ವಿಷಯಕ್ಕೆ ಹೋಗು

ಚೈತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೈತ್ಯ- ಬೌದ್ಧರ ಪೂಜಾಸ್ಥಳಗಳಿಗೆ ಈ ಹೆಸರಿದೆ. ಇದನ್ನು ಬೌದ್ಧ ದೇವಾಲಯವೆಂದೂ ಕರೆಯಲಾಗಿದೆ. ಸಾಮಾನ್ಯವಾಗಿ ಚೈತ್ಯದೊಳಗೆ ಸ್ತೂಪವೋ ಬೋಧಿವೃಕ್ಷವೋ ಧರ್ಮಚಕ್ರವೋ ಬುದ್ಧನ ಪಾದಗಳೋ ಇರುತ್ತವೆ. ಇವನ್ನು ಪೂಜೆ ಮಾಡಿ ಪ್ರದಕ್ಷಿಣೆ ಮಾಡಿ ಬರಲು ಪ್ರದಕ್ಷಿಣಾಪಥವನ್ನೊಳಗೊಂಡ ಮಂದಿರವೇ ಚೈತ್ಯ (ಪಾಳಿಯಲ್ಲಿ ಚೇತಿಯ).

ಅಜಂತಾದ ಚೈತ್ಯಗೃಹ

ಈ ಕಟ್ಟಡಗಳ ಶೈಲಿ ತೋಡದ ಗುಡಿಸಲುಗಳನ್ನು ಹೋಲುತ್ತದೆ; ಮೌರ್ಯರ ಕಾಲದ ಕೃತಿಯೆನ್ನುವ ಲೋಮಶ ಋಷಿಗುಹೆ (ಗಯಾ ಬಳಿ ಬರಾಬರ್ ಬೆಟ್ಟದಲ್ಲಿದೆ) ಚೈತ್ಯ ಶೈಲಿಗೆ ಬುನಾದಿಯೆನ್ನುತ್ತಾರೆ. ಪ್ರಾಚೀನ ಚೈತ್ಯಗಳಲ್ಲಿ ಬುದ್ಧನ ಮೂರ್ತಿಗಳಿರಲಿಲ್ಲ. ಮುಂದಿನ ಚೈತ್ಯಗಳಲ್ಲಿ ಬುದ್ಧನ ಸ್ಥಾನಕ ಅಥವಾ ಆಸೀನ (ಭೂಮಿಸ್ಪರ್ಶ ಅಥವಾ ಬೋಧಿ ಪ್ರವಚನ) ಅಥವಾ ಶಯನ (ಪರಿನಿರ್ವಾಣ) ಮೂರ್ತಿಗಳನ್ನು ಕಡೆದು ಇಡುವ ಪದ್ಧತಿ ಬಂತು. ನಿದರ್ಶನಕ್ಕೆ ಅಜಂತ ಗುಹಾಚೈತ್ಯಗಳಲ್ಲಿ ಬುದ್ಧನ ಸೊಗಸಾದ ಮೂರ್ತಿಗಳಿವೆ. ಮೂರ್ತಿಯ ಮೇಲ್ಭಾಗದಲ್ಲೋ ದ್ವಾರದ ಮೇಲೋ ಅರ್ಧವರ್ತುಲಾಕಾರದ ತೋರಣನಕ್ಷೆಯನ್ನು ಮೂಡಿಸುವುದೂ ಈ ಚೈತ್ಯ ವಾಸ್ತುವಿನ ಲಕ್ಷಣವೆನ್ನಬಹುದು. ಈ ನಕ್ಷೆಯೊಳಗೆ ಗಂಧರ್ವಮುಖಗಳನ್ನೂ ಚಿತ್ರಿಸುತ್ತಿದ್ದರು. ಕ್ರಿ.ಶ. ಎರಡನೆಯ ಶತಮಾನದ ಕಾರ್ಲಿ ಚೈತ್ಯ ಜಗತ್ಪ್ರಸಿದ್ಧವಾಗಿದೆ. ಕಣ್ಹೇರಿಯ ಚೈತ್ಯವೂ ಅದೇ ಕಾಲದ್ದು. ಬೇಡ್ಯಾ, ನಡಸೂರ್, ಮಾನ್ಮೋದ ಇವೂ ಕಾರ್ಲಿ, ಕಣ್ಹೇರಿಗಳಂತೆ ಪಶ್ಚಿಮಘಟ್ಟಗಳಲ್ಲಿರುವ ಚೈತ್ಯಗಳು. ಔರಂಗಾಬಾದ್ ಮತ್ತು ಭಾಜಗಳಲ್ಲೂ ಚೈತ್ಯಾಲಯಗಳಿವೆ.

ಉತ್ಖನನಗೊಳಿಸಿದ ಓರಿಸ್ಸ್ಸಾದ ಲಲಿತಗಿರಿಯ ಚೈತ್ಯಗೃಹದ ಅವಶೇಷಗಳು
ಭಾಜ ಚೈತ್ಯಾಲಯದಲ್ಲಿನ ಸ್ತೂಪ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಚೈತ್ಯ&oldid=890672" ಇಂದ ಪಡೆಯಲ್ಪಟ್ಟಿದೆ