ಪೂರ್ವ ಗಂಗರು
ಪೂರ್ವ ಗಂಗರು ಅಥವಾ ಚೋದಗಂಗರು ೧೧ನೇ ಶತಮಾನದಿಂದ ೧೫ನೇ ಶತಮಾನದವೆರೆಗೆ ಕಳಿಂಗದಿಂದ ಸಾಮ್ರಾಜ್ಯವನ್ನಾಳಿದರು. ಈ ಸಾಮ್ರಾಜ್ಯವು ಪ್ರಸ್ತುತ ಒಡಿಶಾ ರಾಜ್ಯ ಮತ್ತು ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‍ಗಢ ರಾಜ್ಯದ ಕೆಲವು ಭಾಗಗಳನ್ನು ಒಳಗೊಂಡಿತ್ತು.[೧][೨] ಈ ರಾಜವಂಶದವರು ದಂತಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅನಂತರ ಕಳಿಂಗನಗರ ಮತ್ತು ಕಟಕಕ್ಕೆ ಸ್ಥಳಾಂತರಗೊಂಡರು.[೩][೪] ವಿಶ್ವಪ್ರಖ್ಯಾತ ಕೊನಾರ್ಕ್ ಸೂರ್ಯ ದೇವಾಲಯವನ್ನು ನಿರ್ಮಿಸಿದ್ದು ಇದೇ ರಾಜಮನೆತನ.
ಪೂರ್ವದ ಗಂಗರು ಮೂಲತಃ ಕನ್ನಡ ಮೂಲದವರಾಗಿದ್ದು ತಲಕಾಡು ಗಂಗರ ಉತ್ತರಾಧಿಕಾರಿಗಳು. ಸುಮಾರು ೧೦ನೆ ಶತಮಾನದಲ್ಲಿ ಉತ್ತರದಲ್ಲಿ ಕಲ್ಯಾಣಿ ಚಾಲುಕ್ಯರು ಹಾಗು ದಕ್ಷಿಣದಲ್ಲಿ ಚೋಳರು ಪ್ರಬಲರಾಗಿದ್ದ ಕಾಲದಲ್ಲಿ ಕರ್ನಾಟಕದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ಇವರು ಮುಂದೆ ಒಡಿಶದಲ್ಲಿ ಸಾಮ್ರಾಜ್ಯ ಕಟ್ಟಿಕೊಂಡರು.[೫][೬]
ಈ ರಾಜವಂಶದ ಸಂಸ್ಥಾಪಕ ಅನಂತವರ್ಮನ್ ಚೋದಗಂಗಾ. ಇವನು ಕಳಿಂಗನಗರದ ಗಂಗ ವಂಶದ ವಜ್ರಹಸ್ತನ ಮೊಮ್ಮಗನೂ ರಾಜರಾಜ ದೇವೇಂದ್ರವರ್ಮನ ಮಗನೂ ಹೌದು. ಇವನ ತಾಯಿ ಚೋಳ ರಾಜವಂಶದ ರಾಜಕುಮಾರಿ ರಾಜಸುಂದರಿ. ಪೂರ್ವ ಗಂಗರು ಚೋಳರ ಜೊತೆಗೂ ಚಾಳುಕ್ಯರ ಜೊತೆಗೂ ಮದುವೆ ಸಂಬಂಧಗಳನ್ನು ಬೆಳೆಸಿದ್ದರು. ಈ ರಾಜಮನೆತನದ ನಾಣ್ಯ ಗಂಗ ಫನಮ್. ರಾಜ ಅನಂತವರ್ಮನೂ ದೈವಭಕ್ತನೂ ಕಲಾರಾಧಕನೂ ಆಗಿದ್ದನು. ಪುರಿಯ ಜಗನ್ನಾಥ ದೇಗುಲವನ್ನು ಈತನೇ ನಿರ್ಮಿಸಿದ್ದು.[೭] ಅನಂತವರ್ಮನ ನಂತರ ೧ನೇ ನರಸಿಂಹದೇವ (೧೨೩೮-೧೨೬೪) ಆಳಿದನು.[೮][೯]
ಮುಸ್ಲಿಂ ರಾಜರ ದಾಳಿಯಿಂದ ಸತತವಾಗಿ ತಮ್ಮ ಸಾಮ್ರಾಜ್ಯವನ್ನು ಕಾಪಾಡಿಕೊಂಡು ಬಂದರು ಇವರು. ವ್ಯಾಪಾರ ವಹಿವಾಟುಗಳಿಂದ ಸಾಕಷ್ಟು ಸಂಪತ್ತು ಗಳಿಸಿದ ಸಾಮ್ರಾಜ್ಯವು ಆದಾಯದ ಬಹುತೇಕ ಭಾಗವನ್ನು ದೇವಾಲಯಗಳಿಗೆ ವಿನಿಯೋಗಿಸಿತು.
ಇತಿಹಾಸ
[ಬದಲಾಯಿಸಿ]ಕಳಿಂಗದೇಶದ ಇತಿಹಾಸ ಹೆಚ್ಚು ಸ್ಫುಟವಾಗಿ ಕಂಡುಬರುವುದು ಕ್ರಿ.ಶ. 5ನೆಯ ಶತಮಾನದ ಅಂತ್ಯಭಾಗದಿಂದ ಮಾತ್ರ. ಆ ಕಾಲದಿಂದ ಹಿಡಿದು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಮ್ರ ಹಾಗೂ ಶಿಲಾ ಶಾಸನಗಳು ದೊರಕಿವೆ-ದೊರಕುತ್ತಿವೆ. ಇವುಗಳ ಆಧಾರದಮೇಲೆ ಆ ಕಾಲದಿಂದ ಆರಂಭಿಸಿ ಕಳಿಂಗದ ಇತಿಹಾಸವನ್ನು ರಚಿಸಲಾಗಿದೆ. ಆದರೂ ಇದುವರೆಗೆ ದೊರೆತಿರುವ ಆಧಾರಗಳು ಹಲವಾರು ವಿವಾದಗಳಿಗೆ ಎಡೆಮಾಡಿವೆ.
ಕಳಿಂಗದ ಮಹಾಮೇಘವಾಹನ ರಾಜವಂಶದ ಅವಸಾನದ ನಂತರ ರಾಜಕೀಯ ಅಸ್ಥಿರತೆ ತಲೆದೋರಿತು. ಸಣ್ಣ ಪುಟ್ಟ ಪಾಳೇಗಾರರೂ ಸಹ ಕಳಿಂಗಾಧಿಪಥಿ ಎಂದು ಬಿರುದಾಂಕಿತಗೊಂಡರು. ೧ನೇ ಇಂದ್ರವರ್ಮನು ವಿಷ್ಣುಕುಂಡಿನ್‍ನ ರಾಜ ಇಂದ್ರಭಟ್ಟಾರಕನನ್ನು ಸೋಲಿಸಿ ಈಗಿನ ಒಡಿಶಾದ ಗಂಜಾಂ ಜಿಲ್ಲೆಯ ಕಳಿಂಗನಗರವನ್ನು ಮೊದಲನೆಯ ರಾಜಧಾನಿಯನ್ನಾಗಿಯೂ ದಂತಾಪುರವನ್ನು (ಶ್ರೀಕಾಕುಳಂ ಸಮೀಪದಲ್ಲಿಯ ದಂತವಕ್ತ್ರನ ಕೋಟಿ ಅಥವಾ ವಿಶಾಖಪಟ್ಟಣ ಜಿಲ್ಲೆಯಲ್ಲಿ ದಂತ ನದೀತೀರದಲ್ಲಿರುವ ದಂತಪುರ) ಎರಡನೆಯ ರಾಜಧಾನಿಯನ್ನಾಗಿಯೂ ಮಾಡಿಕೊಂಡಾಗಿನಿಂದ ಪೂರ್ವ ಗಂಗ ರಾಜವಂಶವು ಆರಂಭವಾಯಿತು. ಗಂಗ ವಂಶದವರು ತ್ರಿಕಳಿಂಗಾಧಿಪತಿ ಅಥವಾ ಸಕಲ ಕಳಿಂಗಾಧಿಪತಿ ಎಂಬ ಬಿರುದನ್ನು ಹೊಂದಿದ್ದರು. ತ್ರಿಕಲಿಂಗ ಎಂಬ ಪದದ ಸರಿಯಾದ ಅರ್ಥ ಇನ್ನೂ ಸ್ಪಷ್ಟವಾಗಿಲ್ಲ. (ತ್ರಿಕಳಿಂಗ ಎಂದರೆ ಮೂರು ಕಳಿಂಗಗಳು ಕಳಿಂಗ (ದಕ್ಷಿಣ), ಉತ್ಕಲ (ಉತ್ತರ) ಮತ್ತು ಕೋಸಲ(ಪಶ್ಚಿಮ) ಇರಬಹುದು.)
ಇವರು ಮಹೇಂದ್ರ ಗಿರಿಯಲ್ಲಿ ವಿರಾಜಿಸಿದ ಗೋಕರ್ಣೇಶ್ವರನ ಭಕ್ತರು. ಈತನ ಮತ್ತು ಇವನ ಅನಂತರ ಆಳಿದ ಅರಸರ ಶಾಸನಗಳಲ್ಲಿ ಉಕ್ತವಾಗಿರುವ ಕಾಲ ಶಕಸಂವತ್ಸರಗಳಿಗೆ ಸಂಬಂಧಿಸಿಲ್ಲ. ಇವರು ಕಳಿಂಗದೇಶವನ್ನು ಆಳತೊಡಗಿದಂದಿನಿಂದ ತಮ್ಮದೇ ಆದ ಕಾಲಗಣನೆಯನ್ನು ಆರಂಭಿಸಿದ್ದುದಾಗಿ ತೋರುತ್ತದೆ. ಇಂದ್ರವರ್ಮನ, ಇದುವರೆಗೆ ಲಭ್ಯವಿರುವ, ಶಾಸನಗಳಲ್ಲಿ ಮೊದಲನೆಯದು 39ನೆಯ ವರ್ಷಕ್ಕೆ ಸೇರಿದುದಾಗಿದೆ. ಈ ಕಾಲಗಣನೆ ಕ್ರಿ.ಶ.ಸು. 496ರಲ್ಲಿ ಅಥವಾ 496-98ರಲ್ಲಿ ಆರಂಭವಾಯಿತೆಂದು ನಿರ್ಧರಿಸಲಾಗಿದೆ. ಇವರ ಹೆಸರು ವರ್ಮಾಂತ್ಯವಾಗಿದ್ದರೂ, ದಾನಾರ್ಣವ, ಗುಣಾರ್ಣವ, ವಜ್ರಹಸ್ತ ಮತ್ತು ಮಧುಕಾ ಮಾರ್ಣವ ಎಂಬ ಇತರ ಹೆಸರಿನ ಅರಸರೂ ಈ ಸಂತತಿಗೆ ಸೇರಿದಂತೆ ಕಂಡುಬಂದಿದೆ. ಕ್ರಿ.ಶ. 1038ರಿಂದ ಆಳತೊಡಗಿದ ವಜ್ರಹಸ್ತನ ತಂದೆ ಮಧುಕಾಮರ್ಣವನೇ ಗಂಗಶಕೆ 528ನೆಯ ವರ್ಷದ (ಕ್ರಿ.ಶ.1024) ಶಾಸನದಲ್ಲಿಯ ಮಧುಕಾಮರ್ಣವನೇ ಎಂದು ಊಹಿಸಿ, ಇವನೂ ಇವನ ಅನಂತರ ಆಳಿದ ಇತರರೂ ಆಳಿದ ಮೊದಲಿನ ಗಂಗಸಂತತಿಗೆ ಸಂಬಂಧಿಸಿದವೆರೆಂದು ಹೇಳಲಾಗಿದೆ.
ಈ ಗಂಗರ ಶಾಸನಗಳಲ್ಲಿ ಇವರ ಪ್ರಾಚೀನರನ್ನು ಕುರಿತು ಹೆಚ್ಚಿನ ವಿವರಗಳಿವೆ. ಚಂದ್ರವಂಶಕ್ಕೆ ಸೇರಿದ ಇವರು ಆತ್ರೇಯ ಗೋತ್ರಜರು, ಚಂದ್ರನ ಮಗನಾದ ಬುಧನ ವಂಶದಲ್ಲಿ ಪುರೂರವ, ಆಯು, ನಹುಷ, ಯಯಾತಿ, ತುರ್ವಸುಗಳು ಆಳಿದರು. ತುರ್ವಸುವಿಗೆ ಬಹಳ ಕಾಲ ಸಂತಾನವಿರಲಿಲ್ಲ. ಆಗ ಗಂಗಾದೇವಿಯನ್ನು ಪೂಜಿಸಿದ್ದರ ಫಲವಾಗಿ ಗಾಂಗೇಯನೆಂಬ ಮಗ ಜನಿಸಿದ. ಇವನ ವಂಶದಲ್ಲಿ ಹುಟ್ಟಿದ ಕೋಲಾಹಲನೆಂಬ ಅರಸು ಕೋಲಾಹಲಪುರವನ್ನು ನೆಲೆಗೊಳಿಸಿದ. ಈ ವಂಶದಲ್ಲಿ 80 ತಲೆಮಾರುಗಳ ಬಳಿಕ ಆಳಿದ ವೀರಸಿಂಹನಿಗೆ ಕಾಮಾರ್ಣವ, ದಾನಾರ್ಣವ, ಗುಣಾರ್ಣವ, ಮಾರಸಿಂಹ, ವಜ್ರಹಸ್ತರೆಂಬ ಐವರು ಮಕ್ಕಳು ಹುಟ್ಟಿದರು. ಆದರೆ ಇವರ ರಾಜ್ಯ ಇವರ ಚಿಕ್ಕಪ್ಪನ ವಶವಾದ ಕಾರಣ, ಇದನ್ನು ಹಿಂತೆಗೆದುಕೊಳ್ಳುವ ಶಕ್ತಿಯಿದ್ದರೂ ಇವರು ಈ ರಾಜ್ಯವನ್ನು ತ್ಯಜಿಸಿ ಕಾಮಾರ್ಣವನ ನೇತೃತ್ವದಲ್ಲಿ ಪೂರ್ವದಿಶೆಗೆ ಸಾಗಿ ಮಹೇಂದ್ರಗಿರಿಯಲ್ಲಿ ನೆಲಸಿದ್ದ ಗೋಕರ್ಣಸ್ವಾಮಿಯನ್ನು ಆರಾಧಿಸಿ ಆ ದೇವರ ಅನುಗ್ರಹದಿಂದ ರಾಜ್ಯಚಿಹ್ನೆಗಳನ್ನು ಪಡೆದು ಕಳಿಂಗರಾಜ್ಯವನ್ನು ಗೆದ್ದರು. ದಂತಾಪುರ ಇವರ ರಾಜಧಾನಿಯಾಯಿತು. ಕಾಮಾರ್ಣವನ ಸೋದರರು ಅಲ್ಲಿಯ ಕೆಲವು ಪ್ರಾಂತ್ಯಗಳ ಅಧಿಪತಿಗಳಾದರು. ಕಾಮಾರ್ಣವನ ಅನಂತರ ಇವನ ಸೋದರನಾದ ಗುಣಾರ್ಣವನೂ ಅವನ ಸಂತತಿಯಾದರೂ ಆಳಿದರು. ಇವರಲ್ಲಿ 14ನೆಯ ಅರಸ 4ನೆಯ ಕಾಮಾರ್ಣವನ ಮೊಮ್ಮಗನೂ 4ನೆಯ ವಜ್ರಹಸ್ತನ ಮಗನೂ ಆದ ಮಧು ಕಾಮಾರ್ಣವ. ಈತನ ಮಗನಾದ ವಜ್ರಹಸ್ತನೇ ಮೇಲೆ ಹೇಳಿದಂತೆ ಕಿ.ಶ. 1038 ಪಟ್ಟಕ್ಕೆ ಬಂದವನು.
ಇದು ನಮಗೆ 11ನೆಯ ಶತಮಾನದ ಅನಂತರದ ಇವರ ಶಾಸನಗಳಿಂದ ತಿಳಿದುಬಂದಿರುವ ಕೆಲವು ವಿವರಗಳು. ಕೋಲಾಹಲಪುರ ಈಗಿನ ಕೋಲಾರ. ಈ ಗಂಗರು ತಲಕಾಡಿನ ಗಂಗರ ವಂಶಕ್ಕೆ ಸೇರಿದವರಾಗಿದ್ದು, ಅವರ ಸೋದರ ಸಂಬಂಧಿಗಳೆಂದು ಹೇಳಲಾಗಿದೆ. ಆದರೆ ಗಂಗಶಕೆಯನ್ನು ಆರಂಭಿಸಿದ ಇಂದ್ರವರ್ಮ ಮತ್ತು ಅವನ ಸಂತತಿಯವರನ್ನು ಕುರಿತು ಹೆಚ್ಚು ವಿವರಗಳು ಸಿಕ್ಕಿಲ್ಲ.
ಇಂದ್ರವರ್ಮ, ಮಹಾಸಾಮಂತ ವರ್ಮರ ಬಳಿಕ ರಾಜಸಿಂಹ, ರಣಭೀತ ಎಂಬ ಬಿರುದುಗಳನ್ನು ಹೊಂದಿದ್ದ ಹಸ್ತಿವರ್ಮ ಆಳಿದ. ಇವನ ಅನಂತರ ಇಂದ್ರವರ್ಮನೆಂಬ ಹೆಸರಿನ ಇಬ್ಬರು ಆಳಿದಂತೆ ತೋರುತ್ತದೆ. ಮೂರನೆಯ ಇಂದ್ರವರ್ಮನಿಗೆ ದಾನಾರ್ಣವನೆಂಬ ಇನ್ನೊಂದು ಹೆಸರೂ ಇತ್ತು. ಅಂತೆಯೇ ಅನಂತರ ಆಳಿದ ನಾಲ್ಕನೆಯ ಇಂದ್ರವರ್ಮನೇ ಗುಣಾರ್ಣವನೆಂಬ ಹೆಸರಿನಿಂದ ಶಾಸನದಲ್ಲಿ ಉಕ್ತವಾದ ಅರಸನೆಂದು ಹೇಳಲಾಗಿದೆ. ಇವನ ಮಗ ಮಹಾರಾಜ ದೇವೇಂದ್ರವರ್ಮ. ಈತ ಸ್ವಶಕ್ತಿಯಿಂದ ಕಳಿಂಗದೇಶಾಧಿಪತಿಯಾದುದಾಗಿ ಹೇಳಿಕೊಂಡಿದ್ದಾನೆ. ಈತನ ಅನಂತರ ಕ್ರಮವಾಗಿ ಅನಂತವರ್ಮ, ನಂದ (ಇಂದ್ರ ?) ವರ್ಮ ಹಾಗೂ ಇಮ್ಮಡಿ ದೇವೇಂದ್ರ ವರ್ಮರು ಆಳಿದರು. ಈ ಕೊನೆಯ ಅರಸನ ಶಾಸನಕಾಲ 752. ಅನಂತರ ಸುಮಾರು 50 ವರ್ಷಗಳವರೆಗೆ ಇವರ ಇತಿಹಾಸ ತಿಳಿಯದು. ಇಮ್ಮಡಿ ಅನಂತವರ್ಮನ, 802ರ ಶಾಸನ ದೊರೆತಿದೆ. ಅನಂತರ ಇನ್ನೂ ಇತರರು ಈ ಸಂತತಿಯ ಅರಸರು ಆಳಿದರು. ಅವರ ಪರಸ್ಪರ ಸಂಬಂಧ ಮತ್ತಿತರ ವಿಷಯಗಳನ್ನು ಕುರಿತ ಹೆಚ್ಚಿನ ವಿವರಗಳು ಸಿಕ್ಕಿಲ್ಲ. ಕ್ರಿ.ಶ 1038ರಲ್ಲಿ ಆಳತೊಡಗಿದ ವಜ್ರಹಸ್ತನವರೆಗೂ ಈ ಸಂತತಿಯ ಅರಸುಗಳ ಹೆಸರುಗಳು ಲಭ್ಯವಾಗಿವೆ. ಈ ಗಂಗರನ್ನು ಪ್ರಾಚೀನ ಪೂರ್ವಗಂಗರೆಂದೂ ಇತಿಹಾಸಕಾರರು ಕರೆದಿದ್ದಾರೆ.
1038 ರಲ್ಲಿ ಪಟ್ಟಾಭಿಷಿಕ್ತನಾದ ವಜ್ರಹಸ್ತನ ಶಾಸನಗಳಲ್ಲಿ ಕೊಡಲಾದ ವಂಶಾವಳಿಗೂ ಅವನ ಮೊಮ್ಮಗ ಅನಂತವರ್ಮ ಚೋಡಗಂಗನ ಶಾಸನಗಳಲ್ಲಿಯ ವಂಶಾವಳಿಗೂ ಕೆಲವು ಭೇದಗಳಿವೆ. ಅದನ್ನು ಹೊಂದಿಸುವ ಯತ್ನಗಳೂ ನಡೆದಿವೆ. ಆದರೂ ಈ ವ್ಯತ್ಯಾಸಗಳಿಗೆ ಕಾರಣಗಳೇನು ಎಂಬುದು ಕಂಡುಬಂದಿಲ್ಲ. ವಜ್ರಹಸ್ತನ ಹಾಗೂ ಅನಂತರದ ಶಾಸನಗಳಲ್ಲಿ ಹೊಸ ಪದ್ಧತಿಯನ್ನನುಸರಿಸಿರುವುದೂ ಕಂಡುಬರುತ್ತದೆ. ಶಾಸನದ ತೇದಿಯನ್ನು ಶಕಕಾಲಗಣನೆಯ ಪ್ರಕಾರ ಮಾಡುವ ಪದ್ಧತಿ ಈಗ ಆರಂಭವಾಯಿತು. ಈತನ ತಾಯಿ ವೈದುಂಬವಂಶದ ರಾಜಪುತ್ರಿ, ಪತ್ನಿ ಹೈಹಯ ವಂಶಜಳು. ಇವನ ಕಾಲದಲ್ಲಿ ಕಲಚುರಿ ಕರ್ಣ ಕಳಿಂಗವನ್ನು ಮುತ್ತಿದಂತೆ ತೋರುತ್ತದೆ.
ವಜ್ರಹಸ್ತನ ಮಗ 1ನೆಯ ರಾಜರಾಜ ದೇವೇಂದ್ರವರ್ಮ.[೧೦] ವೆಂಗಿ ಚಾಳುಕ್ಯರ 7ನೆಯ ವಿಕ್ರಮಾದಿತ್ಯನಿಗೆ ಆಶ್ರಯಕೊಟ್ಟನೆಂಬ ಕಾರಣದಿಂದ ಇವನ ಮೇಲೇರಿ ಬಂದ ಚೋಳ ಕುಲೋತ್ತುಂಗನನ್ನು ಈತ ಹಿಂದಕ್ಕೋಡಿಸಿದ. ಇವನ ಸೇನಾನಿಯಾದ ವನಪತಿ ಚೋಳ, ವೆಂಗಿ ಮತ್ತು ಉತ್ಕಲ ದೇಶಾಧಿಪರರನ್ನು ಸೋಲಿಸಿದನೆಂದು ಹೇಳಿದೆ. ಈತನ ಸಹಾಯದೊಡನೆ ರಾಜರಾಜ ತನ್ನ ರಾಜ್ಯವನ್ನು ಸ್ವಲ್ಪಮಟ್ಟಿಗೆ ವಿಸ್ತರಿಸಿಕೊಂಡ. ಇವನ ಮಗನಾದ ಅನಂತವರ್ಮ ಚೋಡಗಂಗ ಸಹ ದಕ್ಷಿಣದ ಚೋಳರ ದಾಳಿಯನ್ನೆದುರಿಸಿ, ಅತಿ ಪ್ರಯಾಸದಿಂದ ಅವರನ್ನು ಹಿಂದೂಡಿದುದಲ್ಲದೆ ಸ್ವಲ್ಪಕಾಲ ಆಂಧ್ರದಲ್ಲಿ ಗೋದಾವರಿ ಉತ್ತರ ತೀರದವರೆಗಿನ ಪ್ರದೇಶವನ್ನು ಸಹ ಆಕ್ರಮಿಸಿದ್ದ. 1118 ಸುಮಾರಿಗೆ ಉತ್ಕಲ ಗಂಗರಾಜ್ಯಕ್ಕೆ ಸೇರಿ ಗಂಗರು ಉತ್ಕಲಾಧಿಪತಿಗಳೆನಿಸಿಕೊಂಡರು: ಬಂಗಾಲದಲ್ಲಿ ಪಾಲರು ಅವನತಿ ಹೊಂದಿದ ಬಳಿಕ ಉಂಟಾದ ಅನಿಶ್ಚಿತ ಪರಿಸ್ಥಿತಿಯ ಪ್ರಯೋಜನ ಪಡೆದು ಅವರ ರಾಜ್ಯದ ಕೆಲವು ಭಾಗಗಳನ್ನು ಈತ ಆಕ್ರಮಿಸಿದ. ಇವನ ಆಳ್ವಿಕೆಯ ಕಾಲದಲ್ಲಿ ರಾಜ್ಯ ವಿಜೃಂಭಿಸಿತು. ಈತ ಪುರಿಯ ಜಗನ್ನಾಥಾಲಯದ ವಿಮಾನವನ್ನೂ ಜಗಮೋಹನಮಂಡಪವನ್ನೂ ಕಟ್ಟಿಸಿದ. ಕಸ್ತೂರಿಕಾಮೋದಿನೀ, ಲಕ್ಷ್ಮೀದೇವಿ, ಚೋಳಮಹಾದೇವಿ ಮುಂತಾದ ಹಲವಾರು ರಾಜಪುತ್ರಿಯರು ಈತನನ್ನು ವರಿಸಿದ್ದರು. ವಿಕ್ರಮಗಂಗ, ಪ್ರತಾಪಗಂಗ, ನವನವತಿಸಹಸ್ರಕುಂಜರಾಧೀಶ್ವರ ಮುಂತಾದವು ಈತನ ಬಿರುದುಗಳು. ವಿಸ್ತಾರವಾದ ರಾಜ್ಯಕ್ಕೆ ಮಧ್ಯದಲ್ಲಿದ್ದ ಕಟಕ್ ಇವನ ನೂತನ ರಾಜಧಾನಿಯಾಯಿತು. ಇವನ ಕಾಲದಲ್ಲಿ ಸೂರ್ಯಸಿದ್ಧಾಂತವನ್ನು ಸರಿಸಿ ರಚಿಸಿಲಾದ ಭಾಸ್ವತಿ ಎಂಬ ಜ್ಯೋತಿಶ್ಶಾಸ್ತ್ರ ಗ್ರಂಥ ಕ್ರಿ.ಶ. 1099ರಲ್ಲಿ ಶಂಕರ ಮತ್ತು ಸರಸ್ವತಿಯ ಮಗನಾದ ಸತಾನಂದನೆಂಬವನಿಂದ ಪುರಿಯಲ್ಲಿ (ಪುರುಷೋತ್ತಮಪುರ) ಪ್ರಕಟವಾಯಿತು.
ಸುಮಾರು ಒಂದು ಶತಮಾನದ ಅನಂತರ ಆಳಿದ ಮೊದಲನೆಯ ನರಸಿಂಹದೇವ (1238-1263) ಈ ವಂಶದ ಇನ್ನೊಬ್ಬ ಪ್ರಖ್ಯಾತನಾದ ಅರಸ. ಇವನು ಬಂಗಾಲದ ಸುಲ್ತಾನರೊಡನೆ ಅನೇಕ ಕದನಗಳನ್ನು ಹೂಡಿ ರಾಢಾ, ವರೇಂದ್ರಮಂಡಲ ಪ್ರಾಂತ್ಯಗಳನ್ನು ವಶಪಡಿಸಿಕೊಂಡ. ಕಾಕತೀಯರೊಡನೆ ಸಹ ಹೋರಾಡಿದ.[೧೧] ಇವನ ಆಳ್ವಿಕೆ ಸಹ ಈ ಗಂಗರ ಇತಿಹಾಸದಲ್ಲಿ ಖ್ಯಾತಿಹೊಂದಿದೆ. ವಿದ್ಯಾಭಿಮಾನಿಯಾದ ಈತನ ಆಸ್ಥಾನದಲ್ಲಿ ಏಕವಳೀ ಎಂಬ ಅಲಂಕಾರಗ್ರಂಥದ ಕರ್ತೃವಾದ ವಿದ್ಯಾಧರ ಶೋಭಿಸಿದ. ಶ್ರೀಕೂರ್ಮಮ್, ಸಿಂಹಾಚಲಂ ಮುಂತಾದ ಕಡೆಗಳಲ್ಲಿ ದೇವಾಲಯಗಳಿಗೆ ಸೇರಿದಂತೆ ಅನೇಕ ಮಂಟಪಗಳನ್ನೂ ಇತರ ಕಟ್ಟಡಗಳನ್ನೂ ಕಟ್ಟಿಸಿ ಆ ದೇವಾಲಯಗಳಿಗೆ ಬಹಳ ದಾನಗಳನ್ನು ಮಾಡಿದ. ಕಳಿಂಗ ದೇಶದ ಅನೇಕ ಸುಂದರವಾದ ಆಲಯಗಳನ್ನು ಕಟ್ಟಿಸಿದ ಖ್ಯಾತಿ ಈ ಗಂಗರದಾಗಿದೆ.
ಮುಖಲಿಂಗಮ್ (ಈಗಿನ ಆಂಧ್ರ ಪ್ರದೇಶದ ಶ್ರೀಕಾಕುಳಮ್ ಹತ್ತಿರದ ಊರು) ಅನ್ನು ಪೂರ್ವ ಗಂಗರ ರಾಜಧಾನಿಯೆಂದು ಗುರುತಿಸಲಾಗಿದೆ.[೧೨] ಇವರ ನಂತರ ವೆಂಗಿಯ ಚಾಳುಕ್ಯರು ಕಳಿಂಗ ಪ್ರದೇಶವನ್ನಾಳಿದರು. ಶೈವಭಕ್ತರಾದ ಪೂರ್ವ ಗಂಗವಂಶದವರು ಮುಖಲಿಂಗಮ್‍ನಲ್ಲಿ ಶ್ರೀ ಮುಖಲಿಂಗಮ್ ಎಂಬ ದೇವಾಲಯವನ್ನು ಕಟ್ಟಿದರು.
೧ನೆಯ ನರಸಿಂಹದೇವನ ಮಗ 1ನೆಯ ಭಾನುದೇವನ ಕಾಲದಲ್ಲಿ ಪ್ರಮುಖ ದ್ವೈತಮತಾಚಾರ್ಯರಲ್ಲಿ ಒಬ್ಬರಾದ ಶ್ರೀ ನರಹರಿತೀರ್ಥರು ಕಳಿಂಗದೇಶದಲ್ಲಿ ನೆಲಸಿ ತಮ್ಮ ಧರ್ಮವನ್ನು ಬೋಧಿಸುತ್ತಿದ್ದರು. ಶ್ರೀ ಕೂರ್ಮದೇವಾಲಯದ ಎದುರಿನಲ್ಲಿರುವ ಯೋಗಾನರಸಿಂಹಾಲಯವನ್ನು ಇವರು ಕಟ್ಟಿಸಿದರು.[೧೩] ಭಾನುದೇವ ಲಖನೌತಿ ಸುಲ್ತಾನ ಮಲ್ಲಿಕ್ ಯಾಕ್ಲಖಿಯ ವಿರುದ್ಧ ಕಾದಿದಂತೆ ಮಹಮ್ಮದೀಯ ಇತಿಹಾಸಕಾರರಿಂದ ತಿಳಿದುಬರುತ್ತದೆ. ಇವನ ಆಳ್ವಿಕೆಯ ಕಾಲದಲ್ಲಿ ಎಲಮಂಚಿಲಿಯ ಚಾಳುಕ್ಯರು, ವಡ್ಡಾದಿಯ (ವಿಶಾಖಪಟ್ಟಣ ಜಿಲ್ಲೆಯ ಅನಕಾಪಲ್ಲಿ ಸಮೀಪದ ಅದೇ ಹೆಸರಿನ ಗ್ರಾಮ) ಮತ್ಸ್ಯರು, ವೀರಕೂಟ ಪಲ್ಲವರು, ಇತ್ಯಾದಿ ಕೆಲವು ಸಾಮಂತರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡರು.
ಭಾನುದೇವನ ಮಗ ಇಮ್ಮಡಿ ವೀರನರಸಿಂಹ. ಈತನ ಕಾಲದಲ್ಲಿ ನರಹರಿತೀರ್ಥ ಶ್ರೀಪಾದರು ತಮ್ಮ ಗುರುಗಳ ಆದೇಶದಂತೆ ಸೀತಾರಾಮಲಕ್ಷ್ಮಣರ ವಿಗ್ರಹಗಳನ್ನು ರಾಜಭಂಡಾರದಿಂದ ಪಡೆದು ಕಳಿಂಗವನ್ನು ಬಿಟ್ಟು ಉಡುಪಿಗೆ ಹೋಗಿ ನೆಲಸಿದರು. ಈ ಅರಸನ ಮಗ ಇಮ್ಮಡಿ ಭಾನುದೇವನ (1305-1327) ಕಾಲದಲ್ಲಿ ತೊಗಲಕ್ ಮನೆತನ ದೆಹಲಿಯಲ್ಲಿ ಅಧಿಕಾರಕ್ಕೆ ಬಂತು. ಘಿಯಾಸುದ್ದೀನ್ ತೊಗಲಕನ ಮಗನಾದ ಮಲ್ಲಿಕ್ ಫಕ್ರುದ್ದೀನ್ ಜಾನಾ (ಉಲುಫ್‌ಖಾನ್) ಕಾಕತೀಯರ ವಿರುದ್ಧ ದಂಡೆತ್ತಿ ಅವರ ರಾಜ್ಯವನ್ನು ನಾಶಗೊಳಿಸಿ ಭಾನುದೇವನ ರಾಜ್ಯವನ್ನು ಮುತ್ತಿ ಜಾಜ್‌ನಗರವನ್ನು ಆಕ್ರಮಿಸಿದ. ಅಗ ನಡೆದ ತೀವ್ರವಾದ ಕದನದಲ್ಲಿ ಕೊನೆಗೆ ಭಾನುದೇವ ಸೋತ. ಆದರೆ ಉಲುಫ್‌ಖಾನ ತನ್ನ ವಾಡಿಯೊಡನೆ ಹಿಂದಿರುಗಿದ.
1358 ರಿಂದ ಆಳಿದ 3ನೆಯ ಭಾನುದೇವ ದೆಹಲಿಯ ಫಿರೋಜ್‍ಷಹ ತೊಗಲಕನ ದಾಳಿಯನ್ನೆದುರಿಸಬೇಕಾಯಿತು. ಗಂಗರಾಜ್ಯದ ಐಶ್ವರ್ಯವನ್ನು ಕುರಿತು ಕೇಳಿದ್ದ ಸುಲ್ತಾನ ಪುರಿಯನ್ನು ಮುತ್ತಿ ಜಗನ್ನಾಥದೇವಾಲಯದ ಅತುಲೈಶ್ವರ್ಯವನ್ನು ಸೂರೆಮಾಡಿ ಅಲ್ಲಿಯ ದೇವಾಲಯವನ್ನು ಹಾಳುಗೆಡವಿ, ಮೂಲವಿಗ್ರಹವನ್ನು ಕಿತ್ತೆಸೆದು ಆ ಕ್ಷೇತ್ರವನ್ನು ಅಪವಿತ್ರಗೊಳಿಸಿದ. ವಾರ್ಷಿಕವಾಗಿ ನಿಗದಿಗೊಳಸಿದ ದ್ರವ್ಯವನ್ನು ಕಾಣಿಕೆಯಾಗಿ ಸಲ್ಲಿಸಬೇಕೆಂಬ ಷರತ್ತಿಗೆ ಒಪ್ಪಿ ಸುಲ್ತಾನ ಅಲ್ಲಿಂದ ಕಾಲ್ತೆಗೆದ.
ಅನಂತರ ಪಟ್ಟಕ್ಕೆ ಬಂದ ನಾಲ್ಕನೆಯ ವೀರನರಸಿಂಹದೇವನ (1378-1409) ಕಾಲದಲ್ಲಿ ಸಾಮಂತರು ಪ್ರಬಲಗೊಂಡು ಕೇಂದ್ರಾಧಿಕಾರ ಕುಗ್ಗಿತು. ಇದರಿಂದ ಶತ್ರುಭಾದೆ ಹೆಚ್ಚಿತು. ರಾಚಕೊಂಡದ ರೇಚೆರ್ಲ ಅನವೊತನಾಯ, ಕೊಂಡವೀಡಿನ ಕಾಟಯವೇಮಾರೆಡ್ಡಿ ಮುಂತಾದವರು ಕಳಿಂಗವನ್ನು ಮುತ್ತಿದರು. ಮುಸ್ಲಿಮರ ಭಾದೆಯಂತೂ ಇದ್ದೇ ಇತ್ತು. ಇವುಗಳಿಂದ ರಾಜ್ಯದ ಬಲ ಕ್ಷೀಣಿಸಿತು.
ನಾಲ್ಕನೆಯ ವೀರಭಾನುದೇವ ಈ ವಂಶದ ಕೊನೆಯ ಅರಸ (1409-1439). ವಿಜಯನಗರದಲ್ಲಿ ಈತನ ಸಮಕಾಲೀನನಾಗಿ ಇಮ್ಮಡಿ ದೇವರಾಯ ಆಳುತ್ತಿದ್ದ. ಆತನ ಸಹಾಯದೊಡನೆ ರೆಡ್ಡಿವಂಶದ ನಾಯಕರು ಮೇಲಿಂದ ಮೇಲೆ ಕಳಿಂಗ ರಾಜ್ಯವನ್ನು ಮುತ್ತಿ ಆ ರಾಜ್ಯದ ಪತನಕ್ಕೆ ಕಾರಣರಾದರು. ಇಂಥ ದಾಳಿಗಳಲ್ಲೊಂದನ್ನು ಹಿಮ್ಮೆಟ್ಟಿಸುವ ಯತ್ನದಲ್ಲಿ ಭಾನುದೇವ ರಾಜಧಾನಿಯಿಂದ ಹೊರಗಿದ್ದಾಗ ಆ ರಾಜ್ಯದಲ್ಲಿ ಗಜಪತಿವಂಶದ ಕಪಿಲೇಶ್ವರ ಬಂಡೆಬ್ಬಿಸಿ ತಾನೇ ಕಳಿಂಗಾಧಿಪತಿಯಾದ.
ಆಳ್ವಿಕೆ
[ಬದಲಾಯಿಸಿ]ಅನಂತವರ್ಮನ್ ಚೋದಗಂಗಾ: ರಾಜವಂಶದ ಸಂಸ್ಥಾಪಕನಾದ ಇವನು ಉತ್ತರದ ಗಂಗಾನದಿಯಿಂದ ಹಿಡಿದು ದಕ್ಷಿಣದ ಗೋದಾವರಿಯವರೆಗೆ ಆಳಿದನೆಂದು ಪ್ರತೀತಿ.[೧೪] ಕ್ರಿ. ಶ. ೧೦೭೬ ರಲ್ಲಿ ತ್ರಿಕಳಿಂಗಾಧಿಪತಿ ಎಂಬ ಬಿರುದನ್ನು ಗಳಿಸಿದ ಇವನು ಮೂರೂ ಕಳಿಂಗ ಪ್ರದೇಶಗಳನ್ನು ಆಳಿದ ಪ್ರಪ್ರಥಮ ರಾಜ.[೧೫]
೧೧೯೮ರಲ್ಲಿ ಪಟ್ಟಕ್ಕೇರಿದ ೩ನೇ ರಾಜರಾಜನು ಬಂಗಾಳದ ಮುಸ್ಲಿಂ ರಾಜರ ದಾಳಿಯನ್ನು ತಡೆಯುವಲ್ಲಿ ಕಾರ್ಯಪ್ರವೃತ್ತನಾಗಲಿಲ್ಲ. ಇವನ ಮಗ ೩ನೇ ಅನಂಗಭೀಮನು ಮುಸ್ಲಿಂ ದೊರೆಗಳ ದಾಳಿಯನ್ನು ತಡೆದದ್ದಲ್ಲದೇ ಭುವನೇಶ್ವರದಲ್ಲಿ ಮೇಘೇಶ್ವರ ದೇವಾಲಯವನ್ನು ಕಟ್ಟಿಸಿದನು. ಅನಂಗಭೀಮನ ಮಗ ೧ನೇ ನರಸಿಂಹದೇವನು ೧೨೪೩ ರಲ್ಲಿ ದಕ್ಷಿಣ ಬಂಗಾಳದ ಮೇಲೆ ದಾಳಿ ಮಾಡಿದ್ದಲ್ಲದೇ ಮುಸ್ಲಿಂ ದೊರೆಗಳನ್ನು ಸೋಲಿಸಿ ರಾಜಧಾನಿ ಗೌಡ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡನು. ಈ ವಿಜಯದ ಕುರುಹಿಗಾಗಿಯೇ ಕೊನಾರ್ಕ್‌ನ ಸೂರ್ಯ ದೇವಾಲಯವನ್ನು ಕಟ್ಟಿಸಿದನು. ೧೨೬೪ ರಲ್ಲಿ ನರಸಿಂಹದೇವನ ಮರಣಾನಂತರ ಪೂರ್ವ ಗಂಗ ವಂಶವು ಅವಸಾನಗೊಳ್ಳುತ್ತಾ ಹೋಯಿತು. ೧೩೨೪ ರಲ್ಲಿ ದೆಹಲಿಯ ಸುಲ್ತಾನರು ಕಳಿಂಗದ ಮೇಲೆ ಯುದ್ಧ ಸಾರಿದರು. ೧೩೫೬ ರಲ್ಲಿ ಮುಸುನೂರಿ ನಾಯಕರು ಒಡಿಶಾವನ್ನು ಜಯಿಸಿದರು. ರಾಜವಂಶದ ಕೊನೆಯ ರಾಜ ೪ನೇ ನರಸಿಂಹನು ೧೪೨೫ ರ ತನಕ ಆಳಿದನು. ಇವನ ನಂತರ ಬಂದ ೪ನೇ ಭಾನುದೇವನು "ಹುಚ್ಚು ರಾಜ" ಎಂದೇ ಕುಖ್ಯಾತಿ ಗಳಿಸಿದನು. ಇವನ ಮಂತ್ರಿ ಕಪಿಲೇಂದ್ರನು ಸಿಂಹಾಸನವನ್ನು ಆಕ್ರಮಿಸಿಕೊಂಡು ೧೪೩೪-೩೫ ರಲ್ಲಿ ಗಜಪತಿ ಸಾಮ್ರಾಜ್ಯವನ್ನು ಸ್ಥಾಪಿಸಿದನು.
ಆಳಿದ ರಾಜರು
[ಬದಲಾಯಿಸಿ]- ಇಂದ್ರವರ್ಮ (496–535)
- ೪ನೇ ದೇವೇಂದ್ರವರ್ಮ (893-?)
- ವಜ್ರಹಸ್ತ ಅನಂತವರ್ಮ (1038-?)
- ೧ನೇ ರಾಜರಾಜ (?-1078)
- ಅನಂತವರ್ಮನ್ ಚೋದಗಂಗಾ (1078–1150)
- ೨ನೇ ಅನಂಗಭೀಮ ದೇವ (1178–1198)
- ೨ನೇ ರಾಜರಾಜ (1198–1211)
- ೩ನೇ ಅನಂಗಭೀಮ ದೇವ (1211–1238)
- ೧ನೇ ನರಸಿಂಹದೇವ (1238–1264)
- ೧ನೇ ಭಾನುದೇವ (1264–1279)
- ೨ನೇ ನರಸಿಂಹದೇವ (1279–1306)
- ೨ನೇ ಭಾನುದೇವ (1306–1328)
- ೩ನೇ ನರಸಿಂಹದೇವ (1328–1352)
- ೩ನೇ ಭಾನುದೇವ (1352–1378)
- ೪ನೇ ನರಸಿಂಹದೇವ (1379–1424)
- ೪ನೇ ಭಾನುದೇವ(1424–1434)
ಉಪಸಂಹಾರ
[ಬದಲಾಯಿಸಿ]ಕಳಿಂಗದಲ್ಲಿ ಆಳಿದ ಈ ಗಂಗರು ಬಹು ದೀರ್ಘಕಾಲ ಆಳಿದ ಭಾರತೀಯ ರಾಜವಂಶಗಳಲ್ಲಿ ಪ್ರಖ್ಯಾತರು. ಈ ವಂಶದ ಅನಂತರದ ಅರಸರು ಮಹಮ್ಮದೀಯರ ದಾಳಿಯನ್ನು ಅನೇಕ ವರ್ಷಗಳ ಕಾಲ ಧೈರ್ಯದಿಂದ ಎದುರಿಸಿ ಹಿಂದೂ ಸಂಸ್ಕೃತಿಯ ಧರ್ಮದ ರಕ್ಷಣೆಗಾಗಿ ಶ್ರಮಿಸಿದರು. ಇವರ ಕಾಲದಲ್ಲಿ ವೈಷ್ಣವಮತಕ್ಕೆ ವಿಶಿಷ್ಟವಾದ ಪ್ರೋತ್ಸಾಹ ಆಶ್ರಯಗಳು ದೊರೆತವು. ಪುರಿ, ಭುವನೇಶ್ವರ, ಕೋಣಾರ್ಕ ಮುಂತಾದ ಕಡೆಗಳಲ್ಲಿಯೂ ಪ್ರಖ್ಯಾತವಾದ ಸುಂದರ ದೇವಾಲಯಗಳನ್ನು ಕಟ್ಟಿಸಿದ ಕೀರ್ತಿ ಇವರದಾಗಿದೆ. ಕಳಿಂಗ ಶೈಲಿ ಎಂದು ಹೆಸರಾದ ವಿಶಿಷ್ಟವಾದ ಶಿಲ್ಪಶೈಲಿಯ ಪೋಷಕರಿವರು. ಇದು ಈ ವಂಶದ ವಿಶಿಷ್ಟವಾದ ಕೊಡುಗೆ.
ಉಲ್ಲೇಖಗಳು
[ಬದಲಾಯಿಸಿ]- ↑ "Ganga dynasty", Britannica.com, archived from the original on 23 June 2008, retrieved 4 April 2021
- ↑ Banerjee, R.D. HISTORY OF ORISSA, Vol.I. p. 268.
- ↑ B. Hemalatha (1991). Life in medieval northern Andhra. Navrang. ISBN 978-81-7013-086-4.
- ↑ Rajguru, Padmashri Dr. Satyanarayana (1972). "No 2 – 3 Gangas Of Khimundi, History of Paralakhemundi Raj". History of Gangas. Vol. Part 2. Bhubaneswar, Odisha: Superintendent of Museum, Orissa, Bhubaneswar. pp. 72–293.
- ↑ B., Masthanaiah (1977). The Temples of Mukhalingam: A Study on South Indian Temple Architecture (in ಇಂಗ್ಲಿಷ್). Mukhalingām (India): Cosmo Publications. pp. 5, 15, 27–31. Archived from the original on 3 May 2022. Retrieved 14 April 2022.
- ↑ Upinder Singh 2008, p. 1095.
- ↑ Sen, Sailendra (2013). A Textbook of Medieval Indian History. Primus Books. pp. 36–37. ISBN 978-9-38060-734-4.
- ↑ Dey, Anil (2012). "No 1 - Odisha Ganga Banshara Itihasa". Arkakshetra Konarka. Vol. 1. Bhubaneswar, Odisha: Ama Odisha. pp. 17–29.
- ↑ "World Heritage Sites - Konarak - Sun Temple - Introduction".
- ↑ Suryanarayan Das (2010). Lord Jagannath. Sanbun Publishers. p. 185. ISBN 978-93-80213-22-4.
- ↑ "దివ్యక్షేత్రం సింహాచలం". Andhra Jyoti (in Telugu). 30 October 2022. p. 9.
{{cite news}}
: CS1 maint: unrecognized language (link) - ↑ Sen, Sailendra (2013). A Textbook of Medieval Indian History. Primus Books. pp. 36–37. ISBN 978-93-80607-34-4.
- ↑ Banerji 1930, p. 271.
- ↑ Haldar, Narotam (1988). Gangaridi - Alochana O Parjalochana.
- ↑ Eastern Ganga Dynasty in India Archived 12 October 2016 ವೇಬ್ಯಾಕ್ ಮೆಷಿನ್ ನಲ್ಲಿ.. India9.com (2005-06-07). Retrieved on 2013-07-12.
ಗ್ರಂಥಸೂಚಿ
[ಬದಲಾಯಿಸಿ]- Upinder Singh (2008). History of Ancient and Early Medieval India: From the Stone Age to the 12th Century. Pearson Education India. ISBN 978-81-317-1677-9.
- Banerji, R. D (1930). History of Orissa: From Earliest Times to the British Period. Chatterjee.