ರಾಯಚೂರು ಜಿಲ್ಲೆ

ರಾಯಚೂರು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ, ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆ. ರಾಯಚೂರು ಜಿಲ್ಲೆಯ ಜನಸಂಖ್ಯೆ ೨೦೦೧ ರ ಜನಗಣತಿಯಂತೆ ೧೬,೪೮,೨೧೨. ರಾಯಚೂರು ಜಿಲ್ಲೆಯಲ್ಲಿ 8 ತಾಲೂಕುಗಳಿವೆ: ರಾಯಚೂರು, ದೇವದುರ್ಗ, ಸಿಂಧನೂರು, ಮಾನವಿ,, ಲಿಂಗಸುಗೂರು, ಮಸ್ಕಿ , ಸಿರಿವಾರ ಮತ್ತು ಅರಕೇರಾ. ಜಿಲ್ಲಾಕೇಂದ್ರ ರಾಯಚೂರು ನಗರ. ಇದು ಬೆಂಗಳೂರಿನಿಂದ ೪೦೯ ಕಿ. ಮೀ. ದೂರದಲ್ಲಿದೆ.
ಇತಿಹಾಸ[ಬದಲಾಯಿಸಿ]
ಸಾಮ್ರಾಟ್ ಅಶೋಕನ ಕುರಿತ ದೇಶದ ಅತಿಮುಖ್ಯ ಶಿಲಾಶಾಸನಗಳಲ್ಲಿ ಒಂದೆನಿಸಿದ ಮಸ್ಕಿ ಶಾಸನವು, ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ದೊರೆತಿರುವುದು ರಾಯಚೂರಿನ ಶ್ರೀಮಂತ ಇತಿಹಾಸಕ್ಕೆ ಒಂದು ಐತಿಹಾಸಿಕ ಸಾಕ್ಷಿ.
ಭಾರತದ ಸ್ವಾತಂತ್ರ ಹೋರಾಟ ಮತ್ತು ನಂತರದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಪ್ರಮುಖವಾದುದು. ರಾಯಚೂರು ಕೋಟೆ ರಾಯಚೂರು ನಗರದ ಚಾರಿತ್ರಿಕ ಆಕರ್ಷಣೆಗಳಲ್ಲಿ ಒಂದು - ಇದನ್ನು ೧೨೯೪ ರಲ್ಲಿ ಕಟ್ಟಲಾಯಿತು. ರಾಯಚೂರಿನ ಇನ್ನೊಂದು ವಿಶೇಷತೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸಾಮ್ರಾಜ್ಯಗಳ ಅರಸರ ಕಾಲದಲ್ಲಿ ಈ ಪ್ರದೇಶ ಹೋರಾಟದ ನೆಲವಾಗಿತ್ತು.
ಭೌಗೋಳಿಕ ಲಕ್ಷಣಗಳು[ಬದಲಾಯಿಸಿ]
ಜಿಲ್ಲೆಯ ದಕ್ಷಿಣದಲ್ಲಿ ತುಂಗಭದ್ರಾ ನದಿ ಹಾಗೂ ಉತ್ತರದಲ್ಲಿ ಕೃಷ್ಣಾ ನದಿಯು ಹರಿಯುತ್ತಿದ್ದು, ಬಹುತೇಕ ಬಯಲು ಪ್ರದೇಶವನ್ನು ಹೊಂದಿದೆ. ಲಿಂಗಸೂಗೂರು, ದೇವದುರ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಚಿನ್ನದ ಅದಿರಿನ ನಿಕ್ಷೇಪಗಳಿವೆ.
ಕೊರತೆಗಳು[ಬದಲಾಯಿಸಿ]
ಮಳೆಯ ಕೊರತೆ, ನೀರಿನ ಅಭಾವ ಜಿಲ್ಲೆಯ ಸಾಮಾನ್ಯ ಸಮಸ್ಯೆಗಳಾದರೆ, ಅತಿಯಾದ ಬಿಸಿಲು ಜಿಲ್ಲೆಯ ಮತ್ತೊಂದು ಲಕ್ಷಣ.
ಹವಾಗುಣ[ಬದಲಾಯಿಸಿ]
ಜಿಲ್ಲೆಯ ಹವಾಗುಣವು ಬಹುತೇಕ ಒಣ ಹವೆ ಇರುತ್ತದೆ. ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ೪೫ ಡಿಗ್ರಿವರೆಗೆ ಉಷ್ಣತೆ ಇರುತ್ತದೆ.
ಜಿಲ್ಲೆಯ ಪ್ರಮುಖರು[ಬದಲಾಯಿಸಿ]
- ವಿಜಯದಾಸರು, ಹರಿದಾಸರು
- ಶ್ರೀ ಚನ್ನಬಸವಪ್ಪ ಬೆಟ್ಟದೂರು, ಹಿರಿಯ ಸ್ವಾತಂತ್ರ ಹೋರಾಟಗಾರರು, ರೈತ ಹೋರಾಟಗಾರರು, ವಿಚಾರವಾದಿಗಳು
- ಶ್ರೀ ಶಂಕರಗೌಡ ಬೆಟ್ಟದೂರು, ಹಿರಿಯ ಸ್ವಾತಂತ್ರ ಹೋರಾಟಗಾರರು, ಚಿತ್ರ ಕಲಾವಿದರು
- ಶ್ರೀ ಶಿವರಾಜ ಪಾಟೀಲ್ , ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು
- ಶ್ರೀ ಜೆ.ಎಚ್.ಪಾಟೀಲ್, ನಿವೃತ್ತ ಕಾನೂನು ಉಪಕುಲಪತಿಗಳು
- ಶ್ರೀ ಡಾ. ಪಂ. ನರಸಿಂಹಲು ವಡವಾಟಿ, ವಿಶ್ವ ವಿಖ್ಯಾತ ಕ್ಲಾರಿಯೋನೆಟ್ ವಾದಕರು, ಮಾಜಿ ಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ.
- ಸೈಯದ್ ಯಾಸೀನ್, ಮಾಜಿ ಶಾಸಕರು
- ತಿಪ್ಪರಾಜು ಹವಾಲ್ದಾರ
- ವಡವಾಟಿ ಶಾರದಾ ಭರತ್, ಹಿಂದೂಸ್ಥಾನಿ ಮತ್ತು ವಚನ ಸಂಗೀತ ಗಾಯಕರು, ಸದಸ್ಯರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ.
- ದಿವಂಗತ ವೆಂಕಟೇಶ್ ನಾಯಕ, ಮಾಜಿ ಸಂಸದ
- ಶ್ರೀ ಹಂಪಯ್ಯನಾಯಕ, ಶಾಸಕರು, ಮಾನವಿ.
- ಶ್ರೀ ಗಂಗಾಧರ ನಾಯಕ್, ಮಾಜಿ ಶಾಸಕರು
- ಶ್ರೀ ಪ್ರತಾಪ ಗೌಡ ಪಾಟೀಲ್,ಮಾಜಿ ಶಾಸಕರು
ಪ್ರಾಮುಖ್ಯತೆ[ಬದಲಾಯಿಸಿ]
- ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಇರುವ ಶಾಖೋತ್ಪನ್ನ ವಿದ್ಯುತ್‌ಸ್ಥಾವರ ಕರ್ನಾಟಕದಲ್ಲಿ ಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.
- ಜಿಲ್ಲೆಯ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಪ್ರಮುಖವಾಗಿದೆ.
- ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯು ದೇಶದಲ್ಲಿಯೇ ಅತಿ ಹೆಚ್ಚು ಚಿನ್ನದ ಅದಿರು ಹೊಂದಿರುವ ಗಣಿಯಾಗಿದೆ. ಅಶೋಕನ ಕಾಲದ ಮಸ್ಕಿ ಶಾಸನ ದೊರೆತಿರುವುದು ಇದೇ ತಾಲೂಕಿನ ಮಸ್ಕಿಯಲ್ಲಿದೆ. ಇದೇ ಶಾಸನದಲ್ಲಿ ದೇವನಾಂಪ್ರಿಯಸ ಅಸೋಕಸ ಎನ್ನುವ ಪ್ರಸಿದ್ಡ ಸಾಲಿದೆ.
- ಸಿಂಧನೂರು ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಭತ್ತ ಬೆಳೆಯುವ ಪ್ರದೇಶವಾಗಿದೆ.
- ಸಿಂಧನೂರು ತಾಲ್ಲೂಕಿನ ಸೋಮಲಾಪುರ ಗ್ರಾಮದ ಅಂಭಾಮಠದ ಅಂಭಾದೇವಿಯ ಜಾತ್ರೆ ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದೆ.
- ಲಿಂಗಸೂಗೂರು ತಾಲ್ಲೂಕಿನ ಮುದುಗಲ್ ನಲ್ಲಿ ಐತಿಹಾಸಿಕ ಕೋಟೆ ಇದ್ದು, ಮೊಹರಂ ಆಚರಣೆ ವಿಜೃಂಭಣೆಯಿಂದ ಜರಗುತ್ತದೆ.
- ಜಲದುರ್ಗದಲ್ಲಿರುವ ಕೋಟೆ, ಅತ್ಯಂತ ವಿಶೇಷವಾಗಿ ನಿರ್ಮಿಸಲಾದ ಕೋಟೆಗಳಲ್ಲಿ ಒಂದಾಗಿದೆ.ಜೊತೆಗೆ ಇಲ್ಲಿ ಕಂಡು ಬರುವ ರಕ್ಷಣಾ ವಾಸ್ತುಶಿಲ್ಪ ತುಂಬಾ ವಿಶೇಷ ವಾದದ್ದು.
- ಮಂತ್ರಾಲಯವು ರಾಯಚೂರಿನಿಂದ ಹತ್ತಿರದಲ್ಲಿದೆ.
- ಮಾನವಿ ಕೊನೆಯ ತಾಲೂಕು. ಈ ಮಾನವಿಯಲ್ಲಿ ದಾಸ ಸಾಹಿತ್ಯ ಉಗಮವಾಗಿದ್ದು. ವಿಜಯ ದಾಸರು ಮಾನವಿ ತಾಲೂಕಿನವರು.
ಇದನ್ನೂ ನೋಡಿ[ಬದಲಾಯಿಸಿ]
ಬಾಹ್ಯ ಅಂತರ್ಜಾಲ ಸಂಪರ್ಕಗಳು[ಬದಲಾಯಿಸಿ]
![]() |
ವಿಕಿಮೀಡಿಯ ಕಣಜದಲ್ಲಿ Raichur district ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |