ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆ | |
|---|---|
| ಶಿವಮೊಗ್ಗ ಜಿಲ್ಲೆ | |
ಮೇಲಿನ ಎಡದಿಂದ ಪ್ರದಕ್ಷಿಣಾಕಾರವಾಗಿ: ಇಕ್ಕೇರಿಯಲ್ಲಿರುವ ಅಘೋರೇಶ್ವರ ದೇವಾಲಯ, ಕೊಡಚಾದ್ರಿ ಬಳಿಯ ಪಶ್ಚಿಮ ಘಟ್ಟಗಳ ನೋಟ, ಕೇದಾರೇಶ್ವರ ದೇವಸ್ಥಾನ, ಜೋಗ್ ಫಾಲ್ಸ್, ಕವಲೇದುರ್ಗ ಕೋಟೆ | |
| Nickname(s): ಮಲೆನಾಡ ಹೆಬ್ಬಾಗಿಲು | |
ಕರ್ನಾಟಕದಲ್ಲಿ ಸ್ಥಳ | |
| ದೇಶ | |
| ರಾಜ್ಯ | ಕರ್ನಾಟಕ |
| ಆಡಳಿತ ವಿಭಾಗ | ಬೆಂಗಳೂರು |
| ಸ್ಥಾಪಿಸಲಾಯಿತು | 1 ನವೆಂಬರ್ 1956 |
| ಪ್ರಧಾನ ಕಚೇರಿ | ಶಿವಮೊಗ್ಗ |
| ತಾಲೂಕುಗಳು | ಶಿವಮೊಗ್ಗ, ಸಾಗರ, ಶಿಕಾರಿಪುರ, ಸೊರಬ, ಹೊಸನಗರ, ಭದ್ರಾವತಿ, ತೀರ್ಥಹಳ್ಳಿ |
| ಸರ್ಕಾರ | |
| • ಪೊಲೀಸ್ ವರಿಷ್ಠಾಧಿಕಾರಿ | ಬಿ.ಎಂ.ಲಕ್ಷ್ಮಿ ಪ್ರಸಾದ್ (ಐಪಿಎಸ್)[೧] |
| • ಜಿಲ್ಲಾಧಿಕಾರಿ | ಸೆಲ್ವಮಣಿ ಆರ್ (ಐಎಎಸ್)[೧] |
| ವಿಸ್ತಾರ | |
| • ಒಟ್ಟು | ೮,೪೯೫ km2 (೩೨೮೦ sq mi) |
| ಜನಸಂಖ್ಯೆ (2011) | |
| • ಒಟ್ಟು | ೧೭,೫೨,೭೫೩[೨] |
| • ಸಾಂದ್ರತೆ | ೨೦೭/km2 (೫೪೦/sq mi) |
| ಭಾಷೆಗಳು | |
| ಸಮಯದ ವಲಯ | |
| ಸಮಯ ವಲಯ | ಯುಟಿಸಿ+5:30 (IST) |
| ವಾಹನ ನೋಂದಣಿ | |
ಶಿವಮೊಗ್ಗ ಜಿಲ್ಲೆ [೩] ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ಭಾಗವು ಮಲೆನಾಡು ಪ್ರದೇಶದಲ್ಲಿ ಅಥವಾ ಸಹ್ಯಾದ್ರಿಯಲ್ಲಿದೆ. ಶಿವಮೊಗ್ಗ ನಗರ ಇದರ ಆಡಳಿತ ಕೇಂದ್ರವಾಗಿದೆ. ಜೋಗ್ ಫಾಲ್ಸ್ ವ್ಯೂ ಪಾಯಿಂಟ್ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. 2011 ರ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯು 17,52,753 ಜನಸಂಖ್ಯೆಯನ್ನು ಹೊಂದಿದೆ.[೨] ಏಳು ತಾಲೂಕುಗಳಿವೆ: ಸೊರಬ, ಸಾಗರ, ಹೊಸನಗರ, ಶಿವಮೊಗ್ಗ, ಶಿಕಾರಿಪುರ, ತೀರ್ಥಹಳ್ಳಿ ಮತ್ತು ಭದ್ರಾವತಿ. ಚನ್ನಗಿರಿ ಮತ್ತು ಹೊನ್ನಾಳಿ 1997 ರವರೆಗೂ ಶಿವಮೊಗ್ಗ ಜಿಲ್ಲೆಯ ಭಾಗವಾಗಿದ್ದು, ಹೊಸದಾಗಿ ರೂಪುಗೊಂಡ ದಾವಣಗೆರೆ ಜಿಲ್ಲೆಯ ಭಾಗವಾಯಿತು.ಈ ಸಂಪದ್ಭರಿತ ಪ್ರದೇಶವು ಸಹಜವಾಗಿಯೇ ಹಿಂದುತ್ವದ ಭದ್ರ ಕೋಟೆ ಎಂದು ಹೆಸರಾಗಿದೆ.
ಭೌಗೋಳಿಕ
[ಬದಲಾಯಿಸಿ]ಜಿಲ್ಲೆಯನ್ನು ಮಲೆನಾಡು, ಅರೆಮಲೆನಾಡು ಮತ್ತು ಮೈದಾನ ಪ್ರದೇಶವೆಂದು ವಿಂಗಡಿಸಬಹುದು. ಜಿಲ್ಲೆಯ ಪಶ್ಚಿಮಕ್ಕಿರುವ ತೀರ್ಥಹಳ್ಳಿ, ಹೊಸ ನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳು ಮಲೆನಾಡು ಪ್ರದೇಶದಲ್ಲಿದ್ದು ಜಿಲ್ಲೆಯ ಮುಖ್ಯಭಾಗವನ್ನಾವರಿಸಿವೆ. ಶಿವಮೊಗ್ಗ, ಭದ್ರಾವತಿ ಮತ್ತು ಶಿಕಾರಿಪುರ ತಾಲ್ಲೂಕುಗಳು ಅರೆಮಲೆನಾಡು ಪ್ರದೇಶದಲ್ಲಿವೆ. ಸಹ್ಯಾದ್ರಿ ಶ್ರೇಣಿ ಎಂದು ಕರೆಯುವ ಪಶ್ಚಿಮ ಘಟ್ಟಸಾಲು ಈ ಜಿಲ್ಲೆಯ ಪಶ್ಚಿಮ ಸೆರಗಿನಲ್ಲಿ ಹಾದುಹೋಗಿದೆ. ಇದರಿಂದಾಗಿ ಕಡಲಿಗೆ ಏರಿ ಕಟ್ಟಿದಂತೆ ಉತ್ತರದ ಸೊರಬ ತಾಲ್ಲೂಕಿನಿಂದ ದಕ್ಷಿಣದ ತೀರ್ಥಹಳ್ಳಿ ತಾಲ್ಲೂಕಿನವರೆಗೂ ಎತ್ತರವಾದ ಮತ್ತು ಕಡಿದಾದ ಘಟ್ಟಶ್ರೇಣಿ ಇದೆ. ಈ ಶ್ರೇಣಿ ಪ್ರದೇಶ ದಟ್ಟವಾದ ಕಾಡು, ಕಣಿವೆ ಮತ್ತು ಜಲಪಾತಗಳಿಂದ ಕೂಡಿದ್ದು ವಿಶಿಷ್ಟ ಭೌಗೋಳಿಕ ಲಕ್ಷಣ ಪಡೆದಿದೆ. ಈ ವಲಯ ಇನ್ನೂ ಎತ್ತರದ ಗಿರಿಪರ್ವತಗಳು ರೂಪಿತವಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದಿದೆ. ಆಗುಂಬೆಯಿಂದ ಜೋಗ ಜಲಪಾತದವರೆಗೆ ಒತ್ತಾದ ಕಾಡುಗಳು ಗಿರಿಶಿಖರಗಳು ನಿತ್ಯಹಸಿರು ಸಸ್ಯರಾಶಿ ಮನೋಹರ ದೃಶ್ಯಗಳು ಕಂಡುಬರುತ್ತವೆ. ಹೊಸನಗರ ತಾಲ್ಲೂಕಿನಲ್ಲಿ ರುವ ಕೊಡಚಾದ್ರಿ ಶಿಖರ 1,343 ಮೀ ಎತ್ತರವಾಗಿದೆ. ಇಲ್ಲಿಂದ ಮುಂದೆ ಸಾಗರ ತಾಲ್ಲೂಕಿನಲ್ಲಿರುವ ಗೋವರ್ಧನಗಿರಿಯವರೆಗೂ ಜಿಲ್ಲೆಯ ಘಟ್ಟಪ್ರದೇಶ ಪಶ್ಚಿಮದತ್ತ ಚಾಚಿದೆ. ಇದರಿಂದಾಗಿ ಸಾಗರ ತಾಲ್ಲೂಕಿನ ಒಂದೆಡೆ ಸಮುದ್ರ ಕೇವಲ 13 ಕಿಮೀ ಸಮೀಪದಲ್ಲಿದೆ. ಇದೇ ತಾಲ್ಲೂಕಿನ ನಾಗವಳ್ಳಿ ಕಣಿವೆ ಸಮುದ್ರಮಟ್ಟದಿಂದ ಕೇವಲ 66.14 ಮೀ ಎತ್ತರದಲ್ಲಿದೆ. ಈ ಶ್ರೇಣಿ ಉಡುಪಿ ಜಿಲ್ಲೆಯ ತೀರಪ್ರದೇಶದ ಕಡೆ ಕಡಿದಾಗಿಯೂ ಒಳನಾಡಿನ ಕಡೆ ಬಳಿದಾಗಿಯೂ ಇದೆ. ಈ ಏಣಿನಂತಿರುವ ದುರ್ಗಮ ಪರ್ವತಪಂಕ್ತಿಯ ಕಣಿವೆ ಕಂದರಗಳಿಂದಾಗಿ ಉಡುಪಿಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕಿಸುವ ಅನೇಕ ಘಾಟಿ ಮಾರ್ಗಗಳನ್ನು ನಿರ್ಮಿಸಲು ಸಾಧ್ಯವಾಗಿದೆ. ಪಶ್ಚಿಮಘಟ್ಟದಿಂದ ಜಿಲ್ಲೆಯ ಒಳಭಾಗಕ್ಕೆ ಪೂರ್ವ ಮತ್ತು ಆಗ್ನೇಯ ಹಾಗೂ ಈಶಾನ್ಯಾಭಿಮುಖವಾಗಿ ಅನೇಕ ಬೆಟ್ಟಸಾಲುಗಳು ಹರಡಿವೆ. ಇಲ್ಲಿ ದಟ್ಟವಾದ ಕಾಡುಗಳು, ಕಣಿವೆಗಳು, ಹೊಳೆಗಳು, ಝರಿಗಳು ಮತ್ತು ಏರುತಗ್ಗು ಭೂಮಿಯ ನಡುವೆ ಅಲ್ಲಲ್ಲಿ ಕಾಣಿಸುವ ಬಯಲುಗಳು ಕೂಡಿ ಮಲೆನಾಡು ಪ್ರದೇಶವಾಗಿದೆ. ಎತ್ತರದ ಗಿರಿಶಿಖರಗಳ ತುದಿಯಲ್ಲಿ ಹುಲ್ಲು ಮಾತ್ರ ಬೆಳೆದಿದ್ದು ವಿರಳವಾಗಿರುವ ಕುರುಚಲು ಮರಗಳಿಂದ ಕೂಡಿದ ಬೋಳುಭಾಗವಿರುತ್ತದೆ. ಈ ಗಿರಿಶ್ರೇಣಿಗಳ ಮಧ್ಯಭಾಗದಲ್ಲಿ ಕುರುಚಲು ಕಾಡು ಮತ್ತು ಬಂಡೆಗಳು ಕಂಡು ಬಂದರೆ, ಕೆಳತಪ್ಪಲಲ್ಲಿ ದಟ್ಟ ಹಸಿರುಕಾಡುಗಳು ಮತ್ತು ಕಣಿವೆಗಳಲ್ಲಿ, ತೊರೆಗಳು, ಪ್ರಪಾತಗಳು ಕಂಡುಬರುತ್ತವೆ. ತುಂಗಾನದಿಯ ದಡದ ಮಂಡಗದ್ದೆಯಿಂದ ಉತ್ತರದ ಕಡೆ ಆನಂದಪುರ ಮತ್ತು ಕುಂಸಿ ನಡುವೆ ಬೆಟ್ಟಸಾಲುಗಳು ಹಬ್ಬಿವೆ. ಇಕ್ಕೇರಿಯನ್ನು ಹಾಯ್ದು ತಾಳಗುಪ್ಪದತ್ತ ಇನ್ನೊಂದು ಶ್ರೇಣಿ ಹಬ್ಬಿದೆ. ಒಳನಾಡಿನ ಹೊಸನಗರ ತಾಲ್ಲೂಕಿನ ಹುಮಚದ ಬಳಿ ಭಿಲ್ಲೇಶ್ವರ ಬೆಟ್ಟ ಅಥವಾ ಅಗಸ್ತ್ಯಪರ್ವತ (864 ಮೀ), ಸಾಗರ ತಾಲ್ಲೂಕಿನ ಪಶ್ಚಿಮ ಸರಹದ್ದಿನಲ್ಲಿರುವ ಗೋವರ್ಧನಗಿರಿ ಮತ್ತು ಸೊರಬ ತಾಲ್ಲೂಕಿನಲ್ಲಿರುವ ಚಂದ್ರಗುತ್ತಿ (848 ಮೀ), ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗ (ಭುವನಗಿರಿ, 969 ಮೀ) - ಇವು ಮುಖ್ಯ ಶಿಖರಗಳಾಗಿವೆಯೆನ್ನಬಹುದು. ಸಹ್ಯಾದ್ರಿ ವಲಯದ ಈ ಭಾಗ ಅರಣ್ಯ ಮತ್ತು ಪ್ರಾಣಿಸಂಪತ್ತಿನಿಂದ ಕೂಡಿದ್ದು ಮನೋಹರ ಪ್ರಕೃತಿ ದೃಶ್ಯಗಳ ತವರೆನಿಸಿದೆ. ಮಲೆನಾಡ ಪ್ರದೇಶದಲ್ಲಿ ಹೆಚ್ಚು ಎತ್ತರವಲ್ಲದ ಬೆಟ್ಟಗಳನ್ನೂ ಬತ್ತ ಬೆಳೆಯುವ ತಗ್ಗು ಬಯಲುಗಳನ್ನೂ ಬಿದಿರು ಕಾಡು ಮತ್ತು ಜೌಗು ಪ್ರದೇಶಗಳನ್ನೂ ಕಾಣಬಹುದು. ಜಿಲ್ಲೆಯ ಪೂರ್ವದ ಕಡೆಗೆ ಬಂದಂತೆಲ್ಲ ಮಲೆನಾಡು ಭಾಗ ಕರಗುತ್ತ ಬಂದು ವಿಶಾಲವಾದ ಬಯಲುಗಳೂ ಕುರುಚಲು ಕಾಡುಗಳೂ ಗೋಚರಿಸುತ್ತವೆ. ಅರೆಮಲೆ ನಾಡು ಭಾಗದಲ್ಲಿರುವ ಶಿವಮೊಗ್ಗ, ಶಿಕಾರಿಪುರ ತಾಲ್ಲೂಕುಗಳಲ್ಲಿ ಪಶ್ಚಿಮದ ಕಡೆ ಒತ್ತಾದ ಕಾಡುಗಳಿದ್ದರೆ, ಪೂರ್ವದ ಕಡೆ ಬಯಲು ಪ್ರದೇಶವಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ ಹೆಚ್ಚಾಗಿ ಎತ್ತರವಲ್ಲದ ಬೆಟ್ಟಗಳು ತುಂಬಿದ್ದು ಮಲೆನಾಡು ಮತ್ತು ಮೈದಾನ ಪ್ರದೇಶದ ಸಂಗಮಕ್ಷೇತ್ರವಾಗಿದೆ. ಶಿವಮೊಗ್ಗ ತಾಲ್ಲೂಕಿನ ಸುತ್ತಲೂ ಬೆಟ್ಟಗುಡ್ಡಗಳು ಆವರಿಸಿದ್ದು ಮಧ್ಯದಲ್ಲಿ ಬಯಲು ಪ್ರದೇಶವಿದೆ. ಭದ್ರಾವತಿ ತಾಲ್ಲೂಕು ಬಹುಮಟ್ಟಿಗೆ ಇದೇ ಲಕ್ಷಣ ಪಡೆದಿದೆ.
ನದಿಗಳು
[ಬದಲಾಯಿಸಿ]ಈ ಜಿಲ್ಲೆಯ ಬಹುಭಾಗ ಮಲೆನಾಡು ಪ್ರಾಂತದ ಒಂದು ಭಾಗ. ಆದ್ದರಿಂದ ಸಹಜವಾಗಿಯೇ ಇಲ್ಲಿ ಮಳೆ ಅಧಿಕ ಮತ್ತು ನದಿ ತೊರೆಗಳೂ ಹೆಚ್ಚು. ಜೊತೆಗೆ ನೆರೆಯ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಹೆಚ್ಚು ಭಾಗದ ನೀರಿನ ಹರಿವು ಉತ್ತರಕ್ಕಿದ್ದು ಅಲ್ಲಿಯ ಕೆಲವು ನದಿಗಳು ಈ ಜಿಲ್ಲೆಯ ಮೂಲಕ ಹರಿಯುತ್ತವೆ. ತುಂಗಾ, ಭದ್ರಾ, ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ವರದಾ ಇಲ್ಲಿಯ ಮುಖ್ಯ ನದಿಗಳು. ತುಂಗಾ ನದಿ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಸಾಲಿನ ಗಂಗಾಮೂಲದ ವರಹಾ ಪರ್ವತದಲ್ಲಿ ಹುಟ್ಟುತ್ತದೆ. ಇದು ಈಶಾನ್ಯದ ಕಡೆ ಶೃಂಗೇರಿ ಮೂಲಕ ಹರಿದು ಒಗ್ಗುಂಜಿ ಬಳಿ ವಾಯವ್ಯದ ಕಡೆ ತಿರುಗಿ ತೀರ್ಥಹಳ್ಳಿಯವರೆಗೂ ಮುಂದುವರಿಯುತ್ತದೆ. ತೀರ್ಥಹಳ್ಳಿ ಬಳಿ ಶೃಂಗೇರಿಯಿಂದ ಹರಿಯುವ ಬೆಗರಹಳ್ಳವನ್ನು ಸೇರಿಕೊಳ್ಳುತ್ತದೆ. ಆಗುಂಬೆ ಕಡೆಯಿಂದ ಮಾಲತಿ ಹೊಳೆ ಬಂದು ಕೂಡುತ್ತದೆ. ತೀರ್ಥಹಳ್ಳಿಯಿಂದ ಸ್ವಲ್ಪ ದೂರ ಪೂರ್ವಕ್ಕೆ ಹರಿದು ಮತ್ತೆ ಈಶಾನ್ಯಕ್ಕೆ ತಿರುಗಿ ಶಿವಮೊಗ್ಗ ದಾಟಿ ಕೂಡಲಿ ಬಳಿ ಭದ್ರಾ ನದಿಯೊಂದಿಗೆ ಸೇರಿ ತುಂಗಭದ್ರಾ ಎಂಬ ಹೆಸರಿನಿಂದ ಮುಂದೆ ಹರಿಯುತ್ತದೆ. ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿ ಇದು ಏಳು ಕವಲಾಗಿ ಸ್ವಲ್ಪದೂರ ಹರಿಯುತ್ತದೆ. ಇದನ್ನು ಏಳುಕಲ್ಲು ಸೀಳು ಎಂದು ಕರೆಯುತ್ತಾರೆ. ತುಂಗಾ ಈ ಜಿಲ್ಲೆಯಲ್ಲಿ 64.4 ಕಿಮೀ ದೂರ ಹರಿಯುತ್ತದೆ. ಭದ್ರಾ ಇನ್ನೊಂದು ಮುಖ್ಯ ನದಿ. ಚಿಕ್ಕಮಗಳೂರು ಜಿಲ್ಲೆಯ ಗಂಗಾಮೂಲದ ವರಹಾ ಪರ್ವತದಲ್ಲಿ ಹುಟ್ಟುತ್ತದೆ. ಇದು ಬಾಳೆಹೊನ್ನೂರು ಮೂಲಕ ಈಶಾನ್ಯ ದಿಕ್ಕಿನಲ್ಲಿ ಹರಿದು ಲಕ್ಕವಳ್ಳಿ ದಾಟಿ ಉತ್ತರಕ್ಕೆ ತಿರುಗಿ ಭದ್ರಾವತಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಮುಂದೆ ಭದ್ರಾವತಿ ಮತ್ತು ಹೊಳೆಹೊನ್ನೂರುಗಳನ್ನು ದಾಟಿ ಕೂಡಲಿಯಲ್ಲಿ ತುಂಗಾನದಿಯೊಡನೆ ಕೂಡುತ್ತದೆ. ಈ ನದಿ ಜಿಲ್ಲೆಯಲ್ಲಿ 51.5 ಕಿಮೀ ದೂರ ಹರಿಯುತ್ತದೆ. ಶಿವಮೊಗ್ಗ ನಗರದ ಈಶಾನ್ಯದಲ್ಲಿ 14 ಕಿಮೀ ದೂರದ ಕೂಡಲಿಯಲ್ಲಿ ತುಂಗಾ ಮತ್ತು ಭದ್ರಾ ನದಿಗಳು ಕೂಡಿ ಮುಂದೆ ತುಂಗಭದ್ರಾ ನದಿಯಾಗಿ ಹರಿಯುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಭದ್ರಾ 48.3 ಕಿಮೀ ದೂರ ಹರಿಯುತ್ತದೆ. ತುಂಗಾ ಮತ್ತು ಭದ್ರಾ ನದಿಗಳಿಗೆ ಸಂಬಂಧಿಸಿದಂತೆ ಪೌರಾಣಿಕ ಕಥೆಗಳಿವೆ . ತುಂಗಭದ್ರಾನದಿ ಕಲ್ಲಿನಿಂದ ಕೂಡಿದ ಪಾತ್ರದಲ್ಲಿ ರಭಸದಿಂದ ಹರಿಯುತ್ತದೆ. ಕೆಲವು ನಿರ್ದಿಷ್ಟ ಸ್ಥಳಗಳನ್ನು ಬಿಟ್ಟರೆ ಉಳಿದೆಡೆ ದೋಣಿ ಸಂಚಾರಕ್ಕೆ ಈ ನದಿ ಯೋಗ್ಯವಾಗಿಲ್ಲ. ಶರಾವತಿ ನದಿ ತೀರ್ಥಹಳ್ಳಿ ತಾಲ್ಲೂಕಿನ ಕವಲೆದುರ್ಗದ ಬಳಿ ಹುಟ್ಟುತ್ತದೆ. ಇದು ವಾಯವ್ಯ ದಿಕ್ಕಿನಲ್ಲಿ ಹೊಸನಗರ ಮತ್ತು ಸಾಗರ ತಾಲ್ಲೂಕುಗಳ ಮೂಲಕ ಹರಿಯುತ್ತದೆ. ಇದಕ್ಕೆ ಹರಿದ್ರಾವತಿ ಮತ್ತು ಎಣ್ಣೆಹೊಳೆ ಎರಡು ಮುಖ್ಯ ಉಪನದಿಗಳು. ಪಶ್ಚಿಮ ಘಟ್ಟಸಾಲಿನಲ್ಲಿ ಹುಟ್ಟುವ ಹತ್ತಾರು ತೊರೆಗಳು ಈ ನದಿಯನ್ನು ಕೂಡುತ್ತವೆ. ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಹರಿಯುವ ಈ ನದಿ ಕಾರ್ಗಲ್ ಸಮೀಪದಲ್ಲಿ ಪಶ್ಚಿಮ ಘಟ್ಟದ ಬಳಿ ಪಶ್ಚಿಮಕ್ಕೆ ತಿರುಗಿ ಘಟ್ಟದ ಕೆಳಗೆ ದುಮುಕಿ ಜೋಗ ಜಲಪಾತವೆಂದು ಹೆಸರಾಗಿದೆ. ಇಲ್ಲಿ ನದಿ ನಾಲ್ಕು ಸೀಳುಗಳಾಗಿ ಕವಲೊಡೆದು ದುಮುಕುವ ದೃಶ್ಯ ರುದ್ರರಮ್ಯವಾಗಿದೆ. ವಿದ್ಯುತ್ ಉತ್ಪಾದನೆಗಾಗಿ ಈ ನದಿಗೆ ಕಟ್ಟೆಯನ್ನು ಕಟ್ಟಿ ಲಿಂಗನಮಕ್ಕಿ ಜಲಾಶಯವನ್ನು ನಿರ್ಮಿಸಲಾಗಿದೆ. ನದಿ ಮುಂದೆ ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಹೊನ್ನಾವರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಈ ನದಿ ಜಿಲ್ಲೆಯಲ್ಲಿ 32.2 ಕಿಮೀ ದೂರ ಹರಿಯುತ್ತದೆ. ಶ್ರೀರಾಮಚಂದ್ರನ ಬಾಣದಿಂದ ಈ ನದಿ ಉದ್ಭವಿಸಿತೆಂದು ಪೌರಾಣಿಕ ಕಥೆ. ಕುಮುದ್ವತಿ ತುಂಗಭದ್ರಾ ನದಿಯ ಉಪನದಿ. ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಹುಮಚದ ಬಳಿಯ ಭಿಲ್ಲೇಶ್ವರ ಬೆಟ್ಟದಲ್ಲಿ ಹುಟ್ಟುತ್ತದೆ. ಇದು ಶಿಕಾರಿಪುರ ತಾಲ್ಲೂಕಿನಲ್ಲಿ ಜಿಲ್ಲೆಯ ಸರಹದ್ದಿನ ಬಳಿ ಮದಗಕೆರೆಯನ್ನು ಹಾದು ಮುಂದೆ ಈಶಾನ್ಯಕ್ಕೆ ಹರಿದು ತುಂಗಭದ್ರಾ ನದಿಯನ್ನು ಸೇರುತ್ತದೆ. ವರದಾ ತುಂಗಭದ್ರಾ ನದಿಯ ಇನ್ನೊಂದು ಮುಖ್ಯ ಉಪನದಿ. ಇದು ಸಾಗರ ತಾಲ್ಲೂಕಿನಲ್ಲಿ ಇಕ್ಕೇರಿಯ ಬಳಿ ವರದಾಮೂಲದಲ್ಲಿ ಹುಟ್ಟುತ್ತದೆ. ಸೊರಬ ತಾಲ್ಲೂಕಿನಲ್ಲಿ ಹರಿದು ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಮತ್ತೆ ಈಶಾನ್ಯದ ಕಡೆ ತಿರುಗಿ ಧಾರವಾಡ ಜಿಲ್ಲೆಯ ಮೂಲಕ ಪೂರ್ವಕ್ಕೆ ಹರಿದು ಗಳಗನಾಥದ ಬಳಿ ತುಂಗಭದ್ರಾ ನದಿಯನ್ನು ಸೇರುತ್ತದೆ. ಜಿಲ್ಲೆಯಲ್ಲಿ ದಕ್ಷಿಣದ ಚಿರಾಪುಂಜಿ ಎನಿಸಿರುವ, ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಆಗುಂಬೆ ಇದೆ. ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ನೂರಾರು ಸಣ್ಣಪುಟ್ಟ ತೊರೆಗಳು, ಝರಿಗಳು ಹರಿಯುತ್ತವೆ. ಅವುಗಳಲ್ಲಿ ಹರಿದ್ರಾವತಿ, ಶಮ್ಮಗಾವತಿ, ಕುಶಾವತಿ, ಗರ್ಗಿತ, ವರಾಹಿ, ಗುಡ್ವಿಹಳ್ಳ, ದಂಡವತಿ, ನಾಗರಹಳ್ಳ, ಕುಪ್ಪೆಹಳ್ಳ, ಮೊದಲಾದವನ್ನು ಹೆಸರಿಸಬಹುದು. ವರಾಹಿ ಹೊಳೆ ಹೊಸನಗರ ತಾಲ್ಲೂಕಿನಲ್ಲಿ ಪಶ್ಚಿಮ ಘಟ್ಟದಲ್ಲಿ ದುಮುಕುವುದರಿಂದ ಕುಂಚನಕಲ್ಲು ಅಬ್ಬೆ ಜಲಪಾತ ಉಂಟಾಗಿದೆ. ಜಿಲ್ಲೆಯ ಕೆಲವು ಹೊಳೆಗಳು ಉಡುಪಿ ಜಿಲ್ಲೆಯತ್ತ ಹರಿದರೆ ಇನ್ನು ಕೆಲವು ಒಳನಾಡಿನ ಮುಖ್ಯ ನದಿಗಳನ್ನು ಸೇರುತ್ತವೆ.
ಸಸ್ಯ ಸಂಪತ್ತು
[ಬದಲಾಯಿಸಿ]ಈ ಜಿಲ್ಲೆಯ ಸಸ್ಯಸಂಪತ್ತು ಸಮೃದ್ಧವೂ ವೈವಿಧ್ಯಮಯವೂ ಆಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಧಿಕ ಮಳೆ ಬಿದ್ದರೆ ಪೂರ್ವಕ್ಕೆ ಹೋದಂತೆಲ್ಲ ಮಳೆ ಕಡಿಮೆಯಾಗುತ್ತ ಹೋಗುತ್ತದೆ. ಇದರಿಂದ ಪಶ್ಚಿಮದಲ್ಲಿ ದಟ್ಟಕಾಡುಗಳೂ ಮಧ್ಯ ಪ್ರದೇಶದಲ್ಲಿ ಸಾಧಾರಣ ಕಾಡುಗಳೂ ಪೂರ್ವಭಾಗದಲ್ಲಿ ಕುರುಚಲು ಕಾಡುಗಳೂ ಬೆಳೆದಿವೆ. ಈ ಜಿಲ್ಲೆಯ ಕಾಡುಗಳನ್ನು ದಕ್ಷಿಣ ಉಷ್ಣವಲಯದ ನಿತ್ಯ ಹಸುರು ಕಾಡುಗಳು, ದಕ್ಷಿಣ ಉಷ್ಣವಲಯದ ಸಮ್ಮಿಶ್ರ ನಿತ್ಯ ಹಸುರು ಕಾಡುಗಳು, ತೇವಭರಿತ ಎಲೆ ಉದುರುವ ಕಾಡುಗಳು ಮತ್ತು ದಕ್ಷಿಣ ಉಷ್ಣವಲಯದ ಮುಳ್ಳಿನ ಕಾಡುಗಳು ಎಂದು ವಿಂಗಡಿಸಲಾಗಿದೆ. ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿತ್ಯ ಹಸುರು ಕಾಡು 88.73 ಚ.ಕಿಮೀ ವಿಸ್ತರಿಸಿದೆ. ತೇವಭರಿತ ಎಲೆ ಉದುರುವ ಕಾಡು ಉತ್ತರದ ಸೊರಬ ತಾಲ್ಲೂಕಿನಿಂದ ದಕ್ಷಿಣದ ತೀರ್ಥಹಳ್ಳಿ ತಾಲ್ಲೂಕಿನವರೆಗೂ ವ್ಯಾಪಿಸಿದೆ. ಈ ಎರಡೂ ವರ್ಗದ ಕಾಡುಗಳಲ್ಲಿ ಬೆಲೆಬಾಳುವ ಮರಗಳು ಅಧಿಕವಾಗಿವೆ. ಹಲಸು, ಸಂಪಿಗೆ, ಮಾವು, ಹೈಗ, ಕರಿಮರ, ಮತ್ತಿ, ನಂದಿ, ಹೊನ್ನೆ, ಹೊಳೆಮತ್ತಿ, ಕೀರಲುಭೋಗಿ, ನಾಗಸಂಪಿಗೆ, ಸಾಗುವಾನಿ, ಬೀಟೆ, ಸುರಹೊನ್ನೆ, ಬಿಲ್ವಾರ, ಗಂಧಗರಿಗೆ, ಕಡವಲ, ಬಿಳಿಬೂರುಗ, ತಾರೆ, ಕಣಗಲು, ಶ್ರೀಗಂಧ, ಹೆಬ್ಬಲಸು, ನೇರಲು, ಕಕ್ಕೆ, ವಳಿಗೆ, ಬಸರಿ, ಶಿವನಿ, ಗುಳಮಾವು, ಗೇರು, ಗುಗ್ಗಳ, ಬಕ್ಕಲು ಮುಂತಾದ ಮರಗಳಿವೆ. ಜಿಲ್ಲೆಯ ಪೂರ್ವಭಾಗದಲ್ಲಿ ದಿಂಡಿಗ, ಹಿಪ್ಪೆ, ಬೇವು, ನೆಲ್ಲಿ, ಶ್ರೀಗಂಧ, ಹೊಂಗೆ, ಅಂಟುವಾಳ, ಕರಿಗೇರು, ಹುಣಿಸೆ, ಕಾರೆ, ಸುರಿಮುಳ್ಳು, ಬಿಳಿಜಾಲಿ, ಕರಿಜಾಲಿ ಇತ್ಯಾದಿ ಮುಖ್ಯ ಸಸ್ಯವರ್ಗವಿದೆ. ಮಲೆನಾಡು ಭಾಗದಲ್ಲಿ ಕಾಗದ ತಯಾರಿಕೆಗೆ ಉಪಯುಕ್ತವಾದ ಬಿದಿರು ವಿಶೇಷವಾಗಿದೆ. ಹೆಣಿಗೆ ವಸ್ತು ಸಾಮಗ್ರಿಗಳಿಗೆ ಬೇಕಾದ ಬೆತ್ತವಾಟೆಗಳಿವೆ. ಜಿಲ್ಲೆಯಲ್ಲಿ ಒಟ್ಟು 76,855 ಹೆಕ್ಟೇರ್ ಅರಣ್ಯ ಪ್ರದೇಶವಿದೆ (1998-99).
ಪ್ರಾಣಿಸಂಪತ್ತು
[ಬದಲಾಯಿಸಿ]


ದಟ್ಟ ಹಸಿರು ಕಾಡುಗಳುಳ್ಳ ಈ ಜಿಲ್ಲೆಯಲ್ಲಿ ಪ್ರಾಣಿಸಂಪತ್ತು ವಿಪುಲವೂ ವೈವಿಧ್ಯಮಯವೂ ಆಗಿದೆ. ಇಲ್ಲಿಯ ಕಾಡುಗಳಲ್ಲಿ ಆನೆ, ಕಾಡುಕೋಣಗಳು, ಜಿಂಕೆ, ಸಂಬಾರ, ಹುಲಿ, ಚಿರತೆ, ಸಾರಗ, ಕಡವೆ, ಹಂದಿ, ಕರಡಿ, ತೋಳ, ಕಾಡುಕುರಿ, ಬರ್ಕ, ಕಬ್ಬೆಕ್ಕು, ಪುನುಗು ಬೆಕ್ಕು, ಮುಸಿಯ, ಕೆಂಜಳಿಲು, ಮುಳ್ಳುಹಂದಿ, ಕೋತಿ, ಉಡ, ಮೊಲ, ನರಿ ಮುಂತಾದ ಪ್ರಾಣಿಗಳಿವೆ. ಶರಾವತಿ ಮತ್ತು ಶೆಟ್ಟಿಹಳ್ಳಿ ಮೃಗಧಾಮಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಕಾಡುಕೋಳಿ ಬಾವಲಿ, ರಣಹದ್ದು, ಗಿಡುಗ, ಗರುಡ, ನವಿಲು, ಕೋಗಿಲೆ, ಗವುಜುಗ, ಕಾಜಾಣ, ಕೆಂಬೂತ, ಬೆಳ್ಳಕ್ಕಿ, ಕಾಗೆ, ಗಿಳಿ, ಹುಂಡುಕೋಳಿ, ಮೀಂಚುಳ್ಳಿ, ಪಾರಿವಾಳ, ಮರಕುಟಿಗ, ಮೈನ ಇತ್ಯಾದಿ ಪಕ್ಷಿಸಂಕುಲವಿದೆ. ಬಾತು ಜಾತಿಯ ಚರ್ಲೆ ಕುಂಡಿಮುಳುಗ ಮೊದಲಾದ ನೀರು ಹಕ್ಕಿಗಳಿವೆ. ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿ ಪಕ್ಷಿಧಾಮವಿದೆ. ವಿವಿಧ ಹಕ್ಕಿಗಳು ಇಲ್ಲಿಗೆ ಹೊರಗಿನಿಂದ ಜುಲೈ ತಿಂಗಳಲ್ಲಿ ಬಂದು ಅಕ್ಟೋಬರ್ ತಿಂಗಳವರೆಗೂ ಇರುತ್ತವೆ. ಹೆಬ್ಬಾವು, ಮಂಡಲ, ನಾಗರ, ಕಾಳಿಂಗಸರ್ಪ, ಕೇರೆ, ಹಸಿರುಹಾವು, ಕಟುಗ ಮೊದಲಾದ ಹಾವುಗಳಿವೆ. ಇಲ್ಲಿ ನದಿ ಮತ್ತು ಕೆರೆಗಳಲ್ಲಿ ಮೊಸಳೆ ಆಮೆ ನೀರುನಾಯಿಗಳಂತಹ ಜಲಜೀವಿಗಳೂ ಬಾಳೆ, ಅವಲು, ಕುಚ್ಚು, ಗೆಂಡೆ, ಮುರಗೊಡವ, ಕಾಟ್ಲ, ಬಿಳಿಮೀನು, ಕೆಮ್ಮೀನು, ಕುರಗಿ, ಕುರಡಿ, ಹೂಮೀನು, ಹಾವುಮೀನು, ಅರ್ಜ, ಮಳಲಿ ಮುಂತಾದ ಮೀನುಗಳು ಇವೆ. ಮಲೆನಾಡಿನ ದನಗಳು ಗಾತ್ರದಲ್ಲಿ ಚಿಕ್ಕವಾಗಿದ್ದು ಹೆಚ್ಚಾಗಿ ಕಪ್ಪು ಮತ್ತು ಕಂದು ಬಣ್ಣದವಾಗಿರುತ್ತವೆ. ಬಿಳಿಯ ದೊಡ್ಡ ರಾಸುಗಳು ಬಯಲುಸೀಮೆ ಪ್ರದೇಶಗಳಲ್ಲಿ ಹೆಚ್ಚಾಗಿವೆ. ಮಿಶ್ರಜಾತಿಯ ತಳಿಗಳ ಸಾಕಣೆ ಈಗ ಹೆಚ್ಚುತ್ತಿದೆ. ಕೋಣಗಳನ್ನು ಮಲೆನಾಡಿನಲ್ಲಿ ಹೆಚ್ಚಾಗಿ ಉಳುಮೆಗೆ ಬಳಸುತ್ತಾರೆ.
ವಾಯುಗುಣ
[ಬದಲಾಯಿಸಿ]ಜಿಲ್ಲೆಯ ವಾಯುಗುಣ ಕರ್ನಾಟಕದ ಇತರ ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶಗಳಂತೆಯೇ ಇದೆಯೆನ್ನಬಹುದು. ಋತುಮಾನ ವನ್ನು ಜೂನ್-ಸೆಪ್ಟೆಂಬರ್‍ವರೆಗೆ ಮಳೆಗಾಲ, ಅಕ್ಟೋಬರ್-ನವೆಂಬರ್ ವರೆಗೆ ಹಿಂಗಾರು ಕಾಲ, ಡಿಸೆಂಬರ್-ಫೆಬ್ರವರಿವರೆಗೆ ಚಳಿಗಾಲ, ಮಾರ್ಚ್-ಮೇವರೆಗೆ ಬೇಸಗೆಕಾಲ ಎಂದು ವಿಂಗಡಿಸಬಹುದು. ಮಲೆನಾಡು ಭಾಗದಲ್ಲಿ ವರ್ಷದ ಅರ್ಧಕ್ಕೂ ಹೆಚ್ಚು ಕಾಲ ಆಕಾಶದಲ್ಲಿ ಮೋಡ ತುಂಬಿದ ವಾತಾವರಣವಿರುತ್ತದೆ. ಮುಂಗಾರು ಕಾಲದಲ್ಲಿ ಅಂದರೆ ಏಪ್ರಿಲ್-ಮೇ ತಿಂಗಳುಗಳಲ್ಲಿ ಗುಡುಗು ಮಿಂಚುಗಳಿಂದ ಕೂಡಿದ ಬಿರುಮಳೆ ಬರುವುದುಂಟು. ಆಗುಂಬೆಯಲ್ಲಿ ವಾರ್ಷಿಕವಾಗಿ 7,600 ಮಿಮೀಗೂ ಹೆಚ್ಚು ಮಳೆಯಾಗುತ್ತದೆ. ಹೊಸನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳ ವಿವಿಧ ಭಾಗಗಳಲ್ಲಿ ಸು. 2,000-5,000 ಮಿಮೀಗಳಿಗೂ ಹೆಚ್ಚು ಮಳೆಯಾಗುತ್ತದೆ. ಶಿಕಾರಿಪುರ ತಾಲ್ಲೂಕಿನಲ್ಲಿ ಹೋಲಿಕೆಯ ದೃಷ್ಟಿಯಿಂದ ಕಡಿಮೆ ಪ್ರಮಾಣದ ಮಳೆ ಬೀಳುತ್ತದೆ. ಜಿಲ್ಲೆಯಲ್ಲಿ ಪೂರ್ವದ ಕಡೆ ಬಂದಂತೆಲ್ಲ ಮಳೆ ಕಡಿಮೆಯಾಗುತ್ತ ಬರುತ್ತದೆ. ಆಗುಂಬೆ ಬಿಟ್ಟು ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 1,526.5 ಮಿಮೀ. 2000ದಲ್ಲಿ 1957 ಮಿಮೀ. ಮಳೆ ಬಿದ್ದಿದೆ. ಕೆಲವೊಮ್ಮೆ ಒಂದು ದಿನದಲ್ಲಿ ಆಗುಂಬೆ ಮತ್ತು ಇತರ ಕಡೆಗಳಲ್ಲಿ 500 ಮಿಮೀಗಳಿಗೂ ಹೆಚ್ಚು ಮಳೆ ಬಿದ್ದಿರುವುದುಂಟು. ಸಾಮಾನ್ಯವಾಗಿ ಬೇಸಗೆಯಲ್ಲಿ ಅಧಿಕ ಉಷ್ಣಾಂಶವಿರುತ್ತದೆ.
ಭೂರಚನೆ
[ಬದಲಾಯಿಸಿ]ಜಿಲ್ಲೆಯ ಶಿಲಾವರ್ಗ ಮುಖ್ಯವಾಗಿ ಧಾರವಾಡ ಭಿನ್ನಸ್ತರ ಶಿಲೆ ಮತ್ತು ಬೆಣಚುಕಲ್ಲಿನಿಂದ ಕೂಡಿದ್ದು ಜಿಲ್ಲೆಯ ಮೂರನೆಯ ಎರಡು ಭಾಗ ಧಾರವಾಡ ಭಿನ್ನಸ್ತರ ಶಿಲೆಯಿಂದ ಕೂಡಿದೆ. ಪಶ್ಚಿಮದಿಂದ ಪೂರ್ವಕ್ಕೆ ಹರಡಿರುವ ಶಿವಮೊಗ್ಗ ಶಿಲಾವಲಯ ಮುಖ್ಯ ವರ್ಗವಾಗಿದ್ದು ಅದು ಹೆಚ್ಚು ಭಾಗವನ್ನು ವ್ಯಾಪಿಸಿದೆ. ಇದರಲ್ಲಿ ವಿವಿಧ ಭಿನ್ನಸ್ತರ ಶಿಲೆಗಳಿದ್ದು ಜ್ವಾಲಾಮುಖಿ ಶಿಲೆಗಳೊಡನೆ ಕೂಡಿರುವ ಕ್ಲೊರಿಟಿಕ್ ಮತ್ತು ಹಾರ್ನ್‍ಬ್ಲೆಂಡ್ ಭಿನ್ನಸ್ತರ ಶಿಲೆಗಳು ಕೆಲವು ಕಡೆ ಕಂಡುಬರುವುವು. ಅವುಗಳಲ್ಲಿ ಕ್ವಾಟ್ರ್ಸ್, ಉಂಡೆ ಶಿಲೆಗಳು, ಸುಣ್ಣದ ಕಲ್ಲು, ಷೇಲ್ಸ್ ಮತ್ತು ಕಬ್ಬಿಣಾಂಶದ ಕಲ್ಲುಗಳಿವೆ. ಬಂಗಾರದ ಅದುರು ಈ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಕುದುರೆಕೊಂಡ, ಪಲವನಹಳ್ಳಿ, ಹೊನ್ನೆಹಟ್ಟಿ ಪ್ರದೇಶಗಳಲ್ಲಿ ಹಾಗೂ ತುಂಗಭದ್ರಾ ನದಿ ಮತ್ತು ಅದರ ಉಪನದಿಗಳ ಮೆಕ್ಕಲು ಮಣ್ಣಿನಲ್ಲಿ ಬಂಗಾರದ ಅಂಶ ತೆಳುವಾಗಿ ಹರಡಿಕೊಂಡಿದೆ. ಕಬ್ಬಿಣದ ಅದುರು ಇಲ್ಲಿನ ಮುಖ್ಯ ಖನಿಜಗಳಲ್ಲೊಂದು. ಇದು ಧಾರವಾಡ ಭಿನ್ನಸ್ತರ ಶಿಲೆಗಳಲ್ಲಿ ಕಂಡುಬರುತ್ತದೆ. ಶಂಕರಗುಡ್ಡ ಮತ್ತು ಕುಂಸಿ ಬಳಿಯ ಚಟ್ಟನಹಳ್ಳಿ ಹಾಗೂ ಆಗುಂಬೆ ಬಳಿಯ ಬೆಟ್ಟಶ್ರೇಣಿಗಳಲ್ಲಿ ಮಧ್ಯಮ ದರ್ಜೆಯ ಕಬ್ಬಿಣದ ಅದುರಿನ ನಿಕ್ಷೇಪಗಳಿವೆ. ಮತ್ತಿಮನೆ, ಕೊಡಚಾದ್ರಿ, ಕೋಟೆಖಾರಿ ಮತ್ತು ಅಂಬರಗುಡ್ಡ ಪ್ರದೇಶಗಳಲ್ಲೂ ಕಬ್ಬಿಣದ ಅದರು ಸಿಕ್ಕುವುದುಂಟು. ಮ್ಯಾಂಗನೀಸ್ ಅದುರು ದೊಡ್ಡ ಪ್ರಮಾಣದಲ್ಲಿ ಸಿಕ್ಕುವುದು. ಇದು ನಾಲ್ಕು ವಲಯಗಳಾಗಿ ವಿಂಗಡವಾಗಿ ಜಿಲ್ಲೆಯ ಉತ್ತರ ದಕ್ಷಿಣ ಮತ್ತು ಪೂರ್ವಭಾಗಗಳಲ್ಲಿ ವಿಶೇಷವಾಗಿ ಹರಡಿದೆ. ಧಾರವಾಡ ಭಿನ್ನಸ್ತರ ಶಿಲೆಯಲ್ಲಿ ಬಹುದೂರದವರೆಗೂ ಪಟ್ಟೆಗಳಂತೆ ವ್ಯಾಪಿಸಿರುವ ಸುಣ್ಣಕಲ್ಲು ಅಪಾರವಾಗಿದೆ. ಕಬ್ಬಿಣದ ಅದುರಿನ ಜೊತೆ ಸೇರಿಕೊಂಡಿರುವ ಕ್ರೊಮೈಟ್ ಹರೇನಹಳ್ಳಿ, ಝಂಡಿಮಟ್ಟಿ, ಅಂತರಗಂಗೆ ಬಳಿ ಕಂಡುಬಂದಿದೆ. ಜಿಲ್ಲೆಯಲ್ಲಿ ಕಂಡುಬರುವ ಇತರ ಮುಖ್ಯ ಖನಿಜಗಳೆಂದರೆ ಸೀಸದ ಅದುರು, ಗಾರ್ನೆಟ್, ಕಲ್ನಾರು, ಕಾವಿಮಣ್ಣು, ಟೈಟ್ಯಾನಿಯಮ್, ಕಯೊಲಿನ್, ಕ್ವಾಟ್ರ್ಸ್ ಇತ್ಯಾದಿ. ಬೆಣಚುಕಲ್ಲು, ಲ್ಯಾಟೆರೈಟ್ ಮತ್ತು ಮರಳನ್ನು ಕಟ್ಟಡ ನಿರ್ಮಾಣಕ್ಕೆ ಹಾಗೂ ರಸ್ತೆ ಕೆಲಸಗಳಿಗೆ ಬಳಸುತ್ತಾರೆ. ಜೇಡಿಮಣ್ಣೂ ಹೆಚ್ಚು ಸಿಗುತ್ತದೆ.
ಮಣ್ಣು
[ಬದಲಾಯಿಸಿ]ಜಿಲ್ಲೆಯಲ್ಲಿ ವಿವಿಧ ಮಣ್ಣಿನ ಬಗೆಗಳು ಕಂಡುಬರುತ್ತವೆ. ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಜಂಬುಮಣ್ಣು ಅಥವಾ ಕೆಂಪು ಜೇಡಿ ಮಿಶ್ರಿತ ಮಣ್ಣೂ ಕಣಿವೆ ಮತ್ತು ಜೌಗು ಸ್ವರೂಪದ ತಗ್ಗುಪ್ರದೇಶಗಳಲ್ಲಿ ಮರಳುಮಿಶ್ರಿತ ಮೃದು ಮಣ್ಣೂ ಕೆಲವೆಡೆ ಮರಳು ಮತ್ತು ಜೇಡಿ ಮಿಶ್ರಿತ ಫಲವತ್ತಾದ ಮಣ್ಣೂ ಇದ್ದು ಕಲ್ಲುಗಳಿಂದ ಕೂಡಿದ ಫಲವತ್ತಲ್ಲದ ಮಣ್ಣಿನ ಪ್ರದೇಶವೂ ಇದೆ. ಇಲ್ಲಿನ ಮಣ್ಣಿನಲ್ಲಿ ಸಾಮಾನ್ಯವಾಗಿ ಸಸಾರಜನಕದ ಅಂಶ ಹೆಚ್ಚಾಗಿಯೂ ರಂಜಕ ಮತ್ತು ಪೊಟಾಷ್ ಅಂಶ ಕಡಿಮೆಯಾಗಿಯೂ ಸುಣ್ಣದ ಅಂಶದ ಕೊರತೆಯೂ ಇರುವುದು ಕಂಡುಬಂದಿದೆ. ಜಿಲ್ಲೆಯ ಭೌಗೋಳಿಕ ಲಕ್ಷಣದಲ್ಲಿ ಸ್ವಾಭಾವಿಕ ಭಿನ್ನತೆ ಇರುವುದರಿಂದ ವ್ಯವಸಾಯ ಆಯಾ ಮಣ್ಣು ಮತ್ತು ವಾಯುಗುಣಕ್ಕನುಗುಣವಾಗಿ ವೈವಿಧ್ಯವಾಗಿದೆ. ಒಟ್ಟಿನಲ್ಲಿ ಜಿಲ್ಲೆಯ ಮಣ್ಣು ವ್ಯವಸಾಯಕ್ಕೆ ಅನುಕೂಲಕರವಾಗಿದೆ.
ನೀರಾವರಿ
[ಬದಲಾಯಿಸಿ]ಶಿವಮೊಗ್ಗ ಜಿಲ್ಲೆ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಹೆಚ್ಚು ನೀರಾವರಿ ಪ್ರದೇಶ ಹೊಂದಿದೆ ಅನ್ನಬಹುದು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕ್ರಮಬದ್ಧವಾದ ನೀರಾವರಿಯಲ್ಲದೆ ಮಳೆನೀರು ಮತ್ತು ನೂರಾರು ತೊರೆಗಳು ಮತ್ತು ಜಿನುಗು ನೀರಿನಿಂದ ವ್ಯವಸಾಯಕ್ಕೆ ನೀರೊದಗುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಬಳಿ ಭದ್ರಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಭದ್ರಾ ಜಲಾಶಯ ಈ ಜಿಲ್ಲೆಗೆ ವರಪ್ರದವಾಗಿದೆ. ಈ ಯೋಜನೆಯಿಂದ ಶಿವಮೊಗ್ಗ ಜಿಲ್ಲೆಯ 40,446.14ಹೆಕ್ಟೇರ್‍ಗಳಿಗೆ ನೀರೊದಗಿದೆ. ಶಿವಮೊಗ್ಗ ತಾಲ್ಲೂಕಿನ ಗಾಜನೂರು ಬಳಿ ತುಂಗಾನದಿಗೆ ನಿರ್ಮಿಸಿರುವ ಅಣೆಕಟ್ಟು ಇನ್ನೊಂದು ಮುಖ್ಯ ನೀರಾವರಿ ಯೋಜನೆ. ಇದರಿಂದ 8,707.5ಹೆಕ್ಟೇರ್‍ಗಳಿಗೆ ನೀರೊದಗುತ್ತಿದೆ. ಶಿಕಾರಿಪುರ ತಾಲ್ಲೂಕಿನ ಕುಮುದ್ವತಿ ನದಿಯ ಅಂಜನಾಪುರ ಜಲಾಶಯದಿಂದ 7,169 ಹೆಕ್ಟೇರ್‍ಗಳ ನೀರಾವರಿಯಾಗಿದೆ. ಅಂಬ್ಲಿಗೊಳ ಜಲಾಶಯ ಮತ್ತು ಗೊಂಡಿ ಅಣೆಕಟ್ಟುಗಳಿಂದಲೂ ನೀರಾವರಿ ಅನುಕೂಲತೆ ದೊರೆತಿದೆ. ಕಾಲುವೆ ನೀರಾವರಿಯಲ್ಲಿ ಇದು ರಾಜ್ಯದಲ್ಲಿ ಮೂರನೆಯ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಕಾಲುವೆಯಿಂದ 45,240ಹೆಕ್ಟೇರ್, ಕೊಳವೆಬಾವಿಗಳಿಂದ 6,293ಹೆಕ್ಟೇರ್, ಕೆರೆಗಳಿಂದ 64,995ಹೆಕ್ಟೇರ್, ಬಾವಿಗಳಿಂದ 2,036 ಹೆಕ್ಟೇರ್, ನೀರಾವರಿಯಿಂದ 1,601ಹೆಕ್ಟೇರ್ ಮತ್ತು ಇತರೇ ವಿಧಾನಗ ಳಿಂದ 8,568ಹೆಕ್ಟೇರ್‍ಗಳಿಗೆ ನೀರೊದಗಿಸಲಾಗಿತ್ತು.ಇದು (1998-99)ರ ಅಂಕಿ ಅಂಶ.
ವ್ಯವಸಾಯ
[ಬದಲಾಯಿಸಿ]ಕರ್ನಾಟಕ ರಾಜ್ಯದ ಬತ್ತದ ಕಣಜವೆಂಬ ಹೆಸರಿಗೆ ಪಾತ್ರವಾಗಿರುವ ಶಿವಮೊಗ್ಗ ವ್ಯವಸಾಯಪ್ರಧಾನ ಜಿಲ್ಲೆ. ಬತ್ತ ಈ ಜಿಲ್ಲೆಯ ಮುಖ್ಯ ಬೆಳೆ. ಜಿಲ್ಲೆಯ ಒಟ್ಟು ಬೆಳೆ ಪ್ರದೇಶದಲ್ಲಿ ಬತ್ತದ ಬೆಳೆ ಸೇ. 54.02ರಷ್ಟು ಪ್ರದೇಶದಲ್ಲಿ ವ್ಯಾಪಿಸಿದ್ದು, 1998-99ರಲ್ಲಿ ಒಟ್ಟು 2,48,134 ಹೆಕ್ಟೇರು ಗಳಲ್ಲಿ ಬಿತ್ತನೆ ಮಾಡಲಾಗಿತ್ತು. 1,58,633 ಹೆಕ್ಟೇರುಗಳಲ್ಲಿ ಬತ್ತವನ್ನೂ 8,702 ಹೆಕ್ಟೇರುಗಳಲ್ಲಿ ರಾಗಿಯನ್ನೂ 2,215 ಹೆಕ್ಟೇರುಗಳಲ್ಲಿ ಜೋಳವನ್ನೂ 1,77,988 ಹೆಕ್ಟೇರುಗಳಲ್ಲಿ ವಿವಿಧ ಧಾನ್ಯಗಳನ್ನೂ 8,295 ಹೆಕ್ಟೇರುಗಳಲ್ಲಿ ಮುಸುಕಿನ ಜೋಳವನ್ನೂ 11,061 ಹೆಕ್ಟೇರುಗಳಲ್ಲಿ ದ್ವಿದಳಧಾನ್ಯಗಳನ್ನೂ 11,233 ಹೆಕ್ಟೇರುಗಳಲ್ಲಿ ಕಬ್ಬನ್ನೂ 5,399 ಹೆಕ್ಟೇರು ಗಳಲ್ಲಿ ನೆಲಗಡಲೆಯನ್ನೂ 18,011 ಹೆಕ್ಟೇರುಗಳಲ್ಲಿ ಹತ್ತಿಯನ್ನೂ ಬೆಳೆಯಲಾಗಿತ್ತು.ಇವುಗಳ ಜೊತೆಗೆ ಹರಳುಬೀಜ, ನಾರಗಸೆಬೀಜ, ಸೂರ್ಯಕಾಂತಿ, ಎಳ್ಳು, ಕುಸುಬೆ ಮೊದಲಾದವನ್ನು ಎಣ್ಣೆ ತೆಗೆಯಲು ಬೆಳೆಯುತ್ತಾರೆ. ಅಡಕೆ ಮಲೆನಾಡು ಪ್ರದೇಶದ ಮುಖ್ಯ ವಾಣಿಜ್ಯ ಬೆಳೆ. ಜೊತೆಗೆ ತೆಂಗನ್ನೂ ಬೆಳೆಯಲಾಗುತ್ತದೆ. ಮಾವು, ನಿಂಬೆ, ಸೀತಾಫಲ, ಸೀಬೆ, ಸಪೋಟ, ಪರಂಗಿ, ಬಾಳೆ, ಹಲಸು, ಪಪ್ಪಾಯಿ ಮತ್ತಿತರ ಹಣ್ಣಿನ ಬೆಳೆಗಳಿವೆ. ಜಿಲ್ಲೆಯಲ್ಲಿ ವ್ಯವಸಾಯ ಸಂಬಂಧವಾದ ಅನೇಕ ಸಂಸ್ಥೆಗಳಿವೆ. ಅವುಗಳಲ್ಲಿ ಅಡಕೆ ಬೆಳೆ ಸಂಶೋಧನಾ ಕೇಂದ್ರ, ತೋಟಗಾರಿಕೆ ತರಬೇತಿ ಕೇಂದ್ರ, ರೈತರ ತರಬೇತಿ ಮತ್ತು ಶಿಕ್ಷಣ ಕೇಂದ್ರ ಮೊದಲಾದವು ಮುಖ್ಯವಾದವು.
ವಿದ್ಯುತ್
[ಬದಲಾಯಿಸಿ]ಶಿವಮೊಗ್ಗ ಜಿಲ್ಲೆ ಬೃಹತ್ ಮತ್ತು ಸಣ್ಣ ವಿದ್ಯುತ್ ಯೋಜನೆಗಳ ನೆಲೆ. ಶರಾವತಿ ನದಿಯ ಜೋಗ ಜಲಪಾತದಲ್ಲಿ 1948ರಲ್ಲಿ ಜಲವಿದ್ಯುತ್ ಉತ್ಪಾದನೆ ಪ್ರಾರಂಭಿಸಲಾಯಿತು. ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆಯೆಂದು ನಾಮಾಂಕಿತವಾದ ಈ ಕೇಂದ್ರ ತ್ವರಿತ ಅಭಿವೃದ್ಧಿ ಸಾಧಿಸಿದೆ. ಈ ಕೇಂದ್ರದ ಒಟ್ಟು ಉತ್ಪಾದನಾಸಾಮಥ್ರ್ಯ 1,20,000 ಕಿವಾ. ಭದ್ರಾನದಿಗೆ ಅಡ್ಡಲಾಗಿ ಲಕ್ಕವಳ್ಳಿ ಬಳಿ ನಿರ್ಮಿಸಿರುವ ಭದ್ರಾ ಜಲಾಶಯ ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಗಳೆರಡಕ್ಕೂ ಉದ್ದೇಶಿತವಾಗಿದೆ. ಅದರ ಗರಿಷ್ಠ ಉತ್ಪಾದನಾಸಾಮಥ್ರ್ಯ 33,220 ಕಿವಾ. ಶರಾವತಿ ನೀರನ್ನು ಸಮಗ್ರವಾಗಿ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುವ ಉದ್ದೇಶದಿಂದ ಶರಾವತಿ ಜಲವಿದ್ಯುತ್ ಯೋಜನೆಯನ್ನು 1956ರಲ್ಲಿ ಕೈಗೊಳ್ಳಲಾಯಿತು. ಈ ಉದ್ದೇಶಕ್ಕಾಗಿ ಶರಾವತಿ ನದಿಗೆ ಜೋಗ ಜಲಪಾತಕ್ಕೆ ಹತ್ತು ಕಿಮೀ ಮೇಲುಗಡೆ ಸಾಗರ ತಾಲ್ಲೂಕಿನಲ್ಲಿ ಲಿಂಗನಮಕ್ಕಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ವಿದ್ಯುತ್ ಉತ್ಪಾದನೆಯ ಜೊತೆಗೆ ಜಲಪಾತಕ್ಕೆ ನೀರೊದಗಿಸಲೂ ಅನುಕೂಲಕರವಾಗಿದೆ. ಶರಾವತಿ ಕಣಿವೆ ಜಲವಿದ್ಯುತ್ ಯೋಜನೆ 891,000 ಕಿವಾ ವಿದ್ಯುತ್ ಉತ್ಪಾದನಾ ಸಾಮಥ್ರ್ಯ ಪಡೆದಿದೆ. ಮಹಾತ್ಮಗಾಂಧಿ ಜಲವಿದ್ಯುತ್ ಯೋಜನೆಗೆ ಐದು ಕಿಮೀ ದೂರದಲ್ಲಿರುವ ಆನೆಬೈಲು ವಿದ್ಯುತ್ ಯೋಜನೆ ಇಡೀ ಆಗ್ನೇಯ ಏಷ್ಯದಲ್ಲೇ ಅತಿದೊಡ್ಡ ವಿದ್ಯುತ್ ಸ್ಥಾವರವಾಗಿದೆ. ಜಿಲ್ಲೆಯ ಎಲ್ಲ ಕೇಂದ್ರಗಳಿಂದ ಒಟ್ಟು ವಿದ್ಯುತ್ ಉತ್ಪಾದನಾಸಾಮಥ್ರ್ಯ ಸು. 8,66,000 ಕಿವಾ.
ಕೈಗಾರಿಕೆ
[ಬದಲಾಯಿಸಿ]ಶಿವಮೊಗ್ಗ ಜಿಲ್ಲೆ ಕೈಗಾರಿಕೆಯಲ್ಲಿ ಗಣನೀಯ ಪ್ರಗತಿ ಸಾಧಿಸಿರುವುದನ್ನು ಕಾಣಬಹುದಾದರೂ ಸಣ್ಣಪ್ರಮಾಣದಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಗೊಳ್ಳುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ. ಕಳೆದ ಶತಮಾನದ ಕೊನೆಯ ಭಾಗದಲ್ಲಿ ಕೆಲವೆಡೆ ಖನಿಜ ಉದ್ಯಮಗಳು ಪ್ರಾರಂಭವಾದರೂ ಅವು ದೃಢಗೊಂಡಿರಲಿಲ್ಲ. ಮೈಸೂರು ಸಂಸ್ಥಾನದ ಸರ್ಕಾರ 1918ರಲ್ಲಿ ಭದ್ರಾವತಿಯಲ್ಲಿ ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸಿ ಕೈಗಾರಿಕಾ ಶಕೆಗೆ ಬುನಾದಿ ಹಾಕಿತೆನ್ನಬಹುದು. ತರುವಾಯ ಅಲ್ಲಲ್ಲಿ ಮರದ ಕಾರ್ಖಾನೆಗಳು, ಹೆಂಚಿನ ಕಾರ್ಖಾನೆಗಳು, ಅಕ್ಕಿಗಿರಣಿಗಳು, ಮುದ್ರಣಾಲಯ ಮುಂತಾದವು ಪ್ರಾರಂಭವಾದವು. ಭದ್ರಾವತಿಯಲ್ಲಿ 1936ರಲ್ಲಿ ಕಾಗದದ ಕಾರ್ಖಾನೆ, 1938ರಲ್ಲಿ ಸಿಮೆಂಟ್ ಕಾರ್ಖಾನೆ ಪ್ರಾರಂಭವಾದವು. 1927ರಲ್ಲಿ ಶಿವಮೊಗ್ಗದಲ್ಲಿ ಸ್ಥಾಪನೆಗೊಂಡ ಬೆಂಕಿಕಡ್ಡಿ ತಯಾರಿಕಾ ಉದ್ಯಮವನ್ನು 1940ರಲ್ಲಿ ಸರ್ಕಾರ ವಹಿಸಿಕೊಂಡಿತು. ಬೀರೂರು, ಶಿವಮೊಗ್ಗ ರೈಲು ಮಾರ್ಗ 1940ರ ಹೊತ್ತಿಗೆ ಸಾಗರ-ತಾಳಗುಪ್ಪವರೆಗೂ ವಿಸ್ತರಿಸಿತು. 1944ರಲ್ಲಿ ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ ಶಿವಮೊಗ್ಗದಲ್ಲಿ ಸ್ಥಾಪನೆಯಾಯಿತು. 1948ರಲ್ಲಿ ಜೋಗದ ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರದ ಮೊದಲ ಘಟಕ ಕಾರ್ಯಾರಂಭಮಾಡಿತು. ಭದ್ರಾವತಿಯಲ್ಲಿ ಸ್ಥಾಪಿತವಾದ ಕಾಗದ ಕಾರ್ಖಾನೆ 1939ರಲ್ಲಿ ಉತ್ಪಾದನೆ ಆರಂಭಿಸಿತು. ಈ ಎಲ್ಲ ಉದ್ಯಮಗಳು ಸ್ವಾತಂತ್ರ್ಯೋತ್ತರ ಕಾಲದಲ್ಲಿ ತೀವ್ರಗತಿಯಲ್ಲಿ ಪ್ರಗತಿ ಸಾಧಿಸಿದವು. 1954-55ರಲ್ಲಿ ಕಾರ್ಯಗತಗೊಂಡ ಗ್ರಾಮೀಣ ಕೈಗಾರಿಕಾ ಯೋಜನೆ ಜಿಲ್ಲೆಯಲ್ಲಿ ಗಣನೀಯವಾಗಿ ಸಣ್ಣಪ್ರಮಾಣದ ಮತ್ತು ಗೃಹಕೈಗಾರಿಕೆಗಳ ಸ್ಥಾಪನೆಗೆ ಇಂಬುಗೊಟ್ಟಿತ್ತು. ಭದ್ರಾವತಿ-ಶಿವಮೊಗ್ಗ ಮಾರ್ಗದಲ್ಲಿ ಶಿವಮೊಗ್ಗಕ್ಕೆ 6.4 ಕಿಮೀ ದೂರದಲ್ಲಿ ತುಂಗಭದ್ರಾ ಸಕ್ಕರೆ ಕಾರ್ಖಾನೆ 1954ರಲ್ಲಿ ಸ್ಥಾಪನೆಯಾಯಿತು. ಜಿಲ್ಲೆಯಲ್ಲಿ ವಿದ್ಯುತ್ ಮತ್ತು ಗಣಿಗಾರಿಕೆ ಉದ್ಯಮಗಳೂ ಅನೇಕ ಕಡೆ ಇವೆ. ಇವಲ್ಲದೆ ಅನೇಕ ಮಧ್ಯಮ ಪ್ರಮಾಣದ ಉದ್ಯಮಗಳು ಸ್ಥಾಪಿತವಾಗಿವೆ. ಅವುಗಳಲ್ಲಿ ಶಿಕಾರಿಪುರದ ಬಳಿ ಸ್ಥಾಪಿತವಾಗಿರುವ ಜಯಪದ್ಮ ದ್ರಾವಕ ಸಂಸ್ಕರಣ ಕಾರ್ಖಾನೆಯಲ್ಲಿ (1972) ಸಾಬೂನು ಮತ್ತು ಬಣ್ಣ ತಯಾರಿಸಲು ಬಳಸುವ ಎಣ್ಣೆಯನ್ನು ಉತ್ಪಾದಿಸುತ್ತಾರೆ. ಶಿವಮೊಗ್ಗ-ಭದ್ರಾವತಿ ಮಾರ್ಗಮಧ್ಯದಲ್ಲಿ ಒಂದು ಸರ್ಕಾರಿ ಹಾಲಿನ ಡೈರಿ(1963) ಇದೆ. ಉಣ್ಣೆ ಮತ್ತು ರೇಷ್ಮೆ ಬಟ್ಟೆಗಳಲ್ಲಿ ಬಳಸುವ ಬಣ್ಣದ ತಯಾರಿಕಾ ಘಟಕ ಒಂದು (1969) ಹೊಸನಗರ ತಾಲ್ಲೂಕಿನ ರಿಪ್ಪನ್‍ಪೇಟೆಯಲ್ಲಿದೆ. ನ್ಯಾಷನಲ್ ಎಜುಕೇಷನ್ ಸೊಸೈಟಿಯವರು ವಿವಿಧ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದರ ಜೊತೆಗೆ ಅನೇಕ ಸಣ್ಣಪ್ರಮಾಣದ ಉದ್ಯಮಗಳನ್ನು ನಡೆಸುತ್ತಾರೆ. ಅವುಗಳಲ್ಲಿ ಎಣ್ಣೆ, ಸಾಬೂನು ತಯಾರಿಕೆ, ಬೆಂಕಿಕಡ್ಡಿ ಕಾರ್ಖಾನೆ, ಕೈಕಾಗದ ತಯಾರಿಕಾ ಉದ್ಯಮ, ನಾರಿನ ಉದ್ಯಮ ಮತ್ತು ದ್ರಾವಕ ಸಂಸ್ಕರಣ ಉದ್ಯಮ ಮುಖ್ಯವಾದವು. ಇವುಗಳಲ್ಲದೆ ಸಾಮಾನ್ಯ ಎಂಜಿನಿಯರಿಂಗ್ ಉದ್ಯಮಗಳು, ಲಘು ಕಾಂಕ್ರೀಟ್ ಉಪಕರಣ ತಯಾರಿಕಾ ಉದ್ಯಮಗಳಿವೆ. ಜಿಲ್ಲೆಯಲ್ಲಿ ಅಕ್ಕಿ ಮತ್ತು ಹಿಟ್ಟಿನ ಗಿರಣಿಗಳಿವೆ, ಎಣ್ಣೆ ಉದ್ಯಮಗಳೂ ಮರದ ಕಾರ್ಖಾನೆಗಳೂ ಇವೆ. ಹತ್ತಿ ಕೈಮಗ್ಗದ ಘಟಕಗಳೂ ಮಂಗಳೂರು ಹೆಂಚು ತಯಾರಿಸುವ ಘಟಕಗಳೂ ಇವೆ. ಜೇನುಸಾಕಣೆ, ಕುಂಬಾರಿಕೆ, ಚರ್ಮದ ಕೆಲಸ, ಮರಗೆಲಸ, ಕಬ್ಬಿಣದ ಕೆಲಸ, ಗಾಣ, ಹೆಣಿಗೆ, ನೇಯ್ಗೆ, ಗಂಧದ ವಸ್ತುಗಳ ತಯಾರಿಕೆ, ಲೋಹದ ಪಾತ್ರೆಗಳ ತಯಾರಿಕೆ ಮೊದಲಾದವುಗಳಿಗೆ ಸಂಬಂಧಿಸಿದ ನೂರಾರು ಸಣ್ಣ ಉದ್ಯಮಗಳು ಜಿಲ್ಲೆಯಾದ್ಯಂತ ವ್ಯಾಪಿಸಿವೆ. ತಾಲ್ಲೂಕು ಕೈಗಾರಿಕಾ ಸಹಕಾರ ಸಂಘಗಳು ಸ್ಥಾಪನೆಯಾಗಿವೆ. ಸಾಗರದಲ್ಲಿ ಗ್ರಾಮೀಣ ಕೈಕೆಲಸದ ತರಬೇತಿ ಕೇಂದ್ರ, ಭದ್ರಾವತಿಯಲ್ಲಿ ಕೈಗಾರಿಕಾ ತರಬೇತಿ ಕೇಂದ್ರಗಳಿವೆ. ಶಿವಮೊಗ್ಗ, ಭದ್ರಾವತಿ, ಸಾಗರ ತಾಲ್ಲೂಕಿನ ತಾಳಗುಪ್ಪ ಮುಖ್ಯ ಕೈಗಾರಿಕಾ ಕೇಂದ್ರಗಳೆನಿಸಿವೆ.
ವಾಣಿಜ್ಯ-ವ್ಯವಹಾರ
[ಬದಲಾಯಿಸಿ]ಜಿಲ್ಲೆಯ ಮುಖ್ಯ ವಾಣಿಜ್ಯ ವ್ಯವಹಾರ ವಸ್ತುಗಳೆಂದರೆ ಅಡಕೆ, ಮೆಣಸು, ಹತ್ತಿ, ಬತ್ತ, ಜೋಳ, ರಾಗಿ, ದ್ವಿದಳಧಾನ್ಯಗಳು, ಮೆಣಸಿನ ಕಾಯಿ, ನೆಲಗಡಲೆ, ಸೀಗೆ, ಹೊಗೆಸೊಪ್ಪು, ತೆಂಗಿನಕಾಯಿ, ಗೇರುಬೀಜ ಮೊದಲಾದವು. ನಿಯಂತ್ರಿತ ಮಾರುಕಟ್ಟೆಗಳು ಮತ್ತು ವ್ಯವಸಾಯೋತ್ಪನ್ನ ಮಾರುಕಟ್ಟೆಗಳು ಇಲ್ಲಿನ ಮಾರಾಟ ವ್ಯವಸ್ಥೆಯಲ್ಲಿ ಪಾತ್ರವಹಿಸುತ್ತವೆ. ಜಿಲ್ಲೆಯಲ್ಲಿ ವಾರಸಂತೆಗಳೂ ನಡೆಯುತ್ತವೆ. ಜೊತೆಗೆ ವರ್ಷಂಪ್ರತಿ ನಡೆಯುವ ಅನೇಕ ಧಾರ್ಮಿಕ ಉತ್ಸವಗಳು, ದನಗಳ ಜಾತ್ರೆಗಳು, ರಥೋತ್ಸವಗಳು, ವ್ಯಾಪಾರ ಚಟುವಟಿಕೆಗೆ ಸಹಕಾರಿಯಾಗಿವೆ. ವಿವಿಧ ಕೈಗಾರಿಕಾ ವಸ್ತುಗಳು, ಬಟ್ಟೆ, ಎಣ್ಣೆ, ಗೃಹಬಳಕೆ ವಸ್ತುಗಳು ಮೊದಲಾದವು ಜಿಲ್ಲೆಯ ಹೊರಗಿನಿಂದ ಬರುತ್ತವೆ.
ಸಂಪರ್ಕ
[ಬದಲಾಯಿಸಿ]ಈ ಜಿಲ್ಲೆಯ ಕೆಲವು ಘಟ್ಟ ಮಾರ್ಗಗಳು ಕೆಳದಿ ಅರಸರು ಮತ್ತು ಹೈದರ್-ಟಿಪ್ಪು ಕಾಲದಿಂದಲೂ ಬಳಕೆಯಲ್ಲಿದ್ದವು. ಆದರೆ ಅವುಗಳಿಗೆ ಆಧುನಿಕ ಸ್ವರೂಪ ನೀಡುವ ಕಾರ್ಯ ಇತ್ತೀಚೆಗೆ ಮುಖ್ಯವೆನಿಸಿತು. ಶಿವಮೊಗ್ಗ ಜಿಲ್ಲೆಯನ್ನು ಉಡುಪಿ ಜಿಲ್ಲೆಯೊಂದಿಗೆ ಸಂಪರ್ಕಿಸುವ ಹುಲಿಕಲ್ಲು, ಹೈದರ್ ಘಾಟ್ ಮತ್ತು ಆಗುಂಬೆ ಘಾಟ್-ಈ ಮೂರು ಮುಖ್ಯ ರಸ್ತೆಗಳಿವೆ. ಇವುಗಳಲ್ಲಿ ಆಗುಂಬೆ ಘಾಟ್ ರಸ್ತೆ ತುಂಬಾ ಕಡಿದಾದ ಮಾರ್ಗ. ಉತ್ತರ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕಿಸಲು ಜೋಗ-ಭಟ್ಕಳ ಮಾರ್ಗವಿದೆ. ಇದಲ್ಲದೆ ಜಿಲ್ಲೆಯ ಉತ್ತರ ಭಾಗದಿಂದ ಕೆಲವು ರಸ್ತೆಗಳು ಉತ್ತರ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕ ಸಾಧಿಸಿವೆ. ಜಿಲ್ಲಾಕೇಂದ್ರ ಶಿವಮೊಗ್ಗದೊಂದಿಗೆ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾಂವಿ ಮೊದಲಾದ ನಗರಗಳೊಂದಿಗೆ ರಾಜ್ಯ ಹೆದ್ದಾರಿಗಳ ಮೂಲಕ ರಸ್ತೆ ಸಂಪರ್ಕವಿದ್ದು ಇತರ ಜಿಲ್ಲಾ ಕೇಂದ್ರಗಳೊಂದಿಗೂ ಸಂಪರ್ಕ ಮಾರ್ಗಗಳಿವೆ. ಬೆಂಗಳೂರು-ಹೊನ್ನಾವರ ಮಾರ್ಗ ಭದ್ರಾವತಿ, ಶಿವಮೊಗ್ಗ, ಕುಂಸಿ, ಸಾಗರ, ತಾಳಗುಪ್ಪ ಮತ್ತು ಜೋಗ ಮೂಲಕ ಹೋಗುವ ರಾಜ್ಯದ ಮುಖ್ಯ ಹೆದ್ದಾರಿ ಜಿಲ್ಲೆಯಲ್ಲಿ 115ಕಿಮೀ ದೂರವಿದೆ. ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಿಂದ ಮುಂದುವರಿದ ಈ ಜಿಲ್ಲೆಯ ರೈಲುಮಾರ್ಗ ಹಂತಹಂತವಾಗಿ 1940ರ ಹೊತ್ತಿಗೆ ಶಿವಮೊಗ್ಗ-ಸಾಗರ-ತಾಳಗುಪ್ಪದವರೆಗೂ ವಿಸ್ತರಿಸಿತು. ಬೀರೂರು-ತಾಳಗುಪ್ಪ ಮಾರ್ಗದ ಒಟ್ಟು ಉದ್ದ 161 ಕಿಮೀ. ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಕೆಲವು ಗಣಿಪ್ರದೇಶಗಳಿಗೆ 96 ಕಿಮೀ ಟ್ರಾಮ್ ಮಾರ್ಗಗಳ ಸೌಲಭ್ಯವಿದೆ. ಭದ್ರಾವತಿಯ ಆಕಾಶವಾಣಿ ಕೇಂದ್ರ 1965ರಲ್ಲಿ ಪ್ರಸಾರವನ್ನು ಆರಂಭಿಸಿತು.
ಆರೋಗ್ಯ
[ಬದಲಾಯಿಸಿ]ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ತರಕಾಲದಲ್ಲಿ ಕೈಗೊಂಡ ಆರೋಗ್ಯ ರಕ್ಷಣಾಕಾರ್ಯಾಚರಣೆಗಳಿಂದಾಗಿ ವಿವಿಧ ಸೋಂಕು ಹಾಗೂ ಹಾನಿಕರ ರೋಗಗಳನ್ನು ತಡೆಗಟ್ಟಲಾಗಿದೆ. ಶಿವಮೊಗ್ಗದಲ್ಲಿನ ಮೆಗ್ಗಾನ್ ಆಸ್ಪತ್ರೆ 1880ರಲ್ಲಿ ಸ್ಥಾಪಿತವಾಯಿತು. ತರುವಾಯ ಸಾಗರ, ತೀರ್ಥಹಳ್ಳಿ, ಭದ್ರಾವತಿ ಮೊದಲಾದೆಡೆಗಳಲ್ಲಿ ಆಸ್ಪತ್ರೆಗಳು ಪ್ರಾರಂಭವಾದವು. 1999-2000ದಲ್ಲಿ ಜಿಲ್ಲೆಯಲ್ಲಿ ಒಟ್ಟು 6 ಆಸ್ಪತ್ರೆಗಳಿದ್ದು ಇವುಗಳ ಜೊತೆಗೆ 3 ಭಾರತೀಯ ವೈದ್ಯಪದ್ಧತಿಯ ಆಸ್ಪತ್ರೆಗಳೂ 55 ಪ್ರಾಥಮಿಕ ಆರೋಗ್ಯ ಕೇಂದ್ರಗಳೂ 38 ಪ್ರಾಥಮಿಕ ಆರೋಗ್ಯ ಘಟಕಗಳೂ ಇದ್ದವು.
ಶಿಕ್ಷಣ
[ಬದಲಾಯಿಸಿ]ಖಾಸಗಿ ಸಂಸ್ಥೆಯೊಂದು ಶಿವಮೊಗ್ಗ ಪಟ್ಟಣದಲ್ಲಿ ಪ್ರೌಢಶಾಲಾ ತರಗತಿಗಳನ್ನು 1854ರಲ್ಲಿ ಪ್ರಾರಂಭಿಸಿತು. 1923ರಲ್ಲಿ ತೀರ್ಥಹಳ್ಳಿಯಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ, 1928ರಲ್ಲಿ ಸಾಗರ ಪೌರಸಭೆಯ ಒಂದು ಪ್ರೌಢಶಾಲೆ ಪ್ರಾರಂಭವಾಯಿತು. 1933-34ರಲ್ಲಿ ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರ ಪ್ರಥಮ ಪ್ರೌಢಶಾಲೆ ಪ್ರಾರಂಭವಾಯಿತು. ಶಿವಮೊಗ್ಗದಲ್ಲಿ 1940ರಲ್ಲಿ ಸರ್ಕಾರಿ ಇಂಟರ್‍ಮೀಡಿಯೆಟ್ ಕಾಲೇಜು ಅಸ್ತಿತ್ವಕ್ಕೆ ಬಂತು. ಇದನ್ನೇ ಮುಂದೆ 1959-60ರಲ್ಲಿ ಸಹ್ಯಾದ್ರಿ ಕಾಲೇಜು ಎಂದು ಕರೆಯಲಾಯಿತು. ಇಂದು ಜಿಲ್ಲೆಯಲ್ಲಿ ಹಲವಾರು ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿತವಾಗಿವೆ. ಶಿವಮೊಗ್ಗದಲ್ಲಿ ಮಹಿಳಾ ನ್ಯಾಷನಲ್ ಕಾಲೇಜು, ದೇಶೀಯ ವಿದ್ಯಾಶಾಲಾ ಕಾಲೇಜು, ನ್ಯಾಷನಲ್ ವಾಣಿಜ್ಯ ಸಂಜೆ ಕಾಲೇಜು, ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಸಿ, ನ್ಯಾಷನಲ್ ಶಿಕ್ಷಣ ಕಾಲೇಜು, ಪ್ರಥಮ ದರ್ಜೆ ಕಾಲೇಜು (ತೀರ್ಥಹಳ್ಳಿ), ಲಾಲ್ ಬಹದ್ದೂರ್ ಕಾಲೇಜು ಮತ್ತು ವಾಣಿಜ್ಯ ಕಾಲೇಜು (ಸಾಗರ), ಭದ್ರಾ ಕಾಲೇಜು (ಭದ್ರಾವತಿ), ಒಂದು ಕಾನೂನು ಕಾಲೇಜು, 5 ಉಪಾಧ್ಯಾಯರ ತರಬೇತಿ ಸಂಸ್ಥೆಗಳು, ಒಂದು ಪಾಲಿಟೆಕ್ನಿಕ್, ಒಂದು ಜೂನಿಯರ್ ತಾಂತ್ರಿಕ ಶಾಲೆ, ಒಂದು ಕೈಗಾರಿಕಾ ತರಬೇತಿ ಸಂಸ್ಥೆ, ಒಂದು ದೈಹಿಕ ಶಿಕ್ಷಣ ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆಗಳಿವೆ.ಜಿಲ್ಲೆಯ ಕೆಲವು ಮಠ ಮತ್ತು ದೇವಾಲಯಗಳಿಗೆ ಸಂಬಂಧಿಸಿದಂತೆ ಸಂಸ್ಕøತ ಪಾಠಶಾಲೆಗಳಿವೆ. ಜಿಲ್ಲೆಯಲ್ಲಿ 2000-2001ರಲ್ಲಿ 2,174 ಪ್ರಾಥಮಿಕ, 302 ಪ್ರೌಢಶಾಲೆಗಳು, 66 ಪದವಿಪೂರ್ವ ಕಾಲೇಜು, 8 ಪಾಲಿಟೆಕ್ನಿಕ್, 1 ಎಂಜಿನಿಯರಿಂಗ್, 2 ಭಾರತೀಯ ವೈದ್ಯಪದ್ಧತಿಯ ಕಾಲೇಜುಗಳೂ 1 ದಂತ ವೈದ್ಯಕಾಲೇಜೂ ಇದ್ದವು. ಮೈಸೂರು ವಿಶ್ವವಿದ್ಯಾನಿಲಯ ಶಿವಮೊಗ್ಗ ನಗರದಿಂದ 20 ಕಿಮೀ ದೂರದಲ್ಲಿ ಭದ್ರಾ ಯೋಜನಾ ಪ್ರದೇಶದ ಬಳಿ ಸ್ನಾತಕೋತ್ತರ ಕೇಂದ್ರವನ್ನು 1973ರಲ್ಲಿ ಸ್ಥಾಪಿಸಿತ್ತು. ಅದನ್ನೇ 1987 ಜೂನ್ 29ರಿಂದ ಕುವೆಂಪು ವಿಶ್ವವಿದ್ಯಾಲಯವಾಗಿ ಪರಿವರ್ತಿಸಲಾಯಿತು.
ವಸ್ತು ಸಂಗ್ರಹಾಲಯಗಳು
[ಬದಲಾಯಿಸಿ]ಈ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಸರ್ಕಾರಿ ವಸ್ತುಸಂಗ್ರಹಾಲಯವಿದೆ. ಈ ವಸ್ತುಸಂಗ್ರಹಾಲಯವನ್ನು ಇಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಅವಧಿಯಲ್ಲಿ ಎಚ್.ಎಲ್.ನಾಗೇಗೌಡರು ಸ್ಥಾಪಿಸಿದರು. ಈಗ ಇದು ರಾಜ್ಯ ಪ್ರಾಚ್ಯವಸ್ತು ಇಲಾಖೆಯ ವಶದಲ್ಲಿದೆ. ಕೆಳದಿಯಲ್ಲಿ ಕೆಳದಿ ಗುಂಡಾ ಜೋಯಿಸರು 1960ರಲ್ಲಿ ಸ್ಥಾಪಿಸಿದ ಕೆಳದಿ ವಸ್ತುಸಂಗ್ರಹಾಲಯವಿದೆ. ಜಿಲ್ಲೆಯಲ್ಲಿ ಯಕ್ಷಗಾನ, ಭಾಗವತರ ಆಟ, ಡೊಳ್ಳು ಕುಣಿತ, ತೊಗಲುಬೊಂಬೆಮೇಳ, ವೀರಗಾಸೆ ಕುಣಿತ, ಅಂಟಿಕೆ ಪಂಟಿಕೆ ಮೊದಲಾದ ಜನಪದ ಕಲೆಗಳು ಬೆಳೆದುಬಂದಿವೆ.
ಪಟ್ಟಣಗಳು
[ಬದಲಾಯಿಸಿ]ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಸೊರಬ, ಹೊಸನಗರ ಇವು ಜಿಲ್ಲೆಯ ಪಟ್ಟಣಗಳು. ಭದ್ರಾವತಿ ನಗರವಲಯಕ್ಕೆ ಸೇರಿದ ಭದ್ರಾವತಿ ನ್ಯೂಟೌನ್, ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಮತ್ತು ಶಿವಮೊಗ್ಗ ತಾಲ್ಲೂಕಿನ ಕುಂಸಿ ಇವು ಇತರ ಪಟ್ಟಣಗಳು. ಸೊರಬ ತಾಲ್ಲೂಕಿನ ಕುಬಟೂರು, ಚಂದ್ರಗುತ್ತಿ, ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ, ಭೀಮನಕಟ್ಟೆ, ಶಿಕಾರಿಪುರ ತಾಲ್ಲೂಕಿನ ತಾಳಗುಂದ, ಆರಗ, ಹೊಸನಗರ ತಾಲ್ಲೂಕಿನ ಹುಮಚ, ಸಾಗರ ತಾಲ್ಲೂಕಿನ ಕೆಳದಿ, ಇಕ್ಕೇರಿ ಮುಂತಾದ ಹಲವಾರು ಪುರಾತತ್ತ್ವ ಐತಿಹಾಸಿಕ ಮತ್ತು ಪೌರಾಣಿಕ ಮಹತ್ತ್ವದ ಸ್ಥಳಗಳಿವೆ. ಶಿವಮೊಗ್ಗ ಜಿಲ್ಲೆ ಸಾಂಸ್ಕøತಿಕ ಹಾಗೂ ಧಾರ್ಮಿಕ ಪರಂಪರೆಗಳನ್ನು ಅವಿರತವಾಗಿ ಬಳಸಿಕೊಂಡು ಬಂದಿರುವಂತೆ ರಾಜಕೀಯ ಚಟುವಟಿಕೆಗೂ ಪ್ರಸಿದ್ಧ. ಸ್ವಾತಂತ್ರ್ಯ ಹೋರಾಟಕ್ಕೆ ಈ ಜಿಲ್ಲೆಯ ಕೊಡುಗೆ ಗಣನೀಯ. ಶಿಕಾರಿಪುರ ತಾಲ್ಲೂಕಿನ ಈಸೂರು ಕ್ರಾಂತಿ ನಡೆದ ಸ್ಥಳ. ಇಲ್ಲಿ ಸ್ಮಾರಕ ಭವನ ನಿರ್ಮಿಸಲಾಗಿದೆ.
ಕಲೆ -ಸಾಹಿತ್ಯ
[ಬದಲಾಯಿಸಿ]ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಈ ಜಿಲ್ಲೆಯ ಕೊಡುಗೆ ಅಪಾರ. ಇಲ್ಲಿನ ಕೆಲವು ಕನ್ನಡ ಶಾಸನಗಳಲ್ಲಿ ಬಳ್ಳಿಗಾವೆಯ ಒನಕೆಹೊಂಡದ ಶಿವದೇವಾಲಯದ ಮುಂದಿರುವ ಬಾದಾಮಿ ಚಳುಕ್ಯ ವಿನಯಾದಿತ್ಯನ ನಾಗರಖಂಡ ಮಾಂಡಲಿಕ ಅರಸನ ಪೊಗಿಲ್ಲಿ ಸೇಂದ್ರಕನ ರಾಜನ ಶಾಸನ (685) ಬಹು ಪ್ರಾಚೀನವಾದದ್ದು. 10-11ನೆಯ ಶತಮಾನದಲ್ಲಿ ವಾದಿಭಸಿಂಹಸೂರಿ ಎಂದು ಕರೆಯಿಸಿಕೊಂಡ ಪುಷ್ಪಮುನಿಯ ಶಿಷ್ಯ ಅಜಿತಸೇನ ದೊಡ್ಡ ಪಂಡಿತರಾಗಿದ್ದರು. ಇವರ ಕ್ಷಾತ್ರ ಚೂಡಾಮಣಿ ಕಾವ್ಯ ಮತ್ತು ಗದ್ಯಚಿಂತಾಮಣಿ ಮುಖ್ಯವಾದ ರಚನೆಗಳು. ಕಲ್ಯಾಣ ಚಾಳುಕ್ಯರ ಕಾಲದ ಶಾಸನಗಳಂತೂ ಬಹಳಷ್ಟು ಕನ್ನಡ ಭಾಷೆ ಮತ್ತು ಲಿಪಿಯಲ್ಲಿವೆ. ಬಳ್ಳಿಗಾವೆಯ ಸೋಮೇಶ್ವರ ದೇವಾಲಯದ ಹತ್ತಿರ ಹೆಸರಾಂತ ಜೈನಕವಿ ಶಾಂತಿನಾಥನ ಶಾಸನವೊಂದಿದೆ. ಇವನು ಚಾಳುಕ್ಯ ಭುವನೈಕಮಲ್ಲನ ಮಾಂಡಲಿಕ ಲಕ್ಷ್ಮನೃಪನ ಆಶ್ರಯದಲ್ಲಿದ್ದ ಈತ ಸುಕುಮಾರಚರಿತೆ ಎಂಬ ಕಾವ್ಯವನ್ನು ಬರೆದಿದ್ದಾನೆ. ಇಲ್ಲಿನ ಶಿವಶರಣ-ಶಿವಶರಣೆಯರಾದ ಅಲ್ಲಮಪ್ರಭು, ಅಕ್ಕಮಹಾದೇವಿ ಇವರ ವಚನಗಳು ಕನ್ನಡ ವಚನಸಾಹಿತ್ಯದಲ್ಲಿ ವಿಶಿಷ್ಟಸ್ಥಾನ ಪಡೆದಿವೆ. ಜಕ್ಕೇಶ್ವರನ ಅಂಕಿತದಲ್ಲಿ ಶರಣೆ ಸತ್ಯಕ್ಕನ 20 ವಚನಗಳು ಸಿಕ್ಕಿವೆ. ಕೆಳದಿ ಅರಸರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಸರ್ವತೋಮುಖವಾಗಿ ಬೆಳೆಯಿತು. ಒಂದನೆಯ ವೆಂಕಟಪ್ಪನ ಕಾಲದ ತಿರುಮಲಭಟ್ಟನ, ಶಿವಷಟ್ಪದಿ ಕರ್ನಾಟಕ ಶಿವಗೀತೆ ಮತ್ತು ಆಸ್ಥಾನ ಕವಿಯಾಗಿದ್ದ ಅಶ್ವಪಂಡಿತನ ಕುದುರೆಯನ್ನು ಕುರಿತ ಮಾನಸಪ್ರಿಯ, ಭಟ್ಟೋಜಿದೀಕ್ಷಿತನ ತತ್ತ್ವಕೌಸ್ತುಭ, ಜೀನಸೇನ ದೇಶಾವರ್ತಿಯ ಸಾಂಗತ್ಯದಲ್ಲಿಯ ಒಂದು ಜೈನಪುರಾಣ, ಒಂದನೆಯ ಬಸಪ್ಪನಾಯಕನ ಕಾಲದ ಶಿವತತ್ತ್ವರತ್ನಾಕರ, ಸುಭಾಷಿತಸ್ಫುರದ್ರುಮ, ಸರ್ಜಾ ನಾಗಪ್ಪ ಮಂತ್ರಿಯ ಭಾಮಿನಿಷಟ್ಪದಿಯಲ್ಲಿ ಬರೆದ ಶುಕಸಪ್ತತಿ ಮುಖ್ಯವಾದವುಗಳು. ಗಂಗಾದೇವಿಯ ಕೆಳದಿ ರಾಜಾಭ್ಯುದಯಂ ಆಗಿನ ಕಾಲದಲ್ಲಿ ಸ್ತ್ರೀಯರ ಸಾಹಿತ್ಯಪ್ರತಿಭೆಗೆ ಒಂದು ಉತ್ತಮ ಉದಾಹರಣೆ. ಷಡಕ್ಷರನ ವೀರಶೈವಶಿರೋಮಣಿ, ನಿರ್ವಾಣನ ಕ್ರಿಯಾಸಾರವ್ಯಾಖ್ಯಾನ ಈ ಕಾಲದ ಸಾಹಿತ್ಯದಲ್ಲಿ ಉತ್ತಮ ಸ್ಥಾನವನ್ನು ಪಡೆದಿವೆ. ಲಿಂಗಣ್ಣ ಕವಿಯ ಕೆಳದಿನೃಪ ವಿಜಯಂ ಐತಿಹಾಸಿಕ ಮಹತ್ತ್ವವುಳ್ಳ ಕೃತಿ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕುವೆಂಪು ಎಂಬ ಕಾವ್ಯನಾಮ ದಿಂದ ಪ್ರಸಿದ್ಧರಾಗಿರುವ ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪನವರು ಈ ಜಿಲ್ಲೆಯವರು. ಇವರ ಶ್ರೀರಾಮಾಯಣದರ್ಶನಂ ಕೃತಿ ಜ್ಞಾನಪೀಠಪ್ರಶಸ್ತಿ ಪಡೆದಿದೆ. ಕಾನೂರ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಇವರ ಮಹತ್ತ್ವದ ಕಾದಂಬರಿಗಳು. ಬೆರಳ್‍ಗೆ ಕೊರಳ್ ಮುಂತಾದ ನಾಟಕಗಳು, ಮಹಾನ್ ವ್ಯಕ್ತಿಗಳ ಜೀವನಚರಿತೆಗಳು ಮತ್ತು ಇವರ ಭಾವಗೀತೆಗಳು ಕನ್ನಡ ನಾಡಿನಲ್ಲಿ ಸುಪ್ರಸಿದ್ಧವಾಗಿವೆ.ಎಸ್.ವಿ.ಪರಮೇಶ್ವರ ಭಟ್ಟ, ಹಾ.ಮಾ.ನಾಯಕ, ಪಿ. ಲಂಕೇಶ್, ಯು. ಆರ್. ಅನಂತಮೂರ್ತಿ, ಕೆ.ವಿ.ಸುಬ್ಬಣ್ಣ, ಪೂರ್ಣಚಂದ್ರ ತೇಜಸ್ವಿ, ಎಂ.ಕೆ.ಇಂದಿರಾ, ನಾ.ಡಿಸೋಜ ಮುಂತಾದ ಪ್ರಸಿದ್ಧ ಸಾಹಿತಿಗಳೂ ಈ ಜಿಲ್ಲೆಯವರೇ. ಚಲನಚಿತ್ರ ಕ್ಷೇತ್ರದಲ್ಲಿ ಈ ಜಿಲ್ಲೆಗೆ ಖ್ಯಾತಿ ತಂದವರು ಗಿರೀಶ ಕಾಸರವಳ್ಳಿ, ಶಿವಮೊಗ್ಗ ಸುಬ್ಬಣ್ಣ. ಅನೇಕ ಪ್ರತಿಭಾವಂತ ಸಾಹಿತಿಗಳನ್ನು ಕಲಾವಿದರನ್ನು ಪಡೆದ ಖ್ಯಾತಿ ಈ ಜಿಲ್ಲೆಗಿದೆ.
ಪ್ರಕೃತಿ ಸೌಂದರ್ಯ
[ಬದಲಾಯಿಸಿ]ಈ ಜಿಲ್ಲೆ ಪ್ರಕೃತಿಸೌಂದರ್ಯಕ್ಕೆ, ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಸಿದ್ಧ. ವಿಶ್ವವಿಖ್ಯಾತ ಜೋಗ ಜಲಪಾತ ಮನೋಹರ ದೃಶ್ಯವುಳ್ಳ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿದೆ. ತಾಳಗುಪ್ಪದ ಉತ್ತಮ ಭೂದೃಶ್ಯಗಳೂ ಹೊಸನಗರ ತಾಲ್ಲೂಕಿನ ಪಶ್ಚಿಮಘಟ್ಟದಲ್ಲಿರುವ ಕೊಡಚಾದ್ರಿ ಶಿಖರದ ಬಳಿಯಿಂದ ಅರಬ್ಬಿ ಸಮುದ್ರದವರೆಗೂ ಕಾಣುವ ಮನೋಹರ ದೃಶ್ಯ ಮತ್ತು ಆಗುಂಬೆಯ ಸೂರ್ಯಾಸ್ತದೃಶ್ಯ ಮುಂತಾದವು ಚೇತೋಹಾರಿಯಾದವು. ಶಿಕಾರಿಪುರ ತಾಲ್ಲೂಕಿನ ಮದಗಕೆರೆ ನೀರಾವರಿಗೆ ಮೂಲಗಳಾಗಿರುವುದರ ಜೊತೆಗೆ ಪ್ರೇಕ್ಷಣೀಯ ಸ್ಥಳವೂ ಆಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿ ಸ್ವಾಭಾವಿಕ ಪಕ್ಷಿಧಾಮವಿದೆ. ಹೊಸನಗರ ತಾಲ್ಲೂಕಿನ ಕುಂಚಿಕಲ್ಲು ಅಬ್ಬೆಯಲ್ಲಿ ವರಾಹಿ ನದಿ ಒಂಬತ್ತು ಹಂತಗಳಲ್ಲಿ ದುಮುಕುತ್ತದೆ. ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲಿಂಗನಮಕ್ಕಿ ಜಲಾಶಯ, ಭದ್ರಯೋಜನಾ ಪ್ರದೇಶ, ತುಂಗಾ ಅಣೆಕಟ್ಟು ಮೊದಲಾದವು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾಗಿವೆ.
ಇತಿಹಾಸ
[ಬದಲಾಯಿಸಿ]- Shivappa Nayaka palace and museum is in the city of Shimoga. The palace was built by Shivappa Nayaka during the 17th century CE. Kote Seetharamanjaneya temple is beside it.[೪]
ಶಿವಮೊಗ್ಗ ಜಿಲ್ಲೆ ದಕ್ಷಿಣಭಾರತದ ಪುರಾತನ ಮಾನವನ ವಾಸಸ್ಥಳಗಳಲ್ಲೊಂದು. ತೀರ್ಥಹಳ್ಳಿ ಬಳಿ ಎಡಗುಡ್ಡೆ ಮತ್ತು ಭದ್ರಾವತಿ ತಾಲ್ಲೂಕಿನ ಅನವೇರಿ ಮತ್ತು ನಾಗಸಮುದ್ರಗಳಲ್ಲಿ ನವಶಿಲಾಯುಗದ ಅವಶೇಷಗಳು ದೊರೆತಿವೆ. ಶಿವಮೊಗ್ಗ ತಾಲ್ಲೂಕಿನ ಗುಡ್ಡೇಮರಡಿ ಬೆಟ್ಟದ ಬುಡದಲ್ಲಿ ನವಶಿಲಾಯುಗದ ನಿವೇಶನ ಕಂಡುಬಂದಿದೆ. ಹೊಸನಗರ ತಾಲ್ಲೂಕಿನ ನಿಲಸಕಲ್ಲಿನಲ್ಲಿ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿ ಕುಂದ ಎಂಬಲ್ಲಿ ಮೆಗಾಲಥಿಕ್ ನಿವೇಶನಗಳಿವೆ. ಈ ಜಿಲ್ಲೆಯ ಅನೇಕ ಸ್ಥಳಗಳನ್ನು ಕುರಿತು ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಅನೇಕ ಐತಿಹ್ಯಗಳಿವೆ. ರಾಮಾಯಣದಲ್ಲಿ ತುಂಗಭದ್ರಾ ನದಿಯನ್ನು ಪಂಪಾ ಎಂದು ಉಲ್ಲೇಖಿಸಲಾಗಿದೆ. ಮಹಾಭಾರತದಲ್ಲಿ ವನವಾಸಕ, ಅಂದರೆ, ಆಧುನಿಕ ಬನವಾಸಿಯ ಮತ್ತು ಕುಂತಲದ ಪ್ರಸ್ತಾಪವಿದೆ. ಸೊರಬ ತಾಲ್ಲೂಕಿನ ಕುಬಟೂರು ಪ್ರಾಚೀನ ಕುಂತಲದ ನಗರವಾಗಿತ್ತೆಂದೂ ಶಿಕಾರಿಪುರ ತಾಲ್ಲೂಕಿನಲ್ಲಿರುವ ಬಿಸ್ಲಹಳ್ಳಿ ಮಹಾಭಾರತದ ಕಾಲದ ಏಕಚಕ್ರನಗರವೆಂದೂ ಹೇಳಲಾಗಿದೆ. ಅಗಸ್ತ್ಯ, ಜಮದಗ್ನಿ, ದೂರ್ವಾಸ, ಹರದತ್ತ, ಚಂದ್ರಹಾಸ, ಪರಶುರಾಮ ಮೊದಲಾದ ಪೌರಾಣಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಅನೇಕ ಸ್ಥಳ ಪುರಾಣಗಳಿವೆ. ಇತಿಹಾಸ ಕಾಲಕ್ಕೆ ಬಂದರೆ ಮೌರ್ಯರ ಕಾಲದ ಆಳಿಕೆಯ ಕುರುಹುಗಳು ದೊರೆಯುತ್ತವೆ. ಕುಬಟೂರಿನ ಶಾಸನವೊಂದರಲ್ಲಿ ಚಂದ್ರಗುಪ್ತ ಎಂಬವನ ಪ್ರಸ್ತಾಪವಿದೆ. ಬಂದಳಿಕೆಯಲ್ಲಿರುವ ಹೊಯ್ಸಳ ಶಾಸನದಲ್ಲಿ ನಂದರು ಮತ್ತು ಮೌರ್ಯರು ಕುಂತಲವನ್ನು ಆಳಿದ ಪ್ರಸ್ತಾಪವಿದೆ. ಬನವಾಸಿ ಹಿಂದೆ ಬೌದ್ಧರ ಮುಖ್ಯ ಕೇಂದ್ರಗಳಲ್ಲೊಂದಾ ಗಿತ್ತು. ದಖನ್‍ನಲ್ಲಿ ಪ್ರಥಮ ಬಾರಿಗೆ ಸಾಮ್ರಾಜ್ಯ ಕಟ್ಟಿದ ಸಾತವಾಹನರ ಆಳಿಕೆಗೆ ಈ ಜಿಲ್ಲೆ ಸೇರಿತ್ತು. ಕರ್ನಾಟಕದ ಪ್ರಥಮ ರಾಜಮನೆತನವೆಂದು ಹೆಸರಾದ ಕದಂಬರ ಮೂಲ ಪುರುಷರು ಈ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸ್ಥಾನ ಕುಂದೂರು ಅಥವಾ ತಾಳಗುಂದದಲ್ಲಿ ಅಗ್ರಹಾರ ಸ್ಥಾಪಿಸಿದರೆಂದು ತಿಳಿದುಬರುತ್ತದೆ.ಕದಂಬರ ಮೂಲಸ್ಥಾನವಾದ ಬನವಾಸಿ ಪ್ರಾಂತಕ್ಕೆ ಸೇರಿದ ಈ ಜಿಲ್ಲೆಯ ಬಹುಭಾಗ ಅವರ ಚಟುವಟಿಕೆಯ ಕೇಂದ್ರ ಪ್ರದೇಶವಾಗಿತ್ತು. ಅವರು ನಾಲ್ಕನೆಯ ಶತಮಾನದವರೆಗೂ ಆಳಿದರು. ನಾಲ್ಕನೆಯ ಶತಮಾನದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪ್ರಬಲರಾದ ತಲಕಾಡಿನ ಗಂಗರ ಆರಂಭಕಾಲದ ಶಾಸನ ಈ ಜಿಲ್ಲೆಯಲ್ಲಿ ದೊರೆತಿದೆ. ಗಂಗವಂಶ ಹನ್ನೊಂದನೆಯ ಶತಮಾನದ ಆದಿಭಾಗದವರೆಗೂ ಅಸ್ತಿತ್ವದಲ್ಲಿತ್ತು. ಅವರು ಸ್ವತಂತ್ರರಾಗಿ ಮತ್ತು ಕೆಲವೊಮ್ಮೆ ಬಾದಾಮಿ ಚಾಳುಕ್ಯರ ಮತ್ತು ರಾಷ್ಟ್ರಕೂಟರ ಸಾಮಂತರಾಗಿ ಈ ಜಿಲ್ಲೆಯ ಭಾಗಗಳನ್ನು ಆಳಿದ್ದಾರೆ. ಬಾದಾಮಿ ಚಾಳುಕ್ಯರ, ರಾಷ್ಟ್ರಕೂಟರ ಮತ್ತು ಕಲ್ಯಾಣಿ ಚಾಳುಕ್ಯರ ಸಾಮ್ರಾಜ್ಯಗಳಲ್ಲಿ ಈ ಜಿಲ್ಲೆ ಸೇರಿತ್ತು. ಕಳಚುರಿ ಬಿಜ್ಜಳ ಬಳ್ಳಿಗಾಮೆ ಮೊದಲಾದ ಸ್ಥಳಗಳಲ್ಲಿ ದೇವಾಲಯಗಳಿಗೆ ದತ್ತಿ ಬಿಟ್ಟಿದ್ದಾನೆ. ಹನ್ನೆರಡನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ದ್ವಾರಸಮುದ್ರದ ಹೊಯ್ಸಳರ ಕಾಲದಲ್ಲಿ ಈ ಜಿಲ್ಲೆ ಸಮೃದ್ಧಿ ಪಡೆದಿತ್ತು. ಹೊಯ್ಸಳರ ಸಮಕಾಲೀನರಾದ ದೇವಗಿರಿ ಯಾದವರು ಅಥವಾ ಸೇವುಣರಿಗೂ ಹೊಯ್ಸಳರಿಗೂ ಈ ಜಿಲ್ಲೆಯ ಮತ್ತು ಸುತ್ತಲ ಪ್ರದೇಶಗಳಲ್ಲಿ ಅನೇಕ ಯುದ್ಧಗಳು ನಡೆದವು. ಪ್ರಾಚೀನ ಕಾಲದಿಂದಲೂ ಈ ಜಿಲ್ಲೆಯಲ್ಲಿ ಅನೇಕ ರಾಜಮನೆತನಗಳು, ಪಾಳೆಯಪಟ್ಟುಗಳು ಹುಟ್ಟಿ ಬಾಳಿದುದು ಕಂಡುಬರುತ್ತದೆ. ಪ್ರಾರಂಭದಲ್ಲಿ ಇಲ್ಲಿ ಸೇಂದ್ರಕರು ಆಳುತ್ತಿದ್ದರೆಂದು ಹೇಳಲಾಗಿದೆ. 7ನೆಯ ಶತಮಾನದಲ್ಲಿ ಪ್ರಾಬಲ್ಯಕ್ಕೆ ಬಂದ ಸಾಂತರರು ಹೊಸನಗರ ತಾಲ್ಲೂಕಿನ ಹುಮಚದಲ್ಲಿ ತಮ್ಮ ರಾಜಧಾನಿ ಸ್ಥಾಪಿಸಿದರು. ಅವರ ವಂಶದವರು ಬೇರೆ ಬೇರೆ ಕಾಲದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಮತ್ತು ಉಡುಪಿ ಜಿಲ್ಲೆಯ ಕಾರ್ಕಳಗಳನ್ನು ತಮ್ಮ ರಾಜಧಾನಿಗಳನ್ನಾಗಿ ಮಾಡಿಕೊಂಡು ಆಳಿದರು. ಹದಿನೇಳನೆಯ ಶತಮಾನದವರೆಗೂ ಕಾರ್ಕಳದಲ್ಲಿ ಅವರ ವಂಶ ಅಸ್ತಿತ್ವದಲ್ಲಿತ್ತೆಂದು ತಿಳಿದುಬರುತ್ತದೆ. ತಲಕಾಡಿನ ಗಂಗರು, ಕಲ್ಯಾಣಿ ಚಾಳುಕ್ಯರು ಮತ್ತು ಹೊಯ್ಸಳರಿಗೆ ಸಾಮಂತರಾಗಿದ್ದ ಹುಮಚದ ಸಾಂತರರು ಮಲೆನಾಡು ಭಾಗದ ಸಾಂಸ್ಕøತಿಕ ಪರಂಪರೆಗೆ ಅಮೂಲ್ಯ ಕಾಣಿಕೆ ಸಲ್ಲಿಸಿದ್ದಾರೆ (ನೋಡಿ- ಸಾಂತರರು). ಸೇನವಾರರು, ಸಿಂಧರು, ನೊಳಂಬರು, ಪಾಂಡ್ಯರು, ವಾಣಿಯವರು ಮೊದಲಾದ ಪಾಳೆಯಗಾರರು, ಸಾಮಂತರು ಈ ಜಿಲ್ಲೆಯ ವಿವಿಧ ಭಾಗಗಳನ್ನು ಆಳಿದ್ದಾರೆ. ಹದಿಮೂರನೆಯ ಶತಮಾನದಲ್ಲಿ ಸಾಗರ ತಾಲ್ಲೂಕಿನಲ್ಲಿ ಸೇತುನಾಡು ಎಂಬ ಪಾಳೆಯಪಟ್ಟು ಇತ್ತು. ಈ ಜಿಲ್ಲೆ ವಿಜಯನಗರ ಸಾಮ್ರಾಜ್ಯದ ಪ್ರಮುಖ ಭಾಗಗಳಲ್ಲೊಂದಾಗಿತ್ತು. ಆರಗ ಮತ್ತು ಚಂದ್ರಗುತ್ತಿಗಳು ಪ್ರಾಂತೀಯ ಮುಖ್ಯ ಸ್ಥಳಗಳಾಗಿ ದ್ದವು. ಬಿಜಾಪುರದ ಆದಿಲ್‍ಶಾಹೀಗಳೂ ಈ ಜಿಲ್ಲೆಯ ಕೆಲವು ಭಾಗಗಳನ್ನು ಸ್ವಲ್ಪ ಕಾಲ ಆಳಿದರು.
ಕೆಳದಿ ಸಂಸ್ಥಾನ
[ಬದಲಾಯಿಸಿ]ವಿಜಯನಗರದ ಪತನಾನಂತರ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ ಕೆಳದಿ ನಾಯಕರು ಈ ಜಿಲ್ಲೆಯ ಮಣ್ಣಿನ ಮಕ್ಕಳು. ವೀರಶೈವ ರೈತ ಮನೆತನದ ಚೌಡಪ್ಪ ಅವನ ಸಹೋದರ ಭದ್ರಪ್ಪ ಎಂಬವರು ಸ್ವಸಾಮಥ್ರ್ಯದಿಂದ ಕೆಳದಿಯ ಸುತ್ತಮುತ್ತಲ ಹಳ್ಳಿಗಳನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ವಿಜಯನಗರ ಸಾಮ್ರಾಟರು ಮೊದಲಿಗೆ ಅವರನ್ನು ನಿಗ್ರಹಿಸಲು ಪ್ರಯತ್ನಿಸಿದರು. ಆ ಸಹೋದರರ ಧೈರ್ಯಸಾಹಸಗಳಿಗೆ ಮೆಚ್ಚಿ ಅವರನ್ನು ತಮ್ಮ ಸಾಮಂತರಾಗಿ ಸ್ವೀಕರಿಸಿದರು. ಅವರಿಗೆ ವಿಜಯನಗರದ ಮಾನ್ಯತೆ ದೊರೆತದ್ದು 1499ರಲ್ಲಿ ಎಂದು ತಿಳಿದುಬರುತ್ತದೆ. ಆಗ ಸಾಳ್ವ ಎರಡನೆಯ ನರಸಿಂಹ ವಿಜಯನಗರದಲ್ಲಿ ಆಳುತ್ತಿದ್ದ. ಕೆಳದಿ ಚೌಡಪ್ಪ ಮತ್ತು ಅವನ ವಂಶಸ್ಥರ ಮುಖ್ಯ ಸ್ಥಳವಾದ್ದರಿಂದ ಅವರನ್ನು ಕೆಳದಿ ನಾಯಕರೆಂಬ ಹೆಸರಿನಿಂದ ಕರೆಯಲಾಗಿದೆ. ಕೆಳದಿ ನಾಯಕರು ಸಾಮ್ರಾಜ್ಯಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತ ಬಂದರು. ಅಳಿಯ ರಾಮರಾಯನ ಕಾಲದಲ್ಲಿ ಮುಸ್ಲಿಮ್ ಸುಲ್ತಾನರನ್ನು ಸೋಲಿಸುವುದರಲ್ಲಿ ಮತ್ತು ಸಾಮಂತರ ದಂಗೆಗಳನ್ನು ಅಡಗಿಸುವುದರಲ್ಲಿ ಅದ್ಭುತ ಯಶಸ್ಸು ಗಳಿಸಿದರು. ಈ ಸಾಧನೆಗಾಗಿ ಕೆಳದಿ ಅರಸರಿಗೆ ನಾಯಕ, ಕೋಟೆಕೋಲಾಹಲ, ಪಡುವಣ ಸಮುದ್ರಾಧಿಪತಿ ಮೊದಲಾದ ಬಿರುದುಗಳಿದ್ದುವು. 1565ರಲ್ಲಿ ವಿಜಯನಗರ ಪತನವಾದ ಅನಂತರ ಕೆಳದಿ ನಾಯಕರ ಪಾಲಿಗೆ ಹೆಚ್ಚಿನ ಹೊಣೆ ಬಿತ್ತು. ಅವರು ಪೆನುಕೊಂಡೆ ಮತ್ತಿತರ ಕಡೆಗಳಿಂದ ಆಳಿದ ವಿಜಯನಗರದ ಆರವೀಡು ವಂಶಸ್ಥರಿಗೆ ನಿಷ್ಠೆಯಿಂದಿದ್ದು ಕರ್ನಾಟಕದ ಪಶ್ಚಿಮ ಮತ್ತು ಕರಾವಳಿ ಭಾಗಗಳಲ್ಲಿ ತಮ್ಮ ರಾಜ್ಯವನ್ನು ಸ್ಥಿರಪಡಿಸಿದರು. ಕಾಸರಗೋಡಿನಿಂದ ಕಾರವಾರದವರೆಗೂ ಪೋರ್ಚುಗೀಸರು ದೃಢವಾಗಿ ಬೇರೂರದಂತೆ ತಡೆದರು. ಒಂದನೆಯ ವೆಂಕಟಪ್ಪನಾಯಕ, ಶಿವಪ್ಪನಾಯಕ, ಚೆನ್ನಮ್ಮಾಜಿ, ಒಂದನೆಯ ಬಸವಪ್ಪನಾಯಕ ಮೊದಲಾದವರ ಕಾಲದಲ್ಲಿ ಈ ರಾಜವಂಶ ಕರ್ನಾಟಕ ರಾಜಕೀಯದಲ್ಲಿ ಅಮೋಘ ಪಾತ್ರವಹಿಸಿತು. ಔರಂಗಜೇಬನ ವಿರುದ್ಧ ಸಹಾಯ ಅರಸಿಬಂದ ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ನೀಡಿ ರಾಣಿ ಚೆನ್ನಮ್ಮಾಜಿ ಇತಿಹಾಸ ಪ್ರಸಿದ್ಧಳಾದಳು. ಇದೇ ಜಿಲ್ಲೆಯ ಇಕ್ಕೇರಿಯಿಂದಲೂ ತರುವಾಯ ಬಿದನೂರಿನಿಂದಲೂ 1763ರ ವರೆಗೆ ಆಳಿದ ಈ ವಂಶ ಹೈದರ್ ಅಲಿಯ ದಾಳಿಗೆ ತುತ್ತಾಗಿ ಕೊನೆಗೊಂಡಿತು. ಹೈದರ್ ಅಲಿ ಕಾಲದಲ್ಲಿ ಈ ಜಿಲ್ಲೆ ಮೈಸೂರು ರಾಜ್ಯದ ಭಾಗವಾಯಿತು. 1799ರ ಅನಂತರ ಹಳೇ ಮೈಸೂರು ಸಂಸ್ಥಾನಕ್ಕೆ ಸೇರಿತು. ಇಲ್ಲಿ ಬೆಳಗುತ್ತಿ ನಾಯಕರು, ಬಸವಾಪಟ್ಟಣದ ಪಾಳೆಯಗಾರರು, ಹೊನ್ನಾಳಿ ಮುಗಲ ನವಾಬರು ಮೊದಲಾದವರು ಹದಿನೇಳು, ಹದಿನೆಂಟನೆಯ ಶತಮಾನಗಳಲ್ಲಿ ಪಾಳೆಯಪಟ್ಟು ಸ್ಥಾಪಿಸಿದ್ದರು. ಬ್ರಿಟಿಷರ ವಿರುದ್ಧ ಧೋಂಡಿಯ ವಾಘನು ನಡೆಸಿದ ಹೋರಾಟ ಅವಿಸ್ಮರಣೀಯವಾ ಗಿದೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲೂ ಈ ಜಿಲ್ಲೆ ಮುಖ್ಯ ಪಾತ್ರವಹಿಸಿ 1942ರಲ್ಲಿ ನಡೆದ ಈಸೂರು ಕ್ರಾಂತಿ ಆಧುನಿಕ ಭಾರತದ ಇತಿಹಾಸದಲ್ಲಿ ಈ ಜಿಲ್ಲೆಯ ಹೆಸರನ್ನು ಚಿರಸ್ಥಾಯಿಗೊಳಿಸಿದೆ.
ಜನಸಂಖ್ಯೆ
[ಬದಲಾಯಿಸಿ]೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೭,೫೨,೭೫೩.[೫]
ಆಡಳಿತ
[ಬದಲಾಯಿಸಿ]ತಾಲ್ಲೂಕು : ಶಿವಮೊಗ್ಗ ಜಿಲ್ಲೆಯ ಅದೇ ಹೆಸರಿನ ತಾಲ್ಲೂಕು ಮತ್ತು ಆಡಳಿತ ಕೇಂದ್ರಪಟ್ಟಣ. ತಾಲ್ಲೂಕನ್ನು ಪಶ್ಚಿಮದಲ್ಲಿ ತೀರ್ಥಹಳ್ಳಿ, ಹೊಸನಗರ, ವಾಯವ್ಯದಲ್ಲಿ ಸಾಗರ, ಉತ್ತರಕ್ಕೆ ಶಿಕಾರಿಪುರ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಪೂರ್ವಕ್ಕೆ ಭದ್ರಾವತಿ ತಾಲ್ಲೂಕುಗಳು, ದಕ್ಷಿಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕೂ ಸುತ್ತುವರಿದಿವೆ. ಹೊಳಲೂರು, ನಿಡಿಗೆ, ಶಿವಮೊಗ್ಗ, ಕುಂಸಿ, ಹರನಹಳ್ಳಿ ಹೋಬಳಿಗಳು, ಹೊಳಲೂರು, ನಿಡಿಗೆ, ಶಿವಮೊಗ್ಗ ಹೋಬಳಿಗಳನ್ನು ಪ್ರಥಮ ದ್ವಿತೀಯ ಭಾಗಗಳಾಗಿ ವಿಂಗಡಿಸಿದೆ. ಎರಡು ಪಟ್ಟಣ ಮತ್ತು 229 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 1,104.7 ಚ.ಕಿಮೀ. ತಾಲ್ಲೂಕು ಜಿಲ್ಲೆಯ ಮಧ್ಯಭಾಗದಲ್ಲಿ ಅರೆಮಲೆನಾಡು ಪ್ರದೇಶ ದಲ್ಲಿದೆ. ತಾಲ್ಲೂಕಿನ ಸುತ್ತಲೂ ಗುಡ್ಡಸಾಲುಗಳು ಆವರಿಸಿದ್ದು ಒಳಭಾಗದಲ್ಲಿ ಮೈದಾನ ಪ್ರದೇಶವಿದೆ. ಪಶ್ಚಿಮದ ಕಡೆ ಸಾಧಾರಣ ಕಾಡುಗಳುಳ್ಳ ಬೆಟ್ಟಗುಡ್ಡಗಳಿವೆ. ಪೂರ್ವಕ್ಕೆ ಹೋದಂತೆ ಭೂಮಿ ಹೆಚ್ಚಾಗಿ ಮಟ್ಟಸವಾಗಿದ್ದು ವಿಶಾಲ ಬಯಲುಗಳಿಂದ ಕೂಡಿದೆ. ತುಂಗಾ ನದಿ ತಾಲ್ಲೂಕನ್ನು ನೈಋತ್ಯದಿಂದ ಪ್ರವೇಶಿಸಿ ಈಶಾನ್ಯಕ್ಕೆ ಹರಿಯುತ್ತದೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯಿಂದ ಭದ್ರಾವತಿ ತಾಲ್ಲೂಕನ್ನು ಪ್ರವೇಶಿಸುವ ಭದ್ರಾನದಿ ಈ ತಾಲ್ಲೂಕಿನ ಪೂರ್ವಭಾಗದ ಸರಹದ್ದಿನಲ್ಲಿ ಸ್ವಲ್ಪ ದೂರ ಉತ್ತರಕ್ಕೆ ಹರಿದು ಕೂಡಲಿಯಲ್ಲಿ ತುಂಗಾನದಿಯನ್ನು ಕೂಡುವುದು. ಮುಂದೆ ತುಂಗಭದ್ರಾ ನದಿ ಉತ್ತರಕ್ಕೆ ಮುಂದುವರಿದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ತೀರ್ಥಹಳ್ಳಿ ತಾಲ್ಲೂಕಿನ ಭಿಲ್ಲೇಶ್ವರ ಬೆಟ್ಟದ ಬಳಿ ಹುಟ್ಟುವ ಕುಮುದ್ವತಿ ಕುಂಸಿಯ ಮೂಲಕ ಈ ತಾಲ್ಲೂಕನ್ನು ಹಾದುಹೋಗುತ್ತದೆ. ಇವಲ್ಲದೆ ತಾಲ್ಲೂಕಿನಲ್ಲಿ ಅನೇಕ ಸಣ್ಣ ತೊರೆಗಳು ಹರಿಯುತ್ತವೆ. ತಾಲ್ಲೂಕಿನಲ್ಲಿ ವಿಶೇಷವಾಗಿ ಕುಂಸಿ ವಲಯದಲ್ಲಿ ಕಬ್ಬಿಣದ ಅದುರು, ಮ್ಯಾಂಗನೀಸ್ ಅದುರು ಮತ್ತು ಸುಣ್ಣದ ಕಲ್ಲುಗಳ ನಿಕ್ಷೇಪಗಳಿವೆ. ಅಲ್ಲಲ್ಲಿ ಕಾವಿಮಣ್ಣು, ಸುಣ್ಣದಕಲ್ಲು, ಕಟ್ಟಡ ನಿರ್ಮಾಣ ಕಲ್ಲುಗಳು ದೊರೆಯುತ್ತವೆ. ಜಂಬುಮಣ್ಣು, ಕೆಂಪು ಜೇಡಿ ಮತ್ತು ಮರಳುಮಿಶ್ರಿತ ಮಣ್ಣನ್ನು ಈ ತಾಲ್ಲೂಕು ಒಳಗೊಂಡಿದೆ. ಅರೆಮಲೆನಾಡು ಪ್ರದೇಶಕ್ಕೆ ಸೇರಿದ ಈ ತಾಲ್ಲೂಕಿನಲ್ಲಿ ಎಲೆ ಉದುರುವ ಸಾಮಾನ್ಯ ಸಸ್ಯವರ್ಗವಿದೆ. ಪೂರ್ವದ ಕಡೆ ಸಾಧಾರಣ ಪ್ರಮಾಣದ ಕಾಡುಗಳಿದ್ದರೆ ಪಶ್ಚಿಮದ ಕಡೆ ತೆಳು ಮತ್ತು ಕುರುಚಲು ಕಾಡುಗಳಿವೆ. ನದಿಗಳ ದಂಡೆಗಳಲ್ಲಿ ನಿತ್ಯಹಸುರು ಸಸ್ಯವರ್ಗವಿದ್ದು ತಾಲ್ಲೂಕಿನಲ್ಲಿ ಒಟ್ಟು 15,425 ಹೆಕ್ಟೇರು ಕಾಡು ಪ್ರದೇಶವಿದೆ. ಇಲ್ಲಿನ ಪಶ್ಚಿಮದ ಕಾಡುಗಳಲ್ಲಿ ವನ್ಯಮೃಗಗಳಿವೆ. ಶೆಟ್ಟಿಹಳ್ಳಿ ವನ್ಯಮೃಗ ಸಂರಕ್ಷಣಾಪ್ರದೇಶ ಈ ತಾಲ್ಲೂಕಿನ ಕೆಲವು ಭಾಗಗಳನ್ನು ಒಳಗೊಂಡಿದೆ. ತಾಲ್ಲೂಕಿನ ವಾಯುಗುಣ ಹಿತಕರ. ತಾಲ್ಲೂಕಿನಲ್ಲಿ ಫಲವತ್ತಾದ ಮಣ್ಣು ಪ್ರದೇಶ, ಸಾಕಷ್ಟು ನೀರಾವರಿ ಸೌಲಭ್ಯಗಳಿದ್ದು ವ್ಯವಸಾಯಕ್ಕೆ ಅನುಕೂಲಕರವಾಗಿದೆ. ತಾಲ್ಲೂಕಿನ ಗಾಜನೂರು ಬಳಿ ತುಂಗಾ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ಭದ್ರಾ ಜಲಾಶಯದಿಂದಲೂ ತಾಲ್ಲೂಕಿನ ಕೆಳಭಾಗಗಳಿಗೆ ನೀರಾವರಿ ಒದಗಿದೆ. ಬತ್ತ, ರಾಗಿ, ಜೋಳ ಇವು ಆಹಾರಬೆಳೆಗಳು. ಹೊಗೆಸೊಪ್ಪು, ಕಬ್ಬು, ಮೆಣಸಿನಕಾಯಿ, ಹತ್ತಿ, ನೆಲಗಡಲೆ, ವಾಣಿಜ್ಯ ಬೆಳೆಗಳು. ಜೊತೆಗೆ ದ್ವಿದಳ ಧಾನ್ಯಗಳನ್ನೂ ಬೆಳೆಯುವರು. ಜಿಲ್ಲೆಯ ಕಬ್ಬು ಬೆಳೆಯುವ ತಾಲ್ಲೂಕುಗಳಲ್ಲಿ ಇದು ಎರಡನೆಯ ಸ್ಥಾನ ಪಡೆದಿದೆ. ತೆಂಗು ಬೆಳೆಯಲ್ಲಿ ಈ ತಾಲ್ಲೂಕು ಜಿಲ್ಲೆಯಲ್ಲೇ ಪ್ರಥಮಸ್ಥಾನ ಪಡೆದಿದೆ. ತಾಲ್ಲೂಕಿನ ಒಟ್ಟು ಬಿತ್ತನೆ ಪ್ರದೇಶ 25,782 ಹೆಕ್ಟೇರ್‍ಗಳು. ತಾಲ್ಲೂಕಿನಲ್ಲಿ ಹೈನುಗಾರಿಕೆ ಅಭಿವೃದ್ಧಿಯಲ್ಲಿದೆ. ತಾಲ್ಲೂಕಿನಲ್ಲಿ ನದಿ ತೊರೆಗಳಿರುವುದ ರಿಂದ ಸಾಕಷ್ಟು ಮತ್ಸ್ಯೋದ್ಯಮವಿದೆ. ಗಾಜನೂರಿನ ಬಳಿ ಒಂದು ಮೀನುಸಾಕಣೆ ಕೇಂದ್ರವಿದೆ. ಜಿಲ್ಲೆಯ ಕೈಗಾರಿಕೆಯಲ್ಲಿ ಅಭಿವೃದ್ಧಿಹೊಂದಿದ ತಾಲ್ಲೂಕುಗಳಲ್ಲಿ ಇದು ಎರಡನೆಯದು. ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಚರ್ಮದ ಉದ್ಯಮಗಳು, ಕಬ್ಬಿಣ ಕೆಲಸದ ಕೇಂದ್ರಗಳು, ನಾಟಾಕ್ಕೆ ಸಂಬಂಧಿಸಿದ ಕಾರ್ಯಾಗಾರಗಳು, ಗಾಡಿಕಟ್ಟುವುದು, ಬಿದಿರುವಸ್ತುಗಳ ತಯಾರಿಕೆ, ಲೋಹಪಾತ್ರೆಗಳ ತಯಾರಿಕೆ, ಜೇನುಸಾಕಣೆ, ಗುಡಿಗಾರಿಕೆ ಮೊದಲಾದವು ಗಳಿವೆ. ಶಿವಮೊಗ್ಗ ನಗರದ ಹೊರವಲಯದಲ್ಲಿ ಸ್ಥಾಪಿತವಾಗಿರುವ ತುಂಗಭದ್ರಾ ಸಕ್ಕರೆ ಕಾರ್ಖಾನೆ ಮತ್ತು ಸರ್ಕಾರಿ ಹಾಲಿನ ಡೈರಿಗಳು ಈ ತಾಲ್ಲೂಕಿನ ಗ್ರಾಮೀಣ ಆರ್ಥಿಕತೆಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿವೆ. ತಾಳಗುಪ್ಪ-ಭದ್ರಾವತಿ ರೈಲುಮಾರ್ಗ ತಾಲ್ಲೂಕಿನಲ್ಲಿ ಹಾದುಹೋಗಿದೆ. ತಾಲ್ಲೂಕಿನ ಒಳಗೆ ಮತ್ತು ಹೊರಗೆ ಸಂಪರ್ಕ ಕಲ್ಪಿಸುವ ಅನೇಕ ರಸ್ತೆಮಾರ್ಗಗಳಿದ್ದು ಉತ್ತಮ ಸಂಪರ್ಕಸಾಧನಗಳಿವೆ. ಈ ತಾಲ್ಲೂಕಿನ ಕುಂಸಿ ಶಿವಮೊಗ್ಗದ ವಾಯವ್ಯಕ್ಕೆ 27 ಕಿಮೀ ದೂರದಲ್ಲಿದೆ. ಶಿವಮೊಗ್ಗದ ಈಶಾನ್ಯಕ್ಕೆ 16 ಕಿಮೀ ದೂರದಲ್ಲಿ ತುಂಗಾ ಮತ್ತು ಭದ್ರಾ ನದಿಗಳ ಸಂಗಮಸ್ಥಳವಾದ ಕೂಡಲಿ (ನೋಡಿ)ಇದೆ. ಅಲ್ಲಿ ಶೃಂಗೇರಿ ಜಗದ್ಗುರುಗಳು ಸ್ಥಾಪಿಸಿದ ಮಠವಿದೆ. ಶಿವಮೊಗ್ಗ-ತೀರ್ಥಹಳ್ಳಿ ಮಾರ್ಗದಲ್ಲಿ ಶಿವಮೊಗ್ಗಕ್ಕೆ 10 ಕಿಮೀ ದೂರದಲ್ಲಿ ಗಾಜನೂರು ಇದೆ. ಇಲ್ಲಿಗೆ ಒಂದು ಕಿಮೀ ದೂರದಲ್ಲಿ ತುಂಗಾನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆ ಇದೆ. ಪ್ರವಾಸಿ ಮಂದಿರ, ತುಂಗಾ ವಿದ್ಯಾಪೀಠ ಮತ್ತು ಪಂಚಾಯಿತಿ ರಾಜ್ಯ ತರಬೇತಿ ಸಂಸ್ಥೆ ಇಲ್ಲಿವೆ. ಪಟ್ಟಣ : ಶಿವಮೊಗ್ಗ ಈ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿಗಳ ಮುಖ್ಯ ಸ್ಥಳ ಮತ್ತು ಆಡಳಿತ ಕೇಂದ್ರಪಟ್ಟಣ. ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ಬೆಂಗಳೂರಿನ ವಾಯವ್ಯಕ್ಕೆ 274 ಕಿಮೀ ದೂರದಲ್ಲಿದೆ. ಪಟ್ಟಣದಲ್ಲಿ ಕೋಟೆ ಸೀತಾರಾಮಾಂಜನೇಯ ದೇವಾಲಯವಿದೆ. ಈ ದೇವಾಲಯದ ಗರ್ಭಗೃಹ, ನವರಂಗ ದ್ವಾರಗಳು ಮತ್ತು ನವರಂಗದ ಸ್ತಂಭಗಳು ಹೊಯ್ಸಳ ಶೈಲಿಯಲ್ಲಿವೆ. ಇದಲ್ಲದೆ ಭೀಮೇಶ್ವರ, ಲಕ್ಷ್ಮೀನಾ ರಾಯಣ ಮತ್ತು ಗುಡ್ಡೇಕಲ್ಲು ಸಿದ್ದೇಶ್ವರ ಮೊದಲಾದ ಹಳೆಯ ದೇವಾಲಯಗಳಿವೆ. ಇಲ್ಲಿನ ಆಂಜನೇಯ ಗುಡಿಯ ಬಳಿ ಇರುವ ಕಟ್ಟಡವನ್ನು ಶಿವಪ್ಪನಾಯಕನ ಅರಮನೆ ಎಂದು ಹೇಳಲಾಗುತ್ತದೆ. ಇದು ಮರದ ಕಂಬಗಳಿಂದ ಕೂಡಿದ್ದು ಇದರ ಒಂದು ಭಾಗ ಕೆಳದಿ ನಾಯಕರ ಕಾಲದಲ್ಲಿ ನಿರ್ಮಿತವಾದಂತೆ ತಿಳಿದುಬರುತ್ತದೆ. ರಾಘವೇಂದ್ರ ಸ್ವಾಮಿಯ ಎರಡು ಮೃತ್ತಿಕ ಬೃಂದಾವನಗಳಿವೆ. ಇಲ್ಲಿನ ಚರ್ಚ್ ರೋಮನ್ ಮತ್ತು ಗಾತಿಕ್ ಶೈಲಿಗಳಿಂದ ಕೂಡಿ ಆಕರ್ಷಕವಾಗಿದೆ. ಶಿವಮೊಗ್ಗ ಮಲೆನಾಡಿನ ಪ್ರಮುಖ ಕೈಗಾರಿಕಾ ನಗರವಾಗಿ ಬೆಳೆಯುತ್ತಿದ್ದು ವಾಣಿಜ್ಯ ಮತ್ತು ಶಿಕ್ಷಣ ಕೇಂದ್ರವಾಗಿದೆ. ಇಲ್ಲಿ 1927ರಷ್ಟು ಹಿಂದೆಯೇ ಬೆಂಕಿಕಡ್ಡಿ ತಯಾರಿಕಾ ಉದ್ಯಮ ಪ್ರಾರಂಭವಾಯಿತು. ಸರ್ಕಾರ ಇದನ್ನು 1940ರಲ್ಲಿ ವಹಿಸಿಕೊಂಡಿತ್ತು. 1944ರಲ್ಲಿ ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ ಸ್ಥಾಪಿತವಾಯಿತು. ಸರ್ಕಾರ ಇಲ್ಲಿ ಕೈಗಾರಿಕಾ ಎಸ್ಟೇಟ್ ಸ್ಥಾಪಿಸಿದೆ. ಮರಗೆಲಸ ಮತ್ತು ಕಬ್ಬಿಣದ ಕೆಲಸಗಳ ಕೇಂದ್ರಗಳಿವೆ. ಮೋಟಾರು ವಾಹನಗಳ ಚಕ್ರಗಳನ್ನು ದುರಸ್ತುಮಾಡುವ ಐದು ಉದ್ಯಮಗಳಿವೆ. ಹೆಂಚಿನ ಕಾರ್ಖಾನೆಗಳಿವೆ. ಇಲ್ಲಿ ಬತ್ತ, ಅಡಕೆ, ಮೆಣಸು, ಸೀಗೆಕಾಯಿ, ಸೇಂಗಾ, ಮೆಣಸಿನಕಾಯಿ, ಜೋಳ ಮತ್ತಿತರ ವಸ್ತುಗಳ ಸಗಟುವ್ಯಾಪಾರ ನಡೆಯುತ್ತದೆ. ನಿಯಂತ್ರಿತ ಮಾರುಕಟ್ಟೆ ಇದೆ. ಒಂದು ಪ್ರಮುಖ ರೈಲು ನಿಲ್ದಾಣವಾಗಿದ್ದು ಇಲ್ಲಿನ ವ್ಯಾಪಾರ ವಾಣಿಜ್ಯ ಕೈಗಾರಿಕಾಭಿವೃದ್ಧಿಗೆ ಸಹಾಯಕವಾಗಿದೆ. ಪಟ್ಟಣದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿದ್ದು ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಔಷಧಶಾಸ್ತ್ರ ಮುಂತಾದ ಕಾಲೇಜುಗಳೂ ಶಾಲೆಗಳೂ ಇದ್ದು ಶಿಕ್ಷಣಕ್ಕೆ ಅನುಕೂಲವಿದೆ. ಸರ್ಕಾರಿ ಪ್ರಾಚ್ಯವಸ್ತುಸಂಗ್ರಹಾಲಯ, ಜಿಲ್ಲಾ ಕೇಂದ್ರ ಗ್ರಂಥಾಲಯ ಮುಂತಾದವುಗಳಿವೆ. ಈ ಪಟ್ಟಣಕ್ಕೆ ಪೌರಾಣಿಕ ಹಿನ್ನೆಲೆಯಿದ್ದು ಹಿಂದೆ ಋಷಿಗಳು ತಪಸ್ಸುಮಾಡುತ್ತಿದ್ದಾಗ ಈ ಸ್ಥಳದಲ್ಲಿ ಅವರಿಗೆ ಶಿವನ ಮುಖದರ್ಶನವಾ ಯಿತೆಂದೂ ಆ ಕಾರಣದಿಂದ ಈ ಸ್ಥಳಕ್ಕೆ ಶಿವಮೊಗ್ಗ ಎಂಬ ಹೆಸರು ಬಂತೆಂದು ಪ್ರತೀತಿ. ಇನ್ನೊಂದು ವ್ಯಾಖ್ಯಾನದ ಪ್ರಕಾರ ಋಷಿಗಳು ಶಿವನಿಗೆ ಹೂವಿನ ಮೊಗ್ಗೆಯನ್ನು ಅರ್ಪಿಸಿದರೆಂದೂ ಮತ್ತು ಇಲ್ಲಿ ಋಷಿಗಳು ಸೇವಿಸುತ್ತಿದ್ದ ಸಿಹಿಪಾನೀಯವನ್ನು ಮೊಗೆಯಲ್ಲಿ ಇಡುತ್ತಿದ್ದ ರೆಂದೂ ಆದ್ದರಿಂದ ಈ ಸ್ಥಳಕ್ಕೆ ಸಿಹಿಮೊಗೆ ಅಥವಾ ಶಿವಮೊಗ್ಗೆ ಎಂಬ ಹೆಸರು ಬಂತೆಂದೂ ಪ್ರತೀತಿ. ಶಿವಮೊಗ್ಗ ನಗರ ಇತಿಹಾಸ ಪ್ರಸಿದ್ಧವಾದುದು. ಈ ಸುತ್ತಲ ಪ್ರದೇಶದ ಶಾಸನಗಳನ್ನು ಗಮನಿಸಿದಾಗ ಕದಂಬರು ಮತ್ತು ಗಂಗರ ಕಾಲದಿಂದಲೂ ಈ ಸ್ಥಳ ಪ್ರಾಮುಖ್ಯಪಡೆದಿದ್ದುದು ಕಂಡುಬರುತ್ತದೆ. ವಿಜಯನಗರ ಮತ್ತು ಕೆಳದಿ ನಾಯಕರ ಕಾಲದಲ್ಲಿ ಈ ಊರು ಹೆಚ್ಚು ಮಹತ್ತ್ವ ಪಡೆದಿತ್ತು. ಕೆಳದಿ ನಾಯಕರು ಇಲ್ಲಿ ಕೋಟೆ ಸ್ಥಾಪಿಸಿ ಇದನ್ನು ತಮ್ಮ ನೆಲೆಗಳಲ್ಲೊಂದಾಗಿ ಮಾಡಿಕೊಂಡಿದ್ದರು. ಈ ಸ್ಥಳ ಹೈದರನ ವಶವಾದ ಅನಂತರ ಮರಾಠರು ಮತ್ತು ಹೈದರ್-ಟಿಪ್ಪು ಇವರ ನಡುವೆ ಈ ಊರಿನ ಸುತ್ತಮುತ್ತಲ ಪ್ರದೇಶಕ್ಕಾಗಿ ಆಗಾಗ್ಗೆ ಹೋರಾಟಗಳು ನಡೆಯುತ್ತಿದ್ದುವು.
ಉಲ್ಲೇಖಗಳು
[ಬದಲಾಯಿಸಿ]- 1 2 "Who's Who - District Shivamogga, Government of Karnataka - India". shimoga.nic.in. Retrieved 31 July 2022.
- 1 2 "Shimoga:Census2011". census2011.co.in.
- ↑ "Bangalore becomes 'Bengaluru'; 11 other cities renamed". The Economic Times. PTI. 1 November 2014. Retrieved 18 July 2018.
- ↑ Sajnani, Manohar (2001). Encyclopaedia of Tourism: Resources in India. Kalpaz publications. p. 168. ISBN 978-81-7835-018-9.
- ↑ "District Census Handbook: Shimoga" (PDF). censusindia.gov.in. Registrar General and Census Commissioner of India. 2011.
- ↑ "Table C-01 Population by Religion: Karnataka". censusindia.gov.in. Registrar General and Census Commissioner of India. 2011.
