ವಿಷಯಕ್ಕೆ ಹೋಗು

ಮೊದಲನೇ ಅಮೋಘವರ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊದಲನೇ ಅಮೋಘವರ್ಷ
Amoghavarsha
Old Kannada inscription (876 AD) of Rashtrakuta King Amoghavarsha I at Veerabhadra temple in Kumsi
6th Rashtrakuta Emperor
ಆಳ್ವಿಕೆ c. 814 – c. 878 CE (64 years)
ಪೂರ್ವಾಧಿಕಾರಿ Govinda III
ಉತ್ತರಾಧಿಕಾರಿ Krishna II
ತಂದೆ Govinda III
ಜನನ 800 CE
ಮರಣ 878 CE
ಧರ್ಮ Jainism[]
ರಾಷ್ಟ್ರಕೂಟ ಅರಸರು (753-982)
ದಂತಿದುರ್ಗ (735 - 756)
ಮೊದಲನೇ ಕೃಷ್ಣ (756 - 774)
ಇಮ್ಮಡಿ ಗೋವಿಂದ (774 - 780)
ದ್ರುವ ಧಾರಾವರ್ಷ (780 - 793)
ಗೋವಿಂದ III (793 - 814)
ಅಮೋಘವರ್ಷ (814 - 878)
ಕೃಷ್ಣ II (878 - 914)
ಇಂದ್ರ III (914 -929)
ಅಮೋಘವರ್ಷ II (929 - 930)
ಗೋವಿಂದ IV (930 – 936)
ಅಮೋಘವರ್ಷ III (936 – 939)
ಕೃಷ್ಣ III (939 – 967)
ಕೊಟ್ಟಿಗ ಅಮೋಘವರ್ಷ (967 – 972)
ಕರ್ಕ II (972 – 973)
ಇಂದ್ರ IV (973 – 982)
Tailapa II
(Western Chalukyas)
(973-997)

ಮೊದಲನೆಯ ಅಮೋಘವರ್ಷ ಅಥವಾ ಅಮೋಘವರ್ಷ ನೃಪತುಂಗನು ಕ್ರಿ.ಶ. ೮೧೪ರಲ್ಲಿ ಮುಮ್ಮಡಿ ಗೋವಿಂದನ ನಂತರ ರಾಷ್ಟ್ರಕೂಟರ ರಾಜನಾಗಿ ಸಿಂಹಾಸನವೇರಿದನು. ಇವನು "ನೃಪತುಂಗ" ಎಂಬ ಹೆಸರಿನಿಂದ ಹೆಚ್ಚು ಪ್ರಖ್ಯಾತನಾಗಿದ್ದಾನೆ. ರಾಜನಾದಾಗ ಇವನಿಗೆ ಕೇವಲ ೧೪ ವರ್ಷ. ಸ್ವಭಾವತಃ ಶಾಂತಿಪ್ರಿಯನಾಗಿದ್ದರೂ, ಹಲವು ದೀರ್ಘಕಾಲದ ಯುದ್ಧಗಳಲ್ಲಿ ತೊಡಗಿಕೊಳ್ಳಬೇಕಾಯಿತು.ಮತ್ತು ಇವನು ಜೈನ್ ದರ್ಮದವನು

ಉತ್ತರಭಾರತದ ದಿಗ್ವಿಜಯ ಮಾಡಿ ಬಂದ ೩ನೆಯ ಗೋವಿಂದನ ಮಗ. ಗೋವಿಂದ ವಿಂಧ್ಯಪರ್ವತದ ತಪ್ಪಲಲ್ಲಿದ್ದ ಶ್ರೀಭವನದಲ್ಲಿ ಬೀಡುಬಿಟ್ಟಿದ್ದಾಗ ಶರ್ವ-ಅಮೋಘವರ್ಷ ಹುಟ್ಟಿದನೆಂದು ಸಂಜಾನ ಶಾಸನದಲ್ಲಿ ಹೇಳಿದೆ. ೮೦೩ರ ಮಣ್ಣೆಯ ಶಾಸನದಲ್ಲಿ ಗೋವಿಂದ ಶ್ರೀಭವನದಲ್ಲಿದ್ದ ಸಂಗತಿ ಉಕ್ತವಾಗಿದೆಯಾದ ಕಾರಣ ಅಮೋಘವರ್ಷ ಸು. ೮೦೦ರಲ್ಲಿ ಜನ್ಮವೆತ್ತಿರಬಹುದು.

ರಾಜ್ಯಭಾರ

[ಬದಲಾಯಿಸಿ]

ಗೋವಿಂದ ೮೧೪ರಲ್ಲಿ ತೀರಿಕೊಂಡಿದ್ದರಿಂದ ಅಮೋಘವರ್ಷ ಪಟ್ಟಕ್ಕೆ ಬಂದಾಗ ೧೪ ಮರ್ಷದ ಚಿಕ್ಕಬಾಲಕನಾಗಿದ್ದ. ಈ ಸಂಧಿಯನ್ನು ಸಾಧಿಸಿ ಕೆಲವು ಶುಲ್ಕಕರೂ (ಚಾಲುಕ್ಯರೂ) ರಾಷ್ಟ್ರಕೂಟರೂ ಬಂಡು ಹೂಡಿ ಅಮೋಘವರ್ಷನನ್ನು ಪಟ್ಟದಿಂದ ತಳ್ಳಿ ರಾಷ್ಟ್ರಕೂಟ ರಾಜ್ಯವನ್ನು ಆಕ್ರಮಿಸಬೇಕೆಂದು ಹೊಂಚು ಹಾಕಿದರು. ಆದರೆ ಬಡೋದಾ ತಾಮ್ರಶಾಸನದಲ್ಲಿ (೮೩೫) ಹೇಳಿದಂತೆ ಗುಜರಾತಿನ ರಾಜ ಬಂಡುಗಾರರನ್ನು ಗೆದ್ದು ಅಮೋಘವರ್ಷನನ್ನು ಸಿಂಹಾಸನದ ಮೇಲೆ ಸ್ಥಿರಪಡಿಸಿದ. ಸಂಜಾನ ತಾಮ್ರಶಾಸನದಲ್ಲಿ ಪಾತಾಲಮಲ್ಲನೆಂಬ ವೀರಭಟ ಶತೃಗಳನ್ನು ನಿಗ್ರಹಿಸಿ ರಾಜ್ಯದಲ್ಲಿ ಶಾಂತತೆಯನ್ನು ನೆಲೆಗೊಳಿಸಿ ಅಮೋಘವರ್ಷನನ್ನು ತನ್ನ ವಂಶಾನುಗತ ಸಿಂಹಾಸನದ ಮೇಲೆ ಸ್ಥಿರವಾಗಿ ಕೂಡಿಸಿದನೆಂದು ಬರೆದಿದೆ. ೨ನೆಯ ಕೃಷ್ಣರಾಜನ ತಾಮ್ರಶಾಸನಗಳಲ್ಲಿ ಅಮೋಘವರ್ಷ ಶತ್ರುಗಳನ್ನು ತಾನೇ ನಿರ್ಮೂಲನ ಮಾಡಿ ರಾಜ್ಯವನ್ನು ಸ್ಥಿರಪಡಿಸಿಕೊಂಡನೆಂದು ಹೇಳಿದೆ.ಅಮೋಘವರ್ಷ ಮಹಾಪ್ರತಾಪಶಾಲಿ. ತನ್ನ ತಂದೆ ವಿಸ್ತರಿಸಿದ್ದ ರಾಜ್ಯವನ್ನು ಅತಿ ಸಾಹಸದಿಂದ ಕಾಪಾಡಿಕೊಂಡು ಬಂದ. ಪೂರ್ವದ ಚಾಲುಕ್ಯ ಮತ್ತು ತಲಕಾಡಿನ ಗಂಗರೊಂದಿಗೆ ಹೋರಾಡಿ ಅವರ ರಾಜ್ಯದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡ. ವಿಸ್ತಾರವಾದ ರಾಜ್ಯವನ್ನು ಬಂಕೇಶ ಮೊದಲಾದ ಅನೇಕ ಮಾಂಡಲಿಕರ ಸಹಾಯದಿಂದ ಆಳುತ್ತ ದೇಶದಲ್ಲಿ ಶಾಂತತೆಯನ್ನು ನೆಲೆಗೊಳಿಸಿದ. ಲೋಕೋಪದ್ರವ ಶಾಂತಿಗೆಂದು ತನ್ನ ಎಡಗೈ ಬೆರಳನ್ನು ಮಹಾಲಕ್ಷ್ಮಿಗಾಗಿ ಬಲಿಯಾಗಿ ಕೊಟ್ಟನೆಂದು ಅವನ ಸಂಜಾನ ತಾಮ್ರಶಾಸನದಲ್ಲಿ ಬರೆದಿದೆ. ಈ ಲೋಕೋಪದ್ರವ ಯಾವುದೆಂಬುದು ಗೊತ್ತಿಲ್ಲ.

ಸಾಹಿತ್ಯಕ್ಕೆ ಕೊಡುಗೆ

[ಬದಲಾಯಿಸಿ]
Bilingual old Kannada-Sanskrit inscription (866 AD) written in old Kannada script, from Nilgund of Rashtrakuta King Amoghavarsha I
Jaina Narayana temple Pattadakal built by Rashtrakuta Amoghavarsha

ಸ್ವತಃ ಕವಿಯೂ ಆಗಿದ್ದ ನೃಪತುಂಗನು ವಿವಿಧ ಮತಗಳ ಕವಿಗಳು, ಪಂಡಿತರಿಗೆ ಆಶ್ರಯದಾತನೂ ಆಗಿದ್ದನು. ಇವನ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯಗಳು ಪ್ರವರ್ಧಮಾನವಾದವು. ಕನ್ನಡದಲ್ಲಿ ಲಭ್ಯವಿರುವ ಪ್ರಾಚೀನ ಗ್ರಂಥ ಕವಿರಾಜಮಾರ್ಗದ ಕರ್ತೃ ನೃಪತುಂಗ ಅಥವಾ ಅವನ ಆಸ್ಥಾನದ ಕವಿಯಾಗಿದ್ದ ಶ್ರೀವಿಜಯ. ಅಮೋಘವರ್ಷದ ಕಾಲದಲ್ಲಿ ಕೆಲವು ಯುದ್ಧಗಳು ಜರುಗಿದರೂ ಅವನ ಸುಮಾರು 62 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಲಲಿತಕಲೆಗಳ ಅಭಿವೃದ್ಧಿಗೆ ಅನುಕೂಲವಾದ ಶಾಂತಿ ಅವನ ರಾಜ್ಯದಲ್ಲಿ ನೆಲೆಸಿತ್ತು. ಈತ ಕನ್ನಡ ಸಾಹಿತ್ಯದಲ್ಲಿ ಉಪಲಬ್ಧಗ್ರಂಥಗಳಲ್ಲಿ ಅತಿ ಪ್ರಾಚೀನ ಗ್ರಂಥವೆನಿಸಿದ ಕವಿರಾಜಮಾರ್ಗವನ್ನೂ ಪ್ರಶ್ನೋತ್ತರ ಮಾಲಿಕಾ ಎಂಬ ಸಂಸ್ಕೃತಗ್ರಂಥವನ್ನೂ ರಚಿಸಿದನೆಂದು ಒಂದು ವಾದವಿದೆ. ಕವಿರಾಜಮಾರ್ಗ ಭಾಮಹ ದಂಡಿಯರ ಅಲಂಕಾರ ಗ್ರಂಥಗಳನ್ನು ಬಹಳಮಟ್ಟಿಗೆ ಅನುಸರಿಸಿದೆ. ಕನ್ನಡ ಅಲಂಕಾರ ಗ್ರಂಥಗಳಲ್ಲಿ ಇದು ಪ್ರಮಾಣಭೂತವಾದುದು. ಅಮೋಘವರ್ಷ ಶ್ರೀವಿಜಯ ಮೊದಲಾದ ವಿದ್ವಾಂಸರಿಗೆ ತನ್ನ ಆಸ್ಥಾನದಲ್ಲಿ ಆಶ್ರಯವಿತ್ತಿದ್ದ. ಪಾಶ್ರ್ವಾಭ್ಯುದಯ, ಪೂರ್ವಪುರಾಣಗಳನ್ನು ಬರೆದ ಜಿನಸೇನಾಚಾರ್ಯರು ಈತನ ಗುರು. ಶಾಕಟಾಯಕನೆಂಬ ಜೈನ ವೈಯಾಕರಣ ಶಬ್ದಾನುಶಾಸನವನ್ನೂ ಅದಕ್ಕೆ ಟೀಕಾರೂಪವಾದ ಅಮೋಘವೃತ್ತಿಯನ್ನೂ ಆಗಲೇ ರಚಿಸಿದ. ಯುವರಾಜ ಕೃಷ್ಣರಾಜನಿಗೆ ಗುರುವಾಗಿದ್ದ ಗುಣಭದ್ರಾಚಾರ್ಯನು ಅಮೋಘವರ್ಷನ ಭಕ್ತಿಗೌರವಗಳಿಗೆ ಪಾತ್ರನಾಗಿದ್ದು ಉತ್ತರಪುರಾಣವನ್ನು ರಚಿಸಿದ. ಗಣಿತಸಾರಸಂಗ್ರಹದ ಕರ್ತನಾದ ವೀರಾಚಾರ್ಯ ತನ್ನ ಗ್ರಂಥ ರಚನೆಯ ಕಾಲದಲ್ಲಿ ಅಮೋಘವರ್ಷ ಸಾರ್ವಭೌಮನಾಗಿದ್ದನೆಂದು ಹೇಳಿದ್ದಾನೆ.ನೃಪತುಂಗನ ರಚನೆಯು ಶಾಸ್ತ್ರಗ್ರಂಥವಾಗಿರುವದು. ಕಾವ್ಯದೋಷಗಳು, ಅಲಂಕಾರಗಳು ಈ ಗ್ರಂಥದಲ್ಲಿ ವರ್ಣಿತವಾಗಿವೆ. ಕನ್ನಡನಾಡಿನ ಜನರು 'ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್' ಅಂದರೆ ‘’ಓದದೆಯೇ ಕಾವ್ಯ ಪ್ರಯೋಗದಲ್ಲಿ ನಿಪುಣರು’’ ಎಂದು ನೃಪತುಂಗನು ಹೊಗಳಿದ್ದಾನೆ.

ಆಳ್ವಿಕೆ

[ಬದಲಾಯಿಸಿ]

ಮಾನ್ಯಖೇತ (ಇಂದಿನ ಮಳಖೇಡ) ಪಟ್ಟಣವನ್ನು ಕಟ್ಟಿ, ಅದನ್ನು ರಾಷ್ಟ್ರಕೂಟರ ಪ್ರಮುಖ ಪಟ್ಟಣವಾಗುವಂತೆ ಮಾಡಿದನು. ಅರಬ್ ಗ್ರಂಥಕರ್ತೃ ಸುಲೇಮಾನ್ ಅಮೋಘವರ್ಷನನ್ನು ಚೀನಾ, ಬಾಗ್ದಾದ್, ಕಾನ್‌ಸ್ಟಾಂಟಿನೋಪಲ್‌ ರಾ‍ಜರುಗಳಿಗೆ ಹೋಲಿಸಿ ಬರೆದಿದ್ದಾನೆ. ಇವನು ಹಿಂದು ಮತ್ತು ಜೈನ ಧರ್ಮಗಳೆರಡನ್ನೂ ಸಮಾನವಾಗಿ ಪುರಸ್ಕರಿಸಿದನು.

ಬಿರುದುಗಳು

[ಬದಲಾಯಿಸಿ]

ಅಮೋಘವರ್ಷನಿಗೆ ಶರ್ವ, ನೃಪತುಂಗ ಎಂಬ ಹೆಸರುಗಳಲ್ಲಿದೆ ಅತಿಶಯಧವಳ, ವೀರನಾರಾಯಣ, ಲಕ್ಷ್ಮೀವಲ್ಲಭೇಂದ್ರ, ಶ್ರೀವಲ್ಲಭ ಮತ್ತು ಮಾರ್ತಾಂಡ ಮುಂತಾದ ಬಿರುದುಗಳಿದ್ದುವು. ಇವನಿಗೆ ಶಂಖಾದೇವಿ, ಚಂದ್ರೊಬ್ಬಲಬ್ಬೆ ಎಂಬ ಇಬ್ಬರು ಹೆಣ್ಣುಮಕ್ಕಳೂ ಕೃಷ್ಣರಾಜನೆಂಬ ಮಗನೂ ಇದ್ದರು. ಈತ ಶಾಂತಿಪ್ರಿಯನಾದುದರಿಂದ ಶತ್ರುಗಳಾದ ಗಂಗ ಮತ್ತು ಪಲ್ಲವರನ್ನು ಸೋಲಿಸಿ ಅವರೊಡನೆ ಬಾಂಧವ್ಯವನ್ನು ಬೆಳೆಸಿದ. ರಾಷ್ಟ್ರಕೂಟವಂಶದಲ್ಲಿ 3ನೆಯ ಗೋವಿಂದ ದಿಗ್ವಿಜಯಗಳಿಂದ ಪ್ರಸಿದ್ಧನಾಗಿದ್ದರೆ ಅವನ ಮಗನಾದ ಅಮೋಘವರ್ಷ ತನ್ನ ರಾಜ್ಯದಲ್ಲಿ ಶಾಂತಿಯನ್ನು ನೆಲೆಗೊಳಿಸಿ ಲಲಿತಕಲೆಗಳಿಗೆ ಪ್ರೋತ್ಸಾಹವನ್ನು ಕೊಟ್ಟು ಕರ್ನಾಟಕದ ಕೀರ್ತಿಯನ್ನು ಬೆಳೆಗಿಸಿದ.

ಅಂತ್ಯ

[ಬದಲಾಯಿಸಿ]

ಅಮೋಘವರ್ಷನು ಸುಮಾರು ಕ್ರಿ.ಶ.೮೭೮ರಲ್ಲಿ ಕಾಲವಾದನು.

ವಂಶಾವಳಿ

[ಬದಲಾಯಿಸಿ]
Preceded by ರಾಷ್ಟ್ರಕೂಟ ಅರಸರು
814–878
Succeeded by

ಉಲ್ಲೇಖಗಳು

[ಬದಲಾಯಿಸಿ]
  1. Jaini 2000, p. 339.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: