ದಂತಿದುರ್ಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದಂತಿದುರ್ಗ (ಕ್ರಿ.ಶ. ೭೨೮ - ೭೫೮) ರಾಷ್ಟ್ರಕೂಟ ವಂಶದ ಮೂಲಪುರುಷನೆಂದು ಗುರುತಿಸಲ್ಪಡುತ್ತಾನೆ. ರಾಷ್ಟ್ರಕೂಟ ವಂಶದ ಮೂಲ ಇತಿಹಾಸ ಇನ್ನೂ ನಿಖರವಾಗಿ ಗುರುತಿಸಲ್ಪಟ್ಟಿಲ್ಲ. ಅಶೋಕನ ಕಾಲದ ರಥಿಕರೇ ರಾಷ್ಟ್ರಕೂಟರೆಂದು ಒಂದು ಐತಿಹ್ಯವಿದೆ . ಆದರೆ ಇದಕ್ಕೆ ಆಧಾರಗಳಿಲ್ಲ .ರಾಷ್ಟ್ರಕೂಟರು ಕನ್ನಡಿಗರೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ರಾಷ್ಟ್ರಕೂಟರ ಮುಮ್ಮಡಿ ಕೃಷ್ಣಬುಂದೇಲಖಂಡದ ಶಾಸನ ಕನ್ನಡದಲ್ಲಿದೆ. ಕರ್ನಾಟಕದಲ್ಲಿ ರಾಷ್ಟ್ರಕೂಟರು ಅಥವಾ ರಟ್ಟರು ಎಂದು ಹೆಸರಾದ ಈ ರಾಜ ಮನೆತನ, ರಾಜಪುತಾನದಲ್ಲಿ ರಾಠಾರ್ ಎಂದು ಪ್ರಸಿದ್ದಿಗೆ ಬಂದಿತ್ತು .

ದಂತಿದುರ್ಗನ ತಂದೆ ಒಂದನೇ ಇಂದ್ರನು ಚಾಲುಕ್ಯಸಾಮಂತನಾಗಿದ್ದನು. ಚಾಲುಕ್ಯರಾಜಪುತ್ರಿ 'ಭಾವನಾಗ'ಳನ್ನು ಮದುವೆಯಾಗಿದ್ದನು. ಇವರಿಗೆ ಜನಿಸಿದ ಮಗನೇ ದಂತಿದುರ್ಗ. ದಂತಿದುರ್ಗನ ಕಾಲದಲ್ಲಿ ದಕ್ಷಿಣದಲ್ಲಿ ಚಾಲುಕ್ಯರು ಮತ್ತು ಪಲ್ಲವರು ಪ್ರಬಲರಾಗಿದ್ದರು. ಉತ್ತರದಲ್ಲಿ ಪ್ರಬಲ ರಾಜಮನೆತನಗಳಿರಲಿಲ್ಲ. ಇದು ದಂತಿದುರ್ಗನಿಗೆ ಅತ್ಯಂತ ಅನುಕೂಲ ಸಮಯವನ್ನೊದಗಿಸಿತು. ಅತ್ಯಂತ ಕಡಿಮೆ ಜೀವಿತಾವಧಿಯನ್ನು ಹೊಂದಿದ್ದ (ಕೇವಲ ಮುವ್ವತ್ತುವರ್ಷ ಮಾತ್ರ ದಂತಿದುರ್ಗ ಬದುಕಿದ್ದನೆಂಬುದು ಇತಿಹಾಸಕಾರರ ಅಭಿಪ್ರಾಯ) ದಂತಿದುರ್ಗನ ಇಡೀ ಆಯುಷ್ಯ ಕಳೆದುದು ರಣ ರಂಗದಲ್ಲಿಯೇ.

ದಂತಿದುರ್ಗನ ತಂದೆ ಚಾಲುಕ್ಯರ ಮೇಲೆ ಯುದ್ದ ಘೋಷಿಸಿದ್ದನು. ದಂತಿದುರ್ಗನು ಬಾದಾಮಿಯ ಚಕ್ರವರ್ತಿ ಇಮ್ಮಡಿ ಕೀರ್ತಿವರ್ಮನನ್ನು ಯುದ್ದದಲ್ಲಿ ಸೋಲಿಸಿದನು. ಇದರಿಂದಾಗಿ ಚಾಲುಕ್ಯರ ಉತ್ತರದ ಪ್ರಾಂತ್ಯಗಳಾದ ಕೊಲ್ಲಾಪುರ, ಸತಾರಗಳು ಅವನ ಕೈವಶವಾದವು. ದಂತಿದುರ್ಗನು ಗುಜರಾತಿನ ಚಾಲುಕ್ಯರನ್ನು ಸೋಲಿಸುವುದರೊಂದಿಗೆ ಪಶ್ಚಿಮ ಭಾರತದ ಮೇಲೆ ತನ್ನ ಅಧಿಪತ್ಯವನ್ನು ಸ್ಠಾಪಿಸಿದನು. ನಿರಂತರ ಯುದ್ದಪರಂಪರೆಗಳಿಂದ ಅವನ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳಾದುವು. ಆದುದರಿಂದ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅವನು ಸಾವನ್ನಪ್ಪಿದನು.

ಅವನ ಸಾಮ್ರಾಜ್ಯ ದಕ್ಷಿಣದಲ್ಲಿ ಬಾದಾಮಿಯವರೆಗೆ; ಪಶ್ಚಿಮ ಭಾರತದಿಂದ ಉಜ್ಜೈನಿಯವರೆಗೆ ವ್ಯಾಪಿಸಿತ್ತು. ರಾಷ್ಟ್ರಕೂಟರು ಸುಮಾರು ೨೨೫ವರ್ಷಗಳ ಕಾಲ ಕರ್ನಾಟಕದ ಪ್ರಬಲ ರಾಜಮನೆತನದವರಾಗಿ ಆಡಳಿತ ನಡೆಸಿದರು. ದಂತಿದುರ್ಗನ ವಿಷಯವಾಗಿ ೨ ಶಾಸನಗಳು ದೊರಕಿವೆ: ೧. ಸಾಮನ್‌ಗಡದ ತಾಮ್ರ ಶಾಸನ ೨. ಎಲ್ಲೋರದ ದಶಾವತಾರ ಗುಹೆಯಲ್ಲಿರುವ ಶಿಲಾಶಾಸನ.