ವಿಷಯಕ್ಕೆ ಹೋಗು

ಬುಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬುಧ ☿

ಕಕ್ಷೆಯ ಗುಣಗಳು
ದೀರ್ಘಾರ್ಧ ಅಕ್ಷ ೫೭,೯೦೯,೧೭೬ ಕಿ.ಮೀ.
೦.೩೮೭ ೦೯೮ ೯೩ ಖ.ಮಾ
ಕಕ್ಷೆಯ ಪರಿಧಿ ೩೬೦,೦೦೦,೦೦೦ ಕಿ.ಮೀ.
(೨.೪೦೬ ಖ.ಮಾ.)
ಕಕ್ಷೀಯ ಕೇಂದ್ರ ಚ್ಯುತಿ ೦.೨೦೫ ೬೩೦ ೬೯
ಪುರರವಿ ೪೬,೦೦೧,೨೭೨ ಕಿ.ಮೀ.
೦.೩೦೭ ೪೯೯ ೫೧ ಖ.ಮಾ.
ಅಪರವಿ ೬೯,೮೧೭,೦೭೯ ಕಿ.ಮೀ.
೦.೪೬೬ ೬೯೮ ೩೫ ಖ.ಮಾ.
ಕಕ್ಷೀಯ ಪರಿಭ್ರಮಣ ಕಾಲ ೮೭.೯೬೯ ೩೪ ದಿನ
(೦.೨೪೦ ೮೪೬ ೯ a)
ಯುತಿ ಅವಧಿ ೧೧೫.೮೭೭೬ ದಿನಗಳು
ಸರಾಸರಿ ಕಕ್ಷಾ ವೇಗ ೪೭.೩೬ km/s
ಗರಿಷ್ಠ ಕಕ್ಷಾ ವೇಗ ೫೮.೯೮ km/s
ಕನಿಷ್ಠ ಕಕ್ಷಾ ವೇಗ ೩೮.೮೬ km/s
ಓರೆ ೭.೦೦೪ ೮೭°
(ಸೂರ್ಯನ ಸಮಭಾಜಕ ರೇಖೆಗೆ ೩.೩೮°)
ಆರೋಹಣ ಸಂಪಾತದ ರೇಖಾಂಶ ೪೮.೩೩೧ ೬೭°
ಪುರರವಿಯ ಕೋನಭಾಗ ೨೯.೧೨೪ ೭೮°
ನೈಸರ್ಗಿಕ ಉಪಗ್ರಹಗಳ ಸಂಖ್ಯೆ
ಭೌತಿಕ ಗುಣಲಕ್ಷಣಗಳು
ಸಮಭಾಜಕ ರೇಖೆಯ ವ್ಯಾಸ ೪೮೭೯.೪ ಕಿ.ಮೀ.
(ಭೂಮಿಯ ೩೮.೩%)
ಮೇಲ್ಮೈ ವಿಸ್ತೀರ್ಣ ೭.೫×೧೦ ಕಿ.ಮೀ.
(ಭೂಮಿಯ ೧೪.೭%)
ಗಾತ್ರ ೬.೦೮೩×೧೦೧೦ ಕಿ.ಮೀ.
(ಭೂಮಿಯ ೫.೬%)
ದ್ರವ್ಯರಾಶಿ ೩.೩೦೨×೧೦೨೩ ಕಿ.ಗ್ರಾಂ.
(ಭೂಮಿಯ ೫.೫%)
ಸರಾಸರಿ ಸಾಂದ್ರತೆ ೫.೪೨೭ ಗ್ರಾಂ/ಸೆಂ.ಮೀ
ಸಮಭಾಜಕದ ಬಳಿ ಗುರುತ್ವ ೩.೭೦೧ ಮೀ./ಕ್ಷ
(೦.೩೭೭ g)
ಮುಕ್ತಿ ವೇಗ ೪.೪೩೫ ಕಿ.ಮೀ./ಪ್ರತಿ ಕ್ಷಣ
ಅಕ್ಷೀಯ ಪರಿಭ್ರಮಣ ಕಾಲ ೫೮.೬೪೬೨ d (೫೮ ದಿನ ೧೫.೫೦೮೮ ಘಂ)
ಅಕ್ಷೀಯ ಪರಿಭ್ರಮಣ ವೇಗ ೧೦.೮೯೨ ಕಿ.ಮೀ./ಘಂ. (ಸಮಭಾಜಕದಲ್ಲಿ)
ಅಕ್ಷದ ಓರೆ ~೦.೦೧°
ಉತ್ತರ ಧ್ರುವದ
ವಿಷುವದಂಶ
೨೮೧.೦೧° (೧೮ ಘಂ ೪೪ ನಿ ೨ ಕ್ಷ) 1
ಕ್ರಾಂತಿ ೬೧.೪೫°
ಪ್ರತಿಫಲನಾಂಶ ೦.೧೦-೦.೧೨
ಮೇಲ್ಮೈ ತಾಪಮಾನ
 (೦°ಉ,೦°ಪ)
 (೮೫°ಉ,೦°ಪ)
ಕನಿಷ್ಠ ಸರಾಸರಿ ಗರಿಷ್ಠ
೧೦೦ K ೩೪೦ K ೭೦೦ K
೮೦ K ೨೦೦ K ೩೮೦ K
Adjective Mercurian
ವಾಯುಮಂಡಲದ ಗುಣಲಕ್ಷಣಗಳು
ವಾತಾವರಣದ ಒತ್ತಡ trace
ಪೊಟಾಷಿಯಂ ೩೧.೭%
ಸೋಡಿಯಂ ೨೪.೯%
ಮೂಲ ಆಮ್ಲಜನಕ ೯.೫%
ಆರ್ಗಾನ್ ೭.೦%
ಹೀಲಿಯಂ ೫.೯%
ಆಮ್ಲಜನಕ ೫.೬%
ಸಾರಜನಕ ೫.೨%
ಇಂಗಾಲದ ಡೈ-ಆಕ್ಸೈಡ್ ೩.೬%
ನೀರು ೩.೪%
ಜಲಜನಕ ೩.೨%

ಬುಧ - ಸೂರ್ಯನಿಗೆ ಅತ್ಯಂತ ಸಮೀಪವಾದ ಮತ್ತು ಸೌರಮಂಡಲದಲ್ಲಿ ಅತಿ ಸಣ್ಣದಾದ ಗ್ರಹವಾದ ಬುಧವು ಸೂರ್ಯನ ಸುತ್ತ ಪ್ರತಿ ೮೮ ದಿನಗಳಿಗೊಮ್ಮೆ ಪ್ರದಕ್ಷಿಣೆ ಹಾಕುತ್ತದೆ. ಸಾಮೀಪ್ಯತೆಯ ಕಾರಣದಿಂದಾಗಿ ಸೂರ್ಯನ ಪ್ರಖರತೆಯು ಬುಧವನ್ನು ಸ್ಪಷ್ಟವಾಗಿ ಕಾಣದಿರುವಂತೆ ಮಾಡುತ್ತದೆ. ಬುಧದ ಗೋಚರ ಪ್ರಮಾಣವು −೨.೦ ರಿಂದ ೫.೫ ವರೆಗೆ ಇದ್ದರೂ, ನಸುಕಿನಲ್ಲಿ ಮಾತ್ರ ಇದನ್ನು ಬರಿಗಣ್ಣಿನಿಂದ ನೋಡಬಹುದು. ಬುಧಗ್ರಹದ ಬಗ್ಗೆ ಇದುವರೆಗೂ ಬಹಳಷ್ಟು ತಿಳಿದುಬಂದಿಲ್ಲ: ಬುಧವನ್ನು ಸಮೀಪಿಸಿದ ಒಂದೇ ಒಂದು ನೌಕೆಯೆಂದರೆ ೧೯೭೪ ಮತ್ತು ೧೯೭೫ ರಲ್ಲಿ ಬುಧದ ಮೇಲ್ಮೈನ ೪೦-೫೦% ಭಾಗದ ನಕ್ಷೆಯನ್ನು ತಯಾರಿಸಿದ ಮ್ಯಾರಿನರ್ ೧೦.

ಅಪ್ಪಳಿಕೆ ಕುಳಿಗಳಿರುವ ಕಾರಣ, ಬುಧವು ಹೊರಗಿನಿಂದ ನೋಡುವುದಕ್ಕೆ ನಮ್ಮ ಚಂದ್ರನಂತೆಯೇ ಇದೆ. ಬುಧಕ್ಕೆ ಯಾವುದೇ ನೈಸರ್ಗಿಕ ಉಪಗ್ರಹಗಳಿಲ್ಲ ಮತ್ತು ಗಮನಾರ್ಹವಾದ ವಾಯುಮಂಡಲವೂ ಇಲ್ಲ. ಈ ಗ್ರಹದ ಒಳಭಾಗದಲ್ಲಿ ಕಬ್ಬಿಣದ ದೊಡ್ಡದೊಂದು ವಲಯವಿದೆ. ಭೂಮಿಯ ಕಾಂತಕ್ಷೇತ್ರದ ೧%ರಷ್ಟು ಶಕ್ತಿಯುಳ್ಳ ಕಾಂತಕ್ಷೇತ್ರವನ್ನು ಈ ಕಬ್ಬಿಣದ ವಲಯವು ಬುಧದ ಮೇಲೆ ಉಂಟುಮಾಡುತ್ತದೆ. ಬುಧದ ಮೇಲ್ಮೈ ತಾಪಮಾನವು -೧೮೦ ರಿಂದ ೪೩೦°ಸೆ. ವ್ಯಾಪ್ತಿಯಲ್ಲಿರುತ್ತದೆ. ಸೂರ್ಯನಿಗೆ ನೇರವಾಗಿ ಕೆಳಗಿರುವ ಬಿಂದುವು (subsolar point) ಅತ್ಯಂತ ಬಿಸಿಯಾಗಿರುತ್ತದೆ ಹಾಗೂ ಧ್ರುವಗಳ ಬಳಿಯಿರುವ ಕುಳಿಗಳ ಕೆಳಭಾಗಗಳು ಬೇರೆಲ್ಲೆಡೆಗಳಿಗಿಂತ ತಣ್ಣಗಿರುತ್ತವೆ.

ಪ್ರಾಚೀನ ರೋಮನ್ನರು ವೇಗವಾಗಿ ಚಲಿಸುವ ರೋಮನ್ ದೇವತೆಯಾದ ಮರ್ಕ್ಯೂರಿಯ ಆಧಾರದ ಮೇಲೆ ಈ ಗ್ರಹಕ್ಕೆ ಹೆಸರಿಟ್ಟರು (ಬಹುಶಃ ಬುಧವು ಸೂರ್ಯನ ಸುತ್ತ ವೇಗವಾಗಿ ಚಲಿಸುವ ಕಾರಣದಿಂದಾಗಿ). ಕ್ರಿ.ಪೂ. ೫ನೇ ಶತಮಾನಕ್ಕೆ ಮುನ್ನ ಗ್ರೀಕ್ ಖಗೋಳಶಾಸ್ತ್ರಜ್ಞರು ಬುಧವನ್ನು ಎರಡು ಪ್ರತ್ಯೇಕವಾದ ಕಾಯಗಳೆಂದು ನಂಬಿದ್ದರು. ಇವುಗಳಲ್ಲಿ ಒಂದು ಕಾಯವು ಸೂರ್ಯೋದಯದ ಹೊತ್ತಿನಲ್ಲಿ ಮಾತ್ರ ಕಾಣಿಸುತ್ತದೆ ಮತ್ತು ಇನ್ನೊಂದು ಸೂರ್ಯಾಸ್ತದ ಹೊತ್ತಿನಲ್ಲಿ ಮಾತ್ರ ಕಾಣಿಸುತ್ತದೆ ಎಂದು ಅವರ ನಂಬಿಕೆಯಾಗಿತ್ತು. ಭಾರತದಲ್ಲಿ ಈ ಗ್ರಹಕ್ಕೆ ಚಂದ್ರನ ಮಗನಾದ ಬುಧನ ಹೆಸರನ್ನು ಇಡಲಾಗಿದೆ. ಚೀನಾ, ಕೊರಿಯಾ, ಜಪಾನ್ ಮತ್ತು ವಿಯತ್‌ನಾಮ್ ಸಂಸ್ಕೃತಿಗಳಲ್ಲಿ ಬುಧವನ್ನು ಜಲ ನಕ್ಷತ್ರ ಎಂದು ಕರೆಯಲಾಗುತ್ತದೆ. ಪಂಚಭೂತಗಳ ಆಧಾರದ ಮೇಲೆ ಈ ಹೆಸರನ್ನು ಇಡಲಾಯಿತು ಎನ್ನಲಾಗಿದೆ. ಯೆಹೂದಿಗಳು ಇದನ್ನು ಬಿಸಿಕಾಯದ ನಕ್ಷತ್ರವೆಂದು ಕರೆದರು (ಇಲ್ಲಿ ಬಿಸಿಕಾಯವು ಸೂರ್ಯನನ್ನು ಸೂಚಿಸುತ್ತದೆ).

ಸೌರಮಂಡಲದಲ್ಲಿರುವ ೪ ಘನರೂಪಿ ಗ್ರಹಗಳಲ್ಲಿ ಬುಧವೂ ಒಂದು. ಅರ್ಥಾತ್: ಭೂಮಿಯಂತೆಯೇ ಬುಧವು ಶಿಲೆ/ಖನಿಜಗಳಿಂದ ರಚಿತವಾಗಿದೆ. ಸಮಭಾಜಕದಲ್ಲಿ ೪೮೭೯ಕಿ.ಮೀ. ವ್ಯಾಸವನ್ನು ಹೊಂದಿರುವ ಬುಧವು ಈ ೪ ಘನರೂಪಿಗಳಲ್ಲಿ ಅತಿ ಸಣ್ಣದಾಗಿದೆ. ಬುಧವು ೭೦% ಲೋಹ ಮತ್ತು ೩೦% ಸಿಲಿಕೇಟ್ ವಸ್ತುಗಳನ್ನು ಒಳಗೊಂಡಿದೆ. ಪ್ರತಿ ಘನ ಸೆಂ.ಮೀ. ಗೆ ೫.೪೩ ಗ್ರಾಂ ಪ್ರಮಾಣದಲ್ಲಿ ಬುಧವು ಸೌರಮಂಡಲದಲ್ಲಿ ಎರಡನೇ ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ಗ್ರಹವಾಗಿದೆ. ಇದು ಭೂಮಿಯ ಸಾಂದ್ರತೆಗಿಂತ ಸ್ವಲ್ಪವೇ ಕಡಿಮೆಯಿದೆ. ಗುರುತ್ವ ಸಂಕ್ಷೇಪಣೆಗೆ ತಿದ್ದುಪಡಿ ಮಾಡಿದಾಗ ಬುಧವು ಭೂಮಿಗಿಂತ ಹೆಚ್ಚು ಸಾಂದ್ರತೆ ಹೊಂದಿರುವುದು ಕಂಡುಬರುತ್ತದೆ (ಬುಧದ ಅಸಂಕ್ಷೇಪಿತ ಸಾಂದ್ರತೆ: ೫.೩ಗ್ರಾಂ/ಪ್ರತಿ ಘನ ಸೆಂ.ಮೀ. ಮತ್ತು ಭೂಮಿಯ ಸಾಂದ್ರತೆ ೪.೪ಗ್ರಾಂ/ಪ್ರತಿ ಘನ ಸೆಂ.ಮೀ.[]

ಆಂತರಿಕ ರಚನೆ: ಒಳಭಾಗ, ನಡುಭಾಗ ಮತ್ತು ಮೇಲ್ಪದರ

[ಬದಲಾಯಿಸಿ]
ಬುಧದ ದೊಡ್ಡ ಒಳಭಾಗದ ಚಿತ್ರ

ಬುಧದ ಹೆಚ್ಚು ಪ್ರಮಾಣದ ಸಾಂದ್ರತೆಯಿಂದ ಅದರ ಆಂತರಿಕ ರಚನಾ ವಿವರಗಳನ್ನು ತಾರ್ಕಿಸಬಹುದು. ಭೂಮಿಯ ಅಧಿಕ ಸಾಂದ್ರತೆಗೆ ಸ್ವಲ್ಪಮಟ್ಟಿಗೆ ಕಾರಣ ಭೂಮಿಯ ಒಳಭಾಗದಲ್ಲಿ ಸಂಕ್ಷೇಪಣೆ. ಆದರೆ, ಬುಧವು ಭೂಮಿಗಿಂತ ಬಹಳ ಚಿಕ್ಕದು ಹಾಗೂ ಅದರ ಒಳಭಾಗವು ಭೂಮಿಯಷ್ಟು ಇಕ್ಕಟ್ಟಿನಿಂದ ಕೂಡಿಲ್ಲ. ಈ ಕಾರಣದಿಂದ, ಬುಧಕ್ಕೆ ಅಷ್ಟು ಹೆಚ್ಚು ಸಾಂದ್ರತೆ ಬರಲು ಅದರ ಒಳಭಾಗವು ದೊಡ್ಡದಾಗಿ ಹಾಗೂ ಕಬ್ಬಿಣದಿಂದ ಸಮೃದ್ಧವಾಗಿರಬೇಕು[]. ಭೂವಿಜ್ಞಾನಿಗಳ ಅಂದಾಜಿನ ಪ್ರಕಾರ ಬುಧದ ಒಳಭಾಗವು ಅದರ ೪೨%ರಷ್ಟು ಗಾತ್ರವನ್ನು ವ್ಯಾಪಿಸುತ್ತದೆ (ಭೂಮಿಯ ಒಳಭಾಗವು ಭೂಮಿಯ ಬರೀ ೧೭%ಗಾತ್ರವನ್ನು ವ್ಯಾಪಿಸುತ್ತದೆ).

ಬುಧದ ಒಳಭಾಗವನ್ನು ೬೦೦ಕಿ.ಮೀ. ದಪ್ಪವಿರುವ ಒಂದು ನಡುಭಾಗವು ಆವರಿಸಿದೆ. ಬುಧದ ಇತಿಹಾಸದ ಮೊದಲ ಭಾಗದಲ್ಲಿ ನೂರಾರು ಕಿ.ಮೀ. ಉದ್ದಗಲದ ಒಂದು ಆಕಾಶಕಾಯವು ಬುಧದ ಮೇಲೆ ಅಪ್ಪಳಿಸಿ, ಬುಧದ ನಡುಭಾಗದ ಮೂಲವಸ್ತುಗಳನ್ನು ಬಹುಮಟ್ಟಿಗೆ ನಾಶಪಡಿಸಿ, ಒಂದು ತೆಳುವಾದ ನಡುಭಾಗವನ್ನು ಬುಧದ ಮೇಲೆ ಬಿಟ್ಟುಹೋಯಿತೆಂದು ಎನ್ನಲಾಗಿದೆ.[] (ಪರ್ಯಾಯ ಸಿದ್ಧಾಂತ/ವಾದಗಳನ್ನು ಕೆಳಗೆ ಚರ್ಚಿಸಲಾಗಿದೆ).

ಬುಧದ ಮೇಲ್ಪದರವು ೧೦೦–೨೦೦ಕಿ.ಮೀ. ದಪ್ಪವಿದೆ ಎಂದು ನಂಬಲಾಗಿದೆ. ಬುಧದ ಮೇಲ್ಮೈನಲ್ಲಿ ಕಾಣಿಸುವ ಒಂದು ಬಹಳ ವಿಶಿಷ್ಟ್ರವಾದ ಲಕ್ಷಣವೆಂದರೆ ಹಲವಾರು ದಿಣ್ಣೆಯ ಸಾಲುಗಳು. ಇವುಗಳಲ್ಲಿ ಕೆಲವು ನೂರಾರು ಕಿ.ಮೀ.ಉದ್ದವಿವೆ. ಬುಧದ ಮೇಲ್ಮೈ ಘನೀಕೃತವಾದ ನಂತರ, ಒಳ ಮತ್ತು ನಡುಭಾಗಗಳು ತಣ್ಣಗಾಗುವ ಸಮಯದಲ್ಲಿ ಈ ದಿಣ್ಣೆಗಳು ರೂಪುಗೊಂಡವೆಂದು ನಂಬಲಾಗಿದೆ[]

ಸೌರಮಂಡಲದಲ್ಲಿರುವ ಬೇರಾವುದೇ ದೊಡ್ಡ ಗ್ರಹಕ್ಕಿಂತ ಬುಧದ ಮೇಲೆ ಅತ್ಯಧಿಕ ಕಬ್ಬಿಣಾಂಶವು ಕಂಡುಬರುತ್ತದೆ. ಬುಧದ ಈ ರೀತಿಯ ಅಧಿಕವಾದ ಲೋಹತ್ವವನ್ನು ವಿವರಿಸಲು ಹಲವಾರು ಸಿದ್ಧಾಂತಗಳನ್ನು ಪ್ರಸ್ತಾಪಿಸಲಾಗಿದೆ. ಇವುಗಳಲ್ಲಿ ಉದಾರವಾಗಿ ಒಪ್ಪಿಕೊಳ್ಳಲಾಗಿರುವ ಒಂದು ಸಿದ್ಧಾಂತದ ಪ್ರಕಾರ, ಬುಧವು ಆದಿಕಾಲದಲ್ಲಿ ಸಾಮಾನ್ಯ ಉಲ್ಕೆಗಳಲ್ಲಿ ಕಾಣಿಸುವಷ್ಟೇ ಅನುಪಾತದಲ್ಲಿ ಲೋಹ-ಸಿಲಿಕೇಟ್‌ಗಳನ್ನೊಳಗೊಂಡಿತ್ತು ಹಾಗೂ ಅದರ ದ್ರವ್ಯರಾಶಿಯು ಪ್ರಸ್ತುತದ ೨.೫ ಪಟ್ಟು ಹೆಚ್ಚು ಇತ್ತು; ಆದರೆ, ಸೌರಮಂಡಲದ ಇತಿಹಾಸದ ಮೊದಲ ಭಾಗದಲ್ಲಿ, ಬುಧದ ೬ನೇ ೧ ಪಾಲು ದ್ರವ್ಯರಾಶಿಯುಳ್ಳ, ದೊಡ್ಡದೊಂದು ಆಕಾಶಕಾಯವು ಬುಧವನ್ನು ಅಪ್ಪಳಿಸಿತು. ಈ ಅಪ್ಪಳಿಕೆಯು ಬುಧದ ಮೇಲಿದ್ದ ಹೊರ ಮತ್ತು ನಡುಭಾಗಗಳನ್ನು ಬಹಳಷ್ಟು ನಾಶಮಾಡಿ ಒಳಭಾಗವನ್ನು ಬಿಟ್ಟಿದೆ.[] ಭೂಮಿಯ ಚಂದ್ರನ ನಿರ್ಮಾಣವನ್ನು ವಿವರಿಸಲೂ ಇಂಥದೇ ಒಂದು ವಾದವನ್ನು ಪ್ರಸ್ತಾಪಿಸಲಾಗ್ಗಿದೆ (ಬೃಹತ್ ಅಪ್ಪಳಿಕೆ ವಾದವನ್ನು ನೋಡಿ).

ಪರ್ಯಾಯವಾಗಿ, ಸೂರ್ಯನ ಶಕ್ತಿಯ ಹೊರಸೂಸುವಿಕೆಯು ಸ್ಥಿರವಾಗುವುದಕ್ಕೆ ಮುನ್ನ ಸೌರ ಜ್ಯೋತಿಪಟಲದಿಂದ ಬುಧವು ಮೂಡಿದ್ದಿರಬಹುದು. ಆಗಿನ ಕಾಲದಲ್ಲಿ ಬುಧಕ್ಕೆ ಪ್ರಸ್ತುತದ ೨ರಷ್ಟು ದ್ರವ್ಯರಾಶಿ ಇದ್ದಿರುತ್ತಿತ್ತು. ಆದರೆ, ಹೊಸದಾಗಿ ರಚಿತವಾಗುತ್ತಿದ್ದ ಸೂರ್ಯನು ಮುದುಡಿ ಸಂಕ್ಷೇಪಿತವಾಗುತ್ತಿದ್ದಂತೆ, ಬುಧನ ಮೇಲ್ಮೈ ತಾಪಮಾನವು ೨೫೦೦ ರಿಂದ ೩೫೦೦ ಕೆಲ್ವಿನ್, ಅಥವಾ ೧೦೦೦೦ ಕೆಲ್ವಿನ್‌ನಷ್ಟೂ ಹೆಚ್ಚಾಗಿದ್ದಿರಬಹುದು. ಈ ತಾಪಮಾನಗಳಲ್ಲಿ ಬುಧದ ಮೇಲ್ಮೈಯಲ್ಲಿನ ಬಹಳಷ್ಟು ಶಿಲೆಗಳು ಸುಲಭವಾಗಿ ಇಂಗಿಹೋಗಿರುತ್ತಿದ್ದವು. ಈ ರೀತಿ ಇಂಗಿದ ಧೂಳನ್ನು ಸೌರ ಮಾರುತಗಳು ಬೀಸಿಕೊಂಡು ಹೋಗಿದ್ದಿರಬಹುದು.[]

ಇನ್ನೊಂದು ಸಿದ್ಧಾಂತದ ಪ್ರಕಾರ, ಬುಧವನ್ನು ರೂಪಿಸುತ್ತಿದ್ದ ಕಣಗಳ ಮೇಲೆ ಸೌರ ಮಾರುತವು ಸೆಳೆತವನ್ನುಂಟುಮಾಡಿ, ಹಗುರವಾದ ಕಣಗಳನ್ನು ಬುಧದಿಂದ ದೂರ ಕರೆದೊಯ್ದಿತು.[] ಈ ಪ್ರತಿಯೊಂದು ಸಿದ್ಧಾಂತವೂ ಬುಧದ ಮೇಲ್ಮೈನ ರಚನೆಯನ್ನು ವಿಭಿನ್ನವಾಗಿ ಮುನ್ಸೂಚಿಸುತ್ತದೆ. ಮುಂಬರುವ ಎರಡು ಯಾತ್ರೆಗಳಾದ MESSENGER ಮತ್ತು BepiColomboಗಳು ಈ ಸಿದ್ಧಾಂತಗಳನ್ನು ಪರೀಕ್ಷಿಸಲು ಬುಧ ವೀಕ್ಷಣೆಯನ್ನು ನಡೆಸುವ ಉದ್ದೇಶವನ್ನು ಹೊಂದಿವೆ.

ಮೇಲ್ಮೈ

[ಬದಲಾಯಿಸಿ]

ಬುಧದ ಮೇಲ್ಮೈ ನೋಡುವುದಕ್ಕೆ ನಮ್ಮ ಚಂದ್ರನ ಮೇಲ್ಮೈನಂತೆಯೇ ಇದೆ. ಚಂದ್ರನಂತೆ ಬುಧದ ಮೇಲೂ ಸಾಗರದಂಥ ಸಮತಳಗಳು ಕಂಡುಬರುತ್ತವೆ, ಮತ್ತು ಇವೆರಡರಲ್ಲೂ ವ್ಯಾಪಕವಾಗಿ ಕುಳಿಗಳು ಕಂಡುಬರುತ್ತವೆ. ಇವುಗಳು ಬುಧದ ಮೇಲ್ಮೈ ಕೋಟ್ಯಾಂತರ ವರ್ಷಗಳಿಂದ ಯಾವುದೇ ಚಟುವಟಿಕೆಯಿಲ್ಲದೆ ಸಿಷ್ಕ್ರಿಯವಾಗಿದೆಯೆಂದು ಸೂಚಿಸುತ್ತವೆ. ಬುಧದತ್ತ ಕೆಲವೇ ಹಾಗೂ ಮಾನವರಹಿತ ಯಾತ್ರೆಗಳು ನಡೆದಿರುವ ಕಾರಣ, ಅದರ ಭೂವಿಜ್ಞಾನವು ಬೇರೆ ಘನರೂಪಿ ಗ್ರಹಗಳ ಭೂವಿಜ್ಞಾನದಷ್ಟು ಅರ್ಥವಾಗಿಲ್ಲ. ಮೇಲ್ಮೈ ಲಕ್ಷಣಗಳಿಗೆ ಈ ಕೆಳಗಿನ ಹೆಸರುಗಳನ್ನು ಕೊಡಲಾಗಿದೆ:

ಬುಧವು ರೂಪುಗೊಂಡ ಮತ್ತು ತದನಂತರದಕಾಲದಲ್ಲಿ ಧೂಮಕೇತುಗಳು ಮತ್ತು ನಾಕ್ಷತ್ರಿಕ ಕಾಯಗಳು ಬುಧವನ್ನು ಭಾರಿ ಸಂಖ್ಯೆಯಲ್ಲಿ ಅಪ್ಪಳಿಸಿದವು. ಈ ರೀತಿಯಲ್ಲಿ ತೀವ್ರವಾದ ಕುಳಿ ನಿರ್ಮಾಣ ಕಾಲವು ಸುಮಾರು ೩೮ ಲಕ್ಷ ವರ್ಶಗಳ ಹಿಂದೆ ಕೊನೆಗೊಂಡಿತು. ಆಕಾಶಕಾಯಗಳನ್ನು ನಿಧಾನಗೊಳಿಸಲು ಬೇಕಾದ ವಾಯುಮಂಡಲವಿಲ್ಲದ ಕಾರಣ, ಈ ಕಾಲದಲ್ಲಿ ಬುಧದ ಮೇಲ್ಮೈ ಸಂಪೂರ್ಣವಾಗಿ ಕುಳಿಗಳಿಂದ ಆವೃತವಾಯಿತು. ಈ ಕಾಲದಲ್ಲಿ ಬುಧದ ಜ್ವಾಲಾಮುಖಿಗಳೂ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದವು; ಗ್ರಹದ ಒಳಗಿನಿಂದ ಹೊರಬಂದ ಶಿಲಾದ್ರವವು :en:Caloris Basinನಂಥ ಸಮತಳಗಳನ್ನು ತುಂಬಿಸಿ, ಚಂದ್ರನ ಮೇಲೆ ಕಾಣಿಸುವಂಥ ನಯವಾದ ಸಮತಳಗಳನ್ನು ನಿರ್ಮಿಸಿತು.

Mercury's en:Caloris Basin is one of the largest impact features in the Solar System.

ಬುಧದ ಕುಳಿಗಳ ವ್ಯಾಸವು ಕೆಲವೇ ಮೀ.ಗಳಿಂದ ಹಿಡಿದು ನೂರಾರು ಕಿ.ಮೀ. ಗಳ ವ್ಯಾಪ್ತಿಯಲ್ಲಿವೆ. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ೧೩೦೦ಕಿ.ಮೀ. ವ್ಯಾಸವಿರುವ Caloris Basin ಅತ್ಯಂತ ದೊಡ್ಡ ಕುಳಿಯಾಗಿದೆ. Caloris Basin ನನ್ನು ನಿರ್ಮಿಸಿದ ಅಪ್ಪಳಿಕೆಯು ಎಷ್ಟು ಪ್ರಬಲವಾಗಿತ್ತೆಂದರೆ, ಇದು ಅಪ್ಪಳಿಕೆ ಕುಳಿಗಿಂತ ೨ಕಿ.ಮೀ.ಯಷ್ಟು ಎತ್ತರದಲ್ಲಿ ಲಾವಾ ಉಂಗುರಗಳನ್ನು ಸೃಷ್ಟಿಸಿತು. Caloris Basin ನ ಕೆಳಗೆ "ವಿಚಿತ್ರ ಭೂಮಿ" ("Weird Terrain") ಎಂದು ಕರೆಯಲಾಗುವ ಉಬ್ಬುತಗ್ಗಿನ ಒಂದು ದೊಡ್ಡ ವಲಯವಿದೆ. ಸಾಮನ್ಯವಾಗಿ ಕಂಡುಬರದಿರುವ ಈ ಭೂಮಿಯ ಉಗಮವು, ಅಪ್ಪಳಿಕೆಯಿಂದುಂಟಾದ ಆಘಾತ ತರಂಗಗಳು ಗ್ರಹದ ಮೇಲ್ಮೈ ಸುತ್ತ ಚಲಿಸಿ ಪುನಃ Basinನ ಕೆಳಗೆ ಒಟ್ಟುಸೇರಿದಾಗ ಉಂಟಾದ ಒತ್ತಡದಿಂದ ಆಯಿತೆಂದು ಶಂದಿಸಲಾಗಿದೆ.[] ಪರ್ಯಾಯವಾಗಿ, ಈ ಉಬ್ಬುತಗ್ಗಿನ ಭೂಮಿಯು ಅಪ್ಪಳಿಕೆಯು ಹೊರಹಾಕಿದ ವಸ್ತುಗಳು ಪುನಃ ಒಂದೆಡೆ ಸೇರಿದಾಗ ನಿರ್ಮಿತವಾಯಿತೆಂದೂ ನಂಬಲಾಗಿದೆ.

The so-called "Weird Terrain" was formed by the en:Caloris Basin impact at its antipodal point.

ಬುಧದ ಸಮತಳಗಳು ಎರಡು ವಿಶಿಷ್ಟವಾದ ಬೇರೆ ಬೇರೆ ಕಾಲಗಳಲ್ಲಿ ಹುಟ್ಟಿದವು: ಈಚೆಗೆ ಸೃಷ್ಟಿಯಾದ ಸಮತಳಗಳಲ್ಲಿ ಹೆಚ್ಚಾಗಿ ಕುಳಿಗಳು ಕಾಣಿಸುವುದಿಲ್ಲ ಮತ್ತು ಇವುಗಳು ಬಹುಶಃ ಲಾವಾ ಪ್ರವಾಹವು ಮುಂಚೆಯಿದ್ದ ಮೇಲ್ಮೈಯನ್ನು ಮುಚ್ಚಿದಾಗ ನಿರ್ಮಿತವಾದವು. ಬುಧದ ಮೇಲ್ಮೈನ ಒಂದು ಅಪರೂಪದ ಲಕ್ಷಣವೆಂದರೆ ಸಮತಳಗಳ ಮೇಲೆ ಹೇರಳವಾಗಿ ಕಂಡುಬರುವ ಒತ್ತಡದಿಂದುಂಟಾದ ಮಡಿಕೆಗಳು. ಗ್ರಹದ ಒಳಭಾಗವು ತಣ್ಣಗಾಗುತ್ತಿದ್ದ ಸಮಯದಲ್ಲಿ ಸಂಕುಚಿಸಿ ಮೇಲ್ಮೈಯನ್ನೂ ಬಗ್ಗಿಸಿತು ಎಂದು ನಂಬಲಾಗಿದೆ. ಕುಳಿಗಳು, ಸಮತಳಗಳು, ಮತ್ತಿತರ ಲಕ್ಷಣಗಳ ಮೇಲೆ ಈ ಮಡಿಕೆಗಳು ಕಾಣಿಸುವುದರಿಂದ, ಇವು ಇತ್ತೀಚ್ಗೆ ಉಂಟಾದ ಮಡಿಕೆಗಳೆಂದು ತರ್ಕಿಸಬಹುದು.[] ಬುಧದ ಮೇಲ್ಮೈ ಬಗ್ಗುವುದಕ್ಕೆ ಸೂರ್ಯನ ಗುರುತ್ವ ಬಲದಿಂದುಂಟಾದ ಗಮನಾರ್ಹವಾದ ಉಬ್ಬರವಿಳಿತಗ್ಳೂ ಒಂದು ಕಾರಣ—ಬುಧದ ಮೇಲೆ ಸೂರ್ಯನ ಉಬ್ಬರವಿಳಿತ ಬಲವು ಭೂಮಿಯ ಮೇಲೆ ಚಂದ್ರನ ಉಬ್ಬರವಿಳಿತ ಬಲಕ್ಕಿಂತ ಸುಮಾರು ೧೭% ಅಧಿಕವಾಗಿರುತ್ತದೆ.[]

ಚಂದ್ರನಂತೆಯೇ ಬುಧದ ಮೇಲ್ಮೈ ಬಹುಶಃ ಸವೆತದ ಪರಿಣಾಮಗಳನ್ನು ಅನುಭವಿಸಿದೆ. ಸೌರ ಮಾರುತ ಮತ್ತು ಸೂಕ್ಷ್ಮ ಉಲ್ಕೆಗಳ ಧಾಳಿಯು ಪ್ರತಿಫಲನಾಂಶವನ್ನು ಕಪ್ಪಾಗಿಸಿ ಮೇಲ್ಮೈನ ಪ್ರತಿಫಲನ ಗುಣಗಳನ್ನು ಬದಲಾಯಿಸುತ್ತವೆ.

ಬುಧದ ಸರಾಸರಿ ಮೇಲ್ಮೈ ತಾಪಮಾನವು ೧೭೮.೯°ಸೆ.ಯಾದರೂ, ವಾಯುಮಂಡಲವಿಲ್ಲದ ಕಾರಣ, ಇಲ್ಲಿ ತಾಪಮಾನವು -೧೮೩.೨° ಯಿಂದ ೪೨೬.೯° ಸೆ. ವ್ಯಾಪ್ತಿಯಲ್ಲಿರುತ್ತದೆ. ಹೋಲಿಕೆಯಲ್ಲಿ, ಭೂಮಿಯ ಮೇಲೆ ತಾಪಮಾನವು ೧೫೦ ಕೆಲ್ವಿನ್‌ನಷ್ಟು ಮಾತ್ರ ಬದಲಾಗುತ್ತದೆ. ಬುಧನ ಮೇಲ್ಮೈ ಮೇಲೆ ಬೀಳುವ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುವುದಕ್ಕಿಂತ ೬.೫ ಪಟ್ಟು ಹೆಚ್ಚು ತೀಕ್ಷ್ಣವಾಗಿರುತ್ತದೆ. ಇಲ್ಲಿ ಸೌರ ಸ್ಥಿರದ ಪ್ರಮಾಣವು ಪ್ರತಿ ಚ.ಮೀ. ಗೆ ೯೧೩೦ ವ್ಯಾಟ್‌ಗಳು.

ಮೇಲ್ಮೈ ತಾಪಮಾನವು ಬಹಳ ಹೆಚ್ಚಾಗಿದ್ದರೂ, ಬುಧದ ಮೇಲೆ ಮಂಜಿನ ಅಸ್ತಿತ್ವವು ಅವಲೋಕನೆಗಳಿಂದ ತಿಳಿದುಬರುತ್ತದೆ. ಧ್ರುವಗಳ ಬಳಿಯಿರುವ ಕೆಲವು ಆಳವಾದ ಕುಳಿಗಳ ಕೆಳಭಾಗಗಳು ಎಂದೂ ಸೂರ್ಯಕಿರಣವನ್ನು ನೋಡುವುದೇ ಇಲ್ಲ. ಈ ಎಡೆಗಳಲ್ಲಿ ತಾಪಮಾನವು ಬುಧದ ಸರಾಸರಿ ತಾಪಮಾನಕ್ಕಿಂತ ಬಹಳ ಕಡಿಮೆಯಿರುತ್ತದೆ. ನೀರು ಮತ್ತು ಮಂಜು [[:en:radar|ರೆಡಾರ್] ಅಲೆಗಳನ್ನು ಚೆನ್ನಾಗಿ ಪ್ರತಿಫಲಿಸುತ್ತವೆ, ಹಾಗೂ ಧ್ರುವಗಳ ಬಳಿ ಅತಿ ಹೆಚ್ಚಿನ ರೆಡಾರ್ ಪ್ರತಿಫಲನವಿರುವುದು ಅವಲೋಕನೆಗಳಿಂದ ಕಂಡುಬರುತ್ತದೆ.[೧೦] ಈ ಪ್ರತಿಫಲನಕ್ಕೆ ಬೇರೆ ವಸ್ತುಗಳು ಕಾರಣವಿರಬಹುದಾದರೂ, ಮಂಜು ಇದಕ್ಕೆ ಹೆಚ್ಚಿನ ಸಂಭವನೀಯ ಕಾರಣವೆಂದು ಖಗೋಳಶಾಸ್ತ್ರಜ್ಞರು ನಂಬುತ್ತಾರೆ.

ಹಿಮಾವೃತ ವಲಯಗಳಲ್ಲಿ ಕೇವಲ ಕೆಲವೇ ಮೀಟರ್‌ಗಳ ದಪ್ಪನಾದ ಹಿಮವಿದೆ ಎಂದು ನಂಬಲಾಗಿದೆ. ಈ ವಲಯಗಳು ಒಟ್ಟಾಗಿ ಸುಮಾರು 1014–1015 ಕಿ.ಗ್ರಾಂ. ನೀರನ್ನು ಶೇಖರಿಸಿಟ್ಟುಕೊಂಡಿವೆ. ಹೋಲಿಕೆಯಲ್ಲಿ, ಭೂಮಿಯ ಅಂಟಾರ್ಕ್‌ಟಿಕ ಹಿಮಪ್ರದೇಶವು ಸುಮಾರು ೪ x ೧೦೧೮ ಕಿ.ಗ್ರಾಂ. ನಷ್ಟು ಹಾಗೂ ಮಂಗಳದ ಧ್ರುವ ಪ್ರದೇಶವು ಸುಮಾರು ೧೦೧೬ ಕಿ.ಗ್ರಾಂ. ನಷ್ಟು ನೀರನ್ನು ಹೊಂದಿವೆ. ಬುಧದ ಮೇಲಿರುವ ಹಿಮದ ಮೂಲವು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಆದರೆ, ಗ್ರಹದ ಒಳಭಾಗದಿಂದ ನೀರಿನ ಹೊರಸೂಸುವಿಕೆ, ಅಥವಾ ಧೂಮಕೇತುಗಳು ತಮ್ಮೊಡನೆ ತಂದ ನೀರು ಈ ಹಿಮದ ಮೂಲವಾಗಿರಬಹುದು.[೧೧]

ವಾಯುಮಂಡಲ

[ಬದಲಾಯಿಸಿ]
ಘನರೂಪಿ ಗ್ರಹಗಾತ್ರಗಳ ಹೋಲಿಕೆ (ಎಡದಿಂದ ಬಲಕ್ಕೆ): ಬುಧ, ಶುಕ್ರ, ಭೂಮಿ, ಮತ್ತು ಮಂಗಳ

ಬುಧವು ಸಣ್ಣ ಗ್ರಹವಾಗಿರುವುದರಿಂದ ಅದರ ಗುರುತ್ವವು ವಾಯುಮಂಡಲವನ್ನು ಗ್ರಹದ ಸುತ್ತ ಹಿಡಿದಿಟ್ಟುಕೊಳ್ಳುವಷ್ಟು ಸಬಲವಾಗಿಲ್ಲ; ವಿರಳವಾಗಿರುವ ಬುಧದ ವಾಯುಮಂಡಲದಲ್ಲಿ ಬುಧವು ಸಣ್ಣ ಗ್ರಹವಾಗಿರುವುದರಿಂದ ಅದರ ಗುರುತ್ವವು ವಾಯುಮಂಡಲವನ್ನು ಗ್ರಹದ ಸುತ್ತ ಹಿಡಿದಿಟ್ಟುಕೊಳ್ಳುವಷ್ಟು ಸಬಲವಾಗಿಲ್ಲ; ವಿರಳವಾಗಿರುವ ಬುಧದ ವಾಯುಮಂಡಲದಲ್ಲಿ ಜಲಜನಕ, ಹೀಲಿಯಮ್, ಆಮ್ಲಜನಕ, ಸೋಡಿಯಮ್, ಕ್ಯಾಲ್ಷಿಯಂ ಮತ್ತು ಪೊಟಾಷಿಯಂಗಳು ಸೇರಿವೆ. ವಾಯು ಕಣಗಳು ನಿರಂತರವಾಗಿ ಬಾಹ್ಯಾಕಾಶಕ್ಕೆ ತಪ್ಪಿಸಿಕೊಂಡು ಹೋಗುತ್ತಿರುತ್ತವೆ ಹಾಗೂ ಹಲವಾರು ಮೂಲಗಳಿಂದ ಹೊಸ ಕಣಗಳು ವಾಯುಮಂಡಲವನ್ನು ಸೇರುತ್ತಿರುತ್ತವೆ. ಜಲಜನಕ ಮತ್ತು ಹೀಲಿಯಂ ಕಣಗಳು ಬಹುಶಃ ಸೌರ ಮಾರುತಗಳಿಂದ ಬುಧಕ್ಕೆ ಬಂದು ನಂತರ ಪುನಃ ಬಾಹ್ಯಾಕಾಶದಲ್ಲಿ ಕಳೆದುಹೋಗುತ್ತವೆ. ಬುಧದ ಮೇಲ್ಮೈನಲ್ಲಿ ಉಂಟಾಗುವ ವಿಕಿರಣ ಕ್ಷಯವೂ ಹೀಲಿಯಂ, ಸೋಡಿಯಂ ಮತ್ತು ಪೊಟಾಷಿಯಂಗಳ ಒಂದು ಮೂಲ. ಮೇಲ್ಮೈ ಮೇಲೆ ಅಪ್ಪಳಿಸುವ ಕೆಲವು ಉಲ್ಕೆಗಳಲ್ಲಿ ನೀರಿನ ಅಂಶಗಳಿರುವುದರಿಂದ ಬಹುಶಃ ಬುಧದ ಮೇಲೂ ನೀರಾವಿ ಅಸ್ಥಿತ್ವದಲ್ಲಿದೆ.[೧೨]

ಕಾಂತಕ್ಷೇತ್ರ

[ಬದಲಾಯಿಸಿ]

ಬುಧವು ತನ್ನ ಅಕ್ಷದ ಸುತ್ತ ಬಹಳ ನಿಧಾನವಾಗಿ ಸುತ್ತುತ್ತಿದ್ದರೂ, ಅದಕ್ಕೆ ಸಾಕಷ್ಟು ಶಕ್ತಿಯುತವಾದ (ಭೂಮಿಯ ಸುಮಾರು ೧%ನಷ್ಟು) ಕಾಂತಕ್ಷೇತ್ರವಿದೆ. ಬುಧದ ಕಾಂತಕ್ಷೇತ್ರವು ಭೂಮಿಯ ಕಾಂತಕ್ಷೇತ್ರದಂತೆಯೇ, ಸುತ್ತುತ್ತಿರುವ ದ್ರವೀಕೃತ ಒಳಭಾಗದಿಂದ, ಉಂಟಾಗಿರಬಹುದು. ಆದರೆ, ಬುಧದ ಒಳಭಾಗವು ಇನ್ನೂ ದ್ರವರೂಪದಲ್ಲಿದೆಯೇ ಇಲ್ಲವೇ ಎಂಬುದು ವಿಜ್ಞಾನಿಗಳಿಗೆ ಖಚಿತವಾಗಿಲ್ಲ.[೧೩] ಬುಧದ ಕಕ್ಷೀಯ ಕೇಂದ್ರ ಚ್ಯುತಿಯು ಹೆಚ್ಚಾಗಿರುವ ಕಾಲಗಳಲ್ಲಿ ಉಂಟಾಗುವ ಉಬ್ಬರವಿಳಿತಗಳು, ಒಳಭಾಗವನ್ನು ಬಹುಶಃ ಇನ್ನೂ ದ್ರವರೂಪದಲ್ಲೇ ಇಟ್ಟಿರಬಹುದು. ಇದಲ್ಲದೆ, ಬುಧದ ಕಾಂತಕ್ಷೇತ್ರವು ಹಿಂದಿನ ಡೈನಮೋ ಪರಿಣಾಮದ ಅವಶೇಷವಾಗಿ ಉಳಿದಿರಬಹುದು. ಈಗ ನಿಂತುಹೋಗಿರುವ ಡೈನಮೋ ಪರಿಣಾಮವು ಬುಧದ ಒಳಭಾಗದಲ್ಲಿರುವ ಘನೀಕೃತ ವಸ್ತುಗಳಲ್ಲಿ ತನ್ನ ಕಾಂತಕ್ಷೇತ್ರವನ್ನು ಶಾಶ್ವತವಾಗಿ ಉಳಿಸಿರಬಹುದು.

ಬುಧದ ಕಾಂತಕ್ಷೇತ್ರವು ಸೌರ ಮಾರುತವನ್ನು ಗ್ರಹದ ಸುತ್ತ ಬಗ್ಗಿಸುವಷ್ಟು ಶಕ್ತಿಯುತವಾಗಿದೆ. ಇದು ಸೌರಮಾರುತಗಳಿಗೆ ಅಭೇದ್ಯವಾದ ಕಾಂತಗೋಳವೊಂದನ್ನು ಬುಧದ ಸುತ್ತ ಸೃಷ್ಟಿಸುತ್ತದೆ. ಚಂದ್ರನ ಮೇಲಿನ ಪರಿಸ್ಥಿತಿಗಿಂತ ಇದು ಬಹಳ ಭಿನ್ನವಾಗಿದೆ. ಚಂದ್ರನ ಕಾಂತಕ್ಷೇತ್ರವು ಸೌರಮಾರುತಗಳನ್ನು ತಡೆಯಲಾಗದಷ್ಟು ನಿಶ್ಶಕ್ತವಾಗಿರುವುದರಿಂದ ಅಲ್ಲಿ ಕಾಂತಗೋಳವೂ ಉಂಟಾಗುವುದಿಲ್ಲ.

ಕಕ್ಷೆ ಮತ್ತು ಪರಿಭ್ರಮಣ

[ಬದಲಾಯಿಸಿ]

ಬುಧದ ಕಕ್ಷೆ (ಹಳದಿ). Orbit of Mercury as seen from the ascending node (bottom) and from 10 above (top).

ಸೂರ್ಯನಿಂದ ೪೬,೦೦೦,೦೦೦ ರಿಂದ ೭೦,೦೦೦,೦೦೦ ಕಿ.ಮೀ. ದೂರದಲ್ಲಿರುವ ಬುಧವು ದೊಡ್ಡ ಗ್ರಹಗಳಲ್ಲೇ ಅತಿ ಹೆಚ್ಚು ಕೇಂದ್ರಚ್ಯುತಿಯನ್ನು ಹೊಂದಿದೆ. ಒಂದು ಪರಿಭ್ರಮಣವನ್ನು ಮುಗಿಸಲು ಬುಧಕ್ಕೆ ೮೮ ದಿನಗಳು ಬೇಕಾಗುತ್ತವೆ. ಎಡದಲ್ಲಿರುವ ಚಿತ್ರವು ಕೇಂದ್ರಚ್ಯುತಿಯ ಪರಿಣಾಮಗಳನ್ನು ತೋರಿಸುತ್ತದೆ. ಬುಧದ ಕಕ್ಷೆಯಷ್ಟೇ ದೀರ್ಘಾರ್ಧ ಅಕ್ಷವನ್ನು ಹೊಂದಿರುವ ವೃತ್ತಾಕಾರದ ಕಕ್ಷೆಯೊಂದನ್ನು ಈ ಚಿತ್ರದಲ್ಲಿ ಕಾಣಬಹುದು. ಪ್ರತಿ ೫ ದಿನಗಳಲ್ಲಿ ಗ್ರಹವು ಪೂರ್ಣಗೊಳಿಸುವ ದೂರದ ಆಧಾರದ ಮೇಲೆ, ಬುಧವು ಸೂರ್ಯನಿಗೆ ಹತ್ತಿರವಿದ್ದಾಗ ಹೆಚ್ಚು ವೇಗವಾಗಿ ಪರಿಭ್ರಮಣವನ್ನು ಮಾಡುತ್ತದೆ ಎಂಬುದನ್ನು ನಾವಿಲ್ಲಿ ಕಾಣಬಹುದು. ಚಿತ್ರದಲ್ಲಿರುವ ಸಣ್ಣ ಗೋಳಾಕೃತಿಗಳ ಗಾತ್ರಗಳು ಬುಧ ಮತ್ತು ಸೂರ್ಯನ ನಡುವೆಯಿರುವ ಅಂತರಕ್ಕೆ ವಿಲೋಮಾನುಪಾತದಲ್ಲಿದೆ. ಬದಲಾಗುವ ಈ ಅಂತರ ಮತ್ತು ಬುಧದ ಅಕ್ಷೀಯ ಪರಿಭ್ರಮಣದಲ್ಲಿ ಅಪೂರ್ವವಾದ ೩:೨ ಅನುರಣನಗಳು ಗ್ರಹದ ಮೇಲ್ಮೈ ತಾಪಮಾನದಲ್ಲಿ ಜಟಿಲವಾದ ವಿನ್ಯಾಸಗಳನ್ನು ಉಂಟುಮಾಡುತ್ತವೆ.

ಚಿತ್ರದಲ್ಲಿ ತೋರಿಸಿರುವಂತೆ, ಬುಧದ ಕಕ್ಷೆಯು ಭೂಮಿಯ ಕಕ್ಷೆಯ ಸಮತಳಕ್ಕೆ (the ecliptic) ೭ ಡಿಗ್ರಿ ಓರೆಯಲ್ಲಿದೆ. ಈ ಕಾರಣದಿಂದಾಗಿ, ಬುಧವು ಈ ಸಮತಳವನ್ನು ದಾಟಿಹೋಗುವಾಗ ಸೂರ್ಯ ಮತ್ತು ಭೂಮಿಯ ನಡುವೆ ಇದ್ದರೆ ಮಾತ್ರ ಬುಧ ಸಂಕ್ರಮಣವು ಉಂಟಾಗುತ್ತದೆ. ಇದು ಸರಾಸರಿ ೭ ವರ್ಷಗಳಿಗೊಮ್ಮೆ ಆಗುತ್ತದೆ.

ಬುಧವು ಕೇವಲ ೦.೦೧ ಡಿಗ್ರಿಗಳ ಅಕ್ಷೀಯ ಓರೆಯನ್ನು ಹೊಂದಿದೆ. ಎರಡನೇ ಅತಿ ಕಡಿಮೆ ಓರೆಯನ್ನು (೩.೧ ಡಿಗ್ರಿಗಳು) ಹೊಂದಿರುವ ಗುರುವಿನ ಓರೆಗಿಂತ ಇದು ೩೦೦ ಪಟ್ಟು ಕಡಿಮೆಯಿದೆ. ಬುಧದ ಮೇಲೆ ನಿಂತು ನೋಡಿದಾಗ, ಸೂರ್ಯವು ಬಾನನೆತ್ತಿಯಿಂದ ೧/೧೦೦ ಡಿಗ್ರಿಯ ಆಚೆ ಹೋಗುವುದಿಲ್ಲ.

ಬುಧದ ಮೇಲ್ಮೈನ ಕೆಲವೆಡೆಗಳಲ್ಲಿ, ಸೂರ್ಯವು ಸುಮಾರು ಅರ್ಧ ದೂರ ಏರಿ, ನಂತರ ಹಿಂದಿರುಗಿ ಮತ್ತೆ ಮುಳುಗುವುದನ್ನು ಒಂದೇ ಬುಧ ದಿನದಲ್ಲಿ ನೋಡಬಹುದು. ಇದಕ್ಕೆ ಕಾರಣ, ಸೂರ್ಯನಿಂದ ಗರಿಷ್ಠ ದೂರವನ್ನು ತಲುಪುವ ಸುಮಾರು ೪ ದಿನಗಳ ಮುನ್ನ, ಬುಧದ ಕಕ್ಷೀಯ ಪರಿಭ್ರಮಣ ವೇಗವು ಅದರ ಅಕ್ಷೀಯ ಪರಿಭ್ರಮಣದ ವೇಗದಷ್ಟೇ ಇರುತ್ತದೆ. ಇದರಿಂದ, ಸೂರ್ಯನ ಚಲನೆಯು ನಿಂತಂತೆ ಕಾಣುತ್ತದೆ; ಬುಧವು ಸೂರ್ಯನಿಂದ ಕನಿಷ್ಠ ದೂರದಲ್ಲಿರುವಾಗ ಗ್ರಹದ ಕಕ್ಷೀಯ ಪರಿಭ್ರಮಣ ವೇಗವು ಅಕ್ಷೀಯ ಪರಿಭ್ರಮಣ ವೇಗಕ್ಕಿಂತ ಹೆಚ್ಚಾಗುತ್ತದೆ. ಇದರಿಂದ, ಸೂರ್ಯವು ಪ್ರತಿಗಾಮಿ ಚಲನೆಯಲ್ಲಿರುವಂತೆ ಕಾಣುತ್ತದೆ.

ಕಕ್ಷೆಯ ಚಲನೆ

[ಬದಲಾಯಿಸಿ]

ಬುಧವು ತನ್ನ ಕಕ್ಷೆಯ ಮೇಲೆ ಚಲಿಸುವುದು ಮಾತ್ರವಲ್ಲದೆ, ಬುಧದ ಕಕ್ಷೆಯೇ ಸೌರಮಂಡಲದಲ್ಲಿ ಚಲಿಸುತ್ತದೆ. ಬುಧದ ಕಕ್ಷೆಯ ಚಲನೆಯನ್ನು (precession) ಕಂಡುಹಿಡಿದಾಗ ಅದನ್ನು ನ್ಯೂಟನ್ನನ ಸಿದ್ಧಾಂತಗಳ ಆಧಾರದ ಮೇಲೆ ವಿವರಿಸಲು ಆಗಲಿಲ್ಲ. ಹಲವು ವರ್ಷಗಳವರೆಗೆ, ಸೂರ್ಯನಿಗೆ ಇನ್ನೂ ನಿಕಟದಲ್ಲಿರುವ ಇನ್ನೊಂದು ಗ್ರಹವಿರಬಹುದೇನೋ ಎಂಬ ಅನುಮಾನವಿತ್ತು (ಸೂರ್ಯನ ಸಮಭಾಜಕದ ಬಳಿ ಉಬ್ಬಿನಿಂದ ಈ ಚಲನೆಯು ಉಂಟಾಗುತ್ತಿರಬಹುದೆಂದೂ ಒಂದು ಅನುಮಾನವಿತ್ತು). ಯುರೇನಸ್ನ ಕಕ್ಷೆಯಲ್ಲುಂಟಾಗುವ ಬದಲಾವಣೆಗಳನ್ನಾದರಿಸಿ ನೆಪ್ಚೂನ್ನ ಆವಿಷ್ಕಾರವಾದ ಮೇಲಂತೂ ಖಗೋಳಶಾಸ್ತ್ರಜ್ಞರಿಗೆ ಈ ಅನುಮಾನಗಳ ಮೇಲೆ ತುಂಬಾ ನಂಬಿಕೆ ಬಂದಿತು. ಸೂರ್ಯನ ನಿಕಟದಲ್ಲಿರಬಹುದೆಂದು ಊಹಿಸಿದ್ದ ಆ ಒಳಗ್ರಹಕ್ಕೆ ವಲ್ಕನ್ ಎಂದು ಹೆಸರನ್ನೂ ಇಡಲಾಯಿತು. ಆದರೆ, ೨೦ನೇ ಶತಮಾನದ ಆರಂಭದಲ್ಲಿ ಐನ್‌ಸ್ಟೀನ್ನ ಸಾಮಾನ್ಯ ಸಾಪೇಕ್ಷತಾವಾದವು ಬುಧದ ಕಕ್ಷೆಯ ಈ ಚಲನೆಗಳಿಗೆ ಬಹಳ ಕರಾರುವಾಕ್ಕಾದ ವಿವರಣೆಗಳನ್ನು ಒದಗಿಸಿತು. ಈ ಚಲನೆಯಲ್ಲಿ ದ್ರವ್ಯರಾಶಿಯ ಹಿಗ್ಗುವಿಕೆಯು ಕಂಡುಬಂದು, ಐನ್‌ಸ್ಟೀನನ ಸಿದ್ಧಾಂತಗಳಿಗೆ ಒಂದು ನಿರ್ಣಾಯಕ ಪುರಾವೆಯು ಸಿಕ್ಕಂತಾಯಿತು. ಬುಧವು ಸೂರ್ಯನಿಗೆ ಅತೀ ಹತ್ತಿರವಿರುವಾಗ ಹೆಚ್ಚು ವೇಗದಲ್ಲಿ ಚಲಿಸುವುದರಿಂದ, ಈ ಸಂದರ್ಭದಲ್ಲಿ ಅದರ ದ್ರವ್ಯರಾಶಿಯೂ ಹೆಚ್ಚಾಗುತ್ತದೆ. ದ್ರವ್ಯರಾಶಿಯ ಹೆಚ್ಚಳದಿಂದ, ಗ್ರಹವು ತನ್ನ ಮುಂಚಿನ ಕಕ್ಷೆಯಿಂದ ಸ್ವಲ್ಪ ಹೊರಗೆ ಹೋಗಿ, ಹೊಸದೊಂದು ಕಕ್ಷೆಯಲ್ಲಿ ಚಲಿಸುತ್ತದೆ. ಇದರಿಂದ ಉಂಟಾಗುವ ಪರಿಣಾಮಗಳು ಬಹಳ ಸೂಕ್ಷ್ಮ: ಪ್ರತಿ ಶತಮಾನದಲ್ಲಿ ಕೇವಲ ೪೩ ಆರ್ಕ್ ಕ್ಷಣಗಳಷ್ಟು (arcsecond) ಮಾತ್ರ ವ್ಯತ್ಯಾಸವಾಗುತ್ತದೆ. ಬೇರೆ ಗ್ರಹಗಳಲ್ಲಿ ಈ ಪರಿಣಾಮವು ಇನ್ನೂ ಕಡಿಮೆ: ಶುಕ್ರಕ್ಕೆ ೮.೬ ಆರ್ಕ್ ಕ್ಷಣ, ಭೂಮಿಗೆ ೩.೮, ಮತ್ತು ಮಂಗಳಕ್ಕೆ ೧.೩.

ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಬುಧದ ಕಕ್ಷೀಯ ಕೇಂದ್ರಚ್ಯುತಿಯು ೦ ಯಿಂದ (ವೃತ್ತಾಕಾರ) ೦.೪೭ರ ವರೆಗೆ ಗೊಂದಲಮಯವಾಗಿ ಬದಲಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬರುತ್ತದೆ. ಇದು ಬುಧದ ೩:೨ ಅನುರಣನೆಯನ್ನು ವಿವರಿಸುತ್ತದೆ ಎಂದು ಯೋಚಿಸಲಾಗಿದೆ. ೩:೨ ಅನುರಣನೆಯು ಬಹಳ ಅಪರೂಪವಾದರೂ, ಹೆಚ್ಚು ಕೇಂದ್ರಚ್ಯುತಿಯಿರುವ ಸನ್ನಿವೇಶಗಳಲ್ಲಿ ಈ ರೀತಿಯ ಅನುರಣನೆ ಉಂಟಾಗುತ್ತದೆ.[೧೪]

ಅಕ್ಷೀಯ ಮತ್ತು ಕಕ್ಷೀಯ ಪರಿಭ್ರಮಣೆಗಳ ಅನುರಣನ

[ಬದಲಾಯಿಸಿ]
ಚಿತ್ರ:488px-Mercury's orbital resonance.png
ಬುಧವು ಒಂದು ಪರಿಭ್ಹ್ರಮಣದಲ್ಲಿ ತನ್ನ ಅಕ್ಶದ ಸುತ್ತ ೧.೫ ಬಾರಿ ಸುತ್ತುವುದರಿಂದ, ಎರಡು ಪರಿಭ್ರಮಣೆಗಳ ನಂತರ ಅದೇ ಅರ್ಧಗೋಳವು ಮತ್ತೆ ಸೂರ್ಯನತ್ತ ಮುಖ ಮಾಡುತ್ತದೆ.

ಉಬ್ಬರವಿಳಿತದ ಹಿಡಿತದಿಂದ ಬುಧದ ಅಕ್ಷೀಯ ಮತ್ತು ಕಕ್ಷೀಯ ಪರಿಭ್ರಮಣೆಗಳು ಒಂದೇ ಕಾಲವನ್ನು ಹೊಂದಿದ್ದು, ಬುಧದ ಮೇಲ್ಮೈನ ಒಂದೇ ಭಾಗವು ಯಾವಾಗಲೂ ಸೂರ್ಯನತ್ತ ಮುಖ ಮಾಡಿರುತ್ತದೆ (ಭೂಮಿಯಿಂದ ಯಾವಾಗಲೂ ಚಂದ್ರನ ಒಂದೇ ಮುಖ ಕಾಣಿಸುವಂತೆ) ಎಂದು ಹಲವಾರು ವರ್ಷಗಳ ಕಾಲ ನಂಬಲಾಗಿತ್ತು. ಆದರೆ, ಗ್ರಹವು ೩:೨ ಅಕ್ಷೀಯ/ಕಕ್ಷೀಯ ಅನುರಣನೆಯನ್ನು ಹೊಂದಿದೆಯೆಂದು ೧೯೬೫ರ ರೆಡಾರ್ ಅವಲೋಕನೆಗಳಿಂದ ತಿಳಿದುಬಂದಿತು ; ಬುಧದ ಕಕ್ಷೀಯ ಕೇಂದ್ರ ಚ್ಯುತಿಯು ಈ ಅನುರಣನವನ್ನು ಸ್ಥಿರವಾಗಿಡುತ್ತದೆ. ಬುಧವು ೧:೧ ಅನುರಣನೆಯಲ್ಲಿದೆ ಎಂದು ಖಗೋಳಶಾಸ್ತ್ರಜ್ಞರು ನಂಬುವುದಕ್ಕೆ ಮೂಲತಃ ಕಾರಣವೇನೆಂದರೆ ಬುಧವು ವೀಕ್ಷಣಾಯೋಗ್ಯವಾಗಿದ್ದ ಸಂದರ್ಭ್ಹಗಳಲ್ಲೆಲ್ಲಾ ಅದರ ಕಕ್ಷೆಯ ಒಂದೇ ಭಾಗದಲ್ಲಿ ಇರುತ್ತಿದ್ದುದರಿಂದ, ಅದರ ಒಂದೇ ಮುಖವು ಪದೇ ಪದೇ ಕಾಣುತ್ತಿತ್ತು. ಬುಧದ ೩:೨ ಅನುರಣನೆಯ ಕಾರಣದಿಂದಾಗಿ ಬುಧದ ಮೇಲೆ ಒಂದು ಸೌರ ದಿನವು ೧೭೬ ಭೂಮಿ ದಿನಗಳಷ್ತು ಕಾಲಾವಧಿಯನ್ನು ಹೊಂದಿರುತ್ತದೆ.

ವೀಕ್ಷಣೆ

[ಬದಲಾಯಿಸಿ]

ಬುಧದ ಗೋಚರ ಪ್ರಮಾಣವು -೨.೦ ರಿಂದ ೫.೫ರ ವ್ಯಾಪ್ತಿಯಲ್ಲಿರುತ್ತದೆ. ಇದು ಸಿರಿಯಸ್ಗಿಂತ ಕಾಂತಿಯುತವಾಗಿದೆ.[೧೫] ಸೂರ್ಯನ ಸಾಮೀಪ್ಯತೆಯ ಕಾರಣದಿಂದ, ಬುಧವು ಸೂರ್ಯನ ಪ್ರಜ್ವಲತೆಯಲ್ಲೇ ಬಹಳಷ್ಟು ಕಾಲ ಕಳೆದುಹೋಗಿರುತ್ತದೆ. ಇದು ಬುಧದ ವೀಕ್ಷಣೆಯನ್ನು ಜಟಿಲಗೊಳಿಸುತ್ತದೆ. ಬುಧವನ್ನು ಬೆಳಿಗ್ಗೆ ಅಥವಾ ಸಂಜೆಯಿರುವ ನಸುಬೆಳಕಿನಲ್ಲಿ ಮಾತ್ರ ಸ್ವಲ್ಪ ಕಾಲದವರೆಗೆ ನೋಡಬಹುದು. ಹಬಲ್ ದೂರದರ್ಶಕಕ್ಕೆ ಬುಧವನ್ನು ನೋಡಲಾಗುವುದೇ ಇಲ್ಲ.

ಭೂಮಿಯಿಂದ ನೋಡಿದಾಗ ಚಂದ್ರನಂತೆಯೇ ಪಕ್ಷಗಳನ್ನು ತೋರಿಸುವ ಬುಧವು ನೀಚ ಯುತಿಯಲ್ಲಿ ಹೊಸ ಚಂದ್ರನಂತೆಯೂ, ಮತ್ತು ಉಚ್ಚ ಯುತಿದಲ್ಲಿ ಪೂರ್ಣ ಚಂದ್ರನಂತೆಯೂ ಕಾಣುತ್ತದೆ. ಆದರೆ, ಈ ಎರಡು ಸಮಯಗಳಲ್ಲೂ ಬುಧವು ಸೂರ್ಯನೊಂದಿಗೇ ಹುಟ್ಟಿ ಮುಳುಗುವುದರಿಂದ ಇದನ್ನು ನೋಡಲಾಗುವುದಿಲ್ಲ. ಬುಧವು ಅತಿ ಹೆಚ್ಚು ನೀಳತೆಯಲ್ಲಿದ್ದಾಗ ಅರ್ಧಚಂದ್ರಾಕರದಲ್ಲಿ ಇರುತ್ತದೆ.

ಬುಧವು ಸರಾಸರಿ ೧೧೬ ದಿನಗಳಿಗೂಮ್ಮೆ ನೀಚ ಯುತಿಗೆ ಬರುತ್ತದಾದರೂ, ಅದರ ಕಕ್ಷೀಯ ಕೇಂದ್ರಚ್ಯುತಿಯ ಕಾರಣದಿಂದ, ಈ ಕಾಲವಧಿಯು ೧೧೧ ದಿನಗಳಿಂದ ೧೨೧ ದಿನಗಳವರೆಗೂ ಇರುತ್ತದೆ. ಭೂಮಿಯಿಂದ ನೋಡಿದಂತೆ ಬುಧದ ಪ್ರತಿಗಾಮಿ ಚಲನೆಯನ್ನು ನೀಚ ಯುತಿಯ ಮುಂಚೆ/ನಂತರ ೮-೧೫ ದಿನಗಳವರೆಗೆ ಕಾಣಬಹುದು. ಇದು ಸಹ ಬುಧದ ಕಕ್ಷೀಯ ಕೇಂದ್ರಚ್ಯುತಿಯಿಂದ ಉಂಟಾಗುತ್ತದೆ.

ಮ್ಯಾರಿನರ್ ೧೦ರಿಂದ ಬುಧದ ನೋಟ

ಬುಧವು ಭೂಮಿಯ ಉತ್ತರಾರ್ಧಗೋಳಕ್ಕಿಂತ ದಕ್ಷಿಣಾರ್ಧಗೋಳದಿಂದ ಹೆಚ್ಚು ಸುಲಭವಾಗಿ ಕಾಣುತ್ತದೆ.

ಬುಧವು ಅರ್ಧ ಮತ್ತು ಪೂರ್ಣಚಂದ್ರಾಕಾರಗಳ ಮಧ್ಯದಲ್ಲಿದ್ದಾಗ ಭೂಮಿಯಿಂದ ಅತಿ ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ. ಈ ಸ್ಥಿತಿಯಲ್ಲಿ ಬುಧವು ಭೂಮಿಯಿಂದ ಗರಿಷ್ಠ ದೂರದಲ್ಲಿದ್ದರೂ, ಅದರ ಹೆಚ್ಚು ಮೇಲ್ಮೈ ಮೇಲೆ ಸೂರ್ಯನ ಬೆಳಕು ಬೀಳುವುದರಿಂದ ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ. ಇದಕ್ಕೆ ವಿರುದ್ಧವಾಗಿ, ಶುಕ್ರವು ತೆಳುವಾದ ಚಂದ್ರಾಕಾರದಲ್ಲಿರುವಾಗ ಅತಿ ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ.

ಬುಧದ ಅಧ್ಯಯನಗಳು

[ಬದಲಾಯಿಸಿ]

ಮುಂಚಿನ ಖಗೋಳಶಾಸ್ತ್ರಜ್ಞರು

[ಬದಲಾಯಿಸಿ]

ಬುಧವು ಕ್ರಿ.ಪೂ. ೩೦೦೦ ಕ್ಕೂ ಮುಂಚೆಯಿಂದ ಪರಿಚಿತ್ರವಾಗಿರುವ ಗ್ರಹ. ಆ ಕಾಲದಲ್ಲಿ ಮೆಸೊಪೊಟೇಮಿಯಾದ ಸುಮೇರಿಯನ್ನರು ಬುಧವನ್ನು ಉಬು-ಇದಿಮ್-ಗುಡ್-ಉಡ್, ಮತ್ತಿತರ ಹೆಸರುಗಳಿಂದ ಕರೆಯುತ್ತಿದ್ದರು. ಸುಮೇರಿಯನ್ನರ ನಂತರದ ಬ್ಯಾಬಿಲೋನಿಯನ್ನರು (ಕ್ರಿ.ಪೂ. ೨೦೦೦-೧೦೦೦) ಬುಧದ ವೀಕ್ಷಣೆಯನ್ನು ದಾಖಲಿಸಿದ್ದಿರಬಹುದು: ಈ ದಾಖಲೆಗಳಾವುವೂ ಈಗ ಸಿಕ್ಕಿಲ್ಲದಿದ್ದರೂ, ಕ್ರಿ.ಪೂ. ೭ನೇ ಶತಮಾನದ ಬ್ಯಾಬಿಲೋನ್ ನ ದಾಖಲೆಗಳು ಅದಕ್ಕೆ ಬಹಳಷ್ಟು ಮುಂಚಿನ ದಾಖಲೆಗಳನ್ನು ಉಲ್ಲೇಖಿಸುತ್ತವೆ. ತಮ್ಮ ಪೌರಾಣಿಕ ದೇವದೂತನಾದ ನಬು/ನೆಬುವಿನ ಹೆಸರನ್ನು ಅವರು ಬುಧ ಗ್ರಹಕ್ಕೆ ಇಟ್ಟರು.[೧೬]

ಪ್ರಾಚೀನ ಗ್ರೀಕರು ಗ್ರಹಕ್ಕೆ ಎರಡು ಹೆಸರುಗಳನ್ನು ಕೊಟ್ಟರು: ಬುಧವು ಬೆಳಿಗ್ಗೆ ಕಂಡಾಗ ಅಪೋಲೋ ಎಂದೂ, ಮತ್ತು ಸಂಜೆ ಕಂಡಾಗ ಹರ್ಮೆಸ್ ಎಂದೂ, ಈ ಗ್ರಹವನ್ನು ಕರೆಯಲಾಗುತ್ತಿತ್ತು. ಆದರೆ, ಪೈಥಾಗೊರಸ್ ಇದರ ಬಗ್ಗೆ ತನ್ನ ಯೋಚನೆಗಳನ್ನು ಪ್ರತಿಪಾದಿಸಿದ ನಂತರ, ಇವೆರಡೂ ಒಂದೇ ಗ್ರಹವೆಂದು ಗ್ರೀಕ್ ಖಗೋಳಶಾಸ್ತ್ರಜ್ಞರು ಅರಿತುಕೊಂಡರು.[೧೭]

ಭೂಮಿಯ ದೂರದರ್ಶಕಗಳಿಂದ ಸಂಶೋಧನೆ

[ಬದಲಾಯಿಸಿ]
This Mariner 10 view from 4.3 million km is similar to the very best views that can be achieved telescopically from Earth

೧೭ನೇ ಶತಮಾನದಲ್ಲಿ ಗೆಲಿಲಿಯೋ ಮೊದಲಬಾರಿಗೆ ದೂರದರ್ಶಕದಿಂದ ಬುಧ ಗ್ರಹದ ಅವಲೋಕನೆಗಳನ್ನು ಮಾಡಿದನು. ಅವನು ಶುಕ್ರ ಗ್ರಹದಲ್ಲಿ ಪಕ್ಷಗಳನ್ನು ಕಂಡನಾದರೂ, ಅವನ ದೂರದರ್ಶಕವು ಬುಧದ ಪಕ್ಷಗಳನ್ನು ನೋಡುವಷ್ಟು ಪ್ರಬಲವಾಗಿರಲಿಲ್ಲ. ಕೆಪ್ಲರ್ನ ಭವಿಷ್ಯವಾಣಿಯಂತೆ ೧೬೩೧ರಲ್ಲಿ ಬುಧಸಂಕ್ರಮಣವುಂಟಾಯಿತು. ಸೂರ್ಯನ ಮುಂದೆ ನಡೆದ ಸಂಕ್ರಮಣದ ಒಂದು ವೀಕ್ಷಣೆಯು ಅದೇ ಮೊದಲ ಬಾರಿಗೆ ನಡೆಯಿತು. ೧೬೩೯ರಲ್ಲಿ ದೂರದರ್ಶಕವನ್ನುಪಯೋಗಿಸಿ, ಶುಕ್ರ ಮತ್ತು ಚಂದ್ರರಂತೆಯೇ ಬುಧದ ಕಕ್ಷೆಯಲ್ಲೂ ಪಕ್ಷಗಳುಂಟಾಗುತ್ತವೆಂದು ಜಿಯೋವಾನಿ ಜುಪಿ ಕಂಡುಹಿಡಿದನು. ಈ ಅವಲೋಕನೆಗಳಿಂದ, ಬುಧವು ಸೂರ್ಯನ ಸುತ್ತ ಪರಿಭ್ರಮಿಸುತ್ತದೆಯೆಂದು ನಿರ್ಣಾಯಕವಾಗಿ ಸಾಬೀತಾಯಿತು.

ಭೂಮಿಯಿಂದ ನೋಡಿದಂತೆ ಒಂದು ಗ್ರಹದ ಮುಂದೆ ಇನ್ನೊಂದು ಗ್ರಹವು ಹಾದುಹೋಗುವ ಮರೆಮಾಡುವ ಘಟನೆಯು ಬಹಳ ಅಪರೂಪ. ಬುಧ ಮತ್ತು ಶುಕ್ರಗಳು ಪ್ರತಿ ಕೆಲವು ಶತಮಾನಗಳಿಗೂಮ್ಮೆ ಒಂದು ಇನ್ನೊಂದನ್ನು ಮರೆಮಾಡುತ್ತವೆ. ಮೇ ೨೮, ೧೭೩೭ರಂದು ನಡೆದ ಮರೆಯಾಗುವಿಕೆಯು ಇತಿಹಾಸದಲ್ಲೇ ವೀಕ್ಷಿಸಲಾದ ಏಕೈಕ ಮರೆಯಾಗುವಿಕೆಯ ಘಟನೆ. ಈ ಘಟನೆಯನ್ನು Royal Greenwich Observatoryಯಲ್ಲಿ ಜಾನ್ ಬೆವಿಸ್ ವೀಕ್ಷಿಸಿದನು.[೧೮] ಶುಕ್ರವು ಬುಧವನ್ನು ಮತ್ತೆ ೨೧೩೩ರಲ್ಲಿ ಮರೆಮಾಡುತ್ತದೆ.

ಬುಧದ ಅವಲೋಕನೆ ಜಟಿಲವಾದ್ದರಿಂದ, ಈ ಗ್ರಹವನ್ನು ಬೇರೆ ಗ್ರಹಗಳಷ್ಟು ಅಧ್ಯಯನ ಮಾಡಲಾಗಿಲ್ಲ. ೧೮೦೦ರಲ್ಲಿ ಗ್ರಹದ ಮೇಲ್ಮೈ ವೈಶಿಷ್ಟ್ಯಗಳನ್ನು ಅವಲೋಕಿಸಿದ ಯೋಹಾನ್ ಶ್ರೇಟರ್‌ನು ಬುಧದ ಅಕ್ಷೀಯ ಪರಿಭ್ರಮಣ ಕಾಲವು ೨೪ ಘಂಟೆಗಳೆಂದು ತಪ್ಪಾಗಿ ಅಂದಾಜು ಮಾಡಿದನು.

೧೮೦೦ರಲ್ಲಿ ಜಿಯೋವಾನಿ ಶ್ಯಾಪರೆಲ್ಲಿ ಗ್ರಹದ ನಕ್ಷೆಯನ್ನು ಹೆಚ್ಚು ನಿಖರವಾಗಿ ತಯಾರಿಸಿ, ಅದರ ಅಕ್ಷೀಯ ಪರಿಭ್ರಮಣ ಕಾಲವು ೮೮ ದಿನಗಳೆಂದು ಸೂಚಿಸಿದನು. ಉಬ್ಬರವಿಳಿತಗಳ ಒಂದೇ ಹಿಡಿತದಿಂದ (tidal locking) ಇದು ಕಕ್ಷೀಯ ಪರಿಭ್ರಮಣ ಕಾಲದಷ್ಟೇ ಇದೆ.[೧೯] ಭೂಮಿಯ ಚಂದ್ರನಲ್ಲೂ ಕಾಣಬಹುದಾದ ಈ ಪರಿಣಾಮವನ್ನು ಸಮಕಾಲಿಕ ಪರಿಭ್ರಮಣೆ ಎಂದು ಕರೆಯಲಾಗುತ್ತದೆ.

ಬುಧದವು ತನ್ನ ಪರಿಭ್ರಮಣದೊಂದಿಗೆ ಸಮಕಾಲಿಕವಾಗಿ ಸುತ್ತುತ್ತದೆಯೆಂಬ ವಾದವು ವ್ಯಾಪಕವಾಗಿ ನಂಬಿಕೆಗೊಳಗಾದುದರಿಂದ, ೧೯೬೦ರಲ್ಲಿ ನಡೆದ ರೇಡಿಯೋ ಅವಲೋಕನೆಗಳು ಈ ವಾದಕ್ಕೆ ಸವಾಲು ಹಾಕಿದಾಗ ಖಗೋಳಶಾಸ್ತ್ರಜ್ಞರಿಗೆ ದೊಡ್ಡ ಆಘಾತವೇ ಆಯಿತು. ಬುಧವು ಈ ರೀತಿಯ ಸಮಕಾಲಿಕ ಚಲನೆಯನ್ನು ಹೊಂದಿದ್ದರೆ, ಅದರ ಕತ್ತಲ ಮುಖವು ಬಹಳ ತಣ್ಣಗಿರುತ್ತಿತ್ತು. ಆದರೆ, ಬುಧದ ಎಲ್ಲಾ ಭಾಗಗಳೂ ನಿರೀಕ್ಷೆಗಿಂತ ಬಹಳಷ್ಟು ಹೆಚ್ಚು ಬಿಸಿಯಾಗಿವೆ ಎಂದು ರೇಡಿಯೋ ತರಂಗಗಳ ಮಾಪನೆಗಳು ಸೂಚಿಸಿದವು. ಸಮಕಾಲಿಕ ಚಲನೆಯ ವಾದವನ್ನು ಕೈಬಿಡಲು ಮನಸ್ಸಿಲ್ಲದ ಖಗೋಳಶಾಸ್ತ್ರಜ್ಞರು ಈ ಫಲಿತಾಂಶಗಳನ್ನು ಬೇರೆ ಬೇರೆ ರೀತಿಗಳಲ್ಲಿ ವಿವರಿಸಲು ಯತ್ನಿಸಿದರು (ಉದಾ: ಪ್ರಬಲವಾದ ಮಾರುತಗಳು ಸಂವಹನೆಯಿಂದ ಶಾಖವನ್ನು ಗ್ರಹದ ಎಲ್ಲೆಡೆಗಳಿಗೆ ಹರಡುತ್ತಿವೆ ಎಂಬ ವಾದ). ಆದರೆ, ೧೯೬೫ರಲ್ಲಿ ರೆಡಾರ್ ಅವಲೋಕನೆಗಳು ಗ್ರಹದ ಅಕ್ಷೀಯ ಪರಿಭ್ರಮಣ ಕಾಲವು ೫೯ ದಿನಗಳೆಂದು ನಿರ್ಣಾಯಕವಾಗಿ ತೋರಿಸಿಕೊಟ್ಟವು. ಈ ಕಾಲವು ಬುಧದ ಕಕ್ಷೀಯ ಪರಿಭ್ರಮಣ ಕಾಲದ ೩ನೇ ೨ರಷ್ಟು ಇದೆಯೆಂದು ಗಮನಿಸಿದ ಇಟಲಿಯ ಖಗೋಳಶಾಸ್ತ್ರಜ್ಞನಾದ ಗ್ಯುಸೆಪ್ ಕೊಲಂಬೊ, ಬೇರೊಂದು ರೂಪದ ಉಬ್ಬರವಿಳಿತ ಹಿಡಿತವನ್ನು ಪ್ರಸ್ತಾಪಿಸಿದನು. ಈ ಹಿಡಿತದ ಪ್ರಕಾರ, ಗ್ರಹದ ಅಕ್ಷೀಯ ಮತ್ತು ಕಕ್ಷೀಯ ಪರಿಭ್ರಮಣ ಕಾಲಗಳು ೧:೧ ಅನುಪಾತದಲ್ಲಿ ಅನುರಣಿಸುವ ಬದಲು, ೨:೩ ಅನುಪಾತದಲ್ಲಿವೆ.[೨೦] ತದನಂತರ ಮ್ಯಾರಿನರ್ ೧೦ರಿಂದ ಬಂದ ಮಾಹಿತಿಯು ಈ ಪ್ರಮಾಣಗಳನ್ನು ಸಾಬೀತುಪಡಿಸಿತು.[೪] Archived 2012-06-24 ವೇಬ್ಯಾಕ್ ಮೆಷಿನ್ ನಲ್ಲಿ.

ಭೂಮಿಯಿಂದ ಮಾಡಿದ ಅವಲೋಕನೆಗಳಿಂದ ಬುಧದ ಬಗ್ಗೆ ಹೆಚ್ಚು ತಿಳಿದುಬರಲಿಲ್ಲ. ಬಾಹ್ಯಾಕಾಶ ಶೋಧಕಗಳು ಬುಧವನ್ನು ತಲುಪಿದ ಮೇಲೆಯೇ ಅದರ ಹಲವು ಮೂಲಭೂತ ಲಕ್ಷಣಗಳು ತಿಳಿದುಬಂದವು. ಆದರೆ ಇತ್ತೀಚೆಗಿನ ತಾಂತ್ರಿಕ ಪ್ರಗತಿಗಳ ಕಾರಣದಿಂದ, ಭೂಮಿಯಿಂದ ಮಾಡಬಹುದಾದ ಅವಲೋಕನೆಗಳೂ ಸುಧಾರಿಸಿವೆ: ೨೦೦೦ದಲ್ಲಿ ಮೌಂಟ್ ವಿಲ್ಸನ್ ವೀಕ್ಷಣಾಲಯಯದ ೬೦-ಅಂಗುಲದ ದೂರದರ್ಶಕವು ಮೊದಲಬಾರಿಗೆ, ಮ್ಯಾರಿನರ್ ಯಾತ್ರೆಯಲ್ಲಿ ಕಾಣಲಾಗದ ಬುಧದ ಭಾಗಗಳ ಉತ್ತಮ ಮಟ್ಟದ ಚಿತ್ರಗಳನ್ನು ತಯಾರಿಸಿತು.[೨೧]

ಬಾಹ್ಯಾಕಾಶ ಶೋಧಕಗಳಿಂದ ಸಂಶೋಧನೆ

[ಬದಲಾಯಿಸಿ]

ಬುಧವು ಸೂರ್ಯನಿಗೆ ಬಹಳ ಹತ್ತಿರವಿರುವುದರಿಂದ, ಭೂಮಿಯಿಂದ ಬುಧವನ್ನು ತಲುಪಲು ಕೆಲವು ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭೂಮಿಯಿಂದ ಬುಧದತ್ತ ಹೊರಟ ಗಗನನೌಕೆಯು ಸೂರ್ಯನ ಗುರುತ್ವ ವಲಯದೊಳಗೆ ೯ ಕೋಟಿಗಿ ಮೈಲಿಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಬೇಕು. ಭೂಮಿಯ ಕಕ್ಷೀಯ ಪರಿಭ್ರಮಣ ವೇಗವಾದ ೩೦ ಕಿ.ಮೀ./ಪ್ರತಿ ಕ್ಷಣ. ದಿಂದ ಹೊರಟು ಬುಧದ ಹತ್ತಿರದ ಕಕ್ಷೆಯನ್ನು ಪ್ರವೇಶಿಸಲು ಬೇಕಾದ ವೇಗ ವ್ಯತ್ಯಾಸವು (delta-v) ಬೇರೆ ಗ್ರಹಗಳಿಗೆ ಹೋಗಲು ಬೇಕಾಗುವ ವ್ಯತ್ಯಾಸಕ್ಕಿಂತ ಬಹಳ ಹೆಚ್ಚು.

ಸೂರ್ಯನ ಗುರುತ್ವ ವಲಯದೊಳಗೆ ಚಲಿಸುವಾಗ ಹೊರಬರುವ ಸುಪ್ತ ಶಕ್ತಿಯು (potential energy) ಚಲನ ಶಕ್ತಿಯಾಗಿ (kinetic energy) ಮಾರ್ಪಡುತ್ತದೆ; ಇದರಿಂದಾಗಿ, ಬುಧವನ್ನು ವೇಗವಾಗಿ ಹಾದುಹೋಗುವುದಲ್ಲದೆ ಇನ್ನೇನಾದರೂ ಮಾಡುವ ಉದ್ದೇಶವಿದ್ದಲ್ಲಿ, ಅದಕ್ಕೆ ಇನ್ನೊಂದಷ್ಟು ವೇಗ ವ್ಯತ್ಯಾಸವು ಖರ್ಚಾಗುತ್ತದೆ. ಬುಧವು ವಿರಳವಾದ ವಾಯುಮಂಡಲವನ್ನು ಹೊಂದಿರುವುದರಿಂದ, ಗಗನನೌಕೆಯು ಗ್ರಹದ ಮೇಲಿಳಿಯಲು ಅಥವಾ ಸ್ಥಿರವಾದ ಕಕ್ಷೆಯನ್ನು ಪ್ರವೇಶಿಸಲು, ಗಾಳಿತಡೆಯನ್ನು (aerobraking) ಉಪಯೋಗಿಸಲಾಗುವುದಿಲ್ಲ. ಬದಲಿಗೆ, ಗಗನನೌಕೆಯು ತನ್ನ ರಾಕೆಟ್ಟುಗಳ ಮೋಟಾರುಗಳಿಂದಲೇ ನಿಧಾನವಾಗಬೇಕು. ವಾಸ್ತವವಾಗಿ, ಸೌರಮಂಡಲದಿಂದ ಪೂರ್ಣವಾಗಿ ಮುಕ್ತಿ ಪಡೆಯುವುದಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚು ಇಂಧನವು ಬುಧ ಯಾತ್ರೆಗೆ ಬೇಕಾಗುತ್ತದೆ!! ಈ ಎಲ್ಲಾ ಕಾರಣಗಳಿಂದಾಗಿ ಇದುವರೆಗೂ ಒಂದೇ ಒಂದು ಗಗನನೌಕೆಯು ಬುಧವನ್ನು ತಲುಪಿದೆ.

ಮ್ಯಾರಿನರ್ ೧೦

[ಬದಲಾಯಿಸಿ]
ಬುಧವನ್ನು ಇದುವರೆಗೆ ತಲುಪಿರುವ ಏಕಮಾತ್ರ ಶೋಧಕವಾದ ಮ್ಯಾರಿನರ್ ೧೦.

ಬುಧವನ್ನು ಸಮೀಪಿಸಿರುವ ಏಕೈಕ ಗಗನನೌಕೆಯೆಂದರೆ ನಾಸಾದ ಮ್ಯಾರಿನರ್ ೧೦ (೧೯೭೪-೧೯೭೫).[೧೭] ಈ ನೌಕೆಯು ಶುಕ್ರದ ಗುರುತ್ವವನ್ನು ಬಳಸಿ, ಬುಧವನ್ನು ಸಮೀಪಿಸಲು ಬೇಕಾಗುವಂತೆ ತನ್ನ ವೇಗವನ್ನು ಸರಿಪಡಿಸಿಕೊಂಡಿತು - ಗುರುತ್ವ "ಉಯ್ಯಾಲೆ" ಪರಿಣಾಮವನ್ನು ಬಳಸಿದ ಪ್ರಪ್ರಥಮ ನೌಕೆ ಮ್ಯಾರಿನರ್ ೧೦. ಮ್ಯಾರಿನರ್ ೧೦ ನಿಕಟದಿಂದ ಬುಧದ ಮೇಲ್ಮೈನ ಚಿತ್ರಗಳನ್ನು ತೆಗೆಯಿತು. ಬುಧವು ಕುಳಿಗಳಿಮ್ದ ವ್ಯಾಪಿಸಲ್ಪಟ್ಟಿದೆಯೆಂದು ತೋರಿಸಿದ ಈ ಚಿತ್ರಗಳು ಅದರ ಮೇಲಿದ್ದ ಕಡಿದಾದ ಬಂಡೆಗಳಂಥ ಇತರ ವೈಶಿಷ್ಟ್ಯಗಳನ್ನೂ ಬಯಲುಮಾಡಿದವು. ದುರದೃಷ್ಟವಶಾತ್, ಮ್ಯಾರಿನರ್ ಪ್ರತಿಬಾರಿ ಬುಧದ ಸಮೀಪಕ್ಕೆ ಬಂದಾಗಲೂ, ಗ್ರಹದ ಒಂದೇ ಮುಖವು ಬೆಳಕಾಗಿದ್ದುದರಿಂದ, ಅದರ ಮೇಲ್ಮೈನ ಕೇವಲ ೪೫% ವಿಸ್ತೀರ್ಣದ ನಕ್ಷೆಯನ್ನು ಮಾತ್ರ ತಯಾರಿಸಲಾಯಿತು.

ಮೂರು ಬಾರಿ ಬುಧದ ಸಮೀಪಕ್ಕೆ ಬಂದ ಈ ನೌಕೆಯು ಒಮ್ಮೆ ಅದರ ಮೇಲ್ಮೈಯಿಂದ ೩೨೭ ಕಿ.ಮೀ.ಗಳ ಅಂತರದಲ್ಲಿ ಹಾದುಹೋಯಿತು. ಮೊದಲನೇ ಬಾರಿ ನೌಕೆಯು ಗ್ರಹದ ಸಮೀಪಕ್ಕೆ ಬಂದಾಗ ಅದರ ಉಪಕರಣಗಳು ಕಾಂತಕ್ಷೇತ್ರವನ್ನು ಪತ್ತೆ ಹಚ್ಚಿದವು. ಬುಧದ ಅಕ್ಷೀಯ ಪರಿಭ್ರಮಣವು ಬಹಳ ನಿಧಾನವಾಗಿರುವುದರಿಂದ ಅಲ್ಲಿ ಕಾಂತಕ್ಷೇತ್ರವಿಲ್ಲವೆಂದು ನಂಬಿದ್ದ ಭೂವಿಜ್ಞಾನಿಗಳಿಗೆ ಇದು ಆಶ್ಚರ್ಯಕರ ವಿಷಯವಾಯಿತು. ಎರಡನೇ ಬಾರಿಯ ಸಾಮೀಪ್ಯತೆಯನ್ನು ಮುಖ್ಯವ್ವಗಿ ಚಿತ್ರಗಳನ್ನು ತೆಗೆಯಲು ಬಳಸಲಾಯಿತು. ಆದರೆ ಮೂರನೇ ಬಾರಿ ಕಾಂತಕ್ಷೇತ್ರದ ಬಗ್ಗೆ ವ್ಯಾಪಕವಾಗಿ ಮಾಹಿತಿಯನ್ನು ಸಂಗ್ರಹಿಸಲಾಯಿತು. ಈ ಮಾಹಿತಿಯಿಂದ, ಬುಧದ ಕಾಂತಕ್ಷೇತ್ರವು ಭೂಮಿಯ ಕಾಂತಕ್ಷೇತ್ರದಂತೆಯೇ ಇದ್ದು ಸೌರಮಾರುತಗಳಿಗೆ ತಡೆಯೊಡ್ಡಿ ಮಾರುತಗಳನ್ನು ತನ್ನ ಸುತ್ತ ಕಳುಹಿಸುತ್ತದೆಂಬ ವಿಷಯವು ಬೆಳಕಿಗೆ ಬಂದಿತು. ಹೋಲಿಕೆಯಲ್ಲಿ, ಚಂದ್ರನ ಮೇಲಿರುವ ಕಾಂತಕ್ಷೇತ್ರವು ಬಹಳ ದುರ್ಬಲವಾಗಿರುವುದರಿಂದ, ಸೌರಮಾರುತಗಳು ಅದರ ಮೇಲ್ಮೈಯನ್ನು ತಲುಪುತ್ತವೆ. ಆದರೆ, ಬುಧದ ಕಾಂತಕ್ಷೇತ್ರವು ಹೇಗೆ ಉದ್ಭವವಾಯಿತು ಎನ್ನುವುದಕ್ಕೆ ಯಾವುದೇ ಒಂದು ನಿರ್ಣಾಯಕ ವಾದವು ಇನ್ನೂ ಲಭ್ಯವಿಲ್ಲ.

ಕೊನೆಯ ಸಾಮೀಪ್ಯತೆಯ ಕೆಲವೇ ದಿನಗಳ ನಂತರ ಮ್ಯಾರಿನರ್ ೧೦ರ ಇಂಧನವು ಮುಗಿದುಹೋಯಿತು. ಇದಾದ ಮೇಲೆ ನೌಕೆಯ ಕಕ್ಷೆಯನ್ನು ಸರಿಯಾಗಿ ನಿಯಂತ್ರಿಸಲು ಆಗಲಿಲ್ಲವಾದ್ದರಿಂದ, ತನ್ನ ಕೆಲಸ-ಕಾರ್ಯಗಳನ್ನು ನಿಲ್ಲಿಸಿಬಿಡುವಂತೆ ಅದಕ್ಕೆ ಆದೇಶಿಸಲಾಯಿತು. ಈ ನೌಕೆಯು ಇನ್ನೂ ಸೂರ್ಯನ ಸುತ್ತ ಪರಿಭ್ರಮಿಸುತ್ತ, ಪ್ರತಿ ಕೆಲವು ತಿಂಗಳುಗಳಿಗೊಮ್ಮೆ ಬುಧದ ಹತ್ತಿರ ಬರುತ್ತದೆಯೆಂದು ಯೋಚಿಸಲಾಗಿದೆ.[೨೨]

ಮೆಸೆಂಜರ್

[ಬದಲಾಯಿಸಿ]

ಬುಧಕ್ಕೆ ಎರಡನೇ ಯಾತ್ರೆಯಾದ ಮೆಸೆಂಜರ್‌ನ್ನು ಆಗಸ್ಟ್ ೨, ೨೦೦೪ರಂದು ನಾಸಾ ಕೇಪ್ ಕನಾವರಲ್ ವಾಯುಸೇನಾ ನೆಲೆಯಿಂದ ಬೋಯಿಂಗ್ ಡೆಲ್ಟಾ ೨ ರಾಕೆಟ್ಟುಗಳ ಮೇಲೆ ಉಡಾಯಿಸಿತು. ಗಗನನೌಕೆಯು ಗ್ರಹಗಳ ಸಮೀಪದಲ್ಲಿ ಹಲವು ಬಾರಿ ಹಾದುಹೋಗಿ ಬುಧದ ಕಕ್ಷೆಯನ್ನು ಪ್ರವೇಶಿಸಲು ಬೇಕಾದ ಪಥವನ್ನು ತಲುಪುತ್ತದೆ. ಇದು ಫೆಬ್ರವರಿ ೨೦೦೫ರಲ್ಲಿ ಭೂಮಿಯ ಸಮೀಪಕ್ಕೆ ಹಾಗೂ ಅಕ್ಟೋಬರ್ ೨೦೦೬ರಲ್ಲಿ ಶುಕ್ರದ ಸಮೀಪಕ್ಕೆ ಬಂದಿತು. ೨೦೦೭ರಲ್ಲಿ ಇನ್ನೊಮ್ಮೆ ಶುಕ್ರದ ಸಮೀಪಕ್ಕೆ ಬರಲಿದೆ. ಇದರ ನಂತರ ೨೦೦೮ ಮತ್ತು ೨೦೦೯ರಲ್ಲಿ ಮೂರು ಬಾರಿ ಬುಧದ ಸಮೀಪಕ್ಕೆ ಬಂದು, ೨೦೧೧ರಲ್ಲಿ ಅದರ ಸುತ್ತ ಕಕ್ಷೆಯನ್ನು ಪ್ರವೇಶಿಸಲಿದೆ.

ಈ ಯಾತ್ರೆಯು ಆರು ಮುಖ್ಯವಾದ ವಿಷಯಗಳ ಮೇಲೆ ಬೆಳಕುದೋರುವ ಉದ್ದೇಶವನ್ನು ಹೊಂದಿದೆ: ಬುಧದ ಹೆಚ್ಚಿನ ಸಾಂದ್ರತೆ, ಅದರ ಕಾಂತಕ್ಷೇತ್ರದ ಸ್ವರೂಪ, ಅದರ ಒಳಭಾಗದ ರಚನೆ, ಬುಧವು ತನ್ನ ಧ್ರುವಗಳಲ್ಲಿ ನಿಜವಾಗಿಯೂ ಹಿಮವನ್ನು ಹೊಂದಿದೆಯೆ?, ಮತ್ತು ಅದರ ವಾಯುಮಂಡಲವು ಹೇಗೆ ಇಷ್ಟೊಂದು ವಿರಳವಾಯಿತು. ಈ ಉತ್ತರಗಳನ್ನು ಕಂಡುಹಿಡಿಯಲು, ಮೆಸೆಂಜರ್ ಶೋಧಕಗವು ಮ್ಯಾರಿನರ್ ೧೦ ತೆಗೆದಿದ್ದಕ್ಕಿಂತ ಹೆಚ್ಚು ಉತ್ತಮ ದರ್ಜೆಯ ಚಿತ್ರಗಳನ್ನು ತೆಗೆಯಬಲ್ಲ ಉಪಕರಣಗಳನ್ನು, ಮೇಲ್ಮೈಯಲ್ಲಿರುವ ಮೂಲವಸ್ತುಗಳನ್ನು ಕಂಡುಹಿಡಿಯಲು ವಿವಿಧ ವರ್ಣಪಟಲಮಾಪಕಗಳನ್ನು, ಮತ್ತು ವಿದ್ಯುತ್ಕಣಗಳ ವೇಗವನ್ನು ನಿರ್ಧರಿಸಲು ಕಾಂತಮಾಪಕವನ್ನು ಹೊಂದಿದೆ. ಶೋಧಕವು ಗ್ರಹವನ್ನು ಪರಿಭ್ರಮಿಸುವಾಗ ವೇಗದಲ್ಲುಂಟಾಗುವ ಸೂಕ್ಷ್ಮ ವ್ಯತ್ಯಾಸಗಳಿಂದ, ಗ್ರಹದ ಒಳ ರಚನೆಯನ್ನು ತರ್ಕಿಸಲಾಗುವುದು.[೨೩]

ಬೆಪಿಕೊಲಂಬೊ

[ಬದಲಾಯಿಸಿ]
ಮ್ಯಾರಿನರ್ ೧೦ ನೌಕೆ ತೆಗೆದ ಬುಧದ ಚಿತ್ರ

ಜಪಾನ್ ಮತ್ತು ಯೂರೋಪ್ ಬಾಹ್ಯಾಕಾಶ ಸಂಸ್ಥೆಯು ಜಂಟಿಯಾಗಿ ಬೆಪಿಕೊಲಂಬೊ ಎಂಬ ಹೆಸರಿನ ಬುಧಯಾತ್ರೆಯ ಯೋಜನೆಯನ್ನು ರೂಪಿಸುತ್ತಿವೆ. ಇದು ಬುಧವನ್ನು ೨ ಶೋಧಕಗಳೊಂದಿಗೆ ಪರಿಭ್ರಮಿಸುತ್ತದೆ: ಒಂದು ಶೋಧಕವು ಗ್ರಹದ ನಕ್ಷೆಯನ್ನು ತಯಾರಿಸುತ್ತದೆ ಮತ್ತು ಇನ್ನೊಂದು ಅದರ ಕಾಂತಗೋಳವನ್ನು ಅಧ್ಯಯನ ಮಾಡುತ್ತದೆ. ಆರಂಭದಲ್ಲಿ ಈ ಯೋಜನೆಯ ಒಂದು ಇಳಿಯುವ ಭಾಗವನ್ನು ಒಳಗೊಂಡಿದ್ದರೂ, ಈಗ, ಇದನ್ನು ಕೈಬಿಡಲಾಗಿದೆ. ಈ ಶೋಧಕಗಳನ್ನು ರಷ್ಯಾದ ಸೋಯುಜ್ ರಾಕೆಟ್‌ಗಳು ೨೦೧೩ರಲ್ಲಿ ಹಾರಿಸುತ್ತವೆ. ಮೆಸೆಂಜರ್‌ನಂತೆಯೇ ಬುಧದ ಮಾರ್ಗಮಧ್ಯದಲ್ಲಿ ಬೇರೆ ಗ್ರಹಗಳ ಸಮೀಪಕ್ಕೆ ಹೋಗಲಿರುವ ಬೆಪಿಕೊಲಂಬೊ ಯಾನವು ಚಂದ್ರ ಮತ್ತು ಶುಕ್ರಗಳ ಬಳಿಯೂ ಹೋಗಿ ಬುಧದ ಸುತ್ತ ಪರಿಭ್ರಮಿಸುವ ಮುನ್ನ ಅದರ ಬಳಿ ಹಲವು ಬಾರಿ ಹಾದುಹೋಗಲಿವೆ. ಈ ಶೋಧಕಗಳು ೨೦೧೯ರಲ್ಲಿ ಬುಧವನ್ನು ತಲುಪಿ ಒಂದು ವರ್ಷದ ಕಾಲ ಗ್ರಹದ ಮೇಲ್ಮೈ ಮತ್ತು ಕಾಂತಗೋಳದ ನಕ್ಷೆಯನ್ನು ತಯಾರಿಸಲಿವೆ.

ಮೆಸೆಂಜರ್‌ನಂತೆಯೇ ಈ ಯಾನವು ವಿವಿಧ ವರ್ಣಪಟಲಮಾಪಕಗಳನ್ನು ಹೊಂದಿದ್ದು, ನಸುಗೆಂಪು, ಅತಿನೇರಳೆ, ಕ್ಷ-ಕಿರಣ ಮತ್ತು ಗಾಮಾ ಕಿರಣಗಳು ಸೇರಿದಂತೆ ವಿವಿಧ ಅಲೆಯಳತೆಗಳಲ್ಲಿ ಬುಧವನ್ನು ಅಧ್ಯಯನ ಮಾಡುತ್ತವೆ. ಇದಲ್ಲದೆ, ಶೋಧಕಗಳು ಸೂರ್ಯನಿಗೆ ಬಹಳ ಹತ್ತಿರವಿರುವ ಸನ್ನಿವೇಶವನ್ನು ಬಳಸಿ ಸಾಮಾನ್ಯ ಸಾಪೇಕ್ಷತಾವಾದವನ್ನು ಹೆಚ್ಚು ನಿಖರತೆಯಿಂದ ಪರೀಕ್ಷಿಸುವ ಆಸೆಯನ್ನೂ ಈ ಯಾತ್ರೆಯ ನಿರ್ದೇಶಕರು ಹೊಂದಿದ್ದಾರೆ.

ಸೂರ್ಯನೊಂದಿಗೆ ಬುಧದ ಕಕ್ಷೆಯ ಅನುರಣನೆಯನ್ನು ಮೊದಲಬಾರಿಗೆ ಕಂಡುಹಿಡಿದ ಮತ್ತು ೧೯೭೪ರಲ್ಲಿ ಮ್ಯಾರಿನರ್ ೧೦ರ ಗುರುತ್ವ ಸಹಾಯಿತ ಪಥವನ್ನು ನಿರ್ಧರಿಸಲು ಸಹಾಯಮಾಡಿದ ವಿಜ್ಞಾನಿ ಗ್ಯುಸೆಪ್ (ಬೆಪಿ) ಕೊಲಂಬೊ ಅವರ ಹೆಸರನ್ನು ಈ ಯಾನಕ್ಕೆ ಇಡಲಾಗಿದೆ.[೨೪]

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://astrogeology.usgs.gov/Projects/BrowseTheGeologicSolarSystem/MercuryBack.html
  2. Lyttleton, R. A. (೧೯೬೯), On the Internal Structures of Mercury and Venus, Astrophysics and Space Science, v.೫, p.೧೮
  3. ೩.೦ ೩.೧ Benz, W., Slattery, W. L., Cameron, A. G. W. (೧೯೮೮), Collisional stripping of Mercury's mantle, Icarus, v. ೭೪, p. ೫೧೬-೫೨೮.
  4. Schenk P., Melosh H.J. (೧೯೯೪), Lobate Thrust Scarps and the Thickness of Mercury's Lithosphere, Abstracts of the ೨೫th Lunar and Planetary Science Conference, ೧೯೯೪LPI....೨೫.೧೨೦೩S
  5. Cameron, A. G. W. (೧೯೮೫), The partial volatilization of Mercury, Icarus, v. ೬೪, p. ೨೮೫-೨೯೪.
  6. Weidenschilling S.J. (೧೯೮೭), Iron/silicate fractionation and the origin of Mercury, Icarus, v. ೩೫, p. ೯೯-೧೧೧
  7. Schultz P.H., Gault D.E. (೧೯೭೫), Seismic effects from major basin formations on the moon and Mercury, The Moon, vol. ೧೨, Feb. ೧೯೭೫, p. ೧೫೯-೧೭೭
  8. Dzurisin D. (೧೯೭೮), The tectonic and volcanic history of Mercury as inferred from studies of scarps, ridges, troughs, and other lineaments, Journal of Geophysical Research, v. ೮೩, p. ೪೮೮೩-೪೯೦೬
  9. Van Hoolst, T., Jacobs, C. (೨೦೦೩), Mercury's tides and interior structure, Journal of Geophysical Research, v. ೧೦೮, p. ೭.
  10. Slade M.A., Butler B.J., Muhleman D.O. (1992), Mercury radar imaging - Evidence for polar ice, Science, v. 258, p. 635-640.
  11. Rawlins K., Moses J.I., Zahnle K.J. (೧೯೯೫), Exogenic Sources of Water for Mercury's Polar Ice, DPS, v. ೨೭, p. ೨೧೧೨
  12. Hunten D.M., Shemansky D.E., Morgan T.H. (೧೯೮೮), The Mercury atmosphere, In: Mercury (A೮೯-೪೩೭೫೧ ೧೯-೯೧). University of Arizona Press, p. ೫೬೨-೬೧೨
  13. Spohn, T., Breuer, D. (೨೦೦೫), Core Composition and the Magnetic Field of Mercury, American Geophysical Union, Spring Meeting ೨೦೦೫
  14. Correia, A. C. M., Laskar, J. (೨೦೦೪), Mercury's capture into the ೩/೨ spin-orbit resonance as a result of its chaotic dynamics, Nature, v. ೪೨೯, p. ೮೪೮-೮೫೦.
  15. Espenak F., Twelve Year Planetary Ephemeris: ೧೯೯೫ - ೨೦೦೬, NASA Reference Publication ೧೩೪೯ [೧]
  16. "Mercury and ancient cultures (೨೦೦೨), JHU/APL". Archived from the original on 2012-07-23. Retrieved 2007-01-07.
  17. ೧೭.೦ ೧೭.೧ James A. Dunne and Eric Burgess (೧೯೭೮), The Voyage of Mariner ೧೦ - Mission to Venus and Mercury, NASA History Office publication SP-೪೨೪ [೨] Archived 2006-12-31 ವೇಬ್ಯಾಕ್ ಮೆಷಿನ್ ನಲ್ಲಿ.
  18. Sinnott R.W., Meeus J. (೧೯೮೬), John Bevis and a Rare Occultation, Sky and Telescope, v. ೭೨, p. ೨೨೦
  19. Holden E.S. (೧೮೯೦), Announcement of the Discovery of the Rotation Period of Mercury [by Professor Schiaparelli], Publications of the Astronomical Society of the Pacific, v. ೨, p. ೭೯
  20. Colombo G. (೧೯೬೫), Rotational Period of the Planet Mercury, Nature, v. ೨೦೮, p. ೫೭೫
  21. Dantowitz R.F., Teare S.W., Kozubal M.J. (೨೦೦೦), Ground-based High-Resolution Imaging of Mercury, Astronomical Journal, v. ೧೧೯, pp. ೨೪೫೫-೨೪೫೭ [೩] Archived 2015-03-19 ವೇಬ್ಯಾಕ್ ಮೆಷಿನ್ ನಲ್ಲಿ.
  22. "NSSDC Master Catalog Display: Mariner 10". Archived from the original on 2004-10-31. Retrieved October 20. {{cite web}}: Check date values in: |accessdate= (help); Unknown parameter |accessyear= ignored (|access-date= suggested) (help)
  23. http://messenger.jhuapl.edu/ Johns Hopkins University's MESSENGER mission web pages]
  24. ESA Science & Technology: BepiColombo


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಬುಧ&oldid=1242819" ಇಂದ ಪಡೆಯಲ್ಪಟ್ಟಿದೆ