ವಿಷಯಕ್ಕೆ ಹೋಗು

ಕವಿರಾಜಮಾರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕವಿರಾಜಮಾರ್ಗ :-

ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡ ಜನರ ವರ್ಣನೆ

ಕವಿರಾಜಮಾರ್ಗ ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು. ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ ಶ್ರೀವಿಜಯನೆಂಬುದು ಬಹುತೇಕ ವಿದ್ವಾಂಸರ ಅಭಿಮತವಾಗಿದೆ. ಗ್ರಂಥದ ಮೊದಲಿಗೆ ಅಮೋಘವರ್ಷ ನೃಪತುಂಗ ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ.

ಪರಿಚಯ

  • ಕವಿರಾಜಮಾರ್ಗ(ಕ್ರಿ.ಶ ೮೧೪-೮೭೭) ಎಲ್ಲಾ ದೃಷ್ಟಿಯಿಂದಲೂ ವಿಶಿಷ್ಟ ಗ್ರಂಥ. ಕನ್ನಡದಲ್ಲಿ ತನಗಿಂತ ಮೊದಲು ಆಗಿಹೋದ ಕವಿಗಳನ್ನು ಶ್ರೀವಿಜಯನು ಹೆಸರಿಸಿದ್ದಾನೆ. ಇದರಿಂದಾಗಿ ಕನ್ನಡ ಸಾಹಿತ್ಯವು ಬಹಳ ಶ್ರೀಮಂತವಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಕವಿಯು ಕನ್ನಡ ನಾಡಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾನೆ.
  • ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಸೀ ಸಾಹಿತ್ಯ ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾನೆ. ಅವುಗಳಲ್ಲಿ, ಬೆದಂಡೆ, ಚತ್ರಾಣ, ಹಾಗೂ ಒನಕೆವಾಡುಗಳು ಮುಖ್ಯವಾದುವು.ಕವಿರಾಜಮಾರ್ಗದ ಕರ್ತೃತ್ವದ ವಿಚಾರ ವಿದ್ವಾಂಸರಲ್ಲಿ ಪ್ರಬಲವಾದ ಬಿನ್ನಾಭಿಪ್ರಾಯಗಳು ಇದೆ. ಕವಿರಾಜಮಾರ್ಗದ ಕರ್ತೃ ನೃಪತುಂಗ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.
  • ಆದರೆ ನೃಪತುಂಗನ ಸಭಾಸದನಾದ ಶ್ರೀ ವಿಜಯನೆಂಬ ಕವಿ ತನ್ನ ಹೆಸರನ್ನು ಮರೆಮಾಚಿ ನೃಪತುಂಗನ ಹೆಸರನ್ನು ಮುಂದಿಟ್ಟು ಕೃತಿ ರಚನೆ ಮಾಡಿದ್ದಾನೆ ಎಂದು ವಾದವಿದೆ. ಈ ಗ್ರಂಥವನ್ನು ಮೊದಲು ಸಂಪಾದಿಸಿ ಪ್ರಕಟಿಸಿದವರು ಕೆ.ಬಿ.ಪಾಠಕ್. ಕವಿರಾಜಮಾರ್ಗ ದಂಡಿಯ 'ಕಾವ್ಯಾದರ್ಶ'ವನ್ನು ಆದರ್ಶವಾಗಿಟ್ಟುಕೊಂಡು ಬರೆದ ಸ್ವತಂತ್ರ ಅನುವಾದಿತ ಕೃತಿ.

ಕವಿರಾಜಮಾರ್ಗ(ಕ್ರಿ.ಶ.೮೫೦) : - ಕವಿರಾಜಮಾರ್ಗದ ಕರ್ತೃ ಶ್ರೀವಿಜಯ . ಕನ್ನಡದಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಗ್ರಂಥ. ಇದು ರಚಿತವಾದ ಕಾಲಾವಧಿ ಪ್ರ.ಶ. ೮೧೫-೭೭. ಇದರ ಕರ್ತೃ ರಾಷ್ಟ್ರಕೂಟ ಅರಸು ನೃಪತುಂಗನೆಂದು ಹೇಳುವುದು ವಾಡಿಕೆಯಾಗಿದೆ. ಆದರೆ ಈ ವಿಷಯದ ಬಗ್ಗೆ ವಿದ್ವಾಂಸರ ನಡುವೆ ಪ್ರಬಲವಾದ ವಾದವಿವಾದಗಳು ನಡೆದಿವೆ. ಅವರಲ್ಲಿ ಮೂರು ಪಕ್ಷಗಳಿವೆ. ಮೊದಲನೆಯ ಪಕ್ಷದವರು ನೃಪತುಂಗನೇ ಈ ಗ್ರಂಥವನ್ನು ರಚಿಸಿದನೆಂದು ಹೇಳುತ್ತಾರೆ. ಎರಡನೆಯ ಪಕ್ಷದವರು ಆತನ ಆಸ್ಥಾನದಲ್ಲಿದ್ದ ಕವೀಶ್ವರನೆಂಬಾತ ಇದರ ಕರ್ತೃವೆಂದು ಅಭಿಪ್ರಾಯಪಡುತ್ತಾರೆ. ನೃಪತುಂಗನ ಸಭಾಸದನಾದ ಶ್ರೀವಿಜಯನೆಂಬುವನು ಈ ಗ್ರಂಥವನ್ನು ಬರೆದನೆಂಬುದು ಮೂರನೆಯ ಪಕ್ಷದವರ ವಾದ. ಇವರಲ್ಲಿ ಮೂರನೆಯ ಪಕ್ಷದವರ ವಾದ ಪ್ರಬಲವಾದ ಸಾಕ್ಷ್ಯಗಳನ್ನು ಹೊಂದಿರುವುದಲ್ಲದೆ ಅದೇ ಸತ್ಯಾಂಶವಾಗಿಯೂ ನಿಲ್ಲಬಹುದೆಂದು ತೋರುತ್ತದೆ.

ಕವಿ-ಕೃತಿ ಚಿಂತನೆ

ಕವಿರಾಜಮಾರ್ಗದ ಪ್ರತಿ ಪರಿಚ್ಛೇದದ ಕೊನೆಯಲ್ಲಿ 'ನೃಪತುಂಗ ದೇವಾನುಮತಪ್ಪ ಕವಿರಾಜಮಾರ್ಗದೊಳ್' ಎಂದು ಹೇಳುವುದರಿಂದ ಇದು ರಾಷ್ಟ್ರಕೂಟದೊರೆ ಅಮೋಘವರ್ಷ ನೃಪತುಂಗನ (ಕ್ರಿ.ಶ ೮೧೪-೮೭೭)ಕಾಲದಲ್ಲಿ ಹುಟ್ಟಿದುದದೆಂದು ನಿರ್ಧರಿಸಲಾಗಿದೆ. ಕವಿರಾಜಮಾರ್ಗ ಕೃತಿಯಲ್ಲಿ ಮೂರು ಪರಿಚ್ಛೇದಗಳಿವೆ.

ಮೊದಲ ಪರಿಚ್ಛೇದದಲ್ಲಿ ಮಂಗಳಾಚರಣೆ, ಪೂರ್ವಕವಿಸ್ತುತಿ ಮೊದಲಾದ ಪೀಠಿಕಾಭಾಗದ ಪದ್ಯಗಳಾದ ಮೇಲೆ ನೃಪತುಂಗ ಕಾವ್ಯಾಭ್ಯಾಸದ ಅವಶ್ಯಕತೆ, ಕವಿತ್ವರಚನಾಶಕ್ತಿಯಿಂದ ಉಂಟಾಗುವ ಮಾರ್ಗ ಮೊದಲಾದ ವಿಷಯಗಳ ಬಗ್ಗೆ ತಿಳಿಸಿದ್ದಾನೆ.

ಪರಿಚ್ಛೇದಗಳು

ಕವಿರಾಜಮಾರ್ಗ ಕನ್ನಡದ ಆದ್ಯ ಉಪಲಬ್ಧ ಗ್ರಂಥವಾಗಿರುವುದಲ್ಲದೆ ಆದ್ಯ ಲಕ್ಷಣ ಗ್ರಂಥವೂ ಆಗಿದೆ. ಕನ್ನಡದಲ್ಲಿ ಕಾವ್ಯರಚನೆ ಮಾಡಬೇಕೆನ್ನುವ ಕವಿಗಳಿಗೆ ಬರೆದ ಕೈಪಿಡಿಯಿದು. ಇದರಲ್ಲಿ ಮೂರು ಪರಿಚ್ಛೇದಗಳಿವೆ:

  1. ದೋಷಾದೋಷಾನುವರ್ಣನ
  2. ಶಬ್ದಾಲಂಕಾರವರ್ಣನಿರ್ಣಯ
  3. ಅರ್ಥಾಲಂಕಾರಪ್ರಕರಣ.

ಗ್ರಂಥದ ಆದಿಯಲ್ಲಿ ಮಂಗಳಪದ್ಯಗಳು, ಸರಸ್ವತೀ ಪ್ರಾರ್ಥನೆ, ಕವೀಶ್ವರರ ಪ್ರಾರ್ಥನೆ, ನೃಪತುಂಗನ ಸಭಾಸದರ ವಿಚಾರ ಹಾಗೂ ಸ್ವವಿಚಾರಗಳಿವೆ. ಅನಂತರ ಕವಿ-ಕಾವ್ಯ, ಗದ್ಯ-ಪದ್ಯ ಮತ್ತು ಚತ್ತಾಣ-ಬೆದಂಡೆಗಳನ್ನು ಕುರಿತು ವಿಚಾರಗಳಿವೆ. ಕನ್ನಡನಾಡು ನುಡಿಗಳ ಬಗೆಗಿನ ಮಾತುಗಳಿವೆ. ಸಮಸಂಸ್ಕೃತ, ಯತಿ, ಕಾರಕ ಮುಂತಾದವುಗಳಿಗೆ ಸಂಬಂಧಿಸಿದ ದೋಷಗಳ ವಿವರಣೆಯಿದೆ. ಹೀಗೆ ಮೊದಲ ಪರಿಚ್ಛೇದದ ವಿಷಯಗಳು ವಿವಿಧವಾಗಿವೆ. ಎರಡನೆಯ ಪರಿಚ್ಛೇದದಲ್ಲಿ ಶಬ್ದಾಲಂಕಾರಗಳ ನಿರೂಪಣೆ ಮತ್ತು ದಕ್ಷಿಣೋತ್ತರ ಮಾರ್ಗಗಳ ಪ್ರಸ್ತಾಪವಿದೆ. ಮೂರನೆಯ ಪರಿಚ್ಛೇದ ಅರ್ಥಾಲಂಕಾರಗಳಿಗೆ ಸಂಬಂಧಿಸಿದೆ. ಇಡೀ ಗ್ರಂಥ ಕಂದಪದ್ಯಗಳಿಂದ ರಚಿತವಾಗಿದ್ದರೂ ಹಲಕೆಲವು ಗೀತಿಕೆಗಳು, ಶ್ಲೋಕಗಳು ಹಾಗೂ ವೃತ್ತಗಳು ನಡುನಡುವೆ ಬರುತ್ತವೆ.

ಕವಿರಾಜಮಾರ್ಗದ ಬಗ್ಗೆ ವಿಮರ್ಶೆ

  1. ಇದು ಸಂಪೂರ್ಣವಾದ ಸ್ವತಂತ್ರ ರಚನೆಯಲ್ಲ. ಸಂಸ್ಕೃತ ಆಲಂಕಾರಿಕರಲ್ಲಿ ಬಹುಮಟ್ಟಿಗೆ ದಂಡಿಯ ಕಾವ್ಯಾದರ್ಶವನ್ನೂ ಕೆಲವು ವಿಚಾರಗಳಲ್ಲಿ ಭಾಮಹನನ್ನೂ ಅನುಸರಿಸಿರುವುದು ಇಲ್ಲಿ ಕಂಡುಬರುತ್ತದೆ. ಕಾವ್ಯಕ್ಕೆ ಸೊಗಸನ್ನುಂಟುಮಾಡುವುದೆಲ್ಲವೂ ಅಲಂಕಾರವೆಂದು ದಂಡಿಯಂತೆಯೇ ಕವಿರಾಜಮಾರ್ಗಕಾರನೂ ಭಾವಿಸುತ್ತಾನೆ. ಅಲ್ಲದೆ, ದಂಡಿಗೆ ಪರಮಪ್ರಿಯವಾದ ದಶಗುಣಗಳನ್ನು ಹೇಳಿ, ಅವನು ಹೇಳಿರುವ ವೈದರ್ಭ, ಗೌಡಮಾರ್ಗಗಳಿಗೆ ಸಂವಾದಿಯಾಗಿ ದಕ್ಷಿಣೋತ್ತರ ಮಾರ್ಗಗಳನ್ನು ನಿರೂಪಿಸುತ್ತಾನೆ. ಅಲಂಕಾರಗಳ ನಿರೂಪಣೆಯಲ್ಲಿ ಬಹುಮಟ್ಟಿಗೆ ಕಾವ್ಯಾದರ್ಶದ ಅನುಸರಣೆ ಕಂಡು ಬರುತ್ತದೆ.
  2. ಇಷ್ಟರಮಟ್ಟಿಗೆ ಕವಿರಾಜಮಾರ್ಗ ಸಂಸ್ಕೃತಕ್ಕೆ ಋಣಿಯಾಗಿದ್ದರೂ ಹಲವು ವಿಚಾರಗಳಲ್ಲಿ ತನ್ನ ಸ್ವಂತಿಕೆಯನ್ನು ಮೆರೆದಿದೆ. ಸಂಸ್ಕೃತಕಾವ್ಯಲಕ್ಷಣಗಳನ್ನು ಕನ್ನಡಕ್ಕೆ ಹೊಂದಿಕೊಳ್ಳುವಂತೆ ಹೇಳುವಲ್ಲಿ ಸ್ವತಂತದೃಷ್ಟಿ ಕಂಡುಬರುತ್ತದೆ. ಕನ್ನಡಕ್ಕೆ ಸಂಬಂಧಪಟ್ಟಂತೆ ಸಮಸಂಸ್ಕೃತ ಪದಗಳನ್ನು ಕನ್ನಡದೊಂದಿಗೆ ಬೆರೆಸುವ ವಿಚಾರ, ಯತಿಭಂಗವನ್ನು ಸಮರ್ಥಿಸಿ ಕನ್ನಡಕ್ಕೆ ಅತಿಶಯವಾದ ಖಂಡಪ್ರಾಸವನ್ನು ಎತ್ತಿ ಹಿಡಿದಿರುವುದು, ಕನ್ನಡದಲ್ಲಿ ಜಾತ್ಯೇಕವಚನದ ವೈಶಿಷ್ಟ್ಯವನ್ನು ಗುರುತಿಸುವುದು, ಶ್ರುತಿ ದುಷ್ಟ, ಅರ್ಥದುಷ್ಟ, ಶ್ರುತಿಕಷ್ಟ, ಕಲ್ಪನೋಕ್ತಿಕಷ್ಟ_ಈ ದೋಷಗಳನ್ನು ತಕ್ಕ ಕನ್ನಡ ಉದಾಹರಣೆಗಳಿಂದ ವಿಶದಪಡಿಸಿರುವುದು ಮತ್ತು ಈ ದೋಷಗಳಿಗೆ ಪಗರಣದಲ್ಲಿ ಅವಕಾಶವಿತ್ತಿರುವುದು, ಕನ್ನಡದಲ್ಲಿ ಕಾರಕದೋಷ ಹೇಗೆ ಸಂಭವಿಸುತ್ತದೆಂಬುದನ್ನು ತಕ್ಕ ನಿದರ್ಶನಗಳಿಂದ ಸ್ಪಷ್ಟಪಡಿಸಿರುವುದು-ಇವೇ ಮುಂತಾದುವು ಸ್ವತಂತ್ರ ಪ್ರಜ್ಞೆಗೆ ನಿದರ್ಶನಗಳಾಗಿವೆ.
  3. ದಂಡಿ ಹೇಳಿರುವಂತೆ ರಸವನ್ನು ರಸವದಲಂಕಾರದಲ್ಲಿ ಅಳವಡಿಸಿ ಅಲ್ಲಿ ಉಕ್ತವಾಗಿರುವ ಎಂಟು ರಸಗಳ ಜೊತೆಗೆ ಒಂಬತ್ತನೆಯದಾಗಿ ಶಾಂತರಸವನ್ನು ಇಲ್ಲಿ ಸೇರಿಸಲಾಗಿದೆ. ರಸದ ಚರಿತ್ರೆಯಲ್ಲಿ ಇದು ಗಮನಾರ್ಹವಾದ ಅಂಶ. ಕನ್ನಡ ಕಾವ್ಯ ಮೀಮಾಂಸೆಯಲ್ಲಿ ಮೊಟ್ಟಮೊದಲಿಗೆ ಧ್ವನಿಯ ಪ್ರಸ್ತಾಪ ಬರುವುದು ಇಲ್ಲೇ. ದಂಡಿ ಹೇಳಿರುವ ಮೂವತ್ತೈದು ಅಲಂಕಾರಗಳ ಮಾಲೆಗೆ ಧ್ವನ್ಯಾಲಂಕಾರವನ್ನು ಸೇರಿಸಲಾಗಿದೆ. ಹೀಗಾಗಿ ಕನ್ನಡ ಕಾವ್ಯಮೀಮಾಂಸೆಯ ಬೆಳೆವಣಿಗೆಯಲ್ಲಿ ಕವಿರಾಜಮಾರ್ಗಕ್ಕೊಂದು ವಿಶಿಷ್ಟವಾದ ಸ್ಥಾನವಿದೆ.

ಕವಿ ಕಾವ್ಯಗಳ ಬಗ್ಗೆ ಮಾರ್ಗಕಾರನ ಅಭಿಪ್ರಾಯ

ಕವಿಕಾವ್ಯಗಳ ಬಗ್ಗೆ ಇಲ್ಲಿ ಹೇಳಿರುವ ಮಾತುಗಳು ತುಂಬ ಸುಂದರವೂ ಉಚಿತವೂ ಆಗಿವೆ. ಕವಿಗಳಲ್ಲಿರುವ ತಾರತಮ್ಯಗಳನ್ನು ನಿರೂಪಿಸುವಲ್ಲಿ ಸ್ವತಂತ್ರ ವಿಚಾರಶಕ್ತಿ ವ್ಯಕ್ತವಾಗಿದೆ. ಆ ಪದ್ಯಗಳನ್ನು ನೋಡಬಹುದು.

"ಕುಱುತಂತು ಪೆಱರ ಬಗೆಯಂ
ತೆರೆದಿರೆ ಪೆರರ್ಗರೆಪಲಾರ್ಪವಂ ಮಾತರೆವಂ.
ಕಿರೆದರೊಳೆ ಪಿರಿದುಮರ್ಥಮ
ನರೆಪಲ್ ನೆರೆವಾತನಂತನಿಂದಂ ನಿಪುಣಂ"|| - ಪದ್ಯ ೧೫
"ನುಡಿಯಂ ಛಂದದೊಳೊಂದಿರೆ
ತೊಡರ್ಚಲರೆವಾತನಾತನಿಂದಂ ಜಾಣಂ
ತಡೆಯದೆ ಮಹಾಧ್ವ ಕೃತಿಗಳ
ನೊಡರಿಸಲಾರ್ಪಾತ ನೆಲ್ಲರಿಂದಂ ಬಲ್ಲಂ"|| - ಪದ್ಯ ೧೬

ಚಾರಿತ್ರಿಕ ಅಂಶಗಳು

ಸಾಹಿತ್ಯಚರಿತ್ರೆಯ ಅಜ್ಞಾತಯುಗದ ಮೇಲೆ ಕವಿರಾಜಮಾರ್ಗ ವಿಶೇಷವಾಗಿ ಬೆಳಕು ಬೀರುತ್ತದೆ. ಕನ್ನಡ ಕಾವ್ಯಗಳಲ್ಲಿ ಗದ್ಯಪದ್ಯಸಂಮಿಶ್ರಿತವಾದ, ಗದ್ಯ ಪ್ರಾಚುರ್ಯ ಹೆಚ್ಚಾದ, ಗದ್ಯಕಥಾಪ್ರಕಾರವೊಂದಿದ್ದಿತು (೧-೨೭), ಚತ್ತಾಣ-ಬೆದಂಡೆ ಎಂಬ ದೇಸಿಗಬ್ಬಪ್ರಕಾರಗಳು ಪ್ರಚುರವಾಗಿದ್ದುವು (೧-೩೩), ವಿಮಳೋದಯ ನಾಗಾರ್ಜುನಾದಿಗಳು ಗದ್ಯಾಶ್ರಮಗುರುತಾಪ್ರತೀತಿಯನ್ನು ಕೈಗೊಂಡಿದ್ದರು (೧-೨೯), ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲಾದಿಗಳ ವಸ್ತು ವಿಸ್ತರರಚನೆ ‘ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ’ ಎನ್ನಿಸಿಕೊಂಡಿದ್ದುವು (೧-೩೨), ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ (೧-೪೮), ಆಗಿನ ಕಾಲಕ್ಕೇ ಕನ್ನಡ ಕಾವ್ಯ ಪರಂಪರೆಯೊಂದು ರೂಢಮೂಲವಾಗಿದ್ದಿತು, ಪೂರ್ವದ ಹಳಗನ್ನಡವೊಂದಿದ್ದಿತು-ಇವೇ ಮುಂತಾದ ಅಂಶಗಳಲ್ಲದೆ ಅಲ್ಲಲ್ಲಿ ಬರುವ ಪುರಾಣಕವಿಗಳ್, ಪರಮಕವಿಪ್ರಧಾನರಾಕಾವ್ಯಂಗಳ್, ಪೂರ್ವಕಾವ್ಯರಚನೆಗಳೂ-ಇತ್ಯಾದಿ ಪ್ರಯೋಗಗಳು ಕವಿರಾಜಮಾರ್ಗಕ್ಕಿಂತ ಹಿಂದಿನ ಕಾವ್ಯನಿರ್ಮಾಣೋದ್ಯೋಗದ ಜಾಡಿನ ಹೆಜ್ಜೆಗುರುತುಗಳಾಗಿವೆ.

ಕನ್ನಡ - ನಾಡು - ನುಡಿ

ಕವಿರಾಜಮಾರ್ಗ ಆ ಕಾಲದ ಕನ್ನಡನಾಡು, ನುಡಿ ಮತ್ತು ಜನರ ಬಗೆಗೆ ತಿಳಿವಳಿಕೆ ನೀಡಿರುವುದು ಅದರ ವಿಶೇಷತೆಯನ್ನು ಹೆಚ್ಚಿಸಿದೆ. ಆ ಕಾಲಕ್ಕೆ ಕನ್ನಡನಾಡಿನ ಸೀಮೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು (೧-೩೬). ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ತಿರುಳ್ಗನ್ನಡದ ಪ್ರದೇಶಗಳೆಂದು ಖ್ಯಾತವಾಗಿದ್ದುವು (೧-೩೭). ಕನ್ನಡದಲ್ಲಿ ಅನೇಕ ಉಪಭಾಷೆಗಳು ರೂಢಿಯಲ್ಲಿದ್ದುವು (೧-೪೬) ನಾಡವರ ನುಡಿಬಲ್ಮೆ ಹಾಗೆ ಅಸದಳವಾಗಿತ್ತು. ಅವರು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದರು (೧-೩೮).

ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ
ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ
ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಎರಡನೇ ಪರಿಚ್ಛೇದ ಅಲಂಕಾರಗಳ ಲಕ್ಷಣಗಳನ್ನು ಹೇಳಲು ಮೀಸಲಾಗಿದೆ. ಇದರಲ್ಲಿ ನೃಪತುಂಗ ಪ್ರಾಸದ ವಿಷಯವನ್ನು ಹೇಳತೊಡಗಿ-'ಕನ್ನಡಕ್ಕೆ ಸತತಂ ಪ್ರಾಸಂ' ಎಂದು ನುಡಿದು ಪ್ರಸಭೇದಗಳನ್ನು ವಿವರಿಸಿ ಅವುಗಳಿಗೆ ದೇಷ್ಟಾಂತಗಳನ್ನು ನೀಡಿದ್ದಾನೆ. ಮೂರನೇ ಪರಿಚ್ಛೇದದಲ್ಲಿ ಆ ಕಾಲಕ್ಕೆ ಸಂಸ್ಕೃತದ ಲಾಕ್ಷಣಿಕರು ಪ್ರಚಾರ ಮಾಡಿದ್ದ ಸುಮಾರು.೩೫ ಅಲಂಕಾರಗಳನ್ನು ಹೇಳಿದ್ದಾನೆ.

ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ ಇದಾಗಿದೆ.ಕಿಸುವೊಳಲು ಪಟ್ಟದಕಲ್ಲಿಗೆ ಮೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ (ಗದಗ ಜಿಲ್ಲೆ). ಕೊಪಣ ಇಂದಿನ ಕೊಪ್ಪಳ. ಒಕ್ಕುಂದ ಬೆಳಗಾವಿ ಜಿಲ್ಲೆಯಲ್ಲಿರುವ ಒಕ್ಕುಂದ.

ಶ್ರೀ ವಿಜಯರ ಕವಿಮಾರ್ಗಂ
ಭಾವಿಪ ಜನದಮನಕ್ಕೆ ಕನ್ನಡಿಯಂ ಕೆ
ಯ್ದೀವಿಗೆಯುಮಾದುವದರುಂ
ಶ್ರೀ ವಿಜಯರ ದೇವರನೇ ವಣ್ಣಿಪುದೊ|
ಕಂದಮು ಮಳಿನವೃತ್ತಮು
ಮೊಂದೊಂದೆಡೆಗೆಒಂಡು ಜಾತಿ ಜಾಣೆಸೆಯೇ ಬೆಡಂ
ಗೊಂದಿವರೆಳಮರೆ ಪೇಳಲ್
ಸುಂದರ ರೂಪಿಂ ಬೆದಂಡೆಗಬ್ಬಮದಕ್ಕುಂ
ವಿಮಳೋದಯ ನಾಗರ್ಜುನ
ಸಮೇತ ಜಯಬಂಧು ದುರ್ವಿನೀತಾದಿಗಳೇ
ಕ್ರಮದೋಳ್ ನೆಗಳ್ಚಿ ಗದ್ಯಾ
ಶ್ರಮ ಪದಗುರುತಾ ಪ್ರತೀತಿಯಂ ಕೆಯ್ಕೊಂಡರ್
ಮಿಗೆ ಕನ್ನಡಗಬ್ಬಂಗಳೊ
ಳಗಣಿತಗುಣಗಣ ಗದ್ಯಪದ್ಯ ಸಮ್ಮಿಶ್ರಿತಮಂ
ನಿಗಧಿಸುವರ್ ಗದ್ಯಕಥಾ ಪ್ರ
ಗೀತಿಯಂ ತಚ್ಚಿರಂತನಾಚಾರ್ಯರ್ಕಳ್

ಶಾಸ್ತ್ರ ಗ್ರಂಥಗಳೂ

ಕವಿರಾಜಮಾರ್ಗ ಶಾಸ್ತ್ರಗ್ರಂಥವಾದರೂ ಅಲ್ಲಲ್ಲಿ ಕವಿತ್ವದ ಸೊಗಸು ಮಿನುಗಿದೆ; ಅಲ್ಲಲ್ಲಿ ಕಂಡುಬರುವ ಉಪಮೆ, ನಾಣ್ಣುಡಿಗಳು ಮನಸೆಳೆಯುವಂತಿವೆ. ಕಲ್ತೊಡನೋದುವುವಲ್ತೆ ಗಿಳಿಗಳುಂ ಪುರುಳಿಗಳುಂ, ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ, ಒತ್ತುಂಗರಡೆಯ ಮದ್ದಳೆಯ ಜರ್ಝರ ಧ್ವನಿಗಳವೊಲ್, ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೊಲ್, ಕೇಡಡಸಿದಂದು ಬಗೆಯುಂ ಕೂಡದು, ಕೂಸಿನ ತಲೆಯೊಳ್ ಬಿಣ್ಪೊರೆಯನಿಟ್ಟವೋಲ್ ಈ ಮೊದಲಾದವು ಮನೋಹರವಾದ ವರ್ಣನಾಭಾಗಗಳು. ಇದರ ಶೈಲಿ ಲಲಿತವಾಗಿದೆ, ಉಚಿತವಾಗಿದೆ. ಇದರಲ್ಲಿ ನಾಣ್ನುಡಿಯ ಬೆಡಗಿದೆ. ಉದ್ದಕ್ಕೂ ಸ್ವತಂತ್ರವಿಚಾರಮಾರ್ಗವಿದೆ. (ಜೆ.ಎಸ್.ಸಿ.)

ಉಲ್ಲೇಖ


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಬಾಹ್ಯ ಸಂಪರ್ಕ