ಕನ್ನಡಪ್ರಭ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕನ್ನಡ ಪ್ರಭ (ದಿನಪತ್ರಿಕೆ)
ಪ್ರಕಟಣೆ: ಬೆಂಗಳೂರು
ಈಗಿನ ಸಂಪಾದಕರು: [[ವಿಶ್ವೇಶ್ವರ ಭಟ್]]
ಜಾಲತಾಣ: http://www.kannadaprabha.com/
ಇವನ್ನೂ ನೋಡಿ Category:ಕನ್ನಡ ಪತ್ರಿಕೆಗಳು


ಕನ್ನಡಪ್ರಭ ಪತ್ರಿಕೆಯ ಮುದ್ರಿತ ಹೆಸರು

ಕನ್ನಡಪ್ರಭ, ಕನ್ನಡದ ಪ್ರಮುಖ ದಿನ ಪತ್ರಿಕೆಗಳಲ್ಲೊಂದು. ಖ್ಯಾತ ಇಂಡಿಯನ್ ಎಕ್ಸ್‌ಪ್ರೆಸ್ ಬಳಗದಿಂದ ಪ್ರಕಾಶಿತವಾಗುತ್ತಿದೆ. ಸದ್ಯಕ್ಕೆ ಬೆಂಗಳೂರು, ಮಂಗಳೂರು , ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ ಮತ್ತು ಗುಲ್ಬರ್ಗ ನಗರಗಳಿಂದ ಮೂರು ಆವೃತ್ತಿಗಳನ್ನು ಪ್ರಕಟಿಸಲಾಗುತ್ತಿದೆ.

ಕನ್ನಡ ಸಾಹಿತ್ಯ ಹಾಗೂ ಚಲನಚಿತ್ರ ರಂಗಕ್ಕೆ ಕನ್ನಡಪ್ರಭ ಪತ್ರಿಕೆ ನೀಡಿರುವ ಕೊಡುಗೆ ಅಪಾರ. ಮೊದಲು ಡೆಕ್ಕನ್ ಹೆರಾಲ್ಡ್ ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಿಗೆ ಕೆಲಸ ಮಾಡುತ್ತಿದ್ದ ಹಿರಿಯ ಕನ್ನಡ ಪತ್ರಕರ್ತ ವಿ.ಎನ್.ಸುಬ್ಬರಾವ್ ಅವರು ಕನ್ನಡಪ್ರಭ ಪತ್ರಿಕೆಗೆ ಆರಂಭ ದಿನಗಳಲ್ಲಿ ರೂಪುರೇಷೆ ಕೊಟ್ಟವರು. ಕನ್ನಡಪ್ರಭ ಪತ್ರಿಕೆಗೆ ಮೊದಲು ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು ಎನ್.ಎಸ್.ಸೀತಾರಾಮ ಶಾಸ್ತ್ರಿ. ಜನಪ್ರಗತಿಯಂಥ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದ ಹಾಗೂ ಮೈಸೂರು ಜರ್ನಲಿಸ್ಟ್ಸ್ ಅಸೋಸಿಯೇಷನ್ನ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದ ಶಾಸ್ತ್ರಿಯವರು ಪತ್ರಿಕೆಗೆ ಸಾಹಿತ್ಯದ ಸಿಂಚನ ನೀಡಿದರು. ಅವರ ಜತೆಯಲ್ಲಿ ಸಹ ಸಂಪಾದಕರಾಗಿದ್ದವರು ಕೆ.ಎಸ್.ರಾಮಕೃಷ್ಣ ಮೂರ್ತಿ. ರಾಮಕೃಷ್ಣ ಮೂರ್ತಿಯವರು ಪ್ರಜಾವಾಣಿಯಲ್ಲಿ ವೃತ್ತಿ ಜೀವನ ಆರಂಭಿಸಿದವರು. ತಮ್ಮದೇ ಪ್ರಕಾಶನ ಸಂಸ್ಥೆಯ ಮೂಲಕ ಕಿಡಿ ಶೇಷಪ್ಪ, ಅ.ನ.ಕೃ. ಅವರ ಕೃತಿಗಳನ್ನು ಪ್ರಕಟಿಸಿದವರು. ಹಾಗೆಯೇ ಪ್ರಜಾವಾಣಿ ಬಿಟ್ಟು ಮದ್ರಾಸಿನಲ್ಲಿದ್ದ ಅಮೆರಿಕನ್ ದೂತವಾಸದಲ್ಲಿ ಕನ್ನಡ ಪ್ರಕಟಣೆಗಳ ಹೊಣೆ ಹೊತ್ತಿದ್ದವರು. ಇಂಥ ಬಹುಮುಖ ಪ್ರತಿಭೆಯ ರಾಮಕೃಷ್ಣ ಮೂರ್ತಿ ಕನ್ನಡಪ್ರಭಕ್ಕೆ ಸುದೀರ್ಘ ಕಾಲ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅವರು ಸಂಪಾದಕೀಯ ಪುಟದಲ್ಲಿ ಬರೆಯುತ್ತಿದ್ದ ಜ್ಞಾನಪ್ರಭ ಅಂಕಣದಲ್ಲಿ ವಿಜ್ಞಾನ ವಿಷಯಗಳು ಮಕ್ಕಳಿಗೂ ಅರ್ಥವಾಗುವಷ್ಟು ಸರಳವಾಗಿತ್ತು. ಅ.ನ.ಕೃ., ಗೋಪಾಲಕೃಷ್ಣ ಅಡಿಗ, [ಡಿ.ವಿ.ಜಿ.]], [ಪಿ.ಆರ್.ರಾಮಯ್ಯ]] ಸೇರಿದಂತೆ ಅನೇಕ ಸಾಹಿತ್ಯ-ಪತ್ರಿಕೋದ್ಯಮ ದಿಗ್ಗಜರು ತಮ್ಮ ಆತ್ಮಕಥೆಯನ್ನು ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ ಪುರವಣಿಗೆ ಬರೆದುಕೊಟ್ಟಿದ್ದರು. ಕೆ.ಎಸ್.ನಾರಾಯಣ ಸ್ವಾಮಿ ಹಾಗೂ ವಿ.ಎನ್.ಸುಬ್ಬರಾವ್ ಅವರ ಗಾಢ ಪ್ರಭಾವಳಿಯಿಂದ ಚಿತ್ರಪ್ರಭ ಪುರವಣಿ ಕನ್ನಡ ಚಿತ್ರರಂಗಕ್ಕೆ ಅಪ್ರತಿಮೆ ಕೊಡುಗೆ ನೀಡಿತು. ಕನ್ನಡ ಚಲನಚಿತ್ರ ಪತ್ರಿಕೋದ್ಯಮಕ್ಕೆ ಹೊಸ ಶಕೆಯೊಂದನ್ನು ಆರಂಭಿಸಿದ ಕೀರ್ತಿ ಕನ್ನಡಪ್ರಭ ಪತ್ರಿಕೆಯದು. ತಾಯಿನಾಡು ಪತ್ರಿಕೆಯಿಂದ ವೃತ್ತಿಜೀವನ ಆರಂಭಿಸಿದ್ದ ಸತ್ಯ ಪತ್ರಿಕೆಯ ಮುಖ್ಯ ವರದಿಗಾರರಾದರು. ಜಯರಾಮ ಅಡಿಗ, ಸೂ.ರಮಾಕಾಂತ, ಸಿ.ಸೀತಾರಾಂ, ಗರುಡನಗಿರಿ ನಾಗರಾಜ, ಎನ್.ಎಸ್.ರಾಮಪ್ರಸಾದ್, ಟಿ.ಜಿ.ಅಶ್ವತ್ಥ ನಾರಾಯಣ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಕನ್ನಡಪ್ರಭದ ಮೂಲಕ. ರಾಮಕೃಷ್ಣಮೂರ್ತಿ ಅವರ ಅಕಾಲ ನಿಧನದ ನಂತರ ತೆರವಾದ ಸ್ಥಾನವನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ತುಂಬಿದರು.

ಸಮಾಜವಾದಿ ಹಿನ್ನೆಲೆಯ ಖಾದ್ರಿ ಶಾಮಣ್ಣ ಅವರು ಕನ್ನಡಪ್ರಭ ಪತ್ರಿಕೆಗೆ ರಾಜಕೀಯ ನಿಲುವನ್ನು ತಂದುಕೊಟ್ಟರು. ಹಾಗೆಯೇ ಆರ್.ಗುಂಡೂರಾವ್ ಅವರ ಆಡಳಿತದ ನಂತರದ ರಾಮಕೃಷ್ಣ ಹೆಗ್ಗಡೆ ಆಡಳಿತದ ಸಂದರ್ಭದಲ್ಲಿ ಖಾದ್ರಿ ಶಾಮಣ್ಣ ಹಲವಾರು ಜನಪ್ರಿಯ ಕಾರ್ಯಕ್ರಮಗಳ ಸೂತ್ರಧಾರರಾದರು. ಕೆಲ ಕಾಲ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ನೇಮಕಗೊಂಡಿದ್ದರು. ಅವರ ಅನಿರೀಕ್ಷಿತ ನಿಧನದಿಂದ ತೆರವಾದ ಸ್ಥಾನವನ್ನು ತುಂಬಿದವರು ವೈಯೆನ್ಕೆ ಎಂದೇ ಜನಪ್ರಿಯರಾಗಿದ್ದ ಕನ್ನಡದ ಹಿರಿಯ ಪತ್ರಕರ್ತ ವೈ.ಎನ್.ಕೃಷ್ಣಮೂರ್ತಿ. ಇದೇ ಸಮಯದಲ್ಲಿ ಮಯೂರ ಮಾಸಪತ್ರಿಕೆಯ ಸಂಪಾದಕರಾಗಿದ್ದ ಕತೆಗಾರ ಜಿ.ಎಸ್.ಸದಾಶಿವ ಕನ್ನಡಪ್ರಭ ಪತ್ರಿಕೆಯ ಪುರವಣಿಗಳ ಸಹ ಸಂಪಾದಕರಾದರು. ಜೋಗಿ ಎಂದೇ ಖ್ಯಾತರಾಗಿರುವ ಪತ್ರಕರ್ತ, ಅಂಕಣಕಾರ, ಸಾಹಿತಿ ಹೆಚ್.ಗಿರೀಶ್ ರಾವ್, ಇಂದಿನ ಪಬ್ಲಿಕ್ ಟೀವಿಹೆಚ್.ಆರ್.ರಂಗನಾಥ್, ಸುವರ್ಣ ನ್ಯೂಸ್ಉದಯ ಮರಕಿಣಿ, ಉದಯವಾಣಿಯ ಸಮೂಹ ಸಂಪಾದಕ ರವಿ ಹೆಗಡೆ ... ಇವರೆಲ್ಲರೂ ವೃತ್ತಿ ಜೀವನದ ಔನ್ನತ್ಯವನ್ನು ಸಾಧಿಸಿದ್ದು ವೈಯೆನ್ಕೆ ಕಾಲದಲ್ಲಿ. ವಿಶ್ವೇಶ್ವರ ಭಟ್ ಅವರಿಗೆ ಉತ್ತೇಜನ ಹಾಗೂ ಸ್ಫೂರ್ತಿ ತುಂಬಿದ ಕೀರ್ತಿಯೂ ವೈಯೆನ್ಕೆ ಅವರದು.

ಅವರು ತೆರವುಗೊಳಿಸಿದ ಸ್ಥಾನವನ್ನು ತುಂಬಿದ್ದು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಹ ಸಂಪಾದಕರಾಗಿದ್ದ ವೆಂಕಟನಾರಾಯಣ. ನಂತರ ಸ್ಥಾನ ವಹಿಸಿಕೊಂಡವರು ಕೆ.ಸತ್ಯನಾರಾಯಣ. ಅವರ ನಿವೃತ್ತಿಯ ನಂತರ ಅಧಿಕಾರಕ್ಕೆ ಬಂದವರು ಹೆಚ್.ಆರ್.ರಂಗನಾಥ್

ಪ್ರಸ್ತುತ ಟಿ ವಿ ವಾರ್ತಾ ವಾಹಿನಿ ಸುವರ್ಣ ನ್ಯೂಸ್ ಮಾಲಿಕರಾದ ಸಂಸದ ರಾಜೀವ್ ಚಂದ್ರಶೇಖರ್ ಅವರ ಒಡೆತನಕ್ಕ ಕನ್ನಡಪ್ರಭ ಪತ್ರಿಕೆ ಬಂದಿದೆ. ಈ ಎರಡೂ ಸಂಸ್ಥೆಗಳ ಪ್ರಧಾನ ಸಂಪಾದಕರಾಗಿ ವಿಶ್ವೇಶ್ವರ ಭಟ್ ನಿಯೋಜಿತರಾಗಿದ್ದಾರೆ. ಕನ್ನಡ ಟೀವಿ ವಾಹಿನಿ ಹಾಗೂ ಕನ್ನಡ ಪತ್ರಿಕೆಗಳಿಗೆ ಹೊಸ ಕಳೆ ನೀಡುವಲ್ಲಿ ಅವರು ಸಫಲವಾಗಿದ್ದಾರೆ.


ಹೊರಗಿನ ಸಂಪರ್ಕಗಳು[ಬದಲಾಯಿಸಿ]