ಶ್ರೀನಿವಾಸಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀನಿವಾಸಪುರ

ಶ್ರೀನಿವಾಸಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೋಲಾರ
ನಿರ್ದೇಶಾಂಕಗಳು 13.1333° N 78.1333° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.

ಶ್ರೀನಿವಾಸಪುರ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ.

ಭೌಗೋಳಿಕ[ಬದಲಾಯಿಸಿ]

ಪೂರ್ವ ಮತ್ತು ಉತ್ತರದಲ್ಲಿ ಆಂಧ್ರಪ್ರದೇಶ, ಪಶ್ಚಿಮ ಮತ್ತು ವಾಯುವ್ಯದಲ್ಲಿ ಚಿಂತಾಮಣಿ, ನೈಋತ್ಯ ಮತ್ತು ದಕ್ಷಿಣಕ್ಕೆ ಕೋಲಾರ, ಆಗ್ನೇಯಕ್ಕೆ ಮುಳಬಾಗಲು ತಾಲ್ಲೂಕುಗಳು ಈ ತಾಲ್ಲೂಕನ್ನು ಸುತ್ತುವರಿದಿವೆ. ಯಲದೂರು, ನೆಲವಂಕಿ, ರೋಣೂರು, ರಾಯಲಪಾಡು ಮತ್ತು ಶ್ರೀನಿವಾಸಪುರ 5 ಹೋಬಳಿಗಳಿದ್ದು 347 ಗ್ರಾಮಗಳಿವೆ. ವಿಸ್ತೀರ್ಣ 855.6 ಚ.ಕಿ.ಮೀ.. ಜನಸಂಖ್ಯೆ 1,84,612.

ತಾಲ್ಲೂಕಿನ ಬಹುಭಾಗ ಬಯಲು ಪ್ರದೇಶವಾಗಿದ್ದು ಕೆಲವೆಡೆ ಚಪ್ಪಟೆ ಆಕಾರದ ಲ್ಯಾಟರೈಟ್ ಶಿಲೆಗಳಿಂದ ಕೂಡಿದ ಬೆಟ್ಟಗಳು ಕಂಡುಬರುತ್ತವೆ. ಈ ತಾಲ್ಲೂಕಿನ ಮುಖ್ಯ ಕಸಬು ವ್ಯವಸಾಯ. ಸಣ್ಣಕಲ್ಲು ಮಿಶ್ರಿತ ಕೆಂಪುಮಣ್ಣುಳ್ಳ ಪ್ರದೇಶಗಳಲ್ಲಿ ನೆಲಗಡಲೆ ಹೆಚ್ಚಾಗಿ ಬೆಳೆಯುತ್ತಾರೆ. ಮಾವು, ಹುಣಿಸೆ ಪ್ರಮುಖ ಆರ್ಥಿಕ ಬೆಳೆಗಳು. ಸಜ್ಜೆ, ರಾಗಿ, ಬತ್ತ, ದ್ವಿದಳಧಾನ್ಯಗಳು, ಮೆಕ್ಕೆಜೋಳ-ಇವು ಈ ತಾಲ್ಲೂಕಿನಲ್ಲಿ ಕಂಡುಬರುವ ಇತರ ಬೆಳೆಗಳು. ನದಿ, ತೊರೆ, ನಾಲೆ ಯಾವುದೂ ಇಲ್ಲದ ಈ ತಾಲ್ಲೂಕಿನ ವ್ಯವಸಾಯ ಹೆಚ್ಚಾಗಿ ಬಾವಿ, ಕೆರೆಗಳ ಮತ್ತು ಮಳೆಯ ಆಶ್ರಯದಿಂದ ನಡೆಯುತ್ತದೆ. ತಾಲ್ಲೂಕಿನ ವಾರ್ಷಿಕ ಮಳೆ 660.13 ಮಿಮೀ.

ಬೆಂಗಳೂರು-ಕಡಪ ಪ್ರಾಂತೀಯ ಹೆದ್ದಾರಿ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗ ಶ್ರೀನಿವಾಸಪುರ ಮುಖಾಂತರ ಹಾದುಹೋಗುವುದು. ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಶ್ರೀನಿವಾಸಪುರದ ದಕ್ಷಿಣಕ್ಕೆ 5 ಕಿ.ಮೀ. ದೂರದಲ್ಲಿರುವ ಹೆಬ್ಬೆಟ್ಟ ಒಂದು. ಇಲ್ಲಿ ಗಂಗರ ದೊರೆ ಮಾರಸಿಂಹನ ಕಾಲದ (10ನೆಯ ಶತಮಾನ) ಯಂತ್ರದ ಕಲ್ಲು (ಗೋಕಲ್ಲು) ಇದ್ದು ಇದನ್ನು ತೊಳೆದ ನೀರು ಪಶುಗಳಿಗೆ ಔಷಧವಾಗಿ ರೋಗಗಳನ್ನು ಗುಣಪಡಿಸುತ್ತದೆಂಬ ನಂಬಿಕೆಯಿದೆ.

ಇತಿಹಾಸ[ಬದಲಾಯಿಸಿ]

ಶ್ರೀನಿವಾಸಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಕೋಲಾರದ ಈಶಾನ್ಯಕ್ಕೆ 24 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 22,926. ಪಾಪನಪಲ್ಲಿ ಈ ಊರಿಗಿದ್ದ ಹಿಂದಿನ ಹೆಸರು. ದಿವಾನ್ ಪೂರ್ಣಯ್ಯನವರು ತಿರುಪತಿಯಿಂದ ಹಿಂದಿರುಗುತ್ತ ಈ ಊರಿಗೆ ಬಂದು, ತಮ್ಮ ಮಗ ಶ್ರೀನಿವಾಸಮೂರ್ತಿಗಳ ಹೆಸರಿನಲ್ಲಿ ಇದಕ್ಕೆ ಶ್ರೀನಿವಾಸಪುರವೆಂದು ನಾಮಕರಣ ಮಾಡಿದರು. ಈ ಊರಿನ ಪೂರ್ವಕ್ಕೆ ಸು. 3 ಕಿ.ಮೀ. ದೂರದಲ್ಲಿ ಹರಳುಕೋಟೆ ಎಂಬ ಪುರಾತನ ಪಟ್ಟಣವಿತ್ತೆಂದು ಪ್ರತೀತಿ. ಬಾಣರಸ, ವಿಕ್ರಮಾದಿತ್ಯ ಮತ್ತು ಪಲ್ಲವ-ಇವರಿಗೆ ಸಂಬಂಧಿಸಿದ ಶಾಸನಗಳು ಈ ಊರಿನಲ್ಲಿ ದೊರೆತಿವೆ.

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]