ವಿಷಯಕ್ಕೆ ಹೋಗು

ಪಾಲ ರಾಜವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೯ನೇ ಶತಮಾನದಲ್ಲಿ ಪಾಲ ಸಾಮ್ರಾಜ್ಯ ಮತ್ತು ನೆರೆಯ ರಾಜ್ಯಗಳು

ಪಾಲ ರಾಜವಂಶವು 8 ನೆಯ ಶತಮಾನದ ನಡುವಿನಿಂದ 12 ನೆಯ ಶತಮಾನದ ಅಂತ್ಯದವರೆಗೆ ಬಂಗಾಲವನ್ನಾಳಿದ ರಾಜವಂಶ. ಈ ವಂಶದ ಅರಸರನ್ನು ವಂಗಪತಿ ಗೌಡೇಶ್ವರರೆಂದೂ ಸೂರ್ಯವಂಶಜರೆಂದೂ ಸಮುದ್ರಸಂಭವರೆಂದೂ ಬಣ್ಣಿಸಲಾಗಿದೆ. ಈ ರಾಜರುಗಳ ಹೆಸರುಗಳು ಪಾಲ ಎಂದೇ ಕೊನೆಗೊಳ್ಳುತ್ತವೆಯಾದ್ದರಿಂದ ಇವರ ವಂಶಕ್ಕೆ ಪಾಲವಂಶವೆಂಬ ಹೆಸರು ಬಂದಿದೆ. ಪುಂಡ್ರವರ್ಧನಪುರ (ಬಾಂಗ್ಲಾ ದೇಶದ ಬೋಗರಾ ಜಿಲ್ಲೆಯಲ್ಲಿರುವ ಮಹಾಸ್ಥಾನಗಢ) ಇವರ ರಾಜಧಾನಿಯಾಗಿತ್ತು. ಪಾಲ ಸಾಮ್ರಾಜ್ಯವನ್ನು ಗೋಪಾಲ ಆರಂಭಿಸಿದ. ಈತ 8 ನೆಯ ಶತಮಾನದ ಉತ್ತರಾರ್ಧದಲ್ಲಿ ಸಿಂಹಾಸನವನ್ನೇರಿದ.

ಧರ್ಮಪಾಲ[ಬದಲಾಯಿಸಿ]

ಇವನ ಅನಂತರ ಇವನ ಮಗನಾದ ಧರ್ಮಪಾಲ ಸುಮಾರು 780 ರಲ್ಲಿ ಸಿಂಹಾಸನಾರೋಹಣ ಮಾಡಿದ. ಗೌಡ, ವಂಗ, ರಾಢ, ಮಗಧಗಳನ್ನೊಳಗೊಂಡಂತೆ ಪಾಲ ಸಾಮ್ರಾಜ್ಯ ವಿಸ್ತಾರವಾಗಿ ಬೆಳೆಯಿತು. ಉತ್ತರ ಭಾರತದ ರಾಜಕೀಯ ಇತಿಹಾಸದಲ್ಲಿ ಬಂಗಾಲದ ಸ್ಥಾನ ಔನ್ನತ್ಯಕ್ಕೇರಿತು. ಈ ಸಾಧನೆಯ ಕೀರ್ತಿ ಧರ್ಮಪಾಲನಿಗೆ ಸಲ್ಲುತ್ತದೆ. ಈತ ಪಾಲವಂಶಸ್ಥರಲ್ಲೆಲ್ಲಾ ಅತ್ಯಂತ ಶಕ್ತಿಶಾಲಿಯೂ ಸಮರ್ಥನೂ ಆದ ದೊರೆಯಾಗಿದ್ದ. ಮಾಳವದ ಪ್ರತಿಹಾರರೊಡನೆ ಘೋರ ಯುದ್ಧ ಮಾಡಿದ; ದಖನ್ನಿನ ರಾಷ್ಟ್ರಕೂಟರೊಡನೆ ಕಾದಾಡಿದ. ಪ್ರತಿಹಾರ ದೊರೆ ವತ್ಸರಾಜ ಪಾಲ ಸಾಮ್ರಾಜ್ಯವನ್ನು ಮುತ್ತಿ ಜಯಗಳಿಸಿದ. ಆದರೆ ವತ್ಸರಾಜನನ್ನು ರಾಷ್ಟ್ರಕೂಟ ಮುಮ್ಮಡಿ ಧೃವ ಸೋಲಿಸಿದ. ಆತ ತನ್ನ ಸಾಮ್ರಾಜ್ಯಕ್ಕೆ ಮರಳಿದ ಬಳಿಕ ಧರ್ಮಪಾಲ ಪುನಃ ಉತ್ತರದತ್ತ ವಿಜಯಯಾತ್ರೆ ಹೊರಟು ಕನೌಜನ್ನು ಗೆದ್ದುಕೊಂಡು ಚಕ್ರಾಯುಧನನ್ನು ಅಲ್ಲಿಯ ಸಿಂಹಾಸನದಲ್ಲಿ ಕುಳ್ಳಿರಿಸಿದನಲ್ಲದೆ ಅಲ್ಲೊಂದು ಸಮ್ಮೇಳನವನ್ನೇರ್ಪಡಿಸಿದ. ಅದರಲ್ಲಿ ಭೋಜ, ಮತ್ಸ್ಯ, ಮದ್ರ, ಕುರು, ಯದು, ಯವನ, ಅನಂತಿ, ಗಂಧಾರ, ಕೀರ ಮುಂತಾದ ರಾಜರು ಭಾಗವಹಿಸಿದರು. ಇದಾದ ಸ್ವಲ್ಪ ಕಾಲದಲ್ಲೇ ಕನೌಜಿನ ಮೇಲೆ ನಾಗಭಟ ದಾಳಿ ಮಾಡಿದ. ಅಲ್ಲದೆ ಮಾಂಘೇರ್ ಬಳಿ ಧರ್ಮಪಾಲನನ್ನು ಸೋಲಿಸಿದ. ಸಾಹಸವೀರನೆಂದು ಖ್ಯಾತನಾದ ಧರ್ಮಪಾಲ ಸುಮಾರು 815 ರಲ್ಲಿ ಕಾಲವಾದ.

ದೇವಪಾಲ[ಬದಲಾಯಿಸಿ]

ಅನಂತರ ಆತನ ಪುತ್ರನಾದ ದೇವಪಾಲ ಪಟ್ಟವೇರಿದ. ಈತ ತಂದೆಯಷ್ಟೇ ಉತ್ಕಟಾಕಾಂಕ್ಷಿ. ರಾಜ್ಯ ವಿಸ್ತರಣಾರ್ಥವಾಗಿ ನೆರೆಯ ಅನೇಕ ರಾಜ್ಯಗಳ ಮೇಲೆ ದಾಳಿ ಮಾಡಿದ. ಗುರ್ಜರ ರಾಜನನ್ನು ಸೋಲಿಸಿದ. ಕಂಬೋಜ ದೇಶವನ್ನು ಪ್ರವೇಶಿಸಿದ. ಅಸ್ಸಾಮಿನ ಪ್ರಾಗ್ಜೋತಿಷ ಉತ್ಕಲ ಮುಂತಾದವು ಇವನ ವಶವಾದವು. ಇವನು ಹಿಮಾಲಯದಿಂದ ದಕ್ಷಿಣ ತೀರದ ವರೆಗಿನ ಪ್ರದೇಶದ ಅಧಿಪತಿಯಾಗಿದ್ದನೆಂದೂ ಈತನ ಆಸ್ಥಾನ ಕವಿ ಬಣ್ಣಿಸುತ್ತಾನೆ. ಇವೆಲ್ಲಕ್ಕಿಂತ ಹೆಚ್ಚಾಗಿ ಈತ ಹೊರನಾಡುಗಳೊಡನೆ ಸಂಬಂಧವಿಟ್ಟುಕೊಂಡಿದ್ದ. ಸುವರ್ಣದ್ವೀಪದ (ಸುಮಾತ್ರ) ದೊರೆ ಬಾಲಪುತ್ರ ದೇವನ ರಾಯಭಾರಿ ದೇವಪಾಲನ ಆಸ್ಥಾನದಲ್ಲಿದ್ದನೆಂದೂ ತಿಳಿದುಬರುತ್ತದೆ. ಸುಮಾರು 39 ವರ್ಷಗಳಷ್ಟು ದೀರ್ಘ ಕಾಲ ಈತ ಆಳಿ, ಬಂಗಾಲವನ್ನು ಉಚ್ಛ್ರಾಯಸ್ಥಿತಿಗೆ ತರಲು ಕಾರಣನಾದ ದಕ್ಷ ರಾಜನೆಂಬ ಖ್ಯಾತಿ ಹೊಂದಿದ. 855 ರಲ್ಲಿ ಈತ ಮರಣಹೊಂದಿದ.

ನಂತರದ ಅರಸರು[ಬದಲಾಯಿಸಿ]

ಪಾಲ ಸಾಮ್ರಾಜ್ಯದ ಒಂದು ನಾಣ್ಯ, ಮಹೀಪಾಲ ಮತ್ತು ನಂತರದ ಅರಸರ ಕಾಲದಲ್ಲಿ. ಸುಮಾರು ಕ್ರಿ.ಶ. ೯೮೮-೧೧೬೧

ಇವನ ಅನಂತರ ಪಾಲ ಸಾಮ್ರಾಜ್ಯದ ರಾಜಕೀಯ ಶಕ್ತಿ ಕುಂದುತ್ತಾ ಬಂತು. ಆ ಕಾಲದಲ್ಲಿ ದೇವಪಾಲನ ಸೋದರಳಿಯ 1 ನೆಯ ವಿಗ್ರಹಪಾಲ ಪಟ್ಟಕ್ಕೆ ಬಂದ. ಈತ ರಾಜ್ಯಭಾರಕ್ಕಿಂತ ಧರ್ಮಸಂಬಂಧವಾದ ಚಟುವಟಿಕೆಗಳಲ್ಲೇ ಆಸಕ್ತನಾಗಿದ್ದನೆಂದು ತೋರುತ್ತದೆ. ಕೊನೆಗೆ ಇವನು ತನ್ನ ಪುತ್ರ ನಾರಾಯಣಪಾಲನಿಗೆ ರಾಜ್ಯಭಾರವನ್ನೂ ಬಿಟ್ಟುಕೊಟ್ಟನೆಂದೂ ತಿಳಿದುಬರುತ್ತದೆ. ಪ್ರತಿಹಾರರ ಆಕ್ರಮಣದಿಂದಾಗಿ ಕಳೆದುಕೊಂಡಿದ್ದ ಪಾಲ ಸಾಮ್ರಾಜ್ಯದ ಸ್ವಲ್ಪ ಭಾಗವನ್ನು ನಾರಾಯಣಪಾಲ ಮರಳಿ ಪಡೆದ. ಈತ ಸುಮಾರು 54 ವರ್ಷಗಳಷ್ಟು ದೀರ್ಘ ಕಾಲ ರಾಜ್ಯಭಾರ ಮಾಡಿದನೆಂದು ಹೇಳಲಾಗಿದೆ.

ಇವನ ಅನಂತರ ಸುಮಾರು ಎರಡು ಮೂರು ತಲೆಮಾರುಗಳಲ್ಲಿ ಪಾಲರಸರ ಖ್ಯಾತಿ ಪುನಃ ಕುಗ್ಗಿತ್ತು. ಅದು ಚಂದೇಲ, ಕಳಚುರಿಗಳ ದಾಳಿಗೆ ತುತ್ತಾಯಿತು. ಒಂದನೆಯ ಮಹೀಪಾಲ ಸುಮಾರು 1021 ರಲ್ಲಿ ಪಟ್ಟವೇರಿದ. ಗೌಡ ದೇಶಾಧಿಪತಿಯಾಗಿ ಪಾಲ ಸಾಮ್ರಾಜ್ಯದ ಹಿರಿಮೆಯನ್ನು ಪುನಃ ಸ್ಥಾಪಿಸಿದವನು ಈತ. 1023 ರಲ್ಲಿ ಚೋಳನಾಡಿನ ರಾಜೇಂದ್ರ ಚೋಳ ತನ್ನ ಉತ್ತರ ಭಾರತದ ದಿಗ್ವಿಜಯದ ಅಂಗವಾಗಿ ಈತನ ಮೇಲೆ ಏರಿ ಬಂದು ಜಯಶಾಲಿಯಾಗಿ ಮರಳಿದ.

1 ನೆಯ ಮಹಿಪಾಲನ ಅನಂತರ ಅನುಕ್ರಮವಾಗಿ ಇವನ ಮಗ ನಯಪಾಲ, ಮೊಮ್ಮಗ ವಿಗ್ರಹಪಾಲ ರಾಜ್ಯವಾಳಿದರು. ಆಗ ಕಲಚುರಿಗಳೊಂದಿಗೆ ಇವರು ಯುದ್ಧ ಮಾಡಬೇಕಾಯಿತು. ಚೇದಿ ರಾಜಪುತ್ರಿಯಾದ ಯೌವನಶ್ರೀಯೊಂದಿಗೆ 3 ನೆಯ ವಿಗ್ರಹಪಾಲ ವಿವಾಹವಾದನೆಂದು ಹೇಳಲಾಗಿದೆ. ಅಲ್ಲದೆ ರಾಷ್ಟ್ರಕೂಟ ವಂಶಸ್ಥಳಾದ ಒಬ್ಬಳು ರಾಣಿಯೂ ಈತನಿಗಿದ್ದಳೆಂದು ತಿಳಿದುಬರುತ್ತದೆ.

ಮುಮ್ಮಡಿ ವಿಗ್ರಹಪಾಲನ ಮೂವರು ಪುತ್ರರಾದ ಇಮ್ಮಡಿ ಮಹೀಪಾಲ, ಸುರಪಾಲ ಮತ್ತು ರಾಮಪಾಲರಲ್ಲಿ ಮೊದಲನೆಯವನು ದುರ್ಬಲ ಅರಸು. ಆತನನ್ನು ಅವನ ಅಧಿಕಾರಿ ಕೊಲೆ ಮಾಡಿದ. ಗೌಡ ದೇಶದ ಅಧಿಕಾರ ಅವನ ಕೈಯಿಂದ ಕಳೆದು ಹೋಯಿತು. ಆದರೆ ಇಮ್ಮಡಿ ಮಹೀಪಾಲನ ಕಿರಿಯ ತಮ್ಮನಾದ ರಾಮಪಾಲ ಮರಳಿ ಸಾಮ್ರಾಜ್ಯಾಧಿಕಾರವನ್ನು ಪಡೆದ. ರಾಜ್ಯ ವಿಸ್ತರಣಾರ್ಥವಾಗಿ, ಹಾಗೂ ಪಾಲ ರಾಜ್ಯದ ಪ್ರಭಾವವನ್ನು ಹೆಚ್ಚಿಸುವ ಉದ್ದೇಶದಿಂದ ಇವನು ದಂಡಯಾತ್ರೆ ಹೊರಟ. ಇದರಲ್ಲಿ ಇವನಿಗೆ ಸ್ವಲ್ಪಮಟ್ಟಿಗೆ ಯಶಸ್ಸು ದೊರಕಿತು. ಈತ ಸುಮಾರು 1120ರಲ್ಲಿ ಕಾಲವಾದ. ಇವನು ಭದ್ರಪಡಿಸಿದ್ದ ಪಾಲ ಸಾಮ್ರಾಜ್ಯ ಕುಮಾರಪಾಲನ ಆಳ್ವಿಕೆಯಲ್ಲಿ ಪುನಃ ಛಿದ್ರವಾಗತೊಡಗಿತು. ಮಿಥಿಲದ ನಾನ್ಯ ದೇವ ಗೌಡದೇಶವನ್ನು ಆಕ್ರಮಿಸಿದ. ಗಾಹಡವಾಲರು ಮಗಧದ ಒಂದು ಭಾಗವನ್ನು ಕಿತ್ತುಕೊಂಡರು. ಅಂತ್ಯದಲ್ಲಿ ಪಾಲರಾಜ್ಯ ಸೇನರಸರ ಕೈವಶವಾಯಿತು. ಸುಮಾರು 12 ನೆಯ ಶತಮಾನದ ಉತ್ತರಾರ್ಧದಲ್ಲಿ ಇವರ ಆಳ್ವಿಕೆ ಕೊನೆಗೊಂಡಿತು. ಗುಪ್ತರಂತೆ, ಮೌರ್ಯರಂತೆ ಬಲವಾದ ರಾಜ್ಯವನ್ನು ಸ್ಥಾಪಿಸಿ ದೀರ್ಘಕಾಲ ಆಳಿದ ಕೀರ್ತಿ ಪಾಲರದು. ಹೊರನಾಡುಗಳನ್ನು ಒಳಗೊಂಡಂತೆ ಗೌಡದೇಶದಲ್ಲಿ ಇವರ ಸಾಂಸ್ಕೃತಿಕ ವೈಭವವನ್ನು ಮೆರೆದರು.

ಧರ್ಮದೃಷ್ಟಿ[ಬದಲಾಯಿಸಿ]

ಪಾಲರು ಬೌದ್ಧಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದಂತೆ ತಿಳಿದುಬರುತ್ತದೆ. ಧರ್ಮಪಾಲ ವಿಕ್ರಮಶಿಲಾ ವಿಹಾರವನ್ನು ಸ್ಥಾಪಿಸಿದ. ಬೌದ್ಧ ದಾರ್ಶನಿಕನಾದ. ಇಂದ್ರಗುಪ್ತನನ್ನು ನಾಲಂದ ಮಠದ ಅಧ್ಯಕ್ಷನನ್ನಾಗಿ ದೇವಪಾಲ ನೇಮಕ ಮಾಡಿದ. ನಾಲಂದ ಬೋಧ ಗಯಾಗಳಲ್ಲಿ ಧಾರ್ಮಿಕ ಕಟ್ಟಡಗಳನ್ನು ಮಹೀಪಾಲ ನಿರ್ಮಿಸಿದ. ವಿಕ್ರಮಶಿಲಾ, ನಾಲಂದ ವಿಶ್ವವಿದ್ಯಾಲಯಗಳಲ್ಲಿ ಪಾಲರು ಬೌದ್ಧ ವಿಹಾರಗಳನ್ನು ನಿರ್ಮಿಸಿದರಲ್ಲದೆ ವಿದ್ಯಾ ಪ್ರಸಾರ ಕಾರ್ಯದಲ್ಲಿ ವಿಶೇಷ ಆಸಕ್ತಿ ತೋರಿಸಿದರು. ಇದನ್ನು ದಾಖಲುಪಡಿಸುವ ಶಾಸನಗಳು ನಾಲಂದದ ಉತ್ಖನನದಲ್ಲಿ ದೊರೆತಿವೆ. ದೇವಪಾಲ ನಾಲಂದದಲ್ಲಿದ್ದ ಬೌದ್ಧ ವಿಹಾರಕ್ಕಾಗಿ ಪಂಚಗ್ರಾಮಗಳನ್ನು ದತ್ತಿ ಬಿಟ್ಟಿದ್ದನೆಂಬುದನ್ನು ಸುಂದರವಾದ ಕಂಚಿನ ಮುದ್ರಿಕೆಯನ್ನೊಳಗೊಂಡ ಅವನ ಒಂದು ತಾಮ್ರ ಶಾಸನ ತಿಳಿಸುತ್ತದೆ. ಸುವರ್ಣದ್ವೀಪದ ಶೈಲೇಂದ್ರ ರಾಜನಾಗಿದ್ದ ಬಾಲಪುತ್ರದೇವನ ವಿನಂತಿಯ ಮೇರೆಗೆ ಈ ದತ್ತಿಗಳನ್ನು ನೀಡಲಾಯಿತೆಂದು ತಿಳಿದುಬರುತ್ತದೆ. ಇದಲ್ಲದೆ ತಾರಾ, ವಾಗೀಶ್ವರೀ ವಿಗ್ರಹ ಶಾಸನಗಳು ಪಾಲರ ಆಳ್ವಿಕೆಯ ವರ್ಷಗಳನ್ನು ತಿಳಿಸುತ್ತವೆ. ಇನ್ನು ಕೆಲವು ಪಾಲಶಾಸನಗಳಲ್ಲಿ ಬೇರೆ ಬೇರೆ ಅಧಿಕಾರಿಗಳ ದೊಡ್ಡ ಪಟ್ಟಿಯೇ ಕಂಡುಬರುತ್ತದೆ. ಒಂದನೆಯ ಮಹೀಪಾಲನ ಖಂಗಧ ತಾಮ್ರ ಶಾಸನದಲ್ಲಿ ಸುಮಾರು 44 ಅಧಿಕಾರಿಗಳ ಹೆಸರುಗಳಿವೆ. ಪಾಲ ತಾಮ್ರ ಶಾಸನಗಳಿಗೆ ಸಂಬಂಧಿಸಿದಂತಿರುವ ಮುದ್ರೆಗಳಲ್ಲಿ ಬೌದ್ಧ ಧರ್ಮ ಚಕ್ರವಿರುತ್ತಿತ್ತು. ಪಾಲ ವಂಶವನ್ನು ಆ ಶಾಸನಗಳು ಧರ್ಮಚಕ್ರಮುದ್ರಾ ಎಂದೇ ಬಣ್ಣಿಸುತ್ತವೆ. ಆದರೆ ರಾಷ್ಟ್ರಕೂಟ ಮುಮ್ಮಡಿ ಗೋವಿಂದನ ನೆಸರಿ ತಾಮ್ರ ಶಾಸನದ ಪ್ರಕಾರ ಧರ್ಮಪಾಲ ರಾಜನ ಬಾವುಟದ ಮೇಲೆ ಬೌದ್ಧದೇವಿಯಾದ ತಾರಾಳ ಚಿತ್ರವಿತ್ತು. ನಾಲಂದ ತಾಮ್ರ ಶಾಸನಕ್ಕೆ ಸಂಬಂಧಿಸಿದಂತಿರುವ ಕಂಚಿನ ಒಂದು ಮುದ್ರೆ ಕಲಾ ನೈಪುಣ್ಯದ ದೃಷ್ಟಿಯಿಂದ ಗಮನಾರ್ಹವಾದುದ್ದು.

ವಾಸ್ತುಶಿಲ್ಪ[ಬದಲಾಯಿಸಿ]

ಬುದ್ಧನ ವಿಗ್ರಹ, ಬಿಹಾರ್, ಪಾಲ ಸಾಮ್ರಾಜ್ಯ, ೧೦-೧೧ ನೇ ಶತಮಾನ

ಪಾಲಶೈಲಿಯ ವಾಸ್ತುಶಿಲ್ಪ ವಿಶಿಷ್ಟವಾದ್ದು. ನುಣುಪಾದ ಕರಿಪಾಟಿ ಕಲ್ಲಿನಲ್ಲಿ ರಚಿಸಿದ ಹಲವಾರು ಶಿಲ್ಪಗಳಲ್ಲಿ ಇದನ್ನು ಗಮನಿಸಬಹುದು. ಮಗಧ, ರಾಜಲಗೃಹ, ಬೋಧ ಗಯಾ, ಕುರ್ಕಿಹಾರ, ದಿನಾಜಪುರ, ಭಾಗಲಪುರ, ರಾಜ್ಯಶಾಹಿ, ಚಂಡಿವತ್, ಮಯೂರ್‍ಭಂಜ್, ನಾಲಂದ, ವಿಕ್ರಮಶಿಲಾ, ಉದ್ದಂಡಪುರ, ಷಹಾಡಪುರ ಮುಂತಾದೆಡೆಗಳಲ್ಲಿ ಪಾಲರ ಶಿಲ್ಪಕೃತಿಗಳು ದೊರೆತಿವೆ. ಅವುಗಳಲ್ಲಿ ಹಲವು ಕಲ್ಕತ್ತಾ, ಲಖನೌ, ರಾಜಶಾಹಿ, ಲಂಡನ್, ಪ್ಯಾರಿಸ್, ಬರ್ಲಿನ್, ಬೋಸ್ಟನ್, ನ್ಯೂಯಾರ್ಕ್, ದೆಹಲಿ ಮುಂತಾದೆಡೆಗಳಲ್ಲಿರುವ ವಸ್ತುಸಂಗ್ರಹಾಲಯಗಳಲ್ಲಿವೆ. ಪಾಲ ಶಿಲ್ಪ ಶೈಲಿಯಲ್ಲಿ ತಾಂತ್ರಿಕ ಕುಶಲತೆ, ಲಾಲಿತ್ಯ, ನಯನಾಜೂಕು ರೇಖಾವಿನ್ಯಾಸ ಮುಂತಾದವು ಎದ್ದು ಕಾಣುತ್ತವೆ.

ಢಾಕಾ ವಸ್ತುಸಂಗ್ರಹಾಲಯದಲ್ಲಿರುವ ಲಕ್ಷ್ಮಣಕಲೆಯ ವಿಷ್ಣುವಿಗ್ರಹ ಪಾಲಶೈಲಿಯ ಒಂದು ಪ್ರಾಚೀನ ಶಿಲ್ಪ. ಗರುಡಾರೂಢನಾಗಿರುವ ವಿಷ್ಣು ತನ್ನ ಎರಡು ಬಾಹುಗಳಲ್ಲಿ ಶ್ರೀ ಮತ್ತು ಸರಸ್ವತಿಯರನ್ನು ಹಿಡಿದಿದ್ದಾನೆ. ಸರಸ್ವತಿಯ ಕೈಯ್ಯಲ್ಲಿ ಹಾರ್ಪ್ ಮಾದರಿಯ ವೀಣೆಯಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಆರ್ಧನಾರೀಶ್ವರ ವಿಗ್ರಹವೂ ಇದೆ. ಅದರ ಬಲಗಡೆ ಊಧ್ರ್ವಲಿಂಗವಿರುವುದೊಂದು ವಿಶೇಷ. ಕಲ್ಯಾಣ ಸುಂದರ ಮೂರ್ತಿಯೆಂದು ಹೇಳಲಾದ ಶಿಲ್ಪದಲ್ಲಿ ಶಿವಪಾರ್ವತಿಯರು ಸಪ್ತಪದಿಯಿಡುತ್ತಿರುವ ದೃಶ್ಯವನ್ನು ಕಡೆಯಲಾಗಿದೆ. ಮಹಾಮಾಯಾ, ಸದ್ಯೋಜಾತ, ನರ್ತೇಶ್ವರ ಮುಂತಾದ ಶೈವಶಿಲ್ಪಗಳೂ ಗಮನಾರ್ಹ. ಸಂಕರ ಬಂಧದಲ್ಲಿ ನರ್ತೇಶ್ವರನ ಶಿಲ್ಪ ದೊರಕಿದೆ. ಅವನು ನಂದಿಯ ಮೇಲೆ ನೃತ್ಯ ಮಾಡುತ್ತಿರುವಂತೆ ಇಲ್ಲಿ ಶಿಲ್ಪಿಸಲಾಗಿದೆ. ಗಂಗೆ ಉಮೆಯರು ಆಚೀಚೆ ನಿಂತು ಚೌರಿ ಬೀಸುತ್ತಿದ್ದಾರೆ. ಈ ನೃತ್ಯವನ್ನು ಅಪ್ಸರೆಯರು, ಗಂಧರ್ವರು ಅವಲೋಕಿಸುತ್ತಿದ್ದಾರೆ. ಇದು ಪೂರ್ವಭಾರತದಲ್ಲೇ ವೈಶಿಷ್ಟ್ಯ ಪೂರ್ಣವಾದ ನೃತ್ಯ ಶಿವಶಿಲ್ಪ. ವೀಣಾಧಾರಿ ನಟರಾಜನ ಶಿಲ್ಪವೊಂದು ಬಲಬದಿಯಲ್ಲಿದೆ. ಆಶುತೋಷ್ ಮತ್ತು ರಾಜಷಾಹಿ ವಸ್ತುಸಂಗ್ರಹಾಲಯಗಳಲ್ಲಿರುವ ರಥಾರೂಢ ಸೂರ್ಯನ ವಿಗ್ರಹ, ಜೈಪುರದ (ಬಂಕುರಾ ಜಿಲ್ಲೆ) ದೇಗುಲದ ಭಿತ್ತಿ ಭಾಗದಲ್ಲಿರುವ ಶೇಷಶಾಹಿ ವಿಷ್ಣುವಿಗ್ರಹ, ವಿಷ್ಣುವಿನ ಮತ್ಸ್ಯಾವತಾರ ಶಿಲ್ಪ ಮುಂತಾದವು ಉಲ್ಲೇಖಾರ್ಹ.

ನಾಲಂದ ಪಾಲರ ಕಲಾಕೇಂದ್ರವಾಗಿತ್ತು. ಇಲ್ಲಿ ಗಾರಚ್ಚಿನ ಸುಂದರವಾದ ವಿಗ್ರಹಗಳು ದೊರೆತಿವೆ. ಭಿಕ್ಷಾಪಾತ್ರೆ ಹಿಡಿದು ಯಶೋಧರೆಯ ಮುಂದೆ ನಿಂತ ಬುದ್ಧನ ವಿಗ್ರಹ ಮುಖ್ಯವಾದ್ದು. ಹೆಂಡತಿ ಮತ್ತು ಮಗನತ್ತ ಚೆಲ್ಲಿದ ಅನುಕಂಪದ ನೋಟದಿಂದ ಕೂಡಿದ ಈ ಚಿತ್ರ ಅಜಂತದ ಜಗದ್ವಿಖ್ಯಾತ ಬುದ್ಧನ ಚಿತ್ರವನ್ನು ನೆನಪಿಗೆ ತರುತ್ತದೆ. ನಾಲಂದದಲ್ಲಿ ದೊರೆತ ಅವಲೋಕೀತೇಶ್ವರ ಪದ್ಮಪಾಣಿ ವಿಗ್ರಹ ಸೊಗಸಾಗಿದೆ. ಇದನ್ನೀಗ ದೆಹಲಿಯ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿಡಲಾಗಿದೆ. ಈ ವಿಗ್ರಹದಲ್ಲಿ ಎದ್ದು ಕಾಣುವ ಮುಖಕಾಂತಿ, ಲಾವಣ್ಯ, ನಿಲುವು, ವಸ್ತ್ರದ ನಿರಿಗೆ ಎಲ್ಲವೂ ಮನೋಹರವಾಗಿವೆ. ಪಾಲಶೈಲಿಯ ಕೆಲವು ಜೈನ ತೀರ್ಥಂಕರ ವಿಗ್ರಹಗಳು ದೊರಕಿವೆ. ಅವನ್ನೀಗ ಇಂಡಿಯನ್ ಮ್ಯೂಸಿಯಮ್‍ನಲ್ಲಿಡಲಾಗಿದೆ.

ಪಾಲರ ಲೋಹಶಿಲ್ಪಗಳು ಖ್ಯಾತಿ ಪಡೆದಿವೆ. ಚಂಡರ್‍ಗಾಂವ್‍ನಲ್ಲಿ ದೊರೆತ ಚಂಡಿ ವಿಗ್ರಹ ಇವುಗಳ ಪೈಕ್ ಪ್ರಾಚೀನತನವಾದ್ದು. ರಾಣಿ ಪ್ರಭಾವತಿ ದೇವಿಯ ಶಾಸನವನ್ನೊಳಗೊಂಡ ಈ ವಿಗ್ರಹ ಎಂಟನೆಯ ಶತಮಾನದ್ದೆಂದು ಹೇಳಲಾಗಿದೆ. ದೇವಪಾಲನ ಕಾಲದಲ್ಲಿ ಹಲವು ಉತ್ತಮ ಲೋಹಶಿಲ್ಪಗಳನ್ನು ತಯಾರಿಸಿದಂತೆ ತಿಳಿದುಬರುತ್ತದೆ. ಬಾರಿಸಾಲ್‍ನಲ್ಲಿ ದೊರೆತ ಲೋಕೇಶ್ವರ ವಿಗ್ರಹ, ಕಮಲದ ಮೇಲೆ ನಿಂತಿರುವ ಹೃಷಿಕೇಶನ ಶಿಲ್ಪ ಮುಂತಾದವನ್ನು ಹೆಸರಿಸಬೇಕು. ದೆಹಲಿಯ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಇಟ್ಟಿರುವ, ಬುದ್ಧ ಜನನವನ್ನು ನಿರೂಪಿಸುವ, ಲೋಹಶಿಲ್ಪ ಗಮನಾರ್ಹ. ಪಾಲಶೈಲಿಯಲ್ಲಿ ಬಹಳ ಜನಪ್ರಿಯವಾಗಿರುವ ಹರಗೌರಿ ಲೋಹಶಿಲ್ಪ ಬಾಸ್ಟನ್ ವಸ್ತುಸಂಗ್ರಹಾಲಯದಲ್ಲಿದೆ. ಕುರ್ಕಿಹರದ ಕಂಚುಶಿಲ್ಪಗಳು ಪಾಲಶೈಲಿಯಲ್ಲಿ ಪ್ರಸಿದ್ಧವಾದವು. ತಾರಾ, ಬುದ್ಧ, ಹರಗೌರಿ ಮುಂತಾದ ಲೋಹಶಿಲ್ಪಗಳನ್ನು ಇಲ್ಲಿ ಉದಾಹರಿಸಬಹುದು. ನಾಲಂದ ವಸ್ತುಸಂಗ್ರಹಾಲಯದಲ್ಲಿ ಇಟ್ಟಿರುವ ಪ್ರಾಚೀನ ವಿಷ್ಣುವಿಗ್ರಹಕ್ಕೆ ಸಂಬಂಧಿಸಿದಂತೆ ಆಯುಧ ಪುರುಷರನ್ನೂ ಚಿತ್ರಿಸಲಾಗಿದೆ. ಇದರ ಪ್ರಭಾವಳಿಯ ಮೇಲೆ ಇತರ ವಿಗ್ರಹಗಳನ್ನು ಕೆತ್ತಲಾಗಿದೆ. ಈ ವಿಗ್ರಹವನ್ನು ಯುದ್ಧದ ಕಾಣಿಕೆಯಾಗಿ ಗಂಗೈಕೊಂಡ ರಾಜೇಂದ್ರ ಚೋಳ ತಂದು ಚಿದಂಬರಂ ಬಳಿಯ ಶಿವಾಲಯದಲ್ಲಿಟ್ಟಂತೆ ತಿಳಿದುಬರುತ್ತದೆ.

ಚಿತ್ರಕಲೆ[ಬದಲಾಯಿಸಿ]

ಭಾರತೀಯ ಚಿಕಣಿ ಚಿತ್ರ ಕಲಾಪರಂಪರೆಗೆ ಪಾಲರ ಕೊಡುಗೆ ಗಮನಾರ್ಹ. ತಾಳೆಗರಿ ಪ್ರತಿಗಳಲ್ಲಿ ಕಂಡುಬರುವ ಸೊಗಸಾದ ಚಿತ್ರಗಳು ನಿದರ್ಶನಗಳು. ಕೇಂಬ್ರಿಜ್ ವಿಶ್ವವಿದ್ಯಾಲಯದ ವಾಚನಾಲಯದಲ್ಲಿ ಇಟ್ಟಿರುವ ಅಷ್ಟಸಾಹಸ್ರಿಕ ಪ್ರಜ್ಞಾಪಾರಮಿತಾ ಪಂಚರಕ್ಷ ಎಂಬ ಹಸ್ತಪ್ರತಿಯಲ್ಲಿ ಐವತ್ತೊಂದು ಚಿಕಣಿ ಚಿತ್ರಗಳಿವೆ. ಇವುಗಳಲ್ಲಿ ಹಲವು ಬೌದ್ಧ ದೇವದೇವತೆಗಳ ಚಿತ್ರಗಳು. ಸುಮಾರು ಹನ್ನೊಂದನೆಯ ಶತಮಾನದವೆಂದು ಹೇಳಲಾದ ಈ ಚಿತ್ರಗಳಲ್ಲಿ ಸಮಕಾಲೀನ ನೇಪಾಳಿ ಚಿತ್ರಗಳಲ್ಲಿ ಕಂಡುಬರುವ ತಾಂತ್ರಿಕ ಶೈಲಿ ಎದ್ದು ಕಾಣುತ್ತದೆ. ಗಂಧವ್ಯೂಹ, ಸಾಧನಮೂಲ ಮುಂತಾದ ಕೃತಿಗಳಲ್ಲೂ ಪಾಲರ ವರ್ಣಚಿತ್ರಗಳಿವೆ. ಬುದ್ಧನ ಜೀವನ ಚಿತ್ರಣ, ಜಾತಕ ಕಥೆ ಮುಂತಾದುವು ಇವುಗಳಲ್ಲಿ ಚಿತ್ರಿತವಾಗಿವೆ.

ಮೃಣ್ಮೂರ್ತಿಗಳು[ಬದಲಾಯಿಸಿ]

ಶಿಲಾಸಂಪತ್ತು ಹೇರಳವಾಗಿರುವ ಬಂಗಾಲದಲ್ಲಿ ಮೃಣ್ಮೂರ್ತಿಕಲೆ ವಿಶೇಷವಾಗಿ ಬೆಳೆದುಬಂತು. ವಾಸ್ತುಕೃತಿಗಳಲ್ಲಿ ಕೂಡ ಮೃಣ್ಮೂರ್ತಿಗಳನ್ನು ಜೋಡಿಸಲಾಗಿದೆ. ಪಹಾಡ್‍ಪುರದ ಅಮೋಘವಾದ ಸ್ಥೂಪವನ್ನು ಹಲವು ಮೃತ್‍ಫಲಕಗಳಿಂದ ಅಲಂಕರಿಸಲಾಗಿದೆ. ಬಂಕುರಾದಲ್ಲಿರುವ ಸಿದ್ಧೇಶ್ವರ ದೇಗುಲದಲ್ಲಿ ಭಾಗವತಕ್ಕೆ ಸಂಬಂಧಿಸಿದ ದೃಶ್ಯಗಳನ್ನು ನಿರೂಪಿಸುವ ಮೃಣ್‍ಮೂರ್ತಿಗಳಿವೆ. ಇವೆಲ್ಲವೂ ಪಾಲರ ಆಳ್ವಿಕೆಯ ಕಾಲದ ಸಾಂಸ್ಕøತಿಕ ಹಿರಿಮೆಯನ್ನು, ಕಲಾಪರಂಪರೆಯನ್ನು ಸಮರ್ಥವಾಗಿ ನಿರೂಪಿಸಲಾಗಿದೆ.

ಗ್ರಂಥಸೂಚಿ[ಬದಲಾಯಿಸಿ]

  • Bagchi, Jhunu (1993). The History and Culture of the Pālas of Bengal and Bihar, Cir. 750 A.D.–cir. 1200 A.D. Abhinav Publications. ISBN 978-81-7017-301-4.
  • Craven, Roy C., Indian Art: A Concise History, 1987, Thames & Hudson (Praeger in USA), ISBN 0500201463
  • Harle, J. C., The Art and Architecture of the Indian Subcontinent, 2nd edn. 1994, Yale University Press. (Pelican History of Art), ISBN 0300062176
  • Huntington, Susan L. (1984). The "Påala-Sena" Schools of Sculpture. Brill Archive. ISBN 90-04-06856-2.
  • Paul, Pramode Lal (1939). The Early History of Bengal. Indian History. Vol. 1. Indian Research Institute. Archived from the original on 17 August 2016. Retrieved 28 March 2014.
  • Sengupta, Nitish K. (2011). Land of Two Rivers: A History of Bengal from the Mahabharata to Mujib. Penguin Books India. pp. 39–49. ISBN 978-0-14-341678-4.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: