ವಿಷಯಕ್ಕೆ ಹೋಗು

ಬಂಕಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಂಕಾಪುರವು ಕರ್ನಾಟಕ ರಾಜ್ಯದ HAVERI ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಒಂದು ಊರು ಮತ್ತು ಐತಿಹಾಸಿಕ ಸ್ಥಳ. ಹುಬ್ಬಳ್ಳಿಗೆ ಸುಮಾರು 32 ಕಿಮೀ ದೂರದಲ್ಲಿದೆ. ಜನಸಂಖ್ಯೆ ಸುಮಾರು 10,000. 9ನೆಯ ಶತಮಾನದ ಮಧ್ಯಭಾಗದಿಂದ 1951ರ ತನಕ ಅದೇ ಹೆಸರಿನ ತಾಲ್ಲೂಕಿನ ಮುಖ್ಯ ಸ್ಥಳವಾಗಿತ್ತು.

ಹೆಸರಿನ ವ್ಯುತ್ಪತ್ತಿ[ಬದಲಾಯಿಸಿ]

ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ದಂಡನಾಯಕ ಬಂಕೆಯನಿಂದಲೇ ಈ ಊರಿಗೆ ಬಂಕಾಪುರವೆಂಬ ಹೆಸರು ಬಂದಿತೆಂದು ಗುಣಭದ್ರಾಚಾರ್ಯರ 'ಉತ್ತರಪುರಾಣ' ಗ್ರಂಥದಿಂದ ತಿಳಿದುಬರುತ್ತದೆ.

ಇತಿಹಾಸ[ಬದಲಾಯಿಸಿ]

ಕ್ರಿ.ಶ.925-26ರಲ್ಲಿ ಬನವಾಸಿ-12000 ಪ್ರದೇಶವನ್ನು ಹಾನಗಲ್ ತಾಲ್ಲೂಕಿನ ಲಕ್ಷ್ಮಿಪುರದ ಶಾಸನದ ಪ್ರಕಾರ ಎರಡು ಭಾಗವಾಗಿ ವಿಭಜಿಸಿ ಒಂದು ಭಾಗವನ್ನು ಬಂಕೆಯರಸನ ವಂಶಜ ಬಂಕೆಯನಿಗೂ ಇನ್ನೊಂದು ಭಾಗವನ್ನು ರಾಷ್ಟ್ರಕೂಟ ವಂಶದ ಶಂಕರಗಂಡನಿಗೂ ಹಂಚಿಕೊಟ್ಟುದಾಗಿ ತಿಳಿದುಬರುತ್ತದೆ.

ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಬಂಕಾಪುರ ಒಂದು ಮುಖ್ಯಸ್ಥಳವಾಗಿತ್ತು. ಮಹಾಮಂಡಲೇಶ್ವರ ಅರಿಕೇಸರಿ 1052ರಲ್ಲಿ ಬಂಕಾಪುರದಲ್ಲಿ ಆಳುತ್ತಿದ್ದುದಾಗಿ ತಿಳಿದುಬಂದಿದೆ. ಆರನೆಯ ವಿಕ್ರಮಾದಿತ್ಯ ಆತನ ಜ್ಞಾತಿ ವಿಷ್ಣುವರ್ಧನ ವಿಜಯಾದಿತ ಇವರು 1075ರಲ್ಲಿ ಬಂಕಾಪುರದಲ್ಲಿ ಇದ್ದುದಾಗಿ ತಿಳಿದುಬರುತ್ತದೆ. ಇವರ ಕಾಲದಲ್ಲಿ ಬಂಕಾಪುರ ಹಾನಗಲ್ಲ ಕದಂಬರ ರಾಜಧಾನಿಯಾಗಿತ್ತು. ಹೊಯ್ಸಳ ದೊರೆ ವಿಷ್ಣುವರ್ಧನ 1140ರಲ್ಲಿ ಬಂಕಾಪುರವನ್ನು ಗೆದ್ದು ತನ್ನ ರಾಜ್ಯದ ಉತ್ತರ ಭಾಗಕ್ಕೆ ರಾಜಧಾನಿಯಾಗಿ ಮಾಡಿಕೊಂಡ. ವಿಜಯನಗರದ ಅರಸರ ಕಾಲದಲ್ಲಿ ಬಂಕಾಪುರ ಒಂದು ಪ್ರಸಿದ್ಧ ಕೋಟೆಯಾಗಿತ್ತು. ಬಹಮನಿ ದೊರೆ ಮುಜಾಹಿದ್ (1375-78) ಒಂದನೆಯ ಬುಕ್ಕರಾಯನಿಗೆ ಬಂಕಾಪುರವನ್ನು ಬಿಟ್ಟು ಕೊಡಲು ಕೇಳಿದ. ಬುಕ್ಕರಾಯ ಬಿಟ್ಟಿಕೊಡಲಿಲ್ಲ. 1403ರಲ್ಲಿ 8ನೆಯ ಬಹಮನೀ ದೊರೆ ಫಿರೋಜ್‍ಷಾ ಆಕ್ರಮಣ ಮಾಡಿ ಒಂದನೆಯ ದೇವರಾಯನ ಮಗಳನ್ನೂ ಬಂಕಾಪುರ ಕೋಟೆಯನ್ನೂ ವಶಪಡಿಸಿಕೊಂಡ. ಮುಂದೆ ಈ ಕೋಟೆ ಬಹಳ ಕಾಲ ಬಹಮನೀ ಅರಸರ ವಶದಲ್ಲಿತ್ತು. ಅನಂತರ ವಿಜಯನಗರದ ಅರಸರ ಮತ್ತು ಬಿಜಾಪುರದ ಸುಲ್ತಾನರಲ್ಲಿ ಬಂಕಾಪುರದ ಅಧಿಕಾರ ಬದಲಾಗುತ್ತಿತ್ತು. ಶಿವಾಜಿ ಮತ್ತು ಆತನ ದಂಡನಾಯಕ ಆನಂದರಾವ್ (1673-74) ಬಂಕಾಪುರವನ್ನು ದೋಚಿದ ಮರಾಠರು. 1755ರಲ್ಲಿ ಫ್ರೆಂಚ್ ಜನರಲ್ ಬುಸ್ಸಿ ಬಂಕಾಪುರವನ್ನು ಮುತ್ತಿದಾಗ ಸವಣೂರು ನವಾಬ ಬಂಕಾಪುರ ಕೋಟೆಯನ್ನು ಹೋಲ್ಕರನಿಗೆ ಒತ್ತೆಹಾಕಿದ. 1766ರಲ್ಲಿ ಹೈದರ್‍ಆಲಿ ಬಂಕಾಪುರವನ್ನು ಮುತ್ತಿ ಗೆದ್ದುಕೊಂಡ. 1780ರಲ್ಲಿ ಟಿಪ್ಪುಸುಲ್ತಾನ ಸವಣೂರನ್ನೂ ಗೆದ್ದ. ಸವಣೂರ ನವಾಬರ ಕಾಲದಲ್ಲಿ ಸವಣೂರ-ಬಂಕಾಪುರ ಎಂದೇ ಈ ಎರಡು ಸ್ಥಳಗಳು ಹೆಸರಾಗಿದ್ದುವು. ಬಂಕಾಪುರ ನವಾಬರ ಅತ್ಯಂತ ಭದ್ರವಾದ ಕೋಟೆಯಾಗಿತ್ತು. 1802ರಲ್ಲಿ ಪೇಷ್ವೆ ಅವರು ಬೇಸಿನ್ ಸಂಧಾನದ ಪ್ರಕಾರ ಸವಣೂರ್ ಜೊತೆಗೆ ಬಂಕಾಪುರ ತಾಲ್ಲೂಕನ್ನೂ ಬ್ರಿಟೀಷರಿಗೆ ಒಪ್ಪಿಸಿದರೂ ಬಂದೇಲ್‍ಖಂಡಕ್ಕೆ ಪ್ರತಿಯಾಗಿ ಮತ್ತೆ ಪೇಷ್ವೆಗೆ 1803ರಲ್ಲಿ ವಾಪಸ್ಸು ಕೊಡಲಾಯಿತು. ಮುಂದೆ ಬಂಕಾಪುರ ಇತರ ರಾಜ್ಯಗಳೊಂದಿಗೆ ಬ್ರಿಟಿಷರ ಆಡಳಿತಕ್ಕೆ ಸೇರಿಹೋಯಿತು.

ಬಂಕಾಪುರವನ್ನಾಳಿದ ರಾಜರು ಅನೇಕ ದೇವಾಲಯವನ್ನೂ ಜಿನ ಬಸದಿಗಳನ್ನೂ ಕಟ್ಟಿಸಿದ್ದಾರೆ. 925ರ ಅಸುಂಡಿಯ ಶಾಸನದ ಪ್ರಕಾರ ಬಂಕಾಪುರದಲ್ಲಿ ಧೋರ ಜಿನಾಲಯ ಎಂಬ ಬಸದಿಯಿದ್ದಿತು. ಬಂಕಾಪುರದ ಕೋಟೆಯ ದ್ವಾರದ ಬಳಿಯ ಶಾಸನವೊಂದರ ಪ್ರಕಾರ 1050ರಲ್ಲಿ ಐದು ಜೈನ ವಿದ್ಯಾಕೇಂದ್ರಗಳಿದ್ದುದಾಗಿ ತಿಳಿದು ಬರುತ್ತದೆಂದು ಎಚ್. ಕಜಿನ್ಸ್ ಹೇಳಿದ್ದಾನೆ. ಇಂದ್ರೇಶ್ವರ ದೇವಸ್ಥಾನ, ನರರೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ ಮತ್ತು ನರಸಿಂಹ ದೇವಸ್ಥಾನಗಳಿದ್ದವು. ಇಂದ್ರೇಶ್ವರ ದೇವಸ್ಥಾನ ಅರುವತ್ತು ಕಂಬದ ದೇವಸ್ಥಾನವೆಂದು ಪ್ರಸಿದ್ದವಾಗಿತ್ತು. ಮುಂದೆ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಯಿತು. ರಾಷ್ಟ್ರಕೂಟರಕಾಲದಿಂದ ವಿಜಯನಗರದ ಅರಸರ ಕಾಲದವರೆಗಿನ ವ್ಯಾಪ್ತಿಗೆ ಸಂಬಂಧಿಸಿದ ಸುಮಾರು 17 ಶಾಸನಗಳು ಇಲ್ಲಿ ದೊರಕಿವೆಯೆಂದು ಹೇಳುತ್ತಾರೆ. 1951ರಲ್ಲಿ ತಾಲ್ಲೂಕು ಮುಖ್ಯಸ್ಥಳ ಶಿಗ್ಗಾಂವಿಗೆ ಸ್ಥಳಾಂತರವಾದಾಗ ಬಂಕಾಪುರ ಕೇವಲ ಒಂದು ಊರಾಗಿ ಉಳಿಯಿತು. ಜನಗಣತಿಗಾಗಿ ಇದನ್ನು ಶಾಹಬಜಾರ್ ಮತ್ತು ಅಂಕದ ಕಣ ಎಂಬ ಘಟಕಗಳಾಗಿ ಪರಿಗಣಿಸಲಾಗಿದೆ.

ಚಿತ್ರಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಬಂಕಾಪುರ&oldid=1115088" ಇಂದ ಪಡೆಯಲ್ಪಟ್ಟಿದೆ