ಆಹವಮಲ್ಲ ತೈಲಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಹವಮಲ್ಲ ತೈಲಪ
Tailapa II
Old Kannada inscription dated c.991 AD of Western Chalukya King Ahvamalla Tailapa II
Founder of Western Chalukya Empire
ಆಳ್ವಿಕೆ 973-997 (24 years)
ಉತ್ತರಾಧಿಕಾರಿ Satyashraya

ಟೆಂಪ್ಲೇಟು:Kalyani Chalukya Kings Infobox

ಆಹವಮಲ್ಲ ತೈಲಪ(r.973–997 CE)[೧] ಇಮ್ಮಡಿ ತೈಲನೆಂದು ಖ್ಯಾತನಾಗಿರುವ ಈತ ಕಲ್ಯಾಣದ ಚಾಲುಕ್ಯ ಮನೆತನದ ಸ್ಥಾಪಕನೆಂದೂ ಕವಿಕಾವ್ಯಪೋಷಕನೆಂದೂ ಗಣ್ಯನಾಗಿದ್ದಾನೆ. ಈ ಮನೆತನದಲ್ಲಿ ಈತನಿಗೆ ಮೊದಲು ಇನ್ನೂ ಕೆಲವರು ಆಗಿಹೋದಂತೆ ತಿಳಿದುಬಂದಿದ್ದರೂ ಅದರ ಚರಿತ್ರೆ ಸರಿಯಾಗಿ ಮೊದಲಾಗುವುದು ಈತನಿಂದಲೇ ಎನ್ನಬಹುದು.

ಬಾಲ್ಯ[ಬದಲಾಯಿಸಿ]

ಈತ ನಾಲ್ವಡಿ ವಿಕ್ರಮಾದಿತ್ಯನಿಗೆ ಚೇದಿಯ ರಾಜಪುತ್ರಿ ಬೊಂತಾದೇವಿಯಲ್ಲಿ ಜನಿಸಿದ. ಪತ್ನಿ ಭಮ್ಮಹ (ಭಾಮಹ) ರಟ್ಟನ ಪುತ್ರಿಯಾದ ಜಾಕವ್ವೆ. ಈ ಭಮ್ಮಹ ರಾಷ್ಟ್ರಕೂಟರ ಅರಸನೆಂದೇ ತಿಳಿಯುವುದರಿಂದ ಈಕೆ ರಾಷ್ಟ್ರಕೂಟರಾಜಪುತ್ರಿಯೇ ಆದಳು. ಅಹವಮಲ್ಲ ತೈಲಪನಿಗೆ ಜಾಕವ್ವೆಯಲ್ಲಿ ಸತ್ಯಾಶ್ರಯ ಮತ್ತು ದಶವರ್ಮ (ಯಶೋವರ್ಮ) ಎಂಬ ಇಬ್ಬರು ಪುತ್ರರಿದ್ದರು. ತೈಲಪನ ತರುವಾಯದಲ್ಲಿ ಸತ್ಯಾಶ್ರಯ ಚಾಲುಕ್ಯರಾಜ್ಯವನ್ನಾಳಿದ.

ನಾಮಧೇಯ[ಬದಲಾಯಿಸಿ]

ಅಹವಮಲ್ಲ ತೈಲಪನಿಗೆ ತೈಲ (ತೈಲಪ) ಎಂಬುದು ನಿಜವಾದ ಹೆಸರು. ಅಹವಮಲ್ಲ ಎಂಬುದು ನಚ್ಚಿನ ಬಿರುದು. ತೈಲಪಯ್ಯ, ತೈಲಪ್ಪ, ನೊರ್ಮಡಿತೈಲ-ಎಂಬುವು ಪ್ರತಿನಾಮಗಳು. ಈತನಿಗೆ ಮಹಾರಾಜಾಧಿರಾಜ, ರಾಜಪರಮೇಶ್ವರ, ಪರಮಭಟ್ಟಾರಕ-ಎಂದು ಮುಂತಾದ ಸಾಮ್ರಾಜ್ಯದ ಪ್ರಶಸ್ತಿಸೂಚಕವಾದ ಅನೇಕ ಬಿರುದುಗಳಿದ್ದುವು. ಈತ 977ರವರೆಗೆ 24 ವರ್ಷಗಳ ಕಾಲ ರಾಜ್ಯವನ್ನಾಳಿದ.

ಇತಿಹಾಸ[ಬದಲಾಯಿಸಿ]

ಅಹವಮಲ್ಲ ತೈಲಪನ ಹೆಸರನ್ನು ಹೇಳುವ ಅತಿ ಹಳೆಯ ದಾಖಲೆ ಎಂದರೆ 957ರ ಒಂದು ಶಾಸನ. 957 ಮತ್ತು 965ರಲ್ಲಿ ಈತ ರಾಷ್ಟ್ರಕೂಟರಾಜ ಮುಮ್ಮಡಿ ಕೃಷ್ಣನಿಗೆ ಸಾಮಂತನಾಗಿ ಬಿಜಾಪುರ ಜಿಲ್ಲೆಯಲ್ಲಿ ಆಳುತ್ತಿದ್ದ. ರಾಷ್ಟ್ರಕೂಟರ ಅಧೀನದಲ್ಲಿ ಮೊದಲು ಚಿಕ್ಕದೊಂದು ನಾಡಿನ ನಾಯಕನಾಗಿದ್ದು ಬರಬರುತ್ತ ಮಹಾಸಾಮಂತ ಪದವಿಗೆ ಏರಿದ. ಮುಮ್ಮಡಿ ಕೃಷ್ಣನ ಉತ್ತರಾಧಿಕಾರಿಗಳು ದುರ್ಬಲರಾಗುತ್ತ ಹೋದಂತೆ ಈತ ತನ್ನ ಸ್ಥಾನಬಲವನ್ನು ಸಾಮಥ್ರ್ಯವನ್ನು ಬೆಳೆಸಿಕೊಂಡ. ರಾಷ್ಟ್ರಕೂಟ ಇಮ್ಮಡಿ ಕಕ್ಕನಿಗೂ ತೈಲಪನಿಗೂ ನಡೆದ ಯುದ್ಧದಲ್ಲಿ (ಸು. 973) ಕಕ್ಕ ಮೃತನಾದ ಮೇಲೆ, 973-4 ರಿಂದ ತೈಲಪ ರಾಷ್ಟ್ರಕೂಟ ಅಧಿರಾಜತ್ವವನ್ನು ಪೂರ್ತಿಯಾಗಿ ಕಿತ್ತೊಗೆದು ಸ್ವತಂತ್ರನಾದ. ಅಹವಮಲ್ಲ ತೈಲಪನ ಏಳಿಗೆಯಿಂದ ಹೊಸದಾಗಿ ಉದಿಸಿದ ಚಾಲುಕ್ಯ ಸಾಮ್ರಾಜ್ಯಕ್ಕೆ ಈವರೆಗೆ ರಾಷ್ಟ್ರಕೂಟರಿಗೆ ಸಾಮಂತರಾಗಿದ್ದವರು ತಮ್ಮ ವಿಧೇಯತೆಯನ್ನು ತೋರಿಸಲು ಮೊದಲುಮಾಡಿದರು. ಶಿವಮೊಗ್ಗ ಜಿಲ್ಲೆಸೊರಬ ತಾಲ್ಲೂಕಿನಲ್ಲಿ ಆಳುತ್ತಿದ್ದ ಬ್ರಹ್ಮಕ್ಷತ್ರಿಯ ಕುಲದ ಶಾಂತಿವರ್ಮ ಮೊದಲು ಕಕ್ಕಲದೇವನಿಗೆ ಅಧಿನನಾಗಿದ್ದು, ಅನಂತರ ಆಹವಮಲ್ಲನಿಗೆ ಅಧೀನನಾದ. ಗಂಗ ಮಾರಸಿಂಹನ ಅನಂತರದ ಗಂದೇಶವನ್ನು ಸು. 974-75ರಲ್ಲಿ ಆಳುತ್ತಿದ್ದು, ಚಾಲುಕ್ಯರಿಗೆ ಸಿಂಹಪ್ರಾಯನೆಂದು ತನ್ನನ್ನು ಕರೆದುಕೊಂಡು ಮೆರೆಯುತ್ತಿದ್ದ ಪಾಂಚಾಲದೇವನೆಂಬ ಒಬ್ಬ ನಾಯಕನನ್ನು ತೈಲಪ ಶಿವಮೊಗ್ಗ ಜಿಲ್ಲೆಯ ಸಿರಿವೊರಿನಲ್ಲಿ ಬೀಡುಬಿಟ್ಟಿದ್ದಾಗ (ಸು. 975) ಯುದ್ಧರಂಗದಲ್ಲಿ ಶಿರಚ್ಛೇದನ ಮಾಡಿ ಕೊಂದ. 976ರಿಂದ ತೈಲಪ ತನ್ನ ಸಾಮ್ರಾಜ್ಯ ಪ್ರಶಸ್ತಿಗಳ ಸಹಿತವಾಗಿ ವರ್ಣಿತವಾಗಿರುವುದು ಬಳ್ಳಾರಿ ಜಿಲ್ಲೆಯ ಶಾಸನಗಳಿಂದ ತಿಳಿದುಬರುತ್ತದೆ. ಮುಮ್ಮಡಿ ಕೃಷ್ಣನ ಕೃಪೆಯಿಂದ ಅಭ್ಯುದಯಕ್ಕೆ ಬಂದ ಸೌಂದತ್ತಿಯ ರಟ್ಟರು ಪ್ರವರ್ಧಮಾನಕ್ಕೆ ಬರುತ್ತಿದ್ದ ತೈಲಪನ ಅಧೀನತೆಯನ್ನು ಒಪ್ಪಿಕೊಂಡ ಹಾಗೆ ಸುಮಾರು 980ರಲ್ಲಿ ಲಿಖಿತವಾದಂತೆ ಭಾವಿಸುವ ಎರಡು ಶಾಸನಗಳಿಂದ ತಿಳಿದು ಬರುತ್ತದೆ. ಚೋಳ ದೊರೆಯೊಬ್ಬನನ್ನು ಸೋಲಿಸಿ ಆತನಿಂದ 150 ಆನೆಗಳನ್ನು ಸೆಳೆದುಕೊಂಡು ತೈಲ ಅನಂತಪುರ ಜಿಲ್ಲೆಯ ರೊದ್ದ ಶಿಬಿರದಿಂದ ರಾಜ್ಯವಾಳುತ್ತಿದ್ದ ವಿಷಯವನ್ನು ತೈಲಪನ ಕಾಲದ್ದೇ ಆದ ಬಳ್ಳಾರಿಯ ಕೋಗಳಿ ಶಾಸನದಲ್ಲಿ (992) ಹೇಳಿದೆ. ತೈಲಪನ ಮಹತ್ಸಾಧನೆಗಳಲ್ಲಿ ಗಣ್ಯವಾದದ್ದು ಎಂದರೆ ಆತ ಮಾಳವ ದೇಶದ ಪರಮಾರ ಮುಂಜನನ್ನು ಸಾಧಿಸಿದ್ದು. ಈ ಮುಂಜ ಸೀಯಕ ಹರ್ಷನ ತರುವಾಯದಲ್ಲಿ ಮಾಳವ ದೇಶವನ್ನಾಳುತ್ತಿದ್ದ ವಾಕ್ಪತಿ ಮುಂಜನೆಂಬುದಾಗಿ ಗುರುತಿಸಲಾಗಿದೆ. ತೈಲಪ ರಾಷ್ಟ್ರಕೂಟರಿಗೆ ಅಧೀನನಾಗಿದ್ದಾಗಲೇ ಅವನ ಪರವಾಗಿ ಅವರ ಶತ್ರುಗಳಾದ ಪರಮಾರರೊಡನೆ ಕಾದಿದ್ದ. ಈಚೆಗೆ ಈತ ಪರಮಾರ ಮಂಜನನ್ನು ಸೆರೆಹಿಡಿದ ವಿಷಯವನ್ನು ಕೌಠೆಂ ಶಾಸನಗಳಲ್ಲೂ (1003), ಕೊಂದ ವಿಷಯವನ್ನು ವಿಕ್ರಮಾದಿತ್ಯನ ಗದಗು ಶಾಸನದಲ್ಲೂ ಉಲ್ಲೇಖಿಸಿದೆ. ಮುಂಜನ ಮೃತಿಯ ಅವಧಿಯನ್ನು ಸು. 995 ಎಂದು ಊಹಿಸಲಾಗಿದೆ. ಈತ ಚಾಲುಕ್ಯರ ಕೈಯಲ್ಲಿ ಸಿಕ್ಕಿ ಪಾಡುಪಟ್ಟದ್ದನ್ನು ಮೇರುತುಂಗನ ಪ್ರಬಂಧಚಿಂತಾಮಣಿಯಲ್ಲಿ ವರ್ಣಿಸಿದೆ. ಅಹವಮಲ್ಲ ತೈಲಪನ ಸಾಮಂತವರ್ಗದಲ್ಲಿ ಬಿಜಾಪುರ ಜಿಲ್ಲೆಯ ಸಿಂಧರು, ಉತ್ತರ ಕೊಂಕಣದ ಶಿಲಾಹಾರರು, ಸೇವುಣದೇಶದ ಯಾದವರು, ನೊಳಂಪಲ್ಲವರು-ಇವರೆಲ್ಲ ಸೇರಿದವರಾಗಿದ್ದರು. ಬನವಾಸಿ ಪ್ರಾಂತ್ಯವನ್ನಾಳುತ್ತಿದ್ದವರಲ್ಲಿ ಶೋಭನರಸನೆಂಬಾತ ತೈಲಪನಿಗೆ ಆಪ್ತನಾದ ದಂಡಾಧಿಪನಾದ. ಇನ್ನೊಬ್ಬ ಸೇನಾನಿಯಾದ ಬಾರಪನೆಂಬ ಚಾಲುಕ್ಯರಾಜಪುತ್ರ ತೈಲಪನಿಗಾಗಿ ಲಾಟದೇಶವನ್ನು ಸಾಧಿಸಿಕೊಟ್ಟ. ಬನವಾಸಿ, ಸಾಂತಲಿಗೆ ಕಿಸುಕಾಡು ನಾಡುಗಳಲ್ಲಿ ರಾಜಪ್ರತಿನಿಧಿಯಾಗಿ ಆಳುತ್ತಿದ್ದ ಭೀಮರಸ ತೈಲಪನ ಅಂಕಕಾರನೆನಿಸಿದ್ದ. ಅಂತೂ ಅಹವಮಲ್ಲ ತೈಲಪ ಗುಜರಾತ ಪ್ರಾಂತ್ಯ ಭಾಗವನ್ನು ಬಿಟ್ಟು ಸಮಗ್ರ ರಾಷ್ಟ್ರಕೂಟರ ಸಾಮ್ರಾಜ್ಯಕ್ಕೆ ಒಡೆಯನಾಗಿ, ರಟ್ಟಪಾಡಿ ಏಳೂವರೆ ಲಕ್ಷ ಪ್ರಾಂತ್ಯವನ್ನು ಆಳಿದನೆಂದು ತಿಳಿಯುವುದು.

ರನ್ನ ಆಶ್ರಯದಾತ[ಬದಲಾಯಿಸಿ]

ತೈಲಪ ಕವಿರನ್ನನಿಗೆ ಆಶ್ರಯದಾತೃವಾಗಿದ್ದ, ರನ್ನ ಸು. 990ರಲ್ಲಿ ತೈಲಪನ ಆಸ್ಥಾನವನ್ನು ಪ್ರವೇಶಿಸಿರಬೇಕೆಂದೂ ಅಲ್ಲಿಯೇ ಅಜಿತತೀರ್ಥಂಕರಪುರಾಣತಿಲಕ ಎಂಬ ತನ್ನ ಗ್ರಂಥವನ್ನು ರಚಿಸಿರಬೇಕೆಂದೂ ಸು. 991-2ರಲ್ಲಿ ಆತನಿಂದಲೇ ಕವಿಚಕ್ರವರ್ತಿ ಬಿರುದನ್ನು ಪಡೆದಿರಬೇಕೆಂದೂ ವಿದ್ವಾಂಸರು ಊಹಿಸಿದ್ದಾರೆ. ಚಕ್ರವರ್ತಿಯಾದ ತೈಲಪನಿಂದ ಮಹಿಮೋನ್ನತಿಯನ್ನೂ ಕವಿಚಕ್ರವರ್ತಿ ಬಿರುದನ್ನೂ ತಾನು ಪಡೆದುಕೊಂಡುದಾಗಿ ರನ್ನನೇ ತನ್ನ ಇನ್ನೊಂದು ಗ್ರಂಥಗಳಲ್ಲೂ ಅಲ್ಲಲ್ಲಿ ತೈಲಪನ ವಿಚಾರ ಬಂದಿದೆ. ಚಕ್ರಿಗಳೊಳಗಾಹವಮಲ್ಲಂ ಮಿಗಿಲೆನಿಕುಂ, ಅವನಿಪರೊಳ್ ನಿಜಭುಜ ಚಕ್ರವರ್ತಿ ರಣಜಯಕ್ಕೆ ತೈಲನೆಂತಸಹಾಯಂ, ಜಗತೀ ಚಕ್ರಮನಾಳ್ಗೆ ತೈಲನೃಪನೇ ಕಚ್ಛತ್ರದಿಂ -ಇಂಥ ಮಾತುಗಳು ಅಜಿತಪುರಾಣದಲ್ಲಿ ಬಂದಿವೆ. ಗದಾಯುದ್ಧದಲ್ಲಿ ತೈಲಪನನ್ನು ರನ್ನ ಸಮಸ್ತಭುವನಾಶ್ರಯಂ ಶ್ರೀ ಪ್ರಥ್ವೀವಲ್ಲಭಂ, ಮಹಾರಾಜಾಧಿರಾಜಂ, ರಾಜಪರಮೇಶ್ವರಂ, ಪರಮಭಟ್ಟಾರಕಂ, ಕರಹಟಭಯಂಕರಂ, ಜಾವಿಳಾಂದ್ರ ಕುಲೀನ ಭುವನಸದ್ಗುಣಮಣಿವಿಭೂಷಣಂ, ಸಿಂಧುರಕಂಧರಾಧಿರೂಢಪಲ್ಲಿಕೋಟೋ ಲ್ಲುಂಘನಂ, ಭದ್ರಕವಿದ್ರಾವಣಂ, ಕೊಂಕಣಭಯಂಕರಂ, ಉಭಯಬಲದಲ್ಲಣಂ, ಮಾರ್ಮಲೆವರಿಗಜಗೇಸರಿ, ಕರೀಂದ್ರಕಂಠೀರವಮಲ್ಲಂ, ವೈರಿಫಣೀಂದ್ರಸೌಪರ್ಣಂ, ಕ್ರಾಕಲಿಕರಾಜಗಜಕೇಸರಿ, ರಣಕುಂಭಿಕುಂಭಕಂಠೀರವಂ, ಯಾದವ ಕುಲಾಂಬರದ್ಯುಮಣಿ, ರಣರಂಗಭೀಷಣಂ, ರಿಪುಬಲಪುಂಜಗಜಘಟಾಭಂಜನಂ, ಸಾಮಂತ ಮೃಗ ಶಾರ್ದೂಲ, ರಣರಂಗರಾಕ್ಷಸಂ ಅಕಲಂಕರಾಮಂ, ತಳವರ್ಗತಳÀಪ್ರಕಾರಂ, ಅರಿಷ್ಟ ಘರಟ್ಟರಾಷ್ಟ್ರಕೂಟಕಾಳಕೂಟಂ, ನಿಜಭುಜಚಕ್ರವರ್ತಿ, ಪಾಂಚಾಲಮದೇಭಪಂಚಾನನಂ, ಸಂಹಾರಸಿಂಹಿತ್ವಘೋರ್ಜರವಜ್ರವಾಡಾ, ಘೊರ್ಜರ ಭಯಜ್ವರ, ಸಮಸ್ತ ಮಾಳವ ಸಪ್ತಾರ್ಚಿ, ಶತ್ರುಗ್ರಹೋಚಾಟನನುಂ ಮತ್ತಂ ಅನೇಕದೇಶಾಧೀಶ್ವರಂ ಪರನೃಪಮದಗಜಫಟಾಭಂಜನನುಮುತ್ಪಕ್ಯಮಲ್ಲಂ ಶ್ರೀಮನ್ನೊರಿರ್ಮಡಿತೈಲಪ ನೆನಿಸಿದಾಹದಮಲ್ಲದೇವನಿಂ-ಎಂಬುದಾಗಿ ನಾನಾವಿಧವಾಗಿ ಕೀರ್ತಿಸಿದ್ದಾನೆ. ಇದರಲ್ಲಿರುವ ಚಾರಿತ್ರಿಕಾಂಶಗಳು ಹಿಂದೆ ಹೇಳಿರುವ ಘಟನೆಗಳಲ್ಲಿ ಕೆಲವನ್ನು ಘೋಷಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Sen, Sailendra (2013). A Textbook of Medieval Indian History. Primus Books. p. 52-53. ISBN 978-9-38060-734-4.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: