ವಿಷಯಕ್ಕೆ ಹೋಗು

ಜೇಮ್ಸ್ ಜಾಯ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಯ್ಸ್, ಜೇಮ್ಸ್ ಆಗಸ್ಟೈನ್ ಅಲೊಯಿಷಿಯಸ್ (1882-1941). ಇಪ್ಪತ್ತನೆಯ ಶತಮಾನದ ಪ್ರಸಿದ್ಧ ಆಂಗ್ಲ ಕಾದಂಬರಿಕಾರ. ಕವಿಯೂ ಹೌದು.

Portrait of James Joyce
Joyce in Zürich by Conrad Ruf (de)}} (c. 1918)

ಬದುಕು[ಬದಲಾಯಿಸಿ]

ಹುಟ್ಟಿದ್ದು ಡಬ್ಲಿನಿನಲ್ಲಿ. ವಿದ್ಯಾಭ್ಯಾಸ ಬೆಲ್‍ವಿಡೀರ್ ಕಾಲೇಜು ಮತ್ತು ಡಬ್ಲಿನ್ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಕೆಲಕಾಲ ಪ್ಯಾರಿಸಿನಲ್ಲಿ ಪ್ರಾಕೃತಿಕ ಹಾಗೂ ಸಾಂಕೇತಿಕ ಸಾಹಿತ್ಯವನ್ನು ಅಭ್ಯಸಿದ. 1904ರಲ್ಲಿ ನೋರಬಾರ್ನಕಲಳನ್ನು ಮದುವೆಯಾಗಿ ಐರ್ಲೆಂಡನ್ನು ತೊರೆದು ಸ್ವಿಟ್‍ಜóರ್‍ಲೆಂಡಿಗೆ ತೆರಳಿದ. ಅಲ್ಲಿ ಹತ್ತು ವರ್ಷಗಳ ಕಾಲ ಭಾಷಾಶಾಸ್ತ್ರದ ಬೋಧಕನಾಗಿದ್ದ.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಈತ ಜ್ಯೂರಿಕ್‍ಗೆ ತೆರಳಿದ. ಅಲ್ಲಿ ಬಹುವಾಗಿ ತೊಂದರೆಗಳಿಗೆ ಸಿಲುಕಿ ಮಾನಸಿಕ ಅಸ್ವಸ್ಥತೆಯಿಂದ ಸಾವನ್ನು ಅಪ್ಪಿದ.

ಬರಹ[ಬದಲಾಯಿಸಿ]

1907ರಲ್ಲಿ ಈತನ ಮೊದಲ ಕವನ ಸಂಕಲನ ಚೇಂಬರ್ ಮ್ಯೂಸಿಕ್ ಪ್ರಕಟಗೊಂಡಿತು. ಇಪ್ಪತ್ತು ವರ್ಷಗಳ ಅನಂತರ ಇವನ ಇನ್ನೊಂದು ಕವನ ಸಂಕಲನವಾದ ಪೊಯೆಮ್ಸ್ ಪೆನಿ ಈಚ್ (1927) ಪ್ರಕಟಗೊಂಡಿತು. ಆದರೆ 1914ರಲ್ಲಿ ಪ್ರಕಟಗೊಂಡ ಡಬ್ಲಿನರ್ಸ್ ಎಂಬ ಕಥಾಸಂಕಲನ ಈತನಿಗೆ ಖ್ಯಾತಿ ತಂದಿತು. ಈ ಪುಸ್ತಕದ ಮುಖೇನ ಜನತೆ ಈತನ ಪ್ರತಿಭೆಯನ್ನು ಗುರುತಿಸಿತು. 1916ರಲ್ಲಿ ಪೋರ್ಟ್‍ರೇಟ್ ಆಫ್ ದಿ ಆರ್ಟಿಸ್ಟ್ ಆ್ಯಸ್ ಎ ಯಂಗ್ ಮ್ಯಾನ್ ಎಂಬ ಆತ್ಮಕಥಾ ಕಾದಂಬರಿ ಪ್ರಕಟಗೊಂಡಿತು. 1918ರಲ್ಲಿ ಎಕ್ಸೈಲ್ಸ್ ಎಂಬ ನಾಟಕವೊಂದು ಪ್ರಕಟವಾಯಿತು. ಈತನ ನಿಜವಾದ ಯಶಸ್ಸಿಗೆ ಕಾರಣವಾದ ಗ್ರಂಥವೆಂದರೆ 1922ರಲ್ಲಿ ಪ್ರಕಟಗೊಂಡ ಯೂಲಿಸಿಸ್ ಎಂಬ ಕಾದಂಬರಿ. ಈ ಪುಸ್ತಕದ ಮೇಲೆ ಎಲ್ಲ ಕಡೆಯೂ ನಿಷೇಧಾಜ್ಞೆಯಿದ್ದುದರಿಂದ ಇದನ್ನು ಪ್ಯಾರಿಸಿನಲ್ಲಿ ಪ್ರಕಟಿಸಲಾಯಿತು. ಇದರ ಮುದ್ರಣ ಸಮಯದಲ್ಲಿ ಜಾಯ್ಸ್ ಪ್ರತಿ ಕರಡು ಪ್ರತಿಯನ್ನೂ ತಿದ್ದಿ ತಿದ್ದಿ ಪರಿಷ್ಕರಿಸಿ ಬರೆಯುತ್ತಿದ್ದುದರಿಂದ ಮುದ್ರಕ ಜೋಡಿಸಿದ ಮೊಳೆಗಳನ್ನು ಆರು ಸಾರಿ ಕೆಡಿಸಿ ಸರಿಪಡಿಸಬೇಕಾಯಿತಂತೆ. ಕೊನೆಗೆ ತನ್ನ ನಲವತ್ತನೆಯ ವಯಸ್ಸಿನಲ್ಲಿ ಜಾಯ್ಸ್ ಇದರ ಮೊದಲ ಮುದ್ರಣ ಪ್ರತಿಯನ್ನು ಪಡೆದ. ಈ ಕಾದಂಬರಿಯ ಕಥಾವಸ್ತು ಡಬ್ಲಿನಿನಲ್ಲಿ ನಡೆದ ಒಂದು ದಿನದ ಜೀವನಚಿತ್ರಣವಾಗಿದೆ. ಈ ಪುಸ್ತಕವನ್ನು ಒಬ್ಬ ವಿಮರ್ಶಕ ಇಪ್ಪತ್ತನೆಯ ಶತಮಾನದ ಅತ್ಯುತ್ತಮ ಕಾದಂಬರಿ ಎಂದು ಕರೆದರೆ ಮತ್ತೊಬ್ಬ ಅಸಹ್ಯಕರವಾದ ಪುಸ್ತಕವೆಂದು ಟೀಕಿಸಿದ್ದಾನೆ. ಮುಂದಿನ ಹದಿನೇಳು ವರ್ಷಗಳಲ್ಲಿ ಈತ ಫಿನಿಗನ್ಸ್‍ವೇಕ್ ಎಂಬ ಕಾದಂಬರಿಯನ್ನು ಬರೆದ. ಆ ವೇಳೆಗಾಗಲೇ ಈತ ದೃಷ್ಟಿಮಾಂದ್ಯದಿಂದ ನರಳುತ್ತಿದ್ದ. ಒಂದು ರಾತ್ರಿಯ ಕನಸಿನ ವಿಚಾರ ಧಾರೆಯೇ ಈ ಕಾದಂಬರಿಯ ಕಥಾವಸ್ತು. ಇದರ ಒಂದು ಅಧ್ಯಾಯವನ್ನು 1928ರಲ್ಲೂ ಮತ್ತೊಂದು ಅಧ್ಯಾಯವನ್ನು 1931ರಲ್ಲೂ ಪ್ರಕಟಿಸಿದ. 1939ರಲ್ಲಿ ಪೂರ್ಣವಾಗಿ ಪುಸ್ತಕ ರೂಪದಲ್ಲಿದು ಹೊರಬಂದಿತು.

ಈತನ ಸಾಹಿತ್ಯದ ವೈಶಿಷ್ಟ್ಯ[ಬದಲಾಯಿಸಿ]

ಈತ ತನ್ನ ಎರಡು ಕಾದಂಬರಿಗಳಲ್ಲೂ ಮಾನಸಿಕ ಪರಿಶೋಧನೆಯತ್ತ ನಡೆದಿರುವುದನ್ನು ಗುರುತಿಸಬಹುದಾಗಿದೆ. ಈತನ ಕೃತಿಗಳು ಹೊಸ ಹೊಸ ಪದಪ್ರಯೋಗ, ಸಾಹಿತ್ಯ ಮತ್ತು ವ್ಯಾಕರಣ ವೈಲಕ್ಷಣ್ಯಗಳಿಂದ ತುಂಬಿದ್ದು ಒಮ್ಮೆಗೇ ಅರ್ಥವಾಗುವುದು ಕಷ್ಟ. ವ್ಯಕ್ತಿಯ ಮಾನಸಿಕ ಆಳಕ್ಕಿಳಿದು ಆತನ ಅಭಿಪ್ರಾಯಗಳನ್ನು ಪ್ರಜ್ಞಾಗೋಚರವಾಗುವಂತೆ ಹೇಳುವುದೇ ಈತನ ವೈಶಿಷ್ಟ್ಯವಾಗಿದೆ.