ಅಕ್ಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಕ್ಕಿಕಾಳುಗಳು

ಅಕ್ಕಿಯು ಒಂದು ಏಕದಳ ಸಸ್ಯವಾದ ಆರೈಝಾ ಸಟೀವಾ ಬೀಜ. ಒಂದು ಧಾನ್ಯವಾಗಿ ವಿಶ್ವದ ಮಾನವ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಅದು ಅತ್ಯಂತ ಪ್ರಮುಖವಾದ ಅಗತ್ಯ ಆಹಾರವಾಗಿದೆ, ವಿಶೇಷವಾಗಿ ಪೂರ್ವ, ದಕ್ಷಿಣ, ದಕ್ಷಿಣಪೂರ್ವ ಏಷ್ಯಾ, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೇರಿಕ, ಮತ್ತು ವೆಸ್ಟ್ ಇಂಡೀಸ್‌ನಲ್ಲಿ. ಅದು ಮೆಕ್ಕೆ ಜೋಳದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಉತ್ಪಾದನೆಯಾಗುವ ಧಾನ್ಯವಾಗಿದೆ. ಅಕ್ಕಿಯು ಪ್ರಪಂಚದ ಮೂರರಲ್ಲೊಂದು ಪಾಲು ಜನರ ಮುಖ್ಯ ಆಹಾರ (ರೈಸ್). ಪಕ್ವ ಮಾಡಿದ ಅಕ್ಕಿಯನ್ನು ಅನ್ನವೆನ್ನುತ್ತಾರೆ. ಕೂಳು ಕನ್ನಡ ಪದ. ಸಾಮಾನ್ಯವಾಗಿ ಯಂತ್ರಗಳ ಮೂಲಕ ಭತ್ತದಿಂದ ಸಿಪ್ಪೆಯನ್ನು ಬೇರ್ಪಡಿಸಿ ಬರುವ ಕಾಳನ್ನು ಚೆನ್ನಾಗಿ ಪಾಲಿಷ್ ಮಾಡಿದಾಗ ಬಿಳಿಯ ಹೊಳೆಯುವ ಅಕ್ಕಿ ಸಿಗುತ್ತದೆ. ಪಾಲಿಷ್ ಮಾಡಿದ ಅಕ್ಕಿ ತಿನ್ನಲು ಹೆಚ್ಚು ಹಿತಕರವಾಗಿದ್ದರೂ ಪಾಲಿಷ್ ಮಾಡದ ಮಬ್ಬು ಬಣ್ಣದ ಕೊಟ್ಟಣದ ಅಕ್ಕಿಯೇ ನಿಜವಾಗಿ ಹೆಚ್ಚು ಪೌಷ್ಟಿಕ ಆಹಾರ. ಹಿಂದೆ ಹಳ್ಳಿಗಳವರೆಲ್ಲ ಹೀಗೆ ಕೈಯಿಂದ ಕುಟ್ಟಿದ ಅಕ್ಕಿಯನ್ನೇ ಬಳಸುತ್ತಿದ್ದರು. ಅಕ್ಕಿಯ ಮೂಗು (ಭ್ರೂಣ) ಮತ್ತು ಮೇಲಿನ ತೆಳುಪೊರೆಯ ತೌಡಿನಲ್ಲಿ ಬಿ.ಕಾಂಪ್ಲೆಕ್ಸ್ ಮೊದಲಾದ ಉತ್ತಮ ಅನ್ನಾಂಗಗಳಿವೆ. ಬತ್ತವನ್ನು ಬೇಯಿಸಿ ತಯಾರಿಸಿದ ಕುತುಬಲಕ್ಕಿ ಅಥವಾ ಕುಸುಬಲಕ್ಕಿ ಬಹು ಜನಪ್ರಿಯವಾಗಿದೆ. ಇದು ಪಾಲಿಷ್ ಆದ ಅಕ್ಕಿಗಿಂತ ಉತ್ತಮ. ಅಕ್ಕಿಯಲ್ಲಿ ಪಿಷ್ಟ ಪದಾರ್ಥವೇ (ಕಾರ್ಬೊಹೈಡ್ರೇಟ್) ಹೆಚ್ಚು. ಪ್ರೋಟೀನು ಮತ್ತು ಕೊಬ್ಬು ತೀರ ಕಡಿಮೆ. ಮಾಂಸ, ಎಣ್ಣೆ, ಬೆಣ್ಣೆ, ಹಾಲು, ಬೇಳೆಕಾಳು ಮತ್ತು ತರಕಾರಿಗಳೊಂದಿಗೆ ಸೇರಿದಾಗ ಒಳ್ಳೆಯ ಆಹಾರವಾಗಬಲ್ಲುದು. ಅಕ್ಕಿಯಿಂದ ಕೋಡುಬಳೆ, ಚಕ್ಕುಲಿ, ದೋಸೆ, ಇಡ್ಲಿ, ರೊಟ್ಟಿ, ಹಪ್ಪಳ, ಸಂಡಿಗೆ ಮೊದಲಾದ ರುಚಿಕರವಾದ ತಿಂಡಿಗಳನ್ನು ತಯಾರಿಸಿ ಬಳಸಲಾಗುತ್ತಿದೆ. ನೇರವಾಗಿ ಚಿತ್ರಾನ್ನ, ಪುಳಿಯೊಗರೆ, ಪೊಂಗಲು ಮೊದಲಾದು ವನ್ನು ಮಾಡುತ್ತಾರೆ. ಅಕ್ಕಿಯ ಬೇರೆ ರೂಪಗಳಾದ ಅವಲಕ್ಕಿ, ಪುರಿ, ಅರಳುಗಳೂ ಜನಪ್ರಿಯವಾಗಿವೆ. ಇದರ ನುಚ್ಚನ್ನು ದನಗಳಿಗೆ ಹಾಕುತ್ತಾರೆ. ಅಕ್ಕಚ್ಚು ಅವುಗಳಿಗೆ ಬಹು ಪ್ರಿಯವಾದ ಪಾನೀಯ, ತೌಡಂತೂ ಕರೆಯುವ ದನಕ್ಕೆ ಅಗತ್ಯವಾದ ಮೇವು. ಅಕ್ಕಿಯಿಂದ ಮದ್ಯವನ್ನು ತಯಾರಿಸುವ ವಾಡಿಕೆ ಹಿಂದಿನಿಂದಲೂ ಪ್ರಚಾರದಲ್ಲಿದೆ. ಜಪಾನಿನಲ್ಲಿ ಈಗಲೂ ಅಕ್ಕಿಯ ಮದ್ಯ (ಸಾಕೆ) ತಯಾರಿಸುತ್ತಾರೆ. ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅಕ್ಕಿಯ ಬಳಕೆ ಬಹಳ ಹೆಚ್ಚು. (ನೋಡಿ-ಭತ್ತ).

"https://kn.wikipedia.org/w/index.php?title=ಅಕ್ಕಿ&oldid=713788" ಇಂದ ಪಡೆಯಲ್ಪಟ್ಟಿದೆ