ಎಚ್. ಜಿ. ವೆಲ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೨೦ ರಲ್ಲಿನ ಒಂದು ಚಿತ್ರ

ವೆಲ್ಸ್, ಎಚ್ ಜಿ 1866-1946. ಇಂಗ್ಲಿಷ್ ಕಾದಂಬರಿಕಾರ, ಚರಿತ್ರಕಾರ, ಗದ್ಯಬರೆಹಗಾರ. ಇವನ ಪೂರ್ಣ ಹೆಸರು ಹಾರ್ಬರ್ಟ್ ಜಾರ್ಜ್ ವೆಲ್ಸ್.

ಬದುಕು[ಬದಲಾಯಿಸಿ]

ಈತ 1866 ಸೆಪ್ಟೆಂಬರ್ 21ರಂದು ಇಂಗ್ಲೆಂಡಿನ ಬ್ರೂಮ್‍ಲೆ ಕೆಂಟ್‍ನಲ್ಲಿ ಜನಿಸಿದ. ಇವನ ತಂದೆ ವ್ಯಾಪಾರಿ ಮತ್ತು ಕ್ರಿಕೆಟ್ ಆಟಗಾರನಾಗಿದ್ದ. ಒಬ್ಬ ಕೆಮಿಸ್ಟ್ ಬಳಿ ಔದ್ಯೋಗಿಕ ಶಿಕ್ಷಣಕ್ಕೆ ಸೇರಿದವನು ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಟಿ.ಎಚ್.ಹಕ್ಸ್‍ಲಿ ಯ ವಿದ್ಯಾರ್ಥಿಯಾದ. ಮೊದಲ ವಿವಾಹ ಸಂತೋಷಕರವಾಗಿಲ್ಲದೆ ವಿಚ್ಛೇದನದಲ್ಲಿ ಕೊನೆಗಂಡಿತು. ಅನಂತರ ತನ್ನ ವಿದ್ಯಾರ್ಥಿನಿಯೊಬ್ಬಳನ್ನು ಈತ ಮದುವೆಯಾದ.

ಸಾಹಿತ್ಯ[ಬದಲಾಯಿಸಿ]

ಕಾವ್ಯ, ನಾಟಕಗಳನ್ನು ಬಿಟ್ಟು ಉಳಿದೆಲ್ಲ ಸಾಹಿತ್ಯ ಪ್ರಕಾರಗಳನ್ನೂ ಈತ ಬಳಸಿಕೊಂಡ. ಆಂಟಿಸಿಪೇಷನ್ಸ್ (1901) ಎಂಬ ಕೃತಿಯಿಂದ ವಿಚಾರ ಸಾಹಿತ್ಯಕ್ಕೆ ಕಾಲಿಟ್ಟ. ಸಾಮಾಜಿಕ ತತ್ತ್ವಶಾಸ್ತ್ರದಲ್ಲಿ ಎ ಮಾಡರ್ನ್ ಯುಟೋಪಿಯ (1905), ದಿ ವಾರ್ ದಟ್ ವಿಲ್ ಎಂಡ್ ವಾರ್ (1914), ದಿ ಓಪನ್ ಕಾನ್ಸ್‍ಪೆರಸಿ (1928), ದಿ ಸೈನ್ಸ್ ಆಫ್ ಲೈಫ್ (1928), ದಿ ವರ್ಕ್, ದಿ ವಲ್ರ್ಡ್ ಅ್ಯಂಡ್ ದಿ ಹ್ಯಾಪಿನೆಸ್ ಆ¥sóï ಮಾನ್‍ಕೈನ್‍ಡ್ (1932), ಮೈಂಡ್ ಅಟ್ ದಿ ಎಂಡ್ ಆಫ್ ಇಟ್ ಟೆದರ್ (1945)-ಈ ಕೃತಿಗಳನ್ನು ರಚಿಸಿದ. ದಿ ಔಟ್‍ಲೈನ್ ಆಫ್ ಹಿಸ್ಟರಿ (1920) ಮತ್ತು ಎ ಷಾರ್ಟ್ ಹಿಸ್ಟರಿ ಆಫ್ ದಿ ವರ್ಲ್ಡ್ (1922) ಎಂಬ ಚಾರಿತ್ರಿಕ ಕೃತಿಗಳನ್ನು ರಚಿಸಿದ. ಎಕ್ಸ್‍ಪೆರಿಮೆಂಟ್ಸ್ ಇನ್ ಆಟೊಬಯಾಗ್ರಫಿ (1934) ಇವನ ಆತ್ಮಚರಿತ್ರೆ. ವೈಜ್ಞಾನಿಕ ಊಹಾಪೋಹಗಳನ್ನು ಕಾಲ್ಪನಿಕ ಕಥೆಗಳ ರೂಪದಲ್ಲಿ ರಚಿಸಿದ ಇವನ ವೈಜ್ಞಾನಿಕ ಕಾದಂಬರಿಗಳು (ಸೈನ್ಸ್‍ಫಿಕ್ಷನ್ಸ್) ದಿ ಟೈಮ್ ಮಷೀನ್ (1895) ಮಾಲಿಕೆಯಲ್ಲಿ ಪ್ರಕಟವಾದುವು. ಇವುಗಳಲ್ಲಿ ಭವಿಷ್ಯತ್ತಿನ ವಿಜ್ಞಾನದ ಬಗ್ಗೆ ರೋಮಾಂಚಕಾರಿ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇವನ ಜ್ಞಾನಸಂಪತ್ತು ಅಸಾಧಾರಣವಾದುದು. ವಿಜ್ಞಾನ, ಚರಿತ್ರೆ, ಅರ್ಥಶಾಸ್ತ್ರಗಳನ್ನು ಇವನು ಅಧ್ಯಯನ ಮಾಡಿ ಪಡೆದ ಪಾಂಡಿತ್ಯ ಆಶ್ಚರ್ಯಕರವಾದುದು. ಜೀವವಿಜ್ಞಾನದ ಅಧ್ಯಯನದಿಂದ ತನ್ನ ಉನ್ನತ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಈತನ ಬರೆಹಗಳಲ್ಲಿ ಹಲವು ಮಂದಿ ವಿಚಾರಶೀಲರಲ್ಲಿ ಕಾಣದ ಮೂರ್ತ ವಿಚಾರ ಕಾಣುತ್ತದೆ. ಇವನ ಕೃತಿಗಳಲ್ಲಿ ಅತಿ ಜನ ಪ್ರಿಯವಾದುದು ಔಟ್‍ಲೈನ್ ಆಫ್ ಹಿಸ್ಟರಿ. ಸೃಷ್ಟಿಯ ಪ್ರಾರಂಭ ದಿಂದ ಆಧುನಿಕ ಯುಗದವರೆಗೆ ಮಾನವನ ಪ್ರಗತಿಯನ್ನು ಇಲ್ಲಿ ಚಿತ್ರಿಸಿದೆ. ಚರಿತ್ರೆಯ ವಿದ್ವಾಂಸರಿಗೆ ಇದರ ಗಹನತೆ ತೃಪ್ತಿಕರವಾ ಗಿಲ್ಲದಿದ್ದರೂ ಸಾಧಾರಣ ಓದು ಗರಿಗೆ ಇದು ಉಪಯುಕ್ತವೆನಿ ಸಿದೆ. ಈ ಕೃತಿಯ ಸುಮಾರು ಮೂವತ್ತು ಲಕ್ಷ ಪ್ರತಿಗಳು ಮಾರಾಟವಾಗಿವೆ. ದಿ ವಲ್ರ್ಡ್ ಅ್ಯಂಡ್ ಹ್ಯಾಪಿನೆಸ್ ಆಫ್ ಮ್ಯಾನ್‍ಕೈಂಡ್ ಎಂಬ ಕೃತಿಯಲ್ಲಿ ಮತ್ತು ಹಕ್ಸ್‍ಲಿಯೊಡನೆ ಬರೆದ ದಿ ಸೈನ್ಸ್ ಆಫ್ ಲೈಫ್ ನಲ್ಲಿ ಈತ ಮನುಷ್ಯ ಪ್ರಗತಿ ಸಾಧಿಸಬಲ್ಲನೆಂಬ ಮತ್ತು ಮಾನವಕೋಟಿ ಐಕ್ಯತೆಯನ್ನು ಸಾಧಿಸುವುದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾನೆ. ಆದರೆ ಒಂದನೆಯ ಮಹಾಯುದ್ಧ ಈ ವಿಶ್ವಾಸವನ್ನು ದುರ್ಬಲಗೊಳಿಸಿತು. ತನ್ನ ಜೀವಮಾನದ ಕೊನೆಯ ಭಾಗದಲ್ಲಿ ಎರಡನೆಯ ಮಹಾಯುದ್ಧವನ್ನು ಮಾತ್ರವಲ್ಲದೆ ಅಣುಬಾಂಬಿನ ಪ್ರಯೋಗವನ್ನೂ ಕಂಡ ಈತ ತುಂಬ ಆತಂಕಗೊಂಡ. ದಿ ಮೈಂಡ್ ಎಟ್ ದಿ ಎಂಡ್ ಆಫ್ ಇಟ್ಸ್‍ಟೆದರ್ ಎಂಬ ಕೃತಿಯಲ್ಲಿ ಈತ ಭವಿಷ್ಯದಲ್ಲಿ ಕಾಣುವುದು ಯಾವ ಒಂದು ಕ್ರಮ ಅಥವಾ ವ್ಯವಸ್ಥೆಯನ್ನಲ್ಲ, ಆದರೆ ಜಾಗತಿಕ ಚೇತನ ಕ್ರಮೇಣ ದುರ್ಬಲಗೊಂಡು ನಿಂತುಹೋಗುವುದನ್ನು ಮಾತ್ರ ಎಂದು ಹೇಳಿದ್ದಾನೆ.

ಈತ ಸೂಕ್ತ ನಿರ್ಧಾರ ನಿಷ್ಠೆಗಳನ್ನು ಪಡೆದಿದ್ದರೆ ತನ್ನ ಯುಗದ ಅತಿಶ್ರೇಷ್ಠ ಕಾದಂಬರಿಕಾರನಾಗಬಹುದಾಗಿತ್ತು, ತನ್ನ ಕನಸುಗಳನ್ನು ನನಸಾಗಿ ಮಾಡಲು ಹೊರಟು ಉತ್ತಮ ರೀತಿಯ ಪತ್ರಿಕೋದ್ಯಮಿಯಾಗಿ ಉಳಿದ ಎನ್ನುವ ಆಕ್ಷೇಪಣೆಯುಂಟು. ಈತ ಹೆನ್ರಿ ಜೇಮ್ಸ್‍ನೊಡನೆ ನಡೆಸಿದ ವಾದದಲ್ಲಿ ಕಲೆಗಾರನೆನ್ನಿಸಿಕೊಳ್ಳುವುದಕ್ಕಿಂತ ಪತ್ರಿಕೋದ್ಯಮಿ ಎನಿಸಿಕೊಳ್ಳುವುದೆ ನನಗೆ ಪ್ರಿಯ ಎಂದಿದ್ದಾನೆ. ಇವನ ಕೃತಿಗಳು ಹೊಸ ವಿಚಾರಗಳ ಗಣಿ. ಇವನ ಕನಸುಗಳು ಬರಿಯ ಗಗನ ಸೌಧಗಳಲ್ಲ. ಮೊದಲು ಈತ ನಿರೂಪಿಸಿದ, ಅಸಮಾಧಾನವನ್ನು ಉಂಟುಮಾಡಿದ ಹಲವು ವಿಚಾರಗಳು ಪ್ರಪಂಚ ಇಂದು ಒಪ್ಪಿಕೊಂಡ ತತ್ತ್ವಗಳಾಗಿವೆ. ಅನತೋಲ್ ¥sóÁ್ರನ್ಸ್ ಇವನನ್ನು ಇಂಗ್ಲಿಷ್ ಭಾಷೆಯನ್ನಾಡುವ ಪ್ರಪಂಚದಲ್ಲಿ ಅತಿ ಶ್ರೇಷ್ಠ ಬೌದ್ಧಿಕ ಶಕ್ತಿ ಎಂದು ಹೊಗಳಿದ್ದಾನೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: