ಪೂರ್ವ ಗಂಗರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ವ ಗಂಗರು ಅಥವಾ ಚೋದಗಂಗರು[೧] ೧೧ನೇ ಶತಮಾನದಿಂದ ೧೫ನೇ ಶತಮಾನದವೆರೆಗೆ ಕಳಿಂಗದಿಂದ ಸಾಮ್ರಾಜ್ಯವನ್ನಾಳಿದರು. ಈ ಸಾಮ್ರಾಜ್ಯವು ಪ್ರಸ್ತುತ ಒಡಿಶಾ ರಾಜ್ಯ ಮತ್ತು ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಢ ರಾಜ್ಯದ ಕೆಲವು ಭಾಗಗಳನ್ನು ಒಳಗೊಂಡಿತ್ತು[೨]. ಈ ರಾಜವಂಶದವರು ದಂತಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅನಂತರ ಕಳಿಂಗನಗರ ಮತ್ತು ಕಟಕಕ್ಕೆ ಸ್ಥಳಾಂತರಗೊಂಡರು[೩]. ವಿಶ್ವಪ್ರಖ್ಯಾತ ಕೊನಾರ್ಕ್ ಸೂರ್ಯ ದೇವಾಲಯವನ್ನು ನಿರ್ಮಿಸಿದ್ದು ಇದೇ ರಾಜಮನೆತನ.

ಪೂರ್ವದ ಗಂಗರು ಮೂಲತಃ ಕನ್ನಡ ಮೂಲದವರಾಗಿದ್ದು ತಲಕಾಡು ಗಂಗರರ ಉತ್ತರಾಧಿಕಾರಿಗಳು, ಸುಮಾರು ೧೦ನೆ ಶತಮಾನದಲ್ಲಿ ಉತ್ತರದಲ್ಲಿ ಕಲ್ಯಾಣಿ ಚಾಲುಕ್ಯರು ಹಾಗು ದಕ್ಷಿಣದಲ್ಲಿ ಚೋಳರು ಪ್ರಬಲರಾಗಿದ್ದ ಕಾಲದಲ್ಲಿ  ಕರ್ನಾಟಕದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ಇವರು ಮುಂದೆ ಓಡಿಶದಲ್ಲಿ ಸಾಮ್ರಾಜ್ಯ ಕಟ್ಟಿಕೊಂಡರು.

ಈ ರಾಜವಂಶದ ಸಂಸ್ಥಾಪಕ ಅನಂತವರ್ಮನ್ ಚೋದಗಂಗಾ. ಇವನು ಕಳಿಂಗನಗರದ ಗಂಗ ವಂಶದ ವಜ್ರಹಸ್ತನ ಮೊಮ್ಮಗನೂ ರಾಜರಾಜ ದೇವೇಂದ್ರವರ್ಮನ ಮಗನೂ ಹೌದು. ಇವನ ತಾಯಿ ಚೋಳ ರಾಜವಂಶದ ರಾಜಕುಮಾರಿ ರಾಜಸುಂದರಿ. ಪೂರ್ವ ಗಂಗರು ಚೋಳರ ಜೊತೆಗೂ ಚಾಳುಕ್ಯರ ಜೊತೆಗೂ ಮದುವೆ ಸಂಬಂಧಗಳನ್ನು ಬೆಳೆಸಿದ್ದರು. ಈ ರಾಜಮನೆತನದ ನಾಣ್ಯ ಗಂಗ ಫನಮ್. ರಾಜ ಅನಂತವರ್ಮನೂ ದೈವಭಕ್ತನೂ ಕಲಾರಾಧಕನೂ ಆಗಿದ್ದನು. ಪುರಿಯ ಜಗನ್ನಾಥ ದೇಗುಲವನ್ನು ಈತನೇ ನಿರ್ಮಿಸಿದ್ದು[೪]. ಅನಂತವರ್ಮನ ನಂತರ ೧ನೇ ನರಸಿಂಹದೇವ (೧೨೩೮-೧೨೬೪) ಆಳಿದನು.

ಮುಸ್ಲಿಂ ರಾಜರ ದಾಳಿಯಿಂದ ಸತತವಾಗಿ ತಮ್ಮ ಸಾಮ್ರಾಜ್ಯವನ್ನು ಕಾಪಾಡಿಕೊಂಡು ಬಂದರು ಇವರು. ವ್ಯಾಪಾರ ವಹಿವಾಟುಗಳಿಂದ ಸಾಕಷ್ಟು ಸಂಪತ್ತು ಗಳಿಸಿದ ಸಾಮ್ರಾಜ್ಯವು ಆದಾಯದ ಬಹುತೇಕ ಭಾಗವನ್ನು ದೇವಾಲಯಗಳಿಗೆ ವಿನಿಯೋಗಿಸಿತು.

ಹಿನ್ನೆಲೆ[ಬದಲಾಯಿಸಿ]

ಕಳಿಂಗ ಸಾಮ್ರಾಜ್ಯದ ಮಹಾಮೇಘವಾಹನ ರಾಜವಂಶದ ಅವಸಾನದ ನಂತರ ರಾಜಕೀಯ ಅಸ್ಥಿರತೆ ತಲೆದೋರಿತು. ಸಣ್ಣ ಪುಟ್ಟ ಪಾಳೇಗಾರರೂ ಸಹ ಕಳಿಂಗಾಧಿಪಥಿ ಎಂದು ಬಿರುದಾಂಕಿತಗೊಂಡರು. ೧ನೇ ಇಂದ್ರವರ್ಮನು ವಿಷ್ಣುಕುಂಡಿನ್ ನ ರಾಜ ಇಂದ್ರಭಟ್ಟಾರಕನನ್ನು ಸೋಲಿಸಿ ಕಳಿಂಗನಗರವನ್ನು ಮೊದಲನೆಯ ರಾಜಧಾನಿಯನ್ನಾಗಿಯೂ ದಂತಪುರವನ್ನು ಎರಡೆನೆಯ ರಾಜಧಾನಿಯನ್ನಾಗಿಯೂ ಮಾಡಿಕೊಂಡಾಗಿನಿಂದ ಪೂರ್ವ ಗಂಗ ರಾಜವಂಶವು ಆರಂಭವಾಯಿತು. ಗಂಗ ವಂಶದವರು ತ್ರಿಕಳಿಂಗಾಧಿಪತಿ ಅಥವಾ ಸಕಾಲ ಕಳಿಂಗಾಧಿಪತಿ ಎಂಬ ಬಿರುದನ್ನು ಹೊಂದಿದ್ದರು. (ತ್ರಿಕಳಿಂಗ ಎಂದರೆ ಮೂರು ಕಳಿಂಗಗಳು ಕಳಿಂಗ(ದಕ್ಷಿಣ), ಉತ್ಕಲ(ಉತ್ತರ) ಮತ್ತು ಕೋಸಲ(ಪಶ್ಚಿಮ))

ಮುಖಲಿಂಗಮ್ (ಈಗಿನ ಆಂಧ್ರ ಪ್ರದೇಶದ ಶ್ರೀಕಾಕುಳಮ್ ಹತ್ತಿರದ ಊರು) ಅನ್ನು ಪೂರ್ವ ಗಂಗರ ರಾಜಧಾನಿಯೆಂದು ಗುರುತಿಸಲಾಗಿದೆ. ಇವರ ನಂತರ ವೆಂಗಿಚಾಳುಕ್ಯರು ಕಳಿಂಗ ಪ್ರದೇಶವನ್ನಾಳಿದರು. ಶೈವಭಕ್ತರಾದ ಪೂರ್ವ ಗಂಗವಂಶದವರು ಮುಖಲಿಂಗಮ್ ಅಲ್ಲಿ ಶ್ರೀ ಮುಖಲಿಂಗಮ್ ಎಂಬ ದೇವಾಲಯವನ್ನು ಕಟ್ಟಿದರು.

ಆಳ್ವಿಕೆ[ಬದಲಾಯಿಸಿ]

ಅನಂತವರ್ಮನ್ ಚೋದಗಂಗಾ: ರಾಜವಂಶದ ಸಂಸ್ಥಾಪಕನಾದ ಇವನು ಉತ್ತರದ ಗಂಗಾನದಿಯಿಂದ ಹಿಡಿದು ದಕ್ಷಿಣದ ಗೋದಾವರಿಯವರೆಗೆ ಆಳಿದನೆಂದು ಪ್ರತೀತಿ. ಕ್ರಿ. ಶ. ೧೦೭೬ ರಲ್ಲಿ ತ್ರಿಕಳಿಂಗಾಧಿಪತಿ ಎಂಬ ಬಿರುದನ್ನು ಗಳಿಸಿದ ಇವನು ಮೂರೂ ಕಳಿಂಗ ಪ್ರದೇಶಗಳನ್ನು ಆಳಿದ ಪ್ರಪ್ರಥಮ ರಾಜ.

೧೧೯೮ರಲ್ಲಿ ಪಟ್ಟಕ್ಕೇರಿದ ೩ನೇ ರಾಜರಾಜನು ಬಂಗಾಳದ ಮುಸ್ಲಿಂ ರಾಜರ ದಾಳಿಯನ್ನು ತಡೆಯುವಲ್ಲಿ ಕಾರ್ಯಪ್ರವೃತ್ತನಾಗಲಿಲ್ಲ. ಇವನ ಮಗ ೩ನೇ ಅನಂಗಭೀಮ ಮುಸ್ಲಿಂ ದೊರೆಗಳ ದಾಲಿಯನ್ನು ತಡೆದದ್ದಲ್ಲದೇ ಭುವನೇಶ್ವರದಲ್ಲಿ ಮೇಘೇಶ್ವರ ದೇವಾಲಯವನ್ನು ಕಟ್ಟಿಸಿದನು. ಅನಂಗಭೀಮನ ಮಗ ೧ನೇ ನರಸಿಂಹದೇವನು ೧೨೪೩ ರಲ್ಲಿ ದಕ್ಷಿಣ ಬಂಗಾಳದ ಮೇಲೆ ದಾಳಿ ಮಾಡಿದ್ದಲ್ಲದೇ ಮುಸ್ಲಿಂ ದೊರೆಗಳನ್ನು ಸೋಲಿಸಿ ರಾಜಧಾನಿ ಗೌಡ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡನು. ಈ ವಿಜಯದ ಕುರುಹಿಗಾಗಿಯೇ ಕೊನಾರ್ಕ್ ನ ಸೂರ್ಯ ದೇವಾಲಯವನ್ನು ಕಟ್ಟಿಸಿದನು. ೧೨೬೪ ರಲ್ಲಿ ನರಸಿಂಹದೇವನ ಮರಣಾನಂತರ ಪೂರ್ವ ಗಂಗ ವಂಶವು ಅವಸಾನಗೊಳ್ಳುತ್ತಾ ಹೋಯಿತು. ೧೩೨೪ ರಲ್ಲಿ ದೆಹಲಿಯ ಸುಲ್ತಾನರು ಕಳಿಂಗದ ಮೇಲೆ ಯುದ್ಧ ಸಾರಿದರು. ೧೩೫೬ ರಲ್ಲಿ ಮುಸುನೂರಿ ನಾಯಕರು ಒಡಿಶಾವನ್ನು ಸೋಲಿಸಿದರು. ರಾಜವಂಶದ ಕೊನೆಯ ರಾಜ ೪ನೇ ನರಸಿಂಹನು ೧೪೨೫ ರ ತನಕ ಆಳಿದನು. ಇವನ ನಂತರ ಬಂದ ೪ನೇ ಭಾನುದೇವನು "ಹುಚ್ಚು ರಾಜ" ಎಂದೇ ಕುಖ್ಯಾತಿ ಗಳಿಸಿದನು. ಇವನ ಮಂತ್ರಿ ಕಪಿಲೇಂದ್ರನು ಸಿಂಹಾಸನವನ್ನು ಆಕ್ರಮಿಸಿಕೊಂಡು ೧೪೩೪-೩೫ ರಲ್ಲಿ ಸೂರ್ಯವಂಶವನ್ನು ಸ್ಥಾಪಿಸಿದನು.

ಆಳಿದ ರಾಜರು[ಬದಲಾಯಿಸಿ]

  1. ಇಂದ್ರವರ್ಮ (496–535)
  2. ೪ನೇ ದೇವೇಂದ್ರವರ್ಮ (893-?)
  3. ವಜ್ರಹಸ್ತ ಅನಂತವರ್ಮ (1038-?)
  4. ೧ನೇ ರಾಜರಾಜ (?-1078)
  5. ಅನಂತವರ್ಮನ್ ಚೋದಗಂಗಾ (1078–1150)
  6. ೨ನೇ ಅನಂಗಭೀಮ ದೇವ (1178–1198)
  7. ೨ನೇ ರಾಜರಾಜ (1198–1211)
  8. ೩ನೇ ಅನಂಗಭೀಮ ದೇವ (1211–1238)
  9. ೧ನೇ ನರಸಿಂಹದೇವ (1238–1264)
  10. ೧ನೇ ಭಾನುದೇವ (1264–1279)
  11. ೨ನೇ ನರಸಿಂಹದೇವ (1279–1306)
  12. ೨ನೇ ಭಾನುದೇವ (1306–1328)
  13. ೩ನೇ ನರಸಿಂಹದೇವ (1328–1352)
  14. ೩ನೇ ಭಾನುದೇವ (1352–1378)
  15. ೪ನೇ ನರಸಿಂಹದೇವ (1379–1424)
  16. ೪ನೇ ಭಾನುದೇವ(1424–1434)

ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/Eastern_Ganga_dynasty#cite_note-1
  2. http://www.britannica.com/eb/topic-225335/Ganga-dynasty
  3. https://books.google.com/books?id=cdq1AAAAIAAJ
  4. http://www.india9.com/i9show/Eastern-Ganga-Dynasty-50611.htm