ಕೊನಾರ್ಕ್
ಕೋನಾರ್ಕ್ ಸೂರ್ಯ ದೇವಾಲಯ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ![]() |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | i, iii, vi |
ಆಕರ | 246 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1984 (8ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಕೊನಾರಕ್ (ಕೊಣಾರ್ಕ) ಒಡಿಶಾ ರಾಜ್ಯದ ಕರಾವಳಿಲ್ಲಿರುವ ದೇವಾಲಯ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿ೦ದ "ವಿಶ್ವ ಪರಂಪರೆಯ ತಾಣ" ಎಂದು ಮಾನ್ಯತೆ ಪಡೆದಿದೆ. ಕೋನಾರ್ಕ ದೇವಾಲಯವು ವಾಸ್ತವವಾಗಿ ಒಂದು ಕಲ್ಲಿನ ರಥ. ಇಪ್ಪತ್ನಾಲ್ಕು ಚಕ್ರಗಳ ರಥದೊಳಗೆ ವಿರಾಜಮಾನನಾದ ಸೂರ್ಯದೇವನ ಈ ಗುಡಿಯನ್ನು ಗಂಗ ವಂಶದ ದೊರೆ ಒಂದನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿದೆ. ಸಮುದ್ರ ದಡದ ಉಸುಕು ನೆಲದಲ್ಲಿ ಭದ್ರ ಬುನಾದಿ ಇಲ್ಲದ ಕಾರಣ ನೈಸರ್ಗಿಕ ವಿಕೋಪಕ್ಕೆ ಸುಲಭವಾಗಿ ಪಕ್ಕಾಗಿದೆ. ಇಂಗ್ಲಿಷರ ಆಳ್ವಿಕೆಯ ಕಾಲದಲ್ಲಿ ಪುರಾತತ್ವ ಇಲಾಖೆಯು ಈ ಗುಡಿಯನ್ನು ಸಂರಕ್ಷಿಸಿದ್ದರಿಂದ ಇದನ್ನು ಇಂದಿಗೂ ನಾವು ನೋಡಬಹುದಾಗಿದೆ. ಸೂರ್ಯನ ಪ್ರತಿಮೆಯನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು ಚಾವಣಿ ಕುಸಿಯದಂತೆ ಊರುಗೋಲುಗಳ ಆಸರೆ ನೀಡಿ ಗುಡಿಯನ್ನು ಮುಚ್ಚಲಾಗಿದೆ. ಗುಡಿಯ ಹೊರಗಿನ ಶಿಲ್ಪಕಲಾಕೃತಿಗಳು, ರಥಚಕ್ರಗಳ ಶ್ರೀಮಂತ ಸೌಂದರ್ಯ, ಮಿಥುನಶಿಲ್ಪಗಳ ಸಾಲುಸಾಲು ಗಮನ ಸೆಳೆಯುತ್ತವೆ. ಮಾತ್ರವಲ್ಲ ನರ್ತನಶಾಲೆ, ಕುದುರೆ ಮತ್ತು ಸವಾರ, ಆನೆಸಿಂಹಗಳ ಸಮಾಗಮ ಮುಂತಾದ ಶಿಲ್ಪಗಳೂ ನೋಡತಕ್ಕವು. ಇಂದು ಕೋನಾರ್ಕ ಸೂರ್ಯದೇವಾಲಯವು ವಿಶ್ವಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವರ್ಷಕ್ಕೊಮ್ಮೆ ನಡೆವ ಕೋನಾರ್ಕ ಉತ್ಸವವು ಚೇತೋಹಾರಿಯಾಗಿರುತ್ತದೆ.
ಕೊಣಾರ್ಕದ ದೇವಾಲಯ ತನ್ನ ಶಿಲ್ಪಕಲೆಯ ಭವ್ಯತೆ ಮತ್ತು ಕಲ್ಲಿನ ಸೂಕ್ಷ್ಮ ಕೆತ್ತನೆಗಳಿಗೆ ಹೆಸರಾಗಿದೆ.
ಸೂರ್ಯ ದೇವಾಲಯ[ಬದಲಾಯಿಸಿ]

ಕೊಣಾರ್ಕದ ಭವ್ಯ ಸೂರ್ಯ ದೇವಾಲಯ ಒಡಿಶಾದ ದೇವಸ್ಥಾನ ಶಿಲ್ಪಕಲೆಯ ಮೇರು ಕೃತಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಶಿಲ್ಪಕಲೆಯಲ್ಲಿ ಪ್ರಪ೦ಚದಲ್ಲೇ ಅತ್ಯ೦ತ ವೈಭವಪೂರ್ಣವಾದ ಉದಾಹರಣೆಗಳಲ್ಲಿ ಒಂದು ಎ೦ದೂ ಸಹ ಇದನ್ನು ಪರಿಗಣಿಸಲಾಗಿದೆ. ೧೩ ನೆಯ ಶತಮಾನದಲ್ಲಿ ನರಸಿ೦ಹದೇವನಿ೦ದ ಕಟ್ಟಿಸಲ್ಪಟ್ಟ ಈ ದೇವಾಲಯದ ಮೂಲ ವಿನ್ಯಾಸದ೦ತೆ ಇದು ಒಂದು ದೊಡ್ಡ ರಥದ ಆಕಾರದಲ್ಲಿದ್ದಿತು - ಏಳು ಕುದುರೆಗಳಿ೦ದ ಎಳೆಯಲ್ಪಟ್ಟು ೨೪ ಚಕ್ರಗಳನ್ನು ಹೊ೦ದಿರುವ ಸೂರ್ಯನ ರಥವನ್ನು ಪ್ರತಿನಿಧಿಸಲು ಈ ದೇವಸ್ಥಾನವನ್ನು ಕಟ್ಟಲಾಯಿತು. ಈಗ ಭಾಗಶ: ಹಾಳಾಗಿರುವ ಈ ದೇವಾಲಯ ಈಗಿನ ಸ್ಥಿತಿಯಲ್ಲಿಯೂ ಅದರ ಶಿಲ್ಪಿಗಳ ದೃಷ್ಟಿ ಮತ್ತು ಪ್ರತಿಭೆಯನ್ನು ತೋರುತ್ತದೆ. ನ೦ಬಿಕೆಯ೦ತೆ, ಈ ದೇವಾಲಯ ಮೂಲರೂಪದಲ್ಲಿದ್ದಾಗ ಸೂರ್ಯೋದಯವಾದ ತಕ್ಷಣ ಸೂರ್ಯನ ಮೊದಲ ಕಿರಣಗಳು ಈ ದೇವಾಲಯದ ಸೂರ್ಯನ ಮೂರ್ತಿಯ ಪದತಲದಲ್ಲಿ ಬೀಳುತ್ತಿದ್ದವು!