ನಸುಗೆಂಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಸುಗೆಂಪು ಎಂದರೆ ತೆಳು ಕೆಂಪು ಬಣ್ಣ. ಯೂರೋಪ್ ಮತ್ತು ಅಮೇರಿಕದಲ್ಲಿನ ಸಮೀಕ್ಷೆಗಳ ಪ್ರಕಾರ, ನಸುಗೆಂಪು ಬಣ್ಣವನ್ನು ಬಹುತೇಕವೇಳೆ ಲಾವಣ್ಯ, ವಿನಮ್ರತೆ, ಸೂಕ್ಷ್ಮತೆ, ಮೃದುತ್ವ, ಮಾಧುರ್ಯ, ಬಾಲ್ಯ, ಸ್ತ್ರೀತ್ವ ಮತ್ತು ಪ್ರಣಯ ಪ್ರವೃತ್ತಿಯೊಂದಿಗೆ ಸಂಬಂಧಿಸಲಾಗುತ್ತದೆ. ನಸುಗೆಂಪು ಮತ್ತು ಬಿಳಿ ಬಣ್ಣದ ಸಂಯೋಜನೆಯನ್ನು ಪವಿತ್ರತೆ ಮತ್ತು ಮುಗ್ಧತೆಯೊಂದಿಗೆ ಸಂಬಂಧಿಸಲಾಗುತ್ತದೆ, ಮತ್ತು ನಸುಗೆಂಪು ಹಾಗೂ ಕಪ್ಪು ಬಣ್ಣದ ಸಂಯೋಜನೆಯು ಕಾಮಪ್ರವೃತ್ತಿ ಮತ್ತು ಸೆಳೆತದೊಂದಿಗೆ ಸಂಬಂಧ ಹೊಂದಿದೆ.[೧]

ಸೂರ್ಯನ ಬಿಳಿ ಬೆಳಕಿನ ಕಿರಣವು ವಾತಾವರಣದ ಮೂಲಕ ಚಲಿಸಿದಾಗ, ಕೆಲವು ಬಣ್ಣಗಳು ವಾಯು ಅಣುಗಳು ಮತ್ತು ವಾಯುಗಾಮಿ ಕಣಗಳಿಂದ ಕಿರಣದಿಂದ ಹೊರಗೆ ಚೆದುರಿಬಿಡುತ್ತವೆ. ಇದನ್ನು ರೇಲಿ ಚೆದುರುವಿಕೆ ಎಂದು ಕರೆಯಲಾಗುತ್ತದೆ. ನೀಲಿ ಮತ್ತು ಹಸಿರಿನಂತಹ ಕಡಿಮೆ ತರಂಗಾಂತರದ ಬಣ್ಣಗಳು ಹೆಚ್ಚು ಪ್ರಬಲವಾಗಿ ಚೆದುರುತ್ತವೆ ಮತ್ತು ಅಂತಿಮವಾಗಿ ಕಣ್ಣನ್ನು ತಲುಪುವ ಬೆಳಕಿನಿಂದ ತೆಗೆಯಲ್ಪಡುತ್ತವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ, ವಾತಾವರಣದ ಮೂಲಕ ಕಣ್ಣಿಗೆ ತಲುಪುವ ಸೂರ್ಯನ ಬೆಳಕಿನ ಮಾರ್ಗವು ಅತ್ಯಂತ ಉದ್ದವಾಗಿರುವಾಗ, ಕೆಂಪು ಮತ್ತು ಬಿಳಿ ಘಟಕಗಳು ಬಹುತೇಕ ಸಂಪೂರ್ಣವಾಗಿ ತೆಗೆಯಲ್ಪಡುತ್ತವೆ, ಮತ್ತು ಹೆಚ್ಚು ಉದ್ದನೆಯ ತರಂಗಾಂತರದ ಕಿತ್ತಳೆ, ಕೆಂಪು ಮತ್ತು ನಸುಗೆಂಪು ಬೆಳಕು ಉಳಿಯುತ್ತದೆ. ಉಳಿದಿರುವ ನಸುಗೆಂಪು ಸೂರ್ಯನ ಬೆಳಕು ಕೂಡ ಮೋಡದ ಹನಿಗಳು ಮತ್ತು ಇತರ ತುಲನಾತ್ಮಕವಾಗಿ ದೊಡ್ಡ ಕಣಗಳಿಂದ ಚೆದುರಲ್ಪಡಬಹುದು. ಇವು ದಿಗಂತದ ಮೇಲಿನ ಆಕಾಶಕ್ಕೆ ನಸುಗೆಂಪು ಅಥವಾ ಕೆಂಪು ಹೊಳಪನ್ನು ನೀಡುತ್ತದೆ.

ನಸುಗೆಂಪು ಹೂಗಳ ಅತ್ಯಂತ ಸಾಮಾನ್ಯ ಬಣ್ಣಗಳಲ್ಲಿ ಒಂದು; ಇದು ಪರಾಗಸ್ಪರ್ಶಕ್ಕೆ ಅಗತ್ಯವಾದ ಕೀಟಗಳು ಮತ್ತು ಪಕ್ಷಿಗಳನ್ನು ಆಕರ್ಷಿಸುವ ಮತ್ತು ಬಹುಶಃ ಪರಭಕ್ಷಕರನ್ನು ತಡೆಗಟ್ಟುವ ಕಾರ್ಯಮಾಡುತ್ತದೆ. ಈ ಬಣ್ಣವು ಆ್ಯಂಥೊಸೈಯನಿನ್‍ಗಳೆಂದು ಕರೆಯಲ್ಪಡುವ ನೈಸರ್ಗಿಕ ವರ್ಣದ್ರವ್ಯಗಳಿಂದ ಬರುತ್ತದೆ. ಇವು ರಾಸ್‍ಬೆರಿಗಳಿಗೆ ಕೂಡ ನಸುಗೆಂಪು ಬಣ್ಣವನ್ನು ಒದಗಿಸುತ್ತವೆ.

ಮುಂಚಿನ ನಸುಗೆಂಪು ಕಟ್ಟಡಗಳನ್ನು ಸಾಮಾನ್ಯವಾಗಿ ಇಟ್ಟಿಗೆ ಅಥವಾ ಮರಳುಗಲ್ಲಿನಿಂದ ಕಟ್ಟಲಾಗುತ್ತಿತ್ತು. ಮರಳುಗಲ್ಲು ತನ್ನ ತಿಳಿ ಗೆಂಪು ಬಣ್ಣವನ್ನು ಹೆಮಟೈಟ್ ಅಥವಾ ಕಬ್ಬಿಣದ ಅದಿರಿನಿಂದ ತೆಗೆದುಕೊಳ್ಳುತ್ತದೆ. ನಸುಗೆಂಪು ಮತ್ತು ಇತರ ಮಂದಪ್ರಕಾಶದ ಬಣ್ಣಗಳ ಸುವರ್ಣ ಯುಗವಾದ ೧೮ನೇ ಶತಮಾನದಲ್ಲಿ ಯೂರೋಪ್‍ನಾದ್ಯಂತ ನಸುಗೆಂಪು ಮಹಲುಗಳು ಮತ್ತು ಇಗರ್ಜಿಗಳನ್ನು ಕಟ್ಟಲಾಯಿತು. ಹೆಚ್ಚು ಆಧುನಿಕ ನಸುಗೆಂಪು ಕಟ್ಟಡಗಳು ಸಾಮಾನ್ಯವಾಗಿ ಪರದೇಶದ್ದಂತೆ ಕಾಣಲು ಅಥವಾ ಗಮನವನ್ನು ಸೆಳೆಯಲು ನಸುಗೆಂಪು ಬಣ್ಣವನ್ನು ಬಳಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Heller, Eva: Psychologie de la couleur – effets et symboliques, pp. 179-184