ವಿಷಯಕ್ಕೆ ಹೋಗು

ಹೀಲಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹೀಲಿಯಂ ಇಂದ ಪುನರ್ನಿರ್ದೇಶಿತ)
ಹೀಲಿಯಂ ಲೇಸರ್

ಸೂರ್ಯಧಾತು ಅಥವಾ ಹೀಲಿಯಮ್ ಒಂದು ರಾಸಾಯನಿಕ ಅನಿಲ. ಜಲಜನಕದ ಬಳಿಕ ಅತ್ಯಂತ ಹಗುರವಾದ ಮೂಲವಸ್ತು. ಇದರ ಪರಮಾಣು ಸಂಖ್ಯೆ ೨. ಸೂರ್ಯಧಾತುವು ಒಂದು ಜಡ ಅನಿಲ. ಇದು ಬ್ರಹ್ಮಾಂಡದಲ್ಲಿ ಹೇರಳವಾಗಿರುವ ಅನಿಲವಾದರೂ ಭೂಮಿಯಲ್ಲಿ ಅಲ್ಪ ಪ್ರಮಾಣದಲ್ಲಿದೆ. ಸೂರ್ಯ ಹಾಗೂ ನಕ್ಷತ್ರಗಳು ಮುಖ್ಯವಾಗಿ ಸೂರ್ಯಧಾತು ಹಾಗೂ ಜಲಜನಕಗಳಿಂದ ಮಾಡಲ್ಪಟ್ಟಿವೆ. ಇವುಗಳಲ್ಲಿ ಜಲಜನಕ ಪರಮಾಣುಗಳು ಸಂಯೋಗ [fuse]ಗೊಂಡು ಸೂರ್ಯಧಾತು ಪರಮಾಣುಗಳಾಗುವ ಕ್ರಿಯೆಯಿಂದಾಗಿ ನಿರಂತರವಾಗಿ ಶಕ್ತಿ ಬಿಡುಗಡೆ ಆಗುತ್ತಿರುತ್ತದೆ. ಇದೇ ತತ್ವ ಜಲಜನಕ ಬಾಂಬ್ ನ ಉತ್ಪಾದನೆಯಲ್ಲಿ ಬಳಕೆಯಾಗಿದೆ.

ಆವರ್ತಕೋಷ್ಟಕದ 0 ಗುಂಪಿನ 1ನೆಯ ಆವರ್ತದ ಜಡಾನಿಲ ಅಥವಾ ವಿರಳಾನಿಲ ಅಥವಾ ಶ್ರೇಷ್ಠ ಅನಿಲ ಧಾತು. ಪ್ರತೀಕ He. ಪರಮಾಣು ಸಂಖ್ಯೆ 2. ಪರಮಾಣು ತೂಕ 4.003. ದ್ರವನಬಿಂದು: 26 ಅಟ್ಮಾಸ್ಫಿಯರ್ ಸಂಮರ್ದದಲ್ಲಿ -272.050 ಸೆ; ಕುದಿಬಿಂದು, -268.790 ಸೆ ಸಾಪೇಕ್ಷ ಸಾಂದ್ರತೆ, 0.166. ಎಲೆಕ್ಟ್ರಾನ್ ವಿನ್ಯಾಸ 1s2. 2 ಸ್ಥಿರ (3He, 4He) ಮತ್ತು 4 ಅತಿ ಬೇಗನೆ ಕ್ಷಯಿಸುವ ವಿಕಿರಣಪಟು ಸಮಸ್ಥಾನಿಗಳಿವೆ. ಅತ್ಯಂತ ಹಗುರದ 2ನೆಯ ಧಾತು.

ಇತಿಹಾಸ

[ಬದಲಾಯಿಸಿ]

ಸೂರ್ಯಗ್ರಹಣ ಸಮಯದ[][] ವರ್ಣಗೋಳ ರೋಹಿತದಲ್ಲಿ ಹೀಲಿಯಮ್ ಸೂಚಕ ಉಜ್ಜ್ವಲ ಹಳದಿ ರೇಖೆಯನ್ನು ಫ್ರೆಂಚ್ ಖಗೋಳವಿಜ್ಞಾನಿ ಪಿಯರಿ ಜೂಲಿಸ್ ಸೀಸರ್ ಝ್ಹಾನ್‌ಸೆನ್ (1824-1907) ಆವಿಷ್ಕರಿಸಿದರೂ (1868)[] ಅದು ಸೋಡಿಯಮ್ ಧಾತುವಿಗೆ ಸಂಬಂಧಿಸಿದ್ದು ಎಂದು ಭಾವಿಸಿ ನಿರ್ಲಕ್ಷಿಸಿದ. ಅದೇ ವರ್ಷ ಬ್ರಿಟಿಷ್ ಖಗೋಳವಿಜ್ಞಾನಿ ಜೋಸೆಫ್ ನಾರ್ಮನ್ ಲಾಕ್ಯೆರ್ (1836-1920) ಸೌರ ರೋಹಿತದಲ್ಲಿ ಸೋಡಿಯಮ್‌ನ D1 ಮತ್ತು D2 ರೇಖೆಗಳೊಂದಿಗೆ ಹೊಂದಾಣಿಕೆ ಆಗದ ಇನ್ನೊಂದು ಹಳದಿ ರೇಖೆ ಇರುವುದನ್ನು ಗಮನಿಸಿದ. ಅಜ್ಞಾತ ಸೌರಧಾತುವಿಗೆ ಅದು ಸಂಬಂಧಿಸಿದ್ದೆಂದು ತರ್ಕಿಸಿ D3 ಎಂದು ಹೆಸರಿಸಿದ.[][] ಬ್ರಿಟಿಷ್ ರಸಾಯನವಿಜ್ಞಾನಿ ಎಡ್ವರ್ಡ್ ಫ್ರ‍್ಯಾಂಕ್‌ಲ್ಯಾಂಡ್ (1825-99) ಮತ್ತು ಲಾಕ್ಯೆರ್ ಅಜ್ಞಾತ ಧಾತುವಿಗೆ ಹೀಲಿಯಮ್ (ಗ್ರೀಕ್, ಹೀಲಿಯೋಸ್: ಸೂರ್ಯ) ಎಂದು ನಾಮಕರಣ ಮಾಡಿದರು.[][] ಸ್ಕಾಟಿಷ್ ರಸಾಯನವಿಜ್ಞಾನಿ ವಿಲಿಯಮ್ ರ‍್ಯಾಮ್‌ಸೇ (1852-1916) ಯುರೇನಿಯಮ್ ಅದುರು ಕ್ಲೀವೈಟನ್ನು ಕಾಸಿ ಹೀಲಿಯಮ್ ಅನಿಲ ಪಡೆದು (1895) ಭೂಮಿಯಲ್ಲಿಯೂ ಅದು ಲಭ್ಯ ಎಂದು ಸಿದ್ಧಪಡಿಸಿದ.[][] ಹೀಲಿಯಮ್ ವಿಕಿರಣಪಟು ಪದಾರ್ಥಗಳ ಸ್ವಾಭಾವಿಕ ವಿಘಟನೆಯ ಉತ್ಪನ್ನ ಎಂದು ಬ್ರಿಟಿಷ್ ರಸಾಯನವಿಜ್ಞಾನಿ ಫ್ರೆಡ್ರಿಕ್ ಸಾಡಿ (1877-1956) ಮತ್ತು ರ‍್ಯಾಮ್‌ಸೇ ಸಿದ್ಧಪಡಿಸಿದರು (1903). ಹೀಲಿಯಮ್ ಪರಮಾಣುವಿನ ನ್ಯೂಕ್ಲಿಯಸ್‌ಗಳೇ a-ಕಣಗಳು ಎಂದು ಬ್ರಿಟಿಷ್ ಭೌತವಿಜ್ಞಾನಿ ಅರ್ನೆಸ್ಟ್ ರುದರ್‌ಫರ್ಡ್ (1871-1937) ತೋರಿಸಿದ (1907).

ದೊರಕುವಿಕೆ

[ಬದಲಾಯಿಸಿ]

ವಿಶ್ವದ ರಾಶಿಯ ಶೇಕಡಾ 23 ಭಾಗ ಹೀಲಿಯಮ್. ಎಂದೇ, ಪ್ರಮುಖ ವಿಶ್ವದ್ರವ್ಯಗಳ ಸಾಲಿನಲ್ಲಿ ಇದಕ್ಕೆ ದ್ವಿತೀಯ ಸ್ಥಾನ. ಆದರೂ ಭೂಮಿಯಲ್ಲಿ ವಿರಳ ಲಭ್ಯ. ವಿಕಿರಣಪಟು ಕ್ಷಯದ ಉಪೋತ್ಪನ್ನವಾಗಿದ್ದರೂ ವಾಯುಗೋಳದಲ್ಲಿ ಸಂಚಯಿಸುವುದಿಲ್ಲ. ಭೂಗುರುತ್ವ ಇದನ್ನು ಹಿಡಿದಿಡಲು ಅಸಮರ್ಥವಾಗಿರುವುದು ಇದಕ್ಕೆ ಕಾರಣ. ಭೂವಾಯುಗೋಳದ ಶೇಕಡಾ 0.0005ರಷ್ಟಿರುವ ಈ ಅನಿಲ ವಿಕಿರಣಪಟು ಖನಿಜ, ಉಲ್ಕಾ ಕಬ್ಬಿಣ ಮತ್ತು ಖನಿಜ ಚಿಲುಮೆಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ದೊರೆಯುವ ನೈಸರ್ಗಿಕ ಅನಿಲದಲ್ಲಿ ಸಾಪೇಕ್ಷವಾಗಿ ಅಧಿಕ ಪ್ರಮಾಣದಲ್ಲಿ ಲಭ್ಯ (ಸು. 7.6%). ವಾಣಿಜ್ಯ ಪ್ರಮಾಣದಲ್ಲಿ ನೈಸರ್ಗಿಕ ಅನಿಲ ಮತ್ತು ವಾಯುವಿನಿಂದ ಆಹರಣ.

ಗುಣಲಕ್ಷಣಗಳು

[ಬದಲಾಯಿಸಿ]

ಬಣ್ಣ, ವಾಸನೆ ಮತ್ತು ರುಚಿ ಇಲ್ಲದ ಏಕಪರಮಾಣು ಅನಿಲ. ನೀರಿನಲ್ಲಿ ಲೀನಿಸುವುದಿಲ್ಲ. ರಾಸಾಯನಿಕವಾಗಿ ಜಡಾನಿಲವಾಗಿದ್ದರೂ ಹೀಲಿಯಮಿನ ನಿಯಾನ್ ಮತ್ತು ಹೈಡ್ರೊಜನ್ ಸಂಯುಕ್ತಗಳು ಪತ್ತೆಯಾಗಿವೆ. ಪ್ರಸಾಮಾನ್ಯ ವಾಯು ಸಂಮರ್ದದಲ್ಲಿ ತಣಿಸಿ ಘನೀಕರಿಸಲಾಗದ ಏಕೈಕ ಧಾತು.

-270.970 ಸೆ ತಾಪದ ಆಸುಪಾಸಿನಲ್ಲಿ ದ್ರವ ಹೀಲಿಯಮ್ ಅಸಾಮಾನ್ಯ ಗುಣಗಳನ್ನು ತೋರುತ್ತದೆ. ಇದರ ಎರಡು ಸ್ಥಿರ ಸಮಸ್ಥಾನಿಗಳೂ ಅಧಿತರಲಗಳಾಗುತ್ತವೆ (ಸೂಪರ್‌ಫ್ಲೂಯಿಡ್). ಅಳತೆ ಮಾಡಲಾಗದಷ್ಟು ಕಡಿಮೆ ಸ್ನಿಗ್ಧತೆಯದ್ರವ ಗುರುತ್ವಬಲದಿಂದ ಪ್ರಭಾವಿತವಾಗದೆ ಯಾವುದೇ ಮೇಲ್ಮೈಗುಂಟ ತೆಳು ಪೊರೆಯಾಗಿ ಪ್ರವಹಿಸುತ್ತದೆ. ಈ ತಾಪದಲ್ಲಿ 4He ಎರಡು ವಿಭಿನ್ನ ತರಲಗಳ (He I, He II) ಲಕ್ಷಣಗಳನ್ನು ತೋರುತ್ತದೆ. 4Heನ ಅಧಿತರಲತೆಯನ್ನು ರಷ್ಯನ್ ಭೌತವಿಜ್ಞಾನಿ ಪೀಟರ್ ಲಿಯೊನೈಡೊವಿಚ್ ಕಪಿಟ್ಝ (1894-1984) ಎಂಬಾತನೂ (1938)[೧೦] 3Heನದ್ದನ್ನು ಡೇವಿಡ್ ಎಮ್ ಲೀ, ಡೌಗ್ಲಾಸ್ ಡಿ ಒಷೆರಾಫ್ ಮತ್ತು ರಾಬರ್ಟ್ ಸಿ ರಿಚರ್ಡ್ಸನ್ ಎಂಬ ಅಮೆರಿಕನ್ ಭೌತವಿಜ್ಞಾನಿಗಳೂ ಆವಿಷ್ಕರಿಸಿದರು.

ಉಪಯೋಗಗಳು

[ಬದಲಾಯಿಸಿ]

ಇದು ಒಂದು ಜಡ ಅನಿಲವಾದುದರಿಂದ ಕೈಗಾರಿಕೆ, ವೈದ್ಯಕೀಯ, ವೈಜ್ಞಾನಿಕ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ಧಾರಾಳವಾಗಿ ಬಳಕೆಯಲ್ಲಿದೆ. ದ್ರವ ಸೂರ್ಯಧಾತುವನ್ನು ಸತ್ತ ದೇಹಗಳನ್ನು ಸಂರಕ್ಷಿಸಲು ಬಳಸುವರು.

ಅಲ್ಯೂಮಿನಿಯಮ್ ಮತ್ತು ಮೆಗ್ನೇಸಿಯಮಿನಂಥ ಹಗುರ ಲೋಹಗಳ ಜಡಾನಿಲ ಚಾಪ (ಆರ್ಕ್) ಬೆಸೆತದಲ್ಲಿ; ರಾಕೆಟ್ ನೋದನೆಯಲ್ಲಿ ಇಂಧನ ಟ್ಯಾಂಕ್‌ಗಳನ್ನು ಸಂಮರ್ದೀಕರಿಸಲು (ಕಾರಣ: ದ್ರವ ಹೈಡ್ರೊಜನಿನ ತಾಪದಲ್ಲಿಯೂ ಇದು ಅನಿಲ); ಪವನ ವಿಜ್ಞಾನದಲ್ಲಿ ಹವಾಬೆಲೂನುಗಳಲ್ಲಿ ಉತ್ಥಾಪಕ (ಲಿಫ್ಟಿಂಗ್) ಅನಿಲವಾಗಿ;[೧೧] ಅತಿಶೈತ್ಯ ವಿಜ್ಞಾನದಲ್ಲಿ ಶೈತ್ಯಕಾರಿಯಾಗಿ; ಅಧಿಕ ಸಂಮರ್ದ ಉಸಿರಾಟ ಪರಿಕರ್ಮಗಳಲ್ಲಿ (ಉದಾ: ಸ್ಕೂಬಾ ಡೈವಿಂಗ್, ಕೇಸನ್ ಕಾರ್ಯ) ಹೀಲಿಯಮ್ ಬಳಕೆ ಉಂಟು. ಹೀಲಿಯಮ್ ವಿಶ್ಲೇಷಣೆಯಿಂದ ಉಲ್ಕಾಪಿಂಡ ಮತ್ತು ಶಿಲೆಗಳ ವಯಸ್ಸು ನಿರ್ಧರಿಸುವುದೂ ಉಂಟು.

ಉಲ್ಲೇಖಗಳು

[ಬದಲಾಯಿಸಿ]
  1. Kochhar, R. K. (1991). "French astronomers in India during the 17th – 19th centuries". Journal of the British Astronomical Association. 101 (2): 95–100. Bibcode:1991JBAA..101...95K.
  2. Emsley, John (2001). Nature's Building Blocks. Oxford: Oxford University Press. pp. 175–179. ISBN 978-0-19-850341-5.
  3. In his initial report to the French Academy of Sciences about the 1868 eclipse, Janssen made no mention of a yellow line in the solar spectrum. See:
    • Janssen (1868) "Indication de quelques-uns des résultats obtenus à Cocanada, pendant l'éclipse du mois d'août dernier, et à la suite de cette éclipse" (Information on some of the results obtained at Cocanada, during the eclipse of the month of last August, and following that eclipse), Comptes rendus ... , 67 : 838–839.
    • Wheeler M. Sears, Helium: The Disappearing Element (Heidelberg, Germany: Springer, 2015), p. 44.
    • Françoise Launay with Storm Dunlop, trans., The Astronomer Jules Janssen: A Globetrotter of Celestial Physics (Heidelberg, Germany: Springer, 2012), p. 45.However, subsequently, in an unpublished letter of 19 December 1868 to Charles Sainte-Claire Deville, Janssen asked Deville to inform the French Academy of Sciences that : "Several observers have claimed the bright D line as forming part of the spectrum of the prominences on 18 August. The bright yellow line did indeed lie very close to D, but the light was more refrangible [i.e., of shorter wavelength] than those of the D lines. My subsequent studies of the Sun have shown the accuracy of what I state here." (See: (Launay, 2012), p. 45.)
  4. Lockyer, J. N. (October 1868). "Notice of an observation of the spectrum of a solar prominence". Proceedings of the Royal Society of London. 17: 91–92. Bibcode:1868RSPS...17...91L. doi:10.1098/rspl.1868.0011. JSTOR 112357. S2CID 163097539. Retrieved 3 June 2018.
  5. Hampel, Clifford A. (1968). The Encyclopedia of the Chemical Elements. New York: Van Nostrand Reinhold. pp. 256–268. ISBN 978-0-442-15598-8.
  6. Harper, Douglas. "helium". Online Etymology Dictionary.
  7. Thomson, William (August 3, 1871). "Inaugural Address of Sir William Thomson". Nature. 4 (92): 261–278 [268]. Bibcode:1871Natur...4..261.. doi:10.1038/004261a0. PMC 2070380. Archived from the original on December 2, 2016. Retrieved February 22, 2016. Frankland and Lockyer find the yellow prominences to give a very decided bright line not far from D, but hitherto not identified with any terrestrial flame. It seems to indicate a new substance, which they propose to call Helium
  8. Ramsay, William (1895). "On a Gas Showing the Spectrum of Helium, the Reputed Cause of D3, One of the Lines in the Coronal Spectrum. Preliminary Note". Proceedings of the Royal Society of London. 58 (347–352): 65–67. Bibcode:1895RSPS...58...65R. doi:10.1098/rspl.1895.0006. S2CID 129872109.
  9. Ramsay, William (1895). "Helium, a Gaseous Constituent of Certain Minerals. Part I". Proceedings of the Royal Society of London. 58 (347–352): 81–89. Bibcode:1895RSPS...58...80R. doi:10.1098/rspl.1895.0010.
  10. Kapitza, P. (1938). "Viscosity of Liquid Helium below the λ-Point". Nature. 141 (3558): 74. Bibcode:1938Natur.141...74K. doi:10.1038/141074a0. S2CID 3997900.
  11. Rose, Melinda (October 2008). "Helium: Up, Up and Away?". Photonics Spectra. Archived from the original on 22 August 2010. Retrieved 27 February 2010. For a more authoritative but older 1996 pie chart showing U.S. helium use by sector, showing much the same result, see the chart reproduced in "Applications" section of this article.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹೀಲಿಯಮ್&oldid=1264921" ಇಂದ ಪಡೆಯಲ್ಪಟ್ಟಿದೆ