ವಿಷಯಕ್ಕೆ ಹೋಗು

ಬಾಲಸರಸ್ವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಂಜಾವೂರು ಬಾಲ ಸರಸ್ವತಿ
ಜನನಮೇ ೧೩, ೧೯೧೮
ಮದರಾಸು
ಮರಣಫೆಬ್ರುವರಿ ೯, ೧೯೮೪
ವೃತ್ತಿಭರತನಾಟ್ಯ ಕಲಾವಿದರು
Years active೧೯೨೫-೧೯೮೪

ಭಾರತೀಯ ನೃತ್ಯ ಕಲೆಯಲ್ಲಿ ಬಾಲಸರಸ್ವತಿ (ಮೇ ೧೩, ೧೯೧೮ - ಫೆಬ್ರುವರಿ ೯, ೧೯೮೪) ಅವರದು ಪ್ರಖ್ಯಾತ ಹೆಸರು. ಭರತನಾಟ್ಯ ಕಲೆಯನ್ನು ಭಾರತ ಮತ್ತು ವಿಶ್ವದ ವಿವಿದೆಡೆಗಳಲ್ಲಿ ಪ್ರಖ್ಯಾತಗೊಳಿಸುವಲ್ಲಿ ಬಾಲಸರಸ್ವತಿಯವರ ಕೊಡುಗೆ ಮಹತ್ವದ್ದು.

ಪ್ರಸಿದ್ಧ ಕಲಾಪರಂಪರೆ[ಬದಲಾಯಿಸಿ]

ಬಾಲಸರಸ್ವತಿಯವರು ಮೇ ೧೩, ೧೯೧೮ರಲ್ಲಿ ಜನಿಸಿದರು. ಸಂಗೀತ ಮತ್ತು ನೃತ್ಯಕಲೆಯಲ್ಲಿ ಪಾರಂಪರಿಕ ಹಿನ್ನಲೆಯನ್ನು ಹೊಂದಿದ್ದ ವಂಶದಿಂದ ಮೂಡಿ ಬಂದ ಪ್ರತಿಭೆಯಾದ ಅವರು, ತಮ್ಮ ಈ ಕುಟುಂಬದ ಏಳನೆಯ ತಲೆಮಾರಿನ ಪ್ರತಿಭೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಬಾಲಸರಸ್ವತಿಯವರ ಪೂರ್ವಜರಾದ ಪಾಪಮ್ಮಾಳ್ ಅವರು ಸಂಗೀತ ಮತ್ತು ನೃತ್ಯ ವಿದ್ವನ್ಮಣಿಯಾಗಿ ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ತಂಜಾವೂರು ಸಂಸ್ಥಾನದ ಆಸ್ಥಾನ ಕಲಾವಿದೆಯಾಗಿದ್ದರು. ಬಾಲಸರಸ್ವತಿಯವರ ಅಜ್ಜಿ ವೀಣಾ ಧಾನಮ್ಮಾಳ್ ಅವರು ಇಪ್ಪತ್ತನೆ ಶತಮಾನದ ಪ್ರಾರಂಭದಲ್ಲಿ ಅತ್ಯಂತ ಪ್ರಭಾವಶಾಲಿ ಸಂಗೀತಗಾರ್ತಿಯಾಗಿದ್ದರು. ತಾಯಿ ಜಯಮ್ಮಾಳ್ ಅವರು ಪ್ರಖ್ಯಾತ ಗಾಯಕಿಯಾಗಿದ್ದು ಮಗಳ ಕಲಿಕೆಗೆ ನೀರೆರೆದರು. ಬಾಲಸರಸ್ವತಿಯವರು ಸಂಗೀತ ಮತ್ತು ನೃತ್ಯಗಳೆರಡರಲ್ಲೂ ಪರಿಣತಿಯನ್ನು ಸಾಧಿಸಿದರು.

ಕಲಿಕೆ[ಬದಲಾಯಿಸಿ]

ಬಾಲಸರಸ್ವತಿಯವರು ಪುಟ್ಟ ಮಗುವಾಗಿರುವಾಗಲೇ ಮನೆಯಲ್ಲಿ ಸಂಗೀತ ಕಲಿಯತೊಡಗಿದರು. ಇನ್ನೂ ನಾಲ್ಕು ವಯಸ್ಸಿನವರಾಗಿದ್ದಾಗ ತಂಜಾವೂರಿನ ಪ್ರಸಿದ್ಧ ವಿದ್ವಾಂಸರಾದ ನಟ್ಟುವನಾರ್ ಕೆ ಕಂದಪ್ಪನ್ ಅವರಿಂದ ನೃತ್ಯ ಕಲಿಯಲಾರಂಭಿಸಿದರು. ಬಾಲಸರಸ್ವತಿಯವರ ಸಹೋದರರಾದ ಟಿ ರಂಗನಾಥನ್ ಮತ್ತು ಟಿ ವಿಶ್ವನಾಥನ್ ಅವರು ಪ್ರಸಿದ್ಧ ಸಂಗೀತಗಾರರಾಗಿಯೂ ಸಂಗೀತ ಶಿಕ್ಷಕರಾಗಿಯೂ ಭಾರತ ಮತ್ತು ಅಮೆರಿಕಗಳಲ್ಲಿ ಪ್ರಸಿದ್ಧಿ ಪಡೆದಿದ್ದರು.

ಪ್ರಪ್ರಥಮರು[ಬದಲಾಯಿಸಿ]

೧೯೨೫ರ ವರ್ಷದಲ್ಲಿ ಬಾಲಸರಸ್ವತಿಯವರು ತಮ್ಮ ಮೊದಲ ನೃತ್ಯ ಪ್ರದರ್ಶನವನ್ನು ನೀಡಿದರು. ಪ್ರಸಿದ್ಧ ನೃತ್ಯ ಕಲಾವಿದರಾದ ಉದಯಶಂಕರ್ ಅವರ ಆಹ್ವಾನದ ಮೇರೆಗೆ ದಕ್ಷಿಣಭಾರತದಿಂದ ಹೊರಗೆ ಭರತನಾಟ್ಯ ಪದ್ರರ್ಶನವನ್ನು ನೀಡಿದ ಮೊಟ್ಟ ಮದಲನೆಯವರಾದ ಅವರು ೧೯೩೪ರ ವರ್ಷದಲ್ಲಿ ಕಲಕ್ಕತ್ತೆಯಲ್ಲಿ ಪ್ರದರ್ಶನ ನೀಡಿದರು. ೧೯೩೭ರ ವರ್ಷದಲ್ಲಿ ಬಾಲಸರಸ್ವತಿಯವರು ನೀಡಿದ ನೃತ್ಯ ಪ್ರದರ್ಶನಕ್ಕೆ ರಬೀಂದ್ರನಾಥ ಠಾಗೂರರು ಆಗಮಿಸಿದ್ದರು.

ವಿಶ್ವಪ್ರಸಿದ್ಧಿ[ಬದಲಾಯಿಸಿ]

ವಿಶ್ವದಾದ್ಯಂತ ಹಲವಾರು ವಿದ್ವಾಂಸರ ಮೆಚ್ಚುಗೆಯನ್ನು ಗಳಿಸಿದ್ದ ಬಾಲಸರಸ್ವತಿಯವರ ನೃತ್ಯ ಸಾಮರ್ಥ್ಯವನ್ನು ಶಂಭು ಮಹಾರಾಜ್, ಡೇಮ್ ಮಾರ್ಗಾಟ್ ಫಾಂಟೆಯಿನ್, ಮಾರ್ಥಾ ಗ್ರಾಹಮ್ ಮತ್ತು ಮೆರ್ಸ್ ಕನ್ನಿಂಗ್ ಹ್ಯಾಮ್ ಮುಂತಾದ ವಿಶ್ವವಿಖ್ಯಾತ ನೃತ್ಯ ಪರಿಣತ ಗಣ್ಯರು ಪ್ರಶಂಸಿಸಿದ್ದರು. ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ನೃತ್ಯ ವಿಮರ್ಶಕರಾದ ಅನ್ನಾ ಕಿಸ್ಸೆಲ್ ಗೊಫೆಶನಲ್ ಸರ್ವಿಸ್ ಪ್ರಶಸ್ತಿ ಮತ್ತು ಮದ್ರಾಸಿನ ಸಂಗೀತ ಕಲಾನಿಧಿ ಪ್ರಶಸ್ತಿಗಳು ಬಾಲ ಸರಸ್ವತಿಯವರಿಗೆ ಸಂದವು. 2000ದ ವರ್ಷದಲ್ಲಿ ಪ್ರಕಟಗೊಂಡ ‘America’s Irreplaceable Dance Treasures: The First 100” ಸಂಚಿಕೆಯಲ್ಲಿ ಮೂಡಿ ಬಂದ ಪಾಶ್ಚಿಮಾತ್ಯ ದೇಶಗಳಿಂದ ಹೊರತಾದ ಏಕೈಕ ಪ್ರತಿಭೆ ಎಂಬ ಹೆಗ್ಗಳಿಕೆ ಬಾಲಸರಸ್ವತಿಯವರದು.

ಮುಂದಿನ ತಲೆಮಾರು[ಬದಲಾಯಿಸಿ]

ಬಾಲಸರಸ್ವತಿಯವರ ಪುತ್ರಿ ಲಕ್ಷ್ಮಿ ನೈಟ್ ಅವರು ತಮ್ಮ ತಾಯಿಯವರ ಮಾದರಿಯ ನೃತ್ಯಶೈಲಿಯಲ್ಲಿ ಪರಿಣಿತೆಯಾಗಿದ್ದರು. ಅವರ ಮೊಮ್ಮಗ ಅನಿರುದ್ಧ ನೈಟ್ ಅವರು ತಮ್ಮ ಕುಟುಂಬದ ಈ ಪರಂಪರೆಯನ್ನು ಮುಂದುವರೆಸಿದ್ದು ಬಾಲಾ ಮ್ಯೂಸಿಕ್ ಅಂಡ್ ಡ್ಯಾನ್ಸ್ ಅಸೋಸಿಯೇಶನ್ ಎಂಬ ಸಂಸ್ಥೆಯನ್ನು ಅಮೆರಿಕದಲ್ಲಿಯೂ ಬಾಲಸರಸ್ವತಿ ಸ್ಕೂಲ್ ಆಫ್ ಡ್ಯಾನ್ಸ್ ಎಂಬ ಸಂಸ್ಥೆಯನ್ನು ಭಾರತದಲ್ಲಿಯೂ ನಡೆಸುತ್ತಿದ್ದಾರೆ. ಬಾಲಸರಸ್ವತಿಯವರ ಅಳಿಯ ಡೌಗ್ಲಾಸ್ ಎಂ ನೈಟ್ ಅವರು ಬಾಲಸರಸ್ವತಿಯವರ ಜೀವನ ಚರಿತ್ರೆಯನ್ನು ನಿರೂಪಿಸಿದ್ದಾರೆ.

ವಿದಾಯ[ಬದಲಾಯಿಸಿ]

ಬಾಲಸರಸ್ವತಿಯವರು ಫೆಬ್ರುವರಿ ೯, ೧೯೮೪ರ ವರ್ಷದಲ್ಲಿ ಈ ಲೋಕವನ್ನಗಲಿದರು.