮಣ್ಣಿನ ಹಾಡು’ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.

ಬದುಕಿನಲಿ ವ್ಯತ್ಯಯವಿದ್ದರೂ ಅಗಾಧ ಸಾಧನೆ

[ಬದಲಾಯಿಸಿ]

ಆದರೆ ಅವರಿಗೆ ಐಶ್ವರ್ಯ ಬಂತೇ? ಬಹುಶಃ ಇಲ್ಲ ಎನ್ನುತ್ತಾರೆ ಅವರ ಅವರ ಅಂದಿನ ಗೆಳೆಯರು. ತೋಟ ಮಾಡಿದರು. ಅದು ಫಲ ಬರುವಷ್ಟು ಬೆಳೆಯುವ ಹೊತ್ತಿಗೆ ಹೋಗಿಬಿಟ್ಟರು. ‘ಸಮೀಕ್ಷಕ’ ಪ್ರಕಟಿಸುವಾಗಲೂ ಅವರು ಶ್ರೀಮಂತರಾಗಿರಲಿಲ್ಲ. ತಂದೆಯನ್ನು ಚಿಕ್ಕಂದಿನಲ್ಲಿ ಕಳೆದುಕೊಂಡಿದ್ದರು. ತಾಯಿ ಊರಿನಲ್ಲಿ ಇದ್ದರು. ವಿದ್ಯಾರ್ಥಿ ದೆಸೆಯಲ್ಲಿ ಜೆ. ಎಸ್. ಎಸ್ ಹಾಸ್ಟೆಲಿನ ಬಿಟ್ಟಿ ಊಟ, ಗೀತಾ ರಸ್ತೆಯ ಸಂಪಿಗೆ ಮರದ ಕೆಳಗಿನ ಮನೆಗೆ ಹತ್ತು ರೂಪಾಯಿ ಬಾಡಿಗೆ ಕೊಡುವಾಗಲೂ ಪರದಾಡಿ ನೂರೆಂಟು ಸಣ್ಣ ಪುಟ್ಟ ಸಾಲಗಳಲ್ಲಿ ಮುಳುಗಿರುತ್ತಿದ್ದರಂತೆ. ಒಟ್ಟಿನಲ್ಲಿ ಶಿಸ್ತಿನ ಸುವ್ಯವಸ್ಥಿತವಾದ ಬದುಕು ಅವರದ್ದಾಗಿರಲಿಲ್ಲ..

ಹೀಗಿದ್ದರೂ ಅವರು ತಮ್ಮ ಬರಹಗಳಲ್ಲಿ ನಿರಂತರವಾಗಿ ಬೆಳೆಯುತ್ತಿದ್ದವರು. ಅವರ ಕೊನೆಯ ಕೃತಿಗಳಾದ “ತಿಕ ಸುಟ್ಟ ದೇವರು”, “ಅರಮನೆ” ಮೊದಲಾದವುಗಳಲ್ಲಿನ ಅವರ ಭಾಷೆಯ ಬಳಕೆ, ಅನುಭವ ಹೆಚ್ಚು ಹೆಚ್ಚು ಮಾಗಿದ್ದು ಕಾಣುತ್ತದೆ. ಅವರು ಶ್ರೇಷ್ಠತೆಯ ಮಟ್ಟ ತಲುಪಿದ್ದರು ಎಂಬುದು ಸಾಹಿತ್ಯ ವಿದ್ವಾಂಸರ ಅಭಿಪ್ರಾಯ.

‘ಮಣ್ಣಿನ ಹಾಡು’ ಅಲ್ಲದೆ ‘ಕಾಡುಗಿಡದ ಹಾಡು ಪಾಡು’, ‘ಡೋಗ್ರಾ ಪಹಾರಿ ಪ್ರೇಮಗೀತೆಗಳು’ ಅವರ ಕಥಾ ಸಂಕಲನಗಳು. ‘ತಪ್ತ’, ‘ಫೀನಿಕ್ಸ್’ ಅವರ ಕಥಾ ಸಂಕಲನಗಳು. ‘ಗ್ರಾಮಾಯಣ ಸಮೀಕ್ಷೆ’, ‘ಅವಲೋಕನ’, ‘ಅಂತಃಕರಣ’ ಅವರ ಸಂಪಾದಿತ ಕೃತಿಗಳು.

ದೇಸೀ ಸೊಗಡು

[ಬದಲಾಯಿಸಿ]

ಅವರ ಕತೆಗಳ ಮೇಲೆ ನವ್ಯದ ಪ್ರಭಾವ ಅಷ್ಟಿಷ್ಟು ಬಿದ್ದಿತ್ತೋ ಏನೋ, ಆದರೆ ಕಾದಂಬರಿಗಳೆಲ್ಲ ಆಲನಹಳ್ಳಿಯಲ್ಲೇ ಅರಳಿದಂಥವು. ಅವುಗಳಿಗೆ ಅದೆಂಥ ದೇಸಿ ಸೊಗಡು. ಬರೆಯುತ್ತಾ ಬರೆಯುತ್ತಾ ಒಂದು ಮಾಂತ್ರಿಕ ಜಗತ್ತನ್ನು ಕಟ್ಟಿಕೊಡಬಲ್ಲ ತಾಕತ್ತಿದ್ದ ಆಲನಹಳ್ಳಿ, ಹೋರಾಟದಲ್ಲಿ ತೊಡಗಿಕೊಂಡದ್ದು, ಎಲ್ಲೋ ಜಗಳ ಆಡಿದ್ದು, ಯಾರನ್ನೋ ತಡವಿಕೊಂಡು ಜಿದ್ದಿಗೆ ಬಿದ್ದದ್ದು, ರಾತ್ರಿಪೂರ ಎಚ್ಚರಿದ್ದು ಬರೆಯುತ್ತಿದ್ದದ್ದು, ಅಸಂಖ್ಯ ಪ್ರೇಯಸಿರನ್ನು ಕಟ್ಟಿಕೊಂಡು ಅಲೆಯುತ್ತಿದ್ದದ್ದು, ಅದ್ಯಾವುದೋ ಕಾಡು ಹೊಕ್ಕು ಕೂತಿರುತ್ತಿದ್ದದ್ದು – ಇವೆಲ್ಲ ಅವರ ಗೆಳೆಯರ ಊಹೆಯಲ್ಲೇ ನಿಜವಾಗುತ್ತಿದ್ದ ಸಂಗತಿಗಳು.

‘ಕಾಡು’ ಕಾದಂಬರಿಯ ಕಿಟ್ಟಿ, ‘ಪರಸಂಗ’ದ ಗೆಂಡೆತಿಮ್ಮ, ‘ದಶಾವತಾರ’ದ ಭುಜಂಗಯ್ಯ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಗ್ಧರೇ. ಕಿಟ್ಟಿಯದು ಸಹಜ ಮುಗ್ಧತೆ. ಗೆಂಡೆತಿಮ್ಮ ನಮ್ಮ ಹಳ್ಳಿಯಲ್ಲಿ ಎದುರಾಗುವಂಥ ಎಡವಟ್ಟು ತರುಣ, ಭುಜಂಗಯ್ಯ ಎಲ್ಲದರಲ್ಲೂ ರೇಜಿಗೆ ಹುಟ್ಟಿ, ಮತ್ತೊಂದೇನೋ ಮಾಡಲು ಹೊರಟು ಎಲ್ಲದರಲ್ಲೂ ವಿಫಲನಾಗುವ ನಮ್ಮೊಳಗಿನ ಹುಂಬ.

ಆಲನಹಳ್ಳಿ ವಾಚಿಕೆ

[ಬದಲಾಯಿಸಿ]

ಶ್ರೀಕೃಷ್ಣ ಆಲನಹಳ್ಳಿ ಕನ್ನಡ ಸಾಹಿತ್ಯ ಲೋಕ ಕಂಡ ಅಪೂರ್ವ ಪ್ರತಿಭೆ. ಅವರು ನಿಧನರಾದ ಎರಡು ದಶಕಗಳು ಕಳೆದ ನಂತರದಲ್ಲಿ ಇತ್ತೀಚೆಗೆ ವಿವೇಕ ಶಾನಭಾಗರ ಸಂಪಾದಕೀಯದಲ್ಲಿ ಹಲವಾರು ಲೇಖಕರು ಕೂಡಿ ಮೂಡಿಸಿರುವ ‘ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ’ ಅವರು ಹೇಗೆ ಕಾಲಗಳನ್ನು ಮೀರಿ ಸದಾ ಪ್ರಸ್ತುತರು ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

ಕೃತಿಗಳು

[ಬದಲಾಯಿಸಿ]

ಕವನ ಸಂಕಲನ

[ಬದಲಾಯಿಸಿ]
  • ಮಣ್ಣಿನ ಹಾಡು
  • ಕಾಡುಗಿಡದ ಹಾಡು ಪಾಡು
  • ಡೋಗ್ರಾ ಪಹಾರಿ ಪ್ರೇಮಗೀತೆಗಳು

ಕಥಾಸಂಕಲನ

[ಬದಲಾಯಿಸಿ]
  • ತಪ್ತ (೮ ಕಥೆಗಳು)
  • ಫೀನಿಕ್ಸ.
  • ಗೀಜಗನ ಗೂಡು.

ಕಾದಂಬರಿ

[ಬದಲಾಯಿಸಿ]
  • ಭುಜಂಗಯ್ಯನ ದಶಾವತಾರ
  • ಕಾಡು
  • ಪರಸಂಗದ ಗೆಂಡೆ ತಿಮ್ಮ

ಸಂಪಾದನೆ

[ಬದಲಾಯಿಸಿ]
  • ಗ್ರಾಮಾಯಣ ಸಮೀಕ್ಷೆ
  • ಅವಲೋಕನ
  • ಅಂತಃಕರಣ

ಚಿತ್ರೀಕರಣ

[ಬದಲಾಯಿಸಿ]
  • ಶ್ರೀಕೃಷ್ಣ ಆಲನಹಳ್ಳಿಯವರ ‘ಕಾಡು’ ಕಾದಂಬರಿ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಹಿಂದಿ ಚಲನಚಿತ್ರಗಳ ಖ್ಯಾತ ನಟ ಅಮರೀಶ ಪುರಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗಿರೀಶ ಕಾರ್ನಾಡ ಚಲನಚಿತ್ರದ ನಿರ್ದೇಶಕರು.
  • ‘ಪರಸಂಗದ ಗೆಂಡೆ ತಿಮ್ಮ’ ಈ ಚಲನಚಿತ್ರದಲ್ಲಿ ಕನ್ನಡಚಿತ್ರರಂಗದ ಚರಿತ್ರನಟ ಲೋಕೇಶ ಮುಖ್ಯ ಪಾತ್ರದಲ್ಲಿದ್ದಾರೆ. ‘ರಾ.ಶಿ.ಸಹೋದರರು’ ಈ ಚಿತ್ರದ ನಿರ್ಮಾಪಕರು.
  • ಭುಜಂಗಯ್ಯನ ದಶಾವತಾರ ಕಾದಂಬರಿಯು ಚಲನಚಿತ್ರವಾಗಿದೆ. ಗಿರಿಜಾ ಲೋಕೇಶ್ ಈ ಚಿತ್ರದ ನಿರ್ಮಾಪಕರಾಗಿದ್ದರೆ, ಲೋಕೇಶ ಚಿತ್ರವನ್ನು ನಿರ್ದೇಶಿಸಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಪುರಸ್ಕಾರ

[ಬದಲಾಯಿಸಿ]
  • ‘ಕಾಡು’ ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ
  • ‘ಮಣ್ಣಿನ ಹಾಡು’ ಕವಿತಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
  • 'ಕಾಡಿನ ಹುಡುಗ ಕೃಷ್ಣ' ಇವರ ಅಭಿನಂದನ ಗ್ರಂಥ

ಶ್ರೀಕೃಷ್ಣ ಆಲನಹಳ್ಳಿಯವರು ೧೯೮೯ ಜನೆವರಿ ೪ ರಂದು ನಿಧನರಾದರು.ಪ್ರಾರಂಭಿಕ ಶಿಕ್ಷಣ ಹುಟ್ಟಿದ ಹಳ್ಳಿಯಲ್ಲಿ. ಕ್ಯಾತನ ಹಳ್ಳಿಯಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಣ. ಮಹಾರಾಜ ಕಾಲೇಜಿನಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕದೊಡನೆ ಬಿ.ಎ. ಪದವಿ ಮತ್ತು ಮಾನಸಗಂಗೋತ್ರಿಯಿಂದ ಎಂ.ಎ. ಪದವಿ ಪಡೆದರು. ಬಿ.ಎ. ಪದವಿಗಾಗಿ ಓದುತ್ತಿರುವಾಗಲೇ ‘ಸಮೀಕ್ಷಕ’ ಎಂಬ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸತೊಡಗಿದರು. ಸೃಜನಶೀಲ ಬರಹಗಳಿಗೆ, ವಿಮರ್ಶೆಗಳಿಗೆ ಮೀಸಲಾದ ಪತ್ರಿಕೆಯು ಹಲವಾರು ಸಾಹಿತಿಗಳ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿಯೇ ಅವರ ‘ಮಣ್ಣಿನ ಹಾಡು’ ಕವನ ಸಂಕಲನವೂ ಪ್ರಕಟವಾಯಿತು.ಉದ್ಯೋಗಿಯಾಗಿ ಸೇರಿದ್ದು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ (೧೯೬೯). ಮಾನಸ ಗಂಗೋತ್ರಿಯ ಭಾಷಾ ಅಧ್ಯಯನ ಸಂಸ್ಥೆಯಲ್ಲಿಯೂ ಕೆಲಕಾಲ ನಿರ್ವಹಿಸಿದ ಅಧ್ಯಾಪಕ ವೃತ್ತಿ (೧೯೭೫-೭೯). ನಂತರ ಪೂರ್ಣಾವಧಿಯ ಲೇಖಕರಾಗಿ ತೊಡಗಿಸಿಕೊಂಡದ್ದು ಸಾಹಿತ್ಯ, ಚಲನಚಿತ್ರ, ಪತ್ರಿಕೋದ್ಯಮ ಮತ್ತು ಕೃಷಿ. ಮಹತ್ವಾಕಾಂಕ್ಷಿಯಾಗಿದ್ದ ಕೃಷ್ಣರವರು ಯಾವುದೇ ಕೆಲಸ ಸಾಧಿಸುವ ಶಕ್ತಿ ಅವರಲ್ಲಿತ್ತು.ಧಾಳಿ ಇವುಗಳನ್ನು ಕೇಂದ್ರೀಕರಿಸಿಕೊಂಡು ಬರೆದ ಕಾದಂಬರಿಗಳು. ಕಾಡು (೧೯೭೧), ಪರಸಂಗದ ಗೆಂಡೆತಿಮ್ಮ (೧೯೭೪) ಮತ್ತು ಭುಜಂಗಯ್ಯನ ದಶಾವತಾರಗಳು (೧೯೮೨). ಹಲವಾರು ಮುದ್ರಣ ಕಂಡ ‘ಕಾಡು’ ಕಾದಂಬರಿಯು ಭಾರತೀಯ ಭಾಷೆಗಳಲ್ಲದೆ ಐರೋಪ್ಯ ಭಾಷೆಗಳಿಗೂ ಅನುವಾದಗೊಂಡಿದೆ. ‘ಭುಜಂಗಯ್ಯನ ದಶಾವತಾರಗಳು’ ಕಾದಂಬರಿಯು ಮಲಯಾಳಂಗೆ ಅನುವಾದಗೊಂಡಿದೆ.‘ಕಾಡು’ ಕಾದಂಬರಿಯು ಇದೇ ಹೆಸರಿನಿಂದ ಚಲನಚಿತ್ರವಾಗಿದ್ದು (೧೯೭೪), ಗಿರೀಶ್ ಕಾರ್ನಾಡರು ನಿರ್ದೇಶಿಸಿದ್ದಾರೆ, ‘ಪರಸಂಗದ ಗೆಂಡೆತಿಮ್ಮ’ ಕಾದಂಬರಿಯನ್ನು ಮಾರುತಿ ಶಿವರಾಂರವರು ನಿರ್ದೇಶಿಸಿದ್ದಾರೆ (೧೯೭೮). ಎರಡೂ ಚಿತ್ರಗಳು ಯಶಸ್ವಿ ಚಿತ್ರಗಳೆನಿಸಿದ್ದವು. ದಟ್ಟವಾದ ಹಳ್ಳಿಯ ಅನುಭವವನ್ನೇ ಮೂಲದ್ರವ್ಯವಾಗಿ ಬಳಸಿಕೊಂಡು ರಚಿಸಿದ ಹಲವಾರು. ಕತೆಗಳು ‘ತಪ್ತ’ (೧೯೭೦), ಪ್ರಥಮ ಕಥಾಸಂಕಲನ ಮತ್ತು ‘ಫೀನಿಕ್ಸ್’ ಸಂಕಲನವು ೧೯೭೫ರಲ್ಲಿ ಪ್ರಕಟವಾಯಿತು. ಸಣ್ಣ ಕತೆಗಳಲ್ಲಿ ‘ಫೀನಿಕ್ಸ್’ (೧೯೭೮-ಉಗ್ರನರಸಿಂಹ ನಿರ್ದೇಶನ), ‘ಗೀಜಗನ ಗೂಡು’ (೧೯೭೮-ಟಿ. ಎಸ್. ರಂಗಾ ನಿರ್ದೇಶನ), ಕುರುಬರ ಲಕ್ಕನೂ ಎಲಿಜಬೆತ್ ರಾಣಿಯೂ (೧೯೮೧-ಎಚ್.ಎಂ. ಕೃಷ್ಣಮೂರ್ತಿ ನಿರ್ದೇಶನ) ಚಲನಚಿತ್ರಗಳಾದವು.ಹಳ್ಳಿಯ ಜೀವನವು ಆಧುನಿತೆಯ ಸಂಘರ್ಷಕ್ಕೆ ಸಿಕ್ಕಿ ಬದಲಾಗುತ್ತಿರುವ ಸಾಮಾಜಿಕ ಹಿನ್ನೆಲೆಯನ್ನು ಗದ್ಯದಲ್ಲಿ ಅಭಿವ್ಯಕ್ತಪಡಿಸಿದರೆ ಕವಿತೆಗಳಲ್ಲಿ ಕಾಮದ ವಿವಿಧ ನೆಲೆಗಳನ್ನು ಶೋಧಿಸಹೊರಟಿದ್ದಾರೆ. ‘ಮಣ್ಣಿನ ಹಾಡು’ (೧೯೬೬), ‘ಕಾಡುಗಿಡದ ಹಾಡು-ಪಾಡು’ (೧೯೭೩), ‘ಪ್ರಕಟಿಸಲಾಗದ ಪದ್ಯಗಳು’ ಎಂಬ ಮೂರು ಕವನ ಸಂಕಲನಗಳನ್ನು ನವ್ಯಕಾವ್ಯವು ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಪ್ರಕಟವಾದವು. ಅನುವಾದದಲ್ಲಿಯೂ ವಿಶಿಷ್ಟ ಪ್ರತಿಭೆಯನ್ನು ತೋರಿರುವ ಕೃಷ್ಣರವರು ‘ಡೋಗ್ರಿ ಪಹಾಡಿ ಪ್ರೇಮಗೀತೆಗಳು’ (೧೯೭೫) ಎಂಬ ಸಂಕಲನದಲ್ಲಿ ಜಮ್ಮು-ಕಾಶ್ಮೀರಿ ಭಾಷೆಯಾದ ಡೋಗ್ರಿ-ಪಹಾಡಿ ಭಾಷೆಯಿಂದ ಡಾ. ಕರಣಸಿಂಗ್‌ರವರು ಇಂಗ್ಲಿಷ್‌ಗೆ ಅನುವಾದಿಸಿದ್ದನ್ನು ಆಲನಹಳ್ಳಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ.ಮಣ್ಣಿನ ಹಾಡು’ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನವೂ ದೊರೆತಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಶ್ರೀಕೃಷ್ಣ ಆಲನಹಳ್ಳಿ". sallapa.com. Retrieved 7-2-2014. {{cite web}}: Check date values in: |accessdate= (help)