ಸಲ್ಲೇಖನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಲ್ಲೇಖನ ಜೈನ ಧರ್ಮೀಯರ ಒಂದು ಕಠಿಣ ವ್ರತ. ಜೈನ ಧರ್ಮದ ಅನುಸಾರವಾಗಿ ಪ್ರತೀಕಾರವಿಲ್ಲದ ಉಪಸರ್ಗವಾಗಲೀ, ಮುದಿತನವಾಗಲೀ ಅಥವಾ ರೋಗವಾಗಲೀ ಬಂದೊದಗಿದ್ದಲ್ಲಿ, ಮೋಕ್ಷ ಅಥವಾ ಸದ್ಗತಿಗಾಗಲೀ ಧರ್ಮಪೂರ್ವಕವಾಗಿ ಶರೀರ ತ್ಯಾಗಮಾಡುವ ವಿಧಿಗೆ ಸಲ್ಲೇಖನ ವ್ರತ ಎನ್ನಲಾಗುತ್ತದೆ. ಇದಕ್ಕೆ ಸಮಾಧಿ ಮರಣ ಎಂಬ ಹೆಸರೂ ಇದೆ. ಸಲ್ಲೇಖನ ವ್ರತವು ಗೃಹಸ್ಥನ ನೈಮಿತ್ತಿಕ ಕ್ರಿಯೆಯಾಗಿದೆ. ಗೃಹಸ್ಥನು ಜೀವನದಲ್ಲಿ ಅದುವರೆಗೆ ಅಭ್ಯಾಸಿಸಿದ ಶ್ರಾವಕೀಯ (ಶ್ರಾವಕ/ಶ್ರಾವಕಿ :- ಜೈನ ಧರ್ಮದಲ್ಲಿ, ಮದುವೆ ಆಗಿ ಸಂಸಾರ ಜೀವನ ನಡೆಸುವ ಶೃದ್ಧಾಳುಗಳನ್ನು ಶ್ರಾವಕ/ಶ್ರಾವಕಿ ಎನ್ನುತ್ತಾರೆ.) ಆಚಾರಗಳ ಅಂತಿಮ ಪರೀಕ್ಷೆಯೇ ಸಲ್ಲೇಖನ ವ್ರತ.

ಸಲ್ಲೇಖನ (ಸಂಸ್ಕೃತ: ಸಲ್ಲಿಖಿತಾ) ಎಂದರೆ 'ತೆಳುವಾಗುವುದು', 'ಹೊರಹಾಕು' ಅಥವಾ 'ತೆಳುವಾಗಿಸುವುದು' ಎಂದರೆ ಆಹಾರ ಮತ್ತು ಪಾನೀಯಗಳಿಂದ ಕ್ರಮೇಣವಗಿ ದೂರವಿರುವುದು ಎಂದರ್ಥ. ಸಲ್ಲೇಖನವನ್ನು ಎರಡು ಘಟಕಗಳಾಗಿ ವಿಂಗಡಿಸಲಾಗಿದೆ.

  1. ಕಷಾಯ ಸಲ್ಲೇಖನ (ಉತ್ಸಾಹ ಅಥವಾ ಆಸೆಗಳನ್ನು ದೂರವಾಗಿಸುವುದು) ಅಥವಾ ಅಭಯಂತ್ರ ಸಲ್ಲೇಖನ (ಆಂತರಿಕವಾಗಿ ನಿರ್ಲಿಪ್ತವಾಗಿರುವುದು)
  2. ಕಾಯ ಸಲ್ಲೇಖನ (ದೇಹವನ್ನು ಕಠಿಣ ಪರೀಕ್ಷೆಗೆ ಒಡ್ಡಿಕೊಳ್ಳುವುದು) ಅಥವಾ ಬಾಹ್ಯ ಸಲ್ಲೇಖನ. ಇದನ್ನು "ಉಪವಾಸದಿಂದ ಸ್ವಯಂಪ್ರೇರಣೆಯಿಂದ ಸಾವನ್ನು ಎದುರಿಸುವುದು" ಎಂದು ವಿವರಿಸಲಾಗಿದೆ. ಜೈನ ಗ್ರಂಥಗಳ ಪ್ರಕಾರ, ಸಲ್ಲೇಖನವನ್ನು ಅನುಸರಿಸುವ ವ್ಯಕ್ತಿಯು ತನ್ನ ಮನಸಿನಲ್ಲಿ ಉಂಟಾಗುವ ಭಾವೋದ್ರೇಕಗಳನ್ನು ನಿಯಂತ್ರಿಸಿ, ಆ ಮೂಲಕ ಅಹಿಂಸಾ ಪಾಲನೆ ಮಾಡುತ್ತಾನೆ.
  • ಜೈನ ಪುರಾಣದಲ್ಲಿ ಸಲ್ಲೇಖನ ವ್ರತದ ಬಗ್ಗೆ ಪ್ರಸ್ತಾಪಿಸಲ್ಪಟ್ಟಿದೆ. ಮೊದಲ ಜೈನ ತೀರ್ಥಂಕರ ಆದಿದೇವ, ಅತ್ತಿಮಬ್ಬೆ, ವಡ್ಡಾರಾಧನೆಯಲ್ಲಿ ಬರುವ ಕೆಲವು ಪಾತ್ರಗಳು ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ್ದಾರೆ ಎನ್ನಲಾಗಿದೆ.
  • ಚರಿತ್ರೆಯಲ್ಲಿ ಹೊಯ್ಸಳ ರಾಣಿ ಶಾಂತಲೆ ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ್ದಳು ಎನ್ನಲಾಗಿದೆ.
"https://kn.wikipedia.org/w/index.php?title=ಸಲ್ಲೇಖನ&oldid=1168300" ಇಂದ ಪಡೆಯಲ್ಪಟ್ಟಿದೆ